ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, June 5, 2022

ಉದ್ಯಾನವನದ ಚಂದ ಹೆಚ್ಚಿಸುವ ಕಾಬಾಳೆ

ಉದ್ಯಾನವನದ ಚಂದ ಹೆಚ್ಚಿಸುವ ಕಾಬಾಳೆ

ಲೇಖಕರು : ಸಂಗಮೇಶ ವಿ. ಬುರ್ಲಿ
(ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರು)
ಬಂಜಾರಾ ಪ್ರೌಢಶಾಲೆ, ಬಂಜಾರಾ ನಗರ,
ಸೋಲಾಪುರ ರಸ್ತೆ, ವಿಜಾಪುರ 586103


ತಮ್ಮ ವಿವಿದ ಬಣ್ಣದ ವಿಧಾನವನ್ನು ಹೂಗಳ ಮೂಲಕ ನಮ್ಮ ಕಣ್ಣುಗಳನ್ನು ಸೆಳೆಯುವ ಕಾಬಾಳೆ ಸಸ್ಯಗಳು  ಯಾವುದೇ ಉದ್ಯಾನದ ಚಂದವನ್ನು ಹೆಚ್ಚಿಸಬಲ್ಲವು.  ಕಾಬಾಳೆ ಸಸ್ಯಗಳನ್ನು ಪರಿಚಯಿಸುವುದರ ಜೊತೆಗೆ, ಅವುಗಳನ್ನು ಬೆಳೆಸುವ ವಿಧಾನವನ್ನು ನವಿರಾಗಿ, ರೂಪಕವೊಂದರ ಮೂಲಕ ಈ ಲೇಖನದಲ್ಲಿ ವಿವರಿಸಿದ್ದಾರೆರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ, ಶ್ರೀ ಸಂಗಮೇಶ ಬುರ್ಲಿ ಅವರು.  ಈ ಲೇಖನದ ಮೂಲಕ ‘ಸವಿಜ್ಞಾನ’ದ ಲೇಖಕರ ಬಳಗ ಸೇರುತ್ತಿರುವ ಅವರಿಗೆ ಸ್ವಾಗತ.

ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಓದುವ ಕಿರಿ ಕಿರಿ, ಹೋಮ್‍ವರ್ಕ್ ಇಲ್ಲದೆ ಹಾಯಾಗಿ ಇರಬಹುದು ಎಂದುಕೊಳ್ಳುವುದು ಸಹಜ. ಬೆಳಿಗ್ಗೆ ವಾಕಿಂಗ್, ಜಾಗಿಂಗ್. ಮಧ್ಯಾಹ್ನ ಕಂಪ್ಯೂಟರ್ ಕಲಿಕೆ ಮತ್ತು ಆಟ. ಸಂಜೆ ರಿಂಗ್, ಬ್ಯಾಡ್ಮಿಂಟನ್ ಆಟ. ಹೀಗೆ, ರಜೆಯಲ್ಲಿ ಮಕ್ಕಳ ವೇಳಾಪಟ್ಟಿ ಸಿದ್ಧವಾಗಿರುತ್ತದೆ.

ಮುಂಜಾವಿನ ವಿಹಾರಕ್ಕಾಗಿ ನಾನು, ಮಕ್ಕಳಾದ ಸಂಜು ಮತ್ತು ತೇಜು ಅವರೊಂದಿಗೆ ಹೊರತಾಣದಲ್ಲಿರುವ ಪ್ರಕೃತಿನಗರದಲ್ಲಿರುವ ಉದ್ಯಾನನಕ್ಕೆ  ಹೋಗಿದ್ದೆವು. ಅಲ್ಲಿ, ತರತರದ ಹೂವುಗಳನ್ನು ನೋಡಿ ಮಕ್ಕಳು ಕುತೂಹಲದಿಂದ ಇದು ಯಾವ ಹೂವು? ಇದರ ಹೆಸರೇನು ? ಎಂದೆಲ್ಲಾ ಪ್ರಶ್ನಿಸುತ್ತಾ ಸಾಗಿದರು. ಹೂಗಳ ಸಂಖ್ಯೆ ಅಷ್ಟೇನೂ ಹೆಚ್ಚಿಲ್ಲದಿದ್ದರೂ, ಹಲವು ಬಗೆಯ ಹೂಗಳಾದ ಬ್ಲಾಕ್ ಬೆರ್ರಿ, ಲಿಲ್ಲಿ, ಕಾಬಾಳೆ, ಬೋಗನ್ ವಿಲ್ಲಾ ಮುಂತಾದ ಹೂಗಳು ಮಕ್ಕಳ ಗಮನ ಸೆಳೆದಿದ್ದವು.

