ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, July 4, 2026

ಬಹುಮುಖ ಪ್ರತಿಭೆಯ ಡಾ. ನವೀನ್ ಕುಮಾರ್

ಬಹುಮುಖ ಪ್ರತಿಭೆಯ ಡಾ. ನವೀನ್ ಕುಮಾರ್

                                                                                                              ಲೇಖನ : ಶಶಿಕುಮಾರ್ ಬಿ.ಎಸ್.

(2025ನೇ ಸಾಲಿನ ಸಿ.ಎನ್.ಆರ್. ರಾವ್ ಔಟ್‌ಸ್ಟ್ಯಾಂಡಿಂಗ್ ಸೈನ್ಸ್ ಟೀಚರ್ ಅವಾರ್ಡ್ ಪುರಸ್ಕೃತ ವಿಜ್ಞಾನ ಶಿಕ್ಷಕ ಡಾ. ನವೀನ್ ಕುಮಾರ್ ಆರ್.ಯು. ಅವರ ಕಿರು ಪರಿಚಯ )

"ಪೊಲೀಸ್ ವೃತ್ತಿಗಿಂತ ಶಿಕ್ಷಕ ವೃತ್ತಿಯೇ ಶ್ರೇಷ್ಠ" ಎಂಬ ದೃಢ ನಂಬಿಕೆಯಿಂದ ಪೊಲೀಸ್ ವೃತ್ತಿಯನ್ನು ತ್ಯಜಿಸಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಡಾ. ನವೀನ್ ಕುಮಾರ್ ಆರ್.ಯು. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಳೆದ ಸಾಲಿನಿಂದ ತುಮಕೂರು ಜಿಲ್ಲೆಯ ತಿಪಟೂರಿನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಾಧನಾ ಪಥವನ್ನು ಪರಿಚಯಿಸುವುದು ಸಂತಸದ ಸಂಗತಿಯಾಗಿದೆ.

ಡಾ. ನವೀನ್ ಕುಮಾರ್ ಅವರು ತಮ್ಮ ಸ್ವರಚಿತ ವಿಜ್ಞಾನ ಗೀತೆಗಳ ಮೂಲಕ ರಾಜ್ಯದಾದ್ಯಂತ ಚಿರಪರಿಚಿತರಾಗಿದ್ದಾರೆ. ವಿಜ್ಞಾನದ ಯಾವುದೇ ಕ್ಲಿಷ್ಟಕರ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಹಾಗೂ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತೆ ಅದನ್ನು ಲಾವಣಿ, ಜಾನಪದ ಮತ್ತು ಹರಿಕಥೆ ಶೈಲಿಯ ಗೀತೆಗಳಾಗಿ ರೂಪಿಸಿ, ಲಯಬದ್ಧವಾಗಿ ಹಾಡುತ್ತಾ ಬೋಧಿಸುತ್ತಾರೆ. ಈ ವಿನೂತನ ಬೋಧನಾ ವಿಧಾನ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಬೆಳೆಸುತ್ತಿದೆ. ಈ ಗಾಯನ ಕಲೆ ಅವರಿಗೆ ತಂದೆಯಿಂದ ಬಂದ ಅಮೂಲ್ಯ ಪರಂಪರೆಯಾಗಿದೆ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಅವರು ಹಾಡುಗಾರ, ಕವಿ, ಲೇಖಕ, ನಾಟಕಕಾರ, ನಟ, ನಿರ್ದೇಶಕ ಹಾಗೂ ಸಮಾಜಮುಖಿ ಚಿಂತಕರಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ.

