ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, September 4, 2021

ಸೂರ್ಯನ ಮೇಲೆ ಇರಲಿ ಭಕ್ತಿ, ಕೊಡುತ್ತಾನಂತೆ ಉಚಿತ ಸೌರಶಕ್ತಿ !

ಸೂರ್ಯನ ಮೇಲೆ ಇರಲಿ ಭಕ್ತಿ, ಕೊಡುತ್ತಾನಂತೆ ಉಚಿತ ಸೌರಶಕ್ತಿ !

ಲೇಖನ: ರೋಹಿತ್ ವಿ ಸಾಗರ್

ಪ್ರಾಂಶುಪಾಲರು,

ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು

ಸಾಗರ  

ನಿಸರ್ಗದ ಅತೀ ಬುದ್ಧಿವಂತ ಕೂಸು ಎಂದೇ ಕರೆಯಲಾಗುವ ಮಾನವನ ಬುದ್ಧಿವಂತಿಕೆಯ ಪರಾಕಾಷ್ಟೆ ಎಂದರೆ, ಆ ನಿಸರ್ಗದ ಬುಡವನ್ನೇ ಅಲುಗಾಡಿಸುವುದು. ತನ್ನ ಕುತೂಹಲ ಯೋಚನಾ ಸಾಮರ್ಥ್ಯದ ಬಲದಿಂದ  ಮೊದಲು ಬೆಂಕಿಯನ್ನು ಕಂಡುಹಿಡಿದ. ಅದರಿಂದ ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ಎಗ್ಗಿಲ್ಲದೆ ಮಾಡತೊಡಗಿದ. ಬೇಯಿಸಿದ ಆಹಾರ ರುಚಿಯೆನಿಸಿತು; ಬೆಂಕಿ ಉರಿಸಲು ಕಟ್ಟಿಗೆ ಬೇಕು, ಕಾಡು ಕಡಿದ, ಬೆಂಕಿಯ ಬೆಳಕು ಬೇಕು, ಕಾಡು ಕಡಿದ, ಮರಕ್ಕಿಂತ ಕಲ್ಲಿದ್ದಲು ಉತ್ತಮ ಎಂದು ಅರಿತ, ಅದಕ್ಕೆ ಗಣಿ ಬೇಕು, ಕಾಡು ಕಡಿದ. ವಿದ್ಯುತ್ ಕಂಡುಹಿಡಿದ. ಅದಕ್ಕೆ ಅಣೆಕಟ್ಟು ಬೇಕು, ಕಾಡನ್ನು ಮುಳುಗಿಸಿಯೇ ಬಿಟ್ಟ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ, ವಿದ್ಯುತ್‍ಗಾಗಿ, ವಾಹನಗಳಿಗೆ ಬೇಕಾದ ಇಂಧನಗಳಿಗಾಗಿ ಭೂಮಿಯ ಗರ್ಭವನ್ನೇ ಬಗೆದು ಇಂಧನವನ್ನು ಉರಿಸಿ ವಾತಾವರಣಕ್ಕೆ ಹೇರಳವಾಗಿ ಕಾರ್ಬನ್ ಅನಿಲಗಳನ್ನು ಹೊರಹಾಕುತ್ತಾ ವಾತಾವರಣವನ್ನು ಸರಿಪಡಿಸಲಾಗದ ಪರಿಸ್ಥಿತಿಗೆ ದೂಡಿಬಿಟ್ಟ. ಹುಟ್ಟಿಸಿದ ನಿಸರ್ಗದ ಹುಟ್ಟಡಗಿಸಹೊರಟ ಈ ಹುಲುಮಾನವ ತನ್ನ ಭವಿಷ್ಯದ ಬಗ್ಗೆ ಯೋಚಿಸಿಯೇ ಇರಲಿಲ್ಲ.

