ವಿಜ್ಞಾನ
ಒಗಟುಗಳು
ವಿಜಯಕುಮಾರ್ ಹುತ್ತನಹಳ್ಳಿ.
ಸ.ಪ್ರೌ.ಶಾಲೆ.
ಕಾವಲ್
ಭೈರಸಂದ್ರ.
ಬೆಂಗಳೂರು
ಉತ್ತರ ವಲಯ - 3
ಪ್ರೀತಿಯ
ಓದುಗರೆ,
“ನೀನು ಬೋಧಿಸುವ ವಿಧಾನದಲ್ಲಿ ನನಗೆ ಅರ್ಥವಾಗುತ್ತಿಲ್ಲವೆಂದಾದರೆ, ನನಗೆ
ಅರ್ಥವಾಗುವ ವಿಧಾನದಲ್ಲಿ ನೀ ಬೋಧಿಸಲಾರೆಯಾ”? ಎಂಬ ಕಲಿಕಾರ್ಥಿಯ ಒಳ ನುಡಿ ಬೋಧನಾ ವೃತ್ತಿಯಲ್ಲಿ ತೊಡಗಿರುವ
ಯಾರಿಗೇ ಆದರೂ ಸವಾಲಿನಂತದ್ದು ಮತ್ತು ಸತತ ಮಾರ್ಗದರ್ಶಕವಾದದ್ದು. ಪ್ರಯೋಗ, ಚಟುವಟಿಕೆ ಆಧಾರದಲ್ಲಿ
ನಮ್ಮ ಸುತ್ತಲಿನ ಪರಿಸರವನ್ನು ಅವಲೋಕಿಸುತ್ತಾ, ಬೋಧನೆಗೆ ಅಳವಡಿಸಿಕೊಳ್ಳುತ್ತಾ ಸಾಗಬೇಕಾದ ವಿಜ್ಞಾನ
ಶಿಕ್ಷಕನಿಗೆ ಕಲಿಸಲು ಎಷ್ಟು ಮಾರ್ಗಗಳಿದ್ದರೂ ಕಡಿಮೆಯೆ. ಅಂತಹವುಗಳಲ್ಲಿ ವಿಜ್ಞಾನ ಒಗಟುಗಳು ಎಂಬ
ಒಂದು ವಿಧಾನವೂ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ನೆರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಗಟುಗಳು
ನಮ್ಮ ಸಂಸ್ಕೃತಿಗೆ ಹೊಸತೇನೂ ಅಲ್ಲ. ನಮ್ಮ ಪೂರ್ವಿಕರು ಬುದ್ಧಿ ವಿಕಾಸಕ್ಕೆ ಮತ್ತು ಸಮಯದ ಸದುಪಯೋಗಕ್ಕೆ
ಕಂಡುಕೊಂಡ ಮಾರ್ಗವೇ ಇದು. ಇದನ್ನು ನಾವು ನಮ್ಮ ವಿಜ್ಞಾನ ಬೋಧನೆಗೆ ಅಳವಡಿಸಿಕೊಳ್ಳಬೇಕಷ್ಟೆ.
ಈಗಾಗಲೇ ಲಭ್ಯವಿರುವ ವಿಜ್ಞಾನದ ಒಗಟುಗಳನ್ನು
ಬಳಸಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಚಟುವಟಿಕೆ ಮಾಡಬಹುದು. ಅಥವಾ ತೊಡಗಿಸಿಕೊಳ್ಳುವ ಚಟುವಟಿಕೆಯಲ್ಲೂ
ಬುದ್ಧಿಗೆ ಕಸರತ್ತಾಗಿ ನೀಡಬಹುದು. ಸ್ವತಃ ಶಿಕ್ಷಕರೇ ಒಗಟುಗಳನ್ನು ರಚಿಸಿಕೊಳ್ಳಬಹುದು, ವಿದ್ಯಾರ್ಥಿಗಳಿಗೂ
ರಚಿಸಲು ಪ್ರೇರೇಪಿಸಬಹುದು. ಇದರಿಂದ ಕಲಿಕೆ ಅರ್ಥಪೂರ್ಣವೂ ಶಾಶ್ವತವೂ ಆಗುತ್ತದೆ. ವಿಜ್ಞಾನದ ಒಗಟುಗಳನ್ನು
ರಚಿಸುವುದು ಹೇಗೆಂದು ಈಗ ನೋಡೋಣ.
