ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, October 4, 2022

ಸಂಪಾದಕರ ಡೈರಿಯಿಂದ

 ಸಂಪಾದಕರ ಡೈರಿಯಿಂದ .....

    ನಾಡಿನೆಲ್ಲೆಡೆ ನವರಾತ್ರಿಯ ಸಂಭ್ರಮ ಜೊತೆಗೆ ದಸರೆಯ ಸಡಗರ. ‘ಸವಿಜ್ಞಾನ’ ತಂಡದ ಎಲ್ಲ ಸದಸ್ಯರಿಗೆ, ಸಹೃದಯಿ ಲೇಖಕರಿಗೆ‘ ಹಾಗೂ ಅಭಿಮಾನಿ ಓದುಗರಿಗೆ ಈ ಸಂದರ್ಭದಲ್ಲಿ ನಮ್ಮ ಶುಭ ಹಾರೈಕೆಗಳು. ಹಬ್ಬದ ವಾತಾವರಣದ ಮಧ್ಯೆ ನಿಮ್ಮ ಮಿದುಳಿಗೆ, ಮನಸ್ಸಿಗೆ ಕೊಂಚ ಮುದ ನೀಡಲು ‘ಸವಿಜ್ಞಾನ’ದ ಅಕ್ಟೋಬರ್ ತಿಂಗಳ ಸಂಚಿಕೆ ಪ್ರಕಟವಾಗಿದೆ.  

    ಈ ಸಂಚಿಕೆಯ ಪ್ರಮುಖ ಆಕರ್ಷಣೆಯಾಗಿ ಮೂರು ಲೇಖನಗಳಿವೆ. ಭಾರತದ ಮೊದಲ ಪ್ರನಾಳ ಶಿಶುವಿನ ಸೃಷ್ಟಿಕರ್ತ ಡಾ. ಸುಭಾಶ್ ಮುಖ್ಯೋಪಾಧ್ಯಾಯ ನೊಬೆಲ್ ಪ್ರಶಸ್ತಿಯಿಂದ ವಂಚಿತರಾದ ದುರಂತ ಕಥೆಯನ್ನು ಮನಕಲುಕುವಂತೆ ಚಿತ್ರಿಸಿದ್ದಾರೆ, ಡಾ.ಎಂ.ಜೆ.ಸುಂದರರಾಮ್ ಅವರು. ನಾವು ಅನುಭವಿಸುವ ದೈಹಿಕ ಹಾಗೂ ಮಾನಸಿಕ ನೋವುಗಳ ಹಿಂದಿನ ಮರ್ಮವನ್ನು ತೆರೆದಿಟ್ಟಿದ್ದಾರೆ, ತಮ್ಮ ಲೇಖನದಲ್ಲಿ ಶ್ರೀ ಸುರೇಶ್ ಸಂಕೃತಿ ಅವರು. ಖಭೌತವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಭಾರತೀಯ ಸಂಜಾತ ವಿಜ್ಞಾನಿ, ಸುಬ್ರಮಣ್ಯನ್ ಚಂದ್ರಶೇಖರ್ ಜನ್ಮ ದಿನದ ಸ್ಮರಣೆಯಲ್ಲಿ ಅವರ ಬಗ್ಗೆ ಲೇಖನವನ್ನು ಬರೆದಿದ್ದಾರೆ, ಶ್ರೀ ರಮೇಶ್.ವಿ.ಬಳ್ಳಾ ಅವರು. ಇನ್‌ಸ್ಸ್ಪೆಪೈರ್ ಅವಾರ್ಡ್ ಹಾಗೂ ಮಾನಕ್ ಪ್ರಶಸ್ತಿಗಳ ಬೆನ್ನೇರಿ ಹೊರಟ ರಾಜ್ಯದ ತಂಡದ ಅನುಭವಗಳನ್ನು ವಿವರಿಸಿದ್ದಾರೆ, ತಂಡದೊಂದಿಗೆ ತೆರಳಿದ್ದ ಶಿಕ್ಷಕ ಲಕ್ಷ್ಮೀಪ್ರಸಾದ್ ನಾಯಕ್ ಅವರು. ಈ ತಿಂಗಳ ‘ಸಾಧಕ ಶಿಕ್ಷಕ’ರಾಗಿ ನಾವು ಪರಿಚಯಿಸುತ್ತಿರುವುದು, ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶ್ತಿಗೆ ಪಾತ್ರರಾದವರಲ್ಲಿ ಒಬ್ಬರಾದ ಶ್ರೀಮತಿ ಬಿ.ಎನ್.ರೂಪ ಅವರನ್ನು. ಅವರನ್ನು ಪರಿಚಯಿಸಿದ್ದಾರೆ, ಶ್ರೀ ಬಿ.ಜಿ.ರಾಮಚಂದ್ರ ಭಟ್ ಅವರು.

    ಇವೆಲ್ಲದರ ಜೊತೆಗೆ, ಎಂದಿನಂತೆ ಅಕ್ಟೋಬರ್ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ, ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ.


ಪ್ರಧಾನ ಸಂಪಾದಕರು


ಭಾರತದ ಮೊದಲ ಪ್ರನಾಳ ಶಿಶು ಸೃಷ್ಟಿಕರ್ತ ಡಾ. ಸುಭಾಷ್ ಅವರ ದುರಂತ ಕತೆ

ಭಾರತದ ಮೊದಲ ಪ್ರನಾಳ ಶಿಶು ಸೃಷ್ಟಿಕರ್ತ ಡಾ. ಸುಭಾಷ್ ಅವರ ದುರಂತ ಕತೆ

 

ಲೇಖಕರು : ಡಾ. ಎಂ.ಜೆ. ಸುಂದರರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು, ವಿಜ್ಞಾನ ಸಂವಹನಕಾರರು


ಇತ್ತೀಚೆಗೆ ವಿಶ್ವದೆಲ್ಲೆಡೆ ಹೆಚ್ಚಾಗಿ ಬಳಕೆಯಾಗುತ್ತಿರುವ ಪ್ರನಾಳ ಶಿಶು ತಂತ್ರಜ್ಞಾನ(ಐ.ವಿ.ಎಫ್.)ವನ್ನು ಭಾರತದಲ್ಲಿ ಮೊದಲು ಚಾಲ್ತಿಗೆ ತಂದ ವೈದ್ಯ ಸುಭಾಷ್ ಮುಖ್ಯೋಪಾಧ್ಯಾಯ, ತಮ್ಮ ಪ್ರಯೋಗದ ಫಲಿತಾಂಶವನ್ನು ಪ್ರಕಟಿಸಲಾಗದೆ ನೊಬೆಲ್ ಪ್ರಶಸ್ತಿಯಿಂದ ವಂಚಿತರಾಗಿದ್ದಷ್ಟೇ ಅಲ್ಲ, ಸರ್ಕಾರದ ಅವಕೃಪೆಗೂ ಪಾತ್ರರಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡು, ಕೊನೆಗೆ ಆತ್ಮಹತ್ಯೆಗೆ ಶರಣಾದ ದುರಂತ ಕತೆಯನ್ನು ಮನಕಲುಕುವಂತೆ ಚಿತ್ರಿಸಿದ್ದಾರೆ ಡಾ.ಎಂ.ಜೆ.ಸುಂದರರಾಮ್ ಅವರು.

