ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, November 4, 2021

ಭವಿಷ್ಯದಲ್ಲಿ ತೊಂದರೆಯಾಗಲಿರುವ ವ್ಯೋಮ ತ್ಯಾಜ್ಯಗಳು

ಭವಿಷ್ಯದಲ್ಲಿ ತೊಂದರೆಯಾಗಲಿರುವ ವ್ಯೋಮ ತ್ಯಾಜ್ಯಗಳು 

ಗಜಾನನ ಎನ್. ಭಟ್. (ಹವ್ಯಾಸಿ ಲೇಖಕರು, ವಿಜ್ಞಾನ ಶಿಕ್ಷಕರು)

ಸರಕಾರಿ ಪ್ರೌಢಶಾಲೆ, ಉಮ್ಮಚಗಿ, 

ಯಲ್ಲಾಪುರ ತಾ. ಶಿರಸಿ, 

ಉತ್ತರ ಕನ್ನಡ 

ಮಾನವ ಇಂದು ತಂತ್ರಜ್ಞಾನದ ಉತ್ತುಂಗದಲ್ಲಿದ್ದಾನೆ. ಪ್ರಪಂಚದ ಯಾವುದೇ ಮೂಲೆಯನ್ನಾದರೂ ಕ್ಷಣಾರ್ಧದಲ್ಲಿ ಸಂಪರ್ಕಿಸಿ ಅಲ್ಲಿನ ಯಥಾವತ್ತಾದ ಮಾಹಿತಿಯನ್ನು ಪಡೆಯುವ ಸೌಕರ್ಯವನ್ನು ವಿಜ್ಞಾನದ ಮೂಲಕ ತನ್ನದಾಗಿಸಿಕೊಂಡಿದ್ದಾನೆ. ಕುಳಿತಲ್ಲಿಂದಲೇ, ನಮ್ಮ ದಿನನಿತ್ಯದ ಹಲವಾರು ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಇಂದು ಅತ್ಯಂತ ಸುಲಲಿತ. ಇವಕ್ಕೆಲ್ಲ ಮೂಲವೇ ವ್ಯೋಮ ವಿಜ್ಞಾನಿಗಳ ನಿರಂತರ ಸಂಶೋಧನೆಯ ಫಲವಾದ ಉಪಗ್ರಹಗಳು. ಪ್ರತಿ ವರ್ಷ ಪ್ರಪಂಚದಾದ್ಯಂತ ನೂರಾರು ಉಪಗ್ರಹಗಳನ್ನು ವ್ಯೋಮದ ಬೇರೆ ಬೇರೆ ಕಕ್ಷೆಗಳಿಗೆ ಉಡಾವಣಾ ಕೇಂದ್ರದಿಂದ ಹಾರಿಬಿಡಲಾಗುತ್ತಿದೆ. ಈ ಉಪಗ್ರಹಗಳಿಮದ ದೊರೆತ ಮಾಹಿತಿಗಳು ವಿಜ್ಞಾನ ಲೋಕದಲ್ಲಿ ಮಹತ್ತರ ಹೆಜ್ಜೆಗುರುತು ಮೂಡಿಸಿ ಮನುಕುಲದ ಜೀವನ ಮಟ್ಟವನ್ನು ಮೇಲೆತ್ತುತ್ತಿವೆ.

