ಆಧುನಿಕ ವೈದ್ಯಶಾಸ್ತ್ರಕ್ಕೆ ಪುರಾತನ ಮರಿಹುಳು ಚಿಕಿತ್ಸೆ
ಲೇಖಕರು : ಡಾ|| ಎಂ. ಜೆ. ಸುಂದರ್‌ರಾಮ್
ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದ ಹಿರಿಯ ರೋಗಿಯ ಕಾಲಿನಲ್ಲಿ ಭಯಾನಕ ಹುಣ್ಣಾಗಿ ರಕ್ತ ಸೋರುತ್ತಿತ್ತು. ಆಸ್ಪತ್ರೆ ಸೇರಿದ ಅವರು, ಚಿಕಿತ್ಸೆಯ ಮೂಲಕ ತಮ್ಮ ಹುಣ್ಣು ಬೇಗನೇ ಗುಣವಾಗಬಹುದು ಎಂದುಕೊಂಡಿದ್ದರು. ಆದರೆ ಕಾಲುಹುಣ್ಣು ಮತ್ತಷ್ಟು ಉಲ್ಬಣವಾಗಿ, ಗುಣವಾಗುವ ಸೂಚನೆಗಳೇ ಕಾಣಲಿಲ್ಲ.
ರೋಗಿಯನ್ನು ದೀರ್ಘವಾಗಿ ತಪಾಸಣೆ ಮಾಡಿದ ವೈದ್ಯರು ರೋಗಿಯನ್ನುದ್ದೇಶಿಸಿ, ‘ನಿಮ್ಮ ಹುಣ್ಣು ಸಧ್ಯಕ್ಕೆ ವಾಸಿಯಾಗುವಂತೆ ಕಾಣುತ್ತಿಲ್ಲ. ನಿಮ್ಮ ಜೀವ ಉಳಿಸಿಕೊಳ್ಳಲು ನಿಮಗೆ ಒಂದೇ ಒಂದು ಮಾರ್ಗವಿದೆ – ಅದು ನಿಮ್ಮ ಪಾದವನ್ನು ತುಂಡರಿಸುವುದು (amputate)’ ಎಂದರು.
ವೈದ್ಯರ ಮಾತು ಕೇಳಿದ ರೋಗಿಗೆ ಮೈಮೇಲೆಲ್ಲ ಬೆವರು ಎರಚಿತು. ರೋಗಿಯ ಸ್ಥಿತಿಯನ್ನು ಗಂಭೀರವಾಗಿ ವಿಶ್ಲೇಷಿಸಿದ ವೈದ್ಯರು,
‘ನನ್ನ ಬತ್ತಳಿಕೆಯಲ್ಲಿ ಇನ್ನೊಂದು ಕೊನೆಯ ಪ್ರಯೋಗ ಅಸ್ತ್ರ ಮಾತ್ರ ಉಳಿದಿದೆ. ನೀವು ಮನಸ್ಸು ಮಾಡಿ ಒಪ್ಪಿದರೆ ಅದನ್ನೂ ಪ್ರಯೋಗಿಸಿ ನೋಡಬಹುದು’ ಎಂದರು.
ಹುರುಪಿನಿಂದ ತಡಿಬಿಡನೆ ಸಿರಿದು ಕುಳಿತ ರೋಗಿ,
‘ಯಾವುದು ಅಸ್ತ್ರ? ಅದರಿಂದ ನನ್ನ ಕಾಲು ಉಳಿಯುವುದೇ ಆದರೆ ಧಾರಾಳವಾಗಿ ಪ್ರಯತ್ನಿಸಿ’ ಎಂದರು.
‘ಏನಿಲ್ಲ. ನಿಮ್ಮ ಗಾಯದ ಮೇಲೆ ಸಣ್ಣ ಸಣ್ಣ ಹುಳುಗಳನ್ನು ಬಿಟ್ಟು ನೋಡೋಣವೆಂದಿದ್ದೇನೆ; ನಿಮ್ಮ ಗಾಯವನ್ನು ಅವು ಗುಣಪಡಿಸಬಹುದೇನೋ’ ಎಂದು ತುಂಟ ನಗೆ ನಗುತ್ತ ರೋಗಿಯತ್ತ ನೋಡಿದರು.
‘ವೈದ್ಯರೆ, ದಯವಿಟ್ಟು ತಮಾಷೆ ಮಾಡಬೇಡಿ. ಗಾಯಕ್ಕೆ ಹುಳು ಬಿಟ್ಟರೆ ನನ್ನ ಹುಣ್ಣು ಇನ್ನಷ್ಟು ಕೊಳೆಯುತ್ತ ಹದಗೆಡುತ್ತದೆ. ನಾನು ನನ್ನ ಕಾಲನ್ನು ಕಳೆದುಕೊಳ್ಳಬೇಕಾದೀತು. ನಿಮ್ಮ ಈ ಚೇಷ್ಟೆಯ ಪರಿಹಾರಕ್ಕೆ ನೂರು ನಮಗಳು. ದಯವಿಟ್ಟು ಹಾಗೆ ಮಾಡಬೇಡಿ’ ಎಂದು ರೋಗಿ ಕಂಗಾಲಾದರು.
‘ನಾನು ತಮಾಷೆ ಮಾಡುತ್ತಿಲ್ಲ. ಇದು ಸತ್ಯ. ಅನೇಕ ಕಡೆ ಈ ಚಿಕಿತ್ಸೆಯಿಂದ ನಂಬಲಾಗದಂತಹ ಒಳ್ಳೆಯ ಫಲಿತಾಂಶವನ್ನು ಕೊಟ್ಟ ವರದಿಗಳು ಬಂದಿವೆ. ವೈದ್ಯರು, ರೋಗಿಗಳಾಗಿ ಈ ಚಿಕಿತ್ಸೆಯನ್ನು ಸ್ವಾಗತಿಸಿದ್ದಾರೆ’ ಎಂದರು ವೈದ್ಯರು.
ಅವರ ನಂಬಿಕೆಯ ಮಾತುಗಳಿಂದ ರೋಗಿಗೆ ಹೊಸ ಚೈತನ್ಯ ಉಕ್ಕಿ ಬಂದು ಈ ‘ಭೀಕರ’ ಚಿಕಿತ್ಸೆಗೆ ಸಮ್ಮತಿಸಿದರು.
ಮರುದಿನ ವೈದ್ಯರು 1 ರಿಂದ 3 ಮಿ.ಮೀ. ಉದ್ದದ ಮರಿಹುಳುಗಳು (Maggots) ಇರುವ ತಾಮ್ರದ ಬೆಲೆಯ ಕಟ್ಟು ಪಟ್ಟಿ (copper-mesh bandage) ತಂದು ರೋಗಿಯ ಕಾಲು ಹುಣ್ಣನ್ನು ಸುತ್ತಿದರು. ಹಸಿದಿದ್ದ ಆ ಸಣ್ಣ ಮರಿಹುಳುಗಳು ಹುಣ್ಣಿನ ಸತ್ತಿರುವ ಭಾಗಗಳನ್ನೆಲ್ಲ ಬಕಾಸುರರಂತೆ ಭಕ್ಷಿಸುತ್ತೊಡಗಿದವು. ರೋಗಿಗೆ ಹುಣ್ಣಿನ ಸುತ್ತ ಕಚಗುಳಿ ಇಡುವ ಅನುಭವವಾಯಿತು. ಮೂರು ವಾರಗಳು ಕಳೆಯಿತು.
