ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam
Showing posts with label BNR. Show all posts
Showing posts with label BNR. Show all posts

Tuesday, August 4, 2026

ರಾಷ್ಟ್ರೀಯ ಬಾಹ್ಯಾಕಾಶ ದಿನ

                 ರಾಷ್ಟ್ರೀಯ ಬಾಹ್ಯಾಕಾಶ ದಿನ 

             (NATIONAL SPACE DAY)


ಲೇಖಕರು :  
ಬಿ .ಎನ್. ರೂಪ,  

ಸಹಶಿಕ್ಷಕರು,

ಕೆ.ಪಿ.ಎಸ್‌  ಜೀವನ್‌ ಭೀಮನಗರ

ಬೆಂಗಳೂರು ದಕ್ಷಿಣ ವಲಯ -4



ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಪ್ರತಿವರ್ಷ ಆಗಸ್ಟ್23ರಂದು ಆಚರಿಸಲಾಗುತ್ತಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಪ್ರಥಮ ಬಾರಿಗೆ ಆಗಸ್ಟ್ 23, 2024 ರಂದು ಆಚರಿಸಲಾಯಿತು. ಇದು ಭಾರತ ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ದಿನದ ಸ್ಮರಣಾರ್ಥವಾಗಿ ದೇಶದಲ್ಲಿ ವಾರ್ಷಿಕ ಆಚರಣೆಯಾಗಿದೆ. ಈ ಸಾಧನೆಯಿಂದಾಗಿ ಭಾರತವನ್ನು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲನೇ ದೇಶವನ್ನಾಗಿ ಗುರುತಿಸಾಲಾಗುತ್ತಿದೆ. ಅಲ್ಲದೆ, ಚಂದ್ರನ ಮೇಲೆ  ಮೃದುವಾದ ಇಳಿಯುವಿಕೆ ಸಾಧಿಸಿದ ನಾಲ್ಕನೇ ದೇಶವನ್ನಾಗಿ ಮಾಡಿದೆ.

ಭಾರತ ಇಲ್ಲಿವರೆಗೂ ಉಡಾಯಿಸಿದ 424 ವಿದೇಶಿ ಉಪಗ್ರಹಗಳಲ್ಲಿ 389 ಉಪಗ್ರಹಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಳೆದ 9 ವರ್ಷಗಳಲ್ಲಿ ಉಡಾವಣೆ ಮಾಡಿದೆ. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆಯನ್ನು ಪ್ರಾರಂಭಿಸಿದೆ. ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿಯನ್ನುಉತ್ತೇಜಿಸುವ ಮತ್ತು ಮುನ್ನಡೆಸುವ ಮಹತ್ವಾಕಾಂಕ್ಷೆಯ ಗುರಿಯನ್ನುಹೊಂದಿದೆ.ಆಗಸ್ಟ್ 26ರಂದು ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರುವಿಕ್ರಂ ಲ್ಯಾಂಡರ ಯಶಸ್ಸಿನ ನಂತರ ಆಗಸ್ಟ್ 23 ರನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದರು

ಇಸ್ರೋದ ಚಂದ್ರಯಾನ ಮೂರರ ಲ್ಯಾಂಡರ ಮತ್ತು ರೋವರ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಭಾರತ ಸಾಧಿಸಿದೆ. ಇದರೊಂದಿಗೆ ಭಾರತ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎನಿಸಿಕೊಂಡಿತು. ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಿದ್ದನ್ನು ನಮ್ಮ ISR೦ ಸಾಧಿಸಿತು. ಜುಲೈ 14 2018ರಲ್ಲಿ ಶ್ರೀಹರಿ ಕೋಟದಿಂದ ಶಕ್ತಿಶಾಲಿ LVM3-M4 ರಾಕೆಟ್ನಲ್ಲಿ ಉಡಾವಣೆಯು ಅದರ ನಿಖರತೆ ಮತ್ತು ತಾಂತ್ರಿಕ ಪ್ರತಿಭೆಯಿಂದ ಪ್ರಪಂಚದ ಗಮನ ಸೆಳೆಯಿತು. ಈ ಐತಿಹಾಸಿಕ ಸಾಧನೆಯು ರಾಷ್ಟ್ರದ ಸಾಮೂಹಿಕ ಸ್ಮರಣೆಯಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿದೆ. ಇದರಿಂದಾಗಿ ವಿಜ್ಞಾನ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯನ್ನುಉತ್ತೇಜಿಸಲು ಸಾಧ್ಯವಾಗಿದೆ.

 ದಕ್ಷಿಣ ಧ್ರುವ ಪ್ರದೇಶದಲ್ಲಿ ಮೇಲ್ಮೈ ತುಂಬಾ ಅಸಮ ಮತ್ತು ಕುಳಿ ಹಾಗೂ ಬಂಡೆಗಳಿಂದ ತುಂಬಿರುವ ಪ್ರದೇಶದಲ್ಲಿ ಲ್ಯಾಂಡರ್  ಅನ್ನು ಇಳಿಸುವುದು ತುಂಬಾ ಕಷ್ಟ. 2019ರಲ್ಲಿ ಮೃದುವಾಗಿ ಇಳಿಯಲು ಪ್ರಯತ್ನಿಸಿದ ಭಾರತದ ಎರಡನೇ ಚಂದ್ರನ ಕಾರ್ಯಾಚರಣೆ ವಿಫಲವಾಗಿತ್ತು. ಅದರ ಲ್ಯಾಂಡರ್‌ ಮತ್ತು ರೋವರ್‌ ನಾಶವಾದವು. ಆದರೂ ಅದರ ಅರ್ಬಿಟರ್‌ ಬದುಕುಳಿಯಿತು.

ವಿಕ್ರಂ ಲ್ಯಾಂಡರ್‌ ಪ್ರಜ್ಞಾನ್ ಎಂಬ 26 ಕೆಜಿ ತೂಕದ ರೋವರನ್ನು ಹೊಟ್ಟೆಯೊಳಗೆ ಹೊತ್ತುಕೊಂಡು ಅನಿಶ್ಚಿತ ಇಳಿಯುವಿಕೆಯನ್ನು ಪ್ರಾರಂಭಿಸಿತು. ಲ್ಯಾಂಡರ್‌ ನ ವೇಗವನ್ನು ಕ್ರಮೇಣ ಸೆಕೆಂಡಿಗೆ 1.68 km ನಿಂದ ಬಹುತೇಕ ಶೂನ್ಯಕ್ಕೆ ಇಳಿಸಲಾಯಿತು. ಇದರಿಂದಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಇಳಿಯುವಿಕೆ ಸಾಧ್ಯವಾಯಿತು. ಕೆಲವು ಗಂಟೆಗಳು ದೂಳು ಇಳಿದ ನಂತರ ಆರು ಚಕ್ರಗಳ ರೋವರ್‌ ಲ್ಯಾಂರ್ಡರ್ನ‌ ಹೊಟ್ಟೆಯಿಂದ ತೆವಳುತ್ತ ಚಂದ್ರನ ಮೇಲ್ಮೈ ಇರುವ ಬಂಡೆಗಳು ಮತ್ತು ಕುಳಿಗಳ ಸುತ್ತಲೂ ಸಂಚರಿಸುತ್ತಿದೆ. ಭೂಮಿಗೆ ಕಳಿಸಬೇಕಾದ ನಿರ್ಣಾಯಕ ದತ್ತಾಂಶ ಮತ್ತು ಚಿತ್ರಗಳನ್ನು ಸಂಗ್ರಹಿಸುತ್ತದೆ.

ಈ ಕಾರ್ಯಾಚರಣೆಯ ಪ್ರಮುಖ ಗುರಿಗಳಲ್ಲಿ ಒಂದು ನೀರು ಆಧಾರಿತ ಮಂಜು ಗಡ್ಡೆಯನ್ನು ಬೇಟೆಯಾಡುವುದು. ಇದು ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವ ವಾಸಕ್ಕೆ ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮಂಗಳ ಮತ್ತು ಇತರ ದೂರದ ಸ್ಥಳಗಳಿಗೆ  ಹೋಗುವ  ಬಾಹ್ಯಾಕಾಶ ನೌಕೆಗಳಿಗೆ ಸಹ ಇದನ್ನು ಬಳಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದು ಚಂದ್ರನ ಮೇಲ್ಮೈಯ ಬೌತಿಕ ಗುಣಲಕ್ಷಣಗಳು ಮೇಲ್ಮೈಗೆ ಹತ್ತಿರವಿರುವ ವಾತಾವರಣ ಮತ್ತು ಮೇಲ್ಮೈ ಕೆಳಗೆ ಏನು ನಡೆಯುತ್ತದೆ ಎಂಬುದನ್ನು ಅಧ್ಯಯನ ಮಾಡಲು ಟೆಕ್ಟೋನಿಕ್ ಚಟುವಟಿಕೆಯನ್ನು ಕಂಡು ಹಿಡಿಯಲು ಸಹಾಯ ಮಾಡುತ್ತದೆ. ಈರೋವರ್‌ ಭಾರತೀಯ ಧ್ವಜವನ್ನು ಹೊತ್ತಿದ್ದು ಅದರ ಚಕ್ರಗಳ ಮೇಲೆ ಇಸ್ರೋದ ಲೋಗೋ ಮತ್ತು ಲಾಂಛನವನ್ನು ಉಬ್ಬು ರೂಪದಲ್ಲಿ ಮುದ್ರಿಸಲಾಗಿದೆ.

2008ರಲ್ಲಿ ದೇಶದ ಮೊದಲ ಚಂದ್ರಯಾನ ಒಂದು ಯೋಜನೆಯು ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಉಪಸ್ಥಿತಿಯನ್ನು ಕಂಡುಹಿಡಿದು ಚಂದ್ರನಿಗೆ ಹಗಲಿನ ವೇಳೆಯಲ್ಲಿ ವಾತಾವರಣವಿದೆ ಎಂದು ಸ್ಥಾಪಿಸಿದೆ.  15 ವರ್ಷಗಳ ನಂತರ ಈ ಯಾನ ಆಗಿದೆ. ಚಂದ್ರಯಾನ 2 ಸಂಪೂರ್ಣ ದತ್ತಾಂಶವನ್ನು ಕಳಿಸಲು ಸಹಾಯ ಮಾಡುತ್ತಿದೆ.


ಚಂದ್ರಯಾನ ಈ ಸಾಧನೆ ಮಾಡಿರುವುದು ನಮ್ಮ ಭಾರತ ಏಕೈಕ ದೇಶವೆಲ್ಲ. ಜಾಗತಿಕವಾಗಿ ಇದರ ಬಗ್ಗೆ ಆಸಕ್ತಿ ಇನ್ನೂ ಹೆಚ್ಚುತ್ತಲಿದೆ. ಮುಂದಿನ ದಿನಗಳಲ್ಲಿ ಚಂದ್ರನ ಮೇಲ್ಮೈಗೆ ಇನ್ನೂ ಅನೇಕ ಕಾರ್ಯಚರಣೆಗಳು ನಡೆಯಲಿವೆ. ವಿಜ್ಞಾನಿಗಳು ಹೇಳುವ ಪ್ರಕಾರ ಚಂದ್ರನ ಬಗ್ಗೆ ಇನ್ನೂ ಬಹಳಷ್ಟು ಅರ್ಥ ಮಾಡಿಕೊಳ್ಳಬೇಕಾಗಿದೆ. ಆಳವಾದ ಬಾಹ್ಯಾಕಾಶಕ್ಕೆ ದ್ವಾರ ಎಂದುಇದನ್ನು ವಿವರಿಸಲಾಗುತ್ತಿದೆ.

ಈ ದಿನದ ಮೂಲಭೂತ ಧ್ಯೇಯವಾಕ್ಯವು “ಜೀವಗಳನ್ನು ಸ್ಪರ್ಶಿಸುತ್ತ ಚಂದ್ರನನ್ನು ಸ್ಪರ್ಶಸುತ್ತಲೇ-ಭಾರತದ ಬಾಹ್ಯಾಕಾಶ ಸಾಹಸಗಾಥೆ ದೇಶದ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನಕ್ಕಾಗಿ ಸ್ಥಾಪಿಸಲಾದ ಥೀಮ್.


    ಬಾಹ್ಯಾಕಾಶ ಇಲಾಖೆಯಿಂದ ಆಯೋಜಿಸಲಾದ ಆಚರಣೆಗಳು, ರಾಷ್ಟ್ರೀಯ ಶೈಕ್ಷಣಿಕ ಸಂಪರ್ಕ ಕಾರ್ಯಕ್ರಮಗಳು, ಬಾಹ್ಯಾಕಾಶ ಪರೀಕ್ಷೆಗಳು. ವಿಜ್ಞಾನದ ಜಾಗೃತಿಗಾಗಿ ಮುಂಬರುವ ಮೈಲಿಗಲ್ಲುಗಳ ಏಕೀಕರಣದ ಮೇಲೆ ಕೇಂದ್ರೀಕರಿಸುತ್ತವೆ.

ಚಂದ್ರಯಾನ-3ರ ಯಶಸ್ಸಿನ ನಂತರ ನಮ್ಮ ಭಾರತದ ಯಶಸ್ಸಿನ ಸಾಹಸಗಾಥೆ ಹೀಗೆ ಮುಂದುವರೆಯಲಿದೆ. ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿ ವಿಜ್ಞಾನ ಸ್ಟೆಮ್ಶಿ ಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ.

ಚಂದ್ರಯಾನ-3 ರ ಯಶಸ್ಸಿನ ನಂತರ ಚಂದ್ರನ ಪರಿಸರದ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಲು,ಉನ್ನತ ಹಾಗೂ ಅಭಿವೃದ್ಧಿ ಹೊಂದಿರುವ ತಾಂತ್ರಿಕತೆ ಹಾಗೂ ತಂತ್ರಜ್ಞಾನವನ್ನು ಬಳಸುವುದು, .ಆಳವಾದ ಬಾಹ್ಯಾಕಾಶದ ಸಂಶೋಧನೆಯನ್ನು ನಡೆಸುವುದು ಹಾಗೂ ಭವಿಷ್ಯದಲ್ಲಿ ಜನರನ್ನು ಹೊತ್ತೊಯ್ಯುವ ಬಾಹ್ಯಾಕಾಶ ನೌಕೆಗಳನ್ನು ಸಿದ್ಧಪಡಿಸುವುದು.

ಹೀಗೆ, ನವಭಾರತದ ಯಶೋಗಾಥೆ ಮುಂದುವರೆಯಲಿ. ಇನ್ನೆಷ್ಟು ಹೊಸ ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವ ತಾಂತ್ರಿಕತೆಯನ್ನು ಬಳಸಿಕೊಂಡು ಉನ್ನತ ಮಟ್ಟದ ಸಾಧನೆಯನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಲಿ ಎಂದು ಆಶಿಸೋಣ.