ಶಿಕ್ಷಕ ವೃತ್ತಿಗೆ ಸೇರಿದ ದಿನದಿಂದಲೂ ವಿಜ್ಞಾನ ಪಠ್ಯಕ್ಕೆ ಅನುಗುಣವಾದ ಗೀತೆಗಳ ರಚನೆ, ಕಿರುಚಿತ್ರಗಳ ನಿರ್ಮಾಣ, ನಾಟಕಗಳ ಸೃಜನ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ತಂಬಾಕು ನಿರ್ಮೂಲನೆ, ಪ್ಲಾಸ್ಟಿಕ್ ಮುಕ್ತ ಪರಿಸರ, ರೈತರಲ್ಲಿ ವೈಜ್ಞಾನಿಕ ಕೃಷಿ ಅರಿವು, ಶಾಲಾ ಸ್ವಚ್ಛತೆ, ಶೌಚಾಲಯ ಬಳಕೆ, ಹಾಗೂ ಪಠ್ಯಕ್ಕೆ ಪೂರಕವಾದ ಬೋಧನಾ ಸಾಮಗ್ರಿಗಳ ತಯಾರಿಕೆ ಸೇರಿದಂತೆ ಅನೇಕ ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ನಾಲ್ಕು ಗೋಡೆಗಳ ನಡುವೆ ಪಾಠ ಮಾಡುವುದಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ, ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರ ಕಾಳಜಿ, ವೈಜ್ಞಾನಿಕ ಮನೋಭಾವ, ವೈಯಕ್ತಿಕ ಆರೋಗ್ಯ, ತಂಬಾಕು ನಿಯಂತ್ರಣ, ಮಾಲಿನ್ಯ ನಿಯಂತ್ರಣ, ಗಾಳಿ, ನೀರು, ಮಣ್ಣು ಮತ್ತು ಅರಣ್ಯ ಸಂರಕ್ಷಣೆ, ನಾಡು-ನುಡಿ ಪ್ರೀತಿ, ದೇಶಭಕ್ತಿ, ಶಿಕ್ಷಣದ ಮಹತ್ವ, ಶಿಶುಹತ್ಯೆ, ಭ್ರೂಣಹತ್ಯೆ, ಬಾಲ್ಯವಿವಾಹ, ಮಹಿಳಾ ಸಬಲೀಕರಣ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಸ್ವಚ್ಛತೆ ಹಾಗೂ ಕೊರೊನಾ ಜಾಗೃತಿ ಮುಂತಾದ ವಿಷಯಗಳ ಕುರಿತು ಜಾನಪದ ಹಾಗೂ ಲಾವಣಿ ಶೈಲಿಯ ಗೀತೆಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಇದುವರೆಗೆ ಅವರು ಪ್ರಕಟಿಸಿರುವ "ಗೀತಾ ವಿಜ್ಞಾನ" ಕೃತಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿಜ್ಞಾನವನ್ನು ಹಾಡಿನ ಮೂಲಕ ಸುಲಭವಾಗಿ ಕಲಿಯಲು ನೆರವಾಗುವುದರ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.

