ಗುಯ್ (GUI): ತಂತ್ರ ಮಾಂತ್ರಿಕ
ಲೇಖಕರು:ಕೃಷ್ಣ ಸುರೇಶ
ಮೊಬೈಲ್ ಫೋನುಗಳು, ಸ್ಮಾರ್ಟ್ ಫೋನುಗಳು ವ್ಯಾಪಕವಾಗಿ ಬಳಕೆಗೆ ಬರುವ ಮುನ್ನ ನಾವು ಲ್ಯಾಂಡ್ ಲೈನ್
ಫೋನುಗಳನ್ನು ಬಳಸುತ್ತಿದ್ದ ಕಾಲವನ್ನು ಒಮ್ಮೆ ನೆನಪು ಮಾಡಿಕೊಳ್ಳೋಣ. ನಮ್ಮ ಗೆಳೆಯರು, ಬಂಧು-ಬಾಂಧವರ ಫೋನ್ ನಂಬರುಗಳಲ್ಲಿ ಕೆಲವು ನಮ್ಮ
ನೆನಪಿನಲ್ಲಿದ್ದು, ತಕ್ಷಣ ನಾವು
ಡಯಲ್ ಮಾಡುವ ಸಾಮರ್ಥ್ಯ ಹೊಂದಿದ್ದೆವು.
ಮೊಬೈಲ್ ಫೋನುಗಳು ಬಳಕೆಗೆ ಬಂದ ನಂತರ, ಅವುಗಳಲ್ಲಿ ಮೊದಲ ಪ್ರಮುಖ feature ಎಂದರೆ ನಮ್ಮ ಸಂಪರ್ಕದವರ ಫೋನ್ ನಂಬರುಗಳನ್ನು ಫೋನಿನಲ್ಲಿಯೇ
ಅವರ ಹೆಸರಿನೊಂದಿಗೆ ಸಂಗ್ರಹಿಸಿಡುವ ವ್ಯವಸ್ಥೆಯಾಗಿತ್ತು. ಆ feature ಅನ್ನು ನಾವು ಎಲ್ಲರೂ ಉತ್ತಮವಾಗಿ ಬಳಸಿದ್ದೇವೆ ಮತ್ತು ಇನ್ನೂ
ಬಳಸುತ್ತಲೇ ಇದ್ದೇವೆ.
ಈ ತಂತ್ರಜ್ಞಾನದ ಬಳಕೆಯೊಂದಿಗೆ, ನಮ್ಮ ಸ್ಮರಣಶಕ್ತಿಯನ್ನು ಮೊಟ್ಟ ಮೊದಲ ಬಾರಿಗೆ ಯಂತ್ರಕ್ಕೆ ಒಪ್ಪಿಸಿದ್ದೇವೆ ಎಂಬುದೂ ಸತ್ಯ. ಇಂದು ನಮ್ಮ ಅತ್ಯಂತ ಸಮೀಪದವರ ಫೋನ್ ನಂಬರುಗಳನ್ನು ಸಹ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವೆಂಬುದು ಒಂದು ಕಟು ವಾಸ್ತವ.
ಇದೇ ತಂತ್ರಜ್ಞಾನದ ಇನ್ನೊಂದು ಸಕಾರಾತ್ಮಕ ಮುಖವನ್ನೂ ನೋಡೋಣ.
ಉದಾಹರಣೆಗೆ, Linux operating system ಹೊಂದಿರುವ ಕಂಪ್ಯೂಟರಿನ Terminal ಬಳಸಿ ಕೆಲಸ
ಮಾಡುವ ಕೆಲವು commandsಗಳನ್ನು
ಗಮನಿಸೋಣ:
- ls – ಕಂಪ್ಯೂಟರಿನಲ್ಲಿರುವ directoriesಗಳನ್ನು ತೋರಿಸುತ್ತದೆ.
- pwd – ಪ್ರಸ್ತುತ directory
ಅನ್ನು ತೋರಿಸುತ್ತದೆ.
- mkdir – ಹೊಸ directory
ಅನ್ನು ಸೃಷ್ಟಿಸುತ್ತದೆ.
