ಬಿ ಆರ್ ಪಿ ಶಿರಹಟ್ಟಿ
ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ.
ಜಿಲ್ಲಾ ಗದಗ. ದೂರವಾಣಿ 9742193758
ಮಿಂಚಂಚೆ basu.ygp@gmail.com
Saturday, July 4, 2026
ಹೆಚ್ಚುತ್ತಾ ಸಾಗಿದೆ ವ್ಯಾಘ್ರ ಸಂತತಿ;ಸಂರಕ್ಷಿಸಿ,ಕಾಳಜಿವಹಿಸಿ
Thursday, June 4, 2026
ಜೀವದ್ರವ್ಯವಾದ ರಕ್ತದಾನ ಮಾಡಿ, ಜೀವ ಉಳಿಸಿ.
ಜೀವದ್ರವ್ಯವಾದ ರಕ್ತದಾನ ಮಾಡಿ, ಜೀವ ಉಳಿಸಿ.
ಬಿ ಆರ್ ಪಿ ಶಿರಹಟ್ಟಿ
ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ.
ಜಿಲ್ಲಾ ಗದಗ. ದೂರವಾಣಿ 9742193758
ಮಿಂಚಂಚೆ basu.ygp@gmail.com
ಜೂನ್ 14-ವಿಶ್ವ ರಕ್ತದಾನಿಗಳ ದಿನಾಚರಣೆ;ತನ್ನಿಮಿತ್ತ ವಿಶೇಷ ಲೇಖನ.
ವಿಶ್ವ ರಕ್ತದಾನಿಗಳ ದಿನದ ಇತಿಹಾಸ:
ಈ ದಿನವನ್ನು ಮೊದಲ ಬಾರಿಗೆ ಜೂನ್ 14, 2004 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಆರಂಭಿಸಿತು. ಇದನ್ನು 2005 ರಲ್ಲಿ 58 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ವಾರ್ಷಿಕ ಜಾಗತಿಕ ಕಾರ್ಯಕ್ರಮವೆಂದು ಘೋಷಿಸಲಾಯಿತು. ಈ ದಿನವನ್ನು ಆಸ್ಟ್ರಿಯಾದ ಜೀವಶಾಸ್ತ್ರಜ್ಞ ಮತ್ತು ವೈದ್ಯರಾದ "ಕಾರ್ಲ್ ಲ್ಯಾಂಡ್ಸ್ಟೈನರ್" ಅವರ ಜನ್ಮ ವಾರ್ಷಿಕೋತ್ಸವದಂದು ಆಚರಿಸಲಾಗುತ್ತದೆ. ಅವರನ್ನು ಆಧುನಿಕ "ರಕ್ತ ವರ್ಗಾವಣೆಯ ಸ್ಥಾಪಕ" ಎಂದು ಕರೆಯಲಾಗುತ್ತದೆ.
ಉದ್ದೇಶಗಳು ಹೀಗಿವೆ:
~ರಕ್ತದಾನ ಮಾಡುವ ವ್ಯಕ್ತಿಗಳನ್ನು ಗೌರವಿಸಲು ಮತ್ತು ಅವರಿಗೆ ಧನ್ಯವಾದ ಅರ್ಪಿಸುವುದು.
~ಹೊಸ ದಾನಿಗಳಾಗಲು ಹೆಚ್ಚು ಜನರನ್ನು ಪ್ರೋತ್ಸಾಹಿಸುವುದು,
~ವರ್ಗಾವಣೆ ಅವಲಂಬಿತ ರೋಗಿಗಳ ಜೀವನದ ಗುಣಮಟ್ಟವನ್ನು ಪರಿವರ್ತಿಸಲು ಮತ್ತು ವಿಶ್ವದ ಎಲ್ಲಾ ದೇಶಗಳಲ್ಲಿ ಸುರಕ್ಷಿತ ರಕ್ತ ಪೂರೈಕೆಯನ್ನು ನಿರ್ಮಿಸಲು ಸಹಾಯ ಮಾಡಲು ಉತ್ತಮ ಆರೋಗ್ಯ ಹೊಂದಿರುವ ಜನರನ್ನು ನಿಯಮಿತವಾಗಿ ರಕ್ತದಾನ ಮಾಡಲು ಪ್ರೋತ್ಸಾಹಿಸುವುದು.
~ರಾಷ್ಟ್ರೀಯ ರಕ್ತ ಕಾರ್ಯಕ್ರಮಗಳಲ್ಲಿ ಹೂಡಿಕೆ ಮಾಡಲು, ಬಲಪಡಿಸಲು ಮತ್ತು ಉಳಿಸಿಕೊಳ್ಳಲು ಸರ್ಕಾರಗಳು ಅಭಿವೃದ್ಧಿ ಪಾಲುದಾರರಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಬೆಂಬಲವನ್ನು ಸಜ್ಜುಗೊಳಿಸುವ ಸಲುವಾಗಿ ಈ ದಿನವನ್ನು ಆಚರಿಸುವ ಹಿಂದಿನ ಉದ್ದೇಶವಾಗಿದೆ.
ಪ್ರಾಮುಖ್ಯತೆ:
ನಾವೆಲ್ಲರೂ ಬದುಕಿರುವುದಕ್ಕೆ ರಕ್ತವೇ ಮುಖ್ಯ ಕಾರಣ; ರಕ್ತವು,ಶ್ವಾಸಕೋಶದಿಂದ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಆಕ್ಸಿಜನ್ ಅನ್ನು ಒಯ್ಯುತ್ತದೆ.ಈ ಪ್ರಕ್ರಿಯೆಗೆ ಅಡ್ಡಿಯಾದ ತಕ್ಷಣ, ವ್ಯಕ್ತಿಯ ಜೀವಕ್ಕೆ ಅಪಾಯವಿದೆ ಎಂದು ತಿಳಿಯಬೇಕು. ಅದಕ್ಕಾಗಿಯೇ ಮನುಷ್ಯ ಅನೇಕ ಅಪಘಾತ ಪ್ರಕರಣಗಳಲ್ಲಿ ಅತಿಯಾದ ರಕ್ತದ ನಷ್ಟ ಅಥವಾ ಮೆದುಳಿನ ರಕ್ತಸ್ರಾವದಿಂದ ಸಾಯುತ್ತಾನೆ. ಹೀಗಾಗಿ ಕೆಲವೊಮ್ಮೆ ಆಸ್ಪತ್ರೆಯು ರೋಗಿಯ ಕುಟುಂಬವನ್ನು ರಕ್ತ ಸಂಗ್ರಹಿಸಲು ಕೇಳುತ್ತಿರುವುದನ್ನು ನೀವು ಗಮನಿಸಿರಬಹುದು. ರೋಗಿಯ ದೇಹಕ್ಕೆ ಸರಿಯಾದ ಪ್ರಮಾಣದ ರಕ್ತವನ್ನು ನೀಡದಿದ್ದರೆ, ಅವರು ಸಾಯಬಹುದು. ಆದ್ದರಿಂದ ರಕ್ತದಾನ ಮಾಡುವ ಜನರು ಉದಾತ್ತ ಕೆಲಸಗಳನ್ನು ಮಾಡುವುದಲ್ಲದೆ, ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಯ ಜೀವವನ್ನು ಉಳಿಸುತ್ತಾರೆ.
ಹಣದಿಂದ ನೀವು ಯಾರಿಗಾದರೂ ಜೀವನವನ್ನು ಖರೀದಿಸಲು ಸಾಧ್ಯವಿಲ್ಲ, ಆದರೆ ನೀವು ಯಾರಿಗಾದರೂ ರಕ್ತದಾನ ಮಾಡುವ ಮೂಲಕ ಅವರ ಜೀವವನ್ನು ಉಳಿಸಬಹುದು. ಪ್ರತಿಯೊಬ್ಬ ರಕ್ತದಾನಿಯೂ ಜೀವ ರಕ್ಷಕ.
ರಕ್ತದಾನಿಯಾಗಿರಿ, ಹೀರೋ ಆಗಿರಿ - ಅವರ ಜೀವನದ ನೈಜ ಸ್ನೇಹಿತ ನೀವಾಗಿರಿ. ಒಂದು ಜೀವವನ್ನು ಉಳಿಸುವ ಮನುಷ್ಯ ಎಲ್ಲಾ ಮಾನವಕುಲವನ್ನು ಉಳಿಸುತ್ತಾನೆ. ನೀವು ಮಾಡುವ ರಕ್ತದಾನವು ಇನ್ನೊಬ್ಬರ ಮುಖದ ಮೇಲೆ ಅಮೂಲ್ಯವಾದ ನಗುವನ್ನು ತರಿಸುತ್ತದೆ.
* ನೀವು ರಕ್ತ ದಾನ ಮಾಡಿ ಮತ್ತು ಅನೇಕ ಮುಖಗಳಲ್ಲಿ ಮೂಡುವ ಮಂದಹಾಸಕ್ಕೆ ಕಾರಣರಾಗಿ.
* ರಕ್ತದಾನದಿಂದ ನಿಮಗೆ ಏನೂ ಖರ್ಚಾಗುವುದಿಲ್ಲ, ಆದರೆ ಅದು ಅಮೂಲ್ಯ ಜೀವವನ್ನು ಉಳಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ರಕ್ತದಾನ ಮಾಡುವ ವ್ಯಕ್ತಿಗಳಿಗೆ ಧನ್ಯವಾದ ಸಲ್ಲಿಸಲು ಮತ್ತು ಇನ್ನೂ ದಾನ ಮಾಡದವರನ್ನು ಪ್ರೋತ್ಸಾಹಿಸುವ ಸಲುವಾಗಿ ಜಾಗತಿಕ ವೇದಿಕೆಯನ್ನು ಒದಗಿಸಿಕೊಡುವುದು ಈ ದಿನದ ಮಹದಾಶಯವಾಗಿದೆ. ಹಾಗಾಗಿ ಸುರಕ್ಷಿತ ರಕ್ತವು ಜೀವಗಳನ್ನು ಉಳಿಸುತ್ತದೆ. ಆಸಕ್ತರು 'ರಕ್ತದಾನ ಮಾಡಿ ಒಂದು ಅಮೂಲ್ಯವಾದ ಜೀವ ಉಳಿಸಿ'.
ಕೊನೆಯ ಮಾತು: ರಕ್ತದಾನ ಒಂದು ಅತ್ಯುತ್ತಮ ಜನಸೇವೆ. ರಕ್ತದಾನ ಮಾಡೋಣ, ಜೀವ ಉಳಿಸೋಣ.
Monday, May 4, 2026
ಮೇ ತಿಂಗಳ ಮೆರುಗಿಗೆ ಗುಲ್ ಮೊಹರ್ ಮೊಹರು..!
ಮೇ ತಿಂಗಳ ಮೆರುಗಿಗೆ ಗುಲ್ ಮೊಹರ್ ಮೊಹರು..!
ಬಸವರಾಜ ಎಮ್ ಯರಗುಪ್ಪಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಸಾ.ಪೊ ರಾಮಗೇರಿ.ತಾಲ್ಲೂಕು ಲಕ್ಷ್ಮೇಶ್ವರ.
ಜಿಲ್ಲಾ ಗದಗ. ಮೊ.ಸಂ. 9742193758
ಮಿಂಚಂಚೆ basu.ygp@gmail.com
ಗುಲ್ ಮೊಹರ್ ಸುಂದರ ಹೂವಿನ ಮರಗಳ ಕುರಿತು
ವಿಶೇಷ ಲೇಖನ.
"ರಾಷ್ಟ್ರವಾಗಿ ಅಸ್ತಿತ್ವದಲ್ಲಿರಲು, ರಾಜ್ಯವಾಗಿ ಏಳಿಗೆ ಹೊಂದಲು, ಜನರಂತೆ ಬದುಕಲು, ನಾವು ಮರಗಳನ್ನು ಹೊಂದಿರಬೇಕು." - ಥಿಯೋಡರ್ ರೂಸ್ವೆಲ್ಟ್ ಹೇಳಿರುವ ಹಾಗೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಆಮ್ಲಜನಕ ಪೂರೈಕೆ ಮಾಡುವ ಮರಗಳು ನಮ್ಮ ಇರುವಿಕೆಯನ್ನು ಅಸ್ತಿತ್ವದಲ್ಲಿರುವ ಹಾಗೆ ನೋಡಿಕೊಳ್ಳುತ್ತವೆ.
ಹೌದು ಓದುಗರೆ ನಾನು ಹೇಳ ಹೊರಟಿರುವುದು
ಒಂದು ಸುಂದರ ಉಜ್ವಲ ಕೆಂಬಣ್ಣದ ಹೂ ಬಿಡುವ ಗುಲ್ಮೊಹರ್ ಮರದ ಬಗ್ಗೆ. ನನ್ನೂರು ರಾಮಗೇರಿಯಿಂದ
ಲಕ್ಷ್ಮೇಶ್ವರದ ಇಟ್ಟಿಗೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ, ಬಟ್ಟೂರ ಹಾಗೂ ಗೊಜನೂರ ಮಾರ್ಗದ ರಸ್ತೆ ಬದಿಯಲ್ಲಿ ಅಬ್ಬಾ..! ಕೆಂಪು ಹೂಗಳ ಸಂಭ್ರಮ ಈಗ
ಹೇಳತೀರದು..! ಹಸಿರು ಎಲೆಗಳಿಗೆ ಒಂಚೂರೂ ಜಾಗ ನೀಡದೇ ಅರಳುವ ಹೂವು..!
'ಹೂವಿನಿಂದ ನಾರು ಸ್ವರ್ಗಕ್ಕೇರಿತು' ಎಂಬಂತೆ ತನ್ನ ಕೆಂಬಣ್ಣದ ಚೆಲುವ ಸಿರಿಯ ಹೂಗಳಿಂದ ಕ್ಷಣ ಮನಸ್ಸು
ಮುದಗೊಳಿಸುವ, ತನ್ನ ಅಂದದ ಬಣ್ಣದಿಂದ ಆಕರ್ಷಿಸುವ ‘ಗುಲ್
ಮೊಹರ್’ ಹೂಗಳು ಬಿರು ಬೇಸಿಗೆಯ ಬಿಸಿಲ(ಬೆಂಕಿಯ)ಲ್ಲಿ ಅರಳುವ ಸುಂದರಿಯರು ಎಂದರೆ
ಉತ್ಪ್ರೇಕ್ಷೆಯಲ್ಲ. ಹಾಗೆಯೇ ಈ ವರ್ಷ ಎಪ್ರೀಲ್ - ಮೇ ತಿಂಗಳ ಮೊದಲನೇ ವಾರದಿಂದ ಶಿರಹಟ್ಟಿಯ
ಡಬಾಲಿ ಶಾಲೆಯ ಆವರಣದಲ್ಲಿ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿ ಕೆಂಪು ಹೂಗಳ ಗುಲ್ಮೊಹರ್ ಮರಗಳು
ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಹೀಗೆ ಬಹುತೇಕ ರಸ್ತೆ ಪಕ್ಕದ ಮರಗಳಲ್ಲಿ ಗೋಚರಿಸುವ
ವಿಶಿಷ್ಟ- ಅಷ್ಟೇ ವಿಭಿನ್ನ ಬಗೆಯಲ್ಲಿ ಬೆಳೆದು ನಿಲ್ಲುವ ಈ ಗುಲ್ ಮೊಹರ್ ಮರಗಳಲ್ಲಿನ ಕೆಂಪು
ಹೂಗಳನ್ನು ಕಂಡ ಕ್ಷಣ ಮನಸ್ಸು ಸೆಳೆವ ಜೊತೆಗೆ ಹಿತಾನುಭವ ನೀಡುತ್ತವೆ.
