ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, July 4, 2024

ಜುಲೈ 2024 ರ ಲೇಖನಗಳು

ಜುಲೈ 2024ರ ಲೇಖನಗಳು

1. ಭಾರತದ ಮುಟ್ಟಿನ ಗಂಡು ಅರುಣಾಚಲಂ  : ಡಾ. ಎಂ.ಜೆ. ಸುಂದರ ರಾಮ್  
2. ಸಾಟಿಯೇ ಇಲ್ಲದ ಅಸಾಮಾನ್ಯ ಸಂಶೋಧಕ ಟೆಸ್ಲಾ : ಬಿ.ಜಿ. ರಾಮಚಂದ್ರ ಭಟ್ 
3. ಬನ್ನಿ ಆಚರಿಸೋಣ ವನಮಹೋತ್ಸವ ಸಪ್ತಾಹ : ಬಸವರಾಜ ಎಮ್ ಯರಗುಪ್ಪಿ
4. ಮಂಡೂಕಗಳ ಮಹಾಮೇಳ : ಕೃಷ್ಣ ಚೈತನ್ಯ
5. ವಿಶ್ವ ಝೋನೋಸಿಸ್ ದಿನ ....ಸಾಕು ಪ್ರಾಣಿಗಳಿಂದ ಬರುವ ರೋಗಗಳಿಂದ ದೂರವಿರೋಣ  : ಗಜಾನನ ಭಟ್ಟ
6. ಬೂದು ಹಾರ್ನ್‌ ಬಿಲ್:ಲೇಖಕರು: ಸುರೇಶ ಸಂಕೃತಿ 
7. ‘ನೀಲ’ ವರ್ಣದ ರುಚಿಕರ ‘ನೇರಳೆ’ : ರಮೇಶ ವಿ. ಬಳ್ಳಾ 
8. ಸೈಂಟೂನ್ : ಜಯಶ್ರೀ ಶರ್ಮಾ 
9ಸಿ.ಎನ್.ಆರ್.ರಾವ್ ಅತ್ಯುತ್ತಮ ವಿಜ್ಞಾನ ಶಿಕ್ಷಕ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ವಿಜೇತ ರೋಹಿತ್ ವಿ


ಸಾಟಿಯೇ ಇಲ್ಲದ ಅಸಾಮಾನ್ಯ ಸಂಶೋಧಕ ಟೆಸ್ಲಾ

ಸಾಟಿಯೇ ಇಲ್ಲದ ಅಸಾಮಾನ್ಯ ಸಂಶೋಧಕ ಟೆಸ್ಲಾ 

  ಲೇಖನ : ರಾಮಚಂದ್ರ ಭಟ್‌ ಬಿ.ಜಿ 

    ಆತ ಭೌತಶಾಸ್ತ್ರದ ವಿದ್ಯಾರ್ಥಿ. ಭೂಮಿಯ ಚಲನೆಯ ಬಗ್ಗೆ ಹೇಳುತ್ತಿದ್ದರೆ ಅತನ ಮಸ್ತಿಷ್ಕದಲ್ಲಿ ನಡೆಯುತ್ತಿದ್ದದ್ದೇ ಬೇರೆ!!! ಭೂಮಿಯು ಸಮಭಾಜಕದಲ್ಲಿ ಗಂಟೆಗೆ 1,000 ಮೈಲುಗಳಷ್ಟು (ಗಂಟೆಗೆ 1,600 ಕಿಲೋಮೀಟರ್) ವೇಗದಲ್ಲಿ ತನ್ನ ಅಕ್ಷದ ಮೇಲೆ ಸುತ್ತುತ್ತಿದೆ. ಭೂಮಿಯ ಈ ತಿರುಗುವಿಕೆಯನ್ನೇ ಬಳಸಿ ಇಡೀ ಭೂಮಿಯನ್ನೇ ಡೈನಮೋವನ್ನಾಗಿ ಬಳಸಿ ವಿದ್ಯುತ್ ಉತ್ಪಾದಿಸಬಹುದೇ? ಅಬ್ಬಾ !!! ಎಂತಹ ಆಲೋಚನೆ !!!   ಇಂತಹ ಆಲೋಚನೆ ಜನಸಾಮಾನ್ಯರಿಗೆ ಅಸಾಧ್ಯ !!! 

ಇಂತಹ ಅಲೋಚನೆಗಳ ಹಿಂದಿನ ಅಸಾಮಾನ್ಯ ವ್ಯಕ್ತಿಯೇ ಆತ!!   

ಟೆಸ್ಲಾ !! 

ನಿಕೋಲಾ ಟೆಸ್ಲಾ !!!

   ವಿದ್ಯುತ್‌ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದ ಚಿರಸ್ಥಾಯಿ ಹೆಸರೇ ನಿಕೊಲಾ ಟೆಸ್ಲಾ. ಅತ್ಯದ್ಭುತ ಎನಿಸುವ ಬುದ್ಧಿಲಬ್ದ (IQ) 160 - 300 ಇತ್ತೆನ್ನಲಾದ ಮಹಾ ಬುದ್ಧಿವಂತನೀತ !!!! ತನ್ನ ಕಾಲದ ಜನರಿಗಿಂತ ಅದೆಷ್ಟೋ ದಶಕಗಳಷ್ಟು ಮುಂದಿದ್ದ‌ ಮಹಾ ಪ್ರತಿಭಾಶಾಲಿ. ಟೆಸ್ಲಾನನ್ನು ಬಹಳಷ್ಟು ಜನ ಮರೆತಿರಬಹುದು. ಈ ಹೆಸರು ಕೇಳುತ್ತಿದ್ದಂತೆ ನಿಮ್ಮ ಕಣ್ಣೆದುರು ವಿಶ್ವದ ಅತಿ ಸಿರಿವಂತ ಇಲಾನ್‌ ಮಸ್ಕ್‌ ಕಾಣಿಸಿಕೊಳ್ಳಬಹುದು. "ನಿಕೋಲಸ್ ಟೆಸ್ಲಾ"  ಈ ಸಂಸ್ಥೆಯ ಸ್ಥಾಪಕನೋ ಸಂಬಂಧಿಯೋ ಎಂದೆನಿಸದಿರದು. ಆದರೆ ಈ ಮಹಾನ್‌ ವಿಜ್ಞಾನಿಯ ಗೌರವಾರ್ಥವಾಗಿಯೇ ಟೆಸ್ಲಾ ಮೋಟರ್ಸ್‌ ಸಂಸ್ಥೆ ಆರಂಭಗೊಂಡಿತು ಎನ್ನುವುದು ಐತಿಹಾಸಿಕ ಸತ್ಯ. ಇಂತಹ ಮಹಾನ್‌ ವಿಜ್ಞಾನಿ ಹುಟ್ಟಿದ್ದು ಜುಲೈ ತಿಂಗಳಲ್ಲಿ ಅಂದರೆ, ೧೦ ಜುಲೈ ೧೮೫೬ ರಲ್ಲಿ ಕ್ರೋವೇಷ್ಯಾ   ಪ್ರಾಂತ್ಯದ ಗಾಸ್ಪಿಕ್‌‌ ಪಟ್ಟಣದ ಸಮೀಪವಿರುವ ಹಳ್ಳಿ ಸ್ಮಿಲ್ಜನ್‌ ನಲ್ಲಿ .  

ನಿಕೋಲಾ ಟೆಸ್ಲಾ'ರು ಹುಟ್ಟಿದ ಮನೆ ಮತ್ತು ಕ್ರೊಯೇಷಿಯಾದಲ್ಲಿನ ಸ್ಮಿಲ್ಜನ್‌ ಹಳ್ಳಿಯಲ್ಲಿರುವ ಪ್ರತಿಮೆ

ಕಾರ್ಲೋವಾಕ್‌‌ನಲ್ಲಿರುವ ಹೈಯರ್‌ ರಿಯಲ್‌ ಜಿಮ್ನಾಸಿಯಮ್‌ನಲ್ಲಿ ಟೆಸ್ಲಾರವರು ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಮೂರು ವರ್ಷಗಳ ಅವಧಿಯಲ್ಲಿ ನಾಲ್ಕು-ವರ್ಷಗಳ ಓದನ್ನು ಅವರು ಪೂರೈಸಿದರು. ನಂತರ ಗ್ರಾಜ್‌ನಲ್ಲಿನ‌ ಆಸ್ಟ್ರಿಯನ್‌ ಪಾಲಿಟೆಕ್ನಿಕ್‌ನಲ್ಲಿ (೧೮೭೫)   ಟೆಸ್ಲಾರವರು ವಿದ್ಯುತ್‌‌‌‌ ಶಿಲ್ಪಶಾಸ್ತ್ರದಲ್ಲಿ ಅಧ್ಯಯನವನ್ನು ಪೂರೈಸಿದರು. ಅಲ್ಲಿ ಓದುತ್ತಿರುವಾಗ ಪರ್ಯಾಯ ವಿದ್ಯುತ್ಪ್ರವಾಹದ ಬಳಕೆಗಳ ಕುರಿತ ಅಧ್ಯಯನವನ್ನು ನಡೆಸಿದರು.ಈತನ ಜೀವನವೆಲ್ಲವೂ ಅತ್ಯಂತ ಕಡು ಕಷ್ಟದಲ್ಲಿಯೇ ಕಳೆಯಿತು. ಹೀಗಾಗಿ ಆತ ಖಿನ್ನತೆಯಲ್ಲಿಯೇ ಬೆಳೆದ ಕಾರಣದಿಂದ ಬಹಳ ಮೌನಿಯಾಗಿಯೇ ಇದ್ದ ಆದರೆ ಮಹಾನ್ ವಿಜ್ಞಾನಿ. ಪ್ರತಿಯೊಂದನ್ನೂ ಮನದಲ್ಲಿಯೇ ಯೋಚಿಸುತ್ತಲೇ ಜೀವನ ಕಳೆಯುತ್ತಿದ್ದನೇ ಹೊರತು ಯಾವೊಂದನ್ನೂ ಕೂಡ ದಾಖಲೆ ಮಾಡುತ್ತಲೇ ಇರಲಿಲ್ಲ ! ಈತನ ಕುಶಾಗ್ರಮತಿತ್ವ, ಅಪೂರ್ವವಾದ, ಫೋಟೋಗ್ರಫಿಕ್‌ ಮೆಮೊರಿ ಎಂದೇ ಕರೆಯಲಾಗುವ ಸ್ಮರಣಶಕ್ತಿ ಅದ್ಭುತ. ಈತನ ಆಲೋಚನೆಗಳು ಜನಸಾಮಾನ್ಯರಿಗೆ ನಿಲುಕದಷ್ಟು ಅಚ್ಚರಿಯ ಮತ್ತು ನಿಗೂಢತೆಯಳ್ಳವಾಗಿದ್ದವು. ಬಾಲ್ಯದಿಂದಲೇ ಸಂಶೋಧನೆ ಆತನಿಗೆ ಗೀಳಾಗಿತ್ತು. 

ಟೆಸ್ಲಾ ಆವಿಷ್ಕಾರಗಳು ಮತ್ತು ಸಂಶೋಧನೆಗಳು ಅಂತಿಂಥ ಸಂಶೋಧನೆಗಳಲ್ಲ . ಇವು ಜಗತ್ತಿನ ಕೈಗಾರಿಕಾ ಪುರೋಭಿವೃದ್ಧಿಗೆ ಹೊಸ ಆಯಾಮ ನೀಡಿದವು. 

ಎ.ಸಿ ವಿದ್ಯುತ್ ವ್ಯವಸ್ಥೆ : ಟೆಸ್ಲಾ ತನ್ನ ಪ್ರಮುಖ ಆವಿಷ್ಕಾರಗಳಲ್ಲಿ ಒಂದು ಏಸಿ (ಎಲ್ಟರ್ನೇಟಿಂಗ್ ಕರಂಟ್) ಎಂಬ ಪರ್ಯಾಯ ವಿದ್ಯುತ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಈ ವ್ಯವಸ್ಥೆಯು ದೂರವಿದ್ಯುತ್ ಪ್ರಸರಣದ ಸಮಸ್ಯೆಗಳನ್ನು ಪರಿಹರಿಸಿತು ಮತ್ತು ನಾವು ಇಂದು ಬಳಸುವ ವಿದ್ಯುತ್ ಪ್ರಸರಣ ವ್ಯವಸ್ಥೆಯ ಅಡಿಪಾಯವಾಯಿತು.  

ಟೆಸ್ಲಾ ಕಾಯಿಲ್ : ಇದು ಇಂದಿಗೂ ಅಚ್ಚರಿಯ ಸಂಶೋಧನೆಯೇ !!! ಹೈ-ವೋಲ್ಟೇಜ್, ಕಡಿಮೆ-ಪ್ರಸ್ತುತ, ಉನ್ನತ ಆವೃತ್ತಿಯ ಪರ್ಯಾಯ ವಿದ್ಯುತ್ ವ್ಯವಸ್ಥೆಯಾಗಿ, ದೂರಸಂಚಾರ ಮತ್ತು ವಿದ್ಯುತ್ ಪ್ರಸರಣದ ಪ್ರಮುಖ ಸಾಧನವಾಗಿದೆ. 

 ರೇಡಿಯೋ ಸಂಶೋಧನೆಗಳು : ಟೆಸ್ಲಾ, ರೇಡಿಯೋ ತಂತ್ರಜ್ಞಾನದಲ್ಲಿ ತನ್ನ ಮಹತ್ವದ ಸಂಶೋಧನೆಗಳನ್ನು ನಡೆಸಿದರು. ಆಧುನಿಕ ರೇಡಿಯೋ ಪ್ರಸರಣದಲ್ಲಿ ಅವರು ಮಾಡಿದ ಸಂಶೋಧನೆಗಳ ಮಹತ್ವವನ್ನು ನಾವು ಇನ್ನೂ ನೋಡುವಂತಿದೆ. ಆದರೆ ರೇಡಿಯೋ ಸಂಶೋಧನೆಗಳಲ್ಲಿ ಮಾರ್ಕೋನಿಯ ಕೈ ಮೇಲಾಯಿತು. ಮಾರ್ಕೋನಿಯೂ ಇವರ ಪ್ರತಿಸ್ಪರ್ಧಿಯಾದ. 

 ನಿಯಾನ್ ಲೈಟ್ ಮತ್ತು ಫ್ಲೂರಸೆಂಟ್ ಲೈಟ್: ಟೆಸ್ಲಾ ಬೆಳಕಿನ ಉತ್ಸರ್ಜನಾ ತಂತ್ರಜ್ಞಾನದಲ್ಲಿಯೂ ತನ್ನ ಆವಿಷ್ಕಾರಗಳನ್ನು ಮಾಡಿ, ನ್ಯೂಯಾರ್ಕ್ ನಗರದಲ್ಲಿ ತನ್ನ ಆವಿಷ್ಕಾರಗಳನ್ನು ಪ್ರದರ್ಶಿಸಿದರು.

1881ರಲ್ಲಿ ಈತ ಯುರೋಪಿನಲ್ಲಿದ್ದಾಗ ಮ್ಯಾಗ್ನಟ್ ಬಳಸದೆಯೇ ಶಬ್ದರಹಿತವಾಗಿ ತಿರುಗುವ 'ಇಂಡಕ್ಷನ್ ಮೋಟರ್' ತಂತ್ರಜ್ಞಾನದ ಅನ್ವೇಷಣೆ ಮಾಡಿದರು. ಆದರೆ ಈತನ ಅನ್ವೇಷಣೆಗೆ ಯುರೋಪಿನಲ್ಲಿ ಹೆಚ್ಚು ಬೆಲೆಕೊಡುವವರು ಸಿಗದ ಕಾರಣದಿಂದ ಅಮೇರಿಕಕ್ಕೆ ಹೊರಟರು. ಅಲ್ಲಿ "ಥಾಮಸ್ ಅಲ್ವಾ ಎಡಿಸನ್" ಬಳಿ ಕೆಲಸಕ್ಕೆ ಸೇರಿಕೊಂಡಾಗ ಎಡಿಸನ್ 'ಡಿ.ಸಿ ಮೋಟರ್ ಅನ್ವೇಷಣೆಯಲ್ಲಿ ನಿರತನಾಗಿರುತ್ತಾರೆ.  ನಿಕೋಲಸ್ ಟೆಸ್ಲಾ 'ನೀವೀಗ ಬಳಸುತ್ತಿರುವ ವಸ್ತುಗಳಿಗಿಂತಲೂ ಕಡಿಮೆ ವಸ್ತುಗಳನ್ನು ಬಳಸಿಯೇ ಈ ಅನ್ವೇಷಣೆ ಮಾಡಬಹುದು " ಎನ್ನುತ್ತಾರೆ. ಈತನ ಪರ್ಯಾಯ ಎಸಿ ವಿದ್ಯುತ್‌ ಬಗ್ಗೆ ಆತನಿಗೆ ಅಷ್ಟೇನೂ ಒಲವಿರಲಿಲ್ಲ. ಆರಂಭದ ದಿನಗಳಲ್ಲಿ  ಟೆಸ್ಲಾ ಮತ್ತು ಎಡಿಸನ್ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡಿದರು. ಆದರೆ ಅವರ ದೃಷ್ಠಿಕೋನಗಳಲ್ಲಿನ ವೈರುಧ್ಯದಿಂದ ಎಡಿಸನ್‌ರ ಸಹವಾಸವನ್ನು ತೊರೆದರು. ಇದು ಇವರಿಬ್ಬರ ನಡುವೆ ಸಾಕಷ್ಟು ಶೀತಲ ಸಮರಕ್ಕೆ ಕಾರಣವಾಯಿತು. 

ಟೆಸ್ಲಾ ಎಲೆಕ್ಟ್ರಿಕ್‌ ಲೈಟ್‌ & ಮ್ಯಾನುಫ್ಯಾಕ್ಚರಿಂಗ್‌ ಎಂಬ ಹೆಸರಿನ ತಮ್ಮದೇ ಸ್ವಂತ ಕಂಪೆನಿಯನ್ನು ಟೆಸ್ಲಾರು ೧೮೮೬ರಲ್ಲಿ ಸ್ಥಾಪಿಸಿದ್ದರು. ಪರ್ಯಾಯ ವಿದ್ಯುತ್ಪ್ರವಾಹ ಮೋಟಾರ್‌ ನಿರ್ಮಾಣದ ಬಗೆಗಿನ ಟೆಸ್ಲಾರ ಯೋಜನೆಗಳ ವಿರುದ್ಧ ಅಪಸ್ವರವೆತ್ತಿದ ಆರಂಭಿಕ ಹಣಕಾಸಿನ ಹೂಡಿಕೆದಾರರು ಅಂತಿಮವಾಗಿ ಅವರನ್ನು ಕಂಪೆನಿಯ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿದರು. ತಮ್ಮ ಜೀವನ ನಡೆಸಲು ಹಾಗೂ ಮುಂದಿನ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಟೆಸ್ಲಾರು ೧೮೮೬ರಿಂದ ೧೮೮೭ರವರೆಗೆ ನ್ಯೂಯಾರ್ಕ್‌‌ನಲ್ಲಿ ಮತ್ತೆ ಕಾರ್ಮಿಕರಾಗಿ ದುಡಿಯಲು ತೊಡಗಿದರು. ಜೀವನದುದ್ದಕ್ಕೂ ಟೆಸ್ಲಾ ಇಂತಹ ಅನೇಕ ಸಂಕಷ್ಟಗಳೊಂದಿಗೆ ಹೆಣಗಬೇಕಾಯಿತು.  ಅವರಮಿತಿ ಮೀರಿದ  ಬೌದ್ಧಿಕತೆಯೇ ಅವರಿಗೆ ಕೆಲವೊಮ್ಮೆ ಶತ್ರುವಾಗಿತ್ತು !!! ಅನೇಕರಿಗೆ ಅದು ವಿಕ್ಷಿಪ್ತ ಗುಣ ಎಂದೆನಿಸುತ್ತಿತ್ತು . ಹುಚ್ಚು ವಿಜ್ಞಾನಿ‌ ಎಂದೂ ಕೆರೆಸಿಕೊಳ್ಳ ಬೇಕಾಯಿತು. 

