ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam
Showing posts with label BGR. Show all posts
Showing posts with label BGR. Show all posts

Sunday, October 4, 2026

ಪಾಪ!! ಗ್ರಹದ ಪಟ್ಟ ಕಳೆದುಕೊಂಡ ಪುಟ್ಟ ಪ್ಲೂಟೋ : ಭಾಗ 1

            ಪಾಪ!!  ಗ್ರಹದ ಪಟ್ಟ ಕಳೆದುಕೊಂಡ ಪುಟ್ಟ ಪ್ಲೂಟೋ

ಭಾಗ 1

       ಲೇಖಕರು :   ರಾಮಚಂದ್ರ ಭಟ್ ಬಿ.ಜಿ.






.
ಒಂದು ಕಾಲದಲ್ಲಿ ಸೌರವ್ಯೂಹದ ಒಂಬತ್ತನೆಯ ಗ್ರಹವಾಗಿದ್ದ ಪ್ಲೂಟೋ, ಇಂದು ಕುಬ್ಜ ಗ್ರಹ. ಹಾಗಾದರೆ ಅದರ ತಪ್ಪೇನು?  ಪ್ಲುಟೊದ ಕಕ್ಷೆಯನ್ನು ಇತರ ವಸ್ತುಗಳು ದಾಟುವ ಸಾಧ್ಯತೆಯಿದ್ದ ಕಾರಣ, 2006ರಲ್ಲಿ ಅಂತರರಾಷ್ಟ್ರೀಯ ಖಗೋಳ ಒಕ್ಕೂಟವು (IAU) ಅದನ್ನು 'ಕುಬ್ಜ ಗ್ರಹ' (dwarf planet) ಎಂದು ಮರು-ವರ್ಗೀಕರಿಸಿತು.

ಸೌರವ್ಯೂಹದ ಕುಟುಂಬದಲ್ಲಿ ಗ್ರಹಗಳೆಲ್ಲ ಒಂದೇ ರೀತಿಯವಲ್ಲ. ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್‌ಗಳಂಥ ದೈತ್ಯ ಗ್ರಹಗಳಿವೆ; ಭೂಮಿ, ಶುಕ್ರ, ಮಂಗಳ ಮತ್ತು ಬುಧದಂಥ ಶಿಲಾಮಯ ಗ್ರಹಗಳಿವೆ. ಆದರೆ ಇವುಗಳಿಗಿಂತ ಬಹಳ ದೂರದಲ್ಲಿ, ಸೂರ್ಯನ ಬೆಳಕು ಮಂದವಾಗಿ ತಲುಪುವ ಹಿಮಾವೃತ ಪ್ರದೇಶದಲ್ಲಿ, ಒಂದು ಪುಟ್ಟ ಲೋಕ ಸದ್ದಿಲ್ಲದೆ ಸುತ್ತುತ್ತಿದೆ. ಅದೇ ಪ್ಲೂಟೋ.


ಒಂದು ಕಾಲದಲ್ಲಿ ನಮ್ಮ ಪಠ್ಯಪುಸ್ತಕಗಳಲ್ಲಿ ಸೌರವ್ಯೂಹದ ಒಂಬತ್ತನೆಯ ಗ್ರಹವಾಗಿ ಸ್ಥಾನ ಪಡೆದಿದ್ದ ಪ್ಲೂಟೋ, 2006ರಲ್ಲಿ ಆ ಸ್ಥಾನವನ್ನು ಕಳೆದುಕೊಂಡಿತು. ಅಂದಿನಿಂದ ವಿಜ್ಞಾನಾಸಕ್ತರ ನಡುವೆ ಒಂದು ಪ್ರಶ್ನೆ ಆಗಾಗ ಕೇಳಿಬರುತ್ತದೆ: ಪ್ಲೂಟೋ ನಿಜವಾಗಿಯೂ ಗ್ರಹವಲ್ಲವೇ? ಅಥವಾ ವಿಜ್ಞಾನಿಗಳು ಅದರ ಮೇಲಿದ್ದ ಗ್ರಹದ ಪಟ್ಟವನ್ನಷ್ಟೇ ತೆಗೆದುಹಾಕಿದರೇ? ಪ್ಲೂಟೋ ತನ್ನ ಗ್ರಹ ಎಂಬ ಸ್ಥಾನಮಾನ ಕಳೆದುಕೊಂಡಾಗ ನಿಜಕ್ಕೂ ದುಃಖವಾಗಿತ್ತು. ಅದೆಂತ ಸಮಸ್ಯೆಯಪ್ಪಾ ಇದಕ್ಕೆ ? ಅದೆಷ್ಟೋ ವರ್ಷಗಳವರೆಗೆ ಅದು ಗ್ರಹವೇ ಎಂದು ಹೇಳುತ್ತಿದ್ದೆವು.  

ದೂರದ ಲೋಕದ ಹುಡುಕಾಟ

ನೆಪ್ಚೂನ್‌ನ ಕಕ್ಷೆಯ ಆಚೆ ಇನ್ನೊಂದು ಗ್ರಹವಿರಬಹುದೆಂಬ ಕಲ್ಪನೆ ಖಗೋಳ ವಿಜ್ಞಾನಿಗಳಲ್ಲಿ ಬಹಳ ಹಿಂದಿನಿಂದಲೂ ಇತ್ತು. ಯುರೇನಸ್ ಮತ್ತು ನೆಪ್ಚೂನ್‌ಗಳ ಚಲನೆಯಲ್ಲಿನ ವ್ಯತ್ಯಾಸಗಳನ್ನು ಅಧ್ಯಯನ ಮಾಡಿದ ವಿಜ್ಞಾನಿಗಳು, ಅವುಗಳ ಮೇಲೆ ಮತ್ತೊಂದು ಗ್ರಹದ ಗುರುತ್ವಾಕರ್ಷಣೆ ಪರಿಣಾಮ ಬೀರುತ್ತಿರಬಹುದೆಂದು ಊಹಿಸಿದ್ದರು. ಅಮೆರಿಕದ ಖಗೋಳ ವಿಜ್ಞಾನಿ ಪರ್ಸಿವಲ್ ಲೋವೆಲ್ ಈ ಹುಡುಕಾಟದಲ್ಲಿ ಆಸಕ್ತಿ ಹೊಂದಿದ್ದರು. ಅವರ ಮರಣದ ನಂತರ, ಲೋವೆಲ್ ವೀಕ್ಷಣಾಲಯದಲ್ಲಿ ಕ್ಲೈಡ್ ಟಾಂಬಾಗ್ ಎಂಬ ಯುವ ಖಗೋಳ ವಿಜ್ಞಾನಿ ಈ ಕೆಲಸವನ್ನು ಮುಂದುವರಿಸಿದರು. ಒಂದೇ ಆಕಾಶಭಾಗದ ಛಾಯಾಚಿತ್ರಗಳನ್ನು ಬೇರೆ ಬೇರೆ ದಿನಗಳಲ್ಲಿ ತೆಗೆದು, ಅವುಗಳಲ್ಲಿನ ನಕ್ಷತ್ರಗಳ ಸ್ಥಾನಗಳನ್ನು ಹೋಲಿಸುವ ವಿಧಾನವನ್ನು ಬಳಸಿದರು. 
                                                                                                Clyde Tombaugh, in Kansas

ನಕ್ಷತ್ರಗಳು ಬಹುತೇಕ ಒಂದೇ ಸ್ಥಾನದಲ್ಲಿರುವಂತೆ ಕಾಣಿಸಿದರೂ, ಸೌರವ್ಯೂಹದ ವಸ್ತುಗಳು ಹಿನ್ನೆಲೆ ನಕ್ಷತ್ರಗಳಿಗೆ ಹೋಲಿಸಿದರೆ ಸ್ಥಾನ ಬದಲಾಯಿಸುತ್ತವೆ. ಹೀಗೆ ಸಾವಿರಾರು ಚಿತ್ರಗಳನ್ನು ಪರಿಶೀಲಿಸಿದ ನಂತರ, 1930ರ ಫೆಬ್ರವರಿ 18ರಂದು ಟಾಂಬಾಗ್ ಹೊಸ ಆಕಾಶಕಾಯವೊಂದನ್ನು ಗುರುತಿಸಿದರು. ಅದರ ಆವಿಷ್ಕಾರವನ್ನು ಮಾರ್ಚ್ 13ರಂದು ಅಧಿಕೃತವಾಗಿ ಪ್ರಕಟಿಸಲಾಯಿತು. ಆದರೆ ಈ ಆವಿಷ್ಕಾರದಲ್ಲಿ ಒಂದು ಸಣ್ಣ ವ್ಯಂಗ್ಯವಿದೆ. ಲೋವೆಲ್ ಊಹಿಸಿದ್ದ ಗ್ರಹದ ಸ್ಥಾನವನ್ನು ಕಂಡುಹಿಡಿಯುವುದು ಒಂದು ಸಾಧನೆಯಾಗಿದ್ದರೂ, ನಂತರದ ಅಧ್ಯಯನಗಳು ಪ್ಲೂಟೋ ಅಷ್ಟು ದೊಡ್ಡದಾದ ವಸ್ತುವಲ್ಲ ಎಂಬುದನ್ನು ತೋರಿಸಿದವು. ನೆಪ್ಚೂನ್‌ನ ಚಲನೆಯಲ್ಲಿ ಕಂಡ ವ್ಯತ್ಯಾಸಗಳಿಗೆ ಪ್ಲೂಟೋ ಕಾರಣವೆಂಬ ಆರಂಭಿಕ ನಿರೀಕ್ಷೆಯೂ ಸರಿಯಾಗಿರಲಿಲ್ಲ.


ಪ್ಲೂಟೋ ಎಂಬ ಹೆಸರು ಬಂದದ್ದು ಹೇಗೆ?

ಹೊಸ ಗ್ರಹಕ್ಕೆ ಯಾವ ಹೆಸರು ಇಡಬೇಕು ಎಂಬ ಪ್ರಶ್ನೆ ಎದುರಾದಾಗ, ಪುರಾಣಗಳ ದೇವತೆಗಳ ಹೆಸರುಗಳನ್ನು ಪರಿಗಣಿಸಲಾಯಿತು. ಕೊನೆಗೆ Pluto ಎಂಬ ಹೆಸರು ಆಯ್ಕೆಯಾಯಿತು. ರೋಮನ್ ಪುರಾಣದಲ್ಲಿ ಪ್ಲೂಟೋ ಭೂಗತ ಲೋಕದ ದೇವತೆ. ಈ ಹೆಸರನ್ನು ಸೂಚಿಸಿದವರು ವೆನೆಷಿಯಾ ಬರ್ನಿ ಎಂಬ 11 ವರ್ಷದ ಬ್ರಿಟಿಷ್ ಬಾಲಕಿ! ತನ್ನ ತಾತನೊಂದಿಗೆ ಈ ಹೊಸ ಆಕಾಶಕಾಯದ ಬಗ್ಗೆ ಮಾತನಾಡುತ್ತಿದ್ದಾಗ ಅವಳು ಪ್ಲೂಟೋ ಎಂಬ ಹೆಸರನ್ನು ಸೂಚಿಸಿದಳು. ಅವಳ ತಾತ ಈ ಸಲಹೆಯನ್ನು ಖಗೋಳ ವಿಜ್ಞಾನಿಗಳಿಗೆ ತಲುಪಿಸಿದರು. ಹೆಸರು ವಿಜ್ಞಾನಿಗಳಿಗೆ ಇಷ್ಟವಾಯಿತು; ಪ್ಲೂಟೋ ಅಧಿಕೃತವಾಗಿ ಆ ಹೆಸರನ್ನು ಪಡೆದುಕೊಂಡಿತು. ಇದರಲ್ಲಿ ಮತ್ತೊಂದು ಕುತೂಹಲಕರ ವಿಚಾರವಿದೆ. Pluto ಎಂಬ ಹೆಸರಿನ ಮೊದಲ ಎರಡು ಅಕ್ಷರಗಳು, ಪರ್ಸಿವಲ್ ಲೋವೆಲ್ ಅವರ ಹೆಸರಿನ ಮೊದಲಕ್ಷರಗಳೂ ಆಗಿವೆ. ಹೀಗಾಗಿ ಆ ಹೆಸರಿನಲ್ಲಿ ಲೋವೆಲ್ ಅವರ ನೆನಪೂ ಉಳಿಯಿತು.

ಪುಟ್ಟ ಗ್ರಹವೇ, ಹಿಮದ ಲೋಕವೇ?

ಪ್ಲೂಟೋ ಸೂರ್ಯನಿಂದ ಸರಾಸರಿ ಸುಮಾರು 590 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಸೂರ್ಯನ ಬೆಳಕು ಭೂಮಿಗೆ ತಲುಪಲು ಸುಮಾರು ಎಂಟು ನಿಮಿಷ ಬೇಕಾದರೆ, ಪ್ಲೂಟೋಗೆ ತಲುಪಲು ಐದು ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ.ಪ್ಲೂಟೋ ಸೂರ್ಯನನ್ನು ಒಂದು ಸುತ್ತು ಸುತ್ತಲು ಭೂಮಿಯ ಸುಮಾರು 248 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ, ಪ್ಲೂಟೋ ಪತ್ತೆಯಾದ 1930ರಿಂದ ಅದು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಒಂದು ಪೂರ್ಣ ಸುತ್ತು ಸುತ್ತುವುದನ್ನು 2178ರ ವೇಳೆಗೆ ಮಾತ್ರ ಪೂರ್ಣಗೊಳಿಸುತ್ತದೆ! ಭೂಗ್ರಹದ ಜೀವಿಯೊಂದು ಫೋಟೋದಲ್ಲಿ ಒಂದು ದಿನವನ್ನು ಕಳೆದರೆ ಸುಮಾರು 250 ವರ್ಷಗಳ ಆಯಸ್ಸನ್ನು ಕಳೆದಂತೆ!!! ಮನುಷ್ಯನೊಬ್ಬ ಅಲ್ಲಿಗೆ ಹೋಗಿ ಒಂದು ವರ್ಷ ಕಳೆದು ಭೂಮಿಗೆ ಬಂದರೆ ಇಲ್ಲಿ ಅದೆಷ್ಟು ತಲೆಮಾರು ಸಾಗಿರುತ್ತವೋ???!!!! ಅದರ  ಗಾತ್ರವೂ ನಿರೀಕ್ಷೆಗಿಂತ ಚಿಕ್ಕದು. ಪ್ಲೂಟೋನ ವ್ಯಾಸ ಸುಮಾರು 2,377 ಕಿಲೋಮೀಟರ್. ಇದು ಭೂಮಿಯ ಚಂದ್ರನಿಗಿಂತಲೂ ಚಿಕ್ಕದು. ಪ್ಲೂಟೋಗೆ ಚಾರನ್ ಸೇರಿದಂತೆ ಐದು ತಿಳಿದಿರುವ ನೈಸರ್ಗಿಕ ಉಪಗ್ರಹಗಳಿವೆ. ಅವುಗಳಲ್ಲಿ ಚಾರನ್ ದೊಡ್ಡದಾಗಿದ್ದು, ಪ್ಲೂಟೋಗೆ ಹೋಲಿಸಿದರೆ ಅದರ ಗಾತ್ರ ಗಮನಾರ್ಹವಾಗಿದೆ. ಇವೆರಡರ ನಡುವಿನ ಗುರುತ್ವಾಕರ್ಷಣೆಯ ಸಂಬಂಧವೂ ವಿಶೇಷವಾಗಿದೆ.

ಪ್ಲೂಟೋನ ಮೇಲ್ಮೈಯಲ್ಲಿ ನೈಟ್ರೋಜನ್, ಮೀಥೇನ್ ಮತ್ತು ಕಾರ್ಬನ್ ಮಾನಾಕ್ಸೈಡ್‌ನ ಮಂಜುಗಡ್ಡೆಗಳಿವೆ. ಅಲ್ಲಿ ತಾಪಮಾನ ಸಾಮಾನ್ಯವಾಗಿ ಮೈನಸ್ 220ರಿಂದ ಮೈನಸ್ 240 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿರುತ್ತದೆ. ಭೂಮಿಯ ಮೇಲೆ ನೀರು ಮಂಜುಗಡ್ಡೆಯಾಗುವ ತಾಪಮಾನಕ್ಕಿಂತಲೂ ಇದು ಬಹಳ ಕಡಿಮೆ.

ಹೃದಯದ ಆಕಾರದ ಹಿಮಪ್ರದೇಶ

2015ರಲ್ಲಿ ನಾಸಾದ New Horizons ಬಾಹ್ಯಾಕಾಶ ನೌಕೆ ಪ್ಲೂಟೋವನ್ನು ಸಮೀಪದಿಂದ ಹಾದುಹೋಯಿತು. ಅದಕ್ಕೂ ಮೊದಲು ಪ್ಲೂಟೋ ದೂರದರ್ಶಕಗಳಲ್ಲಿ ಅಸ್ಪಷ್ಟವಾದ ಚುಕ್ಕಿಯಂತೆ ಮಾತ್ರ ಕಾಣಿಸುತ್ತಿತ್ತು. ಆದರೆ ನ್ಯೂ ಹರೈಸನ್ಸ್ ಕಳುಹಿಸಿದ ಚಿತ್ರಗಳು ವಿಜ್ಞಾನಿಗಳನ್ನೂ ಸಾರ್ವಜನಿಕರನ್ನೂ ಬೆರಗುಗೊಳಿಸಿದವು.

ಪ್ಲೂಟೋನ ಮೇಲ್ಮೈಯಲ್ಲಿ ಹೃದಯದ ಆಕಾರದಂತೆ ಕಾಣುವ ವಿಶಾಲ ಪ್ರದೇಶವಿದೆ. ಇದನ್ನು Tombaugh Regio ಎಂದು ಕರೆಯಲಾಗುತ್ತದೆ. ಪ್ಲೂಟೋವನ್ನು ಕಂಡುಹಿಡಿದ ಕ್ಲೈಡ್ ಟಾಂಬಾಗ್ ಅವರ ಗೌರವಾರ್ಥ ಈ ಹೆಸರು ಇಡಲಾಗಿದೆ. ಈ ಪ್ರದೇಶದ ಒಂದು ಭಾಗವಾದ ಸ್ಪುಟ್ನಿಕ್ ಪ್ಲಾನಿಟಿಯಾ, ನೈಟ್ರೋಜನ್ ಮಂಜುಗಡ್ಡೆಯಿಂದ ಆವೃತವಾಗಿದೆ. ಇದನ್ನು ನೋಡಿದಾಗ ಪ್ಲೂಟೋ ತನ್ನ ಎದೆಯ ಮೇಲೆ ಹೃದಯದ ಗುರುತನ್ನು ಧರಿಸಿದ ಪುಟ್ಟ ಲೋಕದಂತೆ ಕಾಣುತ್ತದೆ. ಆದರೆ ಆ ಹೃದಯದ ಆಕಾರದ ಹಿಂದೆ ಹಿಮದ ಹರಿವು, ಮೇಲ್ಮೈಯ ಭೂವೈಜ್ಞಾನಿಕ ಚಟುವಟಿಕೆ ಮತ್ತು ವಾತಾವರಣದ ಬದಲಾವಣೆಗಳಂಥ ಸಂಕೀರ್ಣ ಪ್ರಕ್ರಿಯೆಗಳಿವೆ. 

Pluto’s northern Sputnik Planitia glacier (in the western or left side of Pluto’s brightheart) is shown here in a color mosaic made from NASA’s 
New Horizons imagery. The direction of north is shown on the image. The image is ~ 700 x 350 kilometers across. The red box has been 
added to show most of the region containing dark features attributed to the wetting of the glacier by liquid nitrogen sourced from a
 “basal melting” process beneath the glacier.  -   NASA/Johns Hopkins APL/SwRI

ಪ್ಲೂಟೋ ಸಂಪೂರ್ಣವಾಗಿ ಸತ್ತ, ಚಟುವಟಿಕೆಯಿಲ್ಲದ ಹಿಮದ ಉಂಡೆಯಲ್ಲ ಎಂಬುದಕ್ಕೂ ನ್ಯೂ ಹೊರೈಸನ್ಸ್‌ನ ವೀಕ್ಷಣೆಗಳು ಸಾಕ್ಷ್ಯ ನೀಡಿವೆ. ಅದರ ಮೇಲ್ಮೈಯಲ್ಲಿ ಪರ್ವತಗಳು, ಬಯಲು ಪ್ರದೇಶಗಳು ಮತ್ತು ವಿಭಿನ್ನ ಭೂವೈಜ್ಞಾನಿಕ ಲಕ್ಷಣಗಳು ಕಂಡುಬಂದಿವೆ. ಅದರ ಒಳಭಾಗದಲ್ಲಿ ದ್ರವ ನೀರಿನ ಸಾಗರವಿರಬಹುದೆಂಬ ಸಾಧ್ಯತೆಯನ್ನೂ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ; ಆದರೆ ಅದನ್ನು ಇನ್ನೂ ನೇರವಾಗಿ ದೃಢಪಡಿಸಲಾಗಿಲ್ಲ.

ಹಾಗಾದರೆ ಪ್ಲೂಟೋ ಗ್ರಹವಲ್ಲವೇ?

2006ರಲ್ಲಿ ಅಂತರಾಷ್ಟ್ರೀಯ ಖಗೋಳ ಒಕ್ಕೂಟವು ಗ್ರಹಕ್ಕೆ ಮೂರು ಪ್ರಮುಖ ಮಾನದಂಡಗಳನ್ನು ನಿಗದಿಪಡಿಸಿತು. ಒಂದು ಆಕಾಶಕಾಯವು ಸೂರ್ಯನನ್ನು ಸುತ್ತಬೇಕು; ತನ್ನ ಗುರುತ್ವಾಕರ್ಷಣೆಯಿಂದ ಬಹುತೇಕ ಗೋಳಾಕಾರವನ್ನು ಪಡೆದಿರಬೇಕು; ಮತ್ತು ತನ್ನ ಕಕ್ಷೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುತ್ವಾಕರ್ಷಣೆಯ ದೃಷ್ಟಿಯಿಂದ ಪ್ರಾಬಲ್ಯ ಸಾಧಿಸಿರಬೇಕು.

ಪ್ಲೂಟೋ ಮೊದಲ ಎರಡು ಮಾನದಂಡಗಳನ್ನು ಪೂರೈಸುತ್ತದೆ. ಆದರೆ ತನ್ನ ಕಕ್ಷೆಯ ಸುತ್ತಮುತ್ತಲಿನ ಇತರ ವಸ್ತುಗಳನ್ನು ತೆರವುಗೊಳಿಸಿ ಪ್ರಾಬಲ್ಯ ಸಾಧಿಸಿಲ್ಲ. ಅದು ನೆಪ್ಚೂನ್ ಆಚೆಯ ಕೈಪರ್ ಪಟ್ಟಿಯಲ್ಲಿರುವ ಅನೇಕ ಹಿಮಾವೃತ ವಸ್ತುಗಳೊಂದಿಗೆ ತನ್ನ ಪ್ರದೇಶವನ್ನು ಹಂಚಿಕೊಂಡಿದೆ. ಹೀಗಾಗಿ ಅದನ್ನು ಕುಬ್ಜ ಗ್ರಹ ಎಂದು ವರ್ಗೀಕರಿಸಲಾಯಿತು.

ಪ್ಲೂಟೋನ ಗಾತ್ರ ಕಡಿಮೆಯಾಗಲಿಲ್ಲ; ಅದರ ಮೇಲ್ಮೈ ಬದಲಾಗಲಿಲ್ಲ; ಅದರ ಸೂರ್ಯನ ಸುತ್ತಲಿನ ಪ್ರಯಾಣವೂ ನಿಲ್ಲಲಿಲ್ಲ. ಬದಲಾದದ್ದು ನಮ್ಮ ವೈಜ್ಞಾನಿಕ ವರ್ಗೀಕರಣ ಮಾತ್ರ! ಹಾಗೆ ನೋಡಿದರೆ, ಪ್ಲೂಟೋಗೆ ಗ್ರಹದ ಪಟ್ಟ ಹೋದರೂ ಅದರ ವೈಜ್ಞಾನಿಕ ಮಹತ್ವ ಕಡಿಮೆಯಾಗಿಲ್ಲ. ಬದಲಾಗಿ, ಅದು ಸೌರವ್ಯೂಹದ ಹೊರವಲಯವನ್ನು ಅರ್ಥಮಾಡಿಕೊಳ್ಳಲು ನಮಗೆ ಹೊಸ ಕಿಟಕಿಯನ್ನು ತೆರೆದಿದೆ. ಹೀಗೆ ವೈಜ್ಞಾನಿಕ ಲೋಕದ ಅಧ್ಯಯನದ ಯಾತ್ರೆ ಮುಂದುವರಿಯುತ್ತಲೇ ಇದೆ. ಕಳೆದುಕೊಂಡಲ್ಲೇ ಹೊಸ ಬದುಕನ್ನು ಕಟ್ಟಿಕೊಳ್ಳುವುದು ಅಂದರೆ ಇದೆ ಅಲ್ಲವೇ?