ಪ್ರವಾಸಿಗರ ಆಕರ್ಷಣೀಯ ಮರಗಳು:
ಈ ಭಾಗದಲ್ಲಿ ಸ್ಥಳಗಳನ್ನು ವೀಕ್ಷಿಸಲು ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ತನ್ನ ಚೆಲುವ ಸೊಬಗಿನಿಂದ ಈ ಗುಲ್ ಮೊಹರ್ ಹೂವಿನ ಮರಗಳು ಅವರಿಗೆ ವಿಶಿಷ್ಟ ಸ್ವಾಗತ ಕೋರಿ, ಮನಸ್ಸಿಗೆ ಸಂತೋಷ ನೀಡುತ್ತವೆ. ಇವುಗಳಿಗೆ ಉತ್ತರ ಕರ್ನಾಟಕದಲ್ಲಿ ಸಂಕೇಶ್ವರ ಮರ ಎಂದೇ ಹೆಸರು. ಈ ಗಿಡಗಳು ಪ್ರವಾಸಿಗರನ್ನು ಆಕರ್ಷಿಸುವ ವಿಶಿಷ್ಟವಾದ ಗುಣಗಳನ್ನು ಹೊಂದಿವೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ
ಈ ಬಾರಿ ಕೆಂಡದಂತಹ ಉರಿ ಬಿಸಿಲು. ಸೆಕೆಯ ಸಂಕಟ, ತಾಪಕ್ಕೆ ದೂರ ಓಡುವಂತೆ ಮಾಡಿದ್ದರೆ, ಅಂಥಾ ಬಿಸಿಲಲ್ಲಿ ಗುಲ್ (ಹೂ) ಮೊಹರ್ (ನವಿಲು) ಜೀವ ಕಳೆ ಪಡೆದಿರುವಂತೆ, ನಸು ನಗುತ್ತಲೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವುದು ಈ ಹೂವಿನ
ವಿಶೇಷತೆಯಾಗಿ ಬಿಟ್ಟಿದೆ.
ಗುಲ್ ಮೊಹರ್ ಅಥವಾ ಮೇ ಫ್ಲವರ್ ಮರದ ಪರಿಚಯ:
ಡೆಲೋನಿಕ್ಸ್ ರೆಜಿಯಾ ಎಂಬುದು ಗುಲ್ಮೊಹರ್ ಮರದ ವೈಜ್ಞಾನಿಕ ಹೆಸರು. ಇದು ಮಡಗಾಸ್ಕರ್ನಲ್ಲಿ ಸ್ಥಳೀಯವಾದ ಸೀಸಲ್ಪಿನಿಯೊಡೆಯೇ ಉಪಕುಟುಂಬದ ಫ್ಯಾಬೇಸಿಯ ಹುರುಳಿ ಕುಟುಂಬದಲ್ಲಿ ಹೂಬಿಡುವ ಸಸ್ಯದ ಒಂದು ಜಾತಿಯಾಗಿದೆ.ಸಸ್ಯಶಾಸ್ತ್ರಜ್ಞ ವೆನ್ಸೆಲ್ ಬೋಜರ್ ಅವರು
19 ನೇ ಶತಮಾನದ ಆರಂಭದಲ್ಲಿ ಅದರ ಸ್ಥಳೀಯ ಮಡಗಾಸ್ಕರ್ನಲ್ಲಿ ಕಂಡುಹಿಡಿದರು.ಗುಲ್ಮೊಹರ್
ಹೂವಿನಲ್ಲಿಯೇ ಅದ್ದೂರಿ ಮರವಾಗಿದೆ - ಕೆಲವರು ವಿಶ್ವದ ಅತ್ಯಂತ ವರ್ಣರಂಜಿತ ಮರ ಎಂದು
ಹೇಳುತ್ತಾರೆ. ವಸಂತ ಮತ್ತು ಬೇಸಿಗೆಯಲ್ಲಿ ಹಲವಾರು ವಾರಗಳವರೆಗೆ ಇದು ಜ್ವಾಲೆಯಾಗಿದೆ. ಈ ರೀತಿ
ಕೆಂಪು- ಹೂವುಗಳು ಗುಲ್ ಮೊಹರ್ ಮರ ಸಮೃದ್ಧ ಸಮೂಹಗಳಿಂದ ಮುಚ್ಚಲ್ಪಟ್ಟಿರುತ್ತದೆ.
ಇದು ಜರೀಗಿಡದಂತಹ ಎಲೆಗಳು ಮತ್ತು
ಬೇಸಿಗೆಯಲ್ಲಿ ಕಿತ್ತಳೆ-ಕೆಂಪು ಹೂವುಗಳ ಅಬ್ಬರದ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಪ್ರಪಂಚದ
ಅನೇಕ ಉಷ್ಣವಲಯದ ಭಾಗಗಳಲ್ಲಿ ಇದನ್ನು ಅಲಂಕಾರಿಕ ಮರವಾಗಿ ಬೆಳೆಸಲಾಗುತ್ತದೆ ಮತ್ತು
ಇಂಗ್ಲೀಷಿನಲ್ಲಿ ಇದನ್ನು ರಾಯಲ್ ಪೊಯಿನ್ಸಿಯಾನಾ , ಫ್ಲಾಂಬಾಯಿಂಟ್ , ಫೀನಿಕ್ಸ್ ಹೂವು,ಕಾಡಿನ ಜ್ವಾಲೆ ಅಥವಾ ಜ್ವಾಲೆಯ ಮರ ಎಂದೇ ಹೆಸರುವಾಸಿಯಾಗಿದೆ.
ವಿವಿಧತೆಯ ಹೆಸರುಗಳು:
ಭಾರತದ ವಿವಿಧ ಭಾಗಗಳಲ್ಲಿ ಇದನ್ನು ಬೀದಿ ಮರವಾಗಿ ವ್ಯಾಪಕವಾಗಿ ಬೆಳೆಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ಇದನ್ನು ಮೇ-ಹೂವಿನ ಮರ(May Flower), ಗುಲ್ಮೊಹರ್ ಅಥವಾ ಗುಲ್ ಮೊಹರ್ ಎಂದು ಕರೆಯಲಾಗುತ್ತದೆ. ಹಾಗೇಯೇ ಪಶ್ಚಿಮ ಬಂಗಾಳ , ಮತ್ತು ಒಡಿಶಾದಲ್ಲಿ ಇದನ್ನು ಕೃಷ್ಣ ಚುರಾ ಎಂದು ಕರೆಯಲಾಗುತ್ತದೆ. ಶ್ರೀಲಂಕಾದಲ್ಲಿ ಇದನ್ನು ಸಿಂಹಳದಲ್ಲಿ ಮಾರ ಮರ ಎಂದು ಕರೆಯಲಾಗುತ್ತದೆ. ಆದರೂ ಸ್ವಲ್ಪ ಸಮಯದವರೆಗೆ ಇದನ್ನು ನೆರಳಿನ ಮರವಾಗಿ ಪರಿಚಯಿಸಲು ಕಾರಣವಾದ ಬ್ರಿಟಿಷ್ ನಾಗರಿಕ ಸೇವಕಲೆ ಮೆಸುರಿಯರ್ ನಂತರ ಇದನ್ನು ಲಾಮಾಸೂರಿಯ ಮರ ಎಂದು ಕರೆಯಲಾಯಿತು.ಇದನ್ನು ಪಾಕಿಸ್ತಾನದ ಕರಾಚಿಯಲ್ಲಿಯೂ ಬೆಳೆಯಲಾಗುತ್ತದೆ . ಮಾರಿಷಸ್ ಮತ್ತು ಲಾರಿಯೂನಿಯನ್ನಲ್ಲಿ ಇದು ಹೊಸ ವರ್ಷದ ಬರುವಿಕೆಯನ್ನು ಪ್ರಕಟಿಸುತ್ತದೆ.
ಸಾಂಸ್ಕೃತಿಕ ಮಹತ್ವ:
ಭಾರತದ ರಾಜ್ಯವಾದ ಕೇರಳದಲ್ಲಿ , ರಾಯಲ್ ಪೊಯಿನ್ಸಿಯಾನಾವನ್ನು ಕಾಲ್ವರಿಪ್ಪು (ಕಾಲ್ವರಿಪೂವ್) ಎಂದು ಕರೆಯಲಾಗುತ್ತದೆ , ಇದರರ್ಥ " ಕ್ಯಾಲ್ವರಿ ಹೂವು ". ಕೇರಳದ ಸಂತ ಥಾಮಸ್ ಕ್ರಿಶ್ಚಿಯನ್ನರಲ್ಲಿ ಒಂದು ಜನಪ್ರಿಯ ನಂಬಿಕೆಯಿದೆ.ಅದೆನೆಂದರೆ ಯೇಸುವನ್ನು ಶಿಲುಬೆಗೇರಿಸಿದಾಗ, ಅವನ ಶಿಲುಬೆಯ ಸಮೀಪದಲ್ಲಿ ಒಂದು ಸಣ್ಣ ರಾಯಲ್ ಪೊಯಿನ್ಸಿಯಾನ ಮರವಿತ್ತು . ಮರದ ಹೂವುಗಳ ಮೇಲೆ ಯೇಸುಕ್ರಿಸ್ತನ ರಕ್ತವು ಚೆಲ್ಲಲ್ಪಟ್ಟಿ ಮತ್ತು ರಾಯಲ್ ಪೊಯಿನ್ಸಿಯಾನಾ ಹೂವುಗಳು ತೀಕ್ಷ್ಣವಾದ ಕೆಂಪು ಬಣ್ಣವನ್ನು ಪಡೆಯುತ್ತವೆ ಎಂದು ನಂಬಲಾಗಿದೆ.ಇದನ್ನು ಕೇರಳದ ಹಲವು ಪ್ರದೇಶಗಳಲ್ಲಿ ವಾಗಾ ಎಂದೂ ಕರೆಯುತ್ತಾರೆ.
ಗುಲ್ ಮೊಹರ್ ಉಪಯುಕ್ತತೆ:
ಗುಲ್ ಮೊಹರ್ ತನ್ನ ಅಲಂಕಾರಿಕ ಮೌಲ್ಯದ
ಜೊತೆಗೆ,
ಉಷ್ಣವಲಯದ ಪರಿಸ್ಥಿತಿಗಳಲ್ಲಿ ಇದು ಉಪಯುಕ್ತ ನೆರಳಿನ ಮರವಾಗಿದೆ.
ಏಕೆಂದರೆ ಇದು ಸಾಮಾನ್ಯವಾಗಿ ಸಾಧಾರಣ ಎತ್ತರಕ್ಕೆ ಬೆಳೆಯುತ್ತದೆ (ಹೆಚ್ಚಾಗಿ 5 ಮೀ ಅಥವಾ 15 ಅಡಿ, ಆದರೆ ಇದು ಗರಿಷ್ಠ ಎತ್ತರ 12 ಮೀ ಅಥವಾ 40 ಅಡಿ ತಲುಪಬಹುದು) ಆದರೆ ವ್ಯಾಪಕವಾಗಿ
ಹರಡುತ್ತದೆ ಮತ್ತು ಅದರ ದಟ್ಟವಾದ ಎಲೆಗಳು ಪೂರ್ಣ ನೆರಳು ನೀಡುತ್ತದೆ. ಗಮನಾರ್ಹವಾದ ಶುಷ್ಕ
ಋತುವಿನ ಪ್ರದೇಶಗಳಲ್ಲಿ, ಇದು ಬರಗಾಲದ
ಸಮಯದಲ್ಲಿ ತನ್ನ ಎಲೆಗಳನ್ನು ಚೆಲ್ಲುತ್ತದೆ. ಆದರೆ ಇತರ ಪ್ರದೇಶಗಳಲ್ಲಿ ಇದು ವಾಸ್ತವಿಕವಾಗಿ
ನಿತ್ಯಹರಿದ್ವರ್ಣವಾಗಿರುತ್ತದೆ.
ಇದಲ್ಲದೆ ಗುಲ್ಮೊಹರ್ ವಿಷಕಾರಿಯಲ್ಲದ
ಮತ್ತು ಹೂವಿನ ಮೊಗ್ಗುಗಳು ಖಾದ್ಯ ಮತ್ತು ಸುವಾಸನೆಗಾಗಿ ಬಳಸಲಾಗುತ್ತದೆ.ಆದರೆ ಗುಲ್ಮೊಹರ್
ಕಾಡಿನಲ್ಲಿ ಅಳಿವಿನಂಚಿನಲ್ಲಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರೆ ತಪ್ಪಾಗಲಾರದು.ಇದು
ಆಳವಿಲ್ಲದ ಬೇರುಗಳನ್ನು ಹೊಂದಿರುವ ದೀರ್ಘಕಾಲಿಕ ಸಸ್ಯವಾಗಿದ್ದರಿಂದ ಭಾರೀ ಗಾಳಿ ಮತ್ತು ಮಳೆಯ
ಸಮಯದಲ್ಲಿ ಬೀಳುವ ಸಾಧ್ಯತೆಯಿದೆ.
ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ಅಳಿವಿನಂಚಿನಲ್ಲಿರುವ ಮರಗಳು:
ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿ
ನಿರ್ಮಾಣಕ್ಕಾಗಿ ಕಳೆದ ಆರೇಳು ವರ್ಷಗಳ ಹಿಂದೆ ಸಾವಿರಾರು ಗುಲ್ ಮೊಹರ್ ಮರಗಳ ಮಾರಣ ಹೋಮವಾಗಿವೆ.
ಮತ್ತೆ ಹೊಸ ಮಾರ್ಗಕ್ಕೆ ಈಗಿನ ಅನೇಕ ಗುಲ್ ಮೊಹರ್ ಮರಗಳು ಬಲಿಯಾಗಿವೆ. ಅಭಿವೃದ್ಧಿ ಹಾಗೂ
ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಮುಂಬರುವ ದಿನಗಳಲ್ಲಿ ಈ ಸುಂದರ ‘ಗುಲ್ ಮೊಹರ್’ ಹೂ, ಪ್ರಕೃತಿ ಪ್ರಿಯರಿಗೆ ಅಪರೂಪ ಆಗುತ್ತಿವೆ ಎಂಬುದು ಬೇಸರದ ಸಂಗತಿಯಾಗಿದೆ.ಏನೇ
ಇರಲಿ ಕವಿಯ ಬಣ್ಣನೆಯಂತೆ ‘ಹೂ ಚೆಲುವೆಲ್ಲಾ ತಂದೆಂದಿತು’ ಎನ್ನುವ ಗುಲ್ ಮೊಹರ್ ಹೂಗಳ ಅಂದ–ಚಂದ, ಆಕರ್ಷಣೆಗೆ ತನಗೆ ತಾನೇ ಸಾಟಿ ಎಂದು ಕೆಂಬಣ್ಣದಿಂದ ಮೈ, ಮನಗಳಿಗೆ ಪ್ರಫುಲ್ಲತೆ ನೀಡುವ ಹೂಗಳು ಬಿರು ಬಿಸಿಲಲ್ಲೂ ನಸುನಗುತ್ತಾ
ಪ್ರವಾಸಿಗರು, ಪ್ರಯಾಣಿಕರನ್ನು ಸೂಜಿಗಲ್ಲಿನಂತೆ
ತಮ್ಮತ್ತ ಸೆಳೆವ ಇವು ಪುಷ್ಪಲೋಕದ ಅಪ್ಸರೆಯರು ಎಂದು ಹೇಳಿದರೆ ತಪ್ಪಾಗಲಾರದು.
