ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam
Showing posts with label Dr SL. Show all posts
Showing posts with label Dr SL. Show all posts

Tuesday, August 4, 2026

ರಾಷ್ಟ್ರೀಯ ಪ್ರಾಣಿಯನ್ನು ಸಂರಕ್ಷಿಸುವತ್ತ ಒಂದು ನೋಟ

 ರಾಷ್ಟ್ರೀಯ ಪ್ರಾಣಿಯನ್ನು ಸಂರಕ್ಷಿಸುವತ್ತ ಒಂದು ನೋಟ.

ಡಾ. ಶಶಿಕುಮಾರ್. ಎಲ್

ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ 

ಜಲಪುರಿ, ಮೈಸೂರು 

  

 "ಹುಲಿ ಇದ್ದರೆ ಕಾಡು, ಕಾಡಿದ್ದರೆ ನಾಡು" ಎಂಬ ಮಾತಿದೆ. ರಾಷ್ಟ್ರಪ್ರಾಣಿಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ನಮ್ಮ ಪರಿಸರ ವ್ಯವಸ್ಥೆಯ ಪಾಲಕನೂ ಹೌದು. ಹುಲಿ (ಪ್ಯಾಂಥರ ಟೈಗ್ರಿಸ್) ಕಾಡು ಬೆಕ್ಕು ಪ್ರಾಣಿಯಾಗಿದ್ದು , ಆರೋಗ್ಯಕರ ಅರಣ್ಯ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಮೂಲಕ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದು ಗಂಭೀರವಾದ ಹಾಗೂ ಭವ್ಯವಾದ ಪ್ರಾಣಿಯಾಗಿದ್ದು ಆಹಾರ ಸರಪಳಿಯ ಮೇಲ್ಭಾಗದಲ್ಲಿದೆ. ಉತ್ತಮ ಹುಲಿಗಳ ಸಂಖ್ಯೆಯು ಜವಾಬ್ದಾರಿತ ವನ್ಯಜೀವಿ ಪ್ರವಾಸೋದ್ಯಮವನ್ನು ಬೆಂಬಲಿಸುತ್ತದೆ. ಸಂರಕ್ಷಣೆಯನ್ನು ಉತ್ತೇಜಿಸುವುದರ ಜೊತೆಗೆ ಸ್ಥಳೀಯ ಸಮುದಾಯಗಳಿಗೆ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

       ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕಾಡು ಹುಲಿಗಳ ಜನಸಂಖ್ಯೆಗೆ ನೆಲೆಯಾಗಿದೆ. ರಾಯಲ್ ಬೆಂಗಾಲ್ ಹುಲಿಯು ನಮ್ಮ ದೇಶದ ರಾಷ್ಟ್ರೀಯ ಪ್ರಾಣಿಯಾಗಿದೆ. ಹುಲಿಗಳು ಉಷ್ಣವಲಯದ ಕಾಡುಗಳು, ಹುಲ್ಲುಗಾವಲುಗಳು, ಮ್ಯಾಂಗ್ರೋವ್ಗಳು ಮತ್ತು ಗದ್ದೆಗಳಲ್ಲಿ ವಾಸಿಸುತ್ತವೆ. ಅವು ಮಾಂಸಾಹಾರಿ ಪ್ರಾಣಿಗಳಾಗಿದ್ದು ಜಿಂಕೆ, ಕಾಡು ಹಂದಿ, ಗೌರ್ ಮತ್ತು ಇತರ ಸಸ್ತನಿಗಳನ್ನು ಬೇಟೆಯಾಡುತ್ತವೆ. ಪ್ರತಿಯೊಂದು ಹುಲಿಯೂ  ವಿಶಿಷ್ಟವಾದ ಬಟ್ಟೆ ಮಾದರಿಯನ್ನು ಹೊಂದಿದ್ದು, ಅದು ಪ್ರತಿಯೊಂದು ವ್ಯಕ್ತಿಯನ್ನು ಪ್ರತ್ಯೇಕಿಸುತ್ತದೆ. ಹುಲಿಗಳನ್ನು ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವಂತೆ ವರ್ಗೀಕರಿಸಿರುವುದು ಬೇಸರದ ಸಂಗತಿಯಾಗಿದೆ. 

