ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Monday, September 7, 2026

ಸಂಪಾದಕೀಯ


ಗುರುವಿನ ಬೆಳಕು… ಜ್ಞಾನದ ಪಯಣ…

 ರಾಮಚಂದ್ರ ಭಟ್. ಬಿ. ಜಿ. 

ಸಂಪಾದಕ ಮಂಡಳಿ, ಸವಿಜ್ಞಾನ

ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

ಈ ಸಂದರ್ಭದಲ್ಲಿ ಸವಿಜ್ಞಾನ ಬಳಗದ ಬಂಧುಗಳು ಶೈಕ್ಷಣಿಕ ಸಾಧನೆಗಾಗಿ ಪುರಸ್ಕೃತರಾಗಿರುವುದು ಸಂತಸದ ಹೊನಲು ಹರಿಯುವಂತೆ ಮಾಡಿದೆ.

ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಮಹಾನ್ ತತ್ವಜ್ಞಾನಿ ಮಾತ್ರವಲ್ಲ, ಶ್ರೇಷ್ಠ ಶಿಕ್ಷಕರೂ ಆಗಿದ್ದರು. ಶಿಕ್ಷಣವೆಂದರೆ ಕೇವಲ ಜ್ಞಾನವನ್ನು ನೀಡುವುದಲ್ಲ; ಅದು ವ್ಯಕ್ತಿತ್ವವನ್ನು ರೂಪಿಸಿ, ವಿವೇಕ, ಮೌಲ್ಯ ಮತ್ತು ಮಾನವೀಯತೆಯನ್ನು ಬೆಳೆಸುವ ಪ್ರಕ್ರಿಯೆ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು ಅವರು. ಅವರ ಜನ್ಮದಿನವಾದ ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವುದು, ಶಿಕ್ಷಕ ವೃತ್ತಿಯ ಮಹತ್ವವನ್ನು ಸ್ಮರಿಸುವುದರ ಜೊತೆಗೆ ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರವನ್ನು ಗೌರವಿಸುವ ಅಪೂರ್ವ ಪರಂಪರೆಯಾಗಿದೆ.

The true purpose of education is to foster the complete intellectual, emotional, moral, and social growth of an individual so they can realize their full potential and transform themselves.

ಒಬ್ಬ ಶಿಕ್ಷಕ ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿಯಲ್ಲ; ವಿದ್ಯಾರ್ಥಿಯೊಳಗಿನ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ದಿಕ್ಕು ತೋರಿಸಿ, ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸುವ ಶಿಲ್ಪಿ. ಸಮಾಜದ ಭವಿಷ್ಯವನ್ನು ರೂಪಿಸುವ ಈ ಮಹತ್ತರ ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ‘ಸವಿಜ್ಞಾನ’ ಬಳಗದ ಹೃತ್ಪೂರ್ವಕ ನಮನಗಳು.

ಈ ವಿಶೇಷ ಸಂದರ್ಭದಲ್ಲಿ ನಮ್ಮೆಲ್ಲರ ಗೌರವಕ್ಕೆ ಪಾತ್ರರಾದ ‘ವಿನಯ ವಿದ್ಯಾ ವಿಶಾರದ’ ಪ್ರಶಸ್ತಿ ಪುರಸ್ಕೃತರು ಹಾಗೂ ‘ಸವಿಜ್ಞಾನ’ದ ಪ್ರಧಾನ ಸಂಪಾದಕರಾದ ಡಾ. ಬಾಲಕೃಷ್ಣ ಅಡಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರಶಸ್ತಿಯ ಹೆಸರಿಗೆ ತಕ್ಕಂತೆ ವಿನಯ, ವಿದ್ಯೆ ಮತ್ತು ವಿಶಾರದತೆಯನ್ನು ಮೈಗೂಡಿಸಿಕೊಂಡಿರುವ ಅವರು, ನಮ್ಮೆಲ್ಲರನ್ನು ಪ್ರತಿಹಂತದಲ್ಲೂ ತಿದ್ದಿ, ತೀಡಿ, ಪ್ರೋತ್ಸಾಹಿಸಿ ಮುನ್ನಡೆಸುತ್ತಿರುವ ಸರಳ ಸಜ್ಜನಿಕೆಯ ವಿಶಿಷ್ಟ ವ್ಯಕ್ತಿತ್ವ. ಅವರ ಮಾರ್ಗದರ್ಶನ ‘ಸವಿಜ್ಞಾನ’ದ ಶೈಕ್ಷಣಿಕ ಪಯಣಕ್ಕೆ ಸದಾ ಸ್ಫೂರ್ತಿಯ ಸೆಲೆಯಾಗಿರಲಿ. ಈ ಸಾರ್ಥಕ ಆಯ್ಕೆಗೆ ಆಯ್ಕೆ ಸಮಿತಿಗೂ ಹೃತ್ಪೂರ್ವಕ ಧನ್ಯವಾದಗಳು.

‘ಸವಿಜ್ಞಾನ’ ಬಳಗದ ಹೆಮ್ಮೆಯ ಸಂಗಾತಿ, ಸ್ನೇಹಿತ ಸಿದ್ದು ಬಿರಾದಾರ್ ಅವರು ಸೂತ್ರದ ಗೊಂಬೆಯಾಟದ ವಿಶಿಷ್ಟ ಕಲೆಯ ಮೂಲಕ ವಿಜ್ಞಾನವನ್ನು ದೇಶ-ವಿದೇಶಗಳಲ್ಲಿ ಜನಪ್ರಿಯಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ವಿಜ್ಞಾನವನ್ನು ಕೇವಲ ಪಠ್ಯಪುಸ್ತಕದ ಪುಟಗಳಲ್ಲಿ ಸೀಮಿತಗೊಳಿಸದೆ, ಕಲೆ, ಮನರಂಜನೆ ಮತ್ತು ಸೃಜನಶೀಲತೆಯೊಂದಿಗೆ ಜನಮನಕ್ಕೆ ತಲುಪಿಸುವ ಅವರ ಪ್ರಯತ್ನವು ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಣ ಸಚಿವರು ಹಾಗೂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿರುವುದು ‘ಸವಿಜ್ಞಾನ’ ಬಳಗಕ್ಕೂ ಹೆಮ್ಮೆಯ ಸಂಗತಿ.

‘ಸವಿಜ್ಞಾನ’ ಬಳಗದ ಜ್ಞಾನದೀಪಿಕ ಶೈಕ್ಷಣಿಕ ದತ್ತಿ ‘ಶಿಕ್ಷಕರತ್ನ’ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಆರು ವರ್ಷಗಳ ಕಾಲ ‘ಸವಿಜ್ಞಾನ’ದೊಂದಿಗೆ ತಮ್ಮ ಜ್ಞಾನ, ಅನುಭವ ಮತ್ತು ಸೃಜನಶೀಲತೆಯನ್ನು ಹಂಚಿಕೊಂಡಿರುವ ಅವರ ಶೈಕ್ಷಣಿಕ ಸೇವೆ ಅಭಿನಂದನಾರ್ಹ.

‘ಸವಿಜ್ಞಾನ’ವೆಂದರೆ ಕೇವಲ ಒಂದು ಪತ್ರಿಕೆಯಲ್ಲ; ಅದು ಶಿಕ್ಷಕರ ಜ್ಞಾನ, ಅನುಭವ, ಪ್ರಯೋಗಶೀಲತೆ ಮತ್ತು ಸೃಜನಶೀಲತೆಯನ್ನು ಒಂದೆಡೆ ಸೇರಿಸುವ ಜ್ಞಾನ ವೇದಿಕೆ. ಶಿಕ್ಷಕರು ಕಲಿಯುತ್ತಾ, ಕಲಿಸುತ್ತಾ, ಪರಸ್ಪರರ ಅನುಭವಗಳಿಂದ ಸಮೃದ್ಧರಾಗುವ ಮೂಲಕ ವಿಜ್ಞಾನ ಶಿಕ್ಷಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು ಇದರ ಆಶಯ.

ಈ ಶಿಕ್ಷಕರ ದಿನಾಚರಣೆಯಲ್ಲಿ ‘ಕಲಿಸುವ ಪ್ರತಿಯೊಬ್ಬರೂ ಕಲಿಯುವವರಾಗಿರಲಿ; ಕಲಿಯುವ ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಬೆಳಕಾಗಲಿ’ ಎಂಬ ಆಶಯದೊಂದಿಗೆ, ನಿಮ್ಮೆಲ್ಲರ ಸಹಕಾರದೊಂದಿಗೆ ‘ಸವಿಜ್ಞಾನ’ದ ಜ್ಞಾನಯಾತ್ರೆ ಮತ್ತಷ್ಟು ದೂರ ಸಾಗಲಿ.

"ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ?ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ!"  ಎಂಬ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ನುಡಿಗಳೆಷ್ಟು ಅರ್ಥಪೂರ್ಣ.

ಎಲ್ಲ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.


Saturday, September 5, 2026

2026 ರ ರಾಷ್ಟ್ರಪ್ರಶಸ್ತಿ ಪುರಸ್ಕತ ಶಿಕ್ಷಕಿ – ಶ್ರೀಮತಿ ರತ್ನಕುಮಾರಿ. ಎಸ್.

ಕನ್ನಡ ನೆಲದ ರಾಷ್ಟ್ರರತ್ನ ಶ್ರೀಮತಿ ರತ್ನಕುಮಾರಿ ಎಸ್. 

— ಶಶಿಕುಮಾರ್ ಬಿ. ಎಸ್. 

ರಾಷ್ಟ್ರ ಪ್ರಶಸ್ತಿ (2019) ಪುರಸ್ಕೃತ ಶಿಕ್ಷಕ 

ಸರ್ಕಾರಿ ಪದವಿಪೂರ್ವ ಕಾಲೇಜು 

                                ಪ್ರೌಢಶಾಲಾ ವಿಭಾಗ,                                                                                                                                                     ಮಸ್ಕಲ್, ತುಮಕೂರು                                                      

(2026ರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ  ಶ್ರೀಮತಿ ರತ್ನಕುಮಾರಿ ಎಸ್. ರವರ ಪರಿಚಯ. )



“ನನ್ನ ವಿದ್ಯಾರ್ಥಿಯೇ ನನ್ನ ಗುರು” — ಶ್ರೀಮತಿ ರತ್ನಕುಮಾರಿ ಎಸ್.

ಒಂದು ಶಿಕ್ಷಕಿ ಮನಸ್ಸು ಮಾಡಿದರೆ ಒಂದು ತರಗತಿಯನ್ನು ಮಾತ್ರವಲ್ಲ, ಇಡೀ ಶಾಲೆಯನ್ನು; ಒಂದು ಶಾಲೆಯನ್ನು ಮಾತ್ರವಲ್ಲ, ಇಡೀ ಸಮುದಾಯವನ್ನೇ ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಶ್ರೀಮತಿ ರತ್ನಕುಮಾರಿ ಎಸ್. ಅವರು.



ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಂಚ ಹೋಬಳಿಯ ಸಮಟಗಾರು ಎಂಬ ಗ್ರಾಮೀಣ ಪರಿಸರದಿಂದ ರಾಷ್ಟ್ರ ರಾಜಧಾನಿ ದೆಹಲಿಯವರೆಗೆ ಅವರ ಶಿಕ್ಷಣ ಸೇವೆಯ ಪಯಣ, ಸಮರ್ಪಣೆ, ಸೃಜನಶೀಲತೆ ಮತ್ತು ಸಾಮಾಜಿಕ ಬದ್ಧತೆಯ ಅಪೂರ್ವ ಕಥನವಾಗಿದೆ.

ವೃತ್ತಿಪರ ಪರಿಚಯ

ಹುದ್ದೆ ಮತ್ತು ಶಾಲೆ: ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಮಟಗಾರು, ಕಡೂರು ಪೋಸ್ಟ್ – 577436, ಹುಂಚ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ.
DISE ಕೋಡ್: 29150214003
ಪ್ರಸ್ತುತ ಶಾಲೆಯಲ್ಲಿ ಸೇವೆ: 24 ವರ್ಷಗಳ ಸಮರ್ಪಿತ ಸೇವೆ
ಬೋಧನಾ ತತ್ವ: “ನನ್ನ ವಿದ್ಯಾರ್ಥಿಯೇ ನನ್ನ ಗುರು”

ನಾಲ್ವರು ಶಿಕ್ಷಕರು ಹಾಗೂ 56 ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯ ಬಹುತೇಕ ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮಗಳಿಂದ 10–12 ಕಿ.ಮೀ. ದೂರ ಕ್ರಮಿಸಿ ಶಾಲೆಗೆ ಆಗಮಿಸುತ್ತಾರೆ. ಗ್ರಾಮದಲ್ಲಿ ಕೇವಲ ನಾಲ್ವರು ವಿದ್ಯಾರ್ಥಿಗಳು ವಾಸಿಸುತ್ತಿದ್ದರೂ, ಇತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ (SMC) ಸಹಕಾರದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದು ಶಾಲೆಯ ಮೇಲಿನ ಸಮುದಾಯದ ಕಾಳಜಿಗೆ ಸಾಕ್ಷಿಯಾಗಿದೆ.

ಗ್ರಾಮೀಣ ಶಾಲೆಯೊಂದು ಸಂಪನ್ಮೂಲಭರಿತ ಕಲಿಕಾ ಕೇಂದ್ರವಾಗಿ...

ಶ್ರೀಮತಿ ರತ್ನಕುಮಾರಿ ಅವರ ಸೇವೆಯ ವಿಶೇಷತೆ ಕೇವಲ ತರಗತಿಯ ನಾಲ್ಕು ಗೋಡೆಗಳೊಳಗಿನ ಬೋಧನೆಗೆ ಸೀಮಿತವಾಗಿಲ್ಲ. ತಮ್ಮ ಶಾಲೆಯ ಆವರಣವನ್ನೇ ಮಕ್ಕಳಿಗೆ ನೋಡಿ, ಮಾಡಿ, ಅನುಭವಿಸಿ ಮತ್ತು ಆನಂದದಿಂದ ಕಲಿಯುವ ಮುಕ್ತ ಕಲಿಕಾ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ್ದಾರೆ.

ಸಮುದಾಯದ ಸಹಕಾರ – ಅಭಿವೃದ್ಧಿಯ ಶಕ್ತಿ

ಶಾಲೆಯ ಮೂಲಸೌಕರ್ಯ ಅಭಿವೃದ್ಧಿ, ಅಕ್ಷರ ದಾಸೋಹ ಭೋಜನ ಕೋಣೆಯ ನಿರ್ಮಾಣ, ವಿದ್ಯಾರ್ಥಿಗಳ ಸೌಲಭ್ಯಗಳು ಹಾಗೂ ವಿವಿಧ ಕಲಿಕಾ ಸಂಪನ್ಮೂಲಗಳಿಗಾಗಿ ವಸುಧೈವ ಕುಟುಂಬಕಂ ಚಾರಿಟೆಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಪಾಲುದಾರರಿಂದ ಸುಮಾರು ₹40 ಲಕ್ಷಕ್ಕೂ ಅಧಿಕ ಅನುದಾನ ಮತ್ತು ದೇಣಿಗೆಯನ್ನು ಸಂಗ್ರಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಕೇವಲ ಹಣ ಸಂಗ್ರಹಣೆಯ ಸಾಧನೆಯಲ್ಲ; “ಶಾಲೆ ನಮ್ಮದು, ಮಕ್ಕಳ ಭವಿಷ್ಯ ನಮ್ಮೆಲ್ಲರ ಹೊಣೆ” ಎಂಬ ಭಾವನೆಯನ್ನು ಸಮುದಾಯದಲ್ಲಿ ಮೂಡಿಸಿದ ಪ್ರಯತ್ನವಾಗಿದೆ.

ಶಾಲೆಯೇ ಒಂದು ತೆರೆದ ಪಠ್ಯಪುಸ್ತಕ

🌿 ನೈಮಿಷ ಔಷಧೀಯ ಸಸ್ಯಗಳ ಉದ್ಯಾನ : ಶಾಲಾ ಆವರಣದಲ್ಲಿರುವ ಔಷಧೀಯ ಸಸ್ಯಗಳ ಉದ್ಯಾನ ಮಕ್ಕಳಿಗೆ ಪ್ರಕೃತಿಯೊಂದಿಗೆ ನೇರ ಸಂವಾದ ಕಲ್ಪಿಸುತ್ತದೆ. ವಿವಿಧ ಗಿಡಮೂಲಿಕೆಗಳ ಹೆಸರು, ಸ್ವರೂಪ ಮತ್ತು ಅವುಗಳ ಸಾಂಪ್ರದಾಯಿಕ ಔಷಧೀಯ ಉಪಯೋಗಗಳನ್ನು ಮಕ್ಕಳು ಪುಸ್ತಕದಲ್ಲಿ ಓದುವುದಕ್ಕಿಂತ ನೇರವಾಗಿ ಸಸ್ಯಗಳನ್ನು ಕಂಡು, ಮುಟ್ಟಿ, ಗುರುತಿಸಿ ಕಲಿಯುತ್ತಾರೆ.

🔢 ಗಣಿತ ಮತ್ತು ವಿಜ್ಞಾನ ಉದ್ಯಾನ

ಅಮೂರ್ತ ಪರಿಕಲ್ಪನೆಗಳನ್ನು ಸರಳ ಮತ್ತು ಸ್ಪಷ್ಟಗೊಳಿಸಲು ಜ್ಯಾಮಿತೀಯ ಮಾದರಿಗಳು, ತೂಕ–ಅಳತೆ ಉಪಕರಣಗಳು ಹಾಗೂ ಪರಿಕಲ್ಪನಾ ಆಧಾರಿತ ಕಲಿಕಾ ವ್ಯವಸ್ಥೆಗಳನ್ನು ಬಳಸಲಾಗಿದೆ. ಹೀಗಾಗಿ ಗಣಿತ ಮತ್ತು ವಿಜ್ಞಾನವು ಪಠ್ಯಪುಸ್ತಕದಿಂದ ಹೊರಬಂದು ಶಾಲಾ ಆವರಣದಲ್ಲೇ ಜೀವಂತವಾಗುತ್ತದೆ.