ನಂತರ ವೈದ್ಯರು ರೋಗಿಯ ಪಟ್ಟಿಯನ್ನು ಬಿಚ್ಚಿ ಪರಿಶೀಲಿಸಿದಾಗ ಹುಣ್ಣು ಪೂರ್ಣವಾಗಿ ಒಣಗಿ, ಗುಣವಾಗಿತ್ತು! ಆನಂದಾಶ್ಚರ್ಯಗಳಿಂದ ಆವೇಶಿತರಾದ ರೋಗಿ ಖುಷಿಯಿಂದ ವೈದ್ಯರಿಗೆ ನವಿಸು ಮಣೆಗೇ ದೌಡಾಯಿಸಿದರು.
ಇದು ಅಡಗೂಳಜ್ಜಿಯ ಕಥೆ ಎಂದುಕೊಳ್ಳಬೇಡಿ. ಇದೊಂದು ನವೀನ ವೈದ್ಯಚಿಕಿತ್ಸೆ. ಇದಕ್ಕೆ ಮರಿಹುಳು ಚಿಕಿತ್ಸೆ (maggot therapy) ಎಂದು ಹೆಸರಿದೆ. ಈ ಚಿಕಿತ್ಸೆಯನ್ನು ಉತ್ತರ ಅಮೆರಿಕ, ಯುರೋಪ್, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ಸಿಂಗಪುರ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಇರಾನ್, ದಕ್ಷಿಣ ಆಫ್ರಿಕಾ, ಇಜಿಪ್ಟ್, ಇಸ್ರೇಲ್, ಸೌದಿ ಅರೇಬಿಯಾ, ಮೆಕ್ಸಿಕೋ, ಕೊಲಂಬಿಯಾ ಮುಂತಾದ, ತಂತ್ರಜ್ಞಾನದಲ್ಲಿ ಮುಂದಿರುವ ದೇಶಗಳು ಅಳವಡಿಸಿಕೊಂಡಿವೆ.
ಅಮೆರಿಕದ 150ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ, ವಿಶ್ವದ ಸುಮಾರು ಸಾವಿರಕ್ಕೂ ಹೆಚ್ಚು ಚಿಕಿತ್ಸಾಕೇಂದ್ರಗಳಲ್ಲಿ ಈ ಚಿಕಿತ್ಸೆ ಪ್ರಸ್ತುತ ಬಳಕೆಯಲ್ಲಿದೆ. ಜೀವಂತ ಪ್ರಾಣಿಗಳಲ್ಲೂ ವೈದ್ಯಕೀಯ ಮೌಲ್ಯವಿದೆ ಎಂಬುದನ್ನು ಮರಿಹುಳು ಚಿಕಿತ್ಸೆ ದೃಢಪಡಿಸುತ್ತದೆ.
ಸಕ್ಕರೆ ರೋಗಿಯ ಗಾಯದ ಸುತ್ತ ಇರುವ ನರಗಳು ದುರ್ಬಲವಾಗಿ, ರಕ್ತ ಪರಿಚಲನೆ ಕುಂದುತ್ತದೆ. ಇದರಿಂದ ಗಾಯದೊಡನೆ ಹೋರಾಡುವ ಬಿಳಿ ರಕ್ತಕಣಗಳು ಮತ್ತು ರಾಸಾಯನಿಕಗಳು ಗಾಯದ ಸ್ಥಳಕ್ಕೆ ಬರಲಾರದೆ, ಗಾಯ ದಿನೇ ದಿನೇ ಉಗ್ರವಾಗುತ್ತದೆ. ಗಾಯದ ಸುತ್ತ ಕೋಶಗಳು ಬೆಳೆಯದಂತೆ ತಡೆದು, ಗಾಯ ಒಣಗಲು ಬೇಕಾದ ಕೊಲಾಜೆನ್ ನಾರುಗಳನ್ನು ಕರಗಿಸಿಬಿಡುತ್ತವೆ. ಇದರಿಂದ ಗಾಯ ದೊಡ್ಡದಾಗಿ, ವ್ರಣವಾಗುತ್ತದೆ. ಬ್ಯಾಕ್ಟೀರಿಯಾಗಳು ಕೂಡಲೇ ಗಾಯವನ್ನು ಆಕ್ರಮಿಸಿ ತೆಳುವಾದ ಜೈವಿಕ ಪಟಲ (biofilm)ವಾಗಿ ಗಾಯವನ್ನು ಹೊದಿಕೆಯಂತೆ ಆವರಿಸುತ್ತವೆ. ಈ ಪಟಲವು ಆಂಟಿಬಯೋಟಿಕ್ ಮತ್ತು ಔಷಧಗಳು ಬ್ಯಾಕ್ಟೀರಿಯಾವನ್ನು ಸಮೀಪಿಸದಂತೆ ತಡೆಯುತ್ತದೆ. ಜೈವಿಕ ಪಟಲ ಹಾಗೂ ಸತ್ತ ಅಂಗಾಂಶಗಳಿಂದ ಆವೃತವಾಗಿರುವವರೆಗೆ ಅತ್ಯಾಧುನಿಕ ಚಿಕಿತ್ಸೆಗಳೂ ಗಾಯಗಳನ್ನು ಗುಣಪಡಿಸಲಾರವು.
ನೆಪೋಲಿಯನ್‌ನ ಫ್ರೆಂಚ್ ಸೈನ್ಯದಲ್ಲಿದ್ದ ಕೆಲವು ಸೈನಿಕರು ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡರು. ಅನೇಕ ಮರಿಹುಳುಗಳು (maggots) ರೋಗಿಗಳ ಗಾಯಗಳನ್ನು ಮುತ್ತಿಕೊಂಡಿರುವ ದೃಶ್ಯವನ್ನು ನೋಡಿದ ಅಮ್ರೋಯ್ಸ್ ಪಾರೆ (Amroise Pare) ಎಂಬ ಫ್ರೆಂಚ್ ಶಸ್ತ್ರಚಿಕಿತ್ಸಾ ವೈದ್ಯರು ಭಯಭೀತರಾದರು. ಇವುಗಳಿಂದ ಗಾಯಗಳಿಗೆ ಸೋಂಕಾಗಬಹುದೆಂದು ತಿಳಿದು ಮರಿಹುಳುಗಳನ್ನು ಗಾಯದಿಂದ ಬೇರ್ಪಡಿಸಿ ಶುದ್ಧಿ ಮಾಡಲಾರಂಭಿಸಿದರು. ಮತ್ತೊಬ್ಬ ರೋಗಿಯ ತಲೆಬುರುಡೆಯಲ್ಲಿ ಆಳವಾದ ಗಾಯವಾಗಿದ್ದು, ಅವನು ಬದುಕುಳಿಯಲಾರನೆಂದೆನಿಸಿತು. ಆದರೆ, ಕೆಲವು ದಿನಗಳ ನಂತರ ಅವನ ಬುರುಡೆಯ ಗಾಯ ಇತರ ಸೈನಿಕರಿಗಿಂತ ಬೇಗನೆ ಗುಣವಾಗತೊಡಗಿತು. ಕುತೂಹಲದಿಂದ ಗಮನಿಸಿದಾಗ ಅನೇಕ ಮರಿಹುಳುಗಳು ಅವನ ಬುರುಡೆಗಾಯದಿಂದ ಹೊರಬರುತ್ತಿರುವ ಅಪರೂಪದ ದೃಶ್ಯವನ್ನು ಕಂಡು ಆಶ್ಚರ್ಯಪಟ್ಟರು. ಅವನ ಗಾಯ ಬೇಗನೆ ಗುಣವಾಗಲು ಈ ಮರಿಹುಳುಗಳೇ ಕಾರಣವೆಂದು ಆಗ ಅವರಿಗೆ ಹೊಳೆಯಿತು.