   ಇತ್ತೀಚಿನ ವರದಿಗಳ ಪ್ರಕಾರ ಪ್ರಪಂಚಾದ್ಯಂತ ಅರಣ್ಯಗಳಲ್ಲಿ ಅಂದಾಜು 5574 ಕಾಡು ಹುಲಿಗಳಿವೆ. ಅದರಲ್ಲಿ ಶೇಕಡ 75ರಷ್ಟು ಭಾರತದಲ್ಲಿ ಇವೆ ಎಂಬುದು ವಿಶೇಷ. 'ಹುಲಿ ಯೋಜನೆ' ಬಳಿಕ ಕೈಗೊಂಡ ಫಲವಾಗಿ ಭಾರತದಲ್ಲಿ ಈಗ ಹುಲಿಗಳ ಸಂಖ್ಯೆ (2022ರ ಗಣಿತ ಪ್ರಕಾರ)  3682 ಕ್ಕೇರಿದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು (785) ಇದ್ದು ಕರ್ನಾಟಕ (563) ಎರಡನೇ ಸ್ಥಾನದಲ್ಲಿದೆ. ಬಂಡಿಪುರ, ನಾಗರಹೊಳೆ, ಬಿ ಆರ್ ಟಿ,  ಭದ್ರಾ, ಹಾಗೂ ಕಾಳಿ ಪ್ರದೇಶಗಳು ಕರ್ನಾಟಕದ ಹುಲಿ ಸಂರಕ್ಷಿತ ತಾಣಗಳಾಗಿವೆ. 

         ಭಾರತದಲ್ಲಿ ಹುಲಿ ಸಂರಕ್ಷಣೆ ದೇಶದ ಅತ್ಯಂತ ಯಶಸ್ವಿ ವನ್ಯಜೀವಿ ಸಂರಕ್ಷಣಾ ಪ್ರಯತ್ನದಲ್ಲಿ ಒಂದಾಗಿದೆ. 1973 ರಲ್ಲಿ ಪ್ರಾರಂಭವಾದ ಪ್ರಾಜೆಕ್ಟ್ ಟೈಗರ್ ಯೋಜನೆಯು ಹುಲಿಗಳು ಮತ್ತು ಅವುಗಳ ನೈಸರ್ಗಿಕ ಆವಾಸ ಸ್ಥಾನಗಳನ್ನು ಸಂರಕ್ಷಿಸುವ ಕಾರ್ಯಕ್ರಮವಾಗಿದೆ. ಇನ್ನು 2005ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವು ಆವಾಸಸ್ಥಾನ ಸಂರಕ್ಷಣೆ, ಬೇಟೆಯಾಡುವಿಕೆ ವಿರೋಧಿ ಕ್ರಮಗಳು, ವೈಜ್ಞಾನಿಕ ಮೇಲ್ವಿಚಾರಣೆ ಮತ್ತು ಸಮುದಾಯದ ಭಾಗವಹಿಸುವಿಕೆ ಮೂಲಕ ಹುಲಿಗಳನ್ನು ರಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತಿದೆ. ಹುಲಿಗಳ ಸಂಖ್ಯೆ, ಬೇಟೆಯಾಡುವಿಕೆ, ಅಕ್ರಮ ವನ್ಯಜೀವಿ ವ್ಯಾಪಾರ ತಡೆಗಟ್ಟುವಿಕೆ ಮತ್ತು ಆವಾಸ ಸ್ಥಾನದ ಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡಲು ಕ್ಯಾಮೆರಾ ಬಲೆಗಳು, ಜಿಪಿಎಸ್ ಮ್ಯಾಪಿಂಗ್ ಹಾಗೂ ವೈಜ್ಞಾನಿಕ ಸಮೀಕ್ಷೆಗಳು ಸಹಾಯ ಹಸ್ತ ಚಾಚಿವೆ. ಇಷ್ಟೆಲ್ಲಾ ಇದ್ದರೂ ಸಹ ರಾಷ್ಟ್ರೀಯ ಪ್ರಾಣಿ ಹುಲಿಯು ಹಲವಾರು ಸಂಕಷ್ಟಗಳಿಗೆ ಒಳಗಾಗುತ್ತಿದೆ ಎಂದರೆ ಆಶ್ಚರ್ಯವಿಲ್ಲ. 


