ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Thursday, June 4, 2026

ವಿಶ್ವ ಪರಿಸರ ದಿನಾಚರಣೆ - 2026

 ವಿಶ್ವ ಪರಿಸರ  ದಿನಾಚರಣೆ - 2026

ಲೇಖಕರು : ಬಿ.ಎನ್. ರೂಪ,

ಸಹಶಿಕ್ಷಕರು, ಕೆ.ಪಿ.ಎಎಸ್‌

ಜೀವನ್‌ ಭೀಮ ನಗರ,

ಬೆಂಗಳೂರು ದಕ್ಷಿಣ ವಲಯ -4

 

ಹಸಿರು ವೈಭವವನ್ನು ಹೊತ್ತಿರುವ ಮಾತೆ,

ನಮ್ಮೆಲ್ಲರ ಜೀವದಾತೆ,

ಸಕಲ ಜೀವರಾಶಿಗಳಿಗೆ ಅವಾಸದಾತೆ,

ನೀ ನಮ್ಮ ಭೂಮಾತೆ.

 

ಹರಿಯುವ ನೀರಿನ ನಿನಾದ,

ಬೀಸುವ ತಣ್ಣನೆ ಗಾಳಿ,

ವಸುಂಧರೆ ನಿನಗೆ ಸಾಟಿ ಉಂಟೆ,

ನೀ ನಮ್ಮ ಭೂಮಾತೆ.

ವೈವಿಧ್ಯಮಯ ಜೀವಗಳಿಗೆ ಆಸರೆ ನೀಡುವ ಮಾತೆ,

ಯುಗಯುಗಗಳಿಂದ ನಿನ್ನನ್ನು ನೀನೇ ಪುನಶ್ಚೇತನ ನಡೆಸಿಕೊಂಡು ಬಂದಾತೆ,

ನಿನ್ನ ಸಾಗರ ಸಮುದ್ರ ಆಳ ಅಗಲಕ್ಕೆ ಸಾಟಿ ಉಂಟೇ ? ಮಿತಿ ಉಂಟೇ ?

ನೀ ನಮ್ಮ ಭೂಮಾತೆ.

ನಿನ್ನಲ್ಲಿರುವ ವೈವಿಧ್ಯಪೂರ್ಣ ಪರಿಸರವ್ಯವಸ್ಥೆಗಳಿಗೆ ಎಣೆಯುಂಟೆ ?

ಆಕಾಶದಲ್ಲಿ ನಕ್ಷತ್ರವನ್ನು ಎಣಿಸುವುದುಂಟೆ ?

ಮಾಲಿನ್ಯದಿಂದ ನಿನ್ನ ಗರ್ಭಕ್ಕೆ ಕಂಟಕ ಎಸಗಿ ಉಳಿದವರುಂಟೆ ?

ನೀ ನಮ್ಮ ಭೂಮಾತೆ.

ಪರಿಸರ ಎಂಬ ಪದವೇ ಅವರ್ಚನೀಯ ರೋಮಾಂಚನವನ್ನು ಉಂಟುಮಾಡುತ್ತದೆ. ಹಸಿರನ್ನೇ ಮಾಲೆಯಾಗಿ ಧರಿಸಿರುವ, ಪಕ್ಷಿಗಳ ಚಿಲಿಪಿಲಿ, ವಿವಿಧ ಪ್ರಾಣಿಗಳ ಕಲರವ, ಹರಿಯುವ ನೀರಿನ ಝಳ, ಆಹ್ಲಾದಕರ ಗಾಳಿಯ ಹರಿವು, ವೈವಿಧ್ಯಮಯ ಸಸ್ಯವರ್ಗ, ಒಂದೇ ಎರಡೇ ಸುಂದರ ಬನಸಿರಿಯನ್ನು ಹೊಂದಿರುವ ಒಂದು ಕಾಡನ್ನು ಕಣ್ಮುಚ್ಚಿ ಊಹಿಸಿಕೊಳ್ಳಿ. ನಮ್ಮ ಭೂಮಿಯ ಮೇಲೆ ಎಷ್ಟೋ ಜೀವಿಗಳು ಹುಟ್ಟಿದವು ಅಸ್ತಿತ್ವದಲ್ಲಿದ್ದವು ಹಾಗೂ ವಿಕಸಿತಗೊಂಡಿದ್ದವು ಎಂಬುದನ್ನು ಸಾಕಷ್ಟು ಪುರಾವೆಗಳ ಮೂಲಕ ತಿಳಿದುಕೊಂಡಿದ್ದೇವೆ. ಆದರೆ, ನಾವು ಕೈಗೊಳ್ಳುತ್ತಿರುವ ಚಟುವಟಿಕೆಗಳಿಂದ ಆಗುತ್ತಿರುವ ಮಹತ್ತರ ಬದಲಾವಣೆಗಳನ್ನು ಇತ್ತೀಚಿನ ವಿದ್ಯಮಾನಗಳನ್ನು ವೀಕ್ಷಿಸಿದಾಗ ಬೇರೆ ಯಾವುದೇ ಜೀವಿಸಮೂಹ ಇಂಥ ವಿನಾಠಶವನ್ನು ಮಾಡಲು ಸಾಧ್ಯವಿಲ್ಲ ಎನಿಸುತ್ತದೆ.