 ನೆಪ್ಚೂನ್ ಆಚೆ ಪ್ಲೂಟೋನಂಥ ಇನ್ನೂ ಅನೇಕ ಆಕಾಶಕಾಯಗಳಿವೆ . ಅವುಗಳಲ್ಲಿ ಕೆಲವು ಬಹಳ ದೊಡ್ಡವು. ಅವುಗಳ ಚಲನೆಯಲ್ಲಿನ ಕೆಲವು ಕುತೂಹಲಕಾರಿ ಮಾದರಿಗಳು ವಿಜ್ಞಾನಿಗಳಲ್ಲಿ ಮತ್ತೊಂದಿಷ್ಟು  ಕುತೂಹಲಕರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸೌರವ್ಯೂಹದ ಅಂಚಿನಲ್ಲಿ ನಮಗೆ ಇನ್ನೂ ಕಾಣದಿರುವ ಒಂದು ದೊಡ್ಡ ಗ್ರಹ ಅಡಗಿದೆಯೇ? 

 ಇದಕ್ಕೆ ಉತ್ತರ ಕಾಲ ಗರ್ಭದಲ್ಲಿ ಅಡಗಿದೆ. ಮಾನವನ ನಿರಂತರ ಕುತೂಹಲ ಪ್ರವೃತ್ತಿ ಮುಂದುವರಿದಂತೆ ಇನ್ನೊಂದಷ್ಟು ಸಂಶೋಧನಾ ಉಪಕರಣಗಳು ಆವಿಷ್ಕರಿಸುತ್ತಾ ಹೋದಂತೆ, ತಂತ್ರಜ್ಞಾನದ ಸಹಕಾರದೊಂದಿಗೆ  ಅಧ್ಯಯನಗಳು  ಖಂಡಿತಾ ಹೊಸದನ್ನು ತೋರಿಸಿಯೇ ತೋರಿಸಿಯಾವು.

ಮುಂದಿನ ಭಾಗದಲ್ಲಿ: ನೆಪ್ಚೂನ್ ಆಚೆಗಿನ ರಹಸ್ಯ — ಪ್ಲಾನೆಟ್ ನೈನ್‌ನ ಹುಡುಕಾಟ.

Friday, September 4, 2026

ಜಗ ಮರೆಯಲೇ ಬಾರದ ಯಲ್ಲಾಪ್ರಗಡ ಸುಬ್ಬಾರಾವ್ ಎಂಬ ಸೋಜಿಗ

ಜಗ ಮರೆಯಲೇ ಬಾರದ ಡಾ.ಯಲ್ಲಾಪ್ರಗಡ ಸುಬ್ಬಾರಾವ್ ಎಂಬ ಸೋಜಿಗ !!!  

 

       ಲೇಖಕರು :   ರಾಮಚಂದ್ರ ಭಟ್ ಬಿ.ಜಿ.





“ನಾನು ನೊಬೆಲ್ ಪಡೆಯಲಿಲ್ಲ… ಆದರೆ ನಿಮ್ಮ ಜೀವಕೋಶಗಳು ನನ್ನನ್ನು ಇನ್ನೂ ನೆನಪಿಟ್ಟುಕೊಂಡಿವೆ!”

ಈ ಹೇಳಿಕೆಯ ಹಿಂದಿನ ಧ್ವನಿಯನ್ನು ಅರ್ಥ ಮಾಡಿಕೊಂಡಲ್ಲಿ ನಮಗೆ ಆ ವ್ಯಕ್ತಿಯ ನೋವು  ಅರಿವಾದೀತು. ಅವರಿಗಾದ ಅನ್ಯಾಯ ಭಾರತೀಯರೂ ಮರೆಯುವಂಥದ್ದಲ್ಲ.  ಕೆಲವು ವಿಜ್ಞಾನಿಗಳ ಮಹತ್ವವನ್ನು ಅವರು ಪಡೆದ ಪ್ರಶಸ್ತಿಗಳ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಕೆಲವರ ಹೆಸರಿನ ಮುಂದೆ ದೊಡ್ಡ ದೊಡ್ಡ ಬಿರುದುಗಳಿರುವುದಿಲ್ಲ. ಅವರ ಭಾವಚಿತ್ರಗಳು ವಿಜ್ಞಾನ ಸಂಸ್ಥೆಗಳ ಗೋಡೆಗಳನ್ನು ಅಲಂಕರಿಸಿರುವುದಿಲ್ಲ. ಪಠ್ಯಪುಸ್ತಕಗಳಲ್ಲಿಯೂ ಅವರ ಹೆಸರು ದೊಡ್ಡ ಅಕ್ಷರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

“ಒಬ್ಬ ವಿಜ್ಞಾನಿಯ ಸಂಶೋಧನೆಯಿಂದ ಎಷ್ಟು ಕೋಟಿ ಜೀವಗಳು ಉಳಿದಿವೆ?”    ಈ ಪ್ರಶ್ನೆಗೆ ಉತ್ತರ ಹುಡುಕಿದಾಗ, ಯಲ್ಲಾಪ್ರಗಡ ಸುಬ್ಬಾರಾವ್ ಎಂಬ ಅದ್ಭುತ ವಿಜ್ಞಾನಿಯ ನಿಜವಾದ ಎತ್ತರ, ಅವರ ಸಂಶೋಧನೆಗಳ ಮಹತ್ವ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಭಾರತೀಯರ ಮನದಲ್ಲಿ ಈ ಪೂರ್ವ ಸೂರಿಯ ಬಗ್ಗೆ ಗೌರವಭಾವ ತಾನಾಗಿಯೇ ಒಡಮೂಡುತ್ತದೆ. 

ಇವರು ಕೇವಲ ವಿಜ್ಞಾನಿಯಲ್ಲ. ಅವರು ಮನುಷ್ಯನ ನೋವಿಗೆ ವಿಜ್ಞಾನದ ಮುಲಾಮು ಹಚ್ಚಿದ  ಮಹಾಮೇಧಾವಿ. ಅವರ ಸಂಶೋಧನೆಗಳು ಜೀವಕೋಶದ ಶಕ್ತಿಯಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆಯವರೆಗೆ, ಪ್ರತಿಜೀವಕಗಳಿಂದ ಹಿಡಿದು ಪರೋಪಜೀವಿ ರೋಗಗಳ ಚಿಕಿತ್ಸೆಯವರೆಗೆ ಆಧುನಿಕ ವೈದ್ಯಕೀಯದ ಮೇಲೆ ಅಚ್ಚಳಿಯದ ಪ್ರಭಾವ ಬೀರುತ್ತಲೇ ಇವೆ. ಎಂತಹ ವಿಚಿತ್ರ ನೋಡಿ. ಜಗತ್ತು ಅವರ ಹೆಸರನ್ನು ಮರೆತೇ ಹೋಗಿದೆ. ಆದರೆ, ಅವರ ಸಂಶೋಧನೆಗಳನ್ನು ಜಗತ್ತು ಮರೆಯುವಂತೆಯೇ ಇಲ್ಲ!

ಎರಡು ಬಾರಿ ಸೋತ ಬಾಲಕ… ಮೂರನೇ ಬಾರಿ ವಿಜ್ಞಾನವನ್ನು ಗೆದ್ದ !!!

17ನೇ ಶತಮಾನದಲ್ಲಿ ಗೋಲ್ಕೊಂಡ ನವಾಬರ ಆಸ್ಥಾನದಲ್ಲಿ ಮಂತ್ರಿಯಾಗಿದ್ದ 'ಯಲ್ಲಣ್ಣ' ಎಂಬುವವರ ವಂಶಸ್ಥರೇ 'ಯಲ್ಲಾಪ್ರಗಡ' ಮನೆತನದವರು. ನಂತರದ ತಲೆಮಾರುಗಳಲ್ಲಿ ಇವರು ಕಂದಾಯ ಲೆಕ್ಕಿಗರಾಗಿ (ಅಕೌಂಟೆಂಟ್) ಸೇವೆ ಸಲ್ಲಿಸಿದರು. ಆದರೆ ಸುಬ್ಬಾರಾವ್ ಅವರ ಅಜ್ಜ ಸುಬ್ಬರಾಜು ತೀರಿಕೊಂಡ ನಂತರ, ಆ ದೊಡ್ಡ ಅವಿಭಕ್ತ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ತಂದೆ ಜಗನ್ನಾಥಂ ಅವರಿಗೆ ಕಡಿಮೆ ವೇತನದ ಕೆಲಸ ಸಿಕ್ಕಿದ್ದರಿಂದ ಬಡತನ ಮತ್ತಷ್ಟು ಹೆಚ್ಚಾಯಿತು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಬೆಳೆದ ಯಲ್ಲಾಪ್ರಗಡ ಸುಬ್ಬಾರಾವ್ (1895-1948) ಅವರು ಜಾಗತಿಕ ವೈದ್ಯಕೀಯ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಹಾನ್ ಜೀವವಿಜ್ಞಾನಿ.

1895ರ ಜನವರಿ 12ರಂದು ಆಂಧ್ರಪ್ರದೇಶದ ಭೀಮಾವರಂನಲ್ಲಿ ಜನಿಸಿದ ಯಲ್ಲಾಪ್ರಗಡ ಸುಬ್ಬಾರಾವ್ ಅವರ ಬಾಲ್ಯ‌ ಕಲ್ಲು ಮುಳ್ಳಿನ ಹಾದಿ. ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಹಾಸುಹೊಕ್ಕಾಗಿತ್ತು. ತಂದೆಯ ಅನಾರೋಗ್ಯ. ಕುಟುಂಬ ಉದರಂಭರಣಕ್ಕೆ ಹರಸಾಹಸಪಡಬೇಕಾಯಿತು. ಇನ್ನು  ಮಕ್ಕಳ ವಿದ್ಯಾಭ್ಯಾಸ ಮುಂದುವರೆಸುವುದು ಹೇಗೇ? ಪರೀಕ್ಷೆಗೆ ಎರಡು ತಿಂಗಳಿದ್ದಾಗ ತಂದೆ ಅಸುನೀಗಿದರು. ಇದು ಭಾರೀ ಆಘಾತ ನೀಡಿತು. ಎರಡು ಬಾರಿ ಪರೀಕ್ಷೆಯಲ್ಲಿ ವಿಫಲರಾಗಬೇಕಾಯಿತು! ಇಂತಹ ಸಂದರ್ಭಗಳಲ್ಲೇ ಸಾಮಾನ್ಯ ಮತ್ತು ಅಸಾಮಾನ್ಯ ವ್ಯಕ್ತಿಗಳ ನಡುವಣ ವ್ಯತ್ಯಾಸ ಗೋಚರಿಸುವುದು. ಈ ಎರಡು ಸೋಲುಗಳು ಅವರ ಜೀವನವನ್ನು ನಿಲ್ಲಿಸಲಿಲ್ಲ. ಛಲಬಿಡದ ತ್ರಿವಿಕ್ರಮನಂತೆ, ಮೂರನೇ ಪ್ರಯತ್ನದಲ್ಲಿ ಮೆಟ್ರಿಕ್ಯುಲೇಷನ್ ಉತ್ತೀರ್ಣರಾದರು.

ಒಂದು ಕ್ಷಣ ಯೋಚಿಸಿ…

ಇಂದು ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ “ನನ್ನ ಜೀವನ ಮುಗಿಯಿತು” ಎಂದುಕೊಳ್ಳುವ ವಿದ್ಯಾರ್ಥಿಗಳಿದ್ದಾರೆ. ಆದರೆ ಸುಬ್ಬಾರಾವ್ ಅವರ ಜೀವನ ಹೇಳುತ್ತದೆ— “ಒಂದು ಪರೀಕ್ಷೆಯ ಫಲಿತಾಂಶ ನಿಮ್ಮ ಸಾಮರ್ಥ್ಯದ ಅಂತಿಮ ತೀರ್ಪಲ್ಲ.” ವಿಫಲತೆ ಯಶಸ್ಸಿನ ಬಾಗಿಲನ್ನು ಮುಚ್ಚದು. ಅದು ಮತ್ತೊಂದು ಬಾಗಿಲನ್ನು ಹುಡುಕಲು ಪ್ರೇರಣೆ ನೀಡುತ್ತದೆ. ಆದರೆ ಎರಡು ಬಾರಿ ಸೋಲುವ ಅಗತ್ಯವಿಲ್ಲ; ಒಂದೇ ಬಾರಿಯಲ್ಲೇ ಪಾಠ ಕಲಿತರೆ ಸಾಕು!

ತಾಯಿ ವೆಂಕಮ್ಮ ತಮ್ಮ ಒಡವೆಗಳನ್ನೇ ಮಾರಿ ಮಗನನ್ನು ಓದಿಸಿದರು. ವೈದ್ಯಕೀಯ ಶಿಕ್ಷಣಕ್ಕಾಗಿ ಮದ್ರಾಸ್ ಮೆಡಿಕಲ್ ಕಾಲೇಜಿಗೆ ಸೇರಿದಾಗ ಅವರು ತಮ್ಮ ತಾಯಿಗೆ ಒಂದು ಮಾತು ಕೊಟ್ಟಿದ್ದರು. “ನಾನು ಜಗತ್ತಿನಲ್ಲಿ ಒಂದು ಹೆಸರು ಗಳಿಸಬೇಕು; ಆಗ ಮಾತ್ರ ಜೀವನ ಸಾರ್ಥಕ.” ಈ ಒಂದು ವಾಕ್ಯ ಅವರ ಇಡೀ ಬದುಕಿನ ಮುನ್ನುಡಿಯಂತಿತ್ತು. ಇಂತಹ ಜಂಜಡಗಳ  ನಡುವೆ ಅವರ ಶಿಕ್ಷಣ ಮುಂದುವರಿಯಿತು. 

ಸನ್ಯಾಸಿಯಾಗಬೇಕಿದ್ದ ಯುವಕ… ವೈದ್ಯನಾದದ್ದು ಏಕೆ? 

ಯುವ ಸುಬ್ಬಾರಾವ್ ಅವರ ಮನಸ್ಸಿನಲ್ಲಿ ಸಮಾಜ ಸೇವೆಯ ಕನಸು ಇತ್ತು. ರಾಮಕೃಷ್ಣ ಮಿಷನ್‌ನ ಪ್ರಭಾವದಿಂದ ಸನ್ಯಾಸಿಯಾಗಿ ಮಾನವ ಸೇವೆ ಮಾಡಬೇಕೆಂಬ ಆಸೆ ಅಂಕುರಿಸಿತ್ತು. ನಿಯತಿಯನಾರ್ ಮೀರ್ದಪರ್? ಜೀವನ ಅವರಿಗಾಗಿ ಬೇರೆ ದಾರಿಯನ್ನು ಆಯ್ಕೆ ಮಾಡಿತ್ತು.  ಮಾನವಕುಲದ ನೋವನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ವೈದ್ಯಕೀಯವೂ ಒಂದು ಎಂಬ ಅರಿವು ಅವರ ಮನಸ್ಸನ್ನು ಬದಲಿಸಿತು. ಹೀಗಾಗಿ ಸನ್ಯಾಸದ ಬದಲು ಅವರು ವೈದ್ಯಕೀಯ ಶಿಕ್ಷಣದ ದಾರಿಯನ್ನು ಆರಿಸಿಕೊಂಡರು. 

ಆಗಷ್ಟೇ ಭಾರತದಾದ್ಯಂತ ಸ್ವಾತಂತ್ರ್ಯ ಚಳುವಳಿಯ ಕಾವು ಏರುತ್ತಿತ್ತು. ಗಾಂಧೀಜಿಯ ಸ್ವದೇಶಿ ಚಳವಳಿಯಿಂದ ಪ್ರೇರಿತರಾದ ಸುಬ್ಬಾರಾವ್ ಖಾದಿ ಧರಿಸುತ್ತಿದ್ದರು. ಅಷ್ಟೇ ಅಲ್ಲ, ಖಾದಿಯಿಂದ ತಯಾರಿಸಿದ ಸರ್ಜಿಕಲ್ ಗೌನ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದರು!!!. ಬ್ರಿಟಿಷ್ ಪ್ರಾಧ್ಯಾಪಕರಿಗೆ ಇದು ಇಷ್ಟವಾಗಲಿಲ್ಲ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದರೂ ಅವರಿಗೆ ಪೂರ್ಣ MBBS ಪದವಿಯ ಬದಲು LMS ಪದವಿ ನೀಡಿದರು. ಇಲ್ಲಿಂದಲೇ ಭಾರತೀಯರನ್ನು ತುಳಿಯುವ, ಅವಗಣಿಸುವ ಕಾರ್ಯ ಸಾಂಗವಾಗಿ ಆರಂಭವಾಯಿತು. ಆದರೆ ಸುಬ್ಬಾರಾವ್ ಅವರ ಮನಸ್ಸಿನಲ್ಲಿ ಹತ್ತಿದ್ದ ಜೀವ ವಿಜ್ಞಾನದ ಗಿಳನ್ನು ಯಾವ ಪದವಿಯೂ ಕಡಿಮೆ ಮಾಡಲಿಲ್ಲ. ಬಹುಶಃ ಅವರು ಮನಸ್ಸಿನಲ್ಲೇ ಹೀಗೆ ಹೇಳಿಕೊಂಡಿರಬಹುದು —

“ಪದವಿಯ ಮೌಲ್ಯ ಕಡಿಮೆ ಮಾಡಿದರೂ ಪರವಾಗಿಲ್ಲ… ದೇಶದ ಮೇಲಿನ ಪ್ರೀತಿಯನ್ನು ತ್ಯಜಿಸಲಾರೆ. ನಾನು ಮಾಡುವ ವಿಜ್ಞಾನದ ಕೈಂಕರ್ಯದಲ್ಲಿ ತಿಲಮಾತ್ರದಷ್ಟೂ  ಕಡಿಮೆ ಮಾಡಲಾರೆ!” 

 ಅಂದು ಯುವಜನತೆಯಲ್ಲಿ ದೇಶಪ್ರೇಮ ಯಾವರೀತಿ ಜಾಗೃತಿಗೊಂಡಿತ್ತು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಬೆಳೆಯುವ ಸಿರಿ ಮೊಳಕೆಯಲ್ಲೇ ತನ್ನ ಸಾಮರ್ಥ್ಯ ತೋರಲು ಸಜ್ಜುಗೊಂಡಿತ್ತು. ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಕನಸಿನೊಂದಿಗೆ ಅಮೆರಿಕನ್ ವೈದ್ಯರಾದ ಜಾನ್ ಫಾಕ್ಸ್ ಕೆಂಡ್ರಿಕ್ ಅವರ ಪ್ರೋತ್ಸಾಹದಿಂದ ಸುಬ್ಬಾರಾವ್ ಅಮೆರಿಕದ ಹಾರ್ವರ್ಡ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್‌ಗೆ ತೆರಳಿದರು. ಆದರೆ LMS ಪದವಿಯ ಕಾರಣ ಅವರಿಗೆ ವಿದ್ಯಾರ್ಥಿವೇತನ ದೊರೆಯಲಿಲ್ಲ. ಜೀವನ ಸಾಗಿಸಲು ಹಾರ್ವರ್ಡ್ ಆಸ್ಪತ್ರೆಯಲ್ಲಿ ರಾತ್ರಿ ನೈಟ್ ಪೋರ್ಟರ್ ಆಗಿ ರೋಗಿಗಳ ಬೆಡ್ ಪ್ಯಾನ್  ಸ್ವಚ್ಛ ಮಾಡುವ ಕೆಲಸವನ್ನೂ ಮಾಡಿದರು!!!. ಆಸ್ಪತ್ರೆಯ ಸಾಮಾನ್ಯ ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿದ್ದರು. ರಾತ್ರಿ ಕೆಲಸ. ಹಗಲು ಪ್ರಯೋಗಾಲಯ. ಇದು ಕೇವಲ ಉದ್ಯೋಗ ಮತ್ತು ಸಂಶೋಧನೆಯ ನಡುವಿನ ಸಮತೋಲನವಲ್ಲ. ಇದು ಬಡತನ ಮತ್ತು ಪ್ರತಿಭೆಯ ನಡುವಿನ ಹೋರಾಟ!

ಅದೇ ಹಾರ್ವರ್ಡ್‌ನಲ್ಲಿ ಸೈರಸ್ ಫಿಸ್ಕೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಅಲ್ಲಿ ಅವರು ರಕ್ತದಲ್ಲಿನ ಫಾಸ್ಫರಸ್ ಪ್ರಮಾಣವನ್ನು ಅಳೆಯಲು ಬಳಸಬಹುದಾದ ಫಿಸ್ಕೆ–ಸುಬ್ಬಾರಾವ್ ವಿಧಾನವನ್ನು ಅಭಿವೃದ್ಧಿಪಡಿಸಿದರು. ದೇಹದ ದ್ರವ ಮತ್ತು ಅಂಗಾಂಶಗಳಲ್ಲಿ ಫಾಸ್ಫರಸ್ ಅಂದಾಜಿಸಲು ಈ ವಿಧಾನ ಮಹತ್ವದ್ದಾಯಿತು. ಅವರ ಸಂಶೋಧನಾ ಲೇಖನಗಳು ಅವರಿಗೆ PhD ಪದವಿಯನ್ನೂ ತಂದುಕೊಟ್ಟವು. ಇದು ವೈದ್ಯಕೀಯ ಜೈವರಸಾಯನಶಾಸ್ತ್ರದಲ್ಲಿ ಮಹತ್ವದ ಸಾಧನೆಯಾಯಿತು. ಆದರೆ ವಿಜ್ಞಾನದಲ್ಲಿ ಶ್ರೇಯಸ್ಸಿನ ಹಂಚಿಕೆಯ ಕಥೆ ಯಾವಾಗಲೂ ಸುಂದರವಾಗಿರುವುದಿಲ್ಲ. ಸುಬ್ಬಾರಾವ್ ಅವರ ಕೊಡುಗೆಗಳಿಗೆ ತಕ್ಕಷ್ಟು ಮಾನ್ಯತೆ ಸಿಗಲಿಲ್ಲ ಎಂಬುದು ಅವರ ಜೀವನದ ನೋವಿನ ಅಧ್ಯಾಯಗಳಲ್ಲಿ ಒಂದು.


ಹಾರ್ವರ್ಡ್‌ನಲ್ಲಿ ಅವರಿಗೆ ನಿರೀಕ್ಷಿತ ಸ್ಥಾನಮಾನ ಸಿಗದಿದ್ದಾಗ Lederle Laboratories ಸಂಸ್ಥೆ ಸಂಶೋಧನಾ ನಿರ್ದೇಶಕರ ಸ್ಥಾನವನ್ನು ನೀಡಿತು.

ಸಂಬಳವಾಗಿ ವರ್ಷಕ್ಕೆ $14,000 ನೀಡುವುದಾಗಿ ಸಂಸ್ಥೆ ಹೇಳಿತು. ಆದರೆ ಸುಬ್ಬಾರಾವ್ ಒಂದು ವಿಚಿತ್ರ ಷರತ್ತು ಇಟ್ಟರು! “ಅದರ ಅರ್ಧ ಸಂಬಳ ಕೊಡಿ; ಆದರೆ ನನಗೆ ಹೊಸ ಸಂಶೋಧನಾ ಕಟ್ಟಡ ಕಟ್ಟಿಕೊಡಿ.” ಅವರಿಗೆ ಹಣಕ್ಕಿಂತ ಉತ್ತಮ ಸಂಶೋಧನಾ ವಾತಾವರಣ ಮುಖ್ಯವಾಗಿತ್ತು.

ATP: ಜೀವಕೋಶದ ‘ಶಕ್ತಿಯ ಕರೆನ್ಸಿ’

ಸುಬ್ಬಾರಾವ್ ಅವರ ಅತ್ಯಂತ ಮಹತ್ವದ ವೈಜ್ಞಾನಿಕ ಕೊಡುಗೆಗಳಲ್ಲಿ ಒಂದು ಜೀವಕೋಶದ ಶಕ್ತಿಯ ಕುರಿತಾದ ಸಂಶೋಧನೆ. ನಾವು ಆಹಾರ ಸೇವಿಸುತ್ತೇವೆ. ಆ ಆಹಾರದಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದರೆ ಆಹಾರದಲ್ಲಿರುವ ಶಕ್ತಿಯನ್ನು ಜೀವಕೋಶಗಳು ನೇರವಾಗಿ ಬಳಸುವುದಿಲ್ಲ. ಜೀವಕೋಶಗಳಲ್ಲಿ ATP — Adenosine Triphosphate ಎಂಬ ಅಣು ಶಕ್ತಿಯ ವಿನಿಮಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಳವಾಗಿ ಹೇಳುವುದಾದರೆ— ATP ಜೀವಕೋಶದ ‘ಶಕ್ತಿಯ ಕರೆನ್ಸಿ’. ಹಣ ನಮ್ಮ ದೈನಂದಿನ ವ್ಯವಹಾರಕ್ಕೆ ಹೇಗೋ, ATP ಜೀವಕೋಶದ ಶಕ್ತಿಯ ವ್ಯವಹಾರಕ್ಕೆ ಹಾಗೆ. ಸುಬ್ಬಾರಾವ್ ಮತ್ತು ಅವರ ಸಹೋದ್ಯೋಗಿಗಳ ಸಂಶೋಧನೆಗಳು ATP ಮತ್ತು ಫಾಸ್ಫೋಕ್ರಿಯೇಟಿನ್‌ನ ಪಾತ್ರವನ್ನು ಅರ್ಥಮಾಡಿಕೊಳ್ಳಲು ಮಹತ್ವದ ದಾರಿ ತೆರೆದವು. ಇಂದು ನಾವು ಜೀವಕೋಶದ ಶಕ್ತಿಯ ಬಗ್ಗೆ ಮಾತನಾಡುವಾಗ ಅವರ ಸಂಶೋಧನೆಯ ಪ್ರತಿಧ್ವನಿ ಅಲ್ಲಿ ಕೇಳಿಸುತ್ತದೆ. ಹಾಗಾಗಿ ಒಂದು ಸಣ್ಣ ಹಾಸ್ಯ ಮಾಡಬಹುದಾದರೆ—  “ನೀವು ನನ್ನ ಹೆಸರನ್ನು ಮರೆತಿರಬಹುದು… ಆದರೆ ನಿಮ್ಮ ಜೀವಕೋಶಗಳು ಪ್ರತಿದಿನ ATP ಮೂಲಕ ನನ್ನ ಕೆಲಸವನ್ನು ನೆನಪಿಸಿಕೊಳ್ಳುತ್ತಿವೆ!”

ಕ್ಯಾನ್ಸರ್ ಚಿಕಿತ್ಸೆಯ ಹೊಸ ಅಧ್ಯಾಯ : 


ಸುಬ್ಬಾರಾವ್ ಅವರ ಮತ್ತೊಂದು ಮಹತ್ವದ ಕೊಡುಗೆ ಕ್ಯಾನ್ಸರ್ ಚಿಕಿತ್ಸೆಯ ಇತಿಹಾಸಕ್ಕೆ ಸಂಬಂಧಿಸಿದೆ. Lederle Laboratoriesನಲ್ಲಿ ಅವರು ಫೋಲಿಕ್ ಆಮ್ಲದ ಚಯಾಪಚಯವನ್ನು ತಡೆಯುವ ಕೆಲವು ಸಂಯುಕ್ತಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವುಗಳಲ್ಲಿ Aminopterin ಮತ್ತು ನಂತರದ Methotrexate ವಿಶೇಷ ಮಹತ್ವ ಪಡೆದವು. 

Methotrexate Molecule

1948ರಲ್ಲಿ ಸಿಡ್ನಿ ಫಾರ್ಬರ್ ಅವರು ಅಮಿನೋಪ್ಟರಿನ್ ಬಳಸಿ ಮಕ್ಕಳಲ್ಲಿ ಕಂಡುಬರುವ ತೀವ್ರ ಲಿಂಫೋಬ್ಲಾಸ್ಟಿಕ್ ಲ್ಯೂಕೀಮಿಯಾದಲ್ಲಿ ಮೊದಲ ಗಮನಾರ್ಹ ರೆಮಿಷನ್‌ಗಳನ್ನು ತೋರಿಸಿದರು. ಇದು ಕ್ಯಾನ್ಸರ್ ಚಿಕಿತ್ಸೆಯ ಇತಿಹಾಸದಲ್ಲಿ ಒಂದು ಮಹತ್ವದ ತಿರುವಾಗಿತ್ತು. ಅಂದಿನವರೆಗೆ ಕ್ಯಾನ್ಸರ್ ಎಂದರೆ ಬಹುತೇಕ ಸಾವೇ ಅಂತಿಮ ಎಂಬ ತೀರ್ಪಿನಂತಿತ್ತು. ಆದರೆ ಈಗ ವಿಜ್ಞಾನದ ಆಗಸದಲ್ಲಿ ಆಸೆಯ ಬೆಳ್ಳಿಗೆರೆ ಮೂಡಿತು “ಕ್ಯಾನ್ಸರ್ ವಿರುದ್ಧವೂ ಔಷಧಿಯ ಮೂಲಕ ಹೋರಾಡಬಹುದು.” ಎಂಬ ಭರವಸೆಯ ಬೆಳಕು ಮೂಡಿತು. ಆಧುನಿಕ ಕೀಮೋಥೆರಪಿಯ ಬೆಳವಣಿಗೆಯಲ್ಲಿ ಈ ಸಂಶೋಧನೆಗಳು ಮಹತ್ವದ ಮೈಲಿಗಲ್ಲಾದವು. 

ಅದು ಎರಡನೇ ವಿಶ್ವಯುದ್ಧದ ಸಂದರ್ಭ. ಉಷ್ಣವಲಯ ಪ್ರದೇಶಗಳಲ್ಲಿ ಅಮೆರಿಕನ್ ಸೈನಿಕರನ್ನು ಆನೆಕಾಲು ರೋಗ ಅಥವಾ ಫೈಲೇರಿಯಾಸಿಸ್ ಕಾಡುತ್ತಿತ್ತು. ಸುಬ್ಬಾರಾವ್ ಅವರ ತಂಡ ಈ ಸಮಸ್ಯೆಯತ್ತ ಗಮನ ಹರಿಸಿತು. ಅವರ ತಂಡದ ಸಂಶೋಧನೆಯಿಂದ diethylcarbamazine ಎಂಬ ಔಷಧ ಅಭಿವೃದ್ಧಿಯಾಯಿತು. ಫೈಲೇರಿಯಾಸಿಸ್‌ನ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಇದು ಪ್ರಮುಖ ಔಷಧವಾಯಿತು; ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ಮಹತ್ವದ ಔಷಧವಾಗಿ ಗುರುತಿಸಿದೆ.

೭೦ ವರ್ಷ ದಾಟಿದ ವಿಜ್ಞಾನಿ… ಮತ್ತೆ ಸಂಶೋಧನೆಯ ಅಂಗಳಕ್ಕೆ! 
ವಿಜ್ಞಾನದಲ್ಲಿ ವಯಸ್ಸು ಒಂದು ಸಂಖ್ಯೆ ಮಾತ್ರ ಎಂಬುದಕ್ಕೆ ಬೆಂಜಮಿನ್ ಡಗ್ಗರ್ ಅವರ ಕಥೆಯೂ ಒಂದು ಉದಾಹರಣೆ. 70 ವರ್ಷ ದಾಟಿದ ನಂತರ ಅವರು ವಿಶ್ವವಿದ್ಯಾಲಯದಿಂದ ನಿವೃತ್ತರಾದರು. ಆದರೆ ಸುಬ್ಬಾರಾಯರಿಗೆ ಅವರ ಶಕ್ತಿ ಸಾಮರ್ಥ್ಯದ ಅರಿವಿತ್ತು. ರಾಯರ ಸಂಸ್ಥೆ ಅವರನ್ನು ಮತ್ತೆ ಸಂಶೋಧನೆಯ ಜಗತ್ತಿಗೆ ಕರೆತಂದಿತು. ಅವರು ತಂಡದಲ್ಲಿ ನಡೆದ ಸಂಶೋಧನೆಯ ಫಲವಾಗಿ Aureomycin — Chlortetracycline, ಮೊದಲ ಟೆಟ್ರಾಸೈಕ್ಲಿನ್ ವರ್ಗದ ಪ್ರತಿಜೀವಕಗಳಲ್ಲಿ ಒಂದಾದ ಔಷಧಿ, ಬೆಳಕಿಗೆ ಬಂತು. ಪ್ರತಿಜೀವಕಗಳ ಯುಗದಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿತ್ತು. ಒಬ್ಬ ವೃದ್ಧ ವಿಜ್ಞಾನಿಗೆ ಮತ್ತೊಮ್ಮೆ ಪ್ರಯೋಗಾಲಯದ ಬಾಗಿಲು ತೆರೆದದ್ದು ಕೇವಲ ಒಬ್ಬ ವ್ಯಕ್ತಿಯ ಪುನರಾಗಮನವಾಗಿರಲಿಲ್ಲ. ಅದು ವಿಜ್ಞಾನಕ್ಕೆ ವಯಸ್ಸಿನ ಮಿತಿ ಇಲ್ಲ ಎಂಬ ಸಂದೇಶವಾಗಿತ್ತು. ಹಾಗೆಯೇ ಇದು ಸುಬ್ಬಾರಾಯರ ದೂರದೃಷ್ಟಿ ನಾಯಕತ್ವ ಗುಣಗಳಿಗೆ ತಾಜಾ ಉದಾಹರಣೆ. 

ಪ್ರಶಸ್ತಿಗಳಿಗಿಂತ ಸಮಾಜ ಸೇವೆ ದೊಡ್ಡದು : 

ಸುಬ್ಬಾರಾವ್ ಅವರ ಜೀವನದ ಅತ್ಯಂತ ಗಮನಾರ್ಹ ಅಂಶವೆಂದರೆ ಅವರ ವೈಯಕ್ತಿಕ ವಿನಯ. ತಮ್ಮ ಕೆಲಸದ ಶ್ರೇಯಸ್ಸನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ವೈಜ್ಞಾನಿಕ ಸಾಧನೆಗಳನ್ನು ವೈಯಕ್ತಿಕ ಕೀರ್ತಿಗಾಗಿ ಬಳಸಿಕೊಳ್ಳುವ ಹಂಬಲ ಅವರಲ್ಲಿ ಕಡಿಮೆ ಇತ್ತು. ಇದು ಅವರ ಅವಗುಣವೇ ಇರಬೇಕು. ಅದಕ್ಕಾಗಿಯೇ ಇರಬೇಕು. ಅವರ ಅನೇಕ ಕೊಡುಗೆಗಳು ಅವರ ಹೆಸರಿಗಿಂತ ಹೆಚ್ಚಾಗಿ ಇತರರ ಹೆಸರಿನೊಂದಿಗೆ ನೆನಪಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಅವರ ಸಂಶೋಧನೆಗಳ ಮಹತ್ವವನ್ನು ಕಡಿಮೆ ಮಾಡುವುದಿಲ್ಲ. ವಿಜ್ಞಾನಿಯ ನಿಜವಾದ ಯಶಸ್ಸು ಎಂದರೆ ಪ್ರಶಸ್ತಿಯೇ? ಅಥವಾ ಅವನ ಸಂಶೋಧನೆಯಿಂದ ಉಳಿಯುವ ಜೀವಗಳೇ? ಎಂಬ ಒಂದು ಪ್ರಶ್ನೆ ಕೇಳುವಂತೆ ಮಾಡುತ್ತದೆ. ಬಹುಶಃ ಸುಬ್ಬಾರಾವ್ ಅವರ ಉತ್ತರ ಎರಡನೆಯದೇ ಆಗಿರುತ್ತಿತ್ತು. ಅಮೆರಿಕದ ಲೇಖಕ ಡೊರಾನ್ ಕೆ. ಆಂಟ್ರಿಮ್ ಅವರು ಅವರನ್ನು “ವೈದ್ಯಕೀಯ ಜಗತ್ತಿನ ರಸವಿದ್ಯಾಜ್ಞ” ಎಂದು ಕರೆದಿದ್ದಾರೆ. ಚಿನ್ನವನ್ನು ತಯಾರಿಸುವ ರಸವಿದ್ಯೆಯ ಬದಲು— ಮನುಷ್ಯನ ನೋವನ್ನು ಕಡಿಮೆ ಮಾಡುವ ಔಷಧಿಗಳನ್ನು ಸೃಷ್ಟಿಸಿದ ರಸವಿದ್ಯಾತಜ್ಞ!

ನೊಬೆಲ್ ಸಿಗಲಿಲ್ಲ… ಆದರೆ? 

ನೋಬೆಲ್ ಪ್ರಶಸ್ತಿ ಸಿಗಲೇ ಬೇಕಾದ ಸಂಶೋಧಕ ಸುಬ್ಬಾರಾವ್ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಲಿಲ್ಲ. ಅದರ ಹಿಂದಿನ ಸತ್ಯ ತಿಳಿಯದ್ದೇನೂ ಅಲ್ಲ. ಅವರ ವೈಜ್ಞಾನಿಕ ಕೊಡುಗೆಗಳಿಗೆ ದೊರೆಯಬೇಕಾದಷ್ಟು ಜಾಗತಿಕ ಮಾನ್ಯತೆ ಕೂಡ ಅವರ ಜೀವಿತಾವಧಿಯಲ್ಲಿ ಸಿಗಲಿಲ್ಲ ಎನ್ನುವುದು ದೌರ್ಭಾಗ್ಯ.  ಒಂದು ಪ್ರಶಸ್ತಿಯನ್ನು ಎಷ್ಟು ಜನ ನೋಡುತ್ತಾರೆ? ಆದರೆ ಒಂದು ಪರಿಣಾಮಕಾರಿ ಔಷಧಿಯಿಂದ ಎಷ್ಟು ಜನ ಬದುಕುತ್ತಾರೆ? ಪ್ರಶಸ್ತಿ ಒಂದು ಗೋಡೆಯ ಮೇಲೆ ನೇತಾಡಬಹುದು. ಆದರೆ ವಿಜ್ಞಾನದಿಂದ ಉಳಿದ ಜೀವಗಳು ಸಮಾಜದಲ್ಲಿ ಉಸಿರಾಡುತ್ತವೆ.  ಅದೇ ಸುಬ್ಬಾರಾವ್ ಅವರಿಗೆ ನಿಜವಾದ ಪುರಸ್ಕಾರ ಎಂದು ಸಮಾಧಾನ ಪಟ್ಟುಕೊಳ್ಳಬೇಕಷ್ಟೇ!!!

ಕೇವಲ 53 ವರ್ಷ… ಆದರೆ ಶಾಶ್ವತ ಪರಂಪರೆ 

1948ರ ಆಗಸ್ಟ್ 8ರಂದು, ಕೇವಲ 53ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಯಲ್ಲಾಪ್ರಗಡ ಸುಬ್ಬಾರಾವ್ ನಿಧನರಾದರು. ಇದು ಸಾಯುವ ವಯಸ್ಸೇ.? ಒಬ್ಬ ಮನುಷ್ಯನ ಜೀವನದಲ್ಲಿ 53 ವರ್ಷ ದೊಡ್ಡ ಅವಧಿಯಲ್ಲ. ಆದರೆ ಆ 53 ವರ್ಷಗಳಲ್ಲಿ ಅವರು ಬಿತ್ತಿದ ವೈಜ್ಞಾನಿಕ ಬೀಜಗಳು ಮುಂದಿನ ಪೀಳಿಗೆಗಳ ವೈದ್ಯಕೀಯಕ್ಷೇತ್ರವನ್ನು ಪ್ರಭಾವಿಸಿದವು. ಅವರ ಜೀವನದಲ್ಲಿ ಬಡತನವಿತ್ತು. ವಿಫಲತೆಗಳಿದ್ದವು. ತಾರತಮ್ಯವಿತ್ತು. ಶ್ರೇಯಸ್ಸು ಕಸಿದುಕೊಳ್ಳಲ್ಪಟ್ಟ ನೋವಿತ್ತು. ಆದರೆ ಅವರು ಯಾವುದರಿಂದಲೂ ತಮ್ಮ ಸಂಶೋಧನಾ ಪಯಣದ ಅಂತ್ಯವಾಗಲು ಬಿಡಲಿಲ್ಲ. ನೋವನ್ನು ವಿಜ್ಞಾನದ ಪ್ರಶ್ನೆಯನ್ನಾಗಿಸಿದರೆ, ವಿಫಲತೆಯನ್ನು ಪ್ರಯತ್ನವನ್ನಾಗಿಸಿದರು. ಅವಕಾಶಗಳ ಕೊರತೆಯನ್ನು ಪರಿಶ್ರಮದಿಂದಲೇ ಗೆದ್ದರು.


ಸುಬ್ಬಾರಾವ್ ರವರ ಆದರ್ಶ ಬದುಕು ನಮಗೆ ಕಲಿಸುವ ಪಾಠಗಳು ಹಲವಾರು 

೧. ಸೋಲು ಅಂತಿಮವಲ್ಲ. ಶಾಲೆಯಲ್ಲಿ ಎರಡು ಬಾರಿ ವಿಫಲರಾದರೂ ಮುಂದೆ ಜಗತ್ತಿನ ಪ್ರಮುಖ ಸಂಶೋಧನಾ ಕ್ಷೇತ್ರಗಳಲ್ಲಿ ತಮ್ಮ‌ ಅಚ್ಚೊತ್ತಿದ್ದಾರೆ. ಹೀಗಾಗಿ— ಒಂದು ಪರೀಕ್ಷೆಯ ಫಲಿತಾಂಶ ನಿಮ್ಮ ಜೀವನದ ಫಲಿತಾಂಶವಲ್ಲ.

೨. ನಿಮ್ಮ ನೋವನ್ನು ಪ್ರಶ್ನೆಯನ್ನಾಗಿ ಮಾಡಿ.

ಬಾಲ್ಯದಲ್ಲಿ ಕಂಡ ಬಡತನ, ಕಾಯಿಲೆ ಮತ್ತು ಸಂಕಷ್ಟಗಳು ಅವರ ಮನಸ್ಸಿನಲ್ಲಿ ಮಾನವ ನೋವಿನ ಬಗ್ಗೆ ಆಳವಾದ ಸಂವೇದನೆಯನ್ನು ಬೆಳೆಸಿದವು. ಅವರು ಆ ನೋವನ್ನು ಕೇವಲ ಅನುಭವಿಸಲಿಲ್ಲ. ಅದನ್ನು ವಿಜ್ಞಾನದ ಪ್ರಶ್ನೆಯನ್ನಾಗಿ ಮಾಡಿದರು.

೩. ವಿಜ್ಞಾನದಲ್ಲಿ ‘ನಾನು’ಗಿಂತ ‘ನಾವು’ ದೊಡ್ಡದು

"ಯಾವುದೇ ವೈಜ್ಞಾನಿಕ ಮೈಲಿಗಲ್ಲು ಒಬ್ಬ ವ್ಯಕ್ತಿಯ ಸಾಧನೆಯಂತೆ ಕಂಡರೂ, ವಾಸ್ತವದಲ್ಲಿ ಅದು ನೂರಾರು ಕೈಗಳು ಒಗ್ಗೂಡಿ ಮಾಡಿದ ಪ್ರಯತ್ನ. 'ಬೆರಳುಗಳು ಸೇರಿ ಮುಷ್ಟಿಯಾದಂತೆ', ವಿಜ್ಞಾನಿಗಳ ಸಾಂಘಿಕ ಪರಿಶ್ರಮ ಮತ್ತು ಸಹೋದ್ಯೋಗಿಗಳ ಸಹಕಾರವೇ ಪ್ರತಿಯೊಂದು ಮಹಾನ್ ಆವಿಷ್ಕಾರದ ಹಿಂದಿರುವ ನಿಜವಾದ ಶಕ್ತಿ." ಸುಬ್ಬಾರಾವ್ ಅವರ ಜೀವನ ನಮಗೆ ಹೇಳುವುದು—“ನಿಮ್ಮ ಹೆಸರಿಗಿಂತ ನಿಮ್ಮ ಕೆಲಸವೇ ದೊಡ್ಡದಾಗಲಿ.”

ಯಲ್ಲಾಪ್ರಗಡ ಸುಬ್ಬಾರಾವ್ ಅವರ ಹೆಸರು ಬಹುಶಃ ಸಾಮಾನ್ಯ ಜನರ ನೆನಪಿನಲ್ಲಿ ಹೆಚ್ಚು ಉಳಿದಿಲ್ಲ. ಆದರೆ ಅವರ ವಿಜ್ಞಾನ?  

ಅದು ನಮ್ಮಿಂದ ದೂರವಾಗಿಲ್ಲ. ನಮ್ಮ ಜೀವಕೋಶಗಳಲ್ಲಿ ಶಕ್ತಿಯ ವಿನಿಮಯದ ಬಗ್ಗೆ ಮಾತನಾಡುವಾಗ… ಕ್ಯಾನ್ಸರ್ ಚಿಕಿತ್ಸೆಯ ಇತಿಹಾಸವನ್ನು ನೆನಪಿಸಿಕೊಳ್ಳುವಾಗ… ಪ್ರತಿಜೀವಕಗಳ ಅಭಿವೃದ್ಧಿಯ ಪಯಣವನ್ನು ಅರಿಯುವಾಗ… ಸುಬ್ಬಾರಾವ್ ಅವರ ವೈಜ್ಞಾನಿಕ ಹೆಜ್ಜೆಗುರುತುಗಳು ಮತ್ತೆ ನಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ.

ಇತಿಹಾಸದ ಪುಟಗಳಲ್ಲಿ ಕೆಲವು ಹೆಸರುಗಳು ದೊಡ್ಡ ಅಕ್ಷರಗಳಲ್ಲಿ ಮುದ್ರಿತವಾಗಿರುತ್ತವೆ. ಕೆಲವು ಹೆಸರುಗಳು ಸಣ್ಣ ಅಕ್ಷರಗಳಲ್ಲಿ ಉಳಿಯುತ್ತವೆ. ಆದರೆ ಕೆಲವು ಹೆಸರುಗಳು ಪುಸ್ತಕಗಳಲ್ಲಿ ಮಸುಕಾಗಿದ್ದರೂ— ಮಾನವ ಬದುಕಿನ ಮೇಲೆ ಅಚ್ಚೊತ್ತುತ್ತವೆ.  ಯಲ್ಲಾಪ್ರಗಡ ಸುಬ್ಬಾರಾವ್ ಅಂತಹ ಹೆಸರೊಂದಾಗಿದೆ. ಅವರು ಬಹುಶಃ ನೊಬೆಲ್ ಪ್ರಶಸ್ತಿ ಪಡೆಯಲಿಲ್ಲ. ಆದರೆ ವಿಜ್ಞಾನದಿಂದ ಉಳಿದ ಜೀವಗಳೇ ಅವರ ಪ್ರಶಸ್ತಿಗಳು. ಅವರಿಗೆ ಭವ್ಯ ಪ್ರತಿಮೆ ಸ್ಮಾರಕವನ್ನು ಮಾಡದೇ ಇರಬಹುದು. ಆದರೆ ಅವರ ಸಂಶೋಧನೆಯ ಫಲದಿಂದ ಬದುಕುಳಿದ ಪ್ರತಿಯೊಂದು ಜೀವವೂ ಅವರ ಜೀವಂತ ಸ್ಮಾರಕ. ಸಾಧನೆಯ ದ್ಯೋತಕ. ಹಾಗಾಗಿ ಇಂದು ಅವರ ಹೆಸರನ್ನು ನೆನಪಿಸಿಕೊಳ್ಳುವಾಗ ಒಂದು ಮಾತು ಹೇಳಬಹುದು. “ಸುಬ್ಬಾರಾವ್ ಅವರನ್ನು ಇತಿಹಾಸ ಸ್ವಲ್ಪ ಮರೆತಿರಬಹುದು; ಆದರೆ ಮಾನವಕುಲ ಅವರ ವಿಜ್ಞಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.” ಇದೇ ಒಬ್ಬ ವಿಜ್ಞಾನಿಯ ನಿಜವಾದ ಅಮರತ್ವ.

