ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam
Showing posts with label TAB. Show all posts
Showing posts with label TAB. Show all posts

Thursday, September 4, 2025

ನಾವು ಏಕಾಂಗಿಗಳಲ್ಲ, ಒಬ್ಬೊಬ್ಬರೂ ನಡೆದಾಡುವ ಪರಿಸರ ವ್ಯವಸ್ಥೆಗಳಂತೆ !

  ನಾವು ಏಕಾಂಗಿಗಳಲ್ಲ, ಒಬ್ಬೊಬ್ಬರೂ ನಡೆದಾಡುವ ಪರಿಸರ ವ್ಯವಸ್ಥೆಗಳಂತೆ  !

ಲೇಖಕರು :    ಡಾ.ಟಿ.ಎ.ಬಾಲಕೃಷ್ಣ ಅಡಿಗ

 ನಾವು ನಮ್ಮನ್ನು ಸ್ವತಂತ್ರ ಜೀವಿಗಳಂತೆ ಭಾವಿಸಿಕೊಂಡರೂ, ನಿಜ ಅರ್ಥದಲ್ಲಿ ವೈರಾಣುಗಳು, ಬ್ಯಾಕ್ಟೀರಿಯಾಗಳು ಮುಂತಾದ ಸೂಕ್ಷ್ಮಜೀವಿಗಳಿಂದ ತುಂಬಿಹೋಗಿರುವ ʼ ನಡೆದಾಡುವ ಪರಿಸರವ್ಯವಸ್ಥೆಗಳು ' ಎಂದು ಪರಿಗಣಿಸಬಹುದು ! ಈ ಪರಾವಲಂಬಿ ಸೂಕ್ಷ್ಮಜೀವಿಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ಗಮನಿಸಿದಾಗ ಅವು ನೈಸರ್ಗಿಕ ಭಿನ್ನತೆಗಳಿಗೆ ಹಾಗೂ ಜೀವವಿಕಾಸಕ್ಕೆ ಕಾರಣವಾಗುವ ಆನುವಂಶೀಯ ಉತ್ಪರಿವರ್ತನೆಗಳಷ್ಟೇ ಪ್ರಮುಖ ಎಂದೆನಿಸುತ್ತದೆ.

ಇತ್ತೀಚೆಗೆ  ಪ್ರಕಟವಾದ ಸಂಶೋಧನಾ ಲೇಖನವೊಂದರಲ್ಲಿ  ಹಾಲೊಬಯಾಂಟ್ ಜೀವವಿಜ್ಞಾನ  ಜಾಲದ ಸೇತ್ ಬಾರ್ಡರ್ ಸ್ಟೈನ್  (Seth Borderstain) ಮತ್ತು ಅವರ ತಂಡದ ವಿಜ್ಞಾನಿಗಳ ಅಭಿಪ್ರಾಯದ ಪ್ರಕಾರ, ಪರಾವಲಂಬಿ ಸೂಕ್ಷ್ಮಜೀವಿಗಳ ಮತ್ತು ಅತಿಥೇಯ ಜೀವಿಗಳ ನಡುವಿನ ಸಂಬಂಧಗಳ ವಿಶ್ಲೇಷಣೆಯು ಜೈವಿಕ ಭಿನ್ನತೆಗಳನ್ನು ಸವಿವರವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ.


                                          ಚಿತ್ರ 1. ನಮ್ಮ ದೇಹದೊಳಗೆ  ಕಂಡು ಬರುವ ವೈವಿಧ್ಯಮಯ ಸೂಕ್ಷ್ಮಜೀವಿಗಳು 

ಜೀವವಿಕಾಸ ಪ್ರಕ್ರಿಯೆಯಲ್ಲಿ ಸೂಕ್ಷ್ಮಜೀವಿಗಳು

ನಾವು ತಿಳಿದಿರುವಂತೆ  ಜೀವಿಗಳು ಕಾಲಾಂತರದಲ್ಲಿ ಉತ್ಪರಿವರ್ತನೆಗಳ ಹಾಗೂ ಹೊಂದಾಣಿಕೆಗಳ ಮೂಲಕ ಕ್ರಮೇಣ ಬದಲಾವಣೆಗಳಿಗೆ ಒಳಪಡುವ ಪ್ರಕ್ರಿಯೆಯೇ ಜೀವವಿಕಾಸ. ಉಪಯುಕ್ತ ಲಕ್ಷಣಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗಲಿಕ್ಕೆ ಕಾರಣವಾಗುವ ನೈಸರ್ಗಿಕ ಆಯ್ಕೆ ಎಂಬ ಪ್ರಕ್ರಿಯೆಯಿಂದ ಈ ಹೊಂದಾಣಿಕೆಗಳು ಪ್ರೇರಿತಗೊಳ್ಳುತ್ತವೆ.

ಒಂದು ಆತಿಥೇಯ ಜೀವಿಯ ಒಳಗೆ ಮತ್ತು ದೇಹದ ಮೇಲೆ ವಾಸಿಸುವ ಸೂಕ್ಷ್ಮಜೀವಿಗಳ ಸಮೂಹವನ್ನು ಒಟ್ಟಾಗಿ ಪರಿಗಣಿಸಿದಾಗ, ಜೀವವಿಕಾಸ ಪ್ರಕ್ರಿಯೆಯು ಹೆಚ್ಚು ಕುತೂಹಲಕಾರಿ ಮತ್ತು ಸಂಕೀರ್ಣ ಎಂದೆನಿಸುತ್ತದೆ. ಸಂಪ್ರದಾಯಿಕವಾಗಿ ನಾವು ಕಣ್ಣಿಗೆ ಕಾಣುವ ಮತ್ತು ಕಾಣದ ಜೀವಿಗಳನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡುತ್ತಿದ್ದೇವೆ. ಆದರಲ್ಲಿಯೂ, ಸೂಕ್ಷ್ಮಜೀವಿಗಳನ್ನು ಕೆಲವು ವಿಜ್ಞಾನಿಗಳು ಬೇರೆಯೇ ದೃಷ್ಟಿಯಲ್ಲಿ ನೋಡುತ್ತಾರೆ.

                                                 ಚಿತ್ರ 2. ದೇಹದೊಳಗಿನ ಸೂಕ್ಷ ಜೀವಿಗಳ ಆನುವಂಶೀಯ ವಿಶ್ಲೇಷಣೆ

 ಬಾರ್ಡನ್ ಸ್ಟೇನ್  ಪ್ರಕಾರ ಸೂಕ್ಷ್ಮಜೀವಿಗಳು ಇಡೀ ಜೀವಿಮಂಡಳದ  ತಳಪಾಯವಾಗಿವೆ. ಪ್ರತಿಯೊಂದು ಜೀವಿಯು ಸೂಕ್ಷ್ಮಜೀವಿಗಳ ಸಂಪರ್ಕ ಹಾಗೂ ಸಹವಾಸವಿಲ್ಲದೆ ಬದುಕಲಾರದು. ಹೀಗಾಗಿ, ಈ ಸೂಕ್ಷ್ಮಜೀವಿಗಳು ಆತಿಥೇಯ ಜೀವಿಯ ಗುಣಲಕ್ಷಣಗಳನ್ನು ನಿರಂತರವಾಗಿ ಪ್ರಭಾವಿಸಿ, ಬದಲಾಯಿಸುತ್ತವೆ.ಈ ಒಂದು ಸತ್ಯವು ಒಂದು ಹೊಸ ಸಿದ್ಧಾಂತವನ್ನೇ ಹುಟ್ಟುಹಾಕಿದೆ. ಅದನ್ನು ಹಾಲೋಬಯಾಂಟ್‌ ಬಯಾಲಜಿ(holobiont biology) ಎಂದು ಕರೆಯಲಾಗುತ್ತದೆ. ಇದು ಜೀವಿಗಳ ವಿವಿಧ ರೂಪಗಳು ಮತ್ತು ಕ್ರಿಯೆಗಳು ಪರಾವಲಂಬಿ ಸೂಕ್ಷ್ಮಜೀವಿಗಳ ಮತ್ತು ಅವುಗಳ ಆತಿಥೇಯ ಜೀವಿಗಳ ನಡುವಿನ ಸಂಬಂಧಗಳ ಪರಿಪೂರ್ಣ ವಿಶ್ಲೇಷಣೆಯಾಗಿದೆ. ಅಲ್ಲದೆ, ಜೀವಿಗಳನ್ನು ಮತ್ತು ಅವುಗಳ ಜೊತೆಗೆ ಬಿಡಿಸಲಾಗದ ನಂಟನ್ನು ಹೊಂದಿರುವ ಸೂಕ್ಷ್ಮಜೀವಿಗಳನ್ನು ಬೇರೆ ಬೇರೆಯಾಗಿ ಪರಿಗಣಿಸದೆ, ಒಟ್ಟಾರೆಯಾಗಿ ಪರಿಗಣಿಸುತ್ತದೆ. ಬಾರ್ಡರ್‌ಸ್ಟೇನ್‌ ಅವರ ಪ್ರಕಾರ, ʼ ಯಾವುದೇ ಜೀವಿ ಸ್ವತಂತ್ರವಲ್ಲ, ಎಲ್ಲವೂ ಸೂಕ್ಷ್ಮಜೀವಿಗಳ ಜೊತೆಗೆ ಸಹಯೋಗ ಮತ್ತು ಸಂಪರ್ಕವನ್ನು ಹೊಂದಿರುತ್ತವೆ

 ಈ ನವೀನ, ವಿಶಿಷ್ಟ ಅಲೋಚನೆಯು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು, ಸುಸ್ಥಿರ ಪರಿಸರ.ಚಿಂತನೆಯಲ್ಲಿ ಸ್ಥಿತಪ್ರಜ್ಞತೆಯನ್ನು ಹಾಗೂ ಕೃಷಿಕೇತ್ರದಲ್ಲಿ ಅಭಿವೃದ್ಧಿಯನ್ನು ತರುವ ನಿಟ್ಟಿನಲ್ಲಿ ಸುಕ್ಷ್ಮಜೀವಿಗಳನ್ನು ಬಳಸಿಕೊಳ್ಳುವ ಅವಕಾಶಗಳನ್ನು ಹೆಚ್ಚಿಸಲಿದೆ. ಯೋಚಿಸಿ ನೋಡಿ, ಇದರಿಂದ ತೀವ್ರ ಸ್ವರೂಪದ ಕ್ಯಾನ್ಸರ್‌ ನಂಥ ಖಾಯಿಲೆಗಳನ್ನು ಎದುರಿಸುವಲ್ಲಿ ಅಥವಾ ಹವಾಮಾನ ಬದಲಾವಣೆಯನ್ನು ಪ್ರತಿರೋಧಿಸುವ ಬೆಳೆಗಳನ್ನು ಪಡೆಯುವಂತಾದರೆ ಅದು  ಉಪಯುಕ್ತವಲ್ಲವೇ ?

ಸೂಕ್ಷ್ಮಜೀವಿಗಳ ಹಿನ್ನೆಲೆಯಲ್ಲಿ ಜೀವವಿಕಾಸದ ಮರು ಅಧ್ಯಯನ

 ಡಾರ್ವಿನ್‌ ತನ್ನ ʼ ಪ್ರಭೇದಗಳ ಉಗಮiʼ(Origin of Species) ಎಂಬ ಹೆಸರಾಂತ ಕೃತಿಯಲ್ಲಿ ಪ್ರಾಣಿಗಳನ್ನು ಮತ್ತು ಸಸ್ಯಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಜೀವವಿಕಾಸದ ಮೇಲಿನ ತನ್ನ ವಾದವನ್ನು ಮಂಡಿಸಿದ್ದ. ಆಗ ಹೆಚ್ಚಿನ ಮಾಹಿತಿಯಿಲ್ಲದಿದ್ದ ಕಾರಣ ಸೂಕ್ಷ್ಮಜೀವಿಗಳನ್ನು ಆತ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಪ್ರಸ್ತುತ ಸೂಕ್ಷ್ಮ ಜೀವಿಗಳ ಬಗ್ಗೆ ಇರುವ ಅಗಾಧ ಮಾಹಿತಿಯ ಹಿನ್ನೆಲೆಯಲ್ಲಿ ತಳಿಶಾಸ್ತ್ರ ಮತ್ತು ಜೀವವಿಕಾಸದ ಸಿದ್ಧಾಂತಗಳನ್ನು ಮರುಪರೀಶೀಲಿಸಬೇಕಾದ ಅಗತ್ಯವನ್ನು ಬಾರ್ಡರ್‌ಸ್ಟೇನ್‌ ಒತ್ತಿ ಹೇಳಿದ್ದಾರೆ.

ಜೀವಿಗಳ ವಿಕಾಸ ಹಾಗೂ ಇನ್ನಿತರ ಜೈವಿಕ ಅಂಶಗಳ ಅಧ್ಯಯನದಲ್ಲಿ ಸೂಕ್ಷ್ಮಜೀವಿಗಳ ಮಹತ್ವವನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ? ಹಾಲೋಬಯಾಂಟ್ ಜೀವಶಾಸ್ತ್ರದ ಪ್ರತಿಪಾದಕರ ಪ್ರಕಾರ, ಇದಕ್ಕೆ ಜೀವಶಾಸ್ತ್ರದ ನಿರೂಪಣೆ ಹಾಗೂ ಅಧ್ಯಯನದಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಿದೆ. ಜೊತೆಗೆ ಸೂಕ್ಷ್ಮಜೀವಿಗಳ ಪ್ರಭಾವವನ್ನು ನಿರ್ಧರಿಸುವ ಹೊಸ ವಿಶ್ಲೇಷಣಾತ್ಮಕ ಪರಿಕರಗಳ ಅವಸ್ಯಕತೆಇದೆ. ಜೀವಿಗಳ ಲಕ್ಷಣಗಳ ಅಬಿವ್ಯಕ್ತಿಗೆ ಅವು ಆನುವಂಶೀಯತೆಯ ಜೊತೆಗೆ ಹೇಗೆ ವರ್ತಿಸುತ್ತವೆ ಎಂಬುದನ್ನು ತಿಳಿಯಬೇಕಿದೆ.ಅಂಥ ಪರಿಕರಗಳು ದೊರೆತಾಗ ಸೂಕ್ಷ್ಮಜೀವಿಗಳನ್ನು ಹಾಗೂ ಸೂಕ್ಷ್ಮಜೀವಿಗೋಳವನ್ನು ಸೂಕ್ತವಾಗಿ ಮಾರ್ಪಡಿಸುವ ಸಾದ್ಯತೆ  ಹೆಚ್ಚುತ್ತದೆ.

 ಸೂಕ್ಷ್ಮಜೀವಿಗಳು ಭೂಮಿಯ ಮೇಲೆ ನಾಲ್ಕು ಬಿಲಿಯನ್‌ ಗೂ ಹೆಚ್ಚು ವರ್ಷಗಳಿಂದ ಉಳಿದು ಬಂದಿವೆ. ಸಂಖ್ಯೆಯಲ್ಲಿ ಅವು ಆಕಾಶದಲ್ಲಿರುವ ನಕ್ಷತ್ರಗಳನ್ನು ಮೀರಿಸುತ್ತವೆ. ಅಷ್ಟೇ ಏಕೆ? ನಿಮ್ಮ ಬಾಯಂಗಳವೊಂದರಲ್ಲೇ ಇರುವ ಸೂಕ್ಷ್ಮಜೀವಿಗಳ ಸಂಖ್ಯೆ ಜಗತ್ತಿನಲ್ಲಿರುವ ಮಾನವರ ಒಟ್ಟು ಸಂಖ್ಯೆಗಿಂತ ಹೆಚ್ಚಿದೆ. ಸೂಕ್ಷ್ಮಜೀವಿಗಳು ನಮ್ಮ ಪ್ರಪಂಚವನ್ನು ಬದಲಾಯಿಸುತ್ತಿರುವ ವಿಧಾನವನ್ನು ಈಗಷ್ಟೇ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದೇವೆ.