ನಾವು ಅಸ್ತಿತ್ವಕ್ಕೆ ಬರುವ ಮುನ್ನವೂ ಭೂಮಿ ತನ್ನದೇ ಆದ ವಿಧಿವಿಧಾನಗಳಿಂದ ತನ್ನನ್ನು ತಾನು ಪುನಶ್ಚೇತನ, ಮರುಪೂರಣಗೊಳಿಸಿಕೊಂಡಿರುವುದನ್ನು, ದಶಕಗಳಿಂದ ತನ್ನನ್ನು ತಾನು ಸಂಭಾಳಿಸಿಕೊಂಡು ಅಸ್ತಿತ್ವದಲ್ಲಿರುವುದನ್ನು ನಾವು ವೀಕ್ಷಿಸಿದ್ದೇವೆ. ನಮ್ಮ ಹಸ್ತಕ್ಷೇಪ ಇಲ್ಲದೆಯೇ ಭೂಮಿಯು ತನ್ನನ್ನು ತಾನು ಮರುಪೂರಣ ಹಾಗೂ ಪುನಶ್ಚೇತನಗೊಳಿಸಿಕೊಂಡಿರುವುದಕ್ಕೆ ಕೋವಿಡ್ 19ರ ಸಂದರ್ಭದಲ್ಲಿನ  ನಮ್ಮ ಗೃಹಬಂಧನವೇ ಸ್ಪಷ್ಟ ನಿದರ್ಶನ ಹಾಗೂ ಸಾಕ್ಷಿಯಾಗಿದೆ.

ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯ, ಏರುತ್ತಿರುವ ಸಮುದ್ರದ ಮಟ್ಟ, ಜಾಗತಿಕ ತಾಪಮಾನ ಹೆಚ್ಚಳ, ಪ್ಲಾಸ್ಟಿಕ್‌ ಮಾಲಿನ್ಯ, ಕಾಡ್ಗಿಚ್ಚು,‌ ಮರುಭೂಮೀಕರಣ, ಶಾಖದ ಅಲೆಗಳು, ಕರಗುತ್ತಿರುವ ಹಿಮನದಿಗಳು ಅರಣ್ಯನಾಶ, ಬೆಳವಣಿಗೆಯ ಹೆಸರಿನಲ್ಲಿ ಮರಗಳ ಮಾರಣ ಹೋಮ …………………ಹೀಗೆ ಮಾನವ ಕೈಗೊಂಡಿರುವ ಹಲವಾರು ವಿನಾಶಕಾರಿ ಕಾರ್ಯಕ್ರಮಗಳು ಇಂದಿನ ಹವಾಮಾನ ವೈಪರೀತ್ಯ ಹಾಗೂ ಇನ್ನಿತರ ಹಲವಾರು ಅನಪೇಕ್ಷಿತ ಬದಲಾವಣೆಗಳಿಗೆ ಕಾರಣ ಎನ್ನಬಹುದು. ಹೀಗಾಗಿ, ವಿಶ್ವದಾದ್ಯಂತ ಪರಿಸರವನ್ನು ರಕ್ಷಿಸಲು ಜಾಗತಿಕ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ “ವಿಶ್ವಪರಿಸರದಿನ“ ಅಂತರರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಜಾಗತಿಕ ಆಚರಣೆಯಾಗಿದೆ.