- cp –
directory ಅಥವಾ file
ಅನ್ನು ನಕಲು ಮಾಡುತ್ತದೆ.
- free –
memory ಬಳಕೆಯ ವಿವರವನ್ನು ತೋರಿಸುತ್ತದೆ.
- sudo apt-get install youtube-dl – YouTube downloader ಅನ್ನು install
ಮಾಡುತ್ತದೆ.
- cal – ಪ್ರಸ್ತುತ ತಿಂಗಳ calendar
ತೋರಿಸುತ್ತದೆ.
- cal 2026 – 2026 ವರ್ಷದ calendar ತೋರಿಸುತ್ತದೆ.
ಕಂಪ್ಯೂಟರನ್ನು ಬಳಸಲು ಈ ರೀತಿಯಾಗಿ commandsಗಳನ್ನು type ಮಾಡಿ ಕೆಲಸ ಮಾಡಿಸುವ ವಿಧಾನವನ್ನು Command Line Interface (CLI) ಎಂದು ಕರೆಯಲಾಗುತ್ತದೆ. ಸಣ್ಣ taskಗಳಿಗೂ ಇಷ್ಟು commands ಬೇಕಾದರೆ, word processor ಬಳಸಿ ಪತ್ರ ಬರೆಯುವಂತಹ
ಕೆಲಸಗಳು ಇನ್ನಷ್ಟು ಸಂಕೀರ್ಣವಾಗಿರುತ್ತವೆ.
ಇದನ್ನು ಗಮನಿಸಿದಾಗ, ಇಂದು ನಾವು ಬಳಸುತ್ತಿರುವ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್ ಫೋನುಗಳಲ್ಲಿ ಹೆಚ್ಚು ಸುಲಭವಾದ ವಿಧಾನವಿದೆಯಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಮೊದಲಿನಿಂದಲೂ ಕಂಪ್ಯೂಟರ್ ಬಳಕೆಗೆ ಇದ್ದ ವಿಧಾನ CLI ಮಾತ್ರವಾಗಿತ್ತು ಎಂಬುದು ಆಶ್ಚರ್ಯಕರ. ಸಾವಿರಾರು commandsಗಳನ್ನು ತಿಳಿದಿರುವ ಪರಿಣಿತರಿಗಷ್ಟೇ CLI ಮೂಲಕ ಕೆಲಸ ಮಾಡುವುದು ಸಾಧ್ಯವಾಗುತ್ತಿತ್ತು.
ಇಂದು ಸಾಮಾನ್ಯ ಜನರು ಸಹ ಸ್ಮಾರ್ಟ್ ಫೋನುಗಳನ್ನು ಸುಲಭವಾಗಿ
ಬಳಸುತ್ತಿದ್ದಾರೆ. ಇದು ಸಾಧ್ಯವಾಗಿರುವುದು Graphical User Interface (GUI) ಅಳವಡಿಕೆಯಿಂದಾಗಿದೆ.
ಚುನಾವಣೆಯ ಬ್ಯಾಲೆಟ್ ಯೂನಿಟ್‌ನಲ್ಲಿ ಪ್ರತಿಯೊಬ್ಬ
ಅಭ್ಯರ್ಥಿಯ ಹೆಸರಿನ ಮುಂದೆ ಒಂದು ಚಿಹ್ನೆಯನ್ನು ನೀಡಿರುವಂತೆ, ಓದಲು ಬಾರದವರೂ ಸಹ ಆ ಚಿಹ್ನೆಗಳ ಆಧಾರದಲ್ಲಿ ಮತ
ಚಲಾಯಿಸುತ್ತಾರೆ. ಅದೇ ರೀತಿ, GUI ನಲ್ಲಿ
ಬಳಸುವ icons ಮೂಲಕ ನಾವು ಕಂಪ್ಯೂಟರ್‌ಗೆ ಸೂಚನೆ ನೀಡಬಹುದು.
ಇದರ ಪರಿಣಾಮವಾಗಿ, CLI ಯಲ್ಲಿ commands ನೆನಪಿಡುವ ಅಗತ್ಯವಿಲ್ಲದೆ, ಕೇವಲ mouse ಬಳಸಿ icon ಮೇಲೆ click ಮಾಡುವ ಮೂಲಕ ಸುಲಭವಾಗಿ tasks ನಿರ್ವಹಿಸಬಹುದು.
