"ಪಾರಂಪರಿಕ ತಾಣಗಳ ರಕ್ಷಣೆ; ನಮ್ಮೆಲ್ಲರ ಹೊಣೆ"
ಲೇಖನ: ಬಸವರಾಜ ಎಮ್ ಯರಗುಪ್ಪಿ
ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು
ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ.
ಜಿಲ್ಲಾ ಗದಗ, ದೂರವಾಣಿ 9742193758 ಮಿಂಚಂಚೆ basu.ygp@gmail.com
ಎಪ್ರೀಲ್ 18-ವಿಶ್ವ ಪರಂಪರೆಯ ದಿನ ತನ್ನಿಮಿತ್ತ ವಿಶೇಷ ಲೇಖನ.
ನಮ್ಮ ಪರಂಪರೆಯನ್ನು ಸಂರಕ್ಷಿಸುವ ಒಂದು ಸಂಘಟಿತ ಪ್ರಯತ್ನವು ನಮ್ಮ ಸಾಂಸ್ಕೃತಿಕ, ಶೈಕ್ಷಣಿಕ, ಸೌಂದರ್ಯ, ಸ್ಪೂರ್ತಿದಾಯಕ ಮತ್ತು ಆರ್ಥಿಕ ಪರಂಪರೆಗಳಿಗೆ ಒಂದು ಪ್ರಮುಖ ಕೊಂಡಿಯಾಗಿದೆ - ಈ ಎಲ್ಲಾ ವಿಷಯಗಳು ಅಕ್ಷರಶಃ ನಮ್ಮನ್ನು ನಾವಾಗುವಂತೆ ಮಾಡುತ್ತದೆ. - ಎಂದು ಸ್ಟೀವ್ ಬೆರ್ರಿ ಹೇಳಿದ ಮಾತು ಅಕ್ಷರಶಃ ಸತ್ಯ.ಹೀಗಾಗಿ ನಮ್ಮ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯು
ನಮ್ಮ ರಾಷ್ಟ್ರವನ್ನು ನಿರ್ಮಿಸಲು ಸಹಾಯ ಮಾಡುವ ಆಳವಾದ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು.
ಕಲೆಗಳು ನಮ್ಮ ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಮತ್ತು ರೋಮಾಂಚಕ ಭಾಗವಾಗಿದೆ. ಅದರ ಹಲವು ರೂಪಗಳಲ್ಲಿ, ಕಲೆಯು ನಮ್ಮ ಬಗ್ಗೆ ಮತ್ತು ನಮ್ಮ ಸಮಾಜದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ನಮಗೆ ಅನುವು ಮಾಡಿಕೊಡುತ್ತದೆ. ಇತರೆ ಸಂಸ್ಕೃತಿಗಳ ಜನರ ಬಗ್ಗೆ ತಿಳಿದುಕೊಳ್ಳಲು ನಮಗೆ ಇದು ಒಂದು ಅನನ್ಯ ಮಾರ್ಗವನ್ನು ಒದಗಿಸುತ್ತದೆ.
ಹಾಗಾಗಿ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯ ಎತ್ತಿ ಹಿಡಿಯುವುದರೊಂದಿಗೆ ಅದರ ದುರ್ಬಲತೆಯ ಬಗ್ಗೆಯೂ ಸಹ ಜಾಗೃತಿ ಮೂಡಿಸುವುದರ ಮೂಲಕ ಅದು ನಶಿಸದಂತೆ ತಡೆಹಿಡಿಯುವ ಸಾರ್ಥಕ ದೂರದೃಷ್ಟಿಯೊಂದಿಗೆ ಪಾರಂಪರಿಕ ತಾಣಗಳು, ಸ್ಮಾರಕಗಳ ಇತಿಹಾಸ ಮತ್ತು ವೈವಿಧ್ಯತೆ ಅವುಗಳನ್ನು ರಕ್ಷಣೆ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯ ಸಮುದಾಯಗಳು ಮತ್ತು ಜನರು ತಮ್ಮ ಜೀವನದಲ್ಲಿ ಸಾಂಸ್ಕೃತಿಕ ಪರಂಪರೆಯ ಮೌಲ್ಯವನ್ನು ಗುರುತಿಸಿ ಅರಿಯುವುದು ಹಾಗೂ ಅದನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವದಾದ್ಯಂತ ಪ್ರತಿವರ್ಷ ಎಪ್ರೀಲ್ 18 ರಂದು ವಿಶ್ವ ಪರಂಪರೆಯ ದಿನವೆಂದು ಆಚರಿಸಲಾಗುತ್ತದೆ.
