ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam
Showing posts with label DIARY. Show all posts
Showing posts with label DIARY. Show all posts

Wednesday, August 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ . . . . 

‘ಸವಿಜ್ಞಾನ’ ಇ-ಪತ್ರಿಕೆಯ ಎಂಟನೆಯ ಸಂಚಿಕೆಗೆ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಸ್ವಾಗತ. ನಮ್ಮ ಕಳೆದ ಏಳು ಸಂಚಿಕೆಗಳಿಗೆ ನೀವು ನೀಡಿದ ಸ್ಪಂದನ ಅಭೂತಪೂರ್ವ. ಓದುಗರಾಗಿ ನೀವು ನೀಡಿದ. ಸಲಹೆ ಸೂಚನೆಗಳನ್ನು ಪರಿಶೀಲಿಸಿ ಸೂಕ್ತವಾದುವುಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದೇವೆ. ನಮ್ಮ ಮುಂದಿನ ಸಂಚಿಕೆಗಳಿಗೂ ನಿಮ್ಮ ಪ್ರತಿಕ್ರಿಯೆ ಹೀಗೇ ಇರಲಿದೆ ಎಂಬ ನಿರೀಕ್ಷೆ ನಮ್ಮದು.

ನಮ್ಮ ಪತ್ರಿಕೆಯ ಓದುಗರ ಸಂಖ್ಯೆ ಹೆಚ್ಚುತ್ತಿರುವ ಸಂತಸ ಒಂದು ಕಡೆಯಾದರೆ, ಅನೇಕ ಶಿಕ್ಷಕರು ಲೇಖನಗಳನ್ನು ಬgದುಕೊಡಲು ಮುಂದೆ ಬಂದಿರುವುದು ಇನ್ನೊಂದು ಸಂತಸದ ವಿಚಾರ. ಕಳೆದ ಸಂಚಿಕೆಯಲ್ಲಿ ಪ್ರಕಟವಾದ, ಗ್ರೆಗೋರ್ ಮೆಂಡೆಲ್ ಬಗ್ಗೆ ಶಿಕ್ಷಕಿ ಡಾ. ಸಂಧ್ಯಾ ಬರೆದ ಲೇಖನಕ್ಕೆ ಸಾಕಷ್ಟು ಮೆಚ್ಚುಗೆಯ ಜೊತೆಗೆ ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ. ಇನ್ನಷ್ಟು ಹೊಸ ಲೇಖಕರನ್ನು ಈ ಸಂಚಿಕೆಯೂ ಸೇರಿ, ಮುಂದಿನ ಸಂಚಿಕೆಗಳಲ್ಲಿ ಕ್ರಮೇಣ ಪರಿಚಯಿಸುವ ಹಂಬಲ ನಮ್ಮದು.

ಆಗಸ್ಟ್ ತಿಂಗಳ ಸಂಚಿಕೆ ಎಂದಿನಂತೆ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಲೇಖನಗಳಿಂದ ಕೂಡಿದೆ. ಕಳೆದ ಮೂರು ಸಂಚಿಕೆಗಳಿಂದ ‘ನಿಸರ್ಗದಲ್ಲಿ ಸುವರ್ಣ ಅನುಪಾತ’ದ ಬಗ್ಗೆ ನೀವು ಓದುತ್ತಿರುವ ಲೇಖನ ಮಾಲೆಯ ಮುಂದುವರೆದ ಭಾಗವಾಗಿ ಮಾನವ ದೇಹ ರಚನೆಯಲ್ಲಿ ಸುವರ್ಣ ಅನುಪಾತದ ಬಗ್ಗೆ  ಒಂದು ಲೇಖನವಿದೆ. ಕಶೇರುಕ ಪ್ರಾಣಿಗಳಲ್ಲಿ ಜೀವವಿಕಾಸದ ಒಂದು ಪ್ರಮುಖ ಘಟ್ಟವಾದ  ನೀರಿನಿಂದ ನೆಲವಾಸಕ್ಕೆ  ಹೊಂದಿಕೊಂಡ ಸಂದರ್ಭದ ಒಂದು ಸುಂದರ ವಿವರಣೆ ನೀಡುವ ಲೇಖನ, ‘ಏನೋ ಮಾಡಲು ಹೋಗಿ...............’ ಎಂಬ ಲೇಖನವಿದೆ. ನನ್ನ ಗುರುಗಳಾದ ಡಾ. ಎಂ.ಜೆ ಸುಂದರ ರಾಮ್ ಬರೆದಿರುವ ಈ ಲೇಖನದ ಕಥನ ಶೈಲಿ ಆಕರ್ಷಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಕೃತಕ ಬುದ್ಧಿಮತ್ತೆಯ ಬಗ್ಗೆ ಒಂದು ಲೇಖನವಿದೆ. ಕ್ಷುದ್ರಗ್ರಹಗಳ ಬಗ್ಗೆ ಬೆಳಕು ಚೆಲ್ಲುವ ‘ಅಂತರಿಕ್ಷದ ಅಲೆಮಾರಿಗಳು’ ಎಂಬ ಲೇಖನವಿದೆ. ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ಲೇಖನವಿದೆ. ಎಂದಿನಂತೆ, ಸಾಧಕ ಶಿಕ್ಷಕರೊಬ್ಬರ ಪರಿಚಯವಿದೆ. ನಿಮ್ಮನ್ನು ರಂಜಿಸುವ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.      

ಲೇಖನಗಳನ್ನು ಓದಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗ್‌ನಲ್ಲಿ ದಾಖಲಿಸಿ. ನಿಮಗೂ ಬರೆಯುವ ಇಚ್ಛೆಯಿದ್ದಲ್ಲಿ ನಮ್ಮ ಇ-ಮೇಲ್ ವಿಳಾಸದ (savijnana.tab@gmail.com) ಮೂಲಕ ಸಂಪರ್ಕಿಸಿ.

