ರಬ್ಬರ್ ಕತೆ
ಡಾ|| ಎಂ.ಜೆ. ಸುಂದರ್ ರಾಮ್
ಕ್ರಿಸ್ಟೋಫರ್ ಕೊಲಂಬಸ್ 1493ರಲ್ಲಿ ತಮ್ಮ ಎರಡನೆಯ ಸಾಹಸಮಯ ಸಮುದ್ರಯಾನವನ್ನು ಪ್ರಾರಂಭಿಸಿದಾಗ ವೆಸ್ಟ್ಇಂಡೀಸ್ ದ್ವೀಪಸಮೂಹದಲ್ಲೊಂದಾದ ಹಿಸ್ಪಾನಿಯೋಲ (Hispaniola) ಎಂಬ ಹಳ್ಳಿಯಲ್ಲಿ ಕೆಲವು ದಿನ ಬೀಡುಬಿಟ್ಟಿದ್ದರು. ಆ ಹಳ್ಳಿಯ ಯುವಕರು ಕಾಲ್ಚೆಂಡಿನಾಟದಂತೆ ಆಡುತ್ತಿದ್ದ ಆಟವೊಂದನ್ನು ಕೊಲಂಬಸ್ ಕುತೂಹಲದಿಂದ ವೀಕ್ಷಿಸಿದರು. ಆ ಹಳ್ಳಿಯಲ್ಲಿ ಬೆಳೆಯುವ ಹೆವಿಯಾ ಬ್ರೆಸಿಲಿಯೆನ್ಸಿಸ್ (Hevea brasiliensis) ಎಂಬ ಒಂದು ಜಾತಿಯ ಮರದಿಂದ ವಿಸರ್ಜಿಸಲ್ಪಡುವ ಬಿಳಿಯ ಬಣ್ಣದ ಸಸ್ಯಕ್ಷೀರ (Latex)ವನ್ನು ಶೇಖರಿಸಿ, ಅದನ್ನು ಹದಮಾಡಿ, ಚೆಂಡಿನಾಕಾರದಲ್ಲಿ ಉಂಡೆಕಟ್ಟಿ ಆಡುತ್ತಿದ್ದರು. ಈ ಸಸ್ಯಕ್ಷೀರಕ್ಕೆ ಸ್ಥಿತಿಸ್ಥಾಪಕ (Elastic) ಮತ್ತು ಜಿಗುಟಿನ ಗುಣಗಳಿರುವುದನ್ನು ಕೊಲಂಬಸ್ ಮನಗಂಡರು. ಈ ಸಸ್ಯಕ್ಷೀರವನ್ನು ಯಾವ ಆಕಾರಕ್ಕಾದರೂ ರೂಪಿಸಿಕೊಳ್ಳಬಹುದಾಗಿತ್ತು. ಇದರಿಂದ ಬಟ್ಟೆ, ಚೀಲ, ಸೀಸೆ, ಶೂ, ಮುಂತಾದ ಜಲಾಭೇದ್ಯ (Waterproof) ವಸ್ತುಗಳನ್ನು ಆ ಹಳ್ಳಿಯ ಜನ ತಯಾರಿಸುತ್ತಿದ್ದರು.
ರಬ್ಬರ್‌ನ ಪ್ರಭಾವ ಎಲ್ಲೆಡೆ ಹರಡತೊಡಗಿತು. ರಬ್ಬರ್‌ನಿಂದ ದಿನಬಳಕೆ ವಸ್ತುಗಳನ್ನು ತಯಾರಿಸುವ ಅನೇಕ ಕಾರ್ಖಾನೆಗಳು ಉದ್ಭವಿಸಿದವು. ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಹಾಸುಹೊಕ್ಕಾಗಿರುವಂತೆಯೇ ಅಂದು ರಬ್ಬರ್ ಸರ್ವಾಂತರ್ಯಾಮಿಯಾಗಿ ರಾರಾಜಿಸಲಾರಂಭಿಸಿತು. ಪೆನ್ಸಿಲ್ ಬರಹಗಳನ್ನು ರಬ್ಬರ್‌ನಿಂದ ಉಜ್ಜಿದಾಗ ಅವು ಸುಲಭವಾಗಿ, ಸ್ವಚ್ಛವಾಗಿ ಅಳಿಸಿಹೋಗುವುದೆಂದು ಜೋಸೆಫ್ ಪ್ರೀಸ್ಟ್ಲಿ ಎಂಬ ರಸಾಯನಶಾಸ್ತ್ರಜ್ಞರು ಕಂಡುಹಿಡಿದರು. ಇದರಿಂದಲೇ ಈ ವಸ್ತುವಿಗೆ ರಬ್ಬರ್ (Rubber) ಎಂದು ಹೆಸರಿಡಲಾಯಿತು.
