ಜಗ ಮರೆಯಲೇ ಬಾರದ ಡಾ.ಯಲ್ಲಾಪ್ರಗಡ ಸುಬ್ಬಾರಾವ್ ಎಂಬ ಸೋಜಿಗ !!!
ಲೇಖಕರು : ರಾಮಚಂದ್ರ ಭಟ್ ಬಿ.ಜಿ.
“ನಾನು ನೊಬೆಲ್ ಪಡೆಯಲಿಲ್ಲ… ಆದರೆ ನಿಮ್ಮ ಜೀವಕೋಶಗಳು ನನ್ನನ್ನು ಇನ್ನೂ ನೆನಪಿಟ್ಟುಕೊಂಡಿವೆ!”
“ಒಬ್ಬ ವಿಜ್ಞಾನಿಯ ಸಂಶೋಧನೆಯಿಂದ ಎಷ್ಟು ಕೋಟಿ ಜೀವಗಳು ಉಳಿದಿವೆ?” ಈ ಪ್ರಶ್ನೆಗೆ ಉತ್ತರ ಹುಡುಕಿದಾಗ, ಯಲ್ಲಾಪ್ರಗಡ ಸುಬ್ಬಾರಾವ್ ಎಂಬ ಅದ್ಭುತ ವಿಜ್ಞಾನಿಯ ನಿಜವಾದ ಎತ್ತರ, ಅವರ ಸಂಶೋಧನೆಗಳ ಮಹತ್ವ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಭಾರತೀಯರ ಮನದಲ್ಲಿ ಈ ಪೂರ್ವ ಸೂರಿಯ ಬಗ್ಗೆ ಗೌರವಭಾವ ತಾನಾಗಿಯೇ ಒಡಮೂಡುತ್ತದೆ.
ಇವರು ಕೇವಲ ವಿಜ್ಞಾನಿಯಲ್ಲ. ಅವರು ಮನುಷ್ಯನ ನೋವಿಗೆ ವಿಜ್ಞಾನದ ಮುಲಾಮು ಹಚ್ಚಿದ ಮಹಾಮೇಧಾವಿ. ಅವರ ಸಂಶೋಧನೆಗಳು ಜೀವಕೋಶದ ಶಕ್ತಿಯಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆಯವರೆಗೆ, ಪ್ರತಿಜೀವಕಗಳಿಂದ ಹಿಡಿದು ಪರೋಪಜೀವಿ ರೋಗಗಳ ಚಿಕಿತ್ಸೆಯವರೆಗೆ ಆಧುನಿಕ ವೈದ್ಯಕೀಯದ ಮೇಲೆ ಅಚ್ಚಳಿಯದ ಪ್ರಭಾವ ಬೀರುತ್ತಲೇ ಇವೆ. ಎಂತಹ ವಿಚಿತ್ರ ನೋಡಿ. ಜಗತ್ತು ಅವರ ಹೆಸರನ್ನು ಮರೆತೇ ಹೋಗಿದೆ. ಆದರೆ, ಅವರ ಸಂಶೋಧನೆಗಳನ್ನು ಜಗತ್ತು ಮರೆಯುವಂತೆಯೇ ಇಲ್ಲ!
ಎರಡು ಬಾರಿ ಸೋತ ಬಾಲಕ… ಮೂರನೇ ಬಾರಿ ವಿಜ್ಞಾನವನ್ನು ಗೆದ್ದ !!!
17ನೇ ಶತಮಾನದಲ್ಲಿ ಗೋಲ್ಕೊಂಡ ನವಾಬರ ಆಸ್ಥಾನದಲ್ಲಿ ಮಂತ್ರಿಯಾಗಿದ್ದ 'ಯಲ್ಲಣ್ಣ' ಎಂಬುವವರ ವಂಶಸ್ಥರೇ 'ಯಲ್ಲಾಪ್ರಗಡ' ಮನೆತನದವರು. ನಂತರದ ತಲೆಮಾರುಗಳಲ್ಲಿ ಇವರು ಕಂದಾಯ ಲೆಕ್ಕಿಗರಾಗಿ (ಅಕೌಂಟೆಂಟ್) ಸೇವೆ ಸಲ್ಲಿಸಿದರು. ಆದರೆ ಸುಬ್ಬಾರಾವ್ ಅವರ ಅಜ್ಜ ಸುಬ್ಬರಾಜು ತೀರಿಕೊಂಡ ನಂತರ, ಆ ದೊಡ್ಡ ಅವಿಭಕ್ತ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ತಂದೆ ಜಗನ್ನಾಥಂ ಅವರಿಗೆ ಕಡಿಮೆ ವೇತನದ ಕೆಲಸ ಸಿಕ್ಕಿದ್ದರಿಂದ ಬಡತನ ಮತ್ತಷ್ಟು ಹೆಚ್ಚಾಯಿತು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಬೆಳೆದ ಯಲ್ಲಾಪ್ರಗಡ ಸುಬ್ಬಾರಾವ್ (1895-1948) ಅವರು ಜಾಗತಿಕ ವೈದ್ಯಕೀಯ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಹಾನ್ ಜೀವವಿಜ್ಞಾನಿ.
