ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, February 4, 2021

ಸವಿಜ್ಞಾನ ಇ-ಪತ್ರಿಕೆಯ ಫೆಬ್ರವರಿ - 2021ರ ಲೇಖನಗಳು

 ಸವಿಜ್ಞಾನ ಇ-ಪತ್ರಿಕೆಯ ಫೆಬ್ರವರಿ - 2021ರ ಲೇಖನಗಳು

ಸಂಪಾದಕರ ಡೈರಿಯಿಂದ - ಡಾ. ಟಿ.ಎ. ಬಾಲಕೃಷ್ಣ ಅಡಿಗ

ತಿಂಗಳ ವಿಶೇಷ ಲೇಖನ
ವಿಶೇಷ ಸಂದರ್ಶನ
ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಸಂದರ್ಭದಲ್ಲಿ ವಿಶೇಷ ಲೇಖನ
  1. ರೋಚಕ ಜಲಸಸ್ಯಗಳು - ರಾಘವೇಂದ್ರ ಮಯ್ಯ 
  2. ಫ್ಲೋರೀನ್ ಹುತಾತ್ಮರು - ಕೆ ಟಿ ಶಿವಕುಮಾರ್ 
  3. ವೈಜ್ಞಾನಿಕ ಅನ್ವೇಷಣೆ ಮತ್ತು ವೈಜ್ಞಾನಿಕ ಮನೋಭಾವ - ಗುರುದತ್ತ. ಎ 
  4. ನೀರ ಒಲೆ - ವಿಜಯಕುಮಾರ್ 
  5. ವಿಜ್ಞಾನದ ಒಗಟುಗಳು - ವಿಜಯ್ ಕುಮಾರ್ ಹುತ್ತನಹಳ್ಳಿ  
  6.  ವ್ಯಂಗ್ಯಚಿತ್ರಗಳು : ವಿಜಯಕುಮಾರ್ ಮತ್ತು ಶ್ರೀಮತಿ ಬಿ. ಜಯಶ್ರೀ ಶರ್ಮ

ಸಂಪಾದಕರ ಡೈರಿಯಿಂದ

 ಸಂಪಾದಕರ ಡೈರಿಯಿಂದ ..........

ಕಳೆದ ಜನವರಿ 4 ರಂದು ಲೋಕಾರ್ಪಣೆಯಾದ ‘ವಿಜ್ಞಾ’ ಬ್ಲಾಗ್‌ನ ಮೊದಲ ಸಂಚಿಕೆಯನ್ನು ನಮ್ಮ ನಿರೀಕ್ಷೆಗೂ ಮೀರಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡಿದ್ದೀರಿ. ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದೀರಿ. ಕೇವಲ ವಿಜ್ಞಾನ ಶಿಕ್ಷಕರೇ ಅಲ್ಲದೆ, ಅನೇಕ ಮಂದಿ ವಿಜ್ಞಾನಾಸಕ್ತರೂ ನಮ್ಮ ಬ್ಲಾಗ್‌ಗೆ ಭೇಟಿಕೊಟ್ಟು, ಮೆಚ್ಚುಗೆಯ ಮಾತುಗಳ ಜೊತೆಗೆ, ಸಲಹೆ, ಸೂಚನೆಗಳನ್ನೂ ನೀಡಿದ್ದೀರಿ. ನಿಮಗೆಲ್ಲ ನಮ್ಮ ತಂಡದ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳು. ನಿಮ್ಮ ಅಭಿಪ್ರಾಯಗಳಿಂದಾಗಿ ನಮ್ಮ ಶ್ರಮ ಸಾರ್ಥಕವಾಗಿದೆ, ಜೊತೆಗೆ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ಬಂದಿರುವ ಸಲಹೆಗಳನ್ನು ಕ್ರಮೇಣ ಅಳವಡಿಸಿಕೊಂಡು ‘ಸವಿಜ್ಞಾನ’ವನ್ನು ಇನ್ನಷ್ಟು ಆಕರ್ಷಣೀಯವಾಗಿ, ಇನ್ನಷ್ಟು ಉಪಯುಕ್ತವಾಗಿ ರೂಪಿಸುವ ಸಂಕಲ್ಪ ನಮ್ಮದು.