“ಒಗಟು” ಈ ಪದದ ಅರ್ಥ, ಸ್ವರೂಪ ಎಲ್ಲರಿಗೂ
ಗೊತ್ತಿರುವುದೇ ಆಗಿದೆ. ನೇರವಾಗಿ ಅರ್ಥವಾಗದಂತೆ ಮಾತಾಡಿದರೆ ನಾವು ಸಹಜವಾಗಿ ಹೇಳುವ ಮಾತು “ನೀನು
ಒಗಟು ಒಗಟಾಗಿ ಮಾತಾಡಿದರೆ ನನಗೆ ಅರ್ಥ ಆಗಲ್ಲ ನೇರವಾಗಿ ಹೇಳು ಅದೇನು ಅಂತ” ಎಂಬುದಾಗಿರುತ್ತದೆ. ಅಂದರೆ
ಒಗಟು ನೇರವಲ್ಲದ ಸುಳಿವುಗಳನ್ನು ಕೊಡುತ್ತಾ ವಿಷಯವೊಂದನ್ನು ವ್ಯಕ್ತಪಡಿಸುವ ಬೌದ್ಧಿಕ ಕ್ರಿಯೆ.
ವಿಜ್ಞಾನದ ಒಗಟುಗಳಿಗೂ ಇದು ಅನ್ವಯಿಸುತ್ತದೆ.
ಅವುಗಳನ್ನು ರಚಿಸಲು ನಾವು ಮೊದಲು
೧. ಒಂದು ಪರಿಕಲ್ಪನೆಯನ್ನು ನಿಗಧಿಪಡಿಸಿಕೊಳ್ಳಬೇಕು, (ತರಗತಿ ಅಗತ್ಯಕ್ಕೆ
ತಕ್ಕಂತೆ)
೨. ಅದಕ್ಕೆ
ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸಬೇಕು.
೩. ನಂತರ
ನೇರವಲ್ಲದ ಸುಳಿವುಗಳನ್ನು ನೀಡುತ್ತಾ ಒಗಟನ್ನು ಕಟ್ಟಬೇಕು.
೪. ಸ್ವಲ್ಪ
ಕಾವ್ಯಾತ್ಮಕ ಭಾಷೆ ಇದ್ದರೆ ಒಗಟು ಸೊಗಸಾಗಿರುತ್ತದೆ.( ಸರಳವಾಗಿಯೂ ಇರಬಹುದು)
ಉದಾಹರಣೆ:
೧
ಪರಿಕಲ್ಪನೆ
: ಅದಿಶ ಮತ್ತು ಸದಿಶ ಪರಿಮಾಣಗಳು ( Scalar and Vector Quantities )
ವಿಷಯ
ಸಂಗ್ರಹ : ಅದಿಶ ಪರಿಮಾಣಗಳು ಕೇವಲ ಪರಿಮಾಣವನ್ನು ಹೊಂದಿರುತ್ತವೆ.
ಉದಾ:
ಜವ,ಒತ್ತಡ,ರಾಶಿ ಇತ್ಯಾದಿ.
ಸದಿಶ ಪರಿಮಾಣಗಳು ಪರಿಮಾಣ ಮತ್ತು ದಿಕ್ಕು ಎರಡನ್ನೂ
ಹೊಂದಿರುತ್ತವೆ.
ಉದಾ: ವೇಗ, ಬಲ, ತೂಕ ಇತ್ಯಾದಿ.
ಒಗಟು
: ಜವದಲ್ಲಿಲ್ಲ ವೇಗದಲ್ಲಿರುವೆ
ರಾಶಿಯಲ್ಲಿಲ್ಲ ತೂಕದಲಿರುವೆ
ಒತ್ತಡದಲ್ಲಿಲ್ಲ
ಬಲದಲ್ಲಿರುವೆ
ನಾ ಬಲ್ಲೆ ನೀ ನನ್ನ ಹೆಸರಿಸುವ ಆತುರದಲಿರುವೆ.
ಉತ್ತರ:
ದಿಕ್ಕು. ಪರಿಕಲ್ಪನೆ ಸ್ಪಷ್ಟವಾಗಿದ್ದಾಗ ವಿದ್ಯಾರ್ಥಿ ಇದರ ಉತ್ತರ ದಿಕ್ಕು ಎಂದು ಸುಲಭವಾಗಿ ಹೇಳಬಹುದು.
