ಮಂಜು ಕರಗುವ ಮುನ್ನ
ಲೇಖಕರು : ರಮೇಶ್ ವಿ. ಬಳ್ಳಾಮಂಜು... ಮಂಜು... ಎಂದು ಏನೇನೋ ಗುನುಗುತ್ತಿದ್ದ ರಮಾಳಿಗೆ ತಾ ಓದುತ್ತಿದ್ದ ವಿಷಯದ ಒಂದು ಭಾಗವಾಗಿ ಏನೋ ಆಲೋಚನೆಗಳು ಹೊಳೆಯುತ್ತಿದ್ದವು. ಆ ಧ್ವನಿ ಕೇಳಿದ ಮಂಜುಳಾ ಒಳಗಿನಿಂದ ಓಡೋಡಿ ಬಂದು 'ಏಕೆ ಕೂಗಿದೆ' ? ಎಂದು ಕೇಳಿದಳು. 'ಅಯ್ಯೋ ನಾನು ಹೇಳಿದ್ದು ಈ ಮಂಜುಳಾ ಅಲ್ಲ, ನನ್ನ ಪಾಠದ ಮಂಜು....ಅದೇ ಮಂಜುಗಡ್ಡೆ' ಬಗ್ಗೆ ಎಂದಳು ರಮಾ. ಮಂಜುಗಡ್ಡೆ ಬಗ್ಗೆ ಸುದೀರ್ಘವಾದ ಇಬ್ಬರ ಚರ್ಚೆ ಹೀಗೆ ಮುಂದುವರೆದಾಗ ಅದರ ಕುರಿತ ಹತ್ತು ಹಲವಾರು ಅಂಶಗಳು ತೆರೆದುಕೊಂಡವು.
*ಏನಿದು ಮಂಜುಗಡ್ಡೆ !*
ಮಂಜುಗಡ್ಡೆ ಎಂಬುದು ನೀರಿನ ಘನ ರೂಪ. ಭೂಮಿಯ ಮೇಲೆ ಶೇಕಡ 72 ಭಾಗದಷ್ಟು ನೀರು ತುಂಬಿಕೊಂಡಿರುವುದು ನಮಗೆಲ್ಲ ತಿಳಿದ ವಿಷಯ. ಇಂಥ ಅದ್ಭುತವಾದ ನೀರು ಭೂಮಿಯ ಮೇಲೆ ಮೂರು ಸ್ಥಿತಿಗಳಲ್ಲಿ ಲಭ್ಯವಿರುವುದು ವಿಶೇಷ. ಸಾಮಾನ್ಯವಾಗಿ ನೀರು ದ್ರವ ರೂಪದಲ್ಲಿರುವುದು ಸರ್ವವೇದ್ಯ. ಈ ಮಧ್ಯೆ, ನೀರು ತಾಪವನ್ನು ಅತ್ಯಂತ ಕಡಿಮೆ ಮಾಡಿಕೊಂಡು ೦°C ನಲ್ಲಿ ಇದ್ದಾಗ ಘನಿರ್ಭವಿಸಿ ಮಂಜುಗಡ್ಡೆಯಾಗಿ ರೂಪುಗೊಳ್ಳುತ್ತದೆ. ಅದರ ರಚನೆಯೂ ಬದಲಾಗಿ ಹೋಗುತ್ತದೆ. ಸ್ವಚ್ಛವಾದ ಹಾಗೂ ಬಿಳಿ ಬಣ್ಣದ ಗಾಜಿನಂತ ಸ್ಪಟಿಕ ರೂಪವನ್ನು ಹೊಂದುತ್ತದೆ. ಮಂಜುಗಡ್ಡೆ ದ್ರವ ನೀರಿಗಿಂತ ಕಡಿಮೆ ಸಾಂದ್ರತೆಯನ್ನು ಹೊಂದುವ ಮೂಲಕ ಹಗುರವಾಗಿ ಕಾಣುತ್ತದೆ. ಮಂಜುಗಡ್ಡೆಯ ನೀರಿನ ಅಣುವಿನ ಸ್ಪಟಿಕ ರಚನೆ ನೋಡಿದಾಗ ಪ್ರತಿ ಆಮ್ಲಜನಕದ ಪರಮಾಣು ನಾಲ್ಕು ಹೈಡ್ರೋಜನ್ ಪರಮಾಣುಗಳ ನೆರೆಹೊರೆಯಾಗಿ ಸಂಪರ್ಕ ಏರ್ಪಡಿಸುತ್ತದೆ. ಇದು ಟೆಟ್ರಾಹೈಡ್ರಲ್ ರಚನೆಯಾಗಿ ಮುಂದುವರೆಯುತ್ತಾ ಸ್ಪಟಿಕದ ಆಕಾರ ತಾಳುತ್ತದೆ. ಇದು ಅನೇಕ ಸಣ್ಣ ಸಣ್ಣ ತೂತುಗಳಿಂದ ರಂಧ್ರಮಯವಾಗಿ ಸಾಂದ್ರತೆಯಲ್ಲಿ ಚಿಕ್ಕದಾಗಿ ಗೋಚರಿಸುತ್ತದೆ.