ನೋವು, ಕಣ್ರೀ ನೋವು !

ನೋವು, ಕಣ್ರೀ ನೋವು !

ಲೇಖಕರು : ಸುರೇಶ ಸಂಕೃತಿ


ನಾವೆಲ್ಲರೂ ಅನುಭವಿಸಿರುವ ವಿವಿಧ ಬಗೆಯ ದೈಹಿಕ ಹಾಗೂ ಮಾನಸಿಕ ನೋವುಗಳ ಹಿನ್ನೆಲೆಯನ್ನು ಸವಿಸ್ತಾರವಾಗಿ ವಿಶ್ಲೇಷಿಸಿ ನೋಡುವ ಒಂದು ಪ್ರಯತ್ನವಾದ ಈ ಲೇಖನವನ್ನು ಬರೆದವರು ಶಿಕ್ಷಕ ಸುರೇಶ್ ಸಂಕೃತಿ ಅವರು.

ಭೌತವಿಜ್ಞಾನದ ಹೊಳೆವ ‘ಚಂದ್ರ’

ಭೌತವಿಜ್ಞಾನದ ಹೊಳೆವ ‘ಚಂದ್ರ’

ಲೇಖಕರು : ರಮೇಶ. ವಿ. ಬಳ್ಳಾ

ಭೌತವಿಜ್ಞಾನದಲ್ಲಿ ʼಚಂದ್ರಶೇಖರ್‌ ಮಿತಿʼ ಎಂದೇ ಖ್ಯಾತಿ ಪಡೆದಿರುವ ಸಿದ್ಧಾಂತವನ್ನು ಪ್ರತಿಪಾದಿಸಿದ ಭಾರತೀಯ ಸಂಜಾತ ಅಮೆರಿಕನ್‌ ವಿಜ್ಞಾನಿ ಸುಬ್ರಮಣ್ಯನ್‌ ಚಂದ್ರಶೇಖರ್‌ ಅವರ ಜನ್ಮ ದಿನ ಅಕ್ಟೋಬರ್‌ ೧೯ರಂದು. ಸರ್‌ ಸಿ.ವಿ.ರಾಮನ್‌ ಅವರ ಸಮೀಪ ಸಂಬಂಧಿಯಾಗಿದ್ದ ಅವರ ಸವಿನೆನಪಿನಲ್ಲಿ ಈ ಲೇಖನವನ್ನು ಬರೆದಿದ್ದಾರೆ ಶಿಕ್ಷಕ ರಮೇಶ್.ವಿ.ಬಳ್ಳಾ ಅವರು.

ಮಕ್ಕಳ ಮಮತೆಯ ಮಾತೆ, ಶ್ರೀಮತಿ ಬಿ.ಎನ್.‌ ರೂಪ

 ಮಕ್ಕಳ ಮಮತೆಯ ಮಾತೆ, ಶ್ರೀಮತಿ ಬಿ.ಎನ್.‌ ರೂಪ

ಲೇಖಕ :ಶ್ರೀ ರಾಮಚಂದ್ರಭಟ್‌ ಬಿ.ಜಿ.

ದಿನಾಂಕ 12- 7 -2018ರಂದು ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಕಗ್ಗಲಿಪುರ, ಬೆಂಗಳೂರು ದಕ್ಷಿಣ ವಲಯ-1ಇಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಶಿಕ್ಷಕ ಸೇವೆಗೆ ಸೇರಿದ ಶ್ರೀಮತಿ ಬಿ.ಎನ್.‌ ರೂಪ ಅವರಿಗೆ ಶಿಕ್ಷಕಿಯಾಗಿಯೇ ಕರ್ತವ್ಯ ನಿರ್ವಹಿಸಬೇಕೆಂಬ ಅದಮ್ಯ ಆಸೆಯೊಂದಿತ್ತು. ಸಮಾಜ ಕಲ್ಯಾಣ ಇಲಾಖೆ ,ಹಿಂದುಳಿದ ವರ್ಗಗಳ ಇಲಾಖೆ ,ಎಚ್ಎಎಲ್ ನ ಫೌಂಡ್ರಿ ಮತ್ತು ಫೋರ್ಜ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಕೆ ಎ ಎಸ್‌  ಪರೀಕ್ಷೆಯಲ್ಲೂ ಅದೃಷ್ಟ ಖುಲಾಯಿಸಿದರೂ, ಶಿಕ್ಷಕ ವೃತ್ತಿಯ ಕಡೆ ಅವರಿಗೆ ಇದ್ದ ಹೆಚ್ಚಿನ ಒಲವು, ಶಿಕ್ಷಣದೆಡೆಗೆ ಅವರನ್ನು ಕರೆತಂದಿತು. ಏನನ್ನಾದರೂ ಸಾಧನೆಮಾಡಬೇಕು, ದೇಶದ ಭವಿಷ್ಯವನ್ನು ರೂಪಿಸಬೇಕು. ದೇಶದ ಮಾನವ ಸಂಪನ್ಮೂಲ ಸಂವೃದ್ಧಿಯೇ ಶಿಕ್ಷಣದ ಉದ್ದೇಶ ಎಂಬ ಉದಾತ್ತ ಗುರಿಯೊಂದಿಗೆ ಶಿಕ್ಷಣ ಇಲಾಖೆಯಲ್ಲಿ ಸೇವೆಗೆ ಸೇರಿದರು.

ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ, ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರೂಪಾ ಅವರು ಹಿಂದೆ ರಾಜ್ಯಪಾಲರಾಗಿದ್ದ ಶ್ರೀಯುತ ಟಿ. ಎನ್‌. ಚತುರ್ವೇದಿಯವರಿಂದ ಚಿನ್ನದ ಪದಕ ಸ್ವೀಕರಿಸಿದ ಸಾಧಕಿ. ಹಲವು ಶಾಲೆಗಳಲ್ಲಿ, ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ರೂ,  ಪ ಅವರ ಮೇಲೆ ತಂದೆಯವರಾದ ದಿ.ಶ್ರೀಯುತ ಬಿ.ಕೆ. ನಾಮದೇವರ ಪ್ರಭಾವ ಅಪಾರ. ಸಹಾಯಕ ನಿರ್ದೇಶಕರಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಂದೆಯವರು, ರೂಪ ಅವರು ಸರ್ಕಾರಿ ಸೇವೆಗೆ ಸೇರಲು ಮುಖ್ಯ ಪ್ರೇರಣೆ.



ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಒಡನಾಟ, ವಿದ್ಯಾರ್ಥಿಗಳಿಗೆ ವಿಷಯವನ್ನು ಮನದಟ್ಟಾಗುವಂತೆ ಕಲಿಸಬೇಕು ಎಂಬ ತುಡಿತ, ಒಳ್ಳೆಯ ಸಂಸ್ಕಾರ ಆಚಾರ-ವಿಚಾರಗಳನ್ನು ತಿಳಿಸಿಕೊಟ್ಟು ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕೆಂಬ ಇಂಗಿತ, ಜೊತೆಗೆ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕೆಂಬ ಸದಾಶಯದೊಂದಿಗೆ ರೂಪ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗುರು- ಶಿಷ್ಯ ಸಂಬಂಧ ಬಿಡಿಸಲಾಗದ ಅನುಬಂಧ. ಮಕ್ಕಳಿಗೆ ತಮ್ಮ ಪ್ರಿಯ ಶಿಕ್ಷಕರ ಹುಟ್ಟುಹಬ್ಬವೂ ಸಡಗರದ ಸಂದರ್ಭವೇ. ಇಂತಹ ಗುರುಮಾತೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಪೋಷಕರನ್ನ ಹುರಿದುಂಬಿಸಿ ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನವನ್ನು ಗಳಿಸುವುದನ್ನು ನೋಡುವುದೇ ಒಂದು ಹಬ್ಬ.

ತಮ್ಮ ತರಗತಿಗಳಿಗೆ ಬೇಕಾದ ಹಲವಾರು ಕಲಿಕಾ ಉಪಕರಣಗಳನ್ನು ಸ್ವತಹ ತಯಾರಿಸಿಕೊಂಡು, ತರಗತಿ ಕೋಣೆಗೆ ಯಾವಾಗಲೂ ಸಿದ್ಧತೆ ಮಾಡಿಕೊಂಡು ಹೋಗುವುದು ಅವರ ರೂಡಿ. ವಿಜ್ಞಾನದ ಪರಿಕಲ್ಪನೆಗಳನ್ನು ಸರಳವಾಗಿ ಬೋಧಿಸುವ ಕಲೆ ಇವರಿಗೆ ಕರಗತ. ಇದರಲ್ಲಿ ಇವರ ಕುಟುಂಬದ ಪಾತ್ರ ಮಹತ್ವದ್ದು. ತಮ್ಮ ಪತಿ, ಶ್ರೀ ಕೆ.ವಿ. ವಾಸು ಅವರು ತಯಾರಿಸಿದ  10ಇಂಚಿನ ಆಸ್ಟ್ರೋನಾಮಿಕಲ್‌ ಟೆಲಿಸ್ಕೋಪ್ ಅನ್ನು ಬಳಸಿ, ಶಾಲೆಯ ವಿದ್ಯಾರ್ಥಿಗಳಿಗೆ ರಾತ್ರಿಯ ಆಕಾಶ ವೀಕ್ಷಿಸುವ ಕಾರ್ಯಕ್ರಮ ಏರ್ಪಡಿಸಿ ವಿವಿಧ ಆಕಾಶ ಕಾಯಗಳ ದರ್ಶನ ಮಾಡಿಸಿದ್ದಾರೆ. ತಮ್ಮ ಸಹೋದ್ಯೋಗಿ, ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಮಾನಸ ಅವರೊಂದಿಗೆ ಸೇರಿ ನಾಟಕಗಳನ್ನು ಬರೆದು ಪ್ರದರ್ಶಿಸಿದ್ದಾರೆ.



ವಜ್ರಮುನೇಶ್ವರನಗರದ ದೀಕ್ಷಕಾಲೇಜಿನವರು ಆಯೋಜಿಸಿದ ಅನನ್ಯ ಕಾರ್ಯಕ್ರಮ ‘ಪಂಪ್ಇಟ್ಅಪ್’ ಎಂಬ ವೈಜ್ಞಾನಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರ ವಿದ್ಯಾರ್ಥಿಗಳು ಪ್ರಥಮ ಬಹುಮಾನಕ್ಕೆ ಭಾಜನರಾಗಿರುತ್ತಾರೆ. ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಕ್ಲಸ್ಟರ್‌ ಮಟ್ಟದಲ್ಲಿ ವಿಜ್ಞಾನ ನಾಟಕ ಗೋಷ್ಠಿ ಪ್ರಬಂಧ ಸ್ಪರ್ಧೆ, ಇನ್‌ಸ್ಪೈರ್‌ ಅವಾರ್ಡ್ ಗೆ,  ಹಾಗೂ ಇತರ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ.

ವಿವೇಕಾನಂದ ಯೂತ್‌ ಫಾರ್‌ ಸೇವಾ ಅವರಿಂದ ಶಾಲೆಗೆ ಕಂಪ್ಯೂಟರ ಗಳನ್ನು ದಾನವಾಗಿ ಪಡೆದು ನಾವೀನ್ಯಯುತ ಬೋಧನೆಯಲ್ಲಿ ಬಳಸುತ್ತಿದ್ದಾರೆ. ಇನ್ಫೋಟೆಕ್‌ ಕಂಪೆನಿಯ ಮುಖ್ಯಸ್ಥರನ್ನು ಸಂಪರ್ಕಿಸಿ ನುರಿತ ಶಿಕ್ಷಣ ತಜ್ಞರು, ಸಂಪನ್ಮೂಲ ಶಿಕ್ಷಕರನ್ನು ಕರೆಸಿ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ  ಮಾರ್ಗದರ್ಶನ ಒದಗಿಸಿದ್ದಾರೆ.

