ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, November 4, 2021

ವಿಜ್ಞಾನ ದೀವಿಗೆಯಲಿ ಲೋಕವ ಕಾಣುವ, ಕಾಣಿಸುವ ಉದಯ ಗಾಂವ್ಕರ್

ವಿಜ್ಞಾನ ದೀವಿಗೆಯಲಿ ಲೋಕವ ಕಾಣುವ, ಕಾಣಿಸುವ  ಉದಯ ಗಾಂವ್ಕರ್

                                                                                                     ಸಂತೋಷ ಗುಡ್ಡಿಯಂಗಡಿ 


-       ತುಂಬಾ ಹಸಿವಾದಾಗ ನಮ್ಮ ಜಠರವೇ ಏಕೆ ಜೀರ್ಣವಾಗುವುದಿಲ್ಲ ಸರ್?

-       ಸಾವಿರದಾರುನೂರು ಡಿಗ್ರಿಗೆ ಕುಲುಮೆ ಕರಗಿ ಹೋಗುವುದಿಲ್ವಾ ಸರ್? ಕುಲುಮೆ ಯಾವುದರಿಂದ ಮಾಡುತ್ತಾರೆ ಸರ್?

-       ಎಮ್ಮೆಗೆ ಜ್ವರ ಬಂದರೆ ಜಾನುವಾರು ಡಾಕ್ಟರು ಥರ್ಮಾ ಮೀಟರ್ ಎಲ್ಲಿಡುತ್ತಾರೆ ಗೊತ್ತಾ ಸರ್?

ಇಂತಹ ಪ್ರಶ್ನೆ ಮಾಡುವ ವಿದ್ಯಾರ್ಥಿಗಳೇ ನನ್ನ ಗುರುಗಳು ಎನ್ನುವ ವಿಜ್ಞಾನದ ಮೇಷ್ಟ್ರಿಗೆ ಮಕ್ಕಳು ವಿಜ್ಞಾನವನ್ನು ತನ್ನ ಪರಿಸರದ ಜೊತೆಗಿನ ಅನುಸಂಧಾನದಲ್ಲಿ ಕಲಿಯಬೇಕೆಂಬ ಬಯಕೆ ಮತ್ತು ಯಾವುದೇ ಜೀವಿಯಾಗಲಿ ತನ್ನ ಪರಿಸರದಿಂದ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವುದು ಜಾಣತನವಲ್ಲಎನ್ನುವ ಮೇಷ್ಟ್ರು ಯಾರು ಗೊತ್ತೇ?

ಅವರೇ ನಮ್ಮ ಉದಯ ಗಾಂವ್ಕರ್. ಅವರ ಪ್ರೀತಿ ಪಾತ್ರರಿಗೆ ನೆಚ್ಚಿನ ಗಾಂವ್ಕರ್ ಸರ್. ಮಕ್ಕಳ ಕಲಿಕೆಗೆ ತೊಡಕಾಗುವ ವಿಚಾರಗಳನ್ನು ಬಿಡಿಸಿ ಸರಳಗೊಳಿಸಿಕೊಡುವ ಒಬ್ಬ ಅತ್ಯುತ್ತಮಸುಗಮಕಾರಉದಯ್ ಗಾಂವ್ಕರ್. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ಧಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ಸುಗಮಕಾರರಾಗಿರುವ ಗಾಂವ್ಕರ್ ಅವರು ಬಹುಮುಖಿ ವ್ಯಕ್ತಿತ್ವವುಳ್ಳ ಅಪ್ಪಟ ಮಾನವತಾವಾದಿ.

ಉದಯ್ ಗಾಂವ್ಕರ್ ಒಬ್ಬ ಅತ್ಯುತ್ತಮ ಸುಗುಮಕಾರರಾಗುವುದಕ್ಕೆ ಕಾರಣ ಅವರೊಳಗೊಬ್ಬ ನಿರಂತರವಾಗಿ ಕಲಿಕೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಯಿದ್ದಾನೆ. ಮಕ್ಕಳ ಮನಕೆ ಮುದನೀಡಬಲ್ಲ ಹಾಡುಗಳನ್ನು ಬರೆಯುವ ಸೂಕ್ಷ್ಮ ಮನಸಿನ ಕವಿ, ಕಥೆಗಾರನಿದ್ದಾನೆ. ಕುಶಲ ಚಿತ್ರಕಾರನಿದ್ದಾನೆ. ಲೋಕದ ಆಗುಹೋಗುಗಳನ್ನು ಅಳೆದು ತೂಗಿ ಜನಪರವಾಗಿ ನಿಲ್ಲುವ ದ್ಭು ವಾಗ್ಮಿ, ಹೋರಾಟಗಾರನಿದ್ದಾನೆ. ಮೌಢ್ಯವನ್ನು ವೈಜ್ಞಾನಿಕವಾಗಿ ಎದುರುಗೊಳ್ಳುವ ವಿಚಾರವಂತನಿದ್ದಾನೆ. ಮಕ್ಕಳನ್ನೂ ದೊಡ್ಡವರನ್ನೂ ಸೆಳೆದು ಬಿಡುವ ಮನೋಜ್ಞ ವಿನ್ಯಾಸಕಾರನಿದ್ದಾನೆ. ‘ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಎಂದರೆ ಅದು ಬಹುಮತದ ಅಭಿಪ್ರಾಯಕ್ಕೆ ಬೆಲೆ ಕೊಡುವುದು. ಅದೇ ಅದರ ಮಿತಿಯೂ ಹೌದುಎಂಬ ಎಚ್ಚರಿಕೆಯುಳ್ಳ ಸಂಘಟಕನೂ ಇರುವ ವ್ಯಕ್ತಿತ್ವ ಉದಯ್ ಗಾಂವ್ಕರ್.