*ನೀರಿನಲ್ಲಿ ಮಂಜುಗಡ್ಡೆ ತೇಲುತ್ತದೆಯೇ?*
ಹೌದು! ಖಂಡಿತ, ನೀರಿನಲ್ಲಿ ಮಂಜುಗಡ್ಡೆ ತೇಲುತ್ತದೆ. ಈ ಸಣ್ಣ ಪ್ರಶ್ನೆ ಶಾಲಾ ಮಕ್ಕಳಲ್ಲಿ ಸಾಮಾನ್ಯವಾಗಿ ಉದ್ಭವಿಸುತ್ತದೆಯಾದರೂ ವಾಸ್ತವದಲ್ಲಿ ಇದರ ವೈಜ್ಞಾನಿಕ ತಿಳುವಳಿಕೆ ಎಲ್ಲರಲ್ಲೂ ಇರಬೇಕಾದದ್ದು ಅತಿ ಅವಶ್ಯಕ. ಘನೀಭವಿಸಿದ ಈ ಮಂಜುಗಡ್ಡೆ ಸಾಮಾನ್ಯ ದ್ರವ ನೀರಿಗಿಂತ ಹಗುರವಾಗಿರುತ್ತದೆ. ಮಂಜುಗಡ್ಡೆಯ ರಚನೆಯಲ್ಲಿ ಅದರ ಕಣಗಳು ಹೆಚ್ಚು ಜಾಗವನ್ನು ಆಕ್ರಮಿಸುವ ರೀತಿಯಲ್ಲಿ ಜೋಡಿಸಲ್ಪಡುತ್ತವೆ. ಆಗ ಅದು ವಿಸ್ತಾರಗೊಳ್ಳುತ್ತದೆ. ಈ ರಚನೆಯ ಬದಲಾವಣೆಯನ್ನು ವ್ಯಾಕೋಚನೆ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಂಜುಗಡ್ಡೆಯ ಒಳಭಾಗ ಖಾಲಿ ಖಾಲಿಯಾಗುತ್ತದೆ. ಆಗ ಅದರ ಗಾತ್ರ ಹೆಚ್ಚಾಗಿ ತೂಕ ಕಡಿಮೆಯಾಗುತ್ತದೆ. ಸಾಂದ್ರತೆಯನ್ನು ಗಮನಿಸಿದಾಗ 4 ° C ನಲ್ಲಿ ನೀರು 1g / cm3 ಹೊಂದಿದ್ದರೆ, O °C ನಲ್ಲಿ ಮಂಜುಗಡ್ಡೆ 0.92 g / cm3 ಇರುತ್ತದೆ. ಪರಿಣಾಮ ನೀರಿನಲ್ಲಿ ಕಡಿಮೆ ಸಾಂದ್ರತೆಯ ಈ ಮಂಜುಗಡ್ಡೆಯು ತೇಲಲು ಪ್ರಾರಂಭಿಸುತ್ತದೆ.
