ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, May 4, 2022

ನಿದ್ರೆ....... ನೀನಿದ್ದರೆ ನಾ ಗೆದ್ದೆ‌

ನಿದ್ರೆ....... ನೀನಿದ್ದರೆ ನಾ ಗೆದ್ದೆ‌

ಎ. ಶ್ರೀನಿವಾಸ್ 

ಸರ್ಕಾರಿ ಪ್ರೌಢಶಾಲೆಮುತ್ತೂರು,

ಶಿಡ್ಲಘಟ್ಟ (ತಾ)ಚಿಕ್ಕಬಳ್ಳಾಪುರ (ಜಿ).


ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾದ ನಿದ್ರೆಯ ಮಹತ್ವವನ್ನು ತಮ್ಮದೇ ಆದ ಲಘು ಶೈಲಿಯಲ್ಲಿ ವಿವರಿಸಿದ್ದಾರೆ, ʼಸವಿಜ್ಞಾನʼ ತಂಡದ ಸದಸ್ಯ ಹಾಗೂ ಶಿಕ್ಷಕ ಶ್ರೀನಿವಾಸ್‌ ಅವರು.

ಎಂದಿನಂತೆ ಮುಂಜಾನೆ ಐದು ಘಂಟೆಗೆ ನಿದ್ರಾ ದೇವಿಯಿಂದ ಮುಕ್ತಿ ಪಡೆದು, ಬಲ ಮಗ್ಗುಲಿಗೆ ಹೊರಳಿ, ಹಾಸಿಗೆಯಿಂದ ಎದ್ದು ಕುಳಿತು ಕಣ್ಣುಜ್ಜಿಕೊಳ್ಳುತ್ತಾ ಮೊಬೈಲ್‌ ತೆರೆದು ನೋಡಿದರೆ, ಗುರುಗಳಾದ ಅಡಿಗರಿಂದ ʼಸವಿಜ್ಞಾನಕ್ಕೆ ನಿಮ್ಮ ಲೇಖನ ಇನ್ನೂ ಬಂದಿಲ್ಲಾ. ಬೇಗ ಕಳಿಸಿʼ ಎಂಬ ಒಂದು ಮೆಸ್ಸೇಜ್‌ ಬಂದಿತ್ತು. ಕೊಂಚ ಹೊತ್ತಿನ ನಂತರ ಬರೆಯಲು ಕುಳಿತರೆ ಯಾವ ವಿಷಯ ಎಂಬ ಜಿಜ್ಞಾಸೆ. ಕೊನೆಗೆ, ನಿದ್ರೆಯ ಬಗ್ಗೆಯೇ ಯಾಕೆ ಬರೆಯಬಾರದು ? ಎಂದು ಸಂಕಲ್ಪಿಸಿ ಕುಳಿತೆ.

ಭೂಲೋಕದಲ್ಲಿ ನಿದ್ರಾಸ್ಥಿತಿ ಎಂದರೆ, ಇಂದ್ರನ ಸ್ವರ್ಗದಂತೆ‌ ಎಂಬುದು ನನ್ನ ಅಭಿಪ್ರಾಯ. ಸುಖ ನಿದ್ರೆ ಮಾಡಿದ ವ್ಯಕ್ತಿಯ ದೈನಂದಿನ ಕ್ರಿಯೆಗಳು ಚಟುವಟಿಕೆಯಿಂದ ಕೂಡಿರುತ್ತವೆ ಹಾಗೂ ನಿದ್ರಾಹೀನ ವ್ಯಕ್ತಿಯ ದೈನಂದಿನ ಚಟುವಟಿಕೆಗಳು ನಿಸ್ತೇಜವಾಗಿರುತ್ತವೆ ಎಂಬುದು ಎಲ್ಲರಿಗೂ ತಿಳಿದ ಸತ್ಯ. ಇದಕ್ಕೆ ದೇಹದಲ್ಲಿ ಸ್ರವಿಕೆಯಾಗುವ ಕೆಲ ಹಾರ್ಮೋನುಗಳು ಕಾರಣ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ನಮ್ಮ ದೇಹ, ವಿಶೇಷವಾಗಿ ಮಿದುಳು ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕಾದಲ್ಲಿ ಕಣ್ತುಂಬ ನಿದ್ರಿಸುವುದು ಅತ್ಯವಶ್ಯ.

