ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, February 4, 2025

ವಿಜ್ಞಾನ ಕಲಿಕೆಯ ಆಗರ SISF - 2025 !!!

ವಿಜ್ಞಾನ ಕಲಿಕೆಯ ಆಗರ  SISF - 2025 !!!

                           ಲೇ:  ರಾಮಚಂದ್ರಭಟ್‌ ಬಿ.ಜಿ. 

        ಪುದುಚೆರಿ ಅಥವಾ ಪಾಂಡಿಚೆರಿ!!!  ತಮಿಳು ಸಂಸ್ಕೃತಿಯನ್ನು ಹಾಸು ಹೊಕ್ಕಾಗಿಸಿಕೊಂಡ ಐತಿಹಾಸಿಕ ಮಹತ್ವವುಳ್ಳ  ಕಡಲ ತೀರದ ಬಂದರು ನಗರ. ಒಂದು ಕಾಲದಲ್ಲಿ ಇದು ಫ್ರೆಂಚರ ಭಾರತೀಯ ವಸಾಹತುವಾಗಿತ್ತು. ಇಂದಿಗೂ ಅದರ ಕುರುಹುಗಳು ಯಥೇಚ್ಛವಾಗಿ ಕಂಡುಬರುತ್ತವೆ. ಇಂದು ಅದು ಭಾರತದ ಕೇಂದ್ರಾಡಳಿತ ಪ್ರದೇಶವಾಗಿದೆ. ಅದೊಂದು ಅಸಾಧಾರಣ ಮೇಳ !! ದಕ್ಷಿಣ ಭಾರತದ ಅನೇಕ ಪ್ರತಿಭೆಗಳ ಸಂಗಮ.  ೬ ರಾಜ್ಯಗಳು . ವೈವಿಧ್ಯಮಯ ವಿಷಯಗಳಲ್ಲಿ ೨೪೦ ವಿಜ್ಞಾನ ಮಾದರಿಗಳ ಪ್ರದರ್ಶನ!!! ಜ್ಞಾನ ತೃಷೆಯುಳ್ಳ ಕಲಿಕಾರ್ಥಿಗಳಿಗೆ ಕಲಿಕೆಗೆ ವಿಫುಲ ಅವಕಾಶ. 



   ಈ  ಬಾರಿಯ ರಾಷ್ಟ್ರ ಮಟ್ಟದ ವಿಜ್ಞಾನ ಮೇಳ- SISF - 2025 ದಲ್ಲಿ ಸ್ಪರ್ಧಾಳುವಾಗಿ ಪಾಲ್ಗೊಳ್ಳುವ ಅವಕಾಶವೊಂದು ಅನಿರೀಕ್ಷಿತವಾಗಿ ಬಂದೊದಗಿತು. ಸಾಮಾನ್ಯವಾಗಿ ತೀರ್ಪುಗಾರ ಅಥವಾ ಜ್ಯೂರಿಯಾಗಿ ಪಾಲ್ಗೊಳ್ಳುತ್ತಿದ್ದ  ನನಗೆ ಮೊದಲ ಬಾರಿಗೆ ಸ್ಫರ್ಧಾಳುವಾಗಿ ಪಾಲ್ಗೊಳ್ಳುವ ಅವಕಾಶ ಅಯಾಚಿತವಾಗಿಯೇ ಬಂದೊದಗಿತ್ತು. ದ‌ಕ್ಷಿಣ ಬಾರತದ  ಐದು ರಾಜ್ಯಗಳಾದ  ಕರ್ನಾಟಕ , ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಶಿಕ್ಷಣ ಇಲಾಖೆಗಳು ಹಾಗೂ ಇಂತಹ ವಿಜ್ಞಾನ ‌ವಸ್ತು ಪ್ರದರ್ಶನಗಳು ಶಿಕ್ಷಕರೇ ಇರಲಿ, ವಿದ್ಯಾರ್ಥಿಗಳೇ ಇರಲಿ ಯಾರಿಗಾದರೂ ಕಲಿಕೆಗೆ ಹೊಸ ಆಲೋಚನೆಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತವೆ.  ಇವು ವೈಜ್ಞಾನಿಕ ಚಿಂತನೆ ಮತ್ತು ಅಭಿಯಾನವನ್ನು ಉತ್ತೇಜಿಸುವ ಉತ್ತಮ ವೇದಿಕೆಯಾಗಿವೆ. ಈ ಪ್ರದರ್ಶನಗಳು ಮಕ್ಕಳಿಗೆ ಜ್ಞಾನವರ್ಧನೆ, ಸಂಶೋಧನೆ, ಹಾಗೂ ಅಭಿವ್ಯಕ್ತಿಯ ಅವಕಾಶಗಳನ್ನು ನೀಡುತ್ತವೆ. ಪ್ರಪಂಚದಲ್ಲಿ ಸಂಭವಿಸುವ ವೈಜ್ಞಾನಿಕ ಪ್ರಗತಿಗಳ ಕುರಿತಾದ ಹೊಸ ದೃಷ್ಟಿಕೋನಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡುತ್ತವೆ. 

  1. ವೈಜ್ಞಾನಿಕ ಚಿಂತನೆಗೆ ಉತ್ತೇಜನ : ವಿಜ್ಞಾನ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ತಿಳಿವಳಿಕೆಯನ್ನು ವಿಸ್ತಾರಗೊಳಿಸಬಹುದು. ಅವರು ಕೈಗೊಳ್ಳುವ ಯೋಜನೆಗಳು ವಿವಿಧ ವೈಜ್ಞಾನಿಕ ತತ್ತ್ವಗಳ ಮೇಲೆ ಆಧಾರಿತವಾಗಿರುತ್ತವೆ ಮತ್ತು ಈ ಮೂಲಕ ಅವುಗಳು ನೈತಿಕ, ಸಾಮಾಜಿಕ, ಹಾಗೂ ತಾಂತ್ರಿಕ ಪರಿಹಾರಗಳನ್ನು ಹುಡುಕಲು ಸಹಾಯ ಮಾಡುತ್ತವೆ.

  2. ಸೃಜನಶೀಲತೆ ಮತ್ತು ಅವಧಾನವನ್ನು ಉತ್ತೇಜಿಸುವುದು : ವಿಜ್ಞಾನ ಪ್ರದರ್ಶನಗಳು ಮಕ್ಕಳು ತಮ್ಮ  ಸೃಜನಶೀಲತೆಯನ್ನು ವಿಸ್ತಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೊಸ ಆವಿಷ್ಕಾರಗಳನ್ನು ಅನ್ವೇಷಿಸುವ ಹಾಗೂ ಯೋಜನೆಗಳನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ. ವೈಜ್ಞಾನಿಕ ಸೃಜನಶೀಲತೆ ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಚಿಂತನೆ ಮತ್ತು ಹೊಸ ಆವಿಷ್ಕಾರಗಳನ್ನು ಹುಟ್ಟುಹಾಕುತ್ತದೆ. 

  3. ಅನುಭವದ ಮೂಲಕ ಅಧ್ಯಯನ : ವೈಜ್ಞಾನಿಕ ಪ್ರದರ್ಶನಗಳು ವೈಜ್ಞಾನಿಕ ಸಿದ್ಧಾಂತಗಳನ್ನು ಅನುಭವದ ಮೂಲಕ ಕಲಿಕೆಗೆ ಒತ್ತು ನೀಡುತ್ತವೆ. ವಿದ್ಯಾರ್ಥಿಗಳು ತಮ್ಮದೇ ಆದ ಯೋಜನೆಗಳನ್ನು ರೂಪಿಸಿ ಮತ್ತು ಸಂಶೋಧನೆ ಮಾಡಿ, ಅದರಲ್ಲಿ ಸಿದ್ಧಾಂತಗಳನ್ನು ಅನುಸರಿಸುವ ಮೂಲಕ ಶಾಸ್ತ್ರೀಯ ವಿಜ್ಞಾನದ ಪಾಠಗಳನ್ನು ನೇರವಾಗಿ ಕಲಿಯಬಹುದು.

  4. ಸಾಮೂಹಿಕ ಕೆಲಸ ಮತ್ತು ಜವಾಬ್ದಾರಿ: ವೈಜ್ಞಾನಿಕ ಪ್ರದರ್ಶನಗಳಲ್ಲಿ ಭಾಗವಹಿಸುವುದು ಸಹಕಾರ ಮತ್ತು ತಂಡದ ಕೆಲಸದ ಮಹತ್ವವನ್ನು ಕಲಿಸುತ್ತದೆ. ತಂಡದೊಂದಿಗೆ ಕೆಲಸ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಕೌಶಲ್ಯಗಳನ್ನು ಮತ್ತು ತಂಡದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬಹುದು.

  5. ಪ್ರಶಸ್ತಿಯನ್ನು ಪಡೆಯುವ ಅವಕಾಶ: ವಿಜ್ಞಾನ ಪ್ರದರ್ಶನಗಳು ಮಕ್ಕಳನ್ನು ಪ್ರಶಂಸಿಸಲು ಮತ್ತು ಉತ್ತೇಜಿಸಲು ಉತ್ತಮ ವೇದಿಕೆಯಾಗಿವೆ. ಸಹಪಾಠಿಗಳು ಮತ್ತು ವರ ಇತರರಿಗೆ ವೈಜ್ಞಾನಿಕ ಜ್ಞಾನವನ್ನು ಪರಿಚಯಿಸುವ ಅವಕಾಶವನ್ನು ನೀಡುತ್ತದೆ. ಇದು ವಿದ್ಯಾರ್ಥಿಗಳಿಗೆ ಮುಂದಿನ ವಿಜ್ಞಾನದಲ್ಲಿ ಅಥವಾ ಇತರೆ ಕ್ಷೇತ್ರಗಳಲ್ಲಿ ಉತ್ತಮ ಗುರಿಗಳನ್ನು ಸಾಧಿಸಲು ಪ್ರೇರಣೆಯಾಗಬಹುದು.