ಗಾಯಗಳ ಮೇಲೆ ಹುಳುಗಳನ್ನು ಉದ್ದೇಶಪೂರ್ವಕವಾಗಿ ಲೇಪಿಸಿ ಅವುಗಳ ಕಾರ್ಯತಂತ್ರವನ್ನರಿಯುವ ಪ್ರಯತ್ನ ಅಮೆರಿಕದ ಅಂತರ್ಯುದ್ಧದ (American Civil War) ಕಾಲದಲ್ಲಿ ಕೆಲವು ವೈದ್ಯರು ಪ್ರಯತ್ನಿಸಿದರೆಂಬ ಮಾಹಿತಿಯಿದೆ. ಮೊದಲ ಮಹಾಯುದ್ಧದಲ್ಲಿ ಅನೇಕ ಸೈನಿಕರು ತೀವ್ರ ಗಾಯಗೊಂಡು, ಸೋಂಕಿನಿಂದ ನರಳುತ್ತಿದ್ದಾಗ ಅವರನ್ನು ಆರೈಕೆ ಮಾಡುತ್ತಿದ್ದ ವಿಲಿಯಂ ಬೇಯರ್ (William Baer) ಎಂಬ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವೈದ್ಯರು, ಅವರ ಗಾಯಗಳನ್ನು ಅನೇಕ ಮರಿಹುಳುಗಳು ಮುತ್ತಿಕೊಂಡಿರುವುದನ್ನು ಗಮನಿಸಿದರು. ಅಸಹ್ಯಪಡುತ್ತಾ ಅವನ್ನು ಹೊರತೆಗೆದು ಗಾಯಗಳನ್ನು ಶುದ್ಧೀಕರಿಸಲು ಹೊರಟರು. ಆಗ ಅವರಿಗೆ ಸೆರೆಂಡಿಪಿಟಿಯ ಬಾಣ ನಾಟಿತು! ಮರಿಹುಳುಗಳು ಮುತ್ತಿದ್ದ ಗಾಯಗಳಿಗೆ ಸೋಂಕು ತಗಲದೆ ಇದ್ದುದನ್ನು ಗಮನಿಸಿದರು. ಬದಲಿಗೆ, ಅವು ಬೇಗನೆ ಗುಣವಾಗುತ್ತಿದ್ದವು! ಹುಳುಗಳಿಲ್ಲದ ಗಾಯಗಳಲ್ಲಿ ಸೋಂಕು ಮತ್ತು ಊತಗಳು ಎದ್ದು ಕಾಣುತ್ತಿದ್ದವು. ಇದರಿಂದ, ಈ ಹುಳುಗಳಿಂದ ಗಾಯಗಳಿಗೆ ಸೋಂಕು ತಗುಲದೆಂದೂ, ಈ ಹುಳುಗಳಿಂದ ಗಾಯಗಳು ಬೇಗನೆ ಗುಣವಾಗುತ್ತವೆಂದೂ ಬೇಯರ್ ಅರಿತರು. ಈ ಮರಿಹುಳುಗಳಿಂದ ಸಾವಿನ ಭೀತಿಯಲ್ಲಿದ್ದ ಅನೇಕ ಸೈನಿಕರು ಸಾವಿನಿಂದ ತಪ್ಪಿಸಿಕೊಂಡು ಬದುಕುಳಿದಿದ್ದರು. ತಮ್ಮ ವೀಕ್ಷಣೆಯನ್ನು ಮುಂದುವರಿಸಿದ ಬೇಯರ್‌ಗೆ ಮರಿಹುಳುಗಳ ಮೈಸುತ್ತ ಲೋಳೆದ್ರವವು ಆವರಿಸಿರುವುದು ಕಂಡುಬಂದಿತು. ಲೋಳೆಯನ್ನು ತೆಗೆದು ಅದನ್ನು ಗಾಯಗಳ ಮೇಲೆ ಲೇಪಿಸಿದಾಗ ಗಾಯಗಳು ಬೇಗನೆ ಗುಣವಾಗತೊಡಗಿದವು. ಈ ಹುಳುಗಳು ಗಾಯದ ಕೊಳೆತು ಸತ್ತ, ಸೋಂಕಿತ ಭಾಗಗಳನ್ನು ಮಾತ್ರ ಭಕ್ಷಿಸಿ, ಆರೋಗ್ಯಕರ ಭಾಗಗಳನ್ನು ಹಾಗೆಯೇ ಉಳಿಸುತ್ತವೆಂದು ಸಂಶೋಧನೆಗಳು ತೋರಿಸಿದವು.
ಮರಿಹುಳುಗಳ ದೇಹವನ್ನು ಆವರಿಸಿರುವ ಲೋಳೆದ್ರವಕ್ಕೆ ಗಾಯವನ್ನು ಗುಣಪಡಿಸುವ ಅದ್ಭುತ ಸಾಮರ್ಥ್ಯವಿದೆ. ಹಾಲೆಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ಗ್ವೆಂಡೊಲಿನ್ ಕಜಾಂಡರ್ (Gwendolyn Cazander) ಎಂಬ ವೈದ್ಯೆ ಮತ್ತು ಅವರ ತಂಡ ಸೋಂಕಳಿಸಿದ (disinfected) ಮರಿಹುಳುಗಳ ಲೋಳೆ ದ್ರವವನ್ನು ಇಳಿಕೊಳವೆ (siphon) ಮೂಲಕ ಹೀರಿತೆಗೆದು ಮನುಷ್ಯನ ಮೇಲೆ ಸಂಶೋಧನೆ ನಡೆಸಿ, ಅವು ನಮ್ಮ ದೇಹದ ರಕ್ಷಣಾ ವ್ಯೂಹವನ್ನು ನಿಷ್ಕ್ರಿಯಗೊಳಿಸುತ್ತದೆಯೆಂದು ಕಂಡುಹಿಡಿದಿದ್ದಾರೆ.
