ಕೆನಡಾದಲ್ಲಿದ್ದ ಅಚ್ಚ ಕನ್ನಡಿಗ ವಿಜ್ಞಾನಿ ಸಾಹಿತ್ಯಸಾಧಕ - ಡಾ. ರಾಮಭಟ್ ಬಾಳಿಕೆ
ಲೇಖನ : ರಾಮಚಂದ್ರ ಭಟ್ ಬಿ.ಜಿ.“ಒಬ್ಬ ವ್ಯಕ್ತಿ ವಿಜ್ಞಾನದಲ್ಲಿ ಜಾಗತಿಕ ಮಟ್ಟದ ಶಿಖರ ಏರಿಯೂ, ತನ್ನ ಎದೆಯ ಆಳದಲ್ಲಿ ಕನ್ನಡದ ಮಣ್ಣಿನ ವಾಸನೆಯನ್ನು ಅಳಿಸದೆ ಉಳಿಸಿಕೊಂಡಿದ್ದರೆ ಅದು ನಿಜವಾದ ಸಾಧನೆ.”
ಈ ಮಾತಿಗೊಂದು ಜೀವಂತ ರೂಪದಂತಿದ್ದವರು ಡಾ. ರಾಮಭಟ್ ಬಾಳಿಕೆ. ವಿಜ್ಞಾನದ ಪ್ರಯೋಗಶಾಲೆಗಳಲ್ಲಿ ಜಾಗತಿಕ ಮಟ್ಟದ ಸಂಶೋಧಕ, ವಿಶ್ವವಿದ್ಯಾಲಯದ ಆಡಳಿತದ ಚುಕ್ಕಾಣಿ ಹಿಡಿದ ಮಾರ್ಗದರ್ಶಕ, ನಾಸಾದ ಗೌರವಕ್ಕೆ ಪಾತ್ರರಾದ ತಂತ್ರಜ್ಞ, ಅದೇ ಹೊತ್ತಿಗೆ ಕನ್ನಡದ ಕವಿ, ಕಾದಂಬರಿಕಾರ, ಹರಿಕಥೆಗಾರ ಹಾಗೂ ಮೃದಂಗ ವಾದಕ—ಹೀಗೆ ಹತ್ತಾರು ಲೋಕಗಳನ್ನು ಏಕಕಾಲಕ್ಕೆ ಆವಾಹಿಸಿಕೊಂಡಿದ್ದ, ತನ್ನ ಊರ ಹೆಸರಿಗೆ ತಕ್ಕಂತೆ ವಿವಿಧ ಕ್ಷೇತ್ರಗಳಿಗೆ ಹಲವು ಪೀಳಿಗೆಯವರೆಗೂ ಬಾಳಿಕೆಯಾಗುವಂತೆ ಬದುಕಿದ್ದ ಈ ಅಪರೂಪದ ವ್ಯಕ್ತಿತ್ವ ಇದೀಗ ಇತಿಹಾಸದ ಪುಟಗಳನ್ನು ಸೇರಿದೆ.
2026ರ ಮೇ 24ರಂದು ಕೆನಡಾದ ಟೊರೆಂಟೋದಲ್ಲಿ ಅವರು ವಿಧಿವಶರಾದ ಸುದ್ದಿ, ಅತ್ತ ಜಾಗತಿಕ ವಿಜ್ಞಾನ ಲೋಕವನ್ನು ಹಾಗೂ ಇತ್ತ ಕನ್ನಡ ಸಾಹಿತ್ಯ ವಲಯವನ್ನು ಒಟ್ಟಿಗೇ ಮೌನವಾಗಿಸಿದೆ. ಧರ್ಮತ್ತಡ್ಕದ ಹಸಿರು ಮಡಿಲಿನಿಂದ ಕೆನಡಾದ ಹಿಮದ ನಾಡಿನವರೆಗೆ ವಿಸ್ತರಿಸಿದ ಅವರ ಬದುಕಿನ ಪಥ, ಮುಂಬರುವ ತಲೆಮಾರುಗಳಿಗೆ ದಾರಿದೀಪವಾಗಬಲ್ಲಂತಹುದು. ಧರ್ಮತ್ತಡ್ಕದ ಸುತ್ತಮುತ್ತಲಿನ ಪ್ರದೇಶವಾದ ಮಂಜೇಶ್ವರ, ಕಾಸರಗೋಡಿನವನಾದ ನನಗೆ ನಮ್ಮ ಕಡೆಯ ಇಂತಹ ಧೀಮಂತ ವ್ಯಕ್ತಿತ್ವವನ್ನು ಕಟ್ಟಿ ಕೊಡುವ ಮೂಲಕ ನುಡಿನಮನ ಸಲ್ಲಿಸುವುದು ಹೆಮ್ಮೆಯ ವಿಚಾರವೇ ಸರಿ.