ವಿಶ್ವ ಪಾರಂಪರಿಕ ದಿನವನ್ನು ಮೊದಲ ಬಾರಿಗೆ ಪರಿಚಯಿಸಿ ಎಲ್ಲೆಡೆ ಅನುಷ್ಠಾನಕ್ಕೆ 1983 ರಲ್ಲಿ ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ (ಯುನೆಸ್ಕೋ-UNESCO)ತಂದಿತು. ಪ್ರಪಂಚದ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಮಹಾನ್ ಗುರಿಯನ್ನು ಈ ದಿನ ಹೊಂದಿದೆ.ಈ ದಿನದ ಅಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಘಿಕ ಪ್ರಯತ್ನಗಳನ್ನು ನಡೆಸುವ ಮೂಲಕ ವಿಶ್ವದ ಪ್ರತಿಯೊಂದೂ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
#ವಿಶ್ವ ಪಾರಂಪರಿಕ ತಾಣ ಎಂದರೇನು?
ವಿಶ್ವ ಪರಂಪರೆಯ ತಾಣಗಳನ್ನು ನೈಸರ್ಗಿಕ ಅಥವಾ ಮಾನವ ನಿರ್ಮಿತ ಪ್ರದೇಶಗಳು ಮತ್ತು ವಿಶೇಷ ರಕ್ಷಣೆಯ ಅಗತ್ಯವಿರುವ ಸಾಂಸ್ಕೃತಿಕ, ನೈಸರ್ಗಿಕ ಮತ್ತು ಐತಿಹಾಸಿಕ ಸ್ಥಳ ಅಥವಾ ಕಟ್ಟಡಗಳಿಗೆ ವಿಶ್ವ ಪಾರಂಪರಿಕ ತಾಣ ಎಂದು ಕರೆಯಲಾಗುತ್ತದೆ.ಈ ತಾಣಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಮಂಡಳಿ (ಯುನೆಸ್ಕೋ) ಅಧಿಕೃತವಾಗಿ ಗುರುತಿಸಿ ವಿಶ್ವ ಪಾರಂಪರಿಕ ತಾಣಗಳೆಂದು ಘೋಷಿಸುತ್ತದೆ. ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿ ಅದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದೊಂದಿಗೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸಿತು.
#ಪಾರಂಪರಿಕ ತಾಣಗಳ ಗುರುತಿಸುವ(ಸೇರ್ಪಡೆ) ಕಾರ್ಯ:
ಯುನೆಸ್ಕೋ, ವಿಶ್ವದ ಕೆಲವು ವಿಶಿಷ್ಟ ತಾಣಗಳನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸುತ್ತದೆ. ಇಂತಹ ತಾಣಗಳು ಅರಣ್ಯ, ಪರ್ವತ, ಸರೋವರ, ಮರುಭೂಮಿ, ಸ್ಮಾರಕ, ಕಟ್ಟಡ, ಸಂಕೀರ್ಣ ಅಥವಾ ಒಂದು ನಗರವಾಗಿರಬಹುದು.21 ಸದಸ್ಯ ರಾಷ್ಟ್ರಗಳನ್ನೊಳಗೊಂಡ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಸಮಿತಿಯು,ಇಂತಹ ತಾಣಗಳ ಅರ್ಹತೆಯನ್ನು ಅಳೆದು ಸೂಕ್ತವಾದಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸುತ್ತದೆ. ಈ ಸಮಿತಿಯ ಸದಸ್ಯತ್ವವು ನಿಗದಿತ ಅವಧಿಯದಾಗಿದ್ದು ಸದಸ್ಯರಾಷ್ಟ್ರಗಳು ಬದಲಾಗುತ್ತಿರುತ್ತವೆ.
