ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam
Showing posts with label BSS. Show all posts
Showing posts with label BSS. Show all posts

Sunday, October 4, 2026

ಪತ್ರ ರಂಧ್ರಗಳು ಎಂಬ ಸಸ್ಯಗಳ ಜೀವನಾಡಿಗಳು

ಪತ್ರ ರಂಧ್ರಗಳು ಎಂಬ ಸಸ್ಯಗಳ ಜೀವನಾಡಿಗಳು  








ಲೇಖಕರು    : ಶಶಿಕುಮಾರ್ ಬಿ. ಎಸ್. 

ಸರ್ಕಾರಿ ಪದವಿಪೂರ್ವ ಕಾಲೇಜು 

ಪ್ರೌಢಶಾಲಾ ವಿಭಾಗ, ಮಸ್ಕಲ್, ತುಮಕೂರು 

    

ತರಗತಿಯಲ್ಲಿ ಅಂಗಾಂಶಗಳ ಬಗ್ಗೆ ಪಾಠ ಮಾಡುತ್ತಿದ್ದಾಗ ಮಕ್ಕಳು ಸರ್ ನಮಗೂ ಅವುಗಳನ್ನು ತೋರಿಸಿ ಎಂದು ಆಸಕ್ತಿ ತೋರಿದರು. ಅದಕ್ಕೆ ಬೇಕಾದ ಎಲೆಗಳು, ಬ್ಲೇಡ್ , ವರ್ಣಕ ಮೊದಲಾದವುಗಳನ್ನು ಸಿದ್ಧಪಡಿಸಿಕೊಂಡು ಸೂಕ್ಷ್ಮ ದರ್ಶಕದಲ್ಲಿ low power ಮತ್ತು high power ನಲ್ಲಿ ವಿದ್ಯಾರ್ಥಿಗಳಿಗೆ ತೋರಿಸಿದೆ. ಅವುಗಳ ಬಗ್ಗೆ ಇನ್ನೊಂದಷ್ಟು ಮಾಹಿತಿ ನೀಡಿದೆ. 

ಪತ್ರರಂಧ್ರಗಳು ಭೂಮಿಯ ಶ್ವಾಸಕೋಶಗಳಿದ್ದಂತೆ. ಮನುಷ್ಯರು ಮತ್ತು ಪ್ರಾಣಿಗಳು ಉಸಿರಾಡಲು ಆಕ್ಸಿಜನ್‌ ನೀಡುವ ಜೊತೆಗೆ, ಇಡೀ ಪರಿಸರದ ಸಮತೋಲನವನ್ನು ಕಾಪಾಡುವ ಜವಾಬ್ದಾರಿಯನ್ನು ಸಸ್ಯಗಳು ವಹಿಸಿಕೊಂಡಿವೆ. ಆದರೆ ಸಸ್ಯಗಳು ಉಸಿರಾಟಕ್ಕೆ ಶ್ವಾಸಕೋಶಗಳನ್ನು ಬಳಸಿಕೊಳ್ಳುವುದಿಲ್ಲ. ಅವುಗಳ ಎಲೆಗಳ ಮೇಲೆ, ಕಾಂಡದ ಮೇಲೆ ಸೂಕ್ಷ್ಮವಾದ ರಂಧ್ರಗಳಿವೆ. ಎಲೆಗಳಲ್ಲಿ ಕಂಡು ಬರುವ ಸೂಕ್ಷ್ಮ ರಂಧ್ರಗಳೇ  "ಪತ್ರ ರಂಧ್ರಗಳು" ಅಥವಾ "ಸ್ಟೊಮೇಟಾಗಳು". 

ಗ್ರೀಕ್ ಭಾಷೆಯಲ್ಲಿ "Stoma" ಎಂದರೆ "ಬಾಯಿ" ಎಂದರ್ಥ. ಸಸ್ಯಗಳು ತಮ್ಮ ಸುತ್ತಮುತ್ತಲಿನ ವಾತಾವರಣದೊಂದಿಗೆ ಮಾತನಾಡುವ, ಉಸಿರಾಡುವ ಮತ್ತು ವ್ಯವಹಾರ ನಡೆಸುವ ಬಾಯಿಗಳೇ ಈ ಪತ್ರ ರಂಧ್ರಗಳು. ಒಂದು ಚದರ ಸೆಂಟಿಮೀಟರ್ ಎಲೆಯಲ್ಲಿ ಸುಮಾರು 1000 ರಿಂದ 60,000 ಸ್ಟೊಮೇಟಾಗಳವರೆಗೆ ಇರಬಹುದು. ಇವುಗಳಿಲ್ಲದೆ ಸಸ್ಯದ ಜೀವನವೇ ಅಸಾಧ್ಯ.

ಪತ್ರ ರಂಧ್ರಗಳ ರಚನೆ : ಪತ್ರ ರಂಧ್ರವು ಒಂಟಿಯಾಗಿರುವ  ರಂಧ್ರವಲ್ಲ. ಇದು ಒಂದು ಸಂಪೂರ್ಣ ಘಟಕ.

ರಂಧ್ರ ಅಥವಾ Ostiole: ಇದು ಎರಡು ಕೋಶಗಳ ನಡುವಿನ ಸಣ್ಣ ತೆರಪು. ಇದರ ಮೂಲಕವೇ ಅನಿಲಗಳ ವಿನಿಮಯ ನಡೆಯುತ್ತದೆ.

ಕಾವಲು ಕೋಶಗಳು Guard Cells: ರಂಧ್ರದ ಎರಡೂ ಬದಿಯಲ್ಲಿ ಮೂತ್ರಪಿಂಡದ ಆಕಾರದಲ್ಲಿರುವ 2 ವಿಶೇಷ ಜೀವಕೋಶಗಳು ಇರುತ್ತವೆ. ಇವೇ ರಂಧ್ರವನ್ನು ತೆರೆದು ಮುಚ್ಚುವ ಕೆಲಸ ಮಾಡುತ್ತವೆ. ಈ ಕೋಶಗಳ ಒಳಗಿನ ಗೋಡೆ ದಪ್ಪವಾಗಿರುತ್ತದೆ ಮತ್ತು ಹೊರಗಿನ ಗೋಡೆ ತೆಳುವಾಗಿರುತ್ತದೆ. ಕ್ಲೋರೋಪ್ಲಾಸ್ಟ್‌ಗಳನ್ನು ಹೊಂದಿರುವುದರಿಂದ ಇವು ದ್ಯುತಿಸಂಶ್ಲೇಷಣೆ ಕೂಡ ಮಾಡಬಲ್ಲವು.

ಸಹಾಯಕ ಕೋಶಗಳು Subsidiary Cells: ಕೆಲವು ಸಸ್ಯಗಳಲ್ಲಿ ಕಾವಲು ಕೋಶಗಳ ಸುತ್ತಲೂ 3-4 ಸಹಾಯಕ ಕೋಶಗಳು ಇರುತ್ತವೆ. ಇವು ಕಾವಲು ಕೋಶಗಳಿಗೆ ನೀರು ಮತ್ತು ಪೋಷಕಾಂಶ ಒದಗಿಸಲು ಸಹಾಯ ಮಾಡುತ್ತವೆ.

ಕಾವಲು ಕೋಶಗಳು ಊದಿಕೊಂಡಾಗ ರಂಧ್ರ ತೆರೆಯುತ್ತದೆ. ತೆಳುವಾದಾಗ ಮುಚ್ಚುತ್ತದೆ. ಈ ತೆರೆಯುವ-ಮುಚ್ಚುವ ಪ್ರಕ್ರಿಯೆಯೇ ಸಸ್ಯದ ಬದುಕಿನ ಕೀಲಿಕೈ.



 ಒಮ್ಮೆ ಶಿಕ್ಷಕರ ಪ್ರಾಯೋಗಿಕ ತರಬೇತಿ ಕಾರ್ಯಾಗಾರದಲ್ಲಿ ಸೂಕ್ಷ್ಮದರ್ಶಕದ ಮೂಲಕ ಪತ್ರ ರಂಧ್ರಗಳನ್ನು ವೀಕ್ಷಿಸುವ ಚಟುವಟಿಕೆಯನ್ನು ನಡೆಸಿದವು ಆ ಸಂದರ್ಭದಲ್ಲಿ ಮೊಬೈಲ್ ನಿಂದ ಪಡೆದಂತಹ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ  ನೀವೂ ನಿಮ್ಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಚಟುವಟಿಕೆಯನ್ನು ನಡೆಸಿ ಮೊಬೈಲ್ ಮೂಲಕ ಪಡೆದುಕೊಂಡ ಚಿತ್ರಗಳನ್ನು ಗುಂಪಿನಲ್ಲಿ ಹಂಚಿಕೊಳ್ಳಿ ಇದರಿಂದ ವಿದ್ಯಾರ್ಥಿಗಳು ತುಂಬಾ ಸಂತೋಷ ಪಡುವುದರ ಜೊತೆಗೆ ಪುನರ್ಮನನಕ್ಕೆ ಸಹಾಯಕವಾದೀತು.

ಚಿತ್ರದಲ್ಲಿ ಕಾವಲು ಕೋಶಗಳಲ್ಲಿರುವ ಕ್ಲೋರೊಪ್ಲಾಸ್ಟ್ ಗಳನ್ನು ಗಮನಿಸಿ. ಇವು ಸಸ್ಯಗಳಿಗೆ ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಸಹಾಯಕವಾಗಿವೆ. 

ಪತ್ರ ರಂಧ್ರಗಳ ವಿಧಗಳು

ಎಲೆಯ ಯಾವ ಭಾಗದಲ್ಲಿ ರಂಧ್ರಗಳು ಇವೆ ಎಂಬುದರ ಆಧಾರದ ಮೇಲೆ 4 ಮುಖ್ಯ ವಿಧಗಳಿವೆ:

ಕೆಳ ಪತ್ರರಂಧ್ರಗಳು (Hypostomatic): ಬಹಳಷ್ಟು ದ್ವಿದಳ ಸಸ್ಯಗಳ ಎಲೆಗಳ ಕೆಳಭಾಗದಲ್ಲಿ ಮಾತ್ರ ರಂಧ್ರಗಳು ಇರುತ್ತವೆ. ಉದಾ: ಮಾವು, ಜೋಳ. ಇದು ನೀರಿನ ಆವಿಯಾಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಮೇಲಿನ ಪತ್ರರಂಧ್ರಗಳು (Epistomatic) : ಜಲಸಸ್ಯಗಳು ಮತ್ತು ಏಕದಳ ಸಸ್ಯಗಳ ಎಲೆಗಳ ಮೇಲ್ಭಾಗದಲ್ಲಿ ಮಾತ್ರ ರಂಧ್ರಗಳು ಇರುತ್ತವೆ. ಉದಾ: ಭತ್ತ, ಜಲಕುಮುದಿನಿ.

3. ಉಭಯ ಪತ್ರರಂಧ್ರಗಳು (Amphistomatic) : ಎಲೆಗಳ ಎರಡೂ ಬದಿಗಳಲ್ಲೂ ರಂಧ್ರಗಳು ಇರುತ್ತವೆ. ಉದಾ: ಸೂರ್ಯಕಾಂತಿ, ಆಲೂಗೆಡ್ಡೆ.

4. ಪತ್ರರಂಧ್ರ ರಹಿತ (Astomatic) : ಕೆಲವು ಜಲಸಸ್ಯಗಳಲ್ಲಿ ರಂಧ್ರಗಳೇ ಇರುವುದಿಲ್ಲ. ಉದಾ: ವಾಲಿಸ್ನೇರಿಯಾ. ಇವು ನೀರಿನಿಂದಲೇ ನೇರವಾಗಿ ಅನಿಲಗಳನ್ನು ಹೀರಿಕೊಳ್ಳುತ್ತವೆ.

ಇದಲ್ಲದೆ, ಕಾವಲು ಕೋಶಗಳ ಜೋಡಣೆ ಆಧಾರದ ಮೇಲೆ Anomocytic, Anisocytic, Paracytic, Diacytic ಎಂದು ಇನ್ನೂ 4 ವಿಧಗಳಿವೆ.

ಪತ್ರ ರಂಧ್ರಗಳ ಪ್ರಮುಖ ಕಾರ್ಯಗಳು

ಪತ್ರ ರಂಧ್ರಗಳು ಸಸ್ಯದ ದೇಹದಲ್ಲಿನ "ಗೇಟ್ ಕೀಪರ್"ಗಳಿದ್ದಂತೆ. ಇವುಗಳ 4 ಮುಖ್ಯ ಕಾರ್ಯಗಳು:

ಅ. ಅನಿಲ ವಿನಿಮಯ Gas Exchange - ಇದು ಅತ್ಯಂತ ಮುಖ್ಯ ಕಾರ್ಯ.

- ದ್ಯುತಿಸಂಶ್ಲೇಷಣೆಗಾಗಿ CO2 ಒಳಗೆ: ಸಸ್ಯಗಳು ಆಹಾರ ತಯಾರಿಸಲು CO2 ಬೇಕು. ಗಾಳಿಯಲ್ಲಿರುವ ಇಂಗಾಲದ ಡೈಆಕ್ಸೈಡ್ ರಂಧ್ರಗಳ ಮೂಲಕ ಎಲೆಯ ಒಳಗಿರುವ ಮೆಸೊಫಿಲ್ ಕೋಶಗಳಿಗೆ ಹೋಗುತ್ತದೆ.

- O2 ಮತ್ತು ನೀರಿನ ಆವಿ ಹೊರಗೆ: ದ್ಯುತಿಸಂಶ್ಲೇಷಣೆಯ ಉಪಉತ್ಪನ್ನವಾದ ಆಕ್ಸಿಜನ್‌ ಮತ್ತು ಉಸಿರಾಟದಲ್ಲಿ ಉತ್ಪತ್ತಿಯಾಗುವ CO2 ಇವುಗಳ ಮೂಲಕ ಹೊರಹೋಗುತ್ತವೆ.

ಸಸ್ಯವು ತಿನ್ನುವುದು ಮತ್ತು ಉಸಿರಾಡುವುದು ಎರಡೂ ಈ ಒಂದೇ ರಂಧ್ರದ ಮೂಲಕ ನಡೆಯುತ್ತದೆ.

ಆ. ಬಾಷ್ಪವಿಸರ್ಜನೆ Transpiration : ಎಲೆಯ ಒಳಗಿರುವ ನೀರು ರಂಧ್ರಗಳ ಮೂಲಕ ಆವಿಯಾಗಿ ಹೊರಹೋಗುವುದೇ ಬಾಷ್ಪವಿಸರ್ಜನೆ . ಇದು 3 ಕಾರಣಗಳಿಗೆ ಮುಖ್ಯ:

1. ತಂಪಾಗಿಸುವುದು: ಬೇಸಿಗೆಯಲ್ಲಿ ನಮಗೆ ಬೆವರುವಂತೆ, ಸಸ್ಯಕ್ಕೆ ಇದು ತಂಪು ನೀಡುತ್ತದೆ.

2. ನೀರಿನ ಹೀರುವಿಕೆ: ಬೇರುಗಳಿಂದ ನೀರು ಎಲೆಯ ತುದಿಯವರೆಗೆ ಹೋಗಲು "ಎಳೆತ" ಸೃಷ್ಟಿಸುತ್ತದೆ. ಇದನ್ನು Transpiration pull ಎನ್ನುತ್ತಾರೆ.

