ಕರ್ನಾಟಕದ ಕಾಡುಗಳು ಮತ್ತು ಜೀವವೈವಿಧ್ಯತೆ
ಸರ್ಕಾರಿ ಪದವಿಪೂರ್ವ ಕಾಲೇಜು
ನೆಲಮಂಗಲ
ಕರ್ನಾಟಕವು ಕೇವಲ ದಟ್ಟವಾದ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಿಗೆ ಮಾತ್ರವಲ್ಲದೆ, ವೈವಿಧ್ಯಮಯ ಪರಿಸರ ವಲಯಗಳಿಗೂ ಆಶ್ರಯ ತಾಣವಾಗಿದೆ. ಇವುಗಳಲ್ಲಿ ಪ್ರಮುಖವಾದುದೆಂದರೆ ಪೂರ್ವ ಮತ್ತು ಉತ್ತರ ಮೈದಾನ ಭಾಗಗಳಲ್ಲಿ ಕಂಡುಬರುವ ಮುಳ್ಳು ಪೊದೆ- ಕುರುಚಲು ಕಾಡುಗಳು (Deccan Thorn Scrub Forests) ಮತ್ತು ಪರ್ಣಪಾತಿ ಕಾಡುಗಳು. ಇವುಗಳನ್ನು ಪಾರಿಭಾಷಿಕವಾಗಿ 'ದಕ್ಷಿಣ ಉಷ್ಣವಲಯದ ಮುಳ್ಳು ಕಾಡುಗಳು' ಎಂದೂ ಕರೆಯಲಾಗುತ್ತದೆ. ಜಾಗತಿಕ ಹವಾಮಾನ ವೈಪರೀತ್ಯದ ಈ ಕಾಲದಲ್ಲಿ, ಅತ್ಯಂತ ಕಠಿಣ ಪರಿಸರದಲ್ಲೂ ಜೀವವೈವಿಧ್ಯವನ್ನು ಕಾಪಾಡಿಕೊಳ್ಳುವ ಈ ಒಣ ಭೂಪ್ರದೇಶಗಳ ಪಾತ್ರ ಅನನ್ಯವಾಗಿದೆ. ಕರ್ನಾಟಕದ ಮಳೆ ನೆರಳಿನ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಕಂಡುಬರುವ ಈ ಕಾಡುಗಳು ಮಣ್ಣಿನ ಸವಕಳಿ ತಡೆಗಟ್ಟುವಲ್ಲಿ, ಅಂತರ್ಜಲ ಮರುಪೂರಣದಲ್ಲಿ ಮತ್ತು ಸ್ಥಳೀಯ ಹವಾಮಾನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
೧. ಭೌಗೋಳಿಕ ವ್ಯಾಪ್ತಿ ಮತ್ತು ಹವಾಮಾನ
ಈ ಅರಣ್ಯಗಳು ಮುಖ್ಯವಾಗಿ ದಕ್ಷಿಣದ ಪ್ರಸ್ಥಭೂಮಿ ಹಾಗೂ ಕರ್ನಾಟಕದ ಮಳೆ ನೆರಳಿನ
ಪ್ರದೇಶಗಳಲ್ಲಿ (Rain-shadow regions) ಹರಡಿಕೊಂಡಿವೆ.
- ಪ್ರಮುಖ ಜಿಲ್ಲೆಗಳು: ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಚಿತ್ರದುರ್ಗ,ದಾವಣಗೆರೆ, ಬಿಜಾಪುರ, ಗದಗ,ಕೋಲಾರ,ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಕೆಲವು ಭಾಗಗಳು.
- ಮಳೆಯ ಪ್ರಮಾಣ: ಈ ಪ್ರದೇಶಗಳು ವಾರ್ಷಿಕವಾಗಿ
ಕೇವಲ 45 ರಿಂದ 70 ಸೆಂ.ಮೀ ಗಿಂತ ಕಡಿಮೆ ಮಳೆಯನ್ನು ಪಡೆಯುತ್ತವೆ.
