ಕತ್ತಲಲ್ಲಿ ಅರಳಿದ ಜ್ಞಾನದ ಕುಸುಮ
ಬಿಭ ಚೌಧರಿ: ಭೌತವಿಜ್ಞಾನದ ಅಗೋಚರ ಧ್ರುವತಾರೆ
ಲೇಖನ : ರಾಮಚಂದ್ರ ಭಟ್ ಬಿ.ಜಿ
2019 ರಲ್ಲಿ, ಅಂತರಾಷ್ಟ್ರೀಯ ಖಗೋಳ ಒಕ್ಕೂಟವು (IAU) 'ಲಿಯೋ'
ನಕ್ಷತ್ರಪುಂಜದ
”HD 86081” ಎಂಬ ನಕ್ಷತ್ರಕ್ಕೆ “ವಿಭಾ(Vibha)” ಎಂದು ಹೆಸರಿಟ್ಟಿತು.
ಸಂಸ್ಕೃತದಲ್ಲಿ 'ವಿಭಾ' ಎಂದರೆ 'ಬೆಳಕಿನ ಕಿರಣ' ಎಂದರ್ಥ. ದಶಕಗಳ ಕಾಲ ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದ ಭಾರತದ
ಶ್ರೇಷ್ಠ ವಿಜ್ಞಾನಿ ಡಾ. ಬಿಭ ಚೌಧರಿ ಅವರಿಗೆ ಸಂದ ಜಾಗತಿಕ ಗೌರವವಿದು. ಇತ್ತೀಚೆಗೆ ಕ್ಯೂರಿಯಾಸಿಟಿ ಪಠ್ಯ ಪುಸ್ತಕದ ಭಾಷಾಂತರದ ಪರಿಶೀಲನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗ ಈ ಹೆಸರು ಗಮನ ಸೆಳೆಯಿತು. ಓಹ್!! ಇಷ್ಟು ದೊಡ್ಡ ಭಾರತೀಯ ವಿಜ್ಞಾನಿಯ
ಬಗ್ಗೆ ನಮಗೆ ತಿಳಿದಿಲ್ಲವಲ್ಲ ಎಂಬ ವಿಶಾದವೂ ಮನದಲ್ಲಿ ಮೂಡಿತು. ನೀವೂ ಹಾಗೇ ಅಂದುಕೊಂಡ್ರಾ? ಇವರು ಯಾರು ? ಇವರ
ಸಾಧನೆಗಳೇನು ಎಂಬ ಕುತೂಹಲವೇ?
ಆರಂಭಿಕ ಜೀವನ ಮತ್ತು ಸಾಮಾಜಿಕ ಸವಾಲುಗಳು
ಅದು ಇಪ್ಪತ್ತನೇ ಶತಮಾನದ ಆರಂಭದ ಕಾಲ.
ಭಾರತವು ಬ್ರಿಟಿಷರ ಆಡಳಿತದ ಅಡಿಯಲ್ಲಿ ತನ್ನ ಅಸ್ಮಿತೆಗಾಗಿ ಹೋರಾಡುತ್ತಿದ್ದ ಕಾಲವದು. ಭಾರತೀಯರಿಗೆ
ಶಿಕ್ಷಣ ಗಗನ ಕುಸುಮ ಅದರಲ್ಲೂ ಹೆಣ್ಣುಮಕ್ಕಳು ಶಿಕ್ಷಣದ ಕನಸನ್ನೂ ಕಾಣಲು ಸಾಧ್ಯವಿಲ್ಲದ
ದಿನಗಳವು. ಅದರಲ್ಲೂ ವಿಜ್ಞಾನವೆಂದರೆ ಕೇವಲ ಪುರುಷರ ಸ್ವತ್ತು ಎಂದು ನಂಬಿತ್ತು
ಅಂದಿನ ಸಮಾಜ. ಅಂತಹ ಕಾಲದಲ್ಲಿ ಕಲ್ಕತ್ತಾದ ಮನೆಯೊಂದರಲ್ಲಿ ಹುಟ್ಟಿದ ಬಾಲೆ ಹಿಡಿದದ್ದು ಭೌತವಿಜ್ಞಾನದ
ಪುಸ್ತಕಗಳನ್ನು!!!. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು
ಮಾಡಿದ್ದಷ್ಟೇ ಅಲ್ಲದೆ ನೋಬಲ್ ಪ್ರಶಸ್ತಿಗೇ ನಾಮನಿರ್ದೇಶನಗೊಳ್ಳುವ ಮಟ್ಟಕ್ಕೆ ಬೆಳೆದ ಆ ಬಾಲೆಯೇ
ಬಿಭಾ ಚೌಧರಿ ಬಿಭಾ ಚೌಧುರಿ.