ಇದಲ್ಲದೆ "ಬಾ ಮರಳಿ ಗೂಡಿಗೆ", "ನನಗಿಹುದೊಂದಾಸೆ" ಹಾಗೂ "ಔತಣ ಈ ಹೃದಯಕೆ" ಕವನ ಸಂಕಲನಗಳ ಮೂಲಕ ಪರಿಸರ ಪ್ರೀತಿ, ಸಾಮಾಜಿಕ ಕಳಕಳಿ, ನಾಡು-ನುಡಿ-ಜಲ ಸಂರಕ್ಷಣೆ, ಮಾನವೀಯ ಮೌಲ್ಯಗಳು, ಮಹಿಳಾ ಸಬಲೀಕರಣ, ಬಾಲ್ಯವಿವಾಹ ತಡೆ, ಭ್ರೂಣಹತ್ಯೆ ವಿರೋಧ, ಪರಿಸರ ಸ್ನೇಹಿ ಹಬ್ಬಗಳ ಆಚರಣೆ, ಆರೋಗ್ಯ ಕಾಳಜಿ ಹಾಗೂ ಶಿಶು ಗೀತೆಗಳಂತಹ ಅನೇಕ ಮೌಲ್ಯಯುತ ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗಾಗಿ ಶಿಕ್ಷಣದ ಮಹತ್ವ, ಪರಿಸರ ಸಂರಕ್ಷಣೆ, ಜೀವವೈವಿಧ್ಯ, ಕೃಷಿಯ ಮಹತ್ವ, ಆಹಾರದ ಮೌಲ್ಯ, ವರದಕ್ಷಿಣೆ ನಿರ್ಮೂಲನೆ, ಮಹಿಳಾ ಶೋಷಣೆ, ಭ್ರೂಣಹತ್ಯೆ, ಬಾಲ್ಯವಿವಾಹ, ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಕಿರುನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಜೊತೆಗೆ ಪ್ಲಾಸ್ಟಿಕ್ ಮರುಬಳಕೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ಶೌಚಾಲಯ ಬಳಕೆಯ ಕುರಿತು ಕಿರುಚಿತ್ರಗಳನ್ನು ನಿರ್ಮಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಶಿಕ್ಷಕರಾಗಿ ಗಾಯನ, ಪ್ರಬಂಧ, ಭಾಷಣ, ನಾಟಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದಿರುವ ಅವರು, ಇದೇ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲು ನೆರವಾಗಿದ್ದಾರೆ. ಕೃಷಿ ಹಾಗೂ ಪರಿಸರ ಸಂಪನ್ಮೂಲಗಳ ಕುರಿತು ವಿವಿಧ ಯೋಜನೆಗಳನ್ನು ಸಿದ್ಧಪಡಿಸಿ ರಾಜ್ಯಮಟ್ಟದಲ್ಲಿ ಮಂಡಿಸಲು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ್ದಾರೆ.

"ಪವಾಡ ರಹಸ್ಯ ಬಯಲು" ಕಾರ್ಯಕ್ರಮದ ಮೂಲಕ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯವನ್ನು ಡಾ. ನವೀನ್ ಕುಮಾರ್ ಅವರು ನಿರಂತರವಾಗಿ ನಡೆಸುತ್ತಿದ್ದಾರೆ. ಬೇವಿನ ಮರದಿಂದ ಹಾಲಿನಂತಹ ದ್ರವ ಹೊರಬರುವುದರ ಹಿಂದಿರುವ ವೈಜ್ಞಾನಿಕ ಕಾರಣ, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ವಿಡಿಯೋಗಳು, ಉಪನ್ಯಾಸಗಳು ಹಾಗೂ ಜಾಗೃತಿ ಜಾಥಾಗಳ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುತ್ತಿದ್ದಾರೆ.

ಹೆಣ್ಣುಮಕ್ಕಳ ವೈಯಕ್ತಿಕ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಋತುಚಕ್ರದ ಬಗ್ಗೆ ಇರುವ ಮೂಢನಂಬಿಕೆಗಳನ್ನು ನಿವಾರಿಸಲು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಉಚಿತ ಮೆನ್ಸ್ಟ್ರುವಲ್ ಹೈಜಿನ್ ಕಿಟ್‌ಗಳನ್ನು ವಿತರಿಸುವುದರ ಜೊತೆಗೆ ಬಾಲ್ಯವಿವಾಹ ತಡೆಗಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಶಾಲೆ ಬಿಟ್ಟ ಹೆಣ್ಣುಮಕ್ಕಳನ್ನು ಪುನಃ ಶಾಲೆಗೆ ಕರೆತಂದು, ಉಚಿತ ಕಲಿಕೋಪಕರಣಗಳನ್ನು ನೀಡಿ ಅವರ ಶಿಕ್ಷಣ ಮುಂದುವರಿಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಕೇವಲ 15 ದಿನಗಳಲ್ಲಿ ಐದು ಟನ್ ಪ್ಲಾಸ್ಟಿಕ್ ಸಂಗ್ರಹಿಸಿ ಮರುಚಕ್ರೀಕರಣಕ್ಕೆ ಕಳುಹಿಸಿರುವುದು ಅವರ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮ ಮತ್ತು ಶಾಲೆಗಳಿಗಾಗಿ ಜಾಗೃತಿ ಜಾಥಾಗಳನ್ನು ನಡೆಸುವುದರ ಜೊತೆಗೆ, ತ್ಯಾಜ್ಯ ಪ್ಲಾಸ್ಟಿಕ್ ಬಳಸಿ ಹೂವಿನ ಕುಂಡಗಳು, ಗಿಡಗಳಿಗೆ ನೀರುಣಿಸುವ ಸಾಧನಗಳು, ಪಕ್ಷಿಗಳಿಗೆ ಆಹಾರ ಪಾತ್ರೆಗಳು, ಅಲಂಕಾರಿಕ ವಸ್ತುಗಳು, ಆಟಿಕೆಗಳು, ಪೆನ್ ಸ್ಟ್ಯಾಂಡ್‌ಗಳು ಹಾಗೂ ಸರಳ ಪಾಠೋಪಕರಣಗಳನ್ನು ತಯಾರಿಸಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯಲ್ಲಿ 5R ತತ್ವಗಳಾದ Reduce (ಮಿತ ಬಳಕೆ), Reuse (ಮರುಬಳಕೆ), Recycle (ಮರುಚಕ್ರೀಕರಣ), Repurpose (ಮರುಉದ್ದೇಶ) ಮತ್ತು Refuse (ನಿರಾಕರಣೆ) ಕುರಿತು ವಿಶೇಷ ಒತ್ತು ನೀಡುತ್ತಿದ್ದಾರೆ.