ವಿಶ್ವ ಪರಿಸರ ದಿನಾಚರಣೆ ಏಕೆ?

ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದೆ. 1972 ರಲ್ಲಿ ವಿಶ್ವಸಂಸ್ಥೆಯು ಸ್ಟಾಕ್ಹೋಂನಲ್ಲಿ ನಡೆದ ಮಾನವ ಪರಿಸರ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು ಅಂಗೀಕರಿಸಿತು. ಒಂದು ವರ್ಷದ ನಂತರ, 1973ರಲ್ಲಿ ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರ ಸಂರಕ್ಷಣೆ, ಪುನಶ್ಚೇತನ, ಪರಿಸರ ಉಳಿವಿಗಾಗಿ ಕಾಳಜಿ, ಕಾಡುಗಳನ್ನು ಪುನಸ್ಥಾಪಿಸುವುದು, ಮಾಲಿನ್ಯವನ್ನು ಕಡಿಮೆಮಾಡುವುದು, ಮೂಲದಲ್ಲಿ ಮಾಲಿನ್ಯವನ್ನು ತಡೆಗಟ್ಟಿ, ಕಡಿಮೆ ಮಾಡುವುದು, ಮಣ್ಣಿನ ಸವಕಳಿಯನ್ನು ತಡೆದು ಮರುಭೂಮೀಕರಣವನ್ನು ತಪ್ಪಿಸುವುದು, ಜನಜಾಗೃತಿ ಮೂಡಿಸುವುದು, ಇವು ಈ ಆಚರಣೆಯ ಧ್ಯೇಯವಾಗಿವೆ. ಪ್ಲಾಸ್ಟಿಕ್‌ ಮಾಲಿನ್ಯ ತಡೆಗಟ್ಟುವುದು ಜೀವವೈವಿಧ್ಯವನ್ನು ಕಾಪಾಡುವುದು. ಹೀಗೆ ಹಲವಾರು ಅಂಶಗಳನ್ನು ಇದು ಒಳಗೊಂಡಿದೆ. ಜನಸಾಮಾನ್ಯರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಹಾಗೂ ನಮ್ಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ, ಕಳಕಳಿಯನ್ನು ಬಡಿದೆಬ್ಬಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ.

 ಪ್ರತಿವರ್ಷ  ಒಂದು ನಿರ್ದಿಷ್ಟ  ಧ್ಯೇಯದೊಂದಿಗೆ ಜಾಗತಿಕ ಮಟ್ಟದಲ್ಲಿ  ಆಚರಣೆ ನಡೆಯುತ್ತಿದ್ದು, ಅದರಂತೆ ಈ 2026ರ ವಿಶ್ವ ಪರಿಸರ ದಿನದ ಆಚರಣೆಯು ಜೂನ್ 5, 2026ರಂದು ಶುಕ್ರವಾರ ನಡೆಯಲಿದ್ದು, ಹವಾಮಾನ ಕ್ರಮ ಮತ್ತು ಜಾಗತಿಕ ಸುಸ್ಥಿರತೆಯ ಗುರಿಗಳತ್ತ ಪ್ರಗತಿಯನ್ನು ವೇಗಗೊಳಿಸುವತ್ತ ಪ್ರಾಥಮಿಕ ಗಮನವನ್ನು ಹೊಂದಿ, ಅಜೆರ್ಬೈಜಾನ್‌ ನಲ್ಲಿ ಇದನ್ನು ಆಯೋಜಿಸಲಾಗಿದೆ. 53 ನೇ ವಾರ್ಷಿಕ ಕಾರ್ಯಕ್ರಮವು ತುರ್ತು ಹವಾಮಾನ ಸಂಕೇತಗಳ ಮೇಲೆ ಕೇಂದ್ರೀಕರಿಸುತ್ತದೆ ಉದಾಹರಣೆಗೆ, ಏರುತ್ತಿರುವ ತಾಪಮಾನ ಮತ್ತು ನವೀಕರಿಸಬಹುದಾದ ಶಕ್ತಿ ಮತ್ತು ಪರಿಸರವ್ಯವಸ್ಥೆಯ ಪುನಃಸ್ಥಾಪನೆಯ ಕಡೆಗೆ ಪರಿವರ್ತನೆಯನ್ನು ಚಾಲನೆ ಮಾಡುತ್ತದೆ.