ಬಿಭ ಚೌಧರಿ ಅವರು ಜುಲೈ
3, 1913 ರಂದು ಕೋಲ್ಕತ್ತಾದಲ್ಲಿ
ಜನಿಸಿದರು. ಅವರ ತಂದೆ ಬಂಕು ಬಿಹಾರಿ
ಚೌಧುರಿ ವೈದ್ಯರಾಗಿದ್ದರು. ವಿಭಾ ಅವರು ಕಲ್ಕತ್ತಾ
ವಿಶ್ವವಿದ್ಯಾಲಯದ ರಾಜಬಜಾರ್ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿ ೧೯೩೬
ರಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿದ ಏಕೈಕ ಮಹಿಳೆ ಎನಿಸಿಕೊಂಡರು.
ಅವರು ೧೯೩೯ರಲ್ಲಿ ಬೋಸ್ ಸಂಸ್ಥೆಗೆ ಸೇರಿದರು ಮತ್ತು ದೇಬೇಂದ್ರ ಮೋಹನ್ ಬೋಸ್ ಅವರೊಂದಿಗೆ ಕೆಲಸ ಮಾಡಿದರು. ನಂತರ ಅವರು ಕಲ್ಕತ್ತಾ
ವಿಶ್ವವಿದ್ಯಾಲಯದಲ್ಲಿ ವಿಶ್ವವಿಖ್ಯಾತ ವಿಜ್ಞಾನಿ ಮೇಘನಾದ್ ಸಹಾ ಅವರ ಮಾರ್ಗದರ್ಶನದಲ್ಲಿ ಬೆಳೆದರು. ಬೋಸ್ ಇನ್‌ಸ್ಟಿಟ್ಯೂಟ್‌ನಲ್ಲಿ
ಉನ್ನತ ಶಕ್ತಿಯ ಕಣ ಭೌತಶಾಸ್ತ್ರದಲ್ಲಿ (High
Energy Particle Physics) ಸಂಶೋಧನೆ ನಡೆಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ
ಪಾತ್ರರಾದರು.
ಪೈ ಮೆಸಾನ್- ಆವಿಷ್ಕಾರ ಮತ್ತು ನೊಬೆಲ್ ನಾಮನಿರ್ದೇಶನ
1940ರ ದಶಕದಲ್ಲಿ ಬಿಭ ಅವರು
ಪ್ರೊಫೆಸರ್ ಡಿ.ಎಂ. ಬೋಸ್ ಅವರೊಂದಿಗೆ ಸೇರಿ ಡಾರ್ಜಿಲಿಂಗ್‌ನ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ
ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಸಂಶೋಧನೆ ನಡೆಸಿದರು.
