ವೈದ್ಯಲೋಕದ 2021ರ ವಿಸ್ಮಯ ಸುದ್ದಿಗಳು
ಡಾ. ಹೆಚ್.ಎಸ್. ಮೋಹನ್
ವಿಜಯಾ ಐ ಕ್ಲಿನಿಕ್, ಸಾಗರ
ರೋಗಿಗಳ ತಪಾಸಣೆ ಮಾಡುವ ಸಂದರ್ಭದಲ್ಲಿ
ವೈದ್ಯರು,
ತಮ್ಮ ವೃತ್ತಿ ಜೀವನದಲ್ಲಿ ಕಂಡು ಬಂದ ಅಪರೂಪದ ಕೆಲವು ಕಾಯಿಲೆಗಳನ್ನು
ಹಾಗೂ ವಿಸ್ಮಯಕಾರಿ ವಿಷಯಗಳನ್ನು ವೈದ್ಯಕೀಯ ಜರ್ನಲ್‌ಗಳಲ್ಲಿ ದಾಖಲಿಸುವ ಪರಿಪಾಠವಿದೆ.. ಕಳೆದ
ವರ್ಷ,
೨೦೨೧ರಲ್ಲಿ ವಿಶ್ವದ ವಿವಿದೆಡೆ ದಾಖಲಾದ ಅಂಥ ಕೆಲವು ವಿಸ್ಮಯದ ಸುದ್ದಿಗಳನ್ನು
ಹೆಕ್ಕಿ ತಂದಿದ್ದಾರೆ, ಜನಪ್ರಿಯ ವೈದ್ಯ
ಲೇಖಕರಾದ ಡಾ. ಹೆಚ್. ಎಸ್. ಮೋಹನ್ ಅವರು.
2021 ರ ವೈದ್ಯ ವಿಸ್ಮಯಗಳು :
1. ಮೀನಿನ ಅಕ್ವೇರಿಯಂ ನಿಂದ ಮಹಿಳೆಗೆ ಅಪರೂಪದ ಕಾಯಿಲೆ :
ಹೌದು, ಸಾಕಿದ ಮೀನು ಸಹಿತ ಕಾಯಿಲೆ ತರಬಲ್ಲದು. ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಮಹಿಳೆಯೊಬ್ಬಳು ತನ್ನ ಮನೆಯ ಅಕ್ವೇರಿಯಂನ ಮೀನಿನಿಂದ ಉಷ್ಣವಲಯದ ದೇಶಗಳಲ್ಲಿ ಕಂಡು ಬರುವ ಅಮೆರಿಕಲ್ಲಿ ತೀರಾ ಅಪರೂಪದ Melioidoses ಕಾಯಿಲೆಗೆ ತುತ್ತಾದಳು. ಇದರ ವಿವರಗಳನ್ನು ಪರಿಶೀಲಿಸೋಣ.
56 ವರ್ಷದ ಮಹಿಳೆ ಸೆಪ್ಟೆಂಬರ್ 2019 ರಲ್ಲಿ ಜ್ವರ, ಕೆಮ್ಮು, ಎದೆನೋವು ಎಂಬ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದಳು.ಆರಂಭಿಕ ಪರೀಕ್ಷೆಯಲ್ಲಿ ಆಕೆಗೆ ನ್ಯುಮೋನಿಯಾ ಇರುವುದು ಕಂಡುಬಂದಿತು. ಕೆಲವು ದಿನಗಳ ನಂತರ ಮತ್ತಷ್ಟು ಪರೀಕ್ಷೆಯಲ್ಲಿ ಆಕೆಗೆ Burkholderia pseudomallei ಎಂಬ ಬ್ಯಾಕ್ಟೀರಿಯಾದ ಸೋಂಕು ಆಗಿದೆ ಎಂದು ಗೊತ್ತಾಯಿತು.ಆ ಬ್ಯಾಕ್ಟೀರಿಯಾ ಉಂಟು ಮಾಡುವ ಕಾಯಿಲೆ Melioidosis . ಇದಕ್ಕೆ ಚಿಕಿತ್ಸೆಯಾಗಿ 12 ವಾರಗಳ ಸೂಕ್ತ ಆಂಟಿಬಯೋಟಿಕ್ ಗಳನ್ನು ತೆಗೆದುಕೊಂಡಳು. ಆಗ ಸೋಂಕು ಕಡಿಮೆಯಾಯಿತು. 2021 ರಲ್ಲಿ ಮತ್ತೆ ಆಕೆಗೆ ಅದೇ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರಿಗೆ ಸಮಸ್ಯೆಯಾಗಿ ಈ ಸೋಂಕಿನ ಮೂಲ ಯಾವುದು ಎಂದು ಹುಡುಕಿದರು. ಆಗ ಆಕೆಯ ಮನೆಯಲ್ಲಿದ್ದ ಅಕ್ವೇರಿಯಂ ನ ಸ್ಯಾಂಪಲ್ ಮತ್ತು ಆಕೆಯ ರಕ್ತದ ಸ್ಯಾಂಪಲ್ ಎರಡನ್ನೂ ಜೆನೆಟಿಕ್ ಪರೀಕ್ಷೆಗೆ ಕಳುಹಿಸಿ ಆಕೆಗೆ ಅಕ್ವೇರಿಯಂನಿಂದಲೇ ಆ ಅಪರೂಪದ ಕಾಯಿಲೆ MELIOIDOSIS ಬಂದಿದೆ ಎಂಬುದನ್ನು ದೃಢೀಕರಿಸಿದರು.