ಡಾ, ಟಿ .ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

Sunday, July 4, 2021

ಸಂಪಾದಕರ ಡೈರಿಯಿಂದ

 ಇದು ‘ಸವಿಜ್ಞಾನ’ದ ಏಳನೆಯ ಸಂಚಿಕೆ. ಕಳೆದ ವರ್ಷಾಂತ್ಯದ ಎರಡು, ಮೂರು ತಿಂಗಳ ಕಾಲ ವಿಸ್ತೃತ ಚರ್ಚೆ ನಡೆಸಿ, ವಿಜ್ಞಾನ ಶಿಕ್ಷಕರಿಗೆ ಹಾಗೂ ವಿಜ್ಞಾನಾಸಕ್ತರಿಗೆ ಮೆಚ್ಚುಗೆಯಾಗುವಂಥ, ಉಪಯುಕ್ತವಾಗುವಂಥ ಇ-ಪತ್ರಿಕೆಯೊಂದನ್ನು ಬ್ಲಾಗ್‌ನ ರೂಪದಲ್ಲಿ ಪ್ರಕಟಿಸಬೇಕೆಂಬ ನಮ್ಮ ತಂಡದ ನಿರ್ಧಾರ ಮಡುಗಟ್ಟಿ, ಕೊನೆಗೆ ಕಳೆದ ಜನವರಿಯಲ್ಲಿ ಕಾರ್ಯರೂಪಕ್ಕೆ ಬಂದಿತು. ಇದೀಗ ಆರು ಸಂಚಿಕೆಗಳು ಪ್ರಕಟವಾಗಿವೆ. ಶಿಕ್ಷಕರು ಮತ್ತು ವಿಜ್ಞಾನ ಓದುಗರು ನಮ್ಮ ಈ ಪ್ರಯತ್ನಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜೊತೆಗೆ, ವಿಜ್ಞಾನ ಪರಿಚಾರಿಕೆಯ ನಮ್ಮ ಈ ಪ್ರಯತ್ನದಲ್ಲಿ ತಮ್ಮ ಲೇಖನಗಳ ಮೂಲಕ ಕೈ ಜೋಡಿಸುತ್ತಿದ್ದಾರೆ. ಸಂತೋಷದ ವಿಷಯವೆಂದರೆ, ವಿದೇಶಗಳಲ್ಲಿರುವ ವಿಜ್ಞಾನಾಸಕ್ತ ಕನ್ನಡಿಗರಿಂದಲೂ ಈ ನಮ್ಮ ಪತ್ರಿಕೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಜುಲೈ ತಿಂಗಳ ಈ ಸಂಚಿಕೆಯಲ್ಲಿಯೂ ವೈವಿಧ್ಯಮಯ ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಬಹುಕಾಲ ಚಲಾವಣೆಯಲ್ಲಿದ್ದ ಆನುವಂಶೀಯತೆಯ ಅಸಂಬದ್ಧ ಪರಿಕಲ್ಪನೆಗಳನ್ನು ದೂರಮಾಡಿ, ತಳಿಶಾಸ್ತ್ರಕ್ಕೆ ವೈಜ್ಞಾನಿಕ ಬುನಾದಿಯನ್ನು ಹಾಕಿಕೊಟ್ಟ ಗ್ರೆಗೊರ್ ಜೊಹಾನ್ ಮೆಂಡೆಲ್‌ನ 199ನೇ ಜನ್ಮ ದಿನ, ಜುಲೈ ತಿಂಗಳ 22ರಂದು. ಈ ಹಿನ್ನೆಲೆಯಲ್ಲಿ, ಮೆಂಡೆಲ್ ಬಗ್ಗೆ ಒಂದು ವಿಶೇಷ ಲೇಖನವಿದೆ. ಕಳೆದ ಸಂಚಿಕೆಗಳಲ್ಲಿ ನಿಮಗೆ ನಾವು ಪರಿಚಯಿಸಿದ ಗಣಿತಜ್ಞ ವಿ.ಎಸ್.ಶಾಸ್ತ್ರೀ ಅವರೊಡನೆ  ನಮ್ಮ ತಂಡ ನಡೆಸಿದ ಸಂವಾದದ ಬಗ್ಗೆ ಒಂದು ಲೇಖನವಿದೆ. ಒಂದು ಉತ್ತಮ ಹವ್ಯಾಸವಾದ ಪಕ್ಷಿ ವೀಕ್ಷಣೆಯ ಬಗ್ಗೆ ಉಪಯುಕ್ತ ಮಾಹಿತಿ ಕೊಡುವ ಲೇಖನವಿದೆ. ಇರುವೆ ಸಿಂಹ ಎಂದು ಕರೆಯಲಾಗುವ ಕುತೂಹಲಕಾರಿ ಕೀಟವೊಂದರ ಬಗ್ಗೆ ಒಂದು ಲೇಖನವಿದೆ. ಎಂದಿನಂತೆ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ನಿಮಗೆ ರಂಜನೆ ನೀಡಲಿವೆ.

ನಮ್ಮ ಮೊದಲ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ, ನಮ್ಮನ್ನು ಹರಸಿದ್ದ ಜನಪ್ರಿಯ ವಿಜ್ಞಾನಿ ಹಾಗೂ ಕನ್ನಡ ವಿಜ್ಞಾನ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ ಅವರು ಹಠಾತ್ತನೆ ನಮ್ಮನ್ನಗಲಿದ್ದಾರೆ. ಈ ಸಂಚಿಕೆಯಲ್ಲಿ ಅವರಿಗೊಂದು ನುಡಿನಮನವನ್ನು ಸಲ್ಲಿಸಿ, ಆ ಮೂಲಕ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ. ಅವರೊಡನೆ ನಮ್ಮ ತಂಡ ನಡೆಸಿದ್ದ ಸಂವಾದವನ್ನು ಅವರ ಸ್ಮರಣೆಗಾಗಿ ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ.

ಡಾ. ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

Friday, June 4, 2021

ಸಂಪಾದಕರ ಡೈರಿಯಿಂದ

ಜೂನ್ ತಿಂಗಳು ಬಂತೆಂದರೆ, ನಮಗೆ ನೆನಪಾಗುವುದು ‘ವಿಶ್ವ ಪರಿಸರ ದಿನಾಚರಣೆ. ‘ ಆದರೆ, ಅದರ ಹೊಸ್ತಿಲಲ್ಲೇ ನಾವು ಖ್ಯಾತ ಪರಿಸರವಾದಿ, ವೃಕ್ಷಪ್ರೇಮಿ ಸುಂದರಲಾಲ್ ಬಹುಗುಣ ಅವರನ್ನು ಕಳೆದುಕೊಂಡದ್ದು ಅತ್ಯಂತ ಖೇದದ ಸಂಗತಿ. ತಮ್ಮ “ಚಿಪ್ಕೋ” ಚಳುವಳಿಯ ಮೂಲಕ ಮನೆಮಾತಾಗಿದ್ದ ಬಹುಗುಣರ ಸಾವು ಪರಿಸರ ಕ್ಷೇತ್ರದಲ್ಲಿ ಒಂದು ಶೂನ್ಯವನ್ನೇ ಸೃಷ್ಟಿಸಿದೆ.  ಮರಗಳನ್ನು ಅಪ್ಪಿಕೊಳ್ಳುತ್ತಾ, ಮಾನವ ಮತ್ತು ಪರಿಸರದ ನಡುವಿನ ಸಂಬಂಧಗಳನ್ನು ನೆನಪಿಸಿದ ಆ ಮಹಾ ಚೇತನಕ್ಕೆ “ಸವಿಜ್ಞಾನ” ತಂಡದ ಪರವಾಗಿ ಭಾವಪೂರ್ಣ ವಿದಾಯ. ಅವರ ಪರಿಸರ ಕಾಳಜಿಯ ಕೆಲವು ಅಂಶಗಳನ್ನಾದರೂ ಅಳವಡಿಸಿಕೊಂಡು, ಪರಿಸರ ಸಂರಕ್ಷಣೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ಜೂನ್ ತಿಂಗಳ ‘ಸವಿಜ್ಞಾನ’ ನಿಮ್ಮ ಓದಿಗಾಗಿ ಹಲವು ಬಗೆಯ ವಿಷಯ ವೈವಿಧ್ಯವನ್ನು ಒಳಗೊಂಡು ಸಿದ್ಧವಾಗಿದೆ. ಈ ವರ್ಷದ ‘ವಿಶ್ವ ಪರಿಸರ ದಿನ’ದ ಘೋಷವಾಕ್ಯವಾದ ಪರಿಸರವ್ಯವಸ್ಥೆಯ ಮರುಸ್ಥಾಪನೆಯನ್ನು ಗಮನದಲ್ಲಿರಿಸಿಕೊಂಡು ಡಾ. ಪ್ರಸನ್ನಕುಮಾರ್ ಬರೆದಿರುವ ವಿಶ್ಲೇಷಣಾತ್ಮಕವಾದ ಲೇಖನ ಈ ಸಂಚಿಕೆಯ ವಿಶೇಷ. ಜೊತೆಗೆ, ಪ್ರಾಣಿಗಳಲ್ಲಿ ಸುವರ್ಣ ಅನುಪಾತದ ಬಗ್ಗೆ, ಆಕ್ಟೋಪಸ್ ಬಗ್ಗೆ, ಮ್ಯೂಕರ್ ಶಿಲೀಂದ್ರದ ಬಗ್ಗೆ ಹಾಗೂ ಗುಲಗಂಜಿಯ ಬಗ್ಗೆ ಮಾಹಿತಿಪೂರ್ಣ ಲೇಖನಗಳಿವೆ. ಶಿಕ್ಷಣದಲ್ಲಿ ಆಟಿಕೆಗಳ ಬಳಕೆಯ ಕುರಿತು ಒಂದು ಲೇಖನವಿದೆ. ಶಿಕ್ಷಕ ಬಂಧುಗಳಿಗೆ ಪ್ರೇರೇಪಣೆಯಾಗಬಲ್ಲ ತೆರೆ ಮರೆಯ ಸಾಧಕ, ಶಿಕ್ಷಕ ಪರಮೇಶ್ವರಯ್ಯ ಅವರ ಸಾಧನೆಯ ಒಂದು ಕಿರು ನೋಟವೂ ಇದೆ. ನಿಮ್ಮ ಮೆಚ್ಚುಗೆಯ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.

ಇದು ‘ಸವಿಜ್ಞಾನ’ದ ಆರನೆಯ ಸಂಚಿಕೆ. ವಿಜ್ಞಾನದ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಲೇಖನಗಳಿರುವ ಈ ಸಂಚಿಕೆ ಎಂದಿನಂತೆ ನಿಮಗೆ ಇಷ್ಟವಾಗಬಹುದೆಂಬ ನಂಬಿಕೆ ನಮ್ಮದು.  ಸಂಚಿಕೆಯ ಹೂರಣದ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಬ್ಲಾಗ್‌ನಲ್ಲಿಯೂ ಸೂಚಿಸಬೇಕೆಂದು ನಮ್ಮ ಕೋರಿಕೆ.   