ಸ್ವದೇಶಿ ತಂತ್ರಜ್ಞಾನ: ಅತ್ಯಾಧುನಿಕ ಪ್ರಯೋಗಾಲಯಗಳಿಲ್ಲದ ಆ ಕಾಲದಲ್ಲಿ, ಅವರು ತಾವೇ ವಿನ್ಯಾಸಗೊಳಿಸಿದ 'ಕ್ಲೌಡ್ ಛೇಂಬರ್' ಮತ್ತು ಫೋಟೋಗ್ರಾಫಿಕ್
ಪ್ಲೇಟ್‌ಗಳನ್ನು ಬಳಸಿ ಕಾಸ್ಮಿಕ್ ಕಿರಣಗಳನ್ನು (Cosmic
Rays) ಅಭ್ಯಸಿಸಿದರು. ಅದು ಅಪ್ಪಟ 'ಜುಗಾಡ್' (Jugaad) ಅಥವಾ ದೇಶೀಯ ತಂತ್ರಜ್ಞಾನದ
ಅದ್ಭುತವಾಗಿತ್ತು. ಆ ಶೀತಗಾಳಿಯಲ್ಲಿ, ಸರಿಯಾದ ರಸ್ತೆಗಳಿಲ್ಲದ ಬೆಟ್ಟದ
ಮೇಲೆ ಕುಳಿತು ಅವರು ಸಂಗ್ರಹಿಸಿದ ದತ್ತಾಂಶಗಳು ಜಗತ್ತಿಗೆ ಹೊಸ ವಿಷಯವೊಂದನ್ನು ಸಾರಿದವು: ಅದೇ ಮೆಸಾನ್ (Meson) ಕಣಗಳ ಇರುವಿಕೆ. ಎಲೆಕ್ಟ್ರಾನ್‌ಗಿಂತ ಭಾರವಾದ, ಪ್ರೋಟಾನ್‌ಗಿಂತ
ಹಗುರವಾದ ಈ ಕಣಗಳ ಪತ್ತೆಯು ಭೌತವಿಜ್ಞಾನದ ದಿಕ್ಕನ್ನೇ ಬದಲಿಸಿತು. ಕ್ವಾಂಟಮ್ ಮೆಕ್ಯಾನಿಕ್ಸ್‌ನ ಪಿತಾಮಹ ಎನಿಸಿದ ಎರ್ವಿನ್
ಶ್ರೋಡಿಂಜರ್ ಅವರು ಬಿಭ ಅವರ
ಕಾರ್ಯವನ್ನು ಗುರುತಿಸಿ, 1950 ರಲ್ಲಿ ಅವರನ್ನು ನೊಬೆಲ್
ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದರು. ಆದರೆ,
ಅಂದಿನ
ಜಾಗತಿಕ ರಾಜಕೀಯ ಕಾರಣಗಳಿಂದ ಅವರಿಗೆ ಪ್ರಶಸ್ತಿ ಲಭಿಸಲಿಲ್ಲ.
ವಿದೇಶದ ವೈಭವಕ್ಕಿಂತ ದೇಶದ ಸೇವೆಯೇ ಮಿಗಿಲು
ಬಿಭ ಅವರು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ವಿಜೇತ ಪ್ಯಾಟ್ರಿಕ್
ಬ್ಲ್ಯಾಕೆಟ್ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪೂರೈಸಿದರು. ವಿದೇಶದಲ್ಲಿ ನೆಲೆಸಿ ಹಣ, ಹೆಸರು ಗಳಿಸುವ ಎಲ್ಲ ಅವಕಾಶಗಳಿದ್ದರೂ, ಅವರು ತಾಯ್ನಾಡಿನ
ಸೇವೆಗಾಗಿ ಭಾರತಕ್ಕೆ ಮರಳಿದರು.
ಮೌನ ಸಾಧನೆ ಮತ್ತು ಮರಣೋತ್ತರ ಮನ್ನಣೆ
ಬಿಭ ಚೌಧರಿ ಅವರು ಎಂದಿಗೂ ಪ್ರಚಾರವನ್ನು ಬಯಸದ 'ನಿಷ್ಕಾಮ ಕರ್ಮಿ'. 1991 ರಲ್ಲಿ ಅವರು
ನಿಧನರಾದಾಗ ಅವರ ಸಾಧನೆಗಳು ಬಹುತೇಕ ಮರೆತುಹೋಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಜಗತ್ತು
ಅವರ ಶ್ರಮವನ್ನು ಗುರುತಿಸುತ್ತಿದೆ:
- 2019: ಅಂತರಾಷ್ಟ್ರೀಯ ಖಗೋಳ
ಒಕ್ಕೂಟದಿಂದ ನಕ್ಷತ್ರಕ್ಕೆ 'ವಿಭಾ' ಎಂದು ನಾಮಕರಣ.
- 2020: ಭಾರತ ಸರ್ಕಾರದಿಂದ ಅವರ
ಹೆಸರಿನಲ್ಲಿ 'ಚೇರ್ ಪ್ರೊಫೆಸರ್ಶಿಪ್' ಘೋಷಣೆ.