ಜುಲೈ 2021 ರಲ್ಲಿ ಅಮೆರಿಕದ CDC ಅಮೆರಿಕದ ಬೇರೆ ಪ್ರಾಂತಗಳಿಂದ ನಾಲ್ಕು ಜನರಲ್ಲಿ ಮೇಲಿನದೇ ಕಾಯಿಲೆ ಇದೆಯೆಂದು ವರದಿಮಾಡಿತು. ಅದರಲ್ಲಿ ಇಬ್ಬರು ಮರಣ ಹೊಂದಿದರು. Melioidosis ಕಾಯಿಲೆ ಉಷ್ಣತೆ ಜಾಸ್ತಿ ಇರುವ ದೇಶಗಳಾದ ಆಸ್ಟ್ರೇಲಿಯಾದ ಉತ್ತರ ಭಾಗ ಮತ್ತು ಆಗ್ನೇಯ (South east ) ಏಷ್ಯಾದ ದೇಶಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಈ ಕಾಯಿಲೆಯ ಮುಖ್ಯ ಲಕ್ಷಣಗಳು - ಕೆಮ್ಮು, ಎದೆನೋವು, ವಿಪರೀತ ಜ್ವರ, ತಲೆನೋವು, ಹಸಿವಾಗದಿರುವುದು. ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ನ್ಯುಮೋನಿಯಾ ಅಥವಾ ಕ್ಷಯ ಇರಬಹುದೆಂದು ಭಾವಿಸಲಾಗುತ್ತದೆ.
ಕಲುಷಿತ ಮಣ್ಣು ಮತ್ತು ನೀರಿನಿಂದ ಬರುವ ಈ ಕಾಯಿಲೆಯನ್ನು ಸೂಕ್ತ ಆಂಟಿಬಯೋಟಿಕ್ ಗಳಿಂದ ಚಿಕಿತ್ಸೆ ಮಾಡಬಹುದಾದರೂ 40% ಜನರು ಮರಣ ಹೊಂದುತ್ತಾರೆ ಎನ್ನಲಾಗಿದೆ. ಮೇಲಿನ ವ್ಯಕ್ತಿಗಳಲ್ಲಿ ವಾಲ್ ಮಾರ್ಟ್ ನಲ್ಲಿ ಮಾರಾಟ ಮಾಡಿದ ನಿರ್ದಿಷ್ಟ ಸುಗಂಧ ದ್ರವ್ಯದ ಬಾಟಲಿಗಳಿಂದ ಈ ಸೋಂಕು ಬಂದಿರುವುದು ಗೊತ್ತಾಯಿತು. ನಂತರ ಆ ರೀತಿಯ ನಿರ್ದಿಷ್ಟ ಬಾಟಲಿಗಳನ್ನು ಎಲ್ಲಾ ಅಂಗಡಿ, ವಾಲ್ ಮಾರ್ಟ್ ಗಳಿಂದ ಹಿಂಪಡೆಯಲಾಯಿತು. ಆ ನಂತರ ಯಾರಲ್ಲೂ ಈ ಕಾಯಿಲೆ ಬಂದ ಬಗ್ಗೆ ವರದಿಯಾಗಿಲ್ಲ.