2015ರಲ್ಲಿ ಉತ್ತರಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡ ನಂತರ ಲಭ್ಯವಿರುವ ಸ್ಮಾರ್‌ ಕ್ಲಾಸ್ ಕ್ಲೌಡ್‌ ನೈನ್‌ ಕಂಪ್ಯೂಟಿಂಗ್ ಪ್ರಯೋಗಶಾಲೆಯನ್ನು ಬಳಸಿಕೊಂಡು, ದೈನಂದಿನ ತರಗತಿಯಲ್ಲಿ ಡಿಜಿಲ್‌ ಕಂಟೆಂಟ್‌ ಮೂಲಕ ಸ್ಮಾರ್ಟ್‌ ತರಗತಿಗಳನ್ನು ನಡೆಸಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಎನಿಸಿಕೊಂಡಿದ್ದಾರೆ.



ಶಾಲೆಯಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌ (ಎಟಿಎಲ್) ಸ್ಥಾಪನೆಯಲ್ಲಿ ರೂಪ ಅವರ ಪಾತ್ರ ಮಹತ್ವದ್ದು. ಅದರ ಉಸ್ತುವಾರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರ ವೀಡಿಯೊಗಳಲ್ಲಿ ಒಂದನ್ನು MHRD ಬೆಂಗಳೂರು ಎಟಿಎಲ್‌ ಶಾಲೆಗಳಲ್ಲಿ ಆಯ್ಕೆಮಾಡಿದೆ. ಅದನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿಪ್ರಸಾರಮಾಡಿದೆ. ಇವರ ಶಾಲೆಗೆ ವಿದೇಶಿ ಪ್ರತಿನಿಧಿಗಳ ತಂಡವೂ ಭೇಟಿ ನೀಡಿದೆ.

ATL ವಿಡಿಯೋ

೨೦೧೯ ರಿಂದ ಬೆಂಗಳೂರಿನ ಗೋರಿಪಾಳ್ಯದ  ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, ಅಲ್ಲಿನ ಮುಖ್ಯಶಿಕ್ಷಕರಾದ ಶ್ರೀಮತಿ ಸಾಯಿರಾಬಾನು ಅವರ ಸಹಕಾರ, ಮಾರ್ಗದರ್ಶನಗಳನ್ನು ರೂಪ ಅವರು ಸದಾ ಸ್ಮರಿಸಿಕೊಳ್ಳುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಡಿ.ಡಿ. ಚಂದನದಲ್ಲಿ ರೂಪ ಅವರ ಪಾಠಗಳು ಪ್ರಸಾರವಾಗಿವೆ. ಸಮರ್ಥನಂ ಸಂಸ್ಥೆಯ ನೆರವಿನಿಂದ  ಈಗಿನ ಶಾಲೆಯಲ್ಲಿ ಮಿನಿ ಸೈನ್ಸ್‌ ಸೆಂಟರನ್ನು ಸ್ಥಾಪಿಸಿ, ನಾಲ್ಕುವರೆಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸುಮಾರು 80 ಮಾದರಿಗಳನ್ನು ಶಾಲೆಗೆ ನೀಡಿರುತ್ತಾರೆ. ಇಲಾಖೆಯ ಹಲವಾರು ಕಾರ್ಯಕ್ರಮಗಳಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ  ಸಂಪನ್ಮೂಲ ವ್ಯಕ್ತಿಯಾಗಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಬಂದಿದ್ದಾರೆ. ಕೋವಿಡ್‌ ಸಮಯದಲ್ಲಿ  ಇವರ ಪಾಠಗಳು  ಡಿ.ಡಿ.ಚಂದನ ವಾಹಿನಿಯ ಮೂಲಕ ಇಡೀ ರಾಜ್ಯದ ವಿದ್ಯಾರ್ಥಿಗಳನ್ನು  ತಲುಪಿವೆ.

 




ರಸಪ್ರಶ್ನೆ,ಪ್ರಬಂಧಸ್ಪರ್ಧೆ,ವಿಜ್ಞಾನಗೋಷ್ಠಿಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ದೀಕ್ಷಾ ಪೋರ್ಟಲ್‌ಗಾಗಿ ಡಿಜಿಟಲ್ ವಿಷಯ, AAC ಭಾಷಾಂತರ, ಮತ್ತಿತರ ಕಾರ್ಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬನಶಂಕರಿ, ಇಲ್ಲಿ ವಿಜ್ಞಾನಿಗಳೊಂದಿಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ನಮ್ಮಜೀವನದ ಗುರಿ ಕಲಿಕೆ, ಹುಟ್ಟಿನಿಂದ ಸಾವಿನವರೆಗೂ ಕಲಿಯುವುದು ಬೇಕಾದಷ್ಟಿದೆ ನನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಹಿರಿಯರು, ಕಿರಿಯರು, ಎಲ್ಲರನ್ನೂ ನೋಡಿ, ಕೇಳಿ, ಈಗಲೂ ಕಲಿಯುತ್ತಿದ್ದೇನೆ.  ನಾನೊಬ್ಬ ನಿರಂತರವಾಗಿ ಕಲಿಯುತ್ತಲೇ ಇರುವ ವಿದ್ಯಾರ್ಥಿನಿ ಎಂದು ವಿನಮ್ರವಾಗಿ ಹೇಳುತ್ತಾರೆ. ‌

ಸವಿಜ್ಞಾನಕ್ಕೆ ತಮ್ಮ ಲೇಖನಗಳನ್ನುಬರೆಯುವ ಮೂಲಕ ನಮ್ಮ ಓದುಗರಿಗೆ ಪರಿಚಯವಾಗಿರುವ ಶ್ರೀಮತಿ ರೂಪ ಅವರಿಗೆ ಈ ಬಾರಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಮಟ್ಟದ ʼಉತ್ತಮ ಶಿಕ್ಷಕʼ ಪ್ರಶಸ್ತಿಗೆ ಭಾಜನರಾದ ಸಂದರ್ಭದಲ್ಲಿ ಸವಿಜ್ಞಾನ ತಂಡದ ಹಾರ್ದಿಕ ಅಭಿನಂದನೆಗಳು ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೇರೇಪಣೆ ದೊರಕಲಿ ಎಂದು ತಂಡ ಹಾರೈಸುತ್ತದೆ.