ಇಂದಿನ ಪೀಳಿಗೆಗೆ ಸ್ಫೂರ್ತಿ
೧೯೬೦ ರ ದಶಕದಲ್ಲಿ, ಅವರೊಂದಿಗೆ ಅಲ್ಪಕಾಲ ಸಂಶೋಧನೆ ನಡೆಸಿದ ಖ್ಯಾತ ಕನ್ನಡ ನೆಲದ ಖ್ಯಾತ ವಿಜ್ಞಾನಿ ಹಾಗೂ ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುತ್ತಿರುವ, ಪ್ರೊ|| ಪಾಲಹಳ್ಳಿ ವಿಶ್ವನಾಥ್‌ರವರು ಅವರ ಸರಳ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅವರು ಅಭಿಪ್ರಾಯಪಟ್ಟಂತೆ, ..." ನಮ್ಮಲ್ಲಿ ಕೆಲವು ಯುವಕರು TIFR ಗುಂಪಿನ ಭಾಗವಾಗಿದ್ದೆವು, ಅವರು KGF ಗಣಿಗಳಲ್ಲಿ ಕಾಸ್ಮಿಕ್ ರೇ ಕುರಿತ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದರು. ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದು ನ್ಯೂಟ್ರಿನೊ ಪ್ರಯೋಗವಾಗಿದ್ದರೆ, ಕೆಲವು EAS ಶ್ರೇಣಿ ಮತ್ತು ಭೂಮಿಯ ಆಳದಲ್ಲಿ (UG) ಪತ್ತೆಕಾರಕಗಳನ್ನು ಹೊಂದಿರುವ ಎಕ್ಸ್‌ಟೆನ್ಷಿಯಲ್ ಏರ್ ಶವರ್ (EAS) ಪ್ರಯೋಗಗಳನ್ನೂ ಒಳಗೊಂಡಿದ್ದವು. ....... ಅವರು ಯಾವಾಗಲೂ ನಗುಮುಖದೊಂದಿಗೆ ನಮ್ಮೊಂದಿಗೆ ಮಾತನಾಡುತ್ತಾ, ನಮಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರು ತಮ್ಮ ಬಗ್ಗೆ ಮಾತನಾಡುವವರೂ ಅಲ್ಲ. ಹೀಗಾಗಿ, ಅವರಿಂದ ಸಂಶೋಧನೆಗಳ ಬಗ್ಗೆ ಕೇಳದೇ ಇದ್ದದ್ದು ಮತ್ತು ಅವರ ವಿಷಯದ ಆಳವಾದ ಜ್ಞಾನವನ್ನು ಅರಿಯದೇ ಅವರಿಂದ ಹೆಚ್ಚು ಕಲಿಯದೇ ಇದ್ದುದರಿಂದ ನಾನು ಹಿರಿಯರಿಂದ ಕಲಿಯುವ ಒಂದು ದೊಡ್ಡ ಅವಕಾಶವನ್ನು ಕಳೆದುಕೊಂಡೆ."
ಇಂದು ಇಸ್ರೋದ 'ರಾಕೆಟ್ ವುಮೆನ್' ರಿತು ಕರಿದಾಲ್,
'ಮಿಸೈಲ್
ವುಮೆನ್' ಟೆಸ್ಸಿ ಥಾಮಸ್ ಮತ್ತು
ಚಂದ್ರಯಾನ-3 ರ ಯಶಸ್ಸಿನ ಹಿಂದೆ ನಿಂತಿರುವ
ನೂರಾರು ಮಹಿಳಾ ವಿಜ್ಞಾನಿಗಳಿಗೆ ಬಿಭ ಚೌಧರಿ ಅವರೇ ಆದ್ಯ ಪ್ರವರ್ತಕರು (Pioneer).
ಬಿಭ ಚೌಧರಿ ಅವರ ಕಥೆಯು ಕೇವಲ ವಿಜ್ಞಾನದ ಇತಿಹಾಸವಲ್ಲ; ಅದು ಅಚಲವಾದ ಸಂಕಲ್ಪ ಮತ್ತು ಲಿಂಗ ತಾರತಮ್ಯದ ವಿರುದ್ಧದ ಮೌನ ಹೋರಾಟದ ಮಹಾಕಾವ್ಯ. ಆಕಾಶದಲ್ಲಿ ಮಿನುಗುವ 'ವಿಭಾ' ನಕ್ಷತ್ರವು ಭಾರತದ ಹೆಣ್ಣುಮಕ್ಕಳಿಗೆ ಜ್ಞಾನದ ಹಾದಿಯಲ್ಲಿ ಸದಾ ದಾರಿದೀಪವಾಗಿರಲಿದೆ.
No comments:
Post a Comment