ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, April 3, 2021

ಇ-ವೇಸ್ಟ್ ನಿರ್ವಹಣೆ - ನಮಗಿರಲಿ ಬದ್ಧತೆ

 ಇ-ವೇಸ್ಟ್ ನಿರ್ವಹಣೆ - ನಮಗಿರಲಿ ಬದ್ಧತೆ 

ಲೇಖಕರು: ಗಜಾನನ ಎನ್. ಭಟ್.( ಹವ್ಯಾಸಿ ಲೇಖಕರು, ವಿಜ್ಞಾನ ಶಿಕ್ಷಕರು)

                ಸರಕಾರಿ ಪ್ರೌಢಶಾಲೆ, ಉಮ್ಮಚಗಿ

                ಯಲ್ಲಾಪುರ ತಾ. ಶಿರಸಿ, ಉತ್ತರ ಕನ್ನಡ



ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಆಧುನಿಕ ಮಾನವ ತನ್ನ ಜೀವನ ಕ್ರಮವನ್ನು ಅತ್ಯಂತ ಸರಳಗೊಳಿಸಿಕೊಂಡಿದ್ದಾನೆ. ಬಹುತೇಕ ಕೆಲಸಗಳಿಗೆ ತನ್ನ ಬೆರಳ  ತುದಿಯ ಆದೇಶಕ್ಕನುಗುಣವಾಗಿ ಕಾರ್ಯ ನಿರ್ವಹಿಸುವ ಯಂತ್ರಗಳನ್ನು ರೂಪಿಸಿಕೊಂಡಿದ್ದಾನೆ. ಇದರಿಂದ ತನ್ನ ಜೀವನವನ್ನು ಸರಳ ಹಾಗೂ ಸುಲಲಿತವಾಗಿ ಮಾರ್ಪಡಿಸಿಕೊಂಡಿದ್ದಾನೆ. ಪ್ರತಿ ವರ್ಷ ಹೊಸ ವಿನ್ಯಾಸ ಪಡೆಯುವ ಯಂತ್ರಗಳು ಮಾನವನ ಸೇವೆಗೆ ಸದಾ ಸಿದ್ಧವಾಗಿ ಮಾರುಕಟ್ಟೆ ತಲುಪುತ್ತಿವೆ. ಇವೆಲ್ಲಾ ಉತ್ತಮ ಬೆಳವಣಿಗೆಗಳಾದರೂ, ಇವುಗಳಿಂದ ಉಂಟಾಗುತ್ತಿರುವ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

 

ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣಗಳ ಅತಿಯಾದ ಬಳಕೆಯಿಂದ ಉಂಟಾಗುತ್ತಿರುವ ಅಪಾರ ಪ್ರಮಾಣದ ತ್ಯಾಜ್ಯಗಳನ್ನು ಇ-ವೇಸ್ಟ್’ ಎಂದು ಕರೆಯಲಾಗುತ್ತದೆ. ಸಾಕಷ್ಟು ಬಳಕೆಯಾಗಿ ನಿರುಪಯುಕ್ತ ಎನಿಸಿಕೊಂಡ, ಹಳೆಯದಾದ, ದುರಸ್ತಿಯಾಗದ ಟಿ.ವಿ. ರೆಫ್ರಿಜರೇಟರ್, ಮೊಬೈಲ್, ಸ್ಮಾರ್ಟ್ಫೋನ್‌ಗಳು,  ವಾಷಿಂಗ್‌ಮೆಷೀನ್‌ಗಳು, ಪ್ರಿಂಟರ್ ಗಳು, ಗಣಕ ಯಂತ್ರಗಳು, ಮತ್ತು ಅವುಗಳ ಬಿಡಿಭಾಗಗಳು, ಲ್ಯಾಪ್‌ಟಾಪ್‌ಗಳು, ಏರ್ ಕಂಡೀಷನರ್‌ಗಳು, ಝೀರಾಕ್ಸ್ ಯಂತ್ರಗಳು, ಮುಂತಾದ ೨೩ ಬಗೆಯ ವಿದ್ಯುತ್ ಮತ್ತು ವಿದ್ಯುನ್ಮಾನ ವಸ್ತುಗಳನ್ನು ಇ-ತ್ಯಾಜ್ಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈಗಿನ ಸಮಾಜದಲ್ಲಿ ಸ್ಮಾರ್ಟ್ಫೋನ್ ಎನ್ನುವುದು ಅತೀ ಸಾಮಾನ್ಯವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ  ಅವಶ್ಯಕತೆಗಳಲ್ಲಿ ಒಂದು ಎನಿಸಿಬಿಟ್ಟಿದೆ. ಪ್ರತಿ ಎರಡು, ಮೂರು ವರ್ಷಗಳಿಗೊಮ್ಮೆ ಈ ಫೋನ್‌ಗಳ ಗಣನೀಯ ಬದಲಾವಣೆ ಹೊಂದಿದ ಆವೃತ್ತಿಗಳು ಹೊರಬರುತ್ತಿರುವುದರಿಂದ ಜನ ಅವುಗಳೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಇದರಿಂದಾಗಿ ಬಳಕೆಯಾಗದ ಹಳೇ ಫೋನ್‌ಗಳು ಅಪಾರ ಪ್ರಮಾಣದ ಇ-ತ್ಯಾಜ್ಯದ ಸಮಸ್ಯೆಗೆ ಕಾರಣವಾಗುತ್ತಿದೆ.   

ನಮ್ಮ ದೇಶ ಭಾರತ ಇ-ತ್ಯಾಜ್ಯ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೂರನೇಯ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ಚೀನಾ ಇದ್ದರೆ, ಎರಡನೇ ಸ್ಥಾನವನ್ನು ಅಮೇರಿಕ ಆಕ್ರಮಿಸಿದೆ. ಅಂತರರಾಷ್ಟ್ರೀಯ ನಿಯತಕಾಲಿಕವೂಂದು ಕಳೆದ ಆಗಸ್ಟ್ ೨೦೨೦ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತ ವಾರ್ಷಿಕ ೫ ಮಿಲಿಯನ್ ಇ-ತ್ಯಾಜ್ಯವನ್ನು ಉತ್ಪಾದನೆ ಮಾಡುತ್ತಿದೆ. ಅತಿ ಹೆಚ್ಚು ಇ-ತ್ಯಾಜ್ಯವನ್ನು ಉತ್ಪಾದನೆ ಮಾಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ದೇಶದಲ್ಲಿ ಉತ್ಪಾದನೆಯಾಗುವ ಇ-ತ್ಯಾಜ್ಯದ ಒಟ್ಟು ಪ್ರಮಾಣದಲ್ಲಿ ಮಹಾರಾಷ್ಟ್ರದ ಪಾಲು ಶೇ ೧೯.೮ರಷ್ಟು !  ನಂತರದ ಸ್ಥಾನಗಳನ್ನು ಕ್ರಮವಾಗಿ ತಮಿಳುನಾಡು, ಶೇ ೧೩, ಉತ್ತರ ಪ್ರದೇಶ ಶೇ ೧೦.೧, ಪಶ್ಚಿಮ ಬಂಗಾಳ ಶೇ. ೯.೮, ಹೊಸದೆಹಲಿ ಶೇ. ೯.೫, ಕರ್ನಾಟಕ ಶೇ ೮.೯. ಗುಜರಾತ್ ಶೇ.೮.೮, ಹಾಗೂ ಮಧ್ಯ ಪ್ರದೇಶ ಶೇ.೭.೭, ಪಡೆದಿವೆ. ಅತಿ ಹೆಚ್ಚು ಇ-ತ್ಯಾಜ್ಯ ಉತ್ಪಾದಿಸುವ ನಗರಗಳ ಪಟ್ಟಿಯಲ್ಲಿ ಮುಂಬೈ ಅಗ್ರ ಸ್ಥಾನ ಹೊಂದಿದೆ.   

ಇ-ತ್ಯಾಜ್ಯದ ವಿಧಗಳು

 ಇ-ತ್ಯಾಜ್ಯಗಳನ್ನು ಅವುಗಳ ಬಳಕೆ ಮತ್ತು ಗಾತ್ರದ ಆಧಾರದ ಮೇಲೆ ಈ ಕೆಳಗಿನ ಮೂರು ವಿಧಗಳಲ್ಲಿ ವಗೀಕರಿಸಲಾಗುತ್ತದೆ. 

೧. ದೊಡ್ಡ ಗಾತ್ರದ ಇ-ತ್ಯಾಜ್ಯಗಳು : ರೆಫ್ರಿಜರೇಟರ್, ವಾಷಿಂಗ್ ಮೆಷೀನ್, ಪಾತ್ರೆ ತೊಳೆಯುವ ಮೆಷೀನ್, ಇಂಥವು ಈ ವರ್ಗಕ್ಕೆ ಸೇರುತ್ತವೆ. ಇವುಗಳ ಸಾಗಾಣಿಕೆ ಮತ್ತು ಮರುಬಳಕೆ ಕಷ್ಟಕರವಾದುದು. 

೨. ಚಿಕ್ಕ ಗಾತ್ರ ಇ-ತ್ಯಾಜ್ಯಗಳು : ಕಾಫಿ, ಮೇಕರ್ಇಸ್ತ್ರಿ  ಪೆಟ್ಟಿಗೆ, ಹೇರ್ ಡ್ರೈಯರ್, ಟೋಸ್ಟರ್ ಮುಂತಾದ ಪರಿಕರಗಳು ಅನುಪಯುಕ್ತವಾದಾಗ ಇ-ತ್ಯಾಜ್ಯಗಳಾಗುತ್ತವೆ. ಇಂಥವುಗಳ ಸಾಗಾಣಿಕೆ ಮತ್ತು ಮರುಬಳಕೆ ಸುಲಭವಾದುದು. ಅಲ್ಲದೆ, ಕೆಲವನ್ನು ಮರುಚಕ್ರೀಕರಣಗೋಳಿಸಬಹುದು. 

೩. ಮಾಹಿತಿ ತಂತ್ರಜ್ಞಾನ ಮತ್ತು ದೂರ ಸಂಪರ್ಕ ಸಾಧನಗಳು : ಮೊಬೈಲ್ ಮತ್ತು ಸ್ಮಾರ್ಟ್ ಫೋನ್‌ಗಳು, ನಿಸ್ತಂತು ದೂರವಾಣಿಳು, ಅವುಗಳ ಬಿಡಿಬಾಗಗಳಿಂದ ಉಂಟಾಗುವ ತ್ಯಾಜ್ಯಗಳು ಈ ವರ್ಗಕ್ಕೆ ಸೇರುತ್ತವೆ.