ನಿದ್ರೆ-ಕಲಿಕೆ-ಸ್ಮರಣೆ‌

ವಿದ್ಯಾರ್ಥಿಗಳು‌ ಮನೆಯಲ್ಲಿ ಅಧ್ಯಯನದ ಸಮಯದಲ್ಲಿ ಟಿ.ವಿ. ಅಥವಾ ಚಲನಚಿತ್ರ ವೀಕ್ಷಣೆಯಲ್ಲಿ ಹೆಚ್ಚು ಸಮಯ ತೊಡಗಿಸಿಕೊಂಡರೆ, ಕಲಿತ ವಿಷಯ ಸ್ಮರಣೆಯಲ್ಲಿ ಬಹುಕಾಲ ಉಳಿಯುವುದಿಲ್ಲ ಎಂಬ ಆಬಿಪ್ರಾಯವನ್ನು ಎಲ್ಲ ಶಿಕ್ಷಕರು ಒಪ್ಪುತ್ತಾರೆ. ಕಲಿಕೆ ಪರಿಣಾಮಕಾರಿಯಾಗಿರಬೇಕಾದಲ್ಲಿ ಕಲಿಕೆಗೆ ತೊಡಗಿಕೊಳ್ಳುವ ಮುನ್ನ  ಸಾಕಷ್ಟು ವಿಶ್ರಾಂತಿ ಅಗತ್ಯ ಎಂದು ಹಲವಾರು ಸಂಶೋಧನೆಗಳು ತೋರಿಸಿವೆ. ಒಂದು ಉದಾಹರಣೆಯಲ್ಲಿ, ಸಂಶೋಧಕರು ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದರು. ಒಂದು ಗುಂಪು ಎಂಟು ಗಂಟೆಗಳ ಕಾಲ ನಿದ್ರೆ ಮಾಡಿದ್ದರೆ, ಇನ್ನೊಂದು ಗುಂಪು ಕೇವಲ ನಾಲ್ಕೈದು ಘಂಟೆಗಳ ಕಾಲ ನಿದ್ರಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ನಿರ್ದಿಷ್ಟ ಅವಧಿಯ ನಂತರ ಈ ಎರಡು ಗುಂಪಿನ ವಿದ್ಯಾರ್ಥಿಗಳ ಮಿದುಳಿನ ಚಟುವಟಿಕೆಯ ನಕ್ಷಾ ಚಿತ್ರವನ್ನು() ವಿಶ್ಲೇಷಿಸಲಾಯಿತು. ಫಲಿತಾಂಶದಲ್ಲಿ ಕಂಡುಬಂದ ಅಂಶವೆಂದರೆ, ಕಡಿಮೆ ನಿದ್ರೆ ಮಾಡಿದ ಗುಂಪಿನ ಸದಸ್ಯರಲ್ಲಿ ಹೊಸ ವಿಷಯಗಳನ್ನು ಕಲಿಯುವ ಹಾಗೂ ಕಲಿತದ್ದನ್ನು ಸ್ಮರಣೆಯಲ್ಲಿ ಉಳಿಸಿಕೊಳ್ಳುವ ಸಾಮರ್ಥ್ಯ ಶೇ.40ರಷ್ಟು ಕಡಿಮೆಯಾಗಿತ್ತು. ಹೀಗಾಗಿ, ಪರೀಕ್ಷಾ ಸಮಯದಲ್ಲಿ ನಿದ್ದೆಗೆಟ್ಟು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಶ್ರಮ ನಿಜಕ್ಕೂ ವ್ಯರ್ಥ. ಮಿದುಳಿನ ಪ್ರಮುಖ ಭಾಗವಾದ ಹಿಪ್ಪೋಕ್ಯಾಂಪಸ್‌ ಕಲಿತ ವಿಷಯಗಳ ಮಾಹಿತಿಯ ಭಂಡಾರ. ನಿದ್ರಾಹೀನರಲ್ಲಿ ಇದರ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ತತ್ಪರಿಣಾಮ, ಕಲಿಕೆ ಕುಂಠಿತವಾಗುತ್ತದೆ. ನಿದ್ರೆ ಮಿದುಳಿನ ಚಟುವಟಿಕೆಯನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ತಿಳಿಯಲು ನಿದ್ರಿಸುತ್ತಿರುವ ವ್ಯಕ್ತಿಯ ತಲೆಗೆ ವಿದ್ಯುದಾಗ್ರಗಳನ್ನು ಜೋಡಿಸಿದಾಗ, ಮಿದುಳಿನಲ್ಲಿ ತೀವ್ರತರವಾದ ತರಂಗಗಳು ಉಂಟಾಗಿದ್ದು ಕಂಡುಬಂದಿತು. ಈ ತರಂಗಗಳು ತಾತ್ಕಾಲಿಕ/ಅಲ್ಪಾವಧಿ ಸ್ಮರಣೆಯನ್ನು ಶಾಶ್ವತ/ದೀರ್ಘಾವಧಿ ಸ್ಮರಣೆಯನ್ನಾಗಿ ಮಾರ್ಪಡಿಸುತ್ತದೆ. ಪ್ರಯೋಗಗಳಿಂದ ತಿಳಿದು ಬಂದ ಇನ್ನೊಂದು ಅಂಶವೆಂದರೆ, ವಯಸ್ಸಾದಂತೆ ಕೆಲವರಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಯಸ್ಸು ಕಾರಣವೆ? ಅಥವಾ ನಿದ್ರೆಯ ಅವಧಿ ಕಡಿಮೆಯಾಗಿರುವುದು ಕಾರಣವೆ? ಎಂಬ ಮೂಲಭೂತ ಪ್ರಶ್ನೆ ಹಾಗೇ ಉಳಿದಿದೆ. ನಿದ್ರೆ ಮತ್ತು ವಯಸ್ಸಿನ ನಡುವೆ ಬಹು ತೆಳುವಾದ ಅಂತರ ಇದೆ ಎನಿಸುತ್ತಿದೆ ಅಲ್ಲವೇ?

ಈಗಂತೂ ನಿದ್ರೆ ಬರಿಸುವುದಕ್ಕಾಗಿಯೇ ಹಲವು ಬಗೆಯ ಔಷಧಗಳು, ಮಾತ್ರೆಗಳು ದೊರೆಯುತ್ತವೆ. ಆದರೆ, ಅವು ಯಾವುವೂ ಸಹಜವಾದ ನಿದ್ರೆ ಮತ್ತು ತದನಂತರದ ಲವಲವಿಕೆಯನ್ನು ತರಲಾರವು. ನಿದ್ರಾವಸ್ಥೆಯಲ್ಲಿರುವ ವಿದ್ಯಾರ್ಥಿಗಳಲ್ಲಿ ಮಿದುಳಿಗೆ ವಿದ್ಯುತ್‌ ಪ್ರವಾಹ ಹರಿಸಿ ತನ್ಮೂಲಕ ಸ್ಮರಣಶಕ್ತಿಯನ್ನು ಹೆಚ್ಚಿಸುವ ಪ್ರಯೋಗಗಳು ನಡೆದಿವೆಯಾದರೂ, ವಯಸ್ಸಾದವರಲ್ಲಿ ಹಾಗೂ ಮರೆಗುಳಿತನ ಇರುವವರಲ್ಲಿ ಇದೇ ರೀತಿಯ ಪ್ರಯೋಗಗಳನ್ನು ನಡೆಸಲಾಗಿಲ್ಲ. 70 ದೇಶಗಳಲ್ಲಿನ 1.6 ಬಿಲಿಯನ್‌ ವ್ಯಕ್ತಿಗಳಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ನಿದ್ರಿಸುತ್ತಿರುವಾಗ ಮಧ್ಯೆ ಒಂದು ಘಂಟೆಯ ಕಾಲ ನಿದ್ರಾ ಭಂಗವಾದಲ್ಲಿ ಹೃದಯಾಘಾತವಾಗುವ ಸಂಭವನೀಯತೆ 24% ನಷ್ಟು ಹೆಚ್ಚುತ್ತದೆ. ಅಲ್ಲದೆ, ಇದು ಆತ್ಮಹತ್ಯೆಗಳಿಗೂ ಕಾರಣವಾಗಬಹುದು.

ನಿದ್ರೆ ಮತ್ತು ರೋಗನಿರೋಧಕ ಶಕ್ತಿ

ನಮ್ಮ ರಕ್ತದಲ್ಲಿ ಹಲವು ಬಗೆಯ ಜೀವಕೋಶಗಳಿವೆ ಎಂಬುದು ನಮಗೆತಿಳಿದಿದೆ. ಅವುಗಳಲ್ಲಿ ಲಿಂಫೋಸೈಟ್ ಕೋಶಗಳು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯ ಪ್ರಮುಖ ಘಟಕಗಳು. ಇವು ನಮ್ಮ ದೇಹದ ಒಳಗಿರುವ  ಅಪಾಯಕಾರಿ ಆರ್ಬುದ(ಕ್ಯಾನ್ಸರ್) ರೋಗಕಾರಕ ಅಂಶಗಳನ್ನು ಗುರುತಿಸಿ, ನಿವಾರಿಸುತ್ತವೆ. ವ್ಯಕ್ತಿಯೊಬ್ಬ ಯಾವಾಗಲಾದರೊಮ್ಮೆ ಒಂದು ದಿನ ನಿದ್ರಾಹೀನತೆಗೆ ಒಳಗಾದರೆ, ಈ ಜೀವಕೋಶಗಳ ಚಟುವಟಿಕೆ 70% ನಷ್ಟು ಕ್ಷೀಣಿಸುತ್ತದೆ ಎಂಬುದು ತಿಳಿದಿದೆ. ಸಮುದಾಯದಲ್ಲಿ ಸಾಮಾನ್ಯವಾಗಿರುವ ದೊಡ್ಡಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್‌ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌ ಮುಂತಾದ ರೋಗಗಳಿಗೆ ನಿದ್ರೆಯ ಕೊರತೆಯೂ ಒಂದು ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ರಾತ್ರಿ ಪಾಳಿಯ ಕೆಲಸವನ್ನು ವಿರೋಧಿಸುವ ವಿಶ್ವ ಆರೋಗ್ಯ ಸಂಸ್ಥೆ ಅದು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಜಾಗೃತ ಮತ್ತು ಸುಶುಪ್ತ ಚಕ್ರದ ಅಸಮತೋಲನವೂ ಕ್ಯಾನ್ಸರ್ ಕಾರಕವಾಗಿ ಪರಿಣಮಿಸಬಹುದು.

ನಿದ್ರೆ ಮತ್ತು ವಂಶವಾಹಿಗಳು

ನಿದ್ರೆಗೂ ನಮ್ಮ ವಂಶವಾಹಿಗಳಿಗೂ ನೇರ ಸಂಬಂಧವಿದೆ. ನಿದ್ರಾಹೀನತೆ ಜೀವದ ಮೂಲಭೂತ ಹಂದರವಾದ ವಂಶವಾಹಿಗಳನ್ನೇ ಅಳಿಸಿಹಾಕಬಹುದು. ಪ್ರಯೋಗವೊಂದರಲ್ಲಿ ಆಯ್ದ ವ್ಯಕ್ತಿಗಳಿಗೆ ಒಂದು ವಾರ ಕಾಲ ದಿನದಲ್ಲಿ ಕೇವಲ ಆರು ಘಂಟೆ ಮಾತ್ರ ನಿದ್ರಿಸುವಂತೆ ಸೂಚಿಸಲಾಗಿತ್ತು. ಕೊನೆಯಲ್ಲಿ ಅವರ ವಂಶವಾಹಿಗಳ ಚಟುವಟಿಕೆಯನ್ನು ಪರಿಮಾಣಿಸಿದಾಗ, ಸುಮಾರು 700ಕ್ಕೂ ಹೆಚ್ಚು ವಂಶವಾಹಿಗಳ ಚಟುವಟಿಕೆ ತೀವ್ರಗತಿಯಲ್ಲಿ ಅಸ್ತವ್ಯಸ್ತಗೊಂಡಿರುವುದು ಕಂಡುಬಂದಿತು. ಕೆಲವು ವಂಶವಾಹಿಗಳ ಚಟುವಟಿಕೆ ಹೆಚ್ಚಿರುವುದು ಕಂಡು ಬಂತು. ಅಂದರೆ, ನಿದ್ರೆ ದೇಹಕ್ಕೆ ಅತ್ಯವಶ್ಯವಾದ ಒಂದು ಕ್ರಿಯೆ ಎಂಬುದು ಸಾಬೀತಾಯಿತು. ನಿದ್ರಾಹೀನತೆ ದೇಹದ ಮೂಲೆ, ಮೂಲೆಗಳಲ್ಲಿ ನಡೆಯುವ ಚಯಾಪಚಯ ಕ್ರಿಯೆಗಳ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ನಿದ್ರಾಹೀನತೆಯ ಪರಿಣಾಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ನಿದ್ರಿಸುವುದು ಹೇಗೆ?