1895ರ ಜನವರಿ 12ರಂದು ಆಂಧ್ರಪ್ರದೇಶದ ಭೀಮಾವರಂನಲ್ಲಿ ಜನಿಸಿದ ಯಲ್ಲಾಪ್ರಗಡ ಸುಬ್ಬಾರಾವ್ ಅವರ ಬಾಲ್ಯ ಕಲ್ಲು ಮುಳ್ಳಿನ ಹಾದಿ. ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಹಾಸುಹೊಕ್ಕಾಗಿತ್ತು. ತಂದೆಯ ಅನಾರೋಗ್ಯ. ಕುಟುಂಬ ಉದರಂಭರಣಕ್ಕೆ ಹರಸಾಹಸಪಡಬೇಕಾಯಿತು. ಇನ್ನು ಮಕ್ಕಳ ವಿದ್ಯಾಭ್ಯಾಸ ಮುಂದುವರೆಸುವುದು ಹೇಗೇ? ಪರೀಕ್ಷೆಗೆ ಎರಡು ತಿಂಗಳಿದ್ದಾಗ ತಂದೆ ಅಸುನೀಗಿದರು. ಇದು ಭಾರೀ ಆಘಾತ ನೀಡಿತು. ಎರಡು ಬಾರಿ ಪರೀಕ್ಷೆಯಲ್ಲಿ ವಿಫಲರಾಗಬೇಕಾಯಿತು! ಇಂತಹ ಸಂದರ್ಭಗಳಲ್ಲೇ ಸಾಮಾನ್ಯ ಮತ್ತು ಅಸಾಮಾನ್ಯ ವ್ಯಕ್ತಿಗಳ ನಡುವಣ ವ್ಯತ್ಯಾಸ ಗೋಚರಿಸುವುದು. ಈ ಎರಡು ಸೋಲುಗಳು ಅವರ ಜೀವನವನ್ನು ನಿಲ್ಲಿಸಲಿಲ್ಲ. ಛಲಬಿಡದ ತ್ರಿವಿಕ್ರಮನಂತೆ, ಮೂರನೇ ಪ್ರಯತ್ನದಲ್ಲಿ ಮೆಟ್ರಿಕ್ಯುಲೇಷನ್ ಉತ್ತೀರ್ಣರಾದರು.
ಒಂದು ಕ್ಷಣ ಯೋಚಿಸಿ…
ಇಂದು ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ “ನನ್ನ ಜೀವನ ಮುಗಿಯಿತು” ಎಂದುಕೊಳ್ಳುವ ವಿದ್ಯಾರ್ಥಿಗಳಿದ್ದಾರೆ. ಆದರೆ ಸುಬ್ಬಾರಾವ್ ಅವರ ಜೀವನ ಹೇಳುತ್ತದೆ— “ಒಂದು ಪರೀಕ್ಷೆಯ ಫಲಿತಾಂಶ ನಿಮ್ಮ ಸಾಮರ್ಥ್ಯದ ಅಂತಿಮ ತೀರ್ಪಲ್ಲ.” ವಿಫಲತೆ ಯಶಸ್ಸಿನ ಬಾಗಿಲನ್ನು ಮುಚ್ಚದು. ಅದು ಮತ್ತೊಂದು ಬಾಗಿಲನ್ನು ಹುಡುಕಲು ಪ್ರೇರಣೆ ನೀಡುತ್ತದೆ. ಆದರೆ ಎರಡು ಬಾರಿ ಸೋಲುವ ಅಗತ್ಯವಿಲ್ಲ; ಒಂದೇ ಬಾರಿಯಲ್ಲೇ ಪಾಠ ಕಲಿತರೆ ಸಾಕು!
ತಾಯಿ ವೆಂಕಮ್ಮ ತಮ್ಮ ಒಡವೆಗಳನ್ನೇ ಮಾರಿ ಮಗನನ್ನು ಓದಿಸಿದರು. ವೈದ್ಯಕೀಯ ಶಿಕ್ಷಣಕ್ಕಾಗಿ ಮದ್ರಾಸ್ ಮೆಡಿಕಲ್ ಕಾಲೇಜಿಗೆ ಸೇರಿದಾಗ ಅವರು ತಮ್ಮ ತಾಯಿಗೆ ಒಂದು ಮಾತು ಕೊಟ್ಟಿದ್ದರು. “ನಾನು ಜಗತ್ತಿನಲ್ಲಿ ಒಂದು ಹೆಸರು ಗಳಿಸಬೇಕು; ಆಗ ಮಾತ್ರ ಜೀವನ ಸಾರ್ಥಕ.” ಈ ಒಂದು ವಾಕ್ಯ ಅವರ ಇಡೀ ಬದುಕಿನ ಮುನ್ನುಡಿಯಂತಿತ್ತು. ಇಂತಹ ಜಂಜಡಗಳ ನಡುವೆ ಅವರ ಶಿಕ್ಷಣ ಮುಂದುವರಿಯಿತು.
ಸನ್ಯಾಸಿಯಾಗಬೇಕಿದ್ದ ಯುವಕ… ವೈದ್ಯನಾದದ್ದು ಏಕೆ?
ಯುವ ಸುಬ್ಬಾರಾವ್ ಅವರ ಮನಸ್ಸಿನಲ್ಲಿ ಸಮಾಜ ಸೇವೆಯ ಕನಸು ಇತ್ತು. ರಾಮಕೃಷ್ಣ ಮಿಷನ್‌ನ ಪ್ರಭಾವದಿಂದ ಸನ್ಯಾಸಿಯಾಗಿ ಮಾನವ ಸೇವೆ ಮಾಡಬೇಕೆಂಬ ಆಸೆ ಅಂಕುರಿಸಿತ್ತು. ನಿಯತಿಯನಾರ್ ಮೀರ್ದಪರ್? ಜೀವನ ಅವರಿಗಾಗಿ ಬೇರೆ ದಾರಿಯನ್ನು ಆಯ್ಕೆ ಮಾಡಿತ್ತು. ಮಾನವಕುಲದ ನೋವನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ವೈದ್ಯಕೀಯವೂ ಒಂದು ಎಂಬ ಅರಿವು ಅವರ ಮನಸ್ಸನ್ನು ಬದಲಿಸಿತು. ಹೀಗಾಗಿ ಸನ್ಯಾಸದ ಬದಲು ಅವರು ವೈದ್ಯಕೀಯ ಶಿಕ್ಷಣದ ದಾರಿಯನ್ನು ಆರಿಸಿಕೊಂಡರು.
