ಬೆಂಕಿ ಕಡ್ಡಿ ಹೂ
ಲೇಖಕರು : ಶ್ರೀ ಕೃಷ್ಣ ಚೈತನ್ಯ
ವಿಜ್ಞಾನ ಶಿಕ್ಷಕರು ಹಾಗೂ ವನ್ಯ ಜೀವಿ ತಜ್ಞರು
ಹೂವೂ... ಚೆಲುವೆಲ್ಲಾ ನಂದೆಂದಿತು, ಹೂವೆ ಹೂವೇ. ಹೂವೆ ಹೂವೇ. ಹೂವಿನ ಲೋಕ ನನ್ನದು.. ಹೀಗೆ ಹೂವಿನ ಬಗ್ಗೆ ಹಲವಾರು ಹಾಡುಗಳನ್ನು ವಿವಿಧ ಸಿನಿಮಾಗಳಲ್ಲಿ ಕೇಳಿದ್ದೇವೆ. ಹೂವು ನೋಡಿ ಮನಸೋಲದವರು ಯಾರಾದರೂ ಇದ್ದಾರೆಯೆ? ಬಹುಶಃ ಯಾರು ಸಿಗುವುದಿಲ್ಲವೇನೋ. ಮಹಿಳೆಯರು ಹೂವನ್ನು ಮುಡಿಯಲು ಇಚ್ಛಿಸುತ್ತಾರೆ. ಪ್ರತಿದಿನ ಮುಡಿಯದಿದ್ದರೂ ಸಮಾರಂಭಗಳಿಗೆ ಹೋಗುವಾಗ ಮರೆಯದೆ ಹೂ ಮುಡಿದು ಲಕ್ಷಣವಾಗಿ ಅಂದ ಹೆಚ್ಚಿಸಿಕೊಂಡು ಹೋಗುತ್ತಾರೆ. ಈಗಿನ ಕಾಲದಲ್ಲಿ ಹೂವು ಮುಡಿಯುವವರೆ ಕಡಿಮೆಯಾಗಿದ್ದಾರೆ ಅಲ್ಲವೇ? ಇರಲಿ ಹೂವಿನ ಸೊಗಸು ಮತ್ತು ಕಂಪು ಬಲ್ಲವರೇ ಬಲ್ಲರು. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎಂಬಂತೆ ಇಂದಿನವರು ಹೂವು ಮುಡಿಯಲು ನಿರಾಸಕ್ತಿ ತೋರಿಸುವುದರಿಂದಲೋ ಏನೋ ಮನೆಯ ಬಳಿ ಹೂವಿನ ಗಿಡ ಬೆಳೆಸುವವರೇ ಕಡಿಮೆಯಾಗಿ ಬಿಟ್ಟಿದ್ದಾರೆ.
ಹೂಗಳಲ್ಲಿ ಅಷ್ಟು ವೈವಿಧ್ಯದ ಬಣ್ಣ, ಆಕಾರ, ಗಾತ್ರ, ಉದ್ದದಲ್ಲಿ ಪ್ರಕೃತಿಯಲ್ಲಿ ಕಾಣಸಿಗುತ್ತವೆ. ಕನ್ನಡ ನಾಡಿನ ಹೂಗಳಲ್ಲಂತು ಕಂಪು ತುಂಬಿರುತ್ತದೆ.. ಮಲ್ಲಿಗೆ, ಜಾಜಿ, ಕೇದಗೆ, ಸಂಪಿಗೆ, ಪಾರಿಜಾತ, ಚಂಡುಮಲ್ಲಿಗೆ ಸುಗಂಧರಾಜ, ಇತ್ಯಾದಿ ಹೂವುಗಳು ತಮ್ಮ ಕಂಪಿನಿಂದ ಹೆಸರುವಾಸಿಯಾಗಿವೆ. ಕಂಪು ಹೊಂದಿಲ್ಲದ ಹಲವಾರು ಹೂವುಗಳಲ್ಲಿ ಕನಕಾಂಬರ, ಪೇಪರ್ ಹೂ(ಬೋಗನ್‌ವಿಲ್ಲಾ) ಪ್ರಮುಖವಾದವು. ಅವುಗಳ ಸಾಲಿಗೆ ಸೇರುವ ಹೂವು ಬೆಂಕಿಕಡ್ಡಿಹೂವು. ಇದರ
