ಘಟ್ಟಗಳ ವೈಭವ ಇನ್ನೆಲ್ಲಿ???!
ಪಶ್ಚಿಮ ಘಟ್ಟ - ಆಂಗ್ಲರಿಂದ ನಾಮಕರಣಗೊಂಡ ಬೆಟ್ಟ. ಇದರೊಡಲಿನ ಕಣಿವೆ, ನದಿ, ಭೋರ್ಗರೆಯುವ ಜಲಪಾತ, ಮುಗಿಲೆತ್ತರಕ್ಕೆ ಬೆಳೆದ ನಿತ್ಯ ಹರಿದ್ವರ್ಣ ಕಾಡು, ಗಾಳಿಯ ಹೊಡೆತಕ್ಕೆ ಸಿಕ್ಕ ಗಿಡ-ಮರಗಳನ್ನು ಕಳೆದುಕೊಂಡ ಗುಡ್ಡಗಳು, ಗಾಳಿಗೆ ತೊನೆಯುವ ಹುಲ್ಲು, ಅಸಂಖ್ಯಾತ ಪ್ರಾಣಿಗಳನ್ನು .... ಹೀಗೆ ತನ್ನೊಡಲಲ್ಲಿ ಎಲ್ಲವನ್ನೂ ಸಲಹುತ್ತಿರುವ ಸಹ್ಯಾದ್ರಿಯ ಸೊಬಗು ಸಾಟಿ ಇಲ್ಲದ್ದು. ಸಹ್ಯಾದ್ರಿ ಎಂದು ಉಚ್ಚರಿಸಲು ಕಷ್ಟವಾಗಿ ಬ್ರಿಟಿಷರು, ಭಾರತದ ಪಶ್ಚಿಮದ ಭಾಗಕ್ಕಿರುವ ಘಟ್ಟವನ್ನು ವೆಸ್ಟರ್ನ್ ಘಾಟ್ ಎಂದೂ, ಪೂರ್ವಕ್ಕಿರುವ ಬೆಟ್ಟಗಳ ಶ್ರೇಣಿಯನ್ನು ಈಸ್ಟರ್ನ್ ಘಾಟ್ ಅಂದರೆ ಪೂರ್ವ ಘಟ್ಟಗಳೆಂತಲೂ ನಾಮಕರಣ ಮಾಡಿಬಿಟ್ಟರು. ಪೂರ್ವ ಘಟ್ಟಕ್ಕಿಂತಲೂ ಜೀವವೈವಿಧ್ಯತೆಯಲ್ಲಿ ಮಿಗಿಲಾದುದು ನಮ್ಮ ಸಹ್ಯಾದ್ರಿಯೇ. ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕು ಎನಿಸುವ ತಾಣ ಅದು ಮಲೆನಾಡು. ನಮ್ಮ ರಾಜ್ಯದಲ್ಲಿ, ಮೈಸೂರಿನಿಂದ ಬೆಳಗಾವಿ ಜಿಲ್ಲೆಯವರೆಗೂ, ಭಾರತದಲ್ಲಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸ್ವಾಮಿತೊಪ್ಪೆಯಿಂದ ಗುಜರಾತಿನ ತಪತಿ ನದಿಯವರೆಗೆ ಸುಮಾರು 1600 ಕಿ.ಮೀ ಉದ್ದವಿದೆ. ಆರು ರಾಜ್ಯಗಳಲ್ಲಿ ಅಂದರೆ ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಇದು ಹರಡಿಕೊಂಡಿದೆ.
ಸಸ್ಯಗಳಲ್ಲಿಯೂ ವೈವಿಧ್ಯತೆಗೆ ಹೆಸರಾಗಿರುವ ಸಹ್ಯಾದ್ರಿ ತನ್ನೊಡಲಲ್ಲಿ ಸಾವಿರಾರು ಪ್ರಭೇದಗಳ ಸಸ್ಯಸಂಪತ್ತನ್ನು ಹೊಂದಿದ್ದು, ನೂರಾರು ಬಗೆಯ ಆರ್ಕಿಡ್, ಜರಿಸಸ್ಯಗಳು, ನಿತ್ಯ ಹರಿದ್ವರ್ಣ ಮರಗಳು ಹೇರಳವಾಗಿವೆ. ಅವುಗಳಲ್ಲಿ ‘ಎಣ್ಣೆಮರ’ ಎಂದು ಕರೆಯುವ ಕಿಂಗಿಯೋಡೆಂಡ್ರಾನ್ ಪಿನ್ನಾಟಮ್ ಮತ್ತು ವಾಟೇರಿಯಾ ಇಂಡಿಕಾ, ಹತ್ತಿಮರ ಎಂದು ಕರೆಯಲ್ಪಡುವ ಬೊಂಬ್ಯಾಕ್ಸ್ ಸಿಬಿಯ, ಜಾಯಿಕಾಯಿ ಎಂದು ಕರೆಯುವ ಮಿರಿಸ್ಟಿಕಾ ಮಲಬಾರಿಕಾ, ಜುರಾಸಿಕ್ ಕಾಲದ ವಾಟೇರಿಯಾ ಇಂಡಿಕಾ, ವಲಿಯ, ಕರಕೊಂಗು ಎಂದು ಕರೆಯಲ್ಪಡುವ ಹೋಪಿಯ ಎರೋಸಾ ಮುಖ್ಯವಾದವುಗಳು.