ಆಗಷ್ಟೇ ಭಾರತದಾದ್ಯಂತ ಸ್ವಾತಂತ್ರ್ಯ ಚಳುವಳಿಯ ಕಾವು ಏರುತ್ತಿತ್ತು. ಗಾಂಧೀಜಿಯ ಸ್ವದೇಶಿ ಚಳವಳಿಯಿಂದ ಪ್ರೇರಿತರಾದ ಸುಬ್ಬಾರಾವ್ ಖಾದಿ ಧರಿಸುತ್ತಿದ್ದರು. ಅಷ್ಟೇ ಅಲ್ಲ, ಖಾದಿಯಿಂದ ತಯಾರಿಸಿದ ಸರ್ಜಿಕಲ್ ಗೌನ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದರು!!!. ಬ್ರಿಟಿಷ್ ಪ್ರಾಧ್ಯಾಪಕರಿಗೆ ಇದು ಇಷ್ಟವಾಗಲಿಲ್ಲ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದರೂ ಅವರಿಗೆ ಪೂರ್ಣ MBBS ಪದವಿಯ ಬದಲು LMS ಪದವಿ ನೀಡಿದರು. ಇಲ್ಲಿಂದಲೇ ಭಾರತೀಯರನ್ನು ತುಳಿಯುವ, ಅವಗಣಿಸುವ ಕಾರ್ಯ ಸಾಂಗವಾಗಿ ಆರಂಭವಾಯಿತು. ಆದರೆ ಸುಬ್ಬಾರಾವ್ ಅವರ ಮನಸ್ಸಿನಲ್ಲಿ ಹತ್ತಿದ್ದ ಜೀವ ವಿಜ್ಞಾನದ ಗಿಳನ್ನು ಯಾವ ಪದವಿಯೂ ಕಡಿಮೆ ಮಾಡಲಿಲ್ಲ. ಬಹುಶಃ ಅವರು ಮನಸ್ಸಿನಲ್ಲೇ ಹೀಗೆ ಹೇಳಿಕೊಂಡಿರಬಹುದು —
“ಪದವಿಯ ಮೌಲ್ಯ ಕಡಿಮೆ ಮಾಡಿದರೂ ಪರವಾಗಿಲ್ಲ… ದೇಶದ ಮೇಲಿನ ಪ್ರೀತಿಯನ್ನು ತ್ಯಜಿಸಲಾರೆ. ನಾನು ಮಾಡುವ ವಿಜ್ಞಾನದ ಕೈಂಕರ್ಯದಲ್ಲಿ ತಿಲಮಾತ್ರದಷ್ಟೂ ಕಡಿಮೆ ಮಾಡಲಾರೆ!”
ಅಂದು ಯುವಜನತೆಯಲ್ಲಿ ದೇಶಪ್ರೇಮ ಯಾವರೀತಿ ಜಾಗೃತಿಗೊಂಡಿತ್ತು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಬೆಳೆಯುವ ಸಿರಿ ಮೊಳಕೆಯಲ್ಲೇ ತನ್ನ ಸಾಮರ್ಥ್ಯ ತೋರಲು ಸಜ್ಜುಗೊಂಡಿತ್ತು. ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಕನಸಿನೊಂದಿಗೆ ಅಮೆರಿಕನ್ ವೈದ್ಯರಾದ ಜಾನ್ ಫಾಕ್ಸ್ ಕೆಂಡ್ರಿಕ್ ಅವರ ಪ್ರೋತ್ಸಾಹದಿಂದ ಸುಬ್ಬಾರಾವ್ ಅಮೆರಿಕದ ಹಾರ್ವರ್ಡ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್‌ಗೆ ತೆರಳಿದರು. ಆದರೆ LMS ಪದವಿಯ ಕಾರಣ ಅವರಿಗೆ ವಿದ್ಯಾರ್ಥಿವೇತನ ದೊರೆಯಲಿಲ್ಲ. ಜೀವನ ಸಾಗಿಸಲು ಹಾರ್ವರ್ಡ್ ಆಸ್ಪತ್ರೆಯಲ್ಲಿ ರಾತ್ರಿ ನೈಟ್ ಪೋರ್ಟರ್ ಆಗಿ ರೋಗಿಗಳ ಬೆಡ್ ಪ್ಯಾನ್ ಸ್ವಚ್ಛ ಮಾಡುವ ಕೆಲಸವನ್ನೂ ಮಾಡಿದರು!!!. ಆಸ್ಪತ್ರೆಯ ಸಾಮಾನ್ಯ ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿದ್ದರು. ರಾತ್ರಿ ಕೆಲಸ. ಹಗಲು ಪ್ರಯೋಗಾಲಯ. ಇದು ಕೇವಲ ಉದ್ಯೋಗ ಮತ್ತು ಸಂಶೋಧನೆಯ ನಡುವಿನ ಸಮತೋಲನವಲ್ಲ. ಇದು ಬಡತನ ಮತ್ತು ಪ್ರತಿಭೆಯ ನಡುವಿನ ಹೋರಾಟ!