3. ಖನಿಜಗಳ ಸಾಗಣೆ: ನೀರಿನ ಜೊತೆಗೆ ಬೇರಿನಿಂದ ಹೀರಿದ ಖನಿಜ ಲವಣಗಳು ಇಡೀ ಸಸ್ಯಕ್ಕೆ ತಲುಪುತ್ತವೆ.

ಇ. ನೀರಿನ ಸಮತೋಲನ : ಕಾವಲು ಕೋಶಗಳು ನೀರಿನ ಲಭ್ಯತೆಗೆ ಅನುಗುಣವಾಗಿ ರಂಧ್ರವನ್ನು ತೆರೆದು ಮುಚ್ಚುತ್ತವೆ. ಬಿಸಿಲು ಜಾಸ್ತಿಯಾದಾಗ, ನೀರಿನ ಕೊರತೆಯಾದಾಗ ರಂಧ್ರ ಮುಚ್ಚಿ ನೀರಿನ ನಷ್ಟವನ್ನು ತಡೆಯುತ್ತದೆ. ಇದು ಸಸ್ಯದ ಬದುಕುಳಿಯುವ ತಂತ್ರ.

ಈ. ಇತರೆ ಅನಿಲಗಳ ವಿನಿಮಯ : ಪರಿಸರದಲ್ಲಿರುವ ಸಲ್ಫರ್ ಡೈಆಕ್ಸೈಡ್, ಓಝೋನ್ ನಂತಹ ಮಾಲಿನ್ಯಕಾರಕ ಅನಿಲಗಳು ಕೂಡ ರಂಧ್ರಗಳ ಮೂಲಕ ಒಳಹೋಗುತ್ತವೆ. ಆದ್ದರಿಂದ ಸಸ್ಯಗಳು ವಾಯು ಮಾಲಿನ್ಯದ ಸೂಚಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ.

ಪತ್ರ ರಂಧ್ರಗಳ ತೆರೆಯುವಿಕೆ ಮತ್ತು ಮುಚ್ಚುವಿಕೆಯ ಕ್ರಿಯಾವಿಧಾನ

ಇದು ಬಹಳ ಸಂಕೀರ್ಣವಾದ ಜೈವಿಕ ರಸಾಯನ ಪ್ರಕ್ರಿಯೆ. ಸರಳವಾಗಿ ಹೀಗೆ  ಅರ್ಥ ಮಾಡಿಕೊಳ್ಳಬಹುದು:

ಪತ್ರರಂಧ್ರ ತೆರೆಯುವುದು ಹೇಗೆ? 

ಸೂರ್ಯೋದಯವಾದಾಗ ಕಾವಲು ಕೋಶಗಳಲ್ಲಿ ದ್ಯುತಿಸಂಶ್ಲೇಷಣೆ ಆರಂಭವಾಗುತ್ತದೆ. CO2 ಬಳಕೆಯಾಗುವುದರಿಂದ ಕೋಶದ ಒಳಗೆ pH ಹೆಚ್ಚುತ್ತದೆ. ಇದರಿಂದ K+ ಅಯಾನುಗಳು ಮತ್ತು Cl- ಅಯಾನುಗಳು ಕಾವಲು ಕೋಶಗಳ ಒಳಗೆ ಹೋಗುತ್ತವೆ. ಇದರಿಂದ ಅಭಿಸರಣಾ (ಆಸ್ಮೋಟಿಕ್) ಒತ್ತಡ ಹೆಚ್ಚಿ, ನೀರು ಒಳಹೋಗುತ್ತದೆ. ಕೋಶಗಳು ಉಬ್ಬಿ, ಬಾಗಿದ ಆಕಾರ ಪಡೆದು ರಂಧ್ರ ತೆರೆಯುತ್ತದೆ.

ಸಂಜೆತ್ತಲಾಗುತ್ತಿದ್ದಂತೆ ಈ ರಂಧ್ರ ಮುಚ್ಚುವುದು ಹೇಗೆ? 

ಬೆಳಕು ಕಡಿಮೆಯಾದಾಗ, ABA ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು K+ ಅಯಾನುಗಳನ್ನು ಹೊರಹಾಕುತ್ತದೆ. ನೀರು ಹೊರಹೋಗಿ ಕೋಶಗಳು ಕುಗ್ಗಿ ಚಪ್ಪಟೆಯಾಗಿ ರಂಧ್ರ ಮುಚ್ಚುತ್ತದೆ. ಈ ಪ್ರಕ್ರಿಯೆಯ ಮೇಲೆ ಬೆಳಕು, CO2 ಪ್ರಮಾಣ, ತಾಪಮಾನ, ಗಾಳಿಯ ತೇವಾಂಶ ಮತ್ತು ನೀರಿನ ಲಭ್ಯತೆ ನೇರವಾಗಿ ಪ್ರಭಾವ ಬೀರುತ್ತವೆ.

ಪರಿಸರ ಮತ್ತು ಪತ್ರ ರಂಧ್ರಗಳ ಸಂಬಂಧ

ಬಿಸಿಲು ಮತ್ತು ತಾಪಮಾನ: ಹೆಚ್ಚಿನ ಬೆಳಕು ಮತ್ತು ಸೂಕ್ತ ತಾಪಮಾನದಲ್ಲಿ ರಂಧ್ರಗಳು ಹೆಚ್ಚು ತೆರೆದುಕೊಳ್ಳುತ್ತವೆ. 30-35°C ಅತ್ಯುತ್ತಮ.

ನೀರಿನ ಕೊರತೆ: ಬರಗಾಲದಲ್ಲಿ ABA ಹಾರ್ಮೋನ್ ಹೆಚ್ಚಿ ರಂಧ್ರಗಳು ಮುಚ್ಚುತ್ತವೆ. ಇದರಿಂದ ಸಸ್ಯಗಳು ಬದುಕುಳಿಯುತ್ತವೆ. ಆದರೆ ದ್ಯುತಿಸಂಶ್ಲೇಷಣೆ ಕೂಡ ಕಡಿಮೆಯಾಗುತ್ತದೆ.

CO2 ಪ್ರಮಾಣ: ವಾತಾವರಣದಲ್ಲಿ CO2 ಹೆಚ್ಚಿದರೆ ಸಸ್ಯಗಳು ರಂಧ್ರವನ್ನು ಸ್ವಲ್ಪ ಮುಚ್ಚಿಕೊಳ್ಳುತ್ತವೆ. ಏಕೆಂದರೆ ಕಡಿಮೆ ಸಮಯದಲ್ಲಿ ಬೇಕಾದಷ್ಟು ಸಿಗುತ್ತದೆ. ಇದರಿಂದ ನೀರಿನ ನಷ್ಟ ಕಡಿಮೆಯಾಗುತ್ತದೆ. ಜಾಗತಿಕ ತಾಪಮಾನದ ಅಧ್ಯಯನದಲ್ಲಿ ಇದು ಮುಖ್ಯ ಅಂಶ.

ಗಾಳಿ: ಗಟ್ಟಿಯಾದ ಗಾಳಿ ಇದ್ದಾಗ ಬಾಷ್ಪೋತ್ಸರ್ಜನೆ ವೇಗವಾಗಿ ನಡೆದು ರಂಧ್ರಗಳು ಬೇಗ ಮುಚ್ಚುತ್ತವೆ.

ಪತ್ರ ರಂಧ್ರಗಳ ಕೃಷಿ ಮತ್ತು ವಿಜ್ಞಾನದಲ್ಲಿನ ಮಹತ್ವ :

ಬೆಳೆ ಇಳುವರಿ: ಯಾವ ಸಸ್ಯದಲ್ಲಿ ಎಷ್ಟು ರಂಧ್ರಗಳಿವೆ ಮತ್ತು ಅವು ಎಷ್ಟು ಸಮರ್ಥವಾಗಿ ಕೆಲಸ ಮಾಡುತ್ತವೆ ಎಂಬುದರ ಮೇಲೆ ಬೆಳೆಯ ಇಳುವರಿ ಅವಲಂಬಿತವಾಗಿರುತ್ತದೆ. ವಿಜ್ಞಾನಿಗಳು ಈಗ "ಜಲದಕ್ಷ" ತಳಿಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇವು ಕಡಿಮೆ ನೀರಿನಲ್ಲಿ ಹೆಚ್ಚು ಆಹಾರ ತಯಾರಿಸುತ್ತವೆ.

ಬರ ನಿರೋಧಕ ತಳಿಗಳು: ABA ಹಾರ್ಮೋನ್‌ಗೆ ಹೆಚ್ಚು ಪ್ರತಿಕ್ರಿಯಿಸುವ ಕಾವಲು ಕೋಶಗಳನ್ನು ಹೊಂದಿರುವ ತಳಿಗಳು ಬರವನ್ನು ತಡೆದುಕೊಳ್ಳುತ್ತವೆ.

ವಾಯು ಮಾಲಿನ್ಯ ಅಧ್ಯಯನ: ರಸ್ತೆ ಬದಿಯ ಮರಗಳ ಎಲೆಗಳಲ್ಲಿನ ರಂಧ್ರಗಳು ಮುಚ್ಚಿಕೊಂಡಿದ್ದರೆ, ಆ ಪ್ರದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಿದೆ ಎಂದು ಅರ್ಥ.

ಸೂಕ್ಷ್ಮದರ್ಶಕದ ಅಧ್ಯಯನ: ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಟ್ರೇಡಿಸ್ಕಾಂಟಿಯ ಎಲೆಯನ್ನು ತೆಗೆದುಕೊಂಡು ರಂಧ್ರಗಳ ಚಲನೆಯನ್ನು ನೇರವಾಗಿ ನೋಡಬಹುದು. ಇದು ಜೀವಶಾಸ್ತ್ರದ ಅತ್ಯಂತ ಸುಂದರ ಪ್ರಯೋಗಗಳಲ್ಲಿ ಒಂದು.

ಪತ್ರ ರಂಧ್ರಗಳು ಮತ್ತು ಮನುಷ್ಯ :

ನಾವು ಉಸಿರಾಡುವ ಪ್ರತಿ 5 ಆಕ್ಸಿಜನ್‌ ಅಣುಗಳಲ್ಲಿ 4 ಅಣುಗಳು ಸಸ್ಯಗಳಿಂದ ಬಂದಂತವು ಮತ್ತು ಆ ಸಸ್ಯಗಳು ಆಕ್ಸಿಜನ್‌ವನ್ನು ಬಿಡಲು ಬಳಸಿದ್ದು ಈ ಪುಟ್ಟ ರಂಧ್ರಗಳನ್ನೇ. ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಸಸ್ಯಗಳು ವಾತಾವರಣದಿಂದ CO2 ಅನ್ನು ಹೀರಿಕೊಂಡು ಸಂಗ್ರಹಿಸುತ್ತವೆ. ಈ ಪ್ರಕ್ರಿಯೆಯ ಸಂಪೂರ್ಣ ಹೊಣೆಗಾರಿಕೆ ಪತ್ರ ರಂಧ್ರಗಳ ಮೇಲಿದೆ. ಆದ್ದರಿಂದ ಮರಗಳನ್ನು ಕಡಿಯುವುದು ಎಂದರೆ ಭೂಮಿಯ ಶ್ವಾಸಕೋಶದಲ್ಲಿರುವ ರಂಧ್ರಗಳನ್ನು ಮುಚ್ಚಿದಂತೆ.

ಪತ್ರ ರಂಧ್ರಗಳು ಗಾತ್ರದಲ್ಲಿ ಬಹಳ ಚಿಕ್ಕವು. ಬರಿಗಣ್ಣಿಗೆ ಕಾಣುವುದಿಲ್ಲ. ಆದರೆ ಇವುಗಳ ಮಹತ್ವ ಅಗಾಧ. ಸಸ್ಯದ ಆಹಾರ, ನೀರು, ಉಸಿರು, ತಾಪಮಾನ ಎಲ್ಲವೂ ಇವುಗಳ ಮೇಲೆ ಅವಲಂಬಿತವಾಗಿದೆ. ಪ್ರಕೃತಿಯು ಎಷ್ಟು ಚಾಣಾಕ್ಷವಾಗಿ ವಿನ್ಯಾಸ ಮಾಡಿದೆ ಎಂದರೆ, ನೀರನ್ನು ಉಳಿಸಿಕೊಳ್ಳುತ್ತಲೇ ಆಹಾರ ತಯಾರಿಸುವ ಮತ್ತು ಅನಿಲ ವಿನಿಮಯ ಮಾಡುವ ವ್ಯವಸ್ಥೆಯನ್ನು ಒಂದೇ ರಚನೆಯಲ್ಲಿ ಇಟ್ಟಿದೆ. "ಚಿಕ್ಕದರಲ್ಲಿ ದೊಡ್ಡ ರಹಸ್ಯವಿದೆ" ಎಂಬ ಮಾತಿಗೆ ಪತ್ರ ರಂಧ್ರಗಳೇ ಸಾಕ್ಷಿ. ನಾವು ಮರದ ಎಲೆಯನ್ನು ಮುಟ್ಟಿದಾಗ, ನಮಗೆ ಗೊತ್ತಿಲ್ಲದೆಯೇ ಲಕ್ಷಾಂತರ ರಂಧ್ರಗಳು ತೆರೆದು ಮುಚ್ಚಿ ಭೂಮಿಯ ಉಸಿರನ್ನು ನಡೆಸುತ್ತಿರುತ್ತವೆ. ಆದ್ದರಿಂದ ಮುಂದಿನ ಬಾರಿ ನೀವು ಒಂದು ಎಲೆಯನ್ನು ನೋಡಿದಾಗ, ಅದರ ಮೇಲೆ ಕಾಣದ ಲಕ್ಷಾಂತರ ರಂಧ್ರಗಳು" ಜೀವನಕ್ಕಾಗಿ ಹೋರಾಡುತ್ತಿವೆ ಎಂದು ನೆನಪಿಡಿ. ಅವುಗಳನ್ನು ರಕ್ಷಿಸುವುದು ಎಂದರೆ ನಮ್ಮ ಭವಿಷ್ಯವನ್ನು ರಕ್ಷಿಸಿದಂತೆ.

Saturday, September 5, 2026

ಕನ್ನಡ ನೆಲದ ರಾಷ್ಟ್ರರತ್ನ ಶ್ರೀಮತಿ ರತ್ನಕುಮಾರಿ ಎಸ್.

ಕನ್ನಡ ನೆಲದ ರಾಷ್ಟ್ರರತ್ನ ಶ್ರೀಮತಿ ರತ್ನಕುಮಾರಿ ಎಸ್. 

 ಲೇಖಕರು :  ಶಶಿಕುಮಾರ್ ಬಿ. ಎಸ್. 

ರಾಷ್ಟ್ರ ಪ್ರಶಸ್ತಿ (2019) ಪುರಸ್ಕೃತ ಶಿಕ್ಷಕ 

ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, 

                             ಮಸ್ಕಲ್, ತುಮಕೂರು                                                      

(2026ರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ  ಶ್ರೀಮತಿ ರತ್ನಕುಮಾರಿ ಎಸ್. ರವರ ಪರಿಚಯ. )


                                    “ನನ್ನ ವಿದ್ಯಾರ್ಥಿಯೇ ನನ್ನ ಗುರು” — ಶ್ರೀಮತಿ ರತ್ನಕುಮಾರಿ ಎಸ್.