ಶಕ್ತಿಯ ಉತ್ಪಾದನೆಗಾಗಿ ಎಗ್ಗಿಲ್ಲದ ನಮ್ಮ ನಡೆ, ಅರಣ್ಯನಾಶದ ಫಲವಾಗಿ ವಾತಾವರಣದಲ್ಲಿ ಹೆಚ್ಚುತ್ತಿರುವ ಕಾರ್ಬನ್ ಡೈಆಕ್ಸೈಡ್ ಮುಂತಾದ  ರಾಸಾಯನಿಕ ಅನಿಲಗಳು ಭೂಮಿಯ ಮೇಲ್ಮೈಯಲ್ಲಿ ಪ್ರತಿಫಲಿಸಿ ಹೊರಹೋಗಬೇಕಾಗಿದ್ದ ಸೂರ್ಯನ ಶಾಖವನ್ನು ಹೀರಿ, ಹಿಡಿದಿಟ್ಟುಕೊಳ್ಳುವುದರಿಂದ ನಮ್ಮ ವಾತಾವರಣ ಅನಿಯಂತ್ರಿತವಾಗಿ ಬಿಸಿಯಾಗುತ್ತಿದೆ. ಈ ಕ್ರಿಯೆಯನ್ನೇ ವೈಜ್ಞಾನಿಕವಾಗಿ ‘ಹಸಿರು ಮನೆ ಪರಿಣಾಮ’ ಎಂದು ಕರೆಯುವುದು. ವಾಸ್ತವದಲ್ಲಿ ಸಸ್ಯಗಳು ಆಹಾರೋತ್ಪಾದನೆಗೆ ಮನುಷ್ಯರು ಉಸಿರಾಟದಲ್ಲಿ ಬಿಟ್ಟ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಂಡು ಅವರಿಗೆ ಅಗತ್ಯವಾಗಿ ಬೇಕಾದ ಆಕ್ಸಿಜನ್ ಅನ್ನು ನೀಡುವ ಕೆಲಸವನ್ನು ಮಾಡುತ್ತಾ ವಾತಾವರಣದ ಸಮತೋಲನವನ್ನು ಕಾಪಾಡುತ್ತವೆ. ಅಂತಹವುಗಳನ್ನೇ ನಾಶ ಮಾಡುತ್ತಿರುವ ಈ ಸ್ಥಿತಿ ಹೀಗೆಯೇ ಮುಂದುವರಿದರೆ, ಆದಷ್ಟು ಬೇಗ ನಮ್ಮ ಭೂಮಂಡಲ ಮತ್ತೆ ಬೆಂಕಿಯುಂಡೆಯಾಗುವುದರಲ್ಲಿ ಸಂಶಯವೇ ಇಲ್ಲ.  ’ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಲಹುದೆ’ ಎಂಬ ಬಸವಣ್ಣನವರ ಈ ಮಾತನ್ನು ಈಗಿನ ನಮ್ಮ ಸ್ಥಿತಿಗತಿಗೆ ತಕ್ಕಂತೆ ಬದಲಾಯಿಸಿ ’ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಅದರಿಂದ ಧರೆ ಹತ್ತಿ ಉರಿದೊಡೆ ನಿಲಲಹುದೆ’ ಎಂದು ಹೇಳಬಹುದೇನೋ..?

ಹಾಗಾದರೆ, ಇದಕ್ಕೆ ಪರಿಹಾರವೇ ಇಲ್ಲವೇ? ಎಂದು ಆಕಾಶ ನೋಡಿದರೆ, ಆರು ಸಾವಿರ ಡಿಗ್ರಿ ತಾಪಮಾನದೊಂದಿಗೆ ಉರಿಯುತ್ತಿರುವ ಸೂರ್ಯ ಕಾಣುತ್ತಾನಲ್ಲವೇ? ಹಾಂ, ಅವನೇ ಕೊಡುತ್ತಾನೆ ಇದಕ್ಕೆ ಪರಿಹಾರ !!! ಸೌರಶಕ್ತಿಯ ರೂಪದಲ್ಲಿ. ಈ ಸೂರ್ಯನಿಂದ ಒಂದು ಚದರ ಮೀಟರ್ ಪ್ರದೇಶದಲ್ಲಿ ಬೀಳುವ ಶಕ್ತಿಯ ಪ್ರಮಾಣ 1 ಕಿಲೋವ್ಯಾಟಿಗಿಂತಲೂ ಹೆಚ್ಚು. ಇದು ಉಚಿತವಾಗಿ ಸಿಗುತ್ತದೆ. ಅಲ್ಲದೆ, ಇದರಿಂದ ನಿಸರ್ಗಕ್ಕೆ ಯಾವುದೇ ಹಾನಿಯೂ ಇಲ್ಲ. ಮಳೆಗಾಲದ ಅವಧಿಯನ್ನು ಬಿಟ್ಟರೆ ಉಳಿದ ಎಂಟೊಂಬತ್ತು ತಿಂಗಳು, ಈ ಸೌರಶಕ್ತಿಯನ್ನು ಹಲವಾರು ರೀತಿಗಳಲ್ಲಿ ಬಳಸಬಹುದು.