- ಹವಾಮಾನ ಪರಿಸ್ಥಿತಿ: ಇಲ್ಲಿ ಬೇಸಿಗೆಯಲ್ಲಿ
ತಾಪಮಾನವು 38° ಸೆಲ್ಸಿಯಸ್‌ಗಿಂತಲೂ
ಹೆಚ್ಚಿರುತ್ತದೆ. ನವೆಂಬರ್‌ನಿಂದ ಏಪ್ರಿಲ್‌ವರೆಗೆ
ತೀವ್ರ ಶುಷ್ಕ ವಾತಾವರಣವಿದ್ದು, ತೇವಾಂಶದ ಕೊರತೆ
ಎದ್ದು ಕಾಣುತ್ತದೆ.
೨. ಸಸ್ಯ ವರ್ಗ ಮತ್ತು ಹೊಂದಾಣಿಕೆ
ಈ ಕಾಡುಗಳಲ್ಲಿನ ಸಸ್ಯಗಳು ನೀರಿನ ಅಭಾವ ಮತ್ತು ತೀವ್ರ ಸೂರ್ಯನ ತಾಪವನ್ನು ತಡೆದುಕೊಳ್ಳಲು
ವಿಶಿಷ್ಟವಾದ ಜೈವಿಕ ಹೊಂದಾಣಿಕೆಗಳನ್ನು ಪ್ರದರ್ಶಿಸುತ್ತವೆ. ಇಲ್ಲಿನ ಮರಗಳು ಸಾಮಾನ್ಯವಾಗಿ ಗಿಡ್ಡವಾಗಿದ್ದು (5 ರಿಂದ 10ಮೀಟರ್ ಎತ್ತರ), ಅಗಲವಾಗಿ ಹರಡಿಕೊಂಡಿರುತ್ತವೆ. ನೀರು ಆವಿಯಾಗುವುದನ್ನು ತಡೆಯಲು
ಇವುಗಳ ಎಲೆಗಳು ಚಿಕ್ಕದಾಗಿರುತ್ತವೆ ಅಥವಾ ಮುಳ್ಳುಗಳಾಗಿ ರೂಪಾಂತರಗೊಂಡಿರುತ್ತವೆ.
ಪ್ರಮುಖ
ಸಸ್ಯ ಪ್ರಭೇದಗಳು:
- ಜಾಲಿ ಪ್ರಭೇದಗಳು: ಕರಿಜಾಲಿ (Acacia nilotica), ಬಿಳಿಜಾಲಿ (Acacia leucophloea),
ಮತ್ತು
ಛತ್ರಿ ಆಕಾರದ ಹಂದರ ಹೊಂದಿರುವ ಬುಡ್ಡೆ ಜಾಲಿ (Acacia planifrons).
- ಕಮರ(Hardwickia binata):ಅತ್ಯಂತ ಬಲಿಷ್ಟ
ಮತ್ತು ಕಠಿಣವಾದ ಕಮರದ ಮರ ಶುಷ್ಕವಲಯದ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ.ಪ್ರಮುಖವಾಗಿ ಚಿತ್ರದುರ್ಗ
ಮತ್ತು ತುಮಕೂರಿನ ಉತ್ತರ ಭಾಗದ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
- ಕುರುಚಲು ಮತ್ತು ಕಳ್ಳಿ
ಗಿಡಗಳು: ವಿವಿಧ ಜಾತಿಯ
ಕಳ್ಳಿಗಳು (Euphorbia nivulia), ಬಾರೆ ಹಣ್ಣಿನ ಗಿಡ (Ziziphus), ಮತ್ತು ಹಿಪ್ಪೆ ಜಾತಿಗೆ ಸೇರಿದ ಸಸ್ಯಗಳು.
- ಪರಕೀಯ ಆಕ್ರಮಣಕಾರಿ ಬಳ್ಳಾರಿ ಜಾಲಿ ಸಸ್ಯ: ಬಯಲು ಸೀಮೆಯಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಸರ್ಕಾರದಿಂದ ಪರಿಚಯಿಸಲ್ಪಟ್ಟ
ಬಳ್ಳಾರಿ
ಜಾಲಿ (Prosopis juliflora), ಇದು ಸ್ಥಳೀಯ ಸಸ್ಯವರ್ಗಕ್ಕೆ ಸವಾಲಾಗಿ ಪರಿಣಮಿಸಿದೆ.
ಔಷಧೀಯ ಸಸ್ಯಗಳ ಭಂಡಾರ:
ಕರ್ನಾಟಕ ಅರಣ್ಯ ಇಲಾಖೆಯ ಅಧ್ಯಯನ ವರದಿಯ ಪ್ರಕಾರ, ಈ ಒಣ ಕಾಡುಗಳಲ್ಲಿ 64 ಕ್ಕೂ ಹೆಚ್ಚು ವಿಶಿಷ್ಟ ಔಷಧೀಯ ಸಸ್ಯಗಳನ್ನು ಗುರುತಿಸಲಾಗಿದೆ. ಇಲ್ಲಿನ 'ಫ್ಯಾಬೇಸಿ' (Fabaceae) ಕುಟುಂಬದ ಸಸ್ಯಗಳು ಮತ್ತು
ಶ್ರೀಗಂಧದಂತಹ ಒಣ ಹವಾಮಾನದ ಮರಗಳು ಆರ್ಥಿಕ ಹಾಗೂ ವೈದ್ಯಕೀಯ ಮಹತ್ವ ಹೊಂದಿವೆ
ಪ್ರಮುಖ ಔಷಧೀಯ ಸಸ್ಯಗಳು ಮತ್ತು ಅವುಗಳ ಉಪಯೋಗಗಳು
ಈ ಅರೆ-ಶುಷ್ಕ ವಲಯವು ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಗಿಡಮೂಲಿಕೆ ಔಷಧಕ್ಕಾಗಿ ಅವಲಂಬಿಸಿರುವ ಅಮೂಲ್ಯ ಸಸ್ಯ ಸಂಪತ್ತನ್ನು
ಹೊಂದಿದೆ. ಇಲ್ಲಿನ ಪ್ರಮುಖ ಸಸ್ಯಗಳು ಹೀಗಿವೆ:
|
ಸಸ್ಯದ ಸಾಮಾನ್ಯ ಹೆಸರು |
ವೈಜ್ಞಾನಿಕ ಹೆಸರು |
ಔಷಧೀಯ ಗುಣಗಳು ಮತ್ತು ಪ್ರಮುಖ ಉಪಯೋಗಗಳು |
|
ಹಿಂಗನ್ ಮರ (ಇಂಗುಡಿ) |
ಇದರ ಬೀಜದ
ಎಣ್ಣೆಯನ್ನು ಚರ್ಮ ರೋಗಗಳಿಗೆ ಮತ್ತು ತೊಗಟೆಯನ್ನು ಕೆಮ್ಮು ನಿವಾರಣೆಗೆ ಬಳಸಲಾಗುತ್ತದೆ. |
|
|
ಡಿಕ್ಕಾಮಲ್ಲಿ (ಬಿಕ್ಕೆ ಗಿಡ) |
ಈ ಗಿಡದಿಂದ
ಸಿಗುವ ರಸವನ್ನು ಉದರ ಶೂಲೆ (ಹೊಟ್ಟೆನೋವು) ಮತ್ತು ಜೀರ್ಣಕ್ರಿಯೆಯ ತೊಂದರೆಗಳ ನಿವಾರಣೆಗೆ
ಬಳಸಲಾಗುತ್ತದೆ.ಈ ಸಸ್ಯದ ಮಾಗಿದ ಹಣ್ಣುಗಳು ಬಹಳ ರುಚಿಕರ ಮತ್ತು ಸಮೃದ್ಧ ಪೌಷ್ಟಿಕಾಂಶದ
ಆಗರ |
|
|
ಕಾಡು ಜೀರಿಗೆ / ಕರಿಜೀರಿಗೆ |
ಹೊಟ್ಟೆಯ
ಕ್ರಿಮಿಗಳನ್ನು (worms) ನಾಶಪಡಿಸಲು ಇದರ ಬೀಜಗಳು
ಅತ್ಯಂತ ಪರಿಣಾಮಕಾರಿ. |
|
|