ಮಾಹಿತಿಯನ್ನು ಕಂಪ್ಯೂಟರಿನಲ್ಲಿ ಸಂಗ್ರಹಿಸಿ, ಬೇಕಾದಾಗ ಪಡೆಯಲು ಒಂದು ಸಾಧನ ಬೇಕೆಂಬ ಆಲೋಚನೆ 1945ರ ಹೊತ್ತಿಗೆ ಮೂಡಿತ್ತು. ಇದರ ಫಲವಾಗಿ, 1964ರಲ್ಲಿ Douglas Engelbart ಅವರು mouse ಅನ್ನು ಆವಿಷ್ಕರಿಸಿದರು.
1970ರಲ್ಲಿ ಜೆರಾಕ್ಸ್ ಪಾರ್ಕ್ ಸಂಶೋಧನಾ ಸಂಸ್ಥೆಯಲ್ಲಿ ನಿರ್ಮಿಸಿದ ಜೆರಾಕ್ಸ್ ಆಲ್ಟೋ ಎಂಬ ಕಂಪ್ಯೂಟರ್ ಎಥೆರ್ನೆಟ್, ಮೌಸ್ ಹಾಗೂ ಬಹುವಿಧ ಅನ್ವಯಿಕೆಗಳ ಜೊತೆಗೆ ಬಹಳ ಮುಖ್ಯವಾಗಿ GUI ಇಂಟರ್ ಫೇಸನ್ನೂ ಸಹ ಹೊಂದಿದ್ದ ಮೊದಲ ಕಂಪ್ಯೂಟರ್ ಆಗಿದ್ದಿತು. 1981ರಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಲಾದ ಜೆರಾಕ್ಸ್ ಸ್ಟಾರ್ ಪೂರ್ಣ ಪ್ರಮಾಣದ GUI ಅಳವಟಿಕೆಯಾಗಿದ್ದ ಕಂಪ್ಯೂಟರ್ ಆಗಿದ್ದಿತು. ನಂತರ ಆಪಲ್ ಕಂಪನಿಯು 1983ರಲ್ಲಿ ಬಿಡುಗಡೆ ಮಾಡಿದ ಲೀಸಾ, 1984ರಲ್ಲಿ ಬಿಡುಗಡೆ ಮಾಡಿದ ಮೆಕಿಂತೋಷ್. 1985ರಲ್ಲಿ ಬಿಡುಗಡೆ ಮಾಡಿದ ಅಮೀಗಾ ಮಾರುಕಟ್ಟೆಯಲ್ಲಿ ಯಶಸ್ವಿಯಾದ ಪೂರ್ಣ ಪ್ರಮಾಣದಲ್ಲಿ ಮುಂದುವರೆದ GUI ಅಳವಡಿಕೆಯಾಗಿದ್ದ ಕಂಪ್ಯೂಟರುಗಳಾಗಿದ್ದವು. 1990ರ ದಶಕದಲ್ಲಿ ಪ್ರವರ್ಧಮಾನಕ್ಕೆ ಬಂದ ಮೈಕ್ರೋಸಾಫ್ಟ್ ಕಂಪನಿಯು ಆಪಲ್ಲಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಂತಿತಲ್ಲದೆ ವಿಂಡೋಸ್ 3.0 ಮತ್ತು ವಿಂಡೋಸ್ 1995 ಅವತರಣಿಕೆಯ ಮೂಲಕ GUI ಯನ್ನು ಅಂತರಾಷ್ಟ್ರೀಯ ಮಾನಕಕ್ಕೆ ಪ್ರಮಾಣೀಕರಿಸಿತು.