ಈಗಾಗಲೇ ಚಾಲ್ತಿಯಲ್ಲಿರುವ, ಅನೇಕರ ಮನೆ ಮಹಡಿಗಳ ಮೇಲೆ ವಿಜೃಂಭಿಸುತ್ತಿರುವ ಸೌರ ಹಂಡೆಗಳ ಪರಿಚಯ ನಿಮಗಿರಬಹುದು. ಸೌರಶಕ್ತಿಯನ್ನು ಉಪಯೋಗಿಸಿಕೊಂಡು ನೀರು ಕಾಸುವ ಈ ಸೌರ ಹಂಡೆಗಳಲ್ಲಿ ಮುಖ್ಯವಾಗಿ ಎರಡು ಭಾಗಗಳಿರುತ್ತವೆ. ಅವುಗಳೆಂದರೆ, ಒಂದು ನೀರಿನ ತೊಟ್ಟಿ ಮತ್ತೊಂದು ಆಯತಾಕಾರದ ಸಂಗ್ರಾಹಕ ಫಲಕ. 

ಈ ಕೊಳವೆಯಾಕಾರದ ನೀರಿನ ತೊಟ್ಟಿಯನ್ನು ತುಸು ಎತ್ತರದಲ್ಲಿಟ್ಟು, ಅದಕ್ಕೆ ಮನೆಯ ಮುಖ್ಯ ನೀರಿನ ತೊಟ್ಟಿಯಿಂದ ಯಾವಾಗಲೂ ನೀರು ಸರಾಗವಾಗಿ ಹರಿದು ಬರುವಂತೆ ಕೊಳವೆಗಳ ಮೂಲಕ ಸಂಪರ್ಕ ಮಾಡಲಾಗಿರುತ್ತದೆ. ಸಂಗ್ರಾಹಕ ಫಲಕವನ್ನು ನೆಲಮಟ್ಟದಿಂದ ಸುಮಾರು 15 ಡಿಗ್ರಿಯಷ್ಟು ಓರೆಯಾಗಿ, ದಕ್ಷಿಣ ದಿಕ್ಕಿಗೆ ಮುಖಮಾಡಿ, ಸೌರ ಹಂಡೆಯ ನೀರಿನ ತೊಟ್ಟಿಯ ತಳಭಾಗಕ್ಕೆ ಜೋಡಿಸಿರುತ್ತಾರೆ. ಆದ್ದರಿಂದ, ತೊಟ್ಟಿಯಲ್ಲಿನ ನೀರು ಸರಾಗವಾಗಿ ಸಂಗ್ರಾಹಕ ಫಲಕದೊಳಕ್ಕೆ ಹರಿದು ಬರುತ್ತದೆ. ಅಲ್ಲಿರುವ ಸಣ್ಣ ಸಣ್ಣ ತಾಮ್ರದ ಕೊಳವೆಗಳು ಸೂರ್ಯನಿಂದ ಬರುವ ಶಾಖವನ್ನು ಹೀರಿಕೊಂಡು ಬಿಸಿಯಾಗುತ್ತಿರುತ್ತವೆ. ಕೊಳವೆಯೊಳಗೆ ಹರಿಯುವ ಈ ನೀರು ಅವುಗಳ ಶಾಖದಿಂದ ಬಿಸಿಯಾಗತೊಡಗುತ್ತದೆ. ತಣ್ಣೀರಿಗಿಂತ ತುಸು ಹಗುರಾಗಿವುದರಿಂದ ಅಲ್ಲಿ ಬಿಸಿಯಾದ ನೀರು ಸಂಗ್ರಾಹಕ ಫಲಕದಲ್ಲಿ ಮೇಲೇರತೊಡಗುತ್ತಾ ಕೊನೆಗೆ ಸಂಗ್ರಾಹಕದಿಂದ ಸೌರ ಹಂಡೆಯ ಮೇಲ್ಭಾಗಕ್ಕೆ ಜೋಡಿಸಿರುವ ಕೊಳವೆಯ ಮೂಲಕ ಹರಿದು ಮತ್ತೆ ನೀರಿನತೊಟ್ಟಿಯನ್ನು ಸೇರುತ್ತದೆ. ಇದೇ ಪ್ರಕ್ರಿಯೆ ಮುಂದುವರಿಯುತ್ತಾ, ನೀರು ಸಂಪೂರ್ಣ ಬಿಸಿಯಾಗುತ್ತದೆ. ಜೊತೆಗೆ, ಆ ತೊಟ್ಟಿಯ ಮೇಲ್ಭಾಗದ ಇನ್ನೊಂದು ಕಡೆ ಜೋಡಿಸಿರುವ ಕೊಳವೆಯಿಂದ ನಾವು ಈ ಬಿಸಿನೀರನ್ನು ಪಡೆದುಕೊಳ್ಳಬಹುದು. ಇದರಲ್ಲಿ ಹೀರಿಕೊಳ್ಳುವ ಶಾಖದ ಪ್ರಮಾಣವನ್ನು ಹೆಚ್ಚಿಸಲು ಸಂಗ್ರಾಹಕದ ಮೇಲ್ಭಾಗವನ್ನು ಗಾಜಿನಿಂದ ಮುಚ್ಚಿರುತ್ತಾರೆ ಮತ್ತು ಒಳಭಾಗದಲ್ಲಿ ತಾಮ್ರದ ತಗಡಿನ ಪಟ್ಟಿಗಳನ್ನು ಬಳಸಿರುತ್ತಾರೆ. ಜೊತೆಗೆ, ಇತ್ತೀಚಿಗೆ ತಾಮ್ರದ ಬದಲು ನಿರ್ವಾತ ಗಾಜಿನ ಕೊಳವೆಗಳನ್ನೂ ಬಳಸುತ್ತಿದ್ದಾರೆ. ಅಲ್ಲಿಗೆ, ಈ ಸೌರ ಹಂಡೆಯನ್ನು ಬಳಸುವುದರಿಂದ ನಮ್ಮ ಮಲೆನಾಡಿನಲ್ಲಿ ಬಳಸುವ ಗಾಡಿಗಟ್ಟಲೆ ಕಟ್ಟಿಗೆ, ಅದಕ್ಕಾಗಿ ಕಡಿಯುವ ಎಕರೆಗಟ್ಟಲೆ ಅರಣ್ಯವನ್ನೂ, ಆಗುವ ಪರಿಸರ ಮಾಲಿನ್ಯವನ್ನೂ ಬಹಳಷ್ಟು ತಡೆಗಟ್ಟಬಹುದು. ಜೋರು ಮಳೆಗಾಲದ ಎರಡು ತಿಂಗಳು ಮಾತ್ರ ಸ್ವಲ್ಪ ಕಷ್ಟ ಪಡಬೇಕಾಗಬಹುದು ಎನ್ನುವುದನ್ನು ಬಿಟ್ಟರೆ ಈ ಸೌರಹಂಡೆಗೆ ನೀವು ಹಾಕಿದ ಬಂಡವಾಳವೂ ಸಹ ಎರಡೇ ವರ್ಷಗಳಲ್ಲಿ ವಸೂಲಾಗಿ ಬಿಡುತ್ತದೆ.