ಸಂಶೋಧಕರು ನಾಲ್ವರು ಆರೋಗ್ಯವಂತ ರಕ್ತದಾನಿಗಳ ರಕ್ತದ ಮಾದರಿಗಳಿಗೆ ಲೋಳೆದ್ರವವನ್ನು ಬೆರೆಸಿದರು. ಆಗ ಆ ರಕ್ತಗಳ ರಕ್ಷಣಾವ್ಯೂಹ (immune system) ದುರ್ಬಲವಾದದ್ದು ಕಂಡುಬಂದಿತು. ಒಂದು ದಿನದ, ಒಂದು ವಾರದ, ಒಂದು ತಿಂಗಳ ಹಳೆಯ ಮರಿಹುಳುಗಳ ದೇಹದ್ರವವನ್ನು ಪರೀಕ್ಷಿಸಿದಾಗ ಅವು ತಮ್ಮ ಸಾಮರ್ಥ್ಯ/ಬಲುವೆ (potency)ಯನ್ನು ಕೊಂಚವೂ ಕಳೆದುಕೊಂಡಿರಲಿಲ್ಲವೆಂಬುದು ಗೊತ್ತಾಯಿತು. ದ್ರವವನ್ನು ಕುದಿಸಿ ಪ್ರಯೋಗಿಸಿದಾಗ ಅದರ ಸಾಮರ್ಥ್ಯ ಮೊದಲಿಗಿಂತಲೂ ಪ್ರಬಲವಾಗಿದ್ದುದನ್ನು ನೋಡಿ ಆಶ್ಚರ್ಯಪಟ್ಟರು. ಈ ದ್ರವವು ನಮ್ಮ ರಕ್ಷಣಾವ್ಯೂಹವನ್ನು ನಿಷ್ಕ್ರಿಯ ಗೊಳಿಸುವುದೆಂದು ಕಜಾಂಡರ್ ಕಂಡುಹಿಡಿದರು. ರಕ್ಷಣಾವ್ಯೂಹ ನಿಷ್ಕ್ರಿಯವಾಗದಿದ್ದರೆ ಅದು ಮರಿಹುಳುಗಳ ಮೇಲೆ ದಾಳಿಮಾಡಿ ಅವನ್ನು ನಾಶಮಾಡುತ್ತದೆಂದು ಕಜಾಂಡರ್ ಅಭಿಪ್ರಾಯ ಪಟ್ಟರು. ರಕ್ಷಣಾವ್ಯೂಹವನ್ನು ನಿಷ್ಕ್ರಿಯಗೊಳಿಸುವ ಆ ಅಂಶವನ್ನು ದ್ರವದಿಂದ ಬೇರ್ಪಡಿಸುವ ಕೆಲಸದಲ್ಲಿ ಸಂಶೋಧಕರು ತೊಡಗಿದ್ದಾರೆ.
1920ರಿಂದ ವೈದ್ಯರು ಅನೇಕ ದೇಶಗಳಲ್ಲಿ ಮರಿಹುಳುಗಳನ್ನು ಚಿಕಿತ್ಸೆಗೆ ಬಳಸಲಾರಂಭಿಸಿದರು. 1930ರ ವೇಳೆಗೆ ಅನೇಕ ವೈದ್ಯರು ಸೋಂಕು ತಗುಲಿದ ಮತ್ತು ನಿದುಗಾಲದ ಅಂಗಾಂಶ ಚಿಕಿತ್ಸೆಗೆ ಹುಳುಗಳನ್ನು ವ್ಯಾಪಕವಾಗಿ ಬಳಸತೊಡಗಿದರು.
ಮರಿಹುಳುಗಳ ತಯಾರಿಕೆ
ಮರಿಹುಳುಗಳನ್ನು ಮೊದಲು ನಿಷ್ಕ್ರಿಮಿ (disinfect) ಗೊಳಿಸಿ, ಇವನ್ನು ಔಷಧೀಯ ಮರಿಗಳು (medicinal maggots) ಎಂದು ಕರೆಯುತ್ತಾರೆ. ಗಾಯಗಳನ್ನು ಸಾಮಾನ್ಯ ಉಪ್ಪು ನೀರಿನಿಂದ ತೊಳೆದು ಜಿಡ್ಡು, ಕೊಳೆತೆಗೆದು ಶುದ್ಧೀಕರಿಸಿ, ಹುಳುಗಳನ್ನು ಗಾಯದ ಮೇಲಿಡುತ್ತಾರೆ. ಇವು ಗಾಯಗಳಿಂದ ತಪ್ಪಿಸಿಕೊಂಡು ಹೋಗದಂತೆ ಡ್ರೆಸ್ಸಿಂಗ್ ಮಾಡಿ ಗಾಯಪಟ್ಟಿ ಕಟ್ಟುತ್ತಾರೆ.
ಪ್ರಾರಂಭದಲ್ಲಿ, ಕೈಬೆರಳ ಒಂದು ಸಣ್ಣಗಾಯಕ್ಕೆ 5ರಿಂದ 6 ಮರಿಹುಳುಗಳನ್ನೂ, ಗಂಭೀರವಾದ ದೊಡ್ಡ ಗಾಯಗಳಿಗೆ 500ರಿಂದ 600 ಮರಿಹುಳುಗಳನ್ನೂ ಬಳಸುತ್ತಿದ್ದರು. ಆದರೆ ಒಂದು ವೈಜ್ಞಾನಿಕ ಸಂಶೋಧನೆಗಳ ಬಳಿಕ, ಒಂದು ಚದರ ಸೆಂಟಿಮೀಟರ್ ಅಗಲದ ಗಾಯಕ್ಕೆ ಹತ್ತು ಮರಿಹುಳುಗಳನ್ನು ಬಿಡುತ್ತಾರೆ.
ದಿನದಿನಕ್ಕೆ, ಮರಿಹುಳು ಚಿಕಿತ್ಸೆ ಜನಪ್ರಿಯವಾಗತೊಡಗಿತು. ಆದರೆ, ಕಾಲಕ್ರಮದಲ್ಲಿ, ಇದ್ದಕ್ಕಿದ್ದಂತೆ ಈ ಚಿಕಿತ್ಸೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳತೊಡಗಿತು. ಇದಕ್ಕೆ ವಿಜ್ಞಾನಿಗಳು ಮೂರು ಪ್ರಮುಖ ಕಾರಣಗಳನ್ನು ಕೊಡುತ್ತಾರೆ:
ಗಾಯದ ಮೇಲಿನ ಮರಿಹುಳುಗಳು ತಪ್ಪಿಸಿಕೊಂಡು ಹೋಗದಂತೆ ಅವನ್ನು ಕಾಪಾಡುವುದು ಪ್ರಯಾಸದ ಕೆಲಸವಾಗಿತ್ತು.
ನಿಷ್ಕ್ರಿಮಿಗೊಳಿಸಿದ ಜೀವಂತ ಮರಿಹುಳುಗಳು ಸುಲಭವಾಗಿ ದೊರಕುತ್ತಿರಲಿಲ್ಲ.
ಮರಿಹುಳುಗಳು ಲಭ್ಯವಿದ್ದರೂ ಅವುಗಳನ್ನು ಕೊಂಡುಕೊಳ್ಳುವುದು ಬಹಳ ದುಬಾರಿಯಾಗಿತ್ತು.