ನಮ್ಮ ಗ್ರಹವು ಯಾವುದೇ ಮುನ್ಸೂಚನೆಯನ್ನು ನೀಡುವುದಿಲ್ಲ. ನಮ್ಮ ಗ್ರಹ ಯಾವುದೇ ಮಧ್ಯಸ್ಥಿಕೆಗೆ ಸಿದ್ಧವಿಲ್ಲ. ನಮ್ಮ ವಿನಾಶಕಾರಿ ಕಾರ್ಯಗಳಿಗೆ ಸರಿಯಾದ ಉತ್ತರವನ್ನು ನಮ್ಮ ಗ್ರಹವು ಏರುತ್ತಿರುವ ತಾಪಮಾನ, ಶಾಖದ ಬಿಸಿಅಲೆಗಳು, ಸಮುದ್ರ ಮಟ್ಟದ ಏರುವಿಕೆ, ಕರಗುತ್ತಿರುವ ಹಿಮನದಿಗಳ ರೂಪದಲ್ಲಿ ಕೊಟ್ಟಿದೆ. ವಿವಿಧ ರೀತಿಯ ಕಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಇವೆಲ್ಲವೂ ಮಾನವನ ಜನಾಂಗಕ್ಕೆ ಸವಾಲೊಡ್ಡುವ ಮಟ್ಟಕ್ಕೆ ಬಂದು ನಿಂತಿವೆ.  ಇತರೆ ಜೀವಿಗಳು ನಮ್ಮ ಆಹಾರವನ್ನು ಭಕ್ಷಿಸಬಾರದು ಎಂದು ನಾವು ಮಣ್ಣಿಗೆ ಹಾಗೂ ನಮ್ಮ ಆಹಾರಕ್ಕೆ ವಿಷವನ್ನು ಸೇರಿಸುತ್ತಿದ್ದೇವೆ. ಈ ವಿಷವು ರಾಸಾಯನಿಕ ರಸಗೊಬ್ಬರ, ಕೀಟನಾಶಕ, ಕಳೆನಾಶಕ, ಶಿಲೀಂದ್ರನಾಶಕ ಇತ್ಯಾದಿ ರೂಪಗಳಲ್ಲಿ ಮಣ್ಣಿಗೆ ಸೇರುತ್ತಿವೆ. ಈ ವಸ್ತುಗಳು ನೀರು ಹಾಗೂ ಮಣ್ಣನ್ನು ಮಲೀನಗೊಳಿಸುವುದಲ್ಲದೆ, ಜೈವಿಕ ಸಂವರ್ಧನೆಯಂಥ ವಿದ್ಯಮಾನಗಳಿಗೆ ಎಡೆಮಾಡಿಕೊಡುತ್ತಿವೆ.

ಈ ಕೆಳಕಂಡ ಕೆಲವು ಮಾರ್ಗಗಳನ್ನು ಅನುಸರಿಸುವುದರಿಂದ ಪರಿಸರದ ಸಂರಕ್ಷಣೆಯನ್ನು ಮಾಡಬಹುದಾಗಿದೆ,

1) ನವೀಕರಿಸಬಹುದಾದ ಶಕ್ತಿಯ ಆಕರಗಳನ್ನು ಬಳಸುವುದು ಉದಾಹರಣೆಗೆ, ಪವನಶಕ್ತಿ, ಸೌರಶಕ್ತಿ ಇತ್ಯಾದಿ.