ಈ ಬಾರಿಯ ಸಂಚಿಕೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ದೇಶದ ಇಬ್ಬರು ವಿಜ್ಞಾನಿಗಳ ಬಗ್ಗೆ ಸಾಂದರ್ಭಿಕ ಲೇಖನಗಳನ್ನು ಪ್ರಕಟಿಸಲಾಗಿದೆ. ಫೆಬ್ರವರಿ 28 ರ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಗೆ ಸಂಬಂಧಿಸಿದಂತೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ. ರಾಮನ್ ಅವರ ಬಗ್ಗೆ ಒಂದು ಲೇಖನ ಹಾಗೂ ಸಸ್ಯ ವಿಜ್ಞಾನಿ ಮತ್ತು ವಿಜ್ಞಾನ ಬರಹಗಾರ ಡಾ. ಬಿ.ಜಿ.ಎಲ್.ಸ್ವಾಮಿ ಅವರ 103ನೇ ಜನ್ಮ ದಿನೋತ್ಸವದ (ಫೆಬ್ರುವರಿ 5) ಸಂದರ್ಭದಲ್ಲಿ ಒಂದು ಲೇಖನವಿದೆ. ನಮ್ಮ ಮೊದಲ ಸಂಚಿಕೆಯನ್ನು ಲೋಕಾರ್ಪಣೆ ಮಾಡಿದ ಖ್ಯಾತ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರೊಂದಿಗೆ ನಮ್ಮ ತಂಡ ನಡೆಸಿದ ಸಂದರ್ಶನವೂ ಪ್ರಕಟವಾಗಿದೆ. ಜೊತೆಗೆ, ವಿಜ್ಞಾನ ಶಿಕ್ಷಕರಿಗೆ ಉಪಯುಕ್ತವಾಗಬಲ್ಲ ಹಲವು ಲೇಖನಗಳೂ ಇವೆ. ಎಂದಿನಂತೆ, ಮಿದುಳಿಗೆ ಕಸರತ್ತು ನೀಡುವ ಒಗಟುಗಳು ಹಾಗೂ ಮನಸ್ಸಿಗೆ ಮುದ ನೀಡುವ ವ್ಯಂಗ್ಯಚಿತ್ರಗಳೂ ಇವೆ. ಈ ಸಂಚಿಕೆಯೂ ನಿಮಗೆ ಮೆಚ್ಚುಗೆಯಾಗಬಹುದೆಂಬ ಆಶಯ ನಮ್ಮದು. ಇನ್ನೇಕೆ ತಡ ? ಪುಟಗಳನ್ನು ತೆರೆಯಬಹುದಲ್ಲವೇ ?

ಡಾ. ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು 

ಬಹುಮುಖ ಪ್ರತಿಭೆಯ ಸಸ್ಯ ವಿಜ್ಞಾನಿ - ಡಾ. ಬಿ.ಜಿ.ಎಲ್.ಸ್ವಾಮಿ

ಬಹುಮುಖ ಪ್ರತಿಭೆಯ ಸಸ್ಯ ವಿಜ್ಞಾನಿ - ಡಾ. ಬಿ.ಜಿ.ಎಲ್.ಸ್ವಾಮಿ

ಲೇಖಕರು : ಡಾ. ಟಿ.ಎ.ಬಾಲಕೃಷ್ಣ ಅಡಿಗ

ನಿವೃತ್ತ ಪ್ರಾಂಶುಪಾಲರು ಮತ್ತು ಜೀವಶಾಸ್ತç ಪ್ರಾಧ್ಯಾಪಕರು

ನಾಡು ಕಂಡ ಅಪೂರ್ವ ಸಸ್ಯ ವಿಜ್ಞಾನಿ ಬಿ.ಜಿ.ಎಲ್.ಸ್ವಾಮಿ ಅವರು ಕನ್ನಡ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ಡಾ.ಡಿ.ವಿ.ಗುಂಡಪ್ಪ ಅವರ ಪುತ್ರ ರತ್ನ. ಬೆಂಗಳೂರು ಗುಂಡಪ್ಪ ಲಕ್ಷೀನಾರಾಯಣ ಸ್ವಾಮಿ ಅವರ ಪೂರ್ಣ ನಾಮಧೇಯ. ಬಿ.ಜಿ.ಎಲ್.ಸ್ವಾಮಿ ಕೇವಲ ಸಸ್ಯ ವಿಜ್ಞಾನಿಯಲ್ಲ. ಅವರದ್ದು ಬಹುಮುಖ ಪ್ರತಿಭೆ. ಸಂಶೋದಕ, ಜನಪ್ರಿಯ ವಿಜ್ಞಾನ ಲೇಖಕ, ಸಾಹಿತಿ, ಪ್ರಾಧ್ಯಾಪಕ, ದಕ್ಷ ಆಡಳಿತಗಾರ, ಸಂಗೀತಜ್ಞ, ನೃತ್ಯಪಟು, ಚಿತ್ರಕಾರ, ಬಹು ಭಾಷಾ ಕೋವಿದ, ಹೀಗೆ, ಹತ್ತು ಹಲವು ಕ್ಷೇತ್ರಗಳಲ್ಲಿ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 2021ರ ಫೆಬ್ರವರಿ 5 ರಂದು ಅವರ 103ನೇ ಜನ್ಮ ದಿನ. ಆ ಸಂದರ್ಭಕ್ಕೆ ಅವರ ಸ್ಮರಣೆಯಲ್ಲಿ ಈ ಲೇಖನ.

ಸುಧೀಂದ್ರ ಹಾಲ್ದೊಡ್ಡೇರಿಯವರೊಂದಿಗೆ ಸಂದರ್ಶನ


ಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರರವರು ನಮ್ಮ ಕನ್ನಡ ನಾಡು ಕಂಡ ಅತ್ಯತ್ತಮ ವಿಜ್ಞಾನಿಗಳಲ್ಲಿ  ಒಬ್ಬರು. ನಮ್ಮ ಸವಿಜ್ಞಾನ ಮಾಸಪತ್ರಿಕೆಯ ಬ್ಲಾಗನ್ನು ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಸಂಪಾದಕೀಯ ಮಂಡಲಿ ಅವರೊಂದಿಗೆ ಸಂದರ್ಶನ ನಡೆಸಿತು. ಈ ಸಂದರ್ಶನದ ಆಯ್ದ ಭಾಗವನ್ನು ವಿಜ್ಞಾನದ ಓದುಗರಿಗಾಗಿ ನೀಡಿದೆ. 

ಸಂದರ್ಶಕರು : 

ರಾಮಚಂದ್ರಭಟ್‌ ಬಿ.ಜಿ.

ಶ್ರೀನಿವಾಸ್‌ . ಎ

ಗೋಪಾಲ ರಾವ್‌ ಸಿ.ಕೆ.



ನಮ್ಮ ಸವಿಜ್ಞಾನ ಮಾಸಪತ್ರಿಕೆಯ ಬ್ಲಾಗನ್ನು ಲೋಕಾರ್ಪಣೆ ಮಾಡಿದ ಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರರವರೊಂದಿಗೆ  ಸಂಪಾದಕೀಯ ಮಂಡಲಿ


ಸಂದರ್ಶಕರು (ಸಂ): ನಮಸ್ಕಾರ ಸರ್

ಸುಧೀಂದ್ರ ಹಾಲ್ದೊಡ್ಡೇರಿ (ಸು.ಹಾ): ನಮಸ್ಕಾರ

ಸಂ: ತಾಂತ್ರಿಕ ವಿಜ್ಞಾನದ ಹಿನ್ನೆಲೆ ಇರುವ ತಾವು ಕನ್ನಡದಲ್ಲಿ ಇಷ್ಟು ಸುಲಲಿತವಾಗಿ ಹೇಗೆ ಬರೆಯುತ್ತಿದ್ದೀರಿ? ಕನ್ನಡದಲ್ಲಿಯೇ ಬರೆಯಬೇಕೆನ್ನುವ ಪ್ರೇರಣೆ ಹಾಗೂ ತುಡಿತ ನಿಮ್ಮಲ್ಲಿ ಹೇಗೆ ಮೂಡಿತು?

ಸು.ಹಾ: ಪತ್ರಕರ್ತರಾಗಿದ್ದ ನಮ್ಮ ತಂದೆ  ನಾಗೇಶರಾವ್ ರವರು ಮನೆಗೆ ತರಿಸುತ್ತಿದ್ದ ದೇಶ-ವಿದೇಶಗಳ ಪತ್ರಿಕೆಗಳನ್ನು ಓದಲಾರಂಭಿಸಿದೆ. ಅವುಗಳಲ್ಲಿರುವ ವಿಜ್ಞಾನ ಲೇಖನಗಳು ನನ್ನನ್ನು ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸಿದವು. ತಂದೆಯವರ ಪ್ರೋತ್ಸಾಹ, ಪ್ರೇರಣೆ  ಮತ್ತು  ಮಾರ್ಗದರ್ಶನದಿಂದ ಕನ್ನಡದಲ್ಲಿ ಬರೆಯಲಾರಂಭಿಸಿದೆ. ವಿಜಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಡಾ||ಬಿ.ಜಿ.ಎಲ್.ಸ್ವಾಮಿಯವರ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ ಎನ್ನುವ ಪುಸ್ತಕ ನನ್ನಲ್ಲಿ ಜೀವವಿಜ್ಞಾನದ ಕಡೆಗೂ ಆಸಕ್ತಿಯನ್ನು ಚಿಗುರಿಸಿತು. ಅತ್ಯಂತ ಸರಳವಾಗಿ, ಹೃದ್ಯವಾಗಿ, ನವಿರಾದ ತಿಳಿ ಹಾಸ್ಯದೊಂದಿಗಿನ ಅವರ ಶೈಲಿ ನನ್ನಲ್ಲಿ ಅಪಾರವಾದ ಆಸಕ್ತಿಯನ್ನು ಬೆಳೆಸಿತು.

ಸಂ: ಸರ್‌, ಇಂದು ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವ ಕೂಗನ್ನು ಕೇಳುತ್ತಿದ್ದೇವೆ. ಚೀನಾ, ಜಪಾನ್ ಗಳಂತಹ ದೇಶಗಳಲ್ಲಿ ಮಾತೃಭಾಷಾ ಶಿಕ್ಷಣ ಇರುವಂತೆ ನಮ್ಮಲ್ಲಿ ಕನ್ನಡ ಮಾಧ್ಯಮದಲ್ಲಿ ಉನ್ನತ ವಿಜ್ಞಾನ ಶಿಕ್ಷಣ ನೀಡಬಾರದೇಕೆ? ಕುರಿತಾಗಿ ನಿಮ್ಮ ಅಭಿಪ್ರಾಯವೇನು?

ಸು.ಹಾ: ಅನೇಕ ಭಾಷೆಗಳು, ಧರ್ಮ, ಸಂಸ್ಕೃತಿಗಳಿರುವ ಭಾರತ ದೇಶದಲ್ಲಿ ಒಂದೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹಾಗೆಯೇ ಇಂದು ಪ್ರಪಂಚವೇ ಗ್ಲೋಬಲ್ ವಿಲೇಜ್ ಆಗಿರುವ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆ ವಿಶ್ವದ ಬಹುತೇಕ ರಾಷ್ಡ್ರಗಳಲ್ಲಿ ಸಂವಹನ ಮಾಧ್ಯಮವಾಗಿದೆ. ಮಗುವಿಗೆ ಹೊಸ ಭಾಷೆ ಕಲಿಯುವುದು ಅತ್ಯಂತ ಸುಲಭ ಎನ್ನುವುದು ನಮ್ಮೆಲ್ಲರ ಅನುಭವ.  ಹೆಚ್ಚೆಚ್ಚು ಭಾಷೆಗಳನ್ನು ಕಲಿತಷ್ಟು ಅವಕಾಶಗಳೂ ಹೆಚ್ಚು. ಒಂದು ಹಂತದವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಅತ್ಯಂತ ಅಗತ್ಯ . ನಂತರದ ಶಿಕ್ಷಣವನ್ನು ಅಂತಾರಾಷ್ಟ್ರೀಯ  ಭಾಷೆಯಲ್ಲಿ ಕಲಿಯುವುದು ಅಪೇಕ್ಷಣೀಯ.

ಆಂಗ್ಲ ಭಾಷೆಯಂತೆ ಕನ್ನಡ ಸಶಕ್ತ ಭಾಷೆಯಾಗಿ ಬೆಳೆಯಲು ಸಾಕಷ್ಟು ಕಾಲಾವಕಾಶ ಬೇಕು.  ವಿದ್ಯಾರ್ಥಿಗಳಿಗೂ ಪೋಷಕರಿಗೂ ತಮ್ಮ ಕಲಿಕೆಯ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರಲಿ. ಕಲಿಕಾ ಮಾಧ್ಯಮದ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

ಸವಿಜ್ಞಾನ ಬಳಗದೊಂದಿಗೆ ಖ್ಯಾತ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ

ಸಂ: ಸರ್, ಇಂದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ವಿಜ್ಞಾನಿಗಳು, ಇಂಜಿನಿಯರ್ಳು, ವೈದ್ಯರು ಹೊರಬರುತ್ತಿದ್ದಾರೆ.  ಆದಾಗ್ಯೂ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಆಗದಿರಲು ಕಾರಣವೇನು?

ಸು.ಹಾ: ಇದಕ್ಕೆ ಕಾರಣಗಳು ಹಲವಾರು.  ವಿಶ್ವದ ಇತರ ದೇಶಗಳಿಗೆ ಹೋಲಿಸಿದಲ್ಲಿ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದ ಪ್ರಮಾಣ ಅತ್ಯಂತ ಕಡಿಮೆ. ಮೂಲವಿಜ್ಞಾನ ಕಲಿಕೆಗೆ, ಸಂಶೋಧನೆಗಳಿಗೆ ನಾವು ಹೆಚ್ಚಿನ ಮಹತ್ವವನ್ನು ನೀಡಬೇಕು. ವಿಜ್ಞಾನ-ತಂತ್ರಜ್ಞಾನಗಳು ಸದೃಢವಾಗಿದ್ದರೆ ಮಾತ್ರ ಭಾರತದೇಶ ವಿಶ್ವ ಮನ್ನಣೆಯನ್ನು ಪಡೆಯುತ್ತದೆ. ಹಲವಾರು ವೈರುಧ್ಯಗಳ ನಡುವೆಯೂ ನಾವು ಸಾಕಷ್ಟು ಸಾಧನೆಯನ್ನು ಮಾಡಿದ್ದೇವೆ ಎನ್ನುವುದು ಮೆಚ್ಚತಕ್ಕ ಅಂಶವೇ.

ಸಂ: ಸರ್, ಇತ್ತೀಚಿಗೆ ಕೀರ್ತಿಶೇಷರಾದ ನಿಮ್ಮ ಗುರುಗಳಾದ ರೊದ್ದಂ ನರಸಿಂಹರವರ ಬಗ್ಗೆ ಒಂದಷ್ಟು ಮಾಹಿತಿ ಕೊಡಿ. 

ಸು.ಹಾ: ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದ ರೊದ್ದಂ ನರಸಿಂಹರವರು ಸಂಸ್ಕೃತದ ಯಾವುದೇ ಶ್ಲೋಕಕ್ಕೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವರಣೆ ನೀಡಬಲ್ಲವರಾಗಿದ್ದರು.  ದ್ರವ ಚಲನ ವಿಜ್ಞಾನ ಅಥವಾ ಫ್ಲೂಯಿಡ್ ಮೆಕ್ಯಾನಿಕ್ಸ್ ಹಾಗೂ  ಹವಾಮಾನ ವಿಜ್ಞಾನದಲ್ಲಿ ಅವರಿಗೆ ವಿಶೇಷವಾದ ಪರಿಣತಿ ಇತ್ತು.   ನಾವಿಂದು ವೈಮಾನಿಕ ವಿಜ್ಞಾನಕ್ಷೇತ್ರದಲ್ಲಿ ಬಳಸುತ್ತಿರುವ ಅಂಕಿಅಂಶಗಳ ಡೇಟಾಬೇಸ್‌ಗಳು ರೊದ್ದಂರವರ ಸಂಶೋಧನೆಯ ಫಲ. ಅನೇಕ ವಿಜ್ಞಾನಿಗಳ ಸಹಕಾರದೊಂದಿಗೆ ಒಂದು ವ್ಯಾಪಕ  ಅಧ್ಯಯನವನ್ನು ನಡೆಸಿ ನಮ್ಮ ದೇಶಕ್ಕೇ ವಿಶಿಷ್ಟವಾದಂತಹ ಪರಾಮರ್ಶನ ಆಕರ ತಾಪಮಾನ (ಸ್ಟ್ಯಾಂಡರ್ಡ್ ರೆಫರೆನ್ಸ್)ನ್ನು ನಮ್ಮ ವೈಮಾನಿಕ ಕ್ಷೇತ್ರಕ್ಕೆ  ನೀಡಿದ್ದಾರೆ. ರೊದ್ದಂರವರ ಪ್ರಯತ್ನದಿಂದ ಭಾರತದಲ್ಲಿ ಸೂಪರ್ಕಂಪ್ಯೂಟರ್ಗಳ ಯುಗ ಪ್ರಾರಂಭವಾಯಿತು. ನೋಬಲ್ಪ್ರಶಸ್ತಿಗೆ ಯೋಗ್ಯರಿದ್ದ ರೊದ್ದಂರವರ ಕೊಡುಗೆ ಅಪಾರ.

ಸಂ: ವಿಜ್ಞಾನದ ಹೆಸರಿನಲ್ಲಿ  ಧರ್ಮ, ಮೂಢನಂಬಿಕೆಗಳ ಅನೇಕ ತಪ್ಪು ಕಲ್ಪನೆಗಳೂ ನುಸುಳಿವೆ. ಇಂದಿನ ನಮ್ಮ ಬಹುತೇಕ ವಿಜ್ಞಾನ ಸಾಹಿತ್ಯ ಪಾಶ್ಚಾತ್ಯರಿಂದ ಬಂದಿದ್ದು. ಹಾಗಾಗಿ ನಮ್ಮ ಕೊಡುಗೆ ಯಾವುದು ಇಲ್ಲ ಎನ್ನುವಂತಹ ಕೀಳರಿಮೆ ಇದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಸು.ಹಾ: ನಾನು ಕಂಡಂತೆ  ಜಪಾನ್ ದೇಶದಲ್ಲಿ ಮೊದಲ ಐದು ವರ್ಷಗಳ ಶಿಕ್ಷಣದಲ್ಲಿ ಅವರಿಗೆ ಯಾವುದೇ ವಿದೇಶೀ ವಿಜ್ಞಾನಿಯನ್ನು ಪರಿಚಯಿಸುವುದೇ ಇಲ್ಲ. ಅವರ ವಿದ್ಯಾರ್ಥಿಗಳಿಗೆ ಕೇವಲ ಜಪಾನ್ ವಿಜ್ಞಾನಿಗಳ ಸಾಧನೆಗಳು, ಅವರ ಸಂಶೋಧನೆಗಳ ಪರಿಚಯವನ್ನು ಮಾಡಿಕೊಡುತ್ತಾರೆ.

ದೌರ್ಭಾಗ್ಯವಶಾತ್ಭಾರತದಲ್ಲಿ ಜೆ.ಸಿ. ಬೋಸ್ರವರು ಮಾರ್ಕೋನಿಗಿಂತಲೂ ಮೊದಲೇ ರೇಡಿಯೋ ಕಂಡುಹಿಡಿದಿದ್ದರೂ ನಮ್ಮ ಯಾವುದೇ ಪಠ್ಯಪುಸ್ತಕ ಈ ಕುರಿತಾಗಿ ಮಾಹಿತಿಯನ್ನು ಕೊಡುವುದಿಲ್ಲ. ಇವತ್ತಿಗೂ ಕೂಡ ರೇಡಿಯೋವನ್ನು ಕಂಡುಹಿಡಿದವರು ಯಾರು ಎಂದರೆ ನಾವು ಮಾರ್ಕೋನಿ ಎಂದೇ ಹೇಳುತ್ತೇವೆ. ಹಾಗೆಯೇ ಸತ್ಯೇಂದ್ರನಾಥಬೋಸ್ರವರು ಐನ್ಸ್ಟೀನ್‌ರವರ ಜೊತೆಗೂಡಿ ಸಾ ಕಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. ಆದರೆ ನಾವು ಅವರ ಸಂಶೋಧನೆಗಳ ಬಗ್ಗೆ, ಅವರ ಹೆಸರಿನ ಕಣ - ಬೋಸಾನ್ಗಳ ಬಗ್ಗೆ  ಹೆಚ್ಚು ತಿಳಿಸುವುದಿಲ್ಲ.

ಪ್ರೊಫೆಸರ್ ಬಾಲಕೃಷ್ಣ ಅಡಿಗ: ಹಾಗೆಯೇ ಪರಾಶರ ಮಹರ್ಷಿಯವರು ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಮಹತ್ವದ ಅಂಶಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಜೀವಕೋಶ, ಪತ್ರಹರಿತ್ತು ಕುರಿತ ಮಾಹಿತಿಗಳನ್ನು ನೀಡಿದ್ದರು. ನಾವಿದನ್ನು ನಮ್ಮ ಮಕ್ಕಳಿಗೆ ತಿಳಿಸಿ ಹೇಳದಿರುವುದು ಇತಿಹಾಸಕ್ಕೆ ಮಾಡುತ್ತಿರುವ  ಅಪಚಾರವೇ ಸರಿ.

ಅಟಾಮಿಕ್ ಥಿಯರಿಯ ಬಗ್ಗೆ ಹೇಳುವಾ ನಾವು ಕಣಾದ ಮಹರ್ಷಿಗಳ ಕೊಡುಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ವಿಕ್ರಮ್ ಸಾರಾಭಾಯಿ, ಹೋಮಿ ಜಹಾಂಗೀರ್ ಬಾಬಾರವರಂತಹ  ಶ್ರೇಷ್ಠ ವಿಜ್ಞಾನಿಗಳನ್ನು ಸಿ.ವಿ.ರಾಮನ್‌ರವರು ಭಾರತಕ್ಕೆ ಬರುವಂತೆ ಪ್ರೇರೇಪಿಸಿದ್ದರು. ವಿಶೇಷವೆಂದರೆ ಸಿ.ವಿ. ರಾಮನ್ರವರ ರಾಮನ್ ಎಫೆಕ್ಟ್ ಆಧಾರದ ಮೇಲೆ ಅನೇಕ ಸಂಶೋಧನೆಗಳು ನಡೆಯುತ್ತಲೇ ಇವೆ.  ನೊಬೆಲ್ ಪ್ರಶಸ್ತಿ ಬಂತು ಎನ್ನುವುದನ್ನು ಬಿಟ್ಟರೆ ಸಿ.ವಿ.ರಾಮನ್ರವರ ಸಮಗ್ರ ಕೊಡುಗೆಗಳನ್ನು ನಾವು ಚರ್ಚಿಸುವುದಿಲ್ಲ.  ದ್ರವ್ಯದ ಕಣಗಳಲ್ಲಿ ಸೂಕ್ಷ್ಮ ಚಲನೆಯನ್ನು ಗುರುತಿಸಲು ಇಂದಿಗೂ ಕೂಡ ನಾವು ರಾಮನ್ರವರ ಸಂಶೋಧನೆಯನ್ನೇ  ನಾವು ಬಳಸುತ್ತಿದ್ದೇವೆ. ಇವೆಲ್ಲವೂ ನಮ್ಮ ದೇಶದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಲು, ಕೀಳರಿಮೆಯಿಂದ ಹೊರಬರಲು ಸಹಾಯಕ .  

ಸಂ: ಸರ್, ನಿಮ್ಮ ಸಂಶೋಧನಾ ಕ್ಷೇತ್ರದ ಬಗ್ಗೆ  ಒಂದಷ್ಟು ಮಾಹಿತಿಯನ್ನು ನೀಡಿ.

ಸು.ಹಾ: ಯಾವುದೇ ದೇಶ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ನಮ್ಮ ದೇಶ ರಕ್ಷಣೆಗಾಗಿ ಮತ್ತೊಂದು ದೇಶವನ್ನು ಅವಲಂಬಿಸಿದಲ್ಲಿ ನಾವು ಮತ್ತೊಮ್ಮೆ ಪರತಂತ್ರಕ್ಕೆ ಒಳಗಾಗಬೇಕಾಗುತ್ತದೆ. ಯುದ್ಧವಿಮಾನಗಳನ್ನು ತಯಾರಿಸುವುದು ಅಥವಾ ತರಿಸಿಕೊಳ್ಳುವುದು ಅಂತಂದರೆ ಸಾವಿರಾರು ಕೋಟಿಗಳ ವ್ಯವಹಾರ. ಒಂದು ವೇಳೆ ವಿದೇಶಗಳಿಂದ ಯುದ್ಧ ವಿಮಾನಗಳನ್ನು ತರಿಸಿದರೆ ನಮ್ಮ ಹಣ ವಿದೇಶಕ್ಕೆ ಹೋಗುತ್ತದೆ. ನಮ್ಮ ದೇಶದಲ್ಲಿಯೇ ಹೂಡಿಕೆಯಾದರೆ ಆ ಹಣವು ಇಲ್ಲೇ ವಿನಿಯೋಗವಾಗುತ್ತದೆ. ಈ ಕಾರ್ಯದಲ್ಲಿ ಸುಮಾರು 80ಕ್ಕೂ ಹೆಚ್ಚಿನ ಬೃಹತ್ ಕೈಗಾರಿಕೆಗಳು,  60ಕ್ಕೂ ಹೆಚ್ಚಿನ  ವಿದ್ಯಾಸಂಸ್ಥೆಗಳು ಹಾಗೂ ಅನೇಕ ಖಾಸಗಿ ಸಂಸ್ಥೆಗಳು ಭಾಗಿಯಾಗಿವೆ.  ಈ ಹಣ ದೇಶದಲ್ಲೇ  ಹೂಡಿಕೆಯಾದರೆ ಹಣದ ಹರಿವು ಇಲ್ಲೇ ನಡೆದು ಅನೇಕ ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತವೆ. ದರಿಂದ ಉದ್ಯೋಗಾವಕಾಶಗಳು ಹೆಚ್ಚಿ ಆರ್ಥಿಕ ಸ್ವಾವಲಂಬನೆ ಉಂಟಾಗುತ್ತದೆ.

ಆಕಾಶದಲ್ಲಿ ತೇಜಸ್ ವಿಮಾನ ಹಾರಾಡುತ್ತಿರುವುದನ್ನು ನೋಡಿದಾಗ ದೇಶದ ರಕ್ಷಣೆಗೆ ನಾನು ಪುಟ್ಟ ಕೊಡುಗೆ ನೀಡಿದೆ ಎನ್ನುವ ಭಾವನೆ ನನ್ನಲ್ಲಿ ಹೆಮ್ಮೆಯನ್ನು ಉಂಟುಮಾಡಿ ನನ್ನನ್ನು  ಪುಳಕಿತನನ್ನಾಗಿಸುತ್ತದೆ. ಇಲ್ಲಿ ಕೆಲಸಮಾಡುತ್ತಿದ್ದಾಗ .ಪಿ.ಜೆ ಅಬ್ದುಲ್ ಕಲಾಮರು ನನಗೆ ಮಾರ್ಗದರ್ಶಕರಾಗಿದ್ದರು.   ಅವರೊಂದಿಗೆ  ಕೆಲಸ ಮಾಡಿದ ಸಂತೃಪ್ತಿ ನನಗಿದೆ.

ಸಂ: ಸರ್‌, ನಮ್ಮ - ನಿಮ್ಮ  ಗುರುಗಳಾದ ಬಾಲಕೃಷ್ಣ ಅಡಿಗರೊಂದಿಗಿನ ಒಡನಾಟದ ಅನುಭವಗಳನ್ನು ಹಂಚಿಕೊಳ್ಳಿ.

ಸು.ಹಾ: ನಾನು ವಿಜಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ನಮಗೆ ಪ್ರಾಣಿಶಾಸ್ತ್ರ ಬೋಧಿಸುತ್ತಿದ್ದ ಅಡಿಗರು ಜೀವಶಾಸ್ತ್ರದ ಕಡೆಗೆ ಆಸಕ್ತಿ ಮೂಡಿಸಿದರು.

ಪ್ರಥಮ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ನಾನು ನನ್ನ ಪ್ರಬಂಧವನ್ನು ಮಂಡಿಸಿದ್ದು ಗುರುಗಳ ಎದುರಿನಲ್ಲಿಯೇ.  ಗುರುಗಳು ರಾಷ್ಟ್ರೋತ್ಥಾನಕ್ಕೆ ಸಂಬಂಧಿಸಿದ ಅನೇಕ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ವಿಜ್ಞಾನ ಸಮ್ಮೇಳನಗಳಲ್ಲಿ, ತರಬೇತಿಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದಾರೆ. ಅವರು ಪ್ರಾಂಶುಪಾಲರಾಗಿದ್ದ ಕಾಲೇಜಿಗೂ ನನ್ನನ್ನು ಕರೆಸಿದ್ದಾರೆ. ಅವರು ಈ ಇಳಿವಯಸ್ಸಿನಲ್ಲೂ ಕೂಡ ಇಷ್ಟು ಲವಲವಿಕೆಯಿಂದ ಕೆಲಸ ಮಾಡುತ್ತಿರುವುದು ,  ಇನ್ನಷ್ಟು ಕೆಲಸ ಮಾಡಬೇಕೆನ್ನುವ ಉತ್ಸಾಹ ,  ಪ್ರೇರಣೆ ನೀಡುತ್ತಿದೆ.

ನೀವು ವಿಜ್ಞಾನಿಯಾಗಿ, ಪ್ರೊಫೆಸರ್ ಆಗಿ  ಆಂಗ್ಲ ಭಾಷೆಯಲ್ಲೇ ವ್ಯವಹರಿಸಬೇಕಾಗಿದ್ದರೂ ಕೂಡ ಷ್ಟು ಸರಾಗವಾಗಿ ಕ್ಲಿಷ್ಟಕರ ತಾಂತ್ರಿಕ ಪಾರಿಭಾಷಿಕ ಪದಗಳನ್ನು ಕನ್ನಡದಲ್ಲಿಯೇ ಬಳಸುತ್ತಿರುವುದು ನಮ್ಮೆಲ್ಲರಿಗೂ ಅಚ್ಚರಿ ತಂದಿದೆ ಸರ್‌. ಇದು ನಮ್ಮೆಲ್ಲರಿಗೂ  ಒಂದು ದೊಡ್ಡ ಪ್ರೇರಣೆ ಸರ್.

ಸು.ಹಾ: ನಾನು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದ ನಂತರವೇ ಇತರ ಕ್ಷೇತ್ರಗಳ ಕುರಿತು ಅಧ್ಯಯನ ಮಾಡುವ ಅವಕಾಶ ದೊರೆಯಿತು.  ಇದು ವಿಜ್ಞಾನ ಬರವಣಿಗೆಯ ಹವ್ಯಾಸ   ನನಗೆ ಕೊಟ್ಟ ಸದವಕಾಶ.   ಒಂದು ವೇಳೆ ನಾವು ವಿಷಯವನ್ನು ಚೆನ್ನಾಗಿ ಗ್ರಹಿಸಿದ್ದಲ್ಲಿ  ಯಾವುದೇ ಭಾಷೆಯಲ್ಲಾದರೂ ಕೂಡ ಅಷ್ಟೇ ಚೆನ್ನಾಗಿ ಸಂವಹನ ಮಾಡಬಲ್ಲೆವು .  

ಸಂ: ಹೌದು ಸರ್‌. ಶಿಕ್ಷಕರಾಗಿ ನಾವು ಅರ್ಥ ಮಾಡಿಕೊಳ್ಳಬೇಕಾದ ಅತ್ಯಂತ ಮಹತ್ವದ ವಿಚಾರ.

ಡಾಕ್ಟರ್ ಬಾಲಕೃಷ್ಣ ಅಡಿಗ: ಹೌದು ನಾನು ಶಿಕ್ಷಕರಿಗೆ ಇದನ್ನೇ ಹೇಳುತ್ತಾ ಬಂದಿದ್ದೇನೆ.

ಸಂ: ಧನ್ಯವಾದಗಳು ಸರ್.  ನಮ್ಮ ವಿಜ್ಞಾನ ಮಾಸಿಕ ಇ - ಪತ್ರಿಕೆಯ ಬ್ಲಾಗನ್ನು ಲೋಕಾರ್ಪಣೆ ಮಾಡಿದ್ದಲ್ಲದೇ ಸಂದರ್ಶನದಲ್ಲಿ  ಸ್ಫೂರ್ತಿಯುತ ಮಾಹಿತಿಗಳನ್ನು ನೀಡಿದಿರಿ.     ಡಿ.ರ್‌.ಡಿ..ದಂತಹ ದೇಶದ ಹೆಮ್ಮೆಯ ಸಂಸ್ಥೆಗಳಲ್ಲಿ ಸಂಶೋಧಕರಾಗಿ , ದೇಶಕ್ಕೆ ನನ್ಯ  ಕೊಡುಗೆಯನ್ನು ಕೊಟ್ಟಂತಹ ನೀವು ವಿಜ್ಞಾನವನ್ನು ಜನಪ್ರಿಯಗೊಳಿಸಲು ಲೇಖನಗಳ ಮೂಲಕ ಪ್ರಯತ್ನಿಸುತ್ತಿದ್ದೀರಿ . ನಿಮ್ಮನ್ನು ಸಂದರ್ಶಿಸುವ ಒಂದು ಅವಕಾಶ ದೊರೆತದ್ದಕ್ಕಾಗಿ ನಿಮಗೂ ನಮ್ಮ ಪ್ರೀತಿಯ ಗುರುಗಳೂ ಮಾರ್ಗದರ್ಶಕರೂ ಆದ ಶ್ರೀಯುತ ಬಾಲಕೃಷ್ಣ ಅಡಿಗರಿಗೂ ಹೃತ್ಪೂರ್ವಕ  ವಂದನೆಗಳು.

ಧನ್ಯವಾದಗಳು.

ಸುಧೀಂದ್ರ ಹಾಲ್ದೊಡ್ಡೇರಿ ಅವರೊಂದಿಗಿನ ಸಂಪೂರ್ಣ ಸಂದರ್ಶನವನ್ನು ಇಲ್ಲಿ ವೀಕ್ಷಿಸಿ.