ಕೇಂದ್ರೀಕೃತ ಸೂಕ್ಷ್ಮ ಅವಲೋಕನ, ಗ್ರಹಿಕೆ ಮತ್ತು ವೈಜ್ಞಾನಿಕ ಮನೋಭಾವ
ಲೇಖನ : ಡಾ. ಚಂದ್ರಪ್ಪ ಎಚ್
ಸಹಾಯಕ ಪ್ರಾಧ್ಯಾಪಕರು,
ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು,
ಚಿತ್ರದುರ್ಗ – 577 501
ಸುಪ್ರಸಿದ್ಧ ಪ್ರಾಚೀನ ಗ್ರೀಕ್ ತತ್ವಜ್ಞಾನಿ ಪ್ಲೇಟೋ (ಕ್ರಿ.ಪೂ. 424–348) ಹೀಗೆ ಹೇಳಿದ್ದಾರೆ: “ಸೂಕ್ಷ್ಮ ಗ್ರಹಿಕೆಯೇ ವಿಜ್ಞಾನ.”
ನಮ್ಮಲ್ಲಿ ವಿಜ್ಞಾನ, ಆಚರಣೆ, ನಂಬಿಕೆ ಮತ್ತು ಮೂಢನಂಬಿಕೆಗಳು ಪರಸ್ಪರ ವಿಭಿನ್ನವೆಂಬ ಅರಿವು ಬಹುತೇಕ ಜನರಲ್ಲಿ ಸ್ಪಷ್ಟವಾಗಿಲ್ಲ. ಇದರ ಪರಿಣಾಮವಾಗಿ, ವೈವಿಧ್ಯಮಯ ಆಚಾರ–ವಿಚಾರಗಳ ಮತ್ತು ಅನೇಕ ನಂಬಿಕೆಗಳ ದೇಶವಾದ ಭಾರತದಲ್ಲಿ ವಿಜ್ಞಾನದ ಮಹತ್ವವು ಶತಮಾನಗಳಿಂದಲೂ ಈ ಮರೆಮಾಚಿದ ಕಲ್ಪನೆಗಳ ನಡುವೆಯೇ ಸಿಲುಕಿಕೊಂಡಿದೆ.
ಒಂದು ಜೀವಿ ತನ್ನ ಪರಿಸರ ವ್ಯವಸ್ಥೆಗೆ ಹೊಂದಿಕೊಂಡಾಗ ಮಾತ್ರ ಬದುಕಲು ಸಾಧ್ಯ. ಆರಂಭದಲ್ಲಿ ಮುಗ್ಧ ಅನುಭವಗಳ ಆಧಾರದ ಮೇಲೆ ಜ್ಞಾನೋದಯ ಶುರುವಾಗುತ್ತದೆ. ಕಾಲಕ್ರಮೇಣ ಜ್ಞಾನ ವಿಸ್ತರಿಸಿದಂತೆ ಸಾಮಾನ್ಯ ತಿಳುವಳಿಕೆ ಮೊಳೆದು ಬರುವುದು. ಇದೇ ಮನಃಶಕ್ತಿಯ ಹಾಗೂ ಬೌದ್ಧಿಕತೆಯ ವಿಕಾಸದ ಮೊದಲ ಹೆಜ್ಜೆ.
ಪರಿಸರದಲ್ಲಿ ತಕ್ಷಣಕ್ಕೆ ಅರ್ಥವಾಗದ, ರಹಸ್ಯ–ಅಗೋಚರತೆ ತುಂಬಿರುವ ಹಲವು ವಿದ್ಯಮಾನಗಳು ನಡೆಯುತ್ತವೆ. ವಿಶ್ವವೇ ಸ್ವತಃ ಕೌತುಕ, ತವಕ, ಕುತೂಹಲ ಮತ್ತು ಆಶ್ಚರ್ಯದ ಅಗಾಧ ಶಕ್ತಿಸಾಗರ. ‘ಬಿಗ್ ಬ್ಯಾಂಗ್ ಸಿದ್ಧಾಂತ’ ಪ್ರಕಾರ ವಿಶ್ವದ ಉದ್ಭವವು ಅತ್ಯಂತ ಸಾಂದ್ರ, ದಟ್ಟ ಧೂಳಿನ ಅವಿಭಕ್ತ ಕಣದ ಮಹಾಸ್ಫೋಟದಿಂದ. 1964ರಲ್ಲಿ ರೇಡಿಯೋ ಖಗೋಳ ವಿಜ್ಞಾನಿಗಳಾದ ರಾಬರ್ಟ್ ವಿಲ್ಸನ್ ಮತ್ತು ಅರ್ನೋ ಪೆಂಜಿಯಾಸ್ ನ್ಯೂ ಜೆರ್ಸಿಯಲ್ಲಿನ ‘ಹಾರ್ನ್ ಮಾದೆಲ್ ಆಂಟೆನಾ’ ಸುಧಾರಣೆ ಕಾರ್ಯದಲ್ಲಿ ಕಂಡುಕೊಂಡ ಅತಿಸೂಕ್ಷ್ಮ ಶಬ್ದ ತರಂಗಗಳು ಈ ಸಿದ್ಧಾಂತಕ್ಕೆ ಮೊದಲ ಪ್ರಾಯೋಗಿಕ ಸಾಕ್ಷಿಗಳಾದವು.