🎭 ಶ್ರೀಶಾದಲೆ ರಂಗಮಂದಿರ : ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮುದಾಯದ ಸಭೆಗಳು, ನಾಟಕಗಳು ಮತ್ತು ವಿವಿಧ ಕಲಾ ಪ್ರದರ್ಶನಗಳಿಗೆ ಮುಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುವ ಈ ರಂಗಮಂದಿರವು ಶಾಲೆಯನ್ನು ಸಮುದಾಯದ ಸಾಂಸ್ಕೃತಿಕ ಕೇಂದ್ರವಾಗಿಯೂ ರೂಪಿಸಿದೆ.

“ಕಸದಿಂದ ರಸ” – ತ್ಯಾಜ್ಯಕ್ಕೆ ಹೊಸ ಬದುಕು

ರತ್ನಕುಮಾರಿ ಅವರ ಸೃಜನಶೀಲತೆಯ ಮತ್ತೊಂದು ವಿಶಿಷ್ಟ ಆಯಾಮ “ಕಸದಿಂದ ರಸ” ಪರಿಕಲ್ಪನೆ.

ಬಳಸಿ ಎಸೆಯುವ ಪ್ಲಾಸ್ಟಿಕ್ ಕಂಟೈನರ್‌ಗಳು, ತೈಲದ ಡಬ್ಬಿಗಳು ಹಾಗೂ ಹಳೆಯ ವಾಹನಗಳ ಟೈರ್‌ಗಳನ್ನು ಕಸದಂತೆ ಕಾಣದೆ, ಅವುಗಳನ್ನು ಕಲಿಕೋಪಕರಣಗಳು (TLM), ಸ್ಟೂಲ್‌ಗಳು, ಆಟಿಕೆಗಳು ಹಾಗೂ ಲಂಬ ಹೂಕುಂಡಗಳಾಗಿ ಮರುಬಳಕೆ ಮಾಡಲಾಗಿದೆ. ಇದರ ಮೂಲಕ ಮಕ್ಕಳಿಗೆ ಒಂದೇ ಸಮಯದಲ್ಲಿ ಸೃಜನಶೀಲತೆ ಮತ್ತು ಪರಿಸರ ಸಂರಕ್ಷಣೆ ಎಂಬ ಎರಡು ಪಾಠಗಳು ದೊರೆಯುತ್ತವೆ.

ನೈಜ ಜೀವನವೇ ಕಲಿಕೆಯ ಪ್ರಯೋಗಾಲಯ - “ಸಂತೆ” – ತರಗತಿಯಿಂದ ನೈಜ ಜಗತ್ತಿಗೆ 

ವಿದ್ಯಾರ್ಥಿಗಳಲ್ಲಿ ಗಣಿತ, ಭಾಷೆ, ಸಂವಹನ ಮತ್ತು ಆರ್ಥಿಕ ಸಾಕ್ಷರತೆಯನ್ನು ಬೆಳೆಸಲು “ಸಂತೆ” ಪರಿಕಲ್ಪನೆಯನ್ನು ಬಳಸಲಾಗಿದೆ. ತೂಕ ಮಾಡುವುದು, ಬೆಲೆ ನಿಗದಿಪಡಿಸುವುದು, ಬಿಲ್ ತಯಾರಿಸುವುದು, ಹಣ ಸ್ವೀಕರಿಸುವುದು, ಉಳಿಕೆ ಹಣ ನೀಡುವುದು ಹಾಗೂ ಗ್ರಾಹಕರೊಂದಿಗೆ ಸಂವಹನ ನಡೆಸುವುದು—ಇವೆಲ್ಲವನ್ನೂ ಮಕ್ಕಳು ಸ್ವತಃ ನಿರ್ವಹಿಸುತ್ತಾರೆ. ಇದು ಕೇವಲ ಆಟವಲ್ಲ; ನೈಜ ಜೀವನದ ಸನ್ನಿವೇಶದಲ್ಲಿ ಕಲಿಕೆಯ ಅತ್ಯುತ್ತಮ ಮಾದರಿ.

🌾 ಕೃಷಿ ಮತ್ತು ಕ್ಷೇತ್ರಾನುಭವ

ಸಾಂಪ್ರದಾಯಿಕ ಭತ್ತ ನಾಟಿ ಸೇರಿದಂತೆ ಸ್ಥಳೀಯ ಕೃಷಿ ಪದ್ಧತಿಗಳಲ್ಲಿ ವಿದ್ಯಾರ್ಥಿಗಳನ್ನು ನೇರವಾಗಿ ತೊಡಗಿಸುವ ಮೂಲಕ ನಮ್ಮ ನೆಲ, ಕೃಷಿ ಮತ್ತು ಗ್ರಾಮೀಣ ಪರಂಪರೆಯೊಂದಿಗೆ ಮಕ್ಕಳ ಸಂಬಂಧವನ್ನು ಗಟ್ಟಿಗೊಳಿಸಲಾಗಿದೆ.

ತಂತ್ರಜ್ಞಾನವೂ – ಪರಂಪರೆಯೂ ಜೊತೆಯಾಗಿ : ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸ್ಮಾರ್ಟ್ ತರಗತಿಗಳು, ಇಂಟರ್ನೆಟ್, ಡಿಜಿಟಲ್ ಪ್ರೊಜೆಕ್ಟರ್‌ಗಳು ಮತ್ತು ಕಂಪ್ಯೂಟರ್‌ಗಳ ಮೂಲಕ ದೃಶ್ಯಾಧಾರಿತ ಹಾಗೂ ಡಿಜಿಟಲ್ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಕ್ಕಳಿಗೆ ಅನುಭವದ ಮೂಲಕ ಕಲಿಸಲು ವಿಶೇಷ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಆಯೋಜಿಸಲಾಗಿದೆ. ಮತದಾನ, ನಾಯಕತ್ವ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವ—ಇವೆಲ್ಲವನ್ನೂ ಮಕ್ಕಳು ತರಗತಿಯಲ್ಲಿ ಕೇಳುವುದಕ್ಕಿಂತ ಸ್ವತಃ ಅನುಭವಿಸುವಂತೆ ಮಾಡಲಾಗಿದೆ.

FLN – ಕಲಿಕೆಯ ಬುನಾದಿಗೆ ಬಲ  : 

ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಅಭಿವೃದ್ಧಿಗೆ ಬಹು-ಸಂವೇದನಾಶೀಲ ಕಲಿಕಾ ಉಪಕರಣಗಳು, ಭಾಷಾ ಪ್ರಯೋಗಾಲಯಗಳು, ಸ್ಥಳೀಯ ಭಾಷೆಯಲ್ಲಿ ವಿದ್ಯಾರ್ಥಿಗಳೇ ಸಂಪಾದಿಸುವ ಹಸ್ತಪ್ರತಿ “ಚಿಣ್ಣರಲೋಕ”, ಇಂಗ್ಲಿಷ್ ಕಲಿಕಾ ಬೆಂಚ್‌ಗಳು ಹಾಗೂ ಪರಿಕಲ್ಪನಾ ಆಧಾರಿತ ಗೋಡೆಚಿತ್ರಗಳಂತಹ ವೈವಿಧ್ಯಮಯ ಕಲಿಕಾ ವ್ಯವಸ್ಥೆಗಳನ್ನು ಬಳಸಲಾಗಿದೆ. ಇದರಿಂದ “ಪ್ರತಿ ಮಗು ಕಲಿಯಬೇಕು; ಕಲಿಕೆ ಆನಂದದಾಯಕವಾಗಿರಬೇಕು” ಎಂಬ ಆಶಯ ಸಾಕಾರಗೊಳ್ಳುತ್ತದೆ.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ

ರತ್ನಕುಮಾರಿ ಅವರ ಶಿಕ್ಷಣದ ದೃಷ್ಟಿಕೋನವು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗಿಲ್ಲ. ದೈಹಿಕ ಆರೋಗ್ಯ, ಕ್ರೀಡೆ, ಯೋಗ, ಕಲೆ, ಸಂಸ್ಕೃತಿ, ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನೂ ಸಮಾನವಾಗಿ ಒಳಗೊಂಡಿದೆ.

🧘 ಯೋಗ, ಕ್ರೀಡೆ ಮತ್ತು ಆರೋಗ್ಯ

ನಿಯಮಿತ ದೈಹಿಕ ಚಟುವಟಿಕೆ, ಯೋಗ ಹಾಗೂ ಅಥ್ಲೆಟಿಕ್ಸ್ ತರಬೇತಿಗೆ ಒತ್ತು ನೀಡಲಾಗಿದೆ. ಇದರ ಫಲವಾಗಿ ವಿದ್ಯಾರ್ಥಿನಿ ರಕ್ಷಿತಾ ಅವರು 100 ಮೀಟರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ.

🎶 ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ

ಯಕ್ಷಗಾನ, ಶಾಸ್ತ್ರೀಯ ನೃತ್ಯ, ಸಂಗೀತ, ನಾಟಕ ಹಾಗೂ ಏಕಪಾತ್ರಾಭಿನಯದಂತಹ ಸಾಂಪ್ರದಾಯಿಕ ಮತ್ತು ಪ್ರದರ್ಶನ ಕಲೆಗಳಿಗೆ ಶಾಲೆಯಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ.

ಇದರ ಮೂಲಕ ಮಕ್ಕಳು ಕೇವಲ ಪಾಠ ಕಲಿಯುವುದಲ್ಲ; ತಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯನ್ನು ಅರಿತು ಬೆಳೆಸಿಕೊಳ್ಳುತ್ತಾರೆ.

🍎 ಆರೋಗ್ಯ ಮತ್ತು ಪೌಷ್ಟಿಕಾಂಶ ಜಾಗೃತಿ

ಪೋಷಣ ಅಭಿಯಾನ ಸೇರಿದಂತೆ ವಿವಿಧ ಆರೋಗ್ಯ ಮತ್ತು ಪೌಷ್ಟಿಕಾಂಶ ಆಧಾರಿತ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳನ್ನು ಆಯೋಜಿಸಿ, ಆರೋಗ್ಯಕರ ಜೀವನಶೈಲಿಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಗಿದೆ.

ಶಾಲೆ–ಪೋಷಕರು–ಸಮುದಾಯ: 

ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ರತ್ನಕುಮಾರಿ ಅವರು ವಿಶೇಷ ಆದ್ಯತೆ ನೀಡಿದ್ದಾರೆ. ಮನೆಭೇಟಿಗಳು, ವಿದ್ಯಾರ್ಥಿಗಳ ಪೋರ್ಟ್‌ಫೋಲಿಯೋ ಕುರಿತು ಸಂವಾದ, ಸ್ವಯಂಸೇವಕ ಚಟುವಟಿಕೆಗಳು, ಶಾಲಾ ಆವರಣದ ಅಭಿವೃದ್ಧಿ ಕಾರ್ಯಗಳು ಹಾಗೂ ಸಹಭಾಗಿತ್ವದ ಶಾಲಾ ಆಡಳಿತದ ಮೂಲಕ ಪೋಷಕರು ಮತ್ತು ತಾಯಂದಿರ ಸಮಿತಿಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಶಾಲೆ ಕೇವಲ “ಮಕ್ಕಳು ಬರುವ ಸ್ಥಳ”ವಾಗಿರದೆ, “ಇಡೀ ಸಮುದಾಯದ ಶಾಲೆ”ಯಾಗಿ ರೂಪುಗೊಂಡಿದೆ.

ಸಮಟಗಾರುವಿನಿಂದ ದೆಹಲಿಯವರೆಗೆ...

ಅನೇಕ ಕಲಿಕಾ ಪೂರಕ ಚಟುವಟಿಕೆಗಳನ್ನು ನಿರಂತರವಾಗಿ ರೂಪಿಸಿ, ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಶ್ರೀಮತಿ ರತ್ನಕುಮಾರಿ ಅವರು ತಮ್ಮ ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆಯನ್ನು ತಂದಿದ್ದಾರೆ. ಸುತ್ತಮುತ್ತಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೂ ಅವರು ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ.

ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಮನಸ್ಸು ಮಾಡಿದರೆ ಒಂದು ಶಾಲೆಯ ರೂಪವನ್ನೇ ಬದಲಾಯಿಸಬಹುದು; ಒಂದು ಶಾಲೆಯನ್ನು ಬದಲಾಯಿಸಿದರೆ ಒಂದು ಗ್ರಾಮದ ಭವಿಷ್ಯವನ್ನೇ ಬದಲಾಯಿಸಬಹುದು ಎಂಬುದಕ್ಕೆ ರತ್ನಕುಮಾರಿ ಮೇಡಂ ಅವರ ಸೇವಾ ಪಯಣ ಅತ್ಯುತ್ತಮ ನಿದರ್ಶನ.

ಸಮಟಗಾರು ಎಂಬ ಪುಟ್ಟ ಗ್ರಾಮೀಣ ಶಾಲೆಯ ಮಣ್ಣಿನಿಂದ ಆರಂಭವಾದ ಅವರ ಪಯಣ, ರಾಷ್ಟ್ರಮಟ್ಟದ ಗೌರವದ ದೆಹಲಿ ವೇದಿಕೆಯವರೆಗೆ ತಲುಪಿರುವುದು ಕರ್ನಾಟಕದ ಶಿಕ್ಷಕ ಸಮುದಾಯವೇ ಹೆಮ್ಮೆ ಪಡುವ ಸಂಗತಿ.

ಇದು ಕೇವಲ ಒಬ್ಬ ಶಿಕ್ಷಕಿಗೆ ಸಂದ ರಾಷ್ಟ್ರ ಪ್ರಶಸ್ತಿಯ ಕಥೆಯಲ್ಲ. ಇದು ಗ್ರಾಮೀಣ ಶಿಕ್ಷಣದ ಶಕ್ತಿ, ಶಿಕ್ಷಕರ ಸಂಕಲ್ಪ, ಸಮುದಾಯದ ಸಹಕಾರ ಮತ್ತು ಮಕ್ಕಳ ಮೇಲಿನ ಅಪಾರ ಪ್ರೀತಿಯ ಕಥೆ. ಸಮಟಗಾರುವಿನಿಂದ ದೆಹಲಿಯವರೆಗೆ ಸಾಗಿದ ಈ ಸಾರ್ಥಕ ಪಯಣವನ್ನು “ಸವಿಜ್ಞಾನ” ಓದುಗರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿದ ರತ್ನಕುಮಾರಿ ಮೇಡಂ ಅವರಿಗೆ ಹಾಗೂ ಈ ವರದಿಯನ್ನು ರೂಪಿಸಲು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಅನಂತ ಧನ್ಯವಾದಗಳು.

ಶ್ರೀಮತಿ ರತ್ನಕುಮಾರಿ ಎಸ್. ಅವರಿಗೆ ಹಾರ್ದಿಕ ಅಭಿನಂದನೆಗಳು.

ನಿಮ್ಮ ಸಾಧನೆ ಗ್ರಾಮೀಣ ಭಾರತದ ಸಾವಿರಾರು ಶಿಕ್ಷಕರಿಗೆ ಪ್ರೇರಣೆಯಾಗಲಿ; ನಿಮ್ಮ ಶಾಲೆ ಇನ್ನೂ ಸಾವಿರಾರು ಮಕ್ಕಳ ಕನಸುಗಳಿಗೆ ರೆಕ್ಕೆಗಳಾಗಲಿ.



Friday, September 4, 2026

ಜಗ ಮರೆಯಲೇ ಬಾರದ ಯಲ್ಲಾಪ್ರಗಡ ಸುಬ್ಬಾರಾವ್

ಜಗ ಮರೆಯಲೇ ಬಾರದ ಯಲ್ಲಾಪ್ರಗಡ ಸುಬ್ಬಾರಾವ್ ಎಂಬ ಸೋಜಿಗ !!!  

                                                             — ರಾಮಚಂದ್ರ ಭಟ್ ಬಿ.ಜಿ.

“ನಾನು ನೊಬೆಲ್ ಪಡೆಯಲಿಲ್ಲ… ಆದರೆ ನಿಮ್ಮ ಜೀವಕೋಶಗಳು ನನ್ನನ್ನು ಇನ್ನೂ ನೆನಪಿಟ್ಟುಕೊಂಡಿವೆ!”

ಈ ಹೇಳಿಕೆಯ ಹಿಂದಿನ ಧ್ವನಿಯನ್ನು ಅರ್ಥ ಮಾಡಿಕೊಂಡಲ್ಲಿ ನಮಗೆ ಆ ವ್ಯಕ್ತಿಯ ನೋವು  ಅರಿವಾದೀತು. ಅವರಿಗಾದ ಅನ್ಯಾಯ ಭಾರತೀಯರೂ ಮರೆಯುವಂಥದ್ದಲ್ಲ.  ಕೆಲವು ವಿಜ್ಞಾನಿಗಳ ಮಹತ್ವವನ್ನು ಅವರು ಪಡೆದ ಪ್ರಶಸ್ತಿಗಳ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಕೆಲವರ ಹೆಸರಿನ ಮುಂದೆ ದೊಡ್ಡ ದೊಡ್ಡ ಬಿರುದುಗಳಿರುವುದಿಲ್ಲ. ಅವರ ಭಾವಚಿತ್ರಗಳು ವಿಜ್ಞಾನ ಸಂಸ್ಥೆಗಳ ಗೋಡೆಗಳನ್ನು ಅಲಂಕರಿಸಿರುವುದಿಲ್ಲ. ಪಠ್ಯಪುಸ್ತಕಗಳಲ್ಲಿಯೂ ಅವರ ಹೆಸರು ದೊಡ್ಡ ಅಕ್ಷರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

“ಒಬ್ಬ ವಿಜ್ಞಾನಿಯ ಸಂಶೋಧನೆಯಿಂದ ಎಷ್ಟು ಕೋಟಿ ಜೀವಗಳು ಉಳಿದಿವೆ?”    ಈ ಪ್ರಶ್ನೆಗೆ ಉತ್ತರ ಹುಡುಕಿದಾಗ, ಯಲ್ಲಾಪ್ರಗಡ ಸುಬ್ಬಾರಾವ್ ಎಂಬ ಅದ್ಭುತ ವಿಜ್ಞಾನಿಯ ನಿಜವಾದ ಎತ್ತರ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಭಾರತೀಯರ ಮನದಲ್ಲಿ ಈ ಪೂರ್ವ ಸೂರಿಯ ಬಗ್ಗೆ ಗೌರವಭಾವ ತಾನಾಗಿಯೇ ಒಡಮೂಡುತ್ತದೆ. 

ಇವರು ಕೇವಲ ವಿಜ್ಞಾನಿಯಲ್ಲ. ಅವರು ಮನುಷ್ಯನ ನೋವಿಗೆ ವಿಜ್ಞಾನದ ಮುಲಾಮು ಹಚ್ಚಿದ  ಮಹಾಮೇಧಾವಿ. ಅವರ ಸಂಶೋಧನೆಗಳು ಜೀವಕೋಶದ ಶಕ್ತಿಯಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆಯವರೆಗೆ, ಪ್ರತಿಜೀವಕಗಳಿಂದ ಹಿಡಿದು ಪರೋಪಜೀವಿ ರೋಗಗಳ ಚಿಕಿತ್ಸೆಯವರೆಗೆ ಆಧುನಿಕ ವೈದ್ಯಕೀಯದ ಮೇಲೆ ಅಚ್ಚಳಿಯದ ಪ್ರಭಾವ ಬೀರುತ್ತಲೇ ಇವೆ. ಎಂತಹ ವಿಚಿತ್ರ ನೋಡಿ. ಜಗತ್ತು ಅವರ ಹೆಸರನ್ನು ಮರೆತರೂ, ಅವರ ವಿಜ್ಞಾನವನ್ನು ಮರೆಯುವಂತೆಯೇ ಇಲ್ಲ!


ಎರಡು ಬಾರಿ ಸೋತ ಬಾಲಕ… ಮೂರನೇ ಬಾರಿ ವಿಜ್ಞಾನವನ್ನು ಗೆದ್ದ !!!

೧೭ನೇ ಶತಮಾನದಲ್ಲಿ ಗೋಲ್ಕೊಂಡ ನವಾಬರ ಆಸ್ಥಾನದಲ್ಲಿ ಮಂತ್ರಿಯಾಗಿದ್ದ 'ಯಲ್ಲಣ್ಣ' ಎಂಬುವವರ ವಂಶಸ್ಥರೇ 'ಯಲ್ಲಾಪ್ರಗಡ' ಮನೆತನದವರು. ನಂತರದ ತಲೆಮಾರುಗಳಲ್ಲಿ ಇವರು ಕಂದಾಯ ಲೆಕ್ಕಿಗರಾಗಿ (ಅಕೌಂಟೆಂಟ್) ಸೇವೆ ಸಲ್ಲಿಸಿದರು. ಆದರೆ ಸುಬ್ಬಾರಾವ್ ಅವರ ಅಜ್ಜ ಸುಬ್ಬರಾಜು ತೀರಿಕೊಂಡ ನಂತರ, ಆ ದೊಡ್ಡ ಅವಿಭಕ್ತ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ತಂದೆ ಜಗನ್ನಾಥಂ ಅವರಿಗೆ ಕಡಿಮೆ ವೇತನದ ಕೆಲಸ ಸಿಕ್ಕಿದ್ದರಿಂದ ಬಡತನ ಮತ್ತಷ್ಟು ಹೆಚ್ಚಾಯಿತು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಬೆಳೆದ ಯಲ್ಲಾಪ್ರಗಡ ಸುಬ್ಬಾರಾವ್ (೧೮೯೫–೧೯೪೮) ಅವರು ಜಾಗತಿಕ ವೈದ್ಯಕೀಯ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಹಾನ್ ಜೀವವಿಜ್ಞಾನಿ.

1895ರ ಜನವರಿ 12ರಂದು ಆಂಧ್ರಪ್ರದೇಶದ ಭೀಮವರಂನಲ್ಲಿ ಜನಿಸಿದ ಯಲ್ಲಾಪ್ರಗಡ ಸುಬ್ಬಾರಾವ್ ಅವರ ಬಾಲ್ಯ‌ ಕಲ್ಲು ಮುಳ್ಳಿನ ಹಾದಿ. ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಹಾಸುಹೊಕ್ಕಾಗಿತ್ತು. ತಂದೆಯ ಅನಾರೋಗ್ಯ. ಕುಟುಂಬ ಉದರಂಭರಣಕ್ಕೆ ಹರಸಾಹಸಪಡಬೇಕಾಯಿತು. ಇನ್ನು  ಮಕ್ಕಳ ವಿದ್ಯಾಭ್ಯಾಸ ಮುಂದುವರೆಸುವುದು ಹೇಗೇ? ತಾಯಿ ವೆಂಕಮ್ಮ ತಮ್ಮ ಒಡವೆಗಳನ್ನೇ ಮಾರಿ ಓದಿಸಬೇಕಾಯಿತು. ಇಂತಹ ಜಂಜಡಗಳ  ನಡುವೆ ಅವರ ಶಿಕ್ಷಣ ಮುಂದುವರಿಯಿತು. ಎರಡು ಬಾರಿ ಪರೀಕ್ಷೆಯಲ್ಲಿ ವಿಫಲರಾಗಬೇಕಾಯಿತು! ಇಲ್ಲಿಯೇ ಸಾಮಾನ್ಯ ವಿದ್ಯಾರ್ಥಿ ಮತ್ತು ಅಸಾಮಾನ್ಯ ವ್ಯಕ್ತಿಯ ನಡುವಿನ ವ್ಯತ್ಯಾಸ ಕಾಣುತ್ತದೆ. ಈ ಎರಡು ಸೋಲುಗಳು ಅವರ ಜೀವನವನ್ನು ನಿಲ್ಲಿಸಲಿಲ್ಲ. ಛಲಬಿಡದ ತ್ರಿವಿಕ್ರಮನಂತೆ,  ಮೂರನೇ ಪ್ರಯತ್ನದಲ್ಲಿ ಮೆಟ್ರಿಕ್ಯುಲೇಷನ್ ಉತ್ತೀರ್ಣರಾದರು.

ಒಂದು ಕ್ಷಣ ಯೋಚಿಸಿ…

ಇಂದು ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ “ನನ್ನ ಜೀವನ ಮುಗಿಯಿತು” ಎಂದುಕೊಳ್ಳುವ ವಿದ್ಯಾರ್ಥಿಗಳಿದ್ದಾರೆ. ಆದರೆ ಸುಬ್ಬಾರಾವ್ ಅವರ ಜೀವನ ಹೇಳುತ್ತದೆ— “ಒಂದು ಪರೀಕ್ಷೆಯ ಫಲಿತಾಂಶ ನಿಮ್ಮ ಸಾಮರ್ಥ್ಯದ ಅಂತಿಮ ತೀರ್ಪಲ್ಲ.” ವಿಫಲತೆ ಯಶಸ್ಸಿನ ಬಾಗಿಲನ್ನು ಮುಚ್ಚದು. ಅದು ಮತ್ತೊಂದು ಬಾಗಿಲನ್ನು ಹುಡುಕಲು ಪ್ರೇರಣೆ ನೀಡುತ್ತದೆ. ಆದರೆ ಎರಡು ಬಾರಿ ಸೋಲುವ ಅಗತ್ಯವಿಲ್ಲ; ಒಂದೇ ಬಾರಿ ಪಾಠ ಕಲಿತರೆ ಸಾಕು!

ಸನ್ಯಾಸಿಯಾಗಬೇಕಿದ್ದ ಯುವಕ… ವೈದ್ಯನಾದದ್ದು ಏಕೆ? 

ಯುವ ಸುಬ್ಬಾರಾವ್ ಅವರ ಮನಸ್ಸಿನಲ್ಲಿ ಸಮಾಜ ಸೇವೆಯ ಕನಸು ಇತ್ತು. ರಾಮಕೃಷ್ಣ ಮಿಷನ್‌ನ ಪ್ರಭಾವದಿಂದ ಸನ್ಯಾಸಿಯಾಗಿ ಮಾನವ ಸೇವೆ ಮಾಡಬೇಕೆಂಬ ಆಸೆ ಅವರಲ್ಲಿತ್ತು. ಆದರೆ ಜೀವನ ಅವರಿಗಾಗಿ ಬೇರೆ ದಾರಿಯನ್ನು ಆಯ್ಕೆ ಮಾಡಿತ್ತು.  ಮಾನವಕುಲದ ನೋವನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ವೈದ್ಯಕೀಯವೂ ಒಂದು ಎಂಬ ಅರಿವು ಅವರ ಮನಸ್ಸನ್ನು ಬದಲಿಸಿತು. ಹೀಗಾಗಿ ಸನ್ಯಾಸದ ಬದಲು ಅವರು ವೈದ್ಯಕೀಯ ಶಿಕ್ಷಣದ ದಾರಿಯನ್ನು ಆರಿಸಿಕೊಂಡರು. ಆದರೆ ಇಲ್ಲಿಯೂ ಒಂದು ವಿಚಿತ್ರ ತಿರುವು ಎದುರಾಯಿತು. ಗಾಂಧೀಜಿಯ ಸ್ವದೇಶಿ ಚಳವಳಿಯಿಂದ ಪ್ರೇರಿತರಾದ ಸುಬ್ಬಾರಾವ್ ಖಾದಿ ಧರಿಸುತ್ತಿದ್ದರು. ಅಷ್ಟೇ ಅಲ್ಲ, ಖಾದಿಯಿಂದ ತಯಾರಿಸಿದ ಸರ್ಜಿಕಲ್ ಗೌನ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದರು. ಬ್ರಿಟಿಷ್ ಪ್ರಾಧ್ಯಾಪಕರಿಗೆ ಇದು ಇಷ್ಟವಾಗಲಿಲ್ಲ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದರೂ ಅವರಿಗೆ ಪೂರ್ಣ MBBS ಪದವಿಯ ಬದಲು LMS ಪದವಿ ದೊರೆಯಿತು. ಆದರೆ ಸುಬ್ಬಾರಾವ್ ಅವರ ಮನಸ್ಸಿನಲ್ಲಿದ್ದ ವಿಜ್ಞಾನವನ್ನು ಯಾವ ಪದವಿಯೂ ಕಡಿಮೆ ಮಾಡಲಿಲ್ಲ. ಬಹುಶಃ ಅವರು ಮನಸ್ಸಿನಲ್ಲೇ ಹೀಗೆ ಹೇಳಿಕೊಂಡಿರಬಹುದು —

“ಪದವಿ ಕಡಿಮೆ ಕೊಟ್ಟರೆ ಪರವಾಗಿಲ್ಲ… ನಾನು ಮಾಡುವ ವಿಜ್ಞಾನವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ!” 

 ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಕನಸಿನೊಂದಿಗೆ ಅವರು ಅಮೆರಿಕಕ್ಕೆ ತೆರಳಿದರು. ಆದರೆ ಅಲ್ಲಿ ಮತ್ತೊಂದು ಕಠಿಣ ವಾಸ್ತವ ಎದುರಾಯಿತು. LMS ಪದವಿಯ ಕಾರಣ ಅವರಿಗೆ ವಿದ್ಯಾರ್ಥಿವೇತನ ದೊರೆಯಲಿಲ್ಲ. ಜೀವನ ಸಾಗಿಸಲು ಹಾರ್ವರ್ಡ್ ಆಸ್ಪತ್ರೆಯಲ್ಲಿ ರಾತ್ರಿ ನೈಟ್ ಪೋರ್ಟರ್ ಆಗಿ ಕೆಲಸ ಮಾಡಬೇಕಾಯಿತು. ಆಸ್ಪತ್ರೆಯ ಸಾಮಾನ್ಯ ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿದ್ದರು.

ರಾತ್ರಿ ಕೆಲಸ. ಹಗಲು ಪ್ರಯೋಗಾಲಯ. ಇದು ಕೇವಲ ಉದ್ಯೋಗ ಮತ್ತು ಸಂಶೋಧನೆಯ ನಡುವಿನ ಸಮತೋಲನವಲ್ಲ. ಇದು ಬಡತನ ಮತ್ತು ಪ್ರತಿಭೆಯ ನಡುವಿನ ಹೋರಾಟ!

ಅದೇ ಹಾರ್ವರ್ಡ್‌ನಲ್ಲಿ ಸೈರಸ್ ಫಿಸ್ಕೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಅಲ್ಲಿ ಅವರು ರಕ್ತದಲ್ಲಿನ ಫಾಸ್ಫರಸ್ ಪ್ರಮಾಣವನ್ನು ಅಳೆಯಲು ಬಳಸಬಹುದಾದ ಫಿಸ್ಕೆ–ಸುಬ್ಬಾರಾವ್ ವಿಧಾನವನ್ನು ಅಭಿವೃದ್ಧಿಪಡಿಸಿದರು. ಇದು ವೈದ್ಯಕೀಯ ಜೈವರಸಾಯನಶಾಸ್ತ್ರದಲ್ಲಿ ಮಹತ್ವದ ಸಾಧನೆಯಾಯಿತು. ಆದರೆ ವಿಜ್ಞಾನದಲ್ಲಿ ಶ್ರೇಯಸ್ಸಿನ ಹಂಚಿಕೆಯ ಕಥೆ ಯಾವಾಗಲೂ ಸುಂದರವಾಗಿರುವುದಿಲ್ಲ. ಸುಬ್ಬಾರಾವ್ ಅವರ ಕೊಡುಗೆಗಳಿಗೆ ತಕ್ಕಷ್ಟು ಮಾನ್ಯತೆ ಸಿಗಲಿಲ್ಲ ಎಂಬುದು ಅವರ ಜೀವನದ ನೋವಿನ ಅಧ್ಯಾಯಗಳಲ್ಲಿ ಒಂದು.

ATP: ಜೀವಕೋಶದ ‘ಶಕ್ತಿಯ ಕರೆನ್ಸಿ’

ಸುಬ್ಬಾರಾವ್ ಅವರ ಅತ್ಯಂತ ಮಹತ್ವದ ವೈಜ್ಞಾನಿಕ ಕೊಡುಗೆಗಳಲ್ಲಿ ಒಂದು ಜೀವಕೋಶದ ಶಕ್ತಿಯ ಕುರಿತಾದ ಸಂಶೋಧನೆ. ನಾವು ಆಹಾರ ಸೇವಿಸುತ್ತೇವೆ. ಆ ಆಹಾರದಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದರೆ ಆಹಾರದಲ್ಲಿರುವ ಶಕ್ತಿಯನ್ನು ಜೀವಕೋಶಗಳು ನೇರವಾಗಿ ಬಳಸುವುದಿಲ್ಲ. ಜೀವಕೋಶಗಳಲ್ಲಿ ATP — Adenosine Triphosphate ಎಂಬ ಅಣು ಶಕ್ತಿಯ ವಿನಿಮಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಳವಾಗಿ ಹೇಳುವುದಾದರೆ— ATP ಜೀವಕೋಶದ ‘ಶಕ್ತಿಯ ಕರೆನ್ಸಿ’. ಹಣ ನಮ್ಮ ದೈನಂದಿನ ವ್ಯವಹಾರಕ್ಕೆ ಹೇಗೋ, ATP ಜೀವಕೋಶದ ಶಕ್ತಿಯ ವ್ಯವಹಾರಕ್ಕೆ ಹಾಗೆ. ಸುಬ್ಬಾರಾವ್ ಮತ್ತು ಅವರ ಸಹೋದ್ಯೋಗಿಗಳ ಸಂಶೋಧನೆಗಳು ATP ಮತ್ತು ಫಾಸ್ಫೋಕ್ರಿಯೇಟಿನ್‌ನ ಪಾತ್ರವನ್ನು ಅರ್ಥಮಾಡಿಕೊಳ್ಳಲು ಮಹತ್ವದ ದಾರಿ ತೆರೆದವು. ಇಂದು ನಾವು ಜೀವಕೋಶದ ಶಕ್ತಿಯ ಬಗ್ಗೆ ಮಾತನಾಡುವಾಗ ಅವರ ಸಂಶೋಧನೆಯ ಪ್ರತಿಧ್ವನಿ ಅಲ್ಲಿ ಕೇಳಿಸುತ್ತದೆ. ಹಾಗಾಗಿ ಒಂದು ಸಣ್ಣ ಹಾಸ್ಯ ಮಾಡಬಹುದಾದರೆ—  “ನೀವು ನನ್ನ ಹೆಸರನ್ನು ಮರೆತಿರಬಹುದು… ಆದರೆ ನಿಮ್ಮ ಜೀವಕೋಶಗಳು ಪ್ರತಿದಿನ ATP ಮೂಲಕ ನನ್ನ ಕೆಲಸವನ್ನು ನೆನಪಿಸಿಕೊಳ್ಳುತ್ತಿವೆ!”

ಕ್ಯಾನ್ಸರ್ ಚಿಕಿತ್ಸೆಯ ಹೊಸ ಅಧ್ಯಾಯ : 

ಸುಬ್ಬಾರಾವ್ ಅವರ ಮತ್ತೊಂದು ಮಹತ್ವದ ಕೊಡುಗೆ ಕ್ಯಾನ್ಸರ್ ಚಿಕಿತ್ಸೆಯ ಇತಿಹಾಸಕ್ಕೆ ಸಂಬಂಧಿಸಿದೆ. Lederle Laboratoriesನಲ್ಲಿ ಅವರು ಫೋಲಿಕ್ ಆಮ್ಲದ ಚಯಾಪಚಯವನ್ನು ತಡೆಯುವ ಕೆಲವು ಸಂಯುಕ್ತಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವುಗಳಲ್ಲಿ Aminopterin ಮತ್ತು ನಂತರದ Methotrexate ವಿಶೇಷ ಮಹತ್ವ ಪಡೆದವು. 

Methotrexate Molecule

1948ರಲ್ಲಿ ಸಿಡ್ನಿ ಫಾರ್ಬರ್ ಅವರು ಅಮಿನೋಪ್ಟರಿನ್ ಬಳಸಿ ಮಕ್ಕಳಲ್ಲಿ ಕಂಡುಬರುವ ತೀವ್ರ ಲಿಂಫೋಬ್ಲಾಸ್ಟಿಕ್ ಲ್ಯೂಕೀಮಿಯಾದಲ್ಲಿ ಮೊದಲ ಗಮನಾರ್ಹ ರೆಮಿಷನ್‌ಗಳನ್ನು ತೋರಿಸಿದರು. ಇದು ಕ್ಯಾನ್ಸರ್ ಚಿಕಿತ್ಸೆಯ ಇತಿಹಾಸದಲ್ಲಿ ಒಂದು ಮಹತ್ವದ ತಿರುವಾಗಿತ್ತು. ಅಂದಿನವರೆಗೆ ಕ್ಯಾನ್ಸರ್ ಎಂದರೆ ಬಹುತೇಕ ಸಾವೇ ಅಂತಿಮ ಎಂಬ ತೀರ್ಪಿನಂತಿತ್ತು. ಆದರೆ ಈಗ ವಿಜ್ಞಾನದ ಆಗಸದಲ್ಲಿ ಆಸೆಯ ಬೆಳ್ಳಿಗೆರೆ ಮೂಡಿತು “ಕ್ಯಾನ್ಸರ್ ವಿರುದ್ಧವೂ ಔಷಧಿಯ ಮೂಲಕ ಹೋರಾಡಬಹುದು.” ಎಂಬ ಭರವಸೆಯ ಬೆಳಕು ಮೂಡಿತು. ಆಧುನಿಕ ಕೀಮೋಥೆರಪಿಯ ಬೆಳವಣಿಗೆಯಲ್ಲಿ ಈ ಸಂಶೋಧನೆಗಳು ಮಹತ್ವದ ಮೈಲಿಗಲ್ಲಾದವು. 

೭೦ ವರ್ಷ ದಾಟಿದ ವಿಜ್ಞಾನಿ… ಮತ್ತೆ ಸಂಶೋಧನೆಯ ಅಂಗಳಕ್ಕೆ! ವಿಜ್ಞಾನದಲ್ಲಿ ವಯಸ್ಸು ಒಂದು ಸಂಖ್ಯೆ ಮಾತ್ರ ಎಂಬುದಕ್ಕೆ ಬೆಂಜಮಿನ್ ಡಗ್ಗರ್ ಅವರ ಕಥೆಯೂ ಒಂದು ಉದಾಹರಣೆ. 70 ವರ್ಷ ದಾಟಿದ ನಂತರ ಅವರು ವಿಶ್ವವಿದ್ಯಾಲಯದಿಂದ ನಿವೃತ್ತರಾದರು. ಆದರೆ ಸುಬ್ಬಾರಾಯರಿಗೆ ಅವರ ಶಕ್ತಿ ಸಾಮರ್ಥ್ಯದ ಅರಿವಿತ್ತು. ರಾಯರ ಸಂಸ್ಥೆ ಅವರನ್ನು ಮತ್ತೆ ಸಂಶೋಧನೆಯ ಜಗತ್ತಿಗೆ ಕರೆತಂದಿತು. ಅವರು ತಂಡದಲ್ಲಿ ನಡೆದ ಸಂಶೋಧನೆಯ ಫಲವಾಗಿ Aureomycin — Chlortetracycline, ಮೊದಲ ಟೆಟ್ರಾಸೈಕ್ಲಿನ್ ವರ್ಗದ ಪ್ರತಿಜೀವಕಗಳಲ್ಲಿ ಒಂದಾದ ಔಷಧಿ, ಬೆಳಕಿಗೆ ಬಂತು. ಪ್ರತಿಜೀವಕಗಳ ಯುಗದಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿತ್ತು. ಒಬ್ಬ ವೃದ್ಧ ವಿಜ್ಞಾನಿಗೆ ಮತ್ತೊಮ್ಮೆ ಪ್ರಯೋಗಾಲಯದ ಬಾಗಿಲು ತೆರೆದದ್ದು ಕೇವಲ ಒಬ್ಬ ವ್ಯಕ್ತಿಯ ಪುನರಾಗಮನವಾಗಿರಲಿಲ್ಲ. ಅದು ವಿಜ್ಞಾನಕ್ಕೆ ವಯಸ್ಸಿನ ಮಿತಿ ಇಲ್ಲ ಎಂಬ ಸಂದೇಶವಾಗಿತ್ತು. ಹಾಗೆಯೇ ಇದು ಸುಬ್ಬಾರಾಯರ ದೂರದೃಷ್ಟಿ ನಾಯಕತ್ವ ಗುಣಗಳಿಗೆ ತಾಜಾ ಉದಾಹರಣೆ. 

ಪ್ರಶಸ್ತಿಗಳಿಗಿಂತ ಸಮಾಜ ಸೇವೆ ದೊಡ್ಡದು : 

ಸುಬ್ಬಾರಾವ್ ಅವರ ಜೀವನದ ಅತ್ಯಂತ ಗಮನಾರ್ಹ ಅಂಶವೆಂದರೆ ಅವರ ವೈಯಕ್ತಿಕ ವಿನಯ. ತಮ್ಮ ಕೆಲಸದ ಶ್ರೇಯಸ್ಸನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ವೈಜ್ಞಾನಿಕ ಸಾಧನೆಗಳನ್ನು ವೈಯಕ್ತಿಕ ಕೀರ್ತಿಗಾಗಿ ಬಳಸಿಕೊಳ್ಳುವ ಹಂಬಲ ಅವರಲ್ಲಿ ಕಡಿಮೆ ಇತ್ತು. ಇದು ಅವರ ಅವಗುಣವೇ ಇರಬೇಕು. ಅದಕ್ಕಾಗಿಯೇ ಇರಬೇಕು. ಅವರ ಅನೇಕ ಕೊಡುಗೆಗಳು ಅವರ ಹೆಸರಿಗಿಂತ ಹೆಚ್ಚಾಗಿ ಇತರರ ಹೆಸರಿನೊಂದಿಗೆ ನೆನಪಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಅವರ ಸಂಶೋಧನೆಗಳ ಮಹತ್ವವನ್ನು ಕಡಿಮೆ ಮಾಡುವುದಿಲ್ಲ. ವಿಜ್ಞಾನಿಯ ನಿಜವಾದ ಯಶಸ್ಸು ಎಂದರೆ ಪ್ರಶಸ್ತಿಯೇ? ಅಥವಾ ಅವನ ಸಂಶೋಧನೆಯಿಂದ ಉಳಿಯುವ ಜೀವಗಳೇ? ಎಂಬ ಒಂದು ಪ್ರಶ್ನೆ ಕೇಳುವಂತೆ ಮಾಡುತ್ತದೆ. ಬಹುಶಃ ಸುಬ್ಬಾರಾವ್ ಅವರ ಉತ್ತರ ಎರಡನೆಯದೇ ಆಗಿರುತ್ತಿತ್ತು. ಅಮೆರಿಕದ ಲೇಖಕ ಡೊರಾನ್ ಕೆ. ಆಂಟ್ರಿಮ್ ಅವರು ಅವರನ್ನು “ವೈದ್ಯಕೀಯ ಜಗತ್ತಿನ ರಸವಿದ್ಯಾಜ್ಞ” ಎಂದು ಕರೆದಿದ್ದಾರೆ. ಚಿನ್ನವನ್ನು ತಯಾರಿಸುವ ರಸವಿದ್ಯೆಯ ಬದಲು— ಮನುಷ್ಯನ ನೋವನ್ನು ಕಡಿಮೆ ಮಾಡುವ ಔಷಧಿಗಳನ್ನು ಸೃಷ್ಟಿಸಿದ ರಸವಿದ್ಯಾತಜ್ಞ!

ನೊಬೆಲ್ ಸಿಗಲಿಲ್ಲ… ಆದರೆ? 

ಸುಬ್ಬಾರಾವ್ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಲಿಲ್ಲ. ಅದರ ಹಿಂದಿನ ಸತ್ಯ ತಿಳಿಯದ್ದೇನೂ ಅಲ್ಲ. ಅವರ ವೈಜ್ಞಾನಿಕ ಕೊಡುಗೆಗಳಿಗೆ ದೊರೆಯಬೇಕಾದಷ್ಟು ಜಾಗತಿಕ ಮಾನ್ಯತೆ ಕೂಡ ಅವರ ಜೀವಿತಾವಧಿಯಲ್ಲಿ ಸಿಗಲಿಲ್ಲ ಎನ್ನುವುದು ದೌರ್ಭಾಗ್ಯ.  ಒಂದು ಪ್ರಶಸ್ತಿಯನ್ನು ಎಷ್ಟು ಜನ ನೋಡುತ್ತಾರೆ? ಆದರೆ ಒಂದು ಪರಿಣಾಮಕಾರಿ ಔಷಧಿಯಿಂದ ಎಷ್ಟು ಜನ ಬದುಕುತ್ತಾರೆ? ಪ್ರಶಸ್ತಿ ಒಂದು ಗೋಡೆಯ ಮೇಲೆ ನೇತಾಡಬಹುದು. ಆದರೆ ವಿಜ್ಞಾನದಿಂದ ಉಳಿದ ಜೀವಗಳು ಸಮಾಜದಲ್ಲಿ ಉಸಿರಾಡುತ್ತವೆ.  ಅದೇ ಸುಬ್ಬಾರಾವ್ ಅವರ ನಿಜವಾದ ಪುರಸ್ಕಾರ ಎಂದು ಸಮಾಧಾನ ಪಟ್ಟುಕೊಳ್ಳಬೇಕಷ್ಟೇ!!!

ಕೇವಲ 53 ವರ್ಷ… ಆದರೆ ಶಾಶ್ವತ ಪರಂಪರೆ 

1948ರ ಆಗಸ್ಟ್ 8ರಂದು, ಕೇವಲ 53ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಯಲ್ಲಾಪ್ರಗಡ ಸುಬ್ಬಾರಾವ್ ನಿಧನರಾದರು. ಇದು ಸಾಯುವ ವಯಸ್ಸೇ. ಒಬ್ಬ ಮನುಷ್ಯನ ಜೀವನದಲ್ಲಿ 53 ವರ್ಷ ದೊಡ್ಡ ಅವಧಿಯಲ್ಲ. ಆದರೆ ಆ 53 ವರ್ಷಗಳಲ್ಲಿ ಅವರು ಬಿತ್ತಿದ ವೈಜ್ಞಾನಿಕ ಬೀಜಗಳು ಮುಂದಿನ ಪೀಳಿಗೆಗಳ ವೈದ್ಯಕೀಯಕ್ಷೇತ್ರವನ್ನು ಪ್ರಭಾವಿಸಿದವು. ಅವರ ಜೀವನದಲ್ಲಿ ಬಡತನವಿತ್ತು. ವಿಫಲತೆಗಳಿದ್ದವು. ತಾರತಮ್ಯವಿತ್ತು. ಶ್ರೇಯಸ್ಸು ಕಸಿದುಕೊಳ್ಳಲ್ಪಟ್ಟ ನೋವಿತ್ತು. ಆದರೆ ಅವರು ಯಾವುದನ್ನೂ ತಮ್ಮ ಸಂಶೋಧನಾ ಪಯಣದ ಅಂತ್ಯವಾಗಲು ಬಿಡಲಿಲ್ಲ. ನೋವನ್ನು ವಿಜ್ಞಾನದ ಪ್ರಶ್ನೆಯನ್ನಾಗಿಸಿದರೆ, ವಿಫಲತೆಯನ್ನು ಪ್ರಯತ್ನವನ್ನಾಗಿಸಿದರು. ಅವಕಾಶಗಳ ಕೊರತೆಯನ್ನು ಪರಿಶ್ರಮದಿಂದಲೇ ಗೆದ್ದರು.

ಸುಬ್ಬಾರಾವ್ ರವರ ಆದರ್ಶ ಬದುಕು ನಮಗೆ ಕಲಿಸುವ ಪಾಠಗಳು ಹಲವಾರು 

೧. ಸೋಲು ಅಂತಿಮವಲ್ಲ.ಶಾಲೆಯಲ್ಲಿ ಎರಡು ಬಾರಿ ವಿಫಲರಾದರೂ ಮುಂದೆ ಜಗತ್ತಿನ ಪ್ರಮುಖ ಸಂಶೋಧನಾ ಕ್ಷೇತ್ರಗಳಲ್ಲಿ ತಮ್ಮ‌ ಅಚ್ಚೊತ್ತಿದ್ದಾರೆ. ಹೀಗಾಗಿ— ಒಂದು ಪರೀಕ್ಷೆಯ ಫಲಿತಾಂಶ ನಿಮ್ಮ ಜೀವನದ ಫಲಿತಾಂಶವಲ್ಲ.

೨. ನಿಮ್ಮ ನೋವನ್ನು ಪ್ರಶ್ನೆಯನ್ನಾಗಿ ಮಾಡಿ.

ಬಾಲ್ಯದಲ್ಲಿ ಕಂಡ ಬಡತನ, ಕಾಯಿಲೆ ಮತ್ತು ಸಂಕಷ್ಟಗಳು ಅವರ ಮನಸ್ಸಿನಲ್ಲಿ ಮಾನವ ನೋವಿನ ಬಗ್ಗೆ ಆಳವಾದ ಸಂವೇದನೆಯನ್ನು ಬೆಳೆಸಿದವು. ಅವರು ಆ ನೋವನ್ನು ಕೇವಲ ಅನುಭವಿಸಲಿಲ್ಲ. ಅದನ್ನು ವಿಜ್ಞಾನದ ಪ್ರಶ್ನೆಯನ್ನಾಗಿ ಮಾಡಿದರು.

೩. ವಿಜ್ಞಾನದಲ್ಲಿ ‘ನಾನು’ಗಿಂತ ‘ನಾವು’ ದೊಡ್ಡದು

"ಯಾವುದೇ ವೈಜ್ಞಾನಿಕ ಮೈಲಿಗಲ್ಲು ಒಬ್ಬ ವ್ಯಕ್ತಿಯ ಸಾಧನೆಯಂತೆ ಕಂಡರೂ, ವಾಸ್ತವದಲ್ಲಿ ಅದು ನೂರಾರು ಕೈಗಳು ಒಗ್ಗೂಡಿ ಮಾಡಿದ ಪ್ರಯತ್ನ. 'ಬೆರಳುಗಳು ಸೇರಿ ಮುಷ್ಟಿಯಾದಂತೆ', ವಿಜ್ಞಾನಿಗಳ ಸಾಂಘಿಕ ಪರಿಶ್ರಮ ಮತ್ತು ಸಹೋದ್ಯೋಗಿಗಳ ಸಹಕಾರವೇ ಪ್ರತಿಯೊಂದು ಮಹಾನ್ ಆವಿಷ್ಕಾರದ ಹಿಂದಿರುವ ನಿಜವಾದ ಶಕ್ತಿ." ಸುಬ್ಬಾರಾವ್ ಅವರ ಜೀವನ ನಮಗೆ ಹೇಳುವುದು—“ನಿಮ್ಮ ಹೆಸರಿಗಿಂತ ನಿಮ್ಮ ಕೆಲಸವೇ ದೊಡ್ಡದಾಗಲಿ.”

ಯಲ್ಲಾಪ್ರಗಡ ಸುಬ್ಬಾರಾವ್ ಅವರ ಹೆಸರು ಬಹುಶಃ ಸಾಮಾನ್ಯ ಜನರ ನೆನಪಿನಲ್ಲಿ ಹೆಚ್ಚು ಉಳಿದಿಲ್ಲ. ಆದರೆ ಅವರ ವಿಜ್ಞಾನ?  

ಅದು ನಮ್ಮಿಂದ ದೂರವಾಗಿಲ್ಲ. ನಮ್ಮ ಜೀವಕೋಶಗಳಲ್ಲಿ ಶಕ್ತಿಯ ವಿನಿಮಯದ ಬಗ್ಗೆ ಮಾತನಾಡುವಾಗ… ಕ್ಯಾನ್ಸರ್ ಚಿಕಿತ್ಸೆಯ ಇತಿಹಾಸವನ್ನು ನೆನಪಿಸಿಕೊಳ್ಳುವಾಗ… ಪ್ರತಿಜೀವಕಗಳ ಅಭಿವೃದ್ಧಿಯ ಪಯಣವನ್ನು ಅರಿಯುವಾಗ… ಸುಬ್ಬಾರಾವ್ ಅವರ ವೈಜ್ಞಾನಿಕ ಹೆಜ್ಜೆಗುರುತುಗಳು ಮತ್ತೆ ನಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ.

ಇತಿಹಾಸದ ಪುಟಗಳಲ್ಲಿ ಕೆಲವು ಹೆಸರುಗಳು ದೊಡ್ಡ ಅಕ್ಷರಗಳಲ್ಲಿ ಮುದ್ರಿತವಾಗಿರುತ್ತವೆ. ಕೆಲವು ಹೆಸರುಗಳು ಸಣ್ಣ ಅಕ್ಷರಗಳಲ್ಲಿ ಉಳಿಯುತ್ತವೆ. ಆದರೆ ಕೆಲವು ಹೆಸರುಗಳು ಪುಸ್ತಕಗಳಲ್ಲಿ ಮಸುಕಾಗಿದ್ದರೂ— ಮಾನವ ಬದುಕಿನ ಮೇಲೆ ಅಚ್ಚೊತ್ತುತ್ತವೆ.  ಯಲ್ಲಾಪ್ರಗಡ ಸುಬ್ಬಾರಾವ್ ಅಂತಹ ಹೆಸರೊಂದಾಗಿದೆ. ಅವರು ಬಹುಶಃ ನೊಬೆಲ್ ಪ್ರಶಸ್ತಿ ಪಡೆಯಲಿಲ್ಲ. ಆದರೆ ವಿಜ್ಞಾನದಿಂದ ಉಳಿದ ಜೀವಗಳೇ ಅವರ ಪ್ರಶಸ್ತಿಗಳು. ಅವರಿಗೆ ಭವ್ಯ ಪ್ರತಿಮೆ ಸ್ಮಾರಕವನ್ನು ಮಾಡದೇ ಇರಬಹುದು. ಆದರೆ ಅವರ ಸಂಶೋಧನೆಯ ಫಲದಿಂದ ಬದುಕುಳಿದ ಪ್ರತಿಯೊಂದು ಜೀವವೂ ಅವರ ಜೀವಂತ ಸ್ಮಾರಕ. ಹಾಗಾಗಿ ಇಂದು ಅವರ ಹೆಸರನ್ನು ನೆನಪಿಸಿಕೊಳ್ಳುವಾಗ ಒಂದು ಮಾತು ಹೇಳಬಹುದು. “ಸುಬ್ಬಾರಾವ್ ಅವರನ್ನು ಇತಿಹಾಸ ಸ್ವಲ್ಪ ಮರೆತಿರಬಹುದು; ಆದರೆ ಮಾನವಕುಲ ಅವರ ವಿಜ್ಞಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.” ಇದೇ ಒಬ್ಬ ವಿಜ್ಞಾನಿಯ ನಿಜವಾದ ಅಮರತ್ವ.

ಸುಬ್ಬಾರಾವ್ ಅವರ ಸಹೋದ್ಯೋಗಿ ಸೈರಸ್ ಹೆಚ್. ಫಿಸ್ಕೆ, ಅಸೂಯೆಯಿಂದ ಅವರ ಅನೇಕ ಪ್ರಮುಖ ಸಂಶೋಧನಾ ಬರಹಗಳನ್ನು ನಾಶಪಡಿಸಿದರು ಹಾಗೂ ಹತ್ತಿಕ್ಕಿದರು. ಸುಬ್ಬಾರಾವ್ ಅವರು ಮೊದಲೇ ಪ್ರತ್ಯೇಕಿಸಿದ್ದ ಹಲವು ನ್ಯೂಕ್ಲಿಯೋಟೈಡ್‌ಗಳನ್ನು, ಫಿಸ್ಕೆಯ ಅಸೂಯೆಯ ಕಾರಣದಿಂದಾಗಿ ವರ್ಷಗಳ ನಂತರ ಇತರ ವಿಜ್ಞಾನಿಗಳು ಮರುಶೋಧಿಸಬೇಕಾಯಿತು ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ಜಾರ್ಜ್ ಹಿಚಿಂಗ್ಸ್ ಉಲ್ಲೇಖಿಸಿದ್ದಾರೆ.

ವೈಜ್ಞಾನಿಕ ಗೌರವಗಳು:

 ಅವರ ಗೌರವಾರ್ಥ ಒಂದು ಶಿಲೀಂಧ್ರಕ್ಕೆ  ಸುಬ್ಬಾರೋಮೈಸಸ್' (Subbaromyces) ಎಂದು ಹೆಸರಿಸಲಾಗಿದೆ.

ಜಿಗಿಯುವ ಜೇಡಗಳ ಒಂದು ಹೊಸ ಪ್ರಭೇದಕ್ಕೆ 'ಟಾಂಜಾನಿಯಾ ಯಲ್ಲಾಪ್ರಗಡೈ' (Tanzania yellapragadai) ಎಂದು ನಾಮಕರಣ ಮಾಡಲಾಗಿದೆ.

"ನೀವು ಬಹುಶಃ ಡಾ. ಯಲ್ಲಾಪ್ರಗಡ ಸುಬ್ಬಾರಾವ್ ಅವರ ಹೆಸರನ್ನು ಕೇಳಿರಲಿಕ್ಕಿಲ್ಲ. ಆದರೆ ಇಂದು ನೀವು ಜೀವಂತವಾಗಿದ್ದೀರಿ ಮತ್ತು ಆರೋಗ್ಯವಾಗಿದ್ದೀರಿ ಎಂದರೆ ಅದಕ್ಕೆ ಅವರೇ ಕಾರಣ. ಅವರು ಬದುಕಿದ್ದರಿಂದಲೇ ನೀವು ಇನ್ನಷ್ಟು ಕಾಲ ಬದುಕುವಂತಾಗಿದೆ." ೧೯೫೦ರ 'ಆರ್ಗೋಸಿ' ಪತ್ರಿಕೆಯಲ್ಲಿ ಡೊರಾನ್ ಕೆ. ಆಂಟ್ರಿಮ್ ಬರೆದ ಈ ಸಾಲುಗಳು ಅವರ ಮಹತ್ವವನ್ನು ಸಾರುತ್ತವೆ.


ಒಂಟಿ ಕೊಂಬಿನ ದೈತ್ಯದ ಕಥೆ

ಒಂಟಿ ಕೊಂಬಿನ ದೈತ್ಯದ ಕಥೆ 

 ಸೆಪ್ಟೆಂಬರ್ 22 — ವಿಶ್ವ ಖಡ್ಗಮೃಗ ದಿನ

ಲೇಖಕರು :  ರಾಮಚಂದ್ರ ಭಟ್‌ ಬಿ.ಜಿ.


ಕೆಲವು ವರ್ಷಗಳ ಹಿಂದೆ ಸ್ನೇಹಿತರೊಂದಿಗೆ ಕಾಜಿರಂಗ ರಾಷ್ಟೀಯ ಉದ್ಯಾನಕ್ಕೆ ಭೇಟಿ ನೀಡಿದ್ದೆ. ಬೆಳಗಿನ ಐದು ಘಂಟೆಗೆ ಅರುಣೋದಯದ ಮುನ್ಸೂಚನೆ!!! ನಮಗಂತೂ ಅಚ್ಚರಿಯೋ ಅಚ್ಚರಿ. ಗಡಿಯಾರ ಸರಿ ಇದೆಯೋ ಇಲ್ಲವೋ ಎಂದು ನೋಡಿದ್ದೇ ನೋಡಿದ್ದು!!  ಸಂಜೆ 4 ಗಂಟೆಗೇ ಸೂರ್ಯ ಪಡು ದಿಗುವಿನಲ್ಲಿ ಜಾರತೊಡಗಿ ಕತ್ತಲೆಯ ಮುನ್ಸೂಚನೆ ನೀಡುತ್ತಿದ್ದ. ಈಶಾನ್ಯ ಭಾರತದಲ್ಲಿ ಈ ವ್ಯತ್ಯಾಸ ಸಹಜ.

ಬೆಳಗ್ಗೆ ಲಗುಬಗೆಯಿಂದೆದ್ದು 5ಕ್ಕೇ ಆನೆ ಸಫಾರಿಗೆ ಸಿದ್ಧವಾಗಿದ್ದೆವು. ಆನೆ ಸವಾರಿ ಮಾಡುತ್ತ ಖಡ್ಗ ಮೃಗ ಮತ್ತಿತರ ಪ್ರಾಣಿಗಳ ವೀಕ್ಷಣೆ ಮಾಡತೊಡಗಿದೆವು. ಹುಲ್ಲುಗಾವಲಿನ ನಡುವೆ ನಿಧಾನವಾಗಿ ಹೆಜ್ಜೆ ಹಾಕುತ್ತಿರುವ ಸುಮಾರು ಎರಡು ಟನ್ ತೂಕದ ಜೀವಿ ದೂರದಲ್ಲೆಲ್ಲೋ ಕಾಣಿಸಿತು. 5-6 ಆನೆಗಳು ಗಜಗಾಂಭೀರ್ಯದಿಂದ ಮುಂದೆ ಸಾಗುತ್ತಾ ಇದ್ದಂತೆ, ಮೇಲೇರಿ ಕುಳಿತ ನಾವು ಮಹಾರಾಜನಂತೆ ಸುತ್ತಲಿನ ಪ್ರಕೃತಿಯನ್ನು ಅಸ್ವಾದಿಸುತ್ತ ಇದ್ದೆವು. ನಾನಂತೂ ಮೊದಲ ಬಾರಿಗೆ ಖಡ್ಗ ಮೃಗಗಳನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದೆ. ಅವ್ಯಕ್ತ ಭಯ ಮನದ ಮೂಲೆಯಲ್ಲಿ ಇದ್ದೇ ಇತ್ತು. 

ದೇಹದ ಮೇಲೆ ಕವಚದಂತೆ ಕಾಣುವ ದಪ್ಪ ಚರ್ಮ. ಮೂಗಿನ ಮೇಲೆ ಒಂದೇ ಒಂದು ಕೊಂಬು. ನೋಡಲು ಭಯಂಕರ, ಆದರೆ ತನ್ನ ಲೋಕದಲ್ಲಿ ಅತ್ಯಂತ ಮಹತ್ವದ ಪರಿಸರ ಕಾರ್ಯಕರ್ತ! 

ಪ್ರತಿ ವರ್ಷ ಸೆಪ್ಟೆಂಬರ್ 22ರಂದು ವಿಶ್ವ ಖಡ್ಗಮೃಗ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ಪ್ರಾಣಿಯನ್ನು ನೆನಪಿಸಿಕೊಳ್ಳುವ ದಿನವಲ್ಲ; ಅಳಿವಿನಂಚಿನಲ್ಲಿರುವ ಜೀವಿಗಳನ್ನು, ಅವುಗಳ ಆವಾಸಸ್ಥಳಗಳನ್ನು ಮತ್ತು ಇಡೀ ಪರಿಸರ ವ್ಯವಸ್ಥೆಯ ಪರಸ್ಪರ ಸಂಬಂಧವನ್ನು ನೆನಪಿಸಿಕೊಳ್ಳುವ ದಿನ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಸುಮಾರು 5 ಲಕ್ಷ ಖಡ್ಗಮೃಗಗಳು ಸಂಚರಿಸುತ್ತಿದ್ದ ಇವುಗಳ ಸಂಖ್ಯೆ ಇಂದು ಕಾಡಿನಲ್ಲಿ ಉಳಿದಿರುವುದು ಸುಮಾರು 27,000 ಮಾತ್ರ.

ಇಂದು ಭೂಮಿಯ ಮೇಲೆ ಜೀವಂತವಾಗಿರುವ ಖಡ್ಗಮೃಗಗಳ ಪ್ರಭೇದಗಳು ಕೇವಲ -ಐದು. ಆಫ್ರಿಕಾದಲ್ಲಿ ಬಿಳಿ ಖಡ್ಗಮೃಗ ಮತ್ತು ಕಪ್ಪು ಖಡ್ಗಮೃಗ, ಏಷ್ಯಾದಲ್ಲಿ ಭಾರತೀಯ ಒಂದು ಕೊಂಬಿನ ಖಡ್ಗಮೃಗ, ಜಾವನ್ ಖಡ್ಗಮೃಗ ಮತ್ತು ಸುಮಾತ್ರನ್ ಖಡ್ಗಮೃಗ ಎಂದು ಗುರುತಿಸಲಾಗಿದೆ.

ಭಾರತಕ್ಕೆ ಅತ್ಯಂತ ಪರಿಚಿತವಾದದ್ದು -ಗ್ರೇಟರ್ ಒನ್-ಹಾರ್ನ್ಡ್ ರೈನೋ — ಭಾರತೀಯ ಖಡ್ಗಮೃಗ (Rhinoceros unicornis). ಒಂದು ಕಾಲದಲ್ಲಿ ಭಾರತೀಯ ಉಪಖಂಡದ ಉತ್ತರ ಭಾಗದ ವಿಶಾಲ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದ ಈ ಜೀವಿಯ ಸಂಖ್ಯೆ 20ನೇ ಶತಮಾನದ ಆರಂಭದಲ್ಲಿ ಸುಮಾರು 200ಕ್ಕೆ ಕುಸಿದಿತ್ತು. ಇಂದು ಸಂರಕ್ಷಣಾ ಪ್ರಯತ್ನಗಳಿಂದ ಅದರ ಸಂಖ್ಯೆ ಸುಮಾರು 4,000ಕ್ಕೆ ಏರಿದೆ ಎನ್ನುವುದು ಸಂತಸದ ಸಂಗತಿ. ಇದು ಏಷ್ಯಾದ ಅತ್ಯಂತ ಗಮನಾರ್ಹ ವನ್ಯಜೀವಿ ಸಂರಕ್ಷಣಾ ಯಶೋಗಾಥೆಗಳಲ್ಲಿ ಒಂದು. ಆದರೆ, ಸುಮಾರು 76 ಮಾತ್ರ ಜಾವನ್ ಖಡ್ಗಮೃಗಗಳಿದ್ದು ,  ಇಂಡೋನೇಷ್ಯಾದ ಒಂದೇ ಸಂರಕ್ಷಿತ ಪ್ರದೇಶದಲ್ಲಿ ಉಳಿದಿವೆ. ಸುಮಾತ್ರನ್ ಖಡ್ಗಮೃಗಗಳು ಸುಮಾರು 40 ಮಾತ್ರ ಉಳಿದಿದ್ದು, ಸಣ್ಣ-ಸಣ್ಣ ಪ್ರತ್ಯೇಕ ಗುಂಪುಗಳಲ್ಲಿ ಚದುರಿಕೊಂಡಿರುವುದರಿಂದ ಸಂಗಾತಿಯನ್ನು ಹುಡುಕಿ ಸಂತಾನೋತ್ಪತ್ತಿ ಮಾಡುವುದೇ ದೊಡ್ಡ ಸವಾಲಾಗಿದೆ. ಅಂದರೆ, ಒಂದು ಪ್ರಭೇದಕ್ಕೆ ಅರಣ್ಯ ನಾಶವೇ ಅಪಾಯವಾದರೆ, ಮತ್ತೊಂದಕ್ಕೆ ‘ಒಬ್ಬರನ್ನೊಬ್ಬರು ಭೇಟಿಯಾಗಲಾಗದಿರುವುದೇ’ ಅಳಿವಿನ ಕಾರಣವಾಗಬಹುದು! ನಮ್ಮಲ್ಲಿ ಅನೇಕ ಗಂಡಿಗೆ ಹೆಣ್ಣು ಸಿಗದೇ ಮಲೈ ಮಾದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದು ನೆನಪಾಗುತ್ತಿದೆ. 

ಭಾರತೀಯ ಖಡ್ಗಮೃಗಗಳಿಗೆ ಹುಲ್ಲುಗಾವಲುಗಳು, ಸವನ್ನಾಗಳು, ಪೊದೆ ಪ್ರದೇಶಗಳು, ಜೌಗು ಪ್ರದೇಶಗಳು, ನದಿದಂಡೆಗಳು ಮತ್ತು ನೀರಿನ ತಾಣಗಳು ಅತ್ಯಂತ ಮುಖ್ಯ. ದಟ್ಟ ಹುಲ್ಲು ಆಹಾರ ನೀಡುತ್ತದೆ; ನದಿ ಮತ್ತು ಕೆಸರು ಪ್ರದೇಶಗಳು ದೇಹದ ಉಷ್ಣತೆಯನ್ನು ನಿಯಂತ್ರಿಸಲು ನೆರವಾಗುತ್ತವೆ. ವಿಶೇಷವಾಗಿ ಭಾರತೀಯ ಖಡ್ಗಮೃಗದ ಒಂದು ಅದ್ಭುತ ಗುಣವೆಂದರೆ ಇದು ಚೆನ್ನಾಗಿ ಈಜಬಲ್ಲದು; ನೀರಿನೊಳಗೆ ಮುಳುಗಿಯೂ ಹೋಗಬಲ್ಲದು! 

‘ಒಂಟಿ’ ಎಂದುಕೊಂಡರೆ ತಪ್ಪು! 

ಖಡ್ಗಮೃಗಗಳು ಸಾಮಾನ್ಯವಾಗಿ ದೊಡ್ಡ ಹಿಂಡುಗಳಲ್ಲಿ ಓಡಾಡುವುದಿಲ್ಲ. ಭಾರತೀಯ ಖಡ್ಗಮೃಗಗಳು ಬಹುತೇಕ ಏಕಾಂಗಿಯಾಗಿ ಜೀವಿಸುತ್ತವೆ. ತಾಯಿ ಮತ್ತು ಮರಿ ಒಟ್ಟಿಗೆ ಕಾಣುವುದು ಸಾಮಾನ್ಯ. ಆಹಾರ ಸಮೃದ್ಧವಾಗಿರುವ ಪ್ರದೇಶಗಳಲ್ಲಿ ಹಲವು ಖಡ್ಗಮೃಗಗಳು ಒಂದೇ ಸ್ಥಳದಲ್ಲಿ ಮೇಯುತ್ತಿರುವುದು ಕಾಣಬಹುದು. ಗಂಡು ಖಡ್ಗಮೃಗಗಳು ತಮ್ಮ ಪ್ರದೇಶಗಳನ್ನು ಗುರುತಿಸುತ್ತವೆ; ಆದರೆ ಅವುಗಳ ಪ್ರದೇಶಗಳು ಪರಸ್ಪರ ಅತಿಕ್ರಮಿಸಬಹುದು.

ಆದರೆ ಆಫ್ರಿಕಾದ ಬಿಳಿ ಖಡ್ಗಮೃಗಗಳ ಸಾಮಾಜಿಕ ಜೀವನ ಸ್ವಲ್ಪ ವಿಭಿನ್ನ. ಹೆಣ್ಣು ಮತ್ತು ಮರಿಗಳು ಸೇರಿ ಕೆಲವೊಮ್ಮೆ 10ಕ್ಕೂ ಹೆಚ್ಚಿನ ಪ್ರಾಣಿಗಳ ಗುಂಪು ರೂಪಿಸಬಹುದು. ಗಂಡುಗಳು ತಮ್ಮ ಪ್ರದೇಶವನ್ನು ಗುರುತಿಸಲು ಲದ್ದಿಯ ರಾಶಿಗಳನ್ನು ಬಳಸುತ್ತವೆ. ಹೀಗಾಗಿ ಖಡ್ಗಮೃಗಗಳಲ್ಲಿಯೂ “ಕುಟುಂಬ ವ್ಯವಸ್ಥೆ” ಮತ್ತು “ಏಕಾಂತ ಜೀವನ” ಎರಡೂ ಮಾದರಿಗಳಿವೆ ಎನ್ನಬಹುದು.