ನಿರಂತರವಾಗಿ ವಿವಿಧ ಉಪಗ್ರಗಳ ಉಡಾವಣೆಯ ಪರಿಣಾಮದಿಂದಾಗಿ, ಕೆಲವು ವಿಶಿಷ್ಟ ಸಮಸ್ಯೆಗಳೂ ತಲೆ ಎತ್ತಿವೆ. ಕಾರ್ಯ ನಿರ್ವಹಿಸದ ಉಪಗ್ರಹಗಳು ಹೊರಹಾಕುವ ಅಪಾರ ಪ್ರಮಾಣದ ತ್ಯಾಜ್ಯ ತುಣುಕುಗಳನ್ನು “ವ್ಯೋಮತ್ಯಾಜ್ಯಗಳು” (space junk) ಎಂದು ಗುರುತಿಸಲಾಗಿದೆ. ಈ ಎಲ್ಲಾ ತ್ಯಾಜ್ಯ ಉಳಿಕೆಗಳಿಗೆ ಮಾನವನೇ ಜವಾಬ್ದಾರನಾಗಿದ್ದು, ಜನವರಿ 2019ರ ಮಾಹಿತಿ ಪ್ರಕಾರ 128 ಮಿಲಿಯನ್ ಅವಶೇಷ ಚೂರುಗಳು 1 cmಗಿಂತ ಚಿಕ್ಕದಾಗಿದ್ದು, 900,000 ಅವಶೇಷಗಳು 1 ರಿಂದ 10 cm ಗಾತ್ರದಲ್ಲಿದ್ದು,  ಸುಮಾರು 34000 ಚೂರುಗಳು 10 cm ಗಿಂತಲೂ ದೊಡ್ಡದಾಗಿದ್ದು ತಿಳಿದು ಬಂದಿದೆ. ಈ ವ್ಯೋಮತ್ಯಾಜ್ಯಗಳು  ಭೂಮಿಯನ್ನು ಯಾದೃಚ್ಚಿಕವಾಗಿ ಸುತ್ತುತ್ತ, ಉಳಿದ ಉಪಗ್ರಹಗಳಿಗೆ ತೊಂದರೆಯನ್ನು ಉಂಟುಮಾಡುತ್ತಿರುವುದು ವ್ಯೋಮ ಸಂಶೋಧನೆಯಿಂದ ಅರಿವಾಗಿದೆ. ಹೀಗಾಗಿ, ಈ ವ್ಯೋಮತ್ಯಾಜ್ಯಗಳು ಭವಿಷ್ಯದಲ್ಲಿ ತೀವ್ರ ಸಮಸ್ಯೆಯಾಗುವ ಸಾಧ್ಯತೆ ಗೋಚರಿಸಿದೆ.

ಉಲ್ಕೆಗಳ ತಜ್ಜರಾದ ಪೀಟರ್ ಬ್ರೌಬ್ ಪ್ರಕಾರ, 40000 ಮೆಟ್ರಿಕ್‍ಟನ್‍ನಷ್ಟು ಅಂತರಗ್ರಹ ಸಂಬಂಧಿಸಿದ ತ್ಯಾಜ್ಯ ಭೂಮಿಯ ವಾತಾವರಣವನ್ನು ಪ್ರತಿ ವರ್ಷ ಸೇರುತ್ತಿದೆ.


ಯು ಸಿ ಎಸ್ (Union of Concerned Scientists) ವಿಜ್ಞಾನಿಗಳ ಪ್ರಕಾರ, ಹಾರಿ ಬಿಡಲಾಗಿರುವ ಉಪಗ್ರಹ ದಾಖಲೆಗಳ ಆಧಾರದಲ್ಲಿ ವ್ಯೋಮದಲ್ಲಿ 6542 ಉಪಗ್ರಹಗಳಿದ್ದು, 3372 ಉಪಗ್ರಹಗಳು ಕಾರ್ಯ ನಿರ್ವಹಿಸುತ್ತದ್ದರೆ, ಸುಮಾರು 3170 ಉಪಗೃಹಗಳು ಕಾರ್ಯ ನಿಲ್ಲಿಸಿವೆ. ಇವುಗಳ ಅವಶೇಷಗಳು ವ್ಯೋಮದಲ್ಲಿ ಸುತ್ತುತ್ತಾ ಸಮಸ್ಯೆ ಉಂಟುಮಾಡುತ್ತಿವೆ.  ನಿರುಪಯೋಗಿ ಉಪಗ್ರಹಗಳು ವ್ಯೋಮದಲ್ಲಿ ತೇಲುತ್ತಿವೆ. ಹೆಚ್ಚಿನವು, ಕೊಲಾಯ್ಡಲ್ ರೂಪದಲ್ಲಿದ್ದು ವ್ಯೋಮ ವಾತಾವರಣಕ್ಕೆ  ಮಾರಕವಾಗಿ ಪರಿಣಮಿಸಿದೆ. ಅಲ್ಲದೆ, ಉಪಯುಕ್ತ ಉಪಗ್ರಹಗಳಿಗೆ ತೀವ್ರ ಅಡಚಣೆ ಉಂಟುಮಾಡುತ್ತಿದೆ. ಇಲ್ಲಿಯವರೆಗೆ ಗುರುತಿಸಲಾದ ಅತೀ ದೊಡ್ಡ ವ್ಯೋಮ ತ್ಯಾಜ್ಯವು 30 ಅಡಿ ಉದ್ದ ಮತ್ತು 16 ಅಡಿ ಅಗಲ ಇರುವುದನ್ನು ಗುರುತಿಸಲಾಗಿದೆ.