ಕುಂದಾಪುರದ ಮಧುಸೂಧನ ಡಿ ಕುಶೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶಾಲಾ ಆವರಣದಲ್ಲಿ ಚಿಕ್ಕದಾದ ಜಾಗದಲ್ಲಿ ಮಕ್ಕಳ ಹುಟ್ಟುಹಬ್ಬಕ್ಕೊಂದೊಂದು ಗಿಡ ನೆಟ್ಟು ಅಲ್ಲೊಂದು ಪುಟ್ಟ ವನ ನಿರ್ಮಾಣವಾಗಿತ್ತು. ಮರಗಳನ್ನು ಉಳಿಸಿಕೊಳ್ಳಲು, ಮರಗಳೊಂದಿಗೆ ಮಕ್ಕಳ ಬಂಧುತ್ವ ಬೆಳೆಸಲು ರಕ್ಷಾಬಂಧನದಂದು ಮಕ್ಕಳಿಂದ  ರಾಖಿ ಕಟ್ಟಿಸುತ್ತಿದ್ದರು ಎಂದು ಅವರ ವಿದ್ಯಾರ್ಥಿ ಸಂದೇಶ್ ಕುಂದಾಪುರ ಹೇಳುತ್ತಾರೆ. ಹಾಗೆ ಮಕ್ಕಳು ಕಾಪಾಡಿಕೊಂಡು ಬಂದ ಮರಗಳು ಇಂದು ಹೆಮ್ಮರಗಳಾಗಿವೆ. ಆದರೆ ಇತ್ತೀಚೆಗೆ ಬೆಲೆಬಾಳುವ ಸಾಗುವಾನಿ ಮರವೊಂದನ್ನು ಅಭಿವೃದ್ಧಿ ಕುಂಟು ನೆಪವೊಡ್ಡಿ ಕಡಿದಿರುವುದನ್ನು ಕಂಡ ಗಾಂವ್ಕರ್ ಸರ್ ಸಂಕಟಪಡುತ್ತಾರೆ.  ದಶಕದ ಹಿಂದೆ ನೆಟ್ಟ ವಿದ್ಯಾರ್ಥಿಯ ಹೆಸರನ್ನೂ ನೆನಪಿಸಿಕೊಂಡು ಮರವಿದ್ದ ಜಾಗದಲ್ಲಿ ಅಸಹಾಯಕರಾಗಿ ಓಡಾಡುತ್ತಾರೆ.

ಹೊಸದಾಗಿ ಆಯ್ಕೆಯಾದ ಶಿಕ್ಷಕರ ತರಬೇತಿಯಲ್ಲಿ ಭಾಗಿಯಾದ ಯುವ ಶಿಕ್ಷಕ ರವೀಂದ್ರ ಕೋಡಿ ಹೇಳುತ್ತಾರೆ : ಗಾಂವ್ಕರ್ ಸರ್ ಕಾಗದದಲ್ಲಿ ಆಟಿಕೆಯೊಂದನ್ನು ಮಾಡುತ್ತಾ ಹೋಗುತ್ತಾರೆ. ಶಿಕ್ಷಕರೆಲ್ಲರೂ ಅವರನ್ನು ಅನುಸರಿಸುತ್ತಾರೆ. ಆದರೆ ಕೆಲವು ಶಿಕ್ಷಕರಿಗೆ ಅವರು ವೇಗವಾಗಿ ಮುಂದೆ ಹೋಗುತ್ತಾರೆ ಅನಿಸುತ್ತದೆ. ನಿಧಾನಿಸಿ ಎಂದು ಕೇಳುತ್ತಾರೆ. ಆದರೆ ಅವರು ನಾನು ನಿಮ್ಮನ್ನು ಅನುಸರಿಸುತ್ತೇನೆ ಎಂದು ಹೇಳುತ್ತಾರೆ. ಆಟಿಕೆ ಮುಗಿದಾಗ ಕೆಲವು ಶಿಕ್ಷಕರು ಪೂರ್ಣ ಮುಗಿಸಿರುತ್ತಾರೆ, ಕೆಲವರು ಅರ್ಧದಲ್ಲಿರುತ್ತಾರೆ ಇನ್ನೂ ಕೆಲವರು ಆರಂಭಿಕ ಹಂತದಲ್ಲಿರುತ್ತಾರೆ. ಆಗ ಗಾಂವ್ಕರ್ ಹೊಸ ಶಿಕ್ಷಕರಿಗೆ ಹೇಳುತ್ತಾರೆ ಒಂದು ತರಗತಿ ಹೀಗೆಯೇ ಇರುತ್ತದೆ, ನಾವು ಮಾಡಿದ ಪಾಠ ಎಲ್ಲಾ ಮಕ್ಕಳಿಗೂ ಅರ್ಥವಾಗುತ್ತದೆ ಎಂಬ ತೀರ್ಮಾನಕ್ಕೆ ನಾವು ಬರುವುದು ತಪ್ಪಾಗುತ್ತದೆ ಎಂದು ಒಂದು ಆಟಿಕೆಯ ಮೂಲಕ ತರಗತಿಯನ್ನು ಪರಿಭಾವಿಸುವ ಪರಿಯನ್ನು ಶಿಕ್ಷಕರಿಗೆ ಮನದಟ್ಟು ಮಾಡಿಕೊಟ್ಟಿದ್ದರು. ಅಂದಿನಿಂದ ಗಾಂವ್ಕರ್ ಸರ್ ಒಡನಾಟದಲ್ಲಿ ಬಹಳಷ್ಟು ಕಲಿತಿದ್ದೇನೆ, ಆದರೆ ಅವರ ಮಕ್ಕಳೊಡನೆ ಮಕ್ಕಳಾಗುವ, ಮಕ್ಕಳ ಮನೋಸ್ಥಿತಿಯನ್ನು ಅರಿತುಕೊಂಡು ಅದಕ್ಕೆ ಸ್ಪಂದಿಸುವ ರೀತಿಗೆ ಬೆರಗಾಗಿದ್ದೇನೆ ಎನ್ನುತ್ತಾರೆ ರವೀಂದ್ರ.