ಯಕೃತ್ತಿನ (Liver) ರಕ್ಷಣೆ ಮತ್ತು ಕಾಮಾಲೆ (Jaundice) ರೋಗದ ಚಿಕಿತ್ಸೆಯಲ್ಲಿ ಇದರ ಇಡೀ ಸಸ್ಯವನ್ನು ಮಜ್ಜಿಗೆಯೊಂದಿಗೆ ಬಳಸಲಾಗುತ್ತದೆ. |
||
|
ನೇಗಿಲ ಮುಳ್ಳು (ಗೊಕ್ಷುರ) |
ಮೂತ್ರಪಿಂಡದ
ಕಲ್ಲುಗಳ ನಿವಾರಣೆಗೆ ಮತ್ತು ಮೂತ್ರನಾಳದ ಸೋಂಕನ್ನು ಗುಣಪಡಿಸಲು ಇದರ ಮುಳ್ಳು ಮತ್ತು ಬೇರನ್ನು
ಬಳಸುತ್ತಾರೆ. |
|
|
ಶ್ವಾಸಕೋಶದ
ಕಾಯಿಲೆಗಳು, ತೀವ್ರ ಕೆಮ್ಮು ಮತ್ತು ಉಬ್ಬಸದ
ನಿವಾರಣೆಗೆ ಇದರ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ನೀಡಲಾಗುತ್ತದೆ. |
||
|
ದೇಹದ
ರೋಗನಿರೋಧಕ ಶಕ್ತಿ ಹೆಚ್ಚಿಸಲು, ನರಗಳ ದೌರ್ಬಲ್ಯ ಮತ್ತು
ಆತಂಕವನ್ನು ದೂರ ಮಾಡಲು ಇದರ ಬೇರುಗಳನ್ನು ಬಳಸಲಾಗುತ್ತದೆ. |
||
|
ಚಿತ್ರಮೂಲ |
ಜೀರ್ಣಶಕ್ತಿ
ಹೆಚ್ಚಿಸಲು ಮತ್ತು ವಾತ ರೋಗಗಳಿಂದ ಉಂಟಾಗುವ ಕೀಲು ನೋವುಗಳನ್ನು ಕಡಿಮೆ ಮಾಡಲು ಉಪಯುಕ್ತ. |
|
|
ಕಾಡು ಹರಳು (ನೆಲ ಹರಳು) / ತುರಕತ್ತಿ |
ಇದರ
ಎಣ್ಣೆಯನ್ನು ಚರ್ಮದ ಉರಿಯೂತ ಮತ್ತು ಗಾಯಗಳನ್ನು ವಾಸಿ ಮಾಡಲು ಹಾಗೂ ಮಲಬದ್ಧತೆ ನಿವಾರಣೆಗೆ
ಬಳಸಲಾಗುತ್ತದೆ.ಬೀಜದ ಎಣ್ಣೆಯನ್ನು ಬಯೋಡೀಸಲ್ ಆಗಿ ಬಳಸಬಹುದು |
೩. ವನ್ಯಪ್ರಾಣಿ ಸಂಕುಲ (Fauna)
ನೋಡಲು ಬರಡಾಗಿ
ಕಾಣುವ ಈ ಮುಳ್ಳು ಕಾಡುಗಳು ಅಸಲಿಗೆ ಅತ್ಯಂತ ಅಪರೂಪದ ವನ್ಯಜೀವಿಗಳ ಆವಾಸಸ್ಥಾನವಾಗಿವೆ.
- ಸಸ್ತನಿಗಳು: ಕೃಷ್ಣಮೃಗಗಳು (Blackbuck), ನಾಲ್ಕು ಕೊಂಬಿನ ಜಿಂಕೆ (Chousingha), ತೋಳಗಳು, ನರಿಗಳು,
ಕತ್ತೆ ಕಿರುಬ,ಕಾಡುಬೆಕ್ಕು ಮತ್ತು ಕರಡಿಗಳು ಇಲ್ಲಿನ ಪ್ರಮುಖ ಆಕರ್ಷಣೆ.