ಸರ್ ಐಸಾಕ್ ನ್ಯೂಟನ್ ಹೇಳಿದ್ದಾರೆ:
“ತಿಳಿದಿರುವುದು ಹನಿ ನೀರಿನಷ್ಟು; ತಿಳಿಯದಿರುವುದು ಸಾಗರದಷ್ಟು.”
ಅತಿಸೂಕ್ಷ್ಮದಿಂದ ಹಿಡಿದು ಅತ್ಯಂತ ಜಟಿಲ ಘಟನೆಗಳವರೆಗೆ ಎಲ್ಲವೂ ಜೀವನಪಾಠಗಳನ್ನು ನೀಡುತ್ತವೆ. ಬಿಡದೆ ಗಮನಿಸಿದಂತೆ, ಕುತೂಹಲ ಹೆಚ್ಚುತ್ತದೆ, ಸಂವೇದನೆ ಚುರುಕಾಗುತ್ತದೆ. ಕ್ರಮೇಣ ರಹಸ್ಯ ಭೇದಿಸುವ ಚಿಂತನೆ ಗಟ್ಟಿಯಾಗುತ್ತಾ ವೈಜ್ಞಾನಿಕ ಮನೋಭಾವ ಬಲವಾಗುತ್ತದೆ.
ಪರಿಸರದಲ್ಲಿನ ಪ್ರತಿಯೊಂದು ವಿದ್ಯಮಾನವೂ ಮತ್ತೊಂದು ಪ್ರಚೋದನೆಯ ಪ್ರತಿಕ್ರಿಯೆ—ಇದನ್ನೇ ನ್ಯೂಟನ್ನನ ಮೂರನೇ ನಿಯಮ ವಿವರಿಸುತ್ತದೆ.
ನಮಗೆ ಸುತ್ತಮುತ್ತ ನಡೆಯುವ ಘಟನಾವಳಿಗಳ ಬಗ್ಗೆ ಒಳನೋಟ, ಅವಲೋಕನ ಮತ್ತು ದೂರದೃಷ್ಟಿ ಅಗತ್ಯ. ಸಸ್ಯಗಳ ದ್ಯುತಿ ಸಂಶ್ಲೇಷಣೆ, ಗ್ರಹಗಳ ಚಲನೆ, ಸೂರ್ಯೋದಯ–ಸೂರ್ಯಾಸ್ತ, ಅಮವಾಸ್ಯೆ–ಹುಣ್ಣಿಮೆ, ಧೂಮಕೇತುಗಳ ಪಥ, ಗುರುತ್ವಬಲ ಇವುಗಳೆಲ್ಲಾ ಪ್ರಕೃತಿಯ ನಿಯಮಿತತೆ ಮತ್ತು ವೈಜ್ಞಾನಿಕತೆಯ ನಿದರ್ಶನಗಳು.
ವಿಜ್ಞಾನ ಎಂದರೆ ಪವಾಡ, ಮೂಢಾಚರಣೆ ಎಂಬುದಲ್ಲ; ಅದು ಅನುಭವ, ಪರಿಶೀಲನೆ ಮತ್ತು ಕಾರಣ–ಕಾರ್ಯ ಸಂಬಂಧಕ್ಕೆ ಆಧಾರವಾದ ಜ್ಞಾನ.
“ಕಟ್ಟಿಟ್ಟ ಜ್ಞಾನ ಕೊಳೆಯುತ್ತದೆ; ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ.”
ವೈಜ್ಞಾನಿಕ ವಿಚಾರಶಕ್ತಿ ಬೆಳೆಯಲು—
• ಕುತೂಹಲ
• ಸೂಕ್ಷ್ಮ ಗಮನ
• ಏಕಾಗ್ರತೆ
• ಅವಲೋಕನ
• ಪ್ರಶ್ನಿಸುವ ಅಭ್ಯಾಸ
• ಉತ್ತರ ಹುಡುಕುವ ಜಿಡ್ಡು
ಇವೆಲ್ಲವೂ ಬೆರೆತು ಬರಬೇಕು. ಜೊತೆಗೆ ಪೂರಕ ವಾತಾವರಣವೂ ಅವಶ್ಯ.
ಪ್ಲೇಟೋ ಹೇಳಿದಂತೆ: “ಅವಶ್ಯಕತೆಯೇ ಆವಿಷ್ಕಾರದ ತಾಯಿ.”
