ಗುರುವಿನ ಬೆಳಕು… ಜ್ಞಾನದ ಪಯಣ…
ರಾಮಚಂದ್ರ ಭಟ್. ಬಿ. ಜಿ.
ಸಂಪಾದಕ ಮಂಡಳಿ, ಸವಿಜ್ಞಾನ
ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!
ಈ ಸಂದರ್ಭದಲ್ಲಿ ಸವಿಜ್ಞಾನ ಬಳಗದ ಬಂಧುಗಳು ಶೈಕ್ಷಣಿಕ ಸಾಧನೆಗಾಗಿ ಪುರಸ್ಕೃತರಾಗಿರುವುದು ಸಂತಸದ ಹೊನಲು ಹರಿಯುವಂತೆ ಮಾಡಿದೆ.
ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಮಹಾನ್ ತತ್ವಜ್ಞಾನಿ ಮಾತ್ರವಲ್ಲ, ಶ್ರೇಷ್ಠ ಶಿಕ್ಷಕರೂ ಆಗಿದ್ದರು. ಶಿಕ್ಷಣವೆಂದರೆ ಕೇವಲ ಜ್ಞಾನವನ್ನು ನೀಡುವುದಲ್ಲ; ಅದು ವ್ಯಕ್ತಿತ್ವವನ್ನು ರೂಪಿಸಿ, ವಿವೇಕ, ಮೌಲ್ಯ ಮತ್ತು ಮಾನವೀಯತೆಯನ್ನು ಬೆಳೆಸುವ ಪ್ರಕ್ರಿಯೆ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು ಅವರು. ಅವರ ಜನ್ಮದಿನವಾದ ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವುದು, ಶಿಕ್ಷಕ ವೃತ್ತಿಯ ಮಹತ್ವವನ್ನು ಸ್ಮರಿಸುವುದರ ಜೊತೆಗೆ ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರವನ್ನು ಗೌರವಿಸುವ ಅಪೂರ್ವ ಪರಂಪರೆಯಾಗಿದೆ.
The true purpose of education is to foster the complete intellectual, emotional, moral, and social growth of an individual so they can realize their full potential and transform themselves.
ಒಬ್ಬ ಶಿಕ್ಷಕ ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿಯಲ್ಲ; ವಿದ್ಯಾರ್ಥಿಯೊಳಗಿನ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ದಿಕ್ಕು ತೋರಿಸಿ, ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸುವ ಶಿಲ್ಪಿ. ಸಮಾಜದ ಭವಿಷ್ಯವನ್ನು ರೂಪಿಸುವ ಈ ಮಹತ್ತರ ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ‘ಸವಿಜ್ಞಾನ’ ಬಳಗದ ಹೃತ್ಪೂರ್ವಕ ನಮನಗಳು.
ಈ ವಿಶೇಷ ಸಂದರ್ಭದಲ್ಲಿ ನಮ್ಮೆಲ್ಲರ ಗೌರವಕ್ಕೆ ಪಾತ್ರರಾದ ‘ವಿನಯ ವಿದ್ಯಾ ವಿಶಾರದ’ ಪ್ರಶಸ್ತಿ ಪುರಸ್ಕೃತರು ಹಾಗೂ ‘ಸವಿಜ್ಞಾನ’ದ ಪ್ರಧಾನ ಸಂಪಾದಕರಾದ ಡಾ. ಬಾಲಕೃಷ್ಣ ಅಡಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರಶಸ್ತಿಯ ಹೆಸರಿಗೆ ತಕ್ಕಂತೆ ವಿನಯ, ವಿದ್ಯೆ ಮತ್ತು ವಿಶಾರದತೆಯನ್ನು ಮೈಗೂಡಿಸಿಕೊಂಡಿರುವ ಅವರು, ನಮ್ಮೆಲ್ಲರನ್ನು ಪ್ರತಿಹಂತದಲ್ಲೂ ತಿದ್ದಿ, ತೀಡಿ, ಪ್ರೋತ್ಸಾಹಿಸಿ ಮುನ್ನಡೆಸುತ್ತಿರುವ ಸರಳ ಸಜ್ಜನಿಕೆಯ ವಿಶಿಷ್ಟ ವ್ಯಕ್ತಿತ್ವ. ಅವರ ಮಾರ್ಗದರ್ಶನ ‘ಸವಿಜ್ಞಾನ’ದ ಶೈಕ್ಷಣಿಕ ಪಯಣಕ್ಕೆ ಸದಾ ಸ್ಫೂರ್ತಿಯ ಸೆಲೆಯಾಗಿರಲಿ. ಈ ಸಾರ್ಥಕ ಆಯ್ಕೆಗೆ ಆಯ್ಕೆ ಸಮಿತಿಗೂ ಹೃತ್ಪೂರ್ವಕ ಧನ್ಯವಾದಗಳು.