ಸಾಂಪ್ರದಾಯಿಕ ಕಲಿಕಾ ಮಾದರಿಗಳನ್ನು ಒಡೆದು ಮಕ್ಕಳೇ ಅನುಭವಿಸಿ ಕಲಿಕೆಗೆ ತಮ್ಮನ್ನು ಅರ್ಪಿಸಿಕೊಳ್ಳುವ ಹಾದಿಯನ್ನು ಗಾಂವ್ಕರ್ ಹುಡುಕುತ್ತಾರೆ. ಮಕ್ಕಳ ಕೈಗೆ ಸಿಗುವ ವಸ್ತುಗಳಿಂದಲೇ ವೈಜ್ಞಾನಿಕ ಅಂಶಗಳನ್ನು ಗುರುತಿಸಿ ಕಲಿಯುವಂತೆ ಮಾಡುತ್ತಾರೆ. ವೈಜ್ಞಾನಿಕ ಮನೋಭಾವವುಳ್ಳ ಮಕ್ಕಳನ್ನು ರೂಪಿಸುವ ಅಪರೂಪದ ಸುಗಮಕಾರ ಎನ್ನುತ್ತಾರೆ ಕುಂದಾಪುರ ವಲಯದ ಶಿಕ್ಷಣ ಸಂಯೋಜಕರಾದ ಸದಾನಂದ ಬೈಂದೂರು.

ಮೂಲತಃ ಉತ್ತರಕನ್ನಡ ಜಿಲ್ಲೆಯ ಪಡುವಣಿಯವರಾದ ಉದಯ ಗಾಂವ್ಕರ್ ಅವರ ತಂದೆ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ದಿ. ನಾರಾಯಣ ಗಾಂವ್ಕರ್ ತಾಯಿ ನಾಗಮ್ಮ ಗಾಂವ್ಕರ್. ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಉಪನ್ಯಾಸಕರಾಗಿರುವ ಪತ್ನಿ ಸಂಧ್ಯಾ ನಾಯಕ ಮಗಳು ಪ್ರಾರ್ಥನಾಳೊಂದಿಗೆ ಕಳೆದೆರಡು ದಶಕಗಳಿಂದ ಕುಂದಾಪುರದಲ್ಲಿ ಬದುಕು ಕಟ್ಟಿಕೊಂಡಿರುವ ಉದಯ್ ಗಾಂವ್ಕರ್ ಅವರಿಗೆ ತಾನಿನ್ನೂ ಕುಂದಾಪ್ರ ಕನ್ನಡವನ್ನು ಸರಿಯಾಗಿ ಮಾತನಾಡಲು ಕಲಿತಿಲ್ಲವೆಂಬ ಸಂಕೋಚ. ಅದೇ ತನ್ನೂರಿಗೆ ಹೋದಾಗ ಊರವರು ಇವರು ಮಾತನಾಡುವ ಶೈಲಿಗೆಕುಂದಾಪ್ರದವನೇ ಆಗಿಬಿಟ್ಟೆಎನ್ನುವ ನುಡಿಗಳನ್ನು ಮೆಚ್ಚುಗೆಯೆಂದೂ ಸ್ವೀಕರಿಸುತ್ತಾರೆ.

ಉದಯ್ ಗಾಂವ್ಕರ್ ಅವರು ಕುಂದಾಪುರ ಸಮುದಾಯದ ಅಧ್ಯಕ್ಷರು. ಕಳೆದ ಮೂರು ದಶಕಗಳಿಂದ ಕುಂದಾಪುರದಲ್ಲಿ ರಂಗಚಟುವಟಿಕೆ, ವೈಚಾರಿಕ ಸಂವಾದ, ಸಾಹಿತ್ಯಕ ಚಟುವಟಿಕೆಗಳನ್ನು ಜೀವಂತವಾಗಿಟ್ಟ ಸಂಸ್ಥೆ ಸಮುದಾಯ. ಇತ್ತೀಚಿನ ದಿನಗಳಲ್ಲಿ ಹೊಸ ತಲೆಮಾರಿನ ಯುವಕ ಯುವತಿಯರನ್ನೊಳಗೊಂಡು ಹೊಸ ದಿಗಾಗಿ ರೂಪಿಸಿದಕಥಾ ಓದುವಿಶಿಷ್ಟ ಕಾರ್ಯಕ್ರಮ. ಕೋವಿಡ್ ಕಾರಣದಿಂದ ಭೌತಿಕವಾಗಿ ಒಟ್ಟುಗೂಡುವುದು ಅಸಾಧ್ಯವಾದಾಗ ಸಾಮಾಜಿಕ ಸಂವಹನದ ಮಾಧ್ಯಮಕ್ಲಬ್ ಹೌಸ್ಮೂಲಕ ಕಥಾ ಓದನ್ನು ಮುನ್ನಡೆಸಿದರು. ಸಮುದಾಯ ಕುಂದಾಪುರ ನಡೆಸಿಕೊಂಡು ಬರುತ್ತಿರುವರಂಗ ರಂಗು ರಜಾಮೇಳಕುಂದಾಪುರದ ಮಕ್ಕಳ ಪಾಲಿನ ವಾರ್ಷಿಕ ಸಂಭ್ರಮವಾಗಿ ರೂಪುಗೊಂಡಿದೆ.