ಖಡ್ಗಮೃಗದ ಅತ್ಯಂತ ಕುತೂಹಲಕಾರಿ ಸಂಗತಿಗಳಲ್ಲೊಂದು ಅದೇ ಅದರ ಲದ್ದಿ ಸುದ್ದಿ.  ಖಡ್ಗಮೃಗಗಳ ಜಗತ್ತಿನಲ್ಲಿ ಅದು ಒಂದು ರೀತಿಯ‘ಸಾಮಾಜಿಕ ಮಾಧ್ಯಮ’! ಲದ್ದಿಯಲ್ಲೂ ಇದೆ ‘ ಸಂದೇಶ’! ಖಡ್ಗಮೃಗಗಳು ತಮ್ಮ ಲದ್ದಿಯನ್ನು ನಿರ್ದಿಷ್ಟ ಸ್ಥಳಗಳಲ್ಲಿ ಹಾಕುತ್ತವೆ. ಇಂತಹ ಸಗಣಿ ಅಥವಾ ಲದ್ದಿ ರಾಶಿಗಳು ಗಡಿ ಗುರುತಿಸಲು ಮತ್ತು ಇತರ ಖಡ್ಗಮೃಗಗಳಿಗೆ ಮಾಹಿತಿ ನೀಡಲು ಸಹಾಯ ಮಾಡುತ್ತವೆ. ವಾಸನೆ ಮತ್ತು ರಾಸಾಯನಿಕ ಸಂಕೇತಗಳ ಮೂಲಕ “ನಾನು ಇಲ್ಲಿದ್ದೇನೆ” ಎಂಬ ಸಂದೇಶವನ್ನು ಮತ್ತೊಂದು ಖಡ್ಗಮೃಗಕ್ಕೆ ತಲುಪಿಸಬಹುದು. ಅಂದರೆ, ನಮ್ಮಲ್ಲಿ WhatsApp ಇರುವಂತೆ → ಅವುಗಳಲ್ಲಿ Dung-app! ಪ್ರಕೃತಿ ಎಷ್ಟು ವಿಚಿತ್ರವಾದ ಸಂವಹನ ವ್ಯವಸ್ಥೆಗಳನ್ನು ರೂಪಿಸಿದೆ ನೋಡಿ!

ಖಡ್ಗಮೃಗ – ಕಾಡಿನ ‘ಪರಿಸರ ಇಂಜಿನಿಯರ್ ಕೂಡ ಹೌದು’ ಖಡ್ಗಮೃಗವನ್ನು ಕೇವಲ ಒಂದು ದೊಡ್ಡ ಸಸ್ಯಾಹಾರಿ ಪ್ರಾಣಿ ಎಂದು ನೋಡುವುದು ಅದರ ಮಹತ್ವವನ್ನು ಕಡಿಮೆ ಮಾಡಿದಂತಾಗುತ್ತದೆ.ಇದನ್ನು ecosystem engineer ಎನ್ನಬಹುದೇನೋ. ಹುಲ್ಲು, ಪೊದೆ, ಮರಗಳ ಎಲೆಗಳು, ಹಣ್ಣುಗಳು ಮತ್ತು ಜಲಸಸ್ಯಗಳನ್ನು ತಿನ್ನುವಾಗ ಸಸ್ಯ ಸಮುದಾಯದ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಅದು ಸಂಚರಿಸುವುದು, ಮೇಯುವುದು, ಕೆಸರಿನಲ್ಲಿ ಉರುಳುವುದು—ಇವೆಲ್ಲವೂ ಅದರ ಆವಾಸಸ್ಥಳದ ಸ್ವರೂಪವನ್ನು ಬದಲಾಯಿಸುತ್ತವೆ.

ಇನ್ನೂ ಅದ್ಭುತವಾದ ಸಂಗತಿ ಏನೆಂದರೆ ಅದರ ಸಗಣಿಯ ಮೂಲಕ ಬೀಜಗಳ ಪ್ರಸರಣ ನಡೆಯುತ್ತದೆ. ತಿಂದ ಸಸ್ಯಗಳ ಬೀಜಗಳು ಸಗಣಿಯೊಂದಿಗೆ ಮತ್ತೊಂದು ಪ್ರದೇಶಕ್ಕೆ ತಲುಪುತ್ತವೆ. ಸಗಣಿ ಮಣ್ಣಿಗೆ ಪೋಷಕಾಂಶಗಳನ್ನು ಸೇರಿಸುತ್ತದೆ. ಹೀಗೆ ಒಂದು ಖಡ್ಗಮೃಗದ ಹೊಟ್ಟೆಯೇ ಒಂದು ಸಣ್ಣ ‘ಬೀಜ ವಿತರಣಾ ಯಂತ್ರ’!!! ಇಲ್ಲಿ ಒಂದು ಸುಂದರ ಪರಿಸರ ಸಂಬಂಧ ಕಾಣುತ್ತದೆ: 

ಸಸ್ಯ → ಖಡ್ಗಮೃಗ → ಸಗಣಿ → ಮಣ್ಣು → ಬೀಜ → ಹೊಸ ಸಸ್ಯ → ಮತ್ತೆ ಖಡ್ಗಮೃಗ! 

ಪ್ರಕೃತಿಯ ಚಕ್ರದಲ್ಲಿ ಯಾವುದೂ ವ್ಯರ್ಥವಲ್ಲ. ಖಡ್ಗಮೃಗದ ಕೊಂಬಿನ ಬಗ್ಗೆ ಮತ್ತೊಂದು ಅಪರೂಪದ ಸಂಗತಿ ಇದೆ.ಅದು ಎಲುಬಿನಿಂದ ನಿರ್ಮಿತವಾಗಿಲ್ಲ. ಮಾನವನ ಕೂದಲು ಮತ್ತು ಉಗುರುಗಳಲ್ಲಿ ಇರುವ ಕೆರಾಟಿನ್ ಎಂಬ ಪ್ರೋಟೀನ್‌ನಿಂದಲೇ ಖಡ್ಗಮೃಗದ ಕೊಂಬು ನಿರ್ಮಾಣವಾಗುತ್ತದೆ.!!! ಖಡ್ಗಮೃಗಗಳು ಕೊಂಬಿಲ್ಲದೆ ಹುಟ್ಟುತ್ತವೆ; ನಂತರ ಕೊಂಬು ಬೆಳೆಯಲು ಆರಂಭಿಸುತ್ತದೆ ಮತ್ತು ಜೀವನಪೂರ್ತಿ ಬೆಳೆಯುತ್ತಲೇ ಇರುತ್ತದೆ.

ಆದರೆ ಇದೇ ಕೊಂಬು ಅದರ ಶಾಪವೂ ಆಗಿದೆ. ವೈಜ್ಞಾನಿಕವಾಗಿ ಖಡ್ಗಮೃಗದ ಕೊಂಬಿಗೆ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳನ್ನು ಗುಣಪಡಿಸುವ ಔಷಧೀಯ ಸಾಮರ್ಥ್ಯವಿದೆ ಎಂಬುದಕ್ಕೆ ಸರಿಯಾದ ಪುರಾವೆ ಇಲ್ಲ. ಆದರೂ ಮೂಢನಂಬಿಕೆ ಮತ್ತು ಅಕ್ರಮ ವ್ಯಾಪಾರದಿಂದಾಗಿ ಖಡ್ಗಮೃಗಗಳ ಬೇಟೆ ಮುಂದುವರಿಯುತ್ತಿರುವುದು ದುರದೃಷ್ಟಕರ. ಮನುಷ್ಯನ ಒಂದು ತಪ್ಪು ನಂಬಿಕೆ—ಒಂದು ಸಂಪೂರ್ಣ ಪ್ರಭೇದದ ಅಸ್ತಿತ್ವವನ್ನೇ ಅಪಾಯಕ್ಕೆ ತಳ್ಳಬಹುದು.

ಮಾತೃತ್ವ: ಒಂದು ದೀರ್ಘ ನಿರೀಕ್ಷೆ

ಖಡ್ಗಮೃಗದ ಸಂತಾನೋತ್ಪತ್ತಿಯೂ ನಿಧಾನವಾದದ್ದು. ಗರ್ಭಧಾರಣೆ ದೀರ್ಘವಾಗಿರುತ್ತದೆ ಮತ್ತು ಸಾಮಾನ್ಯವಾಗಿ ಒಂದು ಮರಿ ಮಾತ್ರ ಹುಟ್ಟುತ್ತದೆ. ಹುಟ್ಟಿದ ನಂತರ ಮರಿ ತಾಯಿಯೊಂದಿಗೆ ದೀರ್ಘಕಾಲ ಇರುತ್ತದೆ.

ಇದು ಸಂರಕ್ಷಣೆಗೆ ಒಂದು ಪ್ರಮುಖ ಸವಾಲು. ವೇಗವಾಗಿ ಸಂತಾನೋತ್ಪತ್ತಿ ಮಾಡುವ ಪ್ರಾಣಿಗಳಂತೆ ಖಡ್ಗಮೃಗಗಳ ಸಂಖ್ಯೆಯನ್ನು ಕೆಲವೇ ವರ್ಷಗಳಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ. ಇದಕ್ಕಾಗಿಯೇ ಒಂದು ಹೆಣ್ಣು ಖಡ್ಗಮೃಗದ ಜೀವನವೂ, ಒಂದು ಮರಿಯ ಬದುಕೂ ಬಹಳ ಅಮೂಲ್ಯ.

ಅದರಲ್ಲೂ ಸುಮಾತ್ರನ್ ಖಡ್ಗಮೃಗಗಳಂತಹ ಅತಿ ಸಣ್ಣ ಮತ್ತು ಪ್ರತ್ಯೇಕಗೊಂಡ ಜನಸಂಖ್ಯೆಯಲ್ಲಿ ಗಂಡು-ಹೆಣ್ಣುಗಳು ಪರಸ್ಪರ ಭೇಟಿಯಾಗದಿರುವುದೇ ಸಂತಾನೋತ್ಪತ್ತಿಗೆ ಅಡ್ಡಿಯಾಗುತ್ತಿದೆ. 

ಒಂದು ಖಡ್ಗಮೃಗವನ್ನು ಉಳಿಸುವುದೆಂದರೆ ಕೇವಲ ಒಂದು ಪ್ರಾಣಿಯನ್ನು ಉಳಿಸುವುದಲ್ಲ.ಅದರೊಂದಿಗೆ ಹುಲ್ಲುಗಾವಲು ಉಳಿಯುತ್ತದೆ.ನೀರಿನ ತಾಣ ಉಳಿಯುತ್ತದೆ. ಸಸ್ಯಗಳ ವೈವಿಧ್ಯ ಉಳಿಯುತ್ತದೆ. ಬೀಜಗಳ ಪ್ರಸರಣ ಮುಂದುವರಿಯುತ್ತದೆ. ಸಣ್ಣ ಸಸ್ಯಾಹಾರಿಗಳು ಮತ್ತು ಇತರ ಪ್ರಾಣಿಗಳಿಗೂ ಆಶ್ರಯ ಉಳಿಯುತ್ತದೆ. ಖಡ್ಗಮೃಗ ಸಂರಕ್ಷಣೆ ಎಂದರೆ ಒಂದು ಸಂಪೂರ್ಣ ಪರಿಸರ ವ್ಯವಸ್ಥೆಯ ಸಂರಕ್ಷಣೆ ಎನ್ನುವುದು ಸುಳ್ಳಲ್ಲ. ಖಡ್ಗಮೃಗಗಳ ಅವಾಸವನ್ನು ಸಂರಕ್ಷಿಸಿದಾಗ, ಅವುಗಳೊಂದಿಗೆ ಬದುಕುವ ಆನೆಗಳು, ಎಮ್ಮೆಗಳು, ಜಿಂಕೆಗಳು, ಪಕ್ಷಿಗಳು, ಸಣ್ಣ ಸಸ್ತನಿಗಳು ಮತ್ತು ಅನೇಕ ಸಸ್ಯಪ್ರಭೇದಗಳಿಗೂ ರಕ್ಷಣೆ ದೊರೆಯುತ್ತದೆ.

ಕೊನೆಯದಾಗಿ, ಖಡ್ಗಮೃಗದ ಹೆಜ್ಜೆ ನಿಧಾನವಾಗಿರಬಹುದು. ಆದರೆ ಅದರ ಪರಿಸರದ ಮೇಲಿನ ಪ್ರಭಾವ ಬಹಳ ದೊಡ್ಡದು. ಅದರ ಒಂದು ಹೆಜ್ಜೆ ಹುಲ್ಲುಗಾವಲಿನ ರೂಪ ಬದಲಾಯಿಸುತ್ತದೆ. ಅದರ ಒಂದು ಸಗಣಿ ರಾಶಿ ಬೀಜಕ್ಕೆ ಹೊಸ ನೆಲ ನೀಡುತ್ತದೆ. ಅದರ ಒಂದು ಮರಿ ಭವಿಷ್ಯದ ಒಂದು ಸಂಪೂರ್ಣ ಜನಸಂಖ್ಯೆಯ ಆಸೆಯಾಗಬಹುದು.

ಇಂದು ವಿಶ್ವ ಖಡ್ಗಮೃಗ ದಿನದಂದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ-“ಮುಂದಿನ ಪೀಳಿಗೆಯ ಮಕ್ಕಳಿಗೆ ಖಡ್ಗಮೃಗವನ್ನು ನಿಜವಾದ ಕಾಡಿನಲ್ಲಿ ತೋರಿಸಬೇಕೇ? ಅಥವಾ ಪುಸ್ತಕದ ಪುಟದಲ್ಲಿ ಮಾತ್ರ ತೋರಿಸಬೇಕೇ?”

ಉತ್ತರ ನಮ್ಮ ಕೈಯಲ್ಲಿದೆ. 

**ಖಡ್ಗಮೃಗ ಉಳಿದರೆ ಕಾಡು ಉಳಿಯುತ್ತದೆ.

ಕಾಡು ಉಳಿದರೆ ಜೀವವೈವಿಧ್ಯ ಉಳಿಯುತ್ತದೆ.

ಜೀವವೈವಿಧ್ಯ ಉಳಿದರೆ… ನಮ್ಮ ಭವಿಷ್ಯವೂ ಉಳಿಯುತ್ತದೆ.**

ಸೆಪ್ಟೆಂಬರ್ 22 — ವಿಶ್ವ ಖಡ್ಗಮೃಗ ದಿನ. ಇದು ಒಂದು ಕೊಂಬಿನ ದೈತ್ಯವನ್ನು ಕೇವಲ ಸ್ಮರಿಸುವ ದಿನವಲ್ಲ; ಅದರೊಂದಿಗೆ ಇಡೀ ಕಾಡನ್ನು ಉಳಿಸುವ ಸಂಕಲ್ಪ ಮಾಡುವ ದಿನ.

ಕಾಜಿರಂಗಾದಿಂದ ಹೊರ ಬಂದಾಗ ನನ್ನ ಮನಸ್ಸಿನಲ್ಲಿ ಉತ್ತರ ಸಿಗದ ಅನೇಕ ಪ್ರಶ್ನೆಗಳು ಕಾಡತೊಡಗಿದ್ದವು.

ಆಕರಗಳು : 

[1]: https://www.worldwildlife.org/resources/facts/where-do-rhinos-live-and-eight-other-rhino-facts/?utm_source=chatgpt.com "Where do Rhinos Live? And Eight Other Rhino Facts | WWF"

[2]: https://www.worldwildlife.org/species/greater-one-horned-rhino?utm_source=chatgpt.com "Greater One-Horned Rhino | WWF"

[3]: https://www.worldwildlife.org/species/rhino/sumatran-rhino/?utm_source=chatgpt.com "Sumatran rhino | WWF"

[4]: https://www.savetherhino.org/rhino-info/rhino-kids/fun-facts/?utm_source=chatgpt.com "Fun Facts About Rhinos | Save The Rhino"

[5]: https://www.worldwildlife.org/species/rhino/white-rhino/?utm_source=chatgpt.com "White Rhino | WWF"

[6]:https://www.savetherhino.org/rhino-info/rhino-species/greater-one-horned-rhino/?utm_source=chatgpt.com "Greater One-Horned Rhino | Species | Save the Rhino International"

[7]: https://www.worldwildlife.org/species/rhino/?utm_source=chatgpt.com "Rhino | WWF"


ತಾರೆಗಳ ತೊಟ್ಟಿಲು.

ತಾರೆಗಳ ತೊಟ್ಟಿಲು 

    

                                                                                        ಲೇಖಕರು: 

                        ಕೃಷ್ಣ ಸುರೇಶ 

                        ನಿವೃತ್ತ ಮುಖ್ಯಶಿಕ್ಷಕರು 




ಒರೈಯನ್‌ ನೀಹಾರಿಕೆ ಹಬಲ್‌ ಅಂತರಿಕ್ಷ ದೂರದರ್ಶಕದ ಮೂಲಕ. ( ಚಿತ್ರ ಕೃಪೆ NASA ESA)

ಅಂತರಿಕ್ಷದಲ್ಲಿನ ಅನಿಲ ಮತ್ತು ದೂಳಿನಿಂದ ಕೂಡಿದ ಬೃಹತ್‌ ಮೋಡವೇ ನೀಹಾರಿಕೆ, ನಕ್ಷತ್ರವು ತನ್ನ ಅಂತ್ಯ ಕಾಲದ ನಂತರ ಸಿಡಿದಾಗ ಚದುರಿಹೋಗುವ ಅದರ ದ್ರವ್ಯ ಅಂತರಿಕ್ಷದಲ್ಲಿ ನೀಹಾರಿಕೆಯಾಗಿ ಹರಡಿಕೊಳ್ಳುತ್ತದೆ.  ಈ ದ್ರವ್ಯ ಹೊಸ ನಕ್ಷತ್ರಗಳ ಸೃಷ್ಟಿಗೆ ಬೇಕಾದ ಮೂಲ ದ್ರವ್ಯವಾಗಿ ಒದಗಿ ಹೊಸ ನಕ್ಷತ್ರಗಳ ಉಗಮಕ್ಕೂ ಕಾರಣವಾಗುತ್ತದೆ. ನಮಗೆ ನಮ್ಮ ಸಾಮರ್ಥ್ಯಕ್ಕೆ ಎಟುಕುವ ಅಂತರಿಕ್ಷದಲ್ಲಿ ಹಲವಾರು ವರ್ಣಗಳು ಆಕಾರಗಳು ಗಾತ್ರಗಳಲ್ಲಿ ಹಲವಾರು ನೀಹಾರಿಕೆಗಳಿವೆ.  ಇವುಗಳಲ್ಲಿ ಕೆಲವನ್ನು ಬಿರಿಗಣ್ಣಿನಿಂದ  ಮತ್ತೆ ಕೆಲವನ್ನು  ದೂರದರ್ಶಕದ ಮೂಲಕ ನೋಡಲು ನಮಗೆ ಸಾಧ್ಯ. ನಮ್ಮ ಸೌರವ್ಯೂಹಕ್ಕೆ ಸಮೀಪವಿರುವ ಮತ್ತು ರಾತ್ರಿಯಾಕಾಶದಲ್ಲಿ ನಮ್ಮ ಬರಿಗಣ್ಣಿಗೆ ಕಾಣುವ ನೀಹಾರಿಕೆಗಳಲ್ಲಿ ಒರೈಯನ್‌ ನೀಹಾರಿಕೆಯೂ () ಒಂದು. ಅತ್ಯಂತ ಆಕರ್ಷಕವಾದ ವರ್ಣ ವಿನ್ಯಾಸವನ್ನು ಹೊಂದಿರುವ ಇದು ನಮ್ಮ ಬರಿಗಣ್ಣಿಗೆ  ಪ್ರಕಾಶಮಾನವಾಗಿ ಕಾಣುವ ಮಚ್ಚೆಯಂತೆ ಕಾಣುತ್ತದೆ. ದೂರದರ್ಶಕದಲ್ಲಿ ಸ್ಪಷ್ಟವಾಗಿ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಒರೈಯನ್ ಅಂದರೆ ಮಹಾವ್ಯಾಧ ನಕ್ಷತ್ರ ಪುಂಜದಲ್ಲಿ ಇದು ಕಂಡು ಬರುವುದರಿಂದ ಇದನ್ನು ಮಹಾವ್ಯಾಧ ನೀಹಾರಿಕೆ ಅಥವಾ ಒರೈಯನ್ ನೆಬ್ಯೂಲ ಎಂದು ಕರೆಯಲಾಗುತ್ತದೆ. ಮೆಸ್ಸಿಯರನ ಕೋಷ್ಟಕದಲ್ಲಿ ಇದನ್ನು ಮೆಸ್ಸಿಯರ್‌೪೨ (M ೪೨) ಎಂದು ದಾಖಲಿಸಲಾಗಿದೆ. https://savijnana.blogspot.com/2025/06/blog-post_47.html


   ರಾತ್ರಿಯಾಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಮಹಾವ್ಯಾದ ನಕ್ಷತ್ರ ಪುಂಜವನ್ನು ಗುರುತಿಸುವುದೇನು ಕಷ್ಟವಲ್ಲ. ನವೆಂಬರ್ ತಿಂಗಳಿನಿಂದ ಆರಂಭಿಸಿ ಮಾರ್ಚ್‌ ತಿಂಗಳವರೆಗೆ ರಾತ್ರಿಯಾಕಾಶದಲ್ಲಿ ಮಹಾವ್ಯಾದ ನೀಹಾರಿಕೆಯನ್ನು  ಬರಿಗಣ್ಣಿನಿಂದ ಸ್ಪಷ್ಟವಾಗಿ  ನೋಡಲು ಸಾಧ್ಯ.  ಮಹಾವ್ಯಾದನ ಸೊಂಟದ ಪಟ್ಟಿಯಿಂದ ನೇತಾಡುತ್ತಿರುವ ಕತ್ತಿಯೆಂದು ಕಲ್ಪಿಸಿಕೊಳ್ಳಲಾದ ಭಾಗದಲ್ಲಿ ಇರುವ ಮೂರು ಪ್ರಕಾಶಮಾನ ಕಾಯಗಳಲ್ಲಿ ಇದು ಮಧ್ಯದಲ್ಲಿರುವುದು ಈ ನಮ್ಮ M ೪೨ ಆಗಿದೆ. ಇದರ ಕಾಂತಿಮಾನ ೪ ಆಗಿದ್ದು ಇದು ನಮ್ಮಿಂದ ಸುಮಾರು೧೨೬೭ ಜ್ಯೋತಿ ವರ್ಷಗಳಷ್ಟು ದೂರದಲ್ಲಿದೆ. ಅಂದರೆ 

ಈ ನೀಹಾರಿಕೆಯಿಂದ ಹೊರಟ ಬೆಳಕು ಸೆಕೆಂಡಿಗೆ ಸುಮಾರು ೩ ಲಕ್ಷ ಕಿಮೀ ವೇಗದಲ್ಲಿ ಚಲಿಸಿ ನಮ್ಮನ್ನು ಬಂದು ತಲುಪಲು ೧೨೬೭ ವರ್ಷಗಳು ಬೇಕಾಗುತ್ತದೆ. ಅಂದರೆ ಇಂದು ನಾವು ಒರೈಯನ್ ನೀಹಾರಿಕೆಯನ್ನು ನೋಡುತ್ತಿದ್ದೇವೆಂದರೆ  ಅಲ್ಲಿ ನಮಗೆ ಕಾಣುತ್ತಿರುವುದು ೧೨೬೭ ವರ್ಷಗಳ ಹಿಂದಿನ ಅದರ ಚಿತ್ರ!  ಈ ನೀಹಾರಿಕೆಯ ಒಟ್ಟು ರಾಶಿ ನಮ್ಮ ಸೂರ್ಯನ ರಾಶಿಯ೨೦೦೦ ಪಟ್ಟು ಇರಬಹುದೆಂದು ಒಂದು ಅಂದಾಜು, ಇದರ ವಿಸ್ತಾರ ಸುಮಾರು ೨೫ ಜ್ಯೋತಿ ವರ್ಷಗಳು! ಒರೈಯನ್ನು ನೀಹಾರಿಕೆಯು ನಮಗೆ ಅತಿ ಸಮೀಪದ ಹೊಸ ನಕ್ಷತ್ರಗಳು ಉಗಮವಾಗುತ್ತಿರುವ ತೊಟ್ಟಿಲು ಆಗಿರುವುದು ಒಂದು ವಿಶೇಷವಾಗಿದೆ. 

ಒರೈಯನ್‌ ನೀಹಾರಿಕೆ ತ್ರಾಪಿಜ್ಯದಲ್ಲಿನ ನಾಲ್ಕು ನಕ್ಷತ್ರಗಳು ( ಚಿತ್ರ ಕೃಪೆ NASA ESA)


ಒರೈಯನ್ ನೀಹಾರಿಕೆಯು ಸುಮಾರು ೨೮೦೦ ನಕ್ಷತ್ರಗಳನ್ನು ಹೊಂದಿರುವುದೆಂದು ಅಂದಾಜಿಸಲಾಗಿದೆ. ಒರೈಯನ್‌ನ ತೆರೆದ ನಕ್ಷತ್ರ ಗುಚ್ಚವೆಂದು ಗುರುತಿಸಲ್ಪಡುವ ತಾರಾ ಸಮೂಹದಲ್ಲಿನ ಪ್ರಮುಖವಾಗಿ ಒರೈನಿಸ್‌ ೧ A,B,C,D ಎಂಬ ನಾಲ್ಕು ನಕ್ಷತ್ರಗಳು ಸುಪ್ರಸಿದ್ಧವಾದ ಒಂದು ಒರೈಯನ್ ತ್ರಾಪಿಜ್ಯವನ್ನು ರಚಿಸುತ್ತವೆ.  ಥೀಟಾ ೧ ಒರೈಯಾನಿಸ್‌ ಸಿ ಎಂಬ ನೀಲಿತಾರೆ ಈ ನೀಹಾರಿಕೆಯಲ್ಲಿಯೇ ಅತ್ಯಂತ ಪ್ರಕಾಶಮಾನವಾಗಿದೆ.  ಒರೈಯನ್‌ ನೀಹಾರಿಕೆ ನೇರಳಾತೀತ ಚಿತ್ರ   ಒರೈಯನ್‌  ನೀಹಾರಿಕೆ ಎಕ್ಸ್‌ ರೇ ಚಿತ್ರ

  ನಮ್ಮ ಸೂರ್ಯನಿಗೆ ಹೋಲಿಸಿದರೆ ಇದರ ರಾಶಿ ೪೦ ಪಟ್ಟು ಮತ್ತು ಗಾತ್ರ ೮ ಪಟ್ಟು ಆಗಿದೆ. ಇದರಿಂದ ಹೊರಹೊಮ್ಮುವ ಪ್ರಬಲ ನೇರಳಾತೀತ ವಿಕಿರಣವು ಸುತ್ತಲಿನ ಅನಿಲವನ್ನು ಅಯಾನಿಕರಿಸಿ ಇಡೀ ನೀಹಾರಿಕೆಯನ್ನು ಜ್ವಾಜಲ್ಯಮಾನವಾಗಿಸುತ್ತದೆ.  ಒರೈಯನ್‌ ನೀಹಾರಿಕೆಯ ಸುತ್ತಲೂ ಅಣು ಪರಮಾಣುಗಳ ಮೋಡವು ನೂರಾರು ಜ್ಯೋತಿವರ್ಷಗಳಷ್ಟು ದೂರದ ವರೆಗೆ ವ್ಯಾಪಿಸಿದೆ. ಒರೈಯನ್‌ ನ ನಕ್ಷತ್ರಗಳ ಬೆಳಕು ಈ ಮೋಡವನ್ನು ಬೆಳಗುತ್ತಿವೆ. ಒರೈಯನ್‌ ವ್ಯವಸ್ಥೆಯು ಅನೇಕ ಹೊಚ್ಚ ಹೊಸ ನಕ್ಷತ್ರಗಳನ್ನು, ಕಂದು ಬಣ್ಣದ ಕುಬ್ಜ ತಾರೆಗಳನ್ನು ಮತ್ತು ಗ್ರಹಗಳ ನಿರ್ಮಾಣದ ಪ್ರಕ್ರಿಯೆಯಲ್ಲಿರುವ ರಾಶಿಯು ಹಲವು ನಕ್ಷತ್ರಗಳ ಸುತ್ತಲು ವೃತ್ತಾಕಾರದ ತಟ್ಟೆಯಂತೆ ಆವರಿಸಿದೆ. ಇದು ಸೌರವ್ಯೂಹದ ನಿರ್ಮಾಣದ ಆರಂಭಿಕ ಸ್ವರೂಪವನ್ನು ಪ್ರತಿನಿದಿಸುತ್ತಿದೆ.  ಈ ನೀಹಾರಿಕೆಯ ಮಧ್ಯಭಾಗದಲ್ಲಿ ಕಂಡು ಬರುವ ಹಸಿರು ಬಣ್ಣಕ್ಕೆ ಕಾರಣವನ್ನು ವಿವರಿಸಲು ಖಗೋಳಶಾಸ್ತ್ರಜ್ಞರು  ಬಹುಕಾಲ ಹೆಣಗಬೇಕಾಯಿತು. ರೋಹಿತದರ್ಶಕದ ಸಹಾಯದಿಂದ ಅದರ ರೋಹಿತವನ್ನು ಸೆರೆಹಿಡಿದು  ಪರಿಶೀಲಿಸಲಾಗಿ ಭೂಮಿಯ ಮೇಲೆ ಕಂಡುಬರುವ ಯಾವುದೇ ದಾತುವಿನ ರೋಹಿತಕ್ಕೆ ಈ ರೋಹಿತ ಹೊಂದಾಣಿಕೆಯಾಗಲಿಲ್ಲ.  ಆದ ಕಾರಣ ಈ  ನೆಬ್ಯೂಲದಲ್ಲಿ ಮಾತ್ರ  ಒಂದು ವಿಶೇಷ ಧಾತುವಿದ್ದು ಅದರ ರೋಹಿತವಿರಬೇಕೆಂಬ ತೀರ್ಮಾನಕ್ಕೆ ಬಂದ ವಿಜ್ಞಾನಿಗಳು ಅಂತಹ ಆ ಧಾತುವನ್ನು ನೆಬ್ಯೂಲಿಯಂ ಕರೆದರು. ಬಹುತೇಕ ಯುವ ತಾರೆಗಳಿಂದ ಹೊರಹೊಮ್ಮುವ ಜೆಟ್‌ ಪ್ರವಾಹವು ಧಾತುಗಳನ್ನು ಹೊರಗಿನ ಮೋಡಗಳಿಗೆ  ಎರಚುತ್ತಿದೆ.  ಈ ನೀಹಾರಿಕೆಯಲ್ಲಿ ಹಲವಾರು ಮಹಾನವ್ಯಗಳು ಕಂಡು ಬಂದಿವೆ ಮತ್ತು ಮುಂದೆ ಬಹಳಷ್ಟು ತಾರೆಗಳು ಮಹಾನವ್ಯಗಳಾಗಿ ಅಂತ್ಯಗೊಳ್ಳುವ ಲಕ್ಷಣಗಳನ್ನು ಹೊಂದಿವೆ. ಈ ನೀಹಾರಿಕೆಯಲ್ಲಿ ಒಂದು ಮಧ್ಯಂತರ ಕಪ್ಪುರಂದ್ರವೂ ಇರಬಹುದೆಂಬ ಅನುಮಾನದ ಮೇರೆಗೆ ಹೆಚ್ಚಿನ ಸಂಶೋಧನೆಯಲ್ಲಿ ಖಗೋಳಶಾಸ್ತ್ರಜ್ಞರು ತೊಡಗಿದ್ದಾರೆ. ಹೀಗೆ ನಕ್ಷತ್ರಗಳ ಜೀವನ ಚಕ್ರದಲ್ಲಿನ ಹುಟ್ಟಿನಿಂದ ಸಾವಿನವರೆಗೆ ಇರುವ ನಕ್ಷತ್ರಗಳು ಈ ನೀಹಾರಿಕೆಯಲ್ಲಿ ಕಂಡು ಬರುವುದರಿಂದ ನಕ್ಷತ್ರಗಳು ಮತ್ತು ಗ್ರಹೀಯ ವ್ಯವಸ್ಥೆಯ ಉಗಮವನ್ನು ಅಧ್ಯಯನ ನಡೆಸಲು ಒರೈಯನ್‌ ನೀಹಾರಿಕೆಯು ನಮಗೆ ಅತಿ ಸಮೀಪದಲ್ಲಿರು ಖಗೋಳಶಾಸ್ತ್ರ ಪ್ರಯೋಗಶಾಲೆಯಾಗಿದೆ.

     ಮಾಯನ್ ನಾಗರೀಕತೆಯಲ್ಲಿ ಈ ನೀಹಾರಿಕೆಗೆ ವಿಶೇಷ ಮಹತ್ವ ಇದ್ದಿತು. ಗ್ರೀಕ್‌ ತತ್ವಶಾಸ್ತ್ರಜ್ಞರಿಂದ ಆರಂಭಿಸಿ  ಖಗೋಳಶಾಸ್ತ್ರಜ್ಞರು, ಜನ ಸಾಮಾನ್ಯರ ಗಮನವನ್ನು  ಈ ನೀಹಾರಿಕೆ ತನ್ನೆಡೆಗೆ ಸದಾ ಸೆಳೆಯುತ್ತಲಿದೆ. ಮೊಟ್ಟ ಮೊದಲಿಗೆ ಪಿಯರ್ಸಿಯಸ್‌ ೧೬೧೦ರ ನವೆಂಬರ್‌ ೨೬ ರಂದು  ಒರೈಯನ್‌ ನೀಹಾರಿಕೆಯನ್ನು ಸವಿವರವಾಗಿ ಅಧ್ಯಯನ ಮಾಡಿ ದಾಖಲಿಸಿದನು.  ೧೬೧೭ರಲ್ಲಿ ಗೆಲಿಲಿಯೋ ಇದರಲ್ಲಿನ  ಪ್ರಕಾಶಮಾನವಾದ ಮೂರು ನಕ್ಷತ್ರಗಳನ್ನು ಗುರ್ತಿಸಿದನು. ೪ ಮಾರ್ಚ್‌ ೧೬೬೭ ರಂದು ಚಾರ್ಲ್ಸ ಮೆಸ್ಸಿಯರ್‌  ನೀಹಾರಿಕೆ ಮತ್ತು ಅದರ ತ್ರಾಪಿಜ್ಯದ ನ ಮೂರು ನಕ್ಷತ್ರಗಳನ್ನು ಗುರುತಿಸಿದ್ದು ಮಾತ್ರವಲ್ಲದೇ ಆಕಾಶ ಕಾಯಗಳ ತನ್ನ ಕೋಷ್ಟಕದಲ್ಲಿ ಇದನ್ನು M೪೨( ಮೆಸ್ಸಿಯರ್‌ ಆಬ್ಜೆಕ್ಟ್‌ ೪೨) ಎಂದು ನಮೂದಿಸಿದನು. ನೂರಾರು ಖಗೋಳಶಾಸ್ತ್ರಜ್ಞರಿಗೆ ಸಂಶೋಧನಾ ವಿಷಯವಾಗಿರುವ ಈ ನೀಹಾರಿಕೆ ತನ್ನ ಹೊಸ ಹೊಸ ರೂಪಗಳನ್ನು ಶತಮಾನಗಳಿಂದ ಪ್ರಕಟಿಸುತ್ತಲೇ ಬಂದಿದೆ.