‘ಸವಿಜ್ಞಾನ’ ಬಳಗದ ಹೆಮ್ಮೆಯ ಸಂಗಾತಿ, ಸ್ನೇಹಿತ ಸಿದ್ದು ಬಿರಾದಾರ್ ಅವರು ಸೂತ್ರದ ಗೊಂಬೆಯಾಟದ ವಿಶಿಷ್ಟ ಕಲೆಯ ಮೂಲಕ ವಿಜ್ಞಾನವನ್ನು ದೇಶ-ವಿದೇಶಗಳಲ್ಲಿ ಜನಪ್ರಿಯಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ವಿಜ್ಞಾನವನ್ನು ಕೇವಲ ಪಠ್ಯಪುಸ್ತಕದ ಪುಟಗಳಲ್ಲಿ ಸೀಮಿತಗೊಳಿಸದೆ, ಕಲೆ, ಮನರಂಜನೆ ಮತ್ತು ಸೃಜನಶೀಲತೆಯೊಂದಿಗೆ ಜನಮನಕ್ಕೆ ತಲುಪಿಸುವ ಅವರ ಪ್ರಯತ್ನವು ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಣ ಸಚಿವರು ಹಾಗೂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿರುವುದು ‘ಸವಿಜ್ಞಾನ’ ಬಳಗಕ್ಕೂ ಹೆಮ್ಮೆಯ ಸಂಗತಿ.
‘ಸವಿಜ್ಞಾನ’ ಬಳಗದ ಜ್ಞಾನದೀಪಿಕ ಶೈಕ್ಷಣಿಕ ದತ್ತಿ ‘ಶಿಕ್ಷಕರತ್ನ’ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಆರು ವರ್ಷಗಳ ಕಾಲ ‘ಸವಿಜ್ಞಾನ’ದೊಂದಿಗೆ ತಮ್ಮ ಜ್ಞಾನ, ಅನುಭವ ಮತ್ತು ಸೃಜನಶೀಲತೆಯನ್ನು ಹಂಚಿಕೊಂಡಿರುವ ಅವರ ಶೈಕ್ಷಣಿಕ ಸೇವೆ ಅಭಿನಂದನಾರ್ಹ.
‘ಸವಿಜ್ಞಾನ’ವೆಂದರೆ ಕೇವಲ ಒಂದು ಪತ್ರಿಕೆಯಲ್ಲ; ಅದು ಶಿಕ್ಷಕರ ಜ್ಞಾನ, ಅನುಭವ, ಪ್ರಯೋಗಶೀಲತೆ ಮತ್ತು ಸೃಜನಶೀಲತೆಯನ್ನು ಒಂದೆಡೆ ಸೇರಿಸುವ ಜ್ಞಾನ ವೇದಿಕೆ. ಶಿಕ್ಷಕರು ಕಲಿಯುತ್ತಾ, ಕಲಿಸುತ್ತಾ, ಪರಸ್ಪರರ ಅನುಭವಗಳಿಂದ ಸಮೃದ್ಧರಾಗುವ ಮೂಲಕ ವಿಜ್ಞಾನ ಶಿಕ್ಷಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು ಇದರ ಆಶಯ.
ಈ ಶಿಕ್ಷಕರ ದಿನಾಚರಣೆಯಲ್ಲಿ ‘ಕಲಿಸುವ ಪ್ರತಿಯೊಬ್ಬರೂ ಕಲಿಯುವವರಾಗಿರಲಿ; ಕಲಿಯುವ ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಬೆಳಕಾಗಲಿ’ ಎಂಬ ಆಶಯದೊಂದಿಗೆ, ನಿಮ್ಮೆಲ್ಲರ ಸಹಕಾರದೊಂದಿಗೆ ‘ಸವಿಜ್ಞಾನ’ದ ಜ್ಞಾನಯಾತ್ರೆ ಮತ್ತಷ್ಟು ದೂರ ಸಾಗಲಿ.
"ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ?ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ!" ಎಂಬ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ನುಡಿಗಳೆಷ್ಟು ಅರ್ಥಪೂರ್ಣ.
ಎಲ್ಲ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
No comments:
Post a Comment