ಸಮುದಾಯ, ಶಿಕ್ಷಣ ಇಲಾಖೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಗಾಂಧಿ ಓದು ಮಾಲಿಕೆಗಾಗಿ ಮಕ್ಕಳಿಗೆ ತಲುಪಿಸಲು ಅವರು ರೂಪಿಸುತ್ತಿರುವ ಪುಟ್ಟ ಪುಟ್ಟ ಗಾಂಧಿ ಕಥನದ ವಿಡಿಯೋಗಳು ಅತ್ಯಂತ ವಿಶಿಷ್ಟವಾಗಿವೆ. ಗಾಂಧಿ ಓದು ಮಾಲಿಕೆಯಲ್ಲಿ ಕುಂದಾಪುರ ತಾಲೂಕಿನ ನೂರಾರು ಪ್ರೌಢಶಾಲಾ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದಾರೆ.

ರಂಗ ರಂಗು ರಜಾಮೇಳದ ಸಂದರ್ಭದಲ್ಲಿ ಉದಯ್ ಗಾಂವ್ಕರ್ ದೂರದ ಉತ್ತರಕರ್ನಾಟಕದಿಂದ ವಲಸೆ ಬರುವ ಕಾರ್ಮಿಕರ ಮಕ್ಕಳನ್ನು ಹುಡುಕಿಕೊಂಡು ಹೋಗುತ್ತಾರೆ. ಅಲ್ಲೆಲ್ಲೋ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಟೆಂಟಿನಲ್ಲಿ ಬಾಲ್ಯ ಕಳೆವ ಮಕ್ಕಳನ್ನು ದಿನವೂ ರಜಾಮೇಳಕ್ಕೆ ವಾಹನ ಕಳಿಸಿ ಕರೆ ತರುತ್ತಾರೆ. ಪತ್ನಿ ಸಂಧ್ಯಾ ನಾಯಕ ಅವರು ಮಕ್ಕಳಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ತಮ್ಮ ಮಕ್ಕಳಂತೆ ಆಧರಿಸಿ ಉಪಚರಿಸುತ್ತಾರೆ. ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೂ ಕಳುಹಿಸುತ್ತಾರೆ. ತಮ್ಮ ಶಾಲೆಗಳಲ್ಲಿ ಕಷ್ಟದಲ್ಲಿರುವ ವಿದ್ಯಾರ್ಥಿಗಳ ನೆರವಿಗೆ ನಿಲ್ಲುತ್ತಾರೆ ಗಾಂವ್ಕರ್ ದಂಪತಿ. ಲಾಕ್ ಡೌನ್ ಸಂದರ್ಭದಲ್ಲಿ ಕುಂದಾಪುರದ ಸಮಾನ ಮನಸ್ಕರೊಂದಿಗೆ ಸೇರಿ ನಡೆಯುತ್ತಾ ಊರಿಗೆ ಹೊರಟ ಸಾವಿರಾರು ವಲಸೆ ಕಾರ್ಮಿಕರಿಗೆ ತಿಂಗಳುಗಳ ಕಾಲ ಅನ್ನ ನೀರು ನೀಡುವುದಕ್ಕೆ ಜೊತೆಯಾದವರು ಗಾಂವ್ಕರ್ ದಂಪತಿ. 

ಮಕ್ಕಳ ವಾಣಿ:

ಲಾಕ್ ಡೌನ್ ಇಂದಾಗಿ ಮಕ್ಕಳು ಶಾಲೆಯಿಂದ ದೂರವಾದಾಗ ಅವರ ಕಲಿಕೆಯ ಕುರಿತು ಚಡಪಡಿಸುತ್ತಾ, ಮಕ್ಕಳು ಶಿಕ್ಷಣದಿಂದ ದೂರವಾಗಬಾರದು ಅವರ ಮನಸ್ಸನ್ನು ಮುದಗೊಳಿಸಬೇಕು ಅದಕ್ಕಾಗಿ ರಾಜ್ಯದ ಶಿಕ್ಷಕರಿಗಾಗಿ ವರ್ಚುವಲ್ ಸಭೆಗಳನ್ನು ಆಯೋಜಿಸಿ ಚರ್ಚಿಸಿದ್ದರು. ಇಂತಹ ಹಲವಾರು ತುಣುಕುಗಳ ಫಲವಾಗಿ ಶಿಕ್ಷಣ ಇಲಾಖೆ ಆರಂಭಿಸಿದಮಕ್ಕಳ ವಾಣಿಯೂಟ್ಯೂಬ್ ವಾಹಿನಿಗಾಗಿ ದುಡಿದವರಲ್ಲಿ ಪ್ರಮುಖರು ಉದಯ್ ಗಾಂವ್ಕರ್.


ಮಕ್ಕಳಿಗಾಗಿ
ಎಂಥಹ ಕಾರ್ಯಕ್ರಮಗಳನ್ನು ರೂಪಿಸಬೇಕು ಅದನ್ನು ಹೇಗೆ ನಿರೂಪಿಸಬೇಕು ಎಂಬುದರ ವಿನ್ಯಾಸದಲ್ಲಿ ದುಡಿದವರು ಗಾಂವ್ಕರ್. ಮಕ್ಕಳ ವಾಣಿ ಅತ್ಯಂತ ಜನಪ್ರಿಯವಾಯಿತು. ಇದರ ಫಲವಾಗಿ ಇಲಾಖೆ ಒಂದರಿಂದ ಹತ್ತನೇ ತರಗತಿಯ ಮಕ್ಕಳ ಪಾಠ ಬೋಧನೆಯನ್ನೂ ಚಂದನವಾಹಿನಿ ಮತ್ತು ಮಕ್ಕಳ ವಾಹಿನಿಯ ಮೂಲಕ ನಿರಂತರವಾಗಿ ನಡೆಸುತ್ತಾ ಬಂದಿದೆ.