2) ಕಾಡುಗಳನ್ನು ಮರುಸ್ಥಾಪಿಸುವುದು, ನಗರಗಳಲ್ಲಿ ಹೆಚ್ಚು ಹಸಿರನ್ನು ಬೆಳೆಯುವುದಕ್ಕಾಗಿ ನಗರವನ್ನು
        ಮರುವಿನ್ಯಾಸಗೊಳಿಸುವುದು.

3) ಪ್ಲಾಸ್ಟಿಕ್‌ ಬೇಡ ಎಂಬ ಧ್ಯೇಯವಾಕ್ಯವನ್ನು ಅಳವಡಿಸಿ ಈ ಪರಿಪಾಠವನ್ನು ಪಾಲಿಸುವುದು. ಪ್ಲಾಸ್ಟಿಕ್‌ ಗಳಿಗೆ
     ಪರ್ಯಾಯವಾದ ಗಾಜು, ಪಿಂಗಾಣಿ, ಬಟ್ಟೆಯಿಂದ ತಯಾರಿಸಿದ ವಸ್ತುಗಳನ್ನು ಬಳಸುವುದು. ಏಕಬಳಿಕೆಯಪ್ಲಾಸ್ಟಿಕ್
      ಅನ್ನು ಸಂಪೂರ್ಣವಾಗಿ ನಿಷೇಧಿಸುವುದು.

4) ಕೃಷಿಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿಗಳಾಗಬೇಕು. “ಸಾವಯವಕೃಷಿಗೆಜೈ” ಅನ್ನಬೇಕು. ಹಾನಿಕಾರಕ ಜೈವಿಕ
      ಸಂವರ್ಧನೆಗೆ ಒಳಗಾಗುವ ರಾಸಾಯನಿಕ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

5) ಕಾನೂನು ಹಾಗೂ ಕಾಯ್ದೆಗಳನ್ನು ಜಾರಿಗೊಳಿಸಿ ಬಲಗೊಳಿಸುವುದು ಹಾಗೂ ಕಾನೂನು ಪಾಲಿಸುವಂತೆ
       ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವುದು.

6) ನವೀಕರಿಸಲಾಗದ ಸಂಪನ್ಮೂಲಗಳ ಮಿತಬಳಕೆ, ಕಾರ್ಬನ್‌ ಹೆಜ್ಜೆಗುರುತುಗಳನ್ನು ಕಡಿಮೆಗೊಳಿಸುವುದು. ಸಮೂಹ
    ಸಾರಿಗೆ ವ್ಯವಸ್ಥೆ ಬಳಸುವುದು, ವಿದ್ಯುತ್ಚಾಲಿತ ವಾಹನಗಳ ತಯಾರಿಕೆ ಹೆಚ್ಚಿಸುವುದು ಹಾಗೂ ಬಳಸುವುದು.ಇದರ
    ಬಗ್ಗೆ ಜನಜಾಗೃತಿ ಮೂಡಿಸುವುದು. ಹಳೆಯ ಮತ್ತು ಸುವರ್ಣ ದಿನಗಳಿಗೆ ಹಿಂತಿರುಗಿ- ಸೈಕಲ್‌ಗಳನ್ನು ಬಳಸುವುದು.
    ಇದರಿಂದ ಆರೋಗ್ಯವು ಸುಧಾರಿಸುತ್ತದೆ ಹಾಗೂ ಇಂಧನದ ಮಿತಬಳಕೆ= ಉಂಟಾಗುತ್ತದೆ.  ಹತ್ತಿರದ ಸ್ಥಳಗಳಿಗೆ
   ಆದಷ್ಟೂ ನಡೆಯುವುದನ್ನೇ ಅಭ್ಯಾಸ ಮಾಡಿಕೊಳ್ಳುವುದು.

7) ಪ್ರತಿಯೊಬ್ಬರು ಒಂದು ಗಿಡವನ್ನು ನೆಟ್ಟಿ ಬೆಳೆಸುವ ಸೂತ್ರ ರೂಡಿಸಿಕೊಂಡು ಹೆಚ್ಚು ಹಸಿರು ಪರಿಸರ
     ಉಂಟುಮಾಡುವುದನ್ನು ಕಡ್ಡಾಯ ಮಾಡಿಕೊಳ್ಳುವುದು.