ಸುಬ್ಬಾರಾವ್ ಅವರ ಸಹೋದ್ಯೋಗಿ ಸೈರಸ್ ಹೆಚ್. ಫಿಸ್ಕೆ, ಅಸೂಯೆಯಿಂದ ಅವರ ಅನೇಕ ಪ್ರಮುಖ ಸಂಶೋಧನಾ ಬರಹಗಳನ್ನು ನಾಶಪಡಿಸಿದರು ಹಾಗೂ ಹತ್ತಿಕ್ಕಿದರು. ಸುಬ್ಬಾರಾವ್ ಅವರು ಮೊದಲೇ ಪ್ರತ್ಯೇಕಿಸಿದ್ದ ಹಲವು ನ್ಯೂಕ್ಲಿಯೋಟೈಡ್‌ಗಳನ್ನು, ಫಿಸ್ಕೆಯ ಅಸೂಯೆಯ ಕಾರಣದಿಂದಾಗಿ ವರ್ಷಗಳ ನಂತರ ಇತರ ವಿಜ್ಞಾನಿಗಳು ಮರುಶೋಧಿಸಬೇಕಾಯಿತು ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ಜಾರ್ಜ್ ಹಿಚಿಂಗ್ಸ್ ಉಲ್ಲೇಖಿಸಿದ್ದಾರೆ.

ವೈಜ್ಞಾನಿಕ ಗೌರವಗಳು:

 ಅವರ ಗೌರವಾರ್ಥ 1953ರಲ್ಲಿ Pearl River ಪ್ರದೇಶದಲ್ಲಿ ಹೊಸದಾಗಿ ಕಂಡುಬಂದ ಒಂದು fungus ಪ್ರಭೇದಕ್ಕೆ ವಿಜ್ಞಾನಿ ಕ್ಲಿಫರ್ಡ್ ಹೆಸೆಲ್ಟೈನ್ Subbaromyces splendens ಎಂದು ಹೆಸರಿಟ್ಟರು.

ಅದೇ ರೀತಿ ಇನ್ನೊಂದು ಶಿಲೀಂಧ್ರಕ್ಕೆ  ಸುಬ್ಬಾರೋಮೈಸಸ್' (Subbaromyces) ಎಂದು ಹೆಸರಿಸಲಾಗಿದೆ. 

ಜಿಗಿಯುವ ಜೇಡಗಳ ಒಂದು ಹೊಸ ಪ್ರಭೇದಕ್ಕೆ 'ಟಾಂಜಾನಿಯಾ ಯಲ್ಲಾಪ್ರಗಡೈ' (Tanzania yellapragadai) ಎಂದು ನಾಮಕರಣ ಮಾಡಲಾಗಿದೆ.

"ನೀವು ಬಹುಶಃ ಡಾ. ಎಲ್ಲಪ್ರಗಡ ಸುಬ್ಬಾರಾವ್ ಅವರ ಹೆಸರನ್ನು ಎಂದಿಗೂ ಕೇಳಿರಲಿಕ್ಕಿಲ್ಲ. ಆದರೆ, ಅವರು ಈ ಭೂಮಿಯ ಮೇಲೆ ಬಾಳಿ ಬದುಕಿದ್ದರಿಂದಲೇ ಇಂದು ನೀವು ಜೀವಂತವಾಗಿದ್ದೀರಿ ಮತ್ತು ಆರೋಗ್ಯವಾಗಿದ್ದೀರಿ. ಅವರು ಬದುಕಿದ್ದ ಕಾರಣಕ್ಕಾಗಿಯೇ ನೀವು ಇನ್ನು ಹೆಚ್ಚು ಕಾಲ ಬದುಕಬಹುದು." 1950ರ 'ಆರ್ಗೋಸಿ' ಪತ್ರಿಕೆಯಲ್ಲಿ ಡೊರಾನ್ ಕೆ. ಆಂಟ್ರಿಮ್ ಬರೆದ ಈ ಸಾಲುಗಳು ಅವರ ಮಹತ್ವವನ್ನು ಸಾರುತ್ತವೆ.

ಒಂಟಿ ಕೊಂಬಿನ ದೈತ್ಯದ ಕಥೆ

ಒಂಟಿ ಕೊಂಬಿನ ದೈತ್ಯದ ಕಥೆ 

 ಸೆಪ್ಟೆಂಬರ್ 22 — ವಿಶ್ವ ಖಡ್ಗಮೃಗ ದಿನ

ಲೇಖಕರು :  ರಾಮಚಂದ್ರ ಭಟ್‌ ಬಿ.ಜಿ.


ಕೆಲವು ವರ್ಷಗಳ ಹಿಂದೆ ಮಿಥುನ್ ರಾವ್, ಡಾಕ್ಟರ್ ಸೋಹನ್ ರಾವ್ ಮತ್ತು ಚಂದನ್ ರವರೊಂದಿಗೆ  ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದೆ. ಬೆಳಗಿನ ಜಾವ ಐದು ಘಂಟೆಗೇ ಅರುಣೋದಯದ ಮುನ್ಸೂಚನೆ!!! ನಮಗಂತೂ ಅಚ್ಚರಿಯೋ ಅಚ್ಚರಿ. ಗಡಿಯಾರ ಸರಿ ಇದೆಯೋ ಇಲ್ಲವೋ ಎಂದು ನೋಡಿದ್ದೇ ನೋಡಿದ್ದು!!  ಹಾಗೆಯೇ ಸಂಜೆ 4 ಗಂಟೆಗೇ ಸೂರ್ಯ ಪಡು ದಿಗುವಿನಲ್ಲಿ ಜಾರತೊಡಗಿ ಕತ್ತಲೆಯ ಮುನ್ಸೂಚನೆ ನೀಡುತ್ತಿದ್ದ. ಮುಂದೆ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶಗಳಲ್ಲಿ ಓಡಾಡುತ್ತಿದ್ದ ಹಾಗೇ ಈಶಾನ್ಯ ಭಾರತದಲ್ಲಿ ಇದು ಅತ್ಯಂತ ಸಹಜವೆಂದು ನಮ್ಮ ಅರಿವಿಗೆ ಬಂತು. ಭಾರತದಲ್ಲಿ ಮೊದಲು ಸೂರ್ಯರಶ್ಮಿ ಮಣ್ಣನ್ನು ಸ್ಪರ್ಶಿಸುವುದು ಇಲ್ಲೇ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ .

ಬೆಳಗ್ಗೆ ಲಗುಬಗೆಯಿಂದೆದ್ದು 5ಕ್ಕೇ ಆನೆ ಸಫಾರಿಗೆ ಸಿದ್ಧವಾಗಿದ್ದೆವು. ಆನೆ ಸವಾರಿ ಮಾಡುತ್ತ ಖಡ್ಗ ಮೃಗ ಮತ್ತಿತರ ಪ್ರಾಣಿಗಳ ವೀಕ್ಷಣೆ ಮಾಡತೊಡಗಿದೆವು. ಹುಲ್ಲುಗಾವಲಿನ ನಡುವೆ ನಿಧಾನವಾಗಿ ಹೆಜ್ಜೆ ಹಾಕುತ್ತಿರುವ ಸುಮಾರು ಎರಡು ಟನ್ ತೂಕದ ಜೀವಿ ದೂರದಲ್ಲೆಲ್ಲೋ ಕಾಣಿಸಿತು. 5-6 ಆನೆಗಳು ಗಜಗಾಂಭೀರ್ಯದಿಂದ ಮುಂದೆ ಸಾಗುತ್ತಾ ಇದ್ದಂತೆ, ಮೇಲೇರಿ ಕುಳಿತ ನಾವು ಮಹಾರಾಜನಂತೆ ಸುತ್ತಲಿನ ಪ್ರಕೃತಿಯನ್ನು ಅಸ್ವಾದಿಸುತ್ತ ಇದ್ದೆವು. ನಾನಂತೂ ಮೊದಲ ಬಾರಿಗೆ ಖಡ್ಗ ಮೃಗಗಳನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದೆ. ಅವ್ಯಕ್ತ ಭಯ ಮನದ ಮೂಲೆಯಲ್ಲಿ ಇದ್ದೇ ಇತ್ತು. 

ದೇಹದ ಮೇಲೆ ಕವಚದಂತೆ ಕಾಣುವ ದಪ್ಪ ಚರ್ಮ. ಮೂಗಿನ ಮೇಲೆ ಒಂದೇ ಒಂದು ಕೊಂಬು. ನೋಡಲು ಭಯಂಕರ, ಆದರೆ ತನ್ನ ಲೋಕದಲ್ಲಿ ಅತ್ಯಂತ ಮಹತ್ವದ ಪರಿಸರ ಕಾರ್ಯಕರ್ತ! 

ಪ್ರತಿ ವರ್ಷ ಸೆಪ್ಟೆಂಬರ್ 22ರಂದು ವಿಶ್ವ ಖಡ್ಗಮೃಗ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ಪ್ರಾಣಿಯನ್ನು ನೆನಪಿಸಿಕೊಳ್ಳುವ ದಿನವಲ್ಲ; ಅಳಿವಿನಂಚಿನಲ್ಲಿರುವ ಜೀವಿಗಳನ್ನು, ಅವುಗಳ ಆವಾಸಸ್ಥಳಗಳನ್ನು ಮತ್ತು ಇಡೀ ಪರಿಸರ ವ್ಯವಸ್ಥೆಯ ಪರಸ್ಪರ ಸಂಬಂಧವನ್ನು ನೆನಪಿಸಿಕೊಳ್ಳುವ ದಿನ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಸುಮಾರು 5 ಲಕ್ಷ ಖಡ್ಗಮೃಗಗಳು ಸಂಚರಿಸುತ್ತಿದ್ದ ಇವುಗಳ ಸಂಖ್ಯೆ ಇಂದು ಕಾಡಿನಲ್ಲಿ ಉಳಿದಿರುವುದು ಸುಮಾರು 27,000 ಮಾತ್ರ.

ಇಂದು ಭೂಮಿಯ ಮೇಲೆ ಜೀವಂತವಾಗಿರುವ ಖಡ್ಗಮೃಗಗಳ ಪ್ರಭೇದಗಳು ಕೇವಲ -ಐದು. ಆಫ್ರಿಕಾದಲ್ಲಿ ಬಿಳಿ ಖಡ್ಗಮೃಗ ಮತ್ತು ಕಪ್ಪು ಖಡ್ಗಮೃಗ, ಏಷ್ಯಾದಲ್ಲಿ ಭಾರತೀಯ ಒಂದು ಕೊಂಬಿನ ಖಡ್ಗಮೃಗ, ಜಾವನ್ ಖಡ್ಗಮೃಗ ಮತ್ತು ಸುಮಾತ್ರನ್ ಖಡ್ಗಮೃಗ ಎಂದು ಗುರುತಿಸಲಾಗಿದೆ.

ಭಾರತಕ್ಕೆ ಅತ್ಯಂತ ಪರಿಚಿತವಾದದ್ದು -ಗ್ರೇಟರ್ ಒನ್-ಹಾರ್ನ್ಡ್ ರೈನೋ — ಭಾರತೀಯ ಖಡ್ಗಮೃಗ (Rhinoceros unicornis). ಒಂದು ಕಾಲದಲ್ಲಿ ಭಾರತೀಯ ಉಪಖಂಡದ ಉತ್ತರ ಭಾಗದ ವಿಶಾಲ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದ ಈ ಜೀವಿಯ ಸಂಖ್ಯೆ 20ನೇ ಶತಮಾನದ ಆರಂಭದಲ್ಲಿ ಸುಮಾರು 200ಕ್ಕೆ ಕುಸಿದಿತ್ತು. ಇಂದು ಸಂರಕ್ಷಣಾ ಪ್ರಯತ್ನಗಳಿಂದ ಅದರ ಸಂಖ್ಯೆ ಸುಮಾರು 4,000ಕ್ಕೆ ಏರಿದೆ ಎನ್ನುವುದು ಸಂತಸದ ಸಂಗತಿ. ಇದು ಏಷ್ಯಾದ ಅತ್ಯಂತ ಗಮನಾರ್ಹ ವನ್ಯಜೀವಿ ಸಂರಕ್ಷಣಾ ಯಶೋಗಾಥೆಗಳಲ್ಲಿ ಒಂದು. ಆದರೆ, ಸುಮಾರು 76 ಮಾತ್ರ ಜಾವನ್ ಖಡ್ಗಮೃಗಗಳಿದ್ದು ,  ಇಂಡೋನೇಷ್ಯಾದ ಒಂದೇ ಸಂರಕ್ಷಿತ ಪ್ರದೇಶದಲ್ಲಿ ಉಳಿದಿವೆ. ಸುಮಾತ್ರನ್ ಖಡ್ಗಮೃಗಗಳು ಸುಮಾರು 40 ಮಾತ್ರ ಉಳಿದಿದ್ದು, ಸಣ್ಣ-ಸಣ್ಣ ಪ್ರತ್ಯೇಕ ಗುಂಪುಗಳಲ್ಲಿ ಚದುರಿಕೊಂಡಿರುವುದರಿಂದ ಸಂಗಾತಿಯನ್ನು ಹುಡುಕಿ ಸಂತಾನೋತ್ಪತ್ತಿ ಮಾಡುವುದೇ ದೊಡ್ಡ ಸವಾಲಾಗಿದೆ. ಅಂದರೆ, ಒಂದು ಪ್ರಭೇದಕ್ಕೆ ಅರಣ್ಯ ನಾಶವೇ ಅಪಾಯವಾದರೆ, ಮತ್ತೊಂದಕ್ಕೆ ‘ಒಬ್ಬರನ್ನೊಬ್ಬರು ಭೇಟಿಯಾಗಲಾಗದಿರುವುದೇ’ ಅಳಿವಿನ ಕಾರಣವಾಗಬಹುದು! ನಮ್ಮಲ್ಲಿ ಅನೇಕ ಗಂಡಿಗೆ ಹೆಣ್ಣು ಸಿಗದೇ ಮಲೈ ಮಾದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದು ನೆನಪಾಗುತ್ತಿದೆ. 

ಭಾರತೀಯ ಖಡ್ಗಮೃಗಗಳಿಗೆ ಹುಲ್ಲುಗಾವಲುಗಳು, ಸವನ್ನಾಗಳು, ಪೊದೆ ಪ್ರದೇಶಗಳು, ಜೌಗು ಪ್ರದೇಶಗಳು, ನದಿದಂಡೆಗಳು ಮತ್ತು ನೀರಿನ ತಾಣಗಳು ಅತ್ಯಂತ ಮುಖ್ಯ. ದಟ್ಟ ಹುಲ್ಲು ಆಹಾರ ನೀಡುತ್ತದೆ; ನದಿ ಮತ್ತು ಕೆಸರು ಪ್ರದೇಶಗಳು ದೇಹದ ಉಷ್ಣತೆಯನ್ನು ನಿಯಂತ್ರಿಸಲು ನೆರವಾಗುತ್ತವೆ. ವಿಶೇಷವಾಗಿ ಭಾರತೀಯ ಖಡ್ಗಮೃಗದ ಒಂದು ಅದ್ಭುತ ಗುಣವೆಂದರೆ ಇದು ಚೆನ್ನಾಗಿ ಈಜಬಲ್ಲದು; ನೀರಿನೊಳಗೆ ಮುಳುಗಿಯೂ ಹೋಗಬಲ್ಲದು! 

‘ಒಂಟಿ’ ಎಂದುಕೊಂಡರೆ ತಪ್ಪು! 

ಖಡ್ಗಮೃಗಗಳು ಸಾಮಾನ್ಯವಾಗಿ ದೊಡ್ಡ ಹಿಂಡುಗಳಲ್ಲಿ ಓಡಾಡುವುದಿಲ್ಲ. ಭಾರತೀಯ ಖಡ್ಗಮೃಗಗಳು ಬಹುತೇಕ ಏಕಾಂಗಿಯಾಗಿ ಜೀವಿಸುತ್ತವೆ. ತಾಯಿ ಮತ್ತು ಮರಿ ಒಟ್ಟಿಗೆ ಕಾಣುವುದು ಸಾಮಾನ್ಯ. ಆಹಾರ ಸಮೃದ್ಧವಾಗಿರುವ ಪ್ರದೇಶಗಳಲ್ಲಿ ಹಲವು ಖಡ್ಗಮೃಗಗಳು ಒಂದೇ ಸ್ಥಳದಲ್ಲಿ ಮೇಯುತ್ತಿರುವುದು ಕಾಣಬಹುದು. ಗಂಡು ಖಡ್ಗಮೃಗಗಳು ತಮ್ಮ ಪ್ರದೇಶಗಳನ್ನು ಗುರುತಿಸುತ್ತವೆ; ಆದರೆ ಅವುಗಳ ಪ್ರದೇಶಗಳು ಪರಸ್ಪರ ಅತಿಕ್ರಮಿಸಬಹುದು.

ಆದರೆ ಆಫ್ರಿಕಾದ ಬಿಳಿ ಖಡ್ಗಮೃಗಗಳ ಸಾಮಾಜಿಕ ಜೀವನ ಸ್ವಲ್ಪ ವಿಭಿನ್ನ. ಹೆಣ್ಣು ಮತ್ತು ಮರಿಗಳು ಸೇರಿ ಕೆಲವೊಮ್ಮೆ 10ಕ್ಕೂ ಹೆಚ್ಚಿನ ಪ್ರಾಣಿಗಳ ಗುಂಪು ರೂಪಿಸಬಹುದು. ಗಂಡುಗಳು ತಮ್ಮ ಪ್ರದೇಶವನ್ನು ಗುರುತಿಸಲು ಲದ್ದಿಯ ರಾಶಿಗಳನ್ನು ಬಳಸುತ್ತವೆ. ಹೀಗಾಗಿ ಖಡ್ಗಮೃಗಗಳಲ್ಲಿಯೂ “ಕುಟುಂಬ ವ್ಯವಸ್ಥೆ” ಮತ್ತು “ಏಕಾಂತ ಜೀವನ” ಎರಡೂ ಮಾದರಿಗಳಿವೆ ಎನ್ನಬಹುದು.

ಖಡ್ಗಮೃಗದ ಅತ್ಯಂತ ಕುತೂಹಲಕಾರಿ ಸಂಗತಿಗಳಲ್ಲೊಂದು ಅದೇ ಅದರ ಲದ್ದಿ ಸುದ್ದಿ.  ಖಡ್ಗಮೃಗಗಳ ಜಗತ್ತಿನಲ್ಲಿ ಅದು ಒಂದು ರೀತಿಯ‘ಸಾಮಾಜಿಕ ಮಾಧ್ಯಮ’! ಲದ್ದಿಯಲ್ಲೂ ಇದೆ ‘ ಸಂದೇಶ’! ಖಡ್ಗಮೃಗಗಳು ತಮ್ಮ ಲದ್ದಿಯನ್ನು ನಿರ್ದಿಷ್ಟ ಸ್ಥಳಗಳಲ್ಲಿ ಹಾಕುತ್ತವೆ. ಇಂತಹ ಸಗಣಿ ಅಥವಾ ಲದ್ದಿ ರಾಶಿಗಳು ಗಡಿ ಗುರುತಿಸಲು ಮತ್ತು ಇತರ ಖಡ್ಗಮೃಗಗಳಿಗೆ ಮಾಹಿತಿ ನೀಡಲು ಸಹಾಯ ಮಾಡುತ್ತವೆ. ವಾಸನೆ ಮತ್ತು ರಾಸಾಯನಿಕ ಸಂಕೇತಗಳ ಮೂಲಕ “ನಾನು ಇಲ್ಲಿದ್ದೇನೆ” ಎಂಬ ಸಂದೇಶವನ್ನು ಮತ್ತೊಂದು ಖಡ್ಗಮೃಗಕ್ಕೆ ತಲುಪಿಸಬಹುದು. ಅಂದರೆ, ನಮ್ಮಲ್ಲಿ WhatsApp ಇರುವಂತೆ → ಅವುಗಳಲ್ಲಿ Dung-app! ಪ್ರಕೃತಿ ಎಷ್ಟು ವಿಚಿತ್ರವಾದ ಸಂವಹನ ವ್ಯವಸ್ಥೆಗಳನ್ನು ರೂಪಿಸಿದೆ ನೋಡಿ!

ಖಡ್ಗಮೃಗ – ಕಾಡಿನ ‘ಪರಿಸರ ಇಂಜಿನಿಯರ್ ಕೂಡ ಹೌದು’ ಖಡ್ಗಮೃಗವನ್ನು ಕೇವಲ ಒಂದು ದೊಡ್ಡ ಸಸ್ಯಾಹಾರಿ ಪ್ರಾಣಿ ಎಂದು ನೋಡುವುದು ಅದರ ಮಹತ್ವವನ್ನು ಕಡಿಮೆ ಮಾಡಿದಂತಾಗುತ್ತದೆ.ಇದನ್ನು ecosystem engineer ಎನ್ನಬಹುದೇನೋ. ಹುಲ್ಲು, ಪೊದೆ, ಮರಗಳ ಎಲೆಗಳು, ಹಣ್ಣುಗಳು ಮತ್ತು ಜಲಸಸ್ಯಗಳನ್ನು ತಿನ್ನುವಾಗ ಸಸ್ಯ ಸಮುದಾಯದ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಅದು ಸಂಚರಿಸುವುದು, ಮೇಯುವುದು, ಕೆಸರಿನಲ್ಲಿ ಉರುಳುವುದು—ಇವೆಲ್ಲವೂ ಅದರ ಆವಾಸಸ್ಥಳದ ಸ್ವರೂಪವನ್ನು ಬದಲಾಯಿಸುತ್ತವೆ.

ಇನ್ನೂ ಅದ್ಭುತವಾದ ಸಂಗತಿ ಏನೆಂದರೆ ಅದರ ಸಗಣಿಯ ಮೂಲಕ ಬೀಜಗಳ ಪ್ರಸರಣ ನಡೆಯುತ್ತದೆ. ತಿಂದ ಸಸ್ಯಗಳ ಬೀಜಗಳು ಸಗಣಿಯೊಂದಿಗೆ ಮತ್ತೊಂದು ಪ್ರದೇಶಕ್ಕೆ ತಲುಪುತ್ತವೆ. ಸಗಣಿ ಮಣ್ಣಿಗೆ ಪೋಷಕಾಂಶಗಳನ್ನು ಸೇರಿಸುತ್ತದೆ. ಹೀಗೆ ಒಂದು ಖಡ್ಗಮೃಗದ ಹೊಟ್ಟೆಯೇ ಒಂದು ಸಣ್ಣ ‘ಬೀಜ ವಿತರಣಾ ಯಂತ್ರ’!!! ಇಲ್ಲಿ ಒಂದು ಸುಂದರ ಪರಿಸರ ಸಂಬಂಧ ಕಾಣುತ್ತದೆ: 

ಸಸ್ಯ → ಖಡ್ಗಮೃಗ → ಸಗಣಿ → ಮಣ್ಣು → ಬೀಜ → ಹೊಸ ಸಸ್ಯ → ಮತ್ತೆ ಖಡ್ಗಮೃಗ! 

