ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ...!
ಪ್ರಾಂಶುಪಾಲರು,
ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು
ಸಾಗರ
ನಾವು ಏನನ್ನಾದರೂ ಓದುತ್ತಿದ್ದೇವೆ ಅಥವಾ ಯಾರನ್ನಾದರೂ ನೋಡುತ್ತಿದ್ದೇವೆ ಎಂದರೆ ಅದು ಬೆಳಕಿನ ಸಹಾಯವಿಲ್ಲದೆ ಸಾಧ್ಯವಾಗಲಾರದು. ಇನ್ನೂ ಹೇಳಬೇಕೆಂದರೆ, ನಮ್ಮ ಕವಿಗಳು ನಿಸರ್ಗದ ಕುರಿತು ಪೇಜುಗಟ್ಟಲೆ ಕವನಗಳನ್ನು ಗೀಚುತ್ತಾರಲ್ಲಾ ಅದಕ್ಕೂ ಈ ಬೆಳಕೇ ಕಾರಣ. ಬೆಳಕಿಲ್ಲದಿದ್ದರೆ ಗುಲಾಬಿಯ ಕೆಂಪು ನಿತ್ಯ ಹರಿದ್ವರ್ಣದ ಕಂಪು, ಭತ್ತದೆಲೆಯ ಹಸಿರು, ಅದರ ಬುಡದ ಕೆಸರು ಇದೆಲ್ಲವನ್ನೂ ಕತ್ತಲೆಯ ಕರಿಛಾಯೆಯೇ ನುಂಗಿಬಿಡುತ್ತಿತ್ತು, ಬಣ್ಣ ಬಣ್ಣದ ಲೋಕವೆಂಬುದು ಒಂದು ಅರ್ಥವಿಲ್ಲದ ಪದವಾಗಿ ಬಿಡುತಿತ್ತು. ಆದ್ದರಿಂದಲೇ ಬೆಳಕಿಗೆ ಪುರಾತನ ಕಾಲದಿಂದಲೂ ಅಪಾರ ಮನ್ನಣೆ ದೊರಕುತ್ತಿರುವುದು. ಜಗತ್ತಿನ ಅಪೂರ್ವ ಸೌಂದರ್ಯವನ್ನು ಬಿಚ್ಚಿಡುವ ಮಾಧ್ಯಮವಾದ್ದರಿಂದಲೋ ಏನೋ, ಈ ಬೆಳಕಿನ ಬಗ್ಗೆ ಹಲವು ಚಿಂತನೆಗಳು ಬಹಳ ಹಿಂದಿನ ಕಾಲದಿಂದಲೇ ನಡೆಯ ತೊಡಗಿದ್ದವು. ಗ್ರೀಕ್ ಮುಂತಾದ ದೇಶಗಳಲ್ಲಿ ಕ್ರಿಸ್ತಪೂರ್ವದಲ್ಲಿಯೇ ಪ್ಲೇಟೋ ಮತ್ತು ಅರಿಸ್ಟಾಟಲ್ ತಮ್ಮ ಹಲವು ಸಿದ್ಧಾಂತಗಳಲ್ಲಿ ಬೆಳಕಿನ ಸ್ವರೂಪವನ್ನು ವಿವರಿಸಲು ಪ್ರಯತ್ನಿಸಿದ್ದರು. ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಭಾರತದ ಆರ್ಯಭಟ, ವರಾಹಿಮಿಹಿರಾ ಮುಂತಾದ ಜ್ಯೋತಿರ್ವಿಜ್ಞಾನಿಗಳು ಸಹ ಈ ಬೆಳಕಿನ ಹಿಂದೆ ಬಿದ್ದಿದ್ದರು ಎನ್ನುತ್ತವೆ ಐತಿಹ್ಯಗಳು. ನಂತರದ ದಿನಗಳಲ್ಲಿ ಡಿಕಾರ್ಟೆ ಎಂಬ ಭೌತಶಾಸ್ತ್ರಜ್ಞ ಬೆಳಕಿನ ರಚನೆಯ ಬಗ್ಗೆ ಮೊದಲ ಬಾರಿ ಸಿದ್ಧಾಂತವೊಂದರಲ್ಲಿ ಬೆಳಕು ಎಂಬುದು ಸಣ್ಣ ಸಣ್ಣ ಕಣಗಳಿಂದ ಮಾಡಲ್ಪಟ್ಟ ಒಂದು ಪ್ರವಾಹ ಎಂದು ಪ್ರತಿಪಾದಿಸುತ್ತಾನೆ. ಅದೇ ಸಿದ್ಧಾಂತವನ್ನು ಇಂಗ್ಲೆಂಡಿನ ಸರ್ ಐಸಾಕ್ ನ್ಯೂಟನ್ ಸ್ವಲ್ಪ ಮಾರ್ಪಡಿಸಿ ನ್ಯೂಟನ್ನನ ಕಣ ಸಿದ್ಧಾಂತ (ಕಾರ್ಪಸ್ಕುಲರ್ ಥಿಯರಿ)ದ ಮೂಲಕ ಬೆಳಕು ’ಕಾರ್ಪುಸ್ಕಲ್’ಗಳೆಂಬ ಕಣಗಳಿಂದ ಮಾಡಲ್ಪಟ್ಟಿದೆ ಎಂದೂ, ಅವುಗಳು ಮತ್ತು ಗಾಜಿನಂತ ವಸ್ತುಗಳ ಮಧ್ಯೆ ಇರುವ ಆಕರ್ಷಣೆ ಶಕ್ತಿಯಿಂದ ಬೆಳಕು ಅಂತಹ ವಸ್ತುಗಳ ಮೂಲಕ ಹಾದು ಹೋಗುತ್ತದೆಂದೂ, ಕನ್ನಡಿಯಂತಹ ವಸ್ತುವಿನ ಜೊತೆ ಇರುವ ವಿಕರ್ಷಣೆಯಿಂದ ಅದು ಪ್ರತಿಫಲನ ಹೊಂದುತ್ತದೆ ಎಂದೂ ಪ್ರತಿಪಾದಿಸುತ್ತಾನೆ. ಆದರೆ ಮುಂದೆ ಅವನೇ ಮಾಡಿದ ’ನ್ಯೂಟನ್ನ ಉಂಗುರ’ಗಳಂತಹ ಕೆಲ ಬೆಳಕಿನ ಪ್ರಯೋಗಗಳಿಂದ ಈ ಸಿದ್ಧಾಂತದಲ್ಲಿ ದೋಷಗಳಿರುವುದು ಗೊತ್ತಾಗುತ್ತದೆ. ನಂತರ ಬಂದ ಹೈಗೆನ್ಸ್ ಎಂಬಾತ ಬೆಳಕು ತರಂಗಗಳ ರೂಪದಲ್ಲಿರುತ್ತದೆ ಮತ್ತು ತನ್ನ ಚಲನೆಗೆ ವಿಶ್ವದೆಲ್ಲೆಡೆ ಪಸರಿಸಿರುವ ಅಗೋಚರ ’ಈಥರ್’ ಎಂಬ ಮಾಧ್ಯಮವನ್ನು ಬಳಸಿಕೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ. ಆದರೆ ಈ ಸಿದ್ಧಾಂತವೂ ಪ್ರಾಯೋಗಿಕವಾಗಿ ಈಥರ್ ಮಾಧ್ಯಮದ ಇರುವಿಕೆಯನ್ನು ತೋರಿಸಿಕೊಡುವಲ್ಲಿ ಸೋಲೊಪ್ಪಿಕೊಳ್ಳುತ್ತದೆ. ಜೊತೆಗ ಬೆಳಕು ನಿರ್ವಾತದಲ್ಲಿ ಅಂದರೆ ಯಾವುದೇ ಮಾಧ್ಯಮವಿಲ್ಲದಿದ್ದಲ್ಲಿಯೂ ಹೇಗೆ ಚಲಿಸುತ್ತದೆ ಎಂಬುದಕ್ಕೆ ಆ ಸಿದ್ಧಾಂತ ವಿವರಣೆ ನೀಡುವುದಿಲ್ಲ. ಕಡೆಗೆ ಮ್ಯಾಕ್ಸವೆಲ್ ಎಂಬಾತ ಬೆಳಕು ಒಂದು ವಿದ್ಯುದ್ಕಾಂತೀಯ ತರಂಗವೆಂದೂ ಅದರಲ್ಲಿ ವಿದ್ಯುತ್ ಮತ್ತು ಕಾಂತಕ್ಷೇತ್ರಗಳ ಪ್ರಭಾವ ಇರತ್ತವೆಂದೂ ಅವು ಯಾವುದೇ ಮಾಧ್ಯಮದ ಅವಶ್ಯಕತೆ ಇಲ್ಲದೆ ಚಲಿಸಬಲ್ಲವೆಂದೂ ಪ್ರತಿಪಾದಿಸುತ್ತಾನೆ. ಅಲ್ಲದೆ ಹೆನ್ರಿ ಹರ್ಡ್ಸ್ ಎಂಬಾತ ಈ ಸಿದ್ಧಾಂತಕ್ಕೆ ಪ್ರಾಯೋಗಿಕ ನಿದರ್ಶನವನ್ನು ಮಾಡಿ ತೋರಿಸುವುದರ ಜೊತೆಗೇ ವಿದ್ಯುತ್ ಮತ್ತು ಕಾಂತಕ್ಷೇತ್ರಗಳನ್ನು ಬಳಸಿ ವಿದ್ಯುದ್ಕಾಂತೀಯ ತರಂಗಗಳನ್ನು ಉತ್ಪಾದಿಸಬಹುದು ಎಂದೂ ತೋರಿಸಿಕೊಟ್ಟನು. ಹಾಗಾಗಿ ಬೆಳಕನ್ನು ಒಂದು ವಿದ್ಯುದ್ಕಾಂತೀಯ ತರಂಗವಾಗಿ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಯಿತು. ಆದರೆ ಕೆಲವೊಂದಿಷ್ಟು ಪ್ರಯೋಗಗಳಲ್ಲಿ ಬೆಳಕು ಕಣಗಳ ಪ್ರವಾಹದಂತೆ, ಇನ್ನೂ ಕೆಲವಷ್ಟರಲ್ಲಿ ವಿದ್ಯುದ್ಕಾಂತೀಯ ತರಂಗಗಳಂತೆ ವರ್ತಿಸುತ್ತಿರುವುದನ್ನು ಮ್ಯಾಕ್ಸ್ ಪ್ಲಾಂಕ್ ಎಂಬಾತ ಗಮನಿಸಿ, ಬೆಳಕಿಗೆ ಕೆಲವೊಮ್ಮೆ ತರಂಗಗಳಂತೆಯೂ ಮತ್ತೆ ಕೆಲವೊಮ್ಮೆ ಕಣಗಳಂತೆಯೂ ವರ್ತಿಸುವ ಇಬ್ಬಗೆಯ ಸ್ವಭಾವ ಅಥವಾ ದ್ವಂದ್ವ ಸ್ವಭಾವ ಇದೆಯೆಂದು ತೋರಿಸಿಕೊಟ್ಟನು. ಅಲ್ಲದೆ ಆ ಬೆಳಕಿನ ಕಣಗಳು ನಿರ್ದಿಷ್ಟ ಶಕ್ತಿಯ ಪ್ಯಾಕೆಟ್ಟುಗಳಾಗಿವೆ ಎಂದು ಪ್ರತಿಪಾದಿಸಿದನು. ಅವಕ್ಕೆ ಶಕ್ತಿಯ ಪ್ಯಾಕೆಟ್ಟುಗಳೆಂಬ ಅರ್ಥ ಬರುವ ’ಫೋಟಾನ್ ಅಥವಾ ಕ್ವಾಂಟಮ್’ಗಳೆಂಬ ಹೆಸರನ್ನು ನೀಡಿದನು. ಈ ಫೋಟಾನ್ ಸಿದ್ಧಾಂತದಿಂದಲೇ ದ್ಯುತಿ ವಿದ್ಯುತ್ ಪರಿಣಾಮವನ್ನು ಐನ್ಸ್ಟೈನ್ ಯಶಸ್ವಿಯಾಗಿ ವಿವರಿಸಿ ನೋಬೆಲ್ ಪಡೆದದ್ದು. ಒಟ್ಟಾರೆಯಾಗಿ ಬೆಳಕಿನ ಈ ದ್ವಂದ್ವ ಸ್ವಭಾವದಿಂದ ಅದರ ನಡತೆಯನ್ನು ನಾವು ಕೆಲವೊಮ್ಮೆ ಸಂಧರ್ಭಕ್ಕನುಗುಣವಾಗಿ ಮ್ಯಾಕ್ಸ್ವೆಲ್ಲನ ವಿದ್ಯುದ್ಕಾಂತೀಯ ಸಿದ್ಧಾಂತದಿಂದಲೂ, ಇನ್ನೂ ಕೆಲವೊಮ್ಮೆ ಪ್ಲಾಂಕನ ಕ್ವಾಂಟಮ್ ಸಿದ್ಧಾಂತದಿಂದಲೂ ಅರ್ಥಮಾಡಿ ಕೊಳ್ಳಬೇಕಾಗುತ್ತದೆ.