ನೆಲಗಪ್ಪೆ ಮತ್ತು ಮರಗಪ್ಪೆಗಳು, ಕಾಳಿಂಗ ಸರ್ಪಗಳಿಂದ ಆರಂಭಿಸಿ ಅತ್ಯಂತ ಸಣ್ಣ ಕುರುಡು ಹಾವಿನವರೆಗೆ ಇರುವ ಮಲಬಾರ್ ಪಿಟ್ ವೈಪರ್, ಹಂಪ್ ನೋಸ್ಡ್ ವೈಪರ್, ಹಾರುವ ಹಾವುಗಳಿವೆ. ಹಾರುವ ಅಳಿಲು, ಹಾರುವ ಕಪ್ಪೆ, ಹಾರುವ ಹಲ್ಲಿ, ಸಿಂಹ ಬಾಲದ ಸಿಂಗಳೀಕ, ನೀಲಗಿರಿ ಥಾರ್, ನೀಲಗಿರಿ ಮಾರ್ಟೆನ್, ಕೆಂದಳಿಲು, ಏಷ್ಯದ ಆನೆ, ಹುಲಿ ಇಂತಹವುಗಳ ಜೊತೆಗೆ ಬೆಳಕಿಗೆ ಬಾರದ ಅದೆಷ್ಟೋ ಪ್ರಾಣಿಗಳು ಇಲ್ಲಿವೆ. ಪಕ್ಷಿಗಳಲ್ಲಿ ಮಲಬಾರ್ ಗ್ರೇ ಹಾರ್ನ್‌ಬಿಲ್, ನೀಲಗಿರಿ ವುಡ್ ಪಿಜನ್, ಎಮರಾಲ್ಡ್ ಪಿಜನ್, ಬ್ಲಾಕ್ ನೇಪ್ಡ್ ಮೊನಾರ್ಕ್, ಗ್ರೇ ಹೆಡೆಡ್ ಥ್ರಷ್, ಕಪ್ಪೆ ಬಾಯಿ (Frogmouth), ವೈಟ್ ಬೆಲ್ಲಿಡ್ ಟ್ರೀ ಪೈ, ವೈನಾಡ್ ಲಾಫಿಂಗ್ ಥ್ರಷ್, ವಿಸ್ಲಿಂಗ್ ಥ್ರಷ್ ಹೀಗೆ ಪಟ್ಟಿ ಬೆಳೆಯುತ್ತದೆ.
ಸಂರಕ್ಷಿತ ಪ್ರದೇಶಗಳು
ನೀಲಗಿರಿ ಮಾರ್ಟೆನ್
ನಾಳೆಯ ಭೀಕರ ಕಲ್ಪನೆ:
ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟಗಳನ್ನು ಕೊರೆಯುವ ರಸ್ತೆಗಳು, ರೈಲು ಮಾರ್ಗಗಳು ಮತ್ತು ಅರಣ್ಯದ ನಡುವೆ ತಲೆಯೆತ್ತುತ್ತಿರುವ ಹೋಂ ಸ್ಟೇಗಳು ಕಾಡಿನ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ನೀಡುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ, ನೂರು ವರ್ಷಗಳ ನಂತರ ನಮಗೆ ಸಿಗುವುದು:
ಬೋಳಾದ ಪರ್ವತಗಳು ಮತ್ತು ಒಣಗಿದ ನದಿ ಪಾತ್ರಗಳು.
ಕಾಫಿ-ಟೀ ತೋಟಗಳ ನಡುವೆ ಕಣ್ಮರೆಯಾಗುವ ಕಾಡುಗಳು.
ಪ್ರಾಣಿಗಳು ಕಾಡಿನ ಬದಲು ಮೃಗಾಲಯದ ಪಂಜರಗಳಲ್ಲಿ ಮಾತ್ರ ಉಳಿಯಬಹುದು.
ಎಲ್ಲಕ್ಕಿಂತ ಭೀಕರವಾಗಿ, ಶುದ್ಧ ಗಾಳಿಗಾಗಿ ಶ್ರೀಮಂತರು ಆಕ್ಸಿಜನ್ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ತಿರುಗುವ ಕಾಲ ದೂರವಿಲ್ಲ!

No comments:
Post a Comment