*ಮಂಜುಗಡ್ಡೆ ತೇಲುವಿಕೆಯ ಲಾಭ ?*
ಮಂಜುಗಡ್ಡೆ ತೇಲುವುದಕ್ಕೂ ತೇಲದೆ ಇರುವುದಕ್ಕೂ ಲಾಭದ ನಂಟು ಏನು ಎಂದು ಯೋಚಿಸುತ್ತೀರಾ? ನಿಜ! ನಾವು ಎಲ್ಲದಕ್ಕೂ ಲಾಭದ ಯೋಚನೆ ಮಾಡುತ್ತೇವೆ. ಹಾಗೆ ಇಲ್ಲೂ ಕೂಡ ಲಾಭ ಇಲ್ಲ ಅಂತಲ್ಲ. ಸಾಗರ, ಸರೋವರಗಳಲ್ಲಿ ಇದರ ಪ್ರಯೋಜನ ಕಾಣಬಹುದು. ಅಲ್ಲಿ ಬದುಕುವ ಬಹುತೇಕ ಜಲಚರ ಜೀವ ಜಂತುಗಳು ಪ್ರಾಣಿಗಳ ವಿಷಯದಲ್ಲಿ ಇದು ಬಹು ಮುಖ್ಯವೆನಿಸುತ್ತದೆ. ಮಂಜುಗಡ್ಡೆ ನೀರಿನ ಮೇಲೆ ತೇಲುತ್ತದೆಯಾದ್ದರಿಂದ ಅದು ಈ ಸಾಗರ ಸರೋವರಗಳ ಮೇಲ್ಮೈ ಮೇಲೆ ಒಂದು ಪದರವಾಗಿ ರೂಪುಗೊಳ್ಳುತ್ತದೆ. ಎಷ್ಟೇ ತಾಪಮಾನ ಕುಸಿದು ಅತ್ಯಂತ ತಂಪು ವಾತಾವರಣ ನಿರ್ಮಾಣವಾದರೂ, ಆ ಪದರಿನ ಕೆಳಗಡೆ ಭಾಗದ ನೀರು ತಂಪಾಗದೆ ತಾಪಮಾನವನ್ನು ಕಾಯ್ದುಕೊಳ್ಳುತ್ತದೆ. ಹಾಗಾಗಿ ಮಂಜುಗಡ್ಡೆಯ ಪದರಿನ ಕೆಳಭಾಗದ ನೀರಿನಲ್ಲಿ ಬದುಕುವ ಮೀನುಗಳಂತ ಅನೇಕ ಜಲಚರ ಜೀವಿಗಳು ಬೆಚ್ಚಗಿನ ಅಗತ್ಯ ತಾಪಮಾನವನ್ನು ಅನುಭವಿಸುತ್ತವೆ. ಇದರಿಂದ ಈ ಜಲಚರಗಳ ಉಳಿವು ಸಾಧ್ಯವಾಗುತ್ತದೆ.
*ಮಂಜುಗಡ್ಡೆ ಎಲ್ಲೆಲ್ಲಿದೆ ?*
ಮಂಜುಗಡ್ಡೆ ನಮ್ಮ ಭೂಮಿಯ ಮೇಲ್ಭಾಗದಲ್ಲಿ ಸಾಗರ ಸರೋವರಗಳಲ್ಲಿ ಮಾತ್ರವಲ್ಲ ಇಡೀ ಸೌರವ್ಯೂಹದದ್ಯಾಂತ ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಭೂಮಿಯಿಂದ ಅದರಾಚೆಗೆ ಲಕ್ಷಾಂತರ ಮೈಲುಗಳ ದೂರದ ಚಂದ್ರ ಇತರ ಗ್ರಹಗಳಲ್ಲೂ ಕೂಡ ಮಂಜುಗಡ್ಡೆ ವ್ಯಾಪ್ತಿಸಿರುವ ಬಗ್ಗೆ ನಾಸಾ ವಿಜ್ಞಾನಿಗಳು ಅನ್ವೇಷಿಸುತ್ತಿದ್ದಾರೆ. ಋತುಮಾನಕ್ಕೆ ಅನುಗುಣವಾಗಿ ಅದರ ವ್ಯಾಪ್ತಿ ಹರವು ವಿಸ್ತಾರಗೊಳ್ಳುವುದು ಹಾಗೂ ಕ್ಷೀಣಿಸುವುದು ಸಾಮಾನ್ಯ. ಚಳಿಗಾಲದಲ್ಲಿ ಹೆಚ್ಚು ಹಿಮಗಡ್ಡೆಗಳು ರೂಪಗೊಂಡು ಕ್ರಮೇಣ ಬೇಸಿಗೆ ಸಮೀಪಿಸುತ್ತಿದ್ದಂತೆ ಕರಗುತ್ತಾ ಸಾಗರ ಪ್ರವಾಹಗಳ ರೂಪದಲ್ಲಿ ಮೊದಲಿನ ರೂಪಕ್ಕೆ ಬರುತ್ತವೆ. ಇದು ಒಂದು ರೀತಿಯಲ್ಲಿ ಹವಾಮಾನದ ಸಮತೋಲನ ಕಾಪಾಡುವಲ್ಲಿ ಒಂದು ಹೆಜ್ಜೆ ಎಂದು ಹೇಳಬಹುದು. ಇದರಲ್ಲಿ ಪ್ರಮುಖ ಪಾತ್ರ ವಹಿಸುವ ಮಂಜುಗಡ್ಡೆಗಳು ಜಾಗತಿಕ ಹವಾಮಾನದ ಹಲವು ಮಾದರಿಗಳು ರೂಪಗಳುವಿಕೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಪ್ಲೂಟೊದ ಜಲಾವೃತ ಪ್ರದೇಶ ವಿಶೇಷ ಲಕ್ಷಣವುಳ್ಳ ಮಂಜುಗಡ್ಡೆಗಳಿಂದ ಅವೃತ್ತವಾಗಿರುವುದನ್ನು ನಾಸಾ ದೃಢಪಡಿಸಿದೆ. ಭೂಮಿಯ ಮೇಲಿನ ಮದ ಹೊದಿಕೆಗಳಂತೆಯೇ ಮಂಗಳ ಗ್ರಹದ ಮೇಲೂ ಇಂಥ ಮಂಜುಗಡ್ಡೆಯ ಪದರುಗಳಿರುವುದು ಪತ್ತೆಯಾಗಿದೆ. ಶನಿಯ ಸಮಭಾಜಕದ 75,000 ಮೈಲುಗಳಿಂದ ಸುಮಾರು 2,60,000 ಮೈಲುಗಳವರೆಗೆ ಹಿಮ ಕಣಗಳ ಮೋಡಗಳು ಆವರಿಸಿರುವುದು ತಿಳಿದು ಬರುತ್ತದೆ. ವಿಶೇಷವಾಗಿ ಶನಿಯ ಉಂಗರುಗಳು ಮತ್ತು ಅದರ ಉಪಗ್ರಹಗಳು ಇಂಥ ಮಂಜುಗಡ್ಡೆಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಹಾಗೆಯೇ ಗುರು ಗ್ರಹದ ಉಪಗ್ರಹ ಯುರೋಪ ಕೂಡ ಹಿಮಾವೃತ ಗುಮ್ಮಟಗಳ ಮಾದರಿಯಲ್ಲಿರುವುದು ಕಂಡುಬರುತ್ತದೆ. ನಮ್ಮ ಭೂಮಿಯ ಉಪಗ್ರಹ ಚಂದ್ರನ ನಿರ್ದಿಷ್ಟ ಭಾಗದಲ್ಲಿ ಹಿಮ ನಿಕ್ಷೇಪವಿರುವ ಪುರಾವೆ ಸಿಕ್ಕಿದೆ.
ಹತ್ತು ಹಲವು ಬಗೆಯ ಮಂಜುಗಡ್ಡೆಯ ಆಕಾರಗಳು ಆಕರ್ಷಿಸುವಂತಿವೆ. ನಾವು ನೋಡಿರುವ ಮೊನಚಾದ ಮಂಜುಗಡ್ಡೆ ಮಾತ್ರ ನಮಗೆ ಗೊತ್ತು. ಆದರೆ ಕೋಷ್ಟಕಕಾರದ ಪೊಬೆಡ ಐಸ್ ದ್ವಿಪ ಸಮತಟ್ಟಾದ ಮೇಲ್ಮೈ ಹಾಗೂ ಕಡಿದಾದ ಅಂಚುಗಳನ್ನು ಹೊಂದಿದೆ. ದುಂಡಾದ ಮೇಲ್ಬೈ ಭಾಗದಲ್ಲಿ ಇರುವ ಗುಮ್ಮಟ ಆಕಾರದ ಮಂಜುಗಡ್ಡೆ, ಶಿಖರ ಆಕಾರದ ಪಿನಾಕಲ್ ಮಂಜುಗಡ್ಡೆ, ಯು ಆಕಾರದ ಡ್ರೈ ಡಾಕ್ ಹೀಗೆ ನಾನಾ ಆಕಾರದ ಮಂಜುಗಡ್ಡೆಯ ಹರವು ನಮ್ಮ ಅರಿವಿನಲ್ಲಿದೆ.
ಹೀಗೆ ವಿಭಿನ್ನವಾಗಿ ವಿಶೇಷವಾಗಿ ವೈವಿಧ್ಯಮಯ ರೀತಿಯಲ್ಲಿ ಎಲ್ಲೆಲ್ಲೂ ಮಂಜು ಆವರಿಸಿ ಪ್ರಕೃತಿಯ ಒಂದು ಭಾಗವಾಗಿರುವುದು ಸೋಜಿಗದ ಸಂಗತಿ.

No comments:
Post a Comment