ಇದೇ ಸಮಯಕ್ಕೆ, ಆಧುನಿಕ ಪರ್ಯಾಯ ಚಿಕಿತ್ಸೆಗಳು ಬರತೊಡಗಿ, ವೈದ್ಯರನ್ನು ಚಂಚಲಗೊಳಿಸಿದವು. ಇವುಗಳಲ್ಲಿ ಅತಿಮುಖ್ಯವಾದುದು ಪೆನಿಸಿಲಿನ್. ಇದು ಒಂದು ಲೇಪನವಾಗಿ 1940ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಇದರಿಂದ ಆಕರ್ಷಿತರಾದ ವೈದ್ಯರು, ಮರಿಹುಳು ಚಿಕಿತ್ಸೆ ದಿಢೀರ್ ಉಪಶಮನವನ್ನು ಕೊಡಲಾರದೆಂದೂ, ಅದು ಅಸಹ್ಯಕರವೆಂದೂ, ಘೋರವಾದುದೆಂದೂ ತಮ್ಮ ರೋಗಿಗಳಿಗೆ ಉಪದೇಶಿಸಿ ಅವರನ್ನು ನಂಬಿಸಿ ಒಪ್ಪಿಸಿದರು. ಮರಿಹುಳು ಚಿಕಿತ್ಸೆಯನ್ನು ಕ್ರಮೇಣ ಕಡೆಗಣಿಸಿ ಕೊನೆಗೆ ಪೂರ್ತಿಯಾಗಿ ಪೆನಿಸಿಲಿನ್ ಔಷಧಿಯನ್ನೇ ಅವಲಂಬಿಸಲಾರಂಭಿಸಿದರು. ಇದೇ ವೇಳೆಗೆ, ಬಹುತೇಕ ರೋಗಗಳಿಗೆ ಸೂಕ್ಷ್ಮಜೀವಿಗಳೇ ಕಾರಣವೆಂದು 19ನೇ ಶತಮಾನದ ಉತ್ತರಾರ್ಧದಲ್ಲಿ, ಲೂಯಿ ಪಾಶ್ಚರ್ ತಮ್ಮ ರೋಗಾಣುವಾದವನ್ನು ಮಂಡಿಸಿದರು. ಇದರಿಂದಲೂ ಪ್ರಭಾವಿತರಾದ ವೈದ್ಯರು, ಗಾಯಗಳಿಗೆ ಮರಿಹುಳುಗಳ ಮೂಲಕ ಸೋಂಕು ತಗಲುವ ಸಾಧ್ಯತೆಯಿರುವುದನ್ನು ಶಂಕಿಸಿ, ಮರಿಹುಳು ಚಿಕಿತ್ಸೆಯನ್ನು ಪೂರ್ತಿಯಾಗಿ ಕೈಬಿಟ್ಟರು. ಈ ಕಾರಣಗಳಿಂದ ಮರಿಹುಳು ಚಿಕಿತ್ಸೆ ಜನಪ್ರಿಯತೆಯನ್ನು ಕಳೆದುಕೊಂಡು ಸಹಜ ಸಾವನ್ನಪ್ಪಿತು.
ವರ್ಷಗಳುರುಳಿದಂತೆ ಪೆನಿಸಿಲಿನ್‌ನ ಮಾರಕ ಪ್ರಭಾವವನ್ನು ಎದುರಿಸಿ ನಿಲ್ಲಬಲ್ಲ ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡವು. ಇದರಿಂದ ನಿಸ್ಸಹಾಯಕರಾದ ವೈದ್ಯರು ‘ಹಳೇ ಗಂಡನ ಪಾದವೇ ಗತಿ’ ಎಂಬಂತೆ, ಮತ್ತೆ ಮರಿಹುಳುಗಳ ಮೊರೆಹೋದರು. ಮರೆತುಹೋಗಿದ್ದ ಮರಿಹುಳು ಚಿಕಿತ್ಸೆ ಮತ್ತೆ ಮರುಕಳಿಸಿ ಕುದುರತೊಡಗಿತು.
1989ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವೈದ್ಯರುಗಳಾದ ರೊನಾಲ್ಡ್ ಶರ್ಮನ್ (Ronald Sherman) ಮತ್ತು ಎಡ್ವರ್ಡ್ ಪೆಕ್ಟರ್ (Edward Pechter) ಗಾಯಗಳು ಮಾಯದ ರೋಗಿಗಳಲ್ಲಿ ಮತ್ತೊಮ್ಮೆ ಮರಿಹುಳು ಚಿಕಿತ್ಸೆಯನ್ನು ಪ್ರಾರಂಭಿಸಿ ಅದಕ್ಕೆ ಮರುಜೀವ ಕೊಟ್ಟರು. ಡಯಾಬಿಟಿಸ್ ರೋಗಿಯೊಬ್ಬ ಶರ್ಮನ್‌ನಿಂದ ಚಿಕಿತ್ಸೆ ಪಡೆಯಲು ಅವರನ್ನು ಕಾಣಲು ಬಂದಿದ್ದ. ಅವನ ಕಾಲಿನಲ್ಲಿ ದೊಡ್ಡಗಾತ್ರದ ಗಾಯವಾಗಿತ್ತು. ಗಾಯವನ್ನು ಅನೇಕ ಮರಿಹುಳುಗಳು ಮುತ್ತಿಕೊಂಡಿದ್ದವು. ಅವನನ್ನು ಪರೀಕ್ಷಿಸಲು ಹೊರಟ ಶರ್ಮನ್ ಮತ್ತು ಪೆಕ್ಟರ್ ಕಾಲಿನ ಗಾಯವನ್ನು ಕಂಡು ಬೆಚ್ಚಿಬಿದ್ದು ಅಸಹ್ಯ ಪಟ್ಟರು. ಗಾಯವನ್ನು ಗಮನವಿಟ್ಟು ವೀಕ್ಷಿಸಿದಾಗ ಗಾಯದಲ್ಲಿ ಸೋಂಕಿರಲಿಲ್ಲ. ಅಷ್ಟೇ ಅಲ್ಲ, ಹೊಸ ಆರೋಗ್ಯಕರ ಅಂಗಾಂಶಗಳು ಬೆಳೆಯುತ್ತಿರುವುದು ಗೋಚರಿಸಿತು. ಈ ವಿಚಿತ್ರವನ್ನು ನೋಡಿ ಶರ್ಮನ್ ಬೆರಗಾದರು. ಅವರ ಕುತೂಹಲ ಕೆರಳಿತು. ಗಾಯವನ್ನು ಗುಣಪಡಿಸುವಲ್ಲಿ ಈ ಮರಿಹುಳುಗಳು ಪ್ರಬಲ ಪಾತ್ರವನ್ನು ವಹಿಸುತ್ತವೆ ಎಂದು ಮನಗಂಡರು.
ಕೀಟಶಾಸ್ತ್ರ (Entomology) ದಲ್ಲಿ ಪದವೀಧರರಾಗಿದ್ದ ಶರ್ಮನ್, ರೋಗಚಿಕಿತ್ಸೆಯಲ್ಲಿ ಕೀಟಗಳ ಪಾತ್ರದ ಬಗ್ಗೆ ವಿಶೇಷ ಅಧ್ಯಯನ ಮಾಡುತ್ತಿದ್ದರು. ‘ಇಂದು ಮರಿಹುಳು ಚಿಕಿತ್ಸೆ ಕಡಿಮೆ ಖರ್ಚಿನ, ಅರಿವಳಿಕೆ ಬಳಸದ, ಅಡ್ಡಪರಿಣಾಮಗಳಿಲ್ಲದ ಚಿಕಿತ್ಸೆಯಾಗಿದೆ. ಗಾಯಗಳು ಗುಣವಾದ ನಂತರ ಅತಿ ಹಗುರವಾದ ಗಾಯದ ಕಲೆಗಳು ಉಳಿಯುತ್ತವೆ’ ಎಂದು ಹೇಳಿಕೆ ಕೊಟ್ಟರು. ನಂಜುರೋಧಕ ಚಿಕಿತ್ಸೆಗೊಳಗಾದ ರೋಗಿಗಳಿಗಿಂತಲೂ ಮರಿಹುಳು ಚಿಕಿತ್ಸೆಗೊಳಗಾದ ರೋಗಿಗಳಲ್ಲಿ ಗಾಯಗಳು ಸುಮಾರು ನಾಲ್ಕು ವಾರಗಳ ಮುಂಚೆಯೇ ಗುಣವಾಗುವುದೆಂದು ತೋರಿಸಿಕೊಟ್ಟರು. ಕೈ, ಕಾಲು ತುಂಡರಿಸುವ ಸ್ಥಿತಿಯಲ್ಲಿದ್ದ ಸುಮಾರು 40ರಿಂದ 50% ರೋಗಿಗಳಲ್ಲಿ ಮರಿಹುಳು ಚಿಕಿತ್ಸೆ ಅತ್ಯಾಶ್ಚರ್ಯಕರ ರೀತಿಯಲ್ಲಿ ವರ್ತಿಸಿ ಗಾಯವನ್ನು ಸಂಪೂರ್ಣವಾಗಿ ಗುಣಪಡಿಸಿ ತುಂಡರಿಕೆಯಿಂದ ಅವರನ್ನು ಪಾರುಮಾಡಿತು.