ಪರಿಸರ ಸಂರಕ್ಷಣೆಯ ಉದ್ದೇಶದಿಂದ ಬೀಜದ ಉಂಡೆಗಳನ್ನು ತಯಾರಿಸಿ ಬೆಟ್ಟ, ಗುಡ್ಡ ಹಾಗೂ ಬಯಲು ಪ್ರದೇಶಗಳಲ್ಲಿ ಬಿತ್ತುವ ಮೂಲಕ ಅರಣ್ಯ ವೃದ್ಧಿಗೆ ಕೊಡುಗೆ ನೀಡಿದ್ದಾರೆ. ಶಾಲಾ ಆವರಣದಲ್ಲಿ ನೂರಾರು ಹಣ್ಣಿನ ಗಿಡಗಳು ಹಾಗೂ ಇತರೆ ಉಪಯುಕ್ತ ಮರಗಳನ್ನು ಬೆಳೆಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಎರಡು ಗಿಡಗಳನ್ನು ವಿತರಿಸಿ ತಮ್ಮ ಮನೆಯಲ್ಲೋ ಅಥವಾ ಕೃಷಿ ಜಮೀನಿನಲ್ಲೋ ನೆಟ್ಟು ಪೋಷಿಸಲು ಮಾರ್ಗದರ್ಶನ ನೀಡುತ್ತಿದ್ದಾರೆ.

ವಾಯು ಮತ್ತು ಜಲ ಮಾಲಿನ್ಯ ನಿಯಂತ್ರಣಕ್ಕಾಗಿ "ದೀಪಕ್ಕೆ ಎಣ್ಣೆ ಹಾಕೋಣ – ಪಟಾಕಿಗೆ ನೀರು ಹಾಕೋಣ" ಎಂಬ ಘೋಷವಾಕ್ಯದಡಿ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವ ಅಭಿಯಾನ ನಡೆಸುತ್ತಿದ್ದಾರೆ. ಅದೇ ರೀತಿ ರಾಸಾಯನಿಕ ಗಣೇಶ ಮೂರ್ತಿಗಳ ಬದಲಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಜಲಮಾಲಿನ್ಯ ತಡೆಗಟ್ಟುವಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಶಾಲೆಯ ಬಿಸಿಯೂಟ ಯೋಜನೆಗೆ ಪೂರಕವಾಗಿ "ಕಿಚನ್ ಪಾರ್ಕ್" ನಿರ್ಮಿಸಿ ತರಕಾರಿ, ಸೊಪ್ಪು ಹಾಗೂ ಕಾಳುಗಳನ್ನು ಬೆಳೆಯಲಾಗುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳ ಬಿಸಿಯೂಟ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.