ಪ್ರಕೃತಿಯ ಚಕ್ರದಲ್ಲಿ ಯಾವುದೂ ವ್ಯರ್ಥವಲ್ಲ. ಖಡ್ಗಮೃಗದ ಕೊಂಬಿನ ಬಗ್ಗೆ ಮತ್ತೊಂದು ಅಪರೂಪದ ಸಂಗತಿ ಇದೆ.ಅದು ಎಲುಬಿನಿಂದ ನಿರ್ಮಿತವಾಗಿಲ್ಲ. ಮಾನವನ ಕೂದಲು ಮತ್ತು ಉಗುರುಗಳಲ್ಲಿ ಇರುವ ಕೆರಾಟಿನ್ ಎಂಬ ಪ್ರೋಟೀನ್‌ನಿಂದಲೇ ಖಡ್ಗಮೃಗದ ಕೊಂಬು ನಿರ್ಮಾಣವಾಗುತ್ತದೆ.!!! ಖಡ್ಗಮೃಗಗಳು ಕೊಂಬಿಲ್ಲದೆ ಹುಟ್ಟುತ್ತವೆ; ನಂತರ ಕೊಂಬು ಬೆಳೆಯಲು ಆರಂಭಿಸುತ್ತದೆ ಮತ್ತು ಜೀವನಪೂರ್ತಿ ಬೆಳೆಯುತ್ತಲೇ ಇರುತ್ತದೆ.

ಆದರೆ ಇದೇ ಕೊಂಬು ಅದರ ಶಾಪವೂ ಆಗಿದೆ. ವೈಜ್ಞಾನಿಕವಾಗಿ ಖಡ್ಗಮೃಗದ ಕೊಂಬಿಗೆ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳನ್ನು ಗುಣಪಡಿಸುವ ಔಷಧೀಯ ಸಾಮರ್ಥ್ಯವಿದೆ ಎಂಬುದಕ್ಕೆ ಸರಿಯಾದ ಪುರಾವೆ ಇಲ್ಲ. ಆದರೂ ಮೂಢನಂಬಿಕೆ ಮತ್ತು ಅಕ್ರಮ ವ್ಯಾಪಾರದಿಂದಾಗಿ ಖಡ್ಗಮೃಗಗಳ ಬೇಟೆ ಮುಂದುವರಿಯುತ್ತಿರುವುದು ದುರದೃಷ್ಟಕರ. ಮನುಷ್ಯನ ಒಂದು ತಪ್ಪು ನಂಬಿಕೆ—ಒಂದು ಸಂಪೂರ್ಣ ಪ್ರಭೇದದ ಅಸ್ತಿತ್ವವನ್ನೇ ಅಪಾಯಕ್ಕೆ ತಳ್ಳಬಹುದು.

ಮಾತೃತ್ವ: ಒಂದು ದೀರ್ಘ ನಿರೀಕ್ಷೆ

ಖಡ್ಗಮೃಗದ ಸಂತಾನೋತ್ಪತ್ತಿಯೂ ನಿಧಾನವಾದದ್ದು. ಗರ್ಭಧಾರಣೆ ದೀರ್ಘವಾಗಿರುತ್ತದೆ ಮತ್ತು ಸಾಮಾನ್ಯವಾಗಿ ಒಂದು ಮರಿ ಮಾತ್ರ ಹುಟ್ಟುತ್ತದೆ. ಹುಟ್ಟಿದ ನಂತರ ಮರಿ ತಾಯಿಯೊಂದಿಗೆ ದೀರ್ಘಕಾಲ ಇರುತ್ತದೆ.

ಇದು ಸಂರಕ್ಷಣೆಗೆ ಒಂದು ಪ್ರಮುಖ ಸವಾಲು. ವೇಗವಾಗಿ ಸಂತಾನೋತ್ಪತ್ತಿ ಮಾಡುವ ಪ್ರಾಣಿಗಳಂತೆ ಖಡ್ಗಮೃಗಗಳ ಸಂಖ್ಯೆಯನ್ನು ಕೆಲವೇ ವರ್ಷಗಳಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ. ಇದಕ್ಕಾಗಿಯೇ ಒಂದು ಹೆಣ್ಣು ಖಡ್ಗಮೃಗದ ಜೀವನವೂ, ಒಂದು ಮರಿಯ ಬದುಕೂ ಬಹಳ ಅಮೂಲ್ಯ.

ಅದರಲ್ಲೂ ಸುಮಾತ್ರನ್ ಖಡ್ಗಮೃಗಗಳಂತಹ ಅತಿ ಸಣ್ಣ ಮತ್ತು ಪ್ರತ್ಯೇಕಗೊಂಡ ಜನಸಂಖ್ಯೆಯಲ್ಲಿ ಗಂಡು-ಹೆಣ್ಣುಗಳು ಪರಸ್ಪರ ಭೇಟಿಯಾಗದಿರುವುದೇ ಸಂತಾನೋತ್ಪತ್ತಿಗೆ ಅಡ್ಡಿಯಾಗುತ್ತಿದೆ. 

ಒಂದು ಖಡ್ಗಮೃಗವನ್ನು ಉಳಿಸುವುದೆಂದರೆ ಕೇವಲ ಒಂದು ಪ್ರಾಣಿಯನ್ನು ಉಳಿಸುವುದಲ್ಲ.ಅದರೊಂದಿಗೆ ಹುಲ್ಲುಗಾವಲು ಉಳಿಯುತ್ತದೆ.ನೀರಿನ ತಾಣ ಉಳಿಯುತ್ತದೆ. ಸಸ್ಯಗಳ ವೈವಿಧ್ಯ ಉಳಿಯುತ್ತದೆ. ಬೀಜಗಳ ಪ್ರಸರಣ ಮುಂದುವರಿಯುತ್ತದೆ. ಸಣ್ಣ ಸಸ್ಯಾಹಾರಿಗಳು ಮತ್ತು ಇತರ ಪ್ರಾಣಿಗಳಿಗೂ ಆಶ್ರಯ ಉಳಿಯುತ್ತದೆ. ಖಡ್ಗಮೃಗ ಸಂರಕ್ಷಣೆ ಎಂದರೆ ಒಂದು ಸಂಪೂರ್ಣ ಪರಿಸರ ವ್ಯವಸ್ಥೆಯ ಸಂರಕ್ಷಣೆ ಎನ್ನುವುದು ಸುಳ್ಳಲ್ಲ. ಖಡ್ಗಮೃಗಗಳ ಅವಾಸವನ್ನು ಸಂರಕ್ಷಿಸಿದಾಗ, ಅವುಗಳೊಂದಿಗೆ ಬದುಕುವ ಆನೆಗಳು, ಎಮ್ಮೆಗಳು, ಜಿಂಕೆಗಳು, ಪಕ್ಷಿಗಳು, ಸಣ್ಣ ಸಸ್ತನಿಗಳು ಮತ್ತು ಅನೇಕ ಸಸ್ಯಪ್ರಭೇದಗಳಿಗೂ ರಕ್ಷಣೆ ದೊರೆಯುತ್ತದೆ.

ಕೊನೆಯದಾಗಿ, ಖಡ್ಗಮೃಗದ ಹೆಜ್ಜೆ ನಿಧಾನವಾಗಿರಬಹುದು. ಆದರೆ ಅದರ ಪರಿಸರದ ಮೇಲಿನ ಪ್ರಭಾವ ಬಹಳ ದೊಡ್ಡದು. ಅದರ ಒಂದು ಹೆಜ್ಜೆ ಹುಲ್ಲುಗಾವಲಿನ ರೂಪ ಬದಲಾಯಿಸುತ್ತದೆ. ಅದರ ಒಂದು ಸಗಣಿ ರಾಶಿ ಬೀಜಕ್ಕೆ ಹೊಸ ನೆಲ ನೀಡುತ್ತದೆ. ಅದರ ಒಂದು ಮರಿ ಭವಿಷ್ಯದ ಒಂದು ಸಂಪೂರ್ಣ ಜನಸಂಖ್ಯೆಯ ಆಸೆಯಾಗಬಹುದು.

ಇಂದು ವಿಶ್ವ ಖಡ್ಗಮೃಗ ದಿನದಂದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ-“ಮುಂದಿನ ಪೀಳಿಗೆಯ ಮಕ್ಕಳಿಗೆ ಖಡ್ಗಮೃಗವನ್ನು ನಿಜವಾದ ಕಾಡಿನಲ್ಲಿ ತೋರಿಸಬೇಕೇ? ಅಥವಾ ಪುಸ್ತಕದ ಪುಟದಲ್ಲಿ ಮಾತ್ರ ತೋರಿಸಬೇಕೇ?”

ಉತ್ತರ ನಮ್ಮ ಕೈಯಲ್ಲಿದೆ. 

**ಖಡ್ಗಮೃಗ ಉಳಿದರೆ ಕಾಡು ಉಳಿಯುತ್ತದೆ.

ಕಾಡು ಉಳಿದರೆ ಜೀವವೈವಿಧ್ಯ ಉಳಿಯುತ್ತದೆ.

ಜೀವವೈವಿಧ್ಯ ಉಳಿದರೆ… ನಮ್ಮ ಭವಿಷ್ಯವೂ ಉಳಿಯುತ್ತದೆ.**

ಸೆಪ್ಟೆಂಬರ್ 22 — ವಿಶ್ವ ಖಡ್ಗಮೃಗ ದಿನ. ಇದು ಒಂದು ಕೊಂಬಿನ ದೈತ್ಯವನ್ನು ಕೇವಲ ಸ್ಮರಿಸುವ ದಿನವಲ್ಲ; ಅದರೊಂದಿಗೆ ಇಡೀ ಕಾಡನ್ನು ಉಳಿಸುವ ಸಂಕಲ್ಪ ಮಾಡುವ ದಿನ.

ಕಾಜಿರಂಗಾದಿಂದ ಹೊರ ಬಂದಾಗ ನನ್ನ ಮನಸ್ಸಿನಲ್ಲಿ ಉತ್ತರ ಸಿಗದ ಅನೇಕ ಪ್ರಶ್ನೆಗಳು ಕಾಡತೊಡಗಿದ್ದವು.

ಚಿತ್ರಗಳು - ಮಿಥುನ್ ರಾವ್ ಮತ್ತು ಡಾ. ಸೋಹನ್ ರಾವ್   

ಆಕರಗಳು :  

[1]: https://www.worldwildlife.org/resources/facts/where-do-rhinos-live-and-eight-other-rhino-facts/?utm_source=chatgpt.com "Where do Rhinos Live? And Eight Other Rhino Facts | WWF"

[2]: https://www.worldwildlife.org/species/greater-one-horned-rhino?utm_source=chatgpt.com "Greater One-Horned Rhino | WWF"

[3]: https://www.worldwildlife.org/species/rhino/sumatran-rhino/?utm_source=chatgpt.com "Sumatran rhino | WWF"

[4]: https://www.savetherhino.org/rhino-info/rhino-kids/fun-facts/?utm_source=chatgpt.com "Fun Facts About Rhinos | Save The Rhino"

[5]: https://www.worldwildlife.org/species/rhino/white-rhino/?utm_source=chatgpt.com "White Rhino | WWF"

[6]:https://www.savetherhino.org/rhino-info/rhino-species/greater-one-horned-rhino/?utm_source=chatgpt.com "Greater One-Horned Rhino | Species | Save the Rhino International"

[7]: https://www.worldwildlife.org/species/rhino/?utm_source=chatgpt.com "Rhino | WWF"


ಸಂಪಾದಕೀಯ

ಸಂಪಾದಕೀಯ

ಗುರುವಿನ ಬೆಳಕು… ಜ್ಞಾನದ ಪಯಣ…

 ರಾಮಚಂದ್ರ ಭಟ್. ಬಿ. ಜಿ. 

ಸಂಪಾದಕ ಮಂಡಳಿ, ಸವಿಜ್ಞಾನ

ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

ಈ ಸಂದರ್ಭದಲ್ಲಿ ಸವಿಜ್ಞಾನ ಬಳಗದ ಬಂಧುಗಳು ಶೈಕ್ಷಣಿಕ ಸಾಧನೆಗಾಗಿ ಪುರಸ್ಕೃತರಾಗಿರುವುದು ಸಂತಸದ ಹೊನಲು ಹರಿಯುವಂತೆ ಮಾಡಿದೆ.

ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಮಹಾನ್ ತತ್ವಜ್ಞಾನಿ ಮಾತ್ರವಲ್ಲ, ಶ್ರೇಷ್ಠ ಶಿಕ್ಷಕರೂ ಆಗಿದ್ದರು. ಶಿಕ್ಷಣವೆಂದರೆ ಕೇವಲ ಜ್ಞಾನವನ್ನು ನೀಡುವುದಲ್ಲ; ಅದು ವ್ಯಕ್ತಿತ್ವವನ್ನು ರೂಪಿಸಿ, ವಿವೇಕ, ಮೌಲ್ಯ ಮತ್ತು ಮಾನವೀಯತೆಯನ್ನು ಬೆಳೆಸುವ ಪ್ರಕ್ರಿಯೆ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು ಅವರು. ಅವರ ಜನ್ಮದಿನವಾದ ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವುದು, ಶಿಕ್ಷಕ ವೃತ್ತಿಯ ಮಹತ್ವವನ್ನು ಸ್ಮರಿಸುವುದರ ಜೊತೆಗೆ ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರವನ್ನು ಗೌರವಿಸುವ ಅಪೂರ್ವ ಪರಂಪರೆಯಾಗಿದೆ.

The true purpose of education is to foster the complete intellectual, emotional, moral, and social growth of an individual so they can realize their full potential and transform themselves.

ಒಬ್ಬ ಶಿಕ್ಷಕ ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿಯಲ್ಲ; ವಿದ್ಯಾರ್ಥಿಯೊಳಗಿನ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ದಿಕ್ಕು ತೋರಿಸಿ, ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸುವ ಶಿಲ್ಪಿ. ಸಮಾಜದ ಭವಿಷ್ಯವನ್ನು ರೂಪಿಸುವ ಈ ಮಹತ್ತರ ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ‘ಸವಿಜ್ಞಾನ’ ಬಳಗದ ಹೃತ್ಪೂರ್ವಕ ನಮನಗಳು.

ಈ ವಿಶೇಷ ಸಂದರ್ಭದಲ್ಲಿ ನಮ್ಮೆಲ್ಲರ ಗೌರವಕ್ಕೆ ಪಾತ್ರರಾದ ‘ವಿನಯ ವಿದ್ಯಾ ವಿಶಾರದ’ ಪ್ರಶಸ್ತಿ ಪುರಸ್ಕೃತರು ಹಾಗೂ ‘ಸವಿಜ್ಞಾನ’ದ ಪ್ರಧಾನ ಸಂಪಾದಕರಾದ ಡಾ. ಬಾಲಕೃಷ್ಣ ಅಡಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರಶಸ್ತಿಯ ಹೆಸರಿಗೆ ತಕ್ಕಂತೆ ವಿನಯ, ವಿದ್ಯೆ ಮತ್ತು ವಿಶಾರದತೆಯನ್ನು ಮೈಗೂಡಿಸಿಕೊಂಡಿರುವ ಅವರು, ನಮ್ಮೆಲ್ಲರನ್ನು ಪ್ರತಿಹಂತದಲ್ಲೂ ತಿದ್ದಿ, ತೀಡಿ, ಪ್ರೋತ್ಸಾಹಿಸಿ ಮುನ್ನಡೆಸುತ್ತಿರುವ ಸರಳ ಸಜ್ಜನಿಕೆಯ ವಿಶಿಷ್ಟ ವ್ಯಕ್ತಿತ್ವ. ಅವರ ಮಾರ್ಗದರ್ಶನ ‘ಸವಿಜ್ಞಾನ’ದ ಶೈಕ್ಷಣಿಕ ಪಯಣಕ್ಕೆ ಸದಾ ಸ್ಫೂರ್ತಿಯ ಸೆಲೆಯಾಗಿರಲಿ. ಈ ಸಾರ್ಥಕ ಆಯ್ಕೆಗೆ ಆಯ್ಕೆ ಸಮಿತಿಗೂ ಹೃತ್ಪೂರ್ವಕ ಧನ್ಯವಾದಗಳು.

‘ಸವಿಜ್ಞಾನ’ ಬಳಗದ ಹೆಮ್ಮೆಯ ಸಂಗಾತಿ, ಸ್ನೇಹಿತ ಸಿದ್ದು ಬಿರಾದಾರ್ ಅವರು ಸೂತ್ರದ ಗೊಂಬೆಯಾಟದ ವಿಶಿಷ್ಟ ಕಲೆಯ ಮೂಲಕ ವಿಜ್ಞಾನವನ್ನು ದೇಶ-ವಿದೇಶಗಳಲ್ಲಿ ಜನಪ್ರಿಯಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ವಿಜ್ಞಾನವನ್ನು ಕೇವಲ ಪಠ್ಯಪುಸ್ತಕದ ಪುಟಗಳಲ್ಲಿ ಸೀಮಿತಗೊಳಿಸದೆ, ಕಲೆ, ಮನರಂಜನೆ ಮತ್ತು ಸೃಜನಶೀಲತೆಯೊಂದಿಗೆ ಜನಮನಕ್ಕೆ ತಲುಪಿಸುವ ಅವರ ಪ್ರಯತ್ನವು ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಣ ಸಚಿವರು ಹಾಗೂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿರುವುದು ‘ಸವಿಜ್ಞಾನ’ ಬಳಗಕ್ಕೂ ಹೆಮ್ಮೆಯ ಸಂಗತಿ.

‘ಸವಿಜ್ಞಾನ’ ಬಳಗದ ಜ್ಞಾನದೀಪಿಕ ಶೈಕ್ಷಣಿಕ ದತ್ತಿ ‘ಶಿಕ್ಷಕರತ್ನ’ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಆರು ವರ್ಷಗಳ ಕಾಲ ‘ಸವಿಜ್ಞಾನ’ದೊಂದಿಗೆ ತಮ್ಮ ಜ್ಞಾನ, ಅನುಭವ ಮತ್ತು ಸೃಜನಶೀಲತೆಯನ್ನು ಹಂಚಿಕೊಂಡಿರುವ ಅವರ ಶೈಕ್ಷಣಿಕ ಸೇವೆ ಅಭಿನಂದನಾರ್ಹ.

‘ಸವಿಜ್ಞಾನ’ವೆಂದರೆ ಕೇವಲ ಒಂದು ಪತ್ರಿಕೆಯಲ್ಲ; ಅದು ಶಿಕ್ಷಕರ ಜ್ಞಾನ, ಅನುಭವ, ಪ್ರಯೋಗಶೀಲತೆ ಮತ್ತು ಸೃಜನಶೀಲತೆಯನ್ನು ಒಂದೆಡೆ ಸೇರಿಸುವ ಜ್ಞಾನ ವೇದಿಕೆ. ಶಿಕ್ಷಕರು ಕಲಿಯುತ್ತಾ, ಕಲಿಸುತ್ತಾ, ಪರಸ್ಪರರ ಅನುಭವಗಳಿಂದ ಸಮೃದ್ಧರಾಗುವ ಮೂಲಕ ವಿಜ್ಞಾನ ಶಿಕ್ಷಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು ಇದರ ಆಶಯ.

ಈ ಶಿಕ್ಷಕರ ದಿನಾಚರಣೆಯಲ್ಲಿ ‘ಕಲಿಸುವ ಪ್ರತಿಯೊಬ್ಬರೂ ಕಲಿಯುವವರಾಗಿರಲಿ; ಕಲಿಯುವ ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಬೆಳಕಾಗಲಿ’ ಎಂಬ ಆಶಯದೊಂದಿಗೆ, ನಿಮ್ಮೆಲ್ಲರ ಸಹಕಾರದೊಂದಿಗೆ ‘ಸವಿಜ್ಞಾನ’ದ ಜ್ಞಾನಯಾತ್ರೆ ಮತ್ತಷ್ಟು ದೂರ ಸಾಗಲಿ.

"ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ?ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ!"  ಎಂಬ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ನುಡಿಗಳೆಷ್ಟು ಅರ್ಥಪೂರ್ಣ.

ಎಲ್ಲ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.


Tuesday, August 4, 2026

ಕೆನಡಾದಲ್ಲಿದ್ದ ಅಚ್ಚ ಕನ್ನಡಿಗ ವಿಜ್ಞಾನಿ ಸಾಹಿತ್ಯಸಾಧಕ - ಡಾ. ರಾಮಭಟ್‌ ಬಾಳಿಕೆ

ಕೆನಡಾದಲ್ಲಿದ್ದ ಅಚ್ಚ ಕನ್ನಡಿಗ ವಿಜ್ಞಾನಿ  ಸಾಹಿತ್ಯಸಾಧಕ - ಡಾ. ರಾಮಭಟ್‌ ಬಾಳಿಕೆ

ಲೇಖನ : ರಾಮಚಂದ್ರ ಭಟ್ ಬಿ.ಜಿ.

ವಿಜ್ಞಾನ ಲೇಖಕರು 




(ವಿಜ್ಞಾನ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಸಂಗಮವಾದ ಅಪರೂಪದ ವ್ಯಕ್ತಿತ್ವ )
                                               

“ಒಬ್ಬ ವ್ಯಕ್ತಿ ವಿಜ್ಞಾನದಲ್ಲಿ ಜಾಗತಿಕ ಮಟ್ಟದ ಶಿಖರ ಏರಿಯೂ, ತನ್ನ ಎದೆಯ ಆಳದಲ್ಲಿ ಕನ್ನಡದ ಮಣ್ಣಿನ ವಾಸನೆಯನ್ನು ಅಳಿಸದೆ ಉಳಿಸಿಕೊಂಡಿದ್ದರೆ ಅದು ನಿಜವಾದ ಸಾಧನೆ.” 

ಈ ಮಾತಿಗೊಂದು ಜೀವಂತ ರೂಪದಂತಿದ್ದವರು ಡಾ. ರಾಮಭಟ್ ಬಾಳಿಕೆ. ವಿಜ್ಞಾನದ ಪ್ರಯೋಗಶಾಲೆಗಳಲ್ಲಿ ಜಾಗತಿಕ ಮಟ್ಟದ ಸಂಶೋಧಕ, ವಿಶ್ವವಿದ್ಯಾಲಯದ ಆಡಳಿತದ ಚುಕ್ಕಾಣಿ ಹಿಡಿದ ಮಾರ್ಗದರ್ಶಕ, ನಾಸಾದ ಗೌರವಕ್ಕೆ ಪಾತ್ರರಾದ ತಂತ್ರಜ್ಞ, ಅದೇ ಹೊತ್ತಿಗೆ ಕನ್ನಡದ ಕವಿ, ಕಾದಂಬರಿಕಾರ, ಹರಿಕಥೆಗಾರ ಹಾಗೂ ಮೃದಂಗ ವಾದಕ—ಹೀಗೆ ಹತ್ತಾರು ಲೋಕಗಳನ್ನು ಏಕಕಾಲಕ್ಕೆ ಆವಾಹಿಸಿಕೊಂಡಿದ್ದ, ತನ್ನ ಊರ ಹೆಸರಿಗೆ ತಕ್ಕಂತೆ ವಿವಿಧ ಕ್ಷೇತ್ರಗಳಿಗೆ ಹಲವು ಪೀಳಿಗೆಯವರೆಗೂ ಬಾಳಿಕೆಯಾಗುವಂತೆ ಬದುಕಿದ್ದ ಈ ಅಪರೂಪದ ವ್ಯಕ್ತಿತ್ವ ಇದೀಗ ಇತಿಹಾಸದ ಪುಟಗಳನ್ನು ಸೇರಿದೆ.

2026ರ ಮೇ 24ರಂದು ಕೆನಡಾದ ಟೊರೆಂಟೋದಲ್ಲಿ ಅವರು ವಿಧಿವಶರಾದ ಸುದ್ದಿ, ಅತ್ತ ಜಾಗತಿಕ ವಿಜ್ಞಾನ ಲೋಕವನ್ನು ಹಾಗೂ ಇತ್ತ ಕನ್ನಡ ಸಾಹಿತ್ಯ ವಲಯವನ್ನು ಒಟ್ಟಿಗೇ ಮೌನವಾಗಿಸಿದೆ. ಧರ್ಮತ್ತಡ್ಕದ ಹಸಿರು ಮಡಿಲಿನಿಂದ ಕೆನಡಾದ ಹಿಮದ ನಾಡಿನವರೆಗೆ ವಿಸ್ತರಿಸಿದ ಅವರ ಬದುಕಿನ ಪಥ, ಮುಂಬರುವ ತಲೆಮಾರುಗಳಿಗೆ ದಾರಿದೀಪವಾಗಬಲ್ಲಂತಹುದು. ಧರ್ಮತ್ತಡ್ಕದ ಸುತ್ತಮುತ್ತಲಿನ ಪ್ರದೇಶವಾದ ಮಂಜೇಶ್ವರ, ಕಾಸರಗೋಡಿನವನಾದ ನನಗೆ ನಮ್ಮ ಕಡೆಯ ಇಂತಹ ಧೀಮಂತ ವ್ಯಕ್ತಿತ್ವವನ್ನು ಕಟ್ಟಿ ಕೊಡುವ ಮೂಲಕ ನುಡಿನಮನ ಸಲ್ಲಿಸುವುದು ಹೆಮ್ಮೆಯ ವಿಚಾರವೇ ಸರಿ.