ಒಟ್ಟಾರೆಯಾಗಿ ನನ್ನ ದೃಷ್ಟಿಯಲ್ಲಿ ಈ 'ಮೇಫ್ಲವರ್ಸ್' ಕೆಂಪು ಬಿಸಿಯಾದ ಎಪ್ರೀಲ್-ಮೇನಲ್ಲಿ ತಮ್ಮ ಆಕರ್ಷಕವಾದ ಕೆಂಪು ಹೂವುಗಳೊಂದಿಗೆ ಸಸ್ಯ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತವೆ. ಹಾಗೆಯೇ ಮನಸ್ಸಿಗೆ ಮುದ ನೀಡುವ ಮೂಲಕ ಆರೋಗ್ಯ ಚೇತನಕ್ಕೆ ಇಂಬು ನೀಡುತ್ತವೆ.
Saturday, April 4, 2026
"ಪಾರಂಪರಿಕ ತಾಣಗಳ ರಕ್ಷಣೆ; ನಮ್ಮೆಲ್ಲರ ಹೊಣೆ"
"ಪಾರಂಪರಿಕ ತಾಣಗಳ ರಕ್ಷಣೆ; ನಮ್ಮೆಲ್ಲರ ಹೊಣೆ"
ಲೇಖನ: ಬಸವರಾಜ ಎಮ್ ಯರಗುಪ್ಪಿ
ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು
ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ.
ಜಿಲ್ಲಾ ಗದಗ, ದೂರವಾಣಿ 9742193758 ಮಿಂಚಂಚೆ basu.ygp@gmail.com
ಎಪ್ರೀಲ್ 18-ವಿಶ್ವ ಪರಂಪರೆಯ ದಿನ ತನ್ನಿಮಿತ್ತ ವಿಶೇಷ ಲೇಖನ.
ನಮ್ಮ ಪರಂಪರೆಯನ್ನು ಸಂರಕ್ಷಿಸುವ ಒಂದು ಸಂಘಟಿತ ಪ್ರಯತ್ನವು ನಮ್ಮ ಸಾಂಸ್ಕೃತಿಕ, ಶೈಕ್ಷಣಿಕ, ಸೌಂದರ್ಯ, ಸ್ಪೂರ್ತಿದಾಯಕ ಮತ್ತು ಆರ್ಥಿಕ ಪರಂಪರೆಗಳಿಗೆ ಒಂದು ಪ್ರಮುಖ ಕೊಂಡಿಯಾಗಿದೆ - ಈ ಎಲ್ಲಾ ವಿಷಯಗಳು ಅಕ್ಷರಶಃ ನಮ್ಮನ್ನು ನಾವಾಗುವಂತೆ ಮಾಡುತ್ತದೆ. - ಎಂದು ಸ್ಟೀವ್ ಬೆರ್ರಿ ಹೇಳಿದ ಮಾತು ಅಕ್ಷರಶಃ ಸತ್ಯ.ಹೀಗಾಗಿ ನಮ್ಮ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯು
ನಮ್ಮ ರಾಷ್ಟ್ರವನ್ನು ನಿರ್ಮಿಸಲು ಸಹಾಯ ಮಾಡುವ ಆಳವಾದ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು.
ಕಲೆಗಳು ನಮ್ಮ ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಮತ್ತು ರೋಮಾಂಚಕ ಭಾಗವಾಗಿದೆ. ಅದರ ಹಲವು ರೂಪಗಳಲ್ಲಿ, ಕಲೆಯು ನಮ್ಮ ಬಗ್ಗೆ ಮತ್ತು ನಮ್ಮ ಸಮಾಜದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ನಮಗೆ ಅನುವು ಮಾಡಿಕೊಡುತ್ತದೆ. ಇತರೆ ಸಂಸ್ಕೃತಿಗಳ ಜನರ ಬಗ್ಗೆ ತಿಳಿದುಕೊಳ್ಳಲು ನಮಗೆ ಇದು ಒಂದು ಅನನ್ಯ ಮಾರ್ಗವನ್ನು ಒದಗಿಸುತ್ತದೆ.
ಹಾಗಾಗಿ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯ ಎತ್ತಿ ಹಿಡಿಯುವುದರೊಂದಿಗೆ ಅದರ ದುರ್ಬಲತೆಯ ಬಗ್ಗೆಯೂ ಸಹ ಜಾಗೃತಿ ಮೂಡಿಸುವುದರ ಮೂಲಕ ಅದು ನಶಿಸದಂತೆ ತಡೆಹಿಡಿಯುವ ಸಾರ್ಥಕ ದೂರದೃಷ್ಟಿಯೊಂದಿಗೆ ಪಾರಂಪರಿಕ ತಾಣಗಳು, ಸ್ಮಾರಕಗಳ ಇತಿಹಾಸ ಮತ್ತು ವೈವಿಧ್ಯತೆ ಅವುಗಳನ್ನು ರಕ್ಷಣೆ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯ ಸಮುದಾಯಗಳು ಮತ್ತು ಜನರು ತಮ್ಮ ಜೀವನದಲ್ಲಿ ಸಾಂಸ್ಕೃತಿಕ ಪರಂಪರೆಯ ಮೌಲ್ಯವನ್ನು ಗುರುತಿಸಿ ಅರಿಯುವುದು ಹಾಗೂ ಅದನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವದಾದ್ಯಂತ ಪ್ರತಿವರ್ಷ ಎಪ್ರೀಲ್ 18 ರಂದು ವಿಶ್ವ ಪರಂಪರೆಯ ದಿನವೆಂದು ಆಚರಿಸಲಾಗುತ್ತದೆ.
ವಿಶ್ವ ಪಾರಂಪರಿಕ ದಿನವನ್ನು ಮೊದಲ ಬಾರಿಗೆ ಪರಿಚಯಿಸಿ ಎಲ್ಲೆಡೆ ಅನುಷ್ಠಾನಕ್ಕೆ 1983 ರಲ್ಲಿ ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ (ಯುನೆಸ್ಕೋ-UNESCO)ತಂದಿತು. ಪ್ರಪಂಚದ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಮಹಾನ್ ಗುರಿಯನ್ನು ಈ ದಿನ ಹೊಂದಿದೆ.ಈ ದಿನದ ಅಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಘಿಕ ಪ್ರಯತ್ನಗಳನ್ನು ನಡೆಸುವ ಮೂಲಕ ವಿಶ್ವದ ಪ್ರತಿಯೊಂದೂ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
#ವಿಶ್ವ ಪಾರಂಪರಿಕ ತಾಣ ಎಂದರೇನು?
ವಿಶ್ವ ಪರಂಪರೆಯ ತಾಣಗಳನ್ನು ನೈಸರ್ಗಿಕ ಅಥವಾ ಮಾನವ ನಿರ್ಮಿತ ಪ್ರದೇಶಗಳು ಮತ್ತು ವಿಶೇಷ ರಕ್ಷಣೆಯ ಅಗತ್ಯವಿರುವ ಸಾಂಸ್ಕೃತಿಕ, ನೈಸರ್ಗಿಕ ಮತ್ತು ಐತಿಹಾಸಿಕ ಸ್ಥಳ ಅಥವಾ ಕಟ್ಟಡಗಳಿಗೆ ವಿಶ್ವ ಪಾರಂಪರಿಕ ತಾಣ ಎಂದು ಕರೆಯಲಾಗುತ್ತದೆ.ಈ ತಾಣಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಮಂಡಳಿ (ಯುನೆಸ್ಕೋ) ಅಧಿಕೃತವಾಗಿ ಗುರುತಿಸಿ ವಿಶ್ವ ಪಾರಂಪರಿಕ ತಾಣಗಳೆಂದು ಘೋಷಿಸುತ್ತದೆ. ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿ ಅದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದೊಂದಿಗೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸಿತು.
#ಪಾರಂಪರಿಕ ತಾಣಗಳ ಗುರುತಿಸುವ(ಸೇರ್ಪಡೆ) ಕಾರ್ಯ:
ಯುನೆಸ್ಕೋ, ವಿಶ್ವದ ಕೆಲವು ವಿಶಿಷ್ಟ ತಾಣಗಳನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸುತ್ತದೆ. ಇಂತಹ ತಾಣಗಳು ಅರಣ್ಯ, ಪರ್ವತ, ಸರೋವರ, ಮರುಭೂಮಿ, ಸ್ಮಾರಕ, ಕಟ್ಟಡ, ಸಂಕೀರ್ಣ ಅಥವಾ ಒಂದು ನಗರವಾಗಿರಬಹುದು.21 ಸದಸ್ಯ ರಾಷ್ಟ್ರಗಳನ್ನೊಳಗೊಂಡ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಸಮಿತಿಯು,ಇಂತಹ ತಾಣಗಳ ಅರ್ಹತೆಯನ್ನು ಅಳೆದು ಸೂಕ್ತವಾದಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸುತ್ತದೆ. ಈ ಸಮಿತಿಯ ಸದಸ್ಯತ್ವವು ನಿಗದಿತ ಅವಧಿಯದಾಗಿದ್ದು ಸದಸ್ಯರಾಷ್ಟ್ರಗಳು ಬದಲಾಗುತ್ತಿರುತ್ತವೆ.
ವಿಶ್ವದ ಎಲ್ಲೆಡೆಯ ಅತಿ ಹೆಚ್ಚಿನ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಮಹತ್ವಗಳನ್ನು ಹೊಂದಿರುವ ತಾಣಗಳನ್ನು ಗುರುತಿಸಿ, ಪಟ್ಟಿಮಾಡಿ ಉಳಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೆಲವು ಸಂದರ್ಭಗಳಲ್ಲಿ ಇಂತಹ ತಾಣಗಳ ರಕ್ಷಣೆಗಾಗಿ ವಿಶ್ವ ಪರಂಪರೆಯ ನಿಧಿಯಿಂದ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ನವೆಂಬರ್ 16, 1972ರಲ್ಲಿ ಜಾರಿಗೆ ಬಂದ ಈ ಯೋಜನೆಯನ್ನು ಇದುವರೆಗೆ 184 ರಾಷ್ಟ್ರಗಳು ಅನುಮೋದಿಸಿವೆ.
#ವಿಶ್ವದ ಪಾರಂಪರಿಕ ತಾಣಗಳು:
ವಿಶ್ವದಾದ್ಯಂತ ಈವರೆಗೆ ವಿಶ್ವದ 167 ರಾಷ್ಟ್ರಗಳ ಒಟ್ಟು 1,121 ತಾಣಗಳಿಗೆ ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಲಾಗಿದೆ. ಇವುಗಳ ಪೈಕಿ 869 ಸಾಂಸ್ಕೃತಿಕ ನೆಲೆಗಳಾಗಿದ್ದರೆ, 213 ಪ್ರಾಕೃತಿಕ ತಾಣಗಳು ಮತ್ತು 39 ತಾಣಗಳು ಈ ಎರಡರ ಮಹತ್ವವನ್ನೂ ಹೊಂದಿವೆ.
#ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳು:
ಭಾರತವು ಒಟ್ಟು 3691 ಪಾರಂಪರಿಕ ಸ್ಮಾರಕಗಳು ಮತ್ತು ತಾಣಗಳನ್ನು ಹೊಂದಿದ್ದು ಅವುಗಳಲ್ಲಿ, 40 ಸ್ಮಾರಕ ಅಥವಾ ತಾಣಗಳನ್ನು ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣಗಳು ಎಂದು ಘೋಷಿಸಲ್ಪಟ್ಟಿವೆ. ಭಾರತದಲ್ಲಿ ಮಂಚೂಣಿಯಾಗಿ ಕಾಣಬಹುದಾದ ಸಾಂಸ್ಕೃತಿಕ ವಿಶ್ವ ಪರಂಪರೆಯ ತಾಣಗಳೆಂದರೆ ತಾಜ್ ಮಹಲ್, ಹಂಪಿ, ಅಜಂತಾ ಮತ್ತು ಎಲ್ಲೋರಾ ಗುಹೆಗಳು, ಸೂರ್ಯ ದೇವಾಲಯ, ಸಂಚಿ ಸ್ತೂಪ, ರಾಣಿ ಕಿ ವಾವ್, ರಾಜಸ್ಥಾನದ ಬೆಟ್ಟದ ಕೋಟೆಗಳು ಹೀಗೆ ಪಟ್ಟಿ ಮುಂದುವರಿಯುತ್ತದೆ.
ಹಾಗೆಯೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಭಾರತದಿಂದ ಶಾಂತಿನಿಕೇತನ ಮತ್ತು ಹೊಯ್ಸಳ ದೇವಾಲಯ ಸಮೂಹಗಳನ್ನು ಸೇರಿಸಲು ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಯುನೆಸ್ಕೋಗೆ ಕಳುಹಿಸಲಾಗಿದೆ. ಇದಲ್ಲದೆ ದೇಶದ 42 ತಾಣಗಳನ್ನು ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
#ಪ್ರಾಕೃತಿಕ ತಾಣಗಳಿಗೂ ವಿಶ್ವಪಾರಂಪರಿಕ ಗರಿ:
ಇನ್ನು ನೈಸರ್ಗಿಕವಾಗಿ ಪರಂಪರೆಯ ತಾಣಗಳಲ್ಲಿ ಪಶ್ಚಿಮ ಘಟ್ಟಗಳು, ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ, ಕಾಜಿರಂಗ ವನ್ಯಜೀವಿ ಅಭಯಾರಣ್ಯ, ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ, ನಂದಾದೇವಿ ಮತ್ತು ಹೂವಿನ ರಾಷ್ಟ್ರೀಯ ಉದ್ಯಾನವನಗಳು ಮುಂತಾದವುಗಳನ್ನು ಸೇರಿಸಲಾಗಿದೆ. ಆದರೂ, ಹೆಚ್ಚಿನ ಸಂಖ್ಯೆಯ ಸಂರಕ್ಷಿತ ಸೈಟ್ಗಳನ್ನು ಸಹ ಗುರುತಿಸಲಾಗಿದ್ದು ಉತ್ತರ ಪ್ರದೇಶ ರಾಜ್ಯದ ವ್ಯಾಪ್ತಿಯಲ್ಲಿ ಸುಮಾರು 745 ತಾಣಗಳಿದ್ದರೆ, ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದು ಇದರ ವ್ಯಾಪ್ತಿಯಲ್ಲಿ 506 ಸಂರಕ್ಷಿತ ತಾಣಗಳಿವೆ.
ಒಟ್ಟಾರೆಯಾಗಿ ಪ್ರತಿ ವಿಶ್ವ ಪರಂಪರೆಯ ತಾಣವು ಆಯಾ ರಾಷ್ಟ್ರದ ಸ್ವತ್ತಾಗಿದ್ದರೂ ಅವುಗಳನ್ನು ಮುಂದಿನ ತಲೆಮಾರುಗಳಿಗಾಗಿ ಉಳಿಸಿಕೊಂಡು ಹೋಗುವ ಜವಾಬ್ದಾರಿಯು ಸಮಸ್ತ ಪ್ರಪಂಚಕ್ಕೆ ಸೇರಿದುದಾಗಿರುತ್ತದೆ.ಹಾಗಾಗಿ ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನೂ ಒಳಗೊಂಡಂತೆ ಜೀವವೈವಿಧ್ಯದ ರಕ್ಷಣೆಗೋಸ್ಕರ ಇರುವ ಅತಿ ಪ್ರಮುಖ ಮತ್ತು ಮಹತ್ವದ ಪ್ರಾಕೃತಿಕ ನೆಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗೋಣ.ಇದರ ಜೊತೆಗೆ ಪಾರಂಪರಿಕ ತಾಣಗಳನ್ನು ರಕ್ಷಿಸಿಕೊಳ್ಳಬೇಕೆಂಬುದು ನಮ್ಮೆಲ್ಲರ ಆಶಯವಾಗಬೇಕಾಗಿದೆ.
ಕೊನೆಯ ಮಾತು:
"ಬುದ್ಧಿವಂತಿಕೆಗಿಂತ ದೊಡ್ಡ ಸಂಪತ್ತಿಲ್ಲ, ಅಜ್ಞಾನಕ್ಕಿಂತ ದೊಡ್ಡ ಬಡತನವಿಲ್ಲ; ಸಂಸ್ಕೃತಿಗಿಂತ ದೊಡ್ಡ ಪರಂಪರೆ ಇಲ್ಲ ಮತ್ತು ಸಮಾಲೋಚನೆಗಿಂತ ಹೆಚ್ಚಿನ ಬೆಂಬಲವಿಲ್ಲ"-ಎಂದು ಅಲಿ ಇಬ್ನ್ ಅಬು ತಾಲಿಬ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
Wednesday, March 4, 2026
ಜೀವ ಸಂಕುಲ-ಭವಿಷ್ಯದ ಸಂಪತ್ತು -ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
ಜೀವ ಸಂಕುಲ-ಭವಿಷ್ಯದ ಸಂಪತ್ತು -ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
ಲೇಖನ: ಬಸವರಾಜ ಎಮ್ ಯರಗುಪ್ಪಿಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಸಾ.ಪೊ ರಾಮಗೇರಿ, ತಾಲೂಕು ಲಕ್ಷ್ಮೇಶ್ವರ,
ಜಿಲ್ಲಾ ಗದಗ, ಮಿಂಚಂಚೆ :basu.ygp@gmail.com
ಮಾರ್ಚ್ 03-"ವಿಶ್ವ ವನ್ಯಜೀವಿಗಳ ದಿನ" ತನ್ನಿಮಿತ್ತ ವಿಶೇಷ ಲೇಖನ.
"ವನ್ಯಜೀವಿ ಎಂದರೆ ಮನುಷ್ಯನು ನಿರ್ಮಿಸಲು ಸಾಧ್ಯವಿಲ್ಲ. ಅದು ಒಮ್ಮೆ ಹೋದರೆ, ಅದು ಶಾಶ್ವತವಾಗಿ ಹೋಗುತ್ತದೆ" ಎಂದು ಜಾಯ್ ಆಡಮ್ಸನ್ ಅವರು ಪ್ರಸ್ತುತ ಮತ್ತು ಭವಿಷ್ಯದ ಜೀವ ಸಂಕುಲಗಳ ಕುರಿತು ಸಾರ್ವತ್ರಿಕವಾಗಿ ಒಪ್ಪಿಕೊಳ್ಳುವಂತಹ ಮಾತಾಗಿದೆ ಎಂದು ಹೇಳಿದ್ದಾರೆ.ವನ್ಯಜೀವಿಗಳು ಪರಿಸರ ಸಮತೋಲನ ಕಾಯ್ದುಕೊಳ್ಳಲು ನಾವು ವನ್ಯಜೀವಿಗಳನ್ನು ರಕ್ಷಿಸಬೇಕು ಏಕೆಂದರೆ ನೇರವಾಗಿ ಅಥವಾ ಪರೋಕ್ಷವಾಗಿ ನಮ್ಮ ಜೀವನವು ಅವುಗಳ ಮೇಲೆ ಅವಲಂಬಿತವಾಗಿದೆ ಕಳೆದ ಎರಡು ದಶಕಗಳಿಂದ, ಪ್ರಪಂಚದ ವಿವಿಧ ಭಾಗಗಳಲ್ಲಿ ವನ್ಯಜೀವಿ ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲದ ಕುರಿತಾಗಿ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಪ್ರತಿವರ್ಷ ಮಾರ್ಚ್ 03 ರಂದು "ವಿಶ್ವ ವನ್ಯಜೀವಿಗಳ"ದಿನವನ್ನು ಆಚರಿಸಲಾಗುತ್ತದೆ. ವನ್ಯಜೀವಿಗಳು ಹಾಗೂ ವನ್ಯಜೀವಿ ವೈವಿದ್ಯತೆಯ ಪ್ರಾಮುಖ್ಯತೆಯ ತಿಳುವಳಿಕೆ ಹೆಚ್ಚಿಸಲು ಈ ದಿನವನ್ನು ಮೀಸಲಿಡಲಾಗಿದೆ. ನಮ್ಮ ಗ್ರಹದಲ್ಲಿನ ಜೀವಸಂಕುಲದ ವಿಶೇಷತೆ, ಸೌಂದರ್ಯವನ್ನು ಅರ್ಥಮಾಡಿಕೊಳ್ಳುವುದೇ ಈ ದಿನದ ಮತ್ತೊಂದು ವಿಶೇಷ ಎಂದೂ ಹೇಳಬಹುದಾಗಿದೆ.
ವನ್ಯಜೀವಿಗಳು ಎಂದರೆ ಸಾಕಲು-ಆಗದ ಸಸ್ಯಗಳು, ಪ್ರಾಣಿಗಳು ಮತ್ತು ಇತರ ಜೀವಿಗಳನ್ನೊಳಗೊಂಡಿದೆ.ಕಾಡುಪ್ರಾಣಿಗಳನ್ನು ತಮ್ಮ ಉಪಯೋಗಕ್ಕಾಗಿ ಸಾಕುವ, ಬೆಳೆಸುವ ಅಥವಾ ಪಳಗಿಸುವ ಭೂಮಿಯ ಎಲ್ಲಾ ಭಾಗಗಳಲ್ಲಿ ನಡೆದಿದೆ.
ಹಿನ್ನಲೆ :
ಡಿಸೆಂಬರ್ 2003 ರಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತನ್ನ 68 ನೇ ಅಧಿವೇಶನದಲ್ಲಿ ಮಾರ್ಚ್ 03 ಅನ್ನು ವಿಶ್ವ ವನ್ಯಜೀವಿ ದಿನವೆಂದು ಘೋಷಿಸಿತು. ಬದಲಾಗುತ್ತಿರುವ ಪ್ರಕೃತಿಯ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಮಾನವನ ಚಟುವಟಿಕೆಗಳಿಂದ ವೃಕ್ಷಗಳು, ಪ್ರಾಣಿಗಳು ಹಾಗೂ ಇತರೆ ಜೀವಿಗಳು ಸಮಸ್ಯೆ ಎದುರಿಸುತ್ತಿರುವ ವಿಚಾರ ತಿಳಿಹೇಳಲು ಕೂಡ ಈ ದಿನವನ್ನು ಗಮನಿಸಿಕೊಂಡು ಆಚರಿಸಲಾಗುತ್ತದೆ.
ವನ್ಯಜೀವಿಗಳ ಪ್ರಾಮುಖ್ಯತೆ:
ವನ್ಯಜೀವಿಗಳು ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.ವನ್ಯ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ.
ವನ್ಯಜೀವಿಗಳು ಎದುರಿಸುತ್ತಿರುವ ಸಮಸ್ಯೆಗಳು:
*ಗಣಿಗಾರಿಕೆ, ಕೃಷಿ ಮತ್ತು ಕಟ್ಟಡ ನಿರ್ಮಾಣದಂತಹ ಅನೇಕ ಮಾನವ ಚಟುವಟಿಕೆಗಳು ನಿರಂತರವಾಗಿ ವನ್ಯಜೀವಿಗಳನ್ನು ಅಪಾಯಕ್ಕೆ ತಳ್ಳುತ್ತಿವೆ.
*ನಾವು ಹಲವಾರು ಮರಗಳನ್ನು ಕಡಿಯುತ್ತಿದ್ದೇವೆ ಇದರಿಂದಾಗಿ ಹೆಚ್ಚು ನೆಲವನ್ನು ತೆರವುಗೊಳಿಸಿ, ಹಲವಾರು ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ.
*ನಾವು ಲಕ್ಷಾಂತರ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ನಾಶಪಡಿಸುತ್ತಿದ್ದೇವೆ ಮತ್ತು ಪ್ರಪಂಚದ ಜೀವವೈವಿಧ್ಯವನ್ನು ಅಪಾಯಕ್ಕೆ ತಳ್ಳುತ್ತಿದ್ದೇವೆ.
*ಕಾನೂನುಬಾಹಿರ ವನ್ಯಜೀವಿ ಬೇಟೆ ಮತ್ತು ಮಾರಾಟ ಮಾಡುವುದು.
*ಅತಿಯಾದ ಮೀನುಗಾರಿಕೆ ಮತ್ತು ಮಾನವರಿಂದ ಸಾಗರ ಮಾಲಿನ್ಯ.
*ಬೇಟೆ ಆಡುವ ಸಂದರ್ಭದಲ್ಲಿ ಗುಂಡು ಹಾರಿಸುವುದು, ಕೊಲ್ಲುವುದು ಮತ್ತು ಮಾನವ ಬಳಕೆಗಾಗಿ ಬಲೆಗೆ ಬೀಳಿಸುವುದು ಅಥವಾ ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸುವುದು.
*ಮಾನವರು, ಕಾಡುಪ್ರಾಣಿಗಳ ಬೇಟೆ ಜತೆಗೆ ಅವುಗಳ ಚರ್ಮ, ಉಗುರು, ಕೊಂಬು, ದಂತಗಳ ಮಾರಾಟ ಅಕ್ರಮವಾಗಿ ನಡೆಯುತ್ತಿದೆ. ಇದರಿಂದ ಹಲವು ವನ್ಯಜೀವಿಗಳ ಸಂತತಿ ಅಳಿವಿನಂಚಿನಲ್ಲಿವೆ.
*ಅರಣ್ಯ ಪ್ರದೇಶದ ಒತ್ತುವರಿ, ಮರಗಳ ಮಾರಣಹೋಮದಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಇದರಿಂದ ಭವಿಷ್ಯದಲ್ಲಿ ಪ್ರಕೃತಿಯಲ್ಲಿ ಅಸಮತೋಲನ ಕಂಡುಬರಲಿದೆ.
*ಆವಾಸಸ್ಥಾನ ನಾಶ:ಕಾಡ್ಗಿಚ್ಚು, ಮನುಷ್ಯನ ದುರಾಸೆಗೆ ಕಾಡುಗಳ ನಾಶ, ಕಾಡನ್ನೆಲ್ಲ ನಾಡು ಮಾಡುತ್ತಿರುವುದು ಮುಂತಾದ ಕಾರಣಗಳಿಗಾಗಿ ಕಾಡುಪ್ರಾಣಿಗಳ ಆವಾಸಸ್ಥಾನ ನಾಶವಾಗುತ್ತಿದೆ. ಬಹುತೇಕ ವನ್ಯಪ್ರಾಣಿಗಳಿಗೆ ಜೀವಿಸಲು ಕಾಡೇ ಇಲ್ಲದ ಸ್ಥಿತಿಗೆ ತಂದುಬಿಟ್ಟಿದ್ದೇವೆ.
#ವಿಶ್ವದಲ್ಲಿ ವನ್ಯಜೀವಿ ಸಂರಕ್ಷಣೆಗೆ ಕೈಗೊಂಡ ಕ್ರಮಗಳು:
*ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಉಳಿಸುವುದು.
*ಪ್ರಾಣಿಗಳನ್ನು ತಮ್ಮ ಜೀವನದೊಂದಿಗೆ ಸರಿಯಾಗಿ ನೋಡಿಕೊಳ್ಳುವುದು.
*ಪ್ರಕೃತಿ ಮತ್ತು ಇತರ ವನ್ಯಜೀವಿ ಪ್ರಭೇದಗಳ ಮಹತ್ವವನ್ನು ಗುರುತಿಸಲು ವನ್ಯಜೀವಿಗಳ ಸಂರಕ್ಷಣೆ ಅಗತ್ಯ.
*ನಾವು ಹೆಚ್ಚು ಸಮರ್ಥನೀಯ ಜೀವನವನ್ನು ನಡೆಸಬೇಕು ಮತ್ತು ಅಳಿವಿನಂಚಿನಲ್ಲಿರುವ ಎಲ್ಲಾ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ನಾವು ನಮ್ಮ ಸರ್ಕಾರಗಳನ್ನು ಒತ್ತಾಯಿಸಬೇಕಾಗಿದೆ. ನಮ್ಮ ಗ್ರಹವನ್ನು ಮತ್ತು ನಮ್ಮನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ.
#ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ:
ವನ್ಯಜೀವಿಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಭಾರತೀಯ ಸಂಸತ್ತು 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಜಾರಿಗೊಳಿಸಿತು. ಇದು ದೇಶದಲ್ಲಿ ವನ್ಯಜೀವಿಗಳಿಗೆ ರಕ್ಷಣೆಯನ್ನು ಒದಗಿಸುವ ಪ್ರಮುಖ ಶಾಸನವಾಗಿದೆ. ಈ ಕಾಯಿದೆಯು ಪರಿಸರ ಮತ್ತು ಪರಿಸರ ಸುರಕ್ಷತೆಯನ್ನು ಖಾತ್ರಿಪಡಿಸುವ ಸಲುವಾಗಿ ದೇಶದ ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯ ಪ್ರಭೇದಗಳ ರಕ್ಷಣೆಯನ್ನು ಒದಗಿಸುತ್ತದೆ. ಇತರ ವಿಷಯಗಳ ಜೊತೆಗೆ, ಕಾಯಿದೆಯು ಅನೇಕ ಪ್ರಾಣಿ ಜಾತಿಗಳನ್ನು ಬೇಟೆಯಾಡಲು ನಿರ್ಬಂಧಗಳನ್ನು ಹಾಕುತ್ತದೆ.
ಈ ಕಾಯಿದೆಯಲ್ಲಿರುವ ಅಂಶಗಳು:
*ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಬೇಟೆಯಾಡುವುದನ್ನು ಕಾಯಿದೆಯು ನಿಷೇಧಿಸಿದೆ .
*ಕಾಯಿದೆಯ ನಿಬಂಧನೆಗಳ ಪ್ರಕಾರ ಪರಿಶಿಷ್ಟ ಪ್ರಾಣಿಗಳನ್ನು ವ್ಯಾಪಾರ ಮಾಡುವುದನ್ನು ನಿಷೇಧಿಸುತ್ತದೆ.
*ಈ ಕಾಯಿದೆಯು ಕೆಲವು ವನ್ಯಜೀವಿ ಪ್ರಭೇದಗಳ ಮಾರಾಟ, ವರ್ಗಾವಣೆ ಮತ್ತು ಸ್ವಾಧೀನಕ್ಕೆ ಪರವಾನಗಿಗಳನ್ನು ಒದಗಿಸುತ್ತದೆ.
*ಇದು ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಇತ್ಯಾದಿಗಳ ಸ್ಥಾಪನೆಗೆ ಅವಕಾಶ ಒದಗಿಸುತ್ತದೆ.
ಕರ್ನಾಟಕದಲ್ಲಿನ ವನ್ಯಜೀವಿ ಸ್ಥಳಗಳು:
*ಬಂಡೀಪುರ ರಾಷ್ಟ್ರೀಯ ಉದ್ಯಾನವನ
*ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
*ದಾಂಡೇಲಿ ವನ್ಯಜೀವಿ ಅಭಯಾರಣ್ಯ
*ಭದ್ರಾ ವನ್ಯಜೀವಿ ಅಭಯಾರಣ್ಯ
*ರಂಗನತಿಟ್ಟು ಪಕ್ಷಿಧಾಮ
ಒಟ್ಟಾರೆಯಾಗಿ ಈ ಭೂ ಗ್ರಹದಲ್ಲಿ ಮನುಷ್ಯ ಮತ್ತು ಕಾಡು ಪ್ರಾಣಿಗಳು ಒಟ್ಟಿಗೆ ವಿಕಸನಗೊಂಡಿವೆ.ಭೂಮಿಯ ಮೇಲಿನ ಎಲ್ಲಾ ಜೀವಿಗಳು ಒಂದೇ.ಎಲ್ಲಾ ಜೀವಿಗಳು ಬೇರ್ಪಡಿಸಲಾಗದಂತೆ ಪರಸ್ಪರ ಸಂಬಂಧ ಹೊಂದಿವೆ ಹಾಗಾಗಿ ಪರಿಸರ ವ್ಯವಸ್ಥೆಯಲ್ಲಿ ಆಹಾರ ಸರಪಳಿಯನ್ನು ರೂಪಿಸುತ್ತವೆ.ನಾವು ವನ್ಯಜೀವಿಗಳನ್ನು ರಕ್ಷಿಸಬೇಕು ಏಕೆಂದರೆ ನೇರವಾಗಿ ಅಥವಾ ಪರೋಕ್ಷವಾಗಿ ನಮ್ಮ ಜೀವನವು ಅವುಗಳ ಮೇಲೆ ಅವಲಂಬಿತವಾಗಿದೆ.
ಹೀಗಾಗಿ ಅಳಿವಿನಂಚಿನಲ್ಲಿರುವ ಎಲ್ಲಾ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕಾಗಿದೆ.
ಕೊನೆಯ ಮಾತು:
"ಪ್ರಕೃತಿ ಒಂದು ಸಂಪತ್ತು ಅದನ್ನು ಸಂತೋಷಕ್ಕಾಗಿ ಉಳಿಸಿಕೊಳ್ಳಲು ಪ್ರಯತ್ನಿಸೋಣ".
ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವುಗಳ ಸಂರಕ್ಷಣೆಗಾಗಿ ನಾವೆಲ್ಲರೂ ಕೈ ಜೋಡಿಸೋಣ.
Thursday, December 4, 2025
"ಮಣ್ಣು ಜೀವಸಂಕುಲದ ಹೊನ್ನು" ಇದು ಪ್ರತಿ ಜೀವಿಯ ಜೀವನಾಧಾರ.
"ಮಣ್ಣು ಜೀವಸಂಕುಲದ ಹೊನ್ನು" ಇದು ಪ್ರತಿ ಜೀವಿಯ
ಜೀವನಾಧಾರ.
ಬಸವರಾಜ ಎಮ್ ಯರಗುಪ್ಪಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಸಾ.ಪೊ ರಾಮಗೇರಿ.
ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ.
ಡಿಸೆಂಬರ್ 05 ವಿಶ್ವ ಮಣ್ಣಿನ ದಿನ ತನ್ನಿಮಿತ್ತ ಸಾಂದರ್ಭಿಕ ಲೇಖನ.
"ತನ್ನ ಮಣ್ಣನ್ನು ನಾಶಪಡಿಸುವ ರಾಷ್ಟ್ರವು ತನ್ನನ್ನು ತಾನೇ ನಾಶಪಡಿಸಿಕೊಂಡಂತೆ" ಎಂದು ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಹೇಳಿರುವ ಹಾಗೆ ಭೂಮಿಯ ಮೇಲೆ ಇರುವ ಪ್ರತಿ ಜೀವಿಯ ಜೀವನಾಧಾರ ಮಣ್ಣು.ಈ ಮಣ್ಣು ನಾಶವಾದರೆ ಭೂಮಿಯ ಮೇಲಿನ ಜೀವಿಗಳ ಜೀವನಾಧಾರವೇ ನಶ್ವರ, ಅಂದರೆ ಸರ್ವಸಾಶ. ಹೀಗಾಗಿ "ಭೂಮಿ, ಕೇವಲ ಮಣ್ಣು ಅಲ್ಲ; ಇದು ಪರಿಸರದಲ್ಲಿನ ಸಸ್ಯಗಳು ಮತ್ತು ಪ್ರಾಣಿಗಳ ಪರಿಧಿ ಮೂಲಕ ಹರಿಯುವ ಶಕ್ತಿಯ ಕಾರಂಜಿಯಾಗಿದೆ. ಎಂದು ಆಲ್ಡೊ ಲಿಯೋಪೋಲ್ಡ್ ಇನ್ನೊಂದು ಕಡೆ ಹೇಳುತ್ತಾರೆ.ಎಲ್ಲಿ ಭರವಸೆಯ ಫಲವತ್ತಾದ ಮಣ್ಣು ಇರುತ್ತದೆ, ಅಲ್ಲಿ ಹೂವುಗಳು ಅರಳುತ್ತವೆ ಎನ್ನುವ ಹಿರಿಯರ ವಾಣಿಯಂತೆ ಮಣ್ಣು ಜೀವಸಂಕುಲದ ಹೊನ್ನು ಎಂದರೆ ತಪ್ಪಾಗಲಾರದು. ಮಣ್ಣಿಗೂ ಬದುಕಿಗೂ ಅವಿನಾಭಾವ ಸಂಬಂಧ ಇದೆ. ಬದುಕು ಹಸನಾಗಿರಬೇಕಾದರೆ ನಾವು ಬದುಕುವ ಪರಿಸರದಲ್ಲಿ ಫಲವತ್ತತೆಯಿಂದ ಕೂಡಿದ ಮಣ್ಣು ಕೂಡಾ ಮುಖ್ಯ.ಹೀಗಾಗಿ ಇದು ನಮ್ಮ ಮಣ್ಣು. ಇದು ತೈಲಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ..!
ಹೀಗಿರುವಾಗ ಆರೋಗ್ಯಕರ ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಣ್ಣಿನ ಸಂಪನ್ಮೂಲಗಳ ದೀರ್ಘಕಾಲ ನಿರ್ವಹಣೆ ಮಾಡುವುದರ ಬಗ್ಗೆ ತಿಳಿಸಲು ವಿಶ್ವದಾದ್ಯಂತ ಪ್ರತಿ ವರ್ಷ ಡಿಸೆಂಬರ್ 05 ರಂದು "ವಿಶ್ವ ಮಣ್ಣಿನ" ದಿನವನ್ನಾಗಿ ಆಚರಿಸಲಾಗುತ್ತದೆ.ಈ ದಿನದಂದು ನಾವೆಲ್ಲರೂ ಮಣ್ಣನ್ನು ರಕ್ಷಿಸುವ ಪಣ ತೊಡಬೇಕು. ಜೊತೆಗೆ ಮಣ್ಣಿನ ಸವಕಳಿ, ರಾಸಾಯನಿಕಗಳ ಬಳಕೆ, ಲವಣಯುಕ್ತಗೊಳ್ಳುವುದು, ಮಣ್ಣಿಗೆ ಪ್ಲಾಸ್ಟಿಕ್ ಸೇರುವುದು ಸೇರಿದಂತೆ ಹಲವು ಸಮಸ್ಯೆಗಳತ್ತ ಎಲ್ಲರ ಗಮನ ಸೆಳೆಯುವ ಗುರಿಯನ್ನು ಈ ದಿನ ಹೊಂದಿದೆ.
#ಹಿನ್ನೆಲೆಯೇನು..?ವಿಶ್ವ ಮಣ್ಣಿನ ದಿನದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಮಣ್ಣಿನ ವಿಜ್ಞಾನಗಳ ಅಂತರರಾಷ್ಟ್ರೀಯ ಒಕ್ಕೂಟ (ಐಯುಎಸ್ಎಸ್) 2002ರಲ್ಲಿ ವಿಶ್ವ ಮಣ್ಣಿನ ದಿನ ಆಚರಣೆಗೆ ಶಿಫಾರಸು ಮಾಡಿತ್ತು. ಥಾಯ್ಲೆಂಡ್ ನೇತೃತ್ವದಲ್ಲಿ ಎಫ್ಎಒ ಸಹಾಯದೊಂದಿಗೆ ವಿಶ್ವ ಮಣ್ಣಿನ ದಿನ ಆಚರಣೆ ಆರಂಭವಾಯಿತು. 2013 ಜೂನ್ನಲ್ಲಿ ಎಫ್ಎಒ ಒಕ್ಕೂಟವು ಈ ದಿನಾಚರಣೆಗೆ ಬೆಂಬಲ ಸೂಚಿಸಿದ್ದಲ್ಲದೆ ವಿಶ್ವಸಂಸ್ಥೆಯ 68ನೇ ಸಭೆಯಲ್ಲಿ ಇದನ್ನು ಅಧಿಕೃತವಾಗಿ ಅಂಗೀಕರಿಸುವಂತೆ ಮನವಿ ಮಾಡಿತು. ಇದರ ಪರಿಣಾಮ 2013 ಡಿಸೆಂಬರ್ನಲ್ಲಿ ವಿಶ್ವಸಂಸ್ಥೆಯು ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನಾಚರಣೆಗೆ ಸಮ್ಮತಿ ಸೂಚಿಸಿತು. 2014ರಲ್ಲಿ ಮೊದಲ ಬಾರಿಗೆ ಈ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸಲಾಯಿತು.
ನಾವು ಸೇವಿಸುವ ಆಹಾರ, ತೊಡುವ ಬಟ್ಟೆ, ವಾಸಿಸುವ ಮನೆ ಎಲ್ಲದಕ್ಕೂ ಮಣ್ಣು ಆಧಾರ. ಇದೇ ಕಾರಣಕ್ಕೆ ನಮ್ಮ ಪೂರ್ವಜರು ಮಣ್ಣನ್ನು ಅತಿಶ್ರೇಷ್ಠ ಮತ್ತು ಪವಿತ್ರ ಎಂದು ಪರಿಗಣಿಸಿದ್ದಾರೆ. ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು.ನಮ್ಮ ಬದುಕಿನ ಎಲ್ಲ ಸ್ತರಗಳಲ್ಲೂ ಮಣ್ಣು ಬೇಕಿದ್ದು, ನಾನಾ ಮಾಲಿನ್ಯಕಾರಕಗಳಿಂದ ಇಂದು ಕಲುಷಿತಗೊಳಿಸುತ್ತಿದೆ. ಮಣ್ಣಿನ ಸವಕಳಿ ಹೆಚ್ಚುತ್ತಿದ್ದು ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತಿದೆ. ಮಣ್ಣಿನ ಗುಣಮಟ್ಟದಲ್ಲಿ ವ್ಯತ್ಯಯವಾದಲ್ಲಿ ಆಹಾರ, ನೀರು, ಗಾಳಿ ಸೇರಿದಂತೆ ಇಡೀ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮನಗಾಣಬೇಕು.
>>ಮಣ್ಣಿನ ಸುರಕ್ಷತೆಗಾಗಿ ಕಾಳಜಿವಿರಲಿ:
ಮಾನವ ಮತ್ತು ಮಣ್ಣಿಗೆ ಬಿಡಲಾರದ ನಂಟು. ಇಡೀ ಜೀವಸಂಕುಲ ಆಧರಿಸಿದೆ. ಎಲ್ಲ ಜೀವರಾಶಿಗಳಿಗೂ ಮಣ್ಣು ಬೇಕಿದೆ. ನಮ್ಮ ಎಲ್ಲ ಅಗತ್ಯಗಳಿಗೆ ಮಣ್ಣು ಮೂಲ ಆಧಾರ'. ಹಾಗಾಗಿ ನಾವು ಮಣ್ಣಿನ ಕಾಳಜಿವಹಿಸಬೇಕು.
>>ನಾವು ಮಣ್ಣಿನ ಬಗ್ಗೆ ಯಾಕೆ ಕಾಳಜಿ ವಹಿಸಬೇಕು?
ಜೀವಂತಿಕೆಯ ಮೂಲವೇ ಮಣ್ಣು. ಭೂಮಿಯಲ್ಲಿರುವ ಶೇ.25ಕ್ಕಿಂತಲೂ ಹೆಚ್ಚು ಜೀವಜಾಲಗಳಿಗೆ ಮೂಲವೇ ಮಣ್ಣು. ಮಣ್ಣು ಶೇಕಡಾ 95ರಷ್ಟು ನಮ್ಮ ಆಹಾರದ ಮೂಲವಾಗಿದೆ.ಏಕೆಂದರೆ ಹಣ್ಣು,ತರಕಾರಿ ಮತ್ತು ಧವಸ ಧಾನ್ಯಗಳ ಗುಣಮಟ್ಟ, ಪ್ರಮಾಣ ಎಲ್ಲವೂ ಮಣ್ಣಿನ ಫಲವತ್ತತೆಯನ್ನು ಆಧರಿಸಿರುತ್ತದೆ. ಮಣ್ಣಿನ ಗುಣಮಟ್ಟವು ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದ ವಿರುದ್ಧ ಹೋರಾಡಲು ಸಹಕಾರಿ.
>>ಮಣ್ಣು ಜೀವಿಯ ಔಷಧಿಗಳ ಮೂಲ:
ಮಣ್ಣು ಜೀವಿಗಳ ಔಷಧಿಯ ಮೂಲವಾಗಿದೆ. ಮಾನವನ ಆರೋಗ್ಯವನ್ನು ಬೆಂಬಲಿಸಿ ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಣ್ಣು ವಿಶಾಲವಾದ ಮತ್ತು ನೈಸರ್ಗಿಕ ಔಷಧಾಲಯವಾಗಿದೆ.ಮಣ್ಣಿನಲ್ಲಿರುವ ಅಂಶಗಳಿಂದ ರೋಗಿಗಳ ಸೋಂಕಿನ ವಿರುದ್ಧ ಹೋರಾಡಲು ನಾವು ತೆಗೆದುಕೊಳ್ಳುವ ಪ್ರತಿಜೀವಕಗಳನ್ನು ಮಣ್ಣಿನ ಸೂಕ್ಷ್ಮಜೀವಿಗಳನ್ನು ಬಳಸಿ ತಯಾರಿಸಲಾಗುತ್ತದೆ.
>>ಮಣ್ಣಿನ ಜೀವಿಗಳ ಪ್ರಾಮುಖ್ಯತೆ:
ಮಣ್ಣು ನಮ್ಮ ಜೀವ, ಅದನ್ನು ಸಂರಕ್ಷಿಸಿ. ಮಣ್ಣು-ನೀವು ಯೋಚಿಸುವುದಕ್ಕಿಂತ ಇದು ಹೆಚ್ಚು ಆಗಾದ ಶಕ್ತಿಯ ಸಂಪನ್ಮೂಲವಾಗಿದೆ.ಮಾಲಿನ್ಯಕಾರಕಗಳನ್ನು ಒಡೆಯುವ ಮೂಲಕ ಮಣ್ಣಿನ ಮಾಲಿನ್ಯದ ಪರಿಹಾರಕ್ಕೆ ಕೊಡುಗೆ ನೀಡುತ್ತವೆ.ಮಣ್ಣಿನಲ್ಲಿ ಇಂಗಾಲವನ್ನು ಸಂಗ್ರಹಿಸುವ ಮೂಲಕ ಹವಾಮಾನ ಬದಲಾವಣೆಯ ಹೊಂದಾಣಿಕೆ ಮತ್ತು ತಗ್ಗಿಸುವಿಕೆಯಲ್ಲಿ ಮಣ್ಣಿನ ಜೀವಿಗಳು ಪ್ರಮುಖ ಪಾತ್ರವಹಿಸುತ್ತವೆ.ಮಣ್ಣಿನ ಜೀವವೈವಿಧ್ಯವು ನಾವು ಪ್ರಸ್ತುತ ಎದುರಿಸುತ್ತಿರುವ ಅನೇಕ ಜಾಗತಿಕ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರವಾಗಿದೆ.
>>ಮಣ್ಣಿನ ಸವಕಳಿಯ ಕಾರಣಗಳು ಇವು:
*ವೇಗವಾಗಿ ಬೀಸುವ ಗಾಳಿ
*ರಭಸವಾಗಿ ಹರಿಯುವ ನೀರು
*ಅರಣ್ಯನಾಶ
*ಮಿತಿವೀರಿದ ಮೇಯುವಿಕೆ ಮತ್ತು ಇತ್ಯಾದಿ
>>ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಕ್ರಮಗಳು:
ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಅನುಸರಿಸಬಹುದಾದ ಕೆಲವು ಕ್ರಮಗಳು ಹೀಗಿವೆ-
*ಅರಣ್ಯೀಕರಣ: ಗಿಡಗಳನ್ನು ನೆಟ್ಟು ಬೆಳೆಸುವುದನ್ನು ಅರಣ್ಣೀಕರಣ ಎನ್ನುವರು. ಮಣ್ಣಿನ ಸವಕಳಿಯನ್ನು ತಪ್ಪಿಸಲು ಇದೊಂದು ಪರಿಣಾಮಕಾರಿಯಾದ ಕ್ರಮವಾಗಿದೆ. ಮರಗಳ ಬೇರುಗಳು ಮಣ್ಣಿನ ಕಣಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದ ಗಾಳಿ ಮತ್ತು ಮಳೆಯಿಂದ ಮಣ್ಣಿನ ಸವಕಳಿಯಾಗುವುದು ತಪ್ಪುತ್ತದೆ.
*ಮರಗಳ ತಡೆಪಟ್ಟಿ: ಹೊಲಗಳ ದಂಡೆಗಳಲ್ಲಿ ಮರಗಳನ್ನು ಬೆಳೆಸಿದಾಗ, ಆ ಮರಗಳಿಂದ ಗಾಳಿಂದ ತಡೆಯಲ್ಪಟ್ಟು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.
*ತಡೆಒಡ್ಡುಗಳನ್ನು ನಿರ್ಮಿಸುವುದು.
*ಸಮಪಾತಳಿ ಬೇಸಾಯ: ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಲಾಗುತ್ತದೆ.
*ಯೋಜಿತ ಮೇಯಿಸುವಿಕೆ: ದನ-ಕರುಗಳು, ಕುರಿ-ಮೇಕೆಗಳಿಂದ ಮೇಯಿಸುವಿಕೆಯನ್ನು ಯೋಜಿತ ರೀತಿಯಲ್ಲಿ ಮಾಡುವುದರಿಂದ ಹುಲ್ಲಿನ ಆವರಣವನ್ನು ಯೋಜಿತ ರೀತಿಯಲ್ಲಿ ಮಾಡುವುದರಿಂದ ಹುಲ್ಲಿನ ಆವರಣವನ್ನು ಉಳಿಸಿ ಮಣ್ನುನ್ನು ಸಂರಕ್ಷಿಸಬಹುದು.
*ಸರದಿ ಬೆಳೆ ಪದ್ಧತಿ ಅಳವಡಿಸಿಕೊಂಡು ಸಾಗುವಳಿ ಮಾಡುವುದು.
ಹೀಗೆ ಮಣ್ಣಿನ ಸವಕಳಿಯ ಎಲ್ಲಾ ಕಾರಣಗಳನ್ನು ನಿಯಂತ್ರಿಸಿದರೆ ಮಣ್ಣಿನ ಸವಕಳಿಯು ತಡೆಯಲ್ಪಟ್ಟು ಮಣ್ಣಿನ ಫಲವತ್ತತೆ ಉಳಿಯುತ್ತದೆ. ಮಣ್ಣಿನ ಫಲವತ್ತತೆ ಹಾಗೆಯೇ ಉಳಿಯುತ್ತದೆ.
>>ಮಣ್ಣಿನ ಮಾಲಿನ್ಯ ತಡೆಯಲು ಏನು ಮಾಡಬೇಕು..?
*ಮೊದಲು ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು.
*ಕಸವಿಲೇವಾರಿ ಸಂದರ್ಭದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ನೀಡಬೇಕು. ಇದರಲ್ಲಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಇತರೆ ವಿಘಟನೀಯವಲ್ಲದ ವಸ್ತುಗಳನ್ನು ಬೇರ್ಪಡಿಸುವ ಕಾರ್ಯವಾಗಬೇಕು.
*ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಲು ಪ್ರೋತ್ಸಾಹ ನೀಡಬೇಕು.
*ಪರಿಸರಕ್ಕೆ ಹಾನಿಯುಂಟುಮಾಡುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು.
*ಕೊಳೆಯುವ ಆಹಾರ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಮಾಡಬೇಕು.
>>ವಿಶ್ವ ಮಣ್ಣಿನ ದಿನಕ್ಕಾಗಿ ನಾವು ಏನು ಮಾಡಬಹುದು..?
ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಸಮುದಾಯಗಳಲ್ಲಿನ ಜನರ ಕಾಳಜಿ ಉತ್ತೇಜಿಸುವುದು ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಗಳ ಮೂಲಕ ಮಾನವ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಎಲ್ಲರಲ್ಲಿ ಮಣ್ಣಿನ ಅರಿವು ಮೂಡಿಸುವುದು.
ಜಾಗೃತಿ ಮೂಡಿಸಲು ನೀವು ಸಾಮಾಜಿಕ ಮಾಧ್ಯಮದ ಜಾಲತಾಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಣ್ಣಿನ ರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸುವುದು.
ಅತಿಯಾದ ಕೀಟನಾಶಕ,ರಸಾಯನಿಕಗಳ ಬಳಕೆಯಿಂದ ದಿನದಿಂದ ದಿನಕ್ಕೆ ಮಣ್ಣು ಹಾಳಾಗುತ್ತಿದೆ. ಹೀಗಾಗಿ, ಜೀವ ಸಂಕುಲದ
ಉಳಿವಿಗೆ ಮಣ್ಣಿನ ಅಗತ್ಯತೆ ಕುರಿತು ದೇಶ- ವಿದೇಶಗಳಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಸದ್ಗುರು ಜಗ್ಗಿ ವಾಸುದೇವ್ ಅವರು ಈಶ ಫೌಂಡೇಶನ್ವತಿಯಿಂದ ವಿಶ್ವದ ಪ್ರಮುಖ ದೇಶಗಳಲ್ಲಿ ಬೈಕ್ ಸವಾರಿ ಮಾಡಿ 'ಮಣ್ಣು ಉಳಿಸಿ' ಕಾರ್ಯಕ್ರಮವನ್ನು ಇಲ್ಲಿ ಸ್ಮರಿಸಬಹುದು.
>>ವಿಶ್ವ ಮಣ್ಣಿನ ದಿನಕ್ಕಾಗಿ ವಿಶೇಷ ಸಂದೇಶಗಳು:
*ನೀವು ಭೂಮಿಯನ್ನು ಹಾಳುಮಾಡಿದರೆ, ಅಲ್ಲಿ ನೀವು ಯಾವ ಬೆಳೆ ಬೆಳೆಯಲು ಅಸಾಧ್ಯ. *ಫಲವತ್ತಾದ ಭೂಮಿ ಪ್ರಕೃತಿಯ ಸೌಂದರ್ಯಗಳಲ್ಲಿ ಒಂದಾಗಿದೆ, ಅದನ್ನು ಕಲುಷಿತಗೊಳಿಸಬೇಡಿ.
*ರೆಡಿಮೇಡ್ ರಸಗೊಬ್ಬರಗಳು ಮಣ್ಣಿಗೆ ಹಾಗೂ ಆರೋಗ್ಯಕ್ಕೆ ಹಾನಿಕರ.
*ತುಂಬಾ ಸ್ವಾರ್ಥಿಗಳಾಗಬೇಡಿ; ಭೂಮಿಯನ್ನು ಉಳಿಸಲು ಯೋಚಿಸಿ.
*ಭೂಮಿಯನ್ನು ನಮ್ಮ ಸ್ವಂತ ಪ್ರಯೋಜನಗಳಿಗಾಗಿ ಪ್ರಕೃತಿಯು ನಮಗೆ ಉಡುಗೊರೆಯಾಗಿ ನೀಡಿದೆ. ಅದನ್ನು ಅರ್ಥಮಾಡಿಕೊಂಡು ನೈಸರ್ಗಿಕವಾಗಿ ಬಳಸಿ.
*ಮಣ್ಣಿಗೆ ನಿಷ್ಠರಾಗಿರಿ.
*ಮಣ್ಣನ್ನು ಜೀವಂತವಾಗಿರಿಸಿ, ಜೀವವೈವಿಧ್ಯತೆಯನ್ನು ಕಾಪಾಡಿ.
ಒಟ್ಟಾರೆಯಾಗಿ ಮಾನವ ಮತ್ತು ಮಣ್ಣಿಗೆ ಬಿಡಲಾರದ ನಂಟು.ಇಡೀ ಜೀವಸಂಕುಲ ಆಧರಿಸಿದೆ. ಎಲ್ಲ ಜೀವರಾಶಿಗಳಿಗೂ ಮಣ್ಣು ಬೇಕಿದೆ. ನಮ್ಮ ಎಲ್ಲ ಅಗತ್ಯಗಳಿಗೆ ಮಣ್ಣು ಮೂಲ ಆಧಾರ.ಆದ್ದರಿಂದ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣಿಲ್ಲದೇ ಬದುಕಿಲ್ಲ, ಭವಿಷ್ಯವೂ ಇಲ್ಲ. ಮಣ್ಣಿನ ಮೇಲೆ ಅವಲಂಬಿಸಿರುವವರ ಸಂಖ್ಯೆಯೇ ಹೆಚ್ಚು. ಹಾಗಾಗಿ ಮುಂದಿನ ಪೀಳಿಗೆಗೆ ಮಣ್ಣಿನ ಮಹತ್ವ ಮನಗಾಣಿಸಬೇಕು.ಭೂಮಿ ಮೇಲಿನ ಜೀವಸಂಕುಲದ ಉಳಿವಿಗೆ ಅತ್ಯಗತ್ಯವಾಗಿರುವ ಮಣ್ಣು ಹಾಗೂ ಮಣ್ಣಿನ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಅಂದಾಗ ಮಾತ್ರ ಮಣ್ಣು ಜೀವಸಂಕುಲದ ಹೊನ್ನು ಎನ್ನಲಡ್ಡಿಯಿಲ್ಲ.
#ಕೊನೆಯ ಮಾತು:
"ಭೂಮಿಯನ್ನು ಅಗೆಯುವುದು ಹೇಗೆ? ಮತ್ತು ಮಣ್ಣನ್ನು ಹೇಗೆ ಬೆಳೆಸುವುದು ಎಂಬುದನ್ನು ಮರೆತುಬಿಟ್ಟರೆ; ನಮ್ಮನ್ನು ನಾವು ಮರೆತುಬಿಟ್ಟಂತೆ" ಎಂದು- ಮಹಾತ್ಮ ಗಾಂಧೀಜಿ ಹೇಳಿರುವ ನಾಣ್ಣುಡಿ ಅಕ್ಷರಶಃ ಸತ್ಯ ಹಾಗೂ ಇಂದಿಗೂ ಪ್ರಸ್ತುತವಾಗಿದೆ.
Tuesday, November 4, 2025
ಮೂರ್ಛೆ ರೋಗದ ಬಗ್ಗೆ ; ಅಸಡ್ಡೆ ಬೇಡ ಜಾಗೃತಿ ಇರಲಿ
ಮೂರ್ಛೆ ರೋಗದ ಬಗ್ಗೆ ; ಅಸಡ್ಡೆ ಬೇಡ ಜಾಗೃತಿ ಇರಲಿ
#ಸಂಗ್ರಹ ಲೇಖನ:
✍️ಬಸವರಾಜ ಎಮ್ ಯರಗುಪ್ಪಿ
ಹವ್ಯಾಸಿ ಬರಹಗಾರರು, ಸ ಕಿ ಪ್ರಾ ಶಾಲೆ, ಮುಕ್ತಿನಗರ ಲಕ್ಷ್ಮೇಶ್ವರ.
ನವ್ಹಂಬರ 17-ರಾಷ್ಟ್ರೀಯ ಅಪಸ್ಮಾರ ದಿನ ಅಥವಾ ಮೂರ್ಛೆ ರೋಗ ದಿನ(National Epilepsy Day) ತನ್ನಿಮಿತ್ತ ವಿಶೇಷ ಲೇಖನ.
ಇದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ನಮ್ಮ ಭಾರತ ದೇಶದಲ್ಲಿ ಅಪಸ್ಮಾರ ಖಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ 17ರಂದು ಈ ದಿನವನ್ನು ಆಚರಿಸಲಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಎಪಿಲೆಪ್ಸಿ(Epilepsy) ಎಂದು ಕರೆಯಲಾಗುತ್ತದೆ. ಜೊತೆಗೆ ಫಿಟ್ಸ್ ಎಂದು ಕೂಡ ಇದನ್ನು ಕರೆಯಲಾಗುತ್ತದೆ.
ಅಪಸ್ಮಾರ ಖಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕುವ ಕಾರ್ಯವನ್ನು ‘ರಾಷ್ಟ್ರೀಯ ಅಪಸ್ಮಾರ ಸಂಸ್ಥೆ’ ನಡೆಸುತ್ತಿದೆ. ನವೆಂಬರ್ ತಿಂಗಳನ್ನು ಅಪಸ್ಮಾರ ಜಾಗೃತಿ ತಿಂಗಳು ಎಂದೂ ಆಚರಿಸಲಾಗುತ್ತದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಚ್ 26 ರಂದು ‘ಪರ್ಪಲ್ ದಿನ’ ಎಂದು ಆಚರಿಸಿ ಅಪಸ್ಮಾರದ ಬಗ್ಗೆ ಜಾಗೃತಿಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಇವೆರಡೂ ಆಚರಣೆಯ ಮೂಲ ಉದ್ದೇಶ ಒಂದೇ ಆಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜನರಲ್ಲಿ ಈ ರೋಗದ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳು ಮತ್ತು ಕಪೋಲಕಲ್ಪಿತ ಕಥೆಗಳು ಚಾಲ್ತಿಯಲ್ಲಿದೆ.ಬೆಳೆಯುತ್ತಿರುವ ದೇಶಗಳಲ್ಲಿ ಅಜ್ಞಾನ, ಅನಕ್ಷರತೆ ಮತ್ತು ಬಡತನದ ಕಾರಣದಿಂದ ಈ ರೋಗಕ್ಕೆ ಬಹಳಷ್ಟು ಅಪವಾದ ಅಂಟಿಕೊಂಡಿದೆ. ಈ ಅಪಸ್ಮಾರ ಎನ್ನುವುದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಸರಿ ಸುಮಾರು 50 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ರೋಗದಿಂದ ಬಳಲುತ್ತಿದ್ದಾರೆ. ಇದರಲ್ಲಿ ಸಿಂಹಪಾಲು ಬೆಳೆಯುತ್ತಿರುವ ರಾಷ್ಟ್ರಗಳಿಗೆ ಸಲ್ಲುತ್ತದೆ. 80 ಶೇಕಡಾ ಮಂದಿ ಈ ದೇಶಗಳಲ್ಲಿ ಕಂಡು ಬರುತ್ತಿದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ ಅಪಸ್ಮಾರ ಬರದಂತೆ ಅಥವಾ ಅಪಸ್ಮಾರದ ತೀವ್ರತೆಯನ್ನು ಖಂಡಿತವಾಗಿಯೂ ಕಡಿಮೆ ಮಾಡುವ ಔಷಧಿಗಳು ಲಭ್ಯವಿದೆ. ನಿಯಮಿತವಾಗಿ ವೈದ್ಯರ ಸಲಹೆಯಂತೆ ಔಷಧಿ ಸೇವಿಸಿದಲ್ಲಿ ಅಪಸ್ಮಾರ ರೋಗಿಗಳು ಇತರರಂತೆ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಿದೆ.
#ಏನಿದು ಅಪಸ್ಮಾರ ಖಾಯಿಲೆ?
ಅಪಸ್ಮಾರ ಎಂದರೆ ಪದೇ ಪದೇ ಮೆದುಳಿನ ನರಕೋಶಗಳು ಅತ್ಯಧಿಕ ಪ್ರಮಾಣದಲ್ಲಿ ಹೊರಹಾಕುವ ವಿದ್ಯುತ್ ಪ್ರಚೋದನೆಯ ಫಲವಾಗಿ ಮೆದುಳಿನ ಕಾರ್ಯದಲ್ಲಿ ಉಂಟಾಗುವ ತಾತ್ಕಲಿಕ ನಿಲುಗಡೆ ಅಥವಾ ವ್ಯತ್ಯಯದ ಪರಿಣಾಮವಾಗಿ ಆ ವ್ಯಕ್ತಿ ಅನುಭವಿಸುವ ಸೃತಿ ಸೆಳತ ಮತ್ತು ಸೆಳೆವು. ಇದನ್ನೇ ಮೂರ್ಛೆ ರೋಗ, ಪಿಟ್ಸ್, ಅಪಸ್ಮಾರ, ಮಲರೋಗ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಎಪಿಲೆಪ್ಸಿ(EPILEPSY) ಎಂದು ಕರೆಯುತ್ತಾರೆ. ಜನಸಾಮಾನ್ಯ ಆಡುಭಾಷೆಯಲ್ಲಿ ‘ಪಿಟ್ಸ್’ ಎನ್ನುತ್ತಾರೆ.
#ರೋಗ ಲಕ್ಷಣಗಳು :
· ತಲೆನೋವು
· ಕಣ್ಣುಗಳು ಮಂಜಾಗುವುದು
· ಸಂವೇದನೆಗಳಲ್ಲಿ ಬದಲಾವಣೆ
· ತಲೆ ತಿರುಗುವಿಕೆ ಮತ್ತು ವಾಕರಿಕೆ
· ಆತಂಕದ ಭಾವನೆಗಳು
· ಮರಗಟ್ಟುವಿಕೆ
· ಅರಿವಿಲ್ಲದಂತಾಗುವುದು
· ಗೊಂದಲ ಮತ್ತು ಸುಪ್ತಾವಸ್ಥೆ
·ಭ್ರಮೆಗಳು
· ಅನಿಯಂತ್ರಿತ ಚಲನವಲನ
· ಸೆಳೆತ · ಅತಿಯಾಗಿ ಬೆವರುವಿಕೆ
· ಉಸಿರಾಟದ ತೊಂದರೆ
#ಕಾರಣಗಳೇನು?
· ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೇ ಇರುವುದು
· ಮೆದುಳಿನಲ್ಲಿ ಗಡ್ಡೆ ಬೆಳೆಯುವುದು.
· ಮೆದುಳಿಗೆ ನಂಜು ಸೋಕಿದ್ದರೆ
· ಮೆದುಳಿನ ಅಂಗಾಂಶಕ್ಕೆ ಗಾಯವಾದಾಗ
· ದೇಹದಲ್ಲಿ ಲವಣಾಂಶಗಳ ಮಟ್ಟದಲ್ಲಿ ಏರುಪೇರಾದಾಗ
· ಅತಿಯಾಗಿ ಜ್ವರ ಬಂದಾಗ ಇತ್ಯಾದಿ.
· ಆದರೆ ಜಾಗತಿಕವಾಗಿ ಶೇ. 50ರಷ್ಟು ಪ್ರಕರಣಗಳಲ್ಲಿ ಈ ರೋಗಕ್ಕೆ ಕಾರಣ ಇನ್ನೂ ತಿಳಿದಿಲ್ಲ.
1 ಕೋಟಿ ಮಂದಿಗೆ ಅಪಸ್ಮಾರ : ದೇಶದಲ್ಲಿ ಒಂದು ಅಂದಾಜಿನ ಪ್ರಕಾರ 1ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಗ್ರಾಮೀಣರಲ್ಲಿ ಶೇ. 1.9ರಷ್ಟು ರೋಗ
ಗ್ರಾಮೀಣ ಪ್ರದೇಶದ ಶೇ.1.9 ರಷ್ಟು ಪ್ರಮಾಣದ ಜನರಲ್ಲಿ ಈ ರೋಗ ಕಂಡು ಬರುತ್ತಿದೆ.
ನಗರಗಳಲ್ಲಿ ಶೇ. 0.6ರಷ್ಟು ರೋಗ
ನಗರಗಳಲ್ಲಿ ಶೇ. 0.6ರಷ್ಟು ಜನರಿಗೆ ಮೂರ್ಛೆ ರೋಗವಿದೆ.
#ತಾರತಮ್ಯ:
ವಿಶ್ವಸಂಸ್ಥೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಪ್ರಪಂಚದ ಅನೇಕ ಭಾಗಗಳಲ್ಲಿ ಅಪಸ್ಮಾರ ರೋಗಕ್ಕೆ ತುತ್ತಾದವರು ಮತ್ತು ಅವರ ಕುಟುಂಬದವರು ಕಳಂಕ ಮತ್ತು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಜತೆಗೆ ಗ್ರಾಮೀಣರು ಇದಕ್ಕೆ ಅತಿಮಾನುಷ ಶಕ್ತಿಗಳು ಕಾರಣ ಎಂದು ವೈದ್ಯಕೀಯ ಚಿಕಿತ್ಸೆ ನೀಡದೆ ಇರುವುದೂ ಈ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗುತ್ತಿದೆ.
#ಅಸಡ್ಡೆ ಬೇಡ:
ಪದೇ ಪದೇ ಮೂರ್ಛೆ ಹೋಗುವುದರಿಂದ ಮೆದುಳು ಹಾಗೂ ನರಮಂಡಲಕ್ಕೆ ಅಪಾಯ ಉಂಟಾಗುತ್ತದೆ. ಹಾಗಾಗಿ ಅಸಡ್ಡೆ ಮಾಡದೆ ತತ್ಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಈ ಕಾಯಿಲೆ ನಿವಾರಣೆಗೆ ಕಿಟೋಜೆನಿಕ್ ಆಹಾರ ಪದ್ಧತಿ, ಮೆದುಳಿನ ಶಸ್ತ್ರ ಚಿಕಿತ್ಸೆ ಮತ್ತು ಔಷಧಗಳು ಲಭ್ಯವಿವೆ.
#ಪರಿಹಾರವೇನು..? ಅಂದರೆ ತಡೆಗಟ್ಟಲು ಕ್ರಮಗಳು....
>>ಕೆಲವೊಂದು ಗಿಡಮೂಲಿಕೆಗಳು ಮೆಗ್ನಿಸಿಯಮ್ ಪೂರಕ ಆಹಾರಗಳು, ಬಿ6 ಜೀವ ಸತ್ವ ವಿಟಮಿನ್ ಆಹಾರಗಳು, ವಿಟಮಿನ್ ಇ, ಬೂದಿ ಅಥವಾ ಕರಿ ಕುಂಬಳಕಾಯಿ, ವಿಟಮಿನ್ ಡಿ, ಫೋಲಿಕ್ ಆಮ್ಲ, ತುಳಸಿ ಮತ್ತು ಎಪ್ಸಮ್ ಉಪ್ಪು ಅಂಶಗಳಿರುವ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಈ ರೋಗವನ್ನು ನಿಯಂತ್ರಿಸಬಹುದು.
>>ಜೀವನಶೈಲಿ ಮತ್ತು ಪೂರಕ ನಿರ್ವಹಣೆ:
ಜೀವನಶೈಲಿಯ ಮಾರ್ಪಾಡುಗಳು ಮತ್ತು ಪೂರಕ ಚಿಕಿತ್ಸೆಗಳು ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಅಪಸ್ಮಾರವನ್ನು ನಿರ್ವಹಿಸಲು ಸಹಾಯ ಮಾಡಬಹುದು.
>>ಪ್ರಚೋದಕಗಳನ್ನು ಗುರುತಿಸಿ ಮತ್ತು ತಪ್ಪಿಸಿ: ಸಾಮಾನ್ಯ ಪ್ರಚೋದಕಗಳಲ್ಲಿ ನಿದ್ರೆಯ ಕೊರತೆ, ಒತ್ತಡ, ಮದ್ಯಪಾನ ಮತ್ತು ಮಿನುಗುವ ದೀಪಗಳು ಸೇರಿವೆ. ರೋಗಗ್ರಸ್ತವಾಗುವಿಕೆ ದಿನಚರಿಯನ್ನು ಇಟ್ಟುಕೊಳ್ಳುವುದು ವೈಯಕ್ತಿಕ ಪ್ರಚೋದಕಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
>>ಸಾಕಷ್ಟು ನಿದ್ರೆ ಪಡೆಯಿರಿ: ಸಾಕಷ್ಟು, ನಿಯಮಿತ ನಿದ್ರೆ (ರಾತ್ರಿಗೆ 7-9 ಗಂಟೆಗಳು) ಮುಖ್ಯ, ಏಕೆಂದರೆ ನಿದ್ರಾಹೀನತೆಯು ರೋಗಗ್ರಸ್ತವಾಗುವಿಕೆಗೆ ಸಾಮಾನ್ಯ ಪ್ರಚೋದಕವಾಗಿದೆ.
>>ಒತ್ತಡವನ್ನು ನಿರ್ವಹಿಸಿ: ಯೋಗ , ಧ್ಯಾನ ಮತ್ತು ಆಳವಾದ ಉಸಿರಾಟದ ವ್ಯಾಯಾಮಗಳಂತಹ ತಂತ್ರಗಳು ಸೆಳವು ಪ್ರಚೋದಕವಾದ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
>>ಆರೋಗ್ಯಕರ ಆಹಾರ: ಸಮತೋಲಿತ ಆಹಾರವನ್ನು ಸೇವಿಸಲು ಶಿಫಾರಸು ಮಾಡಲಾಗಿದೆ. ಔಷಧ-ನಿರೋಧಕ ಅಪಸ್ಮಾರದ ಕೆಲವು ಸಂದರ್ಭಗಳಲ್ಲಿ, ತಜ್ಞರ ಮೇಲ್ವಿಚಾರಣೆಯ ಕೀಟೋಜೆನಿಕ್ ಆಹಾರ (ಹೆಚ್ಚಿನ ಕೊಬ್ಬು, ಕಡಿಮೆ ಕಾರ್ಬೋಹೈಡ್ರೇಟ್) ಅಥವಾ ಮಾರ್ಪಡಿಸಿದ ಅಟ್ಕಿನ್ಸ್ ಆಹಾರವನ್ನು ಶಿಫಾರಸು ಮಾಡಬಹುದು.
>>ನಿಯಮಿತವಾಗಿ ವ್ಯಾಯಾಮ ಮಾಡಿ: ನಿಯಮಿತ ದೈಹಿಕ ಚಟುವಟಿಕೆಯು ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ, ಆದರೆ ವ್ಯಾಯಾಮದ ಸಮಯದಲ್ಲಿ ಸರಿಯಾದ ಜಲಸಂಚಯನ ಮತ್ತು ವಿಶ್ರಾಂತಿ ಮುಖ್ಯ.
>>ವಿಟಮಿನ್ಗಳು ಮತ್ತು ಪೂರಕಗಳು: ಕೆಲವು ಸೆಳವು ನಿರೋಧಕ ಔಷಧಿಗಳು ವಿಟಮಿನ್ ಕೊರತೆಗಳಿಗೆ ಕಾರಣವಾಗಬಹುದು (ಉದಾ, ಫೋಲೇಟ್ , ಬಯೋಟಿನ್ , ಕ್ಯಾಲ್ಸಿಯಂ ಮತ್ತು ವಿಟಮಿನ್ಗಳು ಡಿ, ಇ , ಬಿ6). ಹೆಚ್ಚಿನ ಪ್ರಮಾಣಗಳು ಔಷಧಿಗಳ ಪರಿಣಾಮಕಾರಿತ್ವವನ್ನು ಅಡ್ಡಿಪಡಿಸುವುದರಿಂದ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಪೂರಕಗಳನ್ನು ತೆಗೆದುಕೊಳ್ಳಬೇಕು.
#ಗಿಡಮೂಲಿಕೆ ಚಿಕಿತ್ಸೆ:
ಬಾಕೊಪಾ ಎನ್ನುವ ಗಿಡಮೂಲಿಕೆಯು ಅಪಸ್ಮಾರ ಅಥವಾ ಮೂರ್ಛೆ ರೋಗದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆಯುರ್ವೇದ ಔಷಧದಲ್ಲಿ ಬಳಸಲಾಗುವ ಅತ್ಯುತ್ತಮ ಗಿಡಮೂಲಿಕೆ ಇದು ಎಂದು ಹೇಳಲಾಗುತ್ತದೆ.
>>ವೈದ್ಯಕೀಯ ಐಡಿ ಧರಿಸಿ: ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಐಡಿ ಬ್ರೇಸ್ಲೆಟ್ ಅಥವಾ ಕಾರ್ಡ್ ನಿಮ್ಮ ಸ್ಥಿತಿಯ ಬಗ್ಗೆ ಇತರರಿಗೆ ಎಚ್ಚರಿಕೆ ನೀಡಬಹುದು.
Saturday, October 4, 2025
"ಅಂಚೆ:ಬಾಂಧವ್ಯದ ಬೆಸುಗೆಯ ಸಂಚಯನ ಸೇವೆ"
"ಅಂಚೆ:ಬಾಂಧವ್ಯದ ಬೆಸುಗೆಯ ಸಂಚಯನ ಸೇವೆ"
ಲೇಖನ: ಬಸವರಾಜ ಎಮ್ ಯರಗುಪ್ಪಿ
ಶಿಕ್ಷಕರು, ಹವ್ಯಾಸಿ ಬರಹಗಾರರು
ಸಾ.ಪೊ ರಾಮಗೇರಿ ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ.
ದೂರವಾಣಿ 9742193758
ಮಿಂಚಂಚೆ basu.ygp@gmail.com.
ಅಕ್ಟೋಬರ್ 9 – ವಿಶ್ವ ಅಂಚೆ ದಿನ
“ಅಂಚೆಯು ಹೃದಯದಿಂದ ಹೃದಯವನ್ನು ಬೆಸೆಯುವ ಸೇತುವೆ”
"ಹಿಮವಾಗಲೀ, ಮಳೆಯಾಗಲೀ, ಶಾಖವಾಗಲೀ ಅಥವಾ ರಾತ್ರಿಯ ಕತ್ತಲೆಯಾಗಲೀ ಈ ಅಂಚೆಗಳನ್ನು, ಅವರ ನಿಗದಿತ ಸುತ್ತುಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ತಲುಪಿಸುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ" — ಎಂದು ಹೆರೊಡೋಟಸ್ ಹೇಳಿದರು. ಈ ಮಾತುಗಳನ್ನು ಯು.ಎಸ್. ಅಂಚೆ ಸೇವೆಯು ಧ್ಯೇಯವಾಕ್ಯವನ್ನಾಗಿ ಅಳವಡಿಸಿಕೊಂಡಿರುವುದು ಅಂಚೆಯ ಮಹತ್ವವನ್ನು ಸಾರುತ್ತದೆ.
ಪುರಾತನ ಕಾಲದ ಮೇಘಸಂದೇಶ, ಮಹಾರಾಜರ ಕಾಲದ ಪಾರಿವಾಳ ಸಂದೇಶಗಳು, ನಂತರದ ಕಾಲದ ಕುದುರೆ ಅಥವಾ ಕಾಲ್ನಡಿಗೆಯ ಸಂದೇಶವಾಹಕರಿಂದ ಆರಂಭವಾದ ಅಂಚೆ ಸೇವೆ, ಮಾನವ ಸಂವಹನದ ಹೊಸ ಅಧ್ಯಾಯವನ್ನು ಬರೆದಿತು. ಕಾಲ ಬದಲಾದಂತೆ ಅಂಚೆಯೂ ಬದಲಾಗಿತು, ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಇಂದಿಗೂ ಜನಮಾನಸದಲ್ಲಿ ತನ್ನದೇ ಆದ ಜೀವಂತ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಈ ಸೇವೆಯ ಮಹತ್ವವನ್ನು ನೆನಪಿಸಲು ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ.
ಇತಿಹಾಸದ ಓಲೆಗಳು
ಅಶ್ವರೋಹಿಗಳ ಮೂಲಕ ಪ್ರಾರಂಭವಾದ ಅಂಚೆ ಪದ್ಧತಿಯನ್ನು 1296ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಜಾರಿಗೆ ತಂದರು, ಶೇರ್ ಶಾ ಸುರಿ ಅದನ್ನು ಇನ್ನಷ್ಟು ವಿಸ್ತರಿಸಿದರು.
1874ರಲ್ಲಿ ಸ್ವಿಜರ್ಲ್ಯಾಂಡ್ನ ಬರ್ನ್ ನಗರದಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ಸ್ಥಾಪನೆಯಾದಾಗ ಅಂಚೆ ಜಾಗತಿಕ ಮುಖವನ್ನು ಕಂಡಿತು.
ಅಕ್ಟೋಬರ್ 9, 1969ರಂದು ಟೋಕಿಯೋ ನಗರದಲ್ಲಿ ಮೊದಲ ಬಾರಿ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು.
ಅಂಚೆ – ನಮ್ಮ ಜೀವನದ ಮಾಧ್ಯಮ ಮಿತ್ರ
ಅಂಚೆ ಸೇವೆಯು ಜನರ ಭಾವನೆ, ಮಾಹಿತಿ, ವ್ಯವಹಾರ, ಹಾಗೂ ಸಂಬಂಧಗಳ ಸೇತುವೆಯಾಗಿದೆ. ಭಾರತದಲ್ಲಿ ಇದು ಜನಸಾಮಾನ್ಯರಿಗೇ ಹೆಚ್ಚು ಸಿಗುವ ಸಂವಹನದ ಪ್ರಮುಖ ಮಾರ್ಗವಾಗಿದ್ದು, ಅದರ ಮೂಲಕ ಹೃದಯದ ನುಡಿಗಳು ದೇಶದ ಅಂಚಿನಿಂದ ಅಂಚಿಗೆ ತಲುಪುತ್ತಿವೆ.
ಭಾರತದಲ್ಲಿನ ಅಂಚೆ ವ್ಯವಸ್ಥೆ
ಭಾರತದ ಸುಧಾರಿತ ಅಂಚೆ ಪದ್ಧತಿಗೆ ಬ್ರಿಟಿಷರ ಕಾಲವೇ ಮೂಲ. ಅವರ ವಸಾಹತು ನಿರ್ವಹಣೆಗೆ ಅಂಚೆಯ ಅಗತ್ಯವಿದ್ದ ಕಾರಣ ಅವರು ಪರಿಣಾಮಕಾರಿಯಾಗಿ ಈ ವ್ಯವಸ್ಥೆಯನ್ನು ರೂಪಿಸಿದರು.
ಆದರೆ ಅದಕ್ಕೂ ಮುನ್ನ ಚಕ್ರಾಧಿಪತಿಗಳ ಕಾಲದಲ್ಲಿ ಪಾರಿವಾಳಗಳು, ಕುದುರೆ ಸವಾರರು, ಸೇನಾಭಟರು ಪತ್ರವಹಕರಾಗಿದ್ದರು.
ಮುದ್ರಿತ ದಾಖಲೆ ಪತ್ರದ ರೂಪದಲ್ಲಿ ಅಂಚೆ ಬದಲಾದ ನಂತರ ಲಾರ್ಡ್ ಡಾಲ್ಹೌಸಿ (Lord Dalhousie) ಅಂಚೆ ಸುಧಾರಣೆಗೆ ಕಾರಣರಾದರು.
ಅಂಚೆಯ ಪ್ರಮುಖ ಸೇವೆಗಳು
ಇಂದಿನ ಅಂಚೆ ಕಚೇರಿಗಳು ಕೇವಲ ಪತ್ರ ಕಳುಹಿಸುವ ಸ್ಥಳವಲ್ಲ – ಜನಸಾಮಾನ್ಯರ ಆರ್ಥಿಕ ಜೀವನದ ಭಾಗವಾಗಿದೆ:
-
ಸುಕನ್ಯಾ ಸಮೃದ್ಧಿ ಯೋಜನೆ
-
ಆವರ್ತಿತ ಠೇವಣಿ (RD), ನಿಶ್ಚಿತ ಠೇವಣಿ (FD)
-
ಇ-ಅಂಚೆ, ಶೀಘ್ರ ಅಂಚೆ, ಪಾರ್ಸೆಲ್, ನೋಂದಾಯಿತ ಪತ್ರ
-
ಮನಿ ಆರ್ಡರ್, ಹಣ ವರ್ಗಾವಣೆ
-
ಮ್ಯುಚುಯಲ್ ಫಂಡ್, ಕಿಸಾನ್ ವಿಕಾಸ್ ಪತ್ರ
-
ರಾಷ್ಟ್ರೀಯ ಉಳಿತಾಯ ಪತ್ರ ಮುಂತಾದ ಸೇವೆಗಳು
ಭಾರತದ ಅಂಚೆ ಸೇವೆ ವಿಶ್ವದ ಅತಿ ದೊಡ್ಡ ಜಾಲವಾಗಿದ್ದು 1,55,000 ಕ್ಕೂ ಹೆಚ್ಚು ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ.
⚡ ಟೆಲಿಗ್ರಾಫ್ ಮತ್ತು ಮೋರ್ಸ್ ಕೋಡ್ – ಅಂಚೆಯ ಹೊಸ ಅಧ್ಯಾಯ
ಅಂಚೆಯ ಜೊತೆಗೆ ಸಂವಹನ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದರೆ ಟೆಲಿಗ್ರಾಫ್.
1837ರಲ್ಲಿ ಸ್ಯಾಮುವೆಲ್ ಮೋರ್ಸ್ (Samuel Morse) ಅವರಿಂದ ಕಂಡುಹಿಡಿಯಲ್ಪಟ್ಟ ಮೋರ್ಸ್ ಕೋಡ್ — “ಡಾಟ್” (·) ಮತ್ತು “ಡ್ಯಾಶ್” (–) ಗಳ ಸಂಯೋಜನೆಯ ಮೂಲಕ ಸಂದೇಶ ಕಳುಹಿಸುವ ವಿಧಾನ.
ಉದಾಹರಣೆಗೆ:
-
A = · –
-
B = – · · ·
-
SOS = · · · – – – · · ·
ಈ ವ್ಯವಸ್ಥೆಯಿಂದ ಸುದ್ದಿ ಕ್ಷಣಾರ್ಧದಲ್ಲಿ ತಲುಪುವಂತಾಯಿತು. ಭಾರತದಲ್ಲಿ ಟೆಲಿಗ್ರಾಫ್ ಸೇವೆ 1851ರಲ್ಲಿ ಆರಂಭಗೊಂಡು ಶತಮಾನಕ್ಕೂ ಹೆಚ್ಚು ಕಾಲ ಜನಸಂಪರ್ಕದ ಜೀವನಾಡಿಯಾಗಿತ್ತು. ಆದರೆ ಜುಲೈ 15, 2013ರಂದು ಇದು ಇತಿಹಾಸ ಸೇರಿತು.
ಜಾಗತೀಕರಣದ ಹೊಡೆತಕ್ಕೆ ಬಲಿಯಾದ ಅಂಚೆ ಸೇವೆ
ಡಿಜಿಟಲ್ ಯುಗದ ಪ್ರಾರಂಭದೊಂದಿಗೆ ಪತ್ರಗಳಿಗಾಗಿ ಕಾಯುವ ದಿನಗಳು ಕಡಿಮೆಯಾಗಿವೆ. ಮೊಬೈಲ್, ಇಮೇಲ್, ವಾಟ್ಸಪ್, ಫೇಸ್ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳು ಅಂಚೆಯ ಹಳೆಯ ಪಾತ್ರವನ್ನು ಹಂಚಿಕೊಂಡಿವೆ.
ಆದರೂ ಅಂಚೆ ವ್ಯವಸ್ಥೆಯ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಇನ್ನೂ ಅದ್ವಿತೀಯವಾಗಿದೆ.
ಆಧುನೀಕರಣದ ಪಥದಲ್ಲಿ ಇಂಡಿಯಾ ಪೋಸ್ಟ್
ಭಾರತೀಯ ಅಂಚೆ ಈಗ ಡಿಜಿಟಲ್ ಹಾದಿಯಲ್ಲಿ ಮುಂದಾಗಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಗ್ರಾಮೀಣ ಮಟ್ಟದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ.
ಸುಕನ್ಯಾ ಸಮೃದ್ಧಿ ಯೋಜನೆ, ಡಿಜಿಟಲ್ ಪಾವತಿ ವ್ಯವಸ್ಥೆ, QR ಕೋಡ್ ಮೂಲಕ ಹಣ ವರ್ಗಾವಣೆ — ಇವುಗಳೆಲ್ಲ ಅಂಚೆಯ ಆಧುನೀಕರಣದ ನಿದರ್ಶನ.
ಅಂಚೆಯ ಹೆಸರಿನ ಸ್ವಾರಸ್ಯಕರ ಕಥೆ
"ಅಂಚೆ" ಎಂಬ ಪದದ ಅರ್ಥ ಮೊದಲು “ಹಂಸ”. ಮೈಸೂರು ಸಂಸ್ಥಾನದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ಕ್ರಿ.ಶ. 1672ರಲ್ಲಿ ರಾಜ್ಯದ ಟಪಾಲು ವಿಭಾಗವನ್ನು ಸ್ಥಾಪಿಸಿದಾಗ, ನಳ-ದಮಯಂತಿಯ ಪ್ರೇಮಪತ್ರದ ಸನ್ನಿವೇಶವನ್ನು ನೆನೆದು “ಅಂಚೆ” ಎಂಬ ನಾಮಕರಣ ಮಾಡಿದರು. ಅದು ಸಂವಹನದ ಹಂಸದಂತೆ ಜನರ ಹೃದಯವನ್ನು ಸೇರುವ ಪ್ರತೀಕವಾಯಿತು.
ಕೊನೆಯ ಮಾತು
ಓಲೆಗಳಿಂದ ಮನಗಳನ್ನು ಬೆಸೆಯುತ್ತಿದ್ದ ಅಂಚೆ ವ್ಯವಸ್ಥೆ ಇಂದಿಗೂ ಭಾರತೀಯನ ಹೃದಯದ ಭಾಗವಾಗಿದೆ.
ಕಾಲ ಬದಲಾಗುತ್ತಿದ್ದರೂ ಅದರ ಮಾನವೀಯ ನಂಟು ಎಂದಿಗೂ ಕಡಿದು ಹೋಗಿಲ್ಲ.
ವಿಶ್ವ ಅಂಚೆ ದಿನದಂದು, ಆ ನಂಟನ್ನು ಕಾಪಾಡಿ ಸಾಗಿಸುತ್ತಿರುವ ಎಲ್ಲ ಅಂಚೆ ಸೇವಕರಿಗೂ ಹೃದಯಪೂರ್ವಕ ನಮನಗಳು.
“ಡಾಟ್ – ಡ್ಯಾಶ್ – ಕಾಗದದ ಓಲೆ – ಡಿಜಿಟಲ್ ಮೆಸೇಜ್, ಆದರೂ ಅಂಚೆಯ ಬಾಂಧವ್ಯ ಎಂದಿಗೂ ಅಮರ.”
.jpeg)




.jpeg)



.jpeg)

.jpeg)



.jpeg)



.jpeg)