        ಹುಲಿಗಳಿಗೆ ಇರುವ ಪ್ರಮುಖ ಬೆದರಿಕೆಗಳಲ್ಲಿ ಬೇಟೆಯಾಡುವುದು, ಆವಾಸಸ್ಥಾನ ನಷ್ಟ, ಆವಾಸ ಸ್ಥಾನ ವಿಘಟನೆ, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಮಾನವ ವನ್ಯಜೀವಿ ಸಂಘರ್ಷ ಸೇರಿವೆ. ಇತ್ತೀಚೆಗೆ ಎಂಎಂ ಹಿಲ್ಸ್ ನಲ್ಲಿ ನಡೆದ ಘಟನೆ ಆತಂಕವನ್ನು ಹುಟ್ಟಿಸಿದೆ. ವಿಷಪ್ರಾಸನದಿಂದ ತಾಯಿ ಮತ್ತು  ನಾಲ್ಕು ಹುಲಿ ಮರಿಗಳ ಸಾವು ಕರ್ನಾಟಕ ಪಾಲಿಗೆ ಬಹು ದೊಡ್ಡ ನಷ್ಟವಾಗಿದೆ. ಮತ್ತಷ್ಟು ಆತಂಕದ ಸಂಗತಿ ಏನೆಂದರೆ ಏಷ್ಯಾ ಖಂಡದಲ್ಲಿ ಹರ ಡಿಕೊಂಡಿದ್ದ ಹುಲಿಗಳ ಅವಾಸ ಸ್ಥಾನದ ವಿಸ್ತೀರ್ಣ ಇದೀಗ ಶೇ.5ಕ್ಕಿಂತಲೂ ಕಡಿಮೆ ಆಗುತ್ತಿದೆ. ತಮ್ಮ ಉಳಿವಿಗಾಗಿ ಹುಲಿಗಳು ಸಾಕು ಜಾನುವಾರುಗಳನ್ನು ಬೇಟೆಯಾಡುವ ಅನಿವಾರ್ಯತೆ ಎದುರಾಗುತ್ತಿದೆ. 

       ಉಲ್ಲಾಸ್ ಕಾರಂತ್ ಅವರ ಪ್ರಕಾರ ಹುಲಿಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಅರಣ್ಯಗಳಲ್ಲಿ ಹುಲಿಗಳು ಹಾಗೂ ಅವುಗಳ ಬಲಿ ಪ್ರಾಣಿಗಳ ಮತ್ತು ನೆಲೆಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಭಯಾರಣ್ಯಗಳಲ್ಲಿ ಅಕ್ರಮಗಳನ್ನು ತೊಡಗುವವ ರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹುಲಿಯ ನೆಲೆಗಳಾದ ಅರಣ್ಯಗಳಲ್ಲಿ ಮರಿ ಮುಟ್ಟುಗಳು ಹಾಗೂ ಮತ್ತಿತರ ಉತ್ಪನ್ನಗಳ ಸಂಗ್ರಹಣೆಯನ್ನು ತಡೆಗಟ್ಟಬೇಕು ಎಂಬುದು ಅವರ ಸಲಹೆಯಾಗಿದೆ. 