ವಿಶ್ವದ ಎಲ್ಲೆಡೆಯ ಅತಿ ಹೆಚ್ಚಿನ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಮಹತ್ವಗಳನ್ನು ಹೊಂದಿರುವ ತಾಣಗಳನ್ನು ಗುರುತಿಸಿ, ಪಟ್ಟಿಮಾಡಿ ಉಳಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೆಲವು ಸಂದರ್ಭಗಳಲ್ಲಿ ಇಂತಹ ತಾಣಗಳ ರಕ್ಷಣೆಗಾಗಿ ವಿಶ್ವ ಪರಂಪರೆಯ ನಿಧಿಯಿಂದ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ನವೆಂಬರ್ 16, 1972ರಲ್ಲಿ ಜಾರಿಗೆ ಬಂದ ಈ ಯೋಜನೆಯನ್ನು ಇದುವರೆಗೆ 184 ರಾಷ್ಟ್ರಗಳು ಅನುಮೋದಿಸಿವೆ.
#ವಿಶ್ವದ ಪಾರಂಪರಿಕ ತಾಣಗಳು:
ವಿಶ್ವದಾದ್ಯಂತ ಈವರೆಗೆ ವಿಶ್ವದ 167 ರಾಷ್ಟ್ರಗಳ ಒಟ್ಟು 1,121 ತಾಣಗಳಿಗೆ ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಲಾಗಿದೆ. ಇವುಗಳ ಪೈಕಿ 869 ಸಾಂಸ್ಕೃತಿಕ ನೆಲೆಗಳಾಗಿದ್ದರೆ, 213 ಪ್ರಾಕೃತಿಕ ತಾಣಗಳು ಮತ್ತು 39 ತಾಣಗಳು ಈ ಎರಡರ ಮಹತ್ವವನ್ನೂ ಹೊಂದಿವೆ.
#ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳು:
ಭಾರತವು ಒಟ್ಟು 3691 ಪಾರಂಪರಿಕ ಸ್ಮಾರಕಗಳು ಮತ್ತು ತಾಣಗಳನ್ನು ಹೊಂದಿದ್ದು ಅವುಗಳಲ್ಲಿ, 40 ಸ್ಮಾರಕ ಅಥವಾ ತಾಣಗಳನ್ನು ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣಗಳು ಎಂದು ಘೋಷಿಸಲ್ಪಟ್ಟಿವೆ. ಭಾರತದಲ್ಲಿ ಮಂಚೂಣಿಯಾಗಿ ಕಾಣಬಹುದಾದ ಸಾಂಸ್ಕೃತಿಕ ವಿಶ್ವ ಪರಂಪರೆಯ ತಾಣಗಳೆಂದರೆ ತಾಜ್ ಮಹಲ್, ಹಂಪಿ, ಅಜಂತಾ ಮತ್ತು ಎಲ್ಲೋರಾ ಗುಹೆಗಳು, ಸೂರ್ಯ ದೇವಾಲಯ, ಸಂಚಿ ಸ್ತೂಪ, ರಾಣಿ ಕಿ ವಾವ್, ರಾಜಸ್ಥಾನದ ಬೆಟ್ಟದ ಕೋಟೆಗಳು ಹೀಗೆ ಪಟ್ಟಿ ಮುಂದುವರಿಯುತ್ತದೆ.
ಹಾಗೆಯೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಭಾರತದಿಂದ ಶಾಂತಿನಿಕೇತನ ಮತ್ತು ಹೊಯ್ಸಳ ದೇವಾಲಯ ಸಮೂಹಗಳನ್ನು ಸೇರಿಸಲು ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಯುನೆಸ್ಕೋಗೆ ಕಳುಹಿಸಲಾಗಿದೆ. ಇದಲ್ಲದೆ ದೇಶದ 42 ತಾಣಗಳನ್ನು ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
#ಪ್ರಾಕೃತಿಕ ತಾಣಗಳಿಗೂ ವಿಶ್ವಪಾರಂಪರಿಕ ಗರಿ:
ಇನ್ನು ನೈಸರ್ಗಿಕವಾಗಿ ಪರಂಪರೆಯ ತಾಣಗಳಲ್ಲಿ ಪಶ್ಚಿಮ ಘಟ್ಟಗಳು, ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ, ಕಾಜಿರಂಗ ವನ್ಯಜೀವಿ ಅಭಯಾರಣ್ಯ, ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ, ನಂದಾದೇವಿ ಮತ್ತು ಹೂವಿನ ರಾಷ್ಟ್ರೀಯ ಉದ್ಯಾನವನಗಳು ಮುಂತಾದವುಗಳನ್ನು ಸೇರಿಸಲಾಗಿದೆ. ಆದರೂ, ಹೆಚ್ಚಿನ ಸಂಖ್ಯೆಯ ಸಂರಕ್ಷಿತ ಸೈಟ್‌ಗಳನ್ನು ಸಹ ಗುರುತಿಸಲಾಗಿದ್ದು ಉತ್ತರ ಪ್ರದೇಶ ರಾಜ್ಯದ ವ್ಯಾಪ್ತಿಯಲ್ಲಿ ಸುಮಾರು 745 ತಾಣಗಳಿದ್ದರೆ, ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದು ಇದರ ವ್ಯಾಪ್ತಿಯಲ್ಲಿ 506 ಸಂರಕ್ಷಿತ ತಾಣಗಳಿವೆ.
ಒಟ್ಟಾರೆಯಾಗಿ ಪ್ರತಿ ವಿಶ್ವ ಪರಂಪರೆಯ ತಾಣವು ಆಯಾ ರಾಷ್ಟ್ರದ ಸ್ವತ್ತಾಗಿದ್ದರೂ ಅವುಗಳನ್ನು ಮುಂದಿನ ತಲೆಮಾರುಗಳಿಗಾಗಿ ಉಳಿಸಿಕೊಂಡು ಹೋಗುವ ಜವಾಬ್ದಾರಿಯು ಸಮಸ್ತ ಪ್ರಪಂಚಕ್ಕೆ ಸೇರಿದುದಾಗಿರುತ್ತದೆ.ಹಾಗಾಗಿ ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನೂ ಒಳಗೊಂಡಂತೆ ಜೀವವೈವಿಧ್ಯದ ರಕ್ಷಣೆಗೋಸ್ಕರ ಇರುವ ಅತಿ ಪ್ರಮುಖ ಮತ್ತು ಮಹತ್ವದ ಪ್ರಾಕೃತಿಕ ನೆಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗೋಣ.ಇದರ ಜೊತೆಗೆ ಪಾರಂಪರಿಕ ತಾಣಗಳನ್ನು ರಕ್ಷಿಸಿಕೊಳ್ಳಬೇಕೆಂಬುದು ನಮ್ಮೆಲ್ಲರ ಆಶಯವಾಗಬೇಕಾಗಿದೆ.
ಕೊನೆಯ ಮಾತು:
"ಬುದ್ಧಿವಂತಿಕೆಗಿಂತ ದೊಡ್ಡ ಸಂಪತ್ತಿಲ್ಲ, ಅಜ್ಞಾನಕ್ಕಿಂತ ದೊಡ್ಡ ಬಡತನವಿಲ್ಲ; ಸಂಸ್ಕೃತಿಗಿಂತ ದೊಡ್ಡ ಪರಂಪರೆ ಇಲ್ಲ ಮತ್ತು ಸಮಾಲೋಚನೆಗಿಂತ ಹೆಚ್ಚಿನ ಬೆಂಬಲವಿಲ್ಲ"-ಎಂದು ಅಲಿ ಇಬ್ನ್ ಅಬು ತಾಲಿಬ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
No comments:
Post a Comment