ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, February 4, 2024

2024 ರ ಫೆಬ್ರವರಿ ತಿಂಗಳ ಲೇಖನಗಳು

 2024 ರ ಫೆಬ್ರವರಿ ತಿಂಗಳ ಲೇಖನಗಳು

1. ಸಣ್ಣವರಾಗಿ ಬೆಳೆಯಿರಿ !   : ಡಾ.ಟಿ.ಎ.ಬಾಲಕೃಷ್ಣ ಅಡಿಗ
2. ಪರಮಾಣು ರಚನಾ ಸಿದ್ಧಾಂತದ ಪಿತಾಮಹ – ನಿಕೊಲಸ್‌ ಬೇಕರ್‌ !!!!  : ರಾಮಚಂದ್ರ ಭಟ್‌ ಬಿ.ಜಿ.
3. ಅಂತರ್ಜಾಲ ಹೇಗೆ ಕೆಲಸ ಮಾಡುತ್ತದೆ?: ಸುರೇಶ ಸಂಕೃತಿ.
4.ಕ್ಯಾನ್ಸರ್ ರೋಗಕ್ಕೆ ಅಂಜದೆ,ಧೈರ್ಯದಿಂದ ಜೀವನ ಸಾಗಿಸಿ ಅದಕ್ಕು ಉಂಟು ಮದ್ದು  ಬಸವರಾಜ ಎಮ್ ಯರಗುಪ್ಪಿ,
5. ಆಧುನಿಕ ಮಾನವ ಮತ್ತು ಜೈವಿಕ ತಂತ್ರಜ್ಞಾನ……. ಗಜಾನನ ಭಟ್ಟ
6. ಕುತೂಹಲದ ‘ಕ್ವಾಂಟಮ್ ಡಾಟ್ಸ್  : ರಮೇಶ ವಿ. ಬಳ್ಳಾ 
7. ರಾಷ್ಟ್ರೀಯ ವಿಜ್ಞಾನ ದಿನ – ಸಿ.ವಿ. ರಾಮನ್ ಅವರ ಕೊಡುಗೆಯ ಸ್ಮರಣಾರ್ಥ ದಿನ. :  ಬಿ.ಎನ್ ರೂಪ
8. 2024 ಫೆಬ್ರವರಿ ತಿಂಗಳ ಒಗಟುಗಳು : ರಾಮಚಂದ್ರ ಭಟ್‌ ಬಿ.ಜಿ.
9. ಫೆಬ್ರವರಿ 2024 ರ ಸೈನ್ಟೂನ್ ಗಳು ಶ್ರೀಮತಿ ಜಯಶ್ರೀ ಶರ್ಮ



ಸಣ್ಣವರಾಗಿ ಬೆಳೆಯಿರಿ !

 ಸಣ್ಣವರಾಗಿ ಬೆಳೆಯಿರಿ !  


  ಲೇಖಕರು : ಡಾ.ಟಿ.ಎ.ಬಾಲಕೃಷ್ಣ ಅಡಿಗ

ವಿಜ್ಞಾನ ಸಂವಹನಕಾರರು ಹಾಗೂ ಶಿಕ್ಷಣ ತಜ್ಞರು


ಮಾನವರಲ್ಲಿ ವಯಸ್ಸಾಗುವ ಸಹಜ ಪ್ರಕ್ರಿಯೆಯನ್ನು ತಿರುವು ಮುರುವು ಮಾಡುವ ಸಾಧ್ಯತೆಯನ್ನು ಇತ್ತೀಚಿನ ಸಂಶೋಧನೆಯೊಂದು ತೋರಿಸಿಕೊಟ್ಟಿದೆ. ಇದಕ್ಕೆ ಸಂಬಂಧಿಸಿದ ಕುತೂಹಲಕಾರಿ ಅಂಶಗಳನ್ನು ಈ ಲೇಖನದಲ್ಲಿ ಪ್ರಸ್ತುತ ಪಡಿಸಿದ್ದಾರೆ, ಡಾ. ಬಾಲಕೃಷ್ಣ ಅಡಿಗ ಅವರು

ಬೆಳೆಯುತ್ತಾ ನಾವು ದೊಡ್ಡವರಾಗುತ್ತೇವೆ, ಇದು ಸೃಷ್ಟಿಯ ನಿಯಮ. ಆದರೆ ಇದೇನಿದು ? ಸಣ್ಣವರಾಗಿ ಬೆಳೆಯಿರಿ ಎಂದರೆ ? ಇದು ನಿಜಕ್ಕೂ ಸಾಧ್ಯವೇ ? ಹಲವಾರು ಪ್ರಶ್ನೆಗಳು ಮನದಲ್ಲಿ ಮೂಡುತ್ತಿವೆಯಲ್ಲವೇ ? ನಿಮ್ಮೆಲ್ಲ ಸಂಶಯಗಳನ್ನು ಕೆಲ ಕಾಲ ಬದಿಗಿಟ್ಟು, ಮುಕ್ತ ಮನಸ್ಸಿನಿಂದ ಯೋಚಿಸುವಿರಾದರೆ, ವಯಸ್ಸಾಗುವ ಪ್ರಕ್ರಿಯೆಗೆ ಸಂಬಂಧಿಸಿದ ಇತ್ತೀಚಿನ ಸಂಶೋಧನೆಯೊಂದರ ಬಗ್ಗೆ ನಿಮಗೆ ಮಾಹಿತಿ ನೀಡಲು ಇಚ್ಛಿಸುತ್ತೇನೆ.

ನಮ್ಮ ದೇಹದ ಪ್ರತಿಯೊಂದು ಜೀವಕೋಶದಲ್ಲಿ ನೀವು ಎಷ್ಟು ವರ್ಷ ಬದುಕಿರುತ್ತೀರಿ, ಯಾವಾಗ ಸಾವು ಸಂಭವಿಸಬಹುದು ಎಂಬುದರ ಬಗ್ಗೆ ಸಾಂಕೇತಿಕ ಮಾಹಿತಿ ಅಡಕವಾಗಿರುತ್ತದೆ. ನಿಮ್ಮ ಆಯಸ್ಸನ್ನು ಅನಿರ್ದಿಷ್ಟ ಕಾಲ ವಿಸ್ತರಿಸುವ ಸಾಮರ್ಥ್ಯವೂ ಇದರಲ್ಲಿದೆ ಎಂದರೆ ಅಚ್ಚರಿಯಗುತ್ತದೆ, ಅಲ್ಲವೇ ?