ಅದೇ ಹಾರ್ವರ್ಡ್‌ನಲ್ಲಿ ಸೈರಸ್ ಫಿಸ್ಕೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಅಲ್ಲಿ ಅವರು ರಕ್ತದಲ್ಲಿನ ಫಾಸ್ಫರಸ್ ಪ್ರಮಾಣವನ್ನು ಅಳೆಯಲು ಬಳಸಬಹುದಾದ ಫಿಸ್ಕೆ–ಸುಬ್ಬಾರಾವ್ ವಿಧಾನವನ್ನು ಅಭಿವೃದ್ಧಿಪಡಿಸಿದರು. ದೇಹದ ದ್ರವ ಮತ್ತು ಅಂಗಾಂಶಗಳಲ್ಲಿ ಫಾಸ್ಫರಸ್ ಅಂದಾಜಿಸಲು ಈ ವಿಧಾನ ಮಹತ್ವದ್ದಾಯಿತು. ಅವರ ಸಂಶೋಧನಾ ಲೇಖನಗಳು ಅವರಿಗೆ PhD ಪದವಿಯನ್ನೂ ತಂದುಕೊಟ್ಟವು. ಇದು ವೈದ್ಯಕೀಯ ಜೈವರಸಾಯನಶಾಸ್ತ್ರದಲ್ಲಿ ಮಹತ್ವದ ಸಾಧನೆಯಾಯಿತು. ಆದರೆ ವಿಜ್ಞಾನದಲ್ಲಿ ಶ್ರೇಯಸ್ಸಿನ ಹಂಚಿಕೆಯ ಕಥೆ ಯಾವಾಗಲೂ ಸುಂದರವಾಗಿರುವುದಿಲ್ಲ. ಸುಬ್ಬಾರಾವ್ ಅವರ ಕೊಡುಗೆಗಳಿಗೆ ತಕ್ಕಷ್ಟು ಮಾನ್ಯತೆ ಸಿಗಲಿಲ್ಲ ಎಂಬುದು ಅವರ ಜೀವನದ ನೋವಿನ ಅಧ್ಯಾಯಗಳಲ್ಲಿ ಒಂದು.
ಹಾರ್ವರ್ಡ್‌ನಲ್ಲಿ ಅವರಿಗೆ ನಿರೀಕ್ಷಿತ ಸ್ಥಾನಮಾನ ಸಿಗದಿದ್ದಾಗ Lederle Laboratories ಸಂಸ್ಥೆ ಸಂಶೋಧನಾ ನಿರ್ದೇಶಕರ ಸ್ಥಾನವನ್ನು ನೀಡಿತು.
ಸಂಬಳವಾಗಿ ವರ್ಷಕ್ಕೆ $14,000 ನೀಡುವುದಾಗಿ ಸಂಸ್ಥೆ ಹೇಳಿತು. ಆದರೆ ಸುಬ್ಬಾರಾವ್ ಒಂದು ವಿಚಿತ್ರ ಷರತ್ತು ಇಟ್ಟರು! “ಅದರ ಅರ್ಧ ಸಂಬಳ ಕೊಡಿ; ಆದರೆ ನನಗೆ ಹೊಸ ಸಂಶೋಧನಾ ಕಟ್ಟಡ ಕಟ್ಟಿಕೊಡಿ.” ಅವರಿಗೆ ಹಣಕ್ಕಿಂತ ಉತ್ತಮ ಸಂಶೋಧನಾ ವಾತಾವರಣ ಮುಖ್ಯವಾಗಿತ್ತು.
ATP: ಜೀವಕೋಶದ ‘ಶಕ್ತಿಯ ಕರೆನ್ಸಿ’
ಸುಬ್ಬಾರಾವ್ ಅವರ ಅತ್ಯಂತ ಮಹತ್ವದ ವೈಜ್ಞಾನಿಕ ಕೊಡುಗೆಗಳಲ್ಲಿ ಒಂದು ಜೀವಕೋಶದ ಶಕ್ತಿಯ ಕುರಿತಾದ ಸಂಶೋಧನೆ. ನಾವು ಆಹಾರ ಸೇವಿಸುತ್ತೇವೆ. ಆ ಆಹಾರದಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದರೆ ಆಹಾರದಲ್ಲಿರುವ ಶಕ್ತಿಯನ್ನು ಜೀವಕೋಶಗಳು ನೇರವಾಗಿ ಬಳಸುವುದಿಲ್ಲ. ಜೀವಕೋಶಗಳಲ್ಲಿ ATP — Adenosine Triphosphate ಎಂಬ ಅಣು ಶಕ್ತಿಯ ವಿನಿಮಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಳವಾಗಿ ಹೇಳುವುದಾದರೆ— ATP ಜೀವಕೋಶದ ‘ಶಕ್ತಿಯ ಕರೆನ್ಸಿ’. ಹಣ ನಮ್ಮ ದೈನಂದಿನ ವ್ಯವಹಾರಕ್ಕೆ ಹೇಗೋ, ATP ಜೀವಕೋಶದ ಶಕ್ತಿಯ ವ್ಯವಹಾರಕ್ಕೆ ಹಾಗೆ. ಸುಬ್ಬಾರಾವ್ ಮತ್ತು ಅವರ ಸಹೋದ್ಯೋಗಿಗಳ ಸಂಶೋಧನೆಗಳು ATP ಮತ್ತು ಫಾಸ್ಫೋಕ್ರಿಯೇಟಿನ್‌ನ ಪಾತ್ರವನ್ನು ಅರ್ಥಮಾಡಿಕೊಳ್ಳಲು ಮಹತ್ವದ ದಾರಿ ತೆರೆದವು. ಇಂದು ನಾವು ಜೀವಕೋಶದ ಶಕ್ತಿಯ ಬಗ್ಗೆ ಮಾತನಾಡುವಾಗ ಅವರ ಸಂಶೋಧನೆಯ ಪ್ರತಿಧ್ವನಿ ಅಲ್ಲಿ ಕೇಳಿಸುತ್ತದೆ. ಹಾಗಾಗಿ ಒಂದು ಸಣ್ಣ ಹಾಸ್ಯ ಮಾಡಬಹುದಾದರೆ— “ನೀವು ನನ್ನ ಹೆಸರನ್ನು ಮರೆತಿರಬಹುದು… ಆದರೆ ನಿಮ್ಮ ಜೀವಕೋಶಗಳು ಪ್ರತಿದಿನ ATP ಮೂಲಕ ನನ್ನ ಕೆಲಸವನ್ನು ನೆನಪಿಸಿಕೊಳ್ಳುತ್ತಿವೆ!”