ಒಂದು ಶಿಕ್ಷಕಿ ಮನಸ್ಸು ಮಾಡಿದರೆ ಒಂದು ತರಗತಿಯನ್ನು ಮಾತ್ರವಲ್ಲ, ಇಡೀ ಶಾಲೆಯನ್ನು; ಒಂದು ಶಾಲೆಯನ್ನು ಮಾತ್ರವಲ್ಲ, ಇಡೀ ಸಮುದಾಯವನ್ನೇ ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಶ್ರೀಮತಿ ರತ್ನಕುಮಾರಿ ಎಸ್. ಅವರು.


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಂಚ ಹೋಬಳಿಯ ಸಮಟಗಾರು ಎಂಬ ಗ್ರಾಮೀಣ ಪರಿಸರದಿಂದ ರಾಷ್ಟ್ರ ರಾಜಧಾನಿ ದೆಹಲಿಯವರೆಗೆ ಅವರ ಶಿಕ್ಷಣ ಸೇವೆಯ ಪಯಣ, ಸಮರ್ಪಣೆ, ಸೃಜನಶೀಲತೆ ಮತ್ತು ಸಾಮಾಜಿಕ ಬದ್ಧತೆಯ ಅಪೂರ್ವ ಕಥನವಾಗಿದೆ.

ವೃತ್ತಿಪರ ಪರಿಚಯ

ಹುದ್ದೆ ಮತ್ತು ಶಾಲೆ: ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಮಟಗಾರು, ಕಡೂರು ಪೋಸ್ಟ್ – 577436, ಹುಂಚ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ.
DISE ಕೋಡ್: 29150214003
ಪ್ರಸ್ತುತ ಶಾಲೆಯಲ್ಲಿ ಸೇವೆ: 24 ವರ್ಷಗಳ ಸಮರ್ಪಿತ ಸೇವೆ
ಬೋಧನಾ ತತ್ವ: “ನನ್ನ ವಿದ್ಯಾರ್ಥಿಯೇ ನನ್ನ ಗುರು”

ನಾಲ್ವರು ಶಿಕ್ಷಕರು ಹಾಗೂ 56 ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯ ಬಹುತೇಕ ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮಗಳಿಂದ 10–12 ಕಿ.ಮೀ. ದೂರ ಕ್ರಮಿಸಿ ಶಾಲೆಗೆ ಆಗಮಿಸುತ್ತಾರೆ. ಗ್ರಾಮದಲ್ಲಿ ಕೇವಲ ನಾಲ್ವರು ವಿದ್ಯಾರ್ಥಿಗಳು ವಾಸಿಸುತ್ತಿದ್ದರೂ, ಇತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ (SMC) ಸಹಕಾರದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದು ಶಾಲೆಯ ಮೇಲಿನ ಸಮುದಾಯದ ಕಾಳಜಿಗೆ ಸಾಕ್ಷಿಯಾಗಿದೆ.

ಗ್ರಾಮೀಣ ಶಾಲೆಯೊಂದು ಸಂಪನ್ಮೂಲಭರಿತ ಕಲಿಕಾ ಕೇಂದ್ರವಾಗಿ...

ಶ್ರೀಮತಿ ರತ್ನಕುಮಾರಿ ಅವರ ಸೇವೆಯ ವಿಶೇಷತೆ ಕೇವಲ ತರಗತಿಯ ನಾಲ್ಕು ಗೋಡೆಗಳೊಳಗಿನ ಬೋಧನೆಗೆ ಸೀಮಿತವಾಗಿಲ್ಲ. ತಮ್ಮ ಶಾಲೆಯ ಆವರಣವನ್ನೇ ಮಕ್ಕಳಿಗೆ ನೋಡಿ, ಮಾಡಿ, ಅನುಭವಿಸಿ ಮತ್ತು ಆನಂದದಿಂದ ಕಲಿಯುವ ಮುಕ್ತ ಕಲಿಕಾ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ್ದಾರೆ.

ಸಮುದಾಯದ ಸಹಕಾರ – ಅಭಿವೃದ್ಧಿಯ ಶಕ್ತಿ

ಶಾಲೆಯ ಮೂಲಸೌಕರ್ಯ ಅಭಿವೃದ್ಧಿ, ಅಕ್ಷರ ದಾಸೋಹ ಭೋಜನ ಕೋಣೆಯ ನಿರ್ಮಾಣ, ವಿದ್ಯಾರ್ಥಿಗಳ ಸೌಲಭ್ಯಗಳು ಹಾಗೂ ವಿವಿಧ ಕಲಿಕಾ ಸಂಪನ್ಮೂಲಗಳಿಗಾಗಿ ವಸುಧೈವ ಕುಟುಂಬಕಂ ಚಾರಿಟೆಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಪಾಲುದಾರರಿಂದ ಸುಮಾರು ₹40 ಲಕ್ಷಕ್ಕೂ ಅಧಿಕ ಅನುದಾನ ಮತ್ತು ದೇಣಿಗೆಯನ್ನು ಸಂಗ್ರಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಕೇವಲ ಹಣ ಸಂಗ್ರಹಣೆಯ ಸಾಧನೆಯಲ್ಲ; “ಶಾಲೆ ನಮ್ಮದು, ಮಕ್ಕಳ ಭವಿಷ್ಯ ನಮ್ಮೆಲ್ಲರ ಹೊಣೆ” ಎಂಬ ಭಾವನೆಯನ್ನು ಸಮುದಾಯದಲ್ಲಿ ಮೂಡಿಸಿದ ಪ್ರಯತ್ನವಾಗಿದೆ.

ಶಾಲೆಯೇ ಒಂದು ತೆರೆದ ಪಠ್ಯಪುಸ್ತಕ

🌿 ನೈಮಿಷ ಔಷಧೀಯ ಸಸ್ಯಗಳ ಉದ್ಯಾನ : ಶಾಲಾ ಆವರಣದಲ್ಲಿರುವ ಔಷಧೀಯ ಸಸ್ಯಗಳ ಉದ್ಯಾನ ಮಕ್ಕಳಿಗೆ ಪ್ರಕೃತಿಯೊಂದಿಗೆ ನೇರ ಸಂವಾದ ಕಲ್ಪಿಸುತ್ತದೆ. ವಿವಿಧ ಗಿಡಮೂಲಿಕೆಗಳ ಹೆಸರು, ಸ್ವರೂಪ ಮತ್ತು ಅವುಗಳ ಸಾಂಪ್ರದಾಯಿಕ ಔಷಧೀಯ ಉಪಯೋಗಗಳನ್ನು ಮಕ್ಕಳು ಪುಸ್ತಕದಲ್ಲಿ ಓದುವುದಕ್ಕಿಂತ ನೇರವಾಗಿ ಸಸ್ಯಗಳನ್ನು ಕಂಡು, ಮುಟ್ಟಿ, ಗುರುತಿಸಿ ಕಲಿಯುತ್ತಾರೆ.

🔢 ಗಣಿತ ಮತ್ತು ವಿಜ್ಞಾನ ಉದ್ಯಾನ

ಅಮೂರ್ತ ಪರಿಕಲ್ಪನೆಗಳನ್ನು ಸರಳ ಮತ್ತು ಸ್ಪಷ್ಟಗೊಳಿಸಲು ಜ್ಯಾಮಿತೀಯ ಮಾದರಿಗಳು, ತೂಕ–ಅಳತೆ ಉಪಕರಣಗಳು ಹಾಗೂ ಪರಿಕಲ್ಪನಾ ಆಧಾರಿತ ಕಲಿಕಾ ವ್ಯವಸ್ಥೆಗಳನ್ನು ಬಳಸಲಾಗಿದೆ. ಹೀಗಾಗಿ ಗಣಿತ ಮತ್ತು ವಿಜ್ಞಾನವು ಪಠ್ಯಪುಸ್ತಕದಿಂದ ಹೊರಬಂದು ಶಾಲಾ ಆವರಣದಲ್ಲೇ ಜೀವಂತವಾಗುತ್ತದೆ.

🎭 ಶ್ರೀಶಾದಲೆ ರಂಗಮಂದಿರ : ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮುದಾಯದ ಸಭೆಗಳು, ನಾಟಕಗಳು ಮತ್ತು ವಿವಿಧ ಕಲಾ ಪ್ರದರ್ಶನಗಳಿಗೆ ಮುಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುವ ಈ ರಂಗಮಂದಿರವು ಶಾಲೆಯನ್ನು ಸಮುದಾಯದ ಸಾಂಸ್ಕೃತಿಕ ಕೇಂದ್ರವಾಗಿಯೂ ರೂಪಿಸಿದೆ.

“ಕಸದಿಂದ ರಸ” – ತ್ಯಾಜ್ಯಕ್ಕೆ ಹೊಸ ಬದುಕು

ರತ್ನಕುಮಾರಿ ಅವರ ಸೃಜನಶೀಲತೆಯ ಮತ್ತೊಂದು ವಿಶಿಷ್ಟ ಆಯಾಮ “ಕಸದಿಂದ ರಸ” ಪರಿಕಲ್ಪನೆ.

ಬಳಸಿ ಎಸೆಯುವ ಪ್ಲಾಸ್ಟಿಕ್ ಕಂಟೈನರ್‌ಗಳು, ತೈಲದ ಡಬ್ಬಿಗಳು ಹಾಗೂ ಹಳೆಯ ವಾಹನಗಳ ಟೈರ್‌ಗಳನ್ನು ಕಸದಂತೆ ಕಾಣದೆ, ಅವುಗಳನ್ನು ಕಲಿಕೋಪಕರಣಗಳು (TLM), ಸ್ಟೂಲ್‌ಗಳು, ಆಟಿಕೆಗಳು ಹಾಗೂ ಲಂಬ ಹೂಕುಂಡಗಳಾಗಿ ಮರುಬಳಕೆ ಮಾಡಲಾಗಿದೆ. ಇದರ ಮೂಲಕ ಮಕ್ಕಳಿಗೆ ಒಂದೇ ಸಮಯದಲ್ಲಿ ಸೃಜನಶೀಲತೆ ಮತ್ತು ಪರಿಸರ ಸಂರಕ್ಷಣೆ ಎಂಬ ಎರಡು ಪಾಠಗಳು ದೊರೆಯುತ್ತವೆ.

ನೈಜ ಜೀವನವೇ ಕಲಿಕೆಯ ಪ್ರಯೋಗಾಲಯ - “ಸಂತೆ” – ತರಗತಿಯಿಂದ ನೈಜ ಜಗತ್ತಿಗೆ 

ವಿದ್ಯಾರ್ಥಿಗಳಲ್ಲಿ ಗಣಿತ, ಭಾಷೆ, ಸಂವಹನ ಮತ್ತು ಆರ್ಥಿಕ ಸಾಕ್ಷರತೆಯನ್ನು ಬೆಳೆಸಲು “ಸಂತೆ” ಪರಿಕಲ್ಪನೆಯನ್ನು ಬಳಸಲಾಗಿದೆ. ತೂಕ ಮಾಡುವುದು, ಬೆಲೆ ನಿಗದಿಪಡಿಸುವುದು, ಬಿಲ್ ತಯಾರಿಸುವುದು, ಹಣ ಸ್ವೀಕರಿಸುವುದು, ಉಳಿಕೆ ಹಣ ನೀಡುವುದು ಹಾಗೂ ಗ್ರಾಹಕರೊಂದಿಗೆ ಸಂವಹನ ನಡೆಸುವುದು—ಇವೆಲ್ಲವನ್ನೂ ಮಕ್ಕಳು ಸ್ವತಃ ನಿರ್ವಹಿಸುತ್ತಾರೆ. ಇದು ಕೇವಲ ಆಟವಲ್ಲ; ನೈಜ ಜೀವನದ ಸನ್ನಿವೇಶದಲ್ಲಿ ಕಲಿಕೆಯ ಅತ್ಯುತ್ತಮ ಮಾದರಿ.

🌾 ಕೃಷಿ ಮತ್ತು ಕ್ಷೇತ್ರಾನುಭವ

ಸಾಂಪ್ರದಾಯಿಕ ಭತ್ತ ನಾಟಿ ಸೇರಿದಂತೆ ಸ್ಥಳೀಯ ಕೃಷಿ ಪದ್ಧತಿಗಳಲ್ಲಿ ವಿದ್ಯಾರ್ಥಿಗಳನ್ನು ನೇರವಾಗಿ ತೊಡಗಿಸುವ ಮೂಲಕ ನಮ್ಮ ನೆಲ, ಕೃಷಿ ಮತ್ತು ಗ್ರಾಮೀಣ ಪರಂಪರೆಯೊಂದಿಗೆ ಮಕ್ಕಳ ಸಂಬಂಧವನ್ನು ಗಟ್ಟಿಗೊಳಿಸಲಾಗಿದೆ. 

ತಂತ್ರಜ್ಞಾನವೂ – ಪರಂಪರೆಯೂ ಜೊತೆಯಾಗಿ : ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸ್ಮಾರ್ಟ್ ತರಗತಿಗಳು, ಇಂಟರ್ನೆಟ್, ಡಿಜಿಟಲ್ ಪ್ರೊಜೆಕ್ಟರ್‌ಗಳು ಮತ್ತು ಕಂಪ್ಯೂಟರ್‌ಗಳ ಮೂಲಕ ದೃಶ್ಯಾಧಾರಿತ ಹಾಗೂ ಡಿಜಿಟಲ್ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಕ್ಕಳಿಗೆ ಅನುಭವದ ಮೂಲಕ ಕಲಿಸಲು ವಿಶೇಷ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಆಯೋಜಿಸಲಾಗಿದೆ. ಮತದಾನ, ನಾಯಕತ್ವ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವ—ಇವೆಲ್ಲವನ್ನೂ ಮಕ್ಕಳು ತರಗತಿಯಲ್ಲಿ ಕೇಳುವುದಕ್ಕಿಂತ ಸ್ವತಃ ಅನುಭವಿಸುವಂತೆ ಮಾಡಲಾಗಿದೆ.

FLN – ಕಲಿಕೆಯ ಬುನಾದಿಗೆ ಬಲ  : 

ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಅಭಿವೃದ್ಧಿಗೆ ಬಹು-ಸಂವೇದನಾಶೀಲ ಕಲಿಕಾ ಉಪಕರಣಗಳು, ಭಾಷಾ ಪ್ರಯೋಗಾಲಯಗಳು, ಸ್ಥಳೀಯ ಭಾಷೆಯಲ್ಲಿ ವಿದ್ಯಾರ್ಥಿಗಳೇ ಸಂಪಾದಿಸುವ ಹಸ್ತಪ್ರತಿ “ಚಿಣ್ಣರಲೋಕ”, ಇಂಗ್ಲಿಷ್ ಕಲಿಕಾ ಬೆಂಚ್‌ಗಳು ಹಾಗೂ ಪರಿಕಲ್ಪನಾ ಆಧಾರಿತ ಗೋಡೆಚಿತ್ರಗಳಂತಹ ವೈವಿಧ್ಯಮಯ ಕಲಿಕಾ ವ್ಯವಸ್ಥೆಗಳನ್ನು ಬಳಸಲಾಗಿದೆ. ಇದರಿಂದ “ಪ್ರತಿ ಮಗು ಕಲಿಯಬೇಕು; ಕಲಿಕೆ  ಆನಂದದಾಯಕವಾಗಿರಬೇಕು” ಎಂಬ ಆಶಯ ಸಾಕಾರಗೊಳ್ಳುತ್ತದೆ.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ 

ರತ್ನಕುಮಾರಿ ಅವರ ಶಿಕ್ಷಣದ ದೃಷ್ಟಿಕೋನವು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗಿಲ್ಲ. ದೈಹಿಕ ಆರೋಗ್ಯ, ಕ್ರೀಡೆ, ಯೋಗ, ಕಲೆ, ಸಂಸ್ಕೃತಿ, ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನೂ ಸಮಾನವಾಗಿ ಒಳಗೊಂಡಿದೆ.