1995ರಿಂದ ಮರಿಹುಳು ಚಿಕಿತ್ಸೆಯನ್ನು ಪುನಃಸ್ಥಾಪಿಸಿದ ವೈದ್ಯರುಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಗಾಯಗಳು 2-3 ಸುತ್ತಿನಲ್ಲಿ ಸಾಂಪ್ರದಾಯಿಕ ಚಿಕಿತ್ಸೆಗಳಿಗೆ ಸ್ಪಂದಿಸದಿದ್ದರೆ, ವೈದ್ಯರು ಮರಿಹುಳು ಚಿಕಿತ್ಸೆಯತ್ತ ತಿರುಗುತ್ತಾರೆ. ಈ ಚಿಕಿತ್ಸೆಗೆ ಯಾವುದೇ ನೊಣದ ಮರಿಹುಳುಗಳನ್ನು ಬಳಸಲಾಗದು. ಆದರೆ ಹಸಿರು ಹೊಲೆನೊಣ (blowfly–Lucilia sericata) ಮತ್ತು (Protophormia terraenovae)ಗಳನ್ನು ವಿಶೇಷವಾಗಿ ಆಯ್ದುಕೊಳ್ಳುತ್ತಾರೆ. ಈ ಮರಿಹುಳುಗಳೇ ಈ ಚಿಕಿತ್ಸೆಗೆ ಸೂಕ್ತವಾಗಿವೆ. ಇವುಗಳ ಮೂತಿಯ ಮುಂಭಾಗದಲ್ಲಿ ಹಲ್ಲಿನಂತಹ ರಚನೆಗಳಿದ್ದು ಇವು ಹುಣ್ಣಿನ ಸತ್ತ ಭಾಗಗಳನ್ನು ತಿವಿದು, ಕೆರೆದು, ಬೇರ್ಪಡಿಸಿ, ಕಿಣ್ವಗಳಿರುವ ದ್ರವವನ್ನು ಹುಣ್ಣಿನ ಮೇಲೆ ಉಗುಳುತ್ತವೆ. ಹುಣ್ಣಿನ ಸುತ್ತಮುತ್ತಲ ಸತ್ತ ಅಂಗಾಂಶಗಳು ದ್ರವದಲ್ಲಿ ಕರಗುತ್ತವೆ. ಹುಳುಗಳು ಕರಗಿದ ದ್ರವವನ್ನು ಹೀರಿಕೊಳ್ಳುತ್ತವೆ.

ಮರಿಹುಳುಗಳ ಕಾರ್ಯತಂತ್ರ
ಈ ಮರಿಹುಳುಗಳು ಗಾಯಗಳನ್ನು ಹೇಗೆ ಚಿಕಿತ್ಸೆ ಮಾಡಬಲ್ಲವು? ಮರಿಹುಳು ಚಿಕಿತ್ಸೆಯಲ್ಲಿ ಮೊದಲನೇ ಹಂತ (Instar)ದ ಲಾರ್ವಾಗಳನ್ನು ಗಾಯದ ಮೇಲಿಡುತ್ತಾರೆ. 5 ನಿಮಿಷಗಳಲ್ಲಿ ಒಂದು ಲಾರ್ವಾ ತನ್ನ ದೇಹತೂಕದ ಸುಮಾರು ಅರ್ಧದಷ್ಟು ಆಹಾರವನ್ನು ಸೇವಿಸಬಲ್ಲದು. ಅವು ಗಾಯದ ಕೊಳೆತು ಸತ್ತಿರುವ ಭಾಗಗಳನ್ನು ದ್ರವವಾಗಿ ಕರಗಿಸಿಬಿಡುತ್ತವೆ. ಆದರೆ ಆರೋಗ್ಯಕರ ಅಂಗಾಂಶಗಳಿಗೆ ಕೆಡುಕು ಮಾಡದೆ, ಸೂಕ್ಷ್ಮ ಶಸ್ತ್ರಚಿಕಿತ್ಸಾ ವೈದ್ಯರ (microsurgeons) ರೀತಿಯಲ್ಲಿ ವರ್ತಿಸುತ್ತವೆ. ಇಂತಹ ಶಸ್ತ್ರಚಿಕಿತ್ಸಾ ನಿಪುಣತೆಯೊಂದಿಗೆ ಬಾಹ್ಯ ಮತ್ತು ಆಂತರಿಕ ಬ್ಯಾಕ್ಟೀರಿಯಾಗಳನ್ನು ನಿರ್ಮೂಲ ಮಾಡಿ ನಿದುಗಾಲದ ಗಾಯಗಳ ಚಿಕಿತ್ಸೆ ಮಾಡಬಲ್ಲ ಅತಿ ಪ್ರಬಲವಾದ ಅಸ್ತ್ರವಾಗಿವೆ.
