ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, April 4, 2026

ಬುದ್ಧಿವಂತಿಕೆ ಹಾಗೂ ಅದರ ವ್ಯಾಪ್ತಿ

ಬುದ್ಧಿವಂತಿಕೆ ಹಾಗೂ ಅದರ ವ್ಯಾಪ್ತಿ 


 ಲೇಖಕರು : ಬಿ .ಎನ್. ರೂಪ, ಸಹಶಿಕ್ಷಕರು,

 ಕೆ.ಪಿ.ಎಸ್.‌ ಜೀವನ್‌ ಭೀಮನಗರ

 ಬೆಂಗಳೂರು ದಕ್ಷಿಣ ವಲಯ -4

 



 ಬುದ್ಧಿವಂತಿಕೆ ಎನ್ನುವುದು ಕೇವಲ ಜ್ಞಾನಾತ್ಮಕ ವಲಯಕ್ಕೆ, ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಅಂಕಗಳಿಸುವುದಕ್ಕಾಗಿ ಮಾತ್ರ ಸೀಮಿತವಲ್ಲ. ಇದು ಅದಕ್ಕಿಂತಲೂ ಮಿಗಿಲಾಗಿದೆ. ಭೂಮಂಡಲದಲ್ಲಿರುವ ಹಲವು ಬಗಯ ಜೀವಿಗಳಲ್ಲಿ ಒಂದು ಇರುವೆಯನ್ನು ಉದಾಹರಣೆಗೆ ತೆಗೆದುಕೊಳ್ಳಿ. ಇರುವೆಗಳ ಸಾಮರಸ್ಯ ಜೀವನ, ಆಹಾರ ಸಂಗ್ರಹಣೆಯ ವಿಧಾನ, ಫೆರೋಮೋನ್ಗಳ ಸ್ರವಿಕೆಯಿಂದ ಆಗುವ ಕಾರ್ಯಗಳು, ನಿರ್ದಿಷ್ಟ ಗುರಿಯನ್ನು ಸಾಧಿಸುವ ರೀತಿ, ಶ್ರಮ ಜೀವನವನ್ನು ನೋಡಿದಾಗ ಇರುವೆ ನಿಜಕ್ಕೂ ಬುದ್ಧಿವಂತ ಪ್ರಾಣಿ ಎನ್ನುತ್ತೇವೆ. ಹಾಗೆ, ಸಕಲ ಜೀವರಾಶಿಯನ್ನು ಪ್ರತಿನಿಧಿಸುವ ಪ್ರತಿಯೊಂದು ಜೀವಿಯು ಅದರದೇ ಆದ ಬುದ್ಧಿವಂತಿಕೆ, ಕಲಾತ್ಮಕತೆ, ಸೃಜನಶೀಲತೆ, ಕ್ರಿಯಾತ್ಮಕತೆ, ಚಿಂತನೆ ಮಾಡುವ ಶೈಲಿ, ಜೀವನ ಶೈಲಿ,ಆವಾಸ ಸ್ಥಳವನ್ನು ನಿರ್ಮಾಣ ಮಾಡುವ ರೀತಿ, ವಿಭಿನ್ನ ರೀತಿಯಲ್ಲಿ ಯೋಚನೆ ಮಾಡುವ ಪರಿ ನೋಡಿದಾಗ, ಬುದ್ಧಿವಂತಿಕೆ(INTELIGENCE) ಎಂಬಪದಕ್ಕೆ ವ್ಯಾಖ್ಯಾನ ನೀಡುವುದು ಸ್ವಲ್ಪ ಮಟ್ಟಿಗೆ ಕಷ್ಟದಾಯಕವೂ ಹೌದು. ಏಕೆಂದರೆ, ಇದು ಬಹಳ ವೈವಿಧ್ಯಪೂರ್ಣ ಮಜಲುಗಳನ್ನು ಒಳಗೊಂಡಿದೆ. ಮಾನವರಲ್ಲಿ ವೀಕ್ಷಿಸಿದಾಗ ಬುದ್ಧಿವಂತಿಕೆ ಎನ್ನುವುದು ಒಬ್ಬ ವ್ಯಕ್ತಿಯ ವರ್ತನೆ, ಆಲೋಚಿಸುವ ಪರಿ, ಭಾಷೆಯ ಮೇಲಿನ ಹಿಡಿತ ಹಾಗೂ ಪ್ರೌಢಿಮೆ ,ತಾರ್ಕಿಕವಾಗಿ ಯೋಚಿಸಿ ಕ್ರಮಬದ್ಧವಾಗಿ ನಿರ್ವಹಿಸುವ ರೀತಿ, ಆತ್ಮಾನುಭೂತಿ, ಸಹಾನುಭೂತಿ, ಅಂತರ್ವ್ಯಕ್ತಿ ಸಂಬಂಧಗಳನ್ನು ನಿರ್ವಹಿಸುವುದು, ಹೀಗೆ ಹಲವಾರು ಮಜಲುಗಳನ್ನು ಒಳಗೊಂಡಿದೆ ಎನ್ನಬಹುದು.