 


 

ಇನ್ ಸ್ಪೈರ್ ಅವಾರ್ಡ್ಸ, ಮಾನಕ್ ಪ್ರಶಸ್ತಿಗಳ ಬೆನ್ನೇರಿ ನಮ್ಮ ರಾಜ್ಯದ ರಾಜಧಾನಿಯಿಂದ ರಾಷ್ಟ್ರದ ರಾಜಧಾನಿಯತ್ತ ನಮ್ಮ ರಾಜ್ಯ ವಿದ್ಯಾರ್ಥಿಗಳ ಪಯಣ

ಇನ್ ಸ್ಪೈರ್ ಅವಾರ್ಡ್ಸ, ಮಾನಕ್ ಪ್ರಶಸ್ತಿಗಳ ಬೆನ್ನೇರಿ ನಮ್ಮ ರಾಜ್ಯದ ರಾಜಧಾನಿಯಿಂದ ರಾಷ್ಟ್ರದ ರಾಜಧಾನಿಯತ್ತ ನಮ್ಮ ರಾಜ್ಯ ವಿದ್ಯಾರ್ಥಿಗಳ ಪಯಣ

ದಿನಾಂಕ.14/9/2022 ರಿಂದ 16/9/2022


ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೆರವಿನಿಂದ ನಡೆಯುವ ಪ್ರಮುಖ ವೈಜ್ಞಾನಿಕ ಕಾರ್ಯಕ್ರಮ ಇನ್ ಸ್ಪೈರ್ ಅವಾರ್ಡ್ಸ್ ಮಾನಕ್ ವಸ್ತು ಪ್ರದರ್ಶನ

(ಸ್ಪೂರ್ತಿ ಸಂಶೋಧನೆಗಾಗಿ ವಿಜ್ಞಾನ ಅನ್ವೇಷಣೆಯಲ್ಲಿ ಅವಿಷ್ಕಾರ)

ವಿಜ್ಞಾನ ಒಗಟುಗಳು

ವಿಜ್ಞಾನ ಒಗಟುಗಳು

1) ನಾನು ಒಂದು ವಿಧದ ಅಂಗಾಂಶ,

ವ್ಯಕ್ತಿಯ ಜೀವಿತಾವಧಿಯವರೆಗೂ

ಬಿಡುವಿಲ್ಲದ ಲಯಬದ್ಧ  ಸಂಕೋಚನ ಮತ್ತು ವಿಕಸನ

ಬಿಡುವು ತೆಗೆದುಕೊಡಲ್ಲಿ ಎಲ್ಲವೂ ಲಯ

ಹಾಗಿದ್ದಲ್ಲಿ ನಾನು ಯಾರು?

 

2) ಹೆಚ್ಚು ಪ್ರಭೇದದ ಪ್ರಾಣಿಗಳುಳ್ಳ ಗುಂಪು ,

ದ್ವಿಪಕ್ಷ ಸಮಮಿತಿ, ಖಂಡ ವಿಂಗಡನೆಯುಳ್ಳ ದೇಹ

ತೆರೆದ ರಕ್ತಪರಿಚಲನಾ ವ್ಯವಸ್ಥೆಹೊಂದಿರುವ

ಈ ಗುಂಪು ಯಾವುದು?

 

3)   ವರ್ಗೀಕರಣ ಬದುಕಿನ ಹಾಸುಹೊಕ್ಕು,

ಕರೋಲಸ್ ಲಿನೇಯಸ್ ರ ಅಧ್ಯಯನದ ಫಲ

೭ ಮಜಲುಗಳಲಿ ಸರಳತೆಯಿಂದ ಸಂಕೀರ್ಣತೆಯೆಡೆಗೆ

ಇಲ್ಲಿ ಸರಳ ಮೂಲ ಘಟಕ ಮಜಲ ತಿಳಿಸುವಿರೇ ?

 

 4) ಜೀವಿ ಸಾಮ್ರಾಜ್ಯದ ತುಲನಾತ್ಮಕ ಅಧ್ಯಯನವು ಜೀವಿಗಳ ವಿಕಸನ , ಅವು ನಡೆದು ಬಂದ ಹಾದಿಯನ್ನು ಸಾದರಪಡಿಸುತ್ತದೆ,

ಹಾಗೂ  ವಿಕಸನ ಆಗಿರುವುದಕ್ಕೆ ದೈಹಿಕ ಮಾರ್ಪಾಟುಗಳೊಂದಿಗೆ ಪುರಾವೆಗಳನ್ನು ಒದಗಿಸುತ್ತದೆ .

 ಖಾಲಿ ಜಾಗದಲ್ಲಿರುವ ಸಾಮ್ರಾಜ್ಯವನ್ನು ಗುರುತಿಸಿ ;      


 

5) ನಾ ಪ್ರಾಣಿಗಳ ಗುಂಪಿನಲ್ಲಿ ಕಂಡುಬರುವ ಪ್ರಮುಖ

 ಲಕ್ಷಣ ವಾಗಿರುವೆ,

ದೇಹದ ತೂಕವನ್ನು ಕಡಿಮೆಮಾಡಲು,

ರಕ್ಷಣೆ, ದೇಹದ ಸ್ಥಿರ ತಾಪಮಾನವನ್ನು ಕಾಪಾಡಲು

ನಾನು ಸಹಾಯ ಮಾಡುತ್ತೇನೆ

 ಹಾಗಿದ್ದಲ್ಲಿ ನಾನು ಯಾರು ?