ಒಂದೆಡೆ ಬೆಳೆದಿದ್ದ ಹೂಗಳನ್ನು ನೋಡಿ ಸಂಜು ಆಶ್ಚರ್ಯದಿಂದ ಕೇಳಿದಳು, ‘ಇದು ಯಾವ ಹೂವು?’ ನಾನು ಹೇಳಿದೆ, ‘ಇದು ಕಾಬಾಳೆ, ಕ್ಯಾನ್ನಾ (Canna) ಅಂತಲೂ  ಹೆಸರಿದೆ.’ ನಾನಾಗ ಹಳೆಯ ನೆನಪಿಗೆ ಜಾರಿದ್ದೆ. ನಾನು ಹೈಸ್ಕೂಲ್‍ನಲ್ಲಿ ಕಲಿಯುತ್ತಿರುವಾಗ ಮನೆಯ ಹಿತ್ತಲಲ್ಲಿ ಮೂರು ಬಗೆಯ ಕಾಬಾಳೆಗಳನ್ನು ಬೆಳೆಸಿದ್ದೆ. ಅಡುಗೆಮನೆಯ ತ್ಯಾಜ್ಯ ನೀರು ಅಲ್ಲಿಗೆ ಹರಿಯುವಂತೆ ಮಾಡಿದ್ದೆ. ಆದ್ದರಿಂದ ಅತೀ ದಟ್ಟವಾಗಿ ಬೆಳೆದಿದ್ದವು. ಇದರ ಅಗಲವಾದ ಎಲೆಗಳನ್ನು ಊಟಕ್ಕೆ ಪ್ಲೇಟ್ ರೀತಿಯಲ್ಲಿದ್ದು ಬಳಸುತ್ತಿದ್ದೆವು. ಪೂಜೆಯ ಸಂದರ್ಭದಲ್ಲಿ ಬಾಳೆ ಗಿಡದ ಬದಲು ಈ ಕಾಬಾಳೆಗಳನ್ನು ಬಳಸುತ್ತಿದ್ದೆವು.


ಅಷ್ಟರಲ್ಲಿ ಮಕ್ಕಳಿಂದ ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಗಿತ್ತು.

ತೇಜು : ಇವು ಎಷ್ಟು ತರಹದ ಬಣ್ಣದ ಹೂಗಳನ್ನು ಬಿಡುತ್ತವೆ?

ಸಂಜು : ಇದರಲ್ಲಿ ಎಷ್ಟು ಬಗೆಗಳಿವೆ ? ಈ ಗಿಡದ ವೈಜ್ಞಾನಿಕ ಹೆಸರೇನು?

ನಾನು :ನಿಧಾನ, ನಿಧಾನ, ಒಂದೊಂದಾಗಿ ಹೇಳುತ್ತೇನೆ’ ಎನ್ನತ್ತಾ ನಾನು ವಿವರಿಸಲು ಪ್ರಾರಂಭಿಸಿದೆ. ಇದರ ಹೆಸರು ಕಾಬಾಳೆ. ವೈಜ್ಞಾನಿಕ ಹೆಸರು ಕ್ಯಾನ್ನಾ (Canna). ಇದರ ಪರಿಚಿತ ಹೆಸರು ಇಂಡಿಯನ್ ಶಾಟ್ ಮೂಲ ಹುಟ್ಟು ಸ್ಥಳ ಮಧ್ಯ ದಕ್ಷಿಣ ಅಮೇರಿ ಮತ್ತು ವೆಸ್ಟ್ ಇಂಡೀಸ್. ಇದು ಕ್ಯಾನ್ನೇಸಿ (Cannaceae) ಕುಟುಂಬಕ್ಕೆ ಸೇರಿದೆ. ಒಂದು ಅಥವಾ ಎರಡು ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. 45 ರಿಂದ 105 ಸೆಂ.ಮೀ ಎತ್ತರ ಬೆಳೆಯುವ ನಮೂನೆಗಳು ಹಳದಿ, ಕಿತ್ತಳೆ, ತಿಳಿಗೆಂಪು, ಕೆಂಪು ಹಾಗೂ ಕೇಸರಿ ಬಣ್ಣದ ಹೂಗಳನ್ನು ಬಿಡುತ್ತವೆ. ಇವುಗಳಲ್ಲಿ ಕೆಲವೊಂದಕ್ಕೆ ಹೂವಿನ ದಳಗಳು ಮಚ್ಚೆ ಅಥವಾ ಗೆರೆಗಳನ್ನು ಹೊಂದಿರುತ್ತವೆ. ಕೆಲವು ನಮೂನೆಗಳಲ್ಲಿ ಕಂದು ವರ್ಣದ ಅಥವಾ ವಿವಿಧ ವರ್ಣಗಳ ಎಲೆಗಳು ಇರುತ್ತವೆ.

ನನ್ನ ವಿವರಣೆಯನ್ನು ಮಧ್ಯದಲ್ಲಿಯೇ ತಡೆದ ಸಂಜು ಕೇಳಿದಳು, ‘ಬೆಂಗಳೂರಿನ ಲಾಲ್‍ಬಾಗ್ ನಲ್ಲಿ ಇಂಥ ಹೂಗಳನ್ನು ನೋಡಿದ್ದೆವು. ದೊಡ್ಡದಾದ, ಗೋಲಾಕಾರದ ಜಾಗದಲ್ಲಿ ಈ ಗಿಡಗಳನ್ನು ಬೆಳೆಸಿದ್ದರು. ಹೂಗಳು ಕೆಂಪಾಗಿ, ನೋಡಲು ಎಷ್ಟು ಅಂದವಾಗಿ ಕಾಣುತ್ತದ್ದವು, ಅಲ್ಲವಾ ತೇಜು?’

ತೇಜು : ಹೌದು, ಗಿಡಗಳು ನನಗಿಂತ ಎತ್ತರವಾಗಿದ್ದವು. ಬಹಳಷ್ಟು ಹೂಗಳಿದ್ದವು. ಅಲ್ಲಿ ನಾವು ಫೋಟೋ ತೆಗೆಸಿಕೊಂಡಿದ್ದೆವು.

ನಾನು : ಹೌದು, ನಿನಗಿನ್ನೂ ನೆನಪಿದೆಯಲ್ಲ....ಎಷ್ಟು ಚೆನ್ನಾಗಿ ಹೂ ಬಿಟ್ಟಿದ್ದವು. ಅಲ್ವಾ? ಈಗಿಡಗಳನ್ನು ಹೆಚ್ಚಾಗಿ ಮಡಿಗಳನ್ನು ಮಾಡಿ ಬೆಳೆಸುತ್ತಾರೆ. ಒಂದೇ ಬಣ್ಣದ ಹೂಗಳು ಒಂದೆಡೆ ಇರುವಂತೆ ಗೋಲಾಕಾರ, ಚೌಕಾಕಾರ, ಇಲ್ಲವೇ ತ್ರಿಭುಜಾಕಾರ, ಹೀಗೆ ವಿವಿಧ ಆಕಾರದ ಮಡಿಗಳನ್ನು ಮಾಡಿ, ಕಾಬಾಳೆಗಳನ್ನು ಬೆಳೆಸುತ್ತಾರೆ.

ಸಂಜು : ಪಪ್ಪಾ, ಈ ಗಿಡಗಳನ್ನು ಬೀಜ ಬಿತ್ತಿ ಬೆಳೆಸಬೇಕಾ?

ನಾನು : ಹಾಗೇನಿಲ್ಲ. ಈ ಸಸ್ಯಗಳನ್ನು ಬೀಜ ಅಥವಾ ಬೇರುಗಡ್ಡೆಗಳ ತುಂಡುಗಳಿಂದಲೂ ಬೆಳೆಸಬಹುದು. ಸಾಮಾನ್ಯವಾಗಿ, ಜೂನ್ ತಿಂಗಳಲ್ಲಿ ಮಡಿಗಳನ್ನು ಮಾಡಿ, ಬೇರುಗಡ್ಡೆಗಳನ್ನು ನಾಟಿ ಮಾಡಬೇಕು. ಚೆನ್ನಾಗಿ ಬೇರು ಬಿಡುವಂತೆ ಮಾಡಲು ಮತ್ತು ಕಾಂಡಗಳು ಕೊಳೆಯದಂತೆ ನೋಡಿಕೊಳ್ಳಲುಒಂದು ದರ ಮರಳಿನ ಮೇಲೆ ಬೇರು ಗಡ್ಡೆಗಳನ್ನು ಇಟ್ಟು ನಾಟಿ ಮಾಡಬಹುದು. ವರ್ಷದ ಅವಧಿಯಲ್ಲಿ ಗಿಡಗಳು ಆಗಾಗ್ಗೆ ಹೂಗಳನ್ನು ಬಿಡಬಹುದು. ಆದರೆಹೆಚ್ಚಿನ ಹೂಗಳನ್ನು ಪಡೆಯಲು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಮತ್ತು ಏಪ್ರಿಲ ನಿಂದ ಜೂನ್ ವರೆಗೆ ಅತ್ಯುತ್ತಮ ಸಮಯ.