ಮಾನವ ಸದ್ಯಕ್ಕೆ ತನ್ನನ್ನು ತಾನು ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಕೊಂಡಿದ್ದಾನೆ. ತನ್ನ ಚತುರ ಬುದ್ಧಿವಂತಿಕೆಯಿಂದ ಬಾಹ್ಯಾಕಾಶಕ್ಕೆ ಲಗ್ಗೆ ಇಟ್ಟಿದ್ದಾನೆ, ಸಮುದ್ರದ ಆಳದಲ್ಲಿ ಏನಿದೆ ಎಂದು ಅನ್ವೇಷಿಸುತ್ತಿದ್ದಾನೆ. ಪ್ರತಿದಿನ ಹೊಸ ಅನ್ವೇಷಣೆ, ಆವಿಷ್ಕಾರ, ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಬುದ್ಧಿವಂತಿಕೆಯು ವೈವಿಧ್ಯಪೂರ್ಣವಾಗಿದೆ. ಆದರೆ, ಭೂಮಿಯ ಮೇಲಿರುವ ಸಕಲ ಜೀವರಾಶಿಯನ್ನು ನೋಡಿದಾಗ ಎಲ್ಲಾ ಜೀವಿಗಳು ತಮ್ಮದೇ ಆದ ರೀತಿಯಲ್ಲಿ ಬುದ್ಧಿವಂತಿಕೆಯನ್ನು ಹೊಂದಿವೆ ಎನ್ನಬಹುದು.

ಹಾರ್ವರ್ಡ ಗರ್ಡ್ನ ಪ್ರಕಾರ ಬುದ್ಧಿವಂತಿಕೆಯನ್ನು ಹಲವಾರು ವಿಧಗಳಲ್ಲಿ ಅಧ್ಯಯನ ಮಾಡಬಹುದು, ಭಾಷಾ ಬುದ್ಧಿಮತ್ತೆ, ತಾರ್ಕಿಕ ,ಗಣಿತ, ಪ್ರಾದೇಶಿಕ, ಸಂಗೀತ, ದೈಹಿಕ ಚಲನಶಾಸ್ತ್ರೀಯ, ನೈಸರ್ಗಿಕವಾದಿ, ಅಸ್ತಿತ್ವವಾದದ ವ್ಯಕ್ತಿಗತ ವಿಧಗಳನ್ನು ಒಳಗೊಂಡಿದೆ.

ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯು ಹೊಂದಿಕೊಳ್ಳುವ, ತರ್ಕಿಸುವ, ತಾರ್ಕಿಕವಾಗಿ ಯೋಚಿಸುವ, ಪರಿಸರದೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಮತ್ತು ಪರಿಸರದ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಅಮೂರ್ತವಾಗಿ ಆಲೋಚಿಸುವುದನ್ನು ಸಹ ಇದು ಬಿಂಬಿಸುತ್ತದೆ. Intelligence ಎಂಬ ಪದವು ಲ್ಯಾಟಿನ್ಪದ Inteligere “ to understand” ಎಂಬ ಪದದಿಂದ ನಿಷ್ಪತ್ತಿಯಾಗಿದೆ. ಸಾಮಾನ್ಯವಾಗಿ ಬುದ್ಧಿವಂತಿಕೆಯನ್ನು ಮೂರು ವಿಧಗಳಲ್ಲಿ ವರ್ಗಿಕರಿಸಿ ಅಧ್ಯಯನ ಮಾಡಲಾಗಿದೆ,                           

      