ವೈಜ್ಞಾನಿಕ ಹೆಸರು (Aechmea
gamosepala). ಇದು ಮೂಲತಃ ದಕ್ಷಿಣ ಅಮೇರಿಕ ದೇಶದ್ದು. ಹೇಗೊ ಅಂತು ಇಂತು ಈಗ ಭಾರತದಲ್ಲಿ ಅಲಂಕಾರಿಕ
ಸಸ್ಯವಾಗಿ ಬಹಳಷ್ಟು ಮನೆಗಳಲ್ಲಿ ವಿಶಿಷ್ಟ ಜಾಗವನ್ನು ಪಡೆದಿದೆ. ಎಲ್ಲಾ ಕಾಲದಲ್ಲಿಯೂ ಹಸಿರಾಗಿರುವ ಸಸ್ಯವಾಗಿದ್ದು ಕೇವಲ ಒಂದು ಅಡಿ ಎತ್ತರವಷ್ಟೆ ಬೆಳೆಯುತ್ತದೆ. ಅತ್ಯಂತ
ಸುಲಭವಾಗಿ ಬೆಳೆಯಬಹುದಾದ ಸಸ್ಯವಾಗಿದ್ದು, ಕುಂಡದಲ್ಲಿ ಸ್ವಲ್ಪ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ನೆಟ್ಟು ನೀರು ಉಣಿಸಿದರಾಯಿತು.
ಈ ಗಿಡದ ಬಗ್ಗೆ ಲೇಖನ ಬರೆಯಲು ಅದು ಹೇಗೆ ಪ್ರೇರೇಪಿಸಿತು
ಎಂದರೆ ಎರಡು ಪ್ರಮುಖ ಕಾರಣಗಳಿಂದಾಗಿ. ಒಂದು ಹೂವಿನ ಆಕರ್ಷಕ ಗಾತ್ರ, ಬಣ್ಣ ಮತ್ತು ರಚನೆ. ಎರಡನೆಯದು ನೀರು ಹೀರಿಕೊಳ್ಳುವ ವಿಶಿಷ್ಟ ರೀತಿ.
ಎಲೆಗಳು ಮಂದವಾಗಿ ತಿಳಿ ಹಸಿರಾಗಿದ್ದು ಕ್ರಮೇಣ
ಗಾಢ ಹಸಿರು ಬಣ್ಣವಾಗಿ ಪರಿವರ್ತನೆಯಾಗುತ್ತವೆ. ಕಡಿಮೆ ಬೇರುಗಳನ್ನು ಹೊಂದಿದ್ದು ಕೈನಿಂದ
ಸುಲಭವಾಗಿ ಎತ್ತಿಕೊಳ್ಳಬಹುದು. ಕೂದಲಿನಂತೆ ಸಣ್ಣ ಸಣ್ಣ ಕಪ್ಪಾದ ಬೇರುಗಳು ಮಣ್ಣಿನಲ್ಲಿ ಕಡಿಮೆ
ಆಳಕ್ಕೆ ಇಳಿಯುತ್ತವೆ. ಈ ಗಿಡವನ್ನು ಮನೆಯ ಹೊರಾಂಗಣ ಮತ್ತು ಒಳಾವರಣ ಎರಡೂ ಕಡೆ ಬೆಳೆಯಬಹುದು.