 ಟೆಸ್ಲಾರವರು ಕ್ಷ ಕಿರಣದ ಮೇಲೆ ಅನೇಕ  ಸಂಶೋಧನೆಗಳನ್ನು ಮುಂದುವರೆಸಿದರು. ರಾಂಟ್‌‌ಜೆನ್‌‌' ಆವಿಷ್ಕಾರಕ್ಕೆ ಮುಂಚೆಯೇ ಅನೇಕ ಪ್ರಯೋಗಗಳನ್ನು ಮಾಡಿದ್ದರೂ ತನ್ನ ಶೋಧನೆಗಳ ಕುರಿತು ವ್ಯಾಪಕ ಪ್ರಚಾರವನ್ನು ಕೈಗೊಂಡಿರಲಿಲ್ಲ.  ಗಾಳಿಯ ದ್ರವೀಕರಣಕ್ಕೆ ಸಂಬಂಧಿಸಿದಂತೆ ಅವರ ಸಂಶೋಧನೆಗಳ ಜೊತೆಗೆ ಟೆಸ್ಲಾ ವಿದ್ಯುಜ್ಜನಕವನ್ನು ಕೂಡಾ ಟೆಸ್ಲಾರು ೧೮೯೫ರಲ್ಲಿ ಅಭಿವೃದ್ಧಿಪಡಿಸಿದರು.  ಅವರ ಸಂಶೋಧನೆಗಳಲ್ಲಿ ಬಹುತೇಕವು ಮಾರ್ಚ್‌ ೧೮೯೫ರಲ್ಲಿ ನಡೆದ  ಅವೆನ್ಯೂ ರಸ್ತೆಯ ಪ್ರಯೋಗಾಲಯದ ಅಗ್ನಿ ಆಕಸ್ಮಿಕದಲ್ಲಿ ಸುಟ್ಟುಹೋಗಿದ್ದವು. ಇದರಿಂದ ಜಗತ್ತಿಗಾದ ನಷ್ಟ ಊಹಿಸಲೂ ಅಗದ್ದು . ಜೀವಮಾನದ ಸಾಧನೆ , ಸರ್ವಸ್ವವೂ ನಾಶವಾದಾಗ ಈ ವಿಜ್ಞಾನಿ ಮತ್ತೆ ಎದ್ದು ನಿಂತ ಪರಿ ಬೆರಗುಗೊಳಿಸುವಂತದ್ದು.  

 Nikola Tesla demonstrating wireless transmission of power and high frequency energy at Columbia College, New York, in 1891. 

 ವಿಶ್ವಕ್ಕೆ ಉಚಿತ ವಿದ್ಯುತ್ ನೀಡಬೇಕು ಎನ್ನುವುದು ಟೆಸ್ಲಾ ಕನಸು. ಈ ಕನಸು ನನಸಾಗಿಸಲು ಅವರು ವಾರ್ಡನ್‌ಕ್ಲಿಫ್ ಟವರ್ ಯೋಜನೆಯನ್ನು ರೂಪಿಸಿದ್ದರು. ಈ ಯೋಜನೆ ಯಶಸ್ವಿಯಾಗಿದ್ದರೆ ಅಂದೇ ಉಚಿತ ಬೆಳಕಿನ ಭಾಗ್ಯ ಆರಂಭಗೊಳ್ಳುತ್ತಿತ್ತು. ವಿಶ್ವದ ಯಾವುದೇ ಮನೆಗೂ ಉಚಿತವಾಗಿ ವಿದ್ಯುತ್ ನೀಡಲು ಸಾಧ್ಯವಾಗುತ್ತಿತ್ತು.  ಮಾರ್ಗನ್ ಎಂಬುವವರ ಸಹಾಯದೊಂದಿಗೆ ಲಂಗ್ ಎಂಬ ಹೆಸರಿನ  ದ್ವೀಪದಲ್ಲಿ 200 ಅಡಿ ಎತ್ತರದ ಟವರ್ ಒಂದನ್ನು ನಿರ್ಮಿಸಲಾಗುತ್ತದೆ. ಈ ಟವರಿನ ಮೂಲಕ ನಿಸ್ತಂತು ವಿದ್ಯುತ್ ಸರಬರಾಜು ಮಾಡಬಹುದಾಗಿತ್ತು. ಆದರೆ ಟವರಿನ ಕೆಲಸವು ಪ್ರಗತಿಯಲ್ಲಿ ಇದ್ದಾಗಲೇ ಮೊದಲ ವಿಶ್ವ ಸಮರದ ಸುರಕ್ಷತೆ ಎಂಬ  ಕಾರಣ ಕೊಟ್ಟು ಆ ಟವರನ್ನು ಕೆಡವಿ ಅಸಾಮಾನ್ಯ ಸಂಶೋಧನೆಯನ್ನು ನಾಶಮಾಡಲಾಗುತ್ತದೆ ! ಇದು ಯಾರ ಹುನ್ನಾರವೋ ತಿಳಿಯದು.  
ವೈಜ್ಞಾನಿಕ ಮನೋವೃತ್ತಿಯ ಟೆಸ್ಲಾ ತನ್ನ ಆವಿಷ್ಕಾರಗಳಲ್ಲಿ ಹಗಲು-ರಾತ್ರಿಯೆನ್ನದೆ ಪರಿಶ್ರಮಿಸುತ್ತಿದ್ದು, ವೈಜ್ಞಾನಿಕ ಮನೋವೃತ್ತಿಯು ಯಾವಾಗಲೂ ಮುಂದುವರಿಯಬೇಕು ಎಂದು ನಂಬಿದ್ದರು. ದಿನಕ್ಕೆ ಕೇವಲ ಎರಡು- ಮೂರು ತಾಸುಗಳ ನಿದ್ದೆಯಷ್ಟೇ ದೇಹಕ್ಕೆ ವಿಶ್ರಾಂತಿ. 

 ನ್ಯೂಯಾರ್ಕ್‌‌ ಮಹಾನಗರದ ನ್ಯೂಯಾರ್ಕರ್‌‌ ಹೋಟೆಲ್‌ನಲ್ಲಿ ನಿಕೋಲಾ ಟೆಸ್ಲಾರ ಗೌರವಾರ್ಥವಾಗಿಟ್ಟಿರುವ ಫಲಕ.
ನಿಕೊಲಾ ಟೆಸ್ಲಾ, ಜನವರಿ 7, 1943 ರಂದು ನ್ಯೂಯಾರ್ಕ್ ನಗರದ ಹೋಟೆಲ್ ರೂಮಿನಲ್ಲಿ ನಿಧನರಾದರು. ತಮ್ಮ ಆವಿಷ್ಕಾರಗಳಿಗೆ ಸೂಕ್ತ ಮಾನ್ಯತೆ ದೊರೆಯದಿದ್ದರೂ, ಅವರು ವಿಜ್ಞಾನ ಲೋಕದಲ್ಲಿ ಸ್ಮರಣೀಯ ವ್ಯಕ್ತಿಯಾಗಿದ್ದಾರೆ. ಅವರ ಕೊನೆಯ ದಿನಗಳಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಿದರೂ, ತಮ್ಮ ಆವಿಷ್ಕಾರಗಳ ಕುರಿತು ಅವರು ಯಾವಾಗಲೂ ಆಸಕ್ತರಾಗಿದ್ದರು. ತಮ್ಮ ಸಾವಿರಾರು ಸಂಶೋಧನೆಗಳಿಗೆ ಮುನ್ನೂರರಷ್ಟು ಪೇಟೆಂಟ್‌ಗಳನ್ನು ಪಡೆದ ಟೆಸ್ಲಾರ ಹೋರಾಟದ ಬದುಕು ನಮಗೆ ದಾರಿದೀಪವಾಗಬಲ್ಲುದು.  

 ಟೆಸ್ಲಾದ ಪರಂಪರೆಯ ಮುಂದುವರಿಕೆಯಾಗಿ , ಟೆಸ್ಲಾ ಸ್ಮಾರಕ ಮ್ಯೂಸಿಯಂಗಳನ್ನು ಸ್ಥಾಪಿಸಲಾಗಿದೆ . ಅವರ ಆವಿಷ್ಕಾರಗಳು ಮತ್ತು ಸಂಶೋಧನೆಗಳ ಪ್ರತಿಪಾದನೆಗೆ ಈ ಮ್ಯೂಸಿಯಂಗಳು ಸಹಕಾರಿಯಾಗಿವೆ. ನಿಕೊಲಾ ಟೆಸ್ಲಾ, ತಮ್ಮ ಆವಿಷ್ಕಾರಗಳು ಮತ್ತು ಸಂಶೋಧನೆಗಳಿಂದ ಜಗತ್ತಿಗೆ ಅಪಾರ ಕೊಡುಗೆ ನೀಡಿದ ಮಹಾನ್ ವಿಜ್ಞಾನಿ. ಅವರ ತತ್ವಗಳು ಮತ್ತು ದಾರಿಗಳು, ಇಂದು ಹೊಸ ಆವಿಷ್ಕಾರಗಳಿಗಾಗಿ ದಾರಿ ಮುಕ್ತ ಮಾಡುತ್ತಿವೆ. ಅವರು, ವಿಜ್ಞಾನ ಮತ್ತು ತಂತ್ರಜ್ಞಾನದ ಲೋಕದಲ್ಲಿ ಸದಾ ಸ್ಮರಣೀಯ ವ್ಯಕ್ತಿಯಾಗಿದ್ದಾರೆ.

ಭಾರತದ ಮುಟ್ಟಿನ ಗಂಡು ಅರುಣಾಚಲಂ

ಭಾರತದ ಮುಟ್ಟಿನ ಗಂಡು ಅರುಣಾಚಲಂ

 ಡಾ. ಎಂ.ಜೆ. ಸುಂದರ ರಾಮ್  
ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು 
ಹಾಗು ವಿಜ್ಞಾನ ಸಂವಹನಕಾರರು



ಭಾಗ -೧ 

ಮುಟ್ಟಿನ ಹಿಂದೆ ಬಿದ್ದ ಅರುಣಾಚಲಂ

ಬಡತನದ ಬೇಗೆಯಿಂದ ಶಾಲೆ ಬಿಟ್ಟ ಇವನು ಮಾಡದ ಕೆಲಸವಿಲ್ಲ.‌ ಕೈ ಹಿಡಿದವಳ ಕಷ್ಟಕ್ಕೆ ಸಹಾಯ ಮಾಡ ಹೊರಟರೆ ಆಕೆ ಡೈವರ್ಸ್‌ ನೋಟೀಸು ಕಳಿಸಿದಳು !!! ಕೊನೆಗೆ ತನ್ನ ಹೆತ್ತ ತಾಯಿಯೇ ಈತನನ್ನು ನಂಬದೇ, ವಿಕೃತ ಮನಸ್ಸಿನವನು  ಎಂದು ಮನೆ ಬಿಟ್ಟೇ ಹೋದಳು. ಊರಿಗೆ ಊರೇ ಹುಚ್ಚನೆಂದು‌ ಅವಮಾನಿಸಿ, ಯಾವುದೋ ದೆವ್ವ ಮೈಮೇಲೆ ಬಂದಿದೆ ಎಂದು ಈತನನ್ನು ಕಟ್ಟಿ ಹಾಕಿ ಥಳಿಸಿ ದೆವ್ವ ಬಿಡಿಸಲು  ಪ್ರಯತ್ನಿಸಿದಾಗ ಅದು ಹೇಗೋ ತಪ್ಪಿಸಿಕೊಂಡು ಊರೇ ಬಿಟ್ಟರೂ ತನ್ನ ಸಂಶೋಧನೆಯನ್ನು ಬಿಡದೆ , ಎದುರಾದ ಅಗ್ನಿದಿವ್ಯವನ್ನು ಗೆದ್ದ  ಅರುಣಾಚಲಂ ಎಂಬ  ಪದ್ಮಪ್ರಶಸ್ತಿ ವಿಜೇತ ಭೂಪನ ರೋಚಕ ಕತೆ ಇದು. 

 ತಮಿಳುನಾಡಿನ ಕೊಯಮತ್ತೂರಿನಲ್ಲಿ ಅರುಣಾಚಲಂ ಮುರುಗಾನಂದಮ್  ಎಂಬ ಒಬ್ಬ ಬಡ ನೇಕಾರನಿದ್ದಾನೆ . ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತನ್ನ 14ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟನು. ಬಡತನದಲ್ಲಿದ್ದ ಅವನು ಹೊಟ್ಟೆಪಾಡಿಗಾಗಿ  ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿ 1998ರಲ್ಲಿ ಶಾಂತಿ ಎಂಬವಳನ್ನು ಮದುವೆಯಾದ.

 ಶಾಂತಿಗೆ ಮಾಸಿಕ ಮುಟ್ಟಿನ ಶೌಚ ಮಾಡಿಕೊಳ್ಳಲು ಸ್ಯಾನಿಟರಿ ಪ್ಯಾಡ್ sanitary padಗಳನ್ನು ಕೊಂಡುಕೊಳ್ಳುವಷ್ಟು ಹಣವಿರುತ್ತಿರಲಿಲ್ಲ. ಆದ್ದರಿಂದ ಆಕೆ ಮಾಸಿದ, ಕೊಳಕು ಚಿಂದಿ ಬಟ್ಟೆಗಳನ್ನೇ ಬಳಸಿ ಬಳಿಕ ಯಾರಿಗೂ ಕಾಣದಂತೆ ಅವನು ಜೋಪಾನವಾಗಿ ಬಚ್ಚಿಡುತ್ತಿದ್ದಳು.

 ಈಕೆಯ ವರ್ತನೆಯಿಂದ ಶಾಂತಿ ತನ್ನಿಂದ ಏನನ್ನು ಮರೆ ಮಾಡುತ್ತಿರುವುದನ್ನು ಅರುಣಾಚಲಂ ಗಮನಿಸಿದ. ಅವನಿಗೆ ಹುಡುಕಿದಾಗ ಸಿಕ್ಕಿದ್ದು ಕೊಳಕಾದ ಚಿಂದಿ ಬಟ್ಟೆಗಳು!!! ಬೇಸರದಿಂದ ಅವಳನ್ನು ಪ್ರಶ್ನಿಸಿದಾಗ ಬೇಸರದಿಂದ ಆಕೆಯನ್ನು ಪ್ರಶ್ನಿಸಿದಾಗ, “ನಮ್ಮಲ್ಲಿ ಪ್ಯಾಡ್ ಕೊಳ್ಳುವಷ್ಟು ಹಣವೆಲ್ಲಿದೆ? ಪ್ಯಾಡ್ ಗಳನ್ನು ಕೊಂಡರೆ   ಮನೆಗೆ ಬೇಕಾಗುವ ಹಾಲಿನ ಪ್ರಮಾಣವನ್ನು ಕಡಿತಗೊಳಿಸಬೇಕು” ಎಂದಳು ಶಾಂತಿ.

 ಶಾಂತಿಗಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿಸಲು ಅರುಣಾಚಲಂ ಪೇಟೆಯ ದೊಡ್ಡ ಅಂಗಡಿಗೆ ಬಂದ. ಅಲ್ಲಿ ಒಂದು ಪ್ಯಾಡ್ ಅನ್ನು ತೆಗೆದು ಅದನ್ನು ಕೈಯಲ್ಲಿ ಹಿಡಿದು ಅದರ ತೂಕ 10 ಗ್ರಾಂನಷ್ಟು ಇರಬಹುದು ಎಂದು ಅಂದಾಜು ಮಾಡಿದ.10 ಗ್ರಾಂ ತೂಕದ ಆ ಹತ್ತಿಗೆ ಅಂದಿನ ಕಾಲದಲ್ಲಿ ಕೇವಲ 10 ಪೈಸೆಯಾಗುತ್ತಿತ್ತು ಆದರೆ ಅಂಗಡಿಯ ಬೆಲೆ 4 ರೂಪಾಯಿ. ಅಬ್ಬಾ 40 ಪಟ್ಟು ಅಧಿಕ ಹಣ!”ಈ ಲೂಟಿಯನ್ನು ಸಹಿಸಲಾರದ ಅರುಣಾಚಲಂ ತನ್ನಪತ್ನಿಗೆ ತಾನೇ ಸ್ಯಾನಿಟರಿ ಪ್ಯಾಡನ್ನು ತಯಾರಿಸಿಕೊಡುವ ದುಸ್ಸಾಹಸಕ್ಕೆ ಕೈ ಹಾಕಿದ.

ಅರುಣಾಚಲಂ ಹತ್ತಿಯನ್ನು ಕೊಂಡು ಅಂಗಡಿಯ ಪ್ಯಾಡನಲ್ಲಿರುವ ಸ್ಟೇಯನ್ನು ತೆಗೆದುಕೊಂಡು ಅದೇ ಆಕಾರದಲ್ಲಿ ಕತ್ತರಿಸಿ ತೆಳುವಾದ ಹತ್ತಿ ಬಟ್ಟೆಯಿಂದ ಅದನ್ನು ಬಿಗಿದು ಸುತ್ತಿ ಕಟ್ಟಿ ಪ್ಯಾಡ್ ಮಾಡಿ ಶಾಂತಿಗೆ ಕೊಟ್ಟು ಅವಳ ಅಭಿಪ್ರಾಯ ಕೇಳಿದ. ಈ ಪ್ಯಾಡ್ ಅನ್ನು ಬಳಸಿದ ಶಾಂತಿ ಅದು ಅಸಮರ್ಪಕವೆಂದು ಅದನ್ನು ತಿರಸ್ಕರಿಸಿ ಮತ್ತೆ ಚಿಂದಿ ಬಟ್ಟೆಗೇ ಶರಣಾದಳು.