        ಹುಲಿಗಳನ್ನು ಸಂರಕ್ಷಿಸುವುದರಿಂದ ಒಂದೇ ರೀತಿಯ ಪರಿಸರ ವ್ಯವಸ್ಥೆಗಳನ್ನು ಹಂಚಿಕೊಳ್ಳುವ ಸಾವಿರಾರು ಇತರ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ರಕ್ಷಿಸಲು ಸಹಾಯಕವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹುಲಿ ಆವಾಸ ಸ್ಥಾನಗಳನ್ನು ರಕ್ಷಿಸುವುದರಿಂದ ಅರಣ್ಯಗಳು ಉಳಿಯುತ್ತವೆ. ಇದು ಇಂಗಾಲದ ಸಂಗ್ರಹಣೆ, ನೀರಿನ ಸಂರಕ್ಷಣೆ ಮತ್ತು ಹವಾಮಾನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 

        ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಸಂರಕ್ಷಿಸಬೇಕಾದ ಅಂಶಗಳಲ್ಲಿ ಪ್ರಮುಖವಾಗಿ ನಾಶವಾದ ಕಾಡುಗಳನ್ನು ಪುನಃ ಸ್ಥಾಪಿಸುವುದು, ಅಕ್ರಮ ಬೇಟೆ ತಡೆಗಟ್ಟುವುದು, ವನ್ಯಜೀವಿ ಕಾರಿಡಾರ್ ಗಳನ್ನು ರಕ್ಷಿಸುವುದು ಮತ್ತು ಹುಲಿಗಳಿಗೆ ಸಾಕಷ್ಟು ಬೇಟೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿವೆ. ಮುಖ್ಯವಾಗಿ ಪರಿಸರದ ಮೇಲುಸ್ತರದಲ್ಲಿರುವ ಹುಲಿಗಳಿಗೆ ಬದುಕಲು ಸುರಕ್ಷಿತ ಕಾಡುಗಳು, ಬಲವಾದ ರಕ್ಷಣೆ ಮತ್ತು ಸಾರ್ವಜನಿಕ ಬೆಂಬಲ ಬೇಕೆ ಬೇಕು. 

ಅಂದ ಹಾಗೆ, ಜುಲೈ 29 ಅಂತರಾಷ್ಟ್ರೀಯ ಹುಲಿ ದಿನ. ಈ ಸುಸಂದರ್ಭದಲ್ಲಿ ಹುಲಿರಾಯನ ಅಳಿವು ಉಳಿವಿನ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾದದ್ದು ನಮ್ಮ ಪ್ರಮುಖ ಕರ್ತವ್ಯವಾಗಿದೆ. 



Friday, April 4, 2025

ಕೋಡು: ಸೋಜಿಗವಿದೆ! ನೋಡು !

 

                                             ಕೋಡು: ಸೋಜಿಗವಿದೆ! ನೋಡು !

                              ಲೇಖಕರು : ಶ್ರೀ ಕೃಷ್ಣ ಚೈತನ್ಯ

          ವಿಜ್ಞಾನ ಶಿಕ್ಷಕರು ಹಾಗೂ ವನ್ಯ ಜೀವಿ ತಜ್ಞರು

 


ಕೋಡು, ಅದೇನು ರಚನೆ! ಅದೇನು ಪರಿ! ಇದರಲ್ಲಿ ಇಷ್ಟೊಂದು ಆಸಕ್ತಿಕರ ವಿಷಯವಿದೆಯಾ ? ಎಂದು ಅನ್ನಿಸದೇ ಇರದು. ಕೋಡುಗಳನ್ನು ಸಾಮಾನ್ಯವಾಗಿ ಜಂಕೆಗಳಲ್ಲಿ ಮಾತ್ರ ನೋಡುತ್ತೇವೆಯಾ? ಬೇರೆ ಪ್ರಾಣಿಗಳಲ್ಲಿಯೂ ಇವೆಯಾ? ಅವು ಯಾವುದರಿಂದ ಮಾಡಿಲಾಗಿವೆ? ಎಷ್ಡು ವರ್ಷವಿರುತ್ತವೆ? ಕೋಡುಗಳ ರಚನೆ ಬೇರೆ ಬೇರೆ ಪ್ರಾಣಿಗಳಲ್ಲಿ ಏಕೆ ವಿಭಿನ್ನ? ಕೋಡುಗಳಿಂದ ಪ್ರಾಣಿಗಳಿಗೆ ಏನು ಪ್ರಯೋಜನ? ಇವುಗಳ ಬಗೆಗೆ ಇಣುಕಿ ನೋಡುವ ಬನ್ನಿ.