ಕ್ಯಾನ್ಸರ್ ಚಿಕಿತ್ಸೆಯ ಹೊಸ ಅಧ್ಯಾಯ :
ಸುಬ್ಬಾರಾವ್ ಅವರ ಮತ್ತೊಂದು ಮಹತ್ವದ ಕೊಡುಗೆ ಕ್ಯಾನ್ಸರ್ ಚಿಕಿತ್ಸೆಯ ಇತಿಹಾಸಕ್ಕೆ ಸಂಬಂಧಿಸಿದೆ. Lederle Laboratoriesನಲ್ಲಿ ಅವರು ಫೋಲಿಕ್ ಆಮ್ಲದ ಚಯಾಪಚಯವನ್ನು ತಡೆಯುವ ಕೆಲವು ಸಂಯುಕ್ತಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವುಗಳಲ್ಲಿ Aminopterin ಮತ್ತು ನಂತರದ Methotrexate ವಿಶೇಷ ಮಹತ್ವ ಪಡೆದವು.
1948ರಲ್ಲಿ ಸಿಡ್ನಿ ಫಾರ್ಬರ್ ಅವರು ಅಮಿನೋಪ್ಟರಿನ್ ಬಳಸಿ ಮಕ್ಕಳಲ್ಲಿ ಕಂಡುಬರುವ ತೀವ್ರ ಲಿಂಫೋಬ್ಲಾಸ್ಟಿಕ್ ಲ್ಯೂಕೀಮಿಯಾದಲ್ಲಿ ಮೊದಲ ಗಮನಾರ್ಹ ರೆಮಿಷನ್‌ಗಳನ್ನು ತೋರಿಸಿದರು. ಇದು ಕ್ಯಾನ್ಸರ್ ಚಿಕಿತ್ಸೆಯ ಇತಿಹಾಸದಲ್ಲಿ ಒಂದು ಮಹತ್ವದ ತಿರುವಾಗಿತ್ತು. ಅಂದಿನವರೆಗೆ ಕ್ಯಾನ್ಸರ್ ಎಂದರೆ ಬಹುತೇಕ ಸಾವೇ ಅಂತಿಮ ಎಂಬ ತೀರ್ಪಿನಂತಿತ್ತು. ಆದರೆ ಈಗ ವಿಜ್ಞಾನದ ಆಗಸದಲ್ಲಿ ಆಸೆಯ ಬೆಳ್ಳಿಗೆರೆ ಮೂಡಿತು “ಕ್ಯಾನ್ಸರ್ ವಿರುದ್ಧವೂ ಔಷಧಿಯ ಮೂಲಕ ಹೋರಾಡಬಹುದು.” ಎಂಬ ಭರವಸೆಯ ಬೆಳಕು ಮೂಡಿತು. ಆಧುನಿಕ ಕೀಮೋಥೆರಪಿಯ ಬೆಳವಣಿಗೆಯಲ್ಲಿ ಈ ಸಂಶೋಧನೆಗಳು ಮಹತ್ವದ ಮೈಲಿಗಲ್ಲಾದವು.
ಅದು ಎರಡನೇ ವಿಶ್ವಯುದ್ಧದ ಸಂದರ್ಭ. ಉಷ್ಣವಲಯ ಪ್ರದೇಶಗಳಲ್ಲಿ ಅಮೆರಿಕನ್ ಸೈನಿಕರನ್ನು ಆನೆಕಾಲು ರೋಗ ಅಥವಾ ಫೈಲೇರಿಯಾಸಿಸ್ ಕಾಡುತ್ತಿತ್ತು. ಸುಬ್ಬಾರಾವ್ ಅವರ ತಂಡ ಈ ಸಮಸ್ಯೆಯತ್ತ ಗಮನ ಹರಿಸಿತು. ಅವರ ತಂಡದ ಸಂಶೋಧನೆಯಿಂದ diethylcarbamazine ಎಂಬ ಔಷಧ ಅಭಿವೃದ್ಧಿಯಾಯಿತು. ಫೈಲೇರಿಯಾಸಿಸ್‌ನ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಇದು ಪ್ರಮುಖ ಔಷಧವಾಯಿತು; ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ಮಹತ್ವದ ಔಷಧವಾಗಿ ಗುರುತಿಸಿದೆ.