ತಮ್ಮ 18 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಜೀವನ್ ಮಾರ್ಗ ಶೈಕ್ಷಣಿಕ ಫೌಂಡೇಶನ್‌ನ ಸಹಕಾರದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಹೆಣ್ಣುಮಕ್ಕಳಿಗಾಗಿ ನಾಲ್ಕು ಆಧುನಿಕ ಗುಣಮಟ್ಟದ ಶೌಚಾಲಯಗಳನ್ನು ನಿರ್ಮಿಸಿದ್ದು, ಪ್ರಾಯೋಗಿಕ ಕಲಿಕೆಗೆ ಅನುಕೂಲವಾಗುವಂತೆ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವನ್ನೂ ಸ್ಥಾಪಿಸಿದ್ದಾರೆ.

ರೈತರಿಗಾಗಿ ಸಾವಯವ ಕೃಷಿ, ಮಿಶ್ರ ಬೆಳೆ ಪದ್ಧತಿ, ನೀರಿನ ಮಿತ ಹಾಗೂ ಮರುಬಳಕೆ, ಮಣ್ಣಿನ ಫಲವತ್ತತೆ ಸಂರಕ್ಷಣೆ, ಪೌಷ್ಟಿಕ ಆಹಾರ ಮತ್ತು ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ರೂಪಿಸಿ ವೈಜ್ಞಾನಿಕ ಕೃಷಿಯ ಅರಿವು ಮೂಡಿಸುತ್ತಿದ್ದಾರೆ.

ಮರಗಳ ಉಳಿವಿಗಾಗಿ ಕಾಗದದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ "ಸ್ಲೇಟು-ಬಳಪ ಬಳಸಿ, ಕಾಡು ಉಳಿಸಿ" ಎಂಬ ವಿನೂತನ ಕಾರ್ಯಕ್ರಮವನ್ನು ಶಾಲೆಯಲ್ಲಿ ಯಶಸ್ವಿಯಾಗಿ ಅಳವಡಿಸಿದ್ದಾರೆ.

ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಪೋಷಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಲು ವಿದ್ಯಾವಂತ ಹಳೆಯ ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ನೇಮಿಸಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಹಾಗೂ ಪರಿಸರ ಕಾಳಜಿಯೊಂದಿಗೆ ಶಾಲೆಯ ಶೈಕ್ಷಣಿಕ ಪ್ರಗತಿಗಾಗಿ ವಿವಿಧ ದಾನಿಗಳ ಸಹಕಾರದಿಂದ ಸುಮಾರು 90 ಲಕ್ಷ ರೂಪಾಯಿಗೂ ಅಧಿಕ ಅನುದಾನವನ್ನು ಸಂಗ್ರಹಿಸಿ ವಿಜ್ಞಾನ ಪ್ರಯೋಗಾಲಯ, STEM ಲ್ಯಾಬ್, ಡಿಜಿಟಲ್ ಲ್ಯಾಬ್, ಕಂಪ್ಯೂಟರ್ ವ್ಯವಸ್ಥೆ, ಮಳೆನೀರು ಕೊಯ್ಲು, ಕುಡಿಯುವ ನೀರಿನ ವ್ಯವಸ್ಥೆ, ಕಾಂಪೌಂಡ್ ನವೀಕರಣ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಕಲಿಕೋಪಕರಣಗಳ ವಿತರಣೆಯಂತಹ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಅಲ್ಲದೆ, OSAAT educational trust ಸಂಸ್ಥೆಯ ಸಹಕಾರದೊಂದಿಗೆ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲ್ಕು ಆಧುನಿಕ ಸುಸಜ್ಜಿತ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ವಿಜ್ಞಾನವನ್ನು ಉಪನ್ಯಾಸಕ್ಕೆ ಮಾತ್ರ ಸೀಮಿತಗೊಳಿಸದೆ, ಪ್ರಾಯೋಗಿಕ ಚಟುವಟಿಕೆಗಳು, ಗೀತೆಗಳು, ಪರಿಸರ ಅಧ್ಯಯನ ಹಾಗೂ ತಂತ್ರಜ್ಞಾನದ ನೆರವಿನಿಂದ ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದಾರೆ.