🧘 ಯೋಗ, ಕ್ರೀಡೆ ಮತ್ತು ಆರೋಗ್ಯ

ನಿಯಮಿತ ದೈಹಿಕ ಚಟುವಟಿಕೆ, ಯೋಗ ಹಾಗೂ ಅಥ್ಲೆಟಿಕ್ಸ್ ತರಬೇತಿಗೆ ಒತ್ತು ನೀಡಲಾಗಿದೆ. ಇದರ ಫಲವಾಗಿ ವಿದ್ಯಾರ್ಥಿನಿ ರಕ್ಷಿತಾ ಅವರು 100 ಮೀಟರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ.

🎶 ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ

ಯಕ್ಷಗಾನ, ಶಾಸ್ತ್ರೀಯ ನೃತ್ಯ, ಸಂಗೀತ, ನಾಟಕ ಹಾಗೂ ಏಕಪಾತ್ರಾಭಿನಯದಂತಹ ಸಾಂಪ್ರದಾಯಿಕ ಮತ್ತು ಪ್ರದರ್ಶನ ಕಲೆಗಳಿಗೆ ಶಾಲೆಯಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಇದರ ಮೂಲಕ ಮಕ್ಕಳು ಕೇವಲ ಪಾಠ ಕಲಿಯುವುದಲ್ಲ; ತಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯನ್ನು ಅರಿತು ಬೆಳೆಸಿಕೊಳ್ಳುತ್ತಾರೆ.

🍎 ಆರೋಗ್ಯ ಮತ್ತು ಪೌಷ್ಟಿಕಾಂಶ ಜಾಗೃತಿ

ಪೋಷಣ ಅಭಿಯಾನ ಸೇರಿದಂತೆ ವಿವಿಧ ಆರೋಗ್ಯ ಮತ್ತು ಪೌಷ್ಟಿಕಾಂಶ ಆಧಾರಿತ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳನ್ನು ಆಯೋಜಿಸಿ, ಆರೋಗ್ಯಕರ ಜೀವನಶೈಲಿಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಗಿದೆ.

ಶಾಲೆ–ಪೋಷಕರು–ಸಮುದಾಯ: 

ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ರತ್ನಕುಮಾರಿ ಅವರು ವಿಶೇಷ ಆದ್ಯತೆ ನೀಡಿದ್ದಾರೆ. ಮನೆಭೇಟಿಗಳು, ವಿದ್ಯಾರ್ಥಿಗಳ ಪೋರ್ಟ್‌ಫೋಲಿಯೋ ಕುರಿತು ಸಂವಾದ, ಸ್ವಯಂಸೇವಕ ಚಟುವಟಿಕೆಗಳು, ಶಾಲಾ ಆವರಣದ ಅಭಿವೃದ್ಧಿ ಕಾರ್ಯಗಳು ಹಾಗೂ ಸಹಭಾಗಿತ್ವದ ಶಾಲಾ ಆಡಳಿತದ ಮೂಲಕ ಪೋಷಕರು ಮತ್ತು ತಾಯಂದಿರ ಸಮಿತಿಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಶಾಲೆ ಕೇವಲ “ಮಕ್ಕಳು ಬರುವ ಸ್ಥಳ”ವಾಗಿರದೆ, “ಇಡೀ ಸಮುದಾಯದ ಶಾಲೆ”ಯಾಗಿ ರೂಪುಗೊಂಡಿದೆ.

ಸಮಟಗಾರುವಿನಿಂದ ದೆಹಲಿಯವರೆಗೆ...

ಅನೇಕ ಕಲಿಕಾ ಪೂರಕ ಚಟುವಟಿಕೆಗಳನ್ನು ನಿರಂತರವಾಗಿ ರೂಪಿಸಿ, ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಶ್ರೀಮತಿ ರತ್ನಕುಮಾರಿ ಅವರು ತಮ್ಮ ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆಯನ್ನು ತಂದಿದ್ದಾರೆ. ಸುತ್ತಮುತ್ತಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೂ ಅವರು ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ.

ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಮನಸ್ಸು ಮಾಡಿದರೆ ಒಂದು ಶಾಲೆಯ ರೂಪವನ್ನೇ ಬದಲಾಯಿಸಬಹುದು; ಒಂದು ಶಾಲೆಯನ್ನು ಬದಲಾಯಿಸಿದರೆ ಒಂದು ಗ್ರಾಮದ ಭವಿಷ್ಯವನ್ನೇ ಬದಲಾಯಿಸಬಹುದು ಎಂಬುದಕ್ಕೆ ರತ್ನಕುಮಾರಿ ಮೇಡಂ ಅವರ ಸೇವಾ ಪಯಣ ಅತ್ಯುತ್ತಮ ನಿದರ್ಶನ. ಸಮಟಗಾರು ಎಂಬ ಪುಟ್ಟ ಗ್ರಾಮೀಣ ಶಾಲೆಯ ಮಣ್ಣಿನಿಂದ ಆರಂಭವಾದ ಅವರ ಪಯಣ, ರಾಷ್ಟ್ರಮಟ್ಟದ ಗೌರವದ ದೆಹಲಿ ವೇದಿಕೆಯವರೆಗೆ ತಲುಪಿರುವುದು ಕರ್ನಾಟಕದ ಶಿಕ್ಷಕ ಸಮುದಾಯವೇ ಹೆಮ್ಮೆ ಪಡುವ ಸಂಗತಿ.

ಇದು ಕೇವಲ ಒಬ್ಬ ಶಿಕ್ಷಕಿಗೆ ಸಂದ ರಾಷ್ಟ್ರ ಪ್ರಶಸ್ತಿಯ ಕಥೆಯಲ್ಲ. ಇದು ಗ್ರಾಮೀಣ ಶಿಕ್ಷಣದ ಶಕ್ತಿ, ಶಿಕ್ಷಕರ ಸಂಕಲ್ಪ, ಸಮುದಾಯದ ಸಹಕಾರ ಮತ್ತು ಮಕ್ಕಳ ಮೇಲಿನ ಅಪಾರ ಪ್ರೀತಿಯ ಕಥೆ. ಸಮಟಗಾರುವಿನಿಂದ ದೆಹಲಿಯವರೆಗೆ ಸಾಗಿದ ಈ ಸಾರ್ಥಕ ಪಯಣವನ್ನು “ಸವಿಜ್ಞಾನ” ಓದುಗರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿದ ರತ್ನಕುಮಾರಿ ಮೇಡಂ ಅವರಿಗೆ ಹಾಗೂ ಈ ವರದಿಯನ್ನು ರೂಪಿಸಲು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಅನಂತ ಧನ್ಯವಾದಗಳು.

ಶ್ರೀಮತಿ ರತ್ನಕುಮಾರಿ ಎಸ್. ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಸಾಧನೆ ಗ್ರಾಮೀಣ ಭಾರತದ ಸಾವಿರಾರು ಶಿಕ್ಷಕರಿಗೆ ಪ್ರೇರಣೆಯಾಗಲಿ; ನಿಮ್ಮ ಶಾಲೆ ಇನ್ನೂ ಸಾವಿರಾರು ಮಕ್ಕಳ ಕನಸುಗಳಿಗೆ ರೆಕ್ಕೆಗಳಾಗಲಿ.



Saturday, July 4, 2026

ಬಹುಮುಖ ಪ್ರತಿಭೆಯ ಡಾ. ನವೀನ್ ಕುಮಾರ್

ಬಹುಮುಖ ಪ್ರತಿಭೆಯ ಡಾ. ನವೀನ್ ಕುಮಾರ್

                                                                                                              ಲೇಖನ : ಶಶಿಕುಮಾರ್ ಬಿ.ಎಸ್.

(2025ನೇ ಸಾಲಿನ ಸಿ.ಎನ್.ಆರ್. ರಾವ್ ಔಟ್‌ಸ್ಟ್ಯಾಂಡಿಂಗ್ ಸೈನ್ಸ್ ಟೀಚರ್ ಅವಾರ್ಡ್ ಪುರಸ್ಕೃತ ವಿಜ್ಞಾನ ಶಿಕ್ಷಕ ಡಾ. ನವೀನ್ ಕುಮಾರ್ ಆರ್.ಯು. ಅವರ ಕಿರು ಪರಿಚಯ )

"ಪೊಲೀಸ್ ವೃತ್ತಿಗಿಂತ ಶಿಕ್ಷಕ ವೃತ್ತಿಯೇ ಶ್ರೇಷ್ಠ" ಎಂಬ ದೃಢ ನಂಬಿಕೆಯಿಂದ ಪೊಲೀಸ್ ವೃತ್ತಿಯನ್ನು ತ್ಯಜಿಸಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಡಾ. ನವೀನ್ ಕುಮಾರ್ ಆರ್.ಯು. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಳೆದ ಸಾಲಿನಿಂದ ತುಮಕೂರು ಜಿಲ್ಲೆಯ ತಿಪಟೂರಿನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಾಧನಾ ಪಥವನ್ನು ಪರಿಚಯಿಸುವುದು ಸಂತಸದ ಸಂಗತಿಯಾಗಿದೆ.

ಡಾ. ನವೀನ್ ಕುಮಾರ್ ಅವರು ತಮ್ಮ ಸ್ವರಚಿತ ವಿಜ್ಞಾನ ಗೀತೆಗಳ ಮೂಲಕ ರಾಜ್ಯದಾದ್ಯಂತ ಚಿರಪರಿಚಿತರಾಗಿದ್ದಾರೆ. ವಿಜ್ಞಾನದ ಯಾವುದೇ ಕ್ಲಿಷ್ಟಕರ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಹಾಗೂ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತೆ ಅದನ್ನು ಲಾವಣಿ, ಜಾನಪದ ಮತ್ತು ಹರಿಕಥೆ ಶೈಲಿಯ ಗೀತೆಗಳಾಗಿ ರೂಪಿಸಿ, ಲಯಬದ್ಧವಾಗಿ ಹಾಡುತ್ತಾ ಬೋಧಿಸುತ್ತಾರೆ. ಈ ವಿನೂತನ ಬೋಧನಾ ವಿಧಾನ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಬೆಳೆಸುತ್ತಿದೆ. ಈ ಗಾಯನ ಕಲೆ ಅವರಿಗೆ ತಂದೆಯಿಂದ ಬಂದ ಅಮೂಲ್ಯ ಪರಂಪರೆಯಾಗಿದೆ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಅವರು ಹಾಡುಗಾರ, ಕವಿ, ಲೇಖಕ, ನಾಟಕಕಾರ, ನಟ, ನಿರ್ದೇಶಕ ಹಾಗೂ ಸಮಾಜಮುಖಿ ಚಿಂತಕರಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ.

ಶಿಕ್ಷಕ ವೃತ್ತಿಗೆ ಸೇರಿದ ದಿನದಿಂದಲೂ ವಿಜ್ಞಾನ ಪಠ್ಯಕ್ಕೆ ಅನುಗುಣವಾದ ಗೀತೆಗಳ ರಚನೆ, ಕಿರುಚಿತ್ರಗಳ ನಿರ್ಮಾಣ, ನಾಟಕಗಳ ಸೃಜನ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ತಂಬಾಕು ನಿರ್ಮೂಲನೆ, ಪ್ಲಾಸ್ಟಿಕ್ ಮುಕ್ತ ಪರಿಸರ, ರೈತರಲ್ಲಿ ವೈಜ್ಞಾನಿಕ ಕೃಷಿ ಅರಿವು, ಶಾಲಾ ಸ್ವಚ್ಛತೆ, ಶೌಚಾಲಯ ಬಳಕೆ, ಹಾಗೂ ಪಠ್ಯಕ್ಕೆ ಪೂರಕವಾದ ಬೋಧನಾ ಸಾಮಗ್ರಿಗಳ ತಯಾರಿಕೆ ಸೇರಿದಂತೆ ಅನೇಕ ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ನಾಲ್ಕು ಗೋಡೆಗಳ ನಡುವೆ ಪಾಠ ಮಾಡುವುದಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ, ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರ ಕಾಳಜಿ, ವೈಜ್ಞಾನಿಕ ಮನೋಭಾವ, ವೈಯಕ್ತಿಕ ಆರೋಗ್ಯ, ತಂಬಾಕು ನಿಯಂತ್ರಣ, ಮಾಲಿನ್ಯ ನಿಯಂತ್ರಣ, ಗಾಳಿ, ನೀರು, ಮಣ್ಣು ಮತ್ತು ಅರಣ್ಯ ಸಂರಕ್ಷಣೆ, ನಾಡು-ನುಡಿ ಪ್ರೀತಿ, ದೇಶಭಕ್ತಿ, ಶಿಕ್ಷಣದ ಮಹತ್ವ, ಶಿಶುಹತ್ಯೆ, ಭ್ರೂಣಹತ್ಯೆ, ಬಾಲ್ಯವಿವಾಹ, ಮಹಿಳಾ ಸಬಲೀಕರಣ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಸ್ವಚ್ಛತೆ ಹಾಗೂ ಕೊರೊನಾ ಜಾಗೃತಿ ಮುಂತಾದ ವಿಷಯಗಳ ಕುರಿತು ಜಾನಪದ ಹಾಗೂ ಲಾವಣಿ ಶೈಲಿಯ ಗೀತೆಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಇದುವರೆಗೆ ಅವರು ಪ್ರಕಟಿಸಿರುವ "ಗೀತಾ ವಿಜ್ಞಾನ" ಕೃತಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿಜ್ಞಾನವನ್ನು ಹಾಡಿನ ಮೂಲಕ ಸುಲಭವಾಗಿ ಕಲಿಯಲು ನೆರವಾಗುವುದರ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.