ಧರ್ಮತ್ತಡ್ಕದ ಪುಟ್ಟ ಹಳ್ಳಿಯಿಂದ ಜಾಗತಿಕ ವಿಜ್ಞಾನ ಲೋಕದವರೆಗೆ...

1943ರ ಅಕ್ಟೋಬರ್ 2ರಂದು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಸಮೀಪದ ಬಾಳಿಕೆ ಎಂಬ ಹಳ್ಳಿಯ ಮನೆಯಲ್ಲಿ ರಾಮಭಟ್ಟರ ಜನನವಾಯಿತು. ಅಡಿಕೆ ತೋಟಗಳು, ಭತ್ತದ ಗದ್ದೆಗಳು, ಕರಾವಳಿಯ ಪ್ರಕೃತಿಯ ಸೌಂದರ್ಯದ ನಡುವೆ ಕಳೆದ ಬಾಲ್ಯವದು. ಅಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಸೌಲಭ್ಯಗಳು ತೀರಾ ವಿರಳ.

ಆದರೆ, ಈ ಬಾಲಕನ ಕಣ್ಣುಗಳಲ್ಲಿ ಬೇರೆಯದೇ ಆದ ಜ್ಞಾನದ ಹಸಿವಿತ್ತು. ಸುತ್ತಲಿನ ಪ್ರಕೃತಿಯ ಚಲನೆಯ ಹಿಂದೆ ಅಡಗಿರುವ ವಿಜ್ಞಾನವನ್ನು ಅರಿಯುವ ಹಂಬಲ, ಪುಸ್ತಕಗಳ ಮೇಲಿನ ಅವ್ಯಾಹತ ಪ್ರೀತಿ, ಸಂಗೀತದ ನಾದದ ಮೇಲಿನ ಆಕರ್ಷಣೆ ಬಾಲ್ಯದಲ್ಲೇ ಮೊಳಕೆಯೊಡೆದಿದ್ದವು. ಮಧ್ಯಮ ವರ್ಗದ ಕುಟುಂಬದ ಆರ್ಥಿಕ ಮಿತಿಗಳು ಹಾಗೂ “ಓದಿದ್ದು ಸಾಕಷ್ಟಾಯಿತು” ಎಂಬ ಕೌಟುಂಬಿಕ ಒತ್ತಡಗಳ ನಡುವೆಯೂ ರಾಮಭಟ್ಟರು ತಮ್ಮ ದೃಢಸಂಕಲ್ಪದಿಂದ ಮುನ್ನಡೆದರು.

ಮಂಜೇಶ್ವರದಲ್ಲಿ ಪ್ರೌಢಶಾಲೆ ಮುಗಿಸಿ, ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಪೂರೈಸಿದರು. ನಂತರ, ಅಂದಿನ ದಿನಗಳಲ್ಲಿ ಅತ್ಯಂತ ಪ್ರತಿಷ್ಠಿತವಾಗಿದ್ದ ತಾಂತ್ರಿಕ ಶಿಕ್ಷಣಕ್ಕಾಗಿ ಸುರತ್ಕಲ್ಲಿನ ಕೆ.ಆರ್.ಇ.ಸಿ. (ಇಂದಿನ NITK) ಸಂಸ್ಥೆಯನ್ನು ಸೇರಿದರು. ಅಲ್ಲಿ ಅವರ ಪ್ರತಿಭೆಯನ್ನು ಗುರುತಿಸಿದ ಪ್ರಾಧ್ಯಾಪಕರು ಮೇಲ್ಮಟ್ಟದ ಸಂಶೋಧನೆಗೆ ಪ್ರೇರೇಪಿಸಿದರು. ಮುಂದೆ ಮದ್ರಾಸ್ ಐಐಟಿ (IIT Madras) ಸಂಸ್ಥೆಯಿಂದ ಎಂ.ಟೆಕ್ ಪದವಿ ಪಡೆದ ಅವರು, “Sound and Vibration” (ಧ್ವನಿ ಮತ್ತು ಕಂಪನ) ವಿಷಯದಲ್ಲಿ ಪಿಎಚ್.ಡಿ. ಪೂರ್ಣಗೊಳಿಸಿದರು.

“ನಾದ ಮತ್ತು ಕಂಪನ” – ಸಂಶೋಧನೆಯ ಹೃದಯ ಭಾಗ

ಡಾ. ರಾಮಭಟ್ ಅವರ ಸಂಶೋಧನೆಯ ಮುಖ್ಯ ಕ್ಷೇತ್ರ 'ಸೌಂಡ್ ಅಂಡ್ ವೈಬ್ರೇಷನ್ ಇಂಜಿನಿಯರಿಂಗ್'. ಯಂತ್ರಗಳು, ವಿಮಾನಗಳು, ರಾಕೆಟ್‌ಗಳು, ಬೃಹತ್ ಕೈಗಾರಿಕಾ ಸ್ಥಾವರಗಳು ಹಾಗೂ ಕಟ್ಟಡಗಳಲ್ಲಿ ಉಂಟಾಗುವ ಕಂಪನ ಮತ್ತು ಧ್ವನಿಯ ತೀವ್ರತೆಯನ್ನು ನಿಯಂತ್ರಿಸುವ ಜಟಿಲ ತಂತ್ರಜ್ಞಾನವಿದು.


ಅವರು ಕೃಷಿ ಮಾಡಿದ ಪ್ರಮುಖ ಸಂಶೋಧನಾ ಕ್ಷೇತ್ರಗಳು: 

  • Structural Dynamics

  • Aeroelasticity

  • Noise Control Engineering 

  • Mechanical Vibrations

  • Finite Element Analysis

  • Acoustics Engineering

  • Composite Structures

ಈ ಕ್ಷೇತ್ರಗಳಲ್ಲಿ ಅವರು ನಡೆಸಿದ ಮೂಲಭೂತ ಸಂಶೋಧನೆಗಳು ಮುಂದೆ ಜಾಗತಿಕ ಮಟ್ಟದ ವಿಮಾನೋದ್ಯಮ ಮತ್ತು ರಾಕೆಟ್ ತಂತ್ರಜ್ಞಾನದ ವಿನ್ಯಾಸಗಳಲ್ಲಿ ಪ್ರಮುಖ ಪಾತ್ರ ವಹಿಸಿದವು. ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾದ ಅವರ 300ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಉತ್ತರ ಅಮೆರಿಕಾದ ವೈಜ್ಞಾನಿಕ ವಲಯದಲ್ಲಿ ಅವರಿಗೆ ಮನ್ನಣೆ ತಂದುಕೊಟ್ಟವು.

ಇಸ್ರೋದಿಂದ ನಾಸಾದವರೆಗೆ...

ಡಾ. ರಾಮಭಟ್ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಆರಂಭಿಕ ರಾಕೆಟ್‌ ಉಡಾವಣಾ ತಾಣವಾದ ಥುಂಬಾ (Thumba) ರಾಕೆಟ್ ಕೇಂದ್ರದಲ್ಲಿ. ಅದು ಡಾ. ವಿಕ್ರಂ ಸಾರಾಭಾಯಿ ಅವರ ನೇತೃತ್ವದಲ್ಲಿ. ಭಾರತೀಯ ಅಂತರಿಕ್ಷ ಕನಸುಗಳು ಮೊಳಕೆಯೊಡೆಯುತ್ತಿದ್ದ ಕಾಲ. ಮೂಲಸೌಕರ್ಯಗಳ ಕೊರತೆಯಿದ್ದರೂ ಅಪಾರ ದೇಶಪ್ರೇಮ ಮತ್ತು ಜ್ಞಾನದ ಬಲದಿಂದ ಕೆಲಸ ಮಾಡುತ್ತಿದ್ದ ಯುವ ವಿಜ್ಞಾನಿಗಳ ತಂಡದಲ್ಲಿ ರಾಮಭಟ್ಟರು ಗುರುತಿಸಿಕೊಂಡರು.

ನಂತರದ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿ ಸಂಶೋಧನೆ ಮುಂದುವರಿಸಿದ ಇವರನ್ನು ಅಮೆರಿಕಾದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ NASA ತನ್ನ 'ಲಾಂಗ್ಲೆ ರಿಸರ್ಚ್ ಸೆಂಟರ್'ಗೆ ಆಹ್ವಾನಿಸಿತು. 1983ರಲ್ಲಿ ಇವರ ವೈಜ್ಞಾನಿಕ ಕೊಡುಗೆಯನ್ನು ಪರಿಗಣಿಸಿ ನಾಸಾ ವಿಶೇಷ ಗೌರವ ನೀಡಿ ಸನ್ಮಾನಿಸಿತು.

ಕಾನ್ಕಾರ್ಡಿಯಾ ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್!!

ಬಳಿಕ ಕೆನಡಾದ ಮಾಂಟ್ರಿಯಲ್‌ನಲ್ಲಿರುವ ಪ್ರಸಿದ್ಧ Concordia University ಸೇರಿದ ರಾಮಭಟ್ಟರು, ಅಲ್ಲಿ ಕೇವಲ ತರಗತಿ ಕೋಣೆಯ ಪ್ರಾಧ್ಯಾಪಕರಾಗಿ ಉಳಿಯಲಿಲ್ಲ. ತಮ್ಮ ಕೃತು ಶಕ್ತಿಯಿಂದ ಅದನ್ನು ಒಂದು ಶ್ರೇಷ್ಠ ಸಂಶೋಧನಾ ಕೇಂದ್ರವಾಗಿಸಿದರು. ಅಲ್ಲಿ ಸ್ವಸಾಮರ್ಥ್ಯದಿಂದ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡೀನ್ ಆಗಿ ಕೊನೆಗೆ ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್ (Pro-Vice-Chancellor) ಹುದ್ದೆಯ ಜವಾಬ್ದಾರಿಯನ್ನೂ ನಿಭಾಯಿಸಿದರು. ಅಷ್ಟೇ ಅಲ್ಲದೇ ಭಾರತ ಮತ್ತು ಕೆನಡಾ ದೇಶಗಳ ನಡುವಣ ಶೈಕ್ಷಣಿಕ ಹಾಗೂ ತಾಂತ್ರಿಕ ಸಂಪರ್ಕದ ಸೇತುವೆಯಾಗಿ ಕೆಲಸ ಮಾಡಿದರು.

ವಿಜ್ಞಾನಿಯೊಳಗಿನ ಸಾಹಿತ್ಯಕಾರ

ಡಾ. ರಾಮಭಟ್ ಅವರ ವ್ಯಕ್ತಿತ್ವದ ಅತ್ಯಂತ ಆಕರ್ಷಕ ಭಾಗವೆಂದರೆ ಅವರಲ್ಲಿದ್ದ ಸಾಹಿತ್ಯ ಮನಸ್ಸು. ವಿಜ್ಞಾನ ಅವರ ಮಿದುಳಿನ ಭಾಷೆಯಾಗಿದ್ದರೆ, ಕನ್ನಡ ಅವರ ಹೃದಯದ ಭಾಷೆಯಾಗಿತ್ತು.

  • “ನಗೆಗೆ ಇರಲಿ ಬಾಳಿಕೆ”: ಇವರ ಮೊದಲ ಕವನ ಸಂಕಲನ. ಇದರಲ್ಲಿ ಕರಾವಳಿಯ ಬಾಲ್ಯದ ನೆನಪುಗಳು ಮತ್ತು ವಿದೇಶಿ ಬದುಕಿನ ಅನುಭವಗಳು ಕಾವ್ಯಾತ್ಮಕವಾಗಿ ಮೂಡಿಬಂದಿವೆ.

  • “ನಾದ”: ಇದು ಕನ್ನಡ ವಿಜ್ಞಾನ ಸಾಹಿತ್ಯ ಲೋಕದಲ್ಲೇ ಒಂದು ಅಪರೂಪದ ಕೃತಿ. ಸಂಗೀತೋಪಕರಣಗಳಲ್ಲಿ ನಾದ ಹೇಗೆ ಹುಟ್ಟುತ್ತದೆ? ವಿವಿಧ ವಾದ್ಯಗಳ ವೈಜ್ಞಾನಿಕ ಸ್ವರೂಪವೇನು? ಎಂಬುದನ್ನು ಅಚ್ಚಗನ್ನಡದಲ್ಲಿ ವಿವರಿಸಿದ ಪ್ರಯತ್ನವಿದು.

  • 'ಬಾಳಿಕೆಯಿಂದ ಕೆನಡಾಕ್ಕೆ' ಎಂಬ ಪುಟ್ಟ ಆತ್ಮಕಥನ ಅವರ ಅನುಭವ, ನೆನಪುಗಳನ್ನು ವಿವರಿಸುತ್ತದೆ.

ಧ್ವನಿ ತರಂಗಗಳ ವೇಗ, ಆವೃತ್ತಿ ಮತ್ತು ತರಂಗದೂರದ ನಡುವಿನ ಸಂಬಂಧವನ್ನು ತಿಳಿಸುವ ಭೌತವಿಜ್ಞಾನದ ಮೂಲ ಸೂತ್ರ:         v = f × λ, ಹಾಗೆಯೇ, ಕಂಪನಗಳ ಅಧ್ಯಯನದಲ್ಲಿ ಅತ್ಯಂತ ಪ್ರಮುಖವಾದ ಸರಳ ಹಾರ್ಮೋನಿಕ್ ಚಲನೆಯನ್ನು (Simple Harmonic Motion) ಗುರುತಿಸುವ ಸಮೀಕರಣ: y = A sin(ωt). ಇಂತಹ ಸಂಕೀರ್ಣ ವೈಜ್ಞಾನಿಕ ಸಮೀಕರಣಗಳ ಹಿಂದಿನ ತತ್ವಗಳನ್ನು ಸಾಮಾನ್ಯ ಕನ್ನಡಿಗನಿಗೂ ಅರ್ಥವಾಗುವಂತೆ ಲಲಿತವಾದ ಶೈಲಿಯಲ್ಲಿ ಮುಂದಿನ ಪೀಳಿಗೆಗೆ ದಾಟಿಸಿದ ಕೀರ್ತಿ ಅವರದ್ದು.

ಆಂಜನೇಯನನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಕಾದಂಬರಿಕಾರ!!

 

ಡಾ. ರಾಮಭಟ್ ಬರೆದ “The Divine Anjaneya” ಕೃತಿಯು ಭಾರತೀಯ ಪುರಾಣದ ಆಂಜನೇಯನ ಪಾತ್ರವನ್ನು ಕೇವಲ ಭಕ್ತಿಯ ನೆಲೆಯಲ್ಲಲ್ಲದೆ, ಸಾಂಸ್ಕೃತಿಕ ಮತ್ತು ಸಾತ್ವಿಕ ದೃಷ್ಟಿಕೋನದಿಂದ ಜಾಗತಿಕ ಓದುಗರಿಗೆ ಪರಿಚಯಿಸಿತು.

ಅವರ ಮತ್ತೊಂದು - 783 ಪುಟಗಳ ಬೃಹತ್ ಸಂಶೋಧನಾತ್ಮಕ ಕಾದಂಬರಿ “Xuang Zhang's Mission to the West with Monkey King”. ಚೀನಾದ ಪೌರಾಣಿಕ ಪಾತ್ರವಾದ 'ಸುನ್ ವುಕೊಂಗ್' (Sun Wukong) ಮತ್ತು ಭಾರತದ 'ಆಂಜನೇಯ' ಪಾತ್ರಗಳ ನಡುವಿರುವ ಸಾಂಸ್ಕೃತಿಕ ಸಾಮ್ಯತೆಗಳನ್ನು ವಿಜ್ಞಾನಿಯೊಬ್ಬನ ವಿಶ್ಲೇಷಣಾತ್ಮಕ ಮನಸ್ಸಿನಿಂದ ಹಾಗೂ ಸಾಹಿತಿಯೊಬ್ಬನ ಕಲ್ಪನಾಶಕ್ತಿಯಿಂದ ಅವರು ಕಟ್ಟಿಕೊಟ್ಟ ರೀತಿ ಅದ್ಭುತ. ಒಬ್ಬ ವಿಜ್ಞಾನ ಶಿಕ್ಷಕನಾಗಿ ಇವು ನಮ್ಮಂತಹ ಶಿಕ್ಷಕರನ್ನು ಆಳವಾಗಿ ಪ್ರಚೋದಿಸುತ್ತವೆ. ಕಲ್ಪನೆ ವಿಜ್ಞಾನ ಸಂಶೋಧನೆಗಳಿಗೆ ಅತ್ಯಗತ್ಯ.

ಈ ಪುಸ್ತಕವು ಚೀನಾದ ಪ್ರಸಿದ್ಧ ಕಾವ್ಯವಾದ 'ಜರ್ನಿ ಟು ದಿ ವೆಸ್ಟ್' ನ ಆಂಗ್ಲ ರೂಪಾಂತರವಾಗಿದೆ. ಇದು 7ನೇ ಶತಮಾನದಲ್ಲಿ ಬೌದ್ಧ ಧರ್ಮದ ಪವಿತ್ರ ಗ್ರಂಥಗಳನ್ನು ತರಲು ಭಾರತಕ್ಕೆ ಬಂದ ಚೀನೀ ಸನ್ಯಾಸಿ 'ಶುವಾನ್ ಜಾಂಗ್' (Xuanzang) ಅವರ ಐತಿಹಾಸಿಕ ಮತ್ತು ಪೌರಾಣಿಕ ಯಾತ್ರೆಯನ್ನು ವಿವರಿಸುತ್ತದೆ. ಭಾರತದ ರಾಮಾಯಣ ಮತ್ತು ಮಹಾಭಾರತಗಳೊಂದಿಗೆ ಮುಖ್ಯವಾಗಿ ಹನುಮಂತನನ್ನು ಹೋಲುವ ಮಂಕಿ ಕಿಂಗ್ ಪಾತ್ರದೊಂದಿಗೆ ಹೋಲಿಕೆಗಳನ್ನು ಹೊಂದಿರುವುದು ಈ ಪುಸ್ತಕದ ವಿಶೇಷತೆಯಾಗಿದೆ.

ಕೆನಡಾದಲ್ಲಿ ಕನ್ನಡದ ದೂತ

ವಿದೇಶಕ್ಕೆ ಹೋದ ತಕ್ಷಣ ಮಾತೃಭಾಷೆಯನ್ನು ಮರೆಯುವವರ ನಡುವೆ ರಾಮಭಟ್ಟರ ಕುಟುಂಬ ಭಿನ್ನವಾಗಿ ನಿಲ್ಲುತ್ತದೆ. ಇವರ ಧರ್ಮಪತ್ನಿ ಪಾರ್ವತಿ ಅವರು ಸ್ವತಃ ಸಂಗೀತ ವಿದುಷಿ. ಈ ದಂಪತಿಗಳು ಕೆನಡಾದ ಕನ್ನಡ ಕೂಟಗಳಲ್ಲಿ ಮಕ್ಕಳಿಗಾಗಿ ಕನ್ನಡ ತರಗತಿಗಳು, ಹರಿಕಥೆ, ಯಕ್ಷಗಾನ ರೂಪಕಗಳು ಹಾಗೂ ದಾಸಸಾಹಿತ್ಯದ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುವ ಮೂಲಕ ಕೆನಡಾದಲ್ಲಿ ಒಂದು ಮಿನಿ ಕನ್ನಡ ನಾಡನ್ನೇ ಸೃಷ್ಟಿಸಿದ್ದರು.

ಇಂದಿನ ಜಗತ್ತು ಮಾತನಾಡುತ್ತಿರುವ STEM Education (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ) ಮತ್ತು Science Communication (ವಿಜ್ಞಾನ ಸಂವಹನ) ಎಂಬ ಪರಿಕಲ್ಪನೆಗಳನ್ನು ಡಾ. ರಾಮಭಟ್ ಅವರು ದಶಕಗಳ ಹಿಂದೆಯೇ ತಮ್ಮ ಬರವಣಿಗೆ ಹಾಗೂ ಬದುಕಿನ ಮೂಲಕ ಸಾಕಾರಗೊಳಿಸಿದ್ದರು. 

ಗ್ರಾಮೀಣ ಹಿನ್ನೆಲೆಯ ಹುಡುಗನೊಬ್ಬ ಜಾಗತಿಕ ಮಟ್ಟದ ವಿಜ್ಞಾನ ಸಂಸ್ಥೆಗಳಲ್ಲಿ ಮಿಂಚಿ, ನಾಸಾದ ಗೌರವ ಪಡೆದು, ವಿಶ್ವವಿದ್ಯಾಲಯದ ಸರ್ವೋಚ್ಚ ಹುದ್ದೆಯಲ್ಲಿದ್ದೂ ತನ್ನ ಭಾಷೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದಕ್ಕೆ ಡಾ. ರಾಮಭಟ್ ಅವರೇ ಪರಮ ಮಾದರಿ.

ವಿಜ್ಞಾನ ಮತ್ತು ಸಾಹಿತ್ಯ ಪರಸ್ಪರ ವಿರೋಧಿಗಳಲ್ಲ; ಅವು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಬದುಕಿ ತೋರಿಸಿದ ಈ ಪ್ರಾತಃಸ್ಮರಣೀಯ ಬೌದ್ಧಿಕ ಚೇತನಕ್ಕೆ ಭಾವಪೂರ್ಣ ನಮನಗಳು. ಅವರ ಸಾಹಿತ್ಯ ಮತ್ತು ಚಿಂತನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ.

Saturday, July 4, 2026

ಮಿತಿಯಿಲ್ಲದ ಏಣಿ ಏರಿದ ವಿಜ್ಞಾನಯೋಗಿ

ಮಿತಿಯಿಲ್ಲದ ಏಣಿ ಏರಿದ ವಿಜ್ಞಾನಯೋಗಿ

( ಭಾರತ ರತ್ನ ಪ್ರೊ. ಸಿ. ಎನ್. ಆರ್. ರಾವ್ ಅವರ ಬದುಕು ಮತ್ತು ವಿಜ್ಞಾನಯಾತ್ರೆ)

ಲೇಖನ :  ರಾಮಚಂದ್ರ ಭಟ್‌ ಬಿ.ಜಿ.