ಇವು ಗಾಯದ ಮೇಲೆ ಐದು ರೀತಿಗಳಲ್ಲಿ ಕಾರ್ಯ ನಿರ್ವಹಿಸುತ್ತವೆ: (1) ಗಾಯದ ಸುತ್ತಲೂ ಇರುವ ಕೊಳೆತು ಸತ್ತ ಅಂಗಾಂಶಗಳನ್ನು ನಾಶಮಾಡಿ ಆರೋಗ್ಯಕರ ಅಂಗಾಂಶಗಳನ್ನು ಅನಾವರಣಗೊಳಿಸುತ್ತವೆ. (2) ಸೋಂಕು ನಿವಾರಣೆ (disinfect) ಮಾಡುತ್ತದೆ. (3) ಗಾಯ ಗುಣಪಡಿಸಲು ನೆರವಾಗುತ್ತದೆ. (4) ಜೈವಿಕ ಪಟಲ (biofilm) ರೂಪಗೊಳ್ಳದಂತೆ ತಡೆಯುತ್ತದೆ. (5) ಗಾಯವನ್ನು ಸ್ವಚ್ಛಗೊಳಿಸುತ್ತದೆ. ಹುಳುಗಳು ದ್ರವವೊಂದನ್ನು ಸ್ರವಿಸುತ್ತವೆ. ಇದರಲ್ಲಿ ಕಾರ್ಬಾಕ್ಸಿಪೆಪ್ಟಿಡೇಸ್, ಅಮೈನೊಪೆಪ್ಟಿಡೇಸ್, ಕೊಲಾಜಿನೇಸ್, ಟ್ರಿಪ್ಸಿನ್, ಕೈಮೊಟ್ರಿಪ್ಸಿನ್‌ನಂತಹ ಕಿಣ್ವಗಳಿರುತ್ತವೆ. ಇವು ಗಾಯದ ಸತ್ತು, ಕೊಳೆತ ಭಾಗಗಳು ಮತ್ತು ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕರಗಿಸಿ, ಕರಗಿದ ಭಾಗಗಳನ್ನೊಳಗೊಂಡ ದ್ರವವನ್ನು ಹೀರಿಕುಡಿಯುತ್ತವೆ. ಇದರಿಂದ ಗಾಯಗಳು ಬಲುಬೇಗ ಒಣಗಲಾರಂಭಿಸುತ್ತವೆ. ಈ ವೈದ್ಯಕೀಯ ಮರಿಹುಳುಗಳು ಗಾಯದ ಆರೋಗ್ಯಕರ ಅಂಗಾಂಶಗಳನ್ನು ತಿನ್ನುವುದಿಲ್ಲ. ಗಾಯದ ಸತ್ತ ಭಾಗಗಳನ್ನು ತಿಂದ ಮೇಲೆ ಅಥವಾ ಅವುಗಳ ಹಸಿವು ನೀಗಿದ ಮೇಲೆ ಗಾಯವು ಸ್ವಚ್ಛವಾಗುತ್ತದೆ. ಆಗ ಈ ಮರಿಹುಳುಗಳು ಆ ತಾವನ್ನು ಬಿಟ್ಟು, ಬೇರೆಡೆ ಹೊರಟುಹೋಗುತ್ತವೆ. ಆದ್ದರಿಂದ ಗಾಯಗಳ ಆರೋಗ್ಯಕರ, ಜೀವಂತ, ಭಾಗಗಳಿಗೆ ತೊಂದರೆಯಾಗದು. ಶಸ್ತ್ರಚಿಕಿತ್ಸಾ ವೈದ್ಯರಿಗಿಂತ ಈ ಹುಳುಗಳು ಅತಿ ಶೀಘ್ರವಾಗಿಯೂ ಸರಳವಾಗಿಯೂ ಗಾಯವನ್ನು ಶುದ್ಧಿಮಾಡಬಲ್ಲವೆಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ‘ಮರಿಹುಳುಗಳು ಸೂಕ್ಷ್ಮ ಶಸ್ತ್ರಚಿಕಿತ್ಸಾ ವೈದ್ಯರಿದ್ದಂತೆ. ಶಸ್ತ್ರವೈದ್ಯರು ವೈದ್ಯಚೂರಿ (scalpel), ಕತ್ತರಿಯಿಂದ ಮಾಡಲಾಗದ ಕೆಲಸವನ್ನು ಈ ಹುಳುಗಳು ಅಚ್ಚುಕಟ್ಟಾಗಿ ಮಾಡುತ್ತವೆ’ ಎಂದು ವೈದ್ಯರು ಹೇಳುತ್ತಾರೆ.

ಈಗಿನ ಮಾಹಿತಿಯಂತೆ, ಮೂರು ಪ್ರೋಟೀನುಲಯಕಾರಿ ಕಿಣ್ವಗಳನ್ನು (Proteolytic enzymes) ಮರಿಹುಳುಗಳ ಮಲ ಮತ್ತು ಸುರಿಕೆಗಳಲ್ಲಿ ಗುರುತಿಸಲಾಗಿದೆ. ಈ ಕಿಣ್ವಗಳು ಜೀವಕೋಶದಾಚೆಗಿನ ವಸ್ತುಗಳನ್ನು ಸ್ವಚ್ಛಗೊಳಿಸುತ್ತವೆ. ಮರಿಹುಳುಗಳ ಮಲ ಮತ್ತು ಸುರಿಕೆಗಳಲ್ಲಿ ಬ್ಯಾಕ್ಟೀರಿಯಾನಾಶಕ ವಸ್ತುಗಳಿರುವುದನ್ನು ಗುರುತಿಸಿದ್ದಾರೆ. ಒಂದು ಪರಿಕಲ್ಪನೆಯ (hypothesis) ಪ್ರಕಾರ ಮರಿಹುಳುಗಳು ಅಮೋನಿಯಾವನ್ನು ವಿಸರ್ಜಿಸಿ ಗಾಯದ ಕ್ಷಾರತೆ (pH)ಯನ್ನು ಹೆಚ್ಚಿಸಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪ್ರತಿಕೂಲಕರ ಪರಿಸರವನ್ನು ಸೃಷ್ಟಿಸುತ್ತದೆ.
ಮತ್ತೊಂದು ಪರಿಕಲ್ಪನೆಯ ಪ್ರಕಾರ, ಮರಿಹುಳುಗಳು ಬ್ಯಾಕ್ಟೀರಿಯಾಗಳನ್ನು ಭಕ್ಷಿಸಿ ತಮ್ಮ ಜೀರ್ಣಾಂಗವ್ಯೂಹದಲ್ಲಿ ಅವನ್ನು ಜೀರ್ಣಿಸುತ್ತವೆ. ಮರಿಹುಳುಗಳ ಗಂಟಲಿನಲ್ಲಿ 67% ಬ್ಯಾಕ್ಟೀರಿಯಾಗಳಿದ್ದು, ಜೀರ್ಣಾಂಗವ್ಯೂಹದ ಅಂತಿಮ ಭಾಗದಲ್ಲಿ ಅವು ಕೇವಲ 18%ಗೆ ಕುಸಿದಿರುವುದು ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಮರಿಹುಳುಗಳು ಸ್ರವಿಸುವ ದ್ರವದಲ್ಲಿ ಸೋಡಿಯಂ ಬೈಕಾರ್ಬೋನೇಟ್ ಕೂಡ ಇರುವುದರಿಂದ, ಗಾಯಗಳ ಕ್ಷಾರತೆ ಹೆಚ್ಚುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಈ ದ್ರವ ಸ್ಟೆಫೈಲೋಕಾಕಸ್ ಮುಂತಾದ ಬ್ಯಾಕ್ಟೀರಿಯಾಗಳು ನಿರ್ಮಿಸಿರುವ ಜೈವಿಕಪಟಲವನ್ನು ಒಡೆಯಬಲ್ಲದೆಂದು ಪ್ರಯೋಗಗಳ ಮೂಲಕ ಗೊತ್ತಾಗಿದೆ.