ಸೌರ ಹಂಡೆಗಿಂತಲೂ ಉಪಕಾರಿಯಾಗಿರುವ ಮತ್ತೊಂದು ಸೌರಶಕ್ತಿಯ ಉಪಕರಣವೆಂದರೆ ಸೌರವಿದ್ಯುತ್‍ಕೋಶ, ಸೂರ್ಯನಿಂದ ಲಭ್ಯವಾಗುವ ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವನ್ನು ಸೌರವಿದ್ಯುತ್ ಕೋಶ ಎಂದು ಕರೆಯಲಾಗುತ್ತದೆ. ಈ ಸೌರ ಕೋಶಗಳನ್ನು ಅರೆವಾಹಕ ವಸ್ತುಗಳಿಂದ, ಅದರಲ್ಲೂ ಹೆಚ್ಚಾಗಿ ಸಿಲಿಕಾನ್‍ನಿಂದ ತಯಾರಿಸುತ್ತಾರೆ. ಸಿಲಿಕಾನಿಗೆ ಕೆಲವು ನಿರ್ದಿಷ್ಟ ರಾಸಾಯನಿಕಗಳನ್ನು ಬೆರೆಸಿ ಪಿ- ರೀತಿಯ ಮತ್ತು ಎನ್- ರೀತಿಯ ಸಿಲಿಕಾನ್‍ಗಳೆಂಬ ಎರಡು ಭಿನ್ನ ರೀತಿಯ ಅರೆವಾಹಕ ಪಟ್ಟಿಗಳನ್ನು ತಯಾರಿಸಿ ಅವುಗಳನ್ನು ಒಂದಕ್ಕೊಂದು ಬೆಸೆದು ತಯಾರಿಸಿದ ಸಾಧನಗಳನ್ನು ’ಸಿಲಿಕಾನ್ ಡಯೋಡ್’ ಎಂದು ಕರೆಯಲಾಗುತ್ತದೆ. ಈ ರೀತಿ ಕೆಲವು ನಿರ್ದಿಷ್ಟ ರಾಸಾಯನಿಕಗಳಿಂದ ತಯಾರಿಸಿದ ಡಯೋಡುಗಳು ಸೂರ್ಯನಿಂದ ಬರುವ ಬೆಳಕಿನ ಶಕ್ತಿಯನ್ನು ಹೀರಿಕೊಂಡು ವಿದ್ಯುದಂಶಗಳನ್ನು ಉತ್ಸರ್ಜಿಸುತ್ತವೆ. ಆಗ, ಆ ಪದರಗಳ ನಡುವೆ ವಿದ್ಯುತ್ ಹರಿಯಲು ಪ್ರಾರಂಭಿಸುತ್ತದೆ. ಇಂತಹ ಡಯೋಡುಗಳನ್ನು ಸೌರ ವಿದ್ಯುತ್ ಕೋಶಗಳೆಂದು ಕರೆಯಲಾಗುತ್ತದೆ. ಇಂತಹ ಸಾವಿರಾರು ಡಯೋಡುಗಳನ್ನು ಒಪ್ಪವಾಗಿ ಜೋಡಿಸಿ ಒಂದುಕ್ಕೊಂದು ಸಂಪರ್ಕಿಸಿ ಸೌರ ಕೋಶ ಫಲಕಗಳನ್ನು ನಿರ್ಮಿಸಲಾಗುತ್ತದೆ. ಆ ಸೌರಫಲಕಗಳು ತಮ್ಮ  ಮೇಲೆ ಬಿದ್ದ ಸೌರ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತವೆ. ಅದನ್ನು ನಾವು ಸಂಗ್ರಹಿಸಿಟ್ಟುಕೊಂಡು ನಂತರ ಬಳಸಿಕೊಳ್ಳಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ ಒಂದು ಸೌರ ಫಲಕ ಹಾಗೂ ಒಂದು ಸಂಗ್ರಾಹಕ ಕೋಶಗಳನ್ನೊಳಗೊಂಡ ಸಂಪೂರ್ಣ ಸೌರಕೋಶ ವ್ಯವಸ್ಥೆಗಳು ಲಭ್ಯವಿವೆ. ಎಲ್.ಇ.ಡಿ. ತಂತ್ರಜ್ಞಾನವನ್ನು ಇದರೊಂದಿಗೆ ಬಳಸಿಕೊಂಡರೆ ಹೋಳಿಗೆಯೂಟಕ್ಕೆ ತುಪ್ಪ ಸೇರಿದಂತಾಗುತ್ತದೆ. ಬಳಕೆಯ ಪ್ರಮಾಣ ಹೆಚ್ಚುತ್ತಿರುವುದರಿಂದ ಇವುಗಳ ಬೆಲೆಯೂ ಇತ್ತೀಚಿಗೆ ಕಡಿಮೆಯಾಗುತ್ತಿದೆ. ಲಭ್ಯವಿರುವ ಮಾಹಿತಿಯಂತೆ, ಒಂದು ಫ್ಯಾನು, ಎರಡು ದೀಪಗಳು ಉರಿಯುವಷ್ಟು ವಿದ್ಯುತ್ ಉತ್ಪಾದಿಸುವ ಸೌರಕೋಶ ವ್ಯವಸ್ಥೆಯ ಈಗಿನ ಬೆಲೆ ಸುಮಾರು 20 ಸಾವಿರ ರೂಪಾಯಿಗಳ ಆಸುಪಾಸು. ಬೆಲೆ ಕೊಂಚ ಹೆಚ್ಚೆನಿಸಿದರೂ, ಒಂದೇ ಸಾರಿ ಖರ್ಚು ಮಾಡಿದರೆ, ಮುಂದೆ ಉಚಿತವಾಗಿ ವಿದ್ಯುತ್ ಬಳಸಬಹುದು, ಆಗ ಅದಕ್ಕೆ ಹಾಕಿದ ದುಡ್ಡು ಒಂದೆರೆಡು ವರ್ಷಗಳಲ್ಲಿ ವಸೂಲಾಗಿರುತ್ತದೆ.