ಮಕ್ಕಳ ವಿಜ್ಞಾನ ಹಬ್ಬ

ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ಶಿಕ್ಷಣ ಇಲಾಖೆ ನಡೆಸಿದಮಕ್ಕಳ ವಿಜ್ಞಾನ ಹಬ್ಬಬಹುಶಃ ಮಕ್ಕಳು, ಶಿಕ್ಷಕರಾರೂ ಮರೆಯಲಾರರು. ಹಬ್ಬದಲ್ಲಿನ ವಿಜ್ಞಾನದ ಆಟಗಳು, ಆಟಿಕೆಗಳು ಮಕ್ಕಳನ್ನು ಅಪಾರವಾಗಿ ಆಕರ್ಷಿಸಿದ್ದವು. ಶ್ರೀರಂಗಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಹಬ್ಬದಲ್ಲಿ ಮಕ್ಕಳ ಅನುಭವ ಕೇಳುವುದೇ ಸಂಭ್ರಮವಾಗಿತ್ತು. ಮಂಡ್ಯದ ಹಳ್ಳಿಯ ಹುಡುಗನೊಬ್ಬ ತನ್ನ ಮನೆಗೆ ಮಂಗಳೂರಿನ ಹುಡುಗನೊಬ್ಬನನ್ನು ಅತಿಥಿಯಾಗಿ ಕರೆದುಕೊಂಡು ಹೋಗುತ್ತಾನೆ. ಮೂರು ದಿನಗಳ ಹಬ್ಬ ಮುಗಿದು ಊರಿಗೆ ಕಳಿಸಿಕೊಡುವಾಗ ಅವರಿಬ್ಬರು ತಬ್ಬಿಕೊಂಡು ಅಳುವ ದೃಶ್ಯ ಮನಕಲಕುತ್ತಿತ್ತು. ಇಡೀ ಮಕ್ಕಳ ಹಬ್ಬದಲ್ಲಿ ಕಾರ್ಯಕ್ರಮದ ಆಯೋಜನೆ, ರೂಪುರೇಷೆಗಳು, ಮಕ್ಕಳು ವೈಜ್ಞಾನಿಕ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಕೊಳ್ಳಬೇಕು, ಶಿಕ್ಷಕರನ್ನು ಅದಕ್ಕಾಗಿ ಹೇಗೆ ಸಜ್ಜುಗೊಳಿಸಬೇಕು ಕ್ರಿಯಾಶೀಲವಾಗಿ ತೊಡಗಿಕೊಂಡ ಮನಸ್ಸು ನಮ್ಮ ಉದಯ್ ಗಾಂವ್ಕರ್.

ರೇಖಾಚಿತ್ರ

ಉದಯ್ ಗಾಂವ್ಕರ್ ಅವರೊಬ್ಬ ಅತ್ಯುತ್ತಮ ವಿನ್ಯಾಸಕಾರ, ಚಿತ್ರಕಾರ. ಹಲವಾರು ಪುಸ್ತಕಗಳ ಮುಖಪುಟ ವಿನ್ಯಾಸ, ವೇದಿಕೆ ವಿನ್ಯಾಸ, ಸಮುದಾಯ ಕರ್ನಾಟಕ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಪೋಸ್ಟರ್ ವಿನ್ಯಾಸಗಳನ್ನು ಮಾಡಿಕೊಟ್ಟಿದ್ದಾರೆ. ತಮ್ಮ ಕಾರ್ಯಕ್ರಮಕ್ಕೆ ಪ್ಲಾಸ್ಟಿಕ್ ಫ್ಲೆಕ್ಸ್ ಗಳ ಬದಲಾಗಿ ಬಟ್ಟೆಯ ಫ್ಲೆಕ್ಸ್ ಮುದ್ರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಫೇಸ್ಬುಕ್ ಪುಟದಲ್ಲಿ ಅವರು ಬರೆಯುತ್ತಿರುವ ರೇಖಾಚಿತ್ರಗಳ ಜೀವಂತಿಕೆ ಗಮನ ಸೆಳೆಯುವಂತದ್ದು. ನಗುವಿನ ಗೆರೆಗಳಲ್ಲೇ ಹಿಡಿದಿಟ್ಟ ಪುನೀತ್ ರಾಜಕುಮಾರ್, ಬಿ.ವಿ.ಕಾರಂತ, ಶಿವರಾಮ ಕಾರಂತರಾದಿಯಾಗಿ ಹಲವು ವ್ಯಕ್ತಿ ಚಿತ್ರಗಳು ಜೀವಂತಿಕೆಯಿಂದ ಮಿಡುಕುತ್ತವೆ. 




ಲೋಕದ ಆಗುಹೋಗುಗಳಿಗೆ ತಮ್ಮ ರೇಖೆಯಿಂದ ತಕ್ಷಣ ಸ್ಪಂದಿಸುವ ಗಾಂವ್ಕರ್ ಒಳಗಿನ ಚಿತ್ರಕಾರ ತುಸು ಧೇನಿಸುತ್ತಲೆ ಕವಿಯಾಗಿಬಿಡುತ್ತಾನೆ. ಕವಿತ್ವದ ಬಂಧದಿಂದ ಆಚೆ ಸರಿದು ಸಮಾಜವನ್ನು ಅವರೊಳಗಿನ ಕಥೆಗಾರ ಕಾಣುತ್ತಾನೆ. ಇವುಗಳ ಬಂಧದೊಳಗಡೆಯೇ ಇದ್ದು ವೈಜ್ಞಾನಿಕವಾಗಿ ಚಿಂತಿಸುತ್ತಾರೆ, ಬರೆಯುತ್ತಾರೆ. “ಮೆರವಣಿಗೆ ಮತ್ತಿತರ ಬರೆಹಗಳುಎಂಬ ವಿಜ್ಞಾನ ಲೇಖನಗಳ ಸಂಗ್ರಹ, ಬಹುಮಾನ, ಮಹಾತ್ಮ, ಬ್ರಹ್ಮರಾಕ್ಷಸ, ಮಳೆ ಬಂತು ಮಳೆ ಮತ್ತಿತರ ಮಕ್ಕಳ ನಾಟಕಗಳು. ಬಿಡಿ ಕವಿತೆ, ಕಥೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ

ಎಂದೂ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಉದಯ ಗಾಂವ್ಕರ್ ತೆರೆಯ ಹಿಂದೆ ನಿಂತು ವಿನ್ಯಾಸಗೊಳಿಸಿದ ಕಾರ್ಯಕ್ರಮಗಳು ನೂರಾರು. ತನ್ನ ಅಪರೂಪದ ವ್ಯಕ್ತಿತ್ವದಿಂದಲೇಮಕ್ಕಳ ಮನವನ್ನು ಮುಟ್ಟುವ ಗಾಂವ್ಕರ್ ದೊಡ್ಡವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಾರೆ. ಅಪಾರವಾದ ಓದು, ಅಷ್ಟೇ ಪ್ರಖರವಾದ ಒಳನೋಟವುಳ್ಳ ಮಾತುಗಳು, ಚಿಕಿತ್ಸಕ ದೃಷ್ಟಿಕೋನ, ಕೆಲಸದಲ್ಲಿನ ತಾದಾತ್ಮ್ಯ ಸಕಲರ ಕೆಲಸವನ್ನು ಮೆಚ್ಚುವ ಗುಣವುಳ್ಳ ಗಾಂವ್ಕರ್ ಅವರದು ಅಷ್ಟೇ ಸಂಯಮ ಮತ್ತು ಸಂಕೋಚದ ಸ್ವಭಾವ ಅವರನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತವೆ. 


    ದೂರದ ನಂಜನಗೂಡಿನ ಹೆಗ್ಗಡಹಳ್ಳಿಯ ಮಕ್ಕಳು ಉಡುಪಿಗೆ ಬಂದಾಗ ಅವರನ್ನು ಸತ್ಕರಿಸಿ, ಇರುಳಲ್ಲಿ ಆಕಾಶವನ್ನು ನೋಡುವ, ನಕ್ಷತ್ರಗಳನ್ನು ಗುರುತಿಸುವುದನ್ನು ಹೇಳಿಕೊಟ್ಟ ಗಾಂವ್ಕರ್ ಸರ್ ಮತ್ತು ಸಂಧ್ಯಾ ಮೇಡಂ ಆತಿಥ್ಯವನ್ನು ನಮ್ಮ ಮಕ್ಕಳು ಸದಾ ನೆನೆಯುತ್ತಾರೆ. ಪ್ಲಾಸ್ಟಿಕ್ ವಿರುದ್ಧದ ಅಭಿಯಾನದಲ್ಲಿ ತೊಡಗಿರುವ ನಮ್ಮ ಮಕ್ಕಳಿಗೆ ಬಟ್ಟೆಯ ಫ್ಲೆಕ್ಸ್ ಒಂದನ್ನು ಉಡುಗೊರೆಯಾಗಿಯೂ ನೀಡಿದ್ದಾರೆ.



-
ಸಂತೋಷ ಗುಡ್ಡಿಯಂಗಡಿ

ನಾಟಕದ ಮೇಷ್ಟ್ರು 

ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿ

ನಂಜನಗೂಡು ತಾ|| ಮೈಸೂರು ಜಿ||



18 comments:

  1. ಎಲ್ಲರಂತೆ ಸೋಲು-ಗೆಲುವು, ಗುಣ- ದೋಷಗಳಿರುವ ಮನುಷ್ಯನಾದ ನನಗೆ ನೀವೆಲ್ಲ ತೋರಿರುವ ಪ್ರೀತಿ ದೊಡ್ಡದು.ಸವಿಜ್ಞಾನ ತಂಡದ ಪ್ರೀತಿಗೆ ಋಣಿ. ಗೆಳೆಯ ಸಂತೋಷರು ಇದನ್ನು ಬರೆದಿರುವುದು ಇನ್ನಷ್ಟು ಖುಷಿಗೆ ಕಾರಣ.

    ಸಂಕೋಚ ಮತ್ತು ಖುಷಿ

    ReplyDelete
  2. sooper personality ...uday gavker.happy to read about you sir

    ReplyDelete
  3. ನಿಜಕ್ಕೂ ಹೃದಯ ತುಂಬಿ ಬಂತು ಸರ್. ನಿಮ್ಮ ಸಾಮೀಪ್ಯ ಮತ್ತು ಸಂಸರ್ಗಗಳಿಂದಾಗಿ ಬಹಳ ವರ್ಷಗಳ ನಂತರ ನಾನು ಪ್ರೌಢಶಾಲಾ ಶಿಕ್ಷಕನಾ ದುದಕ್ಕೆ ಹೆಮ್ಮೆ ಪಡುತ್ತಿದ್ದೇನೆ. ಒಬ್ಬ ಶಿಕ್ಷಕನಾಗಿ ಮತ್ತು ಮನುಷ್ಯನಾಗಿ ನನ್ನ ಬದುಕಿನ ಸಾಧ್ಯತೆಗಳನ್ನು ನೀವು ತೋರಿಸಿಕೊಟ್ಟಿದ್ದೀರಿ. ಬುದ್ಧ ನಮ್ಮ ಸಮಕಾಲೀನನಾಗಿದ್ದು, ನಮ್ಮ ಕಣ್ಣೆದುರಿಗೇ ನಡೆದಾಡುತ್ತಿದ್ದರೆ ಯಾರಿಗೆ ಸಂತೋಷವಾಗುವುದಿಲ್ಲ...?