ಪ್ರಶಸ್ತಿಗಳಿಗಿಂತ ಸಮಾಜ ಸೇವೆ ದೊಡ್ಡದು :
ಸುಬ್ಬಾರಾವ್ ಅವರ ಜೀವನದ ಅತ್ಯಂತ ಗಮನಾರ್ಹ ಅಂಶವೆಂದರೆ ಅವರ ವೈಯಕ್ತಿಕ ವಿನಯ. ತಮ್ಮ ಕೆಲಸದ ಶ್ರೇಯಸ್ಸನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ವೈಜ್ಞಾನಿಕ ಸಾಧನೆಗಳನ್ನು ವೈಯಕ್ತಿಕ ಕೀರ್ತಿಗಾಗಿ ಬಳಸಿಕೊಳ್ಳುವ ಹಂಬಲ ಅವರಲ್ಲಿ ಕಡಿಮೆ ಇತ್ತು. ಇದು ಅವರ ಅವಗುಣವೇ ಇರಬೇಕು. ಅದಕ್ಕಾಗಿಯೇ ಇರಬೇಕು. ಅವರ ಅನೇಕ ಕೊಡುಗೆಗಳು ಅವರ ಹೆಸರಿಗಿಂತ ಹೆಚ್ಚಾಗಿ ಇತರರ ಹೆಸರಿನೊಂದಿಗೆ ನೆನಪಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಅವರ ಸಂಶೋಧನೆಗಳ ಮಹತ್ವವನ್ನು ಕಡಿಮೆ ಮಾಡುವುದಿಲ್ಲ. ವಿಜ್ಞಾನಿಯ ನಿಜವಾದ ಯಶಸ್ಸು ಎಂದರೆ ಪ್ರಶಸ್ತಿಯೇ? ಅಥವಾ ಅವನ ಸಂಶೋಧನೆಯಿಂದ ಉಳಿಯುವ ಜೀವಗಳೇ? ಎಂಬ ಒಂದು ಪ್ರಶ್ನೆ ಕೇಳುವಂತೆ ಮಾಡುತ್ತದೆ. ಬಹುಶಃ ಸುಬ್ಬಾರಾವ್ ಅವರ ಉತ್ತರ ಎರಡನೆಯದೇ ಆಗಿರುತ್ತಿತ್ತು. ಅಮೆರಿಕದ ಲೇಖಕ ಡೊರಾನ್ ಕೆ. ಆಂಟ್ರಿಮ್ ಅವರು ಅವರನ್ನು “ವೈದ್ಯಕೀಯ ಜಗತ್ತಿನ ರಸವಿದ್ಯಾಜ್ಞ” ಎಂದು ಕರೆದಿದ್ದಾರೆ. ಚಿನ್ನವನ್ನು ತಯಾರಿಸುವ ರಸವಿದ್ಯೆಯ ಬದಲು— ಮನುಷ್ಯನ ನೋವನ್ನು ಕಡಿಮೆ ಮಾಡುವ ಔಷಧಿಗಳನ್ನು ಸೃಷ್ಟಿಸಿದ ರಸವಿದ್ಯಾತಜ್ಞ!
ನೊಬೆಲ್ ಸಿಗಲಿಲ್ಲ… ಆದರೆ?
ನೋಬೆಲ್ ಪ್ರಶಸ್ತಿ ಸಿಗಲೇ ಬೇಕಾದ ಸಂಶೋಧಕ ಸುಬ್ಬಾರಾವ್ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಲಿಲ್ಲ. ಅದರ ಹಿಂದಿನ ಸತ್ಯ ತಿಳಿಯದ್ದೇನೂ ಅಲ್ಲ. ಅವರ ವೈಜ್ಞಾನಿಕ ಕೊಡುಗೆಗಳಿಗೆ ದೊರೆಯಬೇಕಾದಷ್ಟು ಜಾಗತಿಕ ಮಾನ್ಯತೆ ಕೂಡ ಅವರ ಜೀವಿತಾವಧಿಯಲ್ಲಿ ಸಿಗಲಿಲ್ಲ ಎನ್ನುವುದು ದೌರ್ಭಾಗ್ಯ. ಒಂದು ಪ್ರಶಸ್ತಿಯನ್ನು ಎಷ್ಟು ಜನ ನೋಡುತ್ತಾರೆ? ಆದರೆ ಒಂದು ಪರಿಣಾಮಕಾರಿ ಔಷಧಿಯಿಂದ ಎಷ್ಟು ಜನ ಬದುಕುತ್ತಾರೆ? ಪ್ರಶಸ್ತಿ ಒಂದು ಗೋಡೆಯ ಮೇಲೆ ನೇತಾಡಬಹುದು. ಆದರೆ ವಿಜ್ಞಾನದಿಂದ ಉಳಿದ ಜೀವಗಳು ಸಮಾಜದಲ್ಲಿ ಉಸಿರಾಡುತ್ತವೆ. ಅದೇ ಸುಬ್ಬಾರಾವ್ ಅವರಿಗೆ ನಿಜವಾದ ಪುರಸ್ಕಾರ ಎಂದು ಸಮಾಧಾನ ಪಟ್ಟುಕೊಳ್ಳಬೇಕಷ್ಟೇ!!!
ಕೇವಲ 53 ವರ್ಷ… ಆದರೆ ಶಾಶ್ವತ ಪರಂಪರೆ
1948ರ ಆಗಸ್ಟ್ 8ರಂದು, ಕೇವಲ 53ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಯಲ್ಲಾಪ್ರಗಡ ಸುಬ್ಬಾರಾವ್ ನಿಧನರಾದರು. ಇದು ಸಾಯುವ ವಯಸ್ಸೇ.? ಒಬ್ಬ ಮನುಷ್ಯನ ಜೀವನದಲ್ಲಿ 53 ವರ್ಷ ದೊಡ್ಡ ಅವಧಿಯಲ್ಲ. ಆದರೆ ಆ 53 ವರ್ಷಗಳಲ್ಲಿ ಅವರು ಬಿತ್ತಿದ ವೈಜ್ಞಾನಿಕ ಬೀಜಗಳು ಮುಂದಿನ ಪೀಳಿಗೆಗಳ ವೈದ್ಯಕೀಯಕ್ಷೇತ್ರವನ್ನು ಪ್ರಭಾವಿಸಿದವು. ಅವರ ಜೀವನದಲ್ಲಿ ಬಡತನವಿತ್ತು. ವಿಫಲತೆಗಳಿದ್ದವು. ತಾರತಮ್ಯವಿತ್ತು. ಶ್ರೇಯಸ್ಸು ಕಸಿದುಕೊಳ್ಳಲ್ಪಟ್ಟ ನೋವಿತ್ತು. ಆದರೆ ಅವರು ಯಾವುದರಿಂದಲೂ ತಮ್ಮ ಸಂಶೋಧನಾ ಪಯಣದ ಅಂತ್ಯವಾಗಲು ಬಿಡಲಿಲ್ಲ. ನೋವನ್ನು ವಿಜ್ಞಾನದ ಪ್ರಶ್ನೆಯನ್ನಾಗಿಸಿದರೆ, ವಿಫಲತೆಯನ್ನು ಪ್ರಯತ್ನವನ್ನಾಗಿಸಿದರು. ಅವಕಾಶಗಳ ಕೊರತೆಯನ್ನು ಪರಿಶ್ರಮದಿಂದಲೇ ಗೆದ್ದರು.