ಇದಲ್ಲದೆ "ಬಾ ಮರಳಿ ಗೂಡಿಗೆ", "ನನಗಿಹುದೊಂದಾಸೆ" ಹಾಗೂ "ಔತಣ ಈ ಹೃದಯಕೆ" ಕವನ ಸಂಕಲನಗಳ ಮೂಲಕ ಪರಿಸರ ಪ್ರೀತಿ, ಸಾಮಾಜಿಕ ಕಳಕಳಿ, ನಾಡು-ನುಡಿ-ಜಲ ಸಂರಕ್ಷಣೆ, ಮಾನವೀಯ ಮೌಲ್ಯಗಳು, ಮಹಿಳಾ ಸಬಲೀಕರಣ, ಬಾಲ್ಯವಿವಾಹ ತಡೆ, ಭ್ರೂಣಹತ್ಯೆ ವಿರೋಧ, ಪರಿಸರ ಸ್ನೇಹಿ ಹಬ್ಬಗಳ ಆಚರಣೆ, ಆರೋಗ್ಯ ಕಾಳಜಿ ಹಾಗೂ ಶಿಶು ಗೀತೆಗಳಂತಹ ಅನೇಕ ಮೌಲ್ಯಯುತ ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗಾಗಿ ಶಿಕ್ಷಣದ ಮಹತ್ವ, ಪರಿಸರ ಸಂರಕ್ಷಣೆ, ಜೀವವೈವಿಧ್ಯ, ಕೃಷಿಯ ಮಹತ್ವ, ಆಹಾರದ ಮೌಲ್ಯ, ವರದಕ್ಷಿಣೆ ನಿರ್ಮೂಲನೆ, ಮಹಿಳಾ ಶೋಷಣೆ, ಭ್ರೂಣಹತ್ಯೆ, ಬಾಲ್ಯವಿವಾಹ, ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಕಿರುನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಜೊತೆಗೆ ಪ್ಲಾಸ್ಟಿಕ್ ಮರುಬಳಕೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ಶೌಚಾಲಯ ಬಳಕೆಯ ಕುರಿತು ಕಿರುಚಿತ್ರಗಳನ್ನು ನಿರ್ಮಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಶಿಕ್ಷಕರಾಗಿ ಗಾಯನ, ಪ್ರಬಂಧ, ಭಾಷಣ, ನಾಟಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದಿರುವ ಅವರು, ಇದೇ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲು ನೆರವಾಗಿದ್ದಾರೆ. ಕೃಷಿ ಹಾಗೂ ಪರಿಸರ ಸಂಪನ್ಮೂಲಗಳ ಕುರಿತು ವಿವಿಧ ಯೋಜನೆಗಳನ್ನು ಸಿದ್ಧಪಡಿಸಿ ರಾಜ್ಯಮಟ್ಟದಲ್ಲಿ ಮಂಡಿಸಲು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ್ದಾರೆ.

"ಪವಾಡ ರಹಸ್ಯ ಬಯಲು" ಕಾರ್ಯಕ್ರಮದ ಮೂಲಕ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯವನ್ನು ಡಾ. ನವೀನ್ ಕುಮಾರ್ ಅವರು ನಿರಂತರವಾಗಿ ನಡೆಸುತ್ತಿದ್ದಾರೆ. ಬೇವಿನ ಮರದಿಂದ ಹಾಲಿನಂತಹ ದ್ರವ ಹೊರಬರುವುದರ ಹಿಂದಿರುವ ವೈಜ್ಞಾನಿಕ ಕಾರಣ, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ವಿಡಿಯೋಗಳು, ಉಪನ್ಯಾಸಗಳು ಹಾಗೂ ಜಾಗೃತಿ ಜಾಥಾಗಳ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುತ್ತಿದ್ದಾರೆ.

ಹೆಣ್ಣುಮಕ್ಕಳ ವೈಯಕ್ತಿಕ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಋತುಚಕ್ರದ ಬಗ್ಗೆ ಇರುವ ಮೂಢನಂಬಿಕೆಗಳನ್ನು ನಿವಾರಿಸಲು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಉಚಿತ ಮೆನ್ಸ್ಟ್ರುವಲ್ ಹೈಜಿನ್ ಕಿಟ್‌ಗಳನ್ನು ವಿತರಿಸುವುದರ ಜೊತೆಗೆ ಬಾಲ್ಯವಿವಾಹ ತಡೆಗಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಶಾಲೆ ಬಿಟ್ಟ ಹೆಣ್ಣುಮಕ್ಕಳನ್ನು ಪುನಃ ಶಾಲೆಗೆ ಕರೆತಂದು, ಉಚಿತ ಕಲಿಕೋಪಕರಣಗಳನ್ನು ನೀಡಿ ಅವರ ಶಿಕ್ಷಣ ಮುಂದುವರಿಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಕೇವಲ 15 ದಿನಗಳಲ್ಲಿ ಐದು ಟನ್ ಪ್ಲಾಸ್ಟಿಕ್ ಸಂಗ್ರಹಿಸಿ ಮರುಚಕ್ರೀಕರಣಕ್ಕೆ ಕಳುಹಿಸಿರುವುದು ಅವರ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮ ಮತ್ತು ಶಾಲೆಗಳಿಗಾಗಿ ಜಾಗೃತಿ ಜಾಥಾಗಳನ್ನು ನಡೆಸುವುದರ ಜೊತೆಗೆ, ತ್ಯಾಜ್ಯ ಪ್ಲಾಸ್ಟಿಕ್ ಬಳಸಿ ಹೂವಿನ ಕುಂಡಗಳು, ಗಿಡಗಳಿಗೆ ನೀರುಣಿಸುವ ಸಾಧನಗಳು, ಪಕ್ಷಿಗಳಿಗೆ ಆಹಾರ ಪಾತ್ರೆಗಳು, ಅಲಂಕಾರಿಕ ವಸ್ತುಗಳು, ಆಟಿಕೆಗಳು, ಪೆನ್ ಸ್ಟ್ಯಾಂಡ್‌ಗಳು ಹಾಗೂ ಸರಳ ಪಾಠೋಪಕರಣಗಳನ್ನು ತಯಾರಿಸಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯಲ್ಲಿ 5R ತತ್ವಗಳಾದ Reduce (ಮಿತ ಬಳಕೆ), Reuse (ಮರುಬಳಕೆ), Recycle (ಮರುಚಕ್ರೀಕರಣ), Repurpose (ಮರುಉದ್ದೇಶ) ಮತ್ತು Refuse (ನಿರಾಕರಣೆ) ಕುರಿತು ವಿಶೇಷ ಒತ್ತು ನೀಡುತ್ತಿದ್ದಾರೆ.

ಪರಿಸರ ಸಂರಕ್ಷಣೆಯ ಉದ್ದೇಶದಿಂದ ಬೀಜದ ಉಂಡೆಗಳನ್ನು ತಯಾರಿಸಿ ಬೆಟ್ಟ, ಗುಡ್ಡ ಹಾಗೂ ಬಯಲು ಪ್ರದೇಶಗಳಲ್ಲಿ ಬಿತ್ತುವ ಮೂಲಕ ಅರಣ್ಯ ವೃದ್ಧಿಗೆ ಕೊಡುಗೆ ನೀಡಿದ್ದಾರೆ. ಶಾಲಾ ಆವರಣದಲ್ಲಿ ನೂರಾರು ಹಣ್ಣಿನ ಗಿಡಗಳು ಹಾಗೂ ಇತರೆ ಉಪಯುಕ್ತ ಮರಗಳನ್ನು ಬೆಳೆಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಎರಡು ಗಿಡಗಳನ್ನು ವಿತರಿಸಿ ತಮ್ಮ ಮನೆಯಲ್ಲೋ ಅಥವಾ ಕೃಷಿ ಜಮೀನಿನಲ್ಲೋ ನೆಟ್ಟು ಪೋಷಿಸಲು ಮಾರ್ಗದರ್ಶನ ನೀಡುತ್ತಿದ್ದಾರೆ.

ವಾಯು ಮತ್ತು ಜಲ ಮಾಲಿನ್ಯ ನಿಯಂತ್ರಣಕ್ಕಾಗಿ "ದೀಪಕ್ಕೆ ಎಣ್ಣೆ ಹಾಕೋಣ – ಪಟಾಕಿಗೆ ನೀರು ಹಾಕೋಣ" ಎಂಬ ಘೋಷವಾಕ್ಯದಡಿ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವ ಅಭಿಯಾನ ನಡೆಸುತ್ತಿದ್ದಾರೆ. ಅದೇ ರೀತಿ ರಾಸಾಯನಿಕ ಗಣೇಶ ಮೂರ್ತಿಗಳ ಬದಲಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಜಲಮಾಲಿನ್ಯ ತಡೆಗಟ್ಟುವಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಶಾಲೆಯ ಬಿಸಿಯೂಟ ಯೋಜನೆಗೆ ಪೂರಕವಾಗಿ "ಕಿಚನ್ ಪಾರ್ಕ್" ನಿರ್ಮಿಸಿ ತರಕಾರಿ, ಸೊಪ್ಪು ಹಾಗೂ ಕಾಳುಗಳನ್ನು ಬೆಳೆಯಲಾಗುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳ ಬಿಸಿಯೂಟ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.

ತಮ್ಮ 18 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಜೀವನ್ ಮಾರ್ಗ ಶೈಕ್ಷಣಿಕ ಫೌಂಡೇಶನ್‌ನ ಸಹಕಾರದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಹೆಣ್ಣುಮಕ್ಕಳಿಗಾಗಿ ನಾಲ್ಕು ಆಧುನಿಕ ಗುಣಮಟ್ಟದ ಶೌಚಾಲಯಗಳನ್ನು ನಿರ್ಮಿಸಿದ್ದು, ಪ್ರಾಯೋಗಿಕ ಕಲಿಕೆಗೆ ಅನುಕೂಲವಾಗುವಂತೆ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವನ್ನೂ ಸ್ಥಾಪಿಸಿದ್ದಾರೆ.

ರೈತರಿಗಾಗಿ ಸಾವಯವ ಕೃಷಿ, ಮಿಶ್ರ ಬೆಳೆ ಪದ್ಧತಿ, ನೀರಿನ ಮಿತ ಹಾಗೂ ಮರುಬಳಕೆ, ಮಣ್ಣಿನ ಫಲವತ್ತತೆ ಸಂರಕ್ಷಣೆ, ಪೌಷ್ಟಿಕ ಆಹಾರ ಮತ್ತು ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ರೂಪಿಸಿ ವೈಜ್ಞಾನಿಕ ಕೃಷಿಯ ಅರಿವು ಮೂಡಿಸುತ್ತಿದ್ದಾರೆ.

ಮರಗಳ ಉಳಿವಿಗಾಗಿ ಕಾಗದದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ "ಸ್ಲೇಟು-ಬಳಪ ಬಳಸಿ, ಕಾಡು ಉಳಿಸಿ" ಎಂಬ ವಿನೂತನ ಕಾರ್ಯಕ್ರಮವನ್ನು ಶಾಲೆಯಲ್ಲಿ ಯಶಸ್ವಿಯಾಗಿ ಅಳವಡಿಸಿದ್ದಾರೆ.

ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಪೋಷಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಲು ವಿದ್ಯಾವಂತ ಹಳೆಯ ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ನೇಮಿಸಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಹಾಗೂ ಪರಿಸರ ಕಾಳಜಿಯೊಂದಿಗೆ ಶಾಲೆಯ ಶೈಕ್ಷಣಿಕ ಪ್ರಗತಿಗಾಗಿ ವಿವಿಧ ದಾನಿಗಳ ಸಹಕಾರದಿಂದ ಸುಮಾರು 90 ಲಕ್ಷ ರೂಪಾಯಿಗೂ ಅಧಿಕ ಅನುದಾನವನ್ನು ಸಂಗ್ರಹಿಸಿ ವಿಜ್ಞಾನ ಪ್ರಯೋಗಾಲಯ, STEM ಲ್ಯಾಬ್, ಡಿಜಿಟಲ್ ಲ್ಯಾಬ್, ಕಂಪ್ಯೂಟರ್ ವ್ಯವಸ್ಥೆ, ಮಳೆನೀರು ಕೊಯ್ಲು, ಕುಡಿಯುವ ನೀರಿನ ವ್ಯವಸ್ಥೆ, ಕಾಂಪೌಂಡ್ ನವೀಕರಣ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಕಲಿಕೋಪಕರಣಗಳ ವಿತರಣೆಯಂತಹ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಅಲ್ಲದೆ, OSAAT educational trust ಸಂಸ್ಥೆಯ ಸಹಕಾರದೊಂದಿಗೆ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲ್ಕು ಆಧುನಿಕ ಸುಸಜ್ಜಿತ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ವಿಜ್ಞಾನವನ್ನು ಉಪನ್ಯಾಸಕ್ಕೆ ಮಾತ್ರ ಸೀಮಿತಗೊಳಿಸದೆ, ಪ್ರಾಯೋಗಿಕ ಚಟುವಟಿಕೆಗಳು, ಗೀತೆಗಳು, ಪರಿಸರ ಅಧ್ಯಯನ ಹಾಗೂ ತಂತ್ರಜ್ಞಾನದ ನೆರವಿನಿಂದ ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದಾರೆ.

ಕೊರೊನಾ ಅವಧಿಯಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಚಂದನ ವಾಹಿನಿಯ "ಸಂವೇದ" ಕಾರ್ಯಕ್ರಮದ ಮೂಲಕ ಪಾಠ ಬೋಧನೆ ನಡೆಸಿದ್ದಾರೆ. ಚಿಂಟು ವಾಹಿನಿ ಮೂಲಕ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನೀಡಿದ್ದು, ಕೊರೊನಾ ಜಾಗೃತಿ ಗೀತೆಗಳನ್ನು ಸ್ವತಃ ರಚಿಸಿ ಹಾಡುವ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಿದ್ದಾರೆ. ಅವರ ಗೀತೆಗಳನ್ನು ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿಯೂ ಜಾಗೃತಿ ಕಾರ್ಯಕ್ರಮಗಳಲ್ಲಿ ಬಳಸಲಾಗಿದೆ.

ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಾಸಿಂಗ್ ಪ್ಯಾಕೇಜ್ ಹಾಗೂ ಪುನರಾವರ್ತನಾ ಪುಸ್ತಕಗಳ ರಚನೆಯಲ್ಲಿ ಭಾಗವಹಿಸಿದ್ದು, "ಪರೀಕ್ಷೆಗೆ ತಯಾರಿ ಹೇಗೆ?" ಎಂಬ ವಿನೂತನ ಕಾರ್ಯಕ್ರಮದ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಪ್ರತಿಭಾ ಕಾರಂಜಿ, ಕಲೋತ್ಸವ, ರಂಗೋತ್ಸವ, ವಿಜ್ಞಾನೋತ್ಸವ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸುವಂತೆ ಮಾರ್ಗದರ್ಶನ ನೀಡಿದ್ದಾರೆ. ಜೊತೆಗೆ INSPIRE Award, NMMSS, State Level Science Quiz, State Level Model Making ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

ಎಸ್.ಎಸ್.ಎಲ್.ಸಿ. ನಂತರದ ಶಿಕ್ಷಣ, ವೃತ್ತಿ ಆಯ್ಕೆ ಹಾಗೂ ಉನ್ನತ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ನೀಡುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಸಲಹೆ ನೀಡುವ ಮೂಲಕ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕಲೆ, ಸಾಹಿತ್ಯ, ಸಂಗೀತ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಮಾನ ಆಸಕ್ತಿ ಹೊಂದಿರುವ ಡಾ. ನವೀನ್ ಕುಮಾರ್ ಅವರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಾ ಕನ್ನಡ ನಾಡು-ನುಡಿ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ.