 ಮನೆಗಳಲ್ಲಿ ಸಾಕುವ ಹಸು, ಎಮ್ಮೆ, ಓತ ಮತ್ತು ಟಗರುಗಳಲ್ಲಿ ಸಾಮಾನ್ಯವಾಗಿ ಕೋಡುಗಳನ್ನು ನೋಡಿದ್ದೇವೆ. ಬೇರೆ ಬೇರೆ ರೀತಿಯ ಹಸುಗಳಲ್ಲಿ ಬೇರೆ ಬೇರೆ ರೀತಿಯ ಕೋಡು(ಕೊಂಬು)ಗಳು ಬೆಳೆಯುವುದನ್ನು ನೋಡಿದ್ದೇವೆ. ಕೆಲವಲ್ಲಿ ಗಿಡ್ಡವಾಗಿಯೂ, ಕೆಲವು ತಳಿಯ ದನಗಳಲ್ಲಿ ಉದ್ದವಾಗಿಯೂ, ಕೆಲವಲ್ಲಿ ಸುರುಳಿಯಂತಯೂ ಇರುವುದನ್ನು ನೋಡಿದ್ದೇವೆ. ಎಮ್ಮೆಗಳಲ್ಲಿ ಮಾತ್ರ ಕತ್ತಿಯಂತೆ ಬಾಗಿರುವ ಕೋಡುಗಳನ್ನು ಕಾಣುವುದು ಸಾಮಾನ್ಯ. ಮೇಕೆಗಳಲ್ಲಿ ಚಿಕ್ಕದಾದ, ಕಟುಕನ ಕೈಗೆ ಹೋಗದಿದ್ದರೆ ಐದಾರು ಇಂಚಿನ ಕೋಡುಗಳನ್ನು ನೋಡಬಹುದು. ಟಗರಿನಲ್ಲಿ ಕೋಡು ಇದ್ದರೆ ಕುರಿಯಲ್ಲಿ ಇರುವುದಿಲ್ಲ. ಕತ್ತೆ ಮತ್ತು ಕುದುರೆಯಲ್ಲಿ, ಉಹೂ..ಇಲ್ಲ. ಈ ಎಲ್ಲಾ ಪ್ರಾಣಿಗಳಲ್ಲಿ ಕೋಡುಗಳು ಬೆಳೆದರೆ ಶಾಶ್ವತವಾಗಿ ಇರುತ್ತವೆ. ಹಂದಿ ಮತ್ತು ಆನೆಗಳಲ್ಲಿ ಕೋಡುಗಳು ಬೆಳೆಯದೇ, ಕೋರೆಹಲ್ಲಿನ (ದಂತ) ದಾಡೆ ಬೆಳೆಯುತ್ತವೆ. ಆನೆಗಳಲ್ಲಂತೂ ಕೆಲವೊಮ್ಮೆ ನೆಲ ಮುಟ್ಟುವವರೆಗೆ ಬೆಳೆದುಬಿಡುತ್ತವೆ.