ಇ-ತ್ಯಾಜ್ಯಗಳಿಂದ ಉಂಟಾಗುವ ಮಾರಕ ಪರಿಣಾಮಗಳು 

ಇ-ತ್ಯಾಜ್ಯಗಳನ್ನು ಸೂಕ್ತವಾಗಿ ಸಂಸ್ಕರಿಸದೆ, ವ್ಯವಸ್ಥಿತವಾಗಿ ಮರುಬಳಕೆ ಮಾಡದೆ ಬೇಕಾ ಬಿಟ್ಟಿಯಾಗಿ ವಿಲೇವಾರಿ ಮಾಡಿದಲ್ಲಿ, ಇವು ಪರಿಸರದ ಮೇಲೆ, ಹಾಗೂ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.   ಕೆಲವು ವಿದ್ಯುತ್ ಮತ್ತು ವಿದ್ಯುನ್ಮಾನ ತ್ಯಾಜ್ಯ ವಸ್ತುಗಳು ಅತ್ಯಂತ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇವು ನೀರು, ಗಾಳಿ ಆಹಾರ ಅಥವಾ ಇನ್ನಾವುದೇ ಮಾಧ್ಯಮದ ಮೂಲಕ ಮಾನವನೂ ಸೇರಿ, ವಿವಿಧ ಜೀವಿಗಳ ದೇಹವನ್ನು ಸೇರಿ ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡಬಹುದು. ಇ-ತ್ಯಾಜ್ಯಗಳು ಮರ್ಕ್ಯುರಿ, ಆರ್ಸೆನಿಕ್, ಲೆಡ್, ಕ್ಯಾಡ್ಮಿಯಮ್, ಸೆಲೇರಿಯಮ್, ಕ್ರೋಮಿಯಮ್, ಬೇರಿಯಮ್, ಪಾಲಿ ಬ್ರೋಮಿನೇಟೆಡ್‌ಫ್ಲೇಮ್, ಲಿಥಿಯಮ್, ಮುಂತಾದ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರಬಹುದು. ಇಂಥ ವಸ್ತುಗಳು ದೇಹವನ್ನು ಸೇರಿದಾಗ, ಹೃದಯ, ಪಿತ್ತ ಕೋಶ, ಮೂತ್ರಜನಕಾಂಗಗಳು ಮುಂತಾದ ಅಂಗಗಳನ್ನು ಹಾನಿಗೊಳಿಸುತ್ತವೆ.  ಕೆಲವು, ಕ್ಯಾನ್ಸರ್‌ಕಾರಕ ಅಂಶಗಳನ್ನು ಹೊಂದಿದ್ದು, ಕ್ಯಾನ್ಸರ್‌ರೋಗ ಕಾಣಿಸಿಕೊಳ್ಳಲೂ ಕಾರಣವಾಗಬಹುದು. ಇಂಥ ವಸ್ತುಗಳನ್ನು ದಹನಕ್ರಿಯೆಗೆ ಒಳಪಡಿಸಿದಾಗ, ಅಪಾರ ಪ್ರಮಾಣದ ವಿಷಾನಿಲಗಳು ಬಿಡುಗಡೆಯಾಗಿ, ವಾತಾವರಣವನ್ನು ಸೇರುತ್ತವೆ. ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣದ ಏರಿಕೆಯಾಗಿ, "ಹಸಿರುಮನೆ ಪರಿಣಾಮ"ಕ್ಕೂ ಕಾರಣವಾಗಬಹುದು. ಅಲ್ಲದೆ, ಇ-ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ಭೂಮಿಯಲ್ಲಿ ಬಿಸಾಡುವುದರಿಂದ, ಮಣ್ಣಿನ ಮಾಲಿನ್ಯಕ್ಕೂ ಎಡೆ ಮಾಡಿಕೊಡಬಹುದು. ಮಣ್ಣಿನಲ್ಲಿ ಇವು ಕ್ರಮೇಣ ಜಲಮೂಲಗಳನ್ನು ತಲುಪಿ ಜಲ ಮಾಲಿನ್ಯಕ್ಕೂ ಕಾರಣವಾಗಬಹುದೆಂಬ ಅನುಮಾನವೂ ಇದೆ.   