 ಇತ್ತೀಚಿನ ಸಂಶೋಧನೆಗಳ ಪ್ರಕಾರ ಕ್ಯಾನ್ಸರ್‌ ನಂತ ರೋಗಗಳು ಉಂಟಾಗುವ ಸಾದ್ಯತೆ, ಅಧಿಕ ಕೋಲೆಸ್ಟರಾಲ್‌ ಸಂಗ್ರಹದ ಸಾದ್ಯತೆ ಮುಂತಾದ ಲಕ್ಷಣಗಳನ್ನು ನಿರ್ಧರಿಸುವಲ್ಲಿಯೂ ಈ ಸೂಕ್ಷ್ಮಜೀವಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕೆ ಕಾರಣ  ನಅವು ನಮ್ಮ ದೇಹದಲ್ಲಿ ನಮ್ಮದೇ ಜೀನ್‌ ಗಳ ಜೊತೆಗೆ ಈ ಬಿಲಿಯನ್‌ ಗಟ್ಟಲೆ ಪರಾವಲಂಬಿ ಸೂಕ್ಷ್ಮಜೀವಿಗಳ ಜೀನ್‌ ಗಳನ್ನೂ ಹೊಂದಿದ್ದೇವೆ ಅಲ್ಲವೇ ?  ಈಗೀಗ ನಮ್ಮ ಗಣನೆಗೆ ಬರುತ್ತಿರುವ ವಿಷಯವೆಂದರೆ, ಸೂಕ್ಷ್ಮಜೀವಿಗಳು ಅತಿಥೇಯ ಜೀವಿಗಳ ಲಕ್ಷಣಗಳಲ್ಲಿ ಜೀನ್‌ ಗಳು ಉಂಟುಮಾಡುವ ಬಿನ್ನತೆಗಳಿಗಿಂತ ಹೆಚ್ಚಿನ ಭಿನ್ನತೆಗಳಿಗೆ ಕಾರಣವಾಗುತ್ತವೆ. ಮಾನವರ ಭವಿಷ್ಯವು ಅವರಲ್ಲಿರುವ ಜೀನ್‌ಗಳ ಅಬಿವ್ಯಕ್ತಿಗಿಂತ ಹೆಚ್ಚಾಗಿ ಸಹಯೋಗದಲ್ಲಿರುವ ಸೂಕ್ಷ್ಮಜೀವಿಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ, ನಾವು ಒಬ್ಬೊಬ್ಬರೂ ಬರಿಯ ನಾವಲ್ಲ, ನಾವು ಒಬ್ಬೊಬ್ಬರೂ ಒಂದು ಪರಿಸರವ್ಯವಸ್ಥೆಯೇ  ಆಗಿದ್ದೇವೆ, ಅಲ್ಲವೇ ?

 ಗಮನಿಸಿ, ನಾಳೆ ಬೆಳಿಗ್ಗೆ ನೀವು ಹಲ್ಲುಜ್ಜುವಾಗ. ಕೇವಲ ನಿಮ್ಮ ಹಲ್ಲಿನ ಆರೋಗ್ಯದ ಕಡೆ ಮಾತ್ರ  ನಿಗಾ ವಹಿಸುತ್ತಿಲ್ಲ, ಬದಲಿಗೆ, ಅಲ್ಲೊಂದು ಪರಿಸರ ವ್ಯವಸ್ಥೆಯನ್ನೇ  ನೀವು ನಿರ್ವಹಿಸುತ್ತಿದ್ದೀರಿ !

 

Wednesday, June 4, 2025

ದೇಶದ ನೀಲಿ ಕ್ರಾಂತಿಯ ಹರಿಕಾರ-ಡಾ.ಎಸ್. ಅಯ್ಯಪ್ಪನ್

 ದೇಶದ ನೀಲಿ ಕ್ರಾಂತಿಯ ಹರಿಕಾರ-ಡಾ.ಎಸ್. ಅಯ್ಯಪ್ಪನ್

         ಲೇಖಕರು : ಡಾ.ಟಿ.ಎ.ಬಾಲಕೃಷ್ಣ ಅಡಿಗ
                     ವಿಜ್ಞಾನ ಸಂವಹನಕಾರರು


 ಕಳೆದ ಮೇ ತಿಂಗಳ 10ರಂದು ನಮ್ಮನ್ನಗಲಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ ಕರ್ನಾಟಕದಲ್ಲಷ್ಟೇ ಅಲ್ಲ, ದೇಶದ ವಿಜ್ಞಾನ ಕ್ಷೇತ್ರದ ಧ್ರುವ ತಾರೆಗಳಲ್ಲಿ ಒಬ್ಬರು. ತಮ್ಮ ಸರಳತೆ ಹಾಗೂ ಸಜ್ಜನಿಕೆಗಳಿಂದಾಗಿ ದೇಶದುದ್ದಕ್ಕೂ ಅಪಾರ ಅಭಿಮಾನಿಗಳನ್ನು ಹೊಂದಿದ್ದವರು. ಪಿ.ಹೆಚ್‌ಡಿ ಸಂಶೋಧನೆಯ ಅವಧಿಯಲ್ಲಿ ಅವರ ಸಹಪಾಠಿಯಾಗಿದ್ದ ಹೆಮ್ಮೆ ನನ್ನದು.


ಡಿಸೆಂಬರ್‌ 10, 1955ರಲ್ಲಿ ಜನಿಸಿದ ಅಯ್ಯಪ್ಪನ್‌ ಅವರು ಬೆಂಗಳೂರಿನ  ನ್ಯಾಷನಲ್‌ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡಿ, ಮುಂದೆ  ಮಂಗಳೂರಿನ  ಫಿಶರೀಸ್‌ ಕಾಲೇಜಿನಲ್ಲಿ ಮೀನುಗಾರಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದ  ಪ್ರಾಣಿಶಾಸ್ತ್ರ ವಿಭಾಗದಲ್ಲಿ  ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿ ಪಿ.ಹೆಚ್.ಡಿ ಪದವಿಗೆ ಪಾತ್ರರಾದರು. ನನ್ನ ಮತ್ತು ಅವರ ಒಡನಾಟ ಪ್ರಾರಂಭವಾಗಿದ್ದು ಇಲ್ಲಿಯೇ. ಅತ್ಯಂತ ಮಿತಭಾಷಿಯಾಗಿದ್ದರೂ, ಅಯ್ಯಪ್ಪನ್‌ ಅವರು ತಮ್ಮ ಕಾರ್ಯತತ್ಪರತೆಯಿಂದಾಗಿ ನಮ್ಮ ಸಂಶೋಧನಾ ಗುಂಪಿನಲ್ಲಿದ್ದ  ಎಲ್ಲ ಸಹೋದ್ಯೋಗಿಗಳ ಪ್ರೀತಿ, ವಿಶ್ವಾಸಗಳಿಗೆ ಪಾತ್ರರಾಗಿದ್ದರು.

1978ರಲ್ಲಿ  ದೇಶದ ಕೃಷಿ ಸಂಶೋಧನೆಯ  ಪ್ರಮುಖ ಸಂಸ್ಥೆಯಾದ ಐ.ಸಿ.ಎ.ಆರ್‌ ನಲ್ಲಿ ವಿಜ್ಞಾನಿಯಾಗಿ  ವೃತ್ತಿ ಜೀವನ ಪ್ರಾರಂಭಿಸಿದ ಅಯ್ಯಪ್ಪನ್‌, ಮುಂದೆ ಹಲವಾರು ಸಂಸ್ಥೆಗಳಲ್ಲಿ ತಮ್ಮ ನಿಸ್ಪೃಹ ಸೇವೆ ಸಲ್ಲಿಸಿದ್ದಾರೆ. 2006-2008ರ ಅವಧಿಯಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸಿ.ಇ.ಒ. ಆಗಿ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಕೇಂದ್ರ ಸರ್ಕಾರದ ಕೃಷಿ ಸಂಶೋಧನಾ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡರು.

ಸಾಮಾನ್ಯವಾಗಿ ಬೆಳೆವಿಜ್ಞಾನಿಗಳೇ ಮಹಾನಿರ್ದೇಶಕರಾಗಿ ನೇಮಕಗೊಳ್ಳುತ್ತಿದ್ದ, ಐ.ಸಿ.ಎ.ಆರ್.‌  ಸಂಸ್ಥೆಗೆ ಮೊದಲ ಬಾರಿಗೆ ಮೀನುಗಾರಿಕೆ ಕ್ಷೇತ್ರದ ವಿಜ್ಞಾನಿ ಅಯ್ಯಪ್ಪನ್‌  ಮಹಾ ನಿರ್ದೇಶಕರಾಗಿ 2010ರಲ್ಲಿ ನೇಮಕಗೊಂಡು ಇತಿಹಾಸ ನಿರ್ಮಿಸಿದರು . ಅಲ್ಲಿ 2016ರ ವರೆಗೆ ದಕ್ಷತೆಯಿಂದ ಸೇವೆ ಸಲ್ಲಿಸಿದರು.

ಇಂಫಾಲ್‌ನಲ್ಲಿರುವ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿಯೂ ಸಹ  ನೇಮಕಗೊಂಡಿದ್ದರು. ಭುವನೇಶ್ವರದ ಸಿ.ಐ.ಎಫ್.ಎ. ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ನ್ಯಾಷನಲ್‌ ಅಕ್ರೆಡಿಷನ್‌ ಬೋರ್ಡ್‌ ಫಾರ್‌ ಟೆಸ್ಟಿಂಗ್‌ ಅಂಡ್‌ ಕ್ಯಾಲಿಬ್ರೇಷನ್‌
(ಎನ್‌ ಎ.ಬಿ.ಎಲ್)ನ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು.

 ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಸಂಶೋಧನೆಗಳಿಗೆ ಖ್ಯಾತಿ ಪಡೆದಿರುವ ಇಂಥ ಹಲವಾರು ಪ್ರತಿಷ್ಟಿತ ಸಂಸ್ಥೆಗಳಿಗೆ ಡಾ.ಅಯ್ಯಪ್ಪನ್‌ ಒದಗಿಸಿದ ನಾಯಕತ್ವ ಅತ್ಯಂತ ಅನುಕರಣೀಯ. ಅಲ್ಲಿ ಅವರು ಪ್ರಾರಂಭಿಸಿದ ಕೆಲವು ಯೋಜನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಸಂಬಂಧಿತ ಮಾಹಿತಿಗಳನ್ನು  ಪರಸ್ಪರ ಹಂಚಿಕೊಳ್ಳುವ ರಾಷ್ಟ್ರಗಳ ಒಕ್ಕೂಟದಲ್ಲಿ ಭಾರತವನ್ನು ಅಗ್ರ ಪಂಕ್ತಿಯಲ್ಲಿ ನಿಲ್ಲಿಸಲು ನೆರವಾದವು.

ತಾವು ತೊಡಗಿಸಿಕೊಂಡ ವಿವಿಧ  ಕಾರ್ಯಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾದ ಯಾವುದೇ ರೀತಿಯ ಸಲಹೆಗಳನ್ನು ಇತರರಿಂದ ಸ್ವೀಕರಿಸುವಲ್ಲಿ ಅಯಪ್ಪನ್ ಅವರದ್ದು ಸದಾ ಮುಕ್ತ ಮನಸ್ಸು. ಯುವ ವಿಜ್ಞಾನಿಗಳ ಹಾಗೂ ತಂತ್ರಜ್ಞಾನಿಗಳ ಜೊತೆ ಸುಲಭವಾಗಿ ಬೆರೆತು, ಅವರ ಅಭಿಪ್ರಾಯಗಳಿಗೆ ಕಿವಿಗೊಡುತ್ತಿದ್ದ ಅವರ ಸರಳತೆ ಅನನ್ಯವಾದುದು. ಕೃಷಿ ಕ್ಷೇತೆದಲ್ಲಿ ಐ.ಸಿ.ಟಿ.ಯ ಬಳಕೆ, ದತ್ತಾಂಶ ದೊರಕಿಸುವ ವ್ಯವಸ್ಥೆಯ ಉನ್ನತೀಕರಣ, ಬಹುಶಿಸ್ತೀಯ ಸಂಶೋಧನೆಗಳಿಗೆ ಉತ್ತೇಜನ, ಮುಂತಾದ ತಮ್ಮ ದೂರದರ್ಶಿತ್ವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಂಶೋಧನಾ  ಕ್ಷೇತ್ರಕ್ಕೆ‌ ಗಣನೀಯ ಕೊಡುಗೆ ನೀಡಿದ ಹೆಗ್ಗಳಿಕೆ ಅವರದ್ದು.

ದೇಶದ ಮೀನುಗಾರಿಕೆ ಹಾಗೂ ಜಲಚರ ಕೃಷಿ ಕ್ಷೇತ್ರಗಳಿಗೆ ತಮ್ಮ ಸಂಶೋಧನೆಗಳ, ದಕ್ಷ ಆಡಳಿತದ ಹಾಗೂ ಮಾರ್ಗದರ್ಶನಗಳ ಮೂಲಕ ದೇಶದಲ್ಲಿ ಮೀನುಗಳ ಉತ್ಪಾದನೆಯನ್ನು ದಾಖಲೆ ಮಟ್ಟಕ್ಕೆ ಹೆಚ್ಚಿಸುವಲ್ಲಿ  ಮಹತ್ತರ ಕೊಡುಗೆಗಳನ್ನು ಅಯ್ಯಪ್ಪನ್‌ ಅವರು ನೀಡಿದ್ದಾರೆ. ಕರಾವಳಿ ಮತ್ತು ಒಳನಾಡಿನ ಪ್ರದೇಶಗಳಲ್ಲಿ  ಗ್ರಾಮೀಣ ಜೀವನೋಪಾಯವನ್ನು ಸುಧಾರಿಸುವಲ್ಲಿ ಹಾಗೂ ಆಹಾರ ಭಧ್ರತೆಯನ್ನು ಖಾತ್ರಿ ಪಡಿಸುವಲ್ಲಿ ಅವರ ಈ ಕೊಡುಗೆಗಳು ಪ್ರಮುಖ ಎನ್ನಿಸಿವೆ. ಈ ಕಾರಣಕ್ಕಾಗಿ ಅವರನ್ನು “ದೇಶದ ನೀಲಿ ಕ್ರಾಂತಿಯ ಹರಿಕಾರ “ ಎಂದು ಗೌರವಿಸಲಾಗುತ್ತದೆ.

ಅಯ್ಯಪ್ಪನ್‌ ಅವರಿಗೆ ಸಂದಿರುವ ಹಲವಾರು ಗೌರವಾದರಗಳು ಅವರ ಕಾರ್ಯಕ್ಷಮತೆಗೆ, ದಕ್ಷತೆಗೆ ಹಾಗೂ ನಿಸ್ಪೃಹ ಸೇವೆಗೆ ಜ್ವಲಂತ ಸಾಕ್ಷಿ. ಇದಕ್ಕೆ ಕಿರೀಟಪ್ರಾಯವಾಗಿ ಬಂದದ್ದು 2022 ರಲ್ಲಿ ಅವರಿಗೆ ಕೇಂದ್ರ ಸರ್ಕಾರ ನೀಡಿ ಗೌರವಿಸಿದ “ಪದ್ಮಶ್ರೀ” ಪ್ರಶಸ್ತಿ.

ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿಗೆ (ಕೆ.ಎಸ್.ಟಿ.ಎ.) ಅಧ್ಯಕ್ಷರಾಗಿ ನೇಮಕಗೊಂಡ ಅಯ್ಯಪ್ಪನ್ ಅಲ್ಲಿಯೂ ತಮ್ಮ ವಿಶಿಷ್ಟ ಹಾಗೂ ವಿನೂತನ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾದರು. ಈ ಅವಧಿಯಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಅವರ ವಿಜ್ಞಾನ ಪಠ್ಯದಲ್ಲಿದ್ದ ಅಧ್ಯಾಯಗಳಿಗೆ ಕನ್ನಡದಲ್ಲಿ ಕೆ.ಎಸ್‌.ಟಿ.ಎ. ವತಿಯಿಂದ ವಿಡಿಯೋಗಳನ್ನು ತಯಾರಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದರು. ಅವರ ಆಹ್ವಾನದ ಮೇರೆಗೆ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಹಲವು ವೀಡಿಯೋಗಳನ್ನು ಮಾಡಿಕೊಡುವ ಜವಾಬ್ದಾರಿಯನ್ನು ಅಯ್ಯಪ್ಪನ್‌ ಅವರು ನನಗೆ ವಹಿಸಿದ್ದರು. ಇದೇ ಅವಧಿಯಲ್ಲಿ, ಬ್ಲಾಗ್‌ ರೂಪದಲ್ಲಿ ಪ್ರಕಟವಾಗುತ್ತಿದ್ದ ನಮ್ಮ “ಸವಿಜ್ಞಾನ” ಇ-ಪತ್ರಿಕೆಯನ್ನು ಅವರಿಗೆ ಪರಿಚಯಿಸಿದ್ದೆ. ನಮ್ಮ ಶಿಕ್ಷಕರ ತಂಡದ ಈ ಪ್ರಯತ್ನವನ್ನು ಅವರು ಮನಸಾರೆ ಮೆಚ್ಚಿಕೊಂಡಿದ್ದರು. ʼಸವಿಜ್ಞಾನʼ ದ ಮೊದಲ ವಾರ್ಷಿಕ ಸಂಚಿಕೆಗೆ ತಮ್ಮ ಸಂದೇಶವನ್ನೂ ನೀಡಿದ್ದರು.