8) ಅರಣ್ಯೀಕರಣ ಮತ್ತು ಮರುಅರಣ್ಯೀಕರಣ ಪದ್ಧತಿಯನ್ನು ಪಾಲಿಸುವುದು ಹಾಗೂ ಸುಸ್ಥಿರ ಶಕ್ತಿಯ ಬಳಕೆ
      ಪಾಲಿಸುವುದು.

9) ಮನೆ, ಶಾಲಾ,- ಕಾಲೇಜು, ಕಚೇರಿ, ರಸ್ತೆಬದಿ, ಎಲ್ಲಾದರೂ ಸರಿ ನೀರು ಪೋಲಾಗುವುದನ್ನು ಕಂಡರೆ ತಪ್ಪಿಸಿ. ನೀರಿನ ಜಾಗರೂಕ ಬಳಕೆಯನ್ನು ಕಡ್ಡಾಯಗೊಳಿಸುವುದು. ನೀರು ಸಂರಕ್ಷಣೆ ಆಗುವಂತಹ ನಲ್ಲಿಗಳು ಹಾಗೂ ಫಾಸಿಟ್‌ ಗಳನ್ನು ಹಾಗೂ ಸ್ಮಾರ್ಟ್‌ ಶೌಚಾಲಯದ ನಿರ್ಮಾಣವನ್ನು ಅಳವಡಿಸಿಕೊಳ್ಳುವುದು.

10) ವಿದ್ಯುತ್ತನ್ನು  ಮಿತವಾಗಿ ಬಳಸುವುದು, ಬಳಕೆ ಇಲ್ಲದ ದೀಪಗಳನ್ನು  ಆರಿಸುವುದು ಇತ್ಯಾದಿ ಸಣ್ಣ, ದಿಟ್ಟ, ಹೆಜ್ಜೆಗಳನ್ನು ಇರಿಸುವ ಮೂಲಕ  ಸಂಪನ್ಮೂಲಗಳ ಹಾಗೂ ಇಂಧನದ ಸಂರಕ್ಷಣೆ ಹಾಗೂ ಸದ್ಬಳಿಕೆ ಆಗುವಂತೆ ಮಾಡುವುದು.

11) 7R” ಅನ್ನು ಅನುಸರಿಸಿ : ಪುನರ್ವಿಮರ್ಶಿಸಿ, ನಿರಾಕರಿಸಿ, ಕಡಿಮೆಮಾಡಿ, ಮರುಬಳಕೆಮಾಡಿ, ದುರಸ್ತಿಮಾಡಿ, ಮರು ಉಡುಗೊರೆಯನ್ನು ಬಳಸಿ ಹಾಗೂ ಮರುಪೂರಣಗೊಳಿಸಿ.

12) ಸ್ಥಳೀಯ ಜಾತಿಯ ಸಸ್ಯಗಳನ್ನು ಹಾಗೂ ಪ್ರಕೃತಿ ಸ್ನೇಹಿ ಸಸ್ಯಗಳನ್ನು ಬೆಳೆಸುವುದು. ಇತ್ತೀಚಿಗೆ ಮೇ 2026 ತಿಂಗಳಲ್ಲಿ ಬಂದ ಭಾರೀ ಮಳೆಯಿಂದಾಗಿ ರಸ್ತೆಯ ಬದಿಗಳಲ್ಲಿ ಅಕೇಶಿಯ ಮರಗಳು ಒಣಗಿ, ಬೆಂಡಾಗಿ ಗಾಳಿಗೆ ನಡುಗಿ ಬಿದ್ದು ಬೆಂಗಳೂರಿನಲ್ಲಿ ಅಲ್ಲೋಲ ಕಲ್ಲೋಲವಾದದ್ದನ್ನು ಸ್ಮರಿಸಿಕೊಳ್ಳಿ. ಇದನ್ನು ಸಾಮಾಜಿಕ ಜಾಲತಾಣಗಳಲ್ಲೂ ನಾವು ವೀಕ್ಷಣೆ ಮಾಡಿದ್ದೇವೆ. ಅದೇ ನಮ್ಮ ಸ್ಥಳೀಯ ಮಾವಿನಮರ, ಹೊಂಗೆ ಮರಗಳು ಗಟ್ಟಿಯಾಗಿ ಬೇರೂರಿ ನಿಂತಿರುವುದನ್ನು ನಾವು ಸ್ಮರಿಸಬೇಕು. ಹೀಗಾಗಿ, ಸ್ಥಳೀಯ ಜಾತಿಯ ಸಸ್ಯಗಳನ್ನು ಬೆಳೆಸಲು ಹೆಚ್ಚು ಒತ್ತನ್ನು ನೀಡಬೇಕು.