  6.  ಕ್ಷಿಪ್ರ ಬದಲಾವಣೆಯ ಜಗತ್ತಿನಲ್ಲಿ ವೈಜ್ಞಾನಿಕ ಪಥ: ಇಂದಿನ AI ಪ್ರಪಂಚದಲ್ಲಿ  ವೈಜ್ಞಾನಿಕ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ನಿನ್ನೆಯ ತಂತ್ರಜ್ಞಾನ ಇಂದಿಗೆ  ಹಳಸಲು. ಯುವ ಪೀಳಿಗೆಗೆ ಹೊಸ ಕಲಿಕೆಗಳು ಮತ್ತು ಹೊಸ ಆವಿಷ್ಕಾರಗಳನ್ನು ಮಾಡಿದರೆ ಜಗತ್ತಿನಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ. ವಿಜ್ಞಾನ ಪ್ರದರ್ಶನಗಳು ಈ ದಾರಿಯಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತವೆ. 

ಈಗ  SISF - 2025 ರಲ್ಲಿ ಪ್ರಮುಖ ಪ್ರಾತ್ಯಕ್ಷಿಕೆ / ಪ್ರಯೋಗಗಳ ವಿವರ : 
 ಪ್ರಥಮ ಬಹುಮಾನ ಪಡೆದ  ಹಾಸನದ ವಿಜಯ ಶಾಲೆಯ ಮಾದರಿ 


೬ ಪ್ರಾಂತ್ಯಗಳ  ಗುಂಪು ವಿಭಾಗದ ಸ್ಪರ್ಧೆಯಲ್ಲಿ  NCSM ಪ್ರಥಮ ಬಹುಮಾನವು  ಹಾಸನದ ವಿಜಯ ಶಾಲೆಯ ಪಾಲಾಯಿತು.   ಶ್ರೀಮತಿ  ಅನಿತಾ ಜೆ ಯವರ ಮಾರ್ಗದರ್ಶನದಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಗಳಾದ  ವರುಣ್ ಎಚ್ ಎಂ ಮತ್ತು ತ್ರಿಭುವನ್ ಎಸ್ ಗೌಡ ರವರು "ಮ್ಯಾಗ್ನೆಟೋಹೈಡ್ರೋಡೈನಾಮಿಕ್ ಡ್ರೈವ್" ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. 



ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ರಥಮ ಬಹುಮಾನದೊಂದಿಗೆ ಕರ್ನಾಟಕ ಗುಂಪು ಟ್ರೋಫಿ,  ಭೌತಶಾಸ್ತ್ರದ ಅತ್ಯುತ್ತಮ ಪ್ರದರ್ಶನಕ್ಕಾಗಿ ಸರ್. ಸಿ. ವಿ. ರಾಮನ್ ಟ್ರೋಫಿ ದೊರೆಯಿತು. 

ಮ್ಯಾಗ್ನೆಟೋಹೈಡ್ರೊಡೈನಾಮಿಕ್ಸ್ ಡ್ರೈವ್ (MHD ಡ್ರೈವ್)
ಮ್ಯಾಗ್ನೆಟೋಹೈಡ್ರೊಡೈನಾಮಿಕ್ ಪ್ರೊಪಲ್ಷನ್ ಸಿಸ್ಟಮ್ ಎಂದೂ ಕರೆಯಲ್ಪಡುವ ಮ್ಯಾಗ್ನೆಟೋಹೈಡ್ರೊಡೈನಾಮಿಕ್ಸ್ (MHD) ಡ್ರೈವ್, ಇದು ಸಮುದ್ರದ ನೀರು ಅಥವಾ ಪ್ಲಾಸ್ಮಾದಂತಹ ವಾಹಕ ದ್ರವದ ಮೂಲಕ ವಾಹನವನ್ನು ಮುಂದೂಡಲು ವಿದ್ಯುತ್ಕಾಂತೀಯತೆ ಮತ್ತು ದ್ರವ ಡೈನಾಮಿಕ್ಸ್ ತತ್ವಗಳನ್ನು ಬಳಸಿಕೊಳ್ಳುವ ಪ್ರೊಪಲ್ಷನ್‌ನ ಮುಂದುವರಿದ ವಿಧಾನವಾಗಿದೆ.



ವಿದ್ಯಾರ್ಥಿಗಳ ವೈಯಕ್ತಿಕ  ವಿಭಾಗದಿಂದ  ಪ್ರಥಮ ಬಹುಮಾನ ಬೆಂಗಳೂರಿನ ಹೊಸರೋಡ್‌ ನ ಚನ್ನಕೇಶವ ಪಬ್ಲಿಕ್‌ ಶಾಲೆಯ ೮ನೆ ತರಗತಿಯ ಪಾಂಡುರಂಗನ ಪಾಲಾಯಿತು. 


ಈ ವಿದ್ಯಾರ್ಥಿಯು ಮೆಕ್ಯಾನಿಕಲ್‌ ಜನರೇಟರ್‌ ಎಂಬ ಮಾದರಿಯನ್ನು ಪ್ರದರ್ಶಿಸಿದ. ಯಾಂತ್ರಿಕವಾಗಿ ಉತ್ಪಾದಿತ ಶಕ್ತಿ, ಎಸಿ ಮೋಟರ್ ಬಳಸಿ ಪರ್ಯಾಯ ವಿದ್ಯುತ್ ಉತ್ಪತ್ತಿ ಮಾಡುತ್ತದೆ. 

ಅನ್ವಯ: ಈ ಸಾಧನದಿಂದ ಉತ್ಪತ್ತಿಯಾಗುವ ವಿದ್ಯುತ್ ಬಲ್ಬ್, ಮೊಬೈಲ್ ಫೋನ್ ಮುಂತಾದ ಉಪಕರಣಗಳನ್ನು ಚಲಾಯಿಸಲು ಬಳಸಬಹುದು. ಉಳಿತಾಯಗೊಂಡ ಶಕ್ತಿಯನ್ನು ಬ್ಯಾಟರಿಯಲ್ಲಿ ಸಂಗ್ರಹಿಸಬಹುದು ಅಥವಾ ಪವರ್ ಬ್ಯಾಂಕ್‌ಗೆ ಹಿಂತಿರುಗಿಸಬಹುದು. 

ಶಿಕ್ಷಕ ಜೋಷುವಾ ಮಾರ್ಗದರ್ಶನದಲ್ಲಿ ಈ ಮಾದರಿಯನ್ನು ಸಿದ್ಧಪಡಿಸಿ ಪ್ರದರ್ಶಿಸಲಾಯಿತು. 







SISF 2025 ವಿಜ್ಞಾನ ಮೇಳದಲ್ಲಿ ಶಿಕ್ಷಕರ ವಿಭಾಗದಿಂದ ನನ್ನ "ಗ್ರೀನ್ ಕೆಮಿಸ್ಟ್ರಿ - ಮೈಕ್ರೋಸ್ಕೇಲ್ ಎಕ್ಸ್‌ಪರಿಮೆಂಟ್ಸ್" ಪ್ರದರ್ಶನವು ಪ್ರಥಮ ಬಹುಮಾನ ಹಾಗೂ ಬೆಸ್ಟ್ ಎಗ್ಸಿಬಿಟ್ ಗೆ ಆಯ್ಕೆಯಾಗಿ ಕರ್ನಾಟಕ ಟ್ರೋಫಿ ಗೆ ಪಾತ್ರವಾಯಿತು. 

ಪಾಂಡಿಚೆರಿಯಲ್ಲಿ ಕರ್ನಾಟಕ ತಂಡದ ಉಸ್ತುವಾರಿಯಾಗಿದ್ದ ಹಾಗೂ VITM ಬೆಂಗಳೂರು ಅಧಿಕಾರಿ ವರ್ಗದವರೊಂದಿಗೆ ಲೇಖಕರು 

ಈ ಪ್ರಯೋಗ ವಿಧಾನದಲ್ಲಿ ಒಂದೊಂದು ಹನಿ ರಾಸಾಯನಿಕಗಳನ್ನು ಮಾತ್ರ ಬಳಸಿ, ಯಾವುದೇ ಪ್ರನಾಳ (ಟೆಸ್ಟ್ ಟ್ಯೂಬ್, ಬೀಕರ್) ಬಳಕೆ ಇಲ್ಲದೆ, ಲ್ಯಾಮಿನೇಟೆಡ್ ಶೀಟ್ಸ್ ಮೂಲಕ ಹತ್ತನೆಯ ತರಗತಿ ವಿಜ್ಞಾನ ಪಠ್ಯಾಂಶಕ್ಕೆ ಸಂಬಂಧಿಸಿದ 40 ಕ್ಕೂ ಹೆಚ್ಚು ಪ್ರಯೋಗಗಳನ್ನು ಪ್ರದರ್ಶಿಸಲಾಯಿತು. 

ಈ ನವೀನ ವಿಧಾನದಿಂದ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದಲ್ಲಿ  ರಾಸಾಯನಿಕ ಪ್ರಯೋಗಗಳ  ಪ್ರತ್ಯಕ್ಷ ಅನುಭವಪಡೆಯಲು ಅನುಕೂಲವಾಗುತ್ತದೆ.

           ಲೇಖಕರು ಬಳಸಿದ ಸೂಕ್ಷ್ಮ ಪ್ರಮಾಣದ ರಸಾಯನಶಾಸ್ತ್ರ ಪ್ರಯೋಗದಲ್ಲಿ ಬಳಸಿದ ಸಾಮಗ್ರಿಗಳ ಪ್ರದರ್ಶನ   

ಕಡಿಮೆ ಪ್ರಮಾಣದ ವಸ್ತುಗಳನ್ನು ಬಳಸಿ ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಇದು ನೂತನ ಪ್ರಯತ್ನವಾಗಿದ್ದು, ಭವಿಷ್ಯದ ವಿಜ್ಞಾನ ಶಿಕ್ಷಣಕ್ಕೆ ಪ್ರೇರಣೆಯಾಗಿದೆ. ಮೈಕ್ರೋಸ್ಕೇಲ್ ಪ್ರಯೋಗ ವಿಧಾನವು ಪದಾರ್ಥಗಳ ಬಳಕೆಯನ್ನು ತಗ್ಗಿಸಿ, ಅಪಾಯವನ್ನು ಕಡಿಮೆ ಮಾಡುತ್ತಾ, ವಿದ್ಯಾರ್ಥಿಗಳ ವೈಜ್ಞಾನಿಕ ಕುತೂಹಲವನ್ನು ಹೆಚ್ಚಿಸುತ್ತದೆ.


ಶಿಕ್ಷಕರ ವಿಭಾಗದ ದ್ವಿತೀಯ ಬಹುಮಾನವು 
ಶ್ರೀ ಅನಿಲ್‌ ಗಾಂವ್ಕರ್‌ ರವರ ಪಾಲಾಯಿತು. 