1. ಮೂರ್ತ ಅಥವಾ ಯಾಂತ್ರಿಕ ಬುದ್ಧಿವಂತಿಕೆ:-

ಈ ರೀತಿಯ ಬುದ್ಧಿಮತ್ತೆಯು ಒಬ್ಬ ವ್ಯಕ್ತಿಯು ಅರ್ಥೈಸುವ, ವಸ್ತು, ಯಂತ್ರೋಪಕರಣಗಳು, ಉಪಕರಣಗಳನ್ನು, ಸಮರ್ಥವಾಗಿ ಬಳಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಮೆಕ್ಯಾನಿಕ್, ತಂತ್ರಜ್ಞರು ,ಇಂಜಿನಿಯರ್, ಕುಶಲಕರ್ಮಿಗಳಲ್ಲಿ ಭೌತಿಕ ವಸ್ತುಗಳೊಂದಿಗೆ ಜಾಣ್ಮೆಯಿಂದ ಕಾರ್ಯ ನಿರ್ವಹಿಸುವ ಬುದ್ಧಿವಂತಿಕೆಯನ್ನು ಇದು ಪ್ರತಿನಿಧಿಸುತ್ತದೆ.

2.ಸಾಮಾಜಿಕ ಅಥವಾ  ಭಾವನಾತ್ಮಕ ಬುದ್ಧಿವಂತಿಕೆ:-

ಈ ರೀತಿಯ ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯು ತನ್ನ ಸಾಮಾಜಿಕ ಸನ್ನಿವೇಶಗಳನ್ನು ನಿಭಾಯಿಸುವ ಸಾಮರ್ಥ್ಯ, ಇತರರೊಂದಿಗೆ ಹೊಂದಿರುವ ಸಂಬಂಧ, ತನ್ನ ಸ್ವಂತ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಂಡು ಸೌಹಶರ್ದತೆಯಿಂದ ಕೂಡಿ ಬಾಳಲು ಸಹಾಯ ಮಾಡುತ್ತದೆ.ಉತ್ತಮ ಬಾಂಧವ್ಯವನ್ನು ಹೊಂದಲು ತನ್ನ ವೃತ್ತಿಜೀವನ, ಕುಟುಂಬ, ಸ್ನೇಹಿತರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಬುದ್ಧಿವಂತಿಕೆಯನ್ನು ಇದು ಪ್ರತಿನಿಧಿಸುತ್ತದೆ. ಈ ರೀತಿಯ ಕೌಶಲ್ಯಗಳನ್ನು ಒಬ್ಬ ವ್ಯಕ್ತಿಯು ಸಮಯದೊಂದಿಗೆ ಕಲಿತು ಸುಧಾರಿಸಬಹುದಾಗಿದೆ.

3.ಅಮೂರ್ತ ಬುದ್ಧಿವಂತಿಕೆ ಅಥವಾ ಸಾಮಾನ್ಯ ಬುದ್ಧಿವಂತಿಕೆ:-

ಈ ರೀತಿಯ ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯ ಒಟ್ಟಾರೆ ಮಾನಸಿಕ ಸಾಮರ್ಥ್ಯವನ್ನು ಸೂಚಿಸುತ್ತದೆ. ಇದು ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಲ್ಲ, ತಾರ್ಕಿಕ ಚಿಂತನೆ, ಸಮಸ್ಯೆ ಬಗೆಹರಿಸುವುದು, ಹೊಸ ವಿಷಯಗಳನ್ನು ಕಲಿಯುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಮೊದಲೇ ಕಲಿತ ಜ್ಞಾನದ ಸಹಾಯವಿಲ್ಲದೆ ಹೊಸ ಸಂದರ್ಭಗಳಲ್ಲಿ ತರ್ಕಬದ್ಧವಾಗಿ ಯೋಚಿಸುವುದೇ ಆಮೂರ್ತ ಬುದ್ಧಿವಂತಿಕೆ. ಈ ರೀತಿಯ ಬುದ್ಧಿವಂತಿಕೆಯು ಸಂಕೀರ್ಣ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ, ಹೊಸ ಆವಿಷ್ಕಾರಗಳನ್ನು ಮಾಡಲು, ಒಗಟು ಬಿಡಿಸಲು ವಿಷಯಗಳನ್ನು ವಿಶ್ಲೇಷಣಾತ್ಮಕವಾಗಿ ಆಲೋಚಿಸುವುದನ್ನು ಇದು ಪ್ರತಿನಿಧಿಸುತ್ತದೆ.