ಒರೈಯನ್‌ ನೀಹಾರಿಕೆ ಕ್ಷ ಕಿರಣ ಚಿತ್ರ ( ಚಿತ್ರ ಕೃಪೆ NASA ESA)



ಒರೈಯನ್‌ ನೀಹಾರಿಕೆ ಜೇಮ್ಸ್‌ ವೆಬ್‌ ದೂರದರ್ಶಕದ ಮೂಲಕ. ( ಚಿತ್ರ ಕೃಪೆ NASA ESA)




ಮಂಜು ಕರಗುವ ಮುನ್ನ

 ಮಂಜು ಕರಗುವ ಮುನ್ನ

                            ಲೇಖಕರು : ರಮೇಶ್‌ ವಿ. ಬಳ್ಳಾ 




ಮಂಜು... ಮಂಜು... ಎಂದು ಏನೇನೋ ಗುನುಗುತ್ತಿದ್ದ ರಮಾಳಿಗೆ ತಾ ಓದುತ್ತಿದ್ದ ವಿಷಯದ ಒಂದು ಭಾಗವಾಗಿ ಏನೋ ಆಲೋಚನೆಗಳು ಹೊಳೆಯುತ್ತಿದ್ದವು. ಆ ಧ್ವನಿ ಕೇಳಿದ ಮಂಜುಳಾ ಒಳಗಿನಿಂದ ಓಡೋಡಿ ಬಂದು 'ಏಕೆ ಕೂಗಿದೆ' ? ಎಂದು ಕೇಳಿದಳು. 'ಅಯ್ಯೋ ನಾನು ಹೇಳಿದ್ದು ಈ ಮಂಜುಳಾ ಅಲ್ಲ, ನನ್ನ ಪಾಠದ ಮಂಜು....ಅದೇ ಮಂಜುಗಡ್ಡೆ' ಬಗ್ಗೆ ಎಂದಳು ರಮಾ. ಮಂಜುಗಡ್ಡೆ ಬಗ್ಗೆ ಸುದೀರ್ಘವಾದ ಇಬ್ಬರ ಚರ್ಚೆ ಹೀಗೆ ಮುಂದುವರೆದಾಗ ಅದರ ಕುರಿತ ಹತ್ತು ಹಲವಾರು ಅಂಶಗಳು ತೆರೆದುಕೊಂಡವು. 

*ಏನಿದು ಮಂಜುಗಡ್ಡೆ !*

ಮಂಜುಗಡ್ಡೆ ಎಂಬುದು ನೀರಿನ ಘನ ರೂಪ. ಭೂಮಿಯ ಮೇಲೆ ಶೇಕಡ 72 ಭಾಗದಷ್ಟು ನೀರು ತುಂಬಿಕೊಂಡಿರುವುದು ನಮಗೆಲ್ಲ ತಿಳಿದ ವಿಷಯ. ಇಂಥ ಅದ್ಭುತವಾದ ನೀರು ಭೂಮಿಯ ಮೇಲೆ ಮೂರು ಸ್ಥಿತಿಗಳಲ್ಲಿ ಲಭ್ಯವಿರುವುದು ವಿಶೇಷ. ಸಾಮಾನ್ಯವಾಗಿ ನೀರು ದ್ರವ ರೂಪದಲ್ಲಿರುವುದು ಸರ್ವವೇದ್ಯ. ಈ ಮಧ್ಯೆ, ನೀರು ತಾಪವನ್ನು ಅತ್ಯಂತ ಕಡಿಮೆ ಮಾಡಿಕೊಂಡು ೦°C ನಲ್ಲಿ ಇದ್ದಾಗ ಘನಿರ್ಭವಿಸಿ ಮಂಜುಗಡ್ಡೆಯಾಗಿ ರೂಪುಗೊಳ್ಳುತ್ತದೆ. ಅದರ ರಚನೆಯೂ ಬದಲಾಗಿ ಹೋಗುತ್ತದೆ. ಸ್ವಚ್ಛವಾದ ಹಾಗೂ ಬಿಳಿ ಬಣ್ಣದ ಗಾಜಿನಂತ ಸ್ಪಟಿಕ ರೂಪವನ್ನು ಹೊಂದುತ್ತದೆ. ಮಂಜುಗಡ್ಡೆ ದ್ರವ ನೀರಿಗಿಂತ ಕಡಿಮೆ ಸಾಂದ್ರತೆಯನ್ನು ಹೊಂದುವ ಮೂಲಕ ಹಗುರವಾಗಿ ಕಾಣುತ್ತದೆ. ಮಂಜುಗಡ್ಡೆಯ ನೀರಿನ ಅಣುವಿನ ಸ್ಪಟಿಕ ರಚನೆ ನೋಡಿದಾಗ ಪ್ರತಿ ಆಮ್ಲಜನಕದ ಪರಮಾಣು ನಾಲ್ಕು ಹೈಡ್ರೋಜನ್ ಪರಮಾಣುಗಳ ನೆರೆಹೊರೆಯಾಗಿ ಸಂಪರ್ಕ ಏರ್ಪಡಿಸುತ್ತದೆ. ಇದು ಟೆಟ್ರಾಹೈಡ್ರಲ್ ರಚನೆಯಾಗಿ ಮುಂದುವರೆಯುತ್ತಾ ಸ್ಪಟಿಕದ ಆಕಾರ ತಾಳುತ್ತದೆ. ಇದು ಅನೇಕ ಸಣ್ಣ ಸಣ್ಣ ತೂತುಗಳಿಂದ ರಂಧ್ರಮಯವಾಗಿ ಸಾಂದ್ರತೆಯಲ್ಲಿ ಚಿಕ್ಕದಾಗಿ ಗೋಚರಿಸುತ್ತದೆ. 

*ನೀರಿನಲ್ಲಿ ಮಂಜುಗಡ್ಡೆ ತೇಲುತ್ತದೆಯೇ?*

ಹೌದು‌! ಖಂಡಿತ, ನೀರಿನಲ್ಲಿ ಮಂಜುಗಡ್ಡೆ ತೇಲುತ್ತದೆ. ಈ ಸಣ್ಣ ಪ್ರಶ್ನೆ ಶಾಲಾ ಮಕ್ಕಳಲ್ಲಿ ಸಾಮಾನ್ಯವಾಗಿ ಉದ್ಭವಿಸುತ್ತದೆಯಾದರೂ ವಾಸ್ತವದಲ್ಲಿ ಇದರ ವೈಜ್ಞಾನಿಕ ತಿಳುವಳಿಕೆ ಎಲ್ಲರಲ್ಲೂ ಇರಬೇಕಾದದ್ದು ಅತಿ ಅವಶ್ಯಕ. ಘನೀಭವಿಸಿದ ಈ ಮಂಜುಗಡ್ಡೆ ಸಾಮಾನ್ಯ ದ್ರವ ನೀರಿಗಿಂತ ಹಗುರವಾಗಿರುತ್ತದೆ. ಮಂಜುಗಡ್ಡೆಯ ರಚನೆಯಲ್ಲಿ ಅದರ ಕಣಗಳು ಹೆಚ್ಚು ಜಾಗವನ್ನು ಆಕ್ರಮಿಸುವ ರೀತಿಯಲ್ಲಿ ಜೋಡಿಸಲ್ಪಡುತ್ತವೆ. ಆಗ ಅದು ವಿಸ್ತಾರಗೊಳ್ಳುತ್ತದೆ. ಈ ರಚನೆಯ ಬದಲಾವಣೆಯನ್ನು ವ್ಯಾಕೋಚನೆ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಂಜುಗಡ್ಡೆಯ ಒಳಭಾಗ ಖಾಲಿ ಖಾಲಿಯಾಗುತ್ತದೆ. ಆಗ ಅದರ ಗಾತ್ರ ಹೆಚ್ಚಾಗಿ ತೂಕ ಕಡಿಮೆಯಾಗುತ್ತದೆ. ಸಾಂದ್ರತೆಯನ್ನು ಗಮನಿಸಿದಾಗ 4 ° C ನಲ್ಲಿ ನೀರು 1g / cm3 ಹೊಂದಿದ್ದರೆ, O °C ನಲ್ಲಿ ಮಂಜುಗಡ್ಡೆ 0.92 g / cm3 ಇರುತ್ತದೆ. ಪರಿಣಾಮ ನೀರಿನಲ್ಲಿ ಕಡಿಮೆ ಸಾಂದ್ರತೆಯ ಈ ಮಂಜುಗಡ್ಡೆಯು ತೇಲಲು ಪ್ರಾರಂಭಿಸುತ್ತದೆ.

*ಮಂಜುಗಡ್ಡೆ ತೇಲುವಿಕೆಯ ಲಾಭ ?*

ಮಂಜುಗಡ್ಡೆ ತೇಲುವುದಕ್ಕೂ ತೇಲದೆ ಇರುವುದಕ್ಕೂ ಲಾಭದ ನಂಟು ಏನು ಎಂದು ಯೋಚಿಸುತ್ತೀರಾ? ನಿಜ! ನಾವು ಎಲ್ಲದಕ್ಕೂ ಲಾಭದ ಯೋಚನೆ ಮಾಡುತ್ತೇವೆ. ಹಾಗೆ ಇಲ್ಲೂ ಕೂಡ ಲಾಭ ಇಲ್ಲ ಅಂತಲ್ಲ. ಸಾಗರ, ಸರೋವರಗಳಲ್ಲಿ ಇದರ ಪ್ರಯೋಜನ ಕಾಣಬಹುದು. ಅಲ್ಲಿ ಬದುಕುವ ಬಹುತೇಕ ಜಲಚರ ಜೀವ ಜಂತುಗಳು ಪ್ರಾಣಿಗಳ ವಿಷಯದಲ್ಲಿ ಇದು ಬಹು ಮುಖ್ಯವೆನಿಸುತ್ತದೆ. ಮಂಜುಗಡ್ಡೆ ನೀರಿನ ಮೇಲೆ ತೇಲುತ್ತದೆಯಾದ್ದರಿಂದ ಅದು ಈ ಸಾಗರ ಸರೋವರಗಳ ಮೇಲ್ಮೈ ಮೇಲೆ ಒಂದು ಪದರವಾಗಿ ರೂಪುಗೊಳ್ಳುತ್ತದೆ. ಎಷ್ಟೇ ತಾಪಮಾನ ಕುಸಿದು ಅತ್ಯಂತ ತಂಪು ವಾತಾವರಣ ನಿರ್ಮಾಣವಾದರೂ, ಆ ಪದರಿನ ಕೆಳಗಡೆ ಭಾಗದ ನೀರು ತಂಪಾಗದೆ ತಾಪಮಾನವನ್ನು ಕಾಯ್ದುಕೊಳ್ಳುತ್ತದೆ. ಹಾಗಾಗಿ ಮಂಜುಗಡ್ಡೆಯ ಪದರಿನ ಕೆಳಭಾಗದ ನೀರಿನಲ್ಲಿ ಬದುಕುವ ಮೀನುಗಳಂತ ಅನೇಕ ಜಲಚರ ಜೀವಿಗಳು ಬೆಚ್ಚಗಿನ ಅಗತ್ಯ ತಾಪಮಾನವನ್ನು ಅನುಭವಿಸುತ್ತವೆ. ಇದರಿಂದ ಈ ಜಲಚರಗಳ ಉಳಿವು ಸಾಧ್ಯವಾಗುತ್ತದೆ.

*ಮಂಜುಗಡ್ಡೆ ಎಲ್ಲೆಲ್ಲಿದೆ ?*

ಮಂಜುಗಡ್ಡೆ ನಮ್ಮ ಭೂಮಿಯ ಮೇಲ್ಭಾಗದಲ್ಲಿ ಸಾಗರ ಸರೋವರಗಳಲ್ಲಿ ಮಾತ್ರವಲ್ಲ ಇಡೀ ಸೌರವ್ಯೂಹದದ್ಯಾಂತ ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಭೂಮಿಯಿಂದ ಅದರಾಚೆಗೆ ಲಕ್ಷಾಂತರ ಮೈಲುಗಳ ದೂರದ ಚಂದ್ರ ಇತರ ಗ್ರಹಗಳಲ್ಲೂ ಕೂಡ ಮಂಜುಗಡ್ಡೆ ವ್ಯಾಪ್ತಿಸಿರುವ ಬಗ್ಗೆ ನಾಸಾ ವಿಜ್ಞಾನಿಗಳು ಅನ್ವೇಷಿಸುತ್ತಿದ್ದಾರೆ. ಋತುಮಾನಕ್ಕೆ ಅನುಗುಣವಾಗಿ ಅದರ ವ್ಯಾಪ್ತಿ ಹರವು ವಿಸ್ತಾರಗೊಳ್ಳುವುದು ಹಾಗೂ ಕ್ಷೀಣಿಸುವುದು ಸಾಮಾನ್ಯ. ಚಳಿಗಾಲದಲ್ಲಿ ಹೆಚ್ಚು ಹಿಮಗಡ್ಡೆಗಳು ರೂಪಗೊಂಡು ಕ್ರಮೇಣ ಬೇಸಿಗೆ ಸಮೀಪಿಸುತ್ತಿದ್ದಂತೆ ಕರಗುತ್ತಾ ಸಾಗರ ಪ್ರವಾಹಗಳ ರೂಪದಲ್ಲಿ ಮೊದಲಿನ ರೂಪಕ್ಕೆ ಬರುತ್ತವೆ. ಇದು ಒಂದು ರೀತಿಯಲ್ಲಿ ಹವಾಮಾನದ ಸಮತೋಲನ ಕಾಪಾಡುವಲ್ಲಿ ಒಂದು ಹೆಜ್ಜೆ ಎಂದು ಹೇಳಬಹುದು. ಇದರಲ್ಲಿ ಪ್ರಮುಖ ಪಾತ್ರ ವಹಿಸುವ ಮಂಜುಗಡ್ಡೆಗಳು ಜಾಗತಿಕ ಹವಾಮಾನದ ಹಲವು ಮಾದರಿಗಳು ರೂಪಗಳುವಿಕೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಪ್ಲೂಟೊದ ಜಲಾವೃತ ಪ್ರದೇಶ ವಿಶೇಷ ಲಕ್ಷಣವುಳ್ಳ ಮಂಜುಗಡ್ಡೆಗಳಿಂದ ಅವೃತ್ತವಾಗಿರುವುದನ್ನು ನಾಸಾ ದೃಢಪಡಿಸಿದೆ. ಭೂಮಿಯ ಮೇಲಿನ ಮದ ಹೊದಿಕೆಗಳಂತೆಯೇ ಮಂಗಳ ಗ್ರಹದ ಮೇಲೂ ಇಂಥ ಮಂಜುಗಡ್ಡೆಯ ಪದರುಗಳಿರುವುದು ಪತ್ತೆಯಾಗಿದೆ. ಶನಿಯ ಸಮಭಾಜಕದ 75,000 ಮೈಲುಗಳಿಂದ ಸುಮಾರು 2,60,000 ಮೈಲುಗಳವರೆಗೆ ಹಿಮ ಕಣಗಳ ಮೋಡಗಳು ಆವರಿಸಿರುವುದು ತಿಳಿದು ಬರುತ್ತದೆ. ವಿಶೇಷವಾಗಿ ಶನಿಯ ಉಂಗರುಗಳು ಮತ್ತು ಅದರ ಉಪಗ್ರಹಗಳು ಇಂಥ ಮಂಜುಗಡ್ಡೆಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಹಾಗೆಯೇ ಗುರು ಗ್ರಹದ ಉಪಗ್ರಹ ಯುರೋಪ ಕೂಡ ಹಿಮಾವೃತ ಗುಮ್ಮಟಗಳ ಮಾದರಿಯಲ್ಲಿರುವುದು ಕಂಡುಬರುತ್ತದೆ. ನಮ್ಮ ಭೂಮಿಯ ಉಪಗ್ರಹ ಚಂದ್ರನ ನಿರ್ದಿಷ್ಟ ಭಾಗದಲ್ಲಿ ಹಿಮ ನಿಕ್ಷೇಪವಿರುವ ಪುರಾವೆ ಸಿಕ್ಕಿದೆ. 

ಹತ್ತು ಹಲವು ಬಗೆಯ ಮಂಜುಗಡ್ಡೆಯ ಆಕಾರಗಳು ಆಕರ್ಷಿಸುವಂತಿವೆ. ನಾವು ನೋಡಿರುವ ಮೊನಚಾದ ಮಂಜುಗಡ್ಡೆ ಮಾತ್ರ ನಮಗೆ ಗೊತ್ತು. ಆದರೆ ಕೋಷ್ಟಕಕಾರದ ಪೊಬೆಡ ಐಸ್ ದ್ವಿಪ ಸಮತಟ್ಟಾದ ಮೇಲ್ಮೈ ಹಾಗೂ ಕಡಿದಾದ ಅಂಚುಗಳನ್ನು ಹೊಂದಿದೆ. ದುಂಡಾದ ಮೇಲ್ಬೈ ಭಾಗದಲ್ಲಿ ಇರುವ ಗುಮ್ಮಟ ಆಕಾರದ ಮಂಜುಗಡ್ಡೆ, ಶಿಖರ ಆಕಾರದ ಪಿನಾಕಲ್ ಮಂಜುಗಡ್ಡೆ, ಯು ಆಕಾರದ ಡ್ರೈ ಡಾಕ್ ಹೀಗೆ ನಾನಾ ಆಕಾರದ ಮಂಜುಗಡ್ಡೆಯ ಹರವು ನಮ್ಮ ಅರಿವಿನಲ್ಲಿದೆ. 

ಹೀಗೆ ವಿಭಿನ್ನವಾಗಿ ವಿಶೇಷವಾಗಿ ವೈವಿಧ್ಯಮಯ ರೀತಿಯಲ್ಲಿ ಎಲ್ಲೆಲ್ಲೂ ಮಂಜು ಆವರಿಸಿ ಪ್ರಕೃತಿಯ ಒಂದು ಭಾಗವಾಗಿರುವುದು ಸೋಜಿಗದ ಸಂಗತಿ.