ಸುಮಾರು ಹತ್ತು ವರ್ಷಗಳ ಹಿಂದೆ ಕೆಲ ವಿಜ್ಞಾನಿಗಳ ತಂಡವೊಂದು ಪ್ರಯೋಗಾಲಯದಲ್ಲಿ ಮಾನವ ಜೀವಕೋಶಗಳ ಒಂದು ಗುಂಪು ಹಲವು ಪೀಳಿಗೆಗಳ ಕಾಲ ಮುಪ್ಪಿನ ಸ್ಥಿತಿ ತಲುಪದೇ, ನಿರಂತರವಾಗಿ ವಿಭಜನೆಯಾಗುತ್ತಿರುವುದನ್ನು ಗಮನಿಸಿದರು. ಈ ಪ್ರಕ್ರಿಯೆಗೆ ಪ್ರೇರೇಪಣೆ ನೀಡಿದಲ್ಲಿ ಈ ಜೀವಕೋಶಗಳು ಸಾವಿಲ್ಲದ, ಅಮರತ್ವವನ್ನು ಗಳಿಸಬಲ್ಲುವು ಎಂಬುದನ್ನು ಕಂಡುಕೊಂಡರು. ಇದನ್ನು ಸಾಧಿಸುವ ಮಾರ್ಗದ ಬಗ್ಗೆ ಖಚಿತವಾಗಿ ತಿಳಿದಿರಲಿಲ್ಲ. ಆದರೆ, ಇತ್ತೀಚೆಗೆ ನಡೆದ ಸಂಶೋಧನೆಯೊಂದರಲ್ಲಿ ವಿಜ್ಞಾನಿಗಳಿಗೆ ಈ ರಹಸ್ಯವನ್ನು ಕಂಡುಹಿಡಿಯಲು ಸಾಧ್ಯವಾಗಿದೆ. ಮಾನವರಲ್ಲಿ ವಯಸ್ಸಾಗುವ ಪ್ರಕ್ರಿಯೆಗೆ ಕಾರಣವಾಗುವ ಅಂಶವನ್ನು ಈಗ ಪತ್ತೆ ಮಾಡಲಾಗಿದೆ. ಅಷ್ಟೇ ಅಲ್ಲ, ಇದನ್ನು ನಿಯಂತ್ರಿಸುವ ಮಾರ್ಗವನ್ನೂ ಕಂಡುಕೊಳ್ಳಲಾಗಿದೆ. ಹೀಗಾಗಿ, ವಯಸ್ಸಾಗುವ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ಮುಂದೂಡಬಹುದು ಮಾತ್ರವಲ್ಲ, ತಿರುವು ಮುರುವು ಮಾಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಕೆಲ ಹೊತ್ತು ಕಲ್ಪನಾ ಲೋಕದಲ್ಲಿ ವಿಹರಿಸಿ ಬರೋಣವೇ?

  ಆರೋಗ್ಯ, ಹುಮ್ಮಸ್ಸನ್ನು ಉಳಿಸಿಕೊಂಡು ಶತಾಯುಷಿಯಾಗಿ ಬದುಕುವ ಸಾದ್ಯತೆ ಇದೆಯೇ ? ನಿಮ್ಮ ಮರಿಮೊಮ್ಮಕ್ಕಳು ಬೆಳೆದು ದೊಡ್ಡವರಾಗುವುದನ್ನು ನೋಡುವ, ಅವರೊಡನೆ ಕಾಲ ಕಳೆಯುವ ಸೌಭಾಗ್ಯ ಒದಗಬಹುದೇ ?.

       ನಿಮಗೆ ಇಷ್ಟವಾದ ಆಟಗಳನ್ನು ಆಡಿಕೊಂಡು, ವಿವಿಧ ಚಟುವಟಿಕಗಳಲ್ಲಿ ಪಾಲ್ಗೊಳ್ಳುತ್ತಾ, ಸಮಾನ ವಯಸ್ಕ ಸ್ನೇಹಿತರ ಜೊತೆ ಒಡನಾಡುವ ಸಂದರ್ಭ ಸಿಕ್ಕಬಹುದೇ?

ಇವೆಲ್ಲಾ ಹಗಲುಗನಸು ಎನಿಸಬಹುದಾದರೂ, ಇಂಥ ಹಲವಾರು ಸಾಧ್ಯತೆಗಳನ್ನು ನಿಜ ಮಾಡುವ ನಿಟ್ಟಿನಲ್ಲಿ ಇತ್ತೀಚಿನ ಕೆಲ ಸಂಶೋಧನೆಗಳು ಸಾಗಿವೆ. ಈ ಒಂದು ಸಾಧ್ಯತೆಯ ಬಗ್ಗೆ ಹೆಚ್ಚಿನ ವಿವರಕ್ಕೆ ಹೋಗುವ ಮುನ್ನ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯ.

ವಯಸ್ಸಾಗುವ ಪ್ರಕ್ರಿಯೆಯನ್ನು ಬದಲಿಸುವುದು ಹೇಗೆ ?

ನಮ್ಮಲ್ಲಿ ವಯಸ್ಸಾಗುವ ಪ್ರಕ್ರಿಯೆಗೂ ನಮ್ಮ ಜೀವಕೋಶಗಳಲ್ಲಿರುವ ವರ್ಣತಂತುಗಳಿಗೂ ನೇರವಾದ ಸಂಬAದ ಇದೆ. ನಾವು ಬಳಸುವ ಶೂ ಲೇಸ್‌ನ ತುದಿಯಲ್ಲಿರುವ ಟೋಪಿಯ ಹಾಗೆ, ಪ್ರತಿ ವರ್ಣತಂತುವಿನ ಡಿ.ಎನ್.ಎ. ಎಳೆಯ ತುದಿಯಲ್ಲಿಯೂ ಒಂದು ಟೋಪಿಯಂಥ ರಚನೆ ಇರುತ್ತದೆ. ಇದಕ್ಕೆ, ಟೀಲೋಮಿಯರ್(telomere) ಎಂದು ಕರೆಯಲಾಗುತ್ತದೆ. ಇದು ಡಿ.ಎನ್.ಎ. ಎಳೆಯು ಚಿಂದಿಯಾಗುವುದನ್ನು ತಡೆಯುತ್ತದೆ. ಆದರೆ, ಈ ಟೀಲೋಮಿಯರ್‌ನ ಬಹುಮುಖ್ಯ ಪಾತ್ರವೆಂದರೆ, ಅವು ವ್ಯಕ್ತಿಯ ನೈಜ ಜೈವಿಕ ಆಯಸ್ಸಿನ ಮಾಪಕಗಳಾಗಿವೆ. ಕಾಲಾನುಕ್ರಮದಲ್ಲಿ ಈ ಟೀಲೊಮಿಯರ್‌ಗಳ ಉದ್ದ ಕಡಿಮೆಯಾಗುತ್ತಾ ಬರುತ್ತದೆ. ಹಾಗಾದಾಗ, ಅವು ಡಿ.ಎನ್.ಎ. ಎಳೆಗಳಿಗೆ ರಕ್ಷಣೆ ಒದಗಿಸುವುದರಲ್ಲಿ ವಿಫಲವಾಗುತ್ತವೆ. ಇದರ ಪರಿಣಾಮವೇ ಜೀವಕೋಶಗಳಲ್ಲಿ ವಯಸ್ಸಾಗುವ ಪ್ರಕ್ರಿಯೆಗಳ ಪ್ರಾರಂಭ.

ಚಿತ್ರ ೧ : ಟೀಲೋಮಿಯರ್‌ನ ರಚನೆ

ಪ್ರತಿಯೊಂದು ಟೀಲೋಮಿಯರ್‌ನಲ್ಲಿ ಹಲವು ನೂರು ನ್ಯೂಕ್ಲಿಯೊಟೈಡುಗಳಿರುತ್ತವೆ(̧A, T, G, C ).ಇವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಟೀಲೋಮಿಯರ್‌ನ ಉದ್ದ ಕಡಿಮೆಯಾಗುತ್ತಾ ಹೋಗುತ್ತದೆ. ಟೀಲೋಮಿಯರ್‌ಗಳು ಗಿಡ್ಡವಾಗುವ ಪ್ರಕ್ರಿಯೆಯಿಂದಾಗಿ ದೇಹದಲ್ಲಿ ಖಾಯಿಲೆಗಳ ಆತಂಕ ಹೆಚ್ಚುತ್ತದೆ. ಒಂದು ಸಂಶೋಧನೆಯ ಪ್ರಕಾರ, ೬೦ರಿಂದ ೭೦ರ ವಯಸ್ಸಿನ ವ್ಯಕ್ತಿಗಳಲ್ಲಿ ಗಿಡ್ಡವಾದ ಟೀಲೋಮಿಯರ್ ಗಳಿಂದಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳುಂಟಾಗಿ, ಅದರಿಂದ ಸಾವಿಗೀಡಾಗುವ ಸಾಧ್ಯತೆ, ೩೦೦% ರಷ್ಟು ಹೆಚ್ಚಿರುತ್ತದೆ. ಹಾಗೆಯೇ, ಸೋಂಕು ರೋಗಗಳಿಗೆ ಈಡಾಗಿ ಸಾವು ಸಂಭವಿಸುವ ಸಾಧ್ಯತೆ ೮೦೦% ರಷ್ಟು ಹೆಚ್ಚಿರುತ್ತದೆ.