    ReplyDelete
  4. ಲೇಖಕ ಸಂತೋಷ್‌ ಗುಡ್ಡಿಯಂಗಡಿ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಗಳಲ್ಲಿ ನಮ್ಮ ಶಾಲೆಗೆ ಪ್ರತಿಸ್ಪರ್ಧಿಯಾಗಿ ಸತತ ಮೂರು ವರ್ಷ ಭೇಟಿಯಾಗಿದ್ದರು. ಅವರ ನಾಟಕಗಳ ಬಗೆ ಆಕರ್ಷಣೀಯವಾಗಿತ್ತು. ತಮ್ಮ ಕಥಾಸಂಕಲನ "ಕೊರಬಾಡು" ನೀಡಿದ್ದರು. ಅವರೂ ಉತ್ತಮ ಶಿಕ್ಷಕ ಬಹುಮುಖ ಪ್ರತಿಭೆ. ಅವರು ಪರಿಚಯಿಸಿದ ಉದಯ ಗಾಂವ್ಕರ್‌ ಸಹ ನಾಟಕ ಸ್ಪರ್ಧೆಗೆ ಕುಂದಾಪುರದ ಭಂಡಾರ್ಕರ್‌ ನಾಟಕ ಶಾಲೆಯಲ್ಲಿ ಭೇಡಿಯಾಗಿದ್ದರು. ಸ್ನೇಹಜೀವಿ. ನಮ್ಮ ನಾಟಕ ಮೇರಿ ಕ್ಯೂರಿ ಬಗ್ಗೆ ಶಿಕ್ಷಣವಾರ್ತೆಯಲ್ಲಿ ಬರೆದಿದ್ದರು. ಉತ್ತಮ ಶಿಕ್ಷಕ ಅವರ ಬಹುಮುಖ ಪ್ರತಿಭೆ ಲೇಖನದ ಮೂಲಕ ಪರಿಚಯವಾಯ್ತು. ಮಕ್ಕಳವಾಣಿಯಲ್ಲಂತೂ ನೋಡಿದ್ದೆ. ಧನ್ಯವಾದಗಳು ಇಬ್ಬರಿಗೂ ಶುಭವಾಗಲಿ.

    ReplyDelete
  5. ಉದಯ್ ಸರ್‌ ಎಂಬ ತಾನೂ ನಡೆಯುತ್ತಾ ಇತರರನ್ನೂ ನಡೆಸಿಕೊಂಡು ಹೋಗುವ ಗುಣ ಇರುವ ಅಪ್ಪಟ ಮನುಷ್ಯನನ್ನು ಚೆನ್ನಾಗಿ ಪರಿಚಯಿಸಿದ್ದಾರೆ ಸಂತೋಷ್
    ಅಭಿನಂದನೆಗಳು

    ReplyDelete
  6. ಉದಯ್ ಸರ್ - ಇವರು ಎಂಥಾ ಕ್ರಿಯಾಶೀಲ ಶಿಕ್ಷಕರು ಅನ್ನೋದರ ಬಗ್ಗೆ ನಾನು ಹೆಚ್ಚೇನೂ ಹೇಳಬೇಕಾಗಿಲ್ಲ ಅನ್ಸುತ್ತೆ. ನನಗೆ ಮಕ್ಕಳವಾಣಿ ಕಾರ್ಯಕ್ರಮದ ಮೂಲಕ ಇವರ ಪರಿಚಯ ಆಗಿದ್ದು. ಕೋವಿಡ್ ಸಮಯದಲ್ಲಿ ತೆರೆಯ ಮುಂದೆ ಎಷ್ಟು ಕೆಲಸ ಮಾಡ್ತಾ ಇದ್ರೋ ತೆರೆಯ ಹಿಂದೆ ಅದರ 100 ಪಟ್ಟು ಕೆಲಸ ಮಾಡಿ ಸಾಮಾನ್ಯ ಜನರಿಗೆ ನೆರವಾಗ್ತಾ ಇದ್ರು. ಇದರ ಉಲ್ಲೇಖ ಆಗಲೇ articleನಲ್ಲಿ ಇದೆ. ಇವರ ಸಾಹಿತ್ಯಸಕ್ತಿ, ರಂಗಭೂಮಿ ಒಡನಾಟ, ಶಿಕ್ಷಣ ಕ್ಷೇತ್ರದ ವಿವಿಧ ಆಯಮಗಳ ಬಗ್ಗೆ ಇವರಿಗಿರುವ ಕಾಳಜಿ ಮತ್ತು ಜ್ಞಾನ, ಇವರು ಕೊಡುವ practical solutions, ಸಮಾಜ ಸೇವೆ, ಒಂದು ಒಳ್ಳೆ ಉದ್ದೇಶಕ್ಕೆ ಜನರನ್ನ ಸೇರಿಸುವ ಬಗೆ, ಚಿತ್ರಕಲೆ ಬಿಡಿಸುವುದರಲ್ಲಿ ಇರುವ ಆಸಕ್ತಿ, ... ಒಂದಾ ಎರಡಾ ... ಹೀಗೆ ಇವನ್ನೆಲ್ಲಾ ನೋಡಿ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಇಷ್ಟೆಲ್ಲಾ ತಿಳಿದುಕೊಳ್ಳಬಹುದಾ/ ಮಾಡಬಹುದಾ ಅಂತ ನಾನು ಆಶ್ಚರ್ಯ ಪಟ್ಟಿದ್ದೆ. ಮಕ್ಕಳವಾಣಿ ನಂತರ ಅವರ ಊರಿಗೆ ಅವರು ಹೋದರೂ ಅವರ ಸಂಪರ್ಕ ಇನ್ನೂ ಇಟ್ಟುಕೊಂಡಿದೀನಿ. ಮುಂದೆ ಅವರ ಜೊತೆ ಮತ್ತೆ ಕೆಲಸ ಮಾಡೋ ಅವಕಾಶಕ್ಕೆ ಕಾಯುತ್ತಾ ಇದೀನಿ.