- ಪಕ್ಷಿ ಸಂಕುಲ: ಈ ವಲಯದಲ್ಲಿ ಸುಮಾರು 350 ಕ್ಕೂ ಹೆಚ್ಚು ಪಕ್ಷಿ
ಪ್ರಭೇದಗಳನ್ನು ದಾಖಲಿಸಲಾಗಿದೆ.
- ಗ್ರೇಟ್ ಇಂಡಿಯನ್ ಬಸ್ಟರ್ಡ್
(ಹೆಜ್ಜಾರ್ಲೆ): ಅಳಿವಿನ
ಅಂಚಿನಲ್ಲಿರುವ ಈ ಬೃಹತ್ ಪಕ್ಷಿಗೆ ಬಳ್ಳಾರಿಯ ಸಿರಗುಪ್ಪ ಭಾಗದ ಮುಳ್ಳು ಕುರುಚಲು
ಬಯಲುಗಳೇ ಕೊನೆಯ ಆಶ್ರಯ ತಾಣವಾಗಿದೆ.
- ಜೆರ್ಡಾನ್ಸ್ ಕೋರ್ಸರ್ (Jerdon's Courser): ಈ ಅರೆ-ಶುಷ್ಕ ವಲಯದಲ್ಲಿ ಮಾತ್ರ ಕಾಣಸಿಗುವ ಅತ್ಯಂತ ಅಪರೂಪದ ನಿಶಾಚರ ಪಕ್ಷಿ.
೪. ಪ್ರಮುಖ ಸಂರಕ್ಷಿತ ಪ್ರದೇಶಗಳು
ಕರ್ನಾಟಕ
ಸರ್ಕಾರವು ಈ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಕೆಲವು ಪ್ರಮುಖ ವನ್ಯಜೀವಿ ಧಾಮಗಳನ್ನು,ಮೀಸಲು ಮತ್ತು ರಾಜ್ಯ ಅರಣ್ಯಗಳನ್ನು ಘೋಷಿಸಿ ನಿರ್ವಹಣೆ ಮಾಡುತ್ತಿದೆ.
- ದರೋಜಿ ಕರಡಿ ಧಾಮ
(ಬಳ್ಳಾರಿ): ಏಷ್ಯಾದಲ್ಲೇ ಮೊದಲ
ಬಾರಿಗೆ ಕರಡಿಗಳಿಗಾಗಿ ಸ್ಥಾಪಿತವಾದ ಅಭಯಾರಣ್ಯ, ಇದು ಮುಳ್ಳು ಮತ್ತು
ಬಂಡೆಗಳಿಂದ ಕೂಡಿದ ಕುರುಚಲು ಪರಿಸರದಲ್ಲಿದೆ.
- ಬುಕ್ಕಾಪಟ್ನ-ಹಾಗಲವಾಡಿ
ಕೃಷ್ಣಮೃಗ ವನ್ಯಜೀವಿ ಧಾಮ:ತುಮಕೂರು ಜಿಲ್ಲೆಯ ಶಿರಾ ಮತ್ತು ಗುಬ್ಬಿ ತಾಲ್ಲೂಕಿನಲ್ಲಿ
ವ್ಯಾಪಿಸಿರುವ ಈ ಅರಣ್ಯವು ಬಯಲುಸೀಮೆಯ ಅತ್ಯಂತ ದೊಡ್ಡ ಅರಣ್ಯ ಪ್ರದೇಶವಾಗಿದೆ. ಇದು ಪ್ರಮುಖ ಕುರುಚಲು ಕಾಡಾಗಿದ್ದು, ನೂರಾರು ಕೃಷ್ಣಮೃಗಗಳಿಗೆ ರಕ್ಷಣೆ ನೀಡುತ್ತದೆ.
- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ :ಬೆಂಗಳೂರಿಗೆ ಹೊಂದಿಕೊಂಡಿರುವ ಇದರ ಒಂದು ಭಾಗವು ಒಣ ಉಷ್ಣವಲಯದ ಮುಳ್ಳು ಮತ್ತು ಪರ್ಣಪಾತಿ
ಕಾಡುಗಳಿಂದ ಕೂಡಿದೆ.ಈ ವಲಯದಲ್ಲಿ ಆನೆಗಳು ಕಂಡುಬರುವ ಏಕೈಕ ಅರಣ್ಯವಾಗಿದೆ.
- ದೇವರಾಯನ ದುರ್ಗ ರಾಜ್ಯ ಅರಣ್ಯ-ತುಮಕೂರು ನಗರಕ್ಕೆ ಹೊಂದಿಕೊಂಡಂತಿರುವ
ಈ ಅರಣ್ಯದ ಕೆಲವು ಭಾಗಗಳಲ್ಲಿ ಶುಷ್ಕ ವಲಯದ ನಿತ್ಯಹರಿದ್ವರ್ಣ ಕಾಡುಗಳಿರುವುದು ವಿಶೇಷ.ಶಿಂಷಾ
ಮತ್ತು ಜಯಮಂಗಲಿ ನದಿಗಳ ಮೂಲವು ಈ ಅರಣ್ಯ ಪ್ರದೇಶದಲ್ಲಿದೆ.
- ಜಯಮಂಗಲಿ ಕೃಷ್ಣಮೃಗ ಧಾಮ(ಮೈದನಹಳ್ಳಿ)-ತುಮಕೂರು ಜಿಲ್ಲೆಯ ಮಧುಗಿರಿ
ತಾಲ್ಲೂಕಿನಲ್ಲಿರುವ ಹುಲ್ಲುಗಾವಲು ಸಹಿತ ಕುರುಚಲು ಕಾಡು ಕೃಷ್ಣಮೃಗಗಳ ಸಹಜ ಆವಾಸವಾಗಿದೆ
- ಚಿಂಚೋಳಿ ವನ್ಯಜೀವಿಧಾಮ-ಕಲ್ಬುರ್ಗಿ ಜಿಲ್ಲೆಯ ಈ ಅರಣ್ಯವು
ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಘೋಷಣೆಯಾದ
ಶುಷ್ಕ ವಲಯದ ವನ್ಯಜೀವಿಧಾಮ.ಅಪರೂಪದ ಸಸ್ಯವರ್ಗ ಮತ್ತು ವನ್ಯ ಪ್ರಾಣಿಗಳಿಗೆ ಆಶ್ರಯ
ನೀಡಿದೆ.
- ಸಂಡೂರು ಮೀಸಲು ಅರಣ್ಯ-ಬಳ್ಳಾರಿ ಜಿಲ್ಲೆಯಲ್ಲಿರುವ ವಿಶಿಷ್ಠ
ಜೀವವೈವಿದ್ಯ ತಾಣ,ಪರ್ಣಪಾತಿ ಕಾಡುಗಳನ್ನು ಮತ್ತು ಕೆಲವು ಭಾಗಗಳಲ್ಲಿ ಶುಷ್ಕವಲಯದ ನಿತ್ಯ ಹರಿದ್ವರ್ಣ
ಕಾಡುಗಳನ್ನು ಒಳಗೊಂಡಿರುವುದು ವಿಶೇಷ.ʼಬಯಲು ಸೀಮೆಯ ಮಲೆನಾಡುʼಎಂಬುದಾಗಿ ಈ ಅರಣ್ಯವು ಪ್ರಸಿದ್ಧವಾಗಿದೆ.
- ಮಾರಿಕಣಿವೆ ರಾಜ್ಯ ಅರಣ್ಯ-ಚಿತ್ರದುರ್ಗ ಜಿಲ್ಲೆಯ ಹಿರಿಯೂರು
ತಾಲ್ಲೂಕಿನಲ್ಲಿರುವ ಈ ಅರಣ್ಯ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹೊಂದಿಕೊಂಡಿದೆ.ಪರ್ಣಪಾತಿ ಮರಗಳನ್ನು
ಹೊಂದಿರುವ ಈ ಅರಣ್ಯವು ವಾಣಿವಿಲಾಸ ಸಾಗರದ ಹಿನ್ನೆಲೆಯಲ್ಲಿ ನಯನ ಮನೋಹರವಾಗಿ ಕಂಗೊಳಿಸುತ್ತದೆ.