 ಇವುಗಳಿಗಿಂತ ಭಿನ್ನವಾದ ಕೋಡುಗಳನ್ನು ಹೊಂದಿರುವ ಪ್ರಾಣಿಗಳಿವೆ. ಅವೆ ಜಿಂಕೆಗಳು. ಇವುಗಳ ಕೋಡುಗಳು ಏಕೆ ವಿಭಿನ್ನ ಅಂತೀರಾ? ಏಕೆಂದರೆ ಇವುಗಳ ಕೋಡುಗಳು ಹುಟ್ಟುವಾಗ ದಪ್ಪನಾಗಿಯೂ, ಮೃದುವಾದ ಚರ್ಮವನ್ನು ಹೊಂದಿರುವುದೂ ಆಗಿವೆ. ಅಷ್ಟೆ ಅಲ್ಲ! ಪ್ರತೀ ವರ್ಷವೂ ಉದುರಿಹೋಗುತ್ತವೆ. ದನಗಳಲ್ಲಿರುವ ಕೊಂಬು ಕೆರಟಿನ್‌ ಹೊದಿಕೆಯಿಂದ ಆವರಿಸಿರುವ ಮೃದುವಾದ ಮೂಳೆಯ ತಿರುಳನ್ನು ಹೊಂದಿದೆ. ಇದು ಮಾನವನ ಉಗುರು ಮತ್ತು ಕೂದಲಿನಲ್ಲಿಯೂ ಕಾಣಬಹುದು. ಜಿಂಕೆಗಳಲ್ಲಿ ಗಂಡು ಪ್ರಾಣಿಗಳಲ್ಲಿ ಮಾತ್ರ ಕೋಡು ಬೆಳೆಯುತ್ತದೆಯೆ ವಿನಃ ಹೆಣ್ನು ಜಿಂಕೆಗಳಲ್ಲಿ ಇಲ್ಲ. ಹಾಗಾಗಿ ಗಂಡು ಜಿಂಕೆಗಳಿಗೆ ʼಸ್ಟ್ಯಾಗ್‌ʼ ಎಂಬ ಉಪನಾಮವೂ ಇದೆ. ಕೋಡುಗಳನ್ನು ಉದುರಿಸಿದಾಗ ಗಂಡು ಜಿಂಕೆಯೂ ಸಹ ಹೆಣ್ಣು ಜಿಂಕೆಯಂತೆ ಕಾಣಿಸಿಬಿಡುತ್ತವೆ.ಕಾಡುಕುರಿಗಳಲ್ಲಿ (ಬಾರ್ಕಿಂಗ್‌ ಡೀರ್‌ ಅಥವಾ ಬೊಗಳುವ ಜಿಂಕೆ) ಗಂಡುಗಳಲ್ಲಿ ಚಿಕ್ಕದಾದ ಮತ್ತು ಬಾಗಿರುವ ಸಣ್ಣ ಕೋಡು ಬೆಳೆದರೆ ಮೌಸ್‌ ಡೀರ್‌ (ಇಲಿ ಮೂತಿಯಂತೆ ಮುಖವನ್ನು ಹೊಂದಿರುವ) ಜಿಂಕೆಗಳಲ್ಲಿ ಕೋಡುಗಳು ಇಲ್ಲ. ಕೃಷ್ಣಮೃಗಗಳಲ್ಲಿ ಗಂಡುಗಳಲ್ಲಿ ಮಾತ್ರವಿರುವ ಕೊಂಬು ನೇರವಾಗಿಯೂ, ಸ್ವಲ್ಪ ತಿರುಗಿಸಿದಂತೆಯೂ ಇದೆ.