ಇಂತಹ ಬಹುಮುಖ ಪ್ರತಿಭೆ ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ, ಡಾ. ನವೀನ್ ಕುಮಾರ್ ಅವರಿಗೆ 2025ನೇ ಸಾಲಿನ "ಸಿ.ಎನ್.ಆರ್. ರಾವ್ ಔಟ್‌ಸ್ಟ್ಯಾಂಡಿಂಗ್ ಸೈನ್ಸ್ ಟೀಚರ್ ಅವಾರ್ಡ್" ಪ್ರದಾನ ಮಾಡಲಾಗಿದೆ.

ಇವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ದೊರೆಯಲಿ. ಅವರ ಜ್ಞಾನ, ಅನುಭವ ಮತ್ತು ವಿನೂತನ ಬೋಧನಾ ವಿಧಾನಗಳು ರಾಜ್ಯದ ಎಲ್ಲ ವಿಜ್ಞಾನ ಶಿಕ್ಷಕರಿಗೂ ಪ್ರೇರಣೆಯಾಗಲಿ ಹಾಗೂ ಅವರ ಮಾರ್ಗದರ್ಶನದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂಬುದು ಸವಿಜ್ಞಾನ ತಂಡದ ಹಾರೈಕೆಗಳು. 



Saturday, March 4, 2023

ಕರೋನಾ ನಂತರದ ಕಲಿಕೆಯು. . . . ಪಬ್ಲಿಕ್‌ ಪರೀಕ್ಷೆಯು . . .

 ಕರೋನಾ ನಂತರದ ಕಲಿಕೆಯು. . .  . ಪಬ್ಲಿಕ್‌ ಪರೀಕ್ಷೆಯು . . . 

                                       ಶಶಿಕುಮಾರ್‌.ಬಿ.ಎಸ್

    

 

(“I find that the harder I work, the more luck I seem to have” – Thomas Jefferson)

ಇನ್ನೇನು ಮಾರ್ಚ್‌ ತಿಂಗಳಲ್ಲಿ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಹೇಗೆ ತಯಾರು ಮಾಡಬೇಕು? ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಕರೋನಾದಂತಹ ಪ್ಯಾಂಡಮಿಕ್‌ ನಂತರ ಹೇಗೆ ಸಾಧಿಸುವುದು? ನಾವುಗಳು ಇನ್ನುಳಿದ ಪರೀಕ್ಷಾ ದಿನಗಳನ್ನು ವಿದ್ಯಾರ್ಥಿಗಳಿಗೆ ಸದುಪಯೋಗ  ಪಡಿಸಿಕೊಳ್ಳುವಂತೆ ಹೇಗೆ ಯೋಜನೆ ರೂಪಿಸುವುದು ಎನ್ನುವ ಹಲವು ಹತ್ತು ಸಮಸ್ಯೆಗಳು ಎದುರಾಗಿವೆ. ಇದಕ್ಕೆ ಕಾರಣ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಈ ವರ್ಷ ಪ್ರಾರಂಭವಾಗಿರುವುದು. ಅದರಲ್ಲೂ ಈ ಶೈಕ್ಷಣಿಕ ವರ್ಷವು ೨೦೨೨ರ ಮೇ ತಿಂಗಳ ೧೫ನೇ ತಾರೀಖಿನಿಂದಲೇ ಪ್ರಾರಂಭವಾದವು. ಶಾಲೆ ಏನೋ ಪ್ರಾರಂಭವಾಯಿತು ಆದರೇ, ವಿದ್ಯಾರ್ಥಿಗಳಿಗೆ ಕಲಿಕೆ ಅನುಕೂಲಿಸುವ ವಿಧಾನವು ಸಂಪೂರ್ಣವಾಗಿ ಬದಲಾಯಿತು. ಪ್ರಾರಂಭದಲ್ಲಿ ಹೊಸ ಪದ್ಧತಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಲು ಕಷ್ಟವೆನಿಸಿದರೂ, ನಾವೀನ್ಯಾತಾ ಬೋಧನಾ ವಿಧಾನಗಳನ್ನು ಅಳವಡಿಸಿ ಶೈಕ್ಷಣಿಕ ವರ್ಷದ ಅಂತ್ಯವನ್ನು ತಲುಪಿದ್ದೇವೆ. ಸ್ನೇಹಿತರೇ ಈ ಶೈಕ್ಷಣಿಕ ಸಾಲಿನಲ್ಲಿ ನಾವು ಗರಿಷ್ಟ ತರಗತಿಗಳನ್ನು ಕೈಗೊಂಡಿದ್ದೇವೆ. ಆದರೂ ನಮ್ಮ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಾವು ಪ್ರಗತಿ ಸಾಧಿಸಲು ನಾವು ಕೊಂಚ ಹಿಂದುಳಿದಿದ್ದೇವೆ ಎನ್ನವುದು ನನ್ನ ವೈಯಕ್ತಿಕ ಅನಿಸಿಕೆ. ಅದರಲ್ಲೂ ನಾವು ಈ ವರ್ಷ ಗುಣಾತ್ಮಕ ಶಿಕ್ಷಣದ ಪ್ರಗತಿ ಸಾಧಿಸುವ ಸಲುವಾಗಿ ಇಲಾಖೆಯು ೧೦ನೇ ತರಗತಿಯ ಜೊತೆಗೆ 5ನೇ ತರಗತಿ ಮತ್ತು 8ನೇ ತರಗತಿಗೂ ಪಬ್ಲಿಕ್‌ ಪರೀಕ್ಷೆಯ ರೀತಿ ಪರೀಕ್ಷೆ ಕೈಗೊಳ್ಳುತ್ತಿರುವುದರಿಂದ  ನಾವುಗಳೆಲ್ಲರೂ ಕಠಿಣ ಪರಿಶ್ರಮ ಮತ್ತು ಸುಲಭ ತಂತ್ರಗಳಿಂದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾಗಿದೆ. ಹಾಗಾಗಿ ನನ್ನ ಅನುಭವದ ಕೆಲವು ಸಲಹಾತ್ಮಕ ಯೋಜನೆಗಳನ್ನು ನಿಮ್ಮ ಮುಂದೆ ಈ ಅಂಕಣದಲ್ಲಿ ಪರಿಚಯಿಸಲು ಇಚ್ಛಿಸುತ್ತೇನೆ.

ಕರೋನಾ ನಂತರದಲ್ಲಿ ಬೋಧನೆ ಮತ್ತು ಕಲಿಕೆ ಎಲ್ಲವೂ ಬದಲಾಗಿದೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಕುಂಠಿತವಾಗಿದೆ. ಶಿಕ್ಷಕರಾದ ನಾವುಗಳು ವಿದ್ಯಾರ್ಥಿಗಳ ಕಲಿಕೆಗೆ ಶ್ರಮಪಡುವುದಕ್ಕಿಂತ, ಅವರುಗಳನ್ನು ತರಗತಿ ಕೋಣೆಯಲ್ಲಿ ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಸಾಧನೆಯಾಗಿದೆ. ಕರೋನಾ ಪ್ಯಾಂಡಮಿಕ್‌ ಕಾಲದಲ್ಲಿ ಮೊಬೈಲ್‌ ಬಳಕೆಯಿಂದಲಾದರೂ ಒಂದಷ್ಟು ಕಲಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಇಲಾಖೆ ಶಿಕ್ಷಕರಿಗೆ ಪ್ರೋತ್ಸಾಹಿಸಿ ಆನ್‌ಲೈನ್‌ ಬೋಧನೆ, ದೂರದರ್ಶನ ಪಾಠ, ವೆಬಿನಾರ್‌ಗಳ ಬಳಕೆ ಹೀಗೆ ನಾನಾ ರೀತಿಯಲ್ಲಿ ಪ್ರಯತ್ನಿಸಿತಾದರೂ ಮಕ್ಕಳಲ್ಲಿ ಕಲಿಕೆ ಕನಿಷ್ಟವಾಗಿದೆ. ಆದರೆ ಇಲೆಕ್ಟ್ರಾನಿಕ್‌ ಸಾಧನಗಳ ಬಳಕೆಯಲ್ಲಿ ವಿದ್ಯಾರ್ಥಿಗಳು ನಿಪುಣರಾಗಿದಾರೆ. ನಗರ ಪ್ರದೇಶದ ಶಾಲೆಗಳಲ್ಲಂತೂ ಈ ಸಾಧನಗಳ ಬಳಕೆಯಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದು ಸವಾಲೆನಿಸಿದೆ. ಇದರ ಹೊರತಾಗಿಯೂ ಗುಣಾತ್ಮಕ ಶಿಕ್ಷಣ ಮತ್ತು ಗುಣಾತ್ಮಕ ಶೈಕ್ಷಣಿಕ ಪ್ರಗತಿಗೆ ನಾವೆಲ್ಲಾ ಶ್ರಮಿಸಬೇಕಿದೆ.


ನಾವೀಗ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಲ್ಲಿರುವ ಜ್ಞಾನ ತುಂಬುವುದಕ್ಕಿಂತ, ನೈತಿಕಶಿಕ್ಷಣ ಮತ್ತು ಜೀವನಕೌಶಲಗಳ ಜ್ಞಾನ ತುಂಬುವ ಕಾರ್ಯ ಹೆಚ್ಚು ಮಾಡಬೇಕಿದೆ. ಪರೀಕ್ಷೆ ಎಂದರೆ ಭಯ ಅನ್ನುವ ಬದಲು ಮಕ್ಕಳು ಪರೀಕ್ಷೆ ಎಂದರೆ ಹಬ್ಬ ಎನ್ನುವ ರೀತಿಯಲ್ಲಿ ಮಕ್ಕಳನ್ನು ಸ್ಫೂರ್ತಿದಾಯಕ ಮಾತುಗಳಿಂದ ಪ್ರೇರೇಪಿಸಬೇಕಾಗಿದೆ. ಶಿಕ್ಷಕರು ಆಯಾ ವಿಷಯಗಳಲ್ಲಿ ಯಾವ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಕಲಿಕೆಯನ್ನು ರೂಢಿಸಿಕೊಂಡಿದ್ದಾರೆ ಎನ್ನವುದನ್ನು ಖಾತ್ರಿ ಪಡಿಸಿಕೊಂದು ವಿದ್ಯಾರ್ಥಿಗಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು. ಉದಾಹರಣೆಗೆ ಕಲಿಕೆಯಲ್ಲಿ ತಮ್ಮನ್ನು ಉತ್ತಮವಾಗಿ ತೊಡಗಿಸಿಕೊಂಡ ವಿದ್ಯಾರ್ಥಿಗಳಿಗೆ ಪೂರ್ಣ ಕಲಿಕಾ ಸಾಮರ್ಥ್ಯಗಳನ್ನು ಅಭ್ಯಾಸ ಮಾಡಿ ಸಿದ್ಧರಾಗಲು ತಿಳುವಳಿಕೆ ನೀಡುವುದು. ಕಲಿಕೆಯಲ್ಲಿ ಸಾಮಾನ್ಯವಾಗಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಬಹು ನೀರೀಕ್ಷಿತ ಕಲಿಕಾ ಸಾಮರ್ಥ್ಯಗಳನ್ನು ಅಭ್ಯಾಸ ಮಾಡಿ ಸಿದ್ಧರಾಗಲು ಯೋಜನೆ ರೂಪಿಸುವುದು. ಸಮಸ್ಯೆಯೆಂದರೆ ನಿಧಾನಗತಿ ಕಲಿಕೆಯಲ್ಲಿರುವವರಿಗೆ ಮತ್ತು ಕಲಿಕೆಗೆ ಆಸಕ್ತಿ ತೋರದೇ ಇರುವ ವಿದ್ಯಾರ್ಥಿಗಳಿಗೆ ಯೋಜನೆ ರೂಪಿಸುವುದ. ಇಂತಹ ವಿದ್ಯಾರ್ಥಿ ಸಮೂಹಕ್ಕೆ ಎಂತಹ ಕಲಿಕಾ ಸಾಮರ್ಥ್ಯಗಳನ್ನು ಆಯ್ಕೆಮಾಡಿ ಯೋಜನೇ ರೂಪಿಸಿದರೂ ಆ ವಿದ್ಯಾರ್ಥಿಗಳಿಗೆ ಕಷ್ಟಕರವೇ. ಆದರೂ ವಿದ್ಯಾರ್ಥಿಗಳಲ್ಲಿ ಕನಿಷ್ಟ ಕಲಿಕೆಯನ್ನಾದರೂ ಖಾತ್ರಿ ಪಡಿಸುವ ಉದ್ದೇಶದಿಂದ ಯೋಜನೆ ರೂಪಿಸಲೇ ಬೇಕಾಗಿದೆ.

ಈ ನಿಟ್ಟಿನಲ್ಲಿ ವಿಜ್ಞಾನ ಶಿಕ್ಷಕನಾದ ನಾನು ವಿಜ್ಞಾನ ವಿಷಯದಲ್ಲಿ ಅಂದರೆ ಹತ್ತನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮೂರೂ ಗುಂಪಿನ ವಿದ್ಯಾರ್ಥಿಗಳಿಗೆ  ಮುಂದಿನ ವಾರ್ಷಿಕ ಪರೀಕ್ಷೆಗೆ ಇನ್ನುಳಿದ ದಿನಗಳಲ್ಲಿ ಹೇಗೆ ತಯಾರಿ ನಡೆಸುವುದು ಎನ್ನುವ ಕೆಲವು ಮಾರ್ಗೋಪಾಯಗಳ ಸಲಹೆ ನೀಡಲಿಚ್ಚಿಸುತ್ತೇನೆ. ಈ ರೀತಿಯ ಕ್ರಿಯಾ ಯೋಜನೆ ರೂಪಿಸಿಕೊಂಡು ನಾನು ನನ್ನ ವಿಷಯದಲ್ಲಿ ಯಶಸ್ಸು ಕಂಡದ್ದೂ ಇದೆ. ಇದಕ್ಕೆ ಪೂರಕವಾಗಿ ಕಳೆದ ಹತ್ತು ವರ್ಷಗಳಿಂದ ನಾನು ಬೋಧಿಸುವ ವಿಜ್ಞಾನ ವಿಷಯದಲ್ಲಿ ಪ್ರತಿಶತ ೧೦೦ಕ್ಕೆ ೧೦೦ ರಷ್ಟು ಫಲಿತಾಂಶವೇ ಸಾಕ್ಷಿಯಾಗಿದೆ. ಅದರಲ್ಲೂ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳು ಶೇಕಡಾ ೭೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವುದು ಆಸಕ್ತಿದಾಯಕ ವಿಷಯವಾಗಿದೆ.

ಹಾಗಾಗಿ ನೀವುಗಳು ಕೂಡ ಇದೇ ರೀತಿಯ ಕ್ರಿಯಾ ಯೋಜನೆ ರೂಪಿಸಿದರೆ ಯಶಸ್ಸು ನಿಶ್ಚಿತ.

ವಿಜ್ಞಾನ ವಿಷಯದಲ್ಲಿ ಸ್ಮಾರ್ಟ್‌ ಆಗಿ ಪರೀಕ್ಷೆಗೆ ಅಭ್ಯಾಸ ನಡೆಸುವ ವಿಧಾನ ಹೇಗೆ? ನೋಡೋಣ.

೧. ಪರೀಕ್ಷಾ ಮಂಡಲಿಯಿಂದ ಈಗಾಗಲೇ ಹೊಸ ಪಠ್ಯಕ್ರಮವನ್ನು ಅನುಷ್ಟಾನಗೊಳಿಸಿದಾಗ ನೀಡಲಾದ ೩೦ ಚಿತ್ರಗಳ ಪಟ್ಟಿ ಇದೆ. ಈ ಚಿತ್ರಗಳನ್ನು ದಿನಕ್ಕೆ ಮೂರು ಚಿತ್ರಗಳಂತೆ ಅಭ್ಯಾಸ ಮಾಡಿದರೆ – ಹತ್ತು ದಿನಗಳಲ್ಲಿ ೧೨ ಅಂಕಗಳಿಗೆ ಸಿದ್ಧಗೊಳ್ಳಬಹುದು.

 
೨. ಕಾರ್ಬನ್‌ ಮತ್ತು ಅದರ ಸಂಯುಕ್ತಗಳು ಅಧ್ಯಾಯದಲ್ಲಿ ಇಲೆಕ್ಟ್ರಾನ್‌ ಚುಕ್ಕಿ ರಚನೆ/ಹೈಡ್ರೋಕಾರ್ಬನ್‌ಗಳ ಅಣು ಸೂತ್ರ/ ರಚನಾ ವಿನ್ಯಾಸ/ ಹೈಡ್ರೋಕಾರ್ಬನ್‌ ಸಂಯುಕ್ತಗಳನ್ನು ಹೆಸರಿಸುವುದನ್ನು ಅಭ್ಯಾಸ ಮಾಡಿದರೆ ಕನಿಷ್ಟ ೪ ಅಂಕಗಳು

೩. ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಅಧ್ಯಾಯದಲ್ಲಿನ ಲವಣಗಳ ಉಪಯೋಗ, ಎಥನಾಲ್‌/ ಎಥನೋಯಿಕ್‌ ಆಮ್ಲ ಇವುಗಳ ಅಣು ಸೂತ್ರ/ ಸಾಮಾನ್ಯ ಹೆಸರು/ ರಾಸಾಯನಿಕ ಹೆಸರು ಮತ್ತು ಈ ಸಂಯುಕ್ತಗಳ ಕನಿಷ್ಟ ಎರಡು ಉಪಯೋಗಗಳನ್ನು ಅಭ್ಯಾಸ ಮಾಡಿ ನೆನಪಿಟ್ಟು ಕೊಂಡರೆ ಕನಿಷ್ಟ ೨ ಅಂಕಗಳು.

೪. ಸರಳವಾದ ರಾಸಾಯನಿಕ ಸಮೀಕರಣಗಳನ್ನು ಬರೆಯುವುದು ಮತ್ತು ಅವುಗಳನ್ನು ಸರಿದೂಗಿಸುವುದು ಕಲಿತರೆ ಕನಿಷ್ಟ ೨ ಅಂಕಗಳು.


೫. ಲೆಕ್ಕದ ಸಮಸ್ಯೆಗಳನ್ನು ಪರಿಹರಿಸಲು ಕೇವಲ ಎರಡು ಅಧ್ಯಾಯಗಳು ಅಂದರೆ ವಿದ್ಯುಚ್ಛಕ್ತಿ ಮತ್ತು ಬೆಳಕು: ಪ್ರತಿಫಲನ ಮತ್ತು ವಕ್ರೀಭವನ ಗಳಲ್ಲಿನ ಸೂತ್ರಗಳು ಮತ್ತು ಏಕಮಾನಗಳನ್ನು ನೆನಪಿಟ್ಟುಕೊಂಡರೆ ಕನಿಷ್ಟ ೪ ಅಂಕಗಳನ್ನು ಪಡೆಯಬಹುದಾಗಿದೆ.

೬. ಲೋಹಗಳು ಮತ್ತು ಅಲೋಹಗಳು  ಅಧ್ಯಾಯದಲ್ಲಿನ ಕ್ರಿಯಾಶೀಲ ಸರಣಿ ನೆನಪಿಟ್ಟು ಕೊಂಡರೆ- ಸಂಬಂಧಿಸಿದ ಪ್ರಶ್ನೆಗಳಿಂದ ಕನಿಷ್ಟ ೨ ಅಂಕಗಳನ್ನು ಪಡೆಯಲು ಸಾಧ್ಯವಿದೆ.

೭. ಆಯ್ದ ಅಧ್ಯಾಯಗಳಲ್ಲಿನ ಪ್ರಮುಖ ಪ್ರಾಸಬದ್ಧ ಪರಿಕಲ್ಪನೆಗಳಿಗೆ ವ್ಯತ್ಯಾಸಗಳನ್ನು ಬರೆದು ಅಭ್ಯಾಸ ಮಾಡಿಸಿದರೆ ಕನಿಷ್ಟ ೪ ಅಂಕಗಳನ್ನು ಪಡೆಯಬಹುದು.

೮. ಇವುಗಳ ಜೊತೆಯಲ್ಲಿ ಈ ಹಿಂದಿನ ಮಾದರಿ ಪ್ರಶ್ನೆ ಪತ್ರಿಕೆಗಳು/ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆಗಳು/ ವಾರ್ಷಿಕ ಪರೀಕ್ಷಾ ಪ್ರಶ್ನೆ ಪತ್ರಿಕೆಗಳಲ್ಲಿನ ಅಧ್ಯಾಯವಾರು ಪ್ರಶ್ನೆಗಳು ಮತ್ತು ಉತ್ತರ ಬರೆದುಕೊಂಡು ಅಭ್ಯಾಸ ಮಾಡಿದರೆ ೬೦ ಕ್ಕೂ ಹೆಚ್ಚಿನ ಅಂಕಗಳನ್ನು (೬೦/೮೦) ಗಳಿಸಲು ಸಾಧ್ಯವಿದೆ ಸ್ನೇಹಿತರೆ. ‌

 ಈ ರೀತಿಯ ಕ್ರಿಯಾ ಯೋಜನೆ ರೂಪಿಸಿದ್ದಲ್ಲಿ ಖಂಡಿತವಾಗಿಯೂ ನೀವು ಯಶಸ್ಸು ಕಾಣುವಿರಿ. ಸಮೂಹ ಮಾಧ್ಯಮಗಳಲ್ಲಿ ದಿನಕ್ಕೆ ೨೦ ಪ್ಯಾಕೇಜ್‌ಗಳು ಹರಿದಾಡುತ್ತವೆ. ಒಂದಂತೂ ಅರ್ಥಮಾಡಿಕೊಳ್ಳಬೇಕು ಎಲ್ಲಾ ಪ್ಯಾಕೇಜ್‌ಗಳಲ್ಲಿರುವುದು ಇವೇ ಪ್ರಶ್ನೋತ್ತರಗಳೇ. ವಿದ್ಯಾರ್ಥಿಗಳು ಅಭ್ಯಾಸ ಮಾಡದೇ, ಎಷ್ಟು ಪ್ಯಾಕೇಜ್‌ಗಳನ್ನು ಸಂಗ್ರಹಿಸಿದರೆ ಏನು ಬಂತು? ಯಶಸ್ಸು ಪಡೆಯಬೇಕೆಂದರೆ ಸಿ‍ದ್ಧತೆ ಮತ್ತು ಕಠಿಣ ಶ್ರಮ ಅಗತ್ಯ.

ಆದುದರಿಂದ ನಮ್ಮೆಲ್ಲ ಶಿಕ್ಷಕ ಮಿತ್ರರಿಗೆ ತಿಳಿಸಲಿಚ್ಚಿಸುವುದೇನೆಂದರೆ ಯಾವ ವಿದ್ಯಾರ್ಥಿಯೂ ದಡ್ಡನಲ್ಲ. ಕಲಿಕೆಯ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಲ್ಲಿ ಅವರು ಸೋಮಾರಿಗಳಾದುದರಿಂದ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಶಿಕ್ಷಕರಾದ ನಾವುಗಳು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕನುಗುಣವಾಗಿ ತಮ್ಮದೇ ಆದ ವೈಯಕ್ತಿಕ ಕ್ರಿಯಾಯೋಜನೆ ರೂಪಿಸಿಕೊಂಡಲ್ಲಿ ನಿಮ್ಮ ನಿಮ್ಮ ವಿಷಯಗಳಲ್ಲಿ ಯಶಸ್ಸು ಕಾಣುವಿರಿ. ಮುಂದಿನ ನಿಮ್ಮ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಶುಭವಾಗಲಿ. 


Saturday, February 4, 2023

ನೆಲದೊಳಗಣ ಬೀಜಾಂಕುರ - “ಮಣ್ಣರಳಿ ಕಾಯಾಗಿ”

 ನೆಲದೊಳಗಣ ಬೀಜಾಂಕುರ - “ಮಣ್ಣರಳಿ ಕಾಯಾಗಿ”  

ಬಡವರ ಬಾದಾಮಿ ಎಂದೇ ಹೆಸರಾದ ಕಡಲೆಕಾಯಿ ಅಬಾಲವೃದ್ಧರಾಗಿ ಎಲ್ಲರಿಗೂ ಅಚ್ಚುಮೆಚ್ಚು. ಇದರ ರುಚಿ ನೋಡದವರೇ ಇಲ್ಲ . ಇಂತಹ ಕಡಲೆಕಾಯಿಯ ಸಂತಾನೋತ್ಪತ್ತಿ ನಿಸರ್ಗದೊಡಲಿನ ಅಚ್ಚರಿಯೇ ಸರಿ. ಮಣ್ಣೇ ಅರಳಿ ಕಾಯಿಯಾಯ್ತೇನೋ ‌ ಎಂಬಂತೆ ನೆಲದೊಳಗೇ  ಬೀಜಾಂಕುರಿಸುವ ನಿಸರ್ಗದ  ಚೋದ್ಯವೊಂದನ್ನು ಸೋದಾಹರಣವಾಗಿ ವಿವರಿಸಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ಶಶಿಕುಮಾರ್‌ ಅವರು.

(ಕಡಲೆ ಕಾಯಿಗಿಡದಲ್ಲಿನ ಸಂತಾನೋತ್ಪತ್ತಿಯ ಸೋಜಿಗದ ಸಂಗತಿ)

ಆಗ ನಾವಿನ್ನೂ ಚಿಕ್ಕವರು. ಅಮ್ಮಾ ಹಸಿವು ಎಂದಾಗ ಕೊಡುತ್ತಿದ್ದ ತಿನಿಸು ಎಂದರೆ ಅದು ಹುರಿದ ಕಡಲೆಕಾಯಿ. ಯಾರಾದರೂ ಅತಿಥಿಗಳು ದಿಢೀರನೆ ಮನೆಗೆ ಬಂದಾಗ ಕಾಫಿಯ ಜೊತೆ ಅವರಿಗೆ ಮೆಲ್ಲಲು ಕೊಡುತ್ತಿದ್ದ ಸುಲಭದ ತಿನಿಸು ಕೂಡ ಕಡಲೆಕಾಯಿಯೇ. ಆಗಿನ ದಿನಗಳಲ್ಲಿ ಕಡಲೆಕಾಯಿ ಎಂದರೆ ಉ‍ಳ್ಳವರಿಂದ ಹಿಡಿದು ಎಲ್ಲರೂ ಏನಾದರೂ ತಿನ್ನಬೇಕು ಅನಿಸಿದಾಗ ಸುಲಭವಾಗಿ ದೊರೆಯುತ್ತಿದ್ದ ತಿನಿಸು ಕಡಲೆಕಾಯಿಯೇ ಆಗಿತ್ತು. ನಿಜ ಕಡಲೇಕಾಯಿ ಎಂದರೆ ಅದು ಬಡವರ ಬಾದಾಮಿ ಎಂದೇ ಕರೆಸಿಕೊಳ್ಳುತ್ತದೆ. ನನಗೆ ತಿಳಿದ ಮಟ್ಟಿಗೆ ಒಣಗಿದ ಬೀಜಗಳ ಪೈಕಿ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡ, ಕಡಿಮೆ ಬೆಲೆಗೆ ದೊರೆಯುವ, ಎಲ್ಲರೂ ಬಳಸಬಹುದಾದ ಆಹಾರವೆಂದರೆ ಅದು ಕಡಲೆಕಾಯಿ.

ಕಡಲೆಬೀಜದಲ್ಲಿನ ಪೋಷಣಾ ಮೌಲ್ಯಗಳು: (ಪ್ರತಿ 100ಗ್ರಾಂ ಕಡಲೆ ಬೀಜಗಳಲ್ಲಿ)

ಪರ್ಯಾಪ್ತ ಕೊಬ್ಬುಗಳು – 35%,  

ಅಪರ್ಯಾಪ್ತ ಕೊಬ್ಬುಗಳು – 40%, 

ಕೊಲೆಸ್ಟ್ರಾಲ್‌ - 0%

ಸೋಡಿಯಂ-2% 

ಪೊಟ್ಯಾಸಿಯಂ-20%, 

ಮೆಗ್ನೀಸಿಯಂ-42%, 

ಶರ್ಕರ ಪಿಷ್ಟ-5%, 

ಪ್ರೋಟೀನ್‌-52%, 

ಕ್ಯಾಲ್ಸಿಯಂ-9%, 

ಕಬ್ಬಿಣ-25%, 

ವಿಟಮಿನ್‌ ಬಿ6-15%,

ಏನಿದು!! ಕಡಲೆಕಾಯಿ ಇದು ಯಾರಿಗೆ ಗೊತ್ತಿಲ್ಲ? ಅದರ ಬಗ್ಗೆ ಏನೋ ಹೇಳೋದಿಕ್ಕೆ ಹೊರಟಿದ್ದಾರಲ್ಲ ಅಂದ್ಕೊಂಡ್ರಾ?  ಖಂಡಿತ ನಿಜ. ಈಗ ನಾನು ಹೇಳ ಹೊರಟಿರುವುದು ಕಡಲೆಕಾಯಿ ಮತ್ತು ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಅಲ್ಲ. ಕಡಲೆಕಾಯಿ ಗಿಡದಲ್ಲಿ ನಡೆಯುವ ಅಚ್ಚರಿಯ ಸಂತಾನೋತ್ಪತ್ತಿ ಮತ್ತು ಅದರ ರಚನೆ ಬಗ್ಗೆ. ನಮಗೆ ಅನ್ನಿಸಬಹುದು ಅದರಲ್ಲೇನಿದೆ ವಿಶೇಷ. ಎಲ್ಲಾ ಗಿಡದಲ್ಲೂ ನಡೆಯುವ ಹಾಗೆ ಇದ್ರಲ್ಲೂ ನಡೆಯುತ್ತೆ ತಾನೇ? ಅಂದುಕೊಳ್ಳುವಿರಲ್ಲ‌ ? ಆದರೆ ಈ ಅಂಕಣ ಓದಿ ಕಡಲೆಕಾಯಿ ಗಿಡದಲ್ಲಿನ ಸಂತಾನೋತ್ಪತ್ತಿಯ ಸೋಜಿಗ ನಿಮಗೆ ತಿಳಿಯುತ್ತದೆ.

ಕಡಲೆಕಾಯಿ ಸಸ್ಯವು ಹೂಬಿಡುವ ಸಸ್ಯಗಳಲ್ಲಿ ಲೆಗ್ಯುಮಿನೋಸೆ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದು ಸಾಮಾನ್ಯವಾಗಿ ಉಷ್ಣವಲಯದ ಉತ್ತಮವಾದ ಬೆಳೆಯೂ ಹೌದು. ಮೂಲತಃ ಇದರ ಮೂಲ ದಕ್ಷಿಣ ಅಮೇರಿಕಾ ಎಂದು ಚರಿತ್ರೆ ಹೇಳುತ್ತದೆ. ಈಗ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ  ಎಂಬ ಬಿ.ಜಿ.ಎಲ್‌ ಸ್ವಾಮಿಯವರ ಕೃತಿಯ ನೆನಪಾಯಿತೇ?  ಇರಲಿ, ಆದರೆ ಇದನ್ನು ಅತಿ ಹೆಚ್ಚು ಬೆಳೆಯುವ ರಾಷ್ಟ್ರ ಚೀನಾ ದೇಶವಾಗಿದೆ. ದಕ್ಷಿಣ ಅಮೇರಿಕಾಕ್ಕೆ ಯೂರೋಪ್‌ನಿಂದ ಗುಲಾಮರನ್ನು ಕರೆತರುವಾಗ ಅವರ ಜೊತೆಯಲ್ಲಿಯೇ ಇದು ಕೂಡ ಬಂತು ಎಂಬ ಕಥೆಯೂ ಇದೆ. ಇದನ್ನು ನೋಡಿದರೆ ಇದರ ಹುಟ್ಟು ಯೂರೋಪ್‌ನದ್ದಾಗಿರಬೇಕು. ಹುಟ್ಟು ಎಲ್ಲಾದರೂ ಆಗಲಿ, ಇಂದು ಇದು ನಮ್ಮ ದೇಶದಲ್ಲಿ, ಅದರಲ್ಅಲೂ ನಮ್ಮ ಕನ್ನಡ ನಾಡಿನ ಇದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬರಡು ಪ್ರದೇಶದಲ್ಲಿ ಹಾಗೂ ನೀರಾವರಿ ಇದ್ದವರು ಬೇಸಿಗೆ ಕಾಲದಲ್ಲಿಯೂ ಬಂಪರ್‌ ಬೆಳೆ ತೆಗೆಯುತ್ತಾರೆ. ಈ ಕೆಳಗಿನ ಚಿತ್ರ ಗಮನಿಸಿ. ಇದರ ವ್ಯಾಪಕ ಹರಡಿಕೆ ಅಂದರೆ ಎಲ್ಲೆಲ್ಲಿ ಪ್ರಮುಖವಾಗಿ ಬೆಳೆಯುತ್ತಾರೆ ಎಂದು ತಿಳಿಯಬಹುದು.


ಪರಾಗಸ್ಪರ್ಶ ಮತ್ತು ಸಂತಾನೋತ್ಪತ್ತಿ:

ಇತರೆ ಸಸ್ಯಗಳಂತೆ ಕಡಲೆಕಾಯಿ ಸಸ್ಯಗಳು ಪರಾಗಸ್ಪರ್ಶಕ್ಕಾಗಿ ಕೀಟಗಳನ್ನು ಅವಲಂಬಿಸಿಲ್ಲ. ಅಂದರೆ ಪರಾಗವನ್ನು ಒಂದು ಸಸ್ಯದಿಂದ ಇನ್ನೊಂದಕ್ಕೆ ಸಾಗಿಸುವ ಜೇನುನೊಣಗಳು ಅಥವಾ ಇತರ ಕೀಟಗಳಂತಹ ಹೊರಗಿನ ಸಹಾಯದ ಅಗತ್ಯವನ್ನು ಅವಲಂಬಿಸಿಲ್ಲ.  ಇವು ಸ್ವಕೀಯ ಪರಾಗಸ್ಪರ್ಶ ನಡೆಸುವ ಸ್ವಾವಲಂಬಿ ಸಸ್ಯಗಳಾಗಿವೆ!!

ಬೀಜವನ್ನು ನೆಟ್ಟ ನಂತರ, ಮೊದಲ ಹೂವುಗಳು ನಾಲ್ಕರಿಂದ ಆರು ವಾರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಆರು ಅಥವಾ ಅದಕ್ಕಿಂತ ಹೆಚ್ಚು ವಾರಗಳವರೆಗೆ ಆ ಹೂಗಳು ಅರಳಿರುತ್ತವೆ.

ಸಾಮಾನ್ಯವಾಗಿ ಸಸ್ಯವನ್ನು ಗಮನಿಸಿದಾಗ ನಮಗೆ ಕಾಣುವುದು ಕೇವಲ ಐದರಿಂದ ಹತ್ತು ಹೂಗಳು ಮಾತ್ರ. ಆದರೆ ವಾಸ್ತವಾವಾಗಿ ಒಂದು ಗಿಡದಲ್ಲಿ ಐವತ್ತಕ್ಕೂ ಹೆಚ್ಚಿನ ಹೂಗಳು ಇರುತ್ತವೆ. ಈ ಎಲ್ಲಾ ಹೂಗಳು ಅರಳುವುದಿಲ್ಲ. ಮೊದಲ ಹಂತದಲ್ಲಿ ಕಾಣಿಸಿಕೊಂಡ ಹೂಗಳು ಸೂರ್ಯೋದಯದ ಸಮಯದಲ್ಲಿ ಅರಳುತ್ತವೆ. ನಂತರ ಉಗಮಿಸಿದ ಹೂಗಳು ಅರಳುವುದಿಲ್ಲ. ಕಾರಣ ಈಗಾಗಲೇ ಮೊದಲ ಹಂತದ ಹೂಗಳಲ್ಲಿ ಪರಾಗಸ್ಪರ್ಶಕ್ರಿಯೆ ನಡೆದು, ಫಲೀಕರಣ (ಫರ್ಟಿಲೈಸೇಶನ್‌) ನಡೆದಿರುತ್ತದೆ. ಸಸ್ಯದ ಜೀವಿತಾವಧಿ ಮುಗಿಯುತ್ತಾ ಬಂದಿರುತ್ತದೆ. ಆದ ಕಾರಣ ನಂತರದಲ್ಲಿ ಉಗಮಿಸಿದ ಹೂಗಳು ಅರಳದೇ ಸ್ವಕೀಯ ಪರಾಗಸ್ಪರ್ಶ ನಡೆದು, ಗರ್ಭಧಾರಣೆ ನಡೆಯುತ್ತದೆ. ಹಾಗಾಗಿಯೇ ನಾವು ಕಡಲೆಕಾಯಿ ಗಿಡವನ್ನು ಕಿತ್ತಾಗ ಒಂದು ಸುತ್ತಿನ ಕಾಯಿಗಳು ಬಲಿತವುಗಳಾಗಿರುತ್ತವೆ ಮತ್ತು ನಂತರದಲ್ಲಿ ಸಂತಾನೋತ್ಪತ್ತಿಯಾದ ಕಾಯಿಗಳು ಬಲಿಯಲು ಪ್ರಾರಂಭಿಸಿರುತ್ತವೆ. ಅದಕ್ಕೂ ತದನಂತರದವುಗಳು ಕೇವಲ ಬುಡ್ಡಾಗಿ (ಇಮ್ಮೇಚುರ್‌ ಪಾಡ್‌ಗಳು) ಉಳಿದುಬಿಡುತ್ತವೆ. 

ಈಗ ನಾವು ಕಡಲೆಕಾಯಿ ಸಸ್ಯದಲ್ಲಿ ಭೂಮಿಯ ಒಳಗೆ ಕಾಯಿ ಹೇಗೆ ಬರುತ್ತದೆ? ಎಂದು ತಿಳಿದುಕೊಳ್ಳೋಣ.  ನಿಜಕ್ಕೂ ಯಾವುದೇ ಸಸ್ಯದಲ್ಲಿ ಇಲ್ಲದ ಅಚ್ಚರಿ ಈ ಸಸ್ಯದಲ್ಲಿ ನಡೆಯುತ್ತದೆ.

ಪ್ರತಿ ಹೂವು ಬೆಳೆದು ಪಕ್ವವಾದಾಗ ಅರಳುತ್ತದೆ. ಅರಳಿದ ಹೂ, ಒಂದು ದಿನ ಅಥವಾ ಮೂರ್ನಾಲ್ಕು ದಿನ ಹಾಗೇಯೇ ಇರುತ್ತದೆ. ಈ ಸಂದರ್ಭದಲ್ಲಿ ಪರಾಗವನ್ನು ಬಿಡುಗಡೆ ಮಾಡಿ, ಪರಾಗರೇಣುಗಳು ಶಲಾಕಾಗ್ರದ ಮೇಲೆ ಬಿದ್ದು, ಎಂಟು ಅಥವಾ ಒಂಬತ್ತು ಗಂಟೆಗಳ ನಡುವೆ ಗರ್ಭಧಾರಣೆ ನಡೆಯುತ್ತದೆ. ಫಲೀಕರಣವು ಸಂಭವಿಸಿದ ಎಂಟರಿಂದ ಹದಿನಾಲ್ಕು ದಿನಗಳ ನಂತರ, ಅಂಡಾಶಯವು  ನೀಳವಾಗುತ್ತದೆ.  ಇದು  ಲಂಬವಾಗಿ ನೆಲಕ್ಕೆ ತಾಗಿ, ಅಡ್ಡಲಾಗಿ ತಿರುಗುತ್ತದೆ. ನೆಲದಡಿಯಲ್ಲಿ, ಸಮತಲವಾದ ಪೆಗ್, ಪಾಡ್ ಆಗಿ ಪಕ್ವಗೊಳ್ಳುತ್ತದೆ ಮತ್ತು ಏಳರಿಂದ ಒಂಬತ್ತು ವಾರಗಳ ನಂತರ ನಾವೆಲ್ಲರೂ ಗುರುತಿಸುವ ಕಡಲೆಕಾಯಿಯಾಗುತ್ತದೆ. 

ನಂತರದಲ್ಲಿ ಉಗಮಿಸಿದ ಹೂಗಳಲ್ಲಿ ಅರಳುವ ಮುನ್ನವೇ ಪರಾಗಸ್ಪರ್ಶ ನಡೆದು ಗರ್ಭಧಾರಣೆಗಾಗಿ  ನೆಲದಲ್ಲಿ ಹುದುಗಿರುವ ಅಂಡಾಶಯವನ್ನು ತಲುಪಲು ಇಂಟರ್‌ಕ್ಯಾಲರಿ ಮೆರಿಸ್ಟೆಮ್‌ನ ಸಹಾಯದಿಂದ ನೀಳವಾದ ಗೈನೋಪೋರ್‌ ಎಂಬ ರಚನೆಯನ್ನು ಹೊಂದುತ್ತವೆ. 

ಇವು ಗುರುತ್ವಾನುವರ್ತನೆಯ ಪ್ರಚೋದನೆಗೆ ಒಳಗಾಗಿ, ನೆಲಕ್ಕೆ ತಾಗಿ ಅಂಡಾಶಯವನ್ನು ತಲುಪಿ, ಬೀಜೋತ್ಪಾದನೆಗೆ ಸಹಾಯ ಮಾಡುತ್ತವೆ. ಹೂಗಳು ಎಲ್ಲೆಲ್ಲಿ ಕಂಡುಬರುತ್ತವೆಯೋ ಅಲ್ಲೆಲ್ಲಾ ಪೆಗ್‌ಗಳೆಂಬ ರಚನೆ ಉಂಟಾಗಿ ಮೇಲೆ ತಿಳಿಸಿದಂತಹ ಪ್ರಕ್ರಿಯೆ ನಡೆಯುತ್ತದೆ. ಹಾಗಾಗಿಯೇ ನಾವು ಕಡಲೆಕಾಯಿ ಗಿಡವನ್ನು ಕಿತ್ತಾಗ ಗಿಡದ ತುಂಬಾ ನೇತು ಬಿದ್ದಿರುವ ಪೆಗ್‌ಗಳು ಮತ್ತು ಕಾಯಿಗಳೆಂಬ ಪಾಡ್‌ಗಳನ್ನು ನಾವು ನೋಡಬಹುದು. ಇವೆಲ್ಲಾ ಪ್ರಕ್ರಿಯೆಗಳು ಸುಲಭವಾಗಿ ನಡೆಯುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಹಾರ್ಮೋನ್‌ಗಳ ಪಾತ್ರವೂ ಪ್ರಮುಖವಾಗಿದೆ. 

ನೋಡಿದಿರಾ, ಇಂತಹ ಸೋಜಿಗದ ಸಂತಾನೋತ್ಪತ್ತಿ ನಾವು ಬೇರೆ ಯಾವ ಸಸ್ಯದಲ್ಲೂ ಕಾಣಲು ಸಾಧ್ಯವಿಲ್ಲ. ಸಸ್ಯದ ಮೇಲ್ಭಾಗದಲ್ಲಿ ಹೂ ಬಿಟ್ಟು, ನೆಲದ ಕೆಳಗೆ ಬೀಜ ಉತ್ಪತ್ತಿ ಮಾಡಲು ಎಂತಹ ಸೋಜಿಗದ ಸಂಗತಿ ಈ ಸಸ್ಯದಲ್ಲಿದೆ. ಇಷ್ಟೊಂದು ಕಷ್ಟಪಟ್ಟು ಸಂತಾನೋತ್ಪತ್ತಿ ಮಾಡುವ ಈ ಸಸ್ಯದ ಬೀಜಗಳನ್ನು ಎಷ್ಟು ಅಗ್ಗವಾಗಿ ಸುಲಭವಾಗಿ ತಿಂದು ಬಿಡುತ್ತೇವೆ. ನಿಜಕ್ಕೂ ಇದು ಬಡವರ ಬಾದಾಮಿಯಲ್ಲ.. ಸಸ್ಯ ಸಾಮ್ರಾಜ್ಯದ ವಜ್ರವೆಂದರೂ ತಪ್ಪಾಗಲಾರದು..

ವರ್ಗೀಕರಣದ ಅಡಿಯಲ್ಲಿ ವಿವರಿಸಿದಂತೆ ಈ ಭೂಗತ ಪಕ್ವವಾಗುವಿಕೆಗಾಗಿ ಕಡಲೆಕಾಯಿಗೆ ಅದರ ವೈಜ್ಞಾನಿಕ ಹೆಸರನ್ನು (Arachis hypogea) ನೀಡಲಾಗಿದೆ.

(hypo– ಎಂದರೆ ಕೆಳಗೆ, gea- ಎಂದರೆ ನೆಲ ಅಥವಾ ಭೂಮಿ)

(ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ಗಳನ್ನು ಬಳಸಿ. . . .)

References:

https://www.ijcmas.com/7-9-2018/N.%20Vinothini,%20et%20al.pdf

https://www.iosrjournals.org/iosr-javs/papers/vol7-issue4/Version-/H07434449.pdf 

https://core.ac.uk/download/pdf/42989611.pdf

https://www.youtube.com/watch?v=jvxWO-WsM_Q

2.     


Narrated by: 

SHASHIKUMAR B.S. 9900276979.

GHS, YELEKYATHANAHALLI,

NELAMANGALA TQ.

BENGALURUR RURAL DIST-562111