  ಸತತವಾಗಿ ಏಳನೇ ಬಾರಿಗೆ ರಾಷ್ಟ್ರಮಟ್ಟದ ಸೈನ್ಸ್‌ ಫೇರ್‌ನಲ್ಲಿ ಪಾಲ್ಗೊಳ್ಳುತ್ತಿರುವ  ಶ್ರೀ ಅನಿಲ್‌ ಗಾಂವ್ಕರ್‌ ರವರು ಭೌತಶಾಸ್ತ್ರದ ಬೆಳಕು ಮತ್ತು ವಿದ್ಯುಚ್ಛಕ್ತಿ ಕುರಿತ ಮಾದರಿಗಳನ್ನು ಪ್ರದರ್ಶಿಸಿದರು.  ‌
ಮೊದಲನೇ ಮಾದರಿಯಲ್ಲಿ ಶಬ್ದಕ್ಕೆ ಸಂಬಂಧಪಟ್ಟ  ನೀಳ ತರಂಗವನ್ನು ತಯಾರಿಸುವ ಮಾದರಿಯಾದರೆ, ಎರಡನೆಯ  ಮಾದರಿಯು ಸಂವೇಗ ಸಂರಕ್ಷಣಾ ತತ್ವಕ್ಕೆ ಸಂಬಂಧಪಟ್ಟದ್ದು. ಮೂರನೇ ಮಾದರಿಯು ವಿದ್ಯುತ್ ಕಾಂತವನ್ನು ರಿಲೆಯಲ್ಲಿ ಹೇಗೆ ಬೆಳೆಸಬಹುದು ಎನ್ನುವುದಕ್ಕೆ ಸಂಬಂಧಿಸಿದೆ. 





ಕರ್ನಾಟಕದಿಂದ ತೃತೀಯ ಬಹುಮಾನ ಪಡೆದ ಚಿತ್ರದುರ್ಗದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ


ವಿದ್ಯಾರ್ಥಿಗಳ ಗುಂಪು ವಿಭಾಗದಲ್ಲಿ ಚಿತ್ರದುರ್ಗದ  ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಆಶಾರವರ ಮಾರ್ಗದರ್ಶನದಲ್ಲಿ  9ನೇ ತರಗತಿಯ  ವಿದ್ಯಾರ್ಥಿಗಳಾದ ಹರ್ಷವರ್ಧನ್ ಮತ್ತು ಜಾಗೃತ್  ರವರು ಪ್ರದರ್ಶಿಸಿದ ವರ್ಷ ವರ್ಸಟೈಲ್ ಅಂಡ್ ಮಾಡ್ರನ್ ಬುಲ್ಲಕ್ ಕಾರ್ಟ್ ಎಂಬ ಪ್ರಾತ್ಯಕ್ಷಿಕೆಗೆ ದೊರೆಯಿತು.  

ಈ ಮಾದರಿಯು ರೈತರ ಸ್ವಾವಲಂಬಿ ಬದುಕನ್ನು ಸುಗಮಗೊಳಿಸುವ ಮಾದರಿಯಾಗಿದೆ. ಈ ಮಾದರಿಯಲ್ಲಿ ವೈಜ್ಞಾನಿಕ ಅಂಶಗಳನ್ನು ಅಳವಡಿಸಿದ್ದು‌,  ಸಾಮಾನ್ಯ ರೈತನು ಸುಲಭವಾಗಿ ಬಳಸುವಂತೆ ಮಾಡಲಾಗಿದೆ.  ಈ ಯೊಜನೆಯು ಬಹುಪಯೋಗಿಯಾಗಿದ್ದು, ರೈತರು ಹಾಗು ಹಸುಗಳ ಸಂರಕ್ಷಣೆಗೆ ಸಹಕಾರಿಯಾಗಿದೆ. ಈ ಯೋಜನೆಯಲ್ಲಿ ಸೋಲಾರ್ ಸೆಲ್, ಮೋಟರ್, ದರ್ಪಣದ ಉಪಯೋಗದಿಂದ ಯಾರಾದರೂ ಸಹ ಎತ್ತಿನ ಗಾಡಿಯನ್ನು ದಿನಬಳಕೆಗೆ ಉಪಯೋಗಿಸಬಹುದು. 

೫ ದಿನಗಳ ಕಾಲ ಬೆಳಗ್ಗೆ ೯.೩೦ ರಿಂದ ೫ ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆದಿಡಲಾಗಿತ್ತು. ಅನೇಕ ಅನುಭವಿ ಸ್ಪರ್ಧಿಗಳು  ಅಭಿಪ್ರಾಯ ಪಟ್ಟಂತೆ  ಇದೇ ಮೊದಲ ಬಾರಿಗೆ ಪ್ರತಿಯೊಬ್ಬ ಸ್ಪರ್ಧಿಗೂ ವೈಯಕ್ತಿಕ ಸ್ಟಾಲ್‌ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆಂದೇ ಬಂದರಿನ ಸಮೀಪದ ಕಡಲ ಕಿನಾರೆಯಲ್ಲಿ   ಪಾಂಡಿಚೆರಿಯ ಶಾಲಾ ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ಭೆಟಿ ನೀಡಿದರು. ೬ ರಾಜ್ಯಗಳ ವಿಶ್ವವಿದ್ಯಾಲಯಗಳ ಪ್ರೆಫೆಸರ್‌ ಗಳು ತೀರ್ಪುಗಾರರಾಗಿ ಸುಮಾರು ೨೪೦ ಮಾದರಿಗಳನ್ನು ಈ ಅವಧಿಯಲ್ಲಿ ಮೌಲ್ಯಮಾಪನ ಮಾಡಿದರು. ಇದು ತಾಳ್ಮೆ ಬೇಡುವ ಮಹಾನ್‌ ಕಾರ್ಯವೇ ಸರಿ. ಪ್ರತಿಯೊಬ್ಬ ಸ್ಪರ್ಧಿಗೂ ೩-೫ ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿತ್ತು. ಈ ಕಿರು ಅವಧಿಯಲ್ಲಿ ತೀರ್ಪುಗಾರರ ಮನ ಗೆಲ್ಲುವಂತೆ  ತಮ್ಮ ಮಾದರಿ ಅಥವಾ ಪ್ರಯೋಗದ ಸಂಕ್ಷಿಪ್ತ ವಿವರಣೆಯನ್ನು  ನೀಡುವ ಸವಾಲು ಸ್ಪರ್ಧಿಗಳಿಗಿತ್ತು. 

ಪ್ರತಿಯೊಂದನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ನಾವು ಪಾಂಡಿಚೆರಿಗೆ ಬಂದಿಳಿಯುವ ಮೊದಲೇ ಎಷ್ಟು ಗಂಟೆಗೆ ಬರುತ್ತೀರಿ ಎಂದು ಕರೆ ಮಾಡಿ ಕೇಳುವ ಸೌಜನ್ಯ , ಎಷ್ಟು ಗಂಟೆಗಾದರೂ ಬನ್ನಿ . ನಿಮಗೆ ಬೇಕಾದ ವ್ಯವಸ್ಥೆ ಮಾಡುತ್ತೇವೆ ಎನ್ನುವ ಪ್ರೀತಿಯ ಮಾತುಗಳು ಅನುಕರಣಯೋಗ್ಯ.  ಪ್ರಿತಿಯೊಬ್ಬರಿಗೂ ಇರಲು ಲಾಡ್ಜ್‌ ವ್ಯವಸ್ಥೆ ಮಾಡಲಾಗಿತ್ತು. ಲಾಡ್ಜ್‌ ನಿಂದ ಮೇಳದ ಸ್ಥಳಕ್ಕೆ ಕರೆದೊಯ್ಯುವ ಮತ್ತು ಕರೆ ತರುವ ವ್ಯವಸ್ಥೆಗಳು .  ಅಚ್ಚುಕಟಾದ ಸಮಯ ಪಾಲನೆ, ವಿವಿಧ ಸಮಿತಿಗಳು ಹೊಂದಾಣಿಕೆ ಮಾಡಿಕೊಂಡು ನಡೆಸಿದ ವಿವಿಧ ಚಟುವಟಿಕೆಗಳು,  ಉತ್ತಮ ಊಟ , ಉಪಹಾರಗಳ ವ್ಯವಸ್ಥೆ , ಉತ್ತಮ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ , ಶುಚಿತ್ವ, ನೀರಿನ ವ್ಯವಸ್ಥೆಗಳು,  ವಿವಿಧ ತಂಡಗಳನ್ನು ಸುತ್ತಮುತ್ತಲಿನ ಪ್ರದೇಶಗಳಿಗೆ ಕರೆದೊಯ್ಯುವ ವ್ಯವಸ್ಥೆ, ಗದ್ದಲವಾಗದಂತೆ ನಿಯಂತ್ರಣ ಮೊದಲಾದವು ಪ್ರತಿಯೋರ್ವರೂ ಕಲಿಯಬೇಕಾದ ಗುಣಗಳೇ. ಇದಕ್ಕಾಗಿ ಪುದುಚೆರಿಯಲ್ಲಿ ಬೃಹತ್‌ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸರ್ಕಾರ, ಅಧಿಕಾರಿ ಮತ್ತು ಇಲಾಖಾ ವೃಂದಕ್ಕೆ ಹೃತ್ಪೂರ್ವಕವಾಗಿ  ಅಭಿನಂದಿಸಲೇ ಬೇಕು. 






ಪ್ರತಿದಿನದ ಕೊನೆಯಲ್ಲಿ ಎಲ್ಲಾ ರಾಜ್ಯಗಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಆಯಾ ಪ್ರಾಂತ್ಯಗಳ ವಿವಿಧ ಕಲೆಗಳ ಪ್ರದರ್ಶನ ಚೇತೋಹಾರಿಯಾಗಿತ್ತು. ಸಾಂಸ್ಕೃತಿಕ ಸಂಜೆಯ ಜೊತೆಗೆ ನಾವೆಲ್ಲರೂ ಸುತ್ತುಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡಿದೆವು. ಸಂಜೆಯ ಕಡಲ ಕಿನಾರೆ, ಸೂರ್ಯ ಮುಳುಗುವ ಮತ್ತು ಏಳುವ ಅದ್ಭುತ ದೃಶ್ಯಗಳು ಹೃನ್ಮನಗಳನ್ನು ತಣಿಸಿದವು. 