ಈ ರೀತಿ ವಿಶ್ವವನ್ನೇ ತನ್ನ ಮೋಹಕತೆಯಿಂದ ಸೆಳೆದು ಬಿರುಗಾಳಿಯೆಬ್ಬಿಸಿದ್ದ ರಬ್ಬರ್ ದಿಢೀರನೆ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಲಾರಂಭಿಸಿತು. ಸಾವಿರಾರು ಟನ್ ರಬ್ಬರನ್ನು ಬ್ರೆಜಿಲ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದ ಅಮೆರಿಕದ ಅನೇಕ ರಬ್ಬರ್ ಕಂಪನಿಗಳಿಗೆ ಗ್ರಹಣ ಹಿಡಿದು ಒಂದೊಂದಾಗಿ ಬಾಗಿಲು ಮುಚ್ಚಿದವು. ಜನರಿಗೆ ರಬ್ಬರ್ ಮೇಲಿನ ವ್ಯಾಮೋಹ ಕರಗಲು ಅತಿ ಮುಖ್ಯ ಕಾರಣವೆಂದರೆ ಅದರ ನ್ಯೂನತೆ. ಈ ವಸ್ತು ಬೇಸಗೆಯಲ್ಲಿ ಬಿಸಿಲಿನ ತಾಪಕ್ಕೆ ದ್ರವವಾಗಿ ಕರಗಿ ಹರಿಯತೊಡಗಿದರೆ, ಚಳಿಗಾಲದಲ್ಲಿ ಗಟ್ಟಿಯಾಗಿ ಹೆಪ್ಪುಗಟ್ಟಿ ಬಿರುಕು ಬಿಟ್ಟುಕೊಂಡು ನಿರುಪಯುಕ್ತವಾಗಿ ಬಿಡುತ್ತಿತ್ತು.
ಚಾರ್ಲ್ಸ್ ಗುಡ್ ಇಯರ್ (Charles Goodyear) ಎಂಬ 17 ವಯಸ್ಸಿನ ಯುವಕ 1829ರಲ್ಲಿ ವ್ಯಾಪಾರಕ್ಕಾಗಿ ಅಮೆರಿಕದ ಕನೆಕ್ಟಿಕಟ್ ನಗರದಿಂದ ಫಿಲಡೆಲ್ಫಿಯಾಗೆ ಬಂದು, ಗೃಹಬಳಕೆ ವಸ್ತುಗಳ ಮಳಿಗೆ ತೆರೆದನು. ಆದರೆ ಇವನ ವ್ಯಾಪಾರ ಕುದುರದೆ, ವಿಪರೀತ ಸಾಲವಾಗಿ ನಷ್ಟ ಅನುಭವಿಸಿದ; ಸಾಲ ತೀರಿಸಲಾಗದೆ ಸೆರೆಮನೆ ಸೇರಿದ.ಆಗ ರಬ್ಬರ್ ಗುಡಿಯರ್‌ನ ಗಮನ ಸೆಳೆಯಿತು. ತಾನು ತಯಾರಿಸುತ್ತಿದ್ದ ಅನೇಕ ಸಲಕರಣೆಗಳಿಗೆ ರಬ್ಬರ್ ಬಳಸಲಾಗಿದ್ದುದು ಅವನಿಗೆ ನೆನಪಾಯಿತು. ರಬ್ಬರ್‌ನಿಂದ ವಿವಿಧ ಗೃಹಬಳಕೆ ವಸ್ತುಗಳನ್ನು ತಯಾರಿಸಿ ವ್ಯಾಪಾರ ಮಾಡಬಹುದೆಂದು ನಿರ್ಧರಿಸಿದ. ಆದರೆ ರಬ್ಬರ್ ಬಿಸಿಯ ವಾತಾವರಣದಲ್ಲಿ ಕರಗಿ ದ್ರವವಾಗಿಯೂ, ತಣ್ಣಗಿನ ವಾತಾವರಣದಲ್ಲಿ ಬಿರುಕು ಬಿಟ್ಟುಕೊಳ್ಳುತ್ತಿದ್ದು, ಕಾಯಿಸಿದಾಗ ದುರ್ನಾತ ಹೊರಹೊಮ್ಮುತ್ತಿದ್ದುದು ಗುಡ್‌ಇಯರ್‌ಗೆ ನೆನಪಾಯಿತು. ಈ ನ್ಯೂನತೆಗಳನ್ನು ಸುಧಾರಿಸಲು ಗುಡಿಯರ್ 1834ರಲ್ಲಿ ನ್ಯೂಯಾರ್ಕ್‌ನ ರಬ್ಬರ್ ಕಂಪನಿಯೊಂದಕ್ಕೆ ಭೇಟಿಕೊಟ್ಟನು. ಕಂಪನಿಯ ಮಾಲೀಕರು ಒಂದರ ಮೇಲೊಂದು ಪೇರಿಸಿ ಶೇಖರಿಸಿಟ್ಟಿದ್ದ ರಬ್ಬರ್ ವಸ್ತುಗಳ ಗೋದಾಮಿಗೆ ಗುಡಿಯರ್‌ರವರನ್ನು ಕರೆದೊಯ್ದರು. ಆ ವಸ್ತುಗಳು ನೀರ್ಗುಳ್ಳೆಗಳಿಂದ ತುಂಬಿಕೊಂಡು, ಒಂದಕ್ಕೊಂದು ಅಂಟಿಕೊಂಡು ಘಾಟು ಮತ್ತು ದುರ್ನಾತವನ್ನು ಬೀರುತ್ತಿದ್ದವು.
ಗುಡ್ಇಯರ್ ಕೂಡಲೇ ತಮ್ಮ ಕಾರ್ಯವನ್ನು ಪ್ರಾರಂಭಿಸಿದರು. ತಮ್ಮ ಮನೆಯ ಅಡುಗೆಕೋಣೆಯಲ್ಲೇ ರಬ್ಬರನ್ನು ಸುಣ್ಣ, ನೈಟ್ರಿಕ್ ಆಮ್ಲ, ಟರ್ಪೆಂಟೈನ್ ಮೊದಲಾದ ರಾಸಾಯನಿಕಗಳೊಡನೆ ಬೆರೆಸಿ, ಕಾಯಿಸಿ, ಅದರಿಂದ ರಬ್ಬರನ್ನು ಹದಮಾಡಲು ಪ್ರಯತ್ನಿಸಿದರು. ರಬ್ಬರನ್ನು ಕಾಯಿಸಿದಾಗ ದುರ್ನಾತವುಂಟಾಗಿ ನೆರೆಹೊರೆಯವರು ಪೊಲೀಸರಿಗೆ ದೂರುಕೊಟ್ಟರು. ರಬ್ಬರ್‌ನ ದೋಷವನ್ನು ನಿವಾರಿಸಲು 5 ವರ್ಷ ನ್ಯೂಯಾರ್ಕ್, ಮ್ಯಾಸಚೂಸೆಟ್ಸ್, ಫಿಲಡೆಲ್ಫಿಯಾಗಳಿಗೆ ಹೋದನು. ಹಣದ ಕೊರತೆಯಾಗಿ, ಮನೆಯ ಪೀಠೋಪಕರಣಗಳನ್ನು, ತನ್ನ ಮಕ್ಕಳ ಶಾಲಾ ಪುಸ್ತಕಗಳನ್ನು ಒಂದೊಂದಾಗಿ ಮಾರಿದನು. ಆದರೂ ಪರಿಹಾರ ಸಿಗಲಿಲ್ಲ. ಸಾಲ ಮಾಡಿ, ತೀರಿಸಲಾಗದೆ ಜೈಲಿಗೆ ಹೋಗಬೇಕಾಯಿತು.