ಡಾ, ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು


Tuesday, May 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಇದು ‘ಸವಿಜ್ಞಾನ’ದ ಐದನೆಯ ಸಂಚಿಕೆ. ಕಳೆದ ನಾಲ್ಕು ಸಂಚಿಕೆಗಳಿಗೆ ನಾಡಿನ ಶಿಕ್ಷಕ ಮಿತ್ರರು ಹಾಗೂ ವಿಜ್ಞಾನಾಸಕ್ತರು ನೀಡಿರುವ ಪ್ರತಿಕ್ರಿಯೆ ಆಶಾದಾಯಕವಾಗಿದೆ. ಅದರಲ್ಲಿಯೂ, ನಮ್ಮಲ್ಲಿ ಪ್ರಕಟವಾಗುತ್ತಿರುವ ಸಾಂದರ್ಭಿಕ ಲೇಖನಗಳ ಬಗ್ಗೆ ಹಾಗೂ ಸಾಧಕರ ಪರಿಚಯ ಲೇಖನಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಿದೆ. ಏಪ್ರಿಲ್ ೨೨ರ  ‘ವಿಶ್ವ ಭೂ ದಿನ’ಕ್ಕೆ ಸಂಬಂಧಿಸಿದಂತೆ ಪ್ರಕಟವಾದ ‘ ಭೂಮಿ ಅಂದರೆ ಏನರ್ಥ? ‘ ಲೇಖನವು ಓದುಗರನ್ನು ಅಂತರಾವಲೋಕನಕ್ಕೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಗಣಿತಜ್ಞ ವಿ.ಎಸ್. ಶಾಸ್ತ್ರಿಯವರ ‘ಗಣಿತವನ’ ದ ಪರಿಚಯ ಹಲವಾರು ಶಿಕ್ಷಕರನ್ನು ಅಲ್ಲಿಗೆ ಭೇಟಿ ನೀಡುವಂತೆ ಪ್ರೇರೇಪಣೆ ನೀಡಿದೆ. ಲೇಖನಗಳು ಓದುಗರಿಗೆ ಪ್ರೇರಣಾದಾಯಕವಾಗುತ್ತಿದೆ ಎಂದಲ್ಲಿ ನಾವು ನಮ್ಮ ಗುರಿಯತ್ತ ಸಾಗುತ್ತಿದ್ದೇವೆ ಎಂಬ ನಂಬಿಕೆ ನಮಗೆ ಮೂಡಿದೆ.

ಮೇ ತಿಂಗಳ ಸಂಚಿಕೆಯಲ್ಲಿ ವಿ.ಎಸ್. ಶಾಸ್ತ್ರಿಯವರ ಶ್ರಮದ ಇನ್ನೊಂದು ಮುಖವಾದ ಅವರ ವೈಯುಕ್ತಿಕ ವಸ್ತು ಸಂಗ್ರಹಾಲಯದ ಪರಿಚಯ ಲೇಖನವಿದೆ. ಸಸ್ಯಗಳು ಸುವರ್ಣ ಅನುಪಾತವನ್ನು ಅಳವಡಿಸಿಕೊಂಡಿರುವ ಬಗ್ಗೆ ಒಂದು ಲೇಖನವಿದೆ. ಅರಣ್ಯದ ರೋಚಕತೆಗಳನ್ನು ಪರಿಚಯಿಸುವ ಪ್ರಯತ್ನವಿದೆ. ಚಾರ್ಲ್ಸ್ ಡಾರ್ವಿನ್ ಬಗ್ಗೆ ಕುತೂಹಲಕರ ಮಾಹಿತಿ ನೀಡುವ ಲೇಖನವಿದೆ. ಹಾಲಿನ ಉಪಯುಕ್ತತೆಯನ್ನು ಪರಿಚಯಿಸುವ ಲೇಖನವೂ ಇದೆ. ಜೊತೆಗೆ, ಮಾನ್ಯ ಪ್ರಧಾನಮಂತ್ರಿಗಳ ‘ಆತ್ಮ ನಿರ್ಭರ ಭಾರತ’ ಕಾರ್ಯಕ್ರಮದ ಅಡಿಯಲ್ಲಿ ನಡೆದ ‘ಆಟಿಕೆ ಮೇಳ’ದಲ್ಲಿ ರಾಜ್ಯ ಶಿಕ್ಷಣ ಇಲಾಖೆಯ ಸಹಯೋಗದ ಬಗ್ಗೆ ಒಂದು ವರದಿಯೂ ಇದೆ. ಈ ಸಂಚಿಕೆಯಿಂದ ‘ತೆರೆ ಮರೆಯ ಸಾಧಕರು’ ಶೀರ್ಷಿಕೆಯಲ್ಲಿ ಪ್ರತಿ ತಿಂಗಳು ಒಬ್ಬ ಕ್ರಿಯಾಶೀಲ ಶಿಕ್ಷಕರ ಸಾಧನೆಯ ಪರಿಚಯ ಮಾಡಿಕೊಡಲಾಗುತ್ತದೆ. ಎಂದಿನಂತೆ, ನಿಮ್ಮನ್ನು ರಂಜಿಸಲು ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.