   SISF - 2025 - ವಿಜ್ಞಾನ ಮೇಳವು ವಿಜ್ಞಾನ ಕಲಿಕೆಯ ಆಗರವಾಗಿ ಎಲ್ಲರ ಮನಸೂರೆಗೊಂಡಿತು. ಕಲಿಕೆಯ ಹೊಸ ದಿಗುವಿನತ್ತ ನಮ್ಮನ್ನು ಕರೆದೊಯ್ದು ಮನಸ್ಸಿಗೆ ಮುದ ನೀಡಿತು. 

ಅರಿವಳಿಕೆಯ ಕಥೆ

 

ಅರಿವಳಿಕೆಯ ಕಥೆ 

                    

ಲೇಖಕರು :  ಡಾ|| ಎಂ.ಜೆ.  ಸುಂದರ್‌ರಾಮ್

 ನಿವೃತ್ತ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕರು 



ನೈಟ್ರಸ್ ಆಕ್ಸೈಡ್ ಅನಿಲವನ್ನು ನಗೆಯನಿಲವೆಂದು ಕರೆಯುತ್ತಾರೆ. 1775 ರಲ್ಲಿ ಜೋಸೆಫ್‌ ಪ್ರೀಸ್ಟ್ಲಿ (Joseph Priestley) ಎಂಬ ವಿಜ್ಞಾನಿ ಇದನ್ನು ಕಂಡುಹಿಡಿದರು. ಇದು ಬಣ್ಣವಿಲ್ಲದ, ಸಿಹಿ ವಾಸನೆಯ ಅನಿಲ. ಇದನ್ನು ಸೇದಿದರೆ ತಲೆಸುತ್ತಿ, ಗಾಳಿಯಲ್ಲಿ ತೇಲಾಡುತ್ತಿರುವ ಅನುಭವವಾಗುತ್ತದೆ; ಆತಂಕವನ್ನು ನಿವಾರಿಸಿ, ನೋವನ್ನು ಶಮನಗೊಳಿಸುತ್ತದೆ.

ಡೇವಿ ಎಂಬ ವಿಜ್ಞಾನಿ ನೈಟ್ರಸ್ ಆಕ್ಸೈಡ್‌ನಲ್ಲಿರುವ ಅರಿವಳಿಕೆ ಗುಣವನ್ನು ಗುರುತಿಸಿ, ‘ಇದು ದೈಹಿಕ ನೋವನ್ನು ಶಮನಗೊಳಿಸಬಲ್ಲದೆಂದು ಕಂಡುಬರುವುದರಿದ ಇದನ್ನು ಕನಿಷ್ಠ ರಕ್ತಸ್ರಾವವಾಗುವ ಶಸ್ತ್ರಚಿಕಿತ್ಸೆಗಳಲ್ಲಿ ಅನುಕೂಲಕರವಾಗಿ ಉಪಯೋಗಿಸಬಹುದು’ ಎಂದು ತಿಳಿಸಿದ್ದರು. ಆದರೆ ವೈದ್ಯರು, ನೋವಿನ ಅನುಭವವಾದರೆ ರೋಗಿಗೆ ಒಳ್ಳೆಯದೇ ಆಗುವುದೆಂದು ಸಮಾಧಾನ ಹೇಳುತ್ತಿದ್ದರು. ರೋಗದಿಂದ ನರಳುತ್ತಿರುವ ರೋಗಿಯ ಚೀತ್ಕಾರದಿಂದ ವೈದ್ಯರು ಉತ್ತೇಜಿತರಾಗಿ, ಸ್ತ್ರಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಯೂ, ಅತಿ ಶೀಘ್ರವಾಗಿಯೂ, ಯಶಸ್ವಿಯಾಗಿಯೂ ನಡೆಸುವರೆಂದೂ, ರೋಗಿಯೂ ಬಲುಬೇಗ ಗುಣಮುಖನಾಗುವನೆಂದೂ ಅಭಿಪ್ರಾಯ ಪಡುತ್ತಿದ್ದರು. ನೋವು ದೇವರು ಕೆಟ್ಟವರಿಗೆ ಕರುಣಿಸಿದ ಶಿಕ್ಷೆಯೆಂದೂ, ಹೆರಿಗೆಯ ನೋವು ದೈವಿಕ ಅನುಭವವೆಂದೂ, ತಾಯ್ತನದ ತ್ಯಾಗಸೂಚಕವೆಂದೂ ವೈದ್ಯರು ತಮ್ಮ ರೋಗಿಗಳಿಗೆ ಬೋಧಿಸುತ್ತಿದ್ದರು.

 

ಅಂದಿನ ಶಸ್ತ್ರಚಿಕಿತ್ಸೆಯ ಒಂದು ಚಿತ್ರಣ ಇಲ್ಲಿದೆ: ಇಂಗ್ಲೆಡಿನ ಚೆಲುವೆ, ಹೆಸರಾಂತ ಕಾದಂಬರಿಗಾರ್ತಿ ಫೇನಿ ಬರ್ನಿ (Fanny Burney)  ಯವರ ದಾರುಣ ಅನುವ ಅಂದಿನ ವೈದ್ಯಕೀಯ ಪದ್ಧತಿಯನ್ನು ಮತ್ತು ರೋಗಿಗಳ ಬವಣೆಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತದೆ. 1810ರಲ್ಲಿ ಈಕೆಯ ಸ್ತನದಲ್ಲಿ ನೋವು ಕಾಣಿಸಿಕೊಂಡಿತು. ಇವಳ ಪತಿ ಈಕೆಯನ್ನು ಫ್ರಾನ್ಸ್‌ನ ಅತ್ಯಂತ ಹೆಸರಾಂತ ಮತ್ತು ಗೌರವಸ್ಥ ವೈದ್ಯರೊಬ್ಬರ ಬಳಿಗೆ ಚಿಕಿತ್ಸೆಗಾಗಿ ಕರೆದೊಯ್ದರು. ಏಳು ವೈದ್ಯರನ್ನೊಳ ಗೊಂಡ ವೈದ್ಯತಂಡವು ಬರ್ನಿಯನ್ನು ಪರೀಕ್ಷಿಸಿ, ಈಕೆಯ ಸ್ತನವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಬೇಕೆಂದು ತೀರ್ಮಾನಿಸಿತು. ಶಸ್ತ್ರಚಿಕಿತ್ಸೆಯನ್ನು ಪ್ಯಾರಿಸ್‌ನಲ್ಲಿಯ ಬರ್ನಿಯವರ ಸ್ವಗೃಹದಲ್ಲೇ ಮಾಡಲಾಯಿತು. ಅರಿವಳಿಕೆಯಿಲ್ಲದೆ ನಡೆಸಿದ ಈ ಶಸ್ತ್ರಚಿಕಿತ್ಸೆಯು ಒಂದು ರಣರಂಗವೇ ಆಗಿಬಿಟ್ಟಿತು.

ನೀವು ಮಗುವನ್ನು ಹೆತ್ತಾಗ ನೋವಿನಿಂದ ನರಳಿ ಚೀತ್ಕರಿಸಿದಿರಾ?’ ಎಂದು ವೈದ್ಯರು ಬರ್ನಿಯವರನ್ನು ಪ್ರಶ್ನಿಸಿದಾಗ ಆಕೆ ‘ಹೌದು’ ಎಂದು ಉತ್ತರಿಸಿದರು. , ಹಾಗಾದರೆ, ನಿಮಗೆ ಈಗಲೂ ಒಳ್ಳೆಯದೇ ಆಗುತ್ತದೆ. ಈಗ ನಾವು ಮಾಡುವ ಶಸ್ತ್ರಚಿಕಿತ್ಸೆಯಲ್ಲೂ ನೀವು ಹಾಗೆಯೇ ನೋವಿನಿಂದ ಚೀತ್ಕರಿಸಬಹುದು ಎಂದು ವೈದ್ಯರು ಬರ್ನಿಯವರಿಗೆ ‘ಧೈರ್ಯ’ ತುಂಬಿ, ತಮ್ಮ ಕಟುಕತನವನ್ನು ಪ್ರಾರಂಭಿಸಿದರತೆ! ಬರ್ನಿಯ ಈ ಶಸ್ತ್ರಚಿಕಿತ್ಸೆಯ ಬಹುತೇಕ ಸಮಯ ಅವರು ಭಯಂಕರವಾಗಿ ಗೋಳಾಡಿ, ಚೀತ್ಕರಿಸಿ, ಎರಡು ಸಲ ಮೂರ್ಛಿತಳಾಗಿ ಬದುಕಿ ಬಂದರು!!. ಗುಣಮುಖರಾದ ನಂತರ 20 ವರ್ಷಗಳ ವರೆಗೆ ಬರ್ನಿ ಬದುಕಿದ್ದರಂತೆ. ಇಂತಹ ಆಘಾತಕಾರಿ, ಘೋರ ಮತ್ತು ಅಮಾನವೀಯ ಶಸ್ತ್ರಚಿಕಿತ್ಸಾ ಕಾಲದಲ್ಲಿ ನೈಟ್ರಸ್ ಆಕ್ಸೈಡ್‌ ಕಿಟ್‌ಗಳನ್ನು ಜನ ತಮ್ಮೊಂದಿಗಿಟ್ಟುಕೊಡು, ಆಗಾಗ ಅದನ್ನು ಸೇದಿ ಖುಷಿಪಡುತ್ತಿದ್ದರೂ, ಅದರ ಅರಿವಳಿಕೆಯ ಗುಣ ಯಾರ‍್ಯಾರಿಗೂ ಗೊತ್ತೇ ಇರಲಿಲ್ಲ.

ಡೇವಿಯ ಹೇಳಿಕೆಯನ್ನು ಗುರುತಿಸಲು ಮತ್ತು ಶಸ್ತ್ರಚಿಕಿತ್ಸೆಯ ಕಾಲದಲ್ಲಿ ನೋವಿನಿಂದ ನರಳುವುದು ಒಳ್ಳೆಯದಲ್ಲವೆಂದು ಮನವರಿಕೆಯಾಗಲು ಸಮುದಾಯಕ್ಕೆ ಸುಮಾರು ನಲವತ್ತು ವರ್ಷಗಳು ಬೇಕಾಯಿತು. ಈ ಅರಿವು ಮೂಡಿದ್ದು ಅಮೆರಿಕದಲ್ಲಿ. ಅಲ್ಲಿಯ ಕೆಲವು ವೈದ್ಯರು ಈಥರ್ ದ್ರಾವಣವನ್ನು ಅರಿವಳಿಕೆಯಾಗಿ ಬಳಸಲಾರಂಭಿಸಿದರು.

1844ನೆಯ ಡಿಸಂಬರ್ 10ನೇ ತಾರೀಖಿನ ಸಂಜೆ, ಗಾರ್ಡ್ನರ್ ಕ್ವಿನ್ಸಿ ಕೋಲ್ಟನ್ (Gardner Quincy Colton) ಎಂಬ ರಸಾಯನಗಾರ (Chemist)  ನಗೆಯನಿಲದ ಬಗ್ಗೆ ಒಂದು ಉಪನ್ಯಾಸವನ್ನು ಯೋಜಿಸಿ, ಅದರ ಪ್ರದರ್ಶನವನ್ನು ಏರ್ಪಡಿಸಿದ್ದರು. ಹಾರ್ಟ್ಫೋರ್ಡ್‌ ನಗರದ ಹೊರೇಸ್ ವೆಲ್ಸ್ (Horace Wells) ಎಂಬ ದಂತವೈದ್ಯ ತಮ್ಮ ಪತ್ನಿ ಎಲಿಜಬೆತ್‌ಳೊಡನೆ ಈ ವಿನೋದ ಪ್ರದರ್ಶನವನ್ನು ವೀಕ್ಷಿಸಲು ಅಗಮಿಸಿದ್ದರು. ಪ್ರದರ್ಶನದ ಮಧ್ಯೆ, ನೈಟ್ರಸ್ ಆಕ್ಸೈಡನ್ನು ಸೇದಿ, ಅದರ ಆನಂದವನ್ನನುಭವಿಸುವತೆ ಕೋಲ್ಟನ್ ಪ್ರೇಕ್ಷಕರನ್ನು ಆಹ್ವಾನಿಸುತ್ತಿದ್ದರು. ಹೊರೇಸ್‌ರ ಪಕ್ಕದಲ್ಲಿ ಕುಳಿತಿದ್ದ ಸ್ಯಾಮುಯಲ್ ಕೂಲಿ ಎಂಬ ಗುಮಾಸ್ತ ಕೋಲ್ಟನ್‌ರ ಆಹ್ವಾನವನ್ನು ಸ್ವೀಕರಿಸಿ, ವೇದಿಕೆಯೇರಿ ನೈಟ್ರಸ್ ಆಕ್ಸೈಡ್‌ ನ್ನು ಸೇದಿದ. ಕೂಡಲೇ ಅವನಿಗೆ ಅಮಲೇರಿತು. ತಲೆ ತಿರುಗಲಾರಂಭಿಸಿ, ವೇದಿಕೆಯ ಮೇಲೆಲ್ಲ ಕೋತಿಯಂತೆ ಮನಬಂದತೆ ಕುಣಿಯತೊಗಿದ. ಹೀಗೆ ಹತೋಟಿ ಮೀರಿ ಕುಣಿವಾಗ ಅವನ ಕಾಲು ಅಲ್ಲಿದ್ದ ಮರದ ಮೇಜಿಗೆ ಬಡಿದು, ಕಾಲಿನಿಂದ ಧಾರಾಕಾವಾಗಿ ರಕ್ತ ಸ್ರಾವವಾಗತೊಡಗಿತು. ಆದರೆ ಕೂಲಿಗೆ ಅದರ ಪರಿವೆಯೇ ಇರಲಿಲ್ಲ. ಏನೂ ಆಗದವನಂತೆ ಕುಣಿಯುತ್ತಲೇ ಇದ್ದ. ಜೊತೆಗಿದ್ದವರು ಅವನಲ್ಲಿಗೆ ಬಂದು ರಕ್ತ ಸೋರುತ್ತಿರುವುದನ್ನು ಅವನಿಗೆ ತಿಳಿಸಿದಾಗಲಷ್ಟೇ ಅವನಿಗೆ ಅದರ ಅರಿವಾಯಿತು. ಇವೆಲ್ಲವನ್ನೂ ಕುತೂಹಲದಿಂದ ನೋಡುತ್ತ ಕುಳಿತಿದ್ದ ವೆಲ್ಸ್ಗೆ ಸೆರೆಂಡಿಪಿಟಿಯ ಬಾಣ ಎಲ್ಲಿಂದಲೋ ತೂರಿಬಂದು ಅವರನ್ನು ತಾಗಿತು. ಇದ್ದಕ್ಕಿದ್ದಂತೆ ವೆಲ್ಸ್ರ ತಲೆಯಲ್ಲಿ ಹೊಸ ವಿಚಾರವೊಂದು ಮಿಂಚಿನತೆ ಹಾದು ಹೋಯಿತು. ಹುಳುಕಾಗಿದ್ದ ತನ್ನ ಮೂರನೇ ದವಡೆಹಲ್ಲನ್ನು ಕೀಳಿಸಲು ವೆಲ್ಸ್ ಬಹಳ ದಿನಗಳಿಂದ ಹಿಂದೇಟು ಹಾಕುತ್ತಿದ್ದರು. ಅಂದು ಅರಿವಳಿಕೆ ಇಲ್ಲದೆಯೇ ದಂತವೈದ್ಯರು ಹುಳುಕು ಹಲ್ಲುಗಳನ್ನು ಸ್ವಲ್ಪವೂ ಕನಿಕರ ತೋರದೆ, ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯುತ್ತಿದ್ದರು. ಇಂತಹ ಶಸ್ತ್ರಚಿಕಿತ್ಸೆಯ ಘೋರತೆಯನ್ನರಿತಿದ್ದ ರೋಗಿಗಳು, ಇಂತಹ ರಾಕ್ಷಸೀ ಶಸ್ತ್ರಚಿಕಿತ್ಸೆಗಿಂತ ನೋವನ್ನು ನುಂಗಿಕೊಡು ಬದುಕುವುದೇ ಲೇಸೆಂದು ನಿಶ್ಚಯಿಸಿ, ತಮ್ಮ ಹುಳುಕು ಹಲ್ಲುಗಳನ್ನು ಕೀಳಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಸ್ವತಃ ದಂತವೈದ್ಯರಾಗಿದ್ದ ವೆಲ್ಸ್ ಕೂಡ ಅನೇಕರಿಗೆ ಇಂತಹ ಭಯಾನಕ ಕೃತ್ಯಗಳನ್ನೆಸಗಿದ್ದರು.

ನೈಟ್ರಸ್ ಆಕ್ಸೈಡ್‌ನ್ನು ಅತಿಯಾಗಿ ಸೇದಿದರೆ ನೋವಿನ ಅನುಭವವಾಗುವುದಿಲ್ಲವೆಂಬ ಸೂಕ್ಷ್ಮತೆಯನ್ನರಿತ ವೆಲ್ಸ್ ತಮ್ಮನ್ನೇ ಬಲಿಪಶುವಾಗಿಸಿ ಕೊಂಡು ಪರೀಕ್ಷೆಗೊಳಗಾಗಲು ಮುಂದಾದರು. ಅಧಿಕ ಪ್ರಮಾಣದಲ್ಲಿ ನೈಟ್ರಸ್ ಆಕ್ಸೈಡ್ ಅನಿಲವನ್ನು ಸೇದಿ, ನೋವನ್ನು ಅನುಭವಿಸದೆ ತಮ್ಮ ಹುಳುಕು ಹಲ್ಲನ್ನು ಮತ್ತೊಬ್ಬ ದಂತವೈದ್ಯರಿದ ಯಶಸ್ವಿಯಾಗಿ ಕೀಳಿಸಿಕೊಂಡರು. ನಗೆಯನಿಲದ ಅಪ್ರಭಾವದಿಂದ ಚೇತರಿಸಿಕೊಂಡ ವೆಲ್ಸ್ ‘ಹಲ್ಲು ಕೀಳುವುದರಲ್ಲಿ ಹೊಸ ಯುಗವೇ ಪ್ರಾರಂಭವಾಗಿದೆ’ ಎಂದು ಘೋಷಿಸಿದರು. ಆಗಲೂ, ತಾವು ದಂತವೈದ್ಯಶಾಸ್ತ್ರಕ್ಕೂ ವೈದ್ಯಶಾಸ್ತ್ರಕ್ಕೂ ಅತ್ಯವಶ್ಯವಾದ ಅರಿವಳಿಕೆಯನ್ನು ಕಂಡುಹಿಡಿದಿರುವ ಅರಿವೇ ಅವರಿಗೆ ಇರಲಿಲ್ಲ.