ನೀವು ಸುಖಮಯವಾದ ನಿದ್ರೆ ಮಾಡಲು ಇಚ್ಛಿಸುತ್ತೀರಿ, ಆದರೆ ನಿದ್ರಿಸಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ, ವೈದ್ಯರ ಎರಡು ಸಲಹೆಗಳು.

1.  1. ನಿಯಮಿತ ನಿದ್ರೆ: ಪ್ರತಿ ದಿನ ಒಂದೇ ಸಮಯಕ್ಕೆ ನಿದ್ರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ವಾರಾಂತ್ಯವಾಗಲೀ, ವಾರದ ದಿನಗಳಲ್ಲಾಗಲೀ ನಿದ್ರೆಯ ಸಮಯವನ್ನು ತಪ್ಪಿಸಬೇಡಿ. ಇದು ನಿಮ್ಮ ನಿದ್ರೆಯ ಅವಧಿ ಮತ್ತು ಗುಣಾತ್ಮಕ ಅಂಶಗಳನ್ನು ವೃದ್ಧಿಸುತ್ತದೆ.

2.2. ತಣ್ಣನೆಯ ವಾತಾವರಣ : ನೀವು ಸುಖವಾಗಿ ನಿದ್ರಿಸಲು ನಿಮ್ಮ ದೇಹದ ಹೊರಗಿನ ತಾಪಮಾನ 9 ಡಿಗ್ರಿಗಳಷ್ಟು ಕಡಿಮೆಯಾಗಬೇಕು. ನೀವು ಗಮನಿಸಿರಬಹುದು. ಚಳಿಗಾಲದಲ್ಲಿ ನಿದ್ರೆ ಬೇಗ ನಿಮ್ಮನ್ನು ಆವರಿಸುತ್ತದೆ. ಬೇಸಿಗೆಯಲ್ಲಿ ನಿದ್ರೆ ಬರುವುದಿಲ್ಲ. 180 ಸೆ. ನಿದ್ರಿಸಲುಸೂಕ್ತ ತಾಪಮಾನ.

ಮುಗಿಸುವ ಮುನ್ನ, ನಿದ್ರೆ ಆಲಸ್ಯ ಅಥವಾ ತಾಮಸ ಲಕ್ಷಣವಲ್ಲ. ಅದು ನಿಮ್ಮ ಜೀವನಕ್ಕೆ ಆಸರೆಯಾಗುವ ಒಂದು ಅವಸ್ಥೆ. ಅದೊಂದು ಜೈವಿಕ ಅವಶ್ಯಕತೆ. ನಿಮ್ಮ ದೇಹ ಅವಶ್ಯವೆನಿಸಿದಷ್ಟು ನಿದ್ರೆ ಪಡೆಯಲಿ. ಅದನ್ನು ಕುಂಠಿತಗೊಳಿಸಬೇಡಿ. ಸಾಕಷ್ಟು ನಿದ್ರಿಸಿ, ಲವಲವಿಕೆಯಿಂದಿರಿ. 

3 comments: