ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam
Showing posts with label TM. Show all posts
Showing posts with label TM. Show all posts

Sunday, October 4, 2026

ಜಾಗತಿಕ ಮುಂಗಾರು ಮಾರುತಗಳ ಮೇಲೆ ಎಲ್ ನಿನೋ ಪರಿಣಾಮ: ಒಂದು ಅವಲೋಕನ

    ಜಾಗತಿಕ ಮುಂಗಾರು ಮಾರುತಗಳ ಮೇಲೆ ಎಲ್ ನಿನೋ             ಪರಿಣಾಮ: ಒಂದು ಅವಲೋಕನ 


ಲೇಖಕರು :  ತಾಂಡವಮೂರ್ತಿ ಎ ಎನ್‌

    ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನೆಲಮಂಗಲ, ಬೆಂಗಳೂರು ಗ್ರಾಮಾಂತರ



2026ರ ವರ್ಷದಲ್ಲಿ ಭಾರತವನ್ನೂ ಒಳಗೊಂಡತೆ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳು ತೀವ್ರ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಜನ ಸಾಮಾನ್ಯರು ಮೊದಲುಗೊಂಡಂತೆ ಎಲ್ಲೆಡೆ ಏಲ್‌ ನಿನೋ ಪರಿಣಾಮದ ಬಗ್ಗೆ ವ್ಯಾಪಕ ಚರ್ಚೆನಡೆಯುತ್ತಿದೆ.ಭಾರತದ ಕೃಷಿ-ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆ ಮುಂಗಾರು ಮಾರುತಗಳನ್ನು ಅವಲಂಬಿಸಿರುವುದು ಐತಿಹಾಸಿಕವಾದ ವಾಸ್ತವಿಕ ಸತ್ಯ. ಪ್ರಸ್ತುತ, ಪ್ರತಿ 5 ರಿಂದ 7 ವರ್ಷಗಳಿಗೊಮ್ಮೆ ಸಂಭವಿಸುವ ಎಲ್‌ ನಿನೋ ಪರಿಣಾಮ ಮುಂಗಾರು ಮಾರುತಗಳನ್ನು ಅಸ್ತವ್ಯಸ್ಥಗೊಳಿಸಿ ನಮ್ಮ ದೇಶದ ಕೃಷಿ-ಆರ್ಥಿಕವ್ಯವಸ್ಥೆಯನ್ನು ಹೈರಾಣಾಗಿಸುತ್ತಿದೆ. ಹಾಗಾದರೆ, ಏನಿದು ಎಲ್‌ ನಿನೋ ?  ಸ್ಪಾನಿಷ್‌ ಭಾಷೆಯಲ್ಲಿ ಎಲ್‌ ನಿನೋ ಎಂದರೆ ಪುಟ್ಟ ಮಗು ಅಥವ ಕ್ರಿಸ್ತನ ಮಗು ಎಂದರ್ಥ.17ನೇ ಶತಮಾನದಲ್ಲಿ ಪೆರುದೇಶದ ಮೀನುಗಾರರು ಪೂರ್ವ ಫೆಸಿಫಿಕ್‌ ತೀರದಲ್ಲಿ ಕ್ರಿಸ್‌ ಮಸ್‌ ಸಂದರ್ಭದಲ್ಲಿ ಅಸಹಜವಾಗಿ ಉಂಟಾದ ಬಿಸಿ ನೀರಿನ ಪ್ರವಾಹಕ್ಕೆ ಈ ಹೆಸರನ್ನು ಇಟ್ಟರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.ಫೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಸಮಭಾಜಕ ಪ್ರದೇಶಗಳಲ್ಲಿನ ಮೇಲ್ಮೈ ನೀರು ಅಸಹಜವಾಗಿ ಬೆಚ್ಚಗಾಗುವುದರಿಂದ ಎಲ್ ನಿನೋ ಪ್ರಕ್ರಿಯೆಯು ಪ್ರಚೋದಿಸಲ್ಪಡುತ್ತದೆ. ಇದು ಜಾಗತಿಕ ವಾತಾವರಣದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪೂರ್ವ ಫೆಸಿಫಿಕ್‌ ತೀರದಲ್ಲಿ ನೀರು ಬಿಸಿಯಾಗುತ್ತಿದ್ದಂತೆ, ಸಾಂಪ್ರದಾಯಿಕ ವಾಣಿಜ್ಯ ಮಾರುತಗಳು (trade winds) ದುರ್ಬಲಗೊಳ್ಳುತ್ತವೆ ಮತ್ತು ಒಟ್ಟಾರೆ ವಾತಾವರಣದ ಗಾಳಿಯ ಚಲನೆಯ ರೇಖೆಯಾದ 'ವಾಕರ್ ಸರ್ಕ್ಯುಲೇಶನ್' ಅನ್ನು ಬದಲಾಯಿಸುತ್ತವೆ(ವಾಕರ್ ಸರ್ಕ್ಯುಲೇಶನ್ ಎನ್ನುವುದು ಭೂಮಿಯ ಸಮಭಾಜಕ ವೃತ್ತದ (Equator) ಉದ್ದಕ್ಕೂ, ಪ್ರಮುಖವಾಗಿ ಪೆಸಿಫಿಕ್ ಮಹಾಸಾಗರದ ಮೇಲೆ ಕಂಡುಬರುವ ಒಂದು ಬೃಹತ್ ಮಟ್ಟದಪೂರ್ವ-ಪಶ್ಚಿಮ ವಾತಾವರಣದ ವಾಯು ಪರಿಚಲನಾ ವ್ಯವಸ್ಥೆ).


    ಪೆಸಿಫಿಕ್ ಮಹಾಸಾಗರವು ಭೂಮಿಯ ಮೂರನೇ ಒಂದು ಭಾಗವನ್ನು ಆವರಿಸಿರುವುದರಿಂದ, ಈ ಬದಲಾವಣೆಯು ಜಾಗತಿಕವಾಗಿ ಜೆಟ್ ಸ್ಟ್ರೀಮ್‌ಗಳು ಮತ್ತು ವಾತಾವರಣದ ಒತ್ತಡವನ್ನು ಗಣನೀಯವಾಗಿ ಮಾರ್ಪಡಿಸುತ್ತದೆ. ಇದು ಮುಂಗಾರು ಮಾರುತಗಳ ಸಹಜ ಚಲನೆಯನ್ನು ಏರುಪೇರುಗೊಳಿಸಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಹವಾಮಾನ, ಕೃಷಿ-ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಅಸ್ತವ್ಯಸ್ತಗೊಳಿಸುತ್ತದೆ.

ಎಲ್‌ ನಿನೋ ಕಾರ್ಯವಿಧಾನ:

ಏಲ್‌ ನಿನೋ ಪರಿಣಾಮವಿಲ್ಲದ ಸಾಮಾನ್ಯ ವರ್ಷಗಳಲ್ಲಿ, ಬಲವಾದ ಪೂರ್ವ ವಾಣಿಜ್ಯ ಮಾರುತಗಳು ಬೆಚ್ಚಗಿನ ಮೇಲ್ಮೈ ನೀರನ್ನು ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದ ಕಡೆಗೆ ತಳ್ಳುತ್ತವೆ. ಇದು ಭಾರಿ ಮುಂಗಾರು ಮಳೆಯನ್ನು ಉಂಟುಮಾಡುವ ಕಡಿಮೆ-ಒತ್ತಡದ ವ್ಯವಸ್ಥೆಗಳಿಗೆ ಕಾರಣವಾಗುತ್ತದೆ. ಆದರೆ ಎಲ್ ನಿನೋ ವರ್ಷದಲ್ಲಿ, ಈ ಮಾರುತಗಳು ದುರ್ಬಲಗೊಳ್ಳುತ್ತವೆ ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಬೆಚ್ಚಗಿನ ನೀರು ದಕ್ಷಿಣ ಅಮೆರಿಕಾದ ಕಡೆಗೆ ಹರಿಯುತ್ತದೆ, ಇದು ತೇವಾಂಶವುಳ್ಳ ಗಾಳಿ ಮತ್ತು ಮೋಡಗಳ ರಚನೆಯನ್ನು ತನ್ನೊಂದಿಗೆ ಕೊಂಡೊಯ್ಯುತ್ತದೆ.ಇದರ ಪರಿಣಾಮವಾಗಿ, ಸಾಮಾನ್ಯ ತೇವಾಂಶ ಭರಿತ ಮಾರುತಗಳು ಸ್ಥಗಿತಗೊಂಡು, ಸಾಂಪ್ರದಾಯಿಕ ಮಾನ್ಸೂನ್ ಪ್ರದೇಶಗಳು ಮಳೆಯಿಲ್ಲದೆ ಒಣಗುತ್ತವೆ ಮತ್ತು ಇತರ ಶುಷ್ಕ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹ ಉಂಟಾಗುತ್ತದೆ.

೧. ಭಾರತೀಯ ನೈಋತ್ಯ ಮುಂಗಾರು : ಕುಸಿತ, ಕೊರತೆ ಮತ್ತು ಪರಿಣಾಮಗಳು.

ಮುಂಗಾರು ಮಾರುತಗಳು ಭಾರತದಲ್ಲಿ ವಾರ್ಷಿಕ ಶೇ 70 ರಷ್ಟು ಮಳೆಯನ್ನು ಸುರಿಸುತ್ತವೆ. ಆದರೆ ಎಲ್ ನಿನೋ ಪ್ರಭಾವದಿಂದ ತೀವ್ರ ಮಳೆ ಕೊರತೆಯುಂಟಾಗುತ್ತಿದೆ. ಪೆಸಿಫಿಕ್ ಒತ್ತಡ ವ್ಯವಸ್ಥೆಗಳಲ್ಲಾಗುವ ಬದಲಾವಣೆಯು ಹಿಂದೂ ಮಹಾಸಾಗರದ ಮೇಲಿನ ಮುಂಗಾರು ಚಲನೆಯನ್ನು ದುರ್ಬಲಗೊಳಿಸುತ್ತದೆ.

* ಪ್ರಸ್ತುತ ಸ್ಥಿತಿ: ಈ ವರ್ಷ ನೈಋತ್ಯ ಮುಂಗಾರು ಸರಾಸರಿ ಮಳೆಗಿಂತ 15%-20% ಕೊರತೆಯನ್ನು ದಾಖಲಿಸಿದೆ.

* ಕೃಷಿಯ ಮೇಲಿನ ಪರಿಣಾಮ: ಮುಂಗಾರು ಮಳೆಯ ಕೊರತೆಯು ಭತ್ತ ಮತ್ತು ಬೇಳೆಕಾಳುಗಳಂತಹ ಪ್ರಮುಖ ಬೇಸಿಗೆ ಬೆಳೆಗಳ ಇಳುವರಿಗೆ ಧಕ್ಕೆ ತಂದಿದೆ. ಇದು ದೇಶೀಯ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗಿದ್ದು, ಸ್ಥಳೀಯ ಪೂರೈಕೆಯನ್ನು ಸ್ಥಿರಗೊಳಿಸಲು ಭಾರತವು ದಶಕದಲ್ಲೇ ಮೊದಲ ಬಾರಿಗೆ ಕಚ್ಚಾ ಸಕ್ಕರೆ ಆಮದಿಗೆ ಅನುಮತಿ ನೀಡುವಂತಾಗಿದೆ.

* ಇಂಡೋನೇಷ್ಯಾ ಮತ್ತು ಮಲೇಷ್ಯಾ: ಈ ಪ್ರದೇಶಗಳು ಸುದೀರ್ಘ ಒಣ ಹವಾಮಾನವನ್ನು ಮತ್ತು ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದ್ದು,  ಜೌಗು ಪ್ರದೇಶಗಳು ಒಣಗುತ್ತಿವೆ.

* ಅಪಾಯಗಳು: ಈ ಪರಿಸ್ಥಿತಿ ನಿಯಂತ್ರಣವಿಲ್ಲದ ಕಾಳ್ಗಿಚ್ಚು ಮತ್ತು ದಟ್ಟವಾದ ಹೊಗೆಯ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಹಾಗೂ ಮಳೆ ಆಧಾರಿತ ಭತ್ತದ ಬೇಸಾಯವನ್ನು ನಾಶಪಡಿಸುತ್ತದೆ.

ಹವಾಮಾನ ಬದಲಾವಣೆಯ ತೀವ್ರತೆ ಮತ್ತು ಎಲ್‌ ನಿನೋ ಪರಿಣಾಮ

ಎಲ್ ನಿನೋ ಮತ್ತು ಜಾಗತಿಕ ಮುಂಗಾರು ನಡುವಿನ ಸಂಬಂಧವು ಈಗ ಕೇವಲ ಪ್ರಕೃತಿಯ ಸಾಮಾನ್ಯ ನಿಯಮವಾಗಿ ಉಳಿದಿಲ್ಲ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಹಿನ್ನೆಲೆಯಲ್ಲಿ ಈ ನೈಸರ್ಗಿಕ ಚಕ್ರಗಳು ಸಂಭವಿಸುತ್ತಿವೆ ಎಂದು ಹವಾಮಾನ ವಿಜ್ಞಾನ ಪ್ರತಿಪಾದಿಸುತ್ತದೆ.

`````ಸಾಗರಗಳ  ತಾಪಮಾನ ಏರಿಕೆಯು ವಾತಾವರಣದ ಅಸ್ಥಿರತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ,
ಎಲ್ ನಿನೋ ಸಂಭವಿಸಿದಾಗ ಹಸಿರುಮನೆ ಅನಿಲಗಳಿಂದ ಸಂಗ್ರಹವಾದ ಶಾಖದೊಂದಿಗೆ ಸಂವಹನಗೊಂಡು, ಸುದೀರ್ಘ ಬಿಸಿಗಾಳಿಯ ಜೊತೆಗೆ ಅಲ್ಲಲ್ಲಿ ಅನಿರೀಕ್ಷಿತ ಭಾರಿ ಮಳೆಯನ್ನು (ಮೇಘ ಸ್ಫೋಟ) ಉಂಟುಮಾಡುತ್ತದೆ. ಇದು ಹವಾಮಾನ  ಮುನ್ಸೂಚನೆಗೆ ಸವಾಲೊಡ್ಡುತ್ತದೆ ಮತ್ತು ಸ್ಥಳೀಯ ಮೂಲಸೌಕರ್ಯಗಳಿಗೆ ಅಪಾರ ಹಾನಿ ಉಂಟುಮಾಡುವುದಲ್ಲದೇ ಜೀವಹಾನಿಗೂ ಕಾರಣವಾಗುತ್ತದೆ.



ಕೊನೆಯದಾಗಿ, ಎಲ್‌ ನಿನೋ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ ಮಾನವ ಪ್ರಣೀತ ಹವಾಮಾನ ಬದಲಾವಣೆಯಿಂದ ಅದರ ಆವೃತ್ತಿ ಮತ್ತು ತೀವ್ರತೆ ಗಣನೀಯವಾಗಿ ಹೆಚ್ಚುತ್ತಿರುವುದು ಶೋಚನೀಯ. ಕೇವಲ 40 ವರ್ಷಗಳಲ್ಲಿ 50 ಅಡಿಗಳಲ್ಲಿ ಲಭ್ಯವಿದ್ದ ಅಂತರ್ಜಲ ಇಂದು ಮಾನವನ ದುರಾಸೆಯಿಂದ ಬಯಲು ಸೀಮೆ ಪ್ರದೇಶಗಳಲ್ಲಿ 1000 ಅಡಿಗಳಿಗೆ ಕುಸಿದಿದೆ.ಇಂತಹ ವಿಪ್ಪತ್ತಿನ ದಿನಗಳಲ್ಲಿ ಜೀವನಾಧಾರವಾದ ಅಂತರ್ಜಲನಿಧಿ ಸಹ ಬರಿದಾಗಿರುವುದು ಮಾನವನ ಸ್ವಯಂ ಪ್ರಮಾದವಲ್ಲದೇ ಮತ್ತೇನು?

 

Thursday, June 4, 2026

ಕರ್ನಾಟಕದ ಶುಷ್ಕ ಮತ್ತು ಅರೆಶುಷ್ಕ ವಲಯದ ಕಾಡುಗಳು ಮತ್ತು ಜೀವವೈವಿಧ್ಯತೆ

ಕರ್ನಾಟಕದ ಶುಷ್ಕ ಮತ್ತು ಅರೆಶುಷ್ಕ ವಲಯದ ಕಾಡುಗಳು ಮತ್ತು ಜೀವವೈವಿಧ್ಯತೆ

 

                                     ಲೇಖನ  - ತಾಂಡವಮೂರ್ತಿ ಎ ಎನ್‌

     ಸರ್ಕಾರಿ ಪದವಿಪೂರ್ವ ಕಾಲೇಜು

                                                                                                         ನೆಲಮಂಗಲ 



    ಕರ್ನಾಟಕವು ಕೇವಲ ದಟ್ಟವಾದ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಿಗೆ ಮಾತ್ರವಲ್ಲದೆ, ವೈವಿಧ್ಯಮಯ ಪರಿಸರ ವಲಯಗಳಿಗೂ ಆಶ್ರಯ ತಾಣವಾಗಿದೆ. ಇವುಗಳಲ್ಲಿ ಪ್ರಮುಖವಾದುದೆಂದರೆ ಪೂರ್ವ ಮತ್ತು ಉತ್ತರ ಮೈದಾನ ಭಾಗಗಳಲ್ಲಿ ಕಂಡುಬರುವ ಮುಳ್ಳು ಪೊದೆ- ಕುರುಚಲು ಕಾಡುಗಳು (Deccan Thorn Scrub Forests) ಮತ್ತು ಪರ್ಣಪಾತಿ ಕಾಡುಗಳು. ಇವುಗಳನ್ನು ಪಾರಿಭಾಷಿಕವಾಗಿ 'ದಕ್ಷಿಣ ಉಷ್ಣವಲಯದ ಮುಳ್ಳು ಕಾಡುಗಳು' ಎಂದೂ ಕರೆಯಲಾಗುತ್ತದೆ. ಜಾಗತಿಕ ಹವಾಮಾನ ವೈಪರೀತ್ಯದ ಈ ಕಾಲದಲ್ಲಿ, ಅತ್ಯಂತ ಕಠಿಣ ಪರಿಸರದಲ್ಲೂ ಜೀವವೈವಿಧ್ಯವನ್ನು ಕಾಪಾಡಿಕೊಳ್ಳುವ ಈ ಒಣ ಭೂಪ್ರದೇಶಗಳ ಪಾತ್ರ ಅನನ್ಯವಾಗಿದೆ. ಕರ್ನಾಟಕದ ಮಳೆ ನೆರಳಿನ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಕಂಡುಬರುವ ಈ ಕಾಡುಗಳು ಮಣ್ಣಿನ ಸವಕಳಿ ತಡೆಗಟ್ಟುವಲ್ಲಿ, ಅಂತರ್ಜಲ ಮರುಪೂರಣದಲ್ಲಿ ಮತ್ತು ಸ್ಥಳೀಯ ಹವಾಮಾನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

೧. ಭೌಗೋಳಿಕ ವ್ಯಾಪ್ತಿ ಮತ್ತು ಹವಾಮಾನ

ಈ ಅರಣ್ಯಗಳು ಮುಖ್ಯವಾಗಿ ದಕ್ಷಿಣದ ಪ್ರಸ್ಥಭೂಮಿ ಹಾಗೂ ಕರ್ನಾಟಕದ ಮಳೆ ನೆರಳಿನ ಪ್ರದೇಶಗಳಲ್ಲಿ (Rain-shadow regions) ಹರಡಿಕೊಂಡಿವೆ.

  • ಪ್ರಮುಖ ಜಿಲ್ಲೆಗಳು: ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಚಿತ್ರದುರ್ಗ,ದಾವಣಗೆರೆ, ಬಿಜಾಪುರ, ಗದಗ,ಕೋಲಾರ,ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಕೆಲವು ಭಾಗಗಳು.
  • ಮಳೆಯ ಪ್ರಮಾಣ: ಈ ಪ್ರದೇಶಗಳು ವಾರ್ಷಿಕವಾಗಿ ಕೇವಲ 45 ರಿಂದ 70 ಸೆಂ.ಮೀ ಗಿಂತ ಕಡಿಮೆ ಮಳೆಯನ್ನು ಪಡೆಯುತ್ತವೆ.
  • ಹವಾಮಾನ ಪರಿಸ್ಥಿತಿ: ಇಲ್ಲಿ ಬೇಸಿಗೆಯಲ್ಲಿ ತಾಪಮಾನವು 38° ಸೆಲ್ಸಿಯಸ್‌ಗಿಂತಲೂ ಹೆಚ್ಚಿರುತ್ತದೆ. ನವೆಂಬರ್‌ನಿಂದ ಏಪ್ರಿಲ್‌ವರೆಗೆ ತೀವ್ರ ಶುಷ್ಕ ವಾತಾವರಣವಿದ್ದು, ತೇವಾಂಶದ ಕೊರತೆ ಎದ್ದು ಕಾಣುತ್ತದೆ.

೨. ಸಸ್ಯ ವರ್ಗ ಮತ್ತು ಹೊಂದಾಣಿಕೆ

ಈ ಕಾಡುಗಳಲ್ಲಿನ ಸಸ್ಯಗಳು ನೀರಿನ ಅಭಾವ ಮತ್ತು ತೀವ್ರ ಸೂರ್ಯನ ತಾಪವನ್ನು ತಡೆದುಕೊಳ್ಳಲು ವಿಶಿಷ್ಟವಾದ ಜೈವಿಕ ಹೊಂದಾಣಿಕೆಗಳನ್ನು ಪ್ರದರ್ಶಿಸುತ್ತವೆ. ಇಲ್ಲಿನ ಮರಗಳು ಸಾಮಾನ್ಯವಾಗಿ ಗಿಡ್ಡವಾಗಿದ್ದು (5 ರಿಂದ 10ಮೀಟರ್ ಎತ್ತರ), ಅಗಲವಾಗಿ ಹರಡಿಕೊಂಡಿರುತ್ತವೆ. ನೀರು ಆವಿಯಾಗುವುದನ್ನು ತಡೆಯಲು ಇವುಗಳ ಎಲೆಗಳು ಚಿಕ್ಕದಾಗಿರುತ್ತವೆ ಅಥವಾ ಮುಳ್ಳುಗಳಾಗಿ ರೂಪಾಂತರಗೊಂಡಿರುತ್ತವೆ.

ಪ್ರಮುಖ ಸಸ್ಯ ಪ್ರಭೇದಗಳು:

  • ಜಾಲಿ ಪ್ರಭೇದಗಳು: ಕರಿಜಾಲಿ (Acacia nilotica), ಬಿಳಿಜಾಲಿ (Acacia leucophloea), ಮತ್ತು ಛತ್ರಿ ಆಕಾರದ ಹಂದರ ಹೊಂದಿರುವ ಬುಡ್ಡೆ ಜಾಲಿ (Acacia planifrons).
  • ಕಮರ(Hardwickia binata):ಅತ್ಯಂತ ಬಲಿಷ್ಟ ಮತ್ತು ಕಠಿಣವಾದ ಕಮರದ ಮರ ಶುಷ್ಕವಲಯದ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ.ಪ್ರಮುಖವಾಗಿ ಚಿತ್ರದುರ್ಗ ಮತ್ತು ತುಮಕೂರಿನ ಉತ್ತರ ಭಾಗದ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
  • ಕುರುಚಲು ಮತ್ತು ಕಳ್ಳಿ ಗಿಡಗಳು: ವಿವಿಧ ಜಾತಿಯ ಕಳ್ಳಿಗಳು (Euphorbia nivulia), ಬಾರೆ ಹಣ್ಣಿನ ಗಿಡ (Ziziphus), ಮತ್ತು ಹಿಪ್ಪೆ ಜಾತಿಗೆ ಸೇರಿದ ಸಸ್ಯಗಳು.
  • ಪರಕೀಯ ಆಕ್ರಮಣಕಾರಿ ಬಳ್ಳಾರಿ ಜಾಲಿ ಸಸ್ಯ: ಬಯಲು ಸೀಮೆಯಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಸರ್ಕಾರದಿಂದ ಪರಿಚಯಿಸಲ್ಪಟ್ಟ ಬಳ್ಳಾರಿ ಜಾಲಿ (Prosopis juliflora), ಇದು ಸ್ಥಳೀಯ ಸಸ್ಯವರ್ಗಕ್ಕೆ ಸವಾಲಾಗಿ ಪರಿಣಮಿಸಿದೆ.

ಔಷಧೀಯ ಸಸ್ಯಗಳ ಭಂಡಾರ:
ಕರ್ನಾಟಕ ಅರಣ್ಯ ಇಲಾಖೆಯ ಅಧ್ಯಯನ ವರದಿಯ ಪ್ರಕಾರ, ಈ ಒಣ ಕಾಡುಗಳಲ್ಲಿ 64 ಕ್ಕೂ ಹೆಚ್ಚು ವಿಶಿಷ್ಟ ಔಷಧೀಯ ಸಸ್ಯಗಳನ್ನು ಗುರುತಿಸಲಾಗಿದೆ. ಇಲ್ಲಿನ 'ಫ್ಯಾಬೇಸಿ' (Fabaceae) ಕುಟುಂಬದ ಸಸ್ಯಗಳು ಮತ್ತು ಶ್ರೀಗಂಧದಂತಹ ಒಣ ಹವಾಮಾನದ  ಮರಗಳು ಆರ್ಥಿಕ ಹಾಗೂ ವೈದ್ಯಕೀಯ ಮಹತ್ವ ಹೊಂದಿವೆ

ಪ್ರಮುಖ ಔಷಧೀಯ ಸಸ್ಯಗಳು ಮತ್ತು ಅವುಗಳ ಉಪಯೋಗಗಳು  

ಈ ಅರೆ-ಶುಷ್ಕ ವಲಯವು ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಗಿಡಮೂಲಿಕೆ ಔಷಧಕ್ಕಾಗಿ ಅವಲಂಬಿಸಿರುವ ಅಮೂಲ್ಯ ಸಸ್ಯ ಸಂಪತ್ತನ್ನು ಹೊಂದಿದೆ. ಇಲ್ಲಿನ ಪ್ರಮುಖ ಸಸ್ಯಗಳು ಹೀಗಿವೆ:  

ಸಸ್ಯದ ಸಾಮಾನ್ಯ ಹೆಸರು

ವೈಜ್ಞಾನಿಕ ಹೆಸರು

ಔಷಧೀಯ ಗುಣಗಳು ಮತ್ತು ಪ್ರಮುಖ ಉಪಯೋಗಗಳು

ಹಿಂಗನ್ ಮರ (ಇಂಗುಡಿ)

Balanites roxburghii

ಇದರ ಬೀಜದ ಎಣ್ಣೆಯನ್ನು ಚರ್ಮ ರೋಗಗಳಿಗೆ ಮತ್ತು ತೊಗಟೆಯನ್ನು ಕೆಮ್ಮು ನಿವಾರಣೆಗೆ ಬಳಸಲಾಗುತ್ತದೆ.

ಡಿಕ್ಕಾಮಲ್ಲಿ (ಬಿಕ್ಕೆ ಗಿಡ)

Gardenia gummifera

ಈ ಗಿಡದಿಂದ ಸಿಗುವ ರಸವನ್ನು ಉದರ ಶೂಲೆ (ಹೊಟ್ಟೆನೋವು) ಮತ್ತು ಜೀರ್ಣಕ್ರಿಯೆಯ ತೊಂದರೆಗಳ ನಿವಾರಣೆಗೆ ಬಳಸಲಾಗುತ್ತದೆ.ಈ ಸಸ್ಯದ ಮಾಗಿದ ಹಣ್ಣುಗಳು ಬಹಳ ರುಚಿಕರ ಮತ್ತು ಸಮೃದ್ಧ ಪೌಷ್ಟಿಕಾಂಶದ ಆಗರ

ಕಾಡು ಜೀರಿಗೆ / ಕರಿಜೀರಿಗೆ

Centratherum anthelminticum

ಹೊಟ್ಟೆಯ ಕ್ರಿಮಿಗಳನ್ನು (worms) ನಾಶಪಡಿಸಲು ಇದರ ಬೀಜಗಳು ಅತ್ಯಂತ ಪರಿಣಾಮಕಾರಿ.

ನೆಲನೆಲ್ಲಿ

Phyllanthus amarus

ಯಕೃತ್ತಿನ (Liver) ರಕ್ಷಣೆ ಮತ್ತು ಕಾಮಾಲೆ (Jaundice) ರೋಗದ ಚಿಕಿತ್ಸೆಯಲ್ಲಿ ಇದರ ಇಡೀ ಸಸ್ಯವನ್ನು ಮಜ್ಜಿಗೆಯೊಂದಿಗೆ ಬಳಸಲಾಗುತ್ತದೆ.

ನೇಗಿಲ ಮುಳ್ಳು (ಗೊಕ್ಷುರ)

Tribulus terrestris

ಮೂತ್ರಪಿಂಡದ ಕಲ್ಲುಗಳ ನಿವಾರಣೆಗೆ ಮತ್ತು ಮೂತ್ರನಾಳದ ಸೋಂಕನ್ನು ಗುಣಪಡಿಸಲು ಇದರ ಮುಳ್ಳು ಮತ್ತು ಬೇರನ್ನು ಬಳಸುತ್ತಾರೆ.

ಆಡುಸೋಗೆ

Adhatoda vasica

ಶ್ವಾಸಕೋಶದ ಕಾಯಿಲೆಗಳು, ತೀವ್ರ ಕೆಮ್ಮು ಮತ್ತು ಉಬ್ಬಸದ ನಿವಾರಣೆಗೆ ಇದರ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ನೀಡಲಾಗುತ್ತದೆ.

ಅಶ್ವಗಂಧ

Withania somnifera

ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು, ನರಗಳ ದೌರ್ಬಲ್ಯ ಮತ್ತು ಆತಂಕವನ್ನು ದೂರ ಮಾಡಲು ಇದರ ಬೇರುಗಳನ್ನು ಬಳಸಲಾಗುತ್ತದೆ.

ಚಿತ್ರಮೂಲ

Plumbago zeylanica

ಜೀರ್ಣಶಕ್ತಿ ಹೆಚ್ಚಿಸಲು ಮತ್ತು ವಾತ ರೋಗಗಳಿಂದ ಉಂಟಾಗುವ ಕೀಲು ನೋವುಗಳನ್ನು ಕಡಿಮೆ ಮಾಡಲು ಉಪಯುಕ್ತ.

ಕಾಡು ಹರಳು (ನೆಲ ಹರಳು) / ತುರಕತ್ತಿ

Jatropha curcas

ಇದರ ಎಣ್ಣೆಯನ್ನು ಚರ್ಮದ ಉರಿಯೂತ ಮತ್ತು ಗಾಯಗಳನ್ನು ವಾಸಿ ಮಾಡಲು ಹಾಗೂ ಮಲಬದ್ಧತೆ ನಿವಾರಣೆಗೆ ಬಳಸಲಾಗುತ್ತದೆ.ಬೀಜದ ಎಣ್ಣೆಯನ್ನು ಬಯೋಡೀಸಲ್‌ ಆಗಿ ಬಳಸಬಹುದು



೩. ವನ್ಯಪ್ರಾಣಿ ಸಂಕುಲ (Fauna)

ನೋಡಲು ಬರಡಾಗಿ ಕಾಣುವ ಈ ಮುಳ್ಳು ಕಾಡುಗಳು ಅಸಲಿಗೆ ಅತ್ಯಂತ ಅಪರೂಪದ ವನ್ಯಜೀವಿಗಳ ಆವಾಸಸ್ಥಾನವಾಗಿವೆ.

  • ಸಸ್ತನಿಗಳು: ಕೃಷ್ಣಮೃಗಗಳು (Blackbuck), ನಾಲ್ಕು ಕೊಂಬಿನ ಜಿಂಕೆ (Chousingha), ತೋಳಗಳು, ನರಿಗಳು, ಕತ್ತೆ ಕಿರುಬ,ಕಾಡುಬೆಕ್ಕು ಮತ್ತು ಕರಡಿಗಳು ಇಲ್ಲಿನ ಪ್ರಮುಖ ಆಕರ್ಷಣೆ.
  • ಪಕ್ಷಿ ಸಂಕುಲ: ಈ ವಲಯದಲ್ಲಿ ಸುಮಾರು 350 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ದಾಖಲಿಸಲಾಗಿದೆ.
    • ಗ್ರೇಟ್ ಇಂಡಿಯನ್ ಬಸ್ಟರ್ಡ್ (ಹೆಜ್ಜಾರ್ಲೆ): ಅಳಿವಿನ ಅಂಚಿನಲ್ಲಿರುವ ಈ ಬೃಹತ್ ಪಕ್ಷಿಗೆ ಬಳ್ಳಾರಿಯ ಸಿರಗುಪ್ಪ ಭಾಗದ ಮುಳ್ಳು ಕುರುಚಲು ಬಯಲುಗಳೇ ಕೊನೆಯ ಆಶ್ರಯ ತಾಣವಾಗಿದೆ.
    • ಜೆರ್ಡಾನ್ಸ್ ಕೋರ್ಸರ್ (Jerdon's Courser): ಈ ಅರೆ-ಶುಷ್ಕ ವಲಯದಲ್ಲಿ ಮಾತ್ರ ಕಾಣಸಿಗುವ ಅತ್ಯಂತ ಅಪರೂಪದ ನಿಶಾಚರ ಪಕ್ಷಿ.

೪. ಪ್ರಮುಖ ಸಂರಕ್ಷಿತ ಪ್ರದೇಶಗಳು

ಕರ್ನಾಟಕ ಸರ್ಕಾರವು ಈ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಕೆಲವು ಪ್ರಮುಖ ವನ್ಯಜೀವಿ ಧಾಮಗಳನ್ನು,ಮೀಸಲು ಮತ್ತು ರಾಜ್ಯ ಅರಣ್ಯಗಳನ್ನು ಘೋಷಿಸಿ ನಿರ್ವಹಣೆ ಮಾಡುತ್ತಿದೆ.

  1. ದರೋಜಿ ಕರಡಿ ಧಾಮ (ಬಳ್ಳಾರಿ): ಏಷ್ಯಾದಲ್ಲೇ ಮೊದಲ ಬಾರಿಗೆ ಕರಡಿಗಳಿಗಾಗಿ ಸ್ಥಾಪಿತವಾದ ಅಭಯಾರಣ್ಯ, ಇದು ಮುಳ್ಳು ಮತ್ತು ಬಂಡೆಗಳಿಂದ ಕೂಡಿದ ಕುರುಚಲು ಪರಿಸರದಲ್ಲಿದೆ.
  2. ಬುಕ್ಕಾಪಟ್ನ-ಹಾಗಲವಾಡಿ ಕೃಷ್ಣಮೃಗ ವನ್ಯಜೀವಿ ಧಾಮ:ತುಮಕೂರು ಜಿಲ್ಲೆಯ ಶಿರಾ ಮತ್ತು ಗುಬ್ಬಿ ತಾಲ್ಲೂಕಿನಲ್ಲಿ ವ್ಯಾಪಿಸಿರುವ ಈ ಅರಣ್ಯವು ಬಯಲುಸೀಮೆಯ ಅತ್ಯಂತ ದೊಡ್ಡ ಅರಣ್ಯ ಪ್ರದೇಶವಾಗಿದೆ. ಇದು ಪ್ರಮುಖ ಕುರುಚಲು ಕಾಡಾಗಿದ್ದು, ನೂರಾರು ಕೃಷ್ಣಮೃಗಗಳಿಗೆ ರಕ್ಷಣೆ ನೀಡುತ್ತದೆ.
  3. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ :ಬೆಂಗಳೂರಿಗೆ ಹೊಂದಿಕೊಂಡಿರುವ ಇದರ ಒಂದು ಭಾಗವು ಒಣ ಉಷ್ಣವಲಯದ ಮುಳ್ಳು ಮತ್ತು ಪರ್ಣಪಾತಿ ಕಾಡುಗಳಿಂದ ಕೂಡಿದೆ.ಈ ವಲಯದಲ್ಲಿ ಆನೆಗಳು ಕಂಡುಬರುವ ಏಕೈಕ ಅರಣ್ಯವಾಗಿದೆ.
  4. ದೇವರಾಯನ ದುರ್ಗ ರಾಜ್ಯ ಅರಣ್ಯ-ತುಮಕೂರು ನಗರಕ್ಕೆ ಹೊಂದಿಕೊಂಡಂತಿರುವ ಈ ಅರಣ್ಯದ ಕೆಲವು ಭಾಗಗಳಲ್ಲಿ ಶುಷ್ಕ ವಲಯದ ನಿತ್ಯಹರಿದ್ವರ್ಣ ಕಾಡುಗಳಿರುವುದು ವಿಶೇಷ.ಶಿಂಷಾ ಮತ್ತು ಜಯಮಂಗಲಿ ನದಿಗಳ ಮೂಲವು ಈ ಅರಣ್ಯ ಪ್ರದೇಶದಲ್ಲಿದೆ.
  5. ಜಯಮಂಗಲಿ ಕೃಷ್ಣಮೃಗ ಧಾಮ(ಮೈದನಹಳ್ಳಿ)-ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿರುವ ಹುಲ್ಲುಗಾವಲು ಸಹಿತ ಕುರುಚಲು ಕಾಡು ಕೃಷ್ಣಮೃಗಗಳ ಸಹಜ ಆವಾಸವಾಗಿದೆ
  6. ಚಿಂಚೋಳಿ ವನ್ಯಜೀವಿಧಾಮ-ಕಲ್ಬುರ್ಗಿ ಜಿಲ್ಲೆಯ ಈ ಅರಣ್ಯವು ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಘೋಷಣೆಯಾದ  ಶುಷ್ಕ ವಲಯದ ವನ್ಯಜೀವಿಧಾಮ.ಅಪರೂಪದ ಸಸ್ಯವರ್ಗ ಮತ್ತು ವನ್ಯ ಪ್ರಾಣಿಗಳಿಗೆ ಆಶ್ರಯ ನೀಡಿದೆ.