ಕೊರೊನಾ ಅವಧಿಯಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಚಂದನ ವಾಹಿನಿಯ "ಸಂವೇದ" ಕಾರ್ಯಕ್ರಮದ ಮೂಲಕ ಪಾಠ ಬೋಧನೆ ನಡೆಸಿದ್ದಾರೆ. ಚಿಂಟು ವಾಹಿನಿ ಮೂಲಕ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನೀಡಿದ್ದು, ಕೊರೊನಾ ಜಾಗೃತಿ ಗೀತೆಗಳನ್ನು ಸ್ವತಃ ರಚಿಸಿ ಹಾಡುವ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಿದ್ದಾರೆ. ಅವರ ಗೀತೆಗಳನ್ನು ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿಯೂ ಜಾಗೃತಿ ಕಾರ್ಯಕ್ರಮಗಳಲ್ಲಿ ಬಳಸಲಾಗಿದೆ.

ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಾಸಿಂಗ್ ಪ್ಯಾಕೇಜ್ ಹಾಗೂ ಪುನರಾವರ್ತನಾ ಪುಸ್ತಕಗಳ ರಚನೆಯಲ್ಲಿ ಭಾಗವಹಿಸಿದ್ದು, "ಪರೀಕ್ಷೆಗೆ ತಯಾರಿ ಹೇಗೆ?" ಎಂಬ ವಿನೂತನ ಕಾರ್ಯಕ್ರಮದ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಪ್ರತಿಭಾ ಕಾರಂಜಿ, ಕಲೋತ್ಸವ, ರಂಗೋತ್ಸವ, ವಿಜ್ಞಾನೋತ್ಸವ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸುವಂತೆ ಮಾರ್ಗದರ್ಶನ ನೀಡಿದ್ದಾರೆ. ಜೊತೆಗೆ INSPIRE Award, NMMSS, State Level Science Quiz, State Level Model Making ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

ಎಸ್.ಎಸ್.ಎಲ್.ಸಿ. ನಂತರದ ಶಿಕ್ಷಣ, ವೃತ್ತಿ ಆಯ್ಕೆ ಹಾಗೂ ಉನ್ನತ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ನೀಡುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಸಲಹೆ ನೀಡುವ ಮೂಲಕ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕಲೆ, ಸಾಹಿತ್ಯ, ಸಂಗೀತ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಮಾನ ಆಸಕ್ತಿ ಹೊಂದಿರುವ ಡಾ. ನವೀನ್ ಕುಮಾರ್ ಅವರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಾ ಕನ್ನಡ ನಾಡು-ನುಡಿ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ.

ಇಂತಹ ಬಹುಮುಖ ಪ್ರತಿಭೆ ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ, ಡಾ. ನವೀನ್ ಕುಮಾರ್ ಅವರಿಗೆ 2025ನೇ ಸಾಲಿನ "ಸಿ.ಎನ್.ಆರ್. ರಾವ್ ಔಟ್‌ಸ್ಟ್ಯಾಂಡಿಂಗ್ ಸೈನ್ಸ್ ಟೀಚರ್ ಅವಾರ್ಡ್" ಪ್ರದಾನ ಮಾಡಲಾಗಿದೆ.

ಇವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ದೊರೆಯಲಿ. ಅವರ ಜ್ಞಾನ, ಅನುಭವ ಮತ್ತು ವಿನೂತನ ಬೋಧನಾ ವಿಧಾನಗಳು ರಾಜ್ಯದ ಎಲ್ಲ ವಿಜ್ಞಾನ ಶಿಕ್ಷಕರಿಗೂ ಪ್ರೇರಣೆಯಾಗಲಿ ಹಾಗೂ ಅವರ ಮಾರ್ಗದರ್ಶನದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂಬುದು ಸವಿಜ್ಞಾನ ತಂಡದ ಹಾರೈಕೆಗಳು. 



No comments:

Post a Comment