ರಾಷ್ಟ್ರದಾದ್ಯಂತ ಕೋವಿಡ್-೧೯ರ ಎರಡನೆಯ ಅಲೆಯ ತೀವ್ರತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಎಂದಿಗಿಂತ ಹೆಚ್ಚಿದೆ. ಅನಗತ್ಯ ಓಡಾಟವನ್ನು ನಿಲ್ಲಿಸಿ, ಎಲ್ಲೆಡೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಸೂಕ್ತವಾದ ಮಾಸ್ಕ್ ಧರಿಸುವ ಮೂಲಕ ಮಾತ್ರ ಸೋಂಕು ಹರಡುವುದನ್ನು ನಿಯಂತ್ರಿಸಬಹುದಾಗಿದೆ. ಜವಾಬ್ದಾರಿಯುತ ನಾಗರೀಕರಾದ ನಾವು ಈ ನಿಯಮಗಳನ್ನು ಪಾಲಿಸುವುದಷ್ಟೇ ಅಲ್ಲದೆ, ಈ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಿ, ಈ ಸಂಕಷ್ಟದಿಂದ ಪಾರಾಗುವಂತೆ ಮಾಡಬೇಕಿದೆ. ಇದನ್ನು ಸದಾ ನೆನಪಿನಲ್ಲಿಟ್ಟುಕೊಂಡು ಈ ಸಂಚಿಕೆಯನ್ನು ಆಸ್ವಾದಿಸುವಿರಲ್ಲವೇ ?

 

ಡಾ, ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು


Sunday, April 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಏಪ್ರಿಲ್ ತಿಂಗಳು ಬಂತೆಂದರೆ ನಾಡಿನಲ್ಲೆಲ್ಲಾ ಉಗಾದಿಯ ಸಂಭ್ರಮ. ವಸಂತ ಋತುವಿನ ಆಗಮನದೊಂದಿಗೆ ವನಗಳೆಲ್ಲ ಚಿಗುರಿ ಹಸಿರಾಗಿ ನಳ ನಳಿಸುತ್ತಿರುತ್ತವೆ. ಹೂ ಬಿಟ್ಟ ಗಿಡ, ಮರ ಬಳ್ಳಿಗಳಿಂದ ವರ್ಣರಂಜಿತವಾಗಿ ಕಾಣುವ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸುತ್ತಾ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಬೇವು, ಬೆಲ್ಲವನ್ನು

ತಿಂದು ನವ ಸಂವತ್ಸರವನ್ನು ಬರಮಾಡಿಕೊಳ್ಳೋಣ. ಸವಿಜ್ಞಾನದ ಎಲ್ಲ ಆತ್ಮೀಯ ಓದುಗರಿಗೆ ಸಂಪಾದಕ ಮಂಡಳಿಯ ಹಾರ್ದಿಕ ಶುಭಾಶಯಗಳು.

ಪರಿಸರದ ದೃಷ್ಟಿಯಿಂದಲೂ ಏಪ್ರಿಲ್ ಮಹತ್ವದ ತಿಂಗಳು. ಭೂಮಿಗೆ ಬಂದೊದಗಿರುವ ಆಪತ್ತನ್ನು ಗಮನದಲ್ಲಿಟ್ಟುಕೊಂಡು, ಭೂಮಿಯ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಚಿಂತನೆ ನಡೆಸುವ  ನಿಟ್ಟಿನಲ್ಲಿ, ಈ ತಿಂಗಳ ೨೨ರಂದು ‘ವಿಶ್ವ ಭೂ ದಿನ'ವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ‘ಸವಿಜ್ಞಾನ”ದ ಈ ಸಂಚಿಕೆಯಲ್ಲಿ ನಮ್ಮನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸುವ

“ಭೂಮಿ ಎಂದರೆ ಏನರ್ಥ?” ಎಂಬ ವಿಶೇಷ ಲೇಖನವಿದೆ. ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ. ಜೊತೆಗೆ, ನಿಸರ್ಗದಲ್ಲಿ ಕಂಡು ಬರುವ ಅಚ್ಚರಿಯ ಸುವರ್ಣ ಅನುಪಾತದ ಬಗ್ಗೆ, ಇ-ತ್ಯಾಜ್ಯ ನಿರ್ವಹಣೆಯ ಬಗ್ಗೆ, ಹಾಗೂ ರಸಾಯನಶಾಸ್ಟ್ರ ಬೋಧನೆಯಲ್ಲಿರುವ ಮೌಲ್ಯಗಳ ಬಗ್ಗೆ ಲೇಖನಗಳಿವೆ. ಅಲ್ಲದೆ, ಮೆಗ್ನೀಷಿಯಂ ಬಗ್ಗೆ, ಸಿಗರೇಟಿನ ಬಗ್ಗೆ ಕುತೂಹಲಕಾರಿ

ಲೇಖನಗಳಿವೆ. ಇನ್ನೊಂದು ವಿಶೇಷವೆಂದರೆ, ಕಳೆದಸಂಚಿಕೆಯಲ್ಲಿ ನಾವು ಪರಿಚಯಿಸಿದ ವಿಶಿಷ್ಟ ವ್ಯಕ್ತಿ, ವಿ.ಎಸ್.ಎಸ್.ಶಾಸ್ತ್ರಿ ಅವರ ಕ್ರಿಯಾಶೀಲತೆಗೆ ಸಾಕ್ಷಿಯಾದ ‘ ಗಣಿತವನ ‘ ದ ಪರಿಚಯ ಲೇಖನವಿದೆ. ಎಂದಿನಂತೆ, ವಿಜ್ಞಾನಕ್ಕೆ ಸಂಬಂಧಿಸಿದ ಒಗಟುಗಳು ಮತ್ತು ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ.

‘ಸವಿಜ್ಞಾನ ’ ಕ್ಕೆ ನೀವು ಕಳೆದ ಮೂರು ತಿಂಗಳಿನಿಂದ ತೋರಿಸುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆ, ಅಭೂತಪೂರ್ವ. ಮುಂದಿನ ಸಂಚಿಕೆಗಳು ಇನ್ನಷ್ಟು ಕುತೂಹಲಕಾರಿ, ಹಾಗೂ ಸತ್ವಯುತ ಲೇಖನಗಳಿಂದ ಕೂಡಿರುತ್ತದೆ ಎಂಬ ಭರವಸೆ ನಮ್ಮದು. ನಿಮ್ಮ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. 


ಡಾ. ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು 

Thursday, March 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಇದು ‘ಸವಿಜ್ಞಾನ‘ದ ಮೂರನೆಯ ಸಂಚಿಕೆ. ಈ ಹಿಂದಿನ ಎರಡು ಸಂಚಿಕೆಗಳಿಗೆ ನೀವು ಸ್ಪಂದಿಸಿರುವ ರೀತಿ ನಿಜಕ್ಕೂ ಅನನ್ಯ. ವಿಜ್ಞಾನ ಶಿಕ್ಷಕರೇ ಅಲ್ಲದೆ ವಿಜ್ಞಾನಾಸಕ್ತರ ಗಮನವನ್ನೂ ಸೆಳೆಯುವುದರಲ್ಲಿ ‘ಸವಿಜ್ಞಾನ’ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ. ನಿಮ್ಮೆಲ್ಲರ ಮೂಲಕ ‘ಸವಿಜ್ಞಾನ’ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜ್ಞಾನಾಸಕ್ತರನ್ನು ತಲುಪಲಿ ಎಂಬುದು ನಮ್ಮ ಆಶಯ. ನಿಮ್ಮಿಂದ ಬಂದಿರುವ ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಜವಾಬ್ದಾರಿ ನಮ್ಮದು. ಅದರಂತೆ, ಪ್ರಕಟವಾಗುತ್ತಿರುವ ಲೇಖನಗಳು ಮತ್ತು ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ನಮ್ಮ ಶ್ರಮ ಸಾರ್ಥಕ. ನಮ್ಮ ಈ ಪ್ರಯತ್ನವನ್ನು ನೋಡಿ ರಾಜ್ಯದ ಜನಪ್ರಿಯ ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಎಸ್. ಸುರೇಶ್ ಕುಮಾರ್ ಅವರು ಮೆಚ್ಚುಗೆ ಸೂಚಿಸಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಸಿದೆ.

ಮಾರ್ಚ್ ತಿಂಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಎರಡು ಪ್ರಮುಖ ದಿನಾಚರಣೆಗಳಿವೆ. ಮಾರ್ಚ್ 3 ರೆಂದು’ವಿಶ್ವ ವನ್ಯಜಿವಿ ದಿನ” ಹಾಗೂ 22ರಂದು ‘ವಿಶ್ವ ಜಲದಿನ’. ಈ ಸಂಚಿಕೆಯಲ್ಲಿ ಈ ಎರಡು ಪ್ರಮುಖ ಸಂದರ್ಭಗಳಿಗೆ ಸಂಬಂಧಿಸಿದಂತೆ ಲೇಖನಗಳಿವೆ. ಜೊತೆಗೆ, ಬೆಳಕಿನ ಬಗ್ಗೆ ಒಂದು ವಿಶೇಷ ಲೇಖನವೂ ಇದೆ. ವಿಜ್ಞಾನ ಪಾಠಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ಉದ್ದೀಪನಗೊಳಿಸುವ ಬಗ್ಗೆಯೂ ಒಂದು ಲೇಖನ ಇದೆ. ವಿಜ್ಞಾನ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ ಬಗ್ಗೆ ಬೆಳಕು ಚೆಲ್ಲುವ ಲೇಖನವಿದೆ. ಈ ತಿಂಗಳ ವಿಶೇಷವೆಂದರೆ, ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ವಿಜ್ಞಾನ ಮತ್ತು ಗಣಿತ ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿ  ಅದ್ಭುತ ಸಾಧನೆ ಮಾಡಿರುವವರ ಪರಿಚಯವೂ ಇದೆ. ಇವೆಲ್ಲದರ ಜೊತೆಗೆ ನಿಮ್ಮ ಮನಸ್ಸನ್ನು ಹಗುರಾಗಿಸಲು ವ್ಯಂಗ್ಯ ಚಿತ್ರಗಳು ಹಾಗೂ ಮಿದುಳನ್ನು ಚುರುಕಾಗಿಸಲು ಒಗಟುಗಳೂ ಇವೆ.

Thursday, February 4, 2021

ಸಂಪಾದಕರ ಡೈರಿಯಿಂದ

 ಸಂಪಾದಕರ ಡೈರಿಯಿಂದ ..........

ಕಳೆದ ಜನವರಿ 4 ರಂದು ಲೋಕಾರ್ಪಣೆಯಾದ ‘ಸವಿಜ್ಞಾನ’ ಬ್ಲಾಗ್‌ನ ಮೊದಲ ಸಂಚಿಕೆಯನ್ನು ನಮ್ಮ ನಿರೀಕ್ಷೆಗೂ ಮೀರಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡಿದ್ದೀರಿ. ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದೀರಿ. ಕೇವಲ ವಿಜ್ಞಾನ ಶಿಕ್ಷಕರೇ ಅಲ್ಲದೆ, ಅನೇಕ ಮಂದಿ ವಿಜ್ಞಾನಾಸಕ್ತರೂ ನಮ್ಮ ಬ್ಲಾಗ್‌ಗೆ ಭೇಟಿಕೊಟ್ಟು, ಮೆಚ್ಚುಗೆಯ ಮಾತುಗಳ ಜೊತೆಗೆ, ಸಲಹೆ, ಸೂಚನೆಗಳನ್ನೂ ನೀಡಿದ್ದೀರಿ. ನಿಮಗೆಲ್ಲ ನಮ್ಮ ತಂಡದ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳು. ನಿಮ್ಮ ಅಭಿಪ್ರಾಯಗಳಿಂದಾಗಿ ನಮ್ಮ ಶ್ರಮ ಸಾರ್ಥಕವಾಗಿದೆ, ಜೊತೆಗೆ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ಬಂದಿರುವ ಸಲಹೆಗಳನ್ನು ಕ್ರಮೇಣ ಅಳವಡಿಸಿಕೊಂಡು ‘ಸವಿಜ್ಞಾನ’ವನ್ನು ಇನ್ನಷ್ಟು ಆಕರ್ಷಣೀಯವಾಗಿ, ಇನ್ನಷ್ಟು ಉಪಯುಕ್ತವಾಗಿ ರೂಪಿಸುವ ಸಂಕಲ್ಪ ನಮ್ಮದು.

ಈ ಬಾರಿಯ ಸಂಚಿಕೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ದೇಶದ ಇಬ್ಬರು ವಿಜ್ಞಾನಿಗಳ ಬಗ್ಗೆ ಸಾಂದರ್ಭಿಕ ಲೇಖನಗಳನ್ನು ಪ್ರಕಟಿಸಲಾಗಿದೆ. ಫೆಬ್ರವರಿ 28 ರ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಗೆ ಸಂಬಂಧಿಸಿದಂತೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ. ರಾಮನ್ ಅವರ ಬಗ್ಗೆ ಒಂದು ಲೇಖನ ಹಾಗೂ ಸಸ್ಯ ವಿಜ್ಞಾನಿ ಮತ್ತು ವಿಜ್ಞಾನ ಬರಹಗಾರ ಡಾ. ಬಿ.ಜಿ.ಎಲ್.ಸ್ವಾಮಿ ಅವರ 103ನೇ ಜನ್ಮ ದಿನೋತ್ಸವದ (ಫೆಬ್ರುವರಿ 5) ಸಂದರ್ಭದಲ್ಲಿ ಒಂದು ಲೇಖನವಿದೆ. ನಮ್ಮ ಮೊದಲ ಸಂಚಿಕೆಯನ್ನು ಲೋಕಾರ್ಪಣೆ ಮಾಡಿದ ಖ್ಯಾತ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರೊಂದಿಗೆ ನಮ್ಮ ತಂಡ ನಡೆಸಿದ ಸಂದರ್ಶನವೂ ಪ್ರಕಟವಾಗಿದೆ. ಜೊತೆಗೆ, ವಿಜ್ಞಾನ ಶಿಕ್ಷಕರಿಗೆ ಉಪಯುಕ್ತವಾಗಬಲ್ಲ ಹಲವು ಲೇಖನಗಳೂ ಇವೆ. ಎಂದಿನಂತೆ, ಮಿದುಳಿಗೆ ಕಸರತ್ತು ನೀಡುವ ಒಗಟುಗಳು ಹಾಗೂ ಮನಸ್ಸಿಗೆ ಮುದ ನೀಡುವ ವ್ಯಂಗ್ಯಚಿತ್ರಗಳೂ ಇವೆ. ಈ ಸಂಚಿಕೆಯೂ ನಿಮಗೆ ಮೆಚ್ಚುಗೆಯಾಗಬಹುದೆಂಬ ಆಶಯ ನಮ್ಮದು. ಇನ್ನೇಕೆ ತಡ ? ಪುಟಗಳನ್ನು ತೆರೆಯಬಹುದಲ್ಲವೇ ?

ಡಾ. ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು 

Wednesday, January 27, 2021

ಸಂಪಾದಕರ ಡೈರಿಯಿಂದ

 ವಿಜ್ಞಾನ ಶಿಕ್ಷಣ ಇಂದು ಸಂಕ್ರಮಣ ಸ್ಥಿತಿಯಲ್ಲಿದೆ. ಅದರಲ್ಲಿಯೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕಲಿಕೆಯನ್ನು ಆಸಕ್ತಿದಾಯಕವಾಗಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ತರವಾದುದು. ವಿದ್ಯಾರ್ಥಿಗಳ ಮನಸ್ಸನ್ನು ಅವಿಷ್ಕಾರಗಳ ಕಡೆಗೆ ಆಕರ್ಷಿಸುವ ರೀತಿಯ ಬೋಧನೆ ಅವಶ್ಯವಿದೆ. ವಿಜ್ಞಾನದ ಪರಿಕಲ್ಪನೆಗಳನ್ನು ಸರಳವಾಗಿ ಮತ್ತು ಸುಲಲಿತವಾಗಿ ಅವರಿಗೆ ತಲುಪಿಸಬೇಕಿದೆ. ಇದಕ್ಕೆ ಪೂರಕವಾಗಿ ವಿಜ್ಞಾನ ಶಿಕ್ಷಕರಾಗಿ ನಾವು ತಯಾರಾಗಬೇಕಿದೆ. ನಮ್ಮ ಜ್ಞಾನವನ್ನು ಪಠ್ಯಪುಸ್ತಕಗಳಿಗೇ ಸೀಮಿತಗೊಳಿಸಿಕೊಳ್ಳದೆ, ವಿಸ್ತರಿಸಿಕೊಳ್ಳಬೇಕಿದೆ. ಇಂದು ಅಂತರಜಾಲದ ಕೃಪೆಯಿಂದಾಗಿ ಮಾಹಿತಿಗಳಿಗೆ ಕೊರತೆಯಿಲ್ಲ. ಆದರೆ ಅದನ್ನು ಸೂಕ್ತವಾಗಿ ನಾವು ಬಳಸಿಕೊಳ್ಳಬೇಕಿದೆ. ತಂತ್ರಜ್ಞಾನವು ನೀಡಿರುವ ಸಾಧನಗಳನ್ನು ಬಳಸಿಕೊಂಡು ಈ ನಿಟ್ಟಿನಲ್ಲಿ ನೀವುಗಳು ಮಾಡುತ್ತಿರುವ ಪ್ರಯತ್ನಗಳಿಗೆ ಪೂರಕವಾದ ಒಂದು ಪ್ರಯತ್ನವೇ ಈ ‘ಸವಿಜ್ಞಾನ’.

ಶಿಕ್ಷಣ ಕ್ಷೇತ್ರದಲ್ಲಿನ ನನ್ನ ಸೇವೆಯ 50ನೇ ವರ್ಷಕ್ಕೆ 2021ರಲ್ಲಿ ಕಾಲಿಡುತ್ತಿರುವ ಸಂದರ್ಭದಲ್ಲಿ ಪ್ರೌಢಶಾಲಾ ಹಂತದವರೆಗಿನ ವಿಜ್ಞಾನ ಶಿಕ್ಷಕರಿಗೆ, ಮತ್ತು ತನ್ಮೂಲಕ ವಿಜ್ಙಾನದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಕೊಡುಗೆಯನ್ನೇನಾದರೂ ನೀಡಬೇಕೆಂಬ ವಿಚಾರ ನನ್ನಲ್ಲಿ ಮಡುಗಟ್ಟಿತ್ತು. ವಿಜ್ಞಾನ ವಿಷಯಗಳ ಮಂಥನಕ್ಕೆ ಸಂಬಂಧಿಸಿದಂತೆ ಇ-ಪತ್ರಿಕೆಯೊಂದನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿದ್ದೆ. ನನ್ನ ಜೊತೆ ನಿರಂತರ ಸಂಪರ್ಕದಲ್ಲಿರುವ ಕೆಲವು ಉತ್ಸಾಹಿ ವಿಜ್ಞಾನ ಶಿಕ್ಷಕರ ಜೊತೆಗೆ ಸಮಾಲೋಚಿಸಿದಾಗ ಅವರಿಂದ ದೊರೆತ ಸಕಾರಾತ್ಮಕ ಪ್ರತಿಕ್ರಿಯೆ ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ಆ ಶಿಕ್ಷಕರ ತಂಡ ಕೆಲವೇ ದಿನಗಳಲ್ಲಿ ನನ್ನ ಕನಸಿಗೆ ಒಂದು ಮೂರ್ತರೂಪ ಕೊಡುವಲ್ಲಿ ಯಶಸ್ವಿಯಾಯಿತು. ಅದರ ಫಲವೇ ಈಗ ನಿಮ್ಮ ಮುಂದಿರುವ ‘ಸವಿಜ್ಞಾನ’ ಎಂಬ ಬ್ಲಾಗ್.

ಕನ್ನಡ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ಡಾ.ಡಿ.ವಿ.ಗುಂಡಪ್ಪ ತಮ್ಮ ‘ಮಂಕುತಿಮ್ಮನ ಕಗ್ಗ’ ಕೃತಿಯಲ್ಲಿ ಹೇಳಿರುವಂತೆ,
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು |
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ |
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |
ಜಸವು ಜನ ಜೀವನಕೆ ಮಂಕುತಿಮ್ಮ |

ಈ ಮೊದಲ ಸಂಚಿಕೆ ಒಂದು ರೀತಿಯಲ್ಲಿ ಪ್ರಾಯೋಗಿಕ ಸಂಚಿಕೆ. ಈ ಬಾರಿಯ ಸಂಚಿಕೆಯಲ್ಲಿ ಹಲವು ವಿಶಿಷ್ಟ ವಿಷಯಗಳ ಬಗ್ಗೆ ಲೇಖನಗಳಿವೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇಷ್ಟವಾದಲ್ಲಿ ಬೇರೆಯವರಿಗೂ ತಿಳಿಸಿ.

ಸವಿಜ್ಞಾನದ ಮುಂದಿನ ಸಂಚಿಕೆಗಳಲ್ಲಿ ವಿಜ್ಞಾನದ ಕುತೂಹಲಕಾರಿ ಅಂಶಗಳ ಜೊತೆಗೆ, ವಿವಿಧ ವಿಷಯಗಳ ಬಗ್ಗೆ ವಿಚಾರಪೂರಿತ ಲೇಖನಗಳು, ಭಾರತೀಯ ಮತ್ತು ವಿದೇಶಿ ವಿಜ್ಞಾನಿಗಳ ಪರಿಚಯ, ಅವರ ಜೀವನದಲ್ಲಿ ನಡೆದ ಪ್ರೇರಣಾದಾಯಕ ಘಟನೆಗಳು, ಮುಂತಾದ ಹಲವು ಆಯಾಮಗಳ ವೈವಿಧ್ಯಮಯ ಹೂರಣ ಇರಬೇಕೆಂಬುದು ನಮ್ಮ ಆಶಯ. ಸವಿಜ್ಙಾನದ ಮೂಲಕ ಸವಿಯಾದ ಜ್ಞಾನವನ್ನು ಪಸರಿಸುವ ನಮ್ಮ ಈ ವಿಜ್ಞಾನ ಪರಿಚಾರಿಕೆಯ ಕೆಲಸದಲ್ಲಿ ನೀವೂ ಸಹ ಭಾಗವಹಿಸಬಹುದು. ನಿಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಪ್ರೇರೇಪಿಸುವಲ್ಲಿ ‘ಸವಿಜ್ಞಾನ’ ಯಶಸ್ವಿಯಾದರೆ, ನಮ್ಮ ಶ್ರಮ ಸಾರ್ಥಕ.

ಡಾ.ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು