‘ಹೂವರಸಿ’
ಹೋದ ಘಳಿಗೆ
ಲೇಖಕರು : ರಮೇಶ, ವಿ. ಬಳ್ಳಾ
ಅಧ್ಯಾಪಕರು
ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು
(ಪ್ರೌಢ ವಿಭಾಗ) ಗುಳೇದಗುಡ್ಡ, ಜಿ: ಬಾಗಲಕೋಟ
ಬಹುತೇಕರ ಶಾಲಾ ಬಾಲ್ಯದ ದಿನಗಳೇ ಹಾಗೇ... ಅತ್ಯಂತ ಖುಷಿ ನೀಡುವ ಆ ಸುಂದರ ಕ್ಷಣಗಳು ಪ್ರತಿಯೊಬ್ಬರ ಜೀವನದ ಅವಿಸ್ಮರಣೀಯ ಘಳಿಗೆಗಳು. ಗಿಡಮರಗಳಲ್ಲಿ ಆಟ ಆಡುವುದು, ಹಣ್ಣುಕಾಯಿ ಕೀಳುವುದು, ಮರಕೋತಿ ಆಟ, ಮರಕ್ಕೆ ಜೋತು ಬೀಳುವುದು, ಟೊಂಗೆಯಿಂದ ಟೊಂಗೆಗೆ ನೆಗೆಯುವುದು, ಎಲೆ-ಹೂ ಕಿತ್ತು ಬಣ್ಣ ಬಣ್ಣದ ಚಿತ್ತಾರ ರಚಿಸುವುದು ಒಂದೇ ಎರಡೇ... ನಾನಾ ಕಸರತ್ತುಗಳ ಮಧ್ಯೆ ಪ್ರಕೃತಿಯ ಒಡನಾಟದಲ್ಲಿ ಕಳೆದ ಆ ನೆನಪುಗಳು ಸದಾ ಹಸಿರಾಗಿರುವಂತಹವು.
ನಿಮಗೂ ನೆನಪಿರಬಹುದು, ಚಿಕ್ಕವರಿದ್ದಾಗ ಬುಗುರಿ ಆಡಿಸುವುದು ಎಂದರೆ ಮಜವೋ ಮಜಾ. ನಾನಾ ವಿಧದ ಬುಗುರಿಗಳು ಹುಡುಗರ ಜೇಬಿಗೆ ಭಾರವಾಗಿರುತ್ತಿದ್ದವು. ಕಟ್ಟಿಗೆಯಿಂದ ಕೆತ್ತಿದ ಜಾಳಿಗೆ ಸುತ್ತಿದ ಬುಗುರಿ ಒಂದೆಡೆಯಾದರೆ, ಕೆಲ ಮರದ ಕಾಯಿಗಳನ್ನೇ ಬುಗುರಿಯಾಗಿಸಿ ಆಡಿದ ಆ ಆಟಗಳು ಇನ್ನು ಮರೆತಿಲ್ಲ. ಇಂತಹುದರ ಮಧ್ಯೆ ನಾ ನಿಮಗೆ ನೆನಪಿಗೆ ತರುವುದೆಂದರೆ ಬುಗುರಿ ಕಾಯಿಗಳನ್ನೇ ಗೊಂಚಲಾಗಿ ಬಿಡುತ್ತಿದ್ದ ಮರವೊಂದರ ನೆನಪು. ಅದು ಎಲ್ಲೇ ಇರಲಿ ಹುಡುಕಿ ಹೋಗಿ ಕಾಯಿಗಳನ್ನು ಹರಿದು ತಂದು ಪರ್ಷಿ ಕಲ್ಲಿನ ಮೇಲೆ, ಕಟ್ಟೆಯ ಮೇಲೆ ಗಿರ್ ಎಂದು ತಿರುಗಿಸಿದಾಗಲೇ ಮನಸ್ಸಿಗೆ ಆನಂದ. ಆ ಬುಗುರಿ ಕಾಯಿ ಮರವೇ ‘ಹೂವರಸಿ ಮರ’.