ಶತಮಾನಗಳವರೆಗೆ ವ್ಯಕ್ತಿಯ ಬುದ್ಧಿವಂತಿಕೆಯನ್ನು ಮಾನದಂಡವಾಗಿ ಇರಿಸಿದ್ದ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದವ ಹೆಚ್ಚು ಸಮರ್ಥ ಎಂದು ಭಾವಿಸಲಾಗುತ್ತಿತ್ತು. ಸಾಮರ್ಥ್ಯದ ಮಟ್ಟವನ್ನು ಪುಸ್ತಕದ ಜ್ಞಾನದ ವಲಯಗಳಿಂದ ಅಳೆಯಲಾಗುತ್ತಿತ್ತು. ಆದರೆ. ಮಾನವನ ಬುದ್ಧಿವಂತಕೆ ಕೇವಲ ಜ್ಞಾನಾತ್ಮಕ ವಲಯಕ್ಕೆ ಸೀಮಿತವಾಗಿಲ್ಲ, ಬುದ್ಧಿವಂತಿಕೆಯ ಪ್ರಮಾಣದ ಅಳೆಯುವ ಮಾನದಂಡವಾಗಬಾರದು. ಸಾಮಾನ್ಯವಾಗಿ ಬುದ್ಧಿವಂತಿಕೆಯ ಪ್ರಮಾಣವನ್ನು ನಾಲ್ಕು ವಿಧಗಳಲ್ಲಿ ಅಳೆಯಲಾಗುತ್ತದೆ.

ಬುದ್ಧಿಮತ್ತೆಯ ಪ್ರಮಾಣ-IQ Intelligence quotient

ಭಾವನಾತ್ಮಕ ಪ್ರಮಾಣ-EQ Emotional quotient

ಸಾಮಾಜಿಕ ಪ್ರಮಾಣ-SQ Social quotient

ಪ್ರತಿಕೂಲ ಪ್ರಮಾಣ-AQ Adverse quotient.

1.ಬುದ್ಧಿಮತ್ತೆಯ ಪ್ರಮಾಣ-IQ Intelligence quotient:-

ಬುದ್ಧಿಮತ್ತೆಯ ಅಂಶ ಎಂಬುದು ಬುದ್ಧಿಶಕ್ತಿಯನ್ನು ನಿರ್ಣಯಿಸಲು ಸಿದ್ಧಪಡಿಸಿರುವ ಪ್ರಮಾಣಿಕೃತ ಪರೀಕ್ಷೆಗಳನ್ನು ಒಳಗೊಂಡಿದೆ. ಇದನ್ನು ಐಕ್ಯೂ ()_ಎಂದು ಸಂಷೇಪಿಸಲಾಗುತ್ತದೆ. ಇದನ್ನು ಕಂಡು ಹಿಡಿಯಲು ಒಬ್ಬ ವ್ಯಕ್ತಿಯ ಮಾನಸಿಕ ವಯಸ್ಸನ್ನು ಕಾಲಾನುಕ್ರಮದ ವಯಸ್ಸಿನಿಂದ ಭಾಗಿಸಿ ಪಡೆದ ರಾವೆನ್ಸ ಪ್ರೋಗ್ರೆಸ್ಸಿವ್‌ ಮ್ಯಾಟ್ರಿಕ್ಸ್() ಅನ್ನು ಬಳಸಲಾಗುತ್ತದೆ.

ವೆಚ್ಲರ್ಸ್ ವಯಸ್ಕರ ಬುದ್ಧಿಮತ್ತೆ ಮಾಪಕ

ಸ್ಟ್ಯಾನ್‌ಫೋರ್ಡ್-ಬಿನೆಟ್ ಬುದ್ಧಿಮತ್ತೆಪರೀಕ್ಷೆ

ವುಡ್‌ಕಾಕ್ಸ ಜಾನ್ಸನ್ ಅರಿವಿನ ಸಾಮರ್ಥ್ಯಗಳ ಪರೀಕ್ಷೆಗಳು

ನಾಗ್ಲಿಯೇರಿ ಅಮೌಖಿಕ ಸಾಮರ್ಥ್ಯ ಪರೀಕ್ಷೆ

ಕೌಫ್‌ಮನ್‌ ಸಂಕ್ಷಿಪ್ತ ಬುದ್ಧಿಮತ್ತೆ ಪರೀಕ್ಷೆ

ರೆನಾಲ್ಡ್ಸ್‌ ಭೌದ್ಧಿಕ ಮೌಲ್ಯಮಾಪನ ಪಲಿತಾಂಶವನ್ನು ನೂರರಿಂದ ಗುಣಿಸಿದಾಗ  IQ ದೊರೆಯುತ್ತದೆ.