೧. ಸೋಲು ಅಂತಿಮವಲ್ಲ. ಶಾಲೆಯಲ್ಲಿ ಎರಡು ಬಾರಿ ವಿಫಲರಾದರೂ ಮುಂದೆ ಜಗತ್ತಿನ ಪ್ರಮುಖ ಸಂಶೋಧನಾ ಕ್ಷೇತ್ರಗಳಲ್ಲಿ ತಮ್ಮ ಅಚ್ಚೊತ್ತಿದ್ದಾರೆ. ಹೀಗಾಗಿ— ಒಂದು ಪರೀಕ್ಷೆಯ ಫಲಿತಾಂಶ ನಿಮ್ಮ ಜೀವನದ ಫಲಿತಾಂಶವಲ್ಲ.
೨. ನಿಮ್ಮ ನೋವನ್ನು ಪ್ರಶ್ನೆಯನ್ನಾಗಿ ಮಾಡಿ.
ಬಾಲ್ಯದಲ್ಲಿ ಕಂಡ ಬಡತನ, ಕಾಯಿಲೆ ಮತ್ತು ಸಂಕಷ್ಟಗಳು ಅವರ ಮನಸ್ಸಿನಲ್ಲಿ ಮಾನವ ನೋವಿನ ಬಗ್ಗೆ ಆಳವಾದ ಸಂವೇದನೆಯನ್ನು ಬೆಳೆಸಿದವು. ಅವರು ಆ ನೋವನ್ನು ಕೇವಲ ಅನುಭವಿಸಲಿಲ್ಲ. ಅದನ್ನು ವಿಜ್ಞಾನದ ಪ್ರಶ್ನೆಯನ್ನಾಗಿ ಮಾಡಿದರು.
೩. ವಿಜ್ಞಾನದಲ್ಲಿ ‘ನಾನು’ಗಿಂತ ‘ನಾವು’ ದೊಡ್ಡದು
"ಯಾವುದೇ ವೈಜ್ಞಾನಿಕ ಮೈಲಿಗಲ್ಲು ಒಬ್ಬ ವ್ಯಕ್ತಿಯ ಸಾಧನೆಯಂತೆ ಕಂಡರೂ, ವಾಸ್ತವದಲ್ಲಿ ಅದು ನೂರಾರು ಕೈಗಳು ಒಗ್ಗೂಡಿ ಮಾಡಿದ ಪ್ರಯತ್ನ. 'ಬೆರಳುಗಳು ಸೇರಿ ಮುಷ್ಟಿಯಾದಂತೆ', ವಿಜ್ಞಾನಿಗಳ ಸಾಂಘಿಕ ಪರಿಶ್ರಮ ಮತ್ತು ಸಹೋದ್ಯೋಗಿಗಳ ಸಹಕಾರವೇ ಪ್ರತಿಯೊಂದು ಮಹಾನ್ ಆವಿಷ್ಕಾರದ ಹಿಂದಿರುವ ನಿಜವಾದ ಶಕ್ತಿ." ಸುಬ್ಬಾರಾವ್ ಅವರ ಜೀವನ ನಮಗೆ ಹೇಳುವುದು—“ನಿಮ್ಮ ಹೆಸರಿಗಿಂತ ನಿಮ್ಮ ಕೆಲಸವೇ ದೊಡ್ಡದಾಗಲಿ.”
ಯಲ್ಲಾಪ್ರಗಡ ಸುಬ್ಬಾರಾವ್ ಅವರ ಹೆಸರು ಬಹುಶಃ ಸಾಮಾನ್ಯ ಜನರ ನೆನಪಿನಲ್ಲಿ ಹೆಚ್ಚು ಉಳಿದಿಲ್ಲ. ಆದರೆ ಅವರ ವಿಜ್ಞಾನ?
ಅದು ನಮ್ಮಿಂದ ದೂರವಾಗಿಲ್ಲ. ನಮ್ಮ ಜೀವಕೋಶಗಳಲ್ಲಿ ಶಕ್ತಿಯ ವಿನಿಮಯದ ಬಗ್ಗೆ ಮಾತನಾಡುವಾಗ… ಕ್ಯಾನ್ಸರ್ ಚಿಕಿತ್ಸೆಯ ಇತಿಹಾಸವನ್ನು ನೆನಪಿಸಿಕೊಳ್ಳುವಾಗ… ಪ್ರತಿಜೀವಕಗಳ ಅಭಿವೃದ್ಧಿಯ ಪಯಣವನ್ನು ಅರಿಯುವಾಗ… ಸುಬ್ಬಾರಾವ್ ಅವರ ವೈಜ್ಞಾನಿಕ ಹೆಜ್ಜೆಗುರುತುಗಳು ಮತ್ತೆ ನಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ.
