ಕಡಜಗಳ ಜಗ
ಲೇಖಕರು : ಶ್ರೀ ಕೃಷ್ಣ ಚೈತನ್ಯ
ಜೇನುನೊಣವನ್ನು ಬಿಟ್ಟರೆ
ಭಯವನ್ನು ಹುಟ್ಟಿಸುವ ಇನ್ನೊಂದು ಕೀಟವೇ ಕಡಜ (ಕಣಜ). ಗಿಡ-ಮರಗಳಲ್ಲಿ, ಮನೆಗಳಲ್ಲಿ ಗೂಡು ಕಟ್ಟಿ ಬದುಕುವ ಇದು ಸಂಘಜೀವಿ. ಇದಕ್ಕೆ ವಿರುದ್ಧವಾಗಿ
ಏಕಾಂಗಿ ಜೀವನ ನಡೆಸುವ ಕಡಜವೂ ಇದೆ. ಇವು ಕಚ್ಚುವುದನ್ನು ನೆನಪಿಸಿಕೊಂಡರೆ ಮೈಯಲ್ಲಿ ಮಿಂಚು
ಹರಿದಂತೆ ಚುಳಾರ್ ಅನ್ನಿಸದೆ ಇರದು. ಕಚ್ಚಿದಾಗ ಅಷ್ಟು ಉರಿ,
ಊತ
ಮತ್ತು ಯಾತನೆ ಉಂಟಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಒಮ್ಮೆ ಮಾತ್ರ ಕಚ್ಚಿಸಿಕೊಂಡಿದ್ದ ನೆನಪು
ಇನ್ನೂ ಮನಸ್ಸಿನಲ್ಲಿ ಹಸಿಯಾಗಿ ಇರುವುದರಿಂದ ಮತ್ತು ನನ್ನ ಫೋಟೋ ಗ್ಯಾಲರಿಯಲ್ಲಿ
ಅವುಗಳಿಗೊಂದಿಷ್ಟು ಜಾಗ ಸಿಕ್ಕಿರುವುದರಿಂದ ಇವುಗಳ ಬಗ್ಗೆಯೇ ಯಾಕೆ ಬರೆಯಬಾರದು ಎಂದೆನಿಸಿ ಈ
ಲೇಖನವನ್ನು ತಮ್ಮ ಮುಂದೆ ಇಡುತ್ತಿದ್ದೇನೆ.
ವಿವಿಧ ಬಗೆಯ ಕಡಜಗಳು ವಿವಿಧ
ಸ್ಥಳಗಳಲ್ಲಿ ಕಂಡುಬರುತ್ತವೆಯಾದರೂ ಒಂದು ಪ್ರದೇಶಕ್ಕೆ ಇವು ಸೀಮಿತವಾಗಿರುವುದಿಲ್ಲ. ಹೆಗ್ಗಡಜ,
ಕುಂಬಾರ ಅಥವಾ ಮಣ್ಣಿನ ಕಡಜ, ಮಿನುಗು ಕಡಜ, ಜೇಡ ಕಡಜ,
ಹಳದಿ ಕಡಜ,
ಕಪ್ಪು ಕಡಜ ಮುಂತಾದವು ಪ್ರಮುಖವಾದವು. ಯಾವುದೇ ಕಡಜವಾದರೂ ಅವುಗಳಿಗೆ ಎದೆ ಮತ್ತು ಹೊಟ್ಟೆಯ
ನಡುವೆ ಅತ್ಯಂತ ಸಣ್ಣದಾದ ದೇಹ ರಚನೆ ಇರುವುದು. ಕೀಟಗಳಿಗಿರುವಂತೆ ಇವುಗಳಿಗೂ ಆರು ಕಾಲುಗಳಿವೆ.