ಅಷ್ಟೇ ಅಲ್ಲ, ಇದೇ ಸೌರ ಶಕ್ತಿಯಿಂದ ಅಡುಗೆಯನ್ನೂ ಮಾಡಬಹುದು, ಸೌರ ಅಡುಗೆ ಪಾತ್ರೆ ಎಂಬ ಸಾಧನದಿಂದ. ಈ ಸಾಧನದಲ್ಲಿ ಒಂದು ಪೆಟ್ಟೆಗೆಯಿದ್ದು, ಅದರ ಒಳಭಾಗಕ್ಕೆ ಕಪ್ಪು ಬಣ್ಣ ಬಳಿಯಲಾಗಿರುತ್ತದೆ, ಅದಕ್ಕೆ ಎರಡು ಮುಚ್ಚಳಗಳಿದ್ದು,  ಒಂದು ಗಾಜಿನಿಂದ ಮಾಡಲಾಗಿದ್ದರೆ, ಇನ್ನೊಂದು ಮುಚ್ಚಳಕ್ಕೆ ಕನ್ನಡಿಯನ್ನು ಅಳವಡಿಸಲಾಗಿರುತ್ತದೆ. ಬೇಯಿಸಬೇಕಾದ ಆಹಾರ ಪದಾರ್ಥಗಳನ್ನು ಅಗತ್ಯವಿರುವಷ್ಟು ನೀರಿನೊಂದಿಗೆ ಬೆರೆಸಿ ಕಪ್ಪು ಬಣ್ಣದ ಸಣ್ಣ ಪಾತ್ರೆಗಳಲ್ಲಿಟ್ಟು, ಅವುಗಳನ್ನು ಆ ಪೆಟ್ಟಿಗೆ ಒಳಗಿಟ್ಟು ಗಾಜಿನ ಮುಚ್ಚಳವನ್ನು ಮುಚ್ಚಬೇಕು. ಕನ್ನಡಿಯ ಮುಚ್ಚಳವನ್ನು ಬಳಸಿಕೊಂಡು ಸಾಧ್ಯವಾದಷ್ಟು ಹೆಚ್ಚು ಸೂರ್ಯನ ಬೆಳಕು ಆ ಪೆಟ್ಟಿಗೆ ಒಳಸೇರುವಂತೆ ನೋಡಿಕೊಳ್ಳಬೇಕು. ಇಷ್ಟು ಮಾಡಿದ ನಂತರ ಒಂದೆರೆಡು ಘಂಟೆಗಳಲ್ಲಿ ನೀವಿಟ್ಟ ಆಹಾರ ಪದಾರ್ಥ ಬೆಂದು, ಬಡಿಸಲು ಸಿದ್ಧವಾಗಿರುತ್ತದೆ.

ದಿನಾ ಎದ್ದಕೂಡಲೇ ಸೂರ್ಯ ನಮಸ್ಕಾರ ಮಾಡುತ್ತಿದ್ದ ನಮಗೆ ಆತನ ಶಕ್ತಿಯ ಅರಿವೇ ಇರಲಿಲ್ಲ. ನಾವು ದುಂದು-ವೆಚ್ಚ, ಹಾಳು-ಧೂಳುಗಳನ್ನು ಮಾಡಿ ಪಡೆಯುತ್ತಿದ್ದ ಹಲವು ರೀತಿಯ ಶಕ್ತಿಗಳನ್ನು ನಿಸರ್ಗದಲ್ಲಿಯೇ, ಅದರ ಒಡೆಯನಾದ ಸೂರ್ಯನಿಂದ ಯಾವುದೇ ಹಾನಿಗಳಿಲ್ಲದೆ ಯಥೇಚ್ಛವಾಗಿ ಪಡೆಯಬಹುದು, ಅದೂ ಉಚಿತವಾಗಿ.!

No comments:

Post a Comment