ಇ-ತ್ಯಾಜ್ಯ ಸಮಸ್ಯೆಗೆ ಪರಿಹಾರೋಪಾಯಗಳು

ಮಾನವ ತಾಂತ್ರಿಕ ಜೀವನಕ್ಕೆ ಒಗ್ಗಿಕೊಳ್ಳುತ್ತಾ ಹೋದಂತೆ, ಅನಿವಾರ್ಯವಾಗಿ ಇ-ತ್ಯಾಜ್ಯಗಳ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಇದರಿಂದ ಮಾನವನ ಜೊತೆಗೇ ಪರಿಸರದ ವಿವಿಧ ಆಯಾಮಗಳಿಗೆ ಹಾನಿಯುಂಟಾಗುತ್ತದೆ. ಹೀಗಾಗಿ, ಇದಕ್ಕೆ ತುರ್ತು ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಇ-ತ್ಯಾಜ್ಯಗಳಿಂದ ಉಂಟಾಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಈ ಕೆಳಗಿನ ಕೆಲವು ಮಾರ್ಗಗಳನ್ನು ಅಳವಡಿಸಿಕೊಂಡು ತಕ್ಕ ಮಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. 

೧. ಹೆಚ್ಚಿನ ವಿದ್ಯುನ್ಮಾನ ಉಪಕರಣಗಳನ್ನು  ಹೊಸ ವಿನ್ಯಾಸ ಅಳವಡಿಸಿ, ಮರುಬಳಕೆ ಮಾಡಬಹುದು. 

೨. ಜೀವನಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಆಧುನಿಕ ಉಪಕರಣಗಳ ಬಳಕೆಯನ್ನು ತಡೆಯುವುದು. 

೩. ಹೊಸ ಇಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಬದಲಿಗೆ ಇರುವ ವಿದ್ಯುನ್ಮಾನ ಉಪಕರಣಗಳ ವಿನ್ಯಾಸವನ್ನು ಬದಲಿಸುವ ಅಥವಾ ಪುನರ್ಬಳಕೆ ಮಾಡುವ ಯೋಜನೆಗೆ ಒತ್ತು ಕೊಡುವುದು. 

೪. ಸುಸ್ಥಿತಿಯಲ್ಲಿರುವ, ಆದರೆ ನಮಗೆ ಬೇಡವಾದ ಗಣಕ ಯಂತ್ರಗಳು, ಪ್ರಿಂಟರ್‌ಗಳು ರೇಡಿಯೋ ಟಿ.ವಿ., ಮುಂತಾದ ಉಪಕರಣಗಳನ್ನು  ಸೇವಾ ಚಾರಿಟಿಗಳಿಗೆ, ಕಾಲೇಜುಗಳಿಗೆ ದಾನದ ರೂಪದಲ್ಲಿ ನೀಡಬಹುದು. 

೫. ಬಳಸಿ, ಅನುಪಯುಕ್ತವಾಗಿರುವಂಥ ಇ-ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ಮರುಬಳಕೆ ಪ್ರಕ್ರಿಯೆಗೆ ಒಳಪಡಿಸಿ, ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು.

೬. ದುರಸ್ತಿಗೆ ಅವಕಾಶ ಇರುವ ಹಾಗು ಆಧುನೀಕರಿಸಲು ಸಾಧ್ಯವಿರುವ ವಿದ್ಯುನ್ಮಾನ ಉಪಕರಣಗಳನ್ನು ಹೆಚ್ಚಾಗಿ ಬಳಸುವುದು.

೭. ದೀರ್ಘಕಾಲ ಬಾಳಿಕೆ ಬರುವಂಥ ಉಪಕರಣಗಳ ಖರೀದಿಗೆ ಒತ್ತು ನೀಡಬೇಕು.

೮. ಮಿತಬಳಕೆ ಹಾಗೂ ಸರಳ ಜೀವನ ಕ್ರಮವನ್ನು ಅನುಸರಿಸಬೇಕು 

೯. ಇ-ತ್ಯಾಜ್ಯ ಸಂಗ್ರಹಣೆ, ಸಂಸ್ಕರಣೆ ಹಾಗೂ ಮರುಬಳಕೆಗೆ ಸೂಕ್ತ ಕಾನೂನನ್ನು ಜಾರಿಗೆ ತಂದು ಸರಿಯಾಗಿ ವಿಲೇವಾರಿ ಮಾಡಬೇಕು.