ಚಿತ್ರ ೨ : ಟೀಲೋಮಿಯರ್ ಗಿಡ್ಡವಾಗುವುದರಿಂದ ಹೃದಯ-ಸಂಬಂಧಿ ಖಾಯಿಲೆಗಳು ಹೆಚ್ಚಬಹುದು.                             ಈ ಟೀಲೋಮಿಯರ್‌ಗಳಿಗೂ ಕೋಶವಿಭಜನೆ ಪ್ರಕ್ರಿಯೆಗೂ ನೇರ ಸಂಬಂಧ ಇರುವುದರಿಂದ, ಇವು ನಾಶವಾಗುತ್ತಿದ್ದಂತೆ, ಸಂಬಂಧಿಸಿದ ಜೀವಕೋಶಗಳ ವಿಭಜನೆ ನಿಂತುಹೋಗುತ್ತದೆ. ಹೊಸ ಜೀವಕೋಶಗಳ ಉತ್ಪತ್ತಿಯಾಗುವುದಿಲ್ಲ. ದೇಹದಲ್ಲಿ ನಾಶಗೊಂಡ ಜೀವಕೋಶಗಳಿಗೆ ಬದಲಿ ಜೀವಕೋಶಗಳು ಒದಗದೇ ಹೋದಾಗ ಅದು ಮುಪ್ಪಿಗೆ, ಸಾವಿಗೆ ಮುಖ್ಯ ಕಾರಣವಾಗುತ್ತದೆ.

 ಚಿತ್ರ ೩ : ಟೀಲೋಮಿಯರ್‌ಗೂ ಕೋಶವಿಭಜನೆಗೂ ಇರುವ ಸಂಬಂಧದ ನಿರೂಪಣೆ

ಟೀಲೋಮಿಯರ್ ಗಳಿಗೆ ಸಂಬಂಧಿಸಿದಂತೆ ಮಾಡಲಾಗಿರುವ ಮಹತ್ತರ  ಸಂಶೋಧನೆಗಳಲ್ಲಿ ಪ್ರಮುಖವಾದುದು ಟೀಲೋಮರೇಸ್ (Telomerase) ಎಂಬ ಒಂದು ಕಿಣ್ವ.  ಈ ಕಿಣ್ವವು ಟೀಲೋಮಿಯರ್‌ಗೆ ಡಿ.ಎನ್.ಎ. ನ್ಯೂಕ್ಲಿಯೋಟೈಡ್ ಗಳನ್ನು ಒದಗಿಸುವ ಮೂಲಕ ಅದರ ಸ್ಥಿರತೆಗೆ ಕಾರಣವಾಗುತ್ತದೆ. ಈ ಕಿಣ್ವವು ತನ್ನದೇ ಆದ ಆರ್.ಎನ್.ಎ. ಅಣುವನ್ನು ಹೊಂದಿದ್ದು, ಅದರ ಮೂಲಕ ಪ್ರತಿರೂಪವಾದ ಡಿ.ಎನ್.ಎ. ಎಳೆಯನ್ನು ಸಂಶ್ಲೇಷಿ಼ಸಿಕೊಳ್ಳುತ್ತದೆ. ಹಾಗಾಗಿ, ಇದು ರಿವರ್ಸ್ ಟ್ರಾನ್ಸ್ಕ್ರಿಪ್ಟೇಸ್ ಗುಂಪಿಗೆ ಸೇರುವ ಕಿಣ್ವವಾಗಿದೆ. ವಯಸ್ಸಾಗುವ ಪ್ರಕ್ರಿಯೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಈ ಕಿಣ್ವದ ಪಾತ್ರ ಮಹತ್ತರವಾದುದು.

 ಚಿತ್ರ ೪ : ಟೀಲೋಮೆರೇಸ್ ಕಿಣ್ವ

ಟೀಲೋಮರೇಸ್ ಕಿಣ್ವವನ್ನು ನಿಯಂತ್ರಿಸುವ ವಂಶವಾಹಿಯೊಂದನ್ನು ಪತ್ತೆ ಮಾಡಲಾಗಿದೆ. ಈ ವಂಶವಾಹಿಯು ಒಂದು ಸ್ವಿಚ್‌ನ ರೀತಿ ಕಾರ್ಯ ನಿರ್ವಹಿಸುತ್ತದೆ. ಇದು ಟೀಲೋಮಿಯರ್ ಗಳು ಗಿಡ್ಡವಾಗುವುದನ್ನು ನಿಲ್ಲಿಸಬಹುದು ಇಲ್ಲವೇ ಅವು ಮತ್ತೆ ಬೆಳೆಯಲು ನೆರವಾಗಬಹುದು. ನೀವು ಹುಟ್ಟಿದಾಗ, ಈ ಸ್ವಿಚ್ ಆರಿಸಿದ ಸ್ಥಿತಿಯಲ್ಲಿರುತ್ತದೆ.