Thursday, June 4, 2026

ವಿಶ್ವ ಪರಿಸರ ದಿನಾಚರಣೆ - 2026

 ವಿಶ್ವ ಪರಿಸರ  ದಿನಾಚರಣೆ - 2026

ಲೇಖಕರು : ಬಿ.ಎನ್. ರೂಪ,

ಸಹಶಿಕ್ಷಕರು, ಕೆ.ಪಿ.ಎಎಸ್‌

ಜೀವನ್‌ ಭೀಮ ನಗರ,

ಬೆಂಗಳೂರು ದಕ್ಷಿಣ ವಲಯ -4

 

ಹಸಿರು ವೈಭವವನ್ನು ಹೊತ್ತಿರುವ ಮಾತೆ,

ನಮ್ಮೆಲ್ಲರ ಜೀವದಾತೆ,

ಸಕಲ ಜೀವರಾಶಿಗಳಿಗೆ ಅವಾಸದಾತೆ,

ನೀ ನಮ್ಮ ಭೂಮಾತೆ.

 

ಹರಿಯುವ ನೀರಿನ ನಿನಾದ,

ಬೀಸುವ ತಣ್ಣನೆ ಗಾಳಿ,

ವಸುಂಧರೆ ನಿನಗೆ ಸಾಟಿ ಉಂಟೆ,

ನೀ ನಮ್ಮ ಭೂಮಾತೆ.

ವೈವಿಧ್ಯಮಯ ಜೀವಗಳಿಗೆ ಆಸರೆ ನೀಡುವ ಮಾತೆ,

ಯುಗಯುಗಗಳಿಂದ ನಿನ್ನನ್ನು ನೀನೇ ಪುನಶ್ಚೇತನ ನಡೆಸಿಕೊಂಡು ಬಂದಾತೆ,

ನಿನ್ನ ಸಾಗರ ಸಮುದ್ರ ಆಳ ಅಗಲಕ್ಕೆ ಸಾಟಿ ಉಂಟೇ ? ಮಿತಿ ಉಂಟೇ ?

ನೀ ನಮ್ಮ ಭೂಮಾತೆ.

ನಿನ್ನಲ್ಲಿರುವ ವೈವಿಧ್ಯಪೂರ್ಣ ಪರಿಸರವ್ಯವಸ್ಥೆಗಳಿಗೆ ಎಣೆಯುಂಟೆ ?

ಆಕಾಶದಲ್ಲಿ ನಕ್ಷತ್ರವನ್ನು ಎಣಿಸುವುದುಂಟೆ ?

ಮಾಲಿನ್ಯದಿಂದ ನಿನ್ನ ಗರ್ಭಕ್ಕೆ ಕಂಟಕ ಎಸಗಿ ಉಳಿದವರುಂಟೆ ?

ನೀ ನಮ್ಮ ಭೂಮಾತೆ.

ಪರಿಸರ ಎಂಬ ಪದವೇ ಅವರ್ಚನೀಯ ರೋಮಾಂಚನವನ್ನು ಉಂಟುಮಾಡುತ್ತದೆ. ಹಸಿರನ್ನೇ ಮಾಲೆಯಾಗಿ ಧರಿಸಿರುವ, ಪಕ್ಷಿಗಳ ಚಿಲಿಪಿಲಿ, ವಿವಿಧ ಪ್ರಾಣಿಗಳ ಕಲರವ, ಹರಿಯುವ ನೀರಿನ ಝಳ, ಆಹ್ಲಾದಕರ ಗಾಳಿಯ ಹರಿವು, ವೈವಿಧ್ಯಮಯ ಸಸ್ಯವರ್ಗ, ಒಂದೇ ಎರಡೇ ಸುಂದರ ಬನಸಿರಿಯನ್ನು ಹೊಂದಿರುವ ಒಂದು ಕಾಡನ್ನು ಕಣ್ಮುಚ್ಚಿ ಊಹಿಸಿಕೊಳ್ಳಿ. ನಮ್ಮ ಭೂಮಿಯ ಮೇಲೆ ಎಷ್ಟೋ ಜೀವಿಗಳು ಹುಟ್ಟಿದವು ಅಸ್ತಿತ್ವದಲ್ಲಿದ್ದವು ಹಾಗೂ ವಿಕಸಿತಗೊಂಡಿದ್ದವು ಎಂಬುದನ್ನು ಸಾಕಷ್ಟು ಪುರಾವೆಗಳ ಮೂಲಕ ತಿಳಿದುಕೊಂಡಿದ್ದೇವೆ. ಆದರೆ, ನಾವು ಕೈಗೊಳ್ಳುತ್ತಿರುವ ಚಟುವಟಿಕೆಗಳಿಂದ ಆಗುತ್ತಿರುವ ಮಹತ್ತರ ಬದಲಾವಣೆಗಳನ್ನು ಇತ್ತೀಚಿನ ವಿದ್ಯಮಾನಗಳನ್ನು ವೀಕ್ಷಿಸಿದಾಗ ಬೇರೆ ಯಾವುದೇ ಜೀವಿಸಮೂಹ ಇಂಥ ವಿನಾಠಶವನ್ನು ಮಾಡಲು ಸಾಧ್ಯವಿಲ್ಲ ಎನಿಸುತ್ತದೆ.

ನಾವು ಅಸ್ತಿತ್ವಕ್ಕೆ ಬರುವ ಮುನ್ನವೂ ಭೂಮಿ ತನ್ನದೇ ಆದ ವಿಧಿವಿಧಾನಗಳಿಂದ ತನ್ನನ್ನು ತಾನು ಪುನಶ್ಚೇತನ, ಮರುಪೂರಣಗೊಳಿಸಿಕೊಂಡಿರುವುದನ್ನು, ದಶಕಗಳಿಂದ ತನ್ನನ್ನು ತಾನು ಸಂಭಾಳಿಸಿಕೊಂಡು ಅಸ್ತಿತ್ವದಲ್ಲಿರುವುದನ್ನು ನಾವು ವೀಕ್ಷಿಸಿದ್ದೇವೆ. ನಮ್ಮ ಹಸ್ತಕ್ಷೇಪ ಇಲ್ಲದೆಯೇ ಭೂಮಿಯು ತನ್ನನ್ನು ತಾನು ಮರುಪೂರಣ ಹಾಗೂ ಪುನಶ್ಚೇತನಗೊಳಿಸಿಕೊಂಡಿರುವುದಕ್ಕೆ ಕೋವಿಡ್ 19ರ ಸಂದರ್ಭದಲ್ಲಿನ  ನಮ್ಮ ಗೃಹಬಂಧನವೇ ಸ್ಪಷ್ಟ ನಿದರ್ಶನ ಹಾಗೂ ಸಾಕ್ಷಿಯಾಗಿದೆ.

ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯ, ಏರುತ್ತಿರುವ ಸಮುದ್ರದ ಮಟ್ಟ, ಜಾಗತಿಕ ತಾಪಮಾನ ಹೆಚ್ಚಳ, ಪ್ಲಾಸ್ಟಿಕ್‌ ಮಾಲಿನ್ಯ, ಕಾಡ್ಗಿಚ್ಚು,‌ ಮರುಭೂಮೀಕರಣ, ಶಾಖದ ಅಲೆಗಳು, ಕರಗುತ್ತಿರುವ ಹಿಮನದಿಗಳು ಅರಣ್ಯನಾಶ, ಬೆಳವಣಿಗೆಯ ಹೆಸರಿನಲ್ಲಿ ಮರಗಳ ಮಾರಣ ಹೋಮ …………………ಹೀಗೆ ಮಾನವ ಕೈಗೊಂಡಿರುವ ಹಲವಾರು ವಿನಾಶಕಾರಿ ಕಾರ್ಯಕ್ರಮಗಳು ಇಂದಿನ ಹವಾಮಾನ ವೈಪರೀತ್ಯ ಹಾಗೂ ಇನ್ನಿತರ ಹಲವಾರು ಅನಪೇಕ್ಷಿತ ಬದಲಾವಣೆಗಳಿಗೆ ಕಾರಣ ಎನ್ನಬಹುದು. ಹೀಗಾಗಿ, ವಿಶ್ವದಾದ್ಯಂತ ಪರಿಸರವನ್ನು ರಕ್ಷಿಸಲು ಜಾಗತಿಕ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ “ವಿಶ್ವಪರಿಸರದಿನ“ ಅಂತರರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಜಾಗತಿಕ ಆಚರಣೆಯಾಗಿದೆ.

ವಿಶ್ವ ಪರಿಸರ ದಿನಾಚರಣೆ ಏಕೆ?

ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದೆ. 1972 ರಲ್ಲಿ ವಿಶ್ವಸಂಸ್ಥೆಯು ಸ್ಟಾಕ್ಹೋಂನಲ್ಲಿ ನಡೆದ ಮಾನವ ಪರಿಸರ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು ಅಂಗೀಕರಿಸಿತು. ಒಂದು ವರ್ಷದ ನಂತರ, 1973ರಲ್ಲಿ ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರ ಸಂರಕ್ಷಣೆ, ಪುನಶ್ಚೇತನ, ಪರಿಸರ ಉಳಿವಿಗಾಗಿ ಕಾಳಜಿ, ಕಾಡುಗಳನ್ನು ಪುನಸ್ಥಾಪಿಸುವುದು, ಮಾಲಿನ್ಯವನ್ನು ಕಡಿಮೆಮಾಡುವುದು, ಮೂಲದಲ್ಲಿ ಮಾಲಿನ್ಯವನ್ನು ತಡೆಗಟ್ಟಿ, ಕಡಿಮೆ ಮಾಡುವುದು, ಮಣ್ಣಿನ ಸವಕಳಿಯನ್ನು ತಡೆದು ಮರುಭೂಮೀಕರಣವನ್ನು ತಪ್ಪಿಸುವುದು, ಜನಜಾಗೃತಿ ಮೂಡಿಸುವುದು, ಇವು ಈ ಆಚರಣೆಯ ಧ್ಯೇಯವಾಗಿವೆ. ಪ್ಲಾಸ್ಟಿಕ್‌ ಮಾಲಿನ್ಯ ತಡೆಗಟ್ಟುವುದು ಜೀವವೈವಿಧ್ಯವನ್ನು ಕಾಪಾಡುವುದು. ಹೀಗೆ ಹಲವಾರು ಅಂಶಗಳನ್ನು ಇದು ಒಳಗೊಂಡಿದೆ. ಜನಸಾಮಾನ್ಯರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಹಾಗೂ ನಮ್ಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ, ಕಳಕಳಿಯನ್ನು ಬಡಿದೆಬ್ಬಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ.

 ಪ್ರತಿವರ್ಷ  ಒಂದು ನಿರ್ದಿಷ್ಟ  ಧ್ಯೇಯದೊಂದಿಗೆ ಜಾಗತಿಕ ಮಟ್ಟದಲ್ಲಿ  ಆಚರಣೆ ನಡೆಯುತ್ತಿದ್ದು, ಅದರಂತೆ ಈ 2026ರ ವಿಶ್ವ ಪರಿಸರ ದಿನದ ಆಚರಣೆಯು ಜೂನ್ 5, 2026ರಂದು ಶುಕ್ರವಾರ ನಡೆಯಲಿದ್ದು, ಹವಾಮಾನ ಕ್ರಮ ಮತ್ತು ಜಾಗತಿಕ ಸುಸ್ಥಿರತೆಯ ಗುರಿಗಳತ್ತ ಪ್ರಗತಿಯನ್ನು ವೇಗಗೊಳಿಸುವತ್ತ ಪ್ರಾಥಮಿಕ ಗಮನವನ್ನು ಹೊಂದಿ, ಅಜೆರ್ಬೈಜಾನ್‌ ನಲ್ಲಿ ಇದನ್ನು ಆಯೋಜಿಸಲಾಗಿದೆ. 53 ನೇ ವಾರ್ಷಿಕ ಕಾರ್ಯಕ್ರಮವು ತುರ್ತು ಹವಾಮಾನ ಸಂಕೇತಗಳ ಮೇಲೆ ಕೇಂದ್ರೀಕರಿಸುತ್ತದೆ – ಉದಾಹರಣೆಗೆ, ಏರುತ್ತಿರುವ ತಾಪಮಾನ ಮತ್ತು ನವೀಕರಿಸಬಹುದಾದ ಶಕ್ತಿ ಮತ್ತು ಪರಿಸರವ್ಯವಸ್ಥೆಯ ಪುನಃಸ್ಥಾಪನೆಯ ಕಡೆಗೆ ಪರಿವರ್ತನೆಯನ್ನು ಚಾಲನೆ ಮಾಡುತ್ತದೆ.

ನಮ್ಮ ಗ್ರಹವು ಯಾವುದೇ ಮುನ್ಸೂಚನೆಯನ್ನು ನೀಡುವುದಿಲ್ಲ. ನಮ್ಮ ಗ್ರಹ ಯಾವುದೇ ಮಧ್ಯಸ್ಥಿಕೆಗೆ ಸಿದ್ಧವಿಲ್ಲ. ನಮ್ಮ ವಿನಾಶಕಾರಿ ಕಾರ್ಯಗಳಿಗೆ ಸರಿಯಾದ ಉತ್ತರವನ್ನು ನಮ್ಮ ಗ್ರಹವು ಏರುತ್ತಿರುವ ತಾಪಮಾನ, ಶಾಖದ ಬಿಸಿಅಲೆಗಳು, ಸಮುದ್ರ ಮಟ್ಟದ ಏರುವಿಕೆ, ಕರಗುತ್ತಿರುವ ಹಿಮನದಿಗಳ ರೂಪದಲ್ಲಿ ಕೊಟ್ಟಿದೆ. ವಿವಿಧ ರೀತಿಯ ಕಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಇವೆಲ್ಲವೂ ಮಾನವನ ಜನಾಂಗಕ್ಕೆ ಸವಾಲೊಡ್ಡುವ ಮಟ್ಟಕ್ಕೆ ಬಂದು ನಿಂತಿವೆ.  ಇತರೆ ಜೀವಿಗಳು ನಮ್ಮ ಆಹಾರವನ್ನು ಭಕ್ಷಿಸಬಾರದು ಎಂದು ನಾವು ಮಣ್ಣಿಗೆ ಹಾಗೂ ನಮ್ಮ ಆಹಾರಕ್ಕೆ ವಿಷವನ್ನು ಸೇರಿಸುತ್ತಿದ್ದೇವೆ. ಈ ವಿಷವು ರಾಸಾಯನಿಕ ರಸಗೊಬ್ಬರ, ಕೀಟನಾಶಕ, ಕಳೆನಾಶಕ, ಶಿಲೀಂದ್ರನಾಶಕ ಇತ್ಯಾದಿ ರೂಪಗಳಲ್ಲಿ ಮಣ್ಣಿಗೆ ಸೇರುತ್ತಿವೆ. ಈ ವಸ್ತುಗಳು ನೀರು ಹಾಗೂ ಮಣ್ಣನ್ನು ಮಲೀನಗೊಳಿಸುವುದಲ್ಲದೆ, ಜೈವಿಕ ಸಂವರ್ಧನೆಯಂಥ ವಿದ್ಯಮಾನಗಳಿಗೆ ಎಡೆಮಾಡಿಕೊಡುತ್ತಿವೆ.

ಈ ಕೆಳಕಂಡ ಕೆಲವು ಮಾರ್ಗಗಳನ್ನು ಅನುಸರಿಸುವುದರಿಂದ ಪರಿಸರದ ಸಂರಕ್ಷಣೆಯನ್ನು ಮಾಡಬಹುದಾಗಿದೆ,

1) ನವೀಕರಿಸಬಹುದಾದ ಶಕ್ತಿಯ ಆಕರಗಳನ್ನು ಬಳಸುವುದು ಉದಾಹರಣೆಗೆ, ಪವನಶಕ್ತಿ, ಸೌರಶಕ್ತಿ ಇತ್ಯಾದಿ.

2) ಕಾಡುಗಳನ್ನು ಮರುಸ್ಥಾಪಿಸುವುದು, ನಗರಗಳಲ್ಲಿ ಹೆಚ್ಚು ಹಸಿರನ್ನು ಬೆಳೆಯುವುದಕ್ಕಾಗಿ ನಗರವನ್ನು
        ಮರುವಿನ್ಯಾಸಗೊಳಿಸುವುದು.

3) ಪ್ಲಾಸ್ಟಿಕ್‌ ಬೇಡ ಎಂಬ ಧ್ಯೇಯವಾಕ್ಯವನ್ನು ಅಳವಡಿಸಿ ಈ ಪರಿಪಾಠವನ್ನು ಪಾಲಿಸುವುದು. ಪ್ಲಾಸ್ಟಿಕ್‌ ಗಳಿಗೆ
     ಪರ್ಯಾಯವಾದ ಗಾಜು, ಪಿಂಗಾಣಿ, ಬಟ್ಟೆಯಿಂದ ತಯಾರಿಸಿದ ವಸ್ತುಗಳನ್ನು ಬಳಸುವುದು. ಏಕಬಳಿಕೆಯಪ್ಲಾಸ್ಟಿಕ್
      ಅನ್ನು ಸಂಪೂರ್ಣವಾಗಿ ನಿಷೇಧಿಸುವುದು.

4) ಕೃಷಿಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿಗಳಾಗಬೇಕು. “ಸಾವಯವಕೃಷಿಗೆಜೈ” ಅನ್ನಬೇಕು. ಹಾನಿಕಾರಕ ಜೈವಿಕ
      ಸಂವರ್ಧನೆಗೆ ಒಳಗಾಗುವ ರಾಸಾಯನಿಕ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

5) ಕಾನೂನು ಹಾಗೂ ಕಾಯ್ದೆಗಳನ್ನು ಜಾರಿಗೊಳಿಸಿ ಬಲಗೊಳಿಸುವುದು ಹಾಗೂ ಕಾನೂನು ಪಾಲಿಸುವಂತೆ
       ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವುದು.

6) ನವೀಕರಿಸಲಾಗದ ಸಂಪನ್ಮೂಲಗಳ ಮಿತಬಳಕೆ, ಕಾರ್ಬನ್‌ ಹೆಜ್ಜೆಗುರುತುಗಳನ್ನು ಕಡಿಮೆಗೊಳಿಸುವುದು. ಸಮೂಹ
    ಸಾರಿಗೆ ವ್ಯವಸ್ಥೆ ಬಳಸುವುದು, ವಿದ್ಯುತ್ಚಾಲಿತ ವಾಹನಗಳ ತಯಾರಿಕೆ ಹೆಚ್ಚಿಸುವುದು ಹಾಗೂ ಬಳಸುವುದು.ಇದರ
    ಬಗ್ಗೆ ಜನಜಾಗೃತಿ ಮೂಡಿಸುವುದು. ಹಳೆಯ ಮತ್ತು ಸುವರ್ಣ ದಿನಗಳಿಗೆ ಹಿಂತಿರುಗಿ- ಸೈಕಲ್‌ಗಳನ್ನು ಬಳಸುವುದು.
    ಇದರಿಂದ ಆರೋಗ್ಯವು ಸುಧಾರಿಸುತ್ತದೆ ಹಾಗೂ ಇಂಧನದ ಮಿತಬಳಕೆ= ಉಂಟಾಗುತ್ತದೆ.  ಹತ್ತಿರದ ಸ್ಥಳಗಳಿಗೆ
   ಆದಷ್ಟೂ ನಡೆಯುವುದನ್ನೇ ಅಭ್ಯಾಸ ಮಾಡಿಕೊಳ್ಳುವುದು.

7) ಪ್ರತಿಯೊಬ್ಬರು ಒಂದು ಗಿಡವನ್ನು ನೆಟ್ಟಿ ಬೆಳೆಸುವ ಸೂತ್ರ ರೂಡಿಸಿಕೊಂಡು ಹೆಚ್ಚು ಹಸಿರು ಪರಿಸರ
     ಉಂಟುಮಾಡುವುದನ್ನು ಕಡ್ಡಾಯ ಮಾಡಿಕೊಳ್ಳುವುದು.

8) ಅರಣ್ಯೀಕರಣ ಮತ್ತು ಮರುಅರಣ್ಯೀಕರಣ ಪದ್ಧತಿಯನ್ನು ಪಾಲಿಸುವುದು ಹಾಗೂ ಸುಸ್ಥಿರ ಶಕ್ತಿಯ ಬಳಕೆ
      ಪಾಲಿಸುವುದು.

9) ಮನೆ, ಶಾಲಾ,- ಕಾಲೇಜು, ಕಚೇರಿ, ರಸ್ತೆಬದಿ, ಎಲ್ಲಾದರೂ ಸರಿ ನೀರು ಪೋಲಾಗುವುದನ್ನು ಕಂಡರೆ ತಪ್ಪಿಸಿ. ನೀರಿನ ಜಾಗರೂಕ ಬಳಕೆಯನ್ನು ಕಡ್ಡಾಯಗೊಳಿಸುವುದು. ನೀರು ಸಂರಕ್ಷಣೆ ಆಗುವಂತಹ ನಲ್ಲಿಗಳು ಹಾಗೂ ಫಾಸಿಟ್‌ ಗಳನ್ನು ಹಾಗೂ ಸ್ಮಾರ್ಟ್‌ ಶೌಚಾಲಯದ ನಿರ್ಮಾಣವನ್ನು ಅಳವಡಿಸಿಕೊಳ್ಳುವುದು.

10) ವಿದ್ಯುತ್ತನ್ನು  ಮಿತವಾಗಿ ಬಳಸುವುದು, ಬಳಕೆ ಇಲ್ಲದ ದೀಪಗಳನ್ನು  ಆರಿಸುವುದು ಇತ್ಯಾದಿ ಸಣ್ಣ, ದಿಟ್ಟ, ಹೆಜ್ಜೆಗಳನ್ನು ಇರಿಸುವ ಮೂಲಕ  ಸಂಪನ್ಮೂಲಗಳ ಹಾಗೂ ಇಂಧನದ ಸಂರಕ್ಷಣೆ ಹಾಗೂ ಸದ್ಬಳಿಕೆ ಆಗುವಂತೆ ಮಾಡುವುದು.

11) “7R” ಅನ್ನು ಅನುಸರಿಸಿ : ಪುನರ್ವಿಮರ್ಶಿಸಿ, ನಿರಾಕರಿಸಿ, ಕಡಿಮೆಮಾಡಿ, ಮರುಬಳಕೆಮಾಡಿ, ದುರಸ್ತಿಮಾಡಿ, ಮರು ಉಡುಗೊರೆಯನ್ನು ಬಳಸಿ ಹಾಗೂ ಮರುಪೂರಣಗೊಳಿಸಿ.

12) ಸ್ಥಳೀಯ ಜಾತಿಯ ಸಸ್ಯಗಳನ್ನು ಹಾಗೂ ಪ್ರಕೃತಿ ಸ್ನೇಹಿ ಸಸ್ಯಗಳನ್ನು ಬೆಳೆಸುವುದು. ಇತ್ತೀಚಿಗೆ ಮೇ 2026 ತಿಂಗಳಲ್ಲಿ ಬಂದ ಭಾರೀ ಮಳೆಯಿಂದಾಗಿ ರಸ್ತೆಯ ಬದಿಗಳಲ್ಲಿ ಅಕೇಶಿಯ ಮರಗಳು ಒಣಗಿ, ಬೆಂಡಾಗಿ ಗಾಳಿಗೆ ನಡುಗಿ ಬಿದ್ದು ಬೆಂಗಳೂರಿನಲ್ಲಿ ಅಲ್ಲೋಲ ಕಲ್ಲೋಲವಾದದ್ದನ್ನು ಸ್ಮರಿಸಿಕೊಳ್ಳಿ. ಇದನ್ನು ಸಾಮಾಜಿಕ ಜಾಲತಾಣಗಳಲ್ಲೂ ನಾವು ವೀಕ್ಷಣೆ ಮಾಡಿದ್ದೇವೆ. ಅದೇ ನಮ್ಮ ಸ್ಥಳೀಯ ಮಾವಿನಮರ, ಹೊಂಗೆ ಮರಗಳು ಗಟ್ಟಿಯಾಗಿ ಬೇರೂರಿ ನಿಂತಿರುವುದನ್ನು ನಾವು ಸ್ಮರಿಸಬೇಕು. ಹೀಗಾಗಿ, ಸ್ಥಳೀಯ ಜಾತಿಯ ಸಸ್ಯಗಳನ್ನು ಬೆಳೆಸಲು ಹೆಚ್ಚು ಒತ್ತನ್ನು ನೀಡಬೇಕು.

13) ಪ್ರಕೃತಿಸ್ವಚ್ಛತೆ-ಸ್ವಚ್ಛನಡಿಗೆ ಹೀಗೆ ಸ್ವಯಂಸೇವೆಯನ್ನು ರೂಡಿಸಿ ಒಂದು ಸಮುದಾಯದಲ್ಲಿ ನಾಯಕತ್ವವನ್ನು ತೆಗೆದುಕೊಂಡು ಸ್ಥಳೀಯ ಸಂರಕ್ಷಣಾ ಗುಂಪುಗಳನ್ನು ಹೊಂದಿಸಿಕೊಂಡು ನಮ್ಮ ಸುತ್ತಮುತ್ತಲಿರುವ ಪ್ರದೇಶವನ್ನು ಸ್ವಚ್ಛಗೊಳಿಸುವ ಪರಿಪಾಠವನ್ನುಬೆಳೆಸಿಕೊಳ್ಳಬಹುದಾಗಿದೆ.

14) ಜೀವವೈವಿಧ್ಯತೆಯನ್ನು ಕಾಪಾಡಲು ಸುರಕ್ಷಿತ ಪ್ರದೇಶಗಳನ್ನು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ, ಕಾಡಿನ ಪ್ರದೇಶಗಳನ್ನು ರೂಪಿಸುವುದು. ಈ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿರ್ಬಂಧಿಸುವುದು.

15) ಸಾಗರ, ಸಮುದ್ರ ಬದಿಗಳಲ್ಲಿ ನದಿ ತಟಗಳಲ್ಲಿ ಪ್ಲಾಸ್ಟಿಕ್‌ ರಹಿತ ಪ್ರದೇಶವನ್ನಾಗಿ ಸ್ಥಾಪಿಸಿ, ಸುರಕ್ಷಿತ ಪ್ರದೇಶಗಳನ್ನಾಗಿ ಮಾಡುವುದು. ಅಳಿವಿನ ಅಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಣೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು.

16) ಸ್ಥಳೀಯ ಹಾಗೂ ರಾಜ್ಯಮಟ್ಟದಲ್ಲಿ ಸಿಹಿನೀರಿನ ಮೂಲಗಳ ಸಂರಕ್ಷಣಾ ಕಾರ್ಯಕ್ರಮ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.ಮಣ್ಣನ್ನು ರಕ್ಷಿಸುವುದು ಮಣ್ಣಿನ ಶಿಥಿಲತೆಯನ್ನು ತಡೆಗಟ್ಟಿ ಮಣ್ಣು ಬರಡಾಗುವುದನ್ನು ಹಾಗೂ ಮರುಭೂಮಿಯಾಗದಂತೆ ತಡೆಗಟ್ಟುವುದು.

ಹೀಗೆ, ಈ ನಿಟ್ಟಿನಲ್ಲಿ ಕೆಲವು ಸಣ್ಣ ಆದರೆ ದಿಟ್ಟ ಕ್ರಮಗಳನ್ನು ಕೈಗೊಳ್ಳುವುದರಿಂದ ನಾವು ನಮ್ಮ ಪರಿಸರವನ್ನು ಸಂರಕ್ಷಿಸುವುದರೊಂದಿಗೆ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದು, ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟುಹೋಗುವ ಪರಂಪರೆ. ಇದು, ಅಂತ್ಯವಲ್ಲ, ಕೇವಲ ಒಂದು ಸಣ್ಣ ಆರಂಭ. ನೀವು ಏನು ಹೇಳುತ್ತೀರಿ?

 

Monday, May 4, 2026

REE-ಏನಿದು? ವಿದ್ಯುನ್ಮಾನ ಕ್ಷೇತ್ರದ ಹೊಂಗಿರಣ

 REE-ಏನಿದು? ವಿದ್ಯುನ್ಮಾನ ಕ್ಷೇತ್ರದ ಹೊಂಗಿರಣ

ಲೇಖಕರು : 

ಬಿ. ಎನ್. ರೂಪ,

ಸಹಶಿಕ್ಷಕರು,

ಕೆ.ಪಿ.ಎಸ್‌ ಜೀವನ್‌ಭೀಮನಗರ 

ಬೆಂಗಳೂರು ದಕ್ಷಿಣವಲಯ -4  

ಇವು RARE EARTH ELEMENTS ಅರ್ಥಾತ್ ಅಪರೂಪ ಭೂಮಿ ಧಾತುಗಳು. ಅಪರೂಪದ ಭೂಮಿಧಾತುಗಳು ಮೃದುವಾದ ಭಾರ ಲೋಹಗಳ ಗುಂಪನ್ನು ಪ್ರತಿನಿಧಿಸುತ್ತವೆ. “ಅಪರೂಪದ ಭೂಮಿಧಾತುಗಳು” ಎಂಬ ಹೆಸರು ಅಷ್ಟು ಸಮಂಜಸವಲ್ಲ, ಏಕೆಂದರೆ ಇವು ವಿರಳವಾಗಿಲ್ಲ. ಇವು ಶುದ್ಧ ಲೋಹಗಳಾಗಿ ಅಥವಾ ಸಂಯುಕ್ತಗಳಾಗಿ ಮಾತ್ರ ಕಂಡುಬರುತ್ತವೆ. ಇವುಗಳನ್ನು ಪ್ರತ್ಯೇಕಿಸಲು ಮತ್ತು ಶುದ್ಧೀಕರಿಸಲು ಕಷ್ಟ. ಭೂಮಿಯ ಹೊರಪದರದಲ್ಲಿ ತುಲನಾತ್ಮಕವಾಗಿ ಹೇರಳವಾಗಿವೆ. ಇವು ಕಂಪ್ಯೂಟರ್‌ನ ಹಾರ್ಡ್‌ವೇರ್‌ಗಳಲ್ಲಿ, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಲ್ಲಿ, ಫ್ಲ್ಯಾಟ್‌ಸ್ಕ್ರೀನ್ ಮಾನಿಟರ್‌ಗಳಲ್ಲಿ, ಟೆಲಿವಿಷನ್‌ಗಳಂತಹ ಹೈಟೆಕ್ ಗ್ರಾಹಕ ಉತ್ಪನ್ನಗಳಾದ್ಯಂತ 200ಕ್ಕೂ ಹೆಚ್ಚು ಉತ್ಪನ್ನಗಳ ಅಗತ್ಯ ಘಟಕಗಳಾಗಿವೆ. ಇವುಗಳನ್ನು ಸ್ಮಾರ್ಟ್‌ಫೋನ್ ಪರದೆಗಳು, ಹಾರ್ಡ್‌‌ಡ್ರೈವ್‌, ಡಿಜಿಟಲ್ ಕ್ಯಾಮೆರಾಗಳಲ್ಲಿ ಇವುಗಳ ವಿಶಿಷ್ಟ ಕಾಂತೀಯ ಗುಣಲಕ್ಷಣಗಳಿಂದಾಗಿ ಬಳಸಲಾಗುತ್ತದೆ. ಅದರೊಂದಿಗೆ, ರಾಡಾರ್‌, ಸೋನಾರ್‌ಗಳಂತಹ ರಕ್ಷಣಾ ವ್ಯವಸ್ಥೆಗಳ ಮಾರ್ಗಸೂಚಕ ವ್ಯವಸ್ಥೆಗಳಲ್ಲಿ ಬಳಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಲೇಸರ್‌ಗಳಲ್ಲಿ, ಎಂ.ಆರ್‌.ಐ. ಯಂತ್ರಗಳಲ್ಲಿ ಬಳಸಲಾಗುತ್ತಿದೆ. ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಆವರ್ತ ಕೋಷ್ಟಕದಲ್ಲಿ ಅಪರೂಪದ ಭೂಮಿಧಾತುಗಳ ಸ್ಥಾನ


ಒಂದು ಧಾತು ಒಂದೇ ರೀತಿಯ ಪರಮಾಣುವಿನಿಂದ ಮಾಡಲಾದ ಶುದ್ಧ ವಸ್ತುವಾಗಿದ್ದು, ರಾಸಾಯನಿಕ ವಿಧಾನಗಳಿಂದ ಸರಳ ವಸ್ತುಗಳಾಗಿ ವಿಭಜಿಸಲು ಸಾಧ್ಯವಾಗುವುದಿಲ್ಲ. ಎಲ್ಲಾ ವಸ್ತುಗಳ ಮೂಲಭೂತ ಘಟಕಗಳಾಗಿ ಈ ಧಾತುಗಳು ರೂಪುಗೊಂಡಿವೆ. ಉದಾಹರಣೆಗೆ, ಕಾರ್ಬನ್-C, ಹೈಡ್ರೋಜನ್-H, ಬೆಳ್ಳಿ-Ag, ಮೆಗ್ನೀಷಿಯಂ-Mg, ಆಮ್ಲಜನಕ-O ಇತ್ಯಾದಿ. ಎಲ್ಲಾ ಧಾತುಗಳನ್ನು ವೈಜ್ಞಾನಿಕವಾಗಿ 7 ಸಾಲುಗಳು ಮತ್ತು 18 ಕಂಬಸಾಲುಗಳ ಕೋಷ್ಟಕದಲ್ಲಿ ಜೋಡಿಸಲಾಗಿದೆ. ಇದನ್ನೇ ಆವರ್ತ ಕೋಷ್ಟಕ ಎನ್ನಲಾಗುತ್ತದೆ. ನಮಗೆ ತಿಳಿದಿರುವ ಧಾತುಗಳು 118. ಇವುಗಳಲ್ಲಿ 94 ಭೂಮಿಯ ಮೇಲೆ ನೈಸರ್ಗಿಕವಾಗಿ ದೊರಕುತ್ತವೆ. ಉಳಿದ 24 ಧಾತುಗಳನ್ನು ಸಂಶ್ಲೇಷಿಸಲಾಗಿದೆ. ಈ ಧಾತುಗಳು ನಿಗದಿತ ಅನುಪಾತದಲ್ಲಿ ಸೇರಿ ಸಂಯುಕ್ತ ವಸ್ತುಗಳಾಗಿ ರೂಪುಗೊಳ್ಳುತ್ತವೆ. ಉದಾಹರಣೆಗೆ, ನೀರು ನಮ್ಮ ಭೂಮಿಯ ಮೇಲೆ ಸಿಗುವ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ. ಹೈಡ್ರೋಜನ್ ಹಾಗೂ ಆಮ್ಲಜನಕ ನಿರ್ದಿಷ್ಟ ಅನುಪಾತದಲ್ಲಿ ಸೇರಿ ವಿಶಿಷ್ಟ ಸಂಯುಕ್ತವಾಗಿ ನೀರು-H₂O ರೂಪುಗೊಂಡಿದೆ.

ಆವರ್ತ ಕೋಷ್ಟಕದಲ್ಲಿ ಧಾತುಗಳನ್ನು ಅವುಗಳ ಪರಮಾಣು ಸಂಖ್ಯೆಯ ಏರಿಕೆ ಕ್ರಮದಲ್ಲಿ ಆರೋಹಣ ಮಾಡಲಾಗಿದೆ. ಒಂದು ಪರಮಾಣುವಿನಲ್ಲಿ ಹಲವಾರು ಉಪಪರಮಾಣು ಘಟಕಗಳಿವೆ. ಇವುಗಳಲ್ಲಿ ಪ್ರಮುಖವಾಗಿ ಪ್ರೋಟಾನ್‌, ನ್ಯೂಟ್ರಾನ್‌ ಮತ್ತು ಎಲೆಕ್ಟ್ರಾನ್‌ಗಳ ಬಗ್ಗೆ ನಮಗೆ ತಿಳಿದಿದೆ. ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿರುವ ಪ್ರೋಟಾನ್‌ಗಳ ಸಂಖ್ಯೆಯೇ ಪರಮಾಣು ಸಂಖ್ಯೆ. ಕೋಷ್ಟಕದ ಪ್ರತಿ ಲಂಬ ಕಾಲಂನಲ್ಲಿ ಒಂದೇ ರೀತಿಯ ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವ ಧಾತುಗಳನ್ನು ಇರಿಸಲಾಗಿದೆ. ಈ ಧಾತುಗಳು ಅವುಗಳ ಪರಮಾಣುಗಳ ಹೊರಗಿನ ಕಕ್ಷೆಯಲ್ಲಿ ಒಂದೇ ರೀತಿಯ ವೇಲೆನ್ಸಿ ಎಲೆಕ್ಟ್ರಾನ್‌ಗಳನ್ನು ಹೊಂದಿರುತ್ತವೆ.

ಅಪರೂಪದ ಭೂಮಿಧಾತುಗಳು 17 ಲೋಹೀಯ ಧಾತುಗಳ ಗುಂಪಾಗಿದೆ. ಇವುಗಳಲ್ಲಿ ಆವರ್ತ ಕೋಷ್ಟಕದಲ್ಲಿನ 15 ಲ್ಯಾಂಥನಾಯ್ಡ್‌ಗಳ ಜೊತೆಗೆ ಸ್ಕ್ಯಾಂಡಿಯಮ್ ಮತ್ತು ಯಟ್ರಿಯಮ್ ಸೇರಿವೆ. ಆವರ್ತ ಕೋಷ್ಟಕದಲ್ಲಿ ಇವುಗಳು 57ನೇ ಲ್ಯಾಂಥನಮ್‌ನಿಂದ 71ನೇ ಲುಟೆಟಿಯಮ್‌ವರೆಗಿನ ಪರಮಾಣು ಸಂಖ್ಯೆಯನ್ನು ಹೊಂದಿವೆ. ಇವುಗಳನ್ನು ಅಧಿಕೃತವಾಗಿ “ಲ್ಯಾಂಥನಾಯ್ಡ್‌ಗಳು” ಎಂದೂ ಕರೆಯಲಾಗುತ್ತದೆ. ಅಪರೂಪದ ಭೂಮಿಧಾತುಗಳ ಪಟ್ಟಿ ಈ ಕೆಳಕಂಡಂತಿದೆ:

ಲ್ಯಾಂಥನಾಯ್ಡ್‌ಗಳು — ಲ್ಯಾಂಥನಮ್, ಸೀರಿಯಮ್, ಪ್ರೋಸಿಯೋಡೈಮಿಯಮ್, ನಿಯೋಡೈಮಿಯಮ್, ಪ್ರೊಮಿಥಿಯಮ್, ಸಮಾರಿಯಮ್, ಯುರೋಪಿಯಮ್, ಗ್ಯಾಡೋಲಿನಿಯಮ್, ಟೆರ್ಬಿಯಮ್, ಡಿಸ್ಪ್ರೋಸಿಯಮ್, ಹೋಲ್ಮಿಯಮ್, ಎರ್ಬಿಯಮ್, ಥುಲಿಯಮ್, ಯಟರ್ಬಿಯಮ್, ಲುಟೆಷಿಯಮ್, ಸ್ಕ್ಯಾಂಡಿಯಮ್ ಮತ್ತು ಯಟ್ರಿಯಮ್.



1993ರಲ್ಲಿ REEಗಳ ವಿಶ್ವ ಉತ್ಪಾದನೆಯಲ್ಲಿ ಶೇಕಡಾ 38 ಚೀನಾದಲ್ಲಿ, ಶೇಕಡಾ 33 ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಶೇಕಡಾ 12 ಆಸ್ಟ್ರೇಲಿಯಾದಲ್ಲಿ ಮತ್ತು ತಲಾ ಶೇಕಡಾ 5 ಮಲೇಶಿಯಾ ಹಾಗೂ ಭಾರತದಲ್ಲಿತ್ತು. ಬ್ರೆಜಿಲ್, ಕೆನಡಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸೇರಿದಂತೆ ಹಲವಾರು ಇತರೆ ದೇಶಗಳು ಉಳಿದ ಉತ್ಪಾದನೆಗೆ ಕಾರಣವಾಗಿವೆ. 2018ರಲ್ಲಿ ಚೀನಾ REEಗಳ ವಿಶ್ವ ಉತ್ಪಾದನೆಯಲ್ಲಿ 90% ಕ್ಕಿಂತ ಹೆಚ್ಚಿನ ಸ್ವಾಮ್ಯವನ್ನು ಹೊಂದಿತ್ತು.

REEಗಳ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇವು ವೇಗವರ್ಧಕ, ಕಾಂತೀಯ ಮತ್ತು ಪ್ರಕಾಶಕ ಗುಣಲಕ್ಷಣಗಳನ್ನು ಹೊಂದಿವೆ. ಆದ್ದರಿಂದ ವೈವಿಧ್ಯಮಯ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಬಳಕೆಯಾಗುತ್ತಿವೆ. ಸಂವಹನ, ರಕ್ಷಣೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವ್ಯಾಪಕ ಶ್ರೇಣಿಯ ಅವಶ್ಯಕತೆಗಳಿಗೆ ಬಳಸಲಾಗುತ್ತಿವೆ.

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಸಾಮರ್ಥ್ಯದ ಆಯಸ್ಕಾಂತಗಳು, ಒತ್ತಡ ಮಾಪಕಗಳು, ಪರಿವರ್ತಕಗಳಲ್ಲಿ ಇವುಗಳನ್ನು ಬಳಸಲಾಗುತ್ತಿದೆ. ಟಿವಿ ಪರದೆಗಳು, ಕಂಪ್ಯೂಟರ್ ಸ್ಕ್ರೀನ್‌ಗಳು, ಮಾನಿಟರ್‌ಗಳು, ಕ್ಯಾಮೆರಾ ಲೆನ್ಸ್‌ಗಳು, ಬೆಳಕು ಹೊರಸೂಸುವ ದೀಪಗಳಲ್ಲಿಯೂ ಬಳಸಲಾಗುತ್ತದೆ. ಕಚ್ಚಾತೈಲವನ್ನು ಸಂಸ್ಕರಿಸುವುದನ್ನು ಹೆಚ್ಚು ಪರಿಣಾಮಕಾರಿಯಾಗಿಸುವಲ್ಲಿ ಹಾಗೂ ವಿಶೇಷ ಲೋಹ ಮಿಶ್ರಲೋಹಗಳಲ್ಲಿಯೂ ಇವುಗಳನ್ನು ಬಳಸಲಾಗುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿ ಪೋರ್ಟಬಲ್ ಎಕ್ಸ್‌ರೇ ಯಂತ್ರಗಳು, ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್‌, ಕಾಂಟ್ರಾಸ್ಟ್ ಏಜೆಂಟ್‌ಗಳು, ನ್ಯೂಕ್ಲಿಯರ್ ಮೆಡಿಸಿನ್ ಇಮೇಜಿಂಗ್‌, ಜೆನೆಟಿಕ್ ಸ್ಕ್ರೀನಿಂಗ್ ಪರೀಕ್ಷೆಗಳು, ವೈದ್ಯಕೀಯ ಮತ್ತು ದಂತ ಲೇಸರ್‌ಗಳಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಕೈಗಾರಿಕಾ ಅನ್ವಯಗಳು

ನಿಯೋಡೈಮಿಯಮ್, ಪ್ರೋಸಿಯೋಡೈಮಿಯಮ್ ಮತ್ತು ಡಿಸ್ಪ್ರೋಸಿಯಮ್‌ಗಳನ್ನು ಹೆಚ್ಚಿನ ಕಾರ್ಯಕ್ಷಮತೆಯ ಶಾಶ್ವತ ಆಯಸ್ಕಾಂತಗಳಲ್ಲಿ ಬಳಸಲಾಗುತ್ತದೆ. ಅವು ವಿದ್ಯುತ್ ವಾಹನ ಮೋಟಾರ್‌ಗಳು, ಗಾಳಿಯಂತ್ರಗಳು, ಜನರೇಟರ್‌ಗಳು, ರೋಬೋಟಿಕ್ಸ್ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಅತ್ಯಗತ್ಯವಾಗಿವೆ.

ನವೀಕರಿಸಬಹುದಾದ ಇಂಧನ ಮತ್ತು ವಾಹನಗಳು

ಹೈಬ್ರಿಡ್/ಎಲೆಕ್ಟ್ರಿಕ್ ವಾಹನ ಮೋಟಾರ್‌ಗಳು ಮತ್ತು ವಿಂಡ್ ಟರ್ಬೈನ್‌ಗಳ ದಕ್ಷತೆ ಹೆಚ್ಚಿಸುವಲ್ಲಿ ಇವು ಅತ್ಯಗತ್ಯ. ಹೊರಸೂಸುವಿಕೆಯ ನಿಯಂತ್ರಣಕ್ಕಾಗಿ ವೇಗವರ್ಧಕ ಪರಿವರ್ತಕಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ.

ರಕ್ಷಣಾ ವ್ಯವಸ್ಥೆಗಳು

ಮಾರ್ಗಸೂಚಕ ವ್ಯವಸ್ಥೆಗಳು, ಜೆಟ್ ಫೈಟರ್‌ಗಳು, ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಮತ್ತು ರಾಡಾರ್‌ಗಳಲ್ಲಿಯೂ ಬಳಸಲಾಗುತ್ತಿದೆ.

 

 

Saturday, April 4, 2026

ಬುದ್ಧಿವಂತಿಕೆ ಹಾಗೂ ಅದರ ವ್ಯಾಪ್ತಿ

ಬುದ್ಧಿವಂತಿಕೆ ಹಾಗೂ ಅದರ ವ್ಯಾಪ್ತಿ 


 ಲೇಖಕರು : ಬಿ .ಎನ್. ರೂಪ, ಸಹಶಿಕ್ಷಕರು,

 ಕೆ.ಪಿ.ಎಸ್.‌ ಜೀವನ್‌ ಭೀಮನಗರ

 ಬೆಂಗಳೂರು ದಕ್ಷಿಣ ವಲಯ -4

 



 ಬುದ್ಧಿವಂತಿಕೆ ಎನ್ನುವುದು ಕೇವಲ ಜ್ಞಾನಾತ್ಮಕ ವಲಯಕ್ಕೆ, ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಅಂಕಗಳಿಸುವುದಕ್ಕಾಗಿ ಮಾತ್ರ ಸೀಮಿತವಲ್ಲ. ಇದು ಅದಕ್ಕಿಂತಲೂ ಮಿಗಿಲಾಗಿದೆ. ಭೂಮಂಡಲದಲ್ಲಿರುವ ಹಲವು ಬಗಯ ಜೀವಿಗಳಲ್ಲಿ ಒಂದು ಇರುವೆಯನ್ನು ಉದಾಹರಣೆಗೆ ತೆಗೆದುಕೊಳ್ಳಿ. ಇರುವೆಗಳ ಸಾಮರಸ್ಯ ಜೀವನ, ಆಹಾರ ಸಂಗ್ರಹಣೆಯ ವಿಧಾನ, ಫೆರೋಮೋನ್ಗಳ ಸ್ರವಿಕೆಯಿಂದ ಆಗುವ ಕಾರ್ಯಗಳು, ನಿರ್ದಿಷ್ಟ ಗುರಿಯನ್ನು ಸಾಧಿಸುವ ರೀತಿ, ಶ್ರಮ ಜೀವನವನ್ನು ನೋಡಿದಾಗ ಇರುವೆ ನಿಜಕ್ಕೂ ಬುದ್ಧಿವಂತ ಪ್ರಾಣಿ ಎನ್ನುತ್ತೇವೆ. ಹಾಗೆ, ಸಕಲ ಜೀವರಾಶಿಯನ್ನು ಪ್ರತಿನಿಧಿಸುವ ಪ್ರತಿಯೊಂದು ಜೀವಿಯು ಅದರದೇ ಆದ ಬುದ್ಧಿವಂತಿಕೆ, ಕಲಾತ್ಮಕತೆ, ಸೃಜನಶೀಲತೆ, ಕ್ರಿಯಾತ್ಮಕತೆ, ಚಿಂತನೆ ಮಾಡುವ ಶೈಲಿ, ಜೀವನ ಶೈಲಿ,ಆವಾಸ ಸ್ಥಳವನ್ನು ನಿರ್ಮಾಣ ಮಾಡುವ ರೀತಿ, ವಿಭಿನ್ನ ರೀತಿಯಲ್ಲಿ ಯೋಚನೆ ಮಾಡುವ ಪರಿ ನೋಡಿದಾಗ, ಬುದ್ಧಿವಂತಿಕೆ(INTELIGENCE) ಎಂಬಪದಕ್ಕೆ ವ್ಯಾಖ್ಯಾನ ನೀಡುವುದು ಸ್ವಲ್ಪ ಮಟ್ಟಿಗೆ ಕಷ್ಟದಾಯಕವೂ ಹೌದು. ಏಕೆಂದರೆ, ಇದು ಬಹಳ ವೈವಿಧ್ಯಪೂರ್ಣ ಮಜಲುಗಳನ್ನು ಒಳಗೊಂಡಿದೆ. ಮಾನವರಲ್ಲಿ ವೀಕ್ಷಿಸಿದಾಗ ಬುದ್ಧಿವಂತಿಕೆ ಎನ್ನುವುದು ಒಬ್ಬ ವ್ಯಕ್ತಿಯ ವರ್ತನೆ, ಆಲೋಚಿಸುವ ಪರಿ, ಭಾಷೆಯ ಮೇಲಿನ ಹಿಡಿತ ಹಾಗೂ ಪ್ರೌಢಿಮೆ ,ತಾರ್ಕಿಕವಾಗಿ ಯೋಚಿಸಿ ಕ್ರಮಬದ್ಧವಾಗಿ ನಿರ್ವಹಿಸುವ ರೀತಿ, ಆತ್ಮಾನುಭೂತಿ, ಸಹಾನುಭೂತಿ, ಅಂತರ್ವ್ಯಕ್ತಿ ಸಂಬಂಧಗಳನ್ನು ನಿರ್ವಹಿಸುವುದು, ಹೀಗೆ ಹಲವಾರು ಮಜಲುಗಳನ್ನು ಒಳಗೊಂಡಿದೆ ಎನ್ನಬಹುದು.

ಮಾನವ ಸದ್ಯಕ್ಕೆ ತನ್ನನ್ನು ತಾನು ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಕೊಂಡಿದ್ದಾನೆ. ತನ್ನ ಚತುರ ಬುದ್ಧಿವಂತಿಕೆಯಿಂದ ಬಾಹ್ಯಾಕಾಶಕ್ಕೆ ಲಗ್ಗೆ ಇಟ್ಟಿದ್ದಾನೆ, ಸಮುದ್ರದ ಆಳದಲ್ಲಿ ಏನಿದೆ ಎಂದು ಅನ್ವೇಷಿಸುತ್ತಿದ್ದಾನೆ. ಪ್ರತಿದಿನ ಹೊಸ ಅನ್ವೇಷಣೆ, ಆವಿಷ್ಕಾರ, ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಬುದ್ಧಿವಂತಿಕೆಯು ವೈವಿಧ್ಯಪೂರ್ಣವಾಗಿದೆ. ಆದರೆ, ಭೂಮಿಯ ಮೇಲಿರುವ ಸಕಲ ಜೀವರಾಶಿಯನ್ನು ನೋಡಿದಾಗ ಎಲ್ಲಾ ಜೀವಿಗಳು ತಮ್ಮದೇ ಆದ ರೀತಿಯಲ್ಲಿ ಬುದ್ಧಿವಂತಿಕೆಯನ್ನು ಹೊಂದಿವೆ ಎನ್ನಬಹುದು.

ಹಾರ್ವರ್ಡ ಗರ್ಡ್ನ ಪ್ರಕಾರ ಬುದ್ಧಿವಂತಿಕೆಯನ್ನು ಹಲವಾರು ವಿಧಗಳಲ್ಲಿ ಅಧ್ಯಯನ ಮಾಡಬಹುದು, ಭಾಷಾ ಬುದ್ಧಿಮತ್ತೆ, ತಾರ್ಕಿಕ ,ಗಣಿತ, ಪ್ರಾದೇಶಿಕ, ಸಂಗೀತ, ದೈಹಿಕ ಚಲನಶಾಸ್ತ್ರೀಯ, ನೈಸರ್ಗಿಕವಾದಿ, ಅಸ್ತಿತ್ವವಾದದ ವ್ಯಕ್ತಿಗತ ವಿಧಗಳನ್ನು ಒಳಗೊಂಡಿದೆ.

ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯು ಹೊಂದಿಕೊಳ್ಳುವ, ತರ್ಕಿಸುವ, ತಾರ್ಕಿಕವಾಗಿ ಯೋಚಿಸುವ, ಪರಿಸರದೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಮತ್ತು ಪರಿಸರದ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಅಮೂರ್ತವಾಗಿ ಆಲೋಚಿಸುವುದನ್ನು ಸಹ ಇದು ಬಿಂಬಿಸುತ್ತದೆ. Intelligence ಎಂಬ ಪದವು ಲ್ಯಾಟಿನ್ಪದ Inteligere “ to understand” ಎಂಬ ಪದದಿಂದ ನಿಷ್ಪತ್ತಿಯಾಗಿದೆ. ಸಾಮಾನ್ಯವಾಗಿ ಬುದ್ಧಿವಂತಿಕೆಯನ್ನು ಮೂರು ವಿಧಗಳಲ್ಲಿ ವರ್ಗಿಕರಿಸಿ ಅಧ್ಯಯನ ಮಾಡಲಾಗಿದೆ,                           

      

1. ಮೂರ್ತ ಅಥವಾ ಯಾಂತ್ರಿಕ ಬುದ್ಧಿವಂತಿಕೆ:-

ಈ ರೀತಿಯ ಬುದ್ಧಿಮತ್ತೆಯು ಒಬ್ಬ ವ್ಯಕ್ತಿಯು ಅರ್ಥೈಸುವ, ವಸ್ತು, ಯಂತ್ರೋಪಕರಣಗಳು, ಉಪಕರಣಗಳನ್ನು, ಸಮರ್ಥವಾಗಿ ಬಳಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಮೆಕ್ಯಾನಿಕ್, ತಂತ್ರಜ್ಞರು ,ಇಂಜಿನಿಯರ್, ಕುಶಲಕರ್ಮಿಗಳಲ್ಲಿ ಭೌತಿಕ ವಸ್ತುಗಳೊಂದಿಗೆ ಜಾಣ್ಮೆಯಿಂದ ಕಾರ್ಯ ನಿರ್ವಹಿಸುವ ಬುದ್ಧಿವಂತಿಕೆಯನ್ನು ಇದು ಪ್ರತಿನಿಧಿಸುತ್ತದೆ.

2.ಸಾಮಾಜಿಕ ಅಥವಾ  ಭಾವನಾತ್ಮಕ ಬುದ್ಧಿವಂತಿಕೆ:-

ಈ ರೀತಿಯ ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯು ತನ್ನ ಸಾಮಾಜಿಕ ಸನ್ನಿವೇಶಗಳನ್ನು ನಿಭಾಯಿಸುವ ಸಾಮರ್ಥ್ಯ, ಇತರರೊಂದಿಗೆ ಹೊಂದಿರುವ ಸಂಬಂಧ, ತನ್ನ ಸ್ವಂತ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಂಡು ಸೌಹಶರ್ದತೆಯಿಂದ ಕೂಡಿ ಬಾಳಲು ಸಹಾಯ ಮಾಡುತ್ತದೆ.ಉತ್ತಮ ಬಾಂಧವ್ಯವನ್ನು ಹೊಂದಲು ತನ್ನ ವೃತ್ತಿಜೀವನ, ಕುಟುಂಬ, ಸ್ನೇಹಿತರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಬುದ್ಧಿವಂತಿಕೆಯನ್ನು ಇದು ಪ್ರತಿನಿಧಿಸುತ್ತದೆ. ಈ ರೀತಿಯ ಕೌಶಲ್ಯಗಳನ್ನು ಒಬ್ಬ ವ್ಯಕ್ತಿಯು ಸಮಯದೊಂದಿಗೆ ಕಲಿತು ಸುಧಾರಿಸಬಹುದಾಗಿದೆ.

3.ಅಮೂರ್ತ ಬುದ್ಧಿವಂತಿಕೆ ಅಥವಾ ಸಾಮಾನ್ಯ ಬುದ್ಧಿವಂತಿಕೆ:-

ಈ ರೀತಿಯ ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯ ಒಟ್ಟಾರೆ ಮಾನಸಿಕ ಸಾಮರ್ಥ್ಯವನ್ನು ಸೂಚಿಸುತ್ತದೆ. ಇದು ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಲ್ಲ, ತಾರ್ಕಿಕ ಚಿಂತನೆ, ಸಮಸ್ಯೆ ಬಗೆಹರಿಸುವುದು, ಹೊಸ ವಿಷಯಗಳನ್ನು ಕಲಿಯುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಮೊದಲೇ ಕಲಿತ ಜ್ಞಾನದ ಸಹಾಯವಿಲ್ಲದೆ ಹೊಸ ಸಂದರ್ಭಗಳಲ್ಲಿ ತರ್ಕಬದ್ಧವಾಗಿ ಯೋಚಿಸುವುದೇ ಆಮೂರ್ತ ಬುದ್ಧಿವಂತಿಕೆ. ಈ ರೀತಿಯ ಬುದ್ಧಿವಂತಿಕೆಯು ಸಂಕೀರ್ಣ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ, ಹೊಸ ಆವಿಷ್ಕಾರಗಳನ್ನು ಮಾಡಲು, ಒಗಟು ಬಿಡಿಸಲು ವಿಷಯಗಳನ್ನು ವಿಶ್ಲೇಷಣಾತ್ಮಕವಾಗಿ ಆಲೋಚಿಸುವುದನ್ನು ಇದು ಪ್ರತಿನಿಧಿಸುತ್ತದೆ.

ಶತಮಾನಗಳವರೆಗೆ ವ್ಯಕ್ತಿಯ ಬುದ್ಧಿವಂತಿಕೆಯನ್ನು ಮಾನದಂಡವಾಗಿ ಇರಿಸಿದ್ದ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದವ ಹೆಚ್ಚು ಸಮರ್ಥ ಎಂದು ಭಾವಿಸಲಾಗುತ್ತಿತ್ತು. ಸಾಮರ್ಥ್ಯದ ಮಟ್ಟವನ್ನು ಪುಸ್ತಕದ ಜ್ಞಾನದ ವಲಯಗಳಿಂದ ಅಳೆಯಲಾಗುತ್ತಿತ್ತು. ಆದರೆ. ಮಾನವನ ಬುದ್ಧಿವಂತಕೆ ಕೇವಲ ಜ್ಞಾನಾತ್ಮಕ ವಲಯಕ್ಕೆ ಸೀಮಿತವಾಗಿಲ್ಲ, ಬುದ್ಧಿವಂತಿಕೆಯ ಪ್ರಮಾಣದ ಅಳೆಯುವ ಮಾನದಂಡವಾಗಬಾರದು. ಸಾಮಾನ್ಯವಾಗಿ ಬುದ್ಧಿವಂತಿಕೆಯ ಪ್ರಮಾಣವನ್ನು ನಾಲ್ಕು ವಿಧಗಳಲ್ಲಿ ಅಳೆಯಲಾಗುತ್ತದೆ.

ಬುದ್ಧಿಮತ್ತೆಯ ಪ್ರಮಾಣ-IQ Intelligence quotient

ಭಾವನಾತ್ಮಕ ಪ್ರಮಾಣ-EQ Emotional quotient

ಸಾಮಾಜಿಕ ಪ್ರಮಾಣ-SQ Social quotient

ಪ್ರತಿಕೂಲ ಪ್ರಮಾಣ-AQ Adverse quotient.

1.ಬುದ್ಧಿಮತ್ತೆಯ ಪ್ರಮಾಣ-IQ Intelligence quotient:-

ಬುದ್ಧಿಮತ್ತೆಯ ಅಂಶ ಎಂಬುದು ಬುದ್ಧಿಶಕ್ತಿಯನ್ನು ನಿರ್ಣಯಿಸಲು ಸಿದ್ಧಪಡಿಸಿರುವ ಪ್ರಮಾಣಿಕೃತ ಪರೀಕ್ಷೆಗಳನ್ನು ಒಳಗೊಂಡಿದೆ. ಇದನ್ನು ಐಕ್ಯೂ ()_ಎಂದು ಸಂಷೇಪಿಸಲಾಗುತ್ತದೆ. ಇದನ್ನು ಕಂಡು ಹಿಡಿಯಲು ಒಬ್ಬ ವ್ಯಕ್ತಿಯ ಮಾನಸಿಕ ವಯಸ್ಸನ್ನು ಕಾಲಾನುಕ್ರಮದ ವಯಸ್ಸಿನಿಂದ ಭಾಗಿಸಿ ಪಡೆದ ರಾವೆನ್ಸ ಪ್ರೋಗ್ರೆಸ್ಸಿವ್‌ ಮ್ಯಾಟ್ರಿಕ್ಸ್() ಅನ್ನು ಬಳಸಲಾಗುತ್ತದೆ.

ವೆಚ್ಲರ್ಸ್ ವಯಸ್ಕರ ಬುದ್ಧಿಮತ್ತೆ ಮಾಪಕ

ಸ್ಟ್ಯಾನ್‌ಫೋರ್ಡ್-ಬಿನೆಟ್ ಬುದ್ಧಿಮತ್ತೆಪರೀಕ್ಷೆ

ವುಡ್‌ಕಾಕ್ಸ ಜಾನ್ಸನ್ ಅರಿವಿನ ಸಾಮರ್ಥ್ಯಗಳ ಪರೀಕ್ಷೆಗಳು

ನಾಗ್ಲಿಯೇರಿ ಅಮೌಖಿಕ ಸಾಮರ್ಥ್ಯ ಪರೀಕ್ಷೆ

ಕೌಫ್‌ಮನ್‌ ಸಂಕ್ಷಿಪ್ತ ಬುದ್ಧಿಮತ್ತೆ ಪರೀಕ್ಷೆ

ರೆನಾಲ್ಡ್ಸ್‌ ಭೌದ್ಧಿಕ ಮೌಲ್ಯಮಾಪನ ಪಲಿತಾಂಶವನ್ನು ನೂರರಿಂದ ಗುಣಿಸಿದಾಗ  IQ ದೊರೆಯುತ್ತದೆ.

 

ವೆಚ್ಲರ್ಸ್‌ ಮಾಪಕದ ಪ್ರಕಾರ

130  ಮತ್ತು ಅದಕ್ಕಿಂತ ಹೆಚ್ಚಿನ ಪ್ರತಿಭಾನ್ವಿತ, 120-129 ಉನ್ನತ, 110-119 ಉನ್ನತ ಸರಾಸರಿ,90-109 ಸರಾಸರಿ

80-89 ಕಡಿಮೆ ಸರಾಸರಿ,70-79 ಗಡಿರೇಖೆ, 60-69 ತುಂಬಾಕಡಿಮೆ.

ಪರಿಸರ ಅಂಶಗಳು, ಶಿಕ್ಷಣ ಮತ್ತು ಪೋಷಣೆಯಿಂದ ಅರಿವಿನ ಸಾಮರ್ಥ್ಯ ತಾರ್ಕಿಕತೆ, ತರ್ಕ,ಸ್ಮರಣೆ ಇವು ಪ್ರಭಾವಿತವಾಗಿರುತ್ತದೆ.

2.ಭಾವನಾತ್ಮಕಪ್ರಮಾಣ  -EQ Emotional quotient:-

ಭಾವನಾತ್ಮಕ ಬುದ್ಧಿವಂತಿಕೆಯನ್ನು ಭಾವನಾತ್ಮಕ ಅಂಶ ಎನ್ನಲಆ.ಗುತ್ತದೆ. ಇತರರ ಭಾವನೆಗಳನ್ನು ಗ್ರಹಿಸುವ, ಸಹಾನುಭೂತಿಯನ್ನು ತೋರಿಸುವ, ಇತರರೊಂದಿಗೆ ವಿವೇಚನೆಯಿಂದ ನಡೆದುಕೊಳ್ಳುವುದು, ತಮ್ಮ ಸ್ವಂತ ಭಾವನೆಗಳ ಮೇಲೆ ನಿಗ್ರಹ, ಹಿಡಿತವನ್ನು ಹೊಂದಿರುವುದನ್ನುಇದುಪ್ರತಿನಿಧಿಸುತ್ತದೆ. EQ-ನಾವು ಕಲಿಯಲು ಬಹು ದು ಹಾಗೂ ಬಲಪಡಿಸಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ IQ ಗಿಂತ EQ ಹೊಂದಿರುವವರನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ. .ಕೆಲಸದ ಒತ್ತಡದಲ್ಲಿ ಕಾರ್ಯಕ್ಷಮತೆಯ ದಕ್ಷತೆಯನ್ನು ಹೊಂದಿರುವವರನ್ನು ಆಯ್ಕೆ ಮಾಡಿಕೊಳ್ಳುವ ಕಾರಣ ಇರಬಹುದು. ಹಿನ್ನೆಲೆಯಲ್ಲಿ ಪರಿಣಾಮಕಾರಿ ನಾಯಕರಾಗಲು EQ ಅಭಿವೃದ್ಧಿ ಪಡಿಸುವ ವಿಧಾನಗಳನ್ನು ಹುಡುಕಲಾಗುತ್ತಿದ ಇದು ಆರೋಗ್ಯಪೂರ್ಣ ಸಂಬಂಧ, ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಸಂಬಂಧ ಹೊಂದಲು ಮಾನಸಿಕವಾಗಿ ಸಿದ್ಧಪಡಿಸುತ್ತದೆ.

3.ಸಾಮಾಜಿಕಪ್ರಮಾಣ -SQ Social quotient:-

ಸಾಮಾಜಿಕ ಬುದ್ಧಿವಂತಿಕೆಯನ್ನು ಸಾಮಾಜಿಕ ಅಂಶ ಎಂದು ಸಹ ಉಲ್ಲೇಖಿಸಲಾಗಿದೆ. ಸಮಾಜದಲ್ಲಿ ಇತರರೊಂದಿಗೆ ತಮ್ಮ ಸಂಬಂಧ, ಸಾಮಾಜಿಕ ಸನ್ನಿವೇಶಗಳನ್ನು ನಿಭಾಯಿಸುವ, ಕ್ಲಿಷ್ಟ ಸನ್ನಿವೇಶಗಳನ್ನು ಅರ್ಥೈಸಿಕೊಂಡು ನಿಭಾಯಿಸುವ ಸಾಮರ್ಥ್ಯದ ಅಳತೆಯಾಗಿದೆ. ಇದು ಬುದ್ಧಿಶಕ್ತಿ ಮತ್ತು ಭಾವನಾತ್ಮಕ ಬುದ್ಧಿಶಕ್ತಿಗಿಂತ ಭಿನ್ನ. ಇದನ್ನು ವ್ಯಕ್ತಿಯ ಸಾಮಾಜಿಕ ವಯಸ್ಸು ಮತ್ತು ನಿಜವಾದ ವಯಸ್ಸಿನ ಅನುಪಾತದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಉತ್ತಮ ಸಂವಹನ ಕಲೆ,ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಗುಣ, ತಂಡದಲ್ಲಿ ಕಾರ್ಯ ನಿರ್ವಹಿಸುವುದು ಪರಾನುಭೂತಿ, ಇವು ಇದರ ಮುಖ್ಯ ಲಕ್ಷಣಗಳಾಗಿವೆ.


4.ಪ್ರತಿಕೂಲಪ್ರಮಾಣ-AQ Adverse quotient:-

ಇದು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳು, ಒತ್ತಡಗಳು, ಅಡೆತಡೆಗಳನ್ನು ಎದುರಿಸುವ ಸಾಮರ್ಥ್ಯದ ಅಳತೆಯಾಗಿದೆ.ಇದನ್ನು ಸಂಕಷ್ಟ ಎದುರಿಸುವ ಗುಣಾಂಕ ಎಂದು ಸಹ ಉಲ್ಲೇಖಿಸಲಾಗುತ್ತದೆ . ಅನೇಕ ಬಾರಿ ಐಕ್ಯೂಗಿಂತ ಎಕ್ಯೂ ಬಹುಮುಖ್ಯ ಎಂದು ಪರಿಗಣಿಸಲಾಗುತ್ತದೆ. ಸಂಕಷ್ಟ ಪರಿಸ್ಥಿತಿಗಳನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸಬಲ್ಲರು, ಜವಾಬ್ದಾರಿಯನ್ನು ಹೊರುವುದು. ಸಂಕಷ್ಟ ಪರಿಸ್ಥಿತಿಗಳು ಯಾವ ರೀತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ,ಈ ಪರಿಸ್ಥಿತಿಯ ಕಾಲವೆಷ್ಟು ? ಈ ಪರಿಸ್ಥಿತಿ ನಿಭಾಯಿಸುವುದು ಹೇಗೆ ? ಎಂಬ ನಾಲ್ಕು ಆಯಾಮಗಳಿಂದ ಇದನ್ನು ಗುರುತಿಸಬಹುದು. ಸುಲಭವಾಗಿ ಹೇಳುವುದಾದರೆ ಸೋಲನ್ನು ಗೆಲವನ್ನಾಗಿ ಮಾಡಿಕೊಳ್ಳುವ ಕಲೆಯನ್ನು ಇದು ಬಿಂಬಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಯನ್ನು ಹೀಗೆ ಎಂದು ಅಳೆಯಲು ಪ್ರಮಾಣಿಸಲು ಸಾಧ್ಯವಿಲ್ಲ. ಆ ವ್ಯಕ್ತಿಯ ಜ್ಞಾನಾತ್ಮಕ ವಲಯ ಒಂದಾದರೆ, ತಾರ್ಕಿಕವಾಗಿ ಯೋಚಿಸುವ ಸಾಮರ್ಥ್ಯ, ಸ್ಮರಣೆಯನ್ನು ಹೊಂದಿರುವ ಸಾಮರ್ಥ್ಯ,ಅಮೂರ್ತ ಬುದ್ಧಿವಂತಿಕೆ, ವಿವಿಧ ಸನ್ನಿವೇಶಗಳಲ್ಲಿ ಅವನ ವರ್ತನೆ, ಚತುರತೆ, ಜವಾಬ್ದಾರಿ ತೆಗೆದುಕೊಳ್ಳುವುದು, ತನ್ನ ಕುಟುಂಬ ಸ್ನೇಹಿತ ವಲಯ ವೃತ್ತಿ ಜೀವನ ಸಹೋದ್ಯೋಗಿಗಳೊಂದಿಗೆ ಅವನ ವರ್ತನೆ, ಕೌಶಲ್ಯ, ವಿಭಿನ್ನ ಸಾಮಾಜಿಕ ಕ್ಲಿಷ್ಟ ಸನ್ನಿವೇಶಗಳನ್ನು ನಿಭಾಯಿಸುವ ಛಾತಿ, ಪರಾನುಭೂತಿ, ಅಡೆತಡೆಗಳನ್ನು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನೇ ಅವನ ಬುದ್ಧಿಶಕ್ತಿ ಎನ್ನಬಹುದು.

Wednesday, March 4, 2026

ಕಿರಣ್ ಮಜುಂದಾರ್-ಶಾ - ಶಿ ಪ್ರಿನರ್‌ಗಳ ಧ್ರುವತಾರೆ

  ಕಿರಣ್ ಮಜುಂದಾರ್-ಶಾ - ಶಿ ಪ್ರಿನರ್‌ಗಳ ಧ್ರುವತಾರೆ 

ಲೇಖಕರು :  ಬಿ.ಎನ್. ರೂಪ    

ಶಿಕ್ಷಕರು,

 KPS ಜೀವನ್‌ ಭೀಮ ನಗರ  

ಬೆಂಗಳೂರು ದಕ್ಷಿಣ ವಲಯ -4                                                  

                                                                  2026ರ ಮತ್ತೊಂದು ಅಂತರಾಷ್ಟ್ರೀಯ ಮಹಿಳಾ ದಿನ ಬಂದೇ ಬಿಟ್ಟಿದೆ. ಲಿಂಗ ಸಮಾನತೆ, ಮಹಿಳಾ ಸಾಧಕಿಯರನ್ನು ಗುರುತಿಸುವುದು ಮತ್ತು ಸನ್ಮಾನಿಸುವುದು ಈ ದಿನದ ಮುಖ್ಯ ಉದ್ದೇಶಗಳಾಗಿವೆ. ಅಂತರಾಷ್ಟ್ರೀಯ ಮಹಿಳಾ ದಿನ (IWD) ಮಹಿಳೆಯರ ಸಾಧನೆಗಳನ್ನು ಆಚರಿಸುವ ಜಾಗತಿಕ ದಿನವಾಗಿದೆ. 1975ರಲ್ಲಿ ವಿಶ್ವಸಂಸ್ಥೆಯು ಅಧಿಕೃತವಾಗಿ ಅಂಗೀಕರಿಸಿದರೂ, ಇದರ ಇತಿಹಾಸ 1900ರ ದಶಕದ ಆರಂಭದಿಂದಲೇ ಆರಂಭವಾಯಿತು.


2026ರ ಅಂತರಾಷ್ಟ್ರೀಯ ಮಹಿಳಾ ದಿನದ ಥೀಮ್ “Give To Gain” (ಗೆಲುವಿಗೆ ಕೊಡುಗೆ) ಆಗಿದ್ದು, ಹೇರಳವಾದ ದಾನ ಮತ್ತು ಕೊಡುಗೆಯ ಮೂಲಕ ಲಿಂಗ ಸಮಾನತೆಯನ್ನು ಸಾಧಿಸುವ ಕರೆಯಾಗಿದೆ. ಇದನ್ನು ಸಾಧಿಸಲು ಮಹಿಳೆಯರ ಆರ್ಥಿಕ ಸಬಲೀಕರಣ, ನಾಯಕತ್ವ ಗುಣಗಳನ್ನು ಬೆಳೆಸುವುದು, ವ್ಯವಹಾರ ಚತುರತೆ, ಗುಣಮಟ್ಟದ ಶಿಕ್ಷಣ, ಆರೋಗ್ಯ ಸುಧಾರಣೆ ಮತ್ತು ಆಹಾರ ಭದ್ರತೆಯತ್ತ ಗಮನ ಹರಿಸಬೇಕು.

ಕೇಂದ್ರ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರೋಗ್ಯವಂತರಾಗಿ ಸಬಲೀಕರಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಉದಾಹರಣೆಗೆ: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಜನನಿ ಸುರಕ್ಷಾ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಯೋಜನೆ, ಮಹಿಳಾ ಸನ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್, ಪ್ರಧಾನಮಂತ್ರಿ ಮುದ್ರಾ ಯೋಜನೆ, ಸ್ಟ್ಯಾಂಡ್ ಅಪ್ ಇಂಡಿಯಾ, ಮಹಿಳಾ ಶಕ್ತಿ ಕೇಂದ್ರ ಇತ್ಯಾದಿ.

ಇಂದಿನ ನವ ಭಾರತದಲ್ಲಿ ಮಹಿಳಾ ಉದ್ಯಮಶೀಲತೆ ವೇಗವಾಗಿ ಬೆಳೆಯುತ್ತಿದೆ. ಮಹಿಳಾ ಉದ್ಯಮಿಗಳ ಹೆಚ್ಚಳವು ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. “ಸ್ಟಾರ್ಟ್‌ಅಪ್ ಇಂಡಿಯಾ”ದಂತಹ ಉಪಕ್ರಮಗಳು ಮಹಿಳಾ ಉದ್ಯಮಶೀಲತೆಯನ್ನು ಬಲಪಡಿಸುತ್ತಿವೆ.

ಮಹಿಳಾ ದಿನಾಚರಣೆ ಹೊಸಲಿನಲ್ಲಿರುವಾಗ, ಕೇಂದ್ರ ಸರ್ಕಾರದ ಆರ್ಥಿಕ ಬಜೆಟ್‌ನಲ್ಲಿ ಮಹಿಳಾ ಉದ್ಯಮಿಗಳಾದ “ಶಿ ಪ್ರಿನರ್”ಗಳನ್ನು ಬೆಂಬಲಿಸುವ ವಿಶೇಷ ಪ್ಯಾಕೇಜ್‌ಗಳಿವೆ. ಇತ್ತೀಚಿಗೆ ಭಾರತದ ಪ್ರಮುಖ ಮಹಿಳಾ ಉದ್ಯಮಿಗಳಾದ ಫಲ್ಗುಣಿ ನಾಯಕ್ (Nykaa), ಕಿರಣ್ ಮಜುಂದಾರ್-ಶಾ (Biocon), ವಿನಿತಾ ಸಿಂಗ್ (Sugar Cosmetics), ಉಪಾಸನಾ ಠಾಕೂರ್ (MobiKwik), ರಾಧಿಕಾ ಗುಪ್ತಾ (Edelweiss Mutual Fund), ಗಜಲ್ ಅಲಾಘ್ (Mamaearth), ರಿಚಾ ಕರ್ (Zivame), ವಂದನಾ ಲೂಥರಾ (VLCC) ಮುಂತಾದವರು ಗಮನ ಸೆಳೆದಿದ್ದಾರೆ.

ಭಾರತದ ಪ್ರಗತಿಪರ ಉದ್ಯಮಿಗಳಲ್ಲಿ ಕಿರಣ್ ಮಜುಂದಾರ್-ಶಾ ಪ್ರಮುಖರು. 1953 ಮಾರ್ಚ್ 23ರಂದು ಬೆಂಗಳೂರಿನಲ್ಲಿ ಜನಿಸಿದರು. Biocon ಇಂಡಿಯಾ ಗ್ರೂಪ್‌ನ ಸಂಸ್ಥಾಪಕರು ಮತ್ತು ಎಕ್ಸಿಕ್ಯೂಟಿವ್ ಚೇರ್‌ಪರ್ಸನ್. ಯುನೈಟೆಡ್ ಬ್ರೂವರೀಸ್‌ನ ಬ್ರೂಮಾಸ್ಟರ್‌ನ ಮಗಳಾದ ಅವರು ತಂದೆಯ ಹಾದಿಯನ್ನು ಹಿಂಬಾಲಿಸಲು ಯೋಜಿಸಿದ್ದರು. 1973ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ ಬಿ.ಎಸ್ಸಿ. ಪದವಿ ಪಡೆದರು. 1975ರಲ್ಲಿ ಮೆಲ್ಬೋರ್ನ್‌ನ ಬಲ್ಲಾರತ್ ಕಾಲೇಜ್ (ಈಗ ಫೆಡರೇಶನ್ ಯೂನಿವರ್ಸಿಟಿ)ನಿಂದ ಮಾಲ್ಟಿಂಗ್ ಮತ್ತು ಬ್ರೂಯಿಂಗ್‌ನಲ್ಲಿ ಮಾಸ್ಟರ್ಸ್ ಪದವಿ ಪಡೆದ ಮೊದಲ ಮಹಿಳೆ ಎನಿಸಿಕೊಂಡರು.


ಭಾರತಕ್ಕೆ ಮರಳಿದ ನಂತರ ಬ್ರೂಯಿಂಗ್ ಕ್ಷೇತ್ರದಲ್ಲಿ ಮಹಿಳೆಗೆ ಉದ್ಯೋಗ ಸಿಗದಿದ್ದರಿಂದ ಸಲಹಾ ಕೆಲಸ ಮಾಡಿದರು. 1978ರಲ್ಲಿ ಐರಿಷ್ ಸಂಸ್ಥೆಯ ಬಯೋಕಾನ್ ಬಯೋಕೆಮಿಕಲ್ಸ್‌ನ ಮಾಲೀಕ ಲೆಸ್ಲಿ ಆಚಿನ್‌ಕ್ಲಾಸ್ ಅವರನ್ನು ಭೇಟಿಯಾಗಿ, ಭಾರತದಲ್ಲಿ ಎನ್‌ಜೈಮ್‌ಗಳ ಉತ್ಪಾದನಾ ಕಂಪನಿಯನ್ನು ಆರಂಭಿಸಿದರು — ಗ್ಯಾರೇಜ್‌ನಿಂದ ಪ್ರಾರಂಭವಾದ Biocon. ಇದು ಮೊದಲ ಭಾರತೀಯ ಕಂಪನಿಯಾಗಿ US FDA ಅನುಮೋದನೆ ಪಡೆದು, ಯುಎಸ್ ಮತ್ತು ಯುರೋಪ್‌ಗೆ ರಫ್ತು ಮಾಡಿತು.

ಆರಂಭದಲ್ಲಿ ಲಿಂಗ ತಾರತಮ್ಯ, ಹೂಡಿಕೆದಾರರ ಕೊರತೆ, ಮಾರಾಟ ಸವಾಲುಗಳನ್ನು ಎದುರಿಸಿದರು. 1989ರಲ್ಲಿ ಆಚಿನ್‌ಕ್ಲಾಸ್ ತನ್ನ ಪಾಲನ್ನು ಯೂನಿಲಿವರ್‌ಗೆ ಮಾರಿದರು; ನಂತರ ಇಂಪೀರಿಯಲ್ ಕೆಮಿಕಲ್ ಇಂಡಸ್ಟ್ರೀಸ್ ಮೂಲಕ ಅಂತಿಮವಾಗಿ ಅವರ ಪತಿ ಜಾನ್ ಶಾ (2022ರಲ್ಲಿ ನಿಧನರಾದರು) ಮೂಲಕ ಸಂಪೂರ್ಣ ನಿಯಂತ್ರಣ ಸಿಕ್ಕಿತು. 2004ರಲ್ಲಿ Biocon IPO ಮೂಲಕ ಗಗನಕ್ಕೇರಿತು; ಕಿರಣ್ ಭಾರತದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದರು.

Biocon ಇಂದು ಬಯೋಸಿಮಿಲರ್ ಇನ್ಸುಲಿನ್‌ಗಳಲ್ಲಿ (Insugen, Basalog ಇತ್ಯಾದಿ) ಪ್ರಮುಖ ಆಟಗಾರ; ಮೆಟಾಬಾಲಿಕ್, ಆಂಕಾಲಜಿ, ಇಮ್ಯುನೊಥೆರಪಿ ಕ್ಷೇತ್ರಗಳಲ್ಲಿ ಉತ್ಪನ್ನಗಳನ್ನು ನೀಡುತ್ತದೆ. ವಿಶ್ವದಾದ್ಯಂತ ಕೈಗೆಟುಕುವ ಇನ್ಸುಲಿನ್ ಚಿಕಿತ್ಸೆಗೆ ಬದ್ಧವಾಗಿದೆ. (ಗಮನಿಸಿ: ಮೌಖಿಕ ಇನ್ಸುಲಿನ್ (Tregopil) ಅಭಿವ್ಯಾಸದಲ್ಲಿದ್ದು, ಇನ್ನೂ ವಾಣಿಜ್ಯೀಕರಣವಾಗಿಲ್ಲ; Pichia pastoris ಶಿಲೀಂದ್ರ ಬಳಸಿ ಇನ್ಸುಲಿನ್ ಉತ್ಪಾದನೆಯಲ್ಲಿ ನಾವೀನ್ಯತೆ ತಂದಿದೆ.)

ಪ್ರವರ್ತಕ ಕೊಡುಗೆಗಾಗಿ ಹಲವು ಪ್ರಶಸ್ತಿಗಳು: ಪದ್ಮ ಭೂಷಣ (2005), ಓಥ್ಮರ್ ಗೋಲ್ಡ್ ಮೆಡಲ್ (2014), EY ವರ್ಲ್ಡ್ ಎಂಟರ್‌ಪ್ರೆನಿಯರ್ (2020), ಫೋರ್ಬ್ಸ್ ಪವರ್‌ಫುಲ್ ವುಮನ್ ಪಟ್ಟಿ, ಜಮ್‌ಸೆಟ್ಜಿ ಟಾಟಾ ಅವಾರ್ಡ್ (2024) ಇತ್ಯಾದಿ.

ಇತ್ತೀಚೆಗೆ NITI Aayog, Atal Innovation Mission ಮತ್ತು Dell Technologies ಸಹಯೋಗದ **ShePreneur** ಕಾರ್ಯಕ್ರಮವು ಹೆಣ್ಣು ಮಕ್ಕಳನ್ನು ಉದ್ಯಮಶೀಲರನ್ನಾಗಿ ಹುರಿದುಂಬಿಸುತ್ತದೆ. ಇದರಲ್ಲಿ ಭಾರತಾದ್ಯಂತದ ವಿದ್ಯಾರ್ಥಿನಿಯರು ಯೋಜನೆಗಳನ್ನು ಪ್ರಸ್ತುತಪಡಿಸಿ ಪ್ರೋತ್ಸಾಹ ಪಡೆಯುತ್ತಾರೆ. ನಾನು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ — ಇದು ಹೆಣ್ಣು ಮಕ್ಕಳ ನಾವೀನ್ಯತೆಯನ್ನು ಮುನ್ನಡೆಸುವ ಅದ್ಭುತ ವೇದಿಕೆ.

ಕಿರಣ್ ಮಜುಂದಾರ್-ಶಾ ಅವರಂತಹ ಮಹಿಳಾ ಉದ್ಯಮಿಗಳು ಮುಂದಿನ ಪೀಳಿಗೆಗೆ ಸ್ಪೂರ್ತಿ. ಅವರ ಪಯಣವು ಸಾಧನೆ, ಸಹನೆ ಮತ್ತು ನಾವೀನ್ಯತೆಯ ಸಂಕೇತ!

NITI-Aayog ATL  ಲ್ಯಾಬ್ಸ್  ಹಾಗೂ ಡೆಲ್ ಟೆಕ್ನಾಲಜೀಸ್ ಸಹಯೋಗದಿಂದ ಇತ್ತೀಚಿಗೆ ಹೆಣ್ಣು ಮಕ್ಕಳನ್ನು ಉದ್ಯಮಶೀಲಗಳನ್ನಾಗಿ  ಮಾಡಲು ಹುರಿದುಂಬಿಸಲು ಉತ್ತೇಜಿಸಲು  ಶೀ ಪ್ರಿನರ್ ಕಾರ್ಯಕ್ರಮವನ್ನು DELL TECHNOLOGIES ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದು, ಇದರಲ್ಲಿ ಭಾರತಾದ್ಯಂತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಅವನಿಸಿ ಅವರ ಯೋಜನೆಗಳನ್ನು ಪ್ರಸ್ತುತಿ ಪಡಿಸಿ ಅವರನ್ನು ಹುರಿದುಂಬಿಸುವ ಕಾರ್ಯವನ್ನು ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ನಾನು ಸಹ ಭಾಗವಹಿಸಿದ್ದೆ. ಹೆಣ್ಣು ಮಕ್ಕಳು ಮುನ್ನಡೆಸುವ ನಾವೀನ್ಯಯುತ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.





Saturday, October 4, 2025

ತಳಿಶಾಸ್ತ್ರದ ಸಿಂಡ್ರೆಲ್ಲಾ : ಡ್ರಾಸೋಫಿಲಾ

 ತಳಿಶಾಸ್ತ್ರದ  ಸಿಂಡ್ರೆಲ್ಲಾ: ಡ್ರಾಸೋಫಿಲಾ


    ಲೇಖಕರು : 

 ಬಿ.ಎನ್. ರೂಪ,       ಶಿಕ್ಷಕರು,

                                                                       ಕೆ.ಪಿ.ಎಸ‌, ಜೀವನ್‌ ಭೀಮ ನಗರ
                                                                        ಬೆಂಗಳೂರು ದಕ್ಷಿಣ ವಲಯ -4

 

ಅಡುಗೆ ಮನೆಯಲ್ಲಿ, ಕೊಳೆಯುತ್ತಿರುವ ಹಣ್ಣು, ಪಾನೀಯಗಳ ಬಳಿ ಸಾಮಾನ್ಯವಾಗಿ ಸನ್ನ ಕೀಟಗಳ ಗುಂಪೊಂದು ಆಕರ್ಷಿತವಾಗಿರುವುದನ್ನು ಗಮನಿಸಿರುತ್ತೇವೆ ಅಲ್ಲವೇ ? ಈ ಕೀಟಗಳೇ ಹಣ್ಣಿನಕೀಟ ಅಥವಾ ನೊಣ, ವಿನಿಗರ್ ನೊಣ, ಬಾಳೆನೊಣ,ಪೋಮೇಸ್ ನೊಣ ಎಂಬ ಹಲವಾರು ನಾಮಧೆಯಗಳನ್ನು ಹೊಂದಿರುವ ಡ್ರೊಸೊಫಿಲಾ ಮೆಲನೊಗ್ಯಾಸ್ಟರ್-Drosophila melanogaster ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಕನ್ನಡದ ಗಾದೆಗೆ ಸೂಕ್ತ ಅನ್ವಯವಾಗಿರುವ ಈ ಚಿಕ್ಕ ನೊಣ, ಸಂಧಿಪದಿಗಳ (Arthropoda) ಡಿಪ್ಟೆರಾ ವರ್ಗದ  ಡ್ರೋಸೋಫಿಲಿಡೇ ಕುಟುಂಬಕ್ಕೆ ಸೇರುವ ನೊಣದ ಒಂದು ಜಾತಿಯಾಗಿದೆ. ಡ್ರೋಸೋಫಿಲ ಎಂಬ ಪದವು ಗ್ರೀಕ್‌ ಭಾಷೆಯಿಂದ ನಿಷ್ಪತ್ತಿಯಾಗಿದೆ. ಗ್ರೀಕ್ ನಲ್ಲಿ ‘ಡ್ರೊಸೋಸ್’ ಅಂದರೆ ಇಬ್ಬನಿ ‘ಫಿಲಿಯ’ ಎಂದರೆ ಪ್ರೀತಿ. ಇಬ್ಬನಿಯನ್ನು ಪ್ರೀತಿಸುವ ಕೀಟ ಎಂಬ ಅರ್ಥವನ್ನು ಇದು ನೀಡುತ್ತದೆ.

                                                                   ಗಾತ್ರದಲ್ಲಿ ಕಿರಿದಾದ ಕೀಟ,

ಕೀರ್ತಿಯಲ್ಲಿ ದೊಡ್ಡ ಪಟ್ಟ,

ತಳಿಶಾಸ್ತ್ರದ ಅಧ್ಯಯನದ,

ಅಭಿ಼ಷಿಕ್ತ ರಾಣಿ.

ಕೊಳೆಯುವ ಹಣ್ಣುಗಳು ನಿನ್ನ ತಾಣ,

ಹುದುಗುವ ಪಾನೀಯಕ್ಕೆ ನಿನ್ನ ಆಕರ್ಷಣೆ,

ತಳಿಶಾಸ್ತ್ರದ ಅಧ್ಯಯನದ,

ಅಭಿಷಿಕ್ತ ರಾಣಿ.

ಜೈವಿಕ ಸಂಶೋಧನೆಯಲ್ಲಿ ನಿನ್ನ ಬಳಕೆ ಅಪಾರ,

ನಾಲ್ಕು ಜೋಡಿ ವರ್ಣತಂತುಗಳ ಅಗರ,

ತಳಿಶಾಸ್ತ್ರದ ಅಧ್ಯಯನದ,

ಅಭಿಷಿಕ್ತ ರಾಣಿ.

ಈ ಕೀಟವನ್ನು ಪ್ರಥಮ ಬಾರಿಗೆ 1908ರಲ್ಲಿ ತಳಿಶಾಸ್ತ್ರದ ಅಧ್ಯಯನಕ್ಕಾಗಿ ಥಾಮಸ್‌ ಹಂಟ್‌ ಮಾರ್ಗನ್‌ (Thomas Hunt Morgan) ಎಂಬ ವಿಜ್ಞಾನಿ ಬಳಸಿಕೊಂಡರು. ಥಾಮಸ್‌ ಹಂಟ್‌ ಮಾರ್ಗನ್‌ ಅವರು ತನ್ನ ತಳಿಶಾಸ್ತ್ರ ಸಂಶೋಧನೆಗಾಗಿ ಡ್ರೊಸೊಫಿಲಾ ಮೆಲನೊಗ್ಯಾಸ್ಟರ್‌ ಅನ್ನು ಆರಿಸಿಕೊಂಡದ್ದು ಏಕೆಂದರೆ, ಈ ಹಣ್ಣಿನ ನೊಣಗಳು ಪ್ರಯೋಗಾಲಯದಲ್ಲಿ ಸಂತಾನೋತ್ಪತ್ತಿ ಮಾಡಲು ಸೂಕ್ತವಾಗಿದ್ದುವು, ಅವು ಕಡಿಮೆ ಅವಧಿಯ ಜೀವನ ಚಕ್ರವನ್ನು ಹೊಂದಿದ್ದುವು ಮತ್ತು ಪ್ರತಿ ಸಂಯೋಗಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಸಂತತಿಯನ್ನು ಉತ್ಪಾದಿಸುತ್ತಿದ್ದುವು. ಹೆಚ್ಚುವರಿಯಾಗಿ, ಅವು ಸರಳ ಸೂಕ್ಷ್ಮದರ್ಶಕದ ಅಡಿಯಲ್ಲಿಯೂ ಸಹ ಸುಲಭವಾಗಿ ಗೋಚರಿಸುವ ವಿಶಿಷ್ಟ ಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದುವು ಅಲ್ಲದೆ, ಸರಳವಾದ ವರ್ಣತಂತು ರಚನೆಯನ್ನು ಹೊಂದಿದ್ದುವು. ಈ ವರ್ಣತಂತುಗಳ ಅಧ್ಯಯನಕ್ಕೆ ತಗಲುವ ವೆಚ್ಚ ಬಹಳ ಕಡಿಮೆ ಈ ಎಲ್ಲಾ ಪ್ರಯೋಜನಗಳಿಂದಾಗಿ, ತಳಿಶಾಸ್ತ್ರ, ಅಂಗೀಕ ತಳಿಶಾಸ್ತ್ರ ಅಭಿವೃದ್ಧಿ ಜೀವಶಾಸ್ತ್ರದ ಕ್ಷೇತ್ರಗಳಲ್ಲಿ ಈ ಕೀಟಗಳನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಇಂದು ತಳಿಶಾಸ್ತ್ರದಲ್ಲಿ ಬಳಕೆಯಲ್ಲಿರುವ ಬಹುತೇಕ ಅನುವಂಶೀಯ ತತ್ವಗಳನ್ನು ಡ್ರಾಸೋಪಿಲಾದ ಮೇಲಿನ ಪ್ರಯೋಗಗಳಿಂದಲೇ ವಿಜ್ಞಾನಿಗಳು ಅರ್ಥಮಾಡಿಕೊಂಡಿದ್ದಾರೆ. ಅಲ್ಲಿಂದೀಚೆಗೆ, ತಳಿಶಾಸ್ತ್ರ, ಶರೀರಶಾಸ್ತ್ರ, ಸೂಕ್ಷ್ಮಜೀವಿಶಾಸ್ತ್ರ,ಮತ್ತಿತರ ಕ್ಷೇತ್ರಗಳಲ್ಲಿ ಅಧ್ಯಯನಕ್ಕಾಗಿ ಹಾಗೂ ಜೈವಿಕ ಸಂಶೋಧನೆಗಾಗಿ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ, ಈ ಕೀಟಕ್ಕೆ ʼತಳಿಶಾಸ್ತ್ರದ ಸಿಂಡ್ರೆಲಾ “ ಎಂದು ಕರೆಯಲಾಗುತ್ತದೆ.

1946ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಲ್ಪಟ್ಟ ಮೊದಲ ಕೀಟ ಡ್ರಾಸೋಫಿಲಾ ಆಗಿತ್ತು. 2017ರಲ್ಲಿ ಡ್ರೋಸೋಫಿಲಿಸ್ಟ್ ಗಳಿಗೆ ಆರು ನೋಬಲ್ ಪ್ರಶಸ್ತಿಗಳನ್ನು ತಳಿಶಾಸ್ತ್ರದ ಮೇಲಿನ ಅಧ್ಯಯನಕ್ಕಾಗಿ ನೀಡಲಾಗಿದೆ.

ಈ ಕೀಟಗಳು ಹಳದಿ ಮಿಶ್ರಿತ ಕಂದು ಬಣ್ಣದಲ್ಲಿದ್ದು, ಕಣ್ಣುಗಳು ಕೆಂಪು ಮಿಶ್ರಿತ ಇಟ್ಟಿಗೆ ಬಣ್ಣ ಹೊಮದಿರುತ್ತವೆ. ಹೊಟ್ಟೆಯ ಮೇಲೆ ಅಡ್ಡವಾಗಿ ಕಪ್ಪುಪಟ್ಟಿಗಳನ್ನು ಹೊಂದಿವೆ. ಇವುಗಳ ದೇಹವನ್ನು ಪ್ರಮುಖವಾಗಿತಲೆ,ಎದೆಮತ್ತುಹೊಟ್ಟೆಯಭಾಗ ಎಂಬ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ ಕಣ್ಣುಗಳು ದೃಶ್ಯ ಘಟಕಗಳಾದ ನೂರಾರು ಒಮ್ಮಟಿಡಿಯಾಗಳನ್ನು ಹೊಂದಿವೆ. ಕಣ್ಣಿನ ನಡುವೆ ಅಂಟೆನಾಗಳಿವೆ ಇವು ವಾಸನೆ ಹಾಗೂ ಗಾಳಿಯ ಕಂಪನಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಮೂರು ಜೋಡಿ ಕಾಲುಗಳು ಹಾಗೂ ಒಂದು ಜೋಡಿ ರೆಕ್ಕೆಗಳನ್ನು ಹೊಂದಿವೆ. ಈ ಕೀಟಗಳು ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುತ್ತದೆ.

ಹೆಣ್ಣು ಕೀಟಗಳು ಸುಮಾರು 2.5 m.m ನಷ್ಟು ಉದ್ದವಾಗಿದ್ದು, ಗಂಡು ಕೀಟಗಳು ಹೆಣ್ಣು ಕೀಟಗಳಿಗಿಂತ ಚಿಕ್ಕದಾಗಿರುತ್ತವೆ. ಸೂಕ್ತ ಬೆಳವಣಿಗೆಯ ಪರಿಸ್ಥಿತಿಗಳಲ್ಲಿ ಇವುಗಳ ಜೀವಿತಾವಧಿ ಮೊಟ್ಟೆಯಿಂದ ಸಾವಿನವರೆಗೂ ಸುಮಾರು 50 ದಿನಗಳು. ಇವುಗಳ ಜೀವನ ಚಕ್ರದಲ್ಲಿ ಭ್ರೂಣ, ಲಾರ್ವ, ಪ್ಯೂಪ ಹಾಗೂ ವಯಸ್ಕ ಕೀಟ ಎಂಬ ನಾಲ್ಕುಹಂತಗಳಿವೆ, ಇವುಗಳ ಲಾರ್ವ ಸಂಪೂರ್ಣ ರೂಪಾಂತರಕ್ಕೆ ಒಳಗಾಗುತ್ತವೆ. ಹಾಗಾಗಿ,ಇವು ಹೋಲೋಮೆಟಬಾಲಸ್ (holometabolous)  ಬಗೆಯ ಕೀಟಗಳಾಗಿವೆ. 


ಇತ್ತೀಚಿನ ವರ್ಷಗಳಲ್ಲಿ, ಡ್ರೊಸೊಫಿಲಾದಲ್ಲಿ ಆನುವಂಶೀಯ ವಿಧಾನಗಳನ್ನು ಬಳಸಿಕೊಂಡು ಗ್ಲೈಕೊನ್‌ ಕಾರ್ಯಗಳ ಪರಿಣಾಮಕಾರಿ ವಿಶ್ಲೇಷಣೆ ಮಾಡಲಾಗುತ್ತಿದೆ. .ವಂಶವಾಹಿಗಳ ಕಾರ್ಯಗಳನ್ನು ಅಧ್ಯಯನ ಮಾಡಲು ಯಾದೃಚ್ಛಿಕ ನಿರ್ದೇಶಿತ ಉತ್ಪರಿವರ್ತನೆಗಳ ಮೂಲಕ ಪ್ರತ್ಯೇಕ ವಂಶವಾಹಿಗಳನ್ನು ನಿಷ್ಕ್ರಿಯಗೊಳಿಸಿ ಅಧ್ಯಯನಮಾಡಲು ಬಳಸಲಾಗುತ್ತಿದೆ. ಉತ್ಪರಿವರ್ತನೆಗಳನ್ನು ಪ್ರೇರೇಪಿಸಲು ರಾಸಾಯನಿಕಗಳನ್ನು ಬಳಸಿ ಹೊಸ ಅಂಶಗಳನ್ನು ಸಂಯೋಜಿಸಿ ರಾಸಾಯನಿಕ ಪ್ರೇರಿತ ಉತ್ಪರಿವರ್ತನೆ ಟ್ರಾನ್ಸ್ಪೋಸ್‌ ನ ಮಧ್ಯಸ್ಥಿಕೆಯ ಅಳವಡಿಕೆಯನ್ನು ಅಧ್ಯಯನ ಮಾಡಲು ಬಳಸಲಾಗುತ್ತಿದೆ .ಸಂಪೂರ್ಣ ವಂಶವಾಹಿಗಳ ಅಧ್ಯಯನ ಮಾಡಲು ಸಹ ಈ ಕೀಟಗಳನ್ನು ಬಳಸಲಾಗುತ್ತಿದೆ.

ಆರ್ ಎನ..ಎ. ಮಧ್ಯಸ್ಥಿತ ಜೀನ್‌ ಸೈಲೆನ್ಸ್ಸಿಂಗ್ ಅನ್ನು ವ್ಯಾಪಕವಾಗಿ ಸಾಧನವಾಗಿ ಬಳಸಲಾಗುತ್ತದೆ. ಔಷಧಿ ಅನ್ವೇಷಣೆ, ಜೈವಿಕಇಂಜಿನಿಯರಿಂಗ್, ಪುನರುತ್ಪಾದಕ ಜೀವಿಶಾಸ್ತ್ರ ಇವುಗಳಲ್ಲಿ ಅಧ್ಯಯನ ಮಾಡಲು ಬಳಸಿ ಇದು ರೋಮಾಂಚನಕಾರಿಯಾದ ಫಲಿತಾಂಶಗಳನ್ನು ನೀಡಿದೆ. ಹಲವು ಕ್ಷೇತ್ರಗಳ ಸಂಶೋಧನೆಯಲ್ಲಿ ಇವು ಮಾದರಿ ಜೀವಿಯಾಗಿ ಸಂಶೋಧನೆಯ ಭವಿಷ್ಯವು ಈ ಜೀವಿಗಳಿಂದ ಉಜ್ವಲವಾಗಿದೆ.



 

ಡ್ರೊಸೊಫಿಲಾವನ್ನು ಭವಿಷ್ಯದಲ್ಲಿ ರೋಗ ಮಾದರಿ ಔಷಧ ಚೇತರಿಕೆ ಮತ್ತು ವಿಷಶಾಸ್ತ್ರೀಯ (ಟಾಕ್ಸಿಕಾಲಜಿಕಲ್) ಸಂಶೋಧನೆಗೆ ಪ್ರಬಲ ಮತ್ತುವೆಚ್ಚ-ಪರಿಣಾಮಕಾರಿ ಜೀವಿಯಾಗಿನಿರಂತರಬಳಸಲಾಗುತ್ತಿದೆ. ಮಾನವನೊಂದಿಗೆ ಅದರ ವಂಶವಾಹಿಗಳ ಹೆಚ್ಚಿನ ಸಂರಕ್ಷಣೆ, CRISPR-cas9 ನಂತಹ ಸಾಧನಗಳೊಂದಿಗೆ ಆನುವಂಶೀಯ ಕುಶಲತೆ ಮತ್ತು ಅದರ ತ್ವರಿತ ಜೀವನ ಚಕ್ರದಿಂದಾಗಿ, ಹಣ್ಣಿನ ನೊಣವು ಪರಿಣಾಮಕಾರಿಯಾಗಿ ಬಳಕೆಯಲ್ಲಿದೆ. ಪ್ರಾಣಿಗಳ ಔಷಧ ತಪಾಸಣೆಗೆ ಮತ್ತು ನರಶೂಲೆ ಅಸ್ವಸ್ಥತೆಗಳಿಂದ ಕ್ಯಾನ್ಸರ್‌ ಮತ್ತು ಸಾಂಕ್ರಾಮಿಕ ರೋಗಗಳವರೆಗಿನ ಸಂಕೀರ್ಣ ಮಾನವ ಆರೋಗ್ಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಈ ಕೀಟಗಳು ಅನುವುಮಾಡಿಕೊಡುತ್ತಿವೆ.