ಉದಾಹರಣೆ.
೨
ಪರಿಕಲ್ಪನೆ
: ಪರಿಮಾಣ, ಪರಿಣಾಮ ಮತ್ತು ಪರಮಾಣು ( ಈ ಪದಗಳು ವಿಜ್ಞಾನದಲ್ಲಿ ಸಾಮಾನ್ಯ ಆದರೆ ಮಕ್ಕಳು ಅವುಗಳನ್ನು
ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲಕ್ಕೀಡಾಗುವುದನ್ನು ಗಮನಿಸಿರುತ್ತೇವೆ ಅದರ ನಿವಾರಣೆಗೆ ಒಗಟಿನ
ಮೂಲಕ ಪ್ರಯತ್ನ. ಈ ಒಗಟಿಗೆ ಉತ್ತರಿಸಲು ಪ್ರಯತ್ನಿಸುವಾಗ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಉತ್ತರ ಸಿಗದಿದ್ದರೂ
ಶಿಕ್ಷಕರೇ ಹೇಳಬಹುದು ಆಗಂತೂ ಅರ್ಥ ಸ್ಪಷ್ಟತೆ ಖಂಡಿತ ಸಾಧ್ಯವಾದೀತು.)
ವಿಷಯ
ಸಂಗ್ರಹ: ಪದಗಳ ವ್ಯಾಖ್ಯೆ ಅಥವಾ ಅರ್ಥ ಬರೆದಿಡೋಣ
ಒಗಟು:
ನಾಲ್ಕು ಅಕ್ಷರಗಳ ಪದ ನಾನು.
ಅವೇ ಅಕ್ಷರಗಳ ಅಷ್ಟಿಷ್ಟು ಬದಲಿಸಿದರೆ
ಮೂರು ವೈಜ್ಞಾನಿಕ ಪದಗಳ ನೀಡುವೆನು
ಒಂದು ಭೌತಿಕ ಅಳತೆಯ ಸೂಚಕವು
ಇನ್ನೊಂದು ವಸ್ತುವಿನ ಚಿಕ್ಕ ಕಣವು
ಮತ್ತೊಂದು ಕಾರಣವೊಂದರಿಂದ ಉದ್ಭವಿಸುವಂತಹದ್ದು.
ಉತ್ತರ:
ಕ್ರಮವಾಗಿ, ಪರಿಮಾಣ, ಪರಮಾಣು ಮತ್ತು ಪರಿಣಾಮ.
ಈ ವಿಧಾನ ಪ್ರಶ್ನೆಗೆ
ಉತ್ತರ ಕಂಠಪಾಠ ಮಾಡಿಸುವುದಕ್ಕೆ ಒಂದು ಪರಿಣಾಮಕಾರಿ ಪರ್ಯಾಯ ವಿಧಾನ ಎನಿಸಬಹುದಲ್ಲವೆ ?
ವಿದ್ಯಾರ್ಥಿಯೇ ರಚಿಸುವಾಗಲೂ ಪೂರ್ಣ ಪರಿಕಲ್ಪನೆಗೆ ಗಮನ ಕೊಡಬೇಕಾಗುವುದರಿಂದ
ಕಲಿಕೆ ಉತ್ತಮವಾಗುತ್ತದೆ. ಇದೇ ಬ್ಲಾಗ್ ನಲ್ಲಿರುವ ಒಗಟುಗಳ ವಿಭಾಗದಿಂದ ಇನ್ನಷ್ಟು ಉದಾಹರಣೆಗಳನ್ನು
ಗಮನಿಸಿ ನೀವೂ ಒಗಟುಗಳನ್ನು ರಚಿಸಿ. ವಿದ್ಯಾರ್ಥಿಗಳಿಗೂ ರಚಿಸುವ ಸ್ಪರ್ಧೆ ಆಯೋಜಿಸಿ. ಇದು ಕನ್ನಡ
ಮತ್ತು ವಿಜ್ಞಾನದ ಸಮನ್ವಯ ಕಲಿಕೆಗೆ ಉತ್ತಮ ಪ್ರಯತ್ನವಾದೀತು. ಶುಭವಾಗಲಿ.