ವಲ್ಕನೈಸೇಷನ್
1837ರಲ್ಲಿ ಮ್ಯಾಸಚೂಸೆಟ್ಸ್‌ನಲ್ಲಿ ಅನೇಕ ರಬ್ಬರ್ ಕಾರ್ಖಾನೆಗಳು ಹುಟ್ಟಿಕೊಂಡ ಕಾರಣ ಗುಡ್‌ಇಯರ್ ಅಲ್ಲೇ ವಾಸ್ತವ್ಯ ಹೂಡಿದನು. ಅನೇಕ ಸೋಲುಗಳನ್ನನುಭವಿಸಿದ ಅವರಿಗೆ 1838ರಲ್ಲಿ ನಥಾನಿಯಲ್ ಹೇವರ್ಡ್ (Nathaniel Hayward) ಎಂಬುವರ ಪರಿಚಯವಾಯಿತು. ಇವರು ಮೊದಲು ರಬ್ಬರನ್ನು ಗಂಧಕದೊಡನೆ ಬೆರೆಸಿ, ಗಟ್ಟಿಮಾಡಿ, ಅದು ಕರಗದಂತೆ ಮಾಡಿದ್ದರು. ಕೆಲವರ ಪ್ರಕಾರ, ಒಮ್ಮೆ ಇವರಿಬ್ಬರಿಗೆ ವಾಗ್ವಾದವಾಗಿ, ಗುಡ್‌ಇಯರ್ ಕೋಪದಿಂದ, ತಮ್ಮ ಕೈಲಿದ್ದ ಗಂಧಕಮಿಶ್ರಿತ ರಬ್ಬರನ್ನು ಪಕ್ಕದಲ್ಲೇ ಉರಿಯುತ್ತಿದ್ದ ಒಲೆಗೆ ಬಿಸಾಡಿದರಂತೆ. ಅದು ಹೊತ್ತಿ ಉರಿಯದೆ, ಬಿಸಿಗೆ ಕರಗದೆ, ಚಳಿಗೆ ಬಿರಿಯದೆ, ಶೀತೋಷ್ಣ ಕಾಲಗಳೆರಡರಲ್ಲೂ ಒಂದೇ ಸ್ಥಿತಿಯಲ್ಲಿ ಉಳಿದಿತ್ತಂತೆ!
ಗಂಧಕಮಿಶ್ರಿತ ರಬ್ಬರನ್ನು ಕಾಯಿಸಿ, ಅದು ಹದಕ್ಕೆ ಬಂದಾಗ ಉರಿ ನಿಲ್ಲಿಸಿದರೆ ಅದು ಕರಕಲಾಗದೆ, ಅದನ್ನು ಬೇಕಾದ ಅನುಕೂಲಕರ ಆಕಾರಕ್ಕೆ ಅಳವಡಿಸಿಕೊಳ್ಳಬಹುದೆಂದು ಗುಡಿಯರ್ ಮನಗಂಡರು. ಹೀಗೆ ಆಕಸ್ಮಿಕ ಲೋಪದಿಂದ ಗುಡ್‌ಇಯರ್ ರಬ್ಬರನ್ನು ಹದಗೊಳಿಸುವ ವಿಧಾನವನ್ನು ಪತ್ತೆಮಾಡಿದ್ದರು. ತಮ್ಮ ಪ್ರಯೋಗವನ್ನು ಮುಂದುವರಿಸಿ, ರಬ್ಬರ್-ಗಂಧಕ ಮಿಶ್ರಣ ಸುಲಭವಾಗಿ, ಸುಗಮವಾಗಿ ವರ್ತಿಸುವ ಉಷ್ಣತೆಯನ್ನು ಮತ್ತು ಅದಕ್ಕೆ ಬೇಕಾದ ಕಾಲ ಮಿತಿಯನ್ನು ನಿರ್ಧರಿಸಿದರು. ರಬ್ಬರನ್ನು ಗಂಧಕದೊಡನೆ ಸಂಸ್ಕರಿಸಿದಾಗ ಅದು ಸ್ಥಿತಿಸ್ಥಾಪಕಗುಣ ಪಡೆದುಕೊಂಡು ಹೆಚ್ಚು ಶಕ್ತಿಶಾಲಿಯಾಗಿ ರೂಪುಗೊಳ್ಳುತ್ತದೆಂದು ಕಂಡುಹಿಡಿದ ಗುಡ್‌ಇಯರ್ ತಮ್ಮ ಸಂಶೋಧನೆಯನ್ನು ವಲ್ಕನ್ ಎಂಬ ರೋಮನರ ಅಗ್ನಿದೇವತೆಯ ಗೌರವಾರ್ಥವಾಗಿ ವಲ್ಕನೈಸೇಷನ್ (Vulcanization) ಎಂದು ಕರೆದರು. ವಲ್ಕನೈಸೇಷನ್ ಮೂಲಕ ಗುಡ್‌ಇಯರ್ ರಬ್ಬರನ್ನು ಜಲಾಭೇದ್ಯ (waterproof) ವಸ್ತುವಾಗಿ ಪರಿವರ್ತಿಸಿದರು.
