ರಕ್ತದಾನಕ್ಕಿನ್ನು ಯಾವ ಗುಂಪಾದರೇನು?
ಡಾ|| ಎಂ.ಜೆ. ಸುಂದರ್‌ರಾಮ್
ರಕ್ತಗುಂಪುಗಳನ್ನು ಕಾರ್ಲ್ ಲ್ಯಾಂಡ್‌ಸ್ಟೀನರ್ 1900 ಇಸವಿಯಲ್ಲಿ ಕಂಡುಹಿಡಿದರು. 80 ವರ್ಷಗಳ ನಂತರ 1981ರಲ್ಲಿ, ನ್ಯೂಯಾರ್ಕ್ ರಕ್ತಕೇಂದ್ರದ ಕಿಂಬಲ್ ಸಂಶೋಧನಾ ಪ್ರಯೋಗಾಲಯದ (Kimball Research Institute, New York Blood Centre) ಜೀವರಸಾಯನಶಾಸ್ತ್ರಜ್ಞ ಡಾ|| ಜ್ಯಾಕ್ ಗೋಲ್ಡ್‌ಸ್ಟೀನ್ (Dr. Jack Goldstein) ಎಂಬ ವೈದ್ಯರು ರಕ್ತಗುಂಪುಗಳ ಬಗ್ಗೆ ಸಂಶೋಧನೆಗಳನ್ನು ಮುಂದುವರಿಸಿದರು. ರಕ್ತಪೂರೈಕೆಯ ವ್ಯಾಪ್ತಿಯನ್ನು ವಿಸ್ತರಿಸಿ, O ರಕ್ತಗುಂಪಿನ ರಕ್ತದಾನಿಗಳ ಸಂಖ್ಯೆಯನ್ನು ವೃದ್ಧಿಸುವ ಸಂಶೋಧನೆಯಲ್ಲಿ ತೊಡಗಿದರು. ಇದು ಹೇಗೆ ಸಾಧ್ಯ ಎನ್ನುತ್ತೀರಾ?
ರಕ್ತಗುಂಪುಗಳಲ್ಲಿ ನಾಲ್ಕು ವಿಧಗಳಿವೆ – A, B, AB ಮತ್ತು O. O ಗುಂಪಿನ ಕೆಂಪು ರಕ್ತಕಣಗಳ ಮೇಲೆ ಪ್ರತಿಜನಕ (antigens) ಗಳಿರುವುದಿಲ್ಲ; ಆದರೆ, ಅದರ ರಕ್ತರಸದಲ್ಲಿ A ಮತ್ತು B ವಿರುದ್ಧದ ಪ್ರತಿಕಾಯ (antibodies) ಗಳಿರುತ್ತವೆ. ಇಂತಹವರಿಗೆ A, B, ಮತ್ತು AB ಗುಂಪಿನ ದಾನಿಗಳು ರಕ್ತದಾನ ಮಾಡಲಾರರು. ಏಕೆಂದರೆ, ಈ ರಕ್ತಗುಂಪುಗಳ ಕೆಂಪು ರಕ್ತಕಣಗಳ ಮೇಲೆ A ಮತ್ತು /ಅಥವಾ B ಪ್ರತಿಜನಕಗಳಿರುವುದರಿಂದ ಅವನ್ನು O ರಕ್ತರಸದಲ್ಲಿರುವ A ಮತ್ತು B ವಿರುದ್ಧದ ಪ್ರತಿಕಾಯಗಳು ಇವುಗಳ ವಿರುದ್ಧ ಕಾದಾಡಿ ಅವನ್ನು ಧ್ವಂಸ ಮಾಡಿಬಿಡುತ್ತವೆ. ಆದ್ದರಿಂದ O ಗುಂಪಿನವರಿಗೆ ರಕ್ತದಾನ ಮಾಡಲು O ಗುಂಪಿನವರೇ ದಾನಿಗಳಾಗಬೇಕು. ಹೀಗಾಗಿ, O ಗುಂಪಿನ ರೋಗಿಗಳಿಗೆ ರಕ್ತದಾನ ಮಾಡಬಲ್ಲ ದಾನಿಗಳ ಸಂಖ್ಯೆ ವಿರಳ.