ತೇಜು : ನಾವು ಅಕ್ಟೋಬರ್ ರಜೆಯಲ್ಲಿಯೇ ಬೆಂಗಳೂರಿಗೆ ಹೋಗಿದ್ದು, ಅಲ್ವೇ ಅಕ್ಕಾ ?

ಸಂಜು : ಹೌದು, ನಾವು ಅಕ್ಟೋಬರ್ ನಲ್ಲೇ ಹೋಗಿದ್ದು. ಲಾಲ್‍ಬಾಗ್‍ನಲ್ಲಿ ಈ ಹೂಗಳೇ ತುಂಬಿದ್ದವು.

ತೇಜು : ಪಪ್ಪಾ, ಇವುಗಳ ಬೀಜ ಹೇಗಿರುತ್ತೆ ?

ನಾನು : ಕಾಬಾಳೆ ಗಿಡದ ಬೀಜಗಳು ಬಟಾಣಿ ಕಾಳುಗಳ ಗಾತ್ರದಷ್ಟಿದ್ದು, ಕಪ್ಪು ಬಣ್ಣ ಹೊಂದಿರುತ್ತವೆ. ಒಂದು ಹೂವಿನಿಂದ ಎರಡರಿಂದ ಎಂಟು ಬೀಜಗಳನ್ನು ಪಡೆಯಬಹುದು. ಇವನ್ನು ನೇರವಾಗಿ ನೆಲದಲ್ಲಿ ನಾಟಿ ಮಾಡಿದರೆ ಅವು ಬೆಳೆಯದೇ ಹೋಗಬಹುದು. ಏಕೆಂದರೆ, ಬೀಜದ ಹೊರಾವರಣ ಬಹಳ ಗಟ್ಟಿಯಾಗಿರುತ್ತದೆ. ಬೀಜಗಳನ್ನು ಉಸುಕಿನ ಕಾಗದದಿಂದ ಉಜ್ಜಿ ಅಥವಾ ಬೀeದ ಸ್ವಲ್ಪ ಭಾಗವನ್ನು ಭ್ರೂಣಕ್ಕೆ ಏಟಾಗದಂತೆ ಕತ್ತರಿಸಿ ಬಿತ್ತಬಹುದು. ಇಲ್ಲವೇ, ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ಅಥವಾ ಸಗಣಿಯಲ್ಲಿ ಮುಳುಗಿಸಿಟ್ಟು ನಾಟಿ ಮಾಡಬಹುದು. ಹಾಗೆ ಮಾಡಿದರೆ, ಬೀಜಗಳು ಅತ್ಯುತ್ತಮವಾಗಿ ಮೊಳಕೆಯೊಡೆಯುತ್ತವೆ.

ಸಂಜು, ತೇಜು ಇಬ್ಬರೂ ಖುಶಿಯಿಂದ ‘ಹಾಗಾದರೆ, ಈ ಗಿಡಗಳನ್ನು ನಾವೂ ನಮ್ಮ ಮನೆಯ ಅಂಗಳದಲ್ಲಿ ಬೆಳೆಸೋಣವೇ’ ಎಂದು ಕೇಳಿದರು. ನಾನು ‘ಆಗಲಿ’ ಎಂದೆ. ಎಲ್ಲರೂ ಮನೆಯ ಕಡೆ ಹೆಜ್ಜೆ ಹಾಕಿದೆವು.

2 comments:

  1. ಕಾಬಾಳೆ ಹೂಗಿಡದ ಕುರಿತ ನಿಮ್ಮ ಚೊಕ್ಕಟವಾಗಿ ಮೂಡಿಬಂದಿದೆ ಸರ್ ಅಭಿನಂದನೆಗಳು.

    ReplyDelete
  2. ಕಾಬಾಳೆ ಕಾಯಜ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ ಎಂದು ತಿಳಿದಿದ್ದೆ, ಮೆಣಸಿನ ಕಾಳುಗಳಂತೆ ಕಾಣುತ್ತಿದ್ದ ಬೀಜಗಳೊಂದಿಗೆ ಆಡುತ್ತಿದ್ದ ಸವಿನೆನಪು.....ಅವು ಮೊಳೆಯುತ್ತವೆ ಎಂದು ತಿಳಿದು ಆಶ್ಚರ್ಯ ವಾಗಿದೆ....
    ಈಗ ಪ್ರಯೋಗವೇ!!!

    ReplyDelete