ರಬ್ಬರನ್ನು ಹದಮಾಡಿ ಬಹುಮುಖ ಸಾಮರ್ಥ್ಯ (versatile)ದ ವಸ್ತುವಾಗಿ ಬದಲಿಸಿ, ಗಂಧಕ ಬೆರೆಸಿ 140°Cನಲ್ಲಿ, ಉಗಿಪಾತ್ರೆ (Autoclave)ಯಲ್ಲಿ ಬೇಯಿಸಬೇಕು. ಈ ಪ್ರಕ್ರಿಯೆಗೆ ವಲ್ಕನೈಸೇಷನ್ ಎಂದು ಹೆಸರು. ಆಗ ರಬ್ಬರ್ ಹದವಾಗಿಯೂ ಶಕ್ತಿಯುತವಾಗಿಯೂ ಬಾಳಿಕೆ ಬರುವುದರ ಜೊತೆಗೆ ಸ್ಥಿತಿ ಸ್ಥಾಪಕ ಗುಣವನ್ನೂ ಪಡೆಯುತ್ತದೆ. ಆಗ ಅದನ್ನು ನಿಮಗೆ ಬೇಕಾದ ಆಕಾರಕ್ಕೆ ಪರಿವರ್ತಿಸಬಹುದು.
ಗುಡ್‌ಇಯರ್ ರವರ ನಿರಂತರ ಪ್ರಯೋಗಗಳಿಂದ ಕಾರು, ಬಸ್ಸು, ಲಾರಿ ಮುಂತಾದ ವಾಹನಗಳ ಟೈರು- ಟ್ಯೂಬುಗಳು, ಜೀವರಕ್ಷಕ ಜಾಕೆಟ್‌ಗಳು, ಆಟದ ಚೆಂಡುಗಳು, ಪೆನ್ಸಿಲ್ ಗುರುತನ್ನು ಅಳಿಸುವ ರಬ್ಬರ್, ಕೈಚೀಲ ಮುಂತಾದ ವಿವಿಧ ಉಪಯುಕ್ತ ವಸ್ತುಗಳು ಸೃಷ್ಟಿಯಾದವು. ಇಷ್ಟೊಂದು ಮಹತ್ವದ ಸಂಶೋಧನೆ ನಡೆಸಿದರೂ ಗುಡ್‌ಇಯರ್ ಜೀವನದಲ್ಲಿ ಸುಖ ಕಾಣಲಿಲ್ಲ. 1860ರಲ್ಲಿ, ತಮ್ಮ 59ನೇ ವಯಸ್ಸಿನಲ್ಲಿ, 200,000 ಡಾಲರ್ ಸಾಲವನ್ನು ಹೊತ್ತು ನಿಧನರಾದರು. ಇಂದು ನಾವು ರಬ್ಬರ್‌ರಹಿತ ಜೀವನವನ್ನು ಊಹಿಸಲಾಗದು. ಇದಕ್ಕೆ ನಾವು ಚಾರ್ಲ್ಸ್ ಗುಡ್‌ಇಯರ್‌ರವಾರಿಗೆ ಚಿರಋಣಿಗಳಾಗಿರಬೇಕು.

No comments:
Post a Comment