13) ಪ್ರಕೃತಿಸ್ವಚ್ಛತೆ-ಸ್ವಚ್ಛನಡಿಗೆ ಹೀಗೆ ಸ್ವಯಂಸೇವೆಯನ್ನು ರೂಡಿಸಿ ಒಂದು ಸಮುದಾಯದಲ್ಲಿ ನಾಯಕತ್ವವನ್ನು ತೆಗೆದುಕೊಂಡು ಸ್ಥಳೀಯ ಸಂರಕ್ಷಣಾ ಗುಂಪುಗಳನ್ನು ಹೊಂದಿಸಿಕೊಂಡು ನಮ್ಮ ಸುತ್ತಮುತ್ತಲಿರುವ ಪ್ರದೇಶವನ್ನು ಸ್ವಚ್ಛಗೊಳಿಸುವ ಪರಿಪಾಠವನ್ನುಬೆಳೆಸಿಕೊಳ್ಳಬಹುದಾಗಿದೆ.

14) ಜೀವವೈವಿಧ್ಯತೆಯನ್ನು ಕಾಪಾಡಲು ಸುರಕ್ಷಿತ ಪ್ರದೇಶಗಳನ್ನು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ, ಕಾಡಿನ ಪ್ರದೇಶಗಳನ್ನು ರೂಪಿಸುವುದು. ಈ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿರ್ಬಂಧಿಸುವುದು.

15) ಸಾಗರ, ಸಮುದ್ರ ಬದಿಗಳಲ್ಲಿ ನದಿ ತಟಗಳಲ್ಲಿ ಪ್ಲಾಸ್ಟಿಕ್‌ ರಹಿತ ಪ್ರದೇಶವನ್ನಾಗಿ ಸ್ಥಾಪಿಸಿ, ಸುರಕ್ಷಿತ ಪ್ರದೇಶಗಳನ್ನಾಗಿ ಮಾಡುವುದು. ಅಳಿವಿನ ಅಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಣೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು.

16) ಸ್ಥಳೀಯ ಹಾಗೂ ರಾಜ್ಯಮಟ್ಟದಲ್ಲಿ ಸಿಹಿನೀರಿನ ಮೂಲಗಳ ಸಂರಕ್ಷಣಾ ಕಾರ್ಯಕ್ರಮ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.ಮಣ್ಣನ್ನು ರಕ್ಷಿಸುವುದು ಮಣ್ಣಿನ ಶಿಥಿಲತೆಯನ್ನು ತಡೆಗಟ್ಟಿ ಮಣ್ಣು ಬರಡಾಗುವುದನ್ನು ಹಾಗೂ ಮರುಭೂಮಿಯಾಗದಂತೆ ತಡೆಗಟ್ಟುವುದು.

ಹೀಗೆ, ಈ ನಿಟ್ಟಿನಲ್ಲಿ ಕೆಲವು ಸಣ್ಣ ಆದರೆ ದಿಟ್ಟ ಕ್ರಮಗಳನ್ನು ಕೈಗೊಳ್ಳುವುದರಿಂದ ನಾವು ನಮ್ಮ ಪರಿಸರವನ್ನು ಸಂರಕ್ಷಿಸುವುದರೊಂದಿಗೆ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದು, ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟುಹೋಗುವ ಪರಂಪರೆ. ಇದು, ಅಂತ್ಯವಲ್ಲ, ಕೇವಲ ಒಂದು ಸಣ್ಣ ಆರಂಭ. ನೀವು ಏನು ಹೇಳುತ್ತೀರಿ?

 

No comments:

Post a Comment