ಬಾಲ್ಯದಲ್ಲೇ ಸರಳ ಮಾದರಿಗಳು, ಪ್ರಯೋಗಗಳು, ವಿಜ್ಞಾನಿಗಳ ಜೀವನ, ಆಟಿಕೆಗಳು, ಕ್ರಿಯಾಶೀಲ ಚಟುವಟಿಕೆಗಳ ಮೂಲಕ ವಿಜ್ಞಾನದ ಮೂಲಭೂತ ಅಂಶಗಳನ್ನು ಪರಿಚಯಿಸಿದರೆ ಉತ್ತಮ ವೈಜ್ಞಾನಿಕ ಮನೋವಿಕಾಸ ಸಾಧ್ಯ. ದಿನನಿತ್ಯದ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸುವುದರಿಂದ ಆತ್ಮವಿಶ್ವಾಸ–ಧೈರ್ಯ–ಪರಿಸರ ಅರಿವು ಬೆಳೆಯುತ್ತದೆ. ಮಕ್ಕಳ ಗ್ರಹಿಕಾಶಕ್ತಿ ಅನುಗುಣವಾಗಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕು.
ಪುರಾತನ ವಿಜ್ಞಾನಿಗಳು ಸಹಜವಾಗಿ ಸಂಭವಿಸುವ ವಿದ್ಯಮಾನಗಳನ್ನು ಬರಿಗಣ್ಣಿನಿಂದಲೇ ವೀಕ್ಷಿಸಿ, ಪರೀಕ್ಷಿಸಿ, ಅವಲೋಕಿಸಿ ಜ್ಞಾನ ಸಂಗ್ರಹಿಸಿದ್ದರು. ಇಂದೋ ಯಂತ್ರಗಳಿಂದ ಕ್ಲಿಷ್ಟಕರ ವಿದ್ಯಮಾನಗಳನ್ನೂ ನಿಖರವಾಗಿ ಅರಿಯುವ ಅವಕಾಶ ನಮ್ಮ ಕೈಯಲ್ಲಿದೆ. ವಿಜ್ಞಾನ ಹೊಸದನ್ನು ಕಂಡುಹಿಡಿಯುವುದಕ್ಕಷ್ಟೇ ಅಲ್ಲ—ಉತ್ತಮ, ಶಿಸ್ತುಬದ್ಧ, ಆರೋಗ್ಯಪೂರ್ಣ ಜೀವನ ನಿರ್ಮಾಣಕ್ಕೂ ಅದು ಅಗತ್ಯ.
ಇಂದಿನ ಯುವಪೀಳಿಗೆಯಲ್ಲಿ ಮನರಂಜನೆಯ ಅತಿರೇಕ, ಅಸ್ಥವ್ಯಸ್ಥ ಚಿಂತನೆ ಮತ್ತು ವಾಣಿಜ್ಯೀಕೃತ ಮಾಧ್ಯಮಗಳ ಅತಿಯಾದ ಪ್ರಭಾವದಿಂದ ವೈಜ್ಞಾನಿಕ ಮನೋವಿಕಾಸ ಕುಗ್ಗುತ್ತಿರುವುದು ಚಿಂತಾಜನಕ. ವೈಜ್ಞಾನಿಕ ಚಿಂತನೆಯ ಅಗತ್ಯ ಇಂದಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಯುನೆಸ್ಕೊ 2001ರಲ್ಲಿ ನವೆಂಬರ್ 10ರನ್ನು **‘ಅಂತರರಾಷ್ಟ್ರೀಯ ವಿಜ್ಞಾನ ದಿನ’**ವೆಂದು ಘೋಷಿಸಿತು. ಭಾರತದಲ್ಲಿ ಪ್ರತೀ ಫೆಬ್ರವರಿ 28ರಂದು ಸರ್ ಸಿ.ವಿ. ರಾಮನ್ ಅವರ ‘ರಾಮನ್ ಪರಿಣಾಮ’ವನ್ನು ಸ್ಮರಿಸಿ ‘ರಾಷ್ಟ್ರೀಯ ವಿಜ್ಞಾನ ದಿನ’ ಆಚರಿಸಲಾಗುತ್ತದೆ.
ಆಚರಣೆಗಳಿಗೆ ಮಾತ್ರ ಸೀಮಿತವಾಗದೆ ವಿಜ್ಞಾನ ಚಿಂತನೆ ಪ್ರತಿಯೊಬ್ಬರಲ್ಲೂ ಬೆಳೆದಾಗ ಮಾತ್ರ ಈ ಜಗತ್ತಿನ ಭವಿಷ್ಯ ಸಮತೋಲಿತವಾಗಿರುತ್ತದೆ.
ಪರಿಸರ ಸಂರಕ್ಷಣೆ, ಜಾಗೃತ ಚಿಂತನೆ ಮತ್ತು ವೈಜ್ಞಾನಿಕ ಜ್ಞಾನ—ಇವೆಲ್ಲವೂ ಭೂ ರಕ್ಷಣೆಗೆ ಅತ್ಯಂತ ಅವಶ್ಯಕ.

No comments:
Post a Comment