    ReplyDelete
    Replies
    1. ನಿಮ್ಮ ಪ್ರೀತಿ ದೊಡ್ಡದು. ಈ ವಾರ ಡಿ.ಎಸ್.ಇ.ಆರ್.ಟಿ ಮತ್ತು ಎಸ್ ಎಸ್ ಎ ಅಧಿಕಾರಿಗಳು ಒಂದು ಸಭೆಯಲ್ಲಿ ಭೇಟಿಯಾಗಿದ್ದರು. ಮಕ್ಕಳವಾಣಿ ನೆನಪಿಸಿದರು. ಆಗ ನಿಮ್ಮ ಬೆಂಬಲ ಮನಸ್ಸಿಗೆ ಬಂತು

      Delete
  7. ಉದಯ್ ಓರ್ವ ಸಂಘಟಕನಾಗಿ ಅತ್ಯುತ್ತಮ ಅಧ್ಯಾಪಕನಾಗಿ ಗಮನಸೆಳೆಯುತ್ತಾರೆ ಆದರೆ ಎಲ್ಲು ಕೂಡ ಪ್ರಚಾರಕ್ಕೆ ಗಂಟು ಬೀಳದೆ ತನ್ನದೇ ಯೋಜನೆಯನ್ನು ಅನುಷ್ಠಾನಗೊಳಿಸ ಬಲ್ಲ ಓರ್ವ ನೇರ ನಡೆ-ನುಡಿಯ ಪ್ರಾಮಾಣಿಕ ವ್ಯಕ್ತಿ

    ReplyDelete
  8. ನಮಸ್ಕಾರ, ನಾಟ್ಕದ ಮೇಸ್ಟ್ರಿಗೆ. ಬಹಳ ಚಂದವಾಗಿ ಉದಯ ಗಾಂವಕಾರ ಪರಿಚಯವನ್ನು ಮಾಡಿದಿರಿ. ಅವರ ಬಗ್ಗೆ ಸಾಕಷ್ಟು ವಿಷಯ ಕೇಳಿದ್ದೆ. ಮಾನವಿಯತೆಯುಳ್ಳ ನುಡಿದಂತೆ ನಡೆಯುವ ವ್ಯಕ್ತಿಯಾಗಿ ಅವರು ಇಷ್ಟವಾಗುತ್ತಾರೆ. ನನ್ನ ಜಿಲ್ಲೆಯವರು ಎಂಬ ಹೆಮ್ಮೆ ನನಗೆ ಬಹಳ ಇದೆ. ನಿಮಗೆ ಧನ್ಯವಾದ


    ಮೇಸ್ಟ್ರು ನಿಮ್ ಬಗ್ಗೆ ಸರಿಯಾಗಿಯೆ ಬರೆದಿದ್ದಾರೆ ಉದಯ ಸರ್..ನಿಮಗೆ ರಾಶಿ ಅಭಿನಂದನೆಗಳು.


    ಅಕ್ಷತಾ ಕೃಷ್ಣಮೂರ್ತಿ

    ReplyDelete
  9. ತುಂಬಾ thanks ಎಲ್ಲರಿಗೂ.

    ನಿಮ್ಮೆಲ್ಲರ ಪ್ರೀತಿಯ ಎದುರು ಕುಬ್ಜನಾಗಿರುವೆ.

    ReplyDelete
  10. ನಾನು ಇಲಾಖೆಗೆ ಸೇರಿದಂದಿನಿಂದ ಗಾಂವ್ಕರ್ ಸರ್ ಅವರ ಕೃತ್ವ ಶಕ್ತಿ ಕಂಡು ಬೆರಗಾಗಿದ್ದೇನೆ. ಹಳ್ಳಿಯ ಸಣ್ಣ ಶಾಲೆಗಳು, ಮಕ್ಕಳ ಕಲಿಕೆ, ಮೌಲ್ಯಮಾಪನ ಇವುಗಳ ಕುರಿತು ಅವರಿಗೆ ಇರುವ ಕಾಳಜಿ ಅಭಿನಂದನೀಯ. ಅವರ ನೂರಾರು ಹಳೆಯ ವಿದ್ಯಾರ್ಥಿಗಳು ಇಂದಿಗೂ ತುಂಬ ವಿಶ್ವಾಸದಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರ ಪಾಠದ ಕ್ರಮವನ್ನು ಸ್ಮರಿಸಿ ಕೊಳ್ಳುತ್ತಾರೆ..ಇದು ಅವರಲ್ಲಿರುವ ಅದ್ಭುತ ಸುಗಮಕಾರನಿಗೆ ಸಲ್ಲುವ ಗೌರವ. ಶುಭಾಶಯಗಳು

    ReplyDelete
  11. ನೀವು ಎಲ್ಲಾ ಶಿಕ್ಷಕರಿಗೂ ಮಾದರಿ ಸರ್.

    ReplyDelete
  12. ಉದಯ ಗಾಂವ್ಕರವರ ಕ್ರೀಯಾಶೀಲತೆ ಸರ್ವರಿಗೂ ಮಾದರಿ.

    ReplyDelete
  13. ನಿಜವಾಗಿಯೂ ಅದ್ಬುತ ವ್ಯಕ್ತಿತ್ವ

    ReplyDelete