ಧರ್ಮತ್ತಡ್ಕದ ಪುಟ್ಟ ಹಳ್ಳಿಯಿಂದ ಜಾಗತಿಕ ವಿಜ್ಞಾನ ಲೋಕದವರೆಗೆ...
1943ರ ಅಕ್ಟೋಬರ್ 2ರಂದು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಸಮೀಪದ ಬಾಳಿಕೆ ಎಂಬ ಹಳ್ಳಿಯ ಮನೆಯಲ್ಲಿ ರಾಮಭಟ್ಟರ ಜನನವಾಯಿತು. ಅಡಿಕೆ ತೋಟಗಳು, ಭತ್ತದ ಗದ್ದೆಗಳು, ಕರಾವಳಿಯ ಪ್ರಕೃತಿಯ ಸೌಂದರ್ಯದ ನಡುವೆ ಕಳೆದ ಬಾಲ್ಯವದು. ಅಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಸೌಲಭ್ಯಗಳು ತೀರಾ ವಿರಳ.
ಆದರೆ, ಈ ಬಾಲಕನ ಕಣ್ಣುಗಳಲ್ಲಿ ಬೇರೆಯದೇ ಆದ ಜ್ಞಾನದ ಹಸಿವಿತ್ತು. ಸುತ್ತಲಿನ ಪ್ರಕೃತಿಯ ಚಲನೆಯ ಹಿಂದೆ ಅಡಗಿರುವ ವಿಜ್ಞಾನವನ್ನು ಅರಿಯುವ ಹಂಬಲ, ಪುಸ್ತಕಗಳ ಮೇಲಿನ ಅವ್ಯಾಹತ ಪ್ರೀತಿ, ಸಂಗೀತದ ನಾದದ ಮೇಲಿನ ಆಕರ್ಷಣೆ ಬಾಲ್ಯದಲ್ಲೇ ಮೊಳಕೆಯೊಡೆದಿದ್ದವು. ಮಧ್ಯಮ ವರ್ಗದ ಕುಟುಂಬದ ಆರ್ಥಿಕ ಮಿತಿಗಳು ಹಾಗೂ “ಓದಿದ್ದು ಸಾಕಷ್ಟಾಯಿತು” ಎಂಬ ಕೌಟುಂಬಿಕ ಒತ್ತಡಗಳ ನಡುವೆಯೂ ರಾಮಭಟ್ಟರು ತಮ್ಮ ದೃಢಸಂಕಲ್ಪದಿಂದ ಮುನ್ನಡೆದರು.
ಮಂಜೇಶ್ವರದಲ್ಲಿ ಪ್ರೌಢಶಾಲೆ ಮುಗಿಸಿ, ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಪೂರೈಸಿದರು. ನಂತರ, ಅಂದಿನ ದಿನಗಳಲ್ಲಿ ಅತ್ಯಂತ ಪ್ರತಿಷ್ಠಿತವಾಗಿದ್ದ ತಾಂತ್ರಿಕ ಶಿಕ್ಷಣಕ್ಕಾಗಿ ಸುರತ್ಕಲ್ಲಿನ ಕೆ.ಆರ್.ಇ.ಸಿ. (ಇಂದಿನ NITK) ಸಂಸ್ಥೆಯನ್ನು ಸೇರಿದರು. ಅಲ್ಲಿ ಅವರ ಪ್ರತಿಭೆಯನ್ನು ಗುರುತಿಸಿದ ಪ್ರಾಧ್ಯಾಪಕರು ಮೇಲ್ಮಟ್ಟದ ಸಂಶೋಧನೆಗೆ ಪ್ರೇರೇಪಿಸಿದರು. ಮುಂದೆ ಮದ್ರಾಸ್ ಐಐಟಿ (IIT Madras) ಸಂಸ್ಥೆಯಿಂದ ಎಂ.ಟೆಕ್ ಪದವಿ ಪಡೆದ ಅವರು, “Sound and Vibration” (ಧ್ವನಿ ಮತ್ತು ಕಂಪನ) ವಿಷಯದಲ್ಲಿ ಪಿಎಚ್.ಡಿ. ಪೂರ್ಣಗೊಳಿಸಿದರು.