ಗುಯ್ ತತ್ವ 1: WIMP ಮಾದರಿ: ಕಿಟಕಿ, ಗುರುತು, ಮೆನುಗಳು ಮತ್ತು ಬಾಣದ ತುದಿ (Windows, Icons, Menus, and Pointer,) ಇದು ಡೆಸ್ಕ್‌ಟಾಪ್ ಆಪರೇಟಿಂಗ್ ಸಿಸ್ಟಂನ ಮುಖ್ಯ ಲಕ್ಷಣಗಳು. ಕಂಪ್ಯೂಟರಿನ ಪರದೆಯ ಮೇಲೆ ಮೂಡುವ ಮೆನುವಿನಲ್ಲಿ ಐಕಾನುಗಳೆಂದು ಕರೆಯಲಾಗುವ ಚಿತ್ರಗಳ ಮೇಲೆ ಮೌಸಿನ ಸಹಾಯದಿಂದ ಕರ್ಸರ್ ಎಂದು ಕರೆಯಲಾಗುವ ಬಾಣದ ತುದಿಯನ್ನು ತೆಗೆದುಕೊಂಡು ಹೋಗಿ ಗುರುತಿಸಿ ಅದರ ಮೇಲೆ ಮೌಸಿನ ಕ್ಲಿಕ್ಕರ್ ಗುಂಡಿಯನ್ನು ಒತ್ತಿ ಟಾಸ್ಕನ್ನು ನಿರ್ವಹಿಸುವುದು. ನಾವು ಪರದೆಯ ಮೇಲಿನ ಯಾವ ಟಾಸ್ಕಿಗೆ ಸಂಬಂಧಿಸಿದ ಐಕಾನು ಮೇಲೆ ಬಾಣದ ತುದಿಯನ್ನು ವರ್ಚುಯಲ್ ಆಗಿ ಗುರಿ ಇರಿಸಿ ಮೌಸನ್ನು ಕ್ಲಿಕ್ ಮಾಡುತ್ತೇವೆಯೋ ಆಗ ಕಂಪ್ಯೂಟರಿನ ಒಳಗೆ ಆ ಐಕಾನಿಗೆ ಸಂಬಂಧಿಸಿದ ಫೈಲು ಅಥವಾ ಟಾಸ್ಕಿಗೆ ಸಂಬಂಧಿಸಿದ ಮೆಮೋರಿ ಇರುವ ಲೊಕೇಷನ್‌ಗೆ ಕಂಪ್ಯೂಟರ್ ತನ್ನಂತೆ ತಾನೆ ಸಂಪರ್ಕ ಹೊಂದಿಸಿ ಟ್ರಿಗರ್ ಅನ್ನು ಆಕ್ಟಿವೇಟ್ ಮಾಡುತ್ತದೆ.
ಗುಯ್ ತತ್ವ 2: ನೇರವಾದ ನಿಯಂತ್ರಣ: CLIಯಲ್ಲಿನಂತೆ ಸಂಕೀರ್ಣ ಕೋಡ್ ಭಾಷೆಯನ್ನು ಬಳಸಿ ಕಂಪ್ಯೂಟರಿನಿಂದ ಕೆಲಸ ಮಾಡಿಸುವುದಕ್ಕೆ ಬದಲಾಗಿ ಮೌಸಿನ ಸಹಾಯದಿಂದ ಕ್ಲಿಕ್ ಮಾಡುವುದು, ಎಳೆದು ಸರಿಸುವುದರ ಮೂಲಕ ವಸ್ತುಗಳು, ಚಿತ್ರಗಳ ರೂಪದಲ್ಲಿರುವ ಟಾಸ್ಕುಗಳೊಂದಿಗೆ ವ್ಯವಹರಿಸುವ ಮತ್ತಷ್ಟು ಸುಲಭದ ವಿಧಾನವನ್ನು ಬೆನ್ ಶ್ನೈಡರ್‌ಮನ್ ಸೇರಿಸಿದರು.
ಗುಯ್ ತತ್ವ 3: WYSIWYG (What You See Is What You Get) ಯಾವುದೇ ಒಂದು ಟಾಸ್ಕನ್ನು ನಡೆಸುವಾಗ ಅಂತಿಮ ಔಟ್‌ಪುಟ್‌ನಲ್ಲಿ (ವೆಬ್‌ಸೈಟ್, ಡಾಕ್ಯುಮೆಂಟ್ ಅಥವಾ ಮುದ್ರಣ) ಗೋಚರಿಸುವಂತೆಯೇ ಪ್ರದರ್ಶಿಸುವ ಎಡಿಟಿಂಗ್ ಸಾಫ್ಟ್‌ವೇರ್ ಇದಾಗಿದ್ದು ಬಳಕೆದಾರರಿಗೆ ಟಾಸ್ಕನ್ನು ದೃಷ್ಟಿಗೋಚರವಾಗಿ ರಚಿಸಲು, ಸಂಪಾದಿಸಲು ಮತ್ತು ಫಾರ್ಮ್ಯಾಟ್ ಮಾಡಲು ಅನುಮತಿಸುತ್ತದೆ. ಸಾಮಾನ್ಯವಾಗಿ ಕಚ್ಚಾ ಕೋಡ್ ಬರೆಯುವ ಬದಲು ಡ್ರ್ಯಾಗ್-ಅಂಡ್-ಡ್ರಾಪ್ ಅಂಶಗಳೊಂದಿಗೆ ಚಿತ್ರಾತ್ಮಕ ಇಂಟರ್ಫೇಸ್ ಅನ್ನು ಬಳಸುತ್ತದೆ. ಇಲ್ಲಿ ಕೋಡ್‌ನ ಅಗತ್ಯವಿಲ್ಲವೆಂಬುದು ಗಮನಾರ್ಹ ಅಂಶವಾಗಿದೆ. ಇದರಲ್ಲಿನ ಪರಿಕರಗಳು ಫಾಂಟ್‌ಗಳು, ಬಣ್ಣಗಳು, ಜೋಡಣೆಗಳನ್ನು ನೇರ ಬದಲಾವಣೆಗಳನ್ನು (ಫಾರ್ಮ್ಯಾಟಿಂಗ್) ಮಾಡಲು ಮತ್ತು ಮಲ್ಟಿಮೀಡಿಯಾ ಅಳವಡಿಕೆಗೆ ಅವಕಾಶ ನೀಡುತ್ತವೆ.
ಕಂಪ್ಯೂಟರಿನಲ್ಲಿರುವ abc1.mp4 ಎಂಬ ಒಂದು ವೀಡಿಯೋವನ್ನು ಆಡಿಸಬೇಕಾದರೆ CLI ಮೂಲಕ ಎಂಎಸ್ ವಿಂಡೋಸ್‌ನಲ್ಲಿ ಕಮಾಂಡ್ ಪ್ರಾಂಪ್ಟ್ ವಿಂಡೋ ತೆರೆದು ಅದರಲ್ಲಿ start video_abc1.mp4 ಎಂದು ಟೈಪ್ ಮಾಡಿ Enter ಕೀಲಿಯನ್ನು ಒತ್ತಬೇಕು.
ಲಿನಿಕ್ಸ್ (ಉಬುಂಟು, ಮಿಂಟ್ ಇತ್ಯಾದಿ)ಗಳ bash ನಲ್ಲಿ ಟರ್ಮಿನಲ್ ವಿಂಡೋ ತೆರೆದು ಅದರಲ್ಲಿ xdg-open video_abc1.mp4 ಟೈಪ್ ಮಾಡಿ Enter ಕೀಲಿಯನ್ನು ಒತ್ತಬೇಕು. ಇದಕ್ಕೆ ಬದಲಾಗಿ GUI ಇಂಟರ್ಫೇಸಿನಲ್ಲಿ ಪರದೆಯ ಮೇಲೆ ಕಾಣುವ abc1.mp4 ನ ತಂಬ್‌ನೈಲ್ ಎಂದು ಕರೆಯಲಾಗುವ ಚಿತ್ರದ ಮೇಲೆ ಮೌಸಿನ ಬಾಣದ ಗುರುತನ್ನು ಇರಿಸಿ ಒತ್ತಿದರೆ ಸದರಿ ವೀಡಿಯೋ ಆಡಲು ಆರಂಭಿಸುತ್ತದೆ. ಈ ವಿಧಾನ ಮುಂದುವರಿದು ಮೌಸ್ ಸಹ ಮಾಯವಾಗಿ ನಮ್ಮ ಕೈ ಬೆರಳು ಮೌಸ್, ಕರ್ಸರ್ ಎಲ್ಲವೂ ಆಗಿ, ಕಂಪ್ಯೂಟರ್ ಪರದೆಗಳು ಟಚ್‌ಸ್ಕ್ರೀನ್ ಆಗಿ ನಮ್ಮ ವ್ಯವಹಾರವನ್ನು ಸುಗಮಗೊಳಿಸಿದೆ. ಹೀಗಾಗಿ, ದೊಡ್ಡವರಿರಲಿ ಅಕ್ಷರ ಗೊತ್ತಿಲ್ಲದ, ಮಾತು ಬಾರದ ಪುಟ್ಟ ಮಕ್ಕಳೂ ಸಹ ಯಶಸ್ವಿಯಾಗಿ ಸ್ಮಾರ್ಟ್ ಫೋನುಗಳನ್ನು ಬಳಸುವುದನ್ನು ಕಾಣಬಹುದು.