ಗಾಯಗಳು ಗುಣವಾಗುವ ಹಂತಗಳು
ಗಾಯಗಳು ಹಂತಹಂತವಾಗಿ ಗುಣವಾಗಲಾರಂಭಿಸುತ್ತವೆ. ಮೊದಲು ಗಾಯದಿಂದ ರಕ್ತ ಹರಿಯಲಾರಂಭಿಸುತ್ತದೆ. ಸ್ವಲ್ಪ ಸಮಯದ ನಂತರ ರಕ್ತ ಹೆಪ್ಪುಗಟ್ಟುತ್ತದೆ. ಆಗ ಬಿಳಿರಕ್ತ ಕಣಗಳು ಗಾಯವನ್ನು ಮುತ್ತಿ, ಸತ್ತ ಅಂಗಾಂಶಗಳನ್ನೂ ಬ್ಯಾಕ್ಟೀರಿಯಾಗಳನ್ನೂ ಭಕ್ಷಿಸುತ್ತವೆ. ಇದಾದ ನಂತರ ದೇಹವು ಕೊಲಾಜೆನ್ (collagen) ಎಂಬ ನಾರೆಳೆಗಳನ್ನು ಗಾಯದ ಮೇಲೆ ಜೋಡಿಸುತ್ತದೆ. ಗಾಯದ ಸುತ್ತಲಿರುವ ಚರ್ಮದ ಕೋಶಗಳು ವಿಭಜಿಸಿ ಗಾಯದ ಮಧ್ಯಭಾಗಕ್ಕೆ ವಲಸೆ ಹೋಗುತ್ತವೆ. ಗಾಯವನ್ನು ಈ ರೀತಿ ಹೊಸ ಕೋಶಗಳು ಆವರಿಸಿದ ನಂತರ ರಕ್ತನಾಳಗಳು ಹುಟ್ಟಿಕೊಂಡು ಹೊಸದಾಗಿ ಆದ ಅಂಗಾಂಶಗಳಿಗೆ ರಕ್ತದ ಸರಬರಾಜು ಮಾಡುತ್ತವೆ. ಗಾಯದ ಮೇಲೆ ನಿಧಾನವಾಗಿ ಗಾಯಕಲೆ ಮೂಡುತ್ತದೆ.
ಭಾರತದಲ್ಲಿ ಮರಿಹುಳು ಚಿಕಿತ್ಸೆ
ಮರಿಹುಳು ಚಿಕಿತ್ಸೆ ನಮ್ಮ ದೇಶದಲ್ಲಿ ಇದೆಯೇ ಎಂದು ನಿಮ್ಮಲ್ಲಿ ಅನೇಕರು ಕೇಳಬಹುದು. ನಮ್ಮ ದೇಶದಲ್ಲೂ ಕೆಲವೆಡೆ ಮರಿಹುಳು ಚಿಕಿತ್ಸೆ ಚಾಲ್ತಿಯಲ್ಲಿದೆ. ಒಂದು ವರದಿಯ ಪ್ರಕಾರ, ಕೋಲಾರದ ಬಿ.ಆರ್. ಶ್ರೀನಿವಾಸ್ ಎಂಬ ಸಕ್ಕರೆ ರೋಗ ವೈದ್ಯರು ಸುಮಾರು 40 ವರ್ಷಗಳಿಂದ ಈ ಚಿಕಿತ್ಸೆಯಲ್ಲಿ ಕಾರ್ಯನಿರತರಾಗಿದ್ದಾರೆ. ಗ್ರಾಮಾಂತರ ಸಕ್ಕರೆ ರೋಗಿಗಳಿಗೆ ಕಾಲಿನಲ್ಲಿ ಗಾಯಗಳಾದರೆ ಅವರಿಗೆ ಅದರ ಪರಿವೆಯೇ ಇರುವುದಿಲ್ಲ. ಒಮ್ಮೆ ರೋಗಿಯೊಬ್ಬ ತನ್ನ ಕಾಲಿಗೆ 3 ಪುಸ್ತಕ ಹೊಲಿಯುವ ತಂತಿ ಹೊಲಿಗೆ (wire-stitching)ಯ ಪಿನ್‌ಗಳು ಚುಚ್ಚಿಕೊಂಡು ಪೂರ್ತಿ ಒಳಹೊಕ್ಕರೂ ಅವನಿಗೆ ಅದು ಗೊತ್ತೇ ಆಗಲಿಲ್ಲ ಎನ್ನುತ್ತಾರೆ. ಅನೇಕ ರೋಗಿಗಳು ಈ ಸ್ಥಿತಿಯಲ್ಲಿ ಚಿಕಿತ್ಸೆಗೆ ಬರುತ್ತಾರೆ.
ಇಂತಹ ಐದು ರೋಗಿಗಳನ್ನು ಮರಿಹುಳು ಚಿಕಿತ್ಸೆಗೆ ಒಳಪಡಿಸಿದಾಗ ಫಲಿತಾಂಶ ಉತ್ತೇಜಕವಾಗಿತ್ತು. ಡಾ|| ಶ್ರೀನಿವಾಸ್ ಕೂಡಲೇ ಮರಿಹುಳು ಚಿಕಿತ್ಸೆಯನ್ನು
ಆಯುಷ್ (AYUSH) ಆಸ್ಪತ್ರೆಗಳು ಅಳವಡಿಸಿಕೊಳ್ಳಬೇಕೆಂದು ಕರ್ನಾಟಕದ ಆಯುಷ್ ಆಸ್ಪತ್ರೆಗಳ ನಿರ್ದೇಶಕರಿಗೆ ಪತ್ರದ ಮೂಲಕ ಸಲಹೆ ಮಾಡಿದ್ದಾರೆ.
ಬೆಂಗಳೂರಿನ ಕನಿಂಗ್‌ಹ್ಯಾಮ್ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಯ ಸಕ್ಕರೆ ರೋಗ ತಜ್ಞ ಡಾ|| ಸಂಜಯ ರೆಡ್ಡಿಯವರ ಪ್ರಕಾರ ನಮ್ಮ ದೇಶದಲ್ಲಿ ಮರಿಹುಳು ಚಿಕಿತ್ಸೆ ಇನ್ನೂ ಸಾಕಷ್ಟು ಜನಪ್ರಿಯವಾಗಿಲ್ಲ. ರೋಗಿಗಳಿಗೆ ಈ ಚಿಕಿತ್ಸೆಯನ್ನು ಅಂಗೀಕರಿಸಬಲ್ಲ ಪಕ್ವ ಮನಃಸ್ಥಿತಿ ಇನ್ನೂ ಉಂಟಾಗಿಲ್ಲ. ಮರಿಹುಳುಗಳು ಎಲ್ಲಿ ದೊರಕುತ್ತವೆ ಎಂಬುದರ ಬಗ್ಗೆಯೂ ಯಾವುದೇ ನಿಖರ ಮಾಹಿತಿಯಿಲ್ಲ ಎನ್ನುತ್ತಾರೆ. ಮರಿಹುಳು ಚಿಕಿತ್ಸೆ ಬಗ್ಗೆ ಭಾರತೀಯ ವೈದ್ಯಕೀಯ ಕಾನೂನು ಮೌನವಾಗಿಯೇ ಇದೆ. ಈ ಚಿಕಿತ್ಸೆಯನ್ನು ಬಳಕೆಗೆ ತರಬೇಕಾದರೆ ವೈದ್ಯರು ಸ್ಥಳೀಯ ನೈತಿಕ ಸಮಿತಿ (Ethics Committee)ಯಿಂದ ಲಿಖಿತವಾಗಿ ಅನುಮತಿ ಪಡೆಯಬೇಕು. ಇಂತಹ ಇನ್ನೂ ಕೆಲವು ಕಾನೂನು ಸಮಸ್ಯೆಗಳು ನಿವಾರಣೆಯಾಗಬೇಕಾಗಿದೆ.