ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್
ಭಾರತ ಸರ್ಕಾರ ದೇಶದ ನಾಗರಿಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು “ಪದ್ಮಶ್ರೀ” ಪ್ರಶಸ್ತಿ. ೨೦೨೨ನೇ ಸಾಲಿಗೆ ಕರ್ನಾಟಕದ ಐವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಲ್ಲಿ ಒಬ್ಬರು ನಮ್ಮ ಹೆಮ್ಮೆಯ ವಿಜ್ಞಾನಿಗಳಾದ ಡಾ.ಎಸ್. ಅಯ್ಯಪ್ಪನ್.
ಡಾ ಸುಬ್ಬಣ್ಣ ಅಯ್ಯಪ್ಪನ್ ಅವರು ೧೯೭೫ರಲ್ಲಿ ಬಿ.ಎಫ್.ಎ.ಎಸ್ಸಿ ಪದವಿ ವಿದ್ಯಾಭ್ಯಾಸ ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಿಂದ ೧೯೭೭ರಲ್ಲಿ ಮೀನುಗಾರಿಕೆ, ಉತ್ಪಾದನೆ ಮತ್ತು ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ, ಬೆಂಗಳೂರು ವಿಶ್ವವಿದ್ಯಾಲಯದಿಂದ ೧೯೮೮ರಲ್ಲಿ ಪಿ.ಹೆಚ್‌ಡಿ ಪದವಿ ಪಡೆದರು. ಈ ಮಧ್ಯೆ ೧೯೭೮ ರಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚುರಲ್ ರೀಸರ್ಚ್ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದರು. ಮೀನುಗಾರಿಕೆ ವಿಷಯದಲ್ಲಿ ಅತ್ಯಂತ ಉನ್ನತ ಸಂಶೋಧನೆ ಕೈಗೊಂಡು ೨೦೦ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಮೀನುಗಾರಿಕೆ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಜನರಲ್ ಆಗಿ, ಮುಂಬೈನ ಸೆಂಟ್ರಲ್ ಫಿಶರೀಸ್ ಇನ್ಸ್ಟಿಟ್ಯೂಟ್ ನ ಡೈರೆಕ್ಟರ್ ಆಗಿ, ಬ್ಯಾರಕ್‌ಪೂರ್‌ನ ಸೆಂಟ್ರಲ್ ಫಿಶರೀಸ್ ಇನ್ಸ್ಟಿಟ್ಯೂಟ್ ನ ಪ್ರಮುಖ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಕೃಷಿ ವಿಜ್ಞಾನ ಪರಿಷತ್, ಪರಿಸರ ಸಂರಕ್ಷಕರ ಸೊಸೈಟಿ, ಬಯೋಡೈವರ್ಸಿಟಿ ಇಂಡಿಯಾ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚುರಲ್ ಸೈನ್ಸಸ್ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ ಅಧ್ಯಕ್ಷರಾಗಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಹಾಗೂ ಮಣಿಪುರದ ಇಂಫಾಲ್‌ನಲ್ಲಿರುವ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಡಾ ಅಯ್ಯಪ್ಪನ್ ಅವರ ಹೆಸರಿನಲ್ಲಿ ಎರಡು ಪೇಟೆಂಟ್ ಹಾಗೂ ಒಂದು ಮಾದರಿ ಇರುವುದು ಹೆಮ್ಮೆಯ ವಿಷಯ. ಜೀವವಿಜ್ಞಾನ ಸೊಸೈಟಿಯಿಂದ ೧೯೯೬-೯೭ ರಲ್ಲಿ ಚಿನ್ನದ ಪದಕ, ಮೀನುಕೃಷಿ ವಿಷಯದಲ್ಲಿ ಮಾಡಿದ ಸಂಶೋಧನೆಗಳಿಗಾಗಿ, ಗಣನೀಯ ಕೊಡುಗೆಗಳಿಗಾಗಿ ೧೯೯೭ರಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐ ಸಿ ಎ ಆರ್)ನ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಧಾರವಾಡದ ಕೃಷಿ ವಿ.ವಿ.ಯೂ ಸೇರಿದಂತೆ ರಾಷ್ಟ್ರದ ಹಲವು ಪ್ರತಿಷ್ಟಿತ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ, ಈ ಪ್ರತಿಭಾವಂತ ವಿಜ್ಞಾನಿ ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡು, ಹಲವಾರು ಗುಣಾತ್ಮಕ ಕಾರ್ಯಯೋಜನೆಗಳನ್ನು ಪ್ರಾರಂಭಿಸಿ, ಕರ್ನಾಟಕದ ವಿಜ್ಞಾನ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮ ‘ಸವಿಜ್ಞಾನ' ಇ-ಪತ್ರಿಕೆಯ ಆಸಕ್ತ ಓದುಗರಲ್ಲಿ ಒಬ್ಬರಾದ, ಸೌಜನ್ಯದ ಸಾಕಾರಮೂರ್ತಿ, ಸರಳ ವ್ಯಕ್ತಿತ್ವದ ಡಾ.ಅಯ್ಯಪ್ಪನ್ ಅವರು ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಈ ಸಂದರ್ಭದಲ್ಲಿ ನಾಡಿನ ಎಲ್ಲ ವಿಜ್ಞಾನ ಶಿಕ್ಷಕರ ಪರವಾಗಿ ‘ಸವಿಜ್ಞಾನ’ ತಂಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಸಂಪಾದಕ ಮಂಡಲಿ
‘ಸವಿಜ್ಞಾನ’
ನಮ್ಮ ಬ್ಲಾಗನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ KSTA ಹೋಂ ಪೇಜಿನಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ ಸಜ್ಜನಿಕೆಯ ಸಾಕಾರಮೂರ್ತಿ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಗೂ ಖ್ಯಾತ ವಿಜ್ಞಾನಿ ಹಾಗೂ ತಮ್ಮ ಸಹಪಾಠಿಯಾದ ಪ್ರೊ|| ಎಸ್.ಅಯ್ಯಪ್ಪನ್ ರವರ ಪರಿಚಯವನ್ನು ಅತ್ಯತ್ತಮವಾಗಿ ಕಟ್ಟಿಕೊಟ್ಟ ನಮ್ಮ ಹೆಮ್ಮೆಯ ಗುರುಗಳಾದ ಡಾ|| ಬಾಲಕೃಷ್ಣ ಅಡಿಗರಿಗೆ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಪದ್ಮಶ್ರೀ ಅಯ್ಯಪ್ಪನ್ ರವರಿಗೆ ಅಭಿನಂದನೆಗಳು
ReplyDelete