ಜನಸಾಮಾನ್ಯರು CLI ಇಂಟರ್ಫೇಸು ಎಂದಾದರೂ ಬಳಸುತ್ತಾರೆಯೆ? ಹೌದು, ಬಳಸುತ್ತಾರೆ — ಅಪರೂಪಕ್ಕೆ! ಅದು CLI ಎಂದು ಗೊತ್ತಿಲ್ಲದಿದ್ದರೂ ಬಳಸುತ್ತಾರೆ. ಹೊಸತಾಗಿ ಫೋನ್ ನಂಬರನ್ನು ಯಾರಾದರೂ ಕೊಟ್ಟರೆ, ಅದನ್ನು ಫೋನಿನಲ್ಲಿರುವ ಡಯಲ್ ಕೀಪ್ಯಾಡ್ ಸಹಾಯದಿಂದ ಕೀಲಿಸಿ ಕರೆಮಾಡುವುದು ಸಹ CLI ಇಂಟರ್ಫೇಸ್ ಎಂದೇ ಸರಳವಾಗಿ ಹೇಳಬಹುದು. ಅದೇ ನಂಬರನ್ನು ಫೋನಿನಲ್ಲಿ save ಮಾಡಿದಾಗ, ಅದು ಅವರ ಹೆಸರಿನ ಒಂದು ಐಕಾನ್ ಆಗಿ ಫೋನಿನಲ್ಲಿ ಸಂಗ್ರಹವಾಗಿರುತ್ತದೆ. ಆ ನಂಬರನ್ನು ಹುಡುಕಿ ನಮ್ಮ ಬೆರಳೆಂಬ ಮೌಸ್ ಮತ್ತು ಕಣ್ಣೆಂಬ ಕರ್ಸರ್ ಬಳಸಿ ಆ ನಂಬರ್ ಮೇಲೆ ಒತ್ತಿದರೆ dialing ಎಂಬ task ಜಾರಿಯಾಗಿ ಆ ನಂಬರಿನವರಿಗೆ ಫೋನ್ ಸಂಪರ್ಕ ಏರ್ಪಡುತ್ತದೆ. ಇದು ಎಷ್ಟು ಸುಗಮ, ಸಲೀಸು ಆದರೂ ಇಂತಹ software ನಿರ್ಮಾಣದ ಹಿಂದೆ ಅನೇಕ ತಂತ್ರಜ್ಞರ ಬುದ್ಧಿಮತ್ತೆ ಮತ್ತು ದುಡಿಮೆ ಇದೆ ಎಂಬುದನ್ನು ಮರೆಯಬಾರದು.