“ನಾದ ಮತ್ತು ಕಂಪನ” – ಸಂಶೋಧನೆಯ ಹೃದಯ ಭಾಗ
ಡಾ. ರಾಮಭಟ್ ಅವರ ಸಂಶೋಧನೆಯ ಮುಖ್ಯ ಕ್ಷೇತ್ರ 'ಸೌಂಡ್ ಅಂಡ್ ವೈಬ್ರೇಷನ್ ಇಂಜಿನಿಯರಿಂಗ್'. ಯಂತ್ರಗಳು, ವಿಮಾನಗಳು, ರಾಕೆಟ್‌ಗಳು, ಬೃಹತ್ ಕೈಗಾರಿಕಾ ಸ್ಥಾವರಗಳು ಹಾಗೂ ಕಟ್ಟಡಗಳಲ್ಲಿ ಉಂಟಾಗುವ ಕಂಪನ ಮತ್ತು ಧ್ವನಿಯ ತೀವ್ರತೆಯನ್ನು ನಿಯಂತ್ರಿಸುವ ಜಟಿಲ ತಂತ್ರಜ್ಞಾನವಿದು.
ಅವರು ಕೃಷಿ ಮಾಡಿದ ಪ್ರಮುಖ ಸಂಶೋಧನಾ ಕ್ಷೇತ್ರಗಳು:Structural Dynamics
Aeroelasticity
Noise Control Engineering
Mechanical Vibrations
Finite Element Analysis
Acoustics Engineering
Composite Structures
ಈ ಕ್ಷೇತ್ರಗಳಲ್ಲಿ ಅವರು ನಡೆಸಿದ ಮೂಲಭೂತ ಸಂಶೋಧನೆಗಳು ಮುಂದೆ ಜಾಗತಿಕ ಮಟ್ಟದ ವಿಮಾನೋದ್ಯಮ ಮತ್ತು ರಾಕೆಟ್ ತಂತ್ರಜ್ಞಾನದ ವಿನ್ಯಾಸಗಳಲ್ಲಿ ಪ್ರಮುಖ ಪಾತ್ರ ವಹಿಸಿದವು. ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾದ ಅವರ 300ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಉತ್ತರ ಅಮೆರಿಕಾದ ವೈಜ್ಞಾನಿಕ ವಲಯದಲ್ಲಿ ಅವರಿಗೆ ಮನ್ನಣೆ ತಂದುಕೊಟ್ಟವು.
ಇಸ್ರೋದಿಂದ ನಾಸಾದವರೆಗೆ...
ಡಾ. ರಾಮಭಟ್ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಆರಂಭಿಕ ರಾಕೆಟ್ ಉಡಾವಣಾ ತಾಣವಾದ ಥುಂಬಾ (Thumba) ರಾಕೆಟ್ ಕೇಂದ್ರದಲ್ಲಿ. ಅದು ಡಾ. ವಿಕ್ರಂ ಸಾರಾಭಾಯಿ ಅವರ ನೇತೃತ್ವದಲ್ಲಿ. ಭಾರತೀಯ ಅಂತರಿಕ್ಷ ಕನಸುಗಳು ಮೊಳಕೆಯೊಡೆಯುತ್ತಿದ್ದ ಕಾಲ. ಮೂಲಸೌಕರ್ಯಗಳ ಕೊರತೆಯಿದ್ದರೂ ಅಪಾರ ದೇಶಪ್ರೇಮ ಮತ್ತು ಜ್ಞಾನದ ಬಲದಿಂದ ಕೆಲಸ ಮಾಡುತ್ತಿದ್ದ ಯುವ ವಿಜ್ಞಾನಿಗಳ ತಂಡದಲ್ಲಿ ರಾಮಭಟ್ಟರು ಗುರುತಿಸಿಕೊಂಡರು.