 ಮುಟ್ಟಿನ ಹರಿವು ನಿಲ್ಲಲು ಗ್ರಾಮಸ್ಥ ಹೆಣ್ಣು ಮಕ್ಕಳು ಹಳೆಯ ಚಿಂದಿ ಬಟ್ಟೆಗಳನ್ನಷ್ಟೇ ಅಲ್ಲದೆ ಮರಳು,ಮರದ ಹೊಟ್ಟು, ಬೂದಿ, ಎಲೆ ಮೊದಲಾದ ರೋಗಕಾರಕ ವಸ್ತುಗಳನ್ನು ಬಳಸುತ್ತಾರೆ.

 ಬಿಬಿಸಿಯ ಪ್ರಕಾರ ಭಾರತದಲ್ಲಿ ಸುಮಾರು 70ರಷ್ಟು ಲೈಂಗಿಕ ರೋಗಗಳು ಮತ್ತು ಗರ್ಭಿಣಿಯರ ಸಾವು ಮುಟ್ಟನ್ನು ನಿಭಾಯಿಸುವ ಅನಾರೋಗ್ಯಕರ ಪದ್ಧತಿಗಳಿಂದ ಉಂಟಾಗುತ್ತಿವೆ.

 ತಾನು ಸಿದ್ಧಪಡಿಸಿದ ಪ್ಯಾಡ್ ಗಳ ದೋಷವನ್ನು ಅರಿಯಲು ಅರುಣಾಚಲಂ ಹತ್ತಿರದಲ್ಲಿದ್ದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರನ್ನು ಕಂಡು ತಾನು ಸೃಷ್ಟಿಸಿದ ಪ್ಯಾಡ್ ಗಳನ್ನು ಪರಿಚಯಿಸಿ ಅವನ್ನು ಬಳಸಿ ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದನು. ಆದರೆ ಅವರು ಸಂಕೋಚ ಪಟ್ಟು ಅವನನ್ನು ಬೈದು ಕಳಿಸಿದರು. ತನ್ನ ಸಮಸ್ಯೆಯನ್ನು ಪರಿಹರಿಸಲು ಅರುಣಾಚಲಂ ಗೆ ಉಳಿದದ್ದು ಒಂದೇ ಮಾರ್ಗ : ಪ್ರತಿಷ್ಠಿತ ವಿಜ್ಞಾನಿಗಳು ಭಯಂಕರ ರೋಗಾಣುಗಳ ಮೇಲೆ ಸಂಶೋಧನೆ ನಡೆಸುವಾಗ ಪ್ರಯೋಗವನ್ನು ತಮ್ಮ ಮೇಲೆಯೇ ಪ್ರಯೋಗಿಸಿಕೊಳ್ಳುವಂತೆ ತನ್ನ ಸಂಶೋಧನೆಯನ್ನು ತನ್ನ ಮೇಲೆ ಪ್ರಯೋಗಿಸಿಕೊಂಡು ಬಲಿಪಶುವಾಗುವ  ಹಾಸ್ಯಾಸ್ಪದ ನಿರ್ಧಾರವನ್ನು ತೆಗೆದುಕೊಂಡ! “ನಾನು ತಯಾರಿಸಿದ ಸ್ಯಾನಿಟರಿ ಪ್ಯಾಡನ್ನು ನಾನೇ ಧರಿಸಿದ ಮೊದಲ ಗಂಡಾಗಿರಲು ದೃಢ ಸಂಕಲ್ಪ ಮಾಡಿದೆ” ಎಂದ ಅರುಣಾಚಲಂ ಹೆಮ್ಮೆಯಿಂದ!

 ಅರುಣಾಚಲಂ ತಾನೇ ಒಂದು ಕೃತಕ ಗರ್ಭಕೋಶವನ್ನು ಸೃಷ್ಟಿಸಿದನು. ಕಾಲ್ ಚೆಂದಿನ ರಬ್ಬರ್ ಬ್ಲಡನ್ನು ತಂದು ಅದರ ಕೆಳಭಾಗದಲ್ಲಿ ಎರಡು ರಂದ್ರಗಳನ್ನು ಕೊರೆದು ಅವಕ್ಕೆ ಪ್ಲಾಸ್ಟಿಕ್ ಕೊಳವೆಗಳನ್ನು ಜೋಡಿಸಿದನು. ಸಹಪಾಠಿಯಾಗಿದ್ದ ಮಾಂಸ ಕಡಿಯುವ  ವೃತ್ತಿಯ ಸ್ನೇಹಿತನನ್ನು ಭೇಟಿ ಮಾಡಿ ತನಗೆ  ಕುರಿ ರಕ್ತವನ್ನು ಕೊಡುವಂತೆ ಕೇಳಿಕೊಂಡನು. ಕುರಿ ಕಡಿಯುವ ದಿನದಂದು ಕಟುಕ ಅರುಣಾಚಲಂನ ಮನೆಯ ಮುಂದೆ ಸೈಕಲ್ ಘಂಟೆ ಬಾರಿಸಿಕೊಂಡು ಹೋಗುವನು ಇದರ ಜಾಡು ಹಿಡಿದ ಅರುಣಾಚಲಂ ಅವನನ್ನು ಕೂಡಲೇ ಹಿಂಬಾಲಿಸಿ, ಬಲಿಯಾದ ಕುರಿ ರಕ್ತವನ್ನು ಪಡೆದು ತಾನು ತಯಾರಿಸಿದ್ದ ಬ್ಲಾಡರ್ ಗೆ ತುಂಬಿಕೊಳ್ಳುವನು ರಕ್ತ ಹೆಪ್ಪುಗಟ್ಟದಿರಲು ರಕ್ತ ಭಂಡಾರ ನಡೆಸುತ್ತಿದ್ದ ಮತ್ತೊಬ್ಬ ಗೆಳೆಯನಿಂದ ಗರಣೆರೋಧಕ  ( antique coagulant ) ರಾಸಾಯನಿಕವನ್ನು ಪಡೆದು ರಕ್ತಕ್ಕೆ ಬೆರೆಸಿದನು 

 ಹೀಗೆ ತಾನು ತಯಾರಿಸಿದ ಕೃತಕ ಗರ್ಭಕೋಶವನ್ನು ತನ್ನ ದೇಹದ ಮುಂಭಾಗ ಸೊಂಟದ ಕೆಳಗೆ ಬಿಗಿದುಕೊಂಡನು. ತಾನು ತಯಾರಿಸಿದ್ದ ಸ್ಯಾನಿಟರಿ ಪ್ಯಾಡನ್ನು ಗರ್ಭಕೋಶದ ಕೆಳಭಾಗಕ್ಕೆ ತನ್ನೆರಡು ತೊಡೆಗಳ ಮಧ್ಯೆ ಬಿಟ್ಟು ಗರ್ಭಕೋಶದ ಎರಡು ಕೊಳವೆಗಳು ಅದನ್ನು ತಾಗುವಂತೆ ಕಟ್ಟಿಕೊಂಡನು . ತಾನು ತಯಾರಿಸಿದ್ದ ಸ್ಯಾನಿಟರಿ ಕಟ್ಟಿಕೊಂಡು ಕಟ್ಟಿಕೊಂಡು ಎಂದಿನಂತೆ ಉಡುಪನ್ನು ಧರಿಸಿ ನಡೆಯುತ್ತಾ ಸೈಕಲ್ ತುಳಿಯುತ್ತಾ ಓಡಾಡಿದನು. ಹೀಗೆ ಓಡಾಡುವಾಗ ಅರುಣಾಚಲಂ ತನ್ನ ಗರ್ಭಕೋಶವನ್ನು ಆಗಾಗ ಮೃದುವಾಗಿ ಅದುಮಿದಾಗ ಒಳಗಿದ್ದ ರಕ್ತವು ಮುಟ್ಟು ಹರಿಯುವಂತೆ ಕೊಳವೆಗಳ ಮೂಲಕ ಹರಿದು ತಾನು ಕಟ್ಟಿಕೊಂಡಿದ್ದ ಪ್ಯಾಡಿನ ಮೇಲೆ ಸೋರುತಿತ್ತು!!! ಅರುಣಾಚಲಂ ಈಗ ಮುಟ್ಟಿನ ಗಂಡಾಗಿದ್ದ!!.

 ಅರುಣಾಚಲಂ ಈ ಅವತಾರದಲ್ಲಿ ಕೆಲವು ದಿನ ಓಡಾಡಿಕೊಂಡಿದ್ದನು ಆದರೆ ಬ್ಲಾಡರಿಗೆ ತುಂಬಿದ್ದ ರಕ್ತ ಕೇವಲ 20 ನಿಮಿಷಗಳಲ್ಲಿ ಕೊಳೆತು ಸುತ್ತಲೂ ದುರ್ನಾತ ಹರಡಿತು. ಅವನು ಕಟ್ಟಿಕೊಂಡಿದ್ದ ಸ್ಯಾನಿಟರಿ ಪ್ಯಾಡ್ ರಕ್ತವನ್ನು ಸರಿಯಾಗಿ ಹೀರಿಕೊಳ್ಳದೆ ಅವನ ಉಡುಪಿಲ್ಲ ರಕ್ತ ಕಲೆಗಳಾಗಿ ಘೋರವಾಗಿ ಎದ್ದು ಕಾಣತೊಡಗಿದವು. ರಕ್ತದ ಕಲೆಗಳನ್ನು ತೊಳೆಯಲು ಅರುಣಾಚಲಂ ಯಾರಿಗೂ ಕಾಣಿಸದೆ ಆಗಾಗ ಊರ ಬಾವಿಗೆ ಹೋಗಿ ತನ್ನ ಕರವಸ್ತ್ರವನ್ನು ಒದ್ದೆ ಮಾಡಿ ರಕ್ತ ಕಲೆಗಳನ್ನು ಒರೆಸಿಕೊಳ್ಳುತ್ತಿದ್ದ. ಈ ದೃಶ್ಯವನ್ನು ದೂರದಿಂದ ನೋಡಿದ ಊರಿನ ಕೆಲವು ಜನರು ಇವನು ಲೈಂಗಿಕ ರೋಗದಿಂದ ನರಳುತ್ತಿರುವನೆಂದು ಅನುಮಾನಿಸಿ, ಅವನನ್ನು ಮೂದಲಿಸಿ ಬಹಿಷ್ಕರಿಸಿದರು. ಈ ಭಯಾನಕ ಸುದ್ದಿ ಕಾಳಗಿಚ್ಚಿನಂತೆ ಊರೆಲ್ಲಾ ಹರಡಿತು. ಅರುಣಾಚಲಂ ಕೆಲವು ವೈದ್ಯ ವಿದ್ಯಾರ್ಥಿನಿಯರ ಜೊತೆಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾನೆ ಎಂದು ಜನ ಕತೆ ಕಟ್ಟಿ ವದಂತಿ ಹಬ್ಬಿಸಿದರು. ಈ ಸುದ್ದಿ ಅವನ ಪತ್ನಿಯ ಕಿವಿಗೆ ಸಿಡಿಲಿನಂತೆ ಎರಗಿತು. ಅವಳು ಕೆರಳಿ ಶಪಿಸುತ್ತಾ, ಅವನನ್ನು ಬಿಟ್ಟು ತನ್ನ ತವರಿಗೆ ಹೊರಟು ಹೋದಳು. 20 ದಿನಗಳ ನಂತರ ಅರುಣಾಚಲಂಗೆ ಅವಳಿಂದ ವಿವಾಹ ವಿಚ್ಛೇದನ ನೋಟಿಸ್ ಜಾರಿಯಾಯಿತು! ಇದನ್ನು ಸ್ವೀಕರಿಸಿದ ಅರುಣಾಚಲಂ ‘ನನ್ನ ಸಂಶೋಧನೆಯಲ್ಲಿ ನನಗೆ ಸಿಕ್ಕಿದ ಮೊದಲ ಪುರಸ್ಕಾರವಿದು’ ಎಂದ!!

 ಅರುಣಾಚಲಂನ ನೋವಿನ ಕತೆ ಇಲ್ಲಿಗೇ ನಿಲ್ಲುವುದಿಲ್ಲ ..... 

ಆತನ ನೋವು-ನಲಿವಿನ ಸಾಧನೆಯ ಕತೆಯನ್ನು ಮುಂದಿನ ಸಂಚಿಕೆಯಲ್ಲಿ ಓದುವಿರಂತೆ ...

ಬೂದು ಹಾರ್ನ್‌ ಬಿಲ್.

ಬೂದು ಹಾರ್ನ್‌ ಬಿಲ್ 

ಲೇಖಕರು: ಸುರೇಶ ಸಂಕೃತಿ 

ಒಮ್ಮೆ ಕ್ಯಾಮರ ಹಿಡಿದು ನೀಲಕಂಠ ಪಕ್ಷಿಯ ಒಂದು ಒಳ್ಳೆಯ ಚಿತ್ರ ತೆಗೆಯಲು ಹೊಸಕೋಟೆ ಕೆರೆಯ ಬಳಿ ಗಿಡ ಮರಗಳಲ್ಲಿ ತೋಟಗಳಲ್ಲಿ ಹುಡುಕಾಟ ನೆಡೆಸಿದ್ದೆ. ಹೊಸಕೋಟೆಯ ಕೆರೆ ಬೆಂಗಳೂರು ನಗರಕ್ಕೆ ಅತಿ ಸಮೀಪದಲ್ಲಿರುವ ಒಂದು ಪಕ್ಷಿ ವೀಕ್ಷಣ ಸ್ಥಳ. ಸುಮಾರು ಆರುನೂರು ಎಕರೆಗಳಷ್ಟು ವಿಸ್ತಾರ ಹೊಂದಿರುವ ಈ ಕೆರೆಯನ್ನು ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ವಂಶಸ್ಥರೇ ಆದ ಸುಗಟೂರಿನ ತಮ್ಮಗೌಡ ಎಂಬ ಪಾಳೇಗಾರರು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. 
ಸ್ವತಃ ತಮ್ಮೇಗೌಡರೇ ಜೋಡೆತ್ತಿನ ನೇಗಿಲನ್ನು ಹೂಡಿ ಪೂರ್ವದಿಂದ ಆರಂಭಿಸಿ ನಂತರ ಉತ್ತರಕ್ಕೆ ನಡೆದು ನಂತರ ಪಶ್ಷಿಮಕ್ಕೆ ತಿರುವು ತೆಗೆದುಕೊಂಡು ಕೊನೆಗೆ ದಕ್ಷಿಣ ದಿಕ್ಕಿಗೆ ಉಳುಮೆಯನ್ನು ಮಾಡಿದರಂತೆ. ಹೀಗೆ ನೆಲದಲ್ಲಿ ಮೂಡಿದ ಜಾಡಿನ ಮೇಲೆಯೆ ದಕ್ಷಿಣ ಪಿನಾಕಿನಿ ನದಿಗೆ ಅಡ್ಡಲಾಗಿ ಏರಿಯನ್ನು ನಿರ್ಮಿಸಿ ವಿಶಾಲವಾದ ಕೆರೆಯ ನಿರ್ಮಾಣ ಮಾಡಿದರಂತೆ. ಇಂತಹ ಕೆರೆಯು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುವುದರ ಜೊತೆಗೆ ಅನೇಕ ಅಪರೂಪದ ಪಕ್ಷಿಗಳಿಗೆ ಆಸರೆಯ ತಾಣವಾಗಿದೆ. ೨೫೦ಕ್ಕೂ ಮಿಗಿಲಾದ ಪಕ್ಷಿ ಪ್ರಭೇದಗಳನ್ನು ಇಲ್ಲಿ ಪಕ್ಷಿ ವೀಕ್ಷಕರು ಗುರ್ತಿಸಿದ್ದಾರೆ. ಇವುಗಳಲ್ಲಿ ಯುರೋಪು, ಸೈಬೀರಿಯ, ಆಸ್ಟ್ರೇಲಿಯದಂತಹ ದೂರ ದೇಶಗಳಿಂದ ಬರುವ ವಲಸೆ ಹಕ್ಕಿಗಳ ಸಂಖ್ಯೆಯೆ ಸುಮಾರು ಅರ್ಧದಷ್ಟು ಇದೆ. 