2. ಮಹಿಳೆಯಲ್ಲಿನ ಕಾಪರ್ ಟಿ ಮೂತ್ರಚೀಲದಲ್ಲಿ :
47 ವರ್ಷದ ಈ ಮಹಿಳೆ ತನ್ನ ಮೂತ್ರದಲ್ಲಿ ರಕ್ತ ಬರುತ್ತಿದೆ ಎಂಬ ಲಕ್ಷಣದೊಂದಿಗೆ ವೈದ್ಯರಲ್ಲಿ ತೆರಳಿದಳು. ಆಗ ವೈದ್ಯರು ಪರೀಕ್ಷಿಸಿದಾಗ ಅಸಾಮಾನ್ಯ ಕಾರಣ ಅವರಿಗೆ ದೊರಕಿತು. ಮಕ್ಕಳಾಗದಿರಲೆಂದು ಉಪಯೋಗಿಸುವ ಗರ್ಭಕೋಶದಲ್ಲಿನ (Uterus) ಕಾಪರ್ ಟಿ ರೀತಿಯ ವಸ್ತು ಆಕೆಯ ಗರ್ಭಕೋಶವನ್ನು ಕೊರೆದು ಅದರ ಪರಿಮಿತಿ ದಾಟಿ ಆಕೆಯ ಮೂತ್ರಚೀಲದಲ್ಲಿ (Urinary Bladder) ಹೋಗಿ ಕುಳಿತಿತ್ತು. ಆಕೆಗೆ 37 ವರ್ಷಗಳಿದ್ದಾಗ ಎರಡು ಮಕ್ಕಳನ್ನು ಪಡೆದು ನಂತರ ಕುಟುಂಬ ಯೋಜನೆ ಮಾಡಲು ಗರ್ಭಕೋಶದಲ್ಲಿ ಕಾಪರ್ ಟಿ ರೀತಿಯ ವಸ್ತುವನ್ನು ಹಾಕಿಸಿಕೊಂಡಿದ್ದಳು. ಅದು 10 ವರ್ಷಗಳಷ್ಟು ದೀರ್ಘ ಅವಧಿಯ ನಂತರ ನಿಧಾನವಾಗಿ ಗರ್ಭಕೋಶವನ್ನು ಕೊರೆದು ಕೊರೆದು ನಂತರ ಸಣ್ಣ ಪ್ರಮಾಣದಲ್ಲಿ ಗರ್ಭಕೋಶದ ಗೋಡೆಯನ್ನು ಛಿದ್ರಗೊಳಿಸಿ ಮೂತ್ರಚೀಲದಲ್ಲಿ ಬಂದು ಕುಳಿತಿತ್ತು. ಸೂಕ್ತ ಶಸ್ತ್ರಕ್ರಿಯೆ ಮಾಡಿ ತೆಗೆದು ಗರ್ಭಕೋಶವನ್ನು ರಿಪೇರಿ ಮಾಡಲಾಯಿತು.
3. ಪಿಸ್ತೂಲಿನ ಗುಂಡು ಮೂಗಿನಲ್ಲಿ !
ಪಿಸ್ತೂಲಿನ ಸಣ್ಣ ಗುಂಡು ಹದಿಹರೆಯದ ಯುವಕನ ಮೂಗಿನಲ್ಲಿ ಸುಮಾರು 8 ವರ್ಷಗಳಿಂದ ಇತ್ತು ಎಂದರೆ ಆಶ್ಚರ್ಯವಾಗುವುದಿಲ್ಲವೇ ?