ನಂತರದ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿ ಸಂಶೋಧನೆ ಮುಂದುವರಿಸಿದ ಇವರನ್ನು ಅಮೆರಿಕಾದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ NASA ತನ್ನ 'ಲಾಂಗ್ಲೆ ರಿಸರ್ಚ್ ಸೆಂಟರ್'ಗೆ ಆಹ್ವಾನಿಸಿತು. 1983ರಲ್ಲಿ ಇವರ ವೈಜ್ಞಾನಿಕ ಕೊಡುಗೆಯನ್ನು ಪರಿಗಣಿಸಿ ನಾಸಾ ವಿಶೇಷ ಗೌರವ ನೀಡಿ ಸನ್ಮಾನಿಸಿತು.
ಕಾನ್ಕಾರ್ಡಿಯಾ ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್!!
ಬಳಿಕ ಕೆನಡಾದ ಮಾಂಟ್ರಿಯಲ್‌ನಲ್ಲಿರುವ ಪ್ರಸಿದ್ಧ Concordia University ಸೇರಿದ ರಾಮಭಟ್ಟರು, ಅಲ್ಲಿ ಕೇವಲ ತರಗತಿ ಕೋಣೆಯ ಪ್ರಾಧ್ಯಾಪಕರಾಗಿ ಉಳಿಯಲಿಲ್ಲ. ತಮ್ಮ ಕೃತು ಶಕ್ತಿಯಿಂದ ಅದನ್ನು ಒಂದು ಶ್ರೇಷ್ಠ ಸಂಶೋಧನಾ ಕೇಂದ್ರವಾಗಿಸಿದರು. ಅಲ್ಲಿ ಸ್ವಸಾಮರ್ಥ್ಯದಿಂದ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡೀನ್ ಆಗಿ ಕೊನೆಗೆ ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್ (Pro-Vice-Chancellor) ಹುದ್ದೆಯ ಜವಾಬ್ದಾರಿಯನ್ನೂ ನಿಭಾಯಿಸಿದರು. ಅಷ್ಟೇ ಅಲ್ಲದೇ ಭಾರತ ಮತ್ತು ಕೆನಡಾ ದೇಶಗಳ ನಡುವಣ ಶೈಕ್ಷಣಿಕ ಹಾಗೂ ತಾಂತ್ರಿಕ ಸಂಪರ್ಕದ ಸೇತುವೆಯಾಗಿ ಕೆಲಸ ಮಾಡಿದರು.
ವಿಜ್ಞಾನಿಯೊಳಗಿನ ಸಾಹಿತ್ಯಕಾರ
ಡಾ. ರಾಮಭಟ್ ಅವರ ವ್ಯಕ್ತಿತ್ವದ ಅತ್ಯಂತ ಆಕರ್ಷಕ ಭಾಗವೆಂದರೆ ಅವರಲ್ಲಿದ್ದ ಸಾಹಿತ್ಯ ಮನಸ್ಸು. ವಿಜ್ಞಾನ ಅವರ ಮಿದುಳಿನ ಭಾಷೆಯಾಗಿದ್ದರೆ, ಕನ್ನಡ ಅವರ ಹೃದಯದ ಭಾಷೆಯಾಗಿತ್ತು.
“ನಗೆಗೆ ಇರಲಿ ಬಾಳಿಕೆ”: ಇವರ ಮೊದಲ ಕವನ ಸಂಕಲನ. ಇದರಲ್ಲಿ ಕರಾವಳಿಯ ಬಾಲ್ಯದ ನೆನಪುಗಳು ಮತ್ತು ವಿದೇಶಿ ಬದುಕಿನ ಅನುಭವಗಳು ಕಾವ್ಯಾತ್ಮಕವಾಗಿ ಮೂಡಿಬಂದಿವೆ.
“ನಾದ”: ಇದು ಕನ್ನಡ ವಿಜ್ಞಾನ ಸಾಹಿತ್ಯ ಲೋಕದಲ್ಲೇ ಒಂದು ಅಪರೂಪದ ಕೃತಿ. ಸಂಗೀತೋಪಕರಣಗಳಲ್ಲಿ ನಾದ ಹೇಗೆ ಹುಟ್ಟುತ್ತದೆ? ವಿವಿಧ ವಾದ್ಯಗಳ ವೈಜ್ಞಾನಿಕ ಸ್ವರೂಪವೇನು? ಎಂಬುದನ್ನು ಅಚ್ಚಗನ್ನಡದಲ್ಲಿ ವಿವರಿಸಿದ ಪ್ರಯತ್ನವಿದು.