ಅತ್ಯಂತ ಹಳೆಯದಾದ ವ್ಯೋಮ ತ್ಯಾಜ್ಯವೆಂದರೆ 1958 ರಲ್ಲಿಉಡಾವಣೆ ಮಾಡಲಾದ ‘ವೆನ್‍ಗಾರ್ಡ’ ಸಂಶೋಧನಾ ಉಪಗ್ರಹ .ಇದು 1964ರವರೆಗೆ ಕಾರ್ಯ ನಿರ್ವಹಿಸಿದ್ದು ನಂತರ ತ್ಯಾಜ್ಯರೂಪದಲ್ಲಿ ವ್ಯೋಮದಲ್ಲಿ ತೇಲಾಡುತ್ತಿದೆ. ಬೇರೆ ಬೇರೆ ಕೋನಗಳಲ್ಲಿ ಇದರ ಭಾಗಗಳು ಚಲಿಸುತ್ತಾ, ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಾ ಚಿಕ್ಕ ತುಣುಕುಗಳಾಗಿ ಮಾರ್ಪಡುತ್ತಿದೆ.ಇದರಿಂದಾಗಿ, ಇಂತಹ ಚಿಕ್ಕ ತುಣುಕುಗಳನ್ನು ಪ್ರತ್ಯೇಕಿಸುವುದು ಅಥವಾ ಭೂಮಿಗೆ ಮರಳಿಸುವುದು ಕಷ್ಟವಾದುದು. ಸುಮಾರು 600 ಕಿ.ಮೀ ಕೆಳಗಿನ ಕಕ್ಷೆಗಳಲ್ಲಿರುವ ವ್ಯೋಮ ತ್ಯಾಜ್ಯಗಳು ಭೂಮಿಯ ಗುರುತ್ವಾಕರ್ಷಣೆಗೆ ಒಳಪಟ್ಟು  ಸುಲಭವಾಗಿ ಭೂಮಿಗೆ ಬೀಳುತ್ತದೆ. ಆದರೆ, 1000 ಕಿ.ಮೀ.ಗಿಂತ ಮೇಲಿದ್ದ ತ್ಯಾಜ್ಯಗಳು ಶತಮಾನಗಳಿಗಿಂತ ಹೆಚ್ಚು ವರ್ಷಗಳಿಂದ ಅಡ್ಡಾದಿಡ್ಡಿಯಾಗಿ ವ್ಯೋಮದಲ್ಲಿ ಸುತ್ತುತ್ತಿದ್ದು ವ್ಯೋಮ ವಾತಾವರಣಕ್ಕೆ ಅತೀವ ಅಡಚಣೆ ಉಂಟುಮಾಡುತ್ತವೆ. ಕೆಲವು ತುಣುಕುಗಳು 2000 ಕಿ.ಮೀ(1200 ಮೈಲಿ) ದೂರದಲ್ಲಿದ್ದರೆ, ಕೆಲವು ಭೂಸ್ಥಿರ ಉಪಗ್ರಹಕಕ್ಷೆ (geostationary) 35,786 ಕಿ.ಮೀ (22,236 ಮೈಲಿ) ಎತ್ತರದಲ್ಲಿವೆ.