ಒಂದು program ಅದು CLI ಇರಲಿ ಅಥವಾ GUI ಇರಲಿ, ಅದು ಅಂತಿಮವಾಗಿ ಕಂಪ್ಯೂಟರಿನ ಅಂತರಾಳದಲ್ಲಿ ಕಾರ್ಯಗತವಾಗುವುದು ಯಂತ್ರಭಾಷೆಯಲ್ಲಿ. ಆ ಭಾಷೆಯ ವರ್ಣಮಾಲೆಯಲ್ಲಿ ಇರುವವು ಎರಡು ಅಂಕೆಗಳು — 0 ಮತ್ತು 1, ಅಂದರೆ switch off ಮತ್ತು switch on. A ಅಕ್ಷರವನ್ನು ಯಂತ್ರಭಾಷೆಯಲ್ಲಿ 01000001 ಎಂದು ಭಾಷಾಂತರಿಸಿ ಕಂಪ್ಯೂಟರಿನ processor ಗೆ ನೀಡಬೇಕಾಗುತ್ತದೆ. ಹೀಗೆ ಎಲ್ಲ ಅಕ್ಷರಗಳು, ಅಂಕೆಗಳು, ಆದೇಶಗಳನ್ನು ಪ್ರತಿಸಲ ಭಾಷಾಂತರಿಸಿ ಪೂರೈಸುವುದು ಕಾಲ, ಶ್ರಮ ಮುಂತಾದ ಸವಲತ್ತುಗಳ ಅಪವ್ಯಯವಾಗುತ್ತದೆ. ಜೊತೆಗೆ ಉದ್ದುದ್ದದ ಅಂಕೆಗಳ ಸಾಲುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಯಾರಿಗೂ ಕಷ್ಟಕರ.
ಇದರ ಬದಲಿಗೆ ಮಾನವ ಸಂವೇದಿ ಭಾಷೆ ಮತ್ತು ಸಂಕೇತಗಳನ್ನು ಹೊಂದಿರುವ programming language ನಲ್ಲಿ ಮೊದಲಿಗೆ program ಬರೆಯಲಾಗುತ್ತದೆ. ಅದರ ತಳದಲ್ಲಿ ಈ program ಅನ್ನು ಯಂತ್ರಭಾಷೆಗೆ ಬದಲಾಯಿಸುವ assembly language ಎನ್ನುವ ಮಧ್ಯಂತರ ಭಾಷೆಯ ತರ್ಜುಮೆಗಾರ ಇರುತ್ತದೆ. ಹೀಗೆ ಹಲವಾರು ಹಂತಗಳಲ್ಲಿ ನಾವು ಟೈಪ್ ಮಾಡುವ ಅಕ್ಷರ, ಮೂಡಿಸುವ ಧ್ವನಿ, ಸಂಗೀತ, ಚಿತ್ರ, ಅದರ ಬಣ್ಣಗಳು ಎಲ್ಲವೂ ಯಂತ್ರಭಾಷೆಗೆ ತರ್ಜುಮೆ ಆಗಿ process ಆದ ನಂತರ ಫಲಿತಾಂಶವು ಮತ್ತೆ ನಮ್ಮ ಗ್ರಹಣೆಗೆ ನಿಲುಕುವ ರೂಪಕ್ಕೆ ಬದಲಿ ಆಗಿ ನಮಗೆ ದೊರೆಯುತ್ತದೆ. ಈ ಪ್ರತಿ ಹಂತದ ಕಾರ್ಯಕ್ರಮಗಳನ್ನು ಪ್ರತಿ ಹೊಸ ಕಂಪ್ಯೂಟರ್‌ಗೆ ಹೊಸದಾಗಿ software engineers ಬರೆಯಲೇಬೇಕಾಗುತ್ತದೆ.
CLI ಯಿಂದ GUI ಕಡೆಗೆ ಮುಂದುವರಿದು, ಈ ದಿನ ನಮ್ಮ ಧ್ವನಿ ಮತ್ತು ಆಂಗಿಕ ಸೂಚನೆಗಳನ್ನು ಗ್ರಹಿಸಿ ಕೆಲಸ ಮಾಡುವ ಕಂಪ್ಯೂಟರುಗಳು, software devices ನಾವು ಸುಲಭವಾಗಿ ಬಳಸಲು ಲಭ್ಯವಿವೆ ಎಂದರೆ, ಅದರ ಹಿಂದೆ ಇರುವ ತಂತ್ರಜ್ಞರ ಬುದ್ಧಿಮತ್ತೆ ಮತ್ತು ಶ್ರಮಕ್ಕೆ ಹ್ಯಾಟ್ಸಪ್ ಹೇಳಲೇಬೇಕು ಅಲ್ಲವೇ?
No comments:
Post a Comment