ಈ ಹೂವರಸಿ ಮರಕ್ಕೆ ನಾನಾ ಹೆಸರುಗಳು. Portia Tree, Umbrella Tree, Milo, Indian Tulip Tree, Pacific Rosewood ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು Thespesia populnea. ಮಾಲ್ವೇಸಿ ಕುಟುಂಬದ ಹೂ ಬಿಡುವ ಸಸ್ಯ ಪ್ರಭೇದ ಇದಾಗಿದ್ದು, ಹೆಚ್ಚಿನದಾಗಿ ಕರಾವಳಿ ಭಾಗದ ಮರಳು, ಕಲ್ಲುಬಂಡೆಗಳ ನಡುವಿನ ಮಣ್ಣು ಇದರ ಆವಾಸಕ್ಕೆ ಪೂರಕವಾಗಿದೆ. ಅಷ್ಟೇ ಅಲ್ಲ, ಉಷ್ಣವಲಯದ ನಾನಾ ಕಡೆ ಇದು ಸಮೃದ್ಧವಾಗಿ ಬೆಳೆಯುತ್ತದೆ. ಇದರ ಮೂಲ ಹುಡುಕಿದಾಗ ಅಮೆರಿಕಾದ ಎಲ್ಲ ಪ್ರದೇಶಗಳು, ಆಸ್ಟ್ರೇಲಿಯಾ, ಆಫ್ರಿಕಾ, ಏಷ್ಯಾ, ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರಗಳಲ್ಲೆಡೆಯೂ ಕಾಣಸಿಗುತ್ತದೆ. ನಮ್ಮ ಭಾರತದಲ್ಲೂ ಸಮೃದ್ಧವಾಗಿ ನೆಲೆ ಕಂಡಿದೆ.ಭಾರತದ ಮದ್ರಾಸ್, ಮೈಸೂರು ಭಾಗ, ಕರ್ನಾಟಕದ ಮಲೆನಾಡು ಭಾಗ, Coastal ಪ್ರದೇಶಗಳಲ್ಲಿ ಇದು ವ್ಯಾಪಕವಾಗಿ
ಹರಡಿದೆ. ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಇದನ್ನು ಬಂಗಾಲಿ ಗಿಡ ಎಂದು ಕರೆಯುತ್ತಾರೆ.
ನಾವು ಆಟವಾಡುವ ಆ ಬುಗುರಿ ಕಾಯಿ, ಬಂಗಾಲಿಕಾಯಿ ಎಂದೇ ಹೆಚ್ಚು ಪರಿಚಿತ. ಈ ಮರದ ಐತಿಹಾಸಿಕತೆಯನ್ನು ಇಣುಕಿದಾಗ ಇದಕ್ಕೊಂದು
ಪವಿತ್ರ ಸ್ಥಾನ ಪ್ರಾಪ್ತವಾಗಿರುವುದು ಗೋಚರಿಸುತ್ತದೆ. ಗ್ರೀಕ್ ನೆಲದ ದೈವಿಕತೆಯೊಂದಿಗೆ ಆರಾಧನಾ
ಸ್ಥಳಗಳ ಸುತ್ತಮುತ್ತ ಈ ಮರಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದುದು ಕಂಡುಬರುತ್ತದೆ. ಸಮುದ್ರಯಾನ
ಮಾಡುವವರಿಗೆ ಇದು ಪವಿತ್ರ ವೃಕ್ಷವಾಗಿ ಕಂಡಿದೆ. ನೀರಿಗೆ ಒಗ್ಗಿಕೊಂಡು ಗಟ್ಟಿ ಬಾಳಿಕೆ
ಬರುತ್ತಿದ್ದ ಈ ಮರದ ಕಟ್ಟಿಗೆ ದೋಣಿ, ಹಡಗು ನಿರ್ಮಾಣದಂತಹ ಕೆಲಸಗಳಿಗೆ ಉಪಯುಕ್ತವಾಗಿತ್ತು. ಇದಷ್ಟೇ ಅಲ್ಲದೆ ಜನಸಾಮಾನ್ಯರ ಬದುಕಿನ
ಕೆಲಸ ಕಾರ್ಯಗಳಿಗೆ ನೆರವಾಗುವ ಮೇಣಿ, ಕುಂಟೆಯಂತಹ ಕೃಷಿ ಉಪಕರಣಗಳು, ಮನೆ ಬಾಗಿಲು-ಕಿಟಕಿ ಸಾಮಾನುಗಳ ತಯಾರಿಕೆಯಲ್ಲಿ, ಸಂಗೀತವಾದ್ಯಗಳ ನಿರ್ಮಾಣದಲ್ಲಿ, ಬಂದೂಕು ಹಿಡಿಗಳಂತಹ ಅನೇಕ ಸಾಧನಗಳ
ನಿರ್ಮಾಣ ಕಾರ್ಯದಲ್ಲಿ ಈ ಮರ ಉಪಯುಕ್ತವಾಗಿದೆ.