ನಾನು ಹೊಸಕೋಟೆ ಕರೆಯ ದಕ್ಷಿಣದ ಭಾಗದಲ್ಲಿ ತೋಟಗಳಲ್ಲಿ ಅಲೆದಾಡುತ್ತಿದ್ದಾಗ ಇದ್ದಕ್ಕಿಂದ್ದಂತೆ ಕೆಕ್‌ ಕೆಕ್ ಕೆಕ್. . . . ಕೀ ಕೀ ಕೀಚ್‌ ಕೀಚ್ ಎನ್ನುವ ಜೋರಾಧ ಕರ್ಕಶ ಧ್ವನಿಯು ಹತ್ತಿರದ‌ ನೀಲಗಿರಿಯ ಮರದಿಂದ ಬರತೊಡಗಿತು. ನಾನು ನಿಂತಲ್ಲಿಯೆ ಸ್ಥಬ್ದನಾಗಿ ಆ ಮರವನ್ನು ಸೂಕ್ಷ್ಮಾಗಿ ಗಮನಿಸತೊಡಗಿದೆ. ಮೇಲೆ ಎರಡು ಬೂದು ಬಣ್ಣದ ಪಕ್ಷಿಗಳು ಕೂತಿದ್ದವು. ಈ ಹಿಂದೆ ಇಲ್ಲಿ ನಾನು ಅವುಗಳನ್ನು ಕಂಡಿರಲಿಲ್ಲ ಮತ್ತು ಈ ಮೊದಲು ಚಿತ್ರಗಳಲ್ಲಿ ಕಂಡಿದ್ದ ಅವನ್ನು ನಾನು ನೇರವಾಗಿ ಮೊದಲಿಗೆ ಕಂಡಿದ್ದೆ. ಅಲ್ಲಿ ಎರಡು ಬೂದು ಮಂಗಟ್ಟೆ ಪಕ್ಷಿಗಳು ಕುಳಿತಿದ್ದವು. ಬೂದು ಮಂಗಟ್ಟೆ ಅಥವಾ ಇಂಡಿಯನ್ ಗ್ರೇ ಹಾರ್ನ್‌ ಬಿಲ್‌ಗಳು ಬೂದು ಗರಿಗಳು, ಕಪ್ಪು ಮತ್ತು ಹಳದಿ ಬಣ್ಣದ ಕೊಕ್ಕು,ಕ್ಯಾಸ್ಕ್ ಕರೆಯುವ ಕೊಕ್ಕಿನ ಮೇಲೆ ಕೊಕ್ಕಿನಂತದ್ದೇ ರಚನೆಯನ್ನು ಹೊಂದಿರುತ್ತದೆ ಕೆಂಪು ಐರಿಸ್ ಮತ್ತು ಸುಂದರವಾದ ಕಣ್ಣಿನ ರೆಪ್ಪೆಗೂದಲುಗಳನ್ನು ಹೊಂದಿದೆ. ಗಂಡು ಹೆಣ್ಣಿಗಿಂತ ದೊಡ್ಡ ಕ್ಯಾಸ್ಕ್ ಹೊಂದಿರುತ್ತದೆ. ಇವು ಸುಮಾರು 55-70 ಸೆಂ.ಮೀ ಉದ್ದವಿದ್ದು, ಬೂದು ಹಾರ್ನ್‌ಬಿಲ್ ಭಾರತದಲ್ಲಿ ಕಂಡುಬರುವ ಒಂಬತ್ತು ಜಾತಿಯ ಹಾರ್ನ್‌ಬಿಲ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿನ ಎಲ್ಲಾ ಹಾರ್ನ್‌ಬಿಲ್ ಜಾತಿಗಳಲ್ಲಿ, ಬೂದು ಹಾರ್ನ್‌ಬಿಲ್ ಹೆಚ್ಚು ವ್ಯಾಪಕವಾಗಿ ವಿತರಿಸಲ್ಪಟ್ಟಿದೆ. ಇದರ ವ್ಯಾಪ್ತಿಯು ಜಮ್ಮುವಿನಿಂದ ಕೇರಳದ ವರೆಗೆ ಮತ್ತು ರಾಜಸ್ಥಾನದಿಂದ ಪಶ್ಚಿಮ ಬಂಗಾಳದ ವರೆಗೂ ವ್ಯಾಪಿಸಿದೆ. ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ಕೆಲವು ನೆರೆಯ ರಾಷ್ಟ್ರಗಳಲ್ಲಿ ಇವು ಕಂಡುಬರುತ್ತವೆ. ಇವು ಅರಣ್ಯವಾಸಿ ಹಾರ್ನ್‌ಬಿಲ್‌ಗಳಿಗಿಂತ ಭಿನ್ನವಾಗಿ ಬಯಲು ಪ್ರದೇಶಗಳು, ತಪ್ಪಲಿನಲ್ಲಿ ಮತ್ತು ತೆರೆದ ಆವಾಸಸ್ಥಾನಗಳಿಗೆ ಆದ್ಯತೆ ನೀಡುತ್ತವೆ. ಇವನ್ನು ಎಲೆಯುದುರುವ ಕಾಡುಗಳು, ತೋಟಗಳು, ಮುಳ್ಳಿನ ಕುರುಚಲು ಕಾಡುಗಳು, ಉದ್ಯಾನಗಳು ಮತ್ತು ನಿಮ್ಮ ಹಿತ್ತಲಿನಲ್ಲಿ ಔದುಂಬುರದ ಮರವಿದ್ದರೆ ನೀವು ಅಲ್ಲಿಯೂ ಅವನ್ನು ಕಾಣಬಹುದು. ದೊಡ್ಡ ನಗರದ ಮಧ್ಯದಲ್ಲಿ ಹಳೆಯ ಎತ್ತರದ ಮರಗಳಲ್ಲಯೂ ಕಂಡು ಬಂದರೆ ಆಶ್ಚರ್ಯವಿಲ್ಲ. ಹೊಂದಿರುವ ಇದು ನಿಮಗೆ ಆಶ್ಚರ್ಯವಾಗಬಹುದು.
ಬೂದು ಹಾರ್ನ್‌ ಬಿಲ್ಲುಗಳು ಮುಖ್ಯವಾಗಿ ಹಣ್ಣು ಭಕ್ಷಕಗಳು. ಅತ್ತಿಯ ಹಣ್ಣು, ನೇರಳೆ, ಪೇರಳೆ, ಪಪ್ಪಾಯಿ, ಬೆರ್ರಿ ಯಾವುದೇ ತಿರುಳು ಭರಿತ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತವೆ. ಜೊತೆಗೆ ವಿವಿಧ ಕೀಟಗಳು, ಹಾವು ಮುಂತಾದ ಸರೀಸೃಪಗಳು, ಕಪ್ಪೆ, ಇಲಿ, ಹಲ್ಲಿಗಳನ್ನೂ ಸಹ ಬೇಟಯಾಡಿ ಭಕ್ಷಿಸುತ್ತವೆ. ಇತರೆ ಪಕ್ಷಿಗಳ ಗೂಡುಗಳಿಂದ ಮರಿಗಳನ್ನು ಕದ್ದಯೊಯ್ದು ತಿನ್ನುವುದೂ ಉಂಟು. ಒಮ್ಮೆ ಏರ್ಪಟ್ಟ ಈ ಹಕ್ಕಿಗಳ ಜೋಡಿಯು ಒಂದು ಗಂಡಿಗೆ ಒಂದು ಹೆಣ್ಣು ಎಂಬಂತೆ ಜೀವನ ಪರ್ಯಂತ ಒಟ್ಟಿಗೆ ಬಾಳುತ್ತವೆ. ಮಾರ್ಚಿಯಿಂದ ಜೂನ್‌ ತಿಂಗಳ ವರೆಗೆ ಇವುಗಳ ಸಂತಾನೋತ್ಪತ್ತಿಯ ಕಾಲ. ಎತ್ತರದ ಮರದ ಪೊಟರೆಯೊಂದನ್ನು ಮೊಟ್ಟೆ ಇಡಲು ಆಯ್ಕೆ ಮಾಡಿಕೊಂಡು ತಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ಸಿದ್ಧಪಟಿಸಿಕೊಳ್ಳುತ್ತವೆ. ಹೆಣ್ಣು ಬೂದು ಹಾರ್ನ್‌ ಬಿಲ್ ಪೊಟರೆಯೊಳಗೆ ಹೋಗಿ ಸೇರಿಕೊಂಡು ತನ್ನದೇ ಹಿಕ್ಕೆಯಿಂದ ಮತ್ತು ಗಂಡು ಹಕ್ಕಿ ತಂದು ಕೊಡುವ ಹಸಿ ಮಣ್ಣಿನ ಉಂಡೆಗಳಿಂದ ತನ್ನ ಕೊಕ್ಕು ಹೊರಬರುವಷ್ಟು ಕಿಂಡಿಯನ್ನು ಬಿಟ್ಟು ಪೊಟರೆಯ ದ್ವಾರವನ್ನು ಒಳಗಿನಿಂದಲೇ ಮುಚ್ಚಿ ತನ್ನನ್ನು ತಾನೆ ಒಳಗೆ ಬಂಧಿಯಾಗಿಸಿಕೊಳ್ಳುತ್ತದೆ. ಇಂತಹ ಪೊಟರೆಯಲ್ಲಿ ಗರಿಷ್ಟ ಎಂದರೆ ಐದು ಮೊಟ್ಟೆಗಳನ್ನು ಇಟ್ಟು ಕಾವು ಕೊಡುವ ಕೆಲಸವನ್ನು ಮಾಡುತ್ತದೆ. ಹೀಗೆ ಸುಮಾರು ಇಪ್ಪತ್ತೊಂದು ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಇಷ್ಟಾಗುವ ಹೊತ್ತಿಗೆ ಹೆಣ್ಣು ಹಕ್ಕಿಯ ರೆಕ್ಕೆಗಳೆಲ್ಲ ಉದುರಿಹೋಗಿ ಹಾರುವ ಶಕ್ತಿಯನ್ನೇ ಅದು ಕಳೆದುಕೊಂಡಿರುತ್ತದೆ. ಮುಂದೆ ಮೊಟ್ಟೆಯಿಟ್ಟ ನಲವತೈದು ದಿನಗಳಲ್ಲಿ ತಾಯಿ ಹಕ್ಕಿಗೆ ರೆಕ್ಕೆಗಳ ಮರುಹುಟ್ಟು ಆಗಿರುತ್ತದೆ. ಜೊತೆಗೆ ಮರಿ ಹಕ್ಕಿಗಳು ಬೆಳೆದು ಹಾರಿ ಹೋಗಲು ಸಿದ್ಧವಾಗಿರುತ್ತವೆ. ತಾಯಿ ಹಕ್ಕಿ ಮತ್ತು ಮರಿಗಳು ಪೊಟರೆಯ ಮುಚ್ಚಿದ ದ್ವಾರವನ್ನು ಕಿತ್ತು ಹೊರಬರುತ್ತವೆ. ವಿಶೇಷವೆಂದರೆ ಹೆಣ್ಣು ಹಕ್ಕಿ ಪೊಟರೆಯಲ್ಲಿ ಬಂಧಿಯಾಗಿದ್ದ ಅಷ್ಟೂ ದಿನಗಳು ಗಂಡು ಹಕ್ಕಿ ಅದಕ್ಕೆ ಅಗತ್ಯವಾದ ಆಹಾರ ಮುಂತಾದ ಪದಾರ್ಥಗಳನ್ನು ಗಂಡು ಹಕ್ಕಿ ಹೊತ್ತು ತಂದು ಒದಗಿಸುತ್ತಾ ತನ್ನ ಯಜಮಾನಿಕೆಯ ಜವಾಬ್ದಾರಿ ನಿಭಾಯಿಸುತ್ತದೆ. 

ಕೇರಳ ಮತ್ತು ಅರುಣಾಚಲ ಪ್ರದೇಶಗಳ ರಾಜ್ಯ ಪಕ್ಷಿಯ ಸ್ಥಾನ ಬೂದು ಹಾರ್ನ್‌ ಬಿಲ್ಲುಗಳಿಗೆ ದೊರೆತಿದೆ. IUCN ಪಟ್ಟಿಯಲ್ಲಿ ಸುಲಭವಾಗಿ ಅಳಿವಿನ ಅಂಚಿಗೆ ತಲುಪುವ ಪ್ರಾಣಿ ವರ್ಗವೆಂದು ಬೂದು ಹಾರ್ನ್‌ ಬಿಲ್ಲುಗಳನ್ನು ದಾಖಲಿಸಿದ್ದಾರೆ.



ಬನ್ನಿ ಆಚರಿಸೋಣ ವನಮಹೋತ್ಸವ ಸಪ್ತಾಹ

ಬನ್ನಿ ಆಚರಿಸೋಣ ವನಮಹೋತ್ಸವ ಸಪ್ತಾಹ 


ಲೇಖನ:  ಬಸವರಾಜ ಎಮ್ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ ̧  ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ. 

ಜಿಲ್ಲಾ ಗದಗ.      ದೂರವಾಣಿ 9742193758

ಮಿಂಚಂಚೆ basu.ygp@gmail.com.


ಜುಲೈ 1 ರಿಂದ 7ರವರೆಗೆ ಭಾರತದಾದ್ಯಂತ "ವನ ಮಹೋತ್ಸವ" ಸಪ್ತಾಹವನ್ನು ಆಚರಿಸಲಾಗುತ್ತದೆ. ತನ್ನಿಮಿತ್ತ ಸಾಂದರ್ಭಿಕ ಲೇಖನ. 

ನಾಳಿನ ಹಸಿರಿಗೆ ಸಸಿಗಳೇ ಉಸಿರು, 

ಹಸಿರೇ ಉಸಿರು;

ಕಾಡಿದ್ದರೆ ನಾಡು, 

ಒಂದು ಭೂಮಿ ಒಂದೇ ಭವಿಷ್ಯ, 

ಮನೆಗೊಂದು ಮರ ಊರಿಗೊಂದು

ವನ, ಅರಣ್ಯವಿಲ್ಲದೆ ಮಳೆ ಇಲ್ಲಾ ಮಳೆ ಇಲ್ಲದೆ ಬೆಳೆ ಇಲ್ಲಾ; 

ಹೀಗೆ ಪರಿಸರದ ಕುರಿತು ಉಲ್ಲೇಖಿಸಿ ಹೇಳಿರುವ ಘೋಷಣೆಗಳಾಗಿವೆ. ಅದರಂತೆ ಗಿಡಮರಗಳಿಗೆ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧವಿದೆ. ಗಿಡಮರಗಳು ಮಾನವನ ಜೀವನದ ಆಧಾರವಾಗಿದ್ದು, ಅಮೂಲ್ಯ ಕೊಡುಗೆಯನ್ನು ನೀಡುತ್ತದೆ. ಅರಣ್ಯ ಬೆಳೆಸಬಹುದಾದ ಪ್ರದೇಶಗಳಲ್ಲಿ ಹೊಸದಾಗಿ ಬೆಳೆಸುವ, ಹಳ್ಳಿ, ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ಗಿಡ ನೆಡುವ ತನ್ಮೂಲಕ ಶುದ್ಧಗಾಳಿ, ಪರಿಸರ ಸೌಂದರ್ಯ, ಪಶು–ಪಕ್ಷಿಗಳಿಗೆ ಆಹಾರ, ಆಶ್ರಯ ಹೀಗೆ... ವಿಭಿನ್ನ ಆಶಯಗಳೊಂದಿಗೆ ನಡೆಯುವ ಕಾರ್ಯಕ್ರಮ ಇದಾಗಿದೆ. ಆದ್ದರಿಂದ ಹೊಸ ಯುವ ಪೀಳಿಗೆಗೆ ಗಿಡ–ಮರ, ಪರಿಸರ ತನ್ನದೆನ್ನುವ ಆತ್ಮೀಯ ಭಾವ– ಸ್ಪರ್ಶವನ್ನು  ಅವರಲ್ಲಿ ಬಿತ್ತುವ ಮಹೋದ್ದೇಶದಿಂದ ಜುಲೈ 1 ರಿಂದ 7ರವರೆಗೆ ಭಾರತದಾದ್ಯಂತ "ವನ ಮಹೋತ್ಸವ" ಸಪ್ತಾಹವನ್ನು ಆಚರಿಸಲಾಗುತ್ತದೆ.

ಮೊದಲ ಬಾರಿಗೆ ಗಿಡಗಳನ್ನು ನೆಡುವ ಸಪ್ತಾಹ ದೆಹಲಿ ರಾಜ್ಯದಲ್ಲಿ 1947ರಲ್ಲಿ ಪ್ರಾರಂಭಿಸಲಾಯಿತು. 1950 ರಿಂದ ಪ್ರತಿವರ್ಷ 'ವನಮಹೋತ್ಸವ ಸಪ್ತಾಹ' ನಡೆಯುತ್ತಾ ಬರುತ್ತಿದೆ. ಸಪ್ತಾಹದ ದಿನಗಳಲ್ಲಿ ಹುಣಸೆ, ಮಾವು, ಬೇವು, ಹೊಂಗೆ, ಮಹಾಗನಿ, ಪೇರಲ, ಸೀತಾಫಲ, ಹೆಬ್ಬಾವು ಇನ್ನೂ ಮುಂತಾದ ಮರಗಳನ್ನು ದೇಶದಾದ್ಯಂತ ನೆಡಲಾಗುತ್ತಿದೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು,ಸ್ವಯಂಸೇವಾ ಸಂಸ್ಥೆಗಳು ಹಾಗೂ ಮಹಿಳಾಸಂಘಗಳು ಪ್ರತಿವರ್ಷ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಖಾಲಿಯಿರುವ ಅಗತ್ಯ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ವ್ಯವಸ್ಥೆ ಮಾಡುಲಾಗುತ್ತಿವೆ. ತೋಟಗಾರಿಕೆ ಇಲಾಖೆಗಳು, ನಗರ ಸಭೆಗಳು ಮತ್ತು ಪಂಚಾಯಿತಿಗಳು ವನಮಹೋತ್ಸವ ಸಪ್ತಾಹವನ್ನು ಬೇರೆ ಬೇರೆ ಸ್ಥಳಗಳಲ್ಲಿ ನೆಡೆಸಿ ಅದರ ಮಹತ್ವವನ್ನು ಜನರಿಗೆ ತಿಳಿಯಪಡಿಸುತ್ತಾರೆ. ಸಾಲು ಮರಗಳನ್ನು ನೆಡುವುದರಿಂದ ನಗರ ಮತ್ತು ಹಳ್ಳಿಗಳು ಸುಂದರವಾಗುವುದಲ್ಲದೆ ಭೂಸವೆತ ಕಡಿಮೆಯಾಗುತ್ತದೆ. ವನಮಹೋತ್ಸವದ ಅಂಗವಾಗಿ ಎಲ್ಲೆಡೆ ಗಿಡಗಳನ್ನು ನೆಡುವ ಆಚರಣೆ ಭಾರತದಲ್ಲಿ ಮಾತ್ರವಲ್ಲದೆ ಬೇರೆ ಅನೇಕ ದೇಶಗಳಲ್ಲೂ ಜಾರಿಯಲ್ಲಿದೆ. ಸಸ್ಯ ಸಂರಕ್ಷಣೆ, ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕು.ಜನರು ಈ ಅರಣ್ಯಗಳ ವಿಷಯದಲ್ಲಿ ಪ್ರಾಮಾಣಿಕವಾಗಿ ಜಾಗೃತರಾಗಬೇಕು.

ಈ ವನಮಹೋತ್ಸವ ಕಾರ್ಯಕ್ರಮದ ಮೂಲಕ ಅರಣ್ಯಗಳನ್ನು ಬೆಳೆಸುವುದು ಮತ್ತು ಮುಂದಿನ ಪೀಳಿಗೆ  ಅವುಗಳನ್ನು ಸಂರಕ್ಷಿಸುವುದು ವನಮಹೋತ್ಸವದ ಪ್ರಮುಖ ಉದ್ದೇಶವಾಗಬೇಕಾಗಿದೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ  ಜುಲೈ ತಿಂಗಳ ಮೊದಲ ವಾರದ ಸಪ್ತಾಹದಲ್ಲಿ ವನಮಹೋತ್ಸವ  ಕಾರ್ಯಕ್ರಮ ನಡೆದಿದ್ದು, ಅದರಂತೆ  "ನಾಳಿನ ಹಸಿರಿಗೆ ಸಸಿಗಳೇ ಉಸಿರು" ಎಂಬ ಘೋಷವಾಕ್ಯದಡಿಯಲ್ಲಿ ವನಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಾರ್ವಜನಿಕರು ಭಾಗವಹಿಸುವ ಮೂಲಕ ತಮ್ಮ ಸಹಕಾರವನ್ನು ನೀಡುವಂತೆ  ಅರಣ್ಯ ಇಲಾಖೆ ಅಧಿಕಾರಿಗಳು  ಕರೆ ನೀಡಿದ್ದಾರೆ.