ಕೆಲವು ರಕ್ತಗುಂಪುಗಳು ಹೇರಳವಾಗಿದ್ದು, ರಕ್ತಭಂಡಾರಗಳಲ್ಲಿ ಈ ಗುಂಪಿನ ರಕ್ತಗಳು ತುಂಬಿತುಳುಕುತ್ತಿದ್ದವು. ಆದರೆ ಇವುಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಈ ರೀತಿ, ಬಳಸದೆ ಅತಿಯಾಗಿ ಉಳಿಸಿಕೊಂಡ ರಕ್ತಗುಂಪುಗಳು ತಮ್ಮ ಕ್ಷಮತೆಯನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದುದರಿಂದ ಹೊಸ ರಕ್ತ ಬಂದೊಡನೆ ಹಳೆಯ ರಕ್ತವನ್ನು ಮೋರಿಗೆ ಚೆಲ್ಲುತ್ತಿದ್ದ ವಿಷಯವೂ ಗೋಲ್ಡ್‌ಸ್ಟೀನ್‌ಗೆ ತಿಳಿದಿತ್ತು. ಒಂದುಕಡೆ ಬೇಡಿಕೆ ಹೆಚ್ಚಾಗಿ, ಅದನ್ನು ಪೂರೈಸಲು ಸಾಕಷ್ಟು ರಕ್ತ ಸಿಗದಿದ್ದ ಪರಿಸ್ಥಿತಿಯಿದ್ದರೆ ಇನ್ನೊಂದೆಡೆ ರಕ್ತಸಂಗ್ರಹ ಹೇರಳವಾಗಿದ್ದು, ಬೇಡಿಕೆ ವಿರಳವಾಗಿದ್ದ ಅಸಮತೋಲನ ಪರಿಸ್ಥಿತಿ ಗೋಲ್ಡ್‌ಸ್ಟೀನ್ ರನ್ನು ಕೆರಳಿಸಿತು.
ಉಪಯೋಗಕ್ಕೆ ಬಾರದ ರಕ್ತಗುಂಪುಗಳನ್ನು ಚೆಲ್ಲಿ ವ್ಯರ್ಥ ಮಾಡುವ ಬದಲಿಗೆ ಅವನ್ನು O ಗುಂಪಿಗೆ ಪರಿವರ್ತಿಸಿದರೆ ರೋಗಿಗಳಿಗೆ ರಕ್ತಕ್ಷಾಮದ ಸಮಸ್ಯೆಯೇ ಇರುವುದಿಲ್ಲವಲ್ಲ! ಈ ನಿಟ್ಟಿನಲ್ಲಿ ಗೋಲ್ಡ್‌ಸ್ಟೀನ್ ಯೋಚಿಸತೊಡಗಿದರು. ಯೋಚನೆ ಹೊಳೆದಿದ್ದೇ ತಡ, ಸಂಶೋಧನೆಯಲ್ಲಿ ತೊಡಗಿದರು. A ಮತ್ತು B ರಕ್ತಗುಂಪಿನ ಕೆಂಪು ರಕ್ತಕಣಗಳ ಮೇಲಿನ ಪ್ರತಿಜನಕಗಳನ್ನು ಕಿತ್ತೆಸೆದುಬಿಟ್ಟರೆ, ಅಂತಹ ರಕ್ತಕಣಗಳನ್ನು ಯಾವ ಪ್ರತಿಕಾಯಗಳೂ ಕಾಡಲಾರವು. ಆಗ ಇಂತಹ ರಕ್ತವನ್ನು ಯಾವ ರಕ್ತಗುಂಪಿನ ರೋಗಿಗಾದರೂ ಪೂರೈಸಬಹುದೆಂದು ಗೋಲ್ಡ್‌ಸ್ಟೀನ್ ಕನಸು ಕಂಡರು.
ಮೊದಲಿಗೆ ಈ ಪರಿವರ್ತಿತ ರಕ್ತವನ್ನು ವಾನರ (gibbons) ಗಳ ಮೇಲೆ ಪ್ರಯೋಗಿಸಿ ಪರೀಕ್ಷಿಸಲಾಯಿತು. ಅವುಗಳ ದೇಹದಲ್ಲಿ ಯಾವ ಪ್ರತಿಕ್ರಿಯೆಯೂ ಕಂಡುಬರಲಿಲ್ಲ. ಈ ರೀತಿಯ ರಕ್ತಪೂರೈಕೆ ಸುರಕ್ಷಿತವಾದುದೆಂದು ಖಚಿತಪಡಿಸಿಕೊಂಡ ಮೇಲೆ ಇವನ್ನು ವಿವಿಧ ರಕ್ತ ಗುಂಪುಗಳುಳ್ಳ ಮಾನವ ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಯಿತು. ಅವರಲ್ಲಿಯೂ ಯಾವ ಪ್ರತಿಕೂಲ ಪ್ರತಿಕ್ರಿಯೆಗಳು/ಪರಿಣಾಮಗಳು ಕಂಡುಬರಲಿಲ್ಲ.