೧೦. ನಿರ್ದಿಷ್ಟ ಪ್ರದೇಶಗಳಲ್ಲಿ ಇ-ತ್ಯಾಜ್ಯ ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಿ, ಬಳಕೆದಾರರಿಗೆ ವ್ಯಾಪಕ ಪ್ರಚಾರ ನೀಡಬೇಕು.

ಆಧುನಿಕ ಮಾನವನನ್ನು ಅತಿಯಾಗಿ ಕಾಡುತ್ತಿರುವ ಇ-ತ್ಯಾಜ್ಯ ಸಮಸ್ಯೆಯು ಹೆಮ್ಮರವಾಗಿ ಬೆಳೆಯುವ ಮುನ್ನ ಎಚ್ಚೆತ್ತುಕೊಳ್ಳುವ ಕಾಲ ಈಗ ಸನ್ನಿಹಿತವಾಗಿದೆ. ಸೂಚಿಸಲಾಗಿರುವ ಕೆಲವೊಂದು ಮಾರ್ಗೋಪಾಯಗಳನ್ನು ಯುಕ್ತ ರೀತಿಯಲ್ಲಿ ಅನುಸರಿಸಿ, ಇ-ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ಸುಸ್ಥಿರ ಪರಿಸರವನ್ನು ನಿರ್ಮಿಸಲು ಪಣ ತೊಡೋಣ. 


*****

ರಾಜ್ಯದ ಅನೇಕ ಶಾಲೆಗಳಲ್ಲಿ ಹಲವಾರು ವರ್ಷಗಳಿಂದಲೂ ಸಂಗ್ರಹಗೊಂಡ  ಅಪಾರ ಪ್ರಮಾಣದ  ಇ- ವೇಸ್ಟ್ ವಿಲೇವಾರಿಗೊಳ್ಳದೆ ಹಾಗೆಯೇ ಉಳಿದಿದೆ. ಇದರ ವಿಲೇವಾರಿಯೇ ದೊಡ್ಡ ತಲೆನೋವಿನ ಸಂಗತಿಯಾಗಿದೆ. ಇದನ್ನು ಮನಗಂಡ ಇಲಾಖೆ ಈ ಕುರಿತಾಗಿ ಸುತ್ತೋಲೆಯೊಂದನ್ನು ಹೊರಡಿಸಿದ್ದು ಇದರೊಂದಿಗೆ ವಿದ್ಯುನ್ಮಾನ ಉಪಕರಣಗಳ ಬಳಕೆ, ನರ‍್ವಹಣೆ ಮತ್ತು ಇ- ತ್ಯಾಜ್ಯಗಳ ವಿಲೇವಾರಿಯ ಕುರಿತಂತೆ  ಬಳಕೆ ಕೈಪಿಡಿಯೊಂದನ್ನು ರಚಿಸಿದೆ. ಸುತ್ತೋಲೆಯೊಂದಿಗಿನ ಕೈಪಿಡಿಯನ್ನು ಕೆಳಗಿನ ಲಿಂಕ್ ಬಳಸಿ ಡೌನ್ಲೋಡ್  ಮಾಡಿಕೊಳ್ಳಬಹುದು.


6 comments:

  1. ಉತ್ತಮ ಸಕಾಲಿಕ ಮಾಹಿತಿ ಸರ್‌.

    ReplyDelete
  2. nice. thought provoking. helps to change our attitude towards having the most updated versions of android mobiles and other things

    ReplyDelete
  3. ಜೀವನಕ್ಕೆ ಅಳವಡಿಸಿಕೊಳ್ಳುವ ಅಂಶಗಳೊಂದಿಗೆ ಉತ್ತಮ ಅಂಕಣ.

    ReplyDelete
  4. ಉತ್ತಮ ಮಾಹಿತಿ. ಇಲ್ಲಿ ಇ- ತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿಯೊಬ್ಬರೂ ಗಮನಹರಿಸಬೇಕು.

    ReplyDelete