ಸಂಯುಕ್ತ ಅಕ್ಷಿ, ಒಂದು ಜೊತೆ ಗ್ರಾಹಕ
ಕಶಾಂಗಗಳು, ಒಂದು ಜೊತೆ ತೆಳುವಾದ
ಪೊರೆಯಂತಿರುವ ರೆಕ್ಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಆದರೆ ಅತ್ಯಂತ ದೊಡ್ಡ ಕಡಜ
ಎಂದರೆ ಹೆಗ್ಗಡಜ (Greater
Banded Wasp). ಇದರ ವೈಜ್ಞಾನಿಕ ಹೆಸರು Vespa
tropica. ದಕ್ಷಿಣ ಏಷ್ಯಾ, ನ್ಯೂಗಿನಿ ಮತ್ತು ಪಶ್ಚಿಮ ಆಫ್ರಿಕಾ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಇವುಗಳ
ತಲೆ ಮತ್ತು ಎದೆ ಕಪ್ಪು ಬಣ್ಣದಲ್ಲಿದ್ದರೆ ಹೊಟ್ಟೆ ಕಪ್ಪು ಬಣ್ಣದಲ್ಲಿದ್ದರೂ ಎರಡು ಹಳದಿ
ಪಟ್ಟಿಗಳು ಮುಖ್ಯವಾಗಿವೆ. Lesser
Banded Hornet ಎಂಬ ಮತ್ತೊಂದು ಪ್ರಭೇದದ
ಕಡಜವೂ ಇದೆ.
ಇವುಗಳ ಗೂಡಿನ ರಚನೆಯಲ್ಲಿ
ಕಂಡುಬರುವ ಆಶ್ಚರ್ಯ ಎಂದರೆ ಒಟ್ಟಿಗೆ ಗೂಡುಕಟ್ಟಿ ಮೊಟ್ಟೆ ಇಡುವ ಬದಲಿಗೆ ಜೇನಿನ ಗೂಡಿನಂತೆ
ಷಡ್ಭುಜಾಕೃತಿಯಲ್ಲಿ ಒಂದು ಸಣ್ಣ ಕೋಣೆ ರಚಿಸಿ ಅದರಲ್ಲಿ ಮೊಟ್ಟೆ ಇಡುವುದು. ತದನಂತರ ಅದರ
ಸುತ್ತಲೂ ಅದೇ ರೀತಿಯ ರಚನೆಯನ್ನು ನಿರ್ಮಿಸಿ ಅವುಗಳಲ್ಲಿಯೂ ಮೊಟ್ಟೆ ಇಡುತ್ತದೆ. ಮೊಟ್ಟೆಗಳು
ಮೊದಲಿಗೆ ಬಿಳಿ ಬಣ್ಣದಲ್ಲಿದ್ದು ದಿನಕಳೆದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಡಜ
ಹುಳುಗಳಲ್ಲಿ ಕೇವಲ ಎರಡು ಬಗೆಯವು ಮಾತ್ರವಿದ್ದರೆ ಜೇನುಹುಳುಗಳಲ್ಲಿ ಮೂರು ಬಗೆಯ
ಹುಳುಗಳಿರುತ್ತವೆ. ರಾಣಿ ಕಡಜ ಮೊಟ್ಟೆ ಇಟ್ಟರೆ ಉಳಿದ ಒಂದು ಬಗೆಯ ಕಡಜ ಮೊಟ್ಟೆಗಳ ರಕ್ಷಣೆ ಮತ್ತು
ಮರಿಗಳಿಗೆ ಪೋಷಣೆಯ ಜವಾಬ್ದಾರಿ ಹೊತ್ತಿರುತ್ತವೆ. ಇವುಗಳಿಗೆ ಮೊಟ್ಟಮೊದಲು ಹೆಸರನ್ನು ಇಟ್ಟ
ಕೀರ್ತಿ Linnaeus
(1758) ಗೆ ಸಲ್ಲುತ್ತದೆ.
ಇದರ ಹೊಟ್ಟೆಯ ಹಿಂಭಾಗದಲ್ಲಿ
ಮುಳ್ಳು ಸ್ವಲ್ಪ ಮಟ್ಟಿಗೆ ಹುದುಗಿದಂತೆ ಇರುತ್ತದೆ. ಅಂದರೆ ಕಾಲು ಭಾಗ ಹೊರಗಡೆಗೂ ಇನ್ನುಳಿದ
ಮುಕ್ಕಾಲು ಭಾಗ ದೇಹದೊಳಗಿನ ಭಾಗದಲ್ಲಿ ಇರುತ್ತದೆ. ಅಲ್ಲಿಯೇ ಅದರ ವಿಷ ಅಡಗಿರುವುದು. ಇದರ
ಕಡಿತದಿಂದ ದೇಹದ ಒಳ ಸೇರುವ Acetylcholine ಮತ್ತು Mastoparan ವಿಷ ಸಾವನ್ನು ತಂದುಬಿಡುತ್ತದೆ. 2018
ರಲ್ಲಿಯೇ
ಇಂಡೋನೇಷ್ಯಾದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ.
ಆದರೆ ನಮ್ಮ ದೇಶದಲ್ಲಿ ಇವುಗಳ ಕಡಿತದಿಂದ ಉಂಟಾಗಿರುವ ಸಾವುಗಳ ಬಗ್ಗೆ ಯಾವುದೇ ಮಾಹಿತಿ
ಸಿಗದಿರುವುದು ಬಹುಶಃ ನಮ್ಮ ಜನರು ಅವುಗಳಿಂದ ದೂರ ಇರುವುದೇನೋ! ಅಥವಾ ಆಸ್ಪತ್ರೆಗೆ ತೆರಳದೆ
ಸತ್ತಿರುವುದು ತಿಳಿದಿಲ್ಲ. ಆದರೆ ಪ್ರಪಂಚದಲ್ಲಿ ವರ್ಷಕ್ಕೆ ಸುಮಾರು 788ಕ್ಕೂ ಅಧಿಕ ಮಂದಿ ಇವುಗಳ ಕಡಿತದಿಂದ ಸಾಯುತ್ತಿದ್ದಾರೆ.
ಉಳಿದ ಪ್ರಭೇದಗಳು ಅಷ್ಟು ಮಾರಣಾಂತಿಕ ಅಲ್ಲದಿದ್ದರೂ ಅವುಗಳಿಂದ ಉರಿ, ನೋವು ಮತ್ತು ಊತ ಕಾಣಿಸಿಕೊಂಡು ತೊಂದರೆ ಕೊಡುತ್ತವೆ. ಅವುಗಳಲ್ಲಿ ಕಾಗದದ ಕಡಜ (Paper Wasp), ಕುಂಬಾರ ಕಡಜ (Mud Wasp), ಸಣ್ಣ ಪಟ್ಟೆಯ ಕಡಜ (Lesser Banded Wasp) ಹಳ್ಳಿಗಳಲ್ಲಿ ಸಾಮಾನ್ಯವಾಗಿ ಜೀರುಂಡೆಗಳು ಎಂದು ಕರೆಯುತ್ತಿದ್ದ ಮಿನುಗು ಕಡಜ (Blue Mud Dauber Wasp), ಜೇಡ ಕಡಜ (Spider Wasp) ಮುಂತಾದವು ಪ್ರಮುಖವಾದವುಗಳು.
ಪೇಪರ್ ಕಡಜಗಳು ಗಾತ್ರದಲ್ಲಿ ಸಣ್ಣವುಗಳಾಗಿದ್ದು, ಮರದ ರೆಂಬೆಗಳಲ್ಲಿ, ಮನೆಯ ಮಾಡುಗಳ ಅಂಚಿನಲ್ಲಿ ಬಿಳಿ ಬಣ್ಣದ ಗೂಡನ್ನು ಕಟ್ಟುತ್ತವೆ. ಇದಕ್ಕಾಗಿ
ಅವು ಮರದ ತಿರುಳಿನ ಪುಡಿಯನ್ನು ತಮ್ಮ ಜೊಲ್ಲಿನ ಅಂಟಿನೊಂದಿಗೆ ಮಿಶ್ರಣಮಾಡಿ ಚಿಕ್ಕದಾದ ಅಥವಾ
ದೊಡ್ಡ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ. ಚಿಕ್ಕ ಗೂಡುಗಳನ್ನು ಕಿಟಕಿಯ ಒಂದು ಬದಿಯಲ್ಲಿ
ಅಥವಾ ಕಾಂಕ್ರೀಟ್ ರಚನೆಗಳ ಕೆಳಭಾಗದಲ್ಲಿ ಅಥವಾ ಎಲೆಯ ಕೆಳಭಾಗದಲ್ಲಿ ಸೀಮಿತ ಸಂಖ್ಯೆಯ ಕೋಣೆಗಳನ್ನು
ನಿರ್ಮಿಸಿ ವಾಸಿಸುತ್ತವೆ.
Lesser
Banded Wasp, ಇವು ಸ್ವಲ್ಪ ಮಟ್ಟಿಗೆ
ಹೆಚ್ಚು ತೊಂದರೆ ಕೊಡುವ ಕಡಜಗಳಾಗಿವೆ. ಇವು ಕಟ್ಟುವ ಗೂಡು ಕಲ್ಲಿನ ವಿವಿಧ ಪದರಗಳಂತೆ, ಗೋಲಾಕಾರದಲ್ಲಿ ಕಟ್ಟುತ್ತವೆ. ಆದರೆ ಮನೆಯೊಂದು ಹತ್ತಾರು ಬಾಗಿಲುಗಳಂತೆ
ಹಲವಾರು ರಂಧ್ರಗಳು ಪ್ರವೇಶ ದ್ವಾರಗಳಂತೆ ಇರುತ್ತವೆ. ಗೂಡಿನ ಒಳಗಡೆಯೇ ಮೊಟ್ಟೆ ಇಟ್ಟು ಮರಿಮಾಡುವ
ಇವ ಮರಿ ಹೊರಬರದಂತೆ ಒಂದೊಂದಾಗಿ ಮುಚ್ಚಿ ಹೆಬ್ಬಾಗಿಲಿನಂತೆ ಒಂದು ದ್ವಾರವನ್ನು
ಉಳಿಸಿಕೊಳ್ಳುತ್ತವೆ.
ಮಿನುಗು ಕಡಜಗಳ ಬಗ್ಗೆ ಹಿಂದೆ ‘ಬಿಆರ್‌ಟಿ’ ಮಿನುಗು ಕಡಜಗಳ ಲೋಕ ಎಂಬುದಾಗಿ ಓದಿದ್ದೆ. ಆದರೆ ಇವು ನಮಗೆ ಚಿಕ್ಕಂದಿನಿಂದಲೂ ಚಿರಪರಿಚಿತ. ನಮ್ಮ ಹಳ್ಳಿಯಲ್ಲಿದ್ದ ಹೆಂಚಿನ ಮನೆಯ ಹೊರಗಿನ ಮೂಲೆಯಲ್ಲಿ ನೇತಾಡುವ ಸುತ್ತಲಿ ಅಥವಾ ಸೆಣಬಿನ ದಾರಕ್ಕೆ ಬಹು ಸಂಖ್ಯೆಯಲ್ಲಿ ಕುಳಿತಿರುತ್ತಿದ್ದವು. ನಾವು ಪ್ಲಾಸ್ಟಿಕ್ ಕವರಿನ ಬಾಯಿ ಅಗಲಿಸಿ ಅವುಗಳನ್ನು ಹಿಡಿದುಕೊಂಡು ಬಾಯಿ ಮುಚ್ಚಿ ಅವುಗಳ ಶಬ್ದವನ್ನು ಆಲಿಸಿ ಸಂತೋಷಪಡುತ್ತಿದ್ದೆವು. ಆದರೆ ಒಮ್ಮೆಯೂ ಸಾಯಿಸಿಲ್ಲ, ಬದಲಾಗಿ ಸ್ವಲ್ಪ ಮಟ್ಟಿಗೆ ಬಾಯಿ ಸಡಿಲಿಸಿ ಒಂದೊಂದೇ ಹಾರಿಹೋಗುವುದನ್ನು ನೋಡಿ ಅಚ್ಚರಿಪಡುತ್ತಿದ್ದೆವು
. (ಮುಂದುವರಿಯುವುದು)
No comments:
Post a Comment