- ಚೌಡ್ಲಾಪುರ ಮೀಸಲು ಅರಣ್ಯ(ಕೋಣನ ಕಾವಲು)-ತುಮಕೂರು ಜಿಲ್ಲೆಯ ತಿಪಟೂರು
ತಾಲ್ಲೂಕಿನಲ್ಲಿ ವ್ಯಾಪಿಸಿರುವ ಈ ಅರಣ್ಯ ಪ್ರದೇಶವು ಸಮೃಧ್ಧ ಹುಲ್ಲುಗಾವಲು,ಪರ್ಣಪಾತಿ,ಕುರುಚಲು
ಸಸ್ಯವರ್ಗ ಮತ್ತು ವಿಶಿಷ್ಟ ವನ್ಯಪ್ರಾಣಿಗಳ ಆವಾಸ ಸ್ಥಾನವಾಗಿದೆ.
- ರಾಣೆಬೆನ್ನೂರು ಕೃಷ್ಣಮೃಗ ಧಾಮ-ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿರುವ ಈ ಅರಣ್ಯವು ಕೃಷ್ಣಮೃಗಗಳ ಸಂರಕ್ಷಣೆಗೆ ವನ್ಯ ಜೀವಿ ಧಾಮವಾಗಿ ಘೋಷಣೆಯಾದ ಮೊದಲ ಅರಣ್ಯ ಪ್ರದೇಶ.ಸರಿ-ಸುಮಾರು 6000 ಕೃಷ್ಣಮೃಗಗಳಿಗೆ ಆಶ್ರಯ ನೀಡಿದೆ.
ಇಂದು ಕರ್ನಾಟಕದ
ಮುಳ್ಳು ಪೊದೆ ಕಾಡುಗಳು ತೀವ್ರ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆ:
- ನಗರೀಕರಣ ಮತ್ತು ಕೃಷಿ
ವಿಸ್ತರಣೆ: ಈ ಕಾಡುಗಳನ್ನು
"ಬಂಜರು ಭೂಮಿ" ಎಂದು ತಪ್ಪು ತಿಳಿಯಲಾಗುತ್ತಿದ್ದು, ಇವುಗಳನ್ನು ಕೃಷಿ ಮತ್ತು ಕೈಗಾರಿಕೆಗಳಿಗಾಗಿ
ನಾಶಪಡಿಸಲಾಗುತ್ತಿದೆ.
- ಅತಿಯಾದ ಮೇಯಿಸುವಿಕೆ: ಸ್ಥಳೀಯ ಜಾನುವಾರುಗಳ ಅತಿಯಾದ
ಮೇಯಿಸುವಿಕೆಯಿಂದಾಗಿ ಸಸ್ಯಗಳ ಪುನರುತ್ಪಾದನೆ ಕುಂಠಿತಗೊಳ್ಳುತ್ತಿದೆ.
- ಕಟ್ಟಿಗೆ ಸಂಗ್ರಹಣೆ: ಉರುವಲು ಮತ್ತು ಬೇಲಿಗಾಗಿ
ಮುಳ್ಳಿನ ಗಿಡಗಳನ್ನು ಕಡಿಯುವುದು ಹೆಚ್ಚಾಗಿದೆ.
ಕೊನೆಯದಾಗಿ ಕರ್ನಾಟಕದ ಮುಳ್ಳು ಪೊದೆ ಕಾಡುಗಳು ಕೇವಲ ಒಣ ಭೂಮಿಯಲ್ಲ, ಅವು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ, ಅಂತರ್ಜಲ ವೃದ್ಧಿಸುವ ಮತ್ತು ಅಪರೂಪದ ಜೀವಸಂಕುಲವನ್ನು ಪೊರೆಯುವ ಪ್ರಕೃತಿಯ ವಿಶಿಷ್ಟ ತಾಣಗಳಾಗಿವೆ. ಇವುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ.


No comments:
Post a Comment