 

ವೆಚ್ಲರ್ಸ್‌ ಮಾಪಕದ ಪ್ರಕಾರ

130  ಮತ್ತು ಅದಕ್ಕಿಂತ ಹೆಚ್ಚಿನ ಪ್ರತಿಭಾನ್ವಿತ, 120-129 ಉನ್ನತ, 110-119 ಉನ್ನತ ಸರಾಸರಿ,90-109 ಸರಾಸರಿ

80-89 ಕಡಿಮೆ ಸರಾಸರಿ,70-79 ಗಡಿರೇಖೆ, 60-69 ತುಂಬಾಕಡಿಮೆ.

ಪರಿಸರ ಅಂಶಗಳು, ಶಿಕ್ಷಣ ಮತ್ತು ಪೋಷಣೆಯಿಂದ ಅರಿವಿನ ಸಾಮರ್ಥ್ಯ ತಾರ್ಕಿಕತೆ, ತರ್ಕ,ಸ್ಮರಣೆ ಇವು ಪ್ರಭಾವಿತವಾಗಿರುತ್ತದೆ.

2.ಭಾವನಾತ್ಮಕಪ್ರಮಾಣ  -EQ Emotional quotient:-

ಭಾವನಾತ್ಮಕ ಬುದ್ಧಿವಂತಿಕೆಯನ್ನು ಭಾವನಾತ್ಮಕ ಅಂಶ ಎನ್ನಲಆ.ಗುತ್ತದೆ. ಇತರರ ಭಾವನೆಗಳನ್ನು ಗ್ರಹಿಸುವ, ಸಹಾನುಭೂತಿಯನ್ನು ತೋರಿಸುವ, ಇತರರೊಂದಿಗೆ ವಿವೇಚನೆಯಿಂದ ನಡೆದುಕೊಳ್ಳುವುದು, ತಮ್ಮ ಸ್ವಂತ ಭಾವನೆಗಳ ಮೇಲೆ ನಿಗ್ರಹ, ಹಿಡಿತವನ್ನು ಹೊಂದಿರುವುದನ್ನುಇದುಪ್ರತಿನಿಧಿಸುತ್ತದೆ. EQ-ನಾವು ಕಲಿಯಲು ಬಹು ದು ಹಾಗೂ ಬಲಪಡಿಸಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ IQ ಗಿಂತ EQ ಹೊಂದಿರುವವರನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ. .ಕೆಲಸದ ಒತ್ತಡದಲ್ಲಿ ಕಾರ್ಯಕ್ಷಮತೆಯ ದಕ್ಷತೆಯನ್ನು ಹೊಂದಿರುವವರನ್ನು ಆಯ್ಕೆ ಮಾಡಿಕೊಳ್ಳುವ ಕಾರಣ ಇರಬಹುದು. ಹಿನ್ನೆಲೆಯಲ್ಲಿ ಪರಿಣಾಮಕಾರಿ ನಾಯಕರಾಗಲು EQ ಅಭಿವೃದ್ಧಿ ಪಡಿಸುವ ವಿಧಾನಗಳನ್ನು ಹುಡುಕಲಾಗುತ್ತಿದ ಇದು ಆರೋಗ್ಯಪೂರ್ಣ ಸಂಬಂಧ, ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಸಂಬಂಧ ಹೊಂದಲು ಮಾನಸಿಕವಾಗಿ ಸಿದ್ಧಪಡಿಸುತ್ತದೆ.

3.ಸಾಮಾಜಿಕಪ್ರಮಾಣ -SQ Social quotient:-

ಸಾಮಾಜಿಕ ಬುದ್ಧಿವಂತಿಕೆಯನ್ನು ಸಾಮಾಜಿಕ ಅಂಶ ಎಂದು ಸಹ ಉಲ್ಲೇಖಿಸಲಾಗಿದೆ. ಸಮಾಜದಲ್ಲಿ ಇತರರೊಂದಿಗೆ ತಮ್ಮ ಸಂಬಂಧ, ಸಾಮಾಜಿಕ ಸನ್ನಿವೇಶಗಳನ್ನು ನಿಭಾಯಿಸುವ, ಕ್ಲಿಷ್ಟ ಸನ್ನಿವೇಶಗಳನ್ನು ಅರ್ಥೈಸಿಕೊಂಡು ನಿಭಾಯಿಸುವ ಸಾಮರ್ಥ್ಯದ ಅಳತೆಯಾಗಿದೆ. ಇದು ಬುದ್ಧಿಶಕ್ತಿ ಮತ್ತು ಭಾವನಾತ್ಮಕ ಬುದ್ಧಿಶಕ್ತಿಗಿಂತ ಭಿನ್ನ. ಇದನ್ನು ವ್ಯಕ್ತಿಯ ಸಾಮಾಜಿಕ ವಯಸ್ಸು ಮತ್ತು ನಿಜವಾದ ವಯಸ್ಸಿನ ಅನುಪಾತದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಉತ್ತಮ ಸಂವಹನ ಕಲೆ,ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಗುಣ, ತಂಡದಲ್ಲಿ ಕಾರ್ಯ ನಿರ್ವಹಿಸುವುದು ಪರಾನುಭೂತಿ, ಇವು ಇದರ ಮುಖ್ಯ ಲಕ್ಷಣಗಳಾಗಿವೆ.


4.ಪ್ರತಿಕೂಲಪ್ರಮಾಣ-AQ Adverse quotient:-

ಇದು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳು, ಒತ್ತಡಗಳು, ಅಡೆತಡೆಗಳನ್ನು ಎದುರಿಸುವ ಸಾಮರ್ಥ್ಯದ ಅಳತೆಯಾಗಿದೆ.ಇದನ್ನು ಸಂಕಷ್ಟ ಎದುರಿಸುವ ಗುಣಾಂಕ ಎಂದು ಸಹ ಉಲ್ಲೇಖಿಸಲಾಗುತ್ತದೆ . ಅನೇಕ ಬಾರಿ ಐಕ್ಯೂಗಿಂತ ಎಕ್ಯೂ ಬಹುಮುಖ್ಯ ಎಂದು ಪರಿಗಣಿಸಲಾಗುತ್ತದೆ. ಸಂಕಷ್ಟ ಪರಿಸ್ಥಿತಿಗಳನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸಬಲ್ಲರು, ಜವಾಬ್ದಾರಿಯನ್ನು ಹೊರುವುದು. ಸಂಕಷ್ಟ ಪರಿಸ್ಥಿತಿಗಳು ಯಾವ ರೀತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ,ಈ ಪರಿಸ್ಥಿತಿಯ ಕಾಲವೆಷ್ಟು ? ಈ ಪರಿಸ್ಥಿತಿ ನಿಭಾಯಿಸುವುದು ಹೇಗೆ ? ಎಂಬ ನಾಲ್ಕು ಆಯಾಮಗಳಿಂದ ಇದನ್ನು ಗುರುತಿಸಬಹುದು. ಸುಲಭವಾಗಿ ಹೇಳುವುದಾದರೆ ಸೋಲನ್ನು ಗೆಲವನ್ನಾಗಿ ಮಾಡಿಕೊಳ್ಳುವ ಕಲೆಯನ್ನು ಇದು ಬಿಂಬಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಯನ್ನು ಹೀಗೆ ಎಂದು ಅಳೆಯಲು ಪ್ರಮಾಣಿಸಲು ಸಾಧ್ಯವಿಲ್ಲ. ಆ ವ್ಯಕ್ತಿಯ ಜ್ಞಾನಾತ್ಮಕ ವಲಯ ಒಂದಾದರೆ, ತಾರ್ಕಿಕವಾಗಿ ಯೋಚಿಸುವ ಸಾಮರ್ಥ್ಯ, ಸ್ಮರಣೆಯನ್ನು ಹೊಂದಿರುವ ಸಾಮರ್ಥ್ಯ,ಅಮೂರ್ತ ಬುದ್ಧಿವಂತಿಕೆ, ವಿವಿಧ ಸನ್ನಿವೇಶಗಳಲ್ಲಿ ಅವನ ವರ್ತನೆ, ಚತುರತೆ, ಜವಾಬ್ದಾರಿ ತೆಗೆದುಕೊಳ್ಳುವುದು, ತನ್ನ ಕುಟುಂಬ ಸ್ನೇಹಿತ ವಲಯ ವೃತ್ತಿ ಜೀವನ ಸಹೋದ್ಯೋಗಿಗಳೊಂದಿಗೆ ಅವನ ವರ್ತನೆ, ಕೌಶಲ್ಯ, ವಿಭಿನ್ನ ಸಾಮಾಜಿಕ ಕ್ಲಿಷ್ಟ ಸನ್ನಿವೇಶಗಳನ್ನು ನಿಭಾಯಿಸುವ ಛಾತಿ, ಪರಾನುಭೂತಿ, ಅಡೆತಡೆಗಳನ್ನು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನೇ ಅವನ ಬುದ್ಧಿಶಕ್ತಿ ಎನ್ನಬಹುದು.

No comments:

Post a Comment