ನಾನು ಮೇಲೆ ಹೇಳಿದ ವಿಶಿಷ್ಟ ಸಂಶೋಧನೆಯಲ್ಲಿ, ಈ ವಂಶವಾಹಿ ಸ್ವಿಚ್‌ ಅನ್ನು ನಿಯಂತ್ರಿಸುವ ವಿಧಾನವನ್ನು ಕಂಡುಕೊಳ್ಳಲಾಗಿದೆ. ಫ್ಯಾಬೇಸಿ ಕುಟುಂಬಕ್ಕೆ ಸೇರಿದ ಆಸ್ಟ್ರಗ್ಯಾಲಸ್  ಎಂಬ ಔಷದೀಯ ಸಸ್ಯದ ಪ್ರಭೇದವೊಂದರಿಂದ ಪಡೆಯಲಾದ ರಾಸಾಯನಿಕವೊಂದು ಟೀಲೋಮರೇಸ್ ವಂಶವಾಹಿಯನ್ನು ಪ್ರೇರೇಪಿಸಬಹುದು ಎಂಬುದೇ ಈ ಸಂಶೋಧನೆಯ ಸಾರಾಂಶ. ವಂಶವಾಹಿಗಳು ಚರ್ಮದ ಬಣ್ಣ, ಕಣ್ಣಿನ ಬಣ್ಣ, ಎತ್ತರ, ಮುಂತಾದ ಲಕ್ಷಣಗಳ ಅಭಿವ್ಯಕ್ತಿಗೆ ಮಾತ್ರ ಕಾರಣವಾಗುತ್ತವೆ ಎಂಬುದು ಒಂದು ಸಾಮಾನ್ಯ ನಂಬಿಕೆ. ಆದರೆ, ಅವುಗಳ ಕಾರ್ಯವ್ಯಾಪ್ತಿ ಇದನ್ನು ಮೀರಿದೆ. ನಮ್ಮ ವಂಶವಾಹಿಗಳು ನಮ್ಮ ಆರೋಗ್ಯ ಮಾತ್ರವಲ್ಲ, ಅನಾರೋಗ್ಯದ ಮೇಲೂ ನಿಯಂತ್ರಣ ಹೊಂದಿವೆ. ವಂಶವಾಹಿಗಳ ಅಭಿವ್ಯಕ್ತಿಯು ನಮ್ಮ ಇಡೀ ಜೀವನವನ್ನು ನಿರ್ಧರಿಸುತ್ತವೆ. ಒಂದು ವೇಳೆ,  ಈ ಪ್ರಕ್ರಿಯೆಯನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾದರೆ, ಅನಾರೋಗ್ಯಕ್ಕೆ ಕಾರಣವಾಗುವ ವಂಶವಾಹಿಗಳನ್ನು ‘ಆಫ್’ ಮಾಡಿ, ಆರೋಗ್ಯವಂತ ಜೀವನಕ್ಕೆ ಕಾರಣವಾಗುವ ವಂಶವಾಹಿಗಳನ್ನು ಮಾತ್ರ ‘ಆನ್’ ಮಾಡಿಕೊಳ್ಳುವ ಸಾಮರ್ಥ್ಯ ನಿಮಗೆ ಸಿದ್ಧಿಸಬಹುದು ! ಅಂಥ ಒಂದು ಸಾಧ್ಯತೆಯನ್ನು ಈ ಸಂಶೋಧನೆ ತೆರೆದಿಟ್ಟಿದೆ. ನಿಮ್ಮ ವರ್ಣತಂತುಗಳಲ್ಲಿರುವ ಟೀಲೋಮಿಯರ್ ಗಳು ಗಿಡ್ಡವಾಗದಂತೆ ತಡೆದು, ನೀವು ದೀರ್ಘಕಾಲ, ಆರೋಗ್ಯವಂತರಾಗಿ ಬದುಕುವ ಸಾಧ್ಯತೆಯನ್ನು ತೋರಿಸಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು, ಬಹುಷ:, ಮುಂದೆ ಮಾನವರು ‘ಸಣ್ಣವರಾಗಿ ಬೆಳೆಯುವ” ದಿನಗಳನ್ನು ನೋಡಬಹುದೇನೋ?

                       

                            -----xxxxxxxxx-----

 

 

 

ಪರಮಾಣು ರಚನಾ ಸಿದ್ಧಾಂತದ ಪಿತಾಮಹ – ನಿಕೊಲಸ್‌ ಬೇಕರ್‌ !!!!

ಪರಮಾಣು ರಚನಾ ಸಿದ್ಧಾಂತದ ಪಿತಾಮಹನಿಕೊಲಸ್‌ ಬೇಕರ್‌ !!!!

ಲೇ : ರಾಮಚಂದ್ರ ಭಟ್‌ ಬಿ.ಜಿ


ಕಣ್ಣಿಗೆ ಕಾಣದ ಪರಮಾಣುವಿನ ಒಳಗೆ ಬೃಹತ್ ಬ್ರಹ್ಮಾಂಡವೇ ಅಡಗಿದೆ. ವಿಜ್ಞಾನಿಗಳು ಸತತ ಪ್ರಯೋಗಗಳ ಮೂಲಕ ಪರಮಾಣುವಿನ ಒಳಹೊಕ್ಕು ಅಲ್ಲಿನ ಹೂರಣವನ್ನು ಹೊರಗೆಡಹಿದ್ದಾರೆ. ಈ ಹಾದಿಯಲ್ಲಿನ ವಿಜ್ಞಾನಿಗಳ ಏಳು ಬೀಳುಗಳು ರಣರೋಚಕ. ನಾಜಿ ಸೈನಿಕರ ಕೈಯಿಂದ ತಪ್ಪಿಸಿಕೊಂಡ ವಿಜ್ಞಾನಿಗಳ ರೋಚಕ ಕಥೆಯನ್ನು ನಿಮ್ಮ ಮುಂದಿಟ್ಟಿದ್ದಾರೆ ರಾಮಚಂದ್ರ ಭಟ್ ಅವರು.


ಎರಡನೇ ಮಹಾಯುದ್ಧದ ಸಂದರ್ಭ. ಹಿಟ್ಲರ್‌ ಜಗತ್ತನ್ನೇ ನಡುಗಿಸುತ್ತಿದ್ದ ಕಾಲ. ಜರ್ಮನ್ನರು ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ಅಥವಾ ತಮ್ಮೊಂದಿಗೆ ಇಟ್ಟುಕೊಳ್ಳುವುದನ್ನು ಜರ್ಮನಿ ಸರ್ಕಾರವು ನಿಷೇಧಿಸಿತ್ತು. ಈ ಕಾನೂನನ್ನು ಪಾಲಿಸದವರ ಮೇಲೆ ಕ್ರಮ ಕೈಗೊಳ್ಳಲಾರಂಭಿಸಿತು. ಜರ್ಮನಿಯ ನಿರ್ದಯಿ ನಾಜಿ ಸೈನ್ಯ ಮ್ಯಾಕ್ಸ್ ವೋನ್ ಲೋವ್ ಮತ್ತು ಜೇಮ್ಸ್ ಫ್ರ್ಯಾಂಕ್ ಎಂಬ ಇಬ್ಬರು ನೊಬೆಲ್ ಪ್ರಶಸ್ತಿ ವಿಜೇತ ಯಹೂದಿ ವಿಜ್ಞಾನಿಗಳ ಹಿಂದೆ ಬಿತ್ತು. ಈ ಇಬ್ಬರು ವಿಜ್ಞಾನಿಗಳು ತಮ್ಮ ನೋಬೆಲ್ ಪ್ರಶಸ್ತಿಯ ಚಿನ್ನದ ಪದಕಗಳನ್ನು ದೇಶದ ಹೊರಗೆ ವಾಸವಿದ್ದ ಮತ್ತೊಬ್ಬ ನೊಬೆಲ್ ಪ್ರಶಸ್ತಿ ವಿಜೇತ ಸ್ನೇಹಿತನ ಬಳಿ ಜೋಪಾನವಾಗಿ ಸಂರಕ್ಷಿಸಿ ಇಡಲು ಕೋಪನ್ ಹೇಗನ್‌ಖ್ಯಾತ ಪ್ರಯೋಗಾಲಯಕ್ಕೆ ನೀಡಿದ ವಿಷಯ ಗುಪ್ತಚರರಿಂದ ತಿಳಿದು ಬಂತು. ಯುದ್ಧ ಮುಂದುವರೆದಂತೆ, ಜರ್ಮನ್ ಸೈನ್ಯ ಒಂದೊಂದೇ ಪ್ರದೇಶವನ್ನು ಗೆಲ್ಲುತ್ತಾ ಕೋಪನ್ ಹೇಗನ್ ತಲುಪಿತು. ಅಲ್ಲಿನ ಬೀದಿಗಳಲ್ಲಿ ಜರ್ಮನ್ ಸೈನ್ಯ ಓಡಾಡುತ್ತಿರುವುದು ಈ ಖ್ಯಾತ ವಿಜ್ಞಾನಿಯ ಗಮನಕ್ಕೆ ಬಂತು. ನೋಬಲ್‌ ಪ್ರಶಸ್ತಿಯ ಚಿನ್ನದ ಪದಕಗಳಲ್ಲಿ ಆ ವಿಜ್ಞಾನಿಗಳ ಹೆಸರನ್ನು ಕೆತ್ತಲಾಗಿತ್ತು. ಸಾಕ್ಷಿ ಸಮೇತ ನಾಜಿಸೈನ್ಯಕ್ಕೆ ಸಿಕ್ಕಿದರೆ ಆ ವಿಜ್ಞಾನಿಗಳಷ್ಟೇ ಅಲ್ಲದೆ ಅಲ್ಲಿದ್ದ ಎಲ್ಲರ ತಲೆದಂಡವೂ ಆಗುತ್ತಿತ್ತು. ಅಪಾಯದಲ್ಲಿದ್ದ ಅಷ್ಟೂ ಜನರ ಜೀವ ಉಳಿಸಲು ಪದಕಗಳನ್ನು ಎಲ್ಲಾದರೂ ಅಡಗಿಸಿ ಇಡಲೇ ಬೇಕಿತ್ತು. ಎಲ್ಲಿ ಇಡುವುದು? ಆಲೋಚಿಸಲು ಸಮಯವಿಲ್ಲ. ಜರ್ಮನಿಯ ಸೈನಿಕರು ಪ್ರಯೋಗ ಶಾಲೆಯೊಳಗೆ ನುಗ್ಗಿಯೇ ಬಿಟ್ಟರು. ಇಂಚಿಂಚೂ ಹುಡುಕಲಾರಂಭಿಸಿದರು. ಅಲ್ಲಿದ್ದ ಎಲ್ಲರಿಗೂ ತಮ್ಮ ಅಂತ್ಯ ಸಮೀಪವಾದಂತೆ ಅನಿಸಿತು. ಅವರ ಎದೆಯಲ್ಲಿ ನಡುಕ. ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚುತ್ತಲೇ ಹೋಗುತ್ತಿತ್ತು. ಕಣ್ಣುಗಳಲ್ಲಿ ಸಾವಿನ ಭೀತಿ!!!. ಅದೇನು ಅದೃಷ್ಟವೋ ? ಹುಡುಕಿ ಹುಡುಕಿ ಸುಸ್ತಾದ ಸೈನಿಕರು ಇಲ್ಲಿ ಚಿನ್ನದ ಪದಕಗಳು ಇಲ್ಲವೆಂದು ಹೊರಟರು!!! ಬೀಸುವ ದೊಣ್ಣೆಯಿಂದ  ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವುದು ಇದಕ್ಕೆ ಅಲ್ಲವೇ? ಹಾಗಾದರೆ ಅದುವರೆಗೂ ಪ್ರಯೋಗಾಲಯದಲ್ಲಿದ್ದ ಚಿನ್ನದ ಪದಕಗಳು ಹೇಗೆ ನಾಪತ್ತೆಯಾದವು?

ಸಾವಿನ ದವಡೆಯಲ್ಲಿದ್ದಾಗಲೂ ಧೃತಿಗೆಡಬಾರದೆನ್ನುವುದು ಇದಕ್ಕೇ ಅಲ್ವೇ? ಪ್ರಸಂಗಾವಧಾನತೆ ಮತ್ತು ವಿಚಕ್ಷಣತೆಗೆ ಈ ಐತಿಹಾಸಿಕ ಪ್ರಸಂಗವೊಂದು ಅದ್ವಿತೀಯ ಉದಾಹರಣೆಯಾಗಿದೆ. ಬೋರ್ ಇನ್ಸ್ಟಿಟ್ಯೂಟ್‌ನಲ್ಲಿ ಯುವ ರಸಾಯನಶಾಸ್ತ್ರಜ್ಞ ಜಾರ್ಜ್ ಡಿ  ಹೆವೆಸಿ, ಈ ನೊಬೆಲ್ ಪ್ರಶಸ್ತಿ ವಿಜೇತರ ಜೊತೆ ಸಂಶೋಧನೆ ನಡೆಸುತ್ತಿದ್ದ. ಈತನ ಸಮಯಪ್ರಜ್ಞೆ ಅಮೂಲ್ಯ ಜೀವಗಳನ್ನು ಉಳಿಸಿತು. ನಾಜಿ ಸೈನಿಕರು ಇನ್ನೇನು ಕೋಪನ್ ಹೇಗನ್ನ ಬೋರ್ ಇನ್ಸ್ಟಿಟ್ಯೂಟ್ ಒಳಗೆ ಕಾಲಿಟ್ಟೇ ಬಿಟ್ಟರು ಎನ್ನುವಷ್ಟರೊಳಗೆ, ಹೆವೆಸಿ ತನಗೆ ಹೊಳೆದ ಆಲೋಚನೆ ಬಗ್ಗೆ ಹೇಳಿದ. ತಕ್ಷಣವೆ ಆ ಮೆಡಲ್‌ಗಳನ್ನು ಗಾಜಿನ ಬಾಟಲಿ ಒಳಗೆ ಇಟ್ಟು ಅದಕ್ಕೊಂದು ದ್ರಾವಣವನ್ನು ಸೇರಿಸಿ ಮುಚ್ಚಳ ಹಾಕಿದ. ಕೆಲವೇ ಕ್ಷಣಗಳಲ್ಲಿ ಸೈನಿಕರು ಪ್ರಯೋಗಶಾಲೆಯ ಒಳಗೆ ನುಗ್ಗಿ ಆ ಪದಕಗಳನ್ನು ಹುಡುಕಲಾರಂಭಿಸಿದರು. ಯಮದೂತರ ಕಣ್ಣಿಗೆ, ಎದುರಿದ್ದ ಗಾಜಿನ ಪಾತ್ರೆಯಲ್ಲಿ ಕರಗುತ್ತಿದ್ದ ಮೆಡಲ್‌ಗಳು ಗೋಚರಿಸಲೇ ಇಲ್ಲ.!!! ಪದಕಗಳು ಅಕ್ವರಿಜಿಯ ಎಂಬ ದ್ರಾವಕದಲ್ಲಿ ಕರಗಿ ಚಿನ್ನದ ನೀರಾಗಿದ್ದವು!!! ಯುದ್ಧದ ನಂತರ ಈ ದ್ರಾವಣದಿಂದ ಚಿನ್ನವನ್ನು ಪಡೆದು ಸ್ಟಾಕ್‌ಹೋಂನ ನೋಬಲ್‌ ಫೌಂಡೇಶನ್‌ಗೆ ನೀಡಲಾಯಿತು. ಮತ್ತೆ ಮೆಡಲ್‌ಗಳನ್ನು ಎರಕ ಹೊಯ್ದು ವಿಜ್ಞಾನಿಗಳಿಗೆ ಮತ್ತೊಮ್ಮೆ ನೀಡಲಾಯಿತು!! ಅಂತೂ ಅಕ್ವಾರಿಜಿಯಾ ಎಂಬ ರಾಜದ್ರವ ಹಲವಾರು ಅಮೂಲ್ಯ ಜೀವಗಳ ರಕ್ಷಣೆ ಮಾಡಿತ್ತು. ಇಂತಹ ಅಕ್ವಾರಿಜಿಯವನ್ನು ಮೊದಲ ಬಾರಿಗೆ ತಯಾರಿಸಿದ್ದು 8ನೇ ಶತಮಾನದಲ್ಲಿ, ಜಬೀರ್ ಇಬ್ನ್ ಅಲ್-ಹಯಾನ್ ಎಂಬ ಅರಬ್ಬಿ ರಸವಿದ್ಯಾ ತಂತ್ರಜ್ಞ. ಈತ 1:3 ಅನುಪಾತದಲ್ಲಿ ಸಾರಯುಕ್ತ ನೈಟ್ರಿಕ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲಗಳನ್ನು ಮಿಶ್ರ ಮಾಡಿ ಅಕ್ವರಿಜಿಯ ಎಂಬ ಅದ್ಭುತ ಮಾಯಾದ್ರವವನ್ನು ಸಿದ್ಧಪಡಿಸಿದ.


ಹೀಗೆ ತಿಳಿದು ತಿಳಿದೂ ಅಪಾಯವನ್ನು ತನ್ನ ಮೈ ಮೇಲೆ ಎಳೆದುಕೊಂಡ ಆ ವಿಜ್ಞಾನಿ ಯಾರೆಂದು ಊಹಿಸುತ್ತಿದ್ದೀರಾ? ನಿಕೊಲಸ್‌ ಬೇಕರ್‌ ಅಂದುಕೊಂಡ್ರಾ? ಇದ್ಯಾವ ಬೇಕರ್?‌ ಪರಮಾಣುವಿನ ಬಗ್ಗೆ ಸಂಶೋಧನೆ ನಡೆಸಿದ ಇಂತಹ ಹೆಸರನ್ನು ಕೇಳಿಯೇ ಇಲ್ವಲ್ಲ? ಇದ್ಯಾವ ಹೆಸರು? ಅವರೇ ಅಮೇರಿಕದ ಮ್ಯಾನ್‌ಹಟನ್‌ ಎಂಬ ನ್ಯೂಕ್ಲಿಯರ್‌ ಶಕ್ತಿಗೆ ಸಂಬಂಧಿತ ಯೋಜನೆಯಲ್ಲಿದ್ದ ವಿಶ್ವವಿಖ್ಯಾತ ವಿಜ್ಞಾನಿ ನೀಲ್ಸ್ ಬೋರ್!!! ಮ್ಯಾನ್‌ಹಟನ್‌ ರಹಸ್ಯ ಪ್ರಾಜೆಕ್ಟ್‌ನಲ್ಲಿ ಪಾಲ್ಗೊಂಡವರು ತಮ್ಮ ಗುರುತನ್ನು ಮರೆ ಮಾಚಬೇಕಿತ್ತು. ಆಗ ನೀಲ್ಸ್‌ ಬೋರ್‌ರವರಿಗಿದ್ದ ಹೆಸರೇ ನಿಕೊಲಾಸ್‌ ಬೇಕರ್!!!‌ 


ನೀಲ್ಸ್‌ ಬೋರ್‌ರವರ ಬದುಕು ಸರ್ವಕಾಲಕ್ಕೂ ಕನಸುಗಂಗಳ ಸಾಧಕರಿಗೆ ಬತ್ತದ ಸ್ಫೂರ್ತಿಯ ಸೆಲೆ. ಪರಮಾಣುವಿನ ಅತ್ಯಂತ ಯಶಸ್ವಿ ಮಾದರಿಯನ್ನು ಪ್ರಸ್ತುತಪಡಿಸಿದ ಜ್ಞಾನದ ಚಿಲುಮೆ, ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ ಅಲಿಯಾಸ್‌ ನಿಕೊಲಸ್‌ ಬೇಕರ್‌ ಅವರು ಅಕ್ಟೋಬರ್ 7, 1885 ರಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದರು. ಅವರ ತಂದೆ ಕ್ರಿಶ್ಚಿಯನ್ ಬೋರ್, ಕೋಪನ್ ಹೇಗನ್ ವಿಶ್ವವಿದ್ಯಾಲಯದಲ್ಲಿ ಶರೀರಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರ ತಾಯಿ ಎಲ್ಲೆನ್ ಅಡ್ಡರ್ ಬೋರ್ ಸಿರಿವಂತ ಯಹೂದಿ ಮನೆತನಕ್ಕೆ ಸೇರಿದವರು. ತಾಯಿಯ ಕುಟುಂಬದ ಕೋಪನ್ ಹೇನ್ನ ಭವ್ಯ ಬಂಗಲೆ 'ಕಿಂಗ್ ಜಾರ್ಜ್ ಅರಮನೆ'‌ ಯಲ್ಲಿ ನೀಲ್ಸ್ ಜನಿಸಿದರು.

 ನೀಲ್ಸ್ ಬೋರ್‌, ಕೋಪನ್ ಹೇನ್‌ನಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಪಡೆದರು. ಸಿರಿವಂತ ಮನೆತನಕ್ಕೆ ಸೇರಿದ್ದರೂ ಬಾಲಕ ಬೋರ್‌ ಚುರುಕಿನ ವಿದ್ಯಾರ್ಥಿಯಾಗಿದ್ದ. ಕುತೂಹಲ ಪ್ರವೃತ್ತಿಯೊಂದಿಗೆ ಹುಟ್ಟಿದ ಈತ ಸಿಕ್ಕಿದ್ದನ್ನೆಲ್ಲ ಬಿಚ್ಚಿ ರಿಪೇರಿ ಮಾಡಿ ಮನೆಯವರಿಗೆ ತಲೆನೋವನ್ನೂ ತರುತ್ತಿದ್ದ!!! ತನ್ನ ಮಗನಿಗೆ ಪ್ರಯೋಗಗಳಲ್ಲಿ ಬೆಳೆಯುತ್ತಿರುವ ಗೀಳು ಪ್ರೊಫೆಸರ್‌ರಿಗೆ ತಲೆನೋವು ತರುತ್ತಿತ್ತು. ಸಂಶೋಧನೆಯನ್ನು ಮುಂದುವರೆಸಲು ನೀಲ್ಸ್ ತನ್ನ ಶ್ರೀಮಂತ ತಾಯಿಯ ತವರು ಮನೆಗೆ ಕಳುಹಿಸಿದರು. ಓದಿನಲ್ಲಷ್ಟೇ ಅಲ್ಲದೆ ಬೋರ್‌ ಮತ್ತು ಆತನ ತಮ್ಮ ಹೆರಾಲ್ಡ್ ಉತ್ತಮ ಪುಟ್ಬಾಲ್ ಆಟಗಾರರಾಗಿದ್ದರು. ಅವರು ಡ್ಯಾನಿಶ್ ಫುಟ್ಬಾಲ್ ತಂಡದ ಹೆಮ್ಮೆಯ ಸದಸ್ಯರಾಗಿದ್ದರು. ಸ್ಕ್ಯಾಂಡಿನೇವಿಯನ್ ರಾಜ್ಯದಲ್ಲೂ ಪ್ರಮುಖ ಸಾಕರ್ ಆಟಗಾರರೆಂದು ಪರಿಗಣಿಸಲ್ಪಟ್ಟಿದ್ದರು. 

ಅಕ್ಟೋಬರ್ 1906 ರಲ್ಲಿ ವಿದ್ಯಾರ್ಥಿಯಾಗಿದ್ದ ಬೋರ್‌ ಅವರು ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಚಿನ್ನದ ಪದಕ ದೊರೆಯಿತು. ಬೋರ್‌ರವರೊಂದಿಗೆ ಸ್ಪರ್ಧೆಯಲ್ಲಿದ್ದವರು ಅವರಿಗಿಂತ 11 ವರ್ಷ ಹಿರಿಯರಾದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕರಾಪೆಡರ್ ಪೆಡರ್ಸನ್!! ಅವರೊಂದಿಗೆ ಬೋರ್‌ ಬಹುಮಾನವನ್ನು ಹಂಚಿಕೊಂಡರು!!!. ಇದು ಭವಿಷ್ಯದ ಮಹಾ ಪ್ರತಿಭೆಯೊಂದರ ಆಗಮನವನ್ನು ಉದ್ಘೋಷಿಸಿತು.  

ನೀಲ್ಸ್ ಬೋರ್ ೧೪ ವರ್ಷದವನಿದ್ದಾಗ ಪ್ರೊಫೆಸರ್ ಜೆ.ಜೆ ಯವರು ಎಲೆಕ್ಟ್ರಾನ್ ಅನ್ನು ಕಂಡುಹಿಡಿದರು. ಆಗಲೇ ಅವರಿಗೆ ತಾನು ಮುಂದೊಂದು ದಿನ  ಜೆ.ಜೆ ಥಾಮ್ಸನ್ ರವರ ಜೊತೆಗೆ ಕೆಲಸ ಮಾಡಬೇಕೆಂಬ ಆಸೆ ಹುಟ್ಟಿತ್ತು. 1911 ರಲ್ಲಿ, ಬೋರ್ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಅನ್ನು ಪಡೆದುಕೊಂಡರು.

 1911ರ ಸೆಪ್ಟೆಂಬರ್ ನಲ್ಲಿ 25 ವರ್ಷದ ನೀಲ್ಸ್ ಬೋರ್ ಕೇಂಬ್ರಿಡ್ಜ್ ಗೆ ಕಾಲಿಟ್ಟರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಫಲಕವನ್ನು ನೋಡುತ್ತಿದ್ದಂತೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾರನ್ನು ಆರಾಧಿಸುತ್ತಿದ್ದನೋ ಅವರೊಂದಿಗೇ ಸಂಶೋಧನೆ ಮಾಡುವಂತಹ ಅವಕಾಶ ದೊರೆತಿದ್ದು ಆತನನ್ನು ಹರ್ಷಾತಿರೇಕಕ್ಕೆ ಒಯ್ದಿತ್ತು. ಆದರೆ ದಮ್ಯ ಆಸೆಯನ್ನು ಇಟ್ಟುಕೊಂಡ ನೀಲ್ಸ್ ಬೋರ್‌ಗೆ ದೊರೆತದ್ದು ಭಾರೀ ನಿರಾಸೆ!!!

ಜೆ.ಜೆ.ಯವರೊಂದಿಗೆ ಮೊದಲ ಭೇಟಿಯು ನಿರಾಶದಾಯಕವಾಗಿತ್ತು!!!. ಮೊದಲ ಭೇಟಿಗೆ ಹೋದಾಗ ಡಾ ಜೆ.ಜೆಯರವರ ಕೆಲವು ಪುಸ್ತಕಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. ಒಂದು ಪುಸ್ತಕವನ್ನು ತೆಗೆದುಕೊಂಡ ಜೆ.ಜೆ.ಯವರು ನೋಬೆಲ್ ಪ್ರಶಸ್ತಿ ವಿಜೇತರು. ಎನ್ನುವ ಪದಪುಂಜಗಳನ್ನು ಗಮನಿಸಿ, ಇದು ತಪ್ಪಾದ ಭಾಷಾ ಪ್ರಯೋಗ ಎಂದರು!!! ಕೆಲವು ತಿಂಗಳುಗಳ ನಂತರ ಅದು ಯಶಸ್ವಿ ಭೇಟಿ ಎನ್ನುವುದು ತಿಳಿಯುತ್ತದೆ. ಈ ಕುರಿತು ನೀಲ್ಸ್ ಬೋರ್ ತನ್ನ ತಮ್ಮ  ಗಣಿತಜ್ಞರಾದ ಹೆರಾಲ್ಡ್ ರವರಿಗೆ ಬರೆದ ಪತ್ರದಲ್ಲಿ ಪ್ರೊ ಜೆ.ಜೆ ಭಾರಿ ಘಾಟಿ ಮನುಷ್ಯ. ಈತನೊಂದಿಗೆ ಏಗುವುದು ಮೊದಲ ಭೇಟಿಯ ದಿನ ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಪ್ರೊಫೆಸರ್ ಜೆ.ಜೆ.ಗೆ ನ್ನ ಸಂಶೋಧನಾ ವರದಿ ಓದುವಷ್ಟು ಸಮಯವೂ ಇರಲಿಲ್ಲವೇನೊ?. ಇನ್ನು ಆತ ನನ್ನ ವಿಮರ್ಶೆಯನ್ನು ಒಪ್ಪಬಹುದೇ? ಎಂದು ಬರೆದರು. ಅದಾದ ಮೂರು ತಿಂಗಳವರೆಗೂ ಬೋರ್ ಏಕಾಂತ, ನಿರಾಸೆಗಳು ಅವರ ಸಂಗಾತಿಗಳಾಗಿದ್ದವು. ಅದನ್ನು ತನ್ನ ಭಾವೀ ಪತ್ನಿಗೆ ಬರೆದ ಪತ್ರಗಳಲ್ಲಿ ವ್ಯಕ್ತಪಡಿಸಿದ್ದೂ ಉಂಟು.



ಕೆಂಬ್ರಿಡ್ಜ್ ನಲ್ಲಿದ್ದಾಗ ನೀಲ್ಸ್ ಬೋರ್ ಆಗಾಗ ಮಾನಸಿಕ ಕ್ಷೋಭೆಗೆ ಒಳಗಾಗುತ್ತಿದ್ದುದೂ ಉಂಟು. ಆಗ ಅವರು ತಮ್ಮ ಭಾವೀ ಪತ್ನಿ ಮಾರ್ಗರೆಥೆ ನೋಲ್ಯಾಂಡ್ ಗೆ ಪತ್ರ ಬರೆದು ತಮ್ಮ ಮನೋ ವ್ಯಾಕುಲತೆಯನ್ನು ಹೊರ ಹಾಕುತ್ತಿದ್ದರು. ಒಮ್ಮೆ  ಮಾರ್ಗರೆಥೆ ನೋಲ್ಯಾಂಡ್ ಗೆ “ನಿನಗೆ ನನ್ನ ಯಾವುದೇ ಕೆಲಸದ ಬಗ್ಗೆ ಆಸಕ್ತಿಯೇ ಇಲ್ಲ...” ಎಂದು ಭಾವುಕತೆಯಿಂದ ಪತ್ರ ಬರೆದು ತನ್ನ ಒಳಬೇಗುದಿಯನ್ನು ತೆರೆದಿಟ್ಟರು. ಆ ಪತ್ರಕ್ಕೆ ಉತ್ತರಿಸಿದ ಮಾರ್ಗರೆಥೆ, “ ಓಹ್ ನೀಲ್ಸ್, ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಅಂತ ಪದಗಳಲ್ಲಿ ವರ್ಣಿಸಲಾರೆ. ಅದೇ ರೀತಿ ನಿನ್ನ ಕೆಲಸವನ್ನೂ ಪ್ರೀತಿಸ್ತೀನಿ. ನಿನ್ನನ್ನು ನಿನ್ನ ಕೆಲಸದಿಂದ ಪ್ರತ್ಯೇಕಿಸಿ ನೋಡಲಾರೆ ನಿನ್ನ ಸುಧೀರ್ಘ ಯಶಸ್ವಿ ಬದುಕಿಗೆ ನಾನೆಷ್ಟು ಕಾದಿದ್ದೆನೋ ಅದು ನನಗೆ ಮಾತ್ರ ಗೊತ್ತು. ನಿನಗಾಗಿ ನಾನು ಸಾಧ್ಯವಾದ ಸಹಾಯ ಹಸ್ತ ನೀಡಬಲ್ಲೆ ” ಈ ಪತ್ರ ಆತನಲ್ಲಿ ಅಮಿತೋತ್ಸಾಹ ತುಂಬಿದ್ದಲ್ಲದೆ ಭವಿಷ್ಯದ ಎಲ್ಲ ಯಶಸ್ಸಿಗೂ ಮುನ್ನುಡಿಯಾಯಿತು.

ಈತ ಮಹಾನ್‌ ವಿಜ್ಞಾನಿಯಾಗಿ ರೂಪುಗೊಳ್ಳುವಲ್ಲಿ ಎದುರಿಸಿದ ಎಡರು ತೊಡರುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

 

ಅಂತರ್ಜಾಲ ಹೇಗೆ ಕೆಲಸ ಮಾಡುತ್ತದೆ?

ಅಂತರ್ಜಾಲ ಹೇಗೆ ಕೆಲಸ ಮಾಡುತ್ತದೆ?

 ಲೇಖಕರು: ಸುರೇಶ ಸಂಕೃತಿ.

 ಇಂದಿನ ದಿನಗಳಲ್ಲಿ ಅಂತರ್ಜಾಲವನ್ನು ಬಳಸದೆ ಇರುವಂತಹ ವ್ಯಕ್ತಿ ಇರಲು ಸಾಧ್ಯವಿಲ್ಲ. ಅಂತರ್ಜಾಲ ನಮ್ಮೆಲ್ಲರ ಬದುಕಿನ ಹಾಸು ಹೊಕ್ಕಾಗಿದೆ. ಇದರೊಂದಿಗೆ ಅಂತರ್ಜಾಲಕ್ಕೆ ಸಂಬಂಧಿಸಿದಂತೆ ವಂಚನೆಗಳೂ ಹೆಚ್ಚಾಗುತ್ತಿವೆ. ಈ ಕುರಿತು ಪ್ರತಿಯೊಬ್ಬರು ಜಾಗೃತರಾಗಿರುವುದ ಅತ್ಯಂತ ಅವಶ್ಯಕ. ಇಂತಹ ಅಂತರ್ಜಾಲ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ, ನಿವೃತ್ತ ಮುಖ್ಯ ಶಿಕ್ಷಕರಾದ ಸುರೇಶ್ ಸಂಕೃತಿಯವರು.

     ಇಂದು ನಾವಿರುವುದು ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಕಂಪ್ಯೂಟರುಗಳು, ಲ್ಯಾಪ್ಟಾಪುಗಳು, ಮೊಬೈಲ್‌ ಸ್ಮಾರ್ಟ್‌ ಫೋನುಗಳು, ಸರ್ವರುಗಳು. ಹೀಗೆ ವಿವಿಧ ರೀತಿಯ ವಿದ್ಯನ್ಮಾನ ಸಾಧನಗಳು ನಾವು ಯೋಚಿಸುವ, ಬದುಕುವ ವಿಧಾನದಲ್ಲಿಯೇ ಅಸಾಧಾರಣವಾದ ಮಾರ್ಪಾಟನ್ನು ತಂದಿವೆ. ಇಂತಹ ಎಲ್ಲಾ ಕಂಪ್ಯೂರ್‌ಗಳ ಬಳಕೆಗೆ ಅಗತ್ಯವಾದ ಅಂತರ್ಜಾಲ ನಮ್ಮ ದಿನ ನಿತ್ಯದ ಅಗತ್ಯ ಸೇವೆಗಳಲ್ಲಿ ಒಂದು  ಆಗಿದೆ ಎಂದರೆ ಅತಿಶಯೋಕ್ತಿಯಲ್ಲ. www.com ಎಂಬುದು ಈಗ ಎಲ್ಲಾ ಕಡೆ ನಾವು ಕೇಳುತ್ತಿರುವ ಬಳಸುತ್ತಿರುವ ಸಾಮಾನ್ಯ ಪಾರಿಭಾಷಿಕ ಪದವಾಗಿದೆ.

   


ಅಂತರ್ಜಾಲ ಎಂಬುದು ವಿಶ್ವವಾದಾದ್ಯಂತ ಹರಡಿ ಹೋಗಿರುವ ಪರಸ್ಪರ ಸಂಪರ್ಕದಲ್ಲಿರುವ ಅಸಂಖ್ಯಾತ ಕಂಪ್ಯೂಟರುಗಳ  ಜಾಲ. ಇದರಲ್ಲಿ ಸರ್ವರುಗಳು, ಡೆಸ್ಕ್‌ ಟಾಪುಗಳು, ಲ್ಯಾಪ್‌ ಟಾಪುಗಳು, ಮೊಬೈಲ್‌ ಫೋನಗಳು ಅಲ್ಲದೆ, ಅಂತರ್ಜಾಲ ಸಂಪರ್ಕ ಸೇವೆ ನೀಡುವ ಸಂಸ್ಥೆಗಳಲ್ಲಿ(ISP) ಬಳಸುವ ಹಬ್‌ಗಳು, ರೋಟರುಗಳು ಇರುತ್ತವೆ. ಈ ಲೇಖನದಲ್ಲಿ ಮೇಲೆ ತಿಳಿಸಿದ ಸಾಧನಗಳನ್ನು ಎಲ್ಲವನ್ನೂ  ಕಂಪ್ಯೂಟರ್‌ ಎಂಬ ಒಂದೇ ಹೆಸರಿನಿಂದ ಕರೆಯಲಾಗಿದೆ.  ಅಂತರ್ಜಾಲದಲ್ಲಿ ಮಾಹಿತಿಯು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಂತಿಗಳು ಅಥವಾ ದೃಗ್ನಾರಿನ ಮೂಲಕ ಹರಿಯುತ್ತದೆ. ಸಾಮಾನ್ಯವಾಗಿ ಹೆಚ್ಚು ಮಾಹಿತಿ ತುಂಬಿರುವ ಕಂಪ್ಯೂಟರನ್ನು ಸರ್ವರ್‌ ಎಂದು ಕರೆಯಲಾಗುತ್ತದೆ. ನಾವು ಬಳಸುವ ಡೆಸ್ಕ್‌ ಟಾಪ್‌, ಲ್ಯಾಪ್‌ ಟಾಪುಗಳು, ಮೊಬೈಲ್ ಫೋನ್  ಮುಂತಾದವುಗಳನ್ನು ಹೋಸ್ಟ್‌ ಅಥವಾ ಕ್ಲೈಂಟ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಸವಿಜ್ಞಾನ ಪತ್ರಿಕೆಯ ಲೇಖನಗಳ ಮಾಹಿತಿಯನ್ನು ಸರ್ವರ್‌ ಎಂದು ಕರೆಯುವ  ಕಂಪ್ಯೂಟರ್‌ ನಲ್ಲಿ ತುಂಬಲಾಗಿರುತ್ತದೆ. ಆ ಸರ್ವರಿಗೆ ಮತ್ತು ನಮ್