  ಜಿಂಕೆಗಳ ಕೋಡು ಬೆಳೆಯುವಾಗ ಮೃದುವಾದ ತುಪ್ಪಳದಂತಿರುವ ವೆಲ್ವೆಟ್‌ ಫರ್‌ ನಿಂದ ಆವರಿಸಲ್ಪಟ್ಟಿರುತ್ತದೆ. ಇದರಲ್ಲಿ ರಕ್ತನಾಳಗಳು ಸಮೃದ್ದವಾಗಿದ್ದು ಬೆಳೆಯುವ ಕೋಡಿಗೆ ಪೋಷಕಾಂಶಗಳನ್ನು ಒದಗಿಸುತ್ತವೆ. ಕೋಡುಗಳು ಒಂದೆರಡು ತಿಂಗಳಿನಲ್ಲಿ ಸಂಪೂರ್ಣವಾಗಿ ಬೆಳೆದ ನಂತರ ಕಲ್ಲು ಅಥವಾ ಮರದ ಕೊರಡಿಗೆ ಉಜ್ಜಿ ಉದುರಿಸಿಬಿಡುತ್ತವೆ. ವಯಸ್ಸಿಗೆ ಅನುಸಾರವಾಗಿ ಗಾತ್ರ ಮತ್ತು ಉದ್ದಗಳಲ್ಲಿ ವ್ಯತ್ಯಾಸವನ್ನು ಪ್ರದರ್ಶಿಸುವ ಈ ಪ್ರಾಣಿಗಳು ವರ್ಷಕ್ಕೊಮ್ಮೆ ಕೋಡುಗಳನ್ನೂ ಸಹ ಉದುರಿಸಿಬಿಡುತ್ತವೆ. ಇದು ಆಶ್ಚರ್ಯವಾದರೂ ಸತ್ಯ. ಮಗು ಜನಿಸಿದಾಗ ಇರುವ ಒಕ್ಕುಳ ಬಳ್ಳಿ ಐದಾರು ದಿನಗಳಲ್ಲಿ ಉದುರುವಂತೆಯೇ ಇರುವುದು ವಿಶೇಷ. ಮತ್ತೆ ಆ ಜಾಗದಲ್ಲಿ ಹೊಸ ಕೋಡು ಬೆಳವಣಿಗೆಯಾಗುತ್ತದೆ. ಹಾಗಾಗಿ ಇವುಗಳನ್ನು ಆಂಟ್ಲರ್ಸ್‌ (antlers)ಎಂದು ಕರೆಯುತ್ತಾರೆ. ಕೊಂಬು ಉದುರಿಸದ ಪ್ರಾಣಿಗಳು ಆಂಟಿಲೋಪ್ಸ್ !‌ ಏಕೆಂದರೆ, ಇವುಗಳ ಕೊಂಬುಗಳು ಕೊಳವೆಯಂತೆ ಟೊಳ್ಳಾಗಿದ್ದರೆ ಜಿಂಕೆಗಳದ್ದು ಟೊಳ್ಳಾಗಿರದ ಗಟ್ಟಿ ಕೊಂಬುಗಳಾಗಿರುವುದು.


ಕೋಡುಗಳನ್ನು ತಮ್ಮ ರಕ್ಷಣಾ ಸಾಧನವಾಗಿಯೂ ಜಿಂಕೆಗಳು ಬಳಸಿಕೊಳ್ಳುತ್ತವೆ. ಸಂಗಾತಿಗಾಗಿ ಜಗಳವಾಡುವಾಗಲೂ ಸಹ ತಮ್ಮ ಒಂದು ಅಥವಾ ಎರಡೂ ಕೊಂಬುಗಳನ್ನು ಕಳೆದುಕೊಳ್ಳಬಹುದಾಗಿರುತ್ತದೆ. ಕಾಡಿನಲ್ಲಿ ಉದುರಿದಾಗ ಇವುಗಳನ್ನು ಮುಳ್ಳುಹಂದಿಗಳು ಕ್ಯಾಲ್ಸಿಯಂ ಮೂಲವಾಗಿ ಸ್ವಲ್ಪ ಸ್ವಲ್ಪ ಕಡಿದು ತಿನ್ನುತ್ತವೆ. ಈ ಕೊಂಬುಗಳಿಂದ ಕುಡುಗೋಲಿನಂತಹ ಆಯುಧಗಳಿಗೆ ಹಿಡಿಕೆ ಮಾಡಿಕೊಳ್ಳಬಹುದು! ಆದರೆ, ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಗಳಿಂದ ಸಾದ್ಯವಿಲ್ಲ. ಇದು ಸ್ವಾಗತವೂ ಹೌದು.