ಈ ಸಂಶೋಧನೆಗಳಿಂದ ಉತ್ತೇಜಿತರಾದ ಗೋಲ್ಡ್‌ಸ್ಟೀನ್ ರ ತಂಡವು A ರಕ್ತಗುಂಪಿನ ರಕ್ತಕಣಗಳನ್ನೂ ಇದೇ ರೀತಿ ಪರಿವರ್ತಿಸುವ ಸಾಹಸದಲ್ಲಿ ತೊಡಗಿದರು. ಈ ಪರಿವರ್ತನೆಗೆ ಬೇಕಾದ ಕಿಣ್ವವನ್ನು ಹುಡುಕುತ್ತಿದ್ದಾರೆ. ಸೂಕ್ಷ್ಮಜೀವಿಗಳಿಂದ ಸ್ತನಿಗಳವರೆಗೆ, ಅನೇಕ ರೀತಿಯ ಜೀವಿಗಳನ್ನು ಪರೀಕ್ಷಿಸುತ್ತಿದ್ದಾರೆ. ಆದರೆ, ಅವರಿಗೆ ಸರಿಯಾದ ಸಂಪನ್ಮೂಲ ಸಿಕ್ಕಿಲ್ಲ. ಹಸಿರು ಕಾಫಿಬೀಜದಲ್ಲಿರುವ ಕಿಣ್ವ ಕಾರ್ಯರೂಪದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲವೆಂದು ಈಗ ತಿಳಿದುಬಂದಿದೆ.
(1) ಬ್ಯಾಕ್ಟೀರಾಯ್ಡಿಸ್ ಫ್ರಜಿಲಿಸ್ (Bacteroides fragilis) ಎಂಬ ಕರುಳಿನ ಬ್ಯಾಕ್ಟೀರಿಯದಿಂದ ಒಂದು ಕಿಣ್ವವನ್ನು ಬೇರ್ಪಡಿಸಿದ್ದಾರೆ. ಇದು B ಪ್ರತಿಜನಕಗಳನ್ನು ಕೆಂಪು ರಕ್ತಕಣಗಳಿಂದ ಉದುರಿಸುತ್ತದೆ. ಇದು ಹಸಿರು ಕಾಫಿಬೀಜದ ಕಿಣ್ವಕ್ಕಿಂತ 1000 ಪಟ್ಟು ವೇಗವಾಗಿ ಕಾರ್ಯ ಮಾಡುತ್ತದೆಂದು ತಿಳಿದುಬಂದಿದೆ.
(2) ಎಲಿಜಬೆತ್‌ಕಿಂಗಿಯಾ ಮೆನಿಂಗೊಸೆಪ್ಟಿಕಮ್ (Elizabethkingia meningosepticum) ಎಂಬ ಬ್ಯಾಕ್ಟೀರಿಯದಿಂದ ಬೇರ್ಪಡಿಸಿದ ಕಿಣ್ವ ಕೆಂಪು ರಕ್ತಕಣಗಳ ಮೇಲಿರುವ A ಪ್ರತಿಜನಕಗಳನ್ನು ಉದುರಿಸುತ್ತದೆ. ಹೀಗೆಯೇ, A ಹಾಗೂ B ಪ್ರತಿಜನಕಗಳನ್ನು ಪರಿವರ್ತಿಸುವಂತಾದರೆ ರಕ್ತಪೂರೈಕೆ ಕಾರ್ಯಕ್ರಮದಲ್ಲಿ ಅಡ್ಡವಾಗಿ ನಿಂತಿರುವ ಎಲ್ಲ ತೊಡಕುಗಳೂ ಪೂರ್ಣವಾಗಿ ನಿವಾರಣೆಯಾಗಿ, ವೈದ್ಯಕೀಯ ಇತಿಹಾಸದಲ್ಲೇ ಕ್ರಾಂತಿಯಾಗುತ್ತದೆ. ಈ ಸಂಶೋಧನೆ ಯಶಸ್ವಿಯಾದರೆ ರಕ್ತದ ಅಭಾವದ ಸಮಸ್ಯೆಯೇ ಇರದು.!
No comments:
Post a Comment