******* 

ರಚನೆ : ಬಿ. ಎನ್ .ರೂಪ, ಸಹಶಿಕ್ಷಕರು ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢ ಶಾಲೆ
ಗೋರಿಪಾಳ್ಯ
ಬೆಂಗಳೂರು ದಕ್ಷಿಣ ವಲಯ 2

ವ್ಯಂಗ್ಯ ಚಿತ್ರಗಳು - ಅಕ್ಟೋಬರ್ 2022

 ವ್ಯಂಗ್ಯ ಚಿತ್ರಗಳು - ಅಕ್ಟೋಬರ್ 2022



ರಚನೆ : ಶ್ರೀಮತಿ ಜಯಶ್ರೀ ಬಿ ಶರ್ಮ


ಸವಿಜ್ಞಾನ ಪದಬಂಧ- 10

ಸವಿಜ್ಞಾನ ಪದಬಂಧ- 10

8ನೇ ತರಗತಿಯ ಬಲ ಮತ್ತು ಒತ್ತಡ ಹಾಗೂ ಘರ್ಷಣೆ ಪಾಠಗಳಿಂದ ಆಯ್ದ ಪದಗಳು



ಸುಳಿವುಗಳು

ಎಡದಿಂದ ಬಲಕ್ಕೆ:

1. ಭೌತಿಕವಾಗಿ ಅಳತೆಗೆ ಸಿಗುವಂತಹದ್ದು (4)

2. ರೆಟ್ಟೆ ಗಟ್ಟಿಯಾಗಿದ್ದರಷ್ಟೇ ಈ ಬಲ (4)

3. ಯಾವುದೇ ಆದೇಶವಿಲ್ಲದಿದ್ದರೂ ಉಜ್ಜುವುದರಿಂದ ಕೆಲ ವಸ್ತುಗಳ ಮೇಲ್ಮೈಯಲ್ಲಿ ಸಂಗ್ರಹವಾಗುವುದು (3)

4. ವಸ್ತುವನ್ನು ಮುಟ್ಟದೆಯೇ ಪ್ರಯೋಗಿಸಬಹುದಾದ ಬಲ (8)

5. ಚಂಡನ್ನು ಒದೆಯುವುದು ಅದರ ಈ ಸ್ಥಿತಿಯ ಬದಲಾವಣೆ (6)

6. ಒತ್ತಡವು ವಿಲೋಮ ಅನುಪಾತ ಹೊಂದಿರುವುದು ಇದರೊಂದಿಗೆ (3)

7. ಪೆಟ್ಟಿಗೆಯೊಂದನ್ನು ಎಳೆಯುವಾಗ ಅಸ್ತಿತ್ವಕ್ಕೆ ಬರುವುದಲ್ಲದೆ ಅದರ ಚಲನೆಗೆ ಅಡ್ಡಿ ಮಾಡುವುದು(5)

8. ಬಾಲ್-ಬೇರಿಂಗ್‌ ಇದಕ್ಕೆ ಉತ್ತಮ ಉದಾಹರಣೆ (6)

9. ನೆಲದ ಮೇಲಿನ ಪೆಟ್ಟಿಗೆಯೊಂದನ್ನು ಬಲದಿಂದ ಎಡಕ್ಕೆ ತಳ್ಳಿದರೂ ಇದೇನು ಕಡಿಮೆಯಾಗದು (3)

ಮೇಲಿನಿಂದ ಕೆಳಕ್ಕೆ:

1. ಬಲದ ಕಾರಣದಿಂದ ಉಂಟಾಗುವುದು (4)

2. ಕಬ್ಬಿಣದ ಮೊಳೆಗಳನ್ನು ಮುಟ್ಟದೆಯೆ ಕೆಳಗಿನಿಂದ ಮೇಲಕ್ಕೆತ್ತಲು ಬೇಕಾದದ್ದು (5)

3. ಪ್ಲಾಸ್ಟಿಕ್‌ ಮತ್ತು ಕಾಗದದ ಚೂರುಗಳ ನಡುವೆ ಆಕರ್ಷಣೆ ಇಲ್ಲವೆಂದರೆ ಅವು ಇರುವ ಸ್ಥಿತಿ.(6)

4. ಚಲಿಸುವ ವಸ್ತುಗಳನ್ನು ನಿಲ್ಲಿಸುವುದು ಈ ವಿಧದ ಬಲದಿಂದಷ್ಟೇ ಸಾಧ್ಯ (5)

5. ಬಲ ಪ್ರಯೋಗಿಸುವ ಒಂದು ರೀತಿ (4)

6. ಬಲ ಪ್ರಯೋಗವಾಗದ ಹೊರತು ಕಾಯ ಇದ್ದಲ್ಲೇ ಇರುವುದು(5)

7. ಕೆಳಗಿನಿಂದ ಮೇಲಾದರೇನು? ಮಿಂಚು ಉಂಟಾಗಲು ಕಾರಣವಿದೇ ತಾನೆ? (5)

8. ಘರ್ಷಣೆಯ ಇಳಿಕೆ ಕ್ರಮದಲ್ಲಿ ಎರಡನೆಯದ್ದು (5)

9. ಕಬ್ಬಿಣ ಮತ್ತು ಇದರ ನಡುವೆ ಆಕರ್ಷಣೆ (4)

*******

ರಚನೆ: ವಿಜಯಕುಮಾರ್‌ ಹೆಚ್.‌ ಜಿ 
ಸರ್ಕಾರಿ ಪ್ರೌಢಶಾಲೆ
ಕಾವಲ್‌ ಭೈರಸಂದ್ರ

ಅಕ್ಟೋಬರ್‌ 2022 ತಿಂಗಳ ದಿನಾಚರಣೆಗಳು

 ಅಕ್ಟೋಬರ್‌ 2022 ತಿಂಗಳ ದಿನಾಚರಣೆಗಳು


ಅಕ್ಟೋಬರ್ 1 - ವಿಶ್ವ ಸಸ್ಯಾಹಾರಿ ದಿನ

ವಿಶ್ವ ಸಸ್ಯಾಹಾರಿ ದಿನವನ್ನು ವಾರ್ಷಿಕವಾಗಿ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ. ಇದನ್ನು 1977 ರಲ್ಲಿ ನಾರ್ತ್ ಅಮೇರಿಕನ್ ವೆಜಿಟೇರಿಯನ್ ಸೊಸೈಟಿ (NAVS) ಸ್ಥಾಪಿಸಿತು ಮತ್ತು 1978 ರಲ್ಲಿ ಇಂಟರ್ನ್ಯಾಷನಲ್ ವೆಜಿಟೇರಿಯನ್ ಯೂನಿಯನ್ ಅನುಮೋದಿಸಿತು.


ಅಕ್ಟೋಬರ್ 2 : ಗಾಂಧಿ ಜಯಂತಿ.

ಅಕ್ಟೋಬರ್ 2 : ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ.

 

ಅಕ್ಟೋಬರ್ 3

ಮ್ಮ ಗ್ರಹದ ವನ್ಯಜೀವಿಗಳು ಪರಿಸರ ಮತ್ತು ಭೂಮಿಯ ಪರಿಸರ ವ್ಯವಸ್ಥೆಗಳನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಡಿಸೆಂಬರ್ 2003 ರಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು(UNGA) ತನ್ನ 68 ನೇ ಅಧಿವೇಶನದಲ್ಲಿ ಮಾರ್ಚ್ 3 ಅನ್ನು ವಿಶ್ವ ವನ್ಯಜೀವಿ ದಿನವೆಂದು ಘೋಷಿಸಿತು. ಪ್ರಪಂಚದ ವಿವಿಧ ಭಾಗಗಳಲ್ಲಿ ವನ್ಯಜೀವಿಗಳನ್ನು ಸಂರಕ್ಷಿಸಲು  ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ, ವಿಶ್ವ ವನ್ಯಜೀವಿ ದಿನಾಚರಣೆಯ ವಿಷಯವೆಂದರೆ “ಅರಣ್ಯ ಮತ್ತು ಜೀವನೋಪಾಯಗಳು: ಜನರು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದು.” 

ಅಕ್ಟೋಬರ್ 3  ವಿಶ್ವ ಆವಾಸ ದಿನ.

ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರದಂದು ವಿಶ್ವ ಆವಾಸ ದಿನವನ್ನು ಆಚರಿಸಲಾಗುತ್ತದೆ. ಇದು ಈ ವರ್ಷ ಅಕ್ಟೋಬರ್ 3 ರಂದು ನಡೆಯುತ್ತದೆ. 1985 ರಲ್ಲಿ UN ನಿರ್ಣಯದಿಂದ ಘೋಷಿಸಲ್ಪಟ್ಟ ನಂತರ 1986 ರಲ್ಲಿ ವಿಶ್ವ ಆವಾಸಸ್ಥಾನ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.

ಈ ವರ್ಷದ ಥೀಮ್‌  “Mind the Gap. Leave No One and Place Behind”, ನಗರಗಳು ಮತ್ತು ಮಾನವ ವಸಾಹತುಗಳಲ್ಲಿ ಬೆಳೆಯುತ್ತಿರುವ ಅಸಮಾನತೆ ಮತ್ತು ಸವಾಲುಗಳ ಸಮಸ್ಯೆಯನ್ನು ಪರಿಹರಿಸುವುದರ ಬಗ್ಗೆ ಜನ ಜಾಗೃತ ದಿನದ ಮಹತ್ವವಾಗಿದೆ.

ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನ.

ಪ್ರಾಣಿಗಳ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ವಿಶ್ವಾದ್ಯಂತ ಕ್ರಮಗಳನ್ನು ತೆಗೆದುಕೊಳ್ಳುವ, ಕಲ್ಯಾಣ ಮಾನದಂಡಗಳನ್ನು ಸುಧಾರಿಸುವುದಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ.

ಅಕ್ಟೋಬರ್ 5 - ವಿಶ್ವ ಶಿಕ್ಷಕರ ದಿನ

ಪ್ರತಿ ವರ್ಷ ಅಕ್ಟೋಬರ್ 5 ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸುತ್ತದೆ. 1994 ರಲ್ಲಿ, UNESCO ಅಕ್ಟೋಬರ್ 5 ಅನ್ನು "ವಿಶ್ವ ಶಿಕ್ಷಕರ ದಿನ" ಎಂದು ಘೋಷಿಸಿತು. ಪ್ರಪಂಚದಾದ್ಯಂತ ಶಿಕ್ಷಕರ ಕೊಡುಗೆಗಳು ಮತ್ತು ಪ್ರಯತ್ನಗಳನ್ನು ಗುರುತಿಸಲು, ಈ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರು ಯುವ ಪೀಳಿಗೆಯನ್ನು ರೂಪಿಸಿ ಭವಿಷ್ಯದಲ್ಲಿ ದೇಶ ಮತ್ತು ಪ್ರಪಂಚದ ಇತರ ಭಾಗಗಳ ಸುಧಾರಣೆಗಾಗಿ ಮಾಡುವ ಕೆಲಸವನ್ನು ಸ್ಮರಿಸುವ ದಿನವಾಗಿದೆ.

ಅಕ್ಟೋಬರ್ 7 - ವಿಶ್ವ ಹತ್ತಿ ದಿನ

ವಿಶ್ವಾದ್ಯಂತ ಹತ್ತಿಯ ಮಹತ್ವವನ್ನು ಗುರುತಿಸಲು ಅವಕಾಶವನ್ನು ಒದಗಿಸಲು ಜಾಗತಿಕವಾಗಿ ಅಕ್ಟೋಬರ್ 7 ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತದೆ.

ಅಕ್ಟೋಬರ್ 10 - ವಿಶ್ವ ಮಾನಸಿಕ ಆರೋಗ್ಯ ದಿನ

ಪ್ರಪಂಚದಾದ್ಯಂತದ ಆತ್ಮಹತ್ಯೆಯ ಪ್ರಮಾಣ ಮತ್ತು ಅದನ್ನು ತಡೆಗಟ್ಟುವಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ವಹಿಸಬಹುದಾದ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ಆಯೋಜಿಸಿದೆ. ಇದನ್ನು WHO, ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ​​ಮತ್ತು ಯುನೈಟೆಡ್ ಫಾರ್ ಗ್ಲೋಬಲ್ ಮೆಂಟಲ್ ಹೆಲ್ತ್ ಗಳು ಬೆಂಬಲಿಸುತ್ತವೆ.

ಅಕ್ಟೋಬರ್ 13 - ನೈಸರ್ಗಿಕ ವಿಪತ್ತುಗಳ ಅಪಾಯ ತಡೆ ಅಂತರಾಷ್ಟ್ರೀಯ ದಿನ

ನೈಸರ್ಗಿಕ ವಿಪತ್ತುಗಳ ಅಪಾಯವನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ವಾರ್ಷಿಕವಾಗಿ ಅಕ್ಟೋಬರ್ 13 ರಂದು ನೈಸರ್ಗಿಕ ವಿಕೋಪ ಕಡಿತದ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. 1989 ರಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಇಂಟರ್ನ್ಯಾಷನಲ್ ಡೇ ಆಫ್ ಡಿಸಾಸ್ಟರ್ ರಿಸ್ಕ್ ರಿಡಕ್ಷನ್ ಅನ್ನು ಪ್ರಾರಂಭಿಸಲಾಯಿತು.