ಭಾರತೀಯ ಆಯುರ್ವೇದ ಚಿಕಿತ್ಸೆಯಲ್ಲಿ ಇದಕ್ಕೆ ಮನ್ನಣೆ ಇದೆ.
ನಾಟಿ ವೈದ್ಯ ಪದ್ಧತಿಯಲ್ಲಿ ಬಹುಮುಖ್ಯ ಔಷಧಿಯಾಗಿ ಚರ್ಮರೋಗಗಳ ಚಿಕಿತ್ಸೆಯಲ್ಲಿ ಇದು ವ್ಯಾಪಕವಾಗಿ
ಬಳಕೆಯಾಗುತ್ತದೆ. ತುರಿಕೆ, ಗಜಕರ್ಣ, ಹುಳುಕಡ್ಡಿ, ಗನೋರಿಯಾ, ತದ್ದು, ಕಲೆಗಳು, ಮೊಡವೆಗಳಂತಹ ಚರ್ಮದ ಕಾಯಿಲೆಗಳಿಗೆ ಇದು ರಾಮಬಾಣ ಎಂದು ಹೇಳಲಾಗುತ್ತದೆ. ಸಂಧಿವಾತ, ಹರ್ಪಿಸ್, ಹೊಟ್ಟೆನೋವು, ಮೂತ್ರ ಸಂಬಂಧಿ ಕಾಯಿಲೆಗಳಿಗೂ
ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಹೂವರಸಿ ಮರದ ನಾನಾ ಭಾಗಗಳು ಒಂದಿಲ್ಲೊಂದು ಪ್ರಯೋಜನ
ಹೊಂದಿದ್ದು, ಸೂಕ್ತ ಮಾರ್ಗದರ್ಶನವಿಲ್ಲದೇ ಯಾವುದನ್ನೂ ಬಳಸಬಾರದು. ಏಕೆಂದರೆ ಇದರ ಅಡ್ಡ ಪರಿಣಾಮಗಳೂ ಇವೆ.
ಬೇರು ಅತ್ಯಂತ ವಿಷ ಎಂದು ಹೇಳಲಾಗುತ್ತದೆ. ಕೂದಲು ಉದುರುವಿಕೆ, ತೂಕನಷ್ಟ, ಬಾಯಿಹುಣ್ಣು ಆಗುವ ಅಪಾಯವೂ ಇವೆ
ಎನ್ನಲಾಗುತ್ತದೆ.
ಅದೇನೇ ಇರಲಿ, ನಮ್ಮ ಬಾಲ್ಯದ ಆಪ್ತ ಮರವೊಂದರ ಒಡನಾಟ
ಖುಷಿ ಕೊಟ್ಟ ಘಳಿಗೆಗೆ ಹೂವರಸಿ ಮರ ಸಾಕ್ಷಿಯಾದದ್ದು ಪ್ರಕೃತಿಯ ಒಂದು ಕೊಡುಗೆ ಎಂದೇ ಭಾವಿಸೋಣ.
ಇಂತಹ ಅನೇಕ ಮರಗಿಡಗಳು ನಮ್ಮ ಬದುಕಿನುದ್ದಕ್ಕೂ ಸಾಗಿ ಬಂದಿವೆ. ಅವನ್ನು ನೆನಪಿಸಿಕೊಳ್ಳೋಣ, ಆರಾಧಿಸೋಣ, ಸಂರಕ್ಷಿಸೋಣ.
No comments:
Post a Comment