  7. ಸಂಡೂರು ಮೀಸಲು ಅರಣ್ಯ-ಬಳ್ಳಾರಿ ಜಿಲ್ಲೆಯಲ್ಲಿರುವ ವಿಶಿಷ್ಠ ಜೀವವೈವಿದ್ಯ ತಾಣ,ಪರ್ಣಪಾತಿ ಕಾಡುಗಳನ್ನು ಮತ್ತು ಕೆಲವು ಭಾಗಗಳಲ್ಲಿ ಶುಷ್ಕವಲಯದ ನಿತ್ಯ ಹರಿದ್ವರ್ಣ ಕಾಡುಗಳನ್ನು ಒಳಗೊಂಡಿರುವುದು ವಿಶೇಷ.ʼಬಯಲು ಸೀಮೆಯ ಮಲೆನಾಡುʼಎಂಬುದಾಗಿ ಈ ಅರಣ್ಯವು ಪ್ರಸಿದ್ಧವಾಗಿದೆ.
  8. ಮಾರಿಕಣಿವೆ ರಾಜ್ಯ ಅರಣ್ಯ-ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಈ ಅರಣ್ಯ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹೊಂದಿಕೊಂಡಿದೆ.ಪರ್ಣಪಾತಿ ಮರಗಳನ್ನು ಹೊಂದಿರುವ ಈ ಅರಣ್ಯವು ವಾಣಿವಿಲಾಸ ಸಾಗರದ ಹಿನ್ನೆಲೆಯಲ್ಲಿ ನಯನ ಮನೋಹರವಾಗಿ ಕಂಗೊಳಿಸುತ್ತದೆ.
  9. ಚೌಡ್ಲಾಪುರ ಮೀಸಲು ಅರಣ್ಯ(ಕೋಣನ ಕಾವಲು)-ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ವ್ಯಾಪಿಸಿರುವ ಈ ಅರಣ್ಯ ಪ್ರದೇಶವು ಸಮೃಧ್ಧ ಹುಲ್ಲುಗಾವಲು,ಪರ್ಣಪಾತಿ,ಕುರುಚಲು ಸಸ್ಯವರ್ಗ ಮತ್ತು ವಿಶಿಷ್ಟ ವನ್ಯಪ್ರಾಣಿಗಳ ಆವಾಸ ಸ್ಥಾನವಾಗಿದೆ.
  10. ರಾಣೆಬೆನ್ನೂರು ಕೃಷ್ಣಮೃಗ ಧಾಮ-ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿರುವ  ಈ ಅರಣ್ಯವು ಕೃಷ್ಣಮೃಗಗಳ ಸಂರಕ್ಷಣೆಗೆ ವನ್ಯ ಜೀವಿ ಧಾಮವಾಗಿ ಘೋಷಣೆಯಾದ ಮೊದಲ ಅರಣ್ಯ ಪ್ರದೇಶ.ಸರಿ-ಸುಮಾರು 6000 ಕೃಷ್ಣಮೃಗಗಳಿಗೆ ಆಶ್ರಯ ನೀಡಿದೆ. 



 ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಸಂರಕ್ಷಣೆ

ಇಂದು ಕರ್ನಾಟಕದ ಮುಳ್ಳು ಪೊದೆ ಕಾಡುಗಳು ತೀವ್ರ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆ:

  • ನಗರೀಕರಣ ಮತ್ತು ಕೃಷಿ ವಿಸ್ತರಣೆ: ಈ ಕಾಡುಗಳನ್ನು "ಬಂಜರು ಭೂಮಿ" ಎಂದು ತಪ್ಪು ತಿಳಿಯಲಾಗುತ್ತಿದ್ದು, ಇವುಗಳನ್ನು ಕೃಷಿ ಮತ್ತು ಕೈಗಾರಿಕೆಗಳಿಗಾಗಿ ನಾಶಪಡಿಸಲಾಗುತ್ತಿದೆ.
  • ಅತಿಯಾದ ಮೇಯಿಸುವಿಕೆ: ಸ್ಥಳೀಯ ಜಾನುವಾರುಗಳ ಅತಿಯಾದ ಮೇಯಿಸುವಿಕೆಯಿಂದಾಗಿ ಸಸ್ಯಗಳ ಪುನರುತ್ಪಾದನೆ ಕುಂಠಿತಗೊಳ್ಳುತ್ತಿದೆ.
  • ಕಟ್ಟಿಗೆ ಸಂಗ್ರಹಣೆ: ಉರುವಲು ಮತ್ತು ಬೇಲಿಗಾಗಿ ಮುಳ್ಳಿನ ಗಿಡಗಳನ್ನು ಕಡಿಯುವುದು ಹೆಚ್ಚಾಗಿದೆ.

ಕೊನೆಯದಾಗಿ ಕರ್ನಾಟಕದ ಮುಳ್ಳು ಪೊದೆ ಕಾಡುಗಳು ಕೇವಲ ಒಣ ಭೂಮಿಯಲ್ಲ, ಅವು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ, ಅಂತರ್ಜಲ ವೃದ್ಧಿಸುವ ಮತ್ತು ಅಪರೂಪದ ಜೀವಸಂಕುಲವನ್ನು ಪೊರೆಯುವ ಪ್ರಕೃತಿಯ ವಿಶಿಷ್ಟ ತಾಣಗಳಾಗಿವೆ. ಇವುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ.

                                                                                                         

Wednesday, March 4, 2026

ಆಧುನಿಕ ಪರಿಸರ ವಿಜ್ಞಾನದ ಪಿತಾಮಹ - ಯುಜೀನ್ ಪಿ. ಓಡಮ್

 ಆಧುನಿಕ ಪರಿಸರ ವಿಜ್ಞಾನದ ಪಿತಾಮಹ - ಯುಜೀನ್ ಪಿ. ಓಡಮ್ 


ಲೇಖಕರು

ತಾಂಡವಮೂರ್ತಿ ಎ ಎನ್‌

ಸರ್ಕಾರಿ ಪದವಿ ಪೂರ್ವ ಕಾಲೇಜು

 ನೆಲಮಂಗಲ

_______________________________________


ಪರಿಸರ ವಿಜ್ಞಾನ ಅಥವಾ 'ಇಕಾಲಜಿ' (Ecology) ಎಂಬ ವಿಷಯವನ್ನು ಕೇವಲ ಜೀವಶಾಸ್ತ್ರದ ಒಂದು ಸಣ್ಣ ವಿಭಾಗವಾಗಿ ನೋಡುತ್ತಿದ್ದ ಕಾಲಘಟ್ಟದಲ್ಲಿ, ಅದನ್ನು ಒಂದು ಪ್ರತ್ಯೇಕ ಮತ್ತು ಪ್ರಮುಖ ವಿಜ್ಞಾನದ ಶಿಸ್ತನ್ನಾಗಿ ರೂಪಿಸಿದವರು 

ಯುಜೀನ್ ಪಿ. ಓಡಮ್. ಇವರನ್ನು "ಆಧುನಿಕ ಪರಿಸರ ವಿಜ್ಞಾನದ ಪಿತಾಮಹ" ಎಂದೇ ಗೌರವಿಸಲಾಗುತ್ತದೆ.

ಜೀವನ ಮತ್ತು ಹಿನ್ನೆಲೆ

ಯುಜೀನ್ ಓಡಮ್ 1913 ರಲ್ಲಿ ಅಮೆರಿಕಾದಲ್ಲಿ ಜನಿಸಿದರು. ಅವರು ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅವರ ತಂದೆ ಹೊವಾರ್ಡ್ ಡಬ್ಲ್ಯೂ. ಓಡಮ್ ಒಬ್ಬ ಸಮಾಜಶಾಸ್ತ್ರಜ್ಞರಾಗಿದ್ದರು, ಇದು ಯುಜೀನ್ ಅವರಿಗೆ ಪರಿಸರವನ್ನು ಕೇವಲ ವಿಜ್ಞಾನವಾಗಿ ಮಾತ್ರವಲ್ಲದೆ, ಸಮಾಜದ ಒಂದು ಅವಿಭಾಜ್ಯ ಅಂಗವಾಗಿ ನೋಡಲು ಪ್ರೇರೇಪಿಸಿತು. "ಪರಿಸರ ವಿಜ್ಞಾನವು ಕೇವಲ ಜೀವಶಾಸ್ತ್ರದ ಭಾಗವಲ್ಲ, ಅದು ಮಾನವಕುಲದ ಉಳಿವಿನ ವಿಜ್ಞಾನ."ಎಂಬುದು ಓಡಮ್‌ ರವರ ಪ್ರಸಿದ್ಧ ಉಲ್ಲೇಖ.

ಓಡಮ್ ಅವರ ಪ್ರಮುಖ ಕೊಡುಗೆಗಳು

ಪರಿಸರ ಶಾಸ್ತ್ರದ ಮೂಲಭೂತ ಪರಿಕಲ್ಪನೆಗಳು 'ಫಂಡಮೆಂಟಲ್ಸ್ ಆಫ್ ಎಕಾಲಜಿ' (Fundamentals of Ecology) ಪುಸ್ತಕ
1953
ರಲ್ಲಿ ಓಡಮ್ ಅವರು ತಮ್ಮ ಕಿರಿಯ ಸಹೋದರ ಹೆಚ್‌ ಟಿ ಓಡಮ್‌ ರವರೊಂದಿಗೆ ಬರೆದ ಈ ಪುಸ್ತಕವು ಪರಿಸರ ವಿಜ್ಞಾನದ ಕ್ಷೇತ್ರದಲ್ಲಿ  ಕ್ರಾಂತಿಕಾರಕ ಬದಲಾವಣೆಗಳಿಗೆ ನಾಂದಿ ಹಾಡಿತು. ಸುಮಾರು 10 ವರ್ಷಗಳ ಕಾಲ ಈ ಪುಸ್ತಕ ಪರಿಸರ ವಿಜ್ಞಾನದ ಏಕೈಕ ಪಠ್ಯಪುಸ್ತಕವಾಗಿತ್ತು. ಈ ಪುಸ್ತಕದ ಮೂಲಕ ಅವರು ಪರಿಸರ ವಿಜ್ಞಾನವನ್ನು ಕೇವಲ ಗಿಡ-ಮರ,ಪ್ರಾಣಿ-ಪಕ್ಷಿಗಳ ಅಧ್ಯಯನ ಎನ್ನುವುದಕ್ಕಿಂತ,ಅಜೈವಿಕ ಅಂಶಗಳೊಂದಿಗಿನ  ಜೀವಿಗಳ ಒಡನಾಟದ ಒಂದು "ಸಮಗ್ರ ವ್ಯವಸ್ಥೆ" (Holistic System) ಎಂದು ನಿರೂಪಿಸಿದರು

2. ಪರಿಸರ ವ್ಯವಸ್ಥೆಯ ಪರಿಕಲ್ಪನೆ (Ecosystem Concept)
ಓಡಮ್ ಅವರು ಪರಿಸರ ವ್ಯವಸ್ಥೆಯನ್ನು (Ecosystem) ವಿಶ್ಲೇಷಿಸುವಾಗ ಎರಡು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದರು:

  • ಶಕ್ತಿಯ ಹರಿವು (Energy Flow): ಸೂರ್ಯನಿಂದ ಬರುವ ಶಕ್ತಿಯು ಹೇಗೆ ಒಂದು ಜೀವಿಯಿಂದ ಇನ್ನೊಂದು ಜೀವಿಗೆ ವರ್ಗಾವಣೆಯಾಗುತ್ತದೆ ಎಂಬುವುದನ್ನು ಅವರು ವಿವರಿಸಿದರು.
  • ಪೋಷಕಾಂಶಗಳ ಚಕ್ರೀಯ ಚಲನೆ (Nutrient Cycling): ಪರಿಸರದಲ್ಲಿ ಮೂಲವಸ್ತುಗಳು ಹೇಗೆ ಮರುಚಕ್ರೀಕರಣಗೊಂಡು ಮರುಬಳಕೆಯಾಗುತ್ತವೆ ಎಂಬುದನ್ನು ಅವರು ಪ್ರತಿಪಾದಿಸಿದರು.

3. ಪರಿಸರ ವಿಜ್ಞಾನದ ಸಮಗ್ರ ನೋಟ (Holistic Approach)
ಓಡಮ್ ಅವರ ಪ್ರಕಾರ, "ವ್ಯವಸ್ಥೆಯ ಒಂದು ಭಾಗದ ಅಧ್ಯಯನವು ಇಡೀ ವ್ಯವಸ್ಥೆಯ ಸ್ವರೂಪವನ್ನು ತಿಳಿಸುವುದಿಲ್ಲ." ಅಂದರೆ, ಕೇವಲ ಒಂದು ಪ್ರಾಣಿ ಅಥವಾ ಸಸ್ಯದ ಬಗ್ಗೆ ತಿಳಿಯುವುದಕ್ಕಿಂತ, ಆ ಜೀವಿಯು ತನ್ನ ಸುತ್ತಮುತ್ತಲಿನ ಪರಿಸರದೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಮತ್ತು ಪ್ರತಿವರ್ತಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಅವರು ಎಲ್ಲರಿಗೂ ಸರಳವಾಗಿ ಅರ್ಥೈಸಿದರು.

4.ಪರಿಸರ ಮತ್ತು ಆರ್ಥಿಕತೆಯ ಸಮನ್ವಯ
ಅವರು ಪರಿಸರ ಸಂರಕ್ಷಣೆಯನ್ನು ಆರ್ಥಿಕ ಅಭಿವೃದ್ಧಿಯ ಶತ್ರು ಎಂದು ನೋಡಲಿಲ್ಲ. ಬದಲಾಗಿ, "ಪ್ರಕೃತಿಯು ನಮಗೆ ನೀಡುವ ಸೇವೆಗಳು (Ecosystem Services) ಉಚಿತವಲ್ಲ, ಅವುಗಳಿಗೂ ಮೌಲ್ಯವಿದೆ" ಎಂದು ಜಗತ್ತಿಗೆ ಸಾರಿದರು.

5. ಶಕ್ತಿಯ ಹರಿವಿನ ಮಾದರಿಗಳು (Energy Flow Models)

ಓಡಮ್ ಅವರ ಪ್ರಕಾರ, ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯು ಏಕಮುಖವಾಗಿ ಚಲಿಸುತ್ತದೆ (Unidirectional). ಸೂರ್ಯನಿಂದ ಬಂದ ಶಕ್ತಿಯು ಪೋಷಣಾಸ್ತರಗಳ ಮೂಲಕ ಹಾದುಹೋಗುವಾಗ ಕ್ರಮೇಣ ಕ್ಷೀಣಿಸುತ್ತಾ ಹೋಗುತ್ತದೆ.ಈ ಪರಿಸರ ಮಾದರಿಗಳನ್ನು ರೂಪಿಸುವಲ್ಲಿ ಕಿರಿಯ ಸಹೋದರ ಹೆಚ್‌ ಟಿ ಓಡಮ್‌ ಪ್ರಮುಖ ಪಾತ್ರವನ್ನು ವಹಿಸಿದರು.

  • ಶಕ್ತಿಯ ಹರಿವಿನ ಏಕ-ಪಥ ಮಾದರಿ (Single-channel Energy Flow Model):
    ಇದು ಶಕ್ತಿಯು ಸಸ್ಯಗಳಿಂದ (ಉತ್ಪಾದಕರು) ಸಸ್ಯಹಾರಿಗಳಿಗೆ, ನಂತರ ಮಾಂಸಹಾರಿಗಳಿಗೆ ಹರಿಯುವುದನ್ನು ತೋರಿಸುತ್ತದೆ. ಪ್ರತಿಯೊಂದು ಹಂತದಲ್ಲೂ ಉಸಿರಾಟದ (Respiration) ಮೂಲಕ ಶಕ್ತಿಯು ಶಾಖದ ರೂಪದಲ್ಲಿ ವ್ಯಯವಾಗುತ್ತದೆ.ಈ ಮಾದರಿಯು ಪರಿಸರ ವ್ಯವಸ್ಥೆಯಲ್ಲಿ ಶಕ್ತಿ ಹರಿವಿನ ಸರಳ ಮಾದರಿಯಾಗಿದ್ದು.ಈ ಮಾದರಿಯ ಲೋಪಗಳನ್ನು ಸರಿಪಡಿಸಿ,ಶಕ್ತಿ ಹರಿವಿನ ಸಮಗ್ರ ಮಾದರಿಯಾಗಿ Y-ಆಕಾರದ ಮಾದರಿಯನ್ನು ರೂಪಿಸಿದರು.
  • Y-ಆಕಾರದ ಮಾದರಿ (Y-Shaped Model):
    ಈ ಮಾದರಿಯಲ್ಲಿ ಶಕ್ತಿಯ ಹರಿವು ವಿಘಟಕ ಸೂಕ್ಷ್ಮ ಜೀವಿಗಳನ್ನು ಒಳಗೊಂಡ ಒಂದು ಸಂಕೀರ್ಣ ಪಥ ಎಂಬುದನ್ನು ನಿರೂಪಿಸಿದರು. ಪರಿಸರ ವ್ಯವಸ್ಥೆಯಲ್ಲಿ ಎರಡು ರೀತಿಯ ಆಹಾರ ಸರಪಳಿಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಇದು ತೋರಿಸುತ್ತದೆ:
    1. ಮೇಯುವ ಆಹಾರ ಸರಪಳಿ (Grazing Food Chain):ಮೊದಲ ಪೋಷಣಾಸ್ತರವು ಜೀವಂತ ಹಸಿರು ಸಸ್ಯಗಳಿಂದ ಆರಂಭವಾಗುತ್ತದೆ.
    2. ಕೊಳೆತಿನಿ ಆಹಾರ ಸರಪಳಿ (Detritus Food Chain): ಮೊದಲ ಪೋಷಣಾಸ್ತರವು ಸತ್ತ ಸಸ್ಯ ಮತ್ತು ಪ್ರಾಣಿಗಳ ತ್ಯಾಜ್ಯದಿಂದ ಆರಂಭವಾಗುತ್ತದೆ.ಈ ಎರಡು ಪಥಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ ಎಂಬುದನ್ನು ಈ ಮಾದರಿ ವಿವರಿಸುತ್ತದೆ.

6. ಪೋಷಕಾಂಶಗಳ ಚಕ್ರೀಯ ಚಲನೆ (Nutrient Cycling)

ಶಕ್ತಿಯು ಶಾಖದ ರೂಪದಲ್ಲಿ ವ್ಯಯವಾಗಿ ಹೋಗುವಂತೆ ಪೋಷಕಾಂಶಗಳು ನಾಶವಾಗುವುದಿಲ್ಲ; ಬದಲಾಗಿ ಅವು ಮರುಕಕ್ರೀಕರಣಗೊಳ್ಳುತ್ತವೆ. ಇದನ್ನು ಜೈವಿಕ ಭೂ-ರಾಸಾಯನಿಕ ಚಕ್ರ (Biogeochemical Cycles) ಎಂದು ಕರೆಯಲಾಗುತ್ತದೆ.

  • ಚಕ್ರೀಯ ಚಲನೆ: ಸಾರಜನಕ (Nitrogen), ಇಂಗಾಲ (Carbon),ಆಕ್ಸಿಜನ್ ಮತ್ತು ರಂಜಕದಂತಹ (Phosphorus) ಮೂಲವಸ್ತುಗಳು ವಾತಾವರಣ ಮತ್ತು ಮಣ್ಣಿನಿಂದ ಸಸ್ಯಗಳಿಗೆ, ಸಸ್ಯಗಳಿಂದ ಪ್ರಾಣಿಗಳಿಗೆ ವರ್ಗಾವಣೆಗೊಂಡು, ಅಂತಿಮವಾಗಿ ವಿಘಟಕಗಳ (Decomposers) ಮೂಲಕ ಮತ್ತೆ ಮಣ್ಣಿಗೆ ಮತ್ತು ವಾತಾವರಣಕ್ಕೆಸೇರುತ್ತವೆ.
  • ವಿಘಟಕಗಳ ಪಾತ್ರ: ಓಡಮ್ ಅವರು ವಿಘಟಕಗಳನ್ನು (ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು) ಪರಿಸರದ "ಮರುಚಕ್ರೀಕರಣ ಘಟಕಗಳು"ಮತ್ತು“ಪರಿಸರ ಸ್ವಚ್ಛತಾ ಕಾರ್ಮಿಕರು”ಎಂದು ಗುರುತಿಸಿದರು. ವಿಘಟಕಗಳಿಲ್ಲದಿದ್ದರೆ ಪೋಷಕಾಂಶಗಳ ಚಕ್ರವು ಸ್ಥಗಿತಗೊಳ್ಳುತ್ತದೆ.

ಶಕ್ತಿ ಮತ್ತು ಪೋಷಕಾಂಶಗಳ ಹರಿವಿನ ನಡುವಿನ ವ್ಯತ್ಯಾಸ

ವೈಶಿಷ್ಟ್ಯ

ಶಕ್ತಿಯ ಹರಿವು (Energy Flow)

ಪೋಷಕಾಂಶಗಳ ಚಕ್ರ (Nutrient Cycling)

ಮೂಲ

ಸೂರ್ಯ

ಮಣ್ಣು, ಗಾಳಿ ಮತ್ತು ನೀರು

ಚಲನೆ

ಏಕಮುಖ (ಮರಳಿ ಬರುವುದಿಲ್ಲ)

ಚಕ್ರೀಯ (ಮರುಚಕ್ರೀಕರಣಗೊಳ್ಳುತ್ತದೆ)

ಅಂತಿಮ ಸ್ಥಿತಿ

ಶಾಖವಾಗಿ ಪರಿಸರದಲ್ಲಿ ಹರಡುತ್ತದೆ

ಪರಿಸರದಲ್ಲಿ ಸಂಗ್ರಹವಾಗಿ ಮರುಬಳಕೆಯಾಗುತ್ತದೆ

 

7.ಓಡಮ್ ಅವರ ಪರಿಸರ ವ್ಯವಸ್ಥೆಯ ಉತ್ಪಾದಕತೆಯ ಸೂತ್ರ (Productivity Equation)

ಓಡಮ್ ಅವರು ಪರಿಸರ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಅಳೆಯಲು ಈ ಕೆಳಗಿನ ಸೂತ್ರವನ್ನು ಬಳಸಿದರು:

ಪರಿಸರದ ಒಟ್ಟು ಉತ್ಪಾದಕತೆಯು ಪರಿಸರ ವ್ಯವಸ್ಥೆಯಲ್ಲಿನ ಹಸಿರು ಸಸ್ಯಗಳು ದ್ಯುತಿಸಂಶ್ಲೇಷಣೆಯ (Photosynthesis) ಮೂಲಕ ಒಂದು ನಿರ್ದಿಷ್ಟ ಸಮಯದಲ್ಲಿ ಉತ್ಪಾದಿಸುವ ಒಟ್ಟು ಸಾವಯವ ಪದಾರ್ಥಗಳ ಪ್ರಮಾಣ. 

GPP = NP + R

GPP (Gross Primary Productivity): ಸಸ್ಯಗಳು ಸೂರ್ಯನಿಂದ ಒಟ್ಟು ಸಂಗ್ರಹಿಸಿದ ಶಕ್ತಿ.

R (Respiration): ಸಸ್ಯವು ತನ್ನ ಜೀವರಾಶಿ ಉತ್ಪಾದನೆ ಮತ್ತು ಚಯಾಪಚಯ ಕ್ರಿಯೆಗಳಿಗೆ  ಬಳಸಿದ ಶಕ್ತಿ (ಉಸಿರಾಟ).

NPP (Net Primary Productivity): ಸಸ್ಯಗಳು ತಮ್ಮ ಅಗತ್ಯಗಳಿಗೆ ಬಳಸಿ  ಉಳಿದ ನಿವ್ವಳ ಶಕ್ತಿ.ಈ ನಿವ್ವಳ ಶಕ್ತಿ ಮಾತ್ರ ಮುಂದಿನ ಹಂತದ ಪ್ರಾಣಿಗಳಿಗೆ ಆಹಾರವಾಗಿ ಲಭ್ಯವಿರುತ್ತದೆ.

ಪ್ರಶಸ್ತಿ ಮತ್ತು ಗೌರವಗಳು

ಅವರ ಅನುಪಮ ಸೇವೆಗಾಗಿ ಅವರಿಗೆ ವಿಜ್ಞಾನ ಲೋಕದ ಪ್ರತಿಷ್ಠಿತ ಪ್ರಶಸ್ತಿಗಳಾದ 'ಟೈಲರ್ ಪ್ರಶಸ್ತಿ' (Tyler Prize) ಮತ್ತು 'ಕ್ರಾಫರ್ಡ್ ಪ್ರಶಸ್ತಿ' (Crafoord Prize) - ಇದನ್ನು ಪರಿಸರ ವಿಜ್ಞಾನದ ನೋಬೆಲ್ ಎಂದು ಪರಿಗಣಿಸಲಾಗುತ್ತದೆ - ನೀಡಿ ಗೌರವಿಸಲಾಗಿದೆ. 

ಪ್ರಸ್ತುತ ಜಗತ್ತಿನ ಗಮನಸೆಳೆದಿರುವ ಸುಸ್ಥಿರ ಅಭಿವೃದ್ಧಿ (Sustainable Development) ಮತ್ತು ಪರಿಸರ ಸಂರಕ್ಷಣೆಯ ತಳಹದಿಯನ್ನು ಹಾಕಿದವರು ಯುಜೀನ್ ಓಡಮ್. ಪರಿಸರವನ್ನು ಒಂದು ಯಂತ್ರದಂತೆ ನೋಡದೆ, ಒಂದು ಜೀವಂತ ವ್ಯವಸ್ಥೆಯಂತೆ ಗೌರವಿಸಬೇಕು ಎಂಬ ಅವರ ಹಾದಿ ಮತ್ತು ಆಶಯ ಇಂದಿಗೂ ಪ್ರಸ್ತುತವಾಗಿದೆ.