ಅವರ ಅಗಲಿಕೆಯಿಂದ ಭಾರತೀಯ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ  ಮತ್ತು ಸಾರ್ವಜನಿಕ ಸೇವಾ ವಲಯಗಳಲ್ಲಿ ಉಂಟಾಗಿರುವ ಶೂನ್ಯ ಭರಿಸಲಾಗದ್ದು. ಅವರು ಹುಟ್ಟು ಹಾಕಿದ ಮುಕ್ತ ಜ್ಞಾನ ವೇದಿಕೆಗಳಲ್ಲಿ ಮತ್ತು ಅವರು ಬೆಳೆಸಿ, ಪೋಷಿಸಿದ ಸಂಶೋಧನಾ ಸಮುದಾಯಗಳಲ್ಲಿ ಅವರ ಮಹತ್ತರ ಕೊಡುಗೆಗಳು ಸದಾ ರಿಂಗಣಿಸುತ್ತಿರುತ್ತವೆ. “ ಸವಿಜ್ಞಾನ” ತಂಡದ ಎಲ್ಲ ಶಿಕ್ಷಕರ ಪರವಾಗಿ ಡಾ. ಅಯ್ಯಪ್ಪನ್‌ ಅವರಿಗೆ ನಮ್ಮ “ಆಶ್ರು ತರ್ಪಣ”

Tuesday, June 4, 2024

ಡಯಾಟಮ್ ಗಳು ಮರೆಯದ ವಿಜ್ಞಾನಿ ಹೆಚ್.ಪಿ. ಗಾಂಧಿ

 ಡಯಾಟಮ್ ಗಳು ಮರೆಯದ ವಿಜ್ಞಾನಿ ಹೆಚ್.ಪಿ. ಗಾಂಧಿ

ಡಾ.ಟಿ.ಎ.ಬಾಲಕೃಷ್ಣ ಅಡಿಗ  

ವಿಜ್ಞಾನ ಸಂವಹನಕಾರರು



  ಒಂದು ಸಣ್ಣ ಕೊಳದಿಂದ ಪ್ರಾರಂಭಿಸಿ ಸಾಗರಗಳವರೆಗೆ ಹಮ್ಮಿಕೊಂಡಿರುವ ಜಲಪರಿಸರ ವ್ಯವಸ್ಥೆಗಳಲ್ಲಿ ನೀರಿನ ಮೇಲ್ಭಾಗದಲ್ಲಿ ತೇಲಾಡುತ್ತಿರುವ ಸೂಕ್ಷ್ಮಜೀವಿಗಳಾದ ಪ್ಲವಕಗಳ (planktons) ಬಗ್ಗೆ ನೀವು ಕೇಳಿದ್ದೀರಿ. ಇವುಗಳಲ್ಲಿ ಸಸ್ಯಪ್ಲವಕಗಳು (phytoplanktons) ಹಾಗೂ ಪ್ರಾಣಿಪ್ಲವಕಗಳು (zooplanktons)ಎಂಬ ಎರಡು ಗುಂಪುಗಳಿವೆ. ಸಸ್ಯಪ್ಲವಕಗಳು ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯ ಮೂಲಕ ಸ್ವಯಂ ಆಹಾರ ತಯಾರಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಯ ಭಾಗವಾಗಿ ವಾತಾವರಣಕ್ಕೆ ಆಕ್ಸಿಜನ್ ಬಿಡುಗಡೆ ಮಾಡುತ್ತವೆ. ಈ ಗುಂಪಿನ ಪ್ರಮುಖ ಉದಾಹರಣೆಗಳೆಂದರೆ,ಏಕಕೋಶ ಜೀವಿಗಳಾದ ಡಯಾಟಮ್ ಗಳು(diatoms). ಪ್ರಮುಖವಾಗಿ ತ್ರಿಜ್ಯಸಮ್ಮಿತಿ(radialsymmetry) ಹಾಗೂ ದ್ವಿಪಾರ್ಶ್ವಸಮ್ಮಿತಿ(bilateral symmetry)ಯನ್ನು ಹೊಂದಿರುವ ಎರಡು ಬಗೆಯ ಡಯಾಟಮ್ ಗಳನ್ನು ಗುರುತಿಸಬಹುದು.


ಚಿತ್ರ 1.ಡಯಾಟಮ್ ನ ಕೆಲವು ವಿಧಗಳು

ತಮ್ಮ ಜೀವಕೋಶವನ್ನಾವರಿಸಿರುವ ಸಿಲಿಕಾಯುಕ್ತ ಕವಚದ ಬಣ್ಣ, ಆಕಾರ ಹಾಗೂ ವಿನ್ಯಾಸಗಳಿಂದಾಗಿ ನೀರಿನ ಮೆಲ್ಭಾಗದಲ್ಲಿ ಹೊಳೆಯುತ್ತಿರುವಂತೆ ಕಾಣುವ ಡಯಾಟಮ್ ಗಳನ್ನು ಈ ಕಾರಣಕ್ಕಾಗಿ "ಸಸ್ಯಲೋಕದ ಆಭರಣಗಳು" ಎಂದು ಪರಿಗಣಿಸಲಾಗುತ್ತದೆ.  

ಒಂದು ಅಂದಾಜಿನ ಪ್ರಕಾರ, ವಾತಾವರಣಕ್ಕೆ ಬಿಡುಗಡೆಯಾಗುವ ಆಕ್ಸಿಜನ್ ನ ಒಟ್ಟು ಪ್ರಮಾಣದ ಶೇ 75ರಷ್ಟನ್ನು ಈ ಡಯಾಟಮ್ ಗಳು ಉತ್ಪಾದಿಸುತ್ತವೆ. ಆಂದರೆ, ಕಳೆದ 15 ನಿಮಿಷಗಳಲ್ಲಿ ನೀವು ದೇಹದ ಒಳಗಡೆ ಎಳೆದುಕೊಂಡ ನಾಲ್ಕು ಉಸಿರಿನಲ್ಲಿ, ಒಂದು ಉಸಿರಿನಲ್ಲಿರುವಷ್ಟು ಆಕ್ಸಿಜನ್ ಡಯಾಟಮ್ ಗಳಿಂದ ಬಂದಿರುತ್ತದೆ ! ಅಲ್ಲಿಗೆ, ಇವು ಎಷ್ಟು ಉಪಯುಕ್ತ ಜೀವಿಗಳು ಎಂಬುದು ನಿಮಗೆ ಮನದಟ್ಟಾಗಿರಬೇಕು

ಡಯಾಟಮ್ ಗಳ ಸುಮಾರು 20 ಲಕ್ಷ  ಪ್ರಬೇಧಗಳು ಜಗತ್ತಿನಾದ್ಯಂತ ಹಂಚಿಹೋಗಿರಬಹುದೆಂಬ ಒಂದು ಅಂದಾಜು ಇದೆಯಾದರೂ, ಕೇವಲ 30,000 ಪ್ರಬೇಧಗಳನ್ನು ಮಾತ್ರ ಅಧಿಕೃತವಾಗಿ ಗುರುತಿಸಲು ಇದುವರೆಗೆ ವಿಜ್ಞಾನಿಗಳಿಗೆ ಸಾಧ್ಯವಾಗಿದೆ.

ನಮ್ಮ ದೇಶದಲ್ಲಿ ಡಯಾಟಮ್ ನ ಬಗೆಗಳು ಹಾಗೂ ಅವುಗಳ ಹಂಚಿಕೆಯ ವಿಸ್ತಾರದ ಬಗ್ಗೆ ಅತಿ ದೀರ್ಘ ಕಾಲ ಸಂಶೋಧನೆ ನಡೆಸಿದ ಅಪ್ಪಟ ಭಾರತೀಯ ವಿಜ್ಞಾನಿಯೊಬ್ಬರನ್ನು ನಾವು ಸಂಪೂರ್ಣವಾಗಿ ಮರೆತುಬಿಟ್ಟಿರುವುದು ಭಾರತೀಯ ವಿಜ್ಞಾನ ಕ್ಷೇತ್ರದಲ್ಲಿನ ಒಂದು ದುರಂತ.

ಪ್ರೊ.ಹೇಮೇಂದ್ರಕುಮಾರ್ ಪೃಥ್ವಿರಾಜ್ ಗಾಂಧಿ (ಹೆಚ್.ಪಿ.ಗಾಂಧಿ) 46ವರ್ಷಗಳಷ್ಟು ದೀರ್ಘಕಾಲ ದೇಶದಾದ್ಯಂತ ಸಂಚರಿಸಿ, ವಿವಿದ ಪ್ರದೇಶಗಳಲ್ಲಿ ಡಯಾಟಮ್ ಪ್ರಬೇಧಗಳನ್ನು ಸಂಗ್ರಹಿಸಿ ಅವುಗಳ ಬಗ್ಗೆ ನಿರಂತರ ಸಂಶೋಧನೆ ನಡೆಸಿದ ಮಹಾ ವಿಜ್ಞಾನಿ.


ಚಿತ್ರ 2. ಹೆಚ್.ಪಿ.ಗಾಂಧಿ 

ನಿವೃತ್ತಿಯ ನಂತರವೂ ಅವರಲ್ಲಿನ ವಿಜ್ಞಾನಿ ವಿಶ್ರಾಂತಿ ಪಡೆದಿರಲಿಲ್ಲ. ವಿಶೇಷವೆಂದರೆ, 46 ವರ್ಷಗಳ   ಅವಧಿಯಲ್ಲಿ ಗಾಂಧಿ ಅವರು ಡಯಾಟಮ್ ಗಳ 300ಕ್ಕೂ ಹೆಚ್ಚು ಹೊಸ ಪ್ರಬೇಧಗಳನ್ನು ಗುರುತಿಸಿ ಹೆಸರಿಸಿದ್ದಾರೆ !  ಇಂಥ ಒಂದು ದಾಖಲೆಯನ್ನು ಮೀರಿಸಲು ಈ ಸಂಶೋಧನಾ ಕ್ಷೇತ್ರದಲ್ಲಿ ಯಾರಿಗೂ ಸಾಧ್ಯವಾಗಿಲ್ಲ. 

ಸಸ್ಯವಿಜ್ಞಾನಿ ಹೆಚ್.ಪಿ. ಗಾಂಧಿ ಜನಿಸಿದ್ದು 1920ರ ಆಗಸ್ಟ್ 20ರಂದು,ರಾಜಾಸ್ಥಾನದ ಪ್ರತಾಪ್ ಗರ್ ನಲ್ಲಿ. ಅಲ್ಲಿಯೇ ತಮ್ಮ ಪ್ರೌಢಶಿಕ್ಷಣ ಮುಗಿಸಿ, ಆಗ್ರಾದಲ್ಲಿ ಇಂಟರ್ಮೀಡಿಯಟ್ ಶಿಕ್ಷಣ ಪೂರೈಸಿದರು. ಮುಂದೆ, ಆಗಿನ ಬಾಂಬೆಯಲ್ಲಿದ್ದ ವಿಲ್ಸನ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರು. 1944ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿ, ಶೈವಲಗಳ ಮೇಲೆ ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದರು. 1960ರ ವೇಳೆಗೆ ಶೈವಲಗಳಲ್ಲಿ 40 ಹೊಸ ಜಾತಿಗಳನ್ನು,10 ಹೊಸ ಪ್ರಬೇಧಗಳನ್ನು ಹಾಗೂ 21 ಹೊಸ ತಳಿಗಳನ್ನು ಅವರು ಗುರುತಿಸಿ ದಾಖಲಿಸಿದ್ದರು ! ಈ ವೇಳೆಗಾಗಲೇ ಗಾಂಧಿ ಅವರಿಗೆ ಡಯಾಟಮ್ ಗಳ ಬಗ್ಗೆ ಒಲವು ಬೆಳೆದಿತ್ತು. ಡಯಾಟಮ್ ಗಳ ರೂಪ, ರಚನಾ ವಿನ್ಯಾಸ ಹಾಗೂ ವಿಪುಲತೆ ಅವರನ್ನು ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಪ್ರೇರೇಪಿಸಿದ್ದುವು. ಡಯಾಟಮ್ ಗಳ ಬಗೆಗಿನ ಸಂಶೋಧನೆಗೆ ಗಾಂಧಿ ಅವರಿಗಿದ್ದ ಆಸಕ್ತಿಯನ್ನು ಸಹೋದ್ಯೋಗಿಗಳು ಮೆಚ್ಚಿ, ಬೆನ್ನು ತಟ್ಟುವ ಬದಲು ಆಡಿಕೊಡದ್ದೇ ಹೆಚ್ಚು. ಕೆಲವರಂತೂ, ಇವರನ್ನು ('ಆ ನೂರಿಪ್ಪತ್ತರವನು') ಎಂದೇ ಕರೆಯುತ್ತಿದ್ದರಂತೆ. ಆಗ ಗಾಂಧಿ ಅವರಿಗೆ ತಿಂಗಳಿಗೆ ನೂರಿಪ್ಪತ್ತು ರುಪಾಯಿ ಸಂಬಳ ಬರುತ್ತಿತ್ತಂತೆ !

ಗಾಂಧಿ ಅವರ ವೃತ್ತಿ ಜೀವನದ ಇನ್ನೊಂದು ದುರಂತವೆಂದರೆ, ಅವರ ಸಂಶೋಧನಾ ಮಾರ್ಗದರ್ಶಕರ ಹಾಗೂ ಸಹೋದ್ಯೋಗಿಗಳ ಜೊತೆಗೆ ಉಂಟಾಗುತ್ತಿದ್ದ ಮನಸ್ತಾಪಗಳು. ಇದರ ಪರಿಣಾಮವಾಗಿ, ಅವರು ಆಗಾಗ್ಗೆ ವರ್ಗಾವಣೆಯ ಶಾಪಕ್ಕೆ ಗುರಿಯಾಗುತ್ತಿದ್ದರು. ಇದರಿಂದ ಗಾಂಧಿ ಧೃತಿಗೆಡಲಿಲ್ಲ. ವರ್ಗಾವಣೆಗಳನ್ನೇ ಹೊಸ ಅವಕಾಶಗಳನ್ನಾಗಿ ಬಳಸಿಕೊಂಡು, ಅಲ್ಲಿನ ತಮ್ಮ ವಿದ್ಯಾರ್ಥಿಗಳ ಜೊತೆಗೆ ಕ್ಷೇತ್ರ ಭೇಟಿಗೆ(field visit) ಹೋಗಿ ಡಯಾಟಮ್ ನ ಮಾದರಿಗಳನ್ನು ಸಂಗ್ರಹಿಸಿ ಸಂಶೋಧನೆಗೆ ಬಳಸಿಕೊಳ್ಳುತ್ತಿದ್ದ ಛಲ ಅವರದಾಗಿತ್ತು.

ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಧನಸಹಾಯ ಪಡೆಯದೆ ತಮ್ಮ ಸಂಶೋಧನೆಯನ್ನು ಮುಂದುವರೆಸಿದ ಹೆಗ್ಗಳಿಕೆ ಗಾಂಧಿ ಅವರದ್ದು. ಹಣದ ಕೊರತೆ ಉಂಟಾದಾಗ ಸ್ಥಳೀಯ ಹಣ್ಣಿನ ಮಾರುಕಟ್ಟೆಯಿಂದ ಖಾಲಿ ಮರದ ಪೆಟ್ಟಿಗೆಗಳನ್ನು ತಂದು ಅದರಿಂದ ಸಣ್ಣ ಪೆಟ್ಟಿಗೆಗಳನ್ನು ತಾವೇ ತಯಾರಿಸಿಕೊಂಡು ಅವುಗಳಲ್ಲಿತಾವು ತಯಾರಿಸಿಟ್ಟಿದ್ದ ಸಂಶೋಧನಾ ಸ್ಲೈಡ್ ಗಳನ್ನು (slides) ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಒಂದು ಬದಿ ಖಾಲಿ ಇದ್ದ ಹಾಳೆಗಳನ್ನು ಕೊಂಡುಕೊಂಡು ಅದರಲ್ಲಿ ತಮ್ಮ ಸಂಶೋಧನೆಗೆ ಸಂಬಂಧಿಸಿದ ಚಿತ್ರಗಳನ್ನು ಹಾಗೂ ವಿವರಗಳನ್ನು  ಬರೆದಿಡುತ್ತಿದ್ದರು. 

ಆಸ್ಪತ್ರೆಗಳಿಂದ ಖಾಲಿ ವಯಲ್ ಗಳನ್ನು(vials) ಕೇಳಿ ಪಡೆದು ಅದರಲ್ಲಿ ತಾವು ಸಂಗ್ರಹಿಸಿದ ಡಯಾಟಮ್ ಮಾದರಿಗಳನ್ನು ಇಟ್ಟುಕೊಳ್ಳುತ್ತಿದ್ದರು. ಯಾವುದಕ್ಕೂ ಯಾರನ್ನೂ ದೂರದೆ ತಮ್ಮ ಸಂಶೋಧನೆಯನ್ನು ತಾಳ್ಮೆಯಿಂದ, ತಾದಾತ್ಮತೆಯಿಂದ ಮುಂದುವರೆಸಿದ ವಿಶಿಷ್ಠ ವ್ಯಕ್ತಿತ್ವ ಅವರದ್ದು.

ಇವೆಲ್ಲ ಇತಿಮಿತಿಗಳ ನಡುವೆಯೂ ತಮ್ಮ ಸಂಶೋಧನೆಗೆ ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಬಳಸಿದ ಭಾರತೀಯ ವಿಜ್ಞಾನಿಗಳಲ್ಲಿ ಗಾಂಧಿ ಮೊದಲಿಗರು. ಹೊಸ ಪ್ರಬೇಧಗಳ ಪತ್ತೆಯ ಜೊತೆಗೆ, ಡಯಾಟಮ್ ಗಳ ವರ್ಗೀಕರಣ, ಪರಿಸರದ ಹೊಂದಾಣಿಕೆ, ಭೌಗೋಳಿಕ ಹಂಚಿಕೆ ಮುಂತಾದ ಹಲವು ಅಂಶಗಳ ಜೊತೆಗೆ, ಶಿಲಾಪದರಗಳಲ್ಲಿನ ಪಳೆಯುಳಿಕೆ ಡಯಾಟಮ್ ಗಳ ಬಗ್ಗೆ ಗಾಂಧಿ ಅವರು ಸಂಶೋಧನೆ ನಡೆಸಿದ್ದಾರೆ. ಡಯಾಟಮ್ ಗಳಿಗೆ ಸಂಬಂಧಿಸಿದಂತೆ ಸುಮಾರು 35 ಸಂಶೋಧನಾ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ. ಅವರ ಸಂಶೋಧನೆಯ ಪ್ರಮುಖ ಅಂಶಗಳನ್ನು ಹಲವು ದೇಶಗಳ ಖ್ಯಾತನಾಮ ವಿಜ್ಞಾನಿಗಳು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಖ್ಯಾತಿವೆತ್ತ ಡಯಾಟಮ್ ವಿಜ್ಞಾನಿಗಳಾದ ಹಸ್ಟೆಡ್ಟ್(Hustedt),  ಚೊಲೊನೋಕಿ (Cholonoki), ಜಾನ್ ಲಂಡ್(John Lund), ರುಥ್ ಪ್ಯಾಟ್ರಿಕ್(Ruth Patrick), ಮುಂತಾದವರು ಗಾಂಧಿ ಅವರೊಂದಿಗೆ ವಿಷಯ ವಿನಿಮಯಕ್ಕಾಗಿ ಪತ್ರಮುಖೇನ ನಿರಂತರ ಸಂಪರ್ಕದಲ್ಲಿದ್ದರು.

ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ ಡಯಾಟಮ್ ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಕಾರ್ತಿಕ್ ಬಾಲಸುಬ್ರಮಣ್ಯಮ್ ಎಂಬ ವಿಜ್ಞಾನಿ ಗಾಂಧಿ ಅವರ ಸಂಶೋಧನೆಗಳಿಂದ ಪ್ರಭಾವಿತರಾಗಿ ಅವರನ್ನು 2006ರಲ್ಲಿ ಗುಜರಾತ್ ನ ಜುನಾಗಡ್ ನಲ್ಲಿರುವ ಅವರ ಮನೆಗೆ ಭೇಟಿ ನೀಡುತ್ತಾರೆ. ಮನೆಯಲ್ಲಿ ಹಾಸಿಗೆ ಹಿಡಿದಿದ್ದ ಗಾಂಧಿ ಅವರು ಮೊದಲಿಗೆ ಯಾವುದೇ ಮಾಹಿತಿಯನ್ನು ಕಾರ್ತಿಕ್ ಅವರೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಾರೆ. ಕಾರ್ತಿಕ್ ತಮ್ಮ ಲ್ಯಾಪ್ ಟಾಪ್ ತೆಗೆದು ವಿವರಿಸಲು ಹೊರಟಾಗ, ಅದರಲ್ಲಿ ಸ್ಕ್ರೀನ್ ಸೇವರ್ ಆಗಿ ಅವರು ಬಳಸಿದ್ದ ವಿವಿಧ ಡಯಾಟಮ್ ಗಳ ವರ್ಣಚಿತ್ರಗಳನ್ನು ಗಮನಿಸಿದ ಗಾಂಧಿ ಅವರು ಅವುಗಳನ್ನು ಒಂದೊಂದಾಗಿ ಹೆಸರಿಸುತ್ತಾ ಹೋಗುತ್ತಾರೆ !. ಆನಂತರವೇ, ಗಾಂಧಿ ಅವರು ತಮ್ಮ ಸಂಶೋಧನೆಯ ಕಥೆ ಹಾಗೂ ವ್ಯಥೆಯನ್ನು ಕಾರ್ತಿಕ್ ಅವರ ಮುಂದೆ ಬಿಚ್ಚಿಡುತ್ತಾರೆ. ಅಷ್ಟೇ ಅಲ್ಲ, ತಾವು ಸಂಗ್ರಹಿಸಿ ಮನೆಯಲ್ಲಿಟ್ಟುಕೊಂಡಿದ್ದ ಡಯಾಟಮ್ ಮಾದರಿಗಳನ್ನು ಹಾಗು ತಯಾರಿಸಿದ್ದ ಸ್ಲೈಡ್ ಗಳನ್ನು ಕಾರ್ತಿಕ್ ಅವರಿಗೆ ಹಸ್ತಾಂತರಿಸುತ್ತಾರೆ. ತಮ್ಮ ಸಂಶೋಧನೆಗೆ ಅವುಗಳನ್ನು ಅಕರವಾಗಿ ಬಳಸಿಕೊಂಡ ಕಾರ್ತಿಕ್ ಅವರು ಆನಂತರ ಆ ಎಲ್ಲ ಅಮೂಲ್ಯ ಸಂಗ್ರಹಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ(I.I.Sc.)ಯ ಸೆಂಟರ್ ಫಾರ್ ಇಕಲಾಜಿಕಲ್ ಸ್ಟಡೀಸ್ ಗೆ ನೀಡುತ್ತಾರೆ. ಇಡೀ ದಕ್ಷಿಣ ಏಶಿಯಾದಲ್ಲೇ ಡಯಾಟಮ್ ಸಂಶೋಧನೆಗೆ ಸಂಬಂಧಿಸಿದ ಏಕೈಕ ರೆಫೆರೆನ್ಸ್ ಆಕರವಾಗಿ ಅವೀಗ ಇಲ್ಲಿ ಸುರಕ್ಷಿತವಾಗಿವೆ. ಕಾರ್ತಿಕ್ ಅವರು ಶ್ರಮ ವಹಿಸಿ ಗಾಂಧಿ ಅವರನ್ನು ಪತ್ತೆ ಮಾಡಿ ವಿವರಗಳನ್ನು ಸಂಗ್ರಹಿಸದೇ ಹೋಗಿದ್ದಲ್ಲಿ, ಗಾಂಧಿ ಅವರ ಸಂಶೋಧನೆಯ ಪ್ರಾಮುಖ್ಯತೆ ವಿಜ್ಞಾನ ಪ್ರಪಂಚಕ್ಕೆ ದೂರವೇ ಉಳಿದಿರುತ್ತಿತ್ತು. 

ತಮ್ಮಅಪೂರ್ವ ಸಂಶೋಧನೆಗೆ ಯಾವುದೇ ಮನ್ನಣೆ, ಪುರಸ್ಕಾರಕ್ಕೆ ಪಾತ್ರರಾಗದ ಹೆಚ್.ಪಿ.ಗಾಂಧಿ ಅವರು 2008ರ ಜೂನ್ 5ರಂದು ಜುನಾಗಡ್ ನಲ್ಲಿ ನಿಧನರಾದರು. ಅವರ ನಿಧನದ ನಂತರವೇ  ಅವರ ಸಂಶೋಧನೆಗೆ ಸಂಬಂಧಿಸಿದ ವಿವರಗಳು ವಿಜ್ಞಾನ ಲೋಕಕ್ಕೆ ತಿಳಿದುಬಂದದ್ದು. ಅವರ ನಿಧನಾ ನಂತರವೇ ಅವರನ್ನು " ಭಾರತದ ಸಿಹಿನೀರಿನ ಡಯಾಟಮ್ ಗಳ ಪಿತಾಮಹ " ಎಂದು ವಿಜ್ಞಾನ ಲೋಕ ಗುರುತಿಸಲು ಪ್ರಾರಂಭಿಸಿದ್ದು ಒಂದು ವಿಪರ್ಯಾಸ ! ಇತ್ತೀಚೆಗೆ,  ಕೆಲವು ತಿಂಗಳ ಹಿಂದೆ ಗುರುತಿಸಲಾದ ಡಯಾಟಮ್ ನ ಹೊಸ ಪ್ರಬೇಧ ಒಂದಕ್ಕೆ 'ಗಾಂಧಿಯಾ ' ಎಂಬ ಹೆಸರನ್ನು ನೀಡಿ ಗೌರವಿಸಲಾಗಿದೆ.

ಗಾಂಧಿ ಅವರ ಸಮಕಾಲೀನ ಸಹೋದ್ಯೋಗಿಗಳು ಹಾಗು ವಿಜ್ಞಾನ ಲೋಕ ಅವರನ್ನು ಮರೆತಿರಬಹುದು. ಆದರೆ ಅವರನ್ನು ಡಯಾಟಮ್ ಗಳು ಮರೆಯಲು ಸಾಧ್ಯವೇ ?


Thursday, April 4, 2024

ಬೆಳಕು ಸೂಸುವ ಸಸ್ಯಗಳು


ಬೆಳಕು ಸೂಸುವ ಸಸ್ಯಗಳು 

          ಲೇಖನ ಡಾ. ಬಾಲಕೃಷ್ಣ ಅಡಿಗ ಟಿ.ಎ.

 




    ನಿಮ್ಮ ಮನೆಯಂಗಳದಲ್ಲಿರುವ ಉದ್ಯಾನವನದಲ್ಲಿ ರಾತ್ರಿಯಾಗುತ್ತಿದ್ದಂತೆ ತಮ್ಮದೇ ಬೆಳಕನ್ನು ಹೊರಸೂಸುವ ಸಸ್ಯಗಳನ್ನು ಬೆಳೆಯುವಂತಾದರೆ ಹೇಗಿರುತ್ತದೆ ? ಅಂಥ ಸಸ್ಯಗಳ ಮಧ್ಯೆ ವಾಯುವಿಹಾರ ಮಾಡುವ ಕನಸು ಕಾಣಬಹುದೆ ? ಕುಲಾಂತರಿ ತಂತ್ರಜ್ಞಾನ ಬಳಸಿ ಇದು ಸಾಧ್ಯ ಎಂದು ಇಂಗ್ಲೆಂಡಿನ ವಿಜ್ಞಾನಿಯೊಬ್ಬರು ತೋರಿಸಿಕೊಟ್ಟಿದ್ದಾರೆ. 

ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಸಂಶ್ಲೇಷಿತ ಜೀವ ವಿಜ್ಞಾನ ವಿಭಾಗದ ಕರೇನ್ ಸಾರ್ಕಿಸ್ಯಾನ್ (Karen Sarkisyan)  ತನ್ನ ಪ್ರಯೋಗಾಲಯದ ಕತ್ತಲ ಕೋಣೆಯಲ್ಲಿ ಬೆಳಕು ಸೂಸುತ್ತಿರುವ ಪೆಟೂನಿಯಾ (Petunia) ಸಸ್ಯಗಳಿಗಿಂತ ಹೆಚ್ಚು ಸ್ಪೂರ್ತಿ ನೀಡುವ ಬೇರೊಂದು ವಿಷಯವೇ ಕಾಣುತ್ತಿಲ್ಲ. 2009ರಲ್ಲಿ ಬಿಡುಗಡೆಯಾದ 'ಅವತಾರ್‌' ಚಲನಚಿತ್ರದಂತೆ, ಹೆಚ್ಚು ಜನರು ಈ ಒಂದು ಅಚ್ಚರಿಯನ್ನು ಅನುಭವಿಸ ಬೇಕೆಂಬುದು ಆವನ ಇಚ್ಛೆ. ಸಾರ್ಕಿಸ್ಥಾನ್ ಪೆಟೂನಿಯಾ ಸಸ್ಯಗಳಲ್ಲಿ ವಿಶಿಷ್ಟ ಪ್ರಯೋಗ ನಡೆಸಿ ಅವು ಜೀವದೀಪ್ತಿ (bio luminescence) ಮಾಡುವಲ್ಲಿ ಯಶಸ್ವಿಯಾದವರು. ಆತ ಸ್ಥಾಪಿಸಿದ ಇಡಾಹೊ ಮೂಲದ ಲೈಟ್ ಬಯೋ(light bio)  ಎಂಬ ಬಯೋ ಟೆಕ್ ಸಂಸ್ಥೆ ಅಮೆರಿಕಾದ ಕೃಷಿ ಇಲಾಖೆಯಿಂದ ಜೀವದೀಪ್ತಿ ಹೊರಸೂಸುವ ಪೆಟೂನಿಯಾ ಸಸ್ಯಗಳನ್ನು ಅಮೆರಿಕಾದಲ್ಲಿ ಮಾರಾಟ ಮಾಡಲು ಇತ್ತೀಚೆಗಷ್ಟೇ ಅನುಮತಿ ಪಡೆದಿದೆ.

ಲೈಟ್ ಬಯೋ ಸಂಸ್ಥೆಯ ವಿಜ್ಞಾನಿಗಳು ಹಾಗೂ ಇಂಜಿನಿಯರುಗಳು ಪೆಟೂನಿಯಾ ಸಸ್ಯಗಳಲ್ಲಿ ಕುಲಾಂತರಿ ತಂತ್ರಜ್ಞಾನ ಬಳಸಿ ಗಾಢ ಹಸುರು ಬಣ್ಣದ ಬೆಳಕನ್ನು ಹೊರಸೂಸುವ ತಳಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೀವದೀಪ್ತಿ ಹೊರಸೂಸುವ ನಿಯೋನೋಥೋಪಾನಸ್‌ ನಂಬಿ (Neonothopanus nambi) 2 ಸೇರಿದ ಶಿಲೀಂದ್ರ ವೊಂದರಿಂದ ಪಡೆದ

ಸೇರಿದ ಶಿಲೀಂದ್ರವೊಂದರಿಂದ ಪಡೆದ ವಂಶವಾಹಿಗಳನ್ನು ಪೆಟೂನಿಯಾ ಸಸ್ಯಗಳಿಗೆ ವರ್ಗಾಯಿಸಿ, ಈ ಕುಲಾಂತರಿ ಸಸ್ಯಗಳನ್ನು ಪಡೆಯಲಾಗಿದೆ. ಹಗಲಿನಲ್ಲಿ ತೆಳು ಕಂದು ಬಣ್ಣ ಹೊಂದಿರುವ ಈ ಶಿಲೀಂದ್ರ ಪ್ರಭೇದವು ರಾತ್ರಿಯ ವೇಳೆ ಕಡು ಹಸುರು ಬಣ್ಣದ ಬೆಳಕನ್ನು ಹೊರಸೂಸುತ್ತದೆ. ಸಮಶೀತೋಷ್ಣ ಕಾಡುಗಳಲ್ಲಿ ಕಂಡುಬರುವ ಈ ಶಿಲೀಂದ್ರಗಳಿಂದ ಪಡೆದ ಸ್ವಾಭಾವಿಕ ವ್ಯವಸ್ಥೆಯೊಂದನ್ನು ಪೆಟೂನಿಯಾ ಸಸ್ಯಗಳಿಗೆ ವರ್ಗಾಯಿಸುವ ಮೂಲಕ ಇದನ್ನು ಸಾಧಿಸಲಾಗಿದೆ.

 ಒಂದು ಅಂದಾಜಿನ ಪ್ರಕಾರ, ಬ್ಯಾಕ್ಟಿರಿಯಾಗಳು, ಶಿಲೀಂದ್ರಗಳು, ಲೋಳೆಮೀನುಗಳು, ಹುಳುಗಳು, ಸಂಧಿಪದಿಗಳು, ಮೀನುಗಳು ಹಾಗೂ ಉಭಯವಾಸಿಗಳು ಸೇರಿದಂತೆ ಸುಮಾರು 1500 ಪ್ರಭೇಧದ ಜೀವಿಗಳಲ್ಲಿ ಹೀಗೆ ಬೆಳಕನ್ನು ಹೊರ ಸೂಸುವ ಸಾಮರ್ಥ್ಯವಿದೆ. ಈ ಎಲ್ಲ ಜೀವಿಗಳಲ್ಲಿ ಕಂಡುಬರುವ ಲೂಸಿಫೆರಿನ್(luciferin) ಎಂಬ ವಸ್ತು, ಲೂಸಿಫೆರೇಸ್ ಎಂಬ ಕಿಣ್ವದ ಸಹಾಯದಿಂದ ಆಕ್ಸಿಜನ್ ಜೊತೆಗೆ ವರ್ತಿಸಿದಾಗ ಬೇಳಕಿನ ರೂಪದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ. ಕೆಲವು ಬ್ಯಾಕ್ಟಿರಿಯಾ ಹಾಗೂ ಶಿಲೀಂದ್ರದ ಪ್ರಭೇದಗಳನ್ನು ಹೊರತು ಪಡಿಸಿದರೆ, ಉಳಿದ ಜೀವಿಗಳಲ್ಲಿ ಜೀವದೀಪ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 2018ರಲ್ಲಿ ಸಾರ್ಕಿಸ್ಯಾನ್ ಮತ್ತು ಅವರ ತಂಡದ ವಿಜ್ಞಾನಿಗಳು ನಿಯೋನೋಥೋಪಾನಸ್ ನಂಬಿ ಪ್ರಭೇದದ ಶಿಲೀಂದ್ರಗಳಲ್ಲಿ ಜೀವದೀಪ್ತಿಗೆ ಕಾರಣವಾಗುವ ಕಿಣ್ವಗಳನ್ನು ಗುರುತಿಸಿದರು. ಎರಡು ವರ್ಷಗಳ ನಂತರ ಈ ಕಿಣ್ವಗಳಿಗೆ ಸಂಬಂಧಿಸಿದ ವಂಶವಾಹಿಗಳನ್ನು ಜೊಗೆಸೊಪ್ಪಿನ ಗಿಡಗಳಿಗೆ ವರ್ಗಾಯಿಸಿದರು. ಮುಂದಿನ ಪೀಳಿಗೆಯ ಸಸ್ಯಗಳಲ್ಲಿ ರಾತ್ರಿಯ ವೇಳೆ ಬೇರು ಕಾಂಡ ಮತ್ತು ಎಲೆಗಳಿಂದ ಗಾಢ ಹಸುರು ಬಣ್ಣದ ಬೆಳಕು ಗಾಢ ಹಸುರು ಬಣ್ಣದ ಬೆಳಕು ಹೊರಬರುತ್ತಿರುವುದನ್ನು ಗಮನಿಸಿದರು. ಇದಕ್ಕೆ ಮುಂಚೆಯೂ ಇಂಥ ಹಲವಾರು ಪ್ರಯತ್ನಗಳು ಅಲ್ಲಲ್ಲಿ ನಡೆದಿದ್ದರೂ ಅವು ಸಂಪೂರ್ಣ ಯಶಸ್ಸು ಕಂಡಿರಲಿಲ್ಲ. ಬ್ಯಾಕ್ಟಿರಿಯಾ ಮತ್ತು ಮಿಂಚುಹುಳುಗಳಿಂದ ಪಡೆದ ವಂಶವಾಹಿಗಳನ್ನು ನ್ಯಾನೋ ಕಣಗಳ ಸಹಾಯದಿಂದ ಕೆಲ ಸಸ್ಯಗಳಲ್ಲಿ ಅಳವಡಿಸಿ, ಅವು ಬೆಳಕನ್ನು ಹೊರಸೂಸುವಂತೆ ಮಾಡುವ ಪ್ರಯತ್ನಗಳು ಯಶಸ್ಸು ಕಂಡವಾದರೂ, ಬೆಳಕು ಕೇವಲ ಕೆಲವು ಸಮಯಕ್ಕೆ ಮಾತ್ರ ಸೀಮಿತವಾಗಿದ್ದುದು ಕಂಡು ಬಂತು. ದೀರ್ಘಕಾಲ ಈ ಬೆಳಕನ್ನು ಹಿಡಿದಿಡಲು ಕೆಲ ವಿಶೇಷವಾದ ರಾಸಾಯನಿಕಗಳನ್ನು ಆ ಸಸ್ಯಗಳ ಮೇಲೆ ಬಳಸಬೇಕಾಗಿ ಬಂದಿತ್ತು. ವಾಣಿಜ್ಯಾತ್ಮಕ ದೃಷ್ಟಿಯಿಂದ ಇದು ಸ್ವೀಕಾರಾರ್ಹವಾಗಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಾರ್ಕಿಸ್ಯಾನ್ ಮತ್ತು ಸಂಗಡಿಗರು ಪ್ರಯತ್ನಶೀಲರಾದರು. ಆ ಶಿಲೀಂದ್ರದಲ್ಲಿ ಜೀವದೀಪ್ತಿಗೆ ಕಾರಣವಾಗುವ ಜೀವರಾಸಾಯನಿಕ ಪಥಮಾರ್ಗವನ್ನು ಕಂಡುಹಿಡಿದ ನಂತರ, ಅದೇ ಪಥಮಾರ್ಗ ಪೆಟೂನಿಯಾ ಸಸ್ಯಗಳಲ್ಲಿಯೂ ತನ್ನ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದಕ್ಕಾಗಿ, ಅವರು ಸಸ್ಯಗಳಲ್ಲಿ ಸಹಜವಾಗಿ ಕಂಡುಬರುವ ಕೃಫೀಕ್ ಆಮ್ಲ (caffeic acid) ಎಂಬ ರಾಸಾಯನಿಕವನ್ನು ಬಳಸಿಕೊಂಡರು. ಶಿಲೀಂದ್ರಗಳಲ್ಲಿ ಈ ರಾಸಾಯನಿಕವು ನಾಲ್ಕು ಕಿಣ್ವಗಳನ್ನು ಬಳಸಿಕೊಂಡು ಲ್ಯೂಸಿಫೆರಿನ್ ಆಗಿ ಪರಿವರ್ತನೆಗೊಳ್ಳುತ್ತದೆ ಎಂಬುದನ್ನು ಪತ್ತೆ ಹಚ್ಚಿದರು. ಇದೇ ನಾಲ್ಕು ಕಿಣ್ವಗಳಿಗೆ ಸಂಬಂಧಿಸಿದ ವಂಶವಾಹಿಗಳನ್ನು ಪೆಟೂನಿಯಾ ಸಸ್ಯಗಳಲ್ಲಿ ಅಳವಡಿಸಿ ಅಲ್ಲಿಯೂ ಜೀವದೀಪ್ತಿ ಹೊರಸೂಸುವಂತೆ ಮಾಡುವ ಪ್ರಯತ್ನದಲ್ಲಿ ಯಶಸ್ಸು ಪಡೆದರು. ಅದರ ಫಲವೇ ಹಸುರು ಬಣ್ಣದ ಬೆಳಕನ್ನು ಹೊರಸೂಸುವ ಪೆಟೂನಿಯಾ ಕುಲಾಂತರಿ ಸಸ್ಯಗಳು. ವಿಶೇಷವೆಂದರೆ, ಈ ಕುಲಾಂತರಿ ಪೆಟೂನಿಯಾ ಸಸ್ಯಗಳು ತಮ್ಮ ಜೀವಿತಾವಧಿಯ ಉದ್ದಕ್ಕೂ ಜೀವದೀಪ್ತಿಯನ್ನು ಹೊರಸೂಸುವ ಸಾಮರ್ಥ್ಯವನ್ನು ಪಡೆದಿರುತ್ತವೆ. 

ಕುಲಾಂತರಿ ತಂತ್ರಜ್ಞಾನವನ್ನು ಬಳಸಿಕೊಂಡು ಸಸ್ಯಗಳಲ್ಲಿ ಬದಲಾವಣೆ ತರುವ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ವಿಶ್ವದಾದ್ಯಂತ ಇಂದು 12ಕ್ಕೂ ಕುಲಾಂತರಿ ಅಹಾರ ಸಸ್ಯಗಳು ಬಳಕೆಯಲ್ಲಿವೆ. ಅಲಂಕಾರಿಕ ಸಸ್ಯಗಳ ಕೆಲವು ಕುಲಾಂತರಿ ಪ್ರಭೇದಗಳೂ ಬಳಕೆಗೆ ಬಂದಿವೆ. ಅಮೆರಿಕಾದಲ್ಲಿ ಯಾವುದೇ ಕುಲಾಂತರಿ ಸಸ್ಯವನ್ನು ಬಳಕೆಗೆ ಬಿಡುವ ಮುನ್ನ ಸರ್ಕಾರದ ಅನುಮತಿ ಅತ್ಯಗತ್ಯ. ಪೆಟೂನಿಯಾ ಕುಲಾಂತರಿ ಸಸ್ಯಗಳು ಯಾವುದೇ ಸ್ಥಳೀಯ ಸಸ್ಯ  ಪ್ರಭೇದಗಳಿಗೆ ಸ್ಪರ್ಧೆ ಒಡ್ಡುವುದಾಗಲೀ,ರೋಗ ಉಂಟುಮಾಡುವುದಾಗಲೀ ಕಂಡುಬಂದಿಲ್ಲವಾದ್ದರಿಂದ, ಇವುಗಳ ಸಾರ್ವಜನಿಕ ಬಳಕೆಗೆ ಅನುಮತಿ ದೊರೆತಿದೆ. ಈಗ ಲೈಟ್ ಬಯೋ ಸಂಸ್ಥೆಯು ರಾತ್ರಿ ಬೆಳಕು ಸೂಸುವ ಕುಲಾಂತರಿ ಪೆಟೂನಿಯಾ ಸಸ್ಯಗಳನ್ನು ಬೃಹತ್‌ ಮಟ್ಟದಲ್ಲಿ ಉತ್ಪಾದಿಸಲು ಪ್ರಾರಂಭಿಸಿದೆ. ಸಸ್ಯಗಳನ್ನು ಕೊಂಡು ತಮ್ಮ ತೋಟಗಳಲ್ಲಿ ಬೆಳೆಯ ಬಯಸುವರಿಗಾಗಿ ಬುಕಿಂಗ್ ಪ್ರಾರಂಭಿಸಿದೆ. ಸುಮಾರು 10,000ಕ್ಕೂ ಹೆಚ್ಚು ಮಂದಿ ಈಗಾಗಲೇ ಬುಕಿಂಗ್ ಮಾಡಿದ್ದಾರೆ ಎಂಬ ಮಾಹಿತಿಯನ್ನು ಸಂಸ್ಥೆ ಹೊರಹಾಕಿದೆ. ಒಂದೆರಡು ವರ್ಷಗಳಲ್ಲಿ ಇನ್ನಿತರ ದೇಶಗಳಲ್ಲಿಯೂ ಈ ಕುಲಾಂತರಿ ಸಸ್ಯಗಳನ್ನು ಬೆಳೆಯುವ ಪದ್ಧತಿ ಪ್ರಾರಂಭವಾಗಬಹುದು. ಆಗ, ಅಂಗಳದ ತೋಟಗಳಲ್ಲಿ ರಾತ್ರಿಯ ಹೊತ್ತು ತಮ್ಮದೇ ಬೆಳಕಿನಿಂದ ಕಂಗೊಳಿಸುವ ಸಸ್ಯಗಳನ್ನು ನೋಡಿ ನಲಿಯುವುದು ಎಲ್ಲರಿಗೂ ಸಾಧ್ಯವಾಗಬಹುದು !

Sunday, February 4, 2024

ಸಣ್ಣವರಾಗಿ ಬೆಳೆಯಿರಿ !

 ಸಣ್ಣವರಾಗಿ ಬೆಳೆಯಿರಿ !  


  ಲೇಖಕರು : ಡಾ.ಟಿ.ಎ.ಬಾಲಕೃಷ್ಣ ಅಡಿಗ

ವಿಜ್ಞಾನ ಸಂವಹನಕಾರರು ಹಾಗೂ ಶಿಕ್ಷಣ ತಜ್ಞರು


ಮಾನವರಲ್ಲಿ ವಯಸ್ಸಾಗುವ ಸಹಜ ಪ್ರಕ್ರಿಯೆಯನ್ನು ತಿರುವು ಮುರುವು ಮಾಡುವ ಸಾಧ್ಯತೆಯನ್ನು ಇತ್ತೀಚಿನ ಸಂಶೋಧನೆಯೊಂದು ತೋರಿಸಿಕೊಟ್ಟಿದೆ. ಇದಕ್ಕೆ ಸಂಬಂಧಿಸಿದ ಕುತೂಹಲಕಾರಿ ಅಂಶಗಳನ್ನು ಈ ಲೇಖನದಲ್ಲಿ ಪ್ರಸ್ತುತ ಪಡಿಸಿದ್ದಾರೆ, ಡಾ. ಬಾಲಕೃಷ್ಣ ಅಡಿಗ ಅವರು

ಬೆಳೆಯುತ್ತಾ ನಾವು ದೊಡ್ಡವರಾಗುತ್ತೇವೆ, ಇದು ಸೃಷ್ಟಿಯ ನಿಯಮ. ಆದರೆ ಇದೇನಿದು ? ಸಣ್ಣವರಾಗಿ ಬೆಳೆಯಿರಿ ಎಂದರೆ ? ಇದು ನಿಜಕ್ಕೂ ಸಾಧ್ಯವೇ ? ಹಲವಾರು ಪ್ರಶ್ನೆಗಳು ಮನದಲ್ಲಿ ಮೂಡುತ್ತಿವೆಯಲ್ಲವೇ ? ನಿಮ್ಮೆಲ್ಲ ಸಂಶಯಗಳನ್ನು ಕೆಲ ಕಾಲ ಬದಿಗಿಟ್ಟು, ಮುಕ್ತ ಮನಸ್ಸಿನಿಂದ ಯೋಚಿಸುವಿರಾದರೆ, ವಯಸ್ಸಾಗುವ ಪ್ರಕ್ರಿಯೆಗೆ ಸಂಬಂಧಿಸಿದ ಇತ್ತೀಚಿನ ಸಂಶೋಧನೆಯೊಂದರ ಬಗ್ಗೆ ನಿಮಗೆ ಮಾಹಿತಿ ನೀಡಲು ಇಚ್ಛಿಸುತ್ತೇನೆ.

ನಮ್ಮ ದೇಹದ ಪ್ರತಿಯೊಂದು ಜೀವಕೋಶದಲ್ಲಿ ನೀವು ಎಷ್ಟು ವರ್ಷ ಬದುಕಿರುತ್ತೀರಿ, ಯಾವಾಗ ಸಾವು ಸಂಭವಿಸಬಹುದು ಎಂಬುದರ ಬಗ್ಗೆ ಸಾಂಕೇತಿಕ ಮಾಹಿತಿ ಅಡಕವಾಗಿರುತ್ತದೆ. ನಿಮ್ಮ ಆಯಸ್ಸನ್ನು ಅನಿರ್ದಿಷ್ಟ ಕಾಲ ವಿಸ್ತರಿಸುವ ಸಾಮರ್ಥ್ಯವೂ ಇದರಲ್ಲಿದೆ ಎಂದರೆ ಅಚ್ಚರಿಯಗುತ್ತದೆ, ಅಲ್ಲವೇ ?

ಸುಮಾರು ಹತ್ತು ವರ್ಷಗಳ ಹಿಂದೆ ಕೆಲ ವಿಜ್ಞಾನಿಗಳ ತಂಡವೊಂದು ಪ್ರಯೋಗಾಲಯದಲ್ಲಿ ಮಾನವ ಜೀವಕೋಶಗಳ ಒಂದು ಗುಂಪು ಹಲವು ಪೀಳಿಗೆಗಳ ಕಾಲ ಮುಪ್ಪಿನ ಸ್ಥಿತಿ ತಲುಪದೇ, ನಿರಂತರವಾಗಿ ವಿಭಜನೆಯಾಗುತ್ತಿರುವುದನ್ನು ಗಮನಿಸಿದರು. ಈ ಪ್ರಕ್ರಿಯೆಗೆ ಪ್ರೇರೇಪಣೆ ನೀಡಿದಲ್ಲಿ ಈ ಜೀವಕೋಶಗಳು ಸಾವಿಲ್ಲದ, ಅಮರತ್ವವನ್ನು ಗಳಿಸಬಲ್ಲುವು ಎಂಬುದನ್ನು ಕಂಡುಕೊಂಡರು. ಇದನ್ನು ಸಾಧಿಸುವ ಮಾರ್ಗದ ಬಗ್ಗೆ ಖಚಿತವಾಗಿ ತಿಳಿದಿರಲಿಲ್ಲ. ಆದರೆ, ಇತ್ತೀಚೆಗೆ ನಡೆದ ಸಂಶೋಧನೆಯೊಂದರಲ್ಲಿ ವಿಜ್ಞಾನಿಗಳಿಗೆ ಈ ರಹಸ್ಯವನ್ನು ಕಂಡುಹಿಡಿಯಲು ಸಾಧ್ಯವಾಗಿದೆ. ಮಾನವರಲ್ಲಿ ವಯಸ್ಸಾಗುವ ಪ್ರಕ್ರಿಯೆಗೆ ಕಾರಣವಾಗುವ ಅಂಶವನ್ನು ಈಗ ಪತ್ತೆ ಮಾಡಲಾಗಿದೆ. ಅಷ್ಟೇ ಅಲ್ಲ, ಇದನ್ನು ನಿಯಂತ್ರಿಸುವ ಮಾರ್ಗವನ್ನೂ ಕಂಡುಕೊಳ್ಳಲಾಗಿದೆ. ಹೀಗಾಗಿ, ವಯಸ್ಸಾಗುವ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ಮುಂದೂಡಬಹುದು ಮಾತ್ರವಲ್ಲ, ತಿರುವು ಮುರುವು ಮಾಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಕೆಲ ಹೊತ್ತು ಕಲ್ಪನಾ ಲೋಕದಲ್ಲಿ ವಿಹರಿಸಿ ಬರೋಣವೇ?

  ಆರೋಗ್ಯ, ಹುಮ್ಮಸ್ಸನ್ನು ಉಳಿಸಿಕೊಂಡು ಶತಾಯುಷಿಯಾಗಿ ಬದುಕುವ ಸಾದ್ಯತೆ ಇದೆಯೇ ? ನಿಮ್ಮ ಮರಿಮೊಮ್ಮಕ್ಕಳು ಬೆಳೆದು ದೊಡ್ಡವರಾಗುವುದನ್ನು ನೋಡುವ, ಅವರೊಡನೆ ಕಾಲ ಕಳೆಯುವ ಸೌಭಾಗ್ಯ ಒದಗಬಹುದೇ ?.

       ನಿಮಗೆ ಇಷ್ಟವಾದ ಆಟಗಳನ್ನು ಆಡಿಕೊಂಡು, ವಿವಿಧ ಚಟುವಟಿಕಗಳಲ್ಲಿ ಪಾಲ್ಗೊಳ್ಳುತ್ತಾ, ಸಮಾನ ವಯಸ್ಕ ಸ್ನೇಹಿತರ ಜೊತೆ ಒಡನಾಡುವ ಸಂದರ್ಭ ಸಿಕ್ಕಬಹುದೇ?

ಇವೆಲ್ಲಾ ಹಗಲುಗನಸು ಎನಿಸಬಹುದಾದರೂ, ಇಂಥ ಹಲವಾರು ಸಾಧ್ಯತೆಗಳನ್ನು ನಿಜ ಮಾಡುವ ನಿಟ್ಟಿನಲ್ಲಿ ಇತ್ತೀಚಿನ ಕೆಲ ಸಂಶೋಧನೆಗಳು ಸಾಗಿವೆ. ಈ ಒಂದು ಸಾಧ್ಯತೆಯ ಬಗ್ಗೆ ಹೆಚ್ಚಿನ ವಿವರಕ್ಕೆ ಹೋಗುವ ಮುನ್ನ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯ.

ವಯಸ್ಸಾಗುವ ಪ್ರಕ್ರಿಯೆಯನ್ನು ಬದಲಿಸುವುದು ಹೇಗೆ ?

ನಮ್ಮಲ್ಲಿ ವಯಸ್ಸಾಗುವ ಪ್ರಕ್ರಿಯೆಗೂ ನಮ್ಮ ಜೀವಕೋಶಗಳಲ್ಲಿರುವ ವರ್ಣತಂತುಗಳಿಗೂ ನೇರವಾದ ಸಂಬAದ ಇದೆ. ನಾವು ಬಳಸುವ ಶೂ ಲೇಸ್‌ನ ತುದಿಯಲ್ಲಿರುವ ಟೋಪಿಯ ಹಾಗೆ, ಪ್ರತಿ ವರ್ಣತಂತುವಿನ ಡಿ.ಎನ್.ಎ. ಎಳೆಯ ತುದಿಯಲ್ಲಿಯೂ ಒಂದು ಟೋಪಿಯಂಥ ರಚನೆ ಇರುತ್ತದೆ. ಇದಕ್ಕೆ, ಟೀಲೋಮಿಯರ್(telomere) ಎಂದು ಕರೆಯಲಾಗುತ್ತದೆ. ಇದು ಡಿ.ಎನ್.ಎ. ಎಳೆಯು ಚಿಂದಿಯಾಗುವುದನ್ನು ತಡೆಯುತ್ತದೆ. ಆದರೆ, ಈ ಟೀಲೋಮಿಯರ್‌ನ ಬಹುಮುಖ್ಯ ಪಾತ್ರವೆಂದರೆ, ಅವು ವ್ಯಕ್ತಿಯ ನೈಜ ಜೈವಿಕ ಆಯಸ್ಸಿನ ಮಾಪಕಗಳಾಗಿವೆ. ಕಾಲಾನುಕ್ರಮದಲ್ಲಿ ಈ ಟೀಲೊಮಿಯರ್‌ಗಳ ಉದ್ದ ಕಡಿಮೆಯಾಗುತ್ತಾ ಬರುತ್ತದೆ. ಹಾಗಾದಾಗ, ಅವು ಡಿ.ಎನ್.ಎ. ಎಳೆಗಳಿಗೆ ರಕ್ಷಣೆ ಒದಗಿಸುವುದರಲ್ಲಿ ವಿಫಲವಾಗುತ್ತವೆ. ಇದರ ಪರಿಣಾಮವೇ ಜೀವಕೋಶಗಳಲ್ಲಿ ವಯಸ್ಸಾಗುವ ಪ್ರಕ್ರಿಯೆಗಳ ಪ್ರಾರಂಭ.

ಚಿತ್ರ ೧ : ಟೀಲೋಮಿಯರ್‌ನ ರಚನೆ

ಪ್ರತಿಯೊಂದು ಟೀಲೋಮಿಯರ್‌ನಲ್ಲಿ ಹಲವು ನೂರು ನ್ಯೂಕ್ಲಿಯೊಟೈಡುಗಳಿರುತ್ತವೆ(̧A, T, G, C ).ಇವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಟೀಲೋಮಿಯರ್‌ನ ಉದ್ದ ಕಡಿಮೆಯಾಗುತ್ತಾ ಹೋಗುತ್ತದೆ. ಟೀಲೋಮಿಯರ್‌ಗಳು ಗಿಡ್ಡವಾಗುವ ಪ್ರಕ್ರಿಯೆಯಿಂದಾಗಿ ದೇಹದಲ್ಲಿ ಖಾಯಿಲೆಗಳ ಆತಂಕ ಹೆಚ್ಚುತ್ತದೆ. ಒಂದು ಸಂಶೋಧನೆಯ ಪ್ರಕಾರ, ೬೦ರಿಂದ ೭೦ರ ವಯಸ್ಸಿನ ವ್ಯಕ್ತಿಗಳಲ್ಲಿ ಗಿಡ್ಡವಾದ ಟೀಲೋಮಿಯರ್ ಗಳಿಂದಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳುಂಟಾಗಿ, ಅದರಿಂದ ಸಾವಿಗೀಡಾಗುವ ಸಾಧ್ಯತೆ, ೩೦೦% ರಷ್ಟು ಹೆಚ್ಚಿರುತ್ತದೆ. ಹಾಗೆಯೇ, ಸೋಂಕು ರೋಗಗಳಿಗೆ ಈಡಾಗಿ ಸಾವು ಸಂಭವಿಸುವ ಸಾಧ್ಯತೆ ೮೦೦% ರಷ್ಟು ಹೆಚ್ಚಿರುತ್ತದೆ.

ಚಿತ್ರ ೨ : ಟೀಲೋಮಿಯರ್ ಗಿಡ್ಡವಾಗುವುದರಿಂದ ಹೃದಯ-ಸಂಬಂಧಿ ಖಾಯಿಲೆಗಳು ಹೆಚ್ಚಬಹುದು.                             ಈ ಟೀಲೋಮಿಯರ್‌ಗಳಿಗೂ ಕೋಶವಿಭಜನೆ ಪ್ರಕ್ರಿಯೆಗೂ ನೇರ ಸಂಬಂಧ ಇರುವುದರಿಂದ, ಇವು ನಾಶವಾಗುತ್ತಿದ್ದಂತೆ, ಸಂಬಂಧಿಸಿದ ಜೀವಕೋಶಗಳ ವಿಭಜನೆ ನಿಂತುಹೋಗುತ್ತದೆ. ಹೊಸ ಜೀವಕೋಶಗಳ ಉತ್ಪತ್ತಿಯಾಗುವುದಿಲ್ಲ. ದೇಹದಲ್ಲಿ ನಾಶಗೊಂಡ ಜೀವಕೋಶಗಳಿಗೆ ಬದಲಿ ಜೀವಕೋಶಗಳು ಒದಗದೇ ಹೋದಾಗ ಅದು ಮುಪ್ಪಿಗೆ, ಸಾವಿಗೆ ಮುಖ್ಯ ಕಾರಣವಾಗುತ್ತದೆ.

 ಚಿತ್ರ ೩ : ಟೀಲೋಮಿಯರ್‌ಗೂ ಕೋಶವಿಭಜನೆಗೂ ಇರುವ ಸಂಬಂಧದ ನಿರೂಪಣೆ

ಟೀಲೋಮಿಯರ್ ಗಳಿಗೆ ಸಂಬಂಧಿಸಿದಂತೆ ಮಾಡಲಾಗಿರುವ ಮಹತ್ತರ  ಸಂಶೋಧನೆಗಳಲ್ಲಿ ಪ್ರಮುಖವಾದುದು ಟೀಲೋಮರೇಸ್ (Telomerase) ಎಂಬ ಒಂದು ಕಿಣ್ವ.  ಈ ಕಿಣ್ವವು ಟೀಲೋಮಿಯರ್‌ಗೆ ಡಿ.ಎನ್.ಎ. ನ್ಯೂಕ್ಲಿಯೋಟೈಡ್ ಗಳನ್ನು ಒದಗಿಸುವ ಮೂಲಕ ಅದರ ಸ್ಥಿರತೆಗೆ ಕಾರಣವಾಗುತ್ತದೆ. ಈ ಕಿಣ್ವವು ತನ್ನದೇ ಆದ ಆರ್.ಎನ್.ಎ. ಅಣುವನ್ನು ಹೊಂದಿದ್ದು, ಅದರ ಮೂಲಕ ಪ್ರತಿರೂಪವಾದ ಡಿ.ಎನ್.ಎ. ಎಳೆಯನ್ನು ಸಂಶ್ಲೇಷಿ಼ಸಿಕೊಳ್ಳುತ್ತದೆ. ಹಾಗಾಗಿ, ಇದು ರಿವರ್ಸ್ ಟ್ರಾನ್ಸ್ಕ್ರಿಪ್ಟೇಸ್ ಗುಂಪಿಗೆ ಸೇರುವ ಕಿಣ್ವವಾಗಿದೆ. ವಯಸ್ಸಾಗುವ ಪ್ರಕ್ರಿಯೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಈ ಕಿಣ್ವದ ಪಾತ್ರ ಮಹತ್ತರವಾದುದು.

 ಚಿತ್ರ ೪ : ಟೀಲೋಮೆರೇಸ್ ಕಿಣ್ವ

ಟೀಲೋಮರೇಸ್ ಕಿಣ್ವವನ್ನು ನಿಯಂತ್ರಿಸುವ ವಂಶವಾಹಿಯೊಂದನ್ನು ಪತ್ತೆ ಮಾಡಲಾಗಿದೆ. ಈ ವಂಶವಾಹಿಯು ಒಂದು ಸ್ವಿಚ್‌ನ ರೀತಿ ಕಾರ್ಯ ನಿರ್ವಹಿಸುತ್ತದೆ. ಇದು ಟೀಲೋಮಿಯರ್ ಗಳು ಗಿಡ್ಡವಾಗುವುದನ್ನು ನಿಲ್ಲಿಸಬಹುದು ಇಲ್ಲವೇ ಅವು ಮತ್ತೆ ಬೆಳೆಯಲು ನೆರವಾಗಬಹುದು. ನೀವು ಹುಟ್ಟಿದಾಗ, ಈ ಸ್ವಿಚ್ ಆರಿಸಿದ ಸ್ಥಿತಿಯಲ್ಲಿರುತ್ತದೆ.

ನಾನು ಮೇಲೆ ಹೇಳಿದ ವಿಶಿಷ್ಟ ಸಂಶೋಧನೆಯಲ್ಲಿ, ಈ ವಂಶವಾಹಿ ಸ್ವಿಚ್‌ ಅನ್ನು ನಿಯಂತ್ರಿಸುವ ವಿಧಾನವನ್ನು ಕಂಡುಕೊಳ್ಳಲಾಗಿದೆ. ಫ್ಯಾಬೇಸಿ ಕುಟುಂಬಕ್ಕೆ ಸೇರಿದ ಆಸ್ಟ್ರಗ್ಯಾಲಸ್  ಎಂಬ ಔಷದೀಯ ಸಸ್ಯದ ಪ್ರಭೇದವೊಂದರಿಂದ ಪಡೆಯಲಾದ ರಾಸಾಯನಿಕವೊಂದು ಟೀಲೋಮರೇಸ್ ವಂಶವಾಹಿಯನ್ನು ಪ್ರೇರೇಪಿಸಬಹುದು ಎಂಬುದೇ ಈ ಸಂಶೋಧನೆಯ ಸಾರಾಂಶ. ವಂಶವಾಹಿಗಳು ಚರ್ಮದ ಬಣ್ಣ, ಕಣ್ಣಿನ ಬಣ್ಣ, ಎತ್ತರ, ಮುಂತಾದ ಲಕ್ಷಣಗಳ ಅಭಿವ್ಯಕ್ತಿಗೆ ಮಾತ್ರ ಕಾರಣವಾಗುತ್ತವೆ ಎಂಬುದು ಒಂದು ಸಾಮಾನ್ಯ ನಂಬಿಕೆ. ಆದರೆ, ಅವುಗಳ ಕಾರ್ಯವ್ಯಾಪ್ತಿ ಇದನ್ನು ಮೀರಿದೆ. ನಮ್ಮ ವಂಶವಾಹಿಗಳು ನಮ್ಮ ಆರೋಗ್ಯ ಮಾತ್ರವಲ್ಲ, ಅನಾರೋಗ್ಯದ ಮೇಲೂ ನಿಯಂತ್ರಣ ಹೊಂದಿವೆ. ವಂಶವಾಹಿಗಳ ಅಭಿವ್ಯಕ್ತಿಯು ನಮ್ಮ ಇಡೀ ಜೀವನವನ್ನು ನಿರ್ಧರಿಸುತ್ತವೆ. ಒಂದು ವೇಳೆ,  ಈ ಪ್ರಕ್ರಿಯೆಯನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾದರೆ, ಅನಾರೋಗ್ಯಕ್ಕೆ ಕಾರಣವಾಗುವ ವಂಶವಾಹಿಗಳನ್ನು ‘ಆಫ್’ ಮಾಡಿ, ಆರೋಗ್ಯವಂತ ಜೀವನಕ್ಕೆ ಕಾರಣವಾಗುವ ವಂಶವಾಹಿಗಳನ್ನು ಮಾತ್ರ ‘ಆನ್’ ಮಾಡಿಕೊಳ್ಳುವ ಸಾಮರ್ಥ್ಯ ನಿಮಗೆ ಸಿದ್ಧಿಸಬಹುದು ! ಅಂಥ ಒಂದು ಸಾಧ್ಯತೆಯನ್ನು ಈ ಸಂಶೋಧನೆ ತೆರೆದಿಟ್ಟಿದೆ. ನಿಮ್ಮ ವರ್ಣತಂತುಗಳಲ್ಲಿರುವ ಟೀಲೋಮಿಯರ್ ಗಳು ಗಿಡ್ಡವಾಗದಂತೆ ತಡೆದು, ನೀವು ದೀರ್ಘಕಾಲ, ಆರೋಗ್ಯವಂತರಾಗಿ ಬದುಕುವ ಸಾಧ್ಯತೆಯನ್ನು ತೋರಿಸಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು, ಬಹುಷ:, ಮುಂದೆ ಮಾನವರು ‘ಸಣ್ಣವರಾಗಿ ಬೆಳೆಯುವ” ದಿನಗಳನ್ನು ನೋಡಬಹುದೇನೋ?

                       

                            -----xxxxxxxxx-----

 

 

 

Friday, November 4, 2022

"ಹೆತ್ತworryಗೆ ಹೆಗ್ಗಣ ಮುದ್ದು"

"ಹೆತ್ತworryಗೆ ಹೆಗ್ಗಣ ಮುದ್ದು"

ಡಾ. ಟಿ.ಎ. ಬಾಲಕೃಷ್ಣ ಅಡಿಗ 





ಹೆತ್ತವರ worry ಮಾನವರಿಗಷ್ಟೇ ಅಲ್ಲ ಸರ್ವ ಜೀವಜಾತರಿಗೂ ಇದ್ದದ್ದೇ. ಪ್ರಾಣಿಗಳ ಬದುಕಿನ ಸಾರ್ಥಕತೆ ಇರುವುದೇ ಸಂತಾನ ವೃದ್ಧಿಯಲ್ಲಿ. ಅವುಗಳ ಶಕ್ತಿಯ ಬಳಕೆ ಸಂತಾನದ ರಕ್ಷಣೆಗೇ ಮೀಸಲು. ಪ್ರಾಣಿಗಳ ವರಿಯನ್ನು  ಸೋದಾಹರಣವಾಗಿ ವಿವರಿಸಿದ್ದಾರೆ. ಪ್ರಧಾನ ಸಂಪಾದಕರಾದ ಡಾ.ಟಿ.ಎ ಬಾಲಕೃಷ್ಣ ಅಡಿಗರು

Wednesday, August 4, 2021

ಸುವರ್ಣ ಅನುಪಾತಕ್ಕೆ ಮಾನವ ದೇಹವೂ ಹೊರತಲ್ಲ !

ಸುವರ್ಣ ಅನುಪಾತಕ್ಕೆ ಮಾನವ ದೇಹವೂ ಹೊರತಲ್ಲ !


ಲೇಖಕರು:
 ಡಾ. ಟಿ.ಎ.ಬಾಲಕೃಷ್ಣ ಅಡಿಗ 

ನಿವೃತ್ತ ಪ್ರಾಂಶುಪಾಲರು ಮತ್ತು ವಿಜ್ಞಾನ ಸಂವಹನಕಾರರು



ನಿಸರ್ಗದ ಎಲ್ಲ ಕಡೆ ಕಂಡು ಬರುವ ಫಿಬೋನಾಚಿ ಸಂಖ್ಯಾ ಅನುಕ್ರಮಣಿಕೆ ಹಾಗು ಸುವರ್ಣ ಅನುಪಾತದ ಬಗ್ಗೆ ಕಳೆದ ಮೂರು ಸಂಚಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ನೀವು ಓದಿರಬಹುದು. ಸಸ್ಯಗಳ ಹಾಗು ಪ್ರಾಣಿಗಳ ದೇಹದ ವಿವಿಧ ಭಾಗಗಳಲ್ಲಿ ಸುವರ್ಣ ಅನುಪಾತದ ಪ್ರಭಾವ ಹೇಗೆ ಹಾಸು ಹೊಕ್ಕಾಗಿದೆ ಎಂಬುದಕ್ಕೆ ಅನೇಕ ಉದಾಹರಣೆಗಳನ್ನೂ ನೀವು ನೊಡಿದಿರಿ. ಮಾನವ ದೇಹವೂ ಈ ಕುತೂಹಲಕಾರಿ ಅನುಪಾತಕ್ಕೆ ಹೊರತಲ್ಲ. ಇದೇ ಸುವರ್ಣ ಅನುಪಾತದ ಪ್ರಭಾವ ಮಾನವ ದೇಹ ರಚನೆಯ ವಿವಿಧ ಪ್ರಕಾರಗಳಲ್ಲಿ ಹೇಗೆ ತನ್ನ ಅಚ್ಚೊತ್ತಿದೆ ಎಂಬುದನ್ನು ಈ ಬಾರಿಯ ಲೇಖನದಲ್ಲಿ ತಿಳಿದುಕೊಳ್ಳೋಣ.

Sunday, July 4, 2021

ವಿಜ್ಞಾನಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೊಂದು ನುಡಿನಮನ

 ವಿಜ್ಞಾನಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೊಂದು ನುಡಿನಮನ

ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ

‘ಸವಿಜ್ಞಾನ’ದ ಜುಲೈ ತಿಂಗಳ ಸಂಚಿಕೆಯ ಸಂಪಾದಕೀಯವನ್ನು ಅಂತಿಮಗೊಳಿಸುತ್ತ ಕುಳಿತಿದ್ದಾಗ ಬರಸಿಡಿಲಿನಂತೆ ಬಂದೆರಗಿತ್ತು. ಕನ್ನಡ ವಿಜ್ಞಾನ ಲೇಖಕ, ಜನಪ್ರಿಯ ಅಂಕಣಕಾರ, ಸುಧೀಂದ್ರ ಹಾಲ್ದೊಡ್ಡೇರಿ ಅವರ ನಿಧನದ ವಾರ್ತೆ. ಎಂಬತ್ತರ ದಶಕದಲ್ಲಿ ವಿಜಯ ಕಾಲೇಜಿನಲ್ಲಿ ಪದವಿಪೂರ್ವ ತರಗತಿಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ಸುಧೀಂದ್ರ, ನಂತರ ಯು.ವಿ.ಸಿ.ಇ. ಯಲ್ಲಿ ಇಂಜಿನೀರಿಂಗ್ ವಿದ್ಯಾಭ್ಯಾಸ ಮುಗಿಸಿ, ಮದರಾಸಿನ ಐ.ಐ.ಟಿ.ಯಲ್ಲಿ ಎಂ.ಟೆಕ್. ಪದವಿ ಗಳಸಿದರು. ಬೆಂಗಳೂರಿನ ತಾತಾ ವಿಜ್ಞಾನ ಮಂದಿರದಲ್ಲಿ ಏರೋ ಸ್ಪೇಸ್ ಇಂಜಿನೀರಿಂಗ್ ವಿಭಾಗದಲ್ಲಿ ವೈಜ್ಞಾನಿಕ ಸಲಹೆಗಾರರರಾಗಿ ವೃತ್ತಿ ಜೀವನ ಆರಂಭಿಸಿದ ಸುಧೀಂದ್ರ, ನಂತರ ರಕ್ಷಣಾ ಇಳಾಖೇಯ ಡಿ.ಆರ್.ಡಿ.ಒ. ನಲ್ಲಿ ವಿಜ್ಞಾನಿಯಾಗಿ ಆಯ್ಕೆಯಾದರು. ಹೆಚ್.ಎ.ಎಲ್.ನಲ್ಲಿ ವಿಮಾನಗಳ ತಯಾರಿಕೆಗೆ ಸಂಬಂಧಿಸಿದ ಗುಣಮಟ್ಟ ನಿಯಂತ್ರಣ ವಿಭಾಗದಲ್ಲಿಯೂ ಕೆಲಸ ಮಾಡಿದರು. ಈ ಸಂದರ್ಭದಲ್ಲಿ, ವಾಯುಪಡೆಯ ಚೀತಾ ಹೆಲಿಕಾಪ್ಟರ್‌ಗಳು ಹಿಮಾವೃತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವಾಗ ಉಂಟಾಗುವ ತಾಂತ್ರಿಕ ಸಮಸ್ಯೆಗಳ ನಿವಾರಣೆಯಲ್ಲಿ ಅವರ ಕೊಡುಗೆ ಸ್ಮರಣೀಯ. ಸ್ವಯಂ ನಿವೃತ್ತಿಯ ನಂತರ ಜೈನ್ ಡೀಮ್ಡ್ ಯೂನಿವರ್ಸಿಟಿ ಹಾಗೂ ಅಲಿಯೆನ್ಸ್ ಯೂನಿವರ್ಸಿಟಿಯಲ್ಲಿ ಏರೋಸ್ಪೇಸ್ ಇಂಜಿನೀರಿಂಗ್ ವಿಷಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.

ವಿಜ್ಞಾನಿಯಾಗಿ ಸೇವೆಯಲ್ಲಿದ್ದಾಗಲೇ ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಬರಹಗಳ ಮೂಲಕ ಪ್ರವೇಶಿಸಿದ ಸುಧೀಂಧ್ರ, ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡದಲ್ಲಿ ಬರೆದು ವಿಜ್ಞಾನಾಸಕ್ತರ ಮೆಚ್ಚುಗೆ ಗಳಿಸಿದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ಸಾಪ್ತಾಹಿಕ ಅಂಕಣ ಲೇಖನಗಳನ್ನು ತಪ್ಪದೇ ಓದುತ್ತಿದ್ದ ಅಸಂಖ್ಯಾತ ಓದುಗರಲ್ಲಿ ನಾನೂ ಒಬ್ಬ. ಅಕ್ಟೋಬರ್ ೨೦೦೧ರಲ್ಲಿ ‘ದೃಷ್ಟಿಕೋನ’ ಎಂಬ ಶೀರ್ಷಿಕೆಯಲ್ಲಿ ಪ್ರಾರಂಭವಾದ ಈ ಅಂಕಣ ಲೇಖನ ಮುಂದೆ ‘ನೆಟ್ ನೋಟ’ ಎಂಬ ಶೀರ್ಷಿಕೆಯಲ್ಲಿ ಮುಂದುವರೆಯಿತು.ಇದರಲ್ಲಿ ಅವರ ಕೊನೆಯ ಲೇಖನ ಕಳೆದ ಜೂನ್ ತಿಂಗಳ ೨೨ರಂದು ಪ್ರಕಟವಾಗಿತ್ತು. ಸಂಯುಕ್ತ ಕರ್ನಾಟಕ ಪತ್ರಿಕೆಯಲಿ ‘ಸೈನ್ಸ್ ಕ್ಲಾಸ್’ ಎಂಬ ಅಂಕಣ ಹಾಗೂ ಕಸ್ತೂರಿ ಮಾಸ ಪತ್ರಿಕೆಯಲ್ಲಿ ‘ನವನವೋನ್ಮೇಷ’ ಎಂಬ ಅಂಕಣಗಳನ್ನೂ ಬರೆಯುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿರುವ ಓದುಗರನ್ನೂ ತಲುಪಬೇಕೆಂಬ ಆಶಯದಿಂದ ಸರಳವಾಗಿ, ಸುಂದರವಾದ ಶೈಲಿಯಲ್ಲಿ ಬರೆಯುವುದರಲ್ಲಿ ಸುಧೀಂದ್ರ ಸಿದ್ಧಹಸ್ತರು.

ಸುಧೀಂದ್ರ ಅವರ ಲೇಖನಗಳಲ್ಲಿ ಕಾಣಬಹುದಾದ ವೈಶಿಷ್ಟ್ಯವೆಂದರೆ, ವಿಜ್ಞಾನ ಹಾಗೂ ಸಾಹಿತ್ಯಗಳ ಸಂಗಮ. ಲೇಖನಗಳಿಗೆ ಅವರು ಕೊಡುತ್ತಿದ್ದ ಶೀರ್ಷಿಕೆಗಳು ಸ್ವಾರಸ್ಯಕರವಾಗಿರುತ್ತಿದ್ದು, ಪ್ರಾಸಬದ್ಧವಾಗಿರುತ್ತಿದ್ದುವು. ಲೇಖನಗಳು ಸರಸ ಸಂವಹನವಾಗಿರುತ್ತಿದ್ದುವು. ನ್ಯಾನೋ ತಂತ್ರಜ್ಞಾನದ ಬಗ್ಗೆ ಅವರ ಲೇಖನವೊಂದರ ಶೀರ್ಷಿಕೆ ‘ನನ್ನೊಳು ನೀನೋ, ನಿನ್ನೊಳು ನ್ಯಾನೋ’. ಅವರ ಕೊನೆಯ ಬರಹವಿರಬಹುದಾದ ಲೇಖನದ ಶೀರ್ಷಿಕೆ ‘ಮೀರಬಹುದೆ ಸದ್ದನೂ, ವೇಗದ ಸರಹದ್ದನೂ’.ಇದು ಈ ಜುಲೈ ೧ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತಮ್ಮ ಮೂರು ಸಾವಿರಕ್ಕೂ ಹೆಚ್ಚು ಇಂಥ ವೈವಿಧ್ಯಮಯ ಬರಹಗಳ ಮೂಲಕ ಕನ್ನಡ ವಿಜ್ಞಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದರು.

ನನ್ನ ಮತ್ತು ಸುಧೀಂದ್ರ ಅವರ ಒಡನಾಟ, ಗುರು-ಶಿಷ್ಯ ಸಂಬಂಧಕ್ಕೂ ಮೀರಿದ್ದು. ವಿಜ್ಞಾನಿಯಾಗಿ ಸೇವೆಯಲ್ಲಿದ್ದಾಗಲೂ ಅವರನ್ನು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ, ನಂತರವೂ ನಿರಂತರ ಸಂಪರ್ಕದಲ್ಲಿದ್ದೆ. ನನ್ನದೊಂದು ಪುಸ್ತಕದ ಲೋಕಾರ್ಪಣೆಯ ಸಮಾರಂಭಕ್ಕೂ ಮುಖ್ಯ ಅತಿಥಿಯಾಗಿ ಬಂದಿದ್ದರು. ನಾವು ‘ಸವಿಜ್ಞಾನ’ ಇ-ಪತ್ರಿಕೆಯ ಮೊದಲ ಸಂಚಿಕೆಯನ್ನು ಕಳೆದ ಜನವರಿಯಲ್ಲಿ ಲೋಕಾರ್ಪಣೆ ಮಾಡಿಸಿದ್ದೂ ಅವರಿಂದಲೇ. ಅವರ ಮನೆಯಿಂದಲೇ. ನಮ್ಮ ಪ್ರಯತ್ನವನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿ, ಮೊದಲ ಸಂಚಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಕೆಲವು ಸಲಹೆಗಳನ್ನೂ ನೀಡಿದ್ದರು. ತಾವೂ ಲೇಖನ ಬರೆದು ಕಳಿಸುವುದಾಗಿ ಹೇಳಿದ್ದರು. ಕಳೆದ ತಿಂಗಳು ಈ ಬಗ್ಗೆ ಅವರನ್ನೊಮ್ಮೆ ನೆನಪಿಸಿದಾಗ ‘ಮೇಷ್ಟ್ರೇ, ಕೊಂಚ ಸಮಯ ಕೊಡಿ, ಬರೆದು ಕಳಿಸುತ್ತೇನೆ’ ಎಂದಿದ್ದರು. ಆದರೆ ಆ ದಿನ ಬರಲೇ ಇಲ್ಲ.

ಸುಧೀಂದ್ರ ಅವರು ಹಲವಾರು ಪ್ರಶಸ್ತಿ, ಪ್ರಶಂಸೆಗಳಿಗೆ ಭಾಜನರಾಗಿದ್ದರು. ಇತ್ತೀಚೆಗೆ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅವರ ವಿಜ್ಞಾನ ಸಾಹಿತ್ಯ ಕೃಷಿಗೆ ‘ ಡಾ. ಅನುಪಮಾ ನಿರಂಜನ ಪ್ರಶಸ್ತಿ ‘ ಘೋಷಣೆಯಾಗಿತ್ತು. ಈ ಸುದ್ದಿ ಪ್ರಕಟವಾದ ದಿನವೇ ಅವರು ನಿಧನರಾಗಿದ್ದು ದುರ್ದೈವ. ಕನ್ನಡ ವಿಜ್ಞಾನ ಬರಹ ಕ್ಷೇತ್ರದಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಕೆಲವೇ ಬರಹಗಾರರಲ್ಲಿ ಒಬ್ಬರಾಗಿದ್ದ ಸುಧೀಂದ್ರ ಅವರ ನಿಧನ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ ಅಂದರೆ ತಪ್ಪಾಗಲಾರದು. ‘ಸವಿಜ್ಞಾನ’ ತಂಡದ ಪರವಾಗಿ ಹಾಗೂ ವೈಯುಕ್ತಿಕವಾಗಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ಇದು ನನ್ನ ನುಡಿನಮನ.





Friday, June 4, 2021

ಪ್ರಾಣಿ ಪ್ರಪಂಚದಲ್ಲಿ ಸುವರ್ಣ ಅನುಪಾತದ ಪ್ರಯೋಗ !

ಪ್ರಾಣಿ ಪ್ರಪಂಚದಲ್ಲಿ ಸುವರ್ಣ ಅನುಪಾತದ ಪ್ರಯೋಗ !

ಲೇಖಕರು: ಡಾ. ಟಿ.ಎ.ಬಾಲಕೃಷ್ಣ ಅಡಿಗ 

ನಿವೃತ್ತ ಪ್ರಾಂಶುಪಾಲರು ಮತ್ತು ವಿಜ್ಞಾನ ಸಂವಹನಕಾರರು 




ಕಳೆದ ಸಂಚಿಕೆಯ ಲೇಖನದಲ್ಲಿ ಸಸ್ಯಗಳಲ್ಲಿ ಕೊಂಬೆಗಳ, ಎಲೆಗಳ, ಪುಶ್ಪದಳಗಳ ಹಾಗೂ ಬೀಜಗಳ ಜೋಡಣೆಯಲ್ಲಿ ಯಾವರೀತಿ ಫಿಬೋನಾಚಿ ಸಂಖ್ಯೆಗಳ ಹಾಗೂ ಸುವರ್ಣ ಅನುಪಾತದ ಪಾಲನೆಯಾಗಿದೆ ಮತ್ತು ಇದರಿಂದ ಸಸ್ಯಗಳಿಗೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಹಲವಾರು ಉದಾಹರಣೆಗಳ ಸಹಾಯದಿಂದ ತಿಳಿದುಕೊಂಡೆವು ಅಲ್ಲವೇ? ಅದೇ ರೀತಿ, ಸುವರ್ಣ ಅನುಪಾತದ ಪ್ರಭಾವ ಪ್ರಾಣಿ ಪ್ರಪಂಚದಲ್ಲಿಯೂ ಕೂಡ ಇದೆ ಎಂಬುದಕ್ಕೆ ನಮಗೆ ನೂರಾರು ಕುತೂಹಲಕರ ಉದಾಹರಣೆಗಳು ಕಾಣಸಿಗುತ್ತವೆ !

Tuesday, May 4, 2021

ಸಸ್ಯಗಳಲ್ಲಿ ಸುವರ್ಣ ಅನುಪಾತದ ಸೊಗಸು !

ಸಸ್ಯಗಳಲ್ಲಿ ಸುವರ್ಣ ಅನುಪಾತದ ಸೊಗಸು !

ಲೇಖಕರು: ಡಾ. ಟಿ.ಎ.ಬಾಲಕೃಷ್ಣ ಅಡಿಗ 


ನಿವೃತ್ತ ಪ್ರಾಂಶುಪಾಲರು ಮತ್ತು ವಿಜ್ಞಾನ ಸಂವಹನಕಾರರು


ನಿಸರ್ಗದಲ್ಲಿ ಗಣಿತೀಯ ತತ್ವಗಳು ಜೀವಿಗಳ ಅನೇಕ ವಿನ್ಯಾಸ ಹಾಗೂ ರಚನೆಗಳಲ್ಲಿ ಹಾಸು ಹೊಕ್ಕಾಗಿವೆ ಎಂಬುದಕ್ಕೆ ಅಸಂಖ್ಯಾತ ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಅದರಲ್ಲಿಯೂ, ಫಿಬೋನಾಚಿ ಸಂಖ್ಯಾ ಅನುಕ್ರಮ (1, 2, 3, 5, 8. 13, 21, 34,........) ಮತ್ತು ಸಂಬಂಧಿಸಿದ ಸುವರ್ಣ ಅನುಪಾತ ( 1. 6180.........) ಸೂಕ್ಷ್ಮಜೀವಿಗಳ ರಚನಾ ವೈವಿಧ್ಯದಿಂದ ಪ್ರಾರಂಭಿಸಿ ಮಾನವನ ದೇಹ ರಚನೆಯ ವಿನ್ಯಾಸದವರೆಗೂ ವ್ಯಾಪಿಸಿದೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ? ಈ ಬಾರಿಯ ಲೇಖನದಲ್ಲಿ ಸಸ್ಯಗಳಲ್ಲಿ ವ್ಯಾಪಕವಾಗಿರುವ ಸುವರ್ಣ ಅನುಪಾತದ ಸೊಗಸಿನ ಕೆಲವು ಉದಾಹರಣೆಗಳನ್ನು ಗಮನಿಸೋಣ.

Sunday, April 4, 2021

ನಿಸರ್ಗದೆಲ್ಲೆಡೆ ಇದೆ ಈ ಸುವರ್ಣ ಅನುಪಾತ !

 ನಿಸರ್ಗದೆಲ್ಲೆಡೆ ಇದೆ ಈ ಸುವರ್ಣ ಅನುಪಾತ !

ಡಾ. ಟಿ.ಎ.ಬಾಲಕೃಷ್ಣ ಅಡಿಗ 

ನಿವೃತ್ತ ಪ್ರಾಂಶುಪಾಲರು ಮತ್ತು ವಿಜ್ಞಾನ ಸಂವಹನಕಾರರು








ನೀವು ಎಂದಾದರೂ ಹೂವಿನ ದಳಗಳ ಜೋಡಣೆಯನ್ನು ಆಸಕ್ತಿಯಿಂದ ಗಮನಿಸಿದ್ದೀರಾ? ಉದಾಹರಣೆಗೆ, ಸೂರ್ಯಕಾಂತಿ ಹೂವಿನ ಒಳಗೆ ಹುದುಗಿರುವ ಬೀಜಗಳ ಚಿತ್ತಾರದಲ್ಲಿ ವಿಶೇಷವನ್ನೇನಾದರೂ ಕಂಡಿದ್ದೀರಾ? ಜೇನುಗೂಡಿನಲ್ಲಿನ ರಚನೆಯ ವೈಶಿಷ್ಟ್ಯವನ್ನೇನಾದರೂ ಗಮನಿಸಿದ್ದೀರಾ? ಮೃದ್ವಂಗಿಗಳ ಚಿಪ್ಪಿನಲ್ಲಿ ಏನಾದರೂ ವಿಶೇಷತೆ ಇದೆ ಎಂದೆನಿಸಿದೆಯೇ? ಯಾವಾಗಲಾದರೂ ಒಮ್ಮೆ ಒಂದು ಬಹು ಮಹಡಿ ಕಟ್ಟಡದ ಕೊನೆಯ ಅಂತಸ್ತಿನ ತಾರಸಿಯಲ್ಲಿ ನಿಂತು ಅಲ್ಲಿಂದ ಕೆಳಗೆ ಕಾಣುವ ಎತ್ತರದ ಮರಗಳಲ್ಲಿ ಕೊಂಬೆಗಳ ಜೋಡಣೆಯ ಚಿತ್ತಾರವನ್ನು ಗಮನವಿಟ್ಟು ನೋಡಿದ್ದೀರಾ? ಇದೆಲ್ಲಾ ಇರಲಿ, ಎಂದಾದರೂ ನಿಮ್ಮ ಅಂಗೈಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೀರಾ?

Thursday, March 4, 2021

ವಿಜ್ಞಾನ ಪಾಠಗಳ ಮೂಲಕ ಮೌಲ್ಯ ಶಿಕ್ಷಣ

ವಿಜ್ಞಾನ ಪಾಠಗಳ ಮೂಲಕ ಮೌಲ್ಯ ಶಿಕ್ಷಣ 


ಲೇಖನ: ಡಾ.ಟಿ.ಎ.ಬಾಲಕೃಷ್ಣ ಅಡಿಗ
       ನಿವೃತ್ತ ಪ್ರಾಂಶುಪಾಲರು ಮತ್ತು ಜೀವಶಾಸ್ತ್ರ ಉಪನ್ಯಾಸಕರು


ವಿದ್ಯಾರ್ಥಿಗಳು ದೇಶದ ಅತ್ಯಮೂಲ್ಯ ಆಸ್ತಿ. ಪ್ರತಿಯೊಬ್ಬ ವಿದ್ಯಾಥಿಯನ್ನು ಈ ದೇಶದ ಪ್ರಜ್ಞಾವಂತ ನಾಗರೀಕನನ್ನಾಗಿ ರೂಪಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮಹತ್ತರವಾದುದು. ಅದರಲ್ಲಿಯೂ ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಎಲ್ಲ ಹಂತಗಳಲ್ಲಿ ಅತ್ಯಂತ ಪ್ರಮುಖವಾದುದು. ಸರ್ವಜ್ಞ ತನ್ನ ತ್ರಿಪದಿಯೊಂದರಲ್ಲಿ ಹೇಳಿರುವಂತೆ

“ ತಂದೆಗೂ ಗುರುವಿಗೂ ಒಂದು ಅಂತರವುಂಟು.

ತಂದೆ ತೋರುವನು ಸದ್ಗುರುವ | ಗುರುರಾಯ

ಬಂಧನವ ಕಳೆವ ಸರ್ವಜ್ಞ. “

Thursday, February 4, 2021

ಬಹುಮುಖ ಪ್ರತಿಭೆಯ ಸಸ್ಯ ವಿಜ್ಞಾನಿ - ಡಾ. ಬಿ.ಜಿ.ಎಲ್.ಸ್ವಾಮಿ

ಬಹುಮುಖ ಪ್ರತಿಭೆಯ ಸಸ್ಯ ವಿಜ್ಞಾನಿ - ಡಾ. ಬಿ.ಜಿ.ಎಲ್.ಸ್ವಾಮಿ

ಲೇಖಕರು : ಡಾ. ಟಿ.ಎ.ಬಾಲಕೃಷ್ಣ ಅಡಿಗ

ನಿವೃತ್ತ ಪ್ರಾಂಶುಪಾಲರು ಮತ್ತು ಜೀವಶಾಸ್ತç ಪ್ರಾಧ್ಯಾಪಕರು

ನಾಡು ಕಂಡ ಅಪೂರ್ವ ಸಸ್ಯ ವಿಜ್ಞಾನಿ ಬಿ.ಜಿ.ಎಲ್.ಸ್ವಾಮಿ ಅವರು ಕನ್ನಡ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ಡಾ.ಡಿ.ವಿ.ಗುಂಡಪ್ಪ ಅವರ ಪುತ್ರ ರತ್ನ. ಬೆಂಗಳೂರು ಗುಂಡಪ್ಪ ಲಕ್ಷೀನಾರಾಯಣ ಸ್ವಾಮಿ ಅವರ ಪೂರ್ಣ ನಾಮಧೇಯ. ಬಿ.ಜಿ.ಎಲ್.ಸ್ವಾಮಿ ಕೇವಲ ಸಸ್ಯ ವಿಜ್ಞಾನಿಯಲ್ಲ. ಅವರದ್ದು ಬಹುಮುಖ ಪ್ರತಿಭೆ. ಸಂಶೋದಕ, ಜನಪ್ರಿಯ ವಿಜ್ಞಾನ ಲೇಖಕ, ಸಾಹಿತಿ, ಪ್ರಾಧ್ಯಾಪಕ, ದಕ್ಷ ಆಡಳಿತಗಾರ, ಸಂಗೀತಜ್ಞ, ನೃತ್ಯಪಟು, ಚಿತ್ರಕಾರ, ಬಹು ಭಾಷಾ ಕೋವಿದ, ಹೀಗೆ, ಹತ್ತು ಹಲವು ಕ್ಷೇತ್ರಗಳಲ್ಲಿ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 2021ರ ಫೆಬ್ರವರಿ 5 ರಂದು ಅವರ 103ನೇ ಜನ್ಮ ದಿನ. ಆ ಸಂದರ್ಭಕ್ಕೆ ಅವರ ಸ್ಮರಣೆಯಲ್ಲಿ ಈ ಲೇಖನ.

Saturday, January 2, 2021

ಹೀಗೊಂದು ಯುದ್ಧ !

ಹೀಗೊಂದು ಯುದ್ಧ !

ಲೇಖನ: ಡಾ.ಟಿ.ಎ.ಬಾಲಕೃಷ್ಣ ಅಡಿಗ

       ನಿವೃತ್ತ ಪ್ರಾಂಶುಪಾಲರು ಮತ್ತು ಜೀವಶಾಸ್ತ್ರ ಉಪನ್ಯಾಸಕರು

ಶತ್ರು ಪಡೆ ಆಗಮಿಸುತ್ತಿದೆ. ಮುಂದೆ ಇರುವ ಅದರ ಕಾವಲು ಪಡೆ ಒಂದೊಂದೇ ಹೆಜ್ಜೆ ಮುಂದಿಡುತ್ತಿದೆ. ವಿಶ್ವಾಸ ದ್ರೋಹ ಮತ್ತು ಮೋಸವೇ ಶತ್ರು ಪಡೆಯ ಮುಖ್ಯ ಗುರಿ. ಎದುರು ಕಡೆಯಿಂದ ಯಾವುದೇ ವಿರೋಧ ಕಾಣಿಸುತ್ತಿಲ್ಲ. ಇದರ ಪ್ರಯೋಜನ ಪಡೆದು ಗಡಿಯಲ್ಲಿ ಮುನ್ನುಗ್ಗುವ ಪ್ರಯತ್ನ ಶತ್ರು ಪಡೆಯಿಂದ ಪ್ರಾರಂಭವಾಗಿದೆ. ಅದು ದಾಳಿ ಮಾಡಬೇಕೆಂದಿರುವ ನೆಲದಲ್ಲಿ ಬಲವಾಗಿ ಬೇರೂರಿ, ಅಲ್ಲಿಂದ ವಿವಿಧ ತಾಣಗಳಿಗೆ ಹರಡಿ ಹೋಗುವ ಉದ್ದೇಶ ಕಂಡು ಬರುತ್ತಿದೆ.