#ಪ್ರಕೃತಿ & ಮಾನವನ ನಡುವೆ ಅವಿನಾಭಾವ ಸಂಬಂಧ:

 ಕರ್ನಾಟಕ ರಾಜ್ಯವು ಪರಿಸರಕ್ಕೆ, ಅರಣ್ಯೀಕರಣಕ್ಕೆ ಹಾಗೂ ಟ್ರೀಟಾಪ್ ಗಳನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂದು ಶಾಲಾ ಮಕ್ಕಳು, ಹಿರಿಯರಿಗೆ ಸಸಿಗಳನ್ನು ನೀಡಲಾಗುತ್ತಿದೆ. ಹಳೇ ಬೇರು , ಹೊಸ ಚಿಗುರು ಒಂದಾದಾಗ ಮಾತ್ರ ಅರಣ್ಯೀಕರಣ ಯಶಸ್ವಿಯಾಗುತ್ತದೆ. ಮಕ್ಕಳು ನೆಡುವ ಗಿಡಗಳಿಗೆ ಒಂದು ಹೆಸರು ನೀಡಬೇಕು. ನಿಮ್ಮ ಪ್ರೀತಿಪಾತ್ರರ ಹೆಸರನ್ನು ನೀಡಿ, ಆಗ ಆ ಗಿಡದೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚುತ್ತದೆ. ಗಿಡಮರಗಳಿಗೆ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧವಿದೆ. ಗಿಡಮರಗಳು ಮಾನವನ ಜೀವನದ ಆಧಾರವಾಗಿದ್ದು, ಅಮೂಲ್ಯ ಕೊಡುಗೆಯನ್ನು ನೀಡುತ್ತದೆ. ಮಕ್ಕಳಲ್ಲಿ ಗಿಡಮರಗಳನ್ನು ಆರೈಕೆಯಲ್ಲಿ ಆಸಕ್ತಿಯನ್ನು ಬೆಳೆಸಲು ಸರ್ಕಾರದೊಂದಿಗೆ ಸಾರ್ವಜನಿಕರು, ಸಂಘಸಂಸ್ಥೆಗಳೂ ಕೈಜೋಡಿಸಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಿಡಗಳನ್ನು ನೆಡಬೇಕು ಅಂದಾಗ ಮಾತ್ರ ಪ್ರಕೃತಿ ಸಂಪತ್ತು ಸಂತೋಷದಿಂದ ಸಂಭ್ರಮಿಸಲು ಸಾಧ್ಯ.

#ವಿಪತ್ತು ತಡೆಯಲು ಅರಣ್ಯೀಕರಣ ಬಹಳ ಮುಖ್ಯ: 

ನಾವು ಬದುಕಲು ಪರಿಸರ ಬಹಳ ಮುಖ್ಯ. ಗಿಡಮರಗಳಿಂದ ಶುದ್ಧ ಗಾಳಿ ಸಿಗುತ್ತದೆ. ಗಿಡಮರಗಳಿಂದ ಶುದ್ಧವಾದ ಆಮ್ಲಜನಕ ದೊರೆಯುತ್ತದೆ. ಪರಿಸರದಲ್ಲಿ ಕಾರ್ಬನ್ ಅಂಶ ಹೆಚ್ಚಾದರೆ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಹವಾಮಾನ ಬದಲಾವಣೆ ಆಗುತ್ತಿದೆ. ಕಳೆದ ವರ್ಷ ವಿಶ್ವದ ತಾಪಮಾನ ಶೇ.1 ರಷ್ಟು ಹೆಚ್ಚಾಗಿದ್ದು, ಹಿಮಬಂಡೆಗಳು ಕರುಗುತ್ತಿವೆ. ಇದರಿಂದ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗಿ ಜನರಿಗೆ ತೊಂದರೆಯಾಗುವ ಜೊತೆಗೆ ಪ್ರವಾಹ ಭೀತಿಯೂ ಎದುರಾಗುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಅರಣ್ಯೀಕರಣ ಬಹಳ ಮುಖ್ಯ.

# ವನಮಹೋತ್ಸವ ಕಾರ್ಯಕ್ರಮದ ದಿನಗಳಂದು ಈ ಕೆಳಗಿನ  ಸಂಕಲ್ಪಗಳನ್ನು ತೆಗೆದುಕೊಂಡು ಅಳವಡಿಸಿಕೊಳ್ಳಬೇಕು.*

*ಸಸ್ಯ ಸಂರಕ್ಷಣೆ,ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕು.

*ಒಂದು ವರ್ಷದಲ್ಲಿ ಕನಿಷ್ಠ ಪಕ್ಷ ಒಂದು ಸಸಿಯನ್ನಾದರೂ ನೆಡಿ ಮತ್ತು ಅದನ್ನು ಉಳಿಸಿ ಬೆಳೆಸಿ ಹಾಗೂ ಮರ-ಗಿಡಗಳ ಸಂರಕ್ಷಣೆಗೆ ಸಹಕರಿಸಿ.

*ನದಿ, ಹಳ್ಳ, ಕೊಳ್ಳಗಳಂತಹ ನೀರಿನ ಮೂಲಗಳನ್ನು ಕಲುಷಿತಗೊಳಿಸಬೇಡಿ.

*ನೀರನ್ನು ದುರುಪಯೋಗಪಡಿಸಿಕೊಳ್ಳಬೇಡಿ ಮತ್ತು ಬಳಕೆಯ ನಂತರ ನಲ್ಲಿಯನ್ನು ಬಂದ್ ಮಾಡಿ.

*ಅನಾವಶ್ಯಕವಾಗಿ ವಿದ್ಯುತ್ ಬಳಕೆಯನ್ನು ವ್ಯಯ ಮಾಡಬೇಡಿ.  ಫ್ಯಾನ, ಬಲ್ಫ್ ಮತ್ತು ಇನ್ನಿತರ ಉಪಕರಣಗಳನ್ನು ಬಳಕೆಯ ನಂತರ ಆರಿಸಿ. 

*ಕಸವನ್ನು ಕಸದಬುಟ್ಟಿಯಲ್ಲಿ ಎಸೆಯಿರಿ ಮತ್ತು ಇನ್ನೊಬ್ಬರಿಗೆ ಹಾಗೇ ಮಾಡಲು ಪ್ರೇರೇಪಿಸಿ.

*ಪ್ಲಾಸ್ಟಿಕ್ ಮತ್ತು ಪಾಲಿಥಿನ್ ಗಳನ್ನು ಬಳಸುವುದನ್ನು ನಿಲ್ಲಿಸಿ. ಇವುಗಳಿಗೆ ಪರ್ಯಾಯವಾಗಿ ಕಾಗದದಿಂದ ಮಾಡಿದ ಚೀಲ/ಕೈಚೀಲವನ್ನು ಉಪಯೋಗಿಸಿ.

*ಕಡಿಮೆ ದೂರದ ಅಥವಾ ಹತ್ತಿರದ ಪ್ರಯಾಣಕ್ಕೆ ಸೈಕಲ್ ಉಪಯೋಗಿಸಿ.

*ಹುಟ್ಟುಹಬ್ಬ, ಮದುವೆ ಇತ್ಯಾದಿ ಸಂದರ್ಭದ ಸವಿ ನೆನಪಿಗಾಗಿ ಸಸಿಗಳನ್ನು ಕೊಡುಗೆ ನೀಡಿ, ಅವುಗಳನ್ನು ನೆಟ್ಟು ಪೋಷಿಸುವ ಆಚರಣೆ ಜನರಲ್ಲಿ ಬೆಳೆದು ಬರಬೇಕು ಅಂದಾಗ ಈ ವನಮಹೋತ್ಸವಕ್ಕೆ ಶೋಭೆ ಬರುತ್ತದೆ. 

ಒಟ್ಟಾರೆಯಾಗಿ ಸ್ವಚ್ಛ ಭಾರತದ ಜೊತೆಗೆ ಹಸಿರು ಭಾರತವನ್ನೂ ನಿರ್ಮಿಸುವ ಪ್ರಯತ್ನ ಎಲ್ಲರೂ ಸಂಕಲ್ಪ ಮಾಡಬೇಕೆಂದು ನನ್ನ ಆಶಯವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಕನಿಷ್ಟ ನೂರು ಎಕರೆ ಪ್ರದೇಶದಲ್ಲಿ ಅರಣ್ಯೀಕರಣ ಮಾಡುವ ಕೆಲಸವನ್ನು ಮಾಡಬೇಕು. ರಾಜ್ಯದದಲ್ಲಿರುವ ಶೇ. 21 ರಷ್ಟಿರುವ ಅರಣ್ಯ ಪ್ರದೇಶವನ್ನು ಶೇ.30 ಕ್ಕೆ ಏರಿಸಬೇಕು. ಈ ದಿಸೆಯಲ್ಲಿ ಅರಣ್ಯ ಇಲಾಖೆಗೆ ಎಲ್ಲ ಸಹಕಾರವನ್ನು ನೀಡಿದಾಗ ಪರಿಸರ ಉಳಿಸಲು ಸಾಧ್ಯವಾಗುತ್ತದೆ.

#ಕೊನೆಯ ಮಾತುಗಳು:

ಗಿಡ ನಕ್ಕರೆ ಜಗ ನಗುವುದು,

ಗಿಡ ಅಳಿದರೆ ಜಗ ಅಳಿವುದು. 

ನಿಮ್ಮ ವಂಶ ಬೆಳಗಲು ಮಗನನ್ನು

ಬೆಳೆಸಿ, ಮಗನ ವಂಶ ಬೆಳಗಲು

ಮರಗಳನ್ನು ಬೆಳೆಸಿ. 

ಅಕ್ಷರ ಅನ್ನ, ಪರಿಸರ ಚಿನ್ನ. 

ವೃಕ್ಷ ಕಡಿದವನಿಗೆ ಭಿಕ್ಷೆ ತಪ್ಪದು

ಕಾಡು ಬೆಳೆಸಿ, ಭೂ ತಾಪಮಾನ

ಇಳಿಸಿ, ಮಳೆ ಬೀಜಕ್ಕಾಗಿ, ಮರ ಬೆಳೆಸಿ.

ಪ್ರಕೃತಿ ಮಾತೆ  ನೀಡು ಸನ್ಮತಿ.

ಜುಲೈ 2024ರ ವ್ಯಂಗ್ಯ ಚಿತ್ರ

ಜುಲೈ 2024 ರ ವ್ಯಂಗ್ಯ ಚಿತ್ರಗಳು 
ರಚನೆ : ಶ್ರೀಮತಿ ಜಯಶ್ರೀ ಶರ್ಮ 





 

ಅಭಿನಂದನೆಗಳು

ಈ ಬಾರಿಯ   ಸಿ ಎನ್ ಆರ್ ರಾವ್ ಅತ್ಯುತ್ತಮ ವಿಜ್ಞಾನ ಶಿಕ್ಷಕ  ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ವಿಜೇತ ರೋಹಿತ್ ವಿ ರವರಿಗೆ ಅಭಿನಂದನೆಗಳು



 ಸವಿಜ್ಞಾನ ಬಳಗದ ಸದಸ್ಯರಾಗಿರುವ ಶ್ರೀಯುತರು ಸಾಗರದ ಸಮೀಪದ ಅಮಟೆ ಕೊಪ್ಪದಲ್ಲಿರುವ ಹೊಂಗಿರಣ ಪಿಯು ಕಾಲೇಜಿನ ಪ್ರಾಂಶುಪಾಲರಾಗಿಯೂ ಭೌತಶಾಸ್ತ್ರ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತ ರೋಹಿತ್ ವಿ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 





ಮಂಡೂಕಗಳ ಮಹಾಮೇಳ

                  ಮಂಡೂಕಗಳ ಮಹಾಮೇಳ 

ಲೇಖಕರು : ಕೃಷ್ಣ ಚೈತನ್ಯ , 

ವನ್ಯಜೀವಿತಜ್ಞರು

     


    ಮಳೆಗಾಲದಲ್ಲಿ ಮಲೆನಾಡಿನಲ್ಲಿ ಮಂಡೂಕಗಳ ಕರ್ರ್… ಕರ್ರ್.., ಕೊಟ್ರ ಕೊಟ್ರ.. ಕಿಟ್..‌ ಕಿಟ್ ಕೂಗು ಪ್ರಾಣಿ ಅಪ್ರಿಯರಿಗೆ ಮಂಡೆ ಬಿಸಿಯಾಗುವಂತೆ, ಚಿಟ್‌ ಹಿಡಿಯುವಂತೆ ಮಾಡುತ್ತವೆ. ಇವು ಶೀತರಕ್ತದ ಉಭಯವಾಸಿ ಪ್ರಾಣಿಗಳು ಜಗತ್ತಿನಲ್ಲಿ ಸುಮಾರು 8400 ಪ್ರಬೇಧಗಳಿದ್ದರೆ ಭಾರತದಲ್ಲಿ 412 ಪ್ರಬೇಧಗಳು ಕಂಡುಬರುತ್ತವೆ. ಕರ್ನಾಟಕದಲ್ಲಿ ನಿಖರವಾಗಿ ಕಪ್ಪೆಗಳ ಪ್ರಬೇಧಗಳ ಸಂಖ್ಯೆಯನ್ನು ಪತ್ತೆಹಚ್ಚಲಾಗಿಲ್ಲ. ಏಕೆಂದರೆ ಜೀವವೈವಿದ್ಯದ ತವರಾಗಿರುವ ಘಟ್ಟದ ಕಾಡು, ತೊರೆ, ಜೌಗು ಮತ್ತು ನದಿಗಳಲ್ಲಿರುವ ಗಮ್ಯ ಸ್ಥಳಗಳಿಗೆ ನಾವು ತಲುಪಲಾಗಿಲ್ಲ.

  ಮಳೆಯ ಮಹಿಮೆಯೇ ಹಾಗೆ! ಎಲ್ಲೆಲ್ಲೂ ಜೀವೋತ್ಸಾಹದ ನವೋಲ್ಲಾಸ. ನೆಲದಲ್ಲಿ ಬಿದ್ದಿರುವ ಬೀಜಗಳಿಗೆ ಮೊಳೆಯುವಾಸೆ, ಒಣಗಿ ನಿಂತ ಗಿಡಗಳ ಬೇರಿಗೆ ಕೊನರುವಾಸೆ, ಎಲೆ ಉದುರಿಸಿ ನಿಂತ ಮರಗಳಿಗೆ ಚಿಗುರುವಾಸೆ. ಮೊದಲ ಜೋರು ಮಳೆ ಬಂದರೆ ಭೂಮಿಗೆ ಜೀವ ಬಂದಂತೆ ಬರಡಾಗಿದ್ದ ಭೂಮಿ ಹಸಿರ ಹೊದಿಕೆಯ ರಗ್ಗನ್ನು ಹೊದ್ದುಕೊಳ್ಳಲು ಆರಂಭಿಸುತ್ತದೆ. ಗುಂಡಿಗಳಲ್ಲಿ ನಿಂತ ನೀರು, ಮಣ್ಣು, ಕಲ್ಲಿನ ಅಡಿಯಲ್ಲಿ, ಸಂದು, ಮರದ ಪೊಟರೆ, ಒಣಗಿದ ಎಲೆಗಳ ಅಡಿಯಲ್ಲಿ ಮಲಗಿದ್ದ ಮಂಡೂಕಗಳನ್ನು ಕಾಂತದ ಸೂಜಿಯಂತೆ ಆಕರ್ಷಿಸುತ್ತದೆ. ಮಳೆ ಬೀಳುವಾಗಲೆ ಸಿಗುವ ಮಣ್ಣಿನ ವಾಸನೆಯರಿತ ಕಪ್ಪೆಗಳು, ಅದ್ಯಾವಾಗಲೋ ಬಂದು ಮೊಟ್ಟೆ ಇಟ್ಟು ಬೆಳಗಿನ ವೇಳೆಗೆ ಕಣ್ಮರೆಯಾಗಿ ಬಿಡುತ್ತಿದ್ದವು. 

  ಸಾಮಾನ್ಯವಾಗಿ ಮೊದಲ ಮಳೆಗಳು ರಾತ್ರಿಯ ವೇಳೆ ಬೀಳುವುದರಿಂದ ಕುಪ್ಪಳಿಸಿ ಬರುವ ಕಪ್ಪೆಗಳನ್ನು ನೋಡಲು ಸಿಗುವುದೇ ಕಷ್ಟ. ಸಣ್ಣವರಿದ್ದಾಗ ಬೀಳುತ್ತಿದ್ದ ರಭಸದ ಮಳೆ, ಜೊತೆಗೆ ಮಿಂಚು ಮತ್ತು ಆರ್ಭಟಿಸುತ್ತಿದ್ದ ಗುಡುಗು-ಸಿಡಿಲಿಗೆ ನಾವೆಲ್ಲ ಹೆಂಚಿನ ಮನೆಯ ಯಾವುದಾದರೊಂದು ಮೂಲೆಗೆ ಸೇರಿಬಿಡುತ್ತಿದ್ದೆವು. ಹಿರಿಯರು, ಲೇ ಮಗಾ, ಯಾವುದಾದರು ಕಬ್ಣನ ಆಚೆಗೆ ಬಿಸಾಕು, ಏನಾದ್ರು ಸಿಡ್ಲು ಮನೆಗೆ ಬಡ್ದದು ಎಂದು ಹೇಳಿ ಹೊರಗಡೆಗೆ ಕುಡುಗೋಲನ್ನೊ, ಮಚ್ಚನ್ನೊ ಹೊರಕ್ಕೆ ಎಸೆಯಿಸುತ್ತಿದ್ದರು. ಮಳೆ ನಿಂತ ತಕ್ಷಣ ರಾತ್ರಿಯೆಲ್ಲಾ ಕಪ್ಪೆಗಳ ಕರ-ಕರ, ಗೊಟ್ರು-ಗೊಟ್ರು ಶಬ್ದ. ನಮಗೋ ಬೆಳಿಗ್ಗೆ ಎದ್ದು ಗುಂಡಿಯಲ್ಲಿ ನಿಂತಿರುವ ನೀರನ್ನು ನೋಡವ ತವಕ.