ಅಕ್ಟೋಬರ್ 13 : ವಿಶ್ವ ದೃಷ್ಟಿ ದಿನ

ಅಕ್ಟೋಬರ್ ತಿಂಗಳ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. 2022 ರಲ್ಲಿ, ಇದು ಅಕ್ಟೋಬರ್ 13 ರಂದು ಬರುತ್ತದೆ. ವಿಶ್ವ ದೃಷ್ಟಿ ದಿನವನ್ನು ಆಚರಿಸುವ ಉದ್ದೇಶವು ದೃಷ್ಟಿ ದುರ್ಬಲತೆ ಮತ್ತು ಕುರುಡುತನದ ಬಗ್ಗೆ ಜಾಗೃತಿ ಮೂಡಿಸುವುದು.

ಅಕ್ಟೋಬರ್ 15 - ಜಾಗತಿಕ ಕೈ ತೊಳೆಯುವ ದಿನ

ಜಾಗತಿಕ ಕೈ ತೊಳೆಯುವ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ ಮತ್ತು ಇದನ್ನು ಗ್ಲೋಬಲ್ ಹ್ಯಾಂಡ್‌ವಾಶಿಂಗ್ ಪಾಲುದಾರಿಕೆ ಸ್ಥಾಪಿಸಿದೆ. ನಿರ್ಣಾಯಕ ಸಮಯದಲ್ಲಿ ಜನರು ತಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಲು ಪ್ರೋತ್ಸಾಹಿಸಲು ಸೃಜನಶೀಲ ವಿಧಾನಗಳನ್ನು ವಿನ್ಯಾಸಗೊಳಿಸಲು, ಪರೀಕ್ಷಿಸಲು ಮತ್ತು ಪುನರಾವರ್ತಿಸಲು ಈ ದಿನವು ಅವಕಾಶವನ್ನು ಒದಗಿಸುತ್ತದೆ. 2008 ರಲ್ಲಿ, ಮೊದಲ ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಲಾಯಿತು. ಕರೋನಾದಂತಹ ಸಾಂಕ್ರಾಮಿಕ ರೋಗಗಳನ್ನು ದೂರವಿಡಲು ಜನಜಾಗೃತಿ ಮಾಡುವ ದೃಷ್ಟಿಯಿಂದ ಈ ದಿನವು ಮಹತ್ವ ಪಡೆದಿದೆ.

ಅಕ್ಟೋಬರ್ 16 - ವಿಶ್ವ ಆಹಾರ ದಿನ

ಆರೋಗ್ಯಕರ ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಜನರನ್ನು ಪ್ರೇರೇಪಿಸಲು ಪ್ರತಿ ವರ್ಷ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು 1945 ರಲ್ಲಿ ವಿಶ್ವಸಂಸ್ಥೆಯು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಿತು.

ಅಕ್ಟೋಬರ್ 16: ವಿಶ್ವ ಅರಿವಳಿಕೆ ದಿನ

1846 ರಲ್ಲಿ ಡೈಥೈಲ್ ಈಥರ್ ಅರಿವಳಿಕೆಯ ಮೊದಲ ಯಶಸ್ವಿ ಪ್ರದರ್ಶನವನ್ನು ಗುರುತಿಸಲು ಅಕ್ಟೋಬರ್ 16 ರಂದು ವಿಶ್ವ ಅರಿವಳಿಕೆ ದಿನವನ್ನು ಆಚರಿಸಲಾಗುತ್ತದೆ.

ಅಕ್ಟೋಬರ್ 16: ವಿಶ್ವ ಬೆನ್ನುಹುರಿ  ದಿನ

ಬೆನ್ನುಮೂಳೆಯ ನೋವು ಮತ್ತು ಅಂಗವೈಕಲ್ಯದ ಕುರಿತು ಪ್ರಪಂಚದಾದ್ಯಂತ ಜನರಲ್ಲಿ ಅರಿವು ಮೂಡಿಸಲು ಇದನ್ನು ಅಕ್ಟೋಬರ್ 16 ರಂದು ಆಚರಿಸಲಾಗುತ್ತದೆ.

ಅಕ್ಟೋಬರ್ 20 - ವಿಶ್ವ ಅಂಕಿಅಂಶ ದಿನ

ವಿಶ್ವ ಅಂಕಿಅಂಶ ದಿನವನ್ನು ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ. ಅಂತಹ ಮೊದಲ ದಿನವನ್ನು ಅಕ್ಟೋಬರ್ 20, 2010 ರಂದು ಆಚರಿಸಲಾಯಿತು. ಈ ವರ್ಷ ವಿಶ್ವವು ಮೂರನೇ ವಿಶ್ವ ಅಂಕಿಅಂಶ ದಿನವನ್ನು ವೀಕ್ಷಿಸಿತು. ವಿಶ್ವಸಂಸ್ಥೆಯ ಅಂಕಿಅಂಶ ಆಯೋಗವು ಜಗತ್ತಿನಾದ್ಯಂತ ಡೇಟಾ ದೃಢೀಕರಣ ಮತ್ತು ವಿಶ್ವಾಸಾರ್ಹತೆಯ ಪ್ರಾಮುಖ್ಯತೆಯನ್ನು ಅಂಗೀಕರಿಸಲು ದಿನವನ್ನು ಆಯೋಜಿಸಿದೆ.

23 ಅಕ್ಟೋಬರ್ - ಮೋಲ್ ಡೇ

ಮೋಲ್ ಡೇ ಅನ್ನು ಪ್ರತಿ ವರ್ಷ ಅಕ್ಟೋಬರ್ 23 ರಂದು ಆಚರಿಸಲಾಗುತ್ತದೆ. ಈ ದಿನವು ರಸಾಯನವಿಜ್ಞಾನದಲ್ಲಿ ಮೂಲಭೂತ ಅಳತೆ ಘಟಕವಾದ ಅವೊಗಾಡ್ರೊ ಸಂಖ್ಯೆ ( 6.02214076 × 1023 ) ಯನ್ನು ನೆನಪಿಸುತ್ತದೆ. ರಸಾಯನಶಾಸ್ತ್ರದಲ್ಲಿ ಆಸಕ್ತಿಯನ್ನು ಹುಟ್ಟುಹಾಕಲು ಈ ದಿನವನ್ನು ಆಚರಿಸಲಾಗುತ್ತದೆ.

31 ಅಕ್ಟೋಬರ್ - ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಏಕತಾ ದಿನ

ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನ ಅಥವಾ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತದೆ. ದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 Ramachandra Bhat B G