ವೆಲ್ಸ್ ತಮ್ಮ ಅನುಭವವನ್ನು ತಮ್ಮ ರೋಗಿಗಳ ಮೇಲೆ ಪ್ರಯೋಗಿಸಲು ಮುಂದಾದರು. 1845ನೇ ಫೆಬ್ರುವರಿಯಲ್ಲಿ ಬಾಸ್ಟನ್ ನಗರಕ್ಕೆ ಬಂದು ತಮ್ಮ ಆವಿಷ್ಕಾರವನ್ನು ಪ್ರಸ್ತುತಪಡಿಸಿದರು. ತಮ್ಮ ಕೆಳಗೆ ಶಿಕ್ಷಾರ್ಥಿಯಾಗಿ, ಬಳಿಕ ಬಾಸ್ಟನ್‌ನಲ್ಲಿ ವೈದ್ಯವೃತ್ತಿಯಲ್ಲಿ ತೊಡಗಿದ್ದ ಮಾರ್ಟನ್, ವೆಲ್ಸ್ಗೆ ಆಸರೆಯಾದರು. ಬಾಸ್ಟನ್‌ನ ವಿವಿಧ ಭಾಗಗಳಲ್ಲಿ ಉಪನ್ಯಾಸಗಳನ್ನು ಮಾಡಿದರು. ಡಿಸೆಂಬರ್ 1846ರಂದು ವಿದ್ಯಾರ್ಥಿ ಸ್ವಯಂ ಸೇವಕನೊಬ್ಬನ ಹಲ್ಲು ಕೀಳುವ ಪ್ರಯೋಗವನ್ನು ಸಾರ್ವಜನಿಕ ವೀಕ್ಷಣೆಗಾಗಿ ಏರ್ಪಡಿಸಲಾಯಿತು. ಆ ಅನುಭವವನ್ನು ವೆಲ್ಸ್ ಹೀಗೆ ವಿವರಿಸಿದ್ದಾರೆ: ‘ಅಲ್ಲಿಯ ವರ್ತುಲ ನಾಟ್ಯರಂಗದಲ್ಲಿ ಅನೇಕ ವಿದ್ಯಾರ್ಥಿಗಳು ಮತ್ತು ವೈದ್ಯರು, ನೋವಿಲ್ಲದೆ ಹಲ್ಲು ಕೀಳುವ ವಿಶೇಷ ಕಾರ್ಯಕ್ರಮವನ್ನು ವೀಕ್ಷಿಸಲು ಕಿಕ್ಕಿರಿದು ನೆರೆದಿದ್ದರು. ಆದರೆ ನನ್ನ ದುರಾದೃಷ್ಟದಿಂದಲೋ ಏನೊ, ನೈಟ್ರಸ್ ಆಕ್ಸೈಡ್‌ ಚೀಲವನ್ನು ನಿಶ್ಚಿತ ಸಮಯಕ್ಕೆ ಮೊದಲೇ ರೋಗಿಯಿಂದ ಹಿಂದೆಗೆಯಲಾಯಿತು. ಇದರಿಂದ ರೋಗಿಗೆ ಸರಿಯಾದ ಪ್ರಮಾಣದಲ್ಲಿ ನೈಟ್ರಿಕ್ ಆಕ್ಸೈಡ್‌ ಪೂರೈಕೆಯಾಗ ಲಿಲ್ಲ. ಹಲ್ಲುಕೀಳುವಾಗ ಅವನು ನೋವಿನಿಂದ ಕಿರಚಿಕೊಂಡ. ಮತ್ತೊಬ್ಬ ರೋಗಿಯ ಮೇಲೆ ಪ್ರಯೋಗಿಸಿ ತೋರಿಸೋಣವೆಂದು ಯೋಚಿಸಿದಾಗ ಅಲ್ಲಿ ಮತ್ತೊಬ್ಬ ರೋಗಿಯ ಸುಳಿವೇ ಇರಲಿಲ್ಲ. ಆದ್ದರಿಂದ ನಾನು ನನ್ನ ವಿಚಾರವನ್ನು ಸರಿಯಾಗಿ ಪ್ರತಿಪಾದಿಸಲಾಗಲಿಲ್ಲ. ನನ್ನ ಪ್ರಯೋಗವನ್ನು ಎಲ್ಲರೂ ಮೋಸವೆಂದೇ ಅಭಿಪ್ರಾಯ ಪಟ್ಟರು.’

ರಂಗಮದಿರಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು ವೆಲ್ಸ್‌ರ ಕಡೆ ಕೈ ತೋರಿಸಿ ಕೇಕೆಹಾಕಿ, ಛೀಮಾರಿ ಹಾಕಿ, ಅವರನ್ನು ಹೀನಾಯವಾಗಿ ನಿಂದಿಸಿ ಹೊರಗಟ್ಟಿದರು. ಅವಮಾನ ತಾಳಲಾರದೆ, ವೆಲ್ಸ್ ಊರಿಗೆ ಹಿಂದಿರುಗಿ, ತಮ್ಮ ಮನೆ ಮತ್ತು ದಂತವೈದ್ಯಕೀಯ ಕ್ಲಿನಿಕ್ಕನ್ನು ಮಾರಿ ಬಿಟ್ಟರು. ಇದೇ ಸಮಯಕ್ಕೆ, ನೈಟ್ರಸ್ ಆಕ್ಸೈಡ್‌ಗೆ ಪರ್ಯಾಯವಾಗಿ, ಈಥರನ್ನು ಬಳಸಿ 160ಕ್ಕೂ ಹೆಚ್ಚು ರೋಗಿಗಳಿಗೆ ನೋವಿಲ್ಲದ ದಂತ ಚಿಕಿತ್ಸೆ ಮಾಡಿದ್ದಾಗಿ ಮಾರ್ಟಿನ್ ವೆಲ್ಸ್‌ಗೆ ಪತ್ರ ಬರೆದರು. ಮಾರ್ಟಿನ್ ತಮ್ಮ ಅನ್ವೇಷಣೆಯನ್ನು ಕದ್ದರೆಂಬ ಬೇಸರದಿಂದ, ವೆಲ್ಸ್ ತಮ್ಮ ಮನೋಸ್ಥಿಮಿತವನ್ನು ಕಳೆದುಕೊಂಡರು. ಅದೇ ಸಮಯಕ್ಕೆ, ಹೆಂಗಸರಿಬ್ಬರ ಮೇಲೆ ಆ್ಯಸಿಡ್ ಚೆಲ್ಲಿ, ವೆಲ್ಸ್ ಜೈಲು ಸೇರಬೇಕಾಯಿತು. ಜೈಲಿನಲ್ಲಿ ಅತಿಯಾಗಿ ಕ್ಲೋರೊಫಾರಂ ಸೇವಿಸಿ, ತಮ್ಮ ತೊಡೆಯ ರಕ್ತನಾಳವನ್ನು ಕತ್ತಿಯಿಂದ ತುಂಡರಿಸಿಕೊಡು ಆತ್ಮಹತ್ಯೆ ಮಾಡಿಕೊಂಡರು.

 ವೆಲ್ಸ್ ಸಾಯಲು 12 ದಿನಗಳಿದ್ದಾಗ, ರಾಯಲ್ ಸೊಸೈಟಿ ಆಫ್ ಮೆಡಿಸಿನ್ ಸಂಸ್ಥೆ ‘ಯಶಸ್ವಿ ಸಂಶೋಧನೆಯ ಮೂಕ ಶಸ್ತ್ರಚಿಕಿತ್ಸೆಗಳನ್ನು ನೋವಿಲ್ಲದೆ ನಡೆಸಬಲ್ಲ ಅನಿಲವನ್ನು ಕಂಡುಹಿಡಿದು, ಅದನ್ನು ಯಶಸ್ವಿಯಾಗಿ ಪ್ರಯೋಗಿಸಿದ ವೆಲ್ಸ್‌ಗೆ ಈ ಆವಿಷ್ಕಾರದ ಗೌರವ ಸಲ್ಲುತ್ತದೆ’ ಎಂದು ಪತ್ರದ ಮೂಲಕ ವಿಷಯವನ್ನು ರವಾನಿಸಿತು. ಆದರೆ, ಅಯ್ಯೊ ಪಾಪ, ಎಂತಹ ವಿಪರ್ಯಾಸ! ಆ ಗೌರವಪತ್ರ ವೆಲ್ಸ್ ಸತ್ತ ಮೇಲೆ ಅವರ ನ್ಯೂಯಾರ್ಕ್ ಮನೆಗೆ ತಲುಪಿತು!

ಬಾಲಿ ಸಮುದ್ರದಲ್ಲೊಂದು ಲಕ್ಷ್ಮಣರೇಖೆ

 ಬಾಲಿ ಸಮುದ್ರದಲ್ಲೊಂದು  ಲಕ್ಷ್ಮಣರೇಖೆ  

ಲೇಖಕರು: ಸುರೇಶ ಸಂ ಕೃಷ್ಣಮೂರ್ತಿ‌

     ನಮ್ಮ ನೆರೆಯ ಆಸ್ಟ್ರೇಲಿಯ ಖಂಡದ ಹೆಸರನ್ನು ನಾವು ಕೇಳಿದ ಕೂಡಲೆ ನಮಗೆ ನೆನಪಿಗೆ ಬರುವ  ಪ್ರಾಣಿ ಎಂದರೆ ಕಾಂಗರೂಕಾಂಗರೂ ಮಾತ್ರವಲ್ಲದೆ  ಕೋಅಲ, ಪ್ಲಾಟಿಪಸ್‌, ಎಕಿಡ್ನಾ, ಟಾಸ್ಮೇನಿಯನ್ ಡೆವಿಲ್‌,  ಅಳಿದು ಹೋಗಿರುವ ಟಾಸ್ಮೇನಿಯನ್   ಹುಲಿ, ಡಿಂಗೋ ಮುಂತಾದ  ಆಸ್ಟ್ರೇಲಿಯಾಕ್ಕೆ ಸೀಮಿತವಾದ  ಪ್ರಾಣಿ ಸಂಕುಲದ   ದೊಡ್ಡ ಪಟ್ಟಿಯೇ ಇದೆ ಭೂಮಿಯ ಮೇಲಿರುವ  ಶೇಕಡ ಎಂಬತ್ತರಷ್ಟು ಸಸ್ಯಗಳು, ಸ್ತನಿಗಳು, ಸರೀಸೃಪಗಳು, ಮಂಡೂಕಗಳು ಕೇವಲ ಆಸ್ಟ್ರೇಲಿಯಾಕ್ಕೆ ಸೀಮಿತವಾಗಿವೆ ಎಂದರೆ ಆಶ್ಚರ್ಯವಲ್ಲವೇ? ಆಸ್ಟ್ರೇಲಿಯಾದ ಆಸುಪಾಸಿನ ಅನೇಕ ದ್ವೀಪಕಲ್ಪಗಳಲ್ಲಿಯೂ  ವಿಶಿಷ್ಟ ಪ್ರಾಣಿ ಸಂಕುಲ ಕಂಡು ಬರುತ್ತದೆಅದರ ನೆರೆಯ ಇಂಡೋನೇಷಿಯ  ಸುಮಾರು ಹದಿನೇಳು ಸಾವಿರ ದ್ವೀಪಗಳ ಸಮೂಹಗಳು ಸೇರಿದ ಒಂದು ದೇಶವಾಗಿದೆ.


ಇಂಡೋನೇಷಿಯಾದ
ಭೌಗೋಳಿಕ ರಚನೆ ಎಷ್ಟು  ವಿಶೇಷವೋ  ಅಲ್ಲಿರುವ ಪ್ರಾಣಿಸಂಕುಲದ ವೈವಿದ್ಯತೆಯೂ  ಅಷ್ಟೇ ವಿಶೇಷವಾದದ್ದು.   ಕೇವಲ ಇಪ್ಪತ್ತು ಕಿಮಿಗಳಷ್ಟು ಅಂತರದ ಲಂಬಕ್ ಕೊಲ್ಲಿಯಿಂದ ಬೇರ್ಪಟ್ಟಿರುವ ಬಾಲಿ ಮತ್ತು ಲಂಬಕ್ ದ್ವೀಪಗಳನ್ನು ಉದಾಹರಣೆಗೆ ತೆಗೆದುಕೊಂಡರೆ ಬಾಲಿ ದ್ವೀಪದಲ್ಲಿ  ಏಷ್ಯಾಟಿಕ್‌ ಪ್ರಾಣಿ ಸಂಕುಲಗಳು ಕಂಡು ಬರುತ್ತವೆ. ಆದರೆ, ಲಂಬಕದಲ್ಲಿ ಆಸ್ಟ್ರೇಲಿಯಾದ ಪ್ರಾಣಿ ಸಂಕುಲ ಕಂಡುಬರುತ್ತದೆ ವ್ಯತ್ಯಾಸ ಎರಡು ದ್ವೀಪಗಳಿಗೆ ಮಾತ್ರ ಸೀಮಿತವಾಗದೆ ವಾಲೆಸ್‌ ಲೈನ್‌ ಎಂದು ಕರೆಯಲಾಗುವ ಒಂದು ಕಾಲ್ಪನಿಕ ರೇಖೆಯ ಉದ್ದಕ್ಕೂ ಆಸ್ಟ್ರೇಲಿಯಾದ ಉತ್ತರಕ್ಕೆ  ಇರುವ ಇಂಡೋನೇಷ್ಯ, ಮಲೇಷಿಯ, ಬ್ರೂನೆ  ಮುಂತಾದ ದೇಶಗಳ ದ್ವೀಪ ಕಲ್ಪಗಳಲ್ಲಿ ಕಂಡುಬರುತ್ತದೆ.   ವ್ಯತ್ಯಾಸವನ್ನು ಹಲವಾರು ಅನ್ವೇಷಕರು ಗಮನಿಸಿ ದಾಖಲಿಸಿದ್ದರು.

      ಚಾರ್ಲ್ಸ್‌ ಡಾರ್ವಿನನ ಸಮಕಾಲೀನ  ಮತ್ತು ನೈಸರ್ಗಿಕ ಆಯ್ಕೆಯ ಜೀವ ವಿಕಾಸದ ಸಿದ್ಧಾಂತವನ್ನು ಸ್ವತಂತ್ರವಾಗಿ ಮಂಡಿಸಿದ್ದ ಆಲ್ಫ್ರೆಡ್ ರಸ್ಸೆಲ್ ವಾಲೇಸ್ ಇಂಡೋನೇಷಿಯ ಮತ್ತು ಮಲೇಷಿಯಗಳ ಪ್ರಾಣಿ ಸಂಕುಲದಲ್ಲಿನ ವ್ಯತ್ಯಾಸಗಳ ಕಡೆಗೆ ಹೆಚ್ಚು ಅಕರ್ಷಿತನಾಗಿದ್ದನು. ಪ್ರಾಣಿ ಸಂಕುಲದ ಜೀವನಕ್ರಮಗಳ ಸುದೀರ್ಘ ವೀಕ್ಷಣೆಯ ಆಧಾರದ ಮೇಲೆ ಏಷಿಯಾ ಮತ್ತು ಆಸ್ಟ್ರೇಲಿಯಾದ ಪ್ರಾಣಿ ಸಂಕುಲದ ಸೀಮೆಯನ್ನು ಗುರುತಿಸಿದನುಬಾಲಿ-ಲಂಬಕ್‌ ನಿಂದ ಆರಂಭಿಸಿ ಬೋರ್ನಿಯ-ಸೆಲೆಬಿಸ್‌, ಫಿಲಿಪೈನ್ಸ್‌-ಸಂಗಿ ದ್ವೀಪಗಳ ನಡುವೆ ಪೂರ್ವೋತ್ತರವಾಗಿ ಎಳೆದ ಕಾಲ್ಪನಿಕ  ಸೀಮಾರೇಖೆಯನ್ನು ವಾಲೇಸನ ರೇಖೆ ಎಂದು ಗುರುತಿಸಲಾಗಿದೆವಾಲೇಸ್‌ ರೇಖೆಯ  ಪೂರ್ವಕ್ಕೆ ಇರುವ ದ್ವೀಪಗಳ ಭೂಭಾಗಗಳ ಮೇಲೆ ಆಸ್ಟ್ರೇಲಿಯಾದ ಪ್ರಾಣಿಗಳು ಕಂಡು ಬಂದರೆ ಪಶ್ಷಿಮಕ್ಕೆ ಇರುವ   ದ್ವೀಪಗಳಾದ ಸುಮಾತ್ರ, ಜಾವ, ಬಾಲಿ, ಬೋರ್ನಿಯಾ ಮುಂತಾದ ದ್ವೀಪಗಳಲ್ಲಿ   ಏಷ್ಯಾಟಿಕ್‌      ಪ್ರಾಣಿಗಳು ಕಂಡು ಬರುವುದೇ ಇಲ್ಲಿನ ಒಂದು ವಿಶೇಷವಾಗಿದೆ



 

  ವಾಲೇಸನ ನಂತರ ಮ್ಯಾಕ್ಸ್‌ ಕಾರ್ಲ್ ವಿಲಿಯಂ  ವೆಬರ್‌() ಎಂಬಾತ ತನ್ನ ಅನ್ವೇ಼ಷಣೆಯ ಆಧಾರದ ಮೇಲೆ ವಾಲೇಸನ ರೇಖೆಯನ್ನು ಆಸ್ಟ್ರೇಲಿಯಾದ ಪ್ರಾಣಿ ಸಾಮ್ರಾಜ್ಯದಿಂದ ತುಂಬಾ ದೂರದಲ್ಲಿ ಗುರುತಿಸಲಾಗಿದೆ ಎಂದು ಹೇಳಿ ಮಲಕಾಸ್‌-ಸೆಲಿಬಿಸ್‌, ಕೈ-ತಿಮೋರ್‌ ನಡುವೆ ಹಾದು ಹೋಗುವಂತೆ ಮತ್ತೊಂದು ಕಾಲ್ಪನಿಕ ಸೀಮಾ ರೇಖೆಯನ್ನು ಪ್ರತಿಪಾದಿಸಿದನು. ಅಲ್ಲಿ ಕಂಡು ಬರುವ ಮೃದ್ವಂಗಿಗಳು ಮತ್ತು ಸ್ತನಿಗಳ ವೈವಿದ್ಯತೆಯನ್ನು  ಗಮನಿಸಿದ ಮೇಲೆ ಅವನು   ರೇಖೆಯನ್ನು ಗುರುತಿಸಿದನುವಾಲೇಸ್‌ ಮತ್ತು ವೆಬರ್‌ ರೇಖೆಗಳ ನಡುವೆ ಕಂಡು ಬರುವ ದ್ವೀಪಗಳನ್ನು  ವಾಲೇಷಿಯ ಎಂದು ಮುಂದೆ ಕರೆಯಲಾಯಿತು. ವಾಲೇಷಿಯದ ಕೆಲವು ಪ್ರಾಣಿಗಳು ಏಷ್ಯಾಟಿಕ್‌ ಪ್ರಾಣಿಗಳ ಮತ್ತು ಆಸ್ಟ್ರೇಲಿಯಾದ ಪ್ರಾಣಿಗಳೆರಡರ ಗುಣವಿಶೇ಼ಷಗಳನ್ನು ಹೊಂದಿರುವುದನ್ನು ಇಲ್ಲಿ ಗಮನಿಲಾಯಿತು 

     ವಾಲೇಸನ ಸೀಮಾರೇಖೆಯ ವಿಭಜನೆಯಿಂದ ತಿಳಿದು ಬರುವ ಅಂಶವೆಂದರೆ ಬಹುತೇಕ ಏಷ್ಯಾಟಿಕ್‌ ಕಪ್ಪೆಗಳು ಬಾಲಿಯವರೆಗೆ ಮಾತ್ರ ಕಂಡು ಬರುತ್ತವೆ, ಅಲ್ಲಿಂದ ಪೂರ್ವಕ್ಕೆ ಇಲ್ಲ. ಆಸ್ಟ್ರೇಲಿಯಾದ ಉಭಯವಾಸಿಗಳು ಹೆಚ್ಚು ಅಂದರೆ ನ್ಯೂಗಿನಿಯವರೆಗೆ ಕಂಡುಬರುತ್ತವೆ ಅಲ್ಲಿಂದ ಮುಂದಕ್ಕೆ ಇಲ್ಲ. ಏಷ್ಯಾಟಿಕ್‌ ಸರೀಸೃಪಗಳು ಬಹತೇಕ ವಾಲೇಸ್‌ ಸೀಮಾರೇಖೆಯನ್ನು ದಾಟುವುದಿಲ್ಲ. ಅತ್ತಲಾಗೆ ಆಸ್ಟ್ರೇಲಿಯಾದ ಹಾವುಗಳು ಮಲಕಾಸನ್ನು ದಾಟುವುದಿಲ್ಲ. ಲಂಬಕದಲ್ಲಿ ಕಂಡುಬರುವ ಹಕ್ಕಿಗಳಲ್ಲಿ ಮುಕ್ಕಾಲು ಪಾಲು ಏಷ್ಯಾಟಿಕ್‌ ಆಗಿವೆ. ಅತ್ತ ಬಾಲಿಯಲ್ಲಿ ಕಂಡುಬರುವ ಆಸ್ಟ್ರೇಲಿಯಾ ಹಕ್ಕಿಗಳು ಕಡಿಮೆ. ಆದರೂ, ಹಕ್ಕಿಗಳಿಗೆ ಸೀಮಾರೇಖೆ ನಗಣ್ಯ ಎಂಬುದನ್ನೂ ಇಲ್ಲಿ ಅನೇಕ ಉದಾಹರಣೆಗಳಲ್ಲಿ ಕಾಣಬಹುದು. ಏಷ್ಯಾಟಿಕ್‌ ಸ್ತನಿಗಳು ಹೆಚ್ಚು ಅಂದರೆ ಜಾವ, ಬೋರ್ನಿಯದ ವರೆಗೆ ಮಾತ್ರ ಕಂಡು ಬರುತ್ತವೆ. ಕೆಲವೇ ಕೆಲವು ಬಾಲಿ , ಸಿಲಿಬಿಸ್‌ ಗಳಲ್ಲಿ ಕಂಡುಬರುತ್ತವೆಆಸ್ಟ್ರೇಲಿಯಾದ ಸ್ತನಿಗಳು ಬಹುತೇಕ ನ್ಯೂಗಿನಿಯಿಂದ ಮುಂದಕ್ಕೆ ಕಂಡುಬರುವುದಿಲ್ಲ.  

        ಏಷ್ಯಾಟಿಕ್‌ ಪ್ರಾಣಿ ಸಂಕುಲವು ವಾಲೇಸ್‌ ಸೀಮಾರೇಖೆಯ ಪಶ್ಚಿಮಕ್ಕೆ ಇರುವ ಬಾಲಿ ಮತ್ತಿತರ ದ್ವೀಪಗಳಿಗೆ ಸಾಗರವನ್ನು ದಾಟಿ ಪ್ರವೇಶವಾದದ್ದು ಹೇಗೆ ಮತ್ತು ಅವು ಬಾಲಿ ಪಕ್ಕದಲ್ಲಿಯೇ ಇರುವ ಲಂಬಕ್‌ ದ್ವೀಪದಲ್ಲಿ ಕಂಡು ಬರದಿರಲು ಕಾರಣವೇನು? ಹಾಗೆ ಲಂಬಕದವರೆಗೆ  ಕೆಲವಾದರೂ ಅಸ್ಟ್ರೇಲಿಯನ್ ಪ್ರಾಣಿ ಸಂಕುಲ ಸಾಗರವನ್ನು ದಾಟಿ ಪ್ರವೇಶಿಸಿದ್ದು ಹೇಗೆ ಮತ್ತು ಅವು ಪಕ್ಕದಲ್ಲಿಯೇ ಇರುವ ಬಾಲಿ ದ್ವೀಪವನ್ನು ತಲುಪದಿರುವಂತೆ ತಡೆದಿದ್ದಾದರೂ ಏನು? ಹೀಗೆ ಉದ್ಭವವಾಗುವ ಹಲವಾರು ಪ್ರಶ್ನೆಗಳಿಗೆ ಹಲವು ಸಿದ್ಧಾಂತಗಳು  ಉತ್ತರಿಸುವ ಪ್ರಯತ್ನಗಳನ್ನು ಮಾಡಿವೆ. ಸುಮಾರು ಹದಿನೈದು ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ಭೂಮಿಯಲ್ಲಿನ ಬಹುತೇಕ ನೀರು ಮಂಜಗಡ್ಡೆಯ ರೂಪದಲ್ಲಿ ಧೃವಗಳಲ್ಲಿ ಶೇಖರವಾಗಿತ್ತುಹೀಗಾಗಿ, ಭೂಮಿಯ ಸಮುದ್ರಗಳಲ್ಲಿ ನೀರಿನ ಮಟ್ಟವು ಈಗ ಇರುವ ಮಟ್ದಕ್ಕಿಂತ 110ಮೀಟರಿನಷ್ಟು ಕೆಳಕ್ಕೆ ಇದ್ದಿತು. ಏಷ್ಯಾ ಮತ್ತು ಆಸ್ಟ್ರೇಲಿಯಾಗಳು ಒಟ್ಟಿಗೆ ಸೇರಿಕೊಂಡು ರಚನೆಯಾಗಿದ್ದ  ಒಂದು ಬೃಹತ್ ಭೂಪ್ರದೇಶವಿದ್ದಿತು. ಇಂಡೋನೇಷಿಯ  ಮಲೇಷಿಯಗಳನ್ನೊಳಗೊಂಡು ಬೋರ್ನಿಯ, ಜಾವಾ, ಬಾಲಿ, ಸುಮಾತ್ರ ಮುಂತಾದ ಅನೇಕ ದ್ವೀಪಕಲ್ಪಗಳು ಸುಂಡಲ್ಯಾಂಡ್‌ ಎಂದು ಕರೆಯಲಾಗುವ ಒಂದರ ಭೂಭಾಗವಾಗಿದ್ದು ಪರಸ್ಪರ ಮತ್ತು ಏಷ್ಯಾ ಖಂಡದೊಂದಿಗೆ ನೇರವಾಗಿ ಭೂ ಸಂಪರ್ಕ ಹೊಂದಿದ್ದವುಇಲ್ಲಿ ಸ್ವಾಭಾವಿಕವಾಗಿ ಎಲ್ಲ ಪ್ರಾಣಿ ಸಂಕುಲವೂ ಯಾವುದೇ ಅಡೆತಡೆ ಇಲ್ಲದೆಯೇ ಒಂದು ಪ್ರದೇಶದಿಂದ ಮತ್ತೊಂದಕ್ಕೆ ತಿರುಗಾಡಲು ಅವಕಾಶವಿದ್ದಿತು ಎಂದಾಯಿತು. ಆದರೂ, ಆಗಲೂ  ಬಾಲಿ ಮತ್ತು ಲಂಬಕ್‌ ನಡುವೆ ಮಿಲಿಯಾಂತರ ವರ್ಷಗಳಿಂದ  ನೀರು ತುಂಬಿದ ಅತಿ ಆಳವಾದ ಸಮುದ್ರದ ಕೊಲ್ಲಿಯೊಂದು ಬಾಯಿ ತೆರೆದುಕೊಂಡಿದ್ದು.ಇಂದಿನ ವಾಲೇಸ್‌ ರೇಖೆಯ ಉದ್ದಕ್ಕೂ  ವ್ಯಾಪಿಸಿ ಸಹಜವಾಗಿ ಎರಡೂ ಕಡೆಯ ಪ್ರಾಣಿಗಳ ಓಡಾಟಕ್ಕೆ ತಡೆ ಒಡ್ಡಿ ಪ್ರಾಣಿಗಳ ಸಂವರ್ಧನೆಯನ್ನು ಆಯಾ ಭೂಪ್ರದೇಶಗಳಿಗೆ ಸೀಮಿತ ಗೊಳಿಸಿರಬೇಕುಆಸ್ಟ್ರೇಲಿಯ ಮತ್ತು ಟಾಸ್ಮೇನಿಯಾಗಳೂ ಸೇರಿ    ಸಾಹುಲ್‌ ಎಂದು ಕರೆಯಲಾಗುವ ಒಂದೇ ಭೂಭಾಗಗಳಾಗಿದ್ದು ಅಲ್ಲಿನ ಪ್ರಾಣಿಗಳ ಓಡಾಟವೂ ಒಂದು ಪ್ರದೇಶದಿಂದ ಮತ್ತೊಂದಕ್ಕೆ ಸುಗಮವಾಗಿದ್ದೀತುಅದರಲ್ಲಿ ಹಲವಾರು ಪ್ರಾಣಿ ಜಾತಿಗಳು ವಾಸಿಸುತ್ತ, ಸಂಚರಿಸುತ್ತ ಮತ್ತು ಮುಕ್ತವಾಗಿ ಸಂತಾನೋತ್ಪತ್ತಿ ಮಾಡುತ್ತ ಸಂವರ್ಧನೆಯಾಗಿದ್ದವು.   ಹಿಮಯುಗಗಳ ಅಂತ್ಯದಲ್ಲಿ ಸಮುದ್ರ ಮಟ್ಟಗಳು ಏರಿದಾಗ ಮತ್ತು ಪ್ಲೇಟ್ ಟೆಕ್ಟೋನಿಕ್ಸ್ ಪರಿಣಾಮ ಬೀರಲು ಪ್ರಾರಂಭಿಸಿದ್ದರ ಕಾರಣದಿಂದ,  ನಡುವೆ ತೆರೆದಿರುವ   ಭೂಭಾಗ ವನ್ನು ಸಾಗರವು ಆಕ್ರಮಿಸಿಕೊಂಡಿತು.   ಭೂತಾಪವು ಏರುತ್ತಾ ಹೋದಂತೆ ಧೃವ ಗಳಲ್ಲಿನ ಮತ್ತಷ್ಟು ಮಂಜು ಕರಗಿ ಸಾಗರದ ಮಟ್ಟ ಏರುತ್ತಾ ಹೋದಂತೆ ತಗ್ಗು ಪ್ರದೇಶಗಳು ನೀರನಿಂದ ತುಂಬಿ,  ಇಂದಿನ ಇಂಡೋನೇಷಿಯ ಮಲೇಷಿಯಗಳು, ವಾಲೇಷಿಯ  ಮುಂತಾದವು ದ್ವೀಪಗಳಾಗಿ ಉಳಿದುಕೊಂಡಿರಬಹುದು ಎಂದು ಒಂದು ಅಂದಾಜು ಮಾಡಲಾಗಿದೆ. ವಾಲೇಸ್‌ ರೇಖೆಯ ಉದ್ದಕ್ಕೂ ಇದ್ದ ಕೊಲ್ಲಿಯ ಆಳ ಮತ್ತು ಪ್ರವಾಹ ಪ್ರಾಣಿ ಸಂಕುಲಗಳು ಅದನ್ನು ದಾಟದಿರಲು ಕಾರಣವಾಗಿದ್ದರಬಹುದು.

    ಏಷ್ಯಾದ ಕೆಲವಾದರೂ ಪ್ರಾಣಿಗಳು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವಾದರೂ ಕೆಲವು ಪಕ್ಷಿಗಳು ಮತ್ತು ಯೂಕಲಿಪ್ಟಸ್‌ ಮುಂತಾದ ಸಸ್ಯಗಳನ್ನು ಹೊರೆತುಪಡಿಸಿ ಆಸ್ಟ್ರೇಲಿಯಾದ ಪ್ರಾಣಿಗಳು ಏಷ್ಯಾದಲ್ಲಿ ಕಂಡು ಬರುವುದಿಲ್ಲ ಎಂಬುದು ಒಂದು ವಿಸ್ಮಯ. ವಾಲೇಸ್‌ ರೇಖೆಯು ಅಲ್ಲಿ ಗಮನಿಸಲಾದ ಪ್ರಾಣಿ ಸಂಕುಲದ ವಿದ್ಯಮಾನಗಳನ್ನು ಅವಲಂಬಿಸಿ ನಕ್ಷೆಯ ಮೇಲೆ ಎಳೆದ ಒಂದು ಕಾಲ್ಪನಿಕ ಲಕ್ಷ್ಮಣರೇಖೆ ಅಷ್ಟೆ .ಇದು ಭೂಮಿಯ ಮೇಲೆ ಹಿಮಯುಗವೊಂದು ಬಂದುಹೋದ ಕುರುಹನ್ನು ಸಹ ನೀಡುತ್ತದೆ