15 ವರ್ಷದ ಈ ಯುವಕ ಬಹಳ ದಿನಗಳಿಂದ ಮೂಗು ಕಟ್ಟಿಕೊಳ್ಳುತ್ತದೆ, ವಾಸನೆ ಸರಿಯಾಗಿ ಗೊತ್ತಾಗುತ್ತಿಲ್ಲ ಎಂಬ ಲಕ್ಷಣಗಳಿಂದ ENT ವೈದ್ಯರಲ್ಲಿ ಬಂದಾಗ ಆತನಿಗೆ ಮೂಗಿಗೆ ಸಿಂಪಡಿಸುವ ಔಷಧ ಮತ್ತು ಆ್ಯಂಟಿಹಿಸ್ಟಮೀನ್ ಮಾತ್ರೆಗಳನ್ನು ಕೊಡಲಾಯಿತು. ಒಂದು ವರ್ಷದ ನಂತರ ಆತ ಮತ್ತೆ ವೈದ್ಯರಲ್ಲಿ ಬಂದಾಗ ಆತ ಮೂಗಿನಲ್ಲಿ ಶೀನಿದಾಗ ವಿಪರೀತ ಕೆಟ್ಟ ವಾಸನೆ ಬರುತ್ತಿತ್ತು. ಸಿ ಟಿ ಸ್ಕ್ಯಾನ್ ಮಾಡಿದಾಗ ಆತನ ಮೂಗಿನೊಳಗಡೆ 9 ಮಿ ಮೀ (0.35 ಇಂಚು) ದೊಡ್ಡದಾದ ಗುಂಡಗಿನ ವಸ್ತು ಇರುವುದು ಪತ್ತೆಯಾಯಿತು. ವೈದ್ಯರು ಶಸ್ತ್ರಕ್ರಿಯೆ ಮಾಡಿ ಹೊರತೆಗೆದಾಗ ಅದು ಪಿಸ್ತೂಲಿನ ಲೋಹದ ಗುಂಡು ಎಂದು ಗೊತ್ತಾಯಿತು. ಆತನ ಪಾಲಕರನ್ನು ವಿಚಾರಿಸಿದಾಗ ಅವರು ಆತ 8 ಅಥವಾ 9 ವರ್ಷದವನಿರುವಾಗ ಮೂಗಿಗೆ ಪಿಸ್ತೂಲಿನ ಗುಂಡು ತಾಗಿದ ಬಗ್ಗೆ ಮಾಹಿತಿ ಕೊಟ್ಟರು. ಆಗ ಆತನಿಗೆ ಯಾವ ಲಕ್ಷಣಗಳೂ ಇಲ್ಲದುದರಿಂದ ಅವರು ವೈದ್ಯರಲ್ಲಿ ಬರಲಿಲ್ಲ. ಬಹಳ ದಿನಗಳಾದ್ದರಿಂದ ಗುಂಡಿನ ಸುತ್ತಲೂ ಅಂಗಾಂಶಗಳು ಬೆಳೆದು ಅದನ್ನು ಸರಿಯಾಗಿ ಗುರುತಿಸುವುದು ಕಷ್ಟವಾಯಿತು. ಮೂಗಿನಲ್ಲಿನ ದ್ರವ ಚಲಿಸುವ ದಾರಿಯನ್ನು ಅದು ಕಟ್ಟಿಬಿಟ್ಟಿದ್ದರಿಂದ ಅಲ್ಲಿ ಮ್ಯೂಕಸ್, ಇನ್ನಿತರ ಕಲ್ಮಶಗಳು ಹಾಗೂ ಬ್ಯಾಕ್ಟೀರಿಯಾಗಳು ಎಲ್ಲವೂ ಸೇರಿ ವಿಚಿತ್ರ ಕೆಟ್ಟ ವಾಸನೆ ಉಂಟುಮಾಡುತ್ತಿತ್ತು. ಶಸ್ತ್ರಕ್ರಿಯೆಯ ನಂತರ ಆತನ ಮೂಗು ಸರಿಯಾಗಿ ವಾಸನೆ ಬರುವುದೂ ಸಂಪೂರ್ಣವಾಗಿ ನಿಂತಿತು.
4. ಹಳದಿ ನಾಲಿಗೆ
ವ್ಯಕ್ತಿಯ ನಾಲಿಗೆ ಹಳದಿ ಬಣ್ಣಕ್ಕೆ ತಿರುಗಿದರೆ ಅದೇನೂ ಬಾರೀ ವಿಶೇಷವೆನಿಸುವುದಿಲ್ಲ. ಬಾಯಿಯಲ್ಲಿ ನೀರಿನ ಪಸೆ ಕಡಿಮೆಯಾದಾಗ, ಹಲವು ರೀತಿಯ ಜಾಂಡಿಸ್ ಕಾಯಿಲೆಗಳಲ್ಲಿ, ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿರುವಾಗ - ಹೀಗೆ ಹಲವು ಕಾರಣಗಳಿಂದ ನಾಲಿಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಕೆನಡಾದ 12 ವರ್ಷದ ಹುಡುಗನ ಹಳದಿ ನಾಲಿಗೆಯು ಒಂದು ಗಂಭೀರ ಮತ್ತು ಅಪರೂಪದ ಕಾಯಿಲೆಯ ಲಕ್ಷಣವಾಗಿತ್ತು. ಈ ಹುಡುಗನಿಗೆ ಗಂಟಲು ನೋವು, ಮೂತ್ರವು ತೀವ್ರ ಹಳದಿ ಬಣ್ಣಕ್ಕೆ ತಿರುಗಿತು, ಹೊಟ್ಟೆ ನೋವು, ಚರ್ಮವು ಬಿಳಿಚಿಕೊಂಡಿತು ಹಾಗೂ ನಾಲಿಗೆ ಗಮನಾರ್ಹವಾಗಿ ಹಳದಿ ಬಣ್ಣಕ್ಕೆ ತಿರುಗಿತು. ಈ ಲಕ್ಷಣಗಳಿಂದ ವೈದ್ಯರಲ್ಲಿ ಪರೀಕ್ಷೆಗೆ ಬಂದನು. ಈತನಿಗೆ ಜಾಂಡಿಸ್ ಬಂದಿದೆ ಎಂದು ಮೇಲ್ನೋಟಕ್ಕೆ ವೈದ್ಯರು ನಿರ್ಧರಿಸಿದರು. ಬೈಲಿರುಬಿನ್ ಎಂಬ ಹಳದಿ ರಾಸಾಯನಿಕ ದೇಹದೊಳಗೆ ಶೇಖರಗೊಳ್ಳತೊಡಗಿದಾಗ ಉಂಟಾಗುವ ಲಕ್ಷಣವೇ ಜಾಂಡಿಸ್. ರಕ್ತದ ಕೆಂಪು ರಕ್ತ ಕಣಗಳು ಸಹಜವಾಗಿ ವಿಭಜನೆ ಹೊಂದಿದಾಗ ಬೈಲಿರುಬಿನ್ ರಾಸಾಯನಿಕ ಉತ್ಪನ್ನವಾಗುತ್ತದೆ. ವೈದ್ಯರು ಹಲವಾರು ಪರೀಕ್ಷೆ ಮಾಡಿ ನೋಡಿದಾಗ ಅವರು ಈತನಿಗೆ ಅಪರೂಪದ ಆಟೋ ಇಮ್ಯೂನ್ ಕಾಯಿಲೆ Cold Agglutinin ಕಾಯಿಲೆ ಕಾಣಿಸಿಕೊಂಡಿದೆ ಎಂಬ ತೀರ್ಮಾನಕ್ಕೆ ಬಂದರು. ಈ ಕಾಯಿಲೆಯು ತುಂಬಾ ಅಪರೂಪವಾಗಿ ಕಂಡು ಬರುವ ಆಟೋ ಇಮ್ಯೂನ್ ಕಾಯಿಲೆ. ಇಲ್ಲಿ ದೇಹದ ಪ್ರತಿರೋಧ ವ್ಯವಸ್ಥೆಯು ತನ್ನದೇ ದೇಹದ ಕೆಂಪು ರಕ್ತ ಕಣಗಳನ್ನು ಆಕ್ರಮಣ ಮಾಡಿ ಅದನ್ನು ನಾಶಮಾಡುತ್ತದೆ. ಚಳಿಗಾಲದ ಚಳಿಯ ವಾತಾವರಣದಲ್ಲಿ ಈ ಆಟೋಇಮ್ಯೂನ್ ಆಕ್ರಮಣವು ಜಾಸ್ತಿಯಾಗಿ ಕಂಡು ಬರುತ್ತದೆ. ಈ ಕಾಯಿಲೆಯು ರಕ್ತಹೀನತೆ (ಅನೀಮಿಯ ) ಮತ್ತು ಜಾಂಡಿಸ್ ಅನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಈ ಕಾಯಿಲೆಯು ಕೆಲವು ವೈರಸ್ ಗಳ ಸೋಂಕಿನಿಂದ ಉಂಟಾಗಬಹುದು. ಉದಾ: Epstein - Barr ವೈರಸ್. ಈ ಹುಡುಗನಲ್ಲಿಯೂ E B ವೈರಸ್ ನ ಸೋಂಕಿನಿಂದಲೇ Cold Agglutinin ಕಾಯಿಲೆ ಬಂದಿದೆ. ಆತನಿಗೆ ಹೊಸ ರಕ್ತ, ಸ್ಟೀರಾಯ್ಡ್ ಮಾತ್ರೆಗಳನ್ನು ಕೊಟ್ಟು ಚಿಕಿತ್ಸೆ ಮಾಡಲಾಯಿತು. ನಂತರ ಹುಡುಗನಲ್ಲಿ ಕಾಯಿಲೆ ಸಂಪೂರ್ಣವಾಗಿ ಗುಣವಾಯಿತು ಎಂಬುದು ಸಮಾಧಾನಕರ ವಿಚಾರ.
5. ಮೂಗಿನಲ್ಲಿ ಹಲ್ಲು !
ಸಾಮಾನ್ಯವಾಗಿ ಬಾಯಿಯೊಳಗೆ ಇರಬೇಕಾದ ಹಲ್ಲು ಮೂಗಿನಲ್ಲಿರಲು ಸಾಧ್ಯವೇ ? ಹೌದು ಇಂತಹ ಒಂದು ವೈದ್ಯಕೀಯ ವಿಸ್ಮಯವನ್ನು ವೈದ್ಯರು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ವರದಿ ಮಾಡಿದ್ದಾರೆ. ಈ ವ್ಯಕ್ತಿಯಲ್ಲಿ ಆತನ ಬಲಗಡೆ ಭಾಗದ ಮೂಗಿನ ಹೊಳ್ಳೆ ಮುಚ್ಚಿಕೊಂಡು ಬಹಳ ದಿನಗಳಾಗಿತ್ತು. ಮೂಗಿನ ತಜ್ಞ ವೈದ್ಯರು ರೈನೋಸ್ಕೋಪಿ ಮಾಡಿ ಪರೀಕ್ಷಿಸಿದಾಗ ಆತನ ಮೂಗಿನ ಹೊಳ್ಳೆಯ ಒಳಗಡೆ ಹಲ್ಲು ಬೆಳೆದಿರುವುದನ್ನು ಪತ್ತೆ ಹಚ್ಚಿದರು. ವೈದ್ಯರು ಶಸ್ತ್ರಕ್ರಿಯೆ ಮಾಡಿ 14 mm ಉದ್ದದ ಅಸಾಮಾನ್ಯ ಹಲ್ಲನ್ನು ತೆಗೆದಾಗ ಆತನ ಮೂಗು ಕಟ್ಟಿಕೊಳ್ಳುವುದರಿಂದ ಮುಕ್ತವಾಗಿ ಆತನಿಗೆ ಸರಾಗವಾಗಿ ಉಸಿರಾಡಲು ಸಾಧ್ಯವಾಯಿತು!.
6. ಕೋವಿಡ್ ಬಗ್ಗೆ ಗೊಂದಲ ಹುಟ್ಟಿಸುವ EVALI :
ಗಂಟಲಿನಲ್ಲಿ ತೊಂದರೆ, ಫ್ಲೂ ತರಹದ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡರೆ ಕಳೆದ 2 ವರ್ಷಗಳಿಂದ ಎಲ್ಲರಿಗೂ ಬರುವ ಸಂದೇಹ ಇದು ಕೋವಿಡ್ ಕಾಯಿಲೆಯೇ ಎಂದು. ಹೆಚ್ಚಿನ ಸಂದರ್ಭಗಳಲ್ಲಿ ಇದು ಸರಿಯಾದರೂ ಕೆಲವೊಮ್ಮೆ ಈ ಲಕ್ಷಣ ಹೊಂದಿದ ಅಪರೂಪದ ಕಾಯಿಲೆಗಳು ಕಂಡು ಹಿಡಿಯಲ್ಪಟ್ಟ ಉದಾಹರಣೆಗಳಿವೆ.
ಈ ಮಹಿಳೆ ಸುಸ್ತು, ಉಸಿರುಕಟ್ಟುತ್ತದೆ, ಆಗಾಗ ಮತ್ತೆ ಬರುವ ಜ್ವರ, ಹೊಟ್ಟೆ ನೋವು, ವಾಂತಿ, ತಲೆನೋವು - ಈ ಲಕ್ಷಣಗಳಿಂದ ವೈದ್ಯರಲ್ಲಿ ಪರೀಕ್ಷೆಗೆ ಬಂದಾಗ ವೈದ್ಯರು ಕೋವಿಡ್ ಕಾಯಿಲೆಯೇ ಇರಬೇಕೆಂದು ಆಸ್ಪತ್ರೆಗೆ ಸೇರಿಸಿದರು. ಆದರೆ ವೈದ್ಯರ ಮುಂದುವರಿದ ಪರೀಕ್ಷೆಯಲ್ಲಿ ಈಕೆಗೆ ಅಪರೂಪದ ಶ್ವಾಸಕೋಶದ ಕಾಯಿಲೆ "E - Cigarette or Vaping Product Associated lung Injury " ಅಥವಾ EVALI ಎಂದು ಕಾಯಿಲೆ ಪತ್ತೆ ಹಚ್ಚಿದರು. EVALI ಕಾಯಿಲೆಯ ಎಲ್ಲಾ ರೋಗಿಗಳು ಈ ರೀತಿಯ ಎಲೆಕ್ಟ್ರಾನಿಕ್ ರೀತಿಯ ಧೂಮಪಾನ ಮಾಡುತ್ತಾರೆ. ಅಲ್ಲದೆ ಅವರು THC ಎಂಬ ಮರಿಜುವಾನ ರೀತಿಯ ಮತ್ತು ತರಿಸುವ ವಸ್ತುವನ್ನು ಸೇದುತ್ತಾರೆ. ಅದರ ಜೊತೆ ಕೆಲವೊಮ್ಮೆ ವಿಟಮಿನ್ ಈ ಸೇರಿರುವ ಎಣ್ಣೆಯ ಪದಾರ್ಥಗಳನ್ನು ಅದರಲ್ಲಿ ಸೇರಿಸಿಕೊಳ್ಳುತ್ತಾರೆ. ಈ ಮಹಿಳೆ ಸಹಿತ THC ಯನ್ನು ಸೇದುತ್ತಿದ್ದಳು.
7. ಆಸನದಲ್ಲಿ ಕಡ್ಡಿ !
ಜಪಾನಿನ 67 ವರ್ಷದ ವ್ಯಕ್ತಿ 2 ತಿಂಗಳಿನಿಂದ ಬಲಭಾಗದ ಅಂಡಿನಲ್ಲಿ ( Buttock ) ಮತ್ತು ತೊಡೆಯ ಭಾಗದಲ್ಲಿ ತುಂಬಾ ನೋವಿದೆ ಎಂದು ವೈದ್ಯರಲ್ಲಿಗೆ ಬಂದ. ಈತನಿಗೆ ಬೆನ್ನು ಹುರಿಯಲ್ಲಿ ಸಮಸ್ಯೆ ಇರಬೇಕೆಂದು ಬೆನ್ನು ಹುರಿಯ ಶಸ್ತ್ರಕ್ರಿಯೆಗೆ ತಯಾರು ಮಾಡುತ್ತಿದ್ದರು. ಶಸ್ತ್ರಕ್ರಿಯೆಯ ಮೊದಲು CT Scan ಮಾಡಿಸಿದಾಗ ದೊಡ್ಡ ಕರುಳಿನ ಅಂತಿಮ ಭಾಗವಾದ ರೆಕ್ಟಮ್ ನಲ್ಲಿ 7cm ಉದ್ದದ "ಸಲಾಕೆ " ಇರುವುದು ಗೊತ್ತಾಯಿತು. ತಕ್ಷಣ ವೈದ್ಯರು ಆಪರೇಷನ್ ಮಾಡಿ ತೆಗೆದರೆ ಅಲ್ಲಿ ಹಲ್ಲು ಚುಚ್ಚುವ ಕಡ್ಡಿ (Tooth Prick) ಅವರಿಗೆ ದೊರೆಯಿತು. ಈ ತರಹದ ಘಟನೆ ತುಂಬಾ ಅಪರೂಪ ಎಂಬುದು ವೈದ್ಯರ ಅನಿಸಿಕೆ.
ಇಂತಹ ಹಲವಾರು ಅಪರೂಪದ ವೈದ್ಯ ವಿಸ್ಮಯಗಳು 2021 ರಲ್ಲಿ ದಾಖಲಾಗಿವೆ.
ಉಪಯುಕ್ತ ಲೇಖನ
ReplyDelete