ಜೂನ್ 30 ನನ್ನ ಪಾಲಿಗೆ ವಿಶೇಷ ದಿನ. ಅದು ನಮ್ಮ ಪ್ರೀತಿಯ , ಇಂದಿಗೂ ಸಂಶೋಧನಾ ಪ್ರವೃತ್ತಿಯಲ್ಲಿ ಮುಂದುವರೆದ  ಕಾಯಕಯೋಗಿ ಭಾರತ ರತ್ನ ಪ್ರೊ. ಸಿ. ಎನ್. ಆರ್. ರಾವ್  ರವರ ಜನ್ಮ ದಿನ. ಹಲವು ವರ್ಷಗಳಿಂದ ಆ ದಿನದಂದು JNCASR ಗೆ ಭೇಟಿ ನೀಡಿ ವೈಜ್ಞಾನಿಕ ಸಂಶೋಧನೆಯ ಹೊಸ ಮಜಲನ್ನು ತಿಳಿದುಕೊಳ್ಳವ ಅವಕಾಶ. ಸಂಶೋಧಕ ಸ್ನೇಹಿತರಾದ ಡಾ. ವಿನಾಯಕ ಪತ್ತಾರರ ಪ್ರೀತಿಯ ಆಹ್ವಾನದ ಮೇರೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಪ್ರೊ. ರಾವ್‌ರವರನ್ನು ಭೇಟಿ ಮಾಡುವ ಅವಕಾಶ ಸವಿಜ್ಞಾನದ ಕೆಲವು ಸದಸ್ಯರಿಗೆ ದೊರೆಯಿತು. ಈ ಬಾರಿ ಸ್ನೇಹಿತ ನವೀನ್‌ ರವರಿಗೆ ನಾಗಾಲ್ಯಾಂಡ್‌ ನ ಜಾಂಬೆನಿ ಲೋಥಾ ಮತ್ತು ಉತ್ತರಾಖಂಡದ ಡಾ. ನರೇಂದ್ರ ಸಿಂಗ್‌ ರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ‌ ಪ್ರದಾನ ಕಾರ್ಯಕ್ರಮವಿತ್ತು. ೯೨ರ ಹರೆಯದ ಇಳಿವಯಸ್ಸಿನಲ್ಲೂ , ಅನಾರೋಗ್ಯದ ನಡುವೆಯೂ ಇನ್ನೂ ಸಂಶೋಧನೆಗೆ ತೊಡಗಿಕೊಳ್ಳುವ  ಅಮಿತೋತ್ಸಾಹ ಅನುಕರಣೀಯ. ಎದ್ದು ನಿಲ್ಲಲೂ ಆಗದ ಆ ಸ್ಥಿತಿಯಲ್ಲೂ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಸಹಾಯಕರ ಸಹಾಯದೊಂದಿಗೆ ಗಾಲಿಕುರ್ಚಿಯಿಂದ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದು  ಮರೆಯಲಾಗದ ಅನಿರ್ವಚನೀಯ ಭಾವದೊಂದಿಗೆ ಅವರೆಡೆಗೆ ಕುಂದಿಲ್ಲದ ಅಪಾರ ಗೌರವವನ್ನು ತಂದಿತು. ಅದೇ ಸಂದರ್ಭದಲ್ಲಿ ರಾಷ್ಟ್ರಪತಿಗಳಿಂದಲೇ ಹುಟ್ಟುಹಬ್ಬದ ಸಂದೇಶ ಬಂದಿದ್ದು ಸಮಾರಂಭಕ್ಕೆ ಕಳೆ ನೀಡಿತು.

ಪ್ರೊ .ರಾವ್‌ ರವರ ಅವರ ಹುಟ್ಟು ಹಬ್ಬದ ಹಿಂದಿನ ದಿನ ‌ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ಸಾಧನೆಯ ಉಲ್ಲೇಖ ಮಾಡಿದ್ದೆ. ಅಚ್ಚರಿ ಎನ್ನುವಂತೆ ಮೂವರು ಬಾಲಕಿಯರು ಮಾಹಿತಿ ಸಂಗ್ರಹಿಸಿ ಮರುದಿನವೇ ಪ್ರಬಂಧ ಲೇಖನ ಬರೆದುಕೊಂಡು ಬಂದು ನನ್ನನ್ನು ಹುಡುಕಿ ನಿರಾಶರಾದರು. ಮರುದಿನ ಬರುತ್ತಿದ್ದಂತೆ ನನ್ನಲ್ಲಿ ತಮ್ಮ  ಲೇಖನದ ಬಗ್ಗೆ ತಿಳಿಸಿದರು. ತರಗತಿಯಲ್ಲಿ ಈ ಪ್ರಬಂಧ-ಲೇಖನ ಓದಿಸಬೇಕಾದರೆ ಆಕಸ್ಮಿಕವಾಗಿ ಶಾಲೆಗೆ ಭೇಟಿ ನೀಡಿದ ಉಪನಿರ್ದೇಶಕರಾದ ಶ್ರೀಯುತ ಜಯಪ್ರಕಾಶ್‌ ಸರ್‌  ಮೆಚ್ಚುಗೆಯೊಂದಿಗೆ ಈ  ವಿದ್ಯಾರ್ಥಿಗಳನ್ನು‌ ಪ್ರೋತ್ಸಾಹಿಸಿದರು.  

ಒಮ್ಮೆ   ಸಿ ಎನ್‌ ಆರ್‌ ರಾವ್‌ ರವರನ್ನು ವಿದ್ಯಾರ್ಥಿಗಳು ಕೇಳಿದರಂತೆ,  "ಸರ್, ದೊಡ್ಡ ವಿಜ್ಞಾನಿಯಾಗಬೇಕಾದರೆ ಏನು ಮಾಡಬೇಕು?" ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಪ್ರೊ. ಸಿ. ಎನ್. ಆರ್. ರಾವ್ ನಗುತ್ತಾ ಉತ್ತರಿಸಿದರು: "ಮೊದಲು ಮೊಬೈಲ್ ಚಾರ್ಜರ್ ಹುಡುಕುವುದಕ್ಕಿಂತ ಪುಸ್ತಕ ಹುಡುಕಿ ನಿನ್ನ ಬುದ್ಧಿಯನ್ನು ಚಾರ್ಜ್ ಮಾಡು!"  ಈ ಒಂದು ವಾಕ್ಯ ಅವರ ಜೀವನತತ್ವವನ್ನು ತೆರೆದಿಡುತ್ತದೆ. ವಿಜ್ಞಾನಿ ಎಂದರೆ ಕೇವಲ ಪ್ರಯೋಗಾಲಯದಲ್ಲಿ ಬಿಳಿ ಕೋಟ್ ಧರಿಸಿದ ವ್ಯಕ್ತಿಯಲ್ಲ. ಹೊಸ ಪ್ರಶ್ನೆಗಳನ್ನು ಕೇಳುವವನು, ಉತ್ತರ ಹುಡುಕುವವನು ಮತ್ತು ವಿಫಲತೆಯನ್ನೇ ಮುಂದಿನ ಸಂಶೋಧನೆಯ ಮೆಟ್ಟಿಲಾಗಿಸಿಕೊಳ್ಳುವವನು.

ಪ್ರೊ. ಸಿ. ಎನ್. ಆರ್. ರಾವ್ ಅವರ ಆತ್ಮಕಥೆ- "Climbing the Limitless Ladder: A Life in Chemistry"   ಮಿತಿಯಿಲ್ಲದ  ವಿಜ್ಞಾನದ ಏಣಿ ಏರಿ, ನಿಜಕ್ಕೂ ಜ್ಞಾನಕ್ಕೆ ಕೊನೆಯ ಮೆಟ್ಟಿಲೇ ಇಲ್ಲ ಎಂಬುದನ್ನು ಅವರ ಜೀವನವೇ ಸಾಬೀತುಪಡಿಸಿದೆ. ಇಂತಹ ವಿಜ್ಞಾನಿಯ ಜೊತೆ ನಮಗೆ ಒಡನಾಟ ದೊರೆತದ್ದು ದೊಡ್ಡ ಸುಕೃತವೇ ಸರಿ. 

ಕುತೂಹಲದಿಂದ ಆರಂಭವಾದ ವಿಜ್ಞಾನಯಾತ್ರೆ

1934ರ ಜೂನ್ 30ರಂದು ಬೆಂಗಳೂರಿನಲ್ಲಿ ಜನಿಸಿದ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಅವರ ಮೊದಲ ಗುರು ಅವರ ತಾಯಿ ನಾಗಮ್ಮ. ಶಾಲೆಗೆ ಹೋಗುವ ಮೊದಲು ಕಥೆಗಳ ಮೂಲಕ ವಿಜ್ಞಾನದ ಕುತೂಹಲವನ್ನು ಬೆಳೆಸಿದವರು ಅವರು. ಬಾಲ್ಯದಲ್ಲಿ ಆಟಿಕೆಗಳಿಗಿಂತ ರಾಸಾಯನಿಕ ಬಾಟಲಿಗಳೇ ಅವರಿಗೆ ಹೆಚ್ಚು ಆಕರ್ಷಣೆ. ಮನೆಯಲ್ಲಿಯೇ ಪುಟ್ಟ ರಸಾಯನಶಾಸ್ತ್ರ ಪ್ರಯೋಗಾಲಯ ನಿರ್ಮಿಸಿಕೊಂಡು ಸಣ್ಣಪುಟ್ಟ ಪ್ರಯೋಗಗಳನ್ನು ಮಾಡುತ್ತಿದ್ದರು. ಸಿಗದ ರಾಸಾಯನಿಕಗಳನ್ನು ತಾವೇ ತಯಾರಿಸಲು ಯತ್ನಿಸುತ್ತಿದ್ದರು. ಅವರ ಕುತೂಹಲವನ್ನು ನೋಡಿ ಮನೆಯವರು ಗಾಬರಿಯಾಗುತ್ತಿದ್ದರಂತೆ. ಆದರೆ ಆ ಪುಟ್ಟ ಪ್ರಯೋಗಗಳೇ ಮುಂದೆ ಜಗತ್ತಿನ ಶ್ರೇಷ್ಠ ಪ್ರಯೋಗಾಲಯಗಳಿಗೆ ಅವರನ್ನು ಕೊಂಡೊಯ್ದವು.

ವೇಗದ ವಿದ್ಯಾಭ್ಯಾಸ, ಇನ್ನೂ ವೇಗದ ಸಾಧನೆ

ಕೇವಲ 17ನೇ ವಯಸ್ಸಿನಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್‌ಸಿ. ಪದವಿ. 19ನೇ ವಯಸ್ಸಿನಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎಸ್‌ಸಿ. 24ನೇ ವಯಸ್ಸಿನಲ್ಲಿ ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ. ನಂತರ ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಅತ್ಯಂತ ಕಿರಿಯ ಉಪನ್ಯಾಸಕರಾಗಿ ಸೇರಿದರು. ವಯಸ್ಸಿನಲ್ಲಿ ಯುವಕರಾಗಿದ್ದರೂ ಜ್ಞಾನದಲ್ಲಿ ಹಿರಿಯರಿಗೆ ಸವಾಲಾಗಿದ್ದರು.

ರಸಾಯನಶಾಸ್ತ್ರಕ್ಕೆ ಹೊಸ ದಿಕ್ಕು ತೋರಿದ ವಿಜ್ಞಾನಿ

ಪ್ರೊ. ರಾವ್ ಅವರನ್ನು ವಿಶ್ವದ ಶ್ರೇಷ್ಠ Solid State Chemistry ಮತ್ತು Materials Chemistry ವಿಜ್ಞಾನಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅವರು ಮುಖ್ಯವಾಗಿ ಟ್ರಾನ್ಸಿಷನ್ ಮೆಟಲ್ ಆಕ್ಸೈಡ್‌ಗಳು ಎಂಬ ವಸ್ತುಗಳ ರಚನೆ, ಗುಣಲಕ್ಷಣ ಮತ್ತು ವರ್ತನೆಯನ್ನು ಅಧ್ಯಯನ ಮಾಡಿದರು. ಒಂದು ವಸ್ತು ಯಾವಾಗ ವಿದ್ಯುತ್ ವಾಹಕವಾಗುತ್ತದೆ?ಯಾವಾಗ ವಿದ್ಯುತ್ ಹರಿಯುವುದನ್ನು ನಿಲ್ಲಿಸುತ್ತದೆ?ಉಷ್ಣತೆ ಬದಲಾದಾಗ ಅದರ ಗುಣಗಳು ಏಕೆ ಬದಲಾಗುತ್ತವೆ?

ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಿದ ಅವರ ಸಂಶೋಧನೆ ಇಂದಿನ ಎಲೆಕ್ಟ್ರಾನಿಕ್ಸ್, ಸಂವೇದಕಗಳು ಮತ್ತು ಹೊಸ ತಲೆಮಾರಿನ ವಸ್ತುಗಳ ಅಭಿವೃದ್ಧಿಗೆ ಬುನಾದಿಯಾಯಿತು. Metal–Insulator Transition, Phase Transition ಹಾಗೂ Defect Chemistry ಕ್ಷೇತ್ರಗಳಲ್ಲಿ ಅವರ ಸಂಶೋಧನೆ ಜಗತ್ತಿನ ವಿಜ್ಞಾನಿಗಳಿಗೆ ಹೊಸ ದಾರಿಯನ್ನು ತೋರಿಸಿತು.

ನ್ಯಾನೋ ಜಗತ್ತಿನ ದಾರಿದೀಪ

ಒಂದು ಕೂದಲಿನ ದಪ್ಪವನ್ನು ಸುಮಾರು ಒಂದು ಲಕ್ಷ ಭಾಗಗಳಾಗಿ ಕತ್ತರಿಸಿದರೆ ಸಿಗುವ ಗಾತ್ರವೇ ನ್ಯಾನೋಮೀಟರ್! ಅಂತಹ ಸೂಕ್ಷ್ಮ ಜಗತ್ತಿನಲ್ಲಿ ಹೊಸ ವಸ್ತುಗಳನ್ನು ನಿರ್ಮಿಸುವ ಕ್ಷೇತ್ರವೇ ನ್ಯಾನೋಟೆಕ್ನಾಲಜಿ. ಭಾರತದಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದ ಪ್ರಮುಖ ವಿಜ್ಞಾನಿಗಳಲ್ಲಿ ಪ್ರೊ. ರಾವ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಆದ್ದರಿಂದಲೇ ಅವರನ್ನು ಭಾರತೀಯ ನ್ಯಾನೋಟೆಕ್ನಾಲಜಿಯ ಪಿತಾಮಹ ಎಂದು ಕರೆಯುತ್ತಾರೆ. ಕಾರ್ಬನ್ ನ್ಯಾನೋಟ್ಯೂಬ್‌ಗಳು, ನ್ಯಾನೋಪಾರ್ಟಿಕಲ್‌ಗಳು, ಗ್ರಾಫೀನ್, MoS₂, WS₂ ಮೊದಲಾದ ಎರಡು ಆಯಾಮದ ವಸ್ತುಗಳ ಕುರಿತು ಅವರ ಸಂಶೋಧನೆ ವಿಶ್ವದ ಗಮನ ಸೆಳೆಯಿತು. ಇವು ಇಂದು - ವೇಗವಾದ ಕಂಪ್ಯೂಟರ್‌ಗಳು, ಉತ್ತಮ ಬ್ಯಾಟರಿಗಳು, ಸೌರಶಕ್ತಿ ಸಾಧನಗಳು, ಹೈಡ್ರೋಜನ್ ಉತ್ಪಾದನೆ, ಶಕ್ತಿಸಂಗ್ರಹ ವ್ಯವಸ್ಥೆಗಳು,  ಪರಿಸರ ಸ್ನೇಹಿ ತಂತ್ರಜ್ಞಾನ - ಇವುಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿವೆ. ಪ್ರಯೋಗಾಲಯದಲ್ಲಿ ಆರಂಭವಾದ ಸಂಶೋಧನೆ ಮಾನವ ಜೀವನವನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.

ವಿಫಲತೆ ಅವರ ಪಾಲಿಗೆ ಶತ್ರುವಲ್ಲ

ಒಮ್ಮೆ ವಿದ್ಯಾರ್ಥಿಯೊಬ್ಬನ ಪ್ರಯೋಗ ವಿಫಲವಾಯಿತು. ಅವನು ನಿರಾಶೆಯಿಂದ,  "ಸರ್... ನಮ್ಮ ಪ್ರಯೋಗ ಹಾಳಾಯಿತು." ಎಂದ. ರಾವ್ ಅವರು ನಗುತ್ತಾ, "ಹಾಗಂದುಕೊಳ್ಳಬೇಡ. ಇಂದು ನಾವು ಹೊಸ ವಿಷಯ ಕಲಿತಿವು. ಈ ವಿಧಾನದಲ್ಲಿ ಕೆಲಸ ಆಗುವುದಿಲ್ಲ ಎಂದು ಕಂಡುಹಿಡಿದಿದ್ದೇವೆ!" ಎಂದರು. ಇದೇ ವಿಜ್ಞಾನಿಯ ಮನಸ್ಥಿತಿ. ವಿಫಲತೆ ಎಂದರೆ ಅಂತ್ಯವಲ್ಲ. ಅದು ಹೊಸ ಪ್ರಯೋಗದ ಆರಂಭ. ಇದು ಎಡಿಸನ್‌ನ ಮನಃಸ್ಥಿತಿ . ಸಂಶೋಧಕರೆಲ್ಲರೂ ಪಾಲಿಸಲೇ ಬೇಕಾದ ಗುಣ. 

ಸಂಶೋಧನೆಯಲ್ಲೇ ವಿಶ್ವದಾಖಲೆ

ಅವರ ಸಾಧನೆಗಳನ್ನು ಅಂಕೆಗಳಲ್ಲಿ ಹೇಳುವುದಾದರೆ ಅವುಗಳೇ ಆಶ್ಚರ್ಯ ಮೂಡಿಸುತ್ತವೆ.

  • 1800ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು, 60ಕ್ಕೂ ಹೆಚ್ಚು ಪುಸ್ತಕಗಳು , 200ಕ್ಕೂ ಹೆಚ್ಚು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ , ವಿವಿಧ ದೇಶಗಳ ೮೮ ಗೌರವ ಡಾಕ್ಟರೇಟ್‌ ಗಳು , ಏಳು ದಶಕಗಳಿಗೂ ಹೆಚ್ಚು ಕಾಲ ಇಂದೂ ಮುಂದುವರೆದಿರುವ ನಿರಂತರ ಸಂಶೋಧನೆ!!!!.  ಇಷ್ಟೊಂದು ಲೇಖನಗಳನ್ನು ಬರೆಯಲು ಕೆಲವರಿಗೆ ಮೂರು ಜನ್ಮವಾದರೂ  ಎತ್ತಬೇಕು ಎಂದು ಅವರ ಸಹೋದ್ಯೋಗಿಗಳು ತಮಾಷೆಯಾಗಿ ಹೇಳುತ್ತಾರೆ!


ವಿದೇಶಕ್ಕಲ್ಲ, ಭಾರತಕ್ಕೇ ಆದ್ಯತೆ

ವಿಶ್ವದ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅವರನ್ನು ಆಹ್ವಾನಿಸಿದ್ದವು. ಆದರೆ ಅವರು ಭಾರತವನ್ನೇ ಆರಿಸಿದರು. ಅವರ ನಂಬಿಕೆ ಸರಳವಾಗಿತ್ತು. "ಒಬ್ಬ ವಿಜ್ಞಾನಿಯನ್ನು ರೂಪಿಸುವುದಕ್ಕಿಂತ ನೂರು ವಿಜ್ಞಾನಿಗಳನ್ನು ರೂಪಿಸುವುದು ದೇಶಸೇವೆ." ಅದಕ್ಕಾಗಿಯೇ ಅವರು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (JNCASR) ಸಂಸ್ಥೆಗಳನ್ನು ಬಲಪಡಿಸಿ ಸಾವಿರಾರು ಯುವ ವಿಜ್ಞಾನಿಗಳಿಗೆ ಪ್ರೇರಣೆಯಾದರು. 

ಸರಳತೆಯಲ್ಲೇ ಮಹತ್ವ

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದರೂ ಬದುಕು ಮಾತ್ರ ಅತ್ಯಂತ ಸರಳ. ಇಂದಿಗೂ ಮೊಬೈಲ್‌ಗಿಂತ ಪುಸ್ತಕಗಳೇ ಅವರಿಗೆ ಹೆಚ್ಚು ಇಷ್ಟ. ಇಮೇಲ್‌ಗಳನ್ನು ಸಹ ಬಹಳಷ್ಟು ಸಂದರ್ಭಗಳಲ್ಲಿ ಸ್ವತಃ ನೋಡಿಕೊಳ್ಳುವುದಿಲ್ಲ. ಪತ್ನಿ ಇಂದುಮತಿ ಅವರೊಂದಿಗೆ ಸೇರಿ ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನಾಸಕ್ತಿಯನ್ನು ಬೆಳೆಸಲು ವಿಜ್ಞಾನ ಶಿಬಿರಗಳನ್ನು ನಡೆಸುತ್ತಲೇ ಇದ್ದಾರೆ. ಜ್ಞಾನ ಹೆಚ್ಚಾದಂತೆ ಅಹಂಕಾರ ಹೆಚ್ಚಬಾರದು ಎಂಬುದನ್ನು ಅವರ ಜೀವನವೇ ಕಲಿಸುತ್ತದೆ.

ಗೌರವಗಳ ಮಹಾಪರ್ವ

ಪ್ರೊ. ರಾವ್ ಅವರಿಗೆ ಲಭಿಸಿರುವ ಗೌರವಗಳು ಅವರ ಪ್ರತಿಭೆಗೆ ಸಾಕ್ಷಿ. ನಮ್ಮ ದೇಶದ ಅತ್ಯುನ್ನತ ಮೇರು ಗೌರವಗಳಾದ ಭಾರತ ರತ್ನ, ಪದ್ಮ ವಿಭೂಷಣ, ಪದ್ಮಶ್ರೀ ಗಳಲ್ಲದೇ ರಾಯಲ್ ಸೊಸೈಟಿಯ Royal Medal , Hughes Medal, Von Hippel Award , Dan David Prize, ENI Award . ಇವುಗಳಲ್ಲಿ ಎನಿ ಪ್ರಶಸ್ತಿಯು ಶಕ್ತಿಯ ಕ್ಷೇತ್ರದ ನೋಬಲ್‌ ಎಂದೇ ಪರಿಗಣಿತವಾಗಿದೆ. ಇವುಗಳಲ್ಲಿ ಪ್ರತಿಯೊಂದೂ ವಿಶ್ವ ವಿಜ್ಞಾನ ಲೋಕದ ಅತ್ಯುನ್ನತ ಗೌರವಗಳು . 

ಇಂದು ನಾವು ಉತ್ತರಗಳನ್ನು ಗೂಗಲ್‌ನಲ್ಲಿ ಹುಡುಕುತ್ತೇವೆ. ಆದರೆ ವಿಜ್ಞಾನಿಗಳು ಉತ್ತರಗಳನ್ನು ಮಾತ್ರ ಹುಡುಕುವುದಿಲ್ಲ. ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾರೆ. ಅಂಕಗಳು ಪರೀಕ್ಷೆಯಲ್ಲಿ ಸಹಾಯ ಮಾಡಬಹುದು. ಆದರೆ ಕುತೂಹಲ ಜೀವನಪೂರ್ತಿ ನಿಮ್ಮನ್ನು ಮುಂದೆ ಕರೆದೊಯ್ಯುತ್ತದೆ. ಪ್ರತಿದಿನ ಒಂದು ಹೊಸ ಪ್ರಶ್ನೆ ಕೇಳಿ. ಒಂದು ಹೊಸ ವಿಷಯ ಓದಿ. ಒಂದು ಸಣ್ಣ ಪ್ರಯೋಗ ಮಾಡಿ. ವಿಫಲವಾದರೆ ಮತ್ತೆ ಪ್ರಯತ್ನಿಸಿ. ಇದು ಯುವ ಜನತೆಗೆ ರಾವ್‌ರವರ ಕಿವಿಮಾತು.  

"ಮಿತಿಯಿಲ್ಲದ ಏಣಿ" ಕೇವಲ ಪ್ರೊ. ಸಿ. ಎನ್. ಆರ್. ರಾವ್ ಅವರ ಆತ್ಮಕಥೆಯ ಹೆಸರಲ್ಲ. ಅದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಗುರಿಯಾಗಬೇಕು. ಆ ಏಣಿಯ ಮೊದಲ ಮೆಟ್ಟಲೇ ಕುತೂಹಲ. ಎರಡನೆಯದು ಪರಿಶ್ರಮ. ಮೂರನೆಯದು ಶಿಸ್ತು. ನಾಲ್ಕನೆಯದು ವಿನಯ. ಐದನೆಯದು ನಿರಂತರ ಕಲಿಕೆ. ಈ ಐದು ಮೆಟ್ಟಿಲುಗಳನ್ನು ಏರಲು ಆರಂಭಿಸಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. 



ತಮ್ಮ ಹುಟ್ಟು ಹಬ್ಬದಂದು ತಮ್ಮ ಟ್ರಸ್ಟ್‌ ಮೂಲಕ JNCASRನಲ್ಲಿ , ವಿಜ್ಞಾನದ ಸೊಡರಿನ ದೀಪ್ತಿಯಡಿ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಕುತೂಹಲದ ಕಿಡಿ ಹಚ್ಚಿ, ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಸಕ್ತಿ ಹುಟ್ಟುವಂತೆ ಮಾಡುವ ದೇಶದ ಶಿಕ್ಷಕರನ್ನು ಗೌರವಿಸುವ ಅನನ್ಯ ಹಾಗೂ ಅಪರೂಪದ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. 

ಜ್ಞಾನವನ್ನು ಪ್ರೀತಿಸಿ. ಪ್ರಶ್ನೆಗಳನ್ನು ಸ್ವಾಗತಿಸಿ. ಪ್ರಯೋಗಗಳಿಗೆ ಹಿಂದೇಟು ಹಾಕದಿರಿ , ವಿಫಲತೆಗೆ ಹೆದರಬೇಡಿ. ನಿಮ್ಮ ಬದುಕೂ ಒಂದು ದಿನ ಮತ್ತೊಬ್ಬರಿಗೆ ಸ್ಫೂರ್ತಿಯಾಗುವಂತೆ ನಿಮ್ಮ ವಿಜ್ಞಾನ ಯಾತ್ರೆ ಸಾಗಲಿ. 

ಇಂತಹ ಶತಮಾನದ ಮೇರು ವಿಜ್ಞಾನಿಗೆ ೯೨ನೇ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ,  ಸವಿಜ್ಞಾನ ಬಳಗದ ಅಭಿಮಾನಪೂರ್ವಕ ವಂದನೆಗಳು. 

ಸೊಳ್ಳೆಗಳ ವಿರುದ್ಧದ ಯುದ್ಧಕ್ಕಾಗಿ ಗೂಗಲ್ ಸೃಷ್ಟಿಸಿದೆ ಸೊಳ್ಳೆಸೈನ್ಯ !!!

ಸೊಳ್ಳೆಗಳ ವಿರುದ್ಧದ ಯುದ್ಧಕ್ಕಾಗಿ ಗೂಗಲ್ ಸೃಷ್ಟಿಸಿದೆ ಸೊಳ್ಳೆಸೈನ್ಯ !!!  

ಲೇಖಕರು - ಬಿ.ಜಿ.ರಾಮಚಂದ್ರ ಭಟ್ 

(ಕೋಟ್ಯಂತರ ಸೊಳ್ಳೆಗಳನ್ನು ಸಾಕಿ ಮತ್ತೆ ಬಿಡುತ್ತಿರುವ ಟೆಕ್ ದೈತ್ಯದ ವಿಚಿತ್ರ ಪ್ರಯೋಗ)




"ಸೊಳ್ಳೆ ಕಾಟದಿಂದ ರೋಸಿ ಹೋಗದ ಜನರಿದ್ದಾರೆಯೇ? ಐಸ್‌ಲ್ಯಾಂಡ್‌ ಅಥವಾ ಅಂಟಾರ್ಟಿಕಾದಂತಹ ಪ್ರದೇಶಗಳಲ್ಲಿ ವಿರಳ ಜನವಸತಿ ಪ್ರದೇಶಗಳಲ್ಲಿ ಸೊಳ್ಳೆಗಳಿಲ್ಲ. ಅಲ್ಲಿಗೆ ಹೋಗಿ ಬದುಕುವುದು ಹೇಗೆ? ಸೊಳ್ಳೆಗಳಿಗೆ ಏನಾದರೂ ಪರಿಹಾರ ಕಂಡುಹಿಡಿಯಿರಿ" ಎಂದು ಯಾರಾದರೂ ವಿಜ್ಞಾನಿಗಳಿಗೆ ಸವಾಲು ಹಾಕಿದರೆ, ಸಾಮಾನ್ಯವಾಗಿ ಅವರು ಸೊಳ್ಳೆನಾಶಕ, ಔಷಧಿ ಅಥವಾ ಲಸಿಕೆಯ ಬಗ್ಗೆ ಯೋಚಿಸುತ್ತಾರೆ. ಅಲ್ಲವೇ? ಅವನ್ನೇ ಉಪಯೋಗಿಸಿಕೊಂಡು ಇದುವರೆಗೂ ಜೀವ ಹಿಡಿದುಕೊಂಡಿದ್ದೇವೆ ಅಂತೀರಾ? ಅದೂ ಸತ್ಯವೇ !! ಆದರೆ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಗೂಗಲ್‌ನ ಸಹೋದರ ಸಂಸ್ಥೆ ವೆರಿಲಿ (Verily) ಬೇರೆಯದೇ ದಾರಿ ಹಿಡಿದಿದೆ. ಅವರ ಪರಿಹಾರ ಏನು ಗೊತ್ತೇ?
"ಇನ್ನಷ್ಟು ಸೊಳ್ಳೆಗಳನ್ನು ಉತ್ಪಾದಿಸಿ!" 
ಇನ್ನೂ ಈ ಕಣ್ಣಲ್ಲೀ ಏನೇನು ನೋಡಬೇಕೋ ? ಕಿವಿಯಲ್ಲಿ ಏನೇನು ಕೇಳಬೇಕೋ  ಎಂದು ಕೊಳ್ಳಬೇಡಿ. ನಿಮಗೆ ತಮಾಷೆ ಎನಿಸಿತೇ? ಇದೇನು ಗೂಗಲ್ ನವರಿಗೆ ಹುಚ್ಚೇ ? ಬೆಪ್ಪೇ ?  ಮೊದಲಿಗೆ ಕೇಳಿದಾಗ ಇದು ಹಾಸ್ಯಾಸ್ಪದ ಮಾತಿನಂತೆ ತೋರುತ್ತದೆ. ಮನೆಯಲ್ಲಿ ಇಲಿಗಳ ಕಾಟವಿದ್ದರೆ ಇನ್ನಷ್ಟು ಇಲಿಗಳನ್ನು ಬಿಡುವಂತೆ, ಕಳೆಗಿಡಗಳ ಸಮಸ್ಯೆಗೆ ಮತ್ತಷ್ಟು ಕಳೆಗಿಡ ಬಿತ್ತುವಂತೆ ಹೇಳಿದರೆ ಹೇಗೆ? ಆದರೆ ವಿಜ್ಞಾನದ ಲೋಕದಲ್ಲಿ ಕೆಲವೊಮ್ಮೆ ವಿಚಿತ್ರವಾಗಿ ಕಾಣುವ ಯೋಚನೆಗಳೇ ಅತ್ಯಂತ ಪರಿಣಾಮಕಾರಿ ಪರಿಹಾರಗಳಾಗಿ ಪರಿಣಮಿಸುತ್ತವೆ!!. ಹೊಸದನ್ನು ಸಂಶೋಧಿಸಬೇಕೆಂದರೆ, ನಿಮಗೆ out of box thinking ದೃಷ್ಟಿಕೋನವಿರಬೇಕು!!!
ಭೂಮಿಯ ಅತಿ ಅಪಾಯಕಾರಿ ಪ್ರಾಣಿ ಯಾವುದು ಎಂದು ನಿಮ್ಮನ್ನು ಕೇಳಿದರೆ ಬಹುಶಃ ನಿಮ್ಮ ಉತ್ತರ ಸಿಂಹ, ಹುಲಿ, ಚಿರತೆ, ಮೊಸಳೆ, ಹಾವು... ಇರಬಹುದಲ್ವಾ? ಇವುಗಳನ್ನು ನಾವು ಅಪಾಯಕಾರಿ ಪ್ರಾಣಿಗಳೆಂದು ಭಾವಿಸುತ್ತೇವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತವೆ. ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ನೇರ ಅಥವಾ ಪರೋಕ್ಷ ಕಾರಣವಾಗುತ್ತಿರುವುದು ಸೊಳ್ಳೆಗಳು. ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ, ಜಿಕಾ ವೈರಸ್, ಎಬೋಲ ಮತ್ತು ಯೆಲ್ಲೋ ಫೀವರ್‌ನಂತಹ ಕಾಯಿಲೆಗಳು ಲಕ್ಷಾಂತರ ಕುಟುಂಬಗಳ ಬದುಕನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಿವೆ. ಈ ಕಾಯಿಲೆಗಳನ್ನು ಹರಡುವ ಪ್ರಮುಖ ಸೊಳ್ಳೆಗಳಲ್ಲಿ ಒಂದಾಗಿದೆ Aedes aegypti ಎಂಬ ಜಾತಿ. ಇದು ಸಾಮಾನ್ಯ ಸೊಳ್ಳೆಯಲ್ಲ. ರೋಗಾಣುಗಳಿಗಾಗಿ ಕಾರ್ಯನಿರ್ವಹಿಸುವ ಒಂದು ಜೀವಂತ ವಿಮಾನ ಸೇವೆಯೇ ಸರಿ!
ನಮ್ಮನ್ನು ಕಚ್ಚುವವರು ಯಾರು? ಸೊಳ್ಳೆ ಅಲ್ವಾ ? ಇದೆಂತಹ ಪ್ರಶ್ನೆ ? ಗಂಡೋ ಹೆಣ್ಣೋ? ಏನು ಅವುಗಳಲ್ಲೂ ಲಿಂಗಬೇಧವಿದೆಯೆ? ಅದನ್ನು ಗುರುತಿಸುವುದು ಹೇಗೆ ? ಓಹ್‌ ಎಷ್ಟೊಂದು ಪ್ರಶ್ನೆಗಳು. ಇಲ್ಲಿ ಒಂದು ಕುತೂಹಲಕಾರಿ ಸಂಗತಿಯಿದೆ. ನಮ್ಮನ್ನು ಕಚ್ಚಿ ರಕ್ತ ಹೀರುವ ಕೆಲಸವನ್ನು ಕೇವಲ ಹೆಣ್ಣು ಸೊಳ್ಳೆಗಳು ಮಾತ್ರ ಮಾಡುತ್ತವೆ. ಗಂಡು ಸೊಳ್ಳೆಗಳು ಮನುಷ್ಯರ ಬಳಿ ಸುಳಿಯುವುದೇ ಇಲ್ಲ. ಅವುಗಳ ಆಹಾರ ಹೂವಿನ ಮಕರಂದ ಮತ್ತು ಸಸ್ಯರಸ. 
ಓಹ್‌!! ಹಾಗಾದರೆ ಹೆಣ್ಣು ಸೊಳ್ಳೆಗಳಿಗೆ ಮಾತ್ರ ರಕ್ತ ಏಕೆ ಬೇಕು? ಮಕ್ಕಳ ಮುಗ್ದ ಪ್ರಶ್ನೆ . ನಮ್ಮ ರಕ್ತ ಅವುಗಳಿಗೆ ಸಮೃದ್ಧ ಆಹಾರ!!! ಮೊಟ್ಟೆಗಳ ಬೆಳವಣಿಗೆಗೆ ಅಗತ್ಯವಾದ ಕೆಲವು ಪ್ರೋಟೀನ್ ಮತ್ತು ಪೋಷಕಾಂಶಗಳು ಈ ರಕ್ತದಿಂದ ದೊರೆಯುತ್ತವೆ. ಆದ್ದರಿಂದ ಅವು ರಕ್ತವನ್ನು ಹೀರುತ್ತವೆ. ಅಂದರೆ ಸೊಳ್ಳೆಗಳ ಜಗತ್ತಿನಲ್ಲಿ "ವ್ಯಾಂಪೈರ್" ಪಾತ್ರವನ್ನು ನಿರ್ವಹಿಸುವುದು ಹೆಣ್ಣು ಸೊಳ್ಳೆಗಳೇ! 
ಗೂಗಲ್‌ನ ಸೊಳ್ಳೆ ಕಾರ್ಖಾನೆ : 2017ರಲ್ಲಿ ವೆರಿಲಿ ಸಂಸ್ಥೆ "ಪ್ರಾಜೆಕ್ಟ್ ಡಿಬಗ್" ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ಲಕ್ಷಾಂತರವಲ್ಲ, ಕೋಟ್ಯಂತರ ಗಂಡು ಸೊಳ್ಳೆಗಳನ್ನು ಬೆಳೆಸಲಾಯಿತು. ಆದರೆ ಅವು ಸಾಮಾನ್ಯ ಗಂಡು ಸೊಳ್ಳೆಗಳಲ್ಲ. ಅವುಗಳ ದೇಹದಲ್ಲಿ Wolbachia pipientis ಎಂಬ ಬ್ಯಾಕ್ಟೀರಿಯಾವನ್ನು ಸೇರಿಸಲಾಗಿತ್ತು. 

ವೋಲ್ಬಾಕಿಯಾ ಎಂಬ ಸೂಕ್ಷ್ಮ ಅಸ್ತ್ರ : ವೋಲ್ಬಾಕಿಯಾ ಎಂಬುದು ಹೊಸದಾಗಿ ಸೃಷ್ಟಿಸಿದ ಬ್ಯಾಕ್ಟೀರಿಯಾವಲ್ಲ. ಪ್ರಕೃತಿಯಲ್ಲಿಯೇ ಇದು ಕೋಟ್ಯಂತರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಜಗತ್ತಿನ ಸುಮಾರು ಅರ್ಧಕ್ಕಿಂತ ಹೆಚ್ಚು ಕೀಟಗಳಲ್ಲಿ ಇದು ಕಂಡುಬರುತ್ತದೆ. ಜೇನುನೊಣಗಳು, ಚಿಟ್ಟೆಗಳು, ನೊಣಗಳು ಸೇರಿದಂತೆ ಅನೇಕ ಕೀಟಗಳ ದೇಹದಲ್ಲಿ ಇದು ಸಹಜವಾಗಿ ಇರುತ್ತದೆ. ಆದರೆ Aedes aegypti ಸೊಳ್ಳೆಗಳಲ್ಲಿ ಇದು ಕಂಡುಬರುವುದಿಲ್ಲ. ಇಲ್ಲಿಯೇ ವಿಜ್ಞಾನಿಗಳ ಚಾತುರ್ಯ ಕೆಲಸ ಮಾಡಿದೆ. ಮದುವೆ ಆಗುತ್ತದೆ, ಮಕ್ಕಳು ಹುಟ್ಟುವುದಿಲ್ಲ!


ವೋಲ್ಬಾಕಿಯಾ ಹೊಂದಿರುವ ಗಂಡು ಸೊಳ್ಳೆ ಒಂದು ಸಾಮಾನ್ಯ ಹೆಣ್ಣು ಸೊಳ್ಳೆಯೊಂದಿಗೆ ಸೇರಿದಾಗ ಒಂದು ವಿಚಿತ್ರ ಜೈವಿಕ ಕ್ರಿಯೆ ನಡೆಯುತ್ತದೆ. ವಿಜ್ಞಾನದಲ್ಲಿ ಇದನ್ನು Cytoplasmic Incompatibility ಎಂದು ಕರೆಯುತ್ತಾರೆ. ಸರಳವಾಗಿ ಹೇಳುವುದಾದರೆ, ತಪ್ಪಾದ ಪಾಸ್‌ವರ್ಡ್ ಬಳಸಿ ಕಂಪ್ಯೂಟರ್ ತೆರೆಯಲು ಪ್ರಯತ್ನಿಸಿದಂತಾಗುತ್ತದೆ. ಸಂತಾನೋತ್ಪತ್ತಿ ನಡೆಯುತ್ತದೆ. ಮೊಟ್ಟೆಗಳು ರೂಪುಗೊಳ್ಳುತ್ತವೆ. ಆದರೆ ಭ್ರೂಣದ ಬೆಳವಣಿಗೆ ಆಗುವುದಿಲ್ಲ. ಮೊಟ್ಟೆಗಳು ಒಡೆಯುವುದೇ ಇಲ್ಲ. ಹೊಸ ಸೊಳ್ಳೆಗಳು ಹುಟ್ಟುವುದೇ ಇಲ್ಲ. ಪರಿಣಾಮವಾಗಿ ಮುಂದಿನ ತಲೆಮಾರಿನ ಸೊಳ್ಳೆಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತದೆ. ಇದು ರಾಸಾಯನಿಕ ಯುದ್ಧವಲ್ಲ. ಇದು ಜೀವಶಾಸ್ತ್ರದ ಮೂಲಕ ನಡೆಸುವ ಜನಸಂಖ್ಯಾ ನಿಯಂತ್ರಣ.  

ಕೃತಕ ಬುದ್ಧಿಮತ್ತೆಯ ಸಹಾಯ : ಇಲ್ಲಿ ಮತ್ತೊಂದು ದೊಡ್ಡ ಸವಾಲಿತ್ತು. ಕೋಟ್ಯಂತರ ಸೊಳ್ಳೆಗಳಲ್ಲಿ ಗಂಡು ಮತ್ತು ಹೆಣ್ಣುಗಳನ್ನು ಹೇಗೆ ಬೇರ್ಪಡಿಸುವುದು? ಮಾನವರು ಕುಳಿತು ಈ ಕೆಲಸ ಮಾಡುವುದು ಅಸಾಧ್ಯವೇ? ಅದಕ್ಕಾಗಿ ವೆರಿಲಿ ಸಂಸ್ಥೆ ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟರ್ ವಿಷನ್ ತಂತ್ರಜ್ಞಾನವನ್ನು ಬಳಸಿತು!! ಪ್ಯೂಪಾ ಹಂತದಲ್ಲಿರುವ ಸೊಳ್ಳೆಗಳ ಗಾತ್ರ, ಆಕಾರ ಮತ್ತು ದೇಹರಚನೆಯನ್ನು ಕ್ಯಾಮೆರಾಗಳು ವಿಶ್ಲೇಷಿಸುತ್ತವೆ. ಅತ್ಯಾಧುನಿಕ ಅಲ್ಗಾರಿದಮ್‌ಗಳು ಕ್ಷಣಾರ್ಧದಲ್ಲಿ ಗಂಡು ಮತ್ತು ಹೆಣ್ಣುಗಳನ್ನು ಗುರುತಿಸುತ್ತವೆ. ನಂತರ ಗಂಡು ಸೊಳ್ಳೆಗಳನ್ನಷ್ಟೇ ಆಯ್ಕೆ ಮಾಡಿ ಪ್ರಕೃತಿಗೆ ಬಿಡುಗಡೆ ಮಾಡಲಾಗುತ್ತದೆ.


ಪ್ರಯೋಗದ ಫಲಿತಾಂಶ : ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ನಡೆಸಿದ ಪ್ರಯೋಗದಲ್ಲಿ ಕೆಲವೇ ತಿಂಗಳುಗಳಲ್ಲಿ Aedes aegypti ಸೊಳ್ಳೆಗಳ ಸಂಖ್ಯೆಯಲ್ಲಿ ಸುಮಾರು 95 ಪ್ರತಿಶತದಷ್ಟು ಇಳಿಕೆ ಕಂಡುಬಂದಿತು. ಆಸ್ಟ್ರೇಲಿಯಾ, ಬ್ರೆಜಿಲ್, ಇಂಡೋನೇಷ್ಯಾ ಮತ್ತು ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ವೋಲ್ಬಾಕಿಯಾ ಆಧಾರಿತ ಕಾರ್ಯಕ್ರಮಗಳು ಡೆಂಗ್ಯೂ ನಿಯಂತ್ರಣದಲ್ಲಿ ಗಮನಾರ್ಹ ಯಶಸ್ಸು ದಾಖಲಿಸಿವೆ. ಕೆಲ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು 70 ರಿಂದ 80 ಪ್ರತಿಶತದವರೆಗೆ ಕಡಿಮೆಯಾಗಿರುವ ವರದಿಗಳಿವೆ.  
ಪ್ರಕೃತಿಗೆ ಅಪಾಯವೇ? "ಒಂದು ಜಾತಿಯ ಸೊಳ್ಳೆಗಳನ್ನು ಕಡಿಮೆ ಮಾಡಿದರೆ ಆಹಾರ ಸರಪಳಿ ಕುಸಿಯುವುದಿಲ್ಲವೇ?" ಎಂಬ ಪ್ರಶ್ನೆ ಸಹಜ. ಆದರೆ ಜಗತ್ತಿನಲ್ಲಿ 3,500 ಕ್ಕೂ ಹೆಚ್ಚು ಸೊಳ್ಳೆ ಜಾತಿಗಳಿವೆ. ಇಲ್ಲಿ ಗುರಿಯಾಗಿರುವುದು ಕೇವಲ ಒಂದು ನಿರ್ದಿಷ್ಟ ರೋಗವಾಹಕ ಜಾತಿ ಮಾತ್ರ. ಅದರಲ್ಲೂ ರಾಸಾಯನಿಕ ವಿಷಗಳನ್ನು ಬಳಸದೆ, ನಿರ್ದಿಷ್ಟ ಜಾತಿಯನ್ನು ಮಾತ್ರ ಗುರಿಯಾಗಿಸುವುದರಿಂದ ಜೇನುನೊಣಗಳು, ಚಿಟ್ಟೆಗಳು ಹಾಗೂ ಇತರ ಉಪಯುಕ್ತ ಕೀಟಗಳಿಗೆ ಹಾನಿಯಾಗುವ ಸಾಧ್ಯತೆ ಅತ್ಯಂತ ಕಡಿಮೆ. ಆದಾಗ್ಯೂ ಪರಿಸರಶಾಸ್ತ್ರಜ್ಞರು ದೀರ್ಘಕಾಲೀನ ಪರಿಣಾಮಗಳ ಬಗ್ಗೆ ನಿರಂತರ ಅಧ್ಯಯನ ನಡೆಸುತ್ತಿದ್ದಾರೆ.
ವಿಜ್ಞಾನದಲ್ಲಿ ಯಾವುದೇ ತಂತ್ರಜ್ಞಾನವನ್ನು ಶೇಕಡಾ ನೂರು ಅಂತಿಮ ಪರಿಹಾರ ಎಂದು ಘೋಷಿಸುವುದಿಲ್ಲ; ನಿರಂತರ ಮೌಲ್ಯಮಾಪನ ನಡೆಯುತ್ತಲೇ ಇರುತ್ತದೆ.
 
ಕೊನೆಯದಾಗಿ ಹೇಳುವುದಾದರೆ, ಒಂದು ಕಾಲದಲ್ಲಿ ಸೊಳ್ಳೆಗಳ ವಿರುದ್ಧದ ಹೋರಾಟ ಎಂದರೆ  DDT ಯಂತಹ ವಿಷ ಸಿಂಪಡಿಸುವುದೇ ಪ್ರಮುಖ ಅಸ್ತ್ರವಾಗಿತ್ತು. ಇಂದು ಸೂಕ್ಷ್ಮಜೀವಿಶಾಸ್ತ್ರ, ಕೃತಕ ಬುದ್ಧಿಮತ್ತೆ, ಜಿನೋಮಿಕ್ಸ್ ಮತ್ತು ಪರಿಸರ ವಿಜ್ಞಾನಗಳ ಸಂಯೋಜನೆಯಿಂದ ಸೊಳ್ಳೆಗಳ ಜನಸಂಖ್ಯೆಯನ್ನು ನಿಯಂತ್ರಿಸುವ ಹೊಸ ಯುಗ ಆರಂಭವಾಗಿದೆ. ಒಂದು ಪುಟ್ಟ ಬ್ಯಾಕ್ಟೀರಿಯಾ... ಒಂದು ಪುಟ್ಟ ಸೊಳ್ಳೆ... ಮತ್ತು ಒಂದು ದೊಡ್ಡ ವೈಜ್ಞಾನಿಕ ಕಲ್ಪನೆ... ಇವು ಸೇರಿ ಲಕ್ಷಾಂತರ ಜನರ ಜೀವ ಉಳಿಸುವ ಸಾಮರ್ಥ್ಯ ಹೊಂದಿವೆ.
ಭವಿಷ್ಯದಲ್ಲಿ ಡೆಂಗ್ಯೂ ಮತ್ತು ಇತರ ಸೊಳ್ಳೆಜನ್ಯ ಕಾಯಿಲೆಗಳ ವಿರುದ್ಧದ ಅತಿದೊಡ್ಡ ಅಸ್ತ್ರ ಔಷಧಿಯಲ್ಲ, ಸೊಳ್ಳೆಗಳೇ ಆಗಬಹುದು!
ವಿಜ್ಞಾನದ ಲೋಕದಲ್ಲಿ ಅಸಾಧ್ಯವೆನಿಸುವ ಅನೇಕ ಸಂಗತಿಗಳು ಇಂದು ವಾಸ್ತವವಾಗುತ್ತಿವೆ. ಗೂಗಲ್‌ನ ಈ ಸೊಳ್ಳೆ ಸೈನ್ಯವೂ ಅಂಥವೇ ಒಂದು ಕುತೂಹಲಕಾರಿ ಅಧ್ಯಾಯ.