ಶಿಕ್ಷಕ ದಿನಾಚರಣೆ 2026
‘ವಿನಯ ವಿದ್ಯಾ ವಿಶಾರದ’ ಪ್ರಶಸ್ತಿ ಪುರಸ್ಕೃತರು ಹಾಗೂ ‘ಸವಿಜ್ಞಾನ’ದ ಪ್ರಧಾನ ಸಂಪಾದಕರಾದ ಡಾ. ಬಾಲಕೃಷ್ಣ ಅಡಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರಶಸ್ತಿಯ ಹೆಸರಿಗೆ ತಕ್ಕಂತೆ ವಿನಯ, ವಿದ್ಯೆ ಮತ್ತು ವಿಶಾರದತೆಯನ್ನು ಮೈಗೂಡಿಸಿಕೊಂಡಿರುವ ಅವರು, ನಮ್ಮೆಲ್ಲರನ್ನು ಪ್ರತಿಹಂತದಲ್ಲೂ ತಿದ್ದಿ, ತೀಡಿ, ಪ್ರೋತ್ಸಾಹಿಸಿ ಮುನ್ನಡೆಸುತ್ತಿರುವ ಸರಳ ಸಜ್ಜನಿಕೆಯ ವಿಶಿಷ್ಟ ವ್ಯಕ್ತಿತ್ವ. ಅವರ ಮಾರ್ಗದರ್ಶನ ‘ಸವಿಜ್ಞಾನ’ದ ಶೈಕ್ಷಣಿಕ ಪಯಣಕ್ಕೆ ಸದಾ ಸ್ಫೂರ್ತಿಯ ಸೆಲೆಯಾಗಿರಲಿ. ಈ ಸಾರ್ಥಕ ಆಯ್ಕೆಗೆ ಆಯ್ಕೆ ಸಮಿತಿಗೂ ಹೃತ್ಪೂರ್ವಕ ಧನ್ಯವಾದಗಳು.
ಸಿದ್ದು ಬಿರಾದಾರ್ ಅವರು ಸೂತ್ರದ ಗೊಂಬೆಯಾಟದ ವಿಶಿಷ್ಟ ಕಲೆಯ ಮೂಲಕ ವಿಜ್ಞಾನವನ್ನು ದೇಶ-ವಿದೇಶಗಳಲ್ಲಿ ಜನಪ್ರಿಯಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ವಿಜ್ಞಾನವನ್ನು ಕೇವಲ ಪಠ್ಯಪುಸ್ತಕದ ಪುಟಗಳಲ್ಲಿ ಸೀಮಿತಗೊಳಿಸದೆ, ಕಲೆ, ಮನರಂಜನೆ ಮತ್ತು ಸೃಜನಶೀಲತೆಯೊಂದಿಗೆ ಜನಮನಕ್ಕೆ ತಲುಪಿಸುವ ಅವರ ಪ್ರಯತ್ನವು ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಣ ಸಚಿವರು ಹಾಗೂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿರುವುದು ‘ಸವಿಜ್ಞಾನ’ ಬಳಗಕ್ಕೂ ಹೆಮ್ಮೆಯ ಸಂಗತಿ.

No comments:
Post a Comment