  ನಿಂತ ಕೆಸರಿನ ನೀರಿನಲ್ಲಿ ಮಚ್ಚೆಯಾಕಾರದ ಲೋಳೆ, ಅದರೊಳಗೆ ಸಾಸಿವೆ ಕಾಳಿನಂತಹ ಮೊಟ್ಟೆಗಳು. ಐದಾರು ದಿನಗಳಲ್ಲಿ ಗುಂಡಿಯಲ್ಲಿನ ನೀರು ಕಡಿಮೆಯಾಗಿ ಒಣಗುವಷ್ಟರಲ್ಲಿಯೋ ಅಥವಾ ಮತ್ತೆ ಮಳೆಬಂದು ಅದರಲ್ಲಿ ಬೆಳೆಯುವ ಸೊಳ್ಳೆ ಮರಿಗಳನ್ನು ಭಕ್ಷಿಸಿ ಗೊದಮೊಟ್ಟೆಗಳು ಬೆಳೆದು ದೊಡ್ಡದಾಗಿ ಬಿಡುತ್ತಿದ್ದವು ಅನ್ನಿಸುತ್ತೆ. ಇವೆಲ್ಲವನ್ನು ಗಮನಿಸದ ನಾವು ಘಟ್ಟದಲ್ಲಿ ವೃತ್ತಿಗೆ ಬಂದಾಗ ಕಾಣಸಿಗುತ್ತಿದ್ದ ವೈವಿಧ್ಯಮಯವಾದ ಕಪ್ಪೆಗಳನ್ನು ಗಮನಿಸುವ ಕುತೂಹಲವನ್ನು ತಡೆಯಲಾಗಲೆ ಇಲ್ಲ. ಮಲೆನಾಡಿನಲ್ಲಿ ಮುಂದಿನ ಬಾಗಿಲುಗಳು ಸಾಮಾನ್ಯವಾಗಿ ಎರಡು ಭಾಗಗಳಾಗಿರುತ್ತವೆ. ಮೇಲಿನರ್ಧ ತೆರೆದು, ಕೆಳಗಿನರ್ಧ ಬಾಗಿಲನ್ನು ಮುಚ್ಚಿ ಹೊರಗಡೆ ಬೀಳುತ್ತಿದ್ದ ಮಳೆಯನ್ನು ಆಸ್ವಾದಿಸುವುದೇ ಒಂದು ಚಂದ. ಆರಂಭದ ದಿನಗಳು ಮಳೆಗಾಲವಾಗಿದ್ದುದರಿಂದ ಮನೆಯಿಂದ ಹೊರಗಡೆ ಹೋಗುವಾಗಲೋ ಅಥವಾ ಒಳಗಡೆ ಬರುವಾಗಲೋ ಸಣ್ಣ ಸಣ್ಣ ಕಪ್ಪೆಗಳು ನೆಗೆದು ಮನೆಯೊಳಗೆ ಪ್ರವೇಶಿಸಿ ಬಿಡುತ್ತಿದ್ದವು. ಅವುಗಳನ್ನು ಕಪ್ಪೆ ಮರಿಗಳು ಎಂದು ಬಾವಿಸಿದ್ದ ನನಗೆ ತದನಂತರ ತಿಳಿಯಿತು. ಅವುಗಳೂ ಸಹ ಬೆಳೆದ ಕಪ್ಪೆಗಳೆ ಎಂದು. ಅವುಗಳೇ ಆರ್ನಮೆಂಟೆಡ್ ಪಿಗ್ಮಿ ಫ್ರಾಗ್. ಗೆಳೆಯರ ಜೊತೆ ಬಾಡಿಗೆ ಮನೆಯಲ್ಲಿ ಇದ್ದುದರಿಂದ ಮನೆಯಲ್ಲಿ ಮಲಗಲು ಮಂಚ ಮಾತ್ರ ಇದ್ದವೆ ಹೊರತು ಅಡುಗೆ ಶಾಸ್ತ್ರ ನೆಲದ ಮೇಲೆ ಸಾಗುತ್ತಿತ್ತು.  ಒಮ್ಮೆ ಊಟ ಮಾಡಲು ಅನ್ನ ಮತ್ತು ಸಾರು ಹಾಕಿ ಅರ್ಧ ಊಟ ಮಾಡಿದ್ದೆ. ಉಳಿದ ಅನ್ನವನ್ನು ಊಟಮಾಡಲು ಕಲಸುವಾಗಲೆ ಸಿಕ್ಕಿದ್ದು ಅಂತಹ ಸಣ್ಣಕಪ್ಪೆಯ ಮೃತದೇಹ. ಇದ್ಯಾವಾಗ ನೆಗೆದು ಸಾರಿಗೆ ಬಿತ್ತಪ್ಪ ಎಂದು ಊಟ ಬಿಸಾಡಿ ಕೆಲಸಕ್ಕೆ ಯೋಚಿಸುತ್ತಾ ಹೊರಟೆ. ಆದರೆ ಇದನ್ನು ಗೆಳೆಯರಿಗೆ ಮಾತ್ರ ಹೇಳಲಿಲ್ಲ. ಉತ್ತರವೂ ಸಿಗಲಿಲ್ಲ!

  ನಾನು ಇರುವ ಸ್ಥಳದಲ್ಲಿ ಒಮ್ಮೆ ಡಾ. ಬಿಷನ್‌ ಅವರು, ಕಪ್ಪೆ ಹೊಡೆಯಲು ಬರುತ್ತೀರಾ ಸರ್?‌ ಎಂದರು. ವನ್ಯಜೀವಿಗಳ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದುದರಿಂದ ಕೂಡಲೆ ಒಪ್ಪಿದೆ. ರಾತ್ರಿ ೯ ಗಂಟೆಗೆ ರೆಡಿ ಇರಿ ಸರ್‌ ಎಂದು ಹೇಳಿ ಹೋದರು. ರಾತ್ರಿ ಗೋಣಿಕೊಪ್ಪಲಿನ ಸಮೀಪದ ಒಂದು ಪಾಳು ತೋಪಿನಂತಿದ್ದ ಜಾಗದ ಬಳಿ ವಾಹನ ನಿಲ್ಲಿಸಿ, ಕ್ಯಾಮೆರಾ, ಟಾರ್ಚ್‌ ಹಿಡಿದುಕೊಂಡು ಅದರೊಳಗಿದ್ದ ಕೊಳದ ಒಳಗಡೆ ಮತ್ತೊಬ್ಬ ಗೆಳೆಯರ ಸಹಾಯದಿಂದ ಇಳಿದರು. ನನ್ನನ್ನು ಕೈ ಹಿಡಿದು ಇಳಿಸಿಕೊಂಡರು. ಮಳೆ ಬಿದ್ದಿದುದರಿಂದ ಮಣ್ಣು ಸ್ಕೇಟಿಂಗ್‌ ಆಡುವಂತೆ ಜಾರುತ್ತಿತ್ತು. ನಾನೋ ಇಳಿಜಾರಿನಲ್ಲಿ ಜಾರಿ ಜಾರಿ ಅದೇಗೋ ಸಂಬಾಳಿಸಿಕೊಂಡು ನಿಲ್ಲುತ್ತಿದ್ದೆ. ಆಗ ಟಾರ್ಚ್‌ ಬೆಳಕಿನಲ್ಲಿ ಕಂಡದ್ದು ಮಾತ್ರ ಬೆರಗು ಮೂಡಿಸಿತು. ರಾಕೊಫೋರಸ್‌ ಲ್ಯಾಟರಲಿಸ್ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಸಣ್ಣ ಮರಗಪ್ಪೆ ಮೊಟ್ಟೆಗಳನ್ನು ಉರುಚಲು ಶುರುಮಾಡಿತು. ಸುಮಾರು ಒಂದೂವರೆ-ಎರಡು ಗಂಟೆಯವರೆಗೆ ಈ ಕ್ರಿಯೆ ನಡೆಯಿತು. ಅವುಗಳ ಚಲನವಲಗಳ ಛಾಯಾಚಿತ್ರಗಳನ್ನು ತೆಗೆದು ಬಂದಾಗ ಮಧ್ಯರಾತ್ರಿ ಕಳೆದಿತ್ತು.

  ಅದೇ ಸಂದರ್ಭದಲ್ಲಿ ಮಲೆನಾಡಿನ ತೇಲುವ ಕಪ್ಪೆ(ಮಲಬಾರ್‌ ಗ್ಲೈಡಿಂಗ್‌ ಫ್ರಾಗ್‌) ಎನ್ನುವ ಮರಗಪ್ಪೆಯೂ ಗಂಡು ಕಪ್ಪೆಯನ್ನು ಬೆನ್ನಿನ ಮೇಲೆ ಸವಾರಿ ಹೊತ್ತು ಮರವನ್ನೇರಲು ಹೊರಟಿತ್ತು. ಇವು ರೆಂಬೆಯಿಂದ ರೆಂಬೆಗೆ ಐದಾರು ಅಡಿಯಷ್ಟು ದೂರಕ್ಕೆ ನೆಗೆಯುವುದರಿಂದ ಹಾರಿದಂತೆ ಕಾಣುತ್ತವೆ. ಇವು ಸಹ ಕೊಳದ ಮೇಲಿನ ಸೂಕ್ತ ಜಾಗದಲ್ಲಿ, ಮರದ ರೆಂಬೆ, ಅಷ್ಟೆ ಏಕೆ, ಮನೆಯ ಕಾಂಪೌಂಡ್ ನ ಬದಿಯಲ್ಲಿಯೂ ಮೊಟ್ಟೆ ಇಟ್ಟುಬಿಡುತ್ತವೆ. ನಿಶೇಚನ ನಡೆದು ಮರಿಗಳು ಕೆಳಗಿರುವ ನೀರಿಗೆ ಬಿದ್ದರೆ ಬದುಕುತ್ತವೆ. ಕೆಲವು ವೇಳೆ ಅಂದಾಜು ತಪ್ಪಿ ಇಡುವ ಮೊಟ್ಟೆಗಳಿಂದ ಬೀಳುವ ಮರಿಗಳಿಗೆ ಸಾವೆ ಗತಿ. ಒಮ್ಮೆ ಕಾಂಪೌಡ್‌ನ ಬದಿಯಲ್ಲಿಟ್ಟ ಮೊಟ್ಟೆಗಳು ಒಡೆದು ಸಾಕಷ್ಟು ಮಳೆ ಬೀಳದೆ ನಾಶವಾದವು. ಮತ್ತೊಮ್ಮೆ ಮರದಿಂದ ಹುಲ್ಲಿನ ಮೇಲೆ ಬೀಳುತ್ತಿದ್ದ ಮರಿಗಳನ್ನ ಗಮನಿಸಿ ಕಾಲು ಬಕೆಟ್‌ ಅಷ್ಟು ನೀರು ತುಂಬಿಸಿ ಕೆಳಗಿಟ್ಟು ಮರಿಗಳನ್ನು ಸಂಗ್ರಹಿಸಿ ಎರಡು ದಿನಗಳ ನಂತರ ಲೆಕ್ಕ ಹಾಕಿದರೆ ಸಿಕ್ಕಿದ್ದು ೨೦೮ ಮರಿಗಳು. ಅಷ್ಟರಲ್ಲಾಗಲೆ ಎಷ್ಟು ಮರಿಗಳು ಹುಲ್ಲಿನೊಳಕ್ಕೆ ಬಿದ್ದು ಇರುವೆಗಳ ಪಾಲಾದವೊ ತಿಳಿಯದು.

  ಮನೆಯ ಬಳಿ ಇಟ್ಟಿರುವ ನೈದಿಲೆಯ ತೊಟ್ಟಿಯಲ್ಲಿ ಪ್ರತೀ ವರ್ಷವು ಏನಾದರೊಂದು ಅದ್ಭುತ ಕಾಣ ಸಿಗುತ್ತಿರುತ್ತದೆ. ಸೊಳ್ಳೆಗಳನ್ನು ನಿಯಂತ್ರಿಸಲೆಂದು ಈ ತೊಟ್ಟಿಯಲ್ಲಿ ಗಪ್ಪಿ, ಗಂಬೂಸಿಯ ಮೀನುಗಳನ್ನು ಸಾಕಿದ್ದೇನೆ. ಬೇಸಿಗೆಯ ಸಮಯದ ಒಂದು ಬೆಳಿಗ್ಗೆ ತೊಟ್ಟಿಯನ್ನು ಇಣುಕಿದಾಗ ಮಣಿಸರದಂತಹ ಸಾಲು, ನನ್ನನ್ನು ಇನ್ನಷ್ಟು ಇಣುಕಿ ನೋಡುವಂತೆ ಮಾಡಿತು. ಹಾಗೆಯೇ ಬಾಗಿ ನೋಡುತ್ತಿದ್ದವನು ಕುಳಿತು ಗಮನಿಸಿದಾಗ ತೊಟ್ಟಿಯ ತುಂಬೆಲ್ಲಾ  ಇಂತಹ ಸರಮಾಲೆಗಳೆ! ಓ, ಇಷ್ಟೆಲ್ಲಾ ಮೊಟ್ಟೆಗಳು ಮರಿಗಳಾದರೆ ನಾನು ಸಾಕಿರುವ ಗಪ್ಪಿ ಮೀನುಗಳು ಇವುಗಳಿಗೆ ಸಾಲದು ಎಂದು ಯೋಚಿಸಿದೆ. ಯಾವ ಕಪ್ಪೆಗಳು ಇಷ್ಟು ಮೊಟ್ಟೆ ಇಟ್ಟಿವೆ ಎಂದು ಹುಡುಕಾಡಿದೆ. ಊಹೂಂ. ಅವು ಎಲ್ಲಿ ಅವಿತು ಕುಳಿತಿದ್ದವೋ ಕಾಣಸಿಗಲಿಲ್ಲ. ಮತ್ತೇನು ಮಾಡುವುದು? ಡಾರ್ವಿನ್‌ನ ಸಿದ್ದಾಂತ “ಎಲ್ಲಾ ಜೀವಿಗಳು ಮಿತಿಮೀರಿ ಸಂತಾನ ಉತ್ಪತ್ತಿ ಮಾಡುತ್ತವೆ” ನೆನಪಾಯಿತು. ಎಷ್ಟು ಮೊಟ್ಟೆ ಇಟ್ಟಿರಬಹುದು ಎಂಬ ಕುತೂಹಲ ಬಂತು. 

  ನೋಡೋಣ, ಎಷ್ಟು ಮೊಟ್ಟೆ ಇಟ್ಟಿವೆ ಎಣಿಸಿಬಿಡೋಣವೇ? ಅವುಗಳನ್ನು ಹೊರತೆಗೆದರೆ ಅವು ನಾಶವಾಗುವುದಿಲ್ಲವೇ? ನನ್ನ ಸಂರಕ್ಷಣಾ ಕಾರ್ಯದ ಮೆದುಳು ಎಚ್ಚರಿಸಿತು. ಹೇಗೂ ಎಲ್ಲವೂ ಉಳಿಯುವುದಿಲ್ಲ ಎಂದು ಡಾರ್ವಿನ್ನನ ಎರಡನೇ ಅಂಶ “ಮಿತಿಮೀರಿದ ಸಂತಾನದಲ್ಲಿ ಆವಾಸ. ಆಹಾರ ಮತ್ತು ಸಂಗಾತಿಗಾಗಿ ಹೋರಾಟ ನಡೆದು ಸಮರ್ಥವಾದವು ಮಾತ್ರ ಉಳಿಯುತ್ತವೆ” ಎಂಬ ಅಂಶ ಹೇಳುವುದನ್ನ ನೆನೆದು ಸರವನ್ನು ಎಳೆದು ನೋಡಿದೆ. ಅದು ಎಲ್ಲಾ ನೈದಿಲೆಯ ಎಲೆಗಳನ್ನು ಎಳೆದುಕೊಂಡು ಬರುತ್ತಿತ್ತು. ಈ ಸರದ ಲೋಳೆ ಇಷ್ಟು ಗಟ್ಟಿ ಇದೆಯಾ ಎಂದು ಆಶ್ಚರ್ಯವಾಯಿತು. ಏಕೆಂದರೆ ಆ ಸರ ಪ್ರಾರಂಭದಿಂದ ಅಂತ್ಯದವರೆಗೂ ಕೂಡಿಕೊಂಡಿತ್ತು. ಸರಿ ಎಚ್ಚರಿಕೆಯಿಂದ ಸಂಗ್ರಹಿಸಿ, ಎಣಿಸಲು ಪ್ರಾರಂಭಿಸಿದೆ. ಬರೋಬ್ಬರಿ ಎರಡೂವರೆ ಗಂಟೆ! ನೂರು, ಇನ್ನೂರು, ಸಾವಿರ ಹುಹೂಂ ಸರಿಯಾಗಿ ಆರು ಸಾವಿರದ ಇನ್ನೂರ ಹತ್ತು ಮೊಟ್ಟೆಗಳು!‌

  ಶ್ರೀಲಂಕ ಮತ್ತು ಭಾರತದಲ್ಲಿ ಮಾತ್ರ ಕಂಡುಬರುವ ಬಣ್ಣದ ಕಪ್ಪೆ ಎಂದು ಸಾಮಾನ್ಯವಾಗಿ ಕರೆಯುವ ಅಪರಾಡನ್ ಟ್ಯಾಪ್ರೊಬ್ಯಾನಿಕಸ್, ಗಾತ್ರದಲ್ಲಿ ಗೋಲಿಗಿಂತ ತುಸು ದೊಡ್ಡದಿರುತ್ತದೆ. ಇದು ಜೋರು ಮಳೆಗಾಲವಿದ್ದಾಗ ಕೊಳಗಳಲ್ಲಿ ಗಂಡುಕಪ್ಪೆ ಮಿಲನದ ಕರೆಕೊಡುತ್ತದೆ. ಹೆಣ್ಣುಕಪ್ಪೆ ಕರೆಯ ಶಬ್ದಕ್ಕೆ ಬಂದು ನೀರಿನಲ್ಲಿ ಮೊಟ್ಟೆ ಇಡುತ್ತದೆ. ಅದೇ ಸಮಯದಲ್ಲಿ ಗಂಡು ಸಹ ವಿರ್ಯಾಣುಗಳನ್ನು ಸ್ಖಲಿಸಿ ಹೋಗುತ್ತದೆ. ಬಾಹ್ಯನಿಶೇಚನ ನಡೆದು ಹೊರಬರುವ ಗೊದಮೊಟ್ಟೆಗಳು ಕಪ್ಪುಬಣ್ಣದಲ್ಲಿರುತ್ತವೆ. ಅವುಗಳಲ್ಲಿ ಬಹಳಷ್ಟು ಮರಿಗಳು ಇತರ ಪ್ರಾಣಿಗಳಿಗೆ ಬಲಿಯಾಗಿ ಉಳಿಯುವುದು ಕೆಲವೇ ಮಾತ್ರ. ನಮ್ಮ ದೇಶದಲ್ಲಿ ಕಾಣಸಿಗುವ ಅತ್ಯಂತ ದೊಡ್ಡ ಕಪ್ಪೆ ಎಂದರೆ ಅದು ಗೂಳಿಕಪ್ಪೆ ಅಥವಾ ಬುಲ್‌ ಫ್ರಾಗ್.‌ ಅತ್ಯಂತ ಸಣ್ಣಕಪ್ಪೆ ಎಂದರೆ ಮೈಕ್ರೊಹೈಲ ಆರ್ನೆಟ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಆರ್ನಮೆಂಟೆಡ್ ಪಿಗ್ಮಿ ಫ್ರಾಗ್. ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಉಭಯವಾಸಿಗಳ ವೈವಿಧ್ಯತೆ ತುಂಬಾ ಅನನ್ಯವಾದುದು.

  ಮತ್ತೊಂದು ಬಗೆಯ ಕಪ್ಪೆಯ ಪ್ರಸಂಗ ಒಮ್ಮೆ ಕಾಣಲು ಸಿಕ್ಕಿತು. ತೊರೆಯ ಮ‌ಧ್ಯದಲ್ಲಿ ಕೆಲವು ಬಂಡೆಗಳಿದ್ದವು. ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದ ಬಂಡೆಯ ಮೇಲೆ ಎರಡು ಗಂಡು ಕಪ್ಪೆಗಳ ನಡುವೆ ಬಾಕ್ಸಿಂಗ್‌ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬಾಕ್ಸಿಂಗ್‌ ಆಗುತ್ತಿದ್ದದ್ದು ಮಾತ್ರ ಕೈಗಳಿಂದಲ್ಲ, ಬದಲಾಗಿ ಕಾಲುಗಳಿಂದ. ಆಗ ನನ್ನ ಬಳಿ ಕ್ಯಾಮರ ಆಗಲಿ, ಮೊಬೈಲ್‌ ಆಗಲಿ ಇರದಿದ್ದರಿಂದ ಅದು ಯಾವುದು ಎಂದು ಪತ್ತೆ ಹಚ್ಚಲಾಗಲಿಲ್ಲ.

  ಆದರೆ ಇಂತಹ ಪ್ರಾಣಿಗಳ ಸಂತಾನಕ್ಕೂ ಮಾನವನಿಂದ ದುರ್ಗತಿ ಬಂದಿರುವುದು ಮಾತ್ರ ಆಕಸ್ಮಿಕವಲ್ಲ! ಏಕೆಂದರೆ ದೇಶದ ಎಲ್ಲಾ ವನ್ಯಜೀವಿಗಳಿಗೂ ಇದೇ ಗತಿ ತಾನೆ ಬಂದಿರುವುದು.ಪಶ್ಚಿಮ ಘಟ್ಟ ಅಥವಾ ಸಹ್ಯಾದ್ರಿ ಶ್ರೇಣಿ ಮಾನವನ ಭೂಮಿಯ ಆಸೆಗೆ ಕೊಡಲಿ, ಯಾಂತ್ರಿಕ ಗರಗಸ, ಮತ್ತು ಬೆಂಕಿಗೆ ತನ್ನ ಮೈಯೊಡ್ಡುತ್ತಿದೆ. ಆದುದರಿಂದ ಇವುಗಳಿಗೆ ನೈಸರ್ಗಿಕ ವಾಸನೆಲೆ ಇಲ್ಲದಂತಾಗಿ ಝರಿ, ತೊರೆ ನದಿಗಳಲ್ಲೂ ನೀರಿನ ಬರದಿಂದ ನಶಿಸಿಹೋಗುತ್ತಿರುವುದು ಇವುಗಳ ಸಂತಾನಾಭಿವೃದ್ಧಿಗೆ ತೀವ್ರ ಪೆಟ್ಟುಕೊಡುತ್ತಿದೆ. ಅರ್ಥೈಸಿಕೊಂಡು ಉಳಿಸಬೇಕಾದವರು ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿ ಕುಳಿತಿದ್ದಾರೆ. 


ವಿಶ್ವ ಝೋನೋಸಿಸ್ ದಿನ .... ಸಾಕು ಪ್ರಾಣಿಗಳಿಂದ ಬರುವ ರೋಗಗಳಿಂದ ದೂರವಿರೋಣ

 ವಿಶ್ವ ಝೋನೋಸಿಸ್ ದಿನ ....

ಸಾಕು ಪ್ರಾಣಿಗಳಿಂದ ಬರುವ ರೋಗಗಳಿಂದ ದೂರವಿರೋಣ   

ಗಜಾನನ ಭಟ್ಟ

ವಿಜ್ಞಾನ ಶಿಕ್ಷಕರು ಹಾಗೂ ಹವ್ಯಾಸಿ ವಿಜ್ಞಾನ ಲೇಖನ ಬರಹಗಾರರು,

ಸ.ಪ್ರೌಡಶಾಲೆ, ಉಮ್ಮಚಗಿ, 

ಶಿರಸಿ ಶೈ ಜಿಲ್ಲೆ

    ಆಧುನಿಕತೆಗೆ ತಕ್ಕ ಹಾಗೆ ಮಾನವನ ಜೀವನ ಶೈಲಿ ಕೂಡಾ ಅಗಾಧವಾದ ಬದಲಾವಣೆ ಕಂಡಿದೆ. ಮೊದಲೆಲ್ಲಾ ಹೆಚ್ಚಿನ ಜನ ಹಳ್ಳಿಗಾಡಿನಲ್ಲಿ ಜೀವನ ಕಟ್ಟಿಕೊಂಡಿದ್ದರು. ಜಾನುವಾರುಗಳು ಮಾತ್ರ ಪ್ರಮುಖವಾಗಿ ಅವರ ಜೋತೆಗಾರ ಪ್ರಾಣಿಗಳಾದ್ದವು. ಕಾಲಕ್ರಮೇಣ ನಾಗರಿಕತೆ ಬೆಳದಂತೆ ಮಾನವನು ಶೋಕಿಗಾಗಿ ಬೆಕ್ಕು, ನಾಯಿ, ಮೊಲ, ಕುದುರೆ, ಕತ್ತೆ, ಹಂದಿ, ಕೋಳಿ, ಆಡು ಮುಂತಾದ ಪ್ರಾಣಿಗಳನ್ನು ಸಾಕುವುದನ್ನು ರೂಢಿಗತಮಾಡಿಕೊಂಡ.ಅಲ್ಲದೇ ಅವುಗಳಲ್ಲಿ ಕೆಲ ಪ್ರಾಣಿಗಳಿಗೆ ಮನೆಯೊಳಗೆ ಮುಕ್ತ ಸ್ವಾತಂತ್ರ್ಯ ನೀಡುತ್ತಾ ಬಂದ. ಇಷ್ಟೊಂದು ಮುಕ್ತ ಅವಕಾಶ ಪ್ರಾಣಿಗಳಿಗೆ ನೀಡಿದಾಗ ಅವುಗಳಿಂದ ನಮಗೆ ಕೆಲವು ಸಾಂಕ್ರಾಮಿಕ, ಮಾರಣಾಂತಿಕ ರೋಗಗಳು ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ . 

             ಸಾಮಾನ್ಯವಾಗಿ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಬರುವ ರೋಗಗಳಿಗೆ 'ಝೋನೋಸಿಸ್' ರೋಗಗಳು ಎನ್ನುವರು. ಈ ರೋಗಗಳು ವೈರಸ್, ಬ್ಯಾಕ್ಟೀರಿಯ, ಏಕಕೋಶ ಜೀವಿಗಳಿಂದ ಬರುವಂತದ್ದಾಗಿದೆ. ಪ್ರಾಣಿಗಳ ಸಂಪರ್ಕಕ್ಕೆ ಬಂದ ಆಹಾರ ಸೇವನೆ, ಪ್ರಾಣಿಗಳ ಸ್ಪರ್ಶ, ರೋಗಪೀಡಿತ ಪ್ರಾಣಿಗಳ ಸಂಪರ್ಕಕ್ಕೆ ಬಂದ ನೀರು ಬಳಕೆ ಹಾಗೂ ಪ್ರಾಣಿಗಳು ವಾಸ ಮಾಡುವ ಪರಿಸರದಿಂದ ಸುಲಭವಾಗಿ ವೈರಾಣುಗಳು ಮನುಷ್ಯನ ದೇಹವನ್ನು ಪ್ರವೇಶ ಪಡೆದು ರೋಗದ ಲಕ್ಷಣಗಳಿಗೆ ಕಾರಣವಾಗುತ್ತದೆ.

    1885 ಜುಲೈ 6 ರಂದು ವಿಜ್ಞಾನಿ ಲೂಯೀ ಪಾಶ್ಚರವರು ರೇಬೀಸ್‌ ರೋಗಕ್ಕೆ ಚುಚ್ಚುಮದ್ದು ಕಂಡುಹಿಡಿದರು. ಈ ದಿನದ ‌ನೆನಪಿಗಾಗಿ ಪ್ರತಿವರ್ಷ ಜುಲೈ 6ನ್ನು ವಿಶ್ವ ಝೋನೋಸಿಸ್ ದಿನವಾಗಿ ಆಚರಿಸಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಪ್ರಾಣಿಜನ್ಯ ರೋಗಗಳ ಕುರಿತಾಗಿ ಜನಸಾಮಾನ್ಯರಲ್ಲಿ ತಿಳುವಳಿಕೆ ನೀಡಲು ಶ್ರಮಿಸಲಾಗುತ್ತದೆ. ಝೋನೋಸಿಸ್ ದಿನದ ಅಂಗವಾಗಿ ವಿಶೇಷವಾದ ಘೋಷವಾಕ್ಯ ಹೊರಡಿಸಲಾಗುತ್ತದೆ.

2021ರಲ್ಲಿ 'ಝೋನೋಟಿಕ್‌ ಕಾಯಿಲೆಗಳ ಸರಪಳಿಯನ್ನು ಮುರಿಯೋಣ 'ಎನ್ನುವ ಥೀಮ್‌ ನ ಅಡಿಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಿದರೆ, 2023ರಲ್ಲಿ 'ಒಂದು ಜಗತ್ತು ಒಂದು ಆರೋಗ್ಯ , ಝೋನೋಸಿಸ್ ನ್ನು ತಡೆಯಿರಿ ಅದರ ಹರಡುವಿಕೆಯನ್ನು ನಿಲ್ಲಿಸಿ. ಪ್ರಾಣಿ ಸಂಕುಲವನ್ನು  ರಕ್ಷಿಸಿ.' ಎನ್ನುವ ಘೋಷವಾಕ್ಯದೊಂದಿಗೆ ಝೋನೋಸಿಸ್ ದಿನಾಚರಣೆ ಆಚರಿಸಲಾಯಿತು.

ಯೋನೋಸಿಸ್ ಹರಡುವಿಕೆ....

ಸಾಕು ಪ್ರಾಣಿಗಳು ವಿವಿಧ ಕಾಯಿಲೆಗಳನ್ನು ಮನುಷ್ಯನಿಗೆ ತರುತ್ತವಾದರೂ , ಇವು ಕಾಯಿಲೆ ಹರಡುವಲ್ಲಿ ‌ಮಧ್ಯವರ್ತಿಗಳಂತೆ ವರ್ತಿಸುತ್ತವೆ. ಕಾಯಿಲೆಯನ್ನು ಉಂಟುಮಾಡುವಲ್ಲಿ ಸೂಕ್ಷ್ಮಾಣು ಜೀವಿಗಳಾದ ವೈರಸ್, ಬ್ಯಾಕ್ಟೀರಿಯಾ, ಏಕಕೋಶ ಜೀವಿ ಮತ್ತು ಶೀಲಿಂದ್ರಗಳು ಪ್ರಮುಖ ಪಾತ್ರ ವಹಿಸುತ್ತದೆ.

1) ವೈರಸ್ ನಿಂದ ಬರುವ ಝೋನೊಸಿಸ್: ಸಾಕು ಪ್ರಾಣಿಗಳ ಮುಖಾಂತರ ವೈರಸ್‌ ನಿಂದ ಬರುವ ಪ್ರಮುಖ ರೋಗಗಳಲ್ಲಿ ರೇಬೀಸ್, ಏಡ್ಸ, ಇನ್ಪ್ಲೂಯೆಂಜಾ, ಇಬೋಲಾ‌ ಪ್ರಮುಖವಾದವು. ಇವುಗಳಲ್ಲಿ ರೇಬೀಸ್, ಏಡ್ಸ ಮಾರಣಾಂತಿಕ ರೋಗಗಳಾಗಿವೆ.

2) ಬ್ಯಾಕ್ಟೀರಿಯದಿಂದ ಬರುವ ಝೋನೋಸಿಸ್: ಅಂಥ್ರಾಕ್ಸ, ಸಾಲ್ಮೋನೆಲ್ಲಾಸಿಸ್, ಟ್ಯೂಬರ್ ಕ್ಯೂಲೋಸಿಸ್, ಪ್ಲೇಗ್ ಇವು ಸಾಮಾನ್ಯವಾಗಿ ಪ್ರಾಣಿಗಳಿಂದ ಹರಡುವ ಬ್ಯಾಕ್ಟೀರಿಯ ದಿಂದ ಬರುವ ರೋಗವಾಗಿದೆ.

3) ಪರಾವಲಂಬಿ ಏಕಕೋಶ ಜೀವಿಗಳಿಂದ ಬರುವ ಝೋನೋಸಿಸ್: ಟ್ರೈಕೀನೋಸಿಸ್, ಟಾಕ್ಸೊಪ್ಲಾಸ್ಮಾಸಿಸ್ ಗಳು ಪರಾವಲಂಬಿ ಏಕಕೋಶ ಜೀವಿಗಳಿಂದ ಬರುವ ರೋಗಗಳಾಗಿವೆ.

 ಝೋನೋಸಿಸ್ ಹೇಗೆ ನಿಯಂತ್ರಿಸಬಹುದು...? 

ಝೋನೋಸಿಸ್ ನ್ನು ನಿಯಂತ್ರಿಸಲು ಪ್ರತಿವರ್ಷ ಜುಲೈ 6 ರಂದು ವಿಶ್ವ ಝೋನೋಸಿಸ್ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತದೆ. ಸಾಕು ಪ್ರಾಣಿಗಳಿಂದ ಬರುವ ರೋಗ ನಿಯಂತ್ರಣ ಮತ್ತು ಉಪಕ್ರಮಗಳ ಕುರಿತಾಗಿ ಜಾಗೃತಿ ಮೂಡಿಸುವುದೆ ಈ ದಿನದ ಆಚರಣೆಯ ಪ್ರಮುಖ ದ್ಯೇಯವಾಗಿದೆ.ಸಂಪೂರ್ಣ ಝೋನೋಸಿಸ್ ನಿಯಂತ್ರಣಕ್ಕಾಗಿ ಈ ಕೆಲವು ಸೂಚಿತ ಕ್ರಮಗಳನ್ನು ತೆಗೆದುಕೊಳ್ಳಬಹುದು.

1) ಪ್ರಾಣಿ ಸಾಕಾಣಿಕೆಯ ಅಗತ್ಯ ಮತ್ತು ನಿರ್ವಹಣೆಯ ಸಾದ್ಯತೆಗಳಿದ್ದರೆ ಮಾತ್ರ ಪ್ರಾಣಿ ಸಾಕಾಣಿಕೆ ಕೈಗೊಳ್ಳುವುದು. ನಿರ್ವಹಣೆ ಸರಿಯಾಗಿರದಿದ್ದಲ್ಲಿ ಅವುಗಳಿಂದ ನಮಗೆ ರೋಗಗಳು ಹರಡುವಿಕೆಯ ಸಂದರ್ಭಗಳು ಹೆಚ್ಚು.

2) ಹವ್ಯಾಸಕ್ಕಾಗಿ ಸಾಕುವವರು ಪ್ರಾಣಿಗಳ ಸ್ವಚ್ಚತೆ ಕಡೆಗೆ ವಿಶೇಷ ಗಮನ ಕೊಡಬೇಕು. ಅವುಗಳಿಗೆ ಪ್ರತ್ಯೇಕ ಗೂಡು ಅಥವಾ ಕಟ್ಟಡ ನಿರ್ಮಾಣ ಮಾಡಿರಬೇಕು.

3) ಮನೆಯ ಒಳಗೆ ಯಾವುದೇ ಕಾರಣಕ್ಕೂ ಸಾಕು ಪ್ರಾಣಿಗಳನ್ನು ಬಿಟ್ಟು ಕೊಡಬಾರದು.

4)ಸಾಕು ಪ್ರಾಣಿಗಳಿಗೆ ಉತ್ತಮ ಪೋಷಕಾಂಶಯುಕ್ತ ಆಹಾರ ನೀಡಿ ಅವುಗಳ ಆರೋಗ್ಯದ ಕಡೆಗೆ ಗಮನ ಹರಿಸುವುದು‌.

5) ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಸೂಕ್ತ ಔಷದೋಪಚಾರ ವ್ಯವಸ್ಥೆ ಮಾಡುವುದು.

6)ರೋಗ ಪೀಡಿತ ಪ್ರಾಣಿಗಳನ್ನು ಆರೋಗ್ಯವಂತ ಪ್ರಾಣಿಗಳ ಜೋತೆಗೆ ಸೇರಿಸದೆ, ಪ್ರತ್ಯೇಕವಾಗಿಡುವುದು.

7) ಪ್ರಾಣಿಗಳಿಗೆ ಆಹಾರ ನೀಡುವುದು ಮತ್ತು ಔಷಧೋಪಚಾರ ಮಾಡುವ ಸಂದರ್ಭದಲ್ಲಿ ವಿಶೇಷ ರಕ್ಷಣಾ ಕವಚ ಧರಿಸುವುದು ಹಾಗೂ ಸ್ಯಾನಿಟೈಸರ್ ಮತ್ತು ಸೋಪ್ ಬಳಸಿ ದೇಹವನ್ನು ಸ್ವಚ್ಚಗೊಳಿಸಿಕೊಳ್ಳುವುದು.

    ಜನಸಾಮಾನ್ಯರು ಪ್ರಾಣಿಗಳನ್ನು ಸಾಮಾನ್ಯವಾಗಿ ಹವ್ಯಾಸಕ್ಕಾಗಿ, ಆಹಾರಕ್ಕಾಗಿ, ಕೃಷಿಗಾಗಿ ,ರಕ್ಷಣೆಗಾಗಿ ಅಥವಾ ಪ್ರತಿಷ್ಠೆ ಗಾಗಿ ಸಾಕುತ್ತಾರೆ. ಯಾವುದೆ ನಿರ್ದಿಷ್ಟ ಉದ್ದೇಶಗಳಿಗಾಗಿ ಪ್ರಾಣಿಗಳನ್ನು ಸಾಕಿದರೂ ಕೂಡಾ ಸ್ಚಚ್ಚತೆ , ಮತ್ತು ಅರೋಗ್ಯ ಸೂತ್ರ ಅಳವಡಿಸಿಕೊಂಡಾಗ ಅವುಗಳಿಂದ ಬರುವ ಎಷ್ಟೂ ರೋಗಗಳಿಂದ ಮುಕ್ತಿ ಪಡೆಯಬಹುದು. ಝೋನೋಸಿಸ್ ದಿನದ ಅಂಗವಾಗಿ ಸಾಕು ಪ್ರಾಣಿಗಳಿಂದ ಬರುವ ರೋಗಗಳಿಂದ ರಕ್ಷಣೆ ಪಡೆದು ಆರೋಗ್ಯಯುತ ಜೀವನ ನಡೆಸುವ ಪ್ರತಿಜ್ಞೆ ಕೈಗೊಳ್ಳೊಣ. 

ನೀಲ’ ವರ್ಣದ ರುಚಿಕರ ‘ನೇರಳೆ

  ‘ನೀಲ’ ವರ್ಣದ ರುಚಿಕರ ‘ನೇರಳೆ’ 

ಲೇಖಕರು : ರಮೇಶ ವಿ. ಬಳ್ಳಾ

 ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪ. ಪೂ. ಕಾಲೇಜು 

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ 


    ಬಿಸಿಲ ಬೇಗೆಗೆ ಬಸವಳಿದ ಜನ ಆಕಾಶದತ್ತ ಮುಖ ಮಾಡುವ ಸಮಯ. ಜೂನ್ ತಿಂಗಳ ಹೊತ್ತು ಬಂತೆಂದರೆ ನಿಧಾನವಾಗಿ ಮಳೆಯ ಆಗಮನದ ಮೂನ್ಸೂಚನೆ ಸಿಗುತ್ತದೆ. ಬಾಯಾರಿ ಬೆಂಡಾದ ಜನರ ತನುಮನಕ್ಕೆ ತಂಪು ತಣಿಸುವ ಸುಳಿಗಾಳಿ ಬೀಸತೊಡಗುತ್ತದೆ. ಒಂದೆರಡು ಹನಿಯೊಡೆದು ಕಾದು ಕೆಂಡವಾದ ಭುವಿಯ ಕಿಚ್ಚಿಗೆ ಹಸಿ ಹಚ್ಚಿ ಮಡಿಯಾಗುವ ಕಾಲದಂತೆ ತೋರುತ್ತದೆ. ಇಂತಹ ಸಮಯಕ್ಕೆ ಸರಿಯಾಗಿ ಪ್ರಕೃತಿಯ ಮೈಬಣ್ಣ ಬದಲಾಗುತ್ತಾ ಹಸಿರು ಹೊದ್ದುಕೊಳ್ಳುತ್ತದೆ. ಋತುಮಾನಕ್ಕನುಗುಣವಾದ ಹಣ್ಣುಗಳ ಸುಗ್ಗಿ ಲಗ್ಗೆ ಇಡುತ್ತದೆ. ಬೇಸಿಗೆಯಲ್ಲಿ ಮಾವು ತಿಂದು ಬಾಯಿ ಚಪ್ಪರಿಸದವರಿಗೆ ಮತ್ತೊಂದು ಹಣ್ಣಿನಾಗಮನವಾಗುತ್ತದೆ. ಈ ಹೊತ್ತಿಗೆ ವಿಶೇಷವಾಗಿ ಎಲ್ಲರ ಗಮನ ಸೆಳೆಯುವ ವಿಶಿಷ್ಟ ಹಣ್ಣು ಎಂದರೆ ಅದು ‘ನೇರಳೆ’ ಹಣ್ಣು. 

ಕಾಡುಕಣಿವೆಯ ಒಡಲಿನಲ್ಲಿ ಅದೇಷ್ಟೋ ಹಣ್ಣುಗಳ ಸಂತಾನವಿದೆ. ನಿಸರ್ಗದ ವೈಶಿಷ್ಟ್ಯವೆಂಬಂತೆ ಒಂದಾದ ನಂತರ ಮತ್ತೊಂದು ಎಂಬಂತೆ ಹಣ್ಣುಗಳು ಸಾಲು ಸಾಲಾಗಿ ಜನರ ಬಾಯಿಗೆ ಆಹಾರವಾಗುತ್ತವೆ. ಅವುಗಳಲ್ಲಿ ಅಪ್ಪಟ ಕಾಡು ಕುಟುಂಬದ ನೇರಳೆ ಹಣ್ಣು ವಿಶಿಷ್ಟವಾದದ್ದು ಹಾಗೂ ಸವಿಯಲು ರುಚಿಯಾದದ್ದು ಆಗಿದೆ. ಇಂತಹ ನೇರಳೆ ಹಣ್ಣು ಇಂದು ಎಲ್ಲೆಂದರಲ್ಲಿ ಕಾಣಸಿಗುತ್ತಿದೆ. ಸಂತೆ, ದೇವಸ್ಥಾನ, ಉದ್ಯಾನ, ಆಸ್ಪತ್ರೆ ಅಷ್ಟೇ ಏಕೆ ಬಂಡಿಗಾಡಿಗಳ ಮೇಲೆ, ಜೊತೆಗೆ ತಲೆ ಮೇಲೆ ಬುಟ್ಟಿಯಲ್ಲಿ ಹೊತ್ತು ಮಾರುವವರೂ ಇದ್ದಾರೆ. ಈ ಹಣ್ಣು ಸವಿಯದೇ ಬೇಸಿಗೆ ಮುಗಿಯಲಾರದು ಎನ್ನುವಷ್ಟರ ಮಟ್ಟಿಗೆ ಬಿಸಿಲು-ಮಳೆಯ ನಡುವಿನ ಕಾಲಕ್ಕೆ ಹಣ್ಣು ರುಚಿ ತೋರಿಸುತ್ತದೆ.

ಅಚ್ಚ ನೀಲ ವರ್ಣದ ಈ ಸುಂದರ ಹಣ್ಣು ಹಳ್ಳಿಗಾಡಿನ ಜನರಿಗೆ ‘ನೇರಲ ಹಣ್ಣು’ ಎಂತಲೇ ಚಿರಪರಿಚಿತ. ಈ ಹಣ್ಣಿನ ವೈಜ್ಞಾನಿಕ ನಾಮಧೇಯ ಸೈಝಿಜಿಯಮ್ ಕ್ಯುಮಿನಿ(Syzygium cumini) ಮಿರ್ಟೇಸಿ ಕುಟುಂಬದ ಈ ಹಣ್ಣಿಗೆ ಜಾಂಬುಫಲ ಎಂತಲೂ ಹೆಸರಿದೆ. ಇಂಗ್ಲೀಷ್‌ನಲ್ಲಿ ಇದಕ್ಕೆ ಬ್ಲಾಕ್ ಪ್ಲಮ್ ಹಾಗೂ ಇಂಡಿಯನ್ ಬ್ಲಾಕ್‌ಬೆರಿ ಎಂದು ಸಹ ಕರೆಯುತ್ತಾರೆ. ಇದು ನಮ್ಮ ಭಾರತ ಮೂಲದ ಒಂದು ವಿಶಿಷ್ಟ ಕಾಡು ಹಣ್ಣು ಆಗಿದೆ. ಏಷ್ಯಾದ ಆಗ್ನೇಯ ಭಾಗದಲ್ಲೂ ಇದರ ಹೇರಳತೆ ಕಾಣಬಹುದು. ಮೊದ ಮೊದಲು ನಾವು ನೀವೆಲ್ಲಾ ಶಾಲೆಗೆ ಹೋಗುವಾಗ ಕೆರೆಕಟ್ಟೆ, ದೇವಸ್ಥಾನ, ಊರ ಹೊರಗಿನ ಬೀಳುಜಾಗಗಳಲ್ಲಿ ಅಡ್ಡಾಡಿ ಮರ ಹುಡುಕಿ ಇವುಗಳನ್ನು ಜೇಬು ತುಂಬಿಸಿಕೊಂಡು ಬರುತ್ತಿದ್ವು. ಹಾಗೇ ಈ ಮರಗಳು ಎಲ್ಲೆಂದರಲ್ಲಿ ಹುಲುಸಾಗಿ ಬೆಳೆಯುತ್ತಿದ್ದವು ಕೂಡ. ಮರಗಳ ಅಡಿಯಲ್ಲಿ ನಿಂತರೆ ಸಾಕು ಉದುರಿದ ಹಣ್ಣುಗಳು ಹತ್ತಾರು ಹುಡುಗರ ಬೊಗಸೆ ತುಂಬುತ್ತಿದ್ದವು. ಇಂತಹ ಹಣ್ಣುಗಳನ್ನು ಬುಟ್ಟಿ ತುಂಬಿ ಮಾರುವ ಮಹಿಳೆಯರು ಕೂಡ ಅಂದು ಶಾಲೆಗಳ ಮುಂದೆ ಕಾಣುತ್ತಿದ್ದರು. ಈಗಲೂ ಇದಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ತಿನ್ನುವವರ ಸಂಖ್ಯೆ ಹೆಚ್ಚಿದೆ. ಕಾರಣ ಬೇರೆ ಬೇರೆಯಾಗಿರಬಹುದು. ಅಷ್ಟರ ಮಟ್ಟಿಗೆ ಈ ಹಣ್ಣು ಎಲ್ಲ ಕಾಲಕ್ಕೂ ಚಿರಪರಿಚಿತ ಎನ್ನವಂತಾಗಿದೆ.

ನೇರಳೆ ಮರ ಒಂದು ಸಾಮಾನ್ಯವಾದ ಬೂದು ತೊಗಟೆಯುಳ್ಳ ಮರ. ಮಧ್ಯಮ ಗಾತ್ರದ ಈ ನಿತ್ಯ ಹರಿದ್ವರ್ಣದ ಮರ ಸುಮಾರು 35-40 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಉದ್ದನೆಯ ಚೂಪು ತುದಿಯ ಅಭಿಮುಖ ಪತ್ರ ರಚನೆಯ ವಿನ್ಯಾಸದ ಎಲೆಗಳು ನೀಳವಾಗಿರುತ್ತವೆ. ಇದು ಮಾರ್ಚ್-ಎಪ್ರೀಲ್‌ನಲ್ಲಿ ಬಿಳಿ ಬಣ್ಣದ ಸಣ್ಣ ಸಣ್ಣ ಹೂ ಬಿಟ್ಟು ಜೂನ್ ಅಷ್ಟೊತ್ತಿಗೆ ಹಣ್ಣು ಸುರಿಸಲು ಪ್ರಾರಂಭಿಸುತ್ತದೆ. ರಸ್ತೆಯ ಅಕ್ಕಪಕ್ಕ, ಉದ್ಯಾನ, ಊರ ಬೀಳುಜಾಗಗಳಲ್ಲಿ, ಹೊಲದ ಬದುಗಳಲ್ಲಿ ಸಮೃದ್ಧವಾಗಿ ಬೆಳೆಯುವ ಮರವಾಗಿದೆ. ಇದು ಯಾವ ಮಣ್ಣಿನಲ್ಲಾದರೂ ಸರಿ ಹುಲುಸಾಗಿ ಬೆಳೆಯುತ್ತದೆ. ಇದರ ಒಂದು ವೈಶಿಷ್ಟ್ಯ ಹಾಗೂ ಅನುಕೂಲಕರವಾದ ಸಂಗತಿಯೆಂದರೆ ಇದರ ಬೇರುಗಳಿಗಿರುವ ಸಾಮರ್ಥ್ಯ. ಈ ಮರದ ಬೇರುಗಳು ಮಣ್ಣಿನ ಆಂತರಿಕ ಸಂರಚನೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ. ಮರದ ಸುತ್ತಲಿನ ಮಣ್ಣಿನ ಕಣಗಳನ್ನು ಬಿಗಿದಿಹಿಡಿದು ಮಣ್ಣು ಸವಕಲಾ( erosion)ಗದಂತೆ ಸಂರಕ್ಷಿಸುತ್ತವೆ. ಹಾಗೇ ಹೆಚ್ಚಿನ ನೀರಿನಾಸರೆಯಿಲ್ಲದೇ ಬೆಳೆಯುವ ಇದು ಜೀವವೈವಿಧ್ಯವನ್ನು ಪೋಷಿಸುವ ವಿಶಿಷ್ಟ ಮರವಾಗಿ ಹೆಗ್ಗರುತು ಉಳಿಸಿದೆ. ಇದರ ಹಣ್ಣು-ಬೀಜ ಹುಡುಕಿ ಬರುವ ಹತ್ತಾರು ಪ್ರಬೇಧದ ಪಕ್ಷಿಗಳ, ಕೀಟಗಳ ಜೀವನಾಧಾರವಾಗಿದೆ. ಆ ಮೂಲಕ ಆ ಜೀವಿಗಳ ಪೋಷಣೆ, ಆಶ್ರಯ, ಸಂತಾನದ ವಿಚಾರಗಳಿಗೆ ಆದ್ಯತೆಯ ಮರವಾಗಿ ಗುರುತಿಸಲ್ಪಟ್ಟಿದೆ. ಪಕ್ಷಿ, ಕೀಟಗಳಿಂದ ಸುಲಭವಾಗಿ ಬೀಜ ಪ್ರಸಾರ ಕಾರ್ಯ ಜರುಗುವುದಲ್ಲದೇ ನೈಸರ್ಗಿಕ ಹಸಿರೀಕರಣಕ್ಕೆ ಇಂಬು ನೀಡುತ್ತದೆ. ವಿಶಾಲ ಹಸಿರು ನೀಳ ಎಲೆಗಳ ರಚನೆ ಚಾಮರದಂತೆ ಜೀವಿಗಳ ಸುರಕ್ಷಿತ ಆಶ್ರಯಕ್ಕೆ ಹೇಳಿ ಮಾಡಿಸಿದಂತಿವೆ. ಬೂದು ಬಣ್ಣದ ಗಟ್ಟಿಯಾದ ಕಾಂಡ ಭಾಗ ಬಹುಉಪಯೋಗಿಯಾಗಿದೆ. ಗೃಹೋಪಯೋಗಿ ಸಾಮಗ್ರಿಗಳು ಹಾಗೂ ಬೋಟ್‌ನ ಭಾಗಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಹೆಚ್ಚಾಗಿ ಛತ್ರ ಚಾಮರದಂತೆ ಕಂಗೊಳಿಸುವ ಈ ಮರ ದಣಿದ ಮನಸ್ಸಿಗೆ ನೆರಳು ನೀಡಿ ತಂಪೆರೆಯುತ್ತದೆ.

ನೇರಳೆ ಹಣ್ಣು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮಂಗ ಮತ್ತು ಮೊಸಳೆಯ ಪಂಚತಂತ್ರದ ಕಥೆ. ಈ ಕಥೆ ಕುರಿತು ಹೇಳುವುದೇನಿಲ್ಲ. ಆದರೆ ಸ್ವಾದಿಷ್ಟವಾದ, ರುಚಿಭರಿತ, ನೀಲ ವರ್ಣದ, ದುಂಡಾದ ಹಣ್ಣುಗಳನ್ನು ಗುಡ್ಡೆ ಹಾಕಿದ ಬುಟ್ಟಿಯಲ್ಲಿ ನೋಡುವುದೇ ಒಂದು ಆಕರ್ಷಣೆ. ಅಷ್ಟೇ ಅಲ್ಲ ಇಂತಹ ಹಣ್ಣುಗಳ ಹಿಂದೆ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕವಾದ ಉಪಯುಕ್ತತೆಯ ಹೆಗ್ಗಳಿಕೆ ಇದೆ. ಅಯೋಧ್ಯೆ ಶ್ರೀರಾಮನ ಮೈಬಣ್ಣ, ಆಕಾಶದಲ್ಲಿ ತೇಲುವ ಮೋಡಗಳ ಕಡು ನೀಲಿ ಬಣ್ಣ, ಜಂಬುಕೇಶ್ವರದ ಶಿವನ ದೇವಸ್ಥಾನದ ಹಿನ್ನಲೆ ಈ ಎಲ್ಲವನ್ನು ಗಮನಿಸಿದಾಗ ನೇರಳೆಯೊಂದಿಗೆ ಪಾರಂಪರಿಕ, ಕಲಾತ್ಮಕ ಹಾಗೂ ಭಾವನಾತ್ಮಕ ಸಂಬಂಧದ ನಂಟಿರುವುದು ಗೊತ್ತಾಗುತ್ತದೆ. ಆಯುರ್ವೇದದ ಪ್ರಕಾರ ಬಹು ಅಮೂಲ್ಯವಾದ ಔಷಧೀಯ ಗುಣಗಳಿಂದ ಈ ಹಣ್ಣು ಸಮೃದ್ಧವಾಗಿದೆ. ಜನ ಈ ಹಣ್ಣನ್ನು ಬಾಯಿ ಚಪ್ಪರಿಸಿ ತಿನ್ನಲು ಹೇಗೆ ಮುಗಿಬೀಳುವರೋ ಹಾಗೆ ಹಣ್ಣಿನೊಳಗಿನ ಒಗರು ರುಚಿಯ ಬೀಜವೂ ಆರೋಗ್ಯದ ದೃಷ್ಠಿಯಿಂದ ಮಹತ್ವದ್ದಾಗಿದೆ. 

ನೇರಳೆ ಹಣ್ಣು ಬೀಜಗಳು ಸಕ್ಕರೆ ಕಾಯಿಲೆ ಇರುವವರಿಗೆ ರಾಮಬಾಣದಂತೆ ಕಾರ್ಯ ಮಾಡುತ್ತವೆ. ಒಗರಾದ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೇ ಜೀರ್ಣಕ್ರಿಯೆ ಯನ್ನು ಉತ್ತೇಜಿಸಿ ಹಸಿವು ಸುಲಭವಾಗಿಸುತ್ತವೆ. ಈ ಹಣ್ಣಿನ ಶರಬತ್ತು ಮಾಡಿ ಕುಡಿಯುವುದೂ ಇದೆ. ಇದರ ಪ್ರತಿ ಉತ್ಕರ್ಷಕ ಗುಣಗಳಿಂದಾಗಿ ವೈದ್ಯಕೀಯವಾಗಿ ಬಹು ಮನ್ನಣೆಗೆ ಒಳಗಾಗಿದೆ. ಚರ್ಮದ ಆರೈಕೆ, ಸುರಕ್ಷತೆ ಹಾಗೂ ಚಿಕಿತ್ಸೆಗೆ ಇದು ಪರಿಣಾಮಕಾರಿಯಾಗಿದೆ. ವೈದ್ಯರ ಸಲಹೆ ಮಾರ್ಗದರ್ಶನದಲ್ಲಿ ಮನೆ ಮದ್ದಾಗಿ ನೇರಳೆ ಬಳಸಿದಲ್ಲಿ ಸಾಕಷ್ಟು ಅನುಕೂಲ ಪಡೆಯಬಹುದು.

ಇಷ್ಟೆಲ್ಲದರ ನಡುವೆ ಸರ್ವ ಸಮೃದ್ಧ ಹಾಗೂ ಪಾರಿಸರಿಕ ಮಹತ್ವದ ನೇರಳೆ ಮರ ಪರಿಸರದ ಸಮತೋಲನ ಕಾಯುವಲ್ಲಿ, ಜೀವವೈವಿಧ್ಯವನ್ನು ಉಳಿಸುವಲ್ಲಿ, ಮಾನವ ಆರೋಗ್ಯದ ಹಿತದೃಷ್ಠಿಯಲ್ಲಿ ಅತ್ಯಂತ ಬೆಲೆ ಬಾಳುವಂತಿದೆ. ಇಂತಹ ಮರವನ್ನು ಹಣ್ಣುಗಾಗಿ ಮಾತ್ರವಲ್ಲದೇ ಸರ್ವರ ಹಿತಕ್ಕಾಗಿ ನಮ್ಮ ನಿಮ್ಮ ಮನೆಯ ಸುತ್ತ, ಹಿತ್ತಲು, ಹೊಲಗದ್ದೆಗಳಲ್ಲಿ ಬೆಳೆಸಬಹುದಲ್ಲವೇ ?

 ಆಕರಗಳು ;

1 ಜಾಮೂನ್- ಆನಂದವನ ಫೌಂಡೇಷನ್ 

2 ಕಲರವ ಬ್ಲಾಗ್ 

3 ಜಾಲತಾಣ