 

ವ್ಯೋಮಕ್ಷೇತ್ರದ ವಿಜ್ಞಾನಿಗಳು ಕಂಡುಕೊಂಡ ಪರಿಹಾರಗಳೇನು..??

ಇಂದು ವ್ಯೋಮಕ್ಷೇತ್ರ ಹೊಸ ಹೊಸ ಆವಿಷ್ಕಾರಗಳನ್ನು ಒಳಗೊಳ್ಳುತ್ತಾ ತನ್ನ ಹೆಜ್ಜೆ ಗುರುತುಗಳನ್ನು  ಮೂಡಿಸುತ್ತಿದೆ.ಇದಕ್ಕೆ ಅಪವಾದವಾಗಿ ವ್ಯೋಮ ತ್ಯಾಜ್ಯಗಳು ಮಾರಕವಾಗಿ ಪರಿಣಮಿಸುತ್ತಿವೆ. .ಕ್ಷೇತ್ರದ ಪರಿಣಿತರು ಈ ಸಮಸ್ಯೆಗೆ ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ಈ ಕೆಳಗಿನವು.

1.’ಡಿ ಆರ್ಬಿಟಿಂಗ್’ ಪ್ರಕ್ರಿಯೆಯ ಮೂಲಕ ವಿವಿಧ ಕಕ್ಷೆಗಳಲ್ಲಿದ್ದ ಕೃತಕ ಉಪಗ್ರಹ ಅಥವಾ ಉಡಾವಣಾ ವಾಹನಗಳ ಅವಶೇಷಗಳನ್ನು ಭೂಮಿಗೆ ತಳ್ಳಲು ಪ್ರಯತ್ನಿಸಲಾಗುತ್ತಿದೆ.

2. ‘ಲೇಸರ್ ಅಂಗಛೇದನ’ ಮೂಲಕ ವ್ಯೋಮ ತ್ಯಾಜ್ಯ ನಿರ್ಮೂಲನೆಗೆ ಪ್ರಯತ್ನಿಸಲಾಗುತ್ತಿದೆ.

3. ಡಿಫೆನ್ಸಗ್ಲೋಬಲ್ ಸ್ಪೇಸ್ ಸರ್ವೀಲಿಯೆನ್ಸ್ ನೆಟ್‍ವರ್ಕ್ ಸಹಯೋಗದಲ್ಲಿ ವ್ಯೋಮ ತ್ಯಾಜ್ಯಗಳ ಜಾಡನ್ನು ಪತ್ತೆ ಹಚ್ಚಿ, ಉಳಿದ ಕ್ರಿಯಾಶೀಲ ಉಪಗ್ರಹಗಳಿಗೆ ಹಾನಿಯಾಗುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ.

4. ಉಪಗ್ರಹಗಳ ಕಾರ್ಯ ಸಾಮಥ್ರ್ಯ ಅವಧಿಯನ್ನು ಹೆಚ್ಚಿಸಲಾಗುತ್ತಿದೆ.

5.ರಾಕೇಟುಗಳ ಜೀವಿತಾವಧಿ ಕಡಿಮೆಗೊಳಿಸಿ ಅವು ತಮ್ಮಷ್ಟಕ್ಕೆ ತಾವೇ ಕ್ಷಯಿಸುವಂತೆ ಅಣಿಗೊಳಿಸಲಾಗುತ್ತಿದೆ.

 

ವ್ಯೋಮತ್ಯಾಜ್ಯ ನಿರ್ಮೂಲನೆಯಲ್ಲಿರುವ ಸಮಸ್ಯೆಗಳು..