'ಬಾಳಿಕೆಯಿಂದ ಕೆನಡಾಕ್ಕೆ' ಎಂಬ ಪುಟ್ಟ ಆತ್ಮಕಥನ ಅವರ ಅನುಭವ, ನೆನಪುಗಳನ್ನು ವಿವರಿಸುತ್ತದೆ.
ಧ್ವನಿ ತರಂಗಗಳ ವೇಗ, ಆವೃತ್ತಿ ಮತ್ತು ತರಂಗದೂರದ ನಡುವಿನ ಸಂಬಂಧವನ್ನು ತಿಳಿಸುವ ಭೌತವಿಜ್ಞಾನದ ಮೂಲ ಸೂತ್ರ: v = f × λ, ಹಾಗೆಯೇ, ಕಂಪನಗಳ ಅಧ್ಯಯನದಲ್ಲಿ ಅತ್ಯಂತ ಪ್ರಮುಖವಾದ ಸರಳ ಹಾರ್ಮೋನಿಕ್ ಚಲನೆಯನ್ನು (Simple Harmonic Motion) ಗುರುತಿಸುವ ಸಮೀಕರಣ: y = A sin(ωt). ಇಂತಹ ಸಂಕೀರ್ಣ ವೈಜ್ಞಾನಿಕ ಸಮೀಕರಣಗಳ ಹಿಂದಿನ ತತ್ವಗಳನ್ನು ಸಾಮಾನ್ಯ ಕನ್ನಡಿಗನಿಗೂ ಅರ್ಥವಾಗುವಂತೆ ಲಲಿತವಾದ ಶೈಲಿಯಲ್ಲಿ ಮುಂದಿನ ಪೀಳಿಗೆಗೆ ದಾಟಿಸಿದ ಕೀರ್ತಿ ಅವರದ್ದು.
ಆಂಜನೇಯನನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಕಾದಂಬರಿಕಾರ!!
ಡಾ. ರಾಮಭಟ್ ಬರೆದ “The Divine Anjaneya” ಕೃತಿಯು ಭಾರತೀಯ ಪುರಾಣದ ಆಂಜನೇಯನ ಪಾತ್ರವನ್ನು ಕೇವಲ ಭಕ್ತಿಯ ನೆಲೆಯಲ್ಲಲ್ಲದೆ, ಸಾಂಸ್ಕೃತಿಕ ಮತ್ತು ಸಾತ್ವಿಕ ದೃಷ್ಟಿಕೋನದಿಂದ ಜಾಗತಿಕ ಓದುಗರಿಗೆ ಪರಿಚಯಿಸಿತು.
ಅವರ ಮತ್ತೊಂದು - 783 ಪುಟಗಳ ಬೃಹತ್ ಸಂಶೋಧನಾತ್ಮಕ ಕಾದಂಬರಿ “Xuang Zhang's Mission to the West with Monkey King”. ಚೀನಾದ ಪೌರಾಣಿಕ ಪಾತ್ರವಾದ 'ಸುನ್ ವುಕೊಂಗ್' (Sun Wukong) ಮತ್ತು ಭಾರತದ 'ಆಂಜನೇಯ' ಪಾತ್ರಗಳ ನಡುವಿರುವ ಸಾಂಸ್ಕೃತಿಕ ಸಾಮ್ಯತೆಗಳನ್ನು ವಿಜ್ಞಾನಿಯೊಬ್ಬನ ವಿಶ್ಲೇಷಣಾತ್ಮಕ ಮನಸ್ಸಿನಿಂದ ಹಾಗೂ ಸಾಹಿತಿಯೊಬ್ಬನ ಕಲ್ಪನಾಶಕ್ತಿಯಿಂದ ಅವರು ಕಟ್ಟಿಕೊಟ್ಟ ರೀತಿ ಅದ್ಭುತ. ಒಬ್ಬ ವಿಜ್ಞಾನ ಶಿಕ್ಷಕನಾಗಿ ಇವು ನಮ್ಮಂತಹ ಶಿಕ್ಷಕರನ್ನು ಆಳವಾಗಿ ಪ್ರಚೋದಿಸುತ್ತವೆ. ಕಲ್ಪನೆ ವಿಜ್ಞಾನ ಸಂಶೋಧನೆಗಳಿಗೆ ಅತ್ಯಗತ್ಯ.