ಹೂವುಗಳು ತುಂಬಾ ಆಕರ್ಷಕವಾಗಿದ್ದು, ಗಿಡದ ಮಧ್ಯ
ಕೊಳವೆಯಂತಹ ಭಾಗದಿಂದ ನಸುಗೆಂಪು ಬಣ್ಣದ ಕಡ್ಡಿಯಂತಹ ರಚನೆ ಬಂದು ನಂತರ ಅದರ ಸುತ್ತಲೂ ಹೂವಿನ
ಮೊಗ್ಗುಗಳು ಬೆಳೆಯುತ್ತವೆ. ಆದರೆ ಆರಳಲು ಹೂವಿನ ಪಕಳೆಗಳು ಅತ್ಯಂತ ಚಿಕ್ಕವು. ಆದುದರಿಂದ ಹೂವು
ಅರಳಿದರೂ ಮೊಗ್ಗಿನಂತೆಯೇ ಗೋಚರಿಸುತ್ತವೆ. ಕ್ರಿಸ್ ಮಸ್ ಗಿಡದಂತೆ ಹೂತೊಟ್ಟಿನ ಬುಡದಲ್ಲಿ
ಉದ್ದವಾದ ಹೂವುಗಳಿದ್ದರೆ ಮೇಲಕ್ಕೇರಿದಂತೆ ಸ್ವಲ್ಪ ಚಿಕ್ಕದಾಗುತ್ತಾ ಹೋಗುತ್ತವೆ. ಹೂವು ಪಿಂಕ್
ಬಣ್ಣದಲ್ಲಿದ್ದು ಅವುಗಳ ತುದಿ ಮಾತ್ರ ಆಕಾಶದ ನೀಲಿಯ ಬಣ್ಣ ಹೊಂದಿವೆ. ಇವು ಬೆಂಕಿ ಕಡ್ಡಿಯಂತೆಯೇ
ಕಾಣುವುದರಿಂದ ಆ ಅನ್ವರ್ಥಕ ನಾಮ ಬಂದಿರಬಹುದು. ಹೂವುಗಳು ಸುಮಾರು 10 ರಿಂದ 15 ದಿನಗಳವರೆಗೂ ಇರುತ್ತವೆ.
ಇನ್ನೊಂದು ವಿಶಿಷ್ಟ ಲಕ್ಷಣ ಎಂದರೆ ಈ ಗಿಡ ನೀರನ್ನು ಹೀರಿಕೊಳ್ಳುವುದು. ಸಾಮಾನ್ಯವಾಗಿ ಎಲ್ಲಾ ಗಿಡಗಳು ಭೂಮಿಯಿಂದ ಬೇರಿನ ಮೂಲಕ ನೀರನ್ನು ಹೀರಿ ಎಲೆಗಳಿಗೆ ಸಾಗಿಸುವುದು. ಆರ್ಕಿಡ್ ಸಸ್ಯಗಳಲ್ಲಿ ಗಾಳಿಯಲ್ಲಿ ತೂಗಾಡುವ ಬೇರು, ಅಂದರೆ ವಾಯುವಿಕ ಬೇರುಗಳಿಂದ. ಕೆಲವು ಸಸ್ಯಗಳು ಅಂದರೆ ಬಂದಳಿಕೆ, ಕಸ್ಕ್ಯೂಟಗಳಂತಹ ಸಸ್ಯಗಳಲ್ಲಿ ವಿಶೇಷವಾದ, ಬೇರಿನಂತಹ ರಚನೆಗಳು ಆತಿಥೇಯ ಜೀವಿಗಳ ಅಂಗಾಂಶಗಳನ್ನು ಭೇದಿಸಿ ನೀರು ಮತ್ತು ಪೋಷಕಾಂಶಗಳನ್ನು ಹೊರತೆಗೆಯಲು ಬಳಸುತ್ತವೆ. ಆದರೆ ಈ ಗಿಡ ನೀರನ್ನು ಹೀರಿಕೊಳ್ಳುವುದು ಕಾಂಡದ ತುದಿಯಲ್ಲಿರುವ ಲೋಟದಾಕಾರದ ಭಾಗದಿಂದ! ಅಂದರೆ ಈ ಗಿಡಕ್ಕೆ ನೀರು ಹಾಕಬೇಕಾದರೆ ಗಿಡದಲ್ಲಿರುವ ಲೋಟದ ಆಕಾರದಲ್ಲಿರುವ ಭಾಗಗಳಿಗೆ ತುಂಬಿಸಬೇಕು! ಹೇಗಿದೆ ಸೋಜಿಗ ಅಲ್ಲವೇ?
No comments:
Post a Comment