ವ್ಯೋಮ ವಿಜ್ಞಾನಿಗಳು ವ್ಯೋಮತ್ಯಾಜ್ಯ ನಿರ್ಮೂಲನೆಗೆ ಎಷ್ಟೇ ಗುರುತರ ಕ್ರಮಗಳನ್ನು ಕೈಗೊಂಡರೂ, ಕೆಲವು ಅಡಚಣೆಗಳನ್ನು ಎದುರಿಸಬೇಕಾಗುತ್ತದೆ .ಅವುಗಳಲ್ಲಿ ಪ್ರಮುಖವಾದವುಗಳನ್ನು ಈ ಕೆಳಗಿನಂತೆ ಗುರುತಿಸಬಹುದು.

1.’ಡಿ ಆರ್ಬಿಟಿಂಗ್ ಪ್ರಕ್ರಿಯೆಗಳ’ ಮೂಲಕ ವ್ಯೋಮತ್ಯಾಜ್ಯ ಹೊರಹಾಕಲು ಅಪಾರ ಪ್ರಮಾಣದ ಶಕ್ತಿಯ ಅಗತ್ಯತೆ ಇದೆ.

2. ವ್ಯೋಮ ತ್ಯಾಜ್ಯಗಳು ಒಂದಕ್ಕೊಂದು ಘರ್ಷಣೆಯಾಗಿ ಚಿಕ್ಕಚಿಕ್ಕ ತುಣುಕುಗಳಾಗಿ ಯಾದೃಚ್ಛಿಕವಾಗಿ ಚಲಿಸಲು ಆರಂಭಿಸುವುದರಿಂದ ಇವುಗಳನ್ನು ಮುಕ್ತ ಗೊಳಿಸುವುದು ಅಷ್ಟು ಸುಲಭವಲ್ಲ.

3. ವ್ಯೋಮದಲ್ಲಿರುವ ತ್ಯಾಜ್ಯ ಕಲಿಲಗಳಿಂದ ಕೃತಕ ಉಪಗ್ರಹಗಳ ಕಕ್ಷಾ ಸಂಚಾರಕ್ಕೆ ಆಗುವ ಅಡಚಣೆಯನ್ನು ತಡೆಯುವುದು ಕಷ್ಟ ಸಾಧ್ಯ.

4. ಭೂ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಾದಂತೆ ವ್ಯೋಮ ತ್ಯಾಜ್ಯ ಭೂಮಿಗೆ ಸೆಳೆಯಲು ತೀರಾ ಅಡಚಣೆಯಾಗುತ್ತದೆ.

ವಿಜ್ಞಾನಿಗಳ ಮಹತ್ವಾಕಾಂಕ್ಷೆಯ ಮಟ್ಟಲುಗಳಾಗಿ ಕಾರ್ಯ ನಿರ್ವಹಿಸುವ ಉಪಗ್ರಹಗಳು ಮಾನವನ ಜೀವನ ಮಟ್ಟವನ್ನು ಮೇಲೆತ್ತಿ ಸರಳೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆÉ. ಆದರೆ, ಉಡಾವಣೆಯಾದ ತ್ಯಾಜ್ಯವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆದು, ವ್ಯೋಮತ್ಯಾಜ್ಯ ನಮಸ್ಸೆ ನಿವಾರಣೆಯಾದಲ್ಲಿ ವ್ಯೋಮ ವಿಜ್ಞಾನ ಕ್ಷೇತ್ರದಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಬಹುದು.


5 comments:

  1. Sir ಚೆನ್ನಾಗಿದೆ

    ReplyDelete
  2. ಉತ್ತಮ ಲೇಖನ . ಸಂಗ್ರಹ ಮತ್ತು ನಿರೂಪಣೆ ಉತ್ತಮವಾಗಿದೆ.

    ReplyDelete
  3. ಉಪಯುಕ್ತ ಮಾಹಿತಿ sir. ತಮಗೆ ಧನ್ಯಾದಗಳು

    ReplyDelete