ಈ ಪುಸ್ತಕವು ಚೀನಾದ ಪ್ರಸಿದ್ಧ ಕಾವ್ಯವಾದ 'ಜರ್ನಿ ಟು ದಿ ವೆಸ್ಟ್' ನ ಆಂಗ್ಲ ರೂಪಾಂತರವಾಗಿದೆ. ಇದು 7ನೇ ಶತಮಾನದಲ್ಲಿ ಬೌದ್ಧ ಧರ್ಮದ ಪವಿತ್ರ ಗ್ರಂಥಗಳನ್ನು ತರಲು ಭಾರತಕ್ಕೆ ಬಂದ ಚೀನೀ ಸನ್ಯಾಸಿ 'ಶುವಾನ್ ಜಾಂಗ್' (Xuanzang) ಅವರ ಐತಿಹಾಸಿಕ ಮತ್ತು ಪೌರಾಣಿಕ ಯಾತ್ರೆಯನ್ನು ವಿವರಿಸುತ್ತದೆ. ಭಾರತದ ರಾಮಾಯಣ ಮತ್ತು ಮಹಾಭಾರತಗಳೊಂದಿಗೆ ಮುಖ್ಯವಾಗಿ ಹನುಮಂತನನ್ನು ಹೋಲುವ ಮಂಕಿ ಕಿಂಗ್ ಪಾತ್ರದೊಂದಿಗೆ ಹೋಲಿಕೆಗಳನ್ನು ಹೊಂದಿರುವುದು ಈ ಪುಸ್ತಕದ ವಿಶೇಷತೆಯಾಗಿದೆ.
ಕೆನಡಾದಲ್ಲಿ ಕನ್ನಡದ ದೂತ
ವಿದೇಶಕ್ಕೆ ಹೋದ ತಕ್ಷಣ ಮಾತೃಭಾಷೆಯನ್ನು ಮರೆಯುವವರ ನಡುವೆ ರಾಮಭಟ್ಟರ ಕುಟುಂಬ ಭಿನ್ನವಾಗಿ ನಿಲ್ಲುತ್ತದೆ. ಇವರ ಧರ್ಮಪತ್ನಿ ಪಾರ್ವತಿ ಅವರು ಸ್ವತಃ ಸಂಗೀತ ವಿದುಷಿ. ಈ ದಂಪತಿಗಳು ಕೆನಡಾದ ಕನ್ನಡ ಕೂಟಗಳಲ್ಲಿ ಮಕ್ಕಳಿಗಾಗಿ ಕನ್ನಡ ತರಗತಿಗಳು, ಹರಿಕಥೆ, ಯಕ್ಷಗಾನ ರೂಪಕಗಳು ಹಾಗೂ ದಾಸಸಾಹಿತ್ಯದ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುವ ಮೂಲಕ ಕೆನಡಾದಲ್ಲಿ ಒಂದು ಮಿನಿ ಕನ್ನಡ ನಾಡನ್ನೇ ಸೃಷ್ಟಿಸಿದ್ದರು.
ಗ್ರಾಮೀಣ ಹಿನ್ನೆಲೆಯ ಹುಡುಗನೊಬ್ಬ ಜಾಗತಿಕ ಮಟ್ಟದ ವಿಜ್ಞಾನ ಸಂಸ್ಥೆಗಳಲ್ಲಿ ಮಿಂಚಿ, ನಾಸಾದ ಗೌರವ ಪಡೆದು, ವಿಶ್ವವಿದ್ಯಾಲಯದ ಸರ್ವೋಚ್ಚ ಹುದ್ದೆಯಲ್ಲಿದ್ದೂ ತನ್ನ ಭಾಷೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದಕ್ಕೆ ಡಾ. ರಾಮಭಟ್ ಅವರೇ ಪರಮ ಮಾದರಿ.
ವಿಜ್ಞಾನ ಮತ್ತು ಸಾಹಿತ್ಯ ಪರಸ್ಪರ ವಿರೋಧಿಗಳಲ್ಲ; ಅವು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಬದುಕಿ ತೋರಿಸಿದ ಈ ಪ್ರಾತಃಸ್ಮರಣೀಯ ಬೌದ್ಧಿಕ ಚೇತನಕ್ಕೆ ಭಾವಪೂರ್ಣ ನಮನಗಳು. ಅವರ ಸಾಹಿತ್ಯ ಮತ್ತು ಚಿಂತನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ.