ಇತಿಹಾಸದ ಪುಟಗಳಲ್ಲಿ ಕೆಲವು ಹೆಸರುಗಳು ದೊಡ್ಡ ಅಕ್ಷರಗಳಲ್ಲಿ ಮುದ್ರಿತವಾಗಿರುತ್ತವೆ. ಕೆಲವು ಹೆಸರುಗಳು ಸಣ್ಣ ಅಕ್ಷರಗಳಲ್ಲಿ ಉಳಿಯುತ್ತವೆ. ಆದರೆ ಕೆಲವು ಹೆಸರುಗಳು ಪುಸ್ತಕಗಳಲ್ಲಿ ಮಸುಕಾಗಿದ್ದರೂ— ಮಾನವ ಬದುಕಿನ ಮೇಲೆ ಅಚ್ಚೊತ್ತುತ್ತವೆ. ಯಲ್ಲಾಪ್ರಗಡ ಸುಬ್ಬಾರಾವ್ ಅಂತಹ ಹೆಸರೊಂದಾಗಿದೆ. ಅವರು ಬಹುಶಃ ನೊಬೆಲ್ ಪ್ರಶಸ್ತಿ ಪಡೆಯಲಿಲ್ಲ. ಆದರೆ ವಿಜ್ಞಾನದಿಂದ ಉಳಿದ ಜೀವಗಳೇ ಅವರ ಪ್ರಶಸ್ತಿಗಳು. ಅವರಿಗೆ ಭವ್ಯ ಪ್ರತಿಮೆ ಸ್ಮಾರಕವನ್ನು ಮಾಡದೇ ಇರಬಹುದು. ಆದರೆ ಅವರ ಸಂಶೋಧನೆಯ ಫಲದಿಂದ ಬದುಕುಳಿದ ಪ್ರತಿಯೊಂದು ಜೀವವೂ ಅವರ ಜೀವಂತ ಸ್ಮಾರಕ. ಸಾಧನೆಯ ದ್ಯೋತಕ. ಹಾಗಾಗಿ ಇಂದು ಅವರ ಹೆಸರನ್ನು ನೆನಪಿಸಿಕೊಳ್ಳುವಾಗ ಒಂದು ಮಾತು ಹೇಳಬಹುದು. “ಸುಬ್ಬಾರಾವ್ ಅವರನ್ನು ಇತಿಹಾಸ ಸ್ವಲ್ಪ ಮರೆತಿರಬಹುದು; ಆದರೆ ಮಾನವಕುಲ ಅವರ ವಿಜ್ಞಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.” ಇದೇ ಒಬ್ಬ ವಿಜ್ಞಾನಿಯ ನಿಜವಾದ ಅಮರತ್ವ.
ಸುಬ್ಬಾರಾವ್ ಅವರ ಸಹೋದ್ಯೋಗಿ ಸೈರಸ್ ಹೆಚ್. ಫಿಸ್ಕೆ, ಅಸೂಯೆಯಿಂದ ಅವರ ಅನೇಕ ಪ್ರಮುಖ ಸಂಶೋಧನಾ ಬರಹಗಳನ್ನು ನಾಶಪಡಿಸಿದರು ಹಾಗೂ ಹತ್ತಿಕ್ಕಿದರು. ಸುಬ್ಬಾರಾವ್ ಅವರು ಮೊದಲೇ ಪ್ರತ್ಯೇಕಿಸಿದ್ದ ಹಲವು ನ್ಯೂಕ್ಲಿಯೋಟೈಡ್‌ಗಳನ್ನು, ಫಿಸ್ಕೆಯ ಅಸೂಯೆಯ ಕಾರಣದಿಂದಾಗಿ ವರ್ಷಗಳ ನಂತರ ಇತರ ವಿಜ್ಞಾನಿಗಳು ಮರುಶೋಧಿಸಬೇಕಾಯಿತು ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ಜಾರ್ಜ್ ಹಿಚಿಂಗ್ಸ್ ಉಲ್ಲೇಖಿಸಿದ್ದಾರೆ.
ವೈಜ್ಞಾನಿಕ ಗೌರವಗಳು:
ಅವರ ಗೌರವಾರ್ಥ 1953ರಲ್ಲಿ Pearl River ಪ್ರದೇಶದಲ್ಲಿ ಹೊಸದಾಗಿ ಕಂಡುಬಂದ ಒಂದು fungus ಪ್ರಭೇದಕ್ಕೆ ವಿಜ್ಞಾನಿ ಕ್ಲಿಫರ್ಡ್ ಹೆಸೆಲ್ಟೈನ್ Subbaromyces splendens ಎಂದು ಹೆಸರಿಟ್ಟರು.
ಅದೇ ರೀತಿ ಇನ್ನೊಂದು ಶಿಲೀಂಧ್ರಕ್ಕೆ ಸುಬ್ಬಾರೋಮೈಸಸ್' (Subbaromyces) ಎಂದು ಹೆಸರಿಸಲಾಗಿದೆ.
ಜಿಗಿಯುವ ಜೇಡಗಳ ಒಂದು ಹೊಸ ಪ್ರಭೇದಕ್ಕೆ 'ಟಾಂಜಾನಿಯಾ ಯಲ್ಲಾಪ್ರಗಡೈ' (Tanzania yellapragadai) ಎಂದು ನಾಮಕರಣ ಮಾಡಲಾಗಿದೆ.
"ನೀವು ಬಹುಶಃ ಡಾ. ಎಲ್ಲಪ್ರಗಡ ಸುಬ್ಬಾರಾವ್ ಅವರ ಹೆಸರನ್ನು ಎಂದಿಗೂ ಕೇಳಿರಲಿಕ್ಕಿಲ್ಲ. ಆದರೆ, ಅವರು ಈ ಭೂಮಿಯ ಮೇಲೆ ಬಾಳಿ ಬದುಕಿದ್ದರಿಂದಲೇ ಇಂದು ನೀವು ಜೀವಂತವಾಗಿದ್ದೀರಿ ಮತ್ತು ಆರೋಗ್ಯವಾಗಿದ್ದೀರಿ. ಅವರು ಬದುಕಿದ್ದ ಕಾರಣಕ್ಕಾಗಿಯೇ ನೀವು ಇನ್ನು ಹೆಚ್ಚು ಕಾಲ ಬದುಕಬಹುದು." 1950ರ 'ಆರ್ಗೋಸಿ' ಪತ್ರಿಕೆಯಲ್ಲಿ ಡೊರಾನ್ ಕೆ. ಆಂಟ್ರಿಮ್ ಬರೆದ ಈ ಸಾಲುಗಳು ಅವರ ಮಹತ್ವವನ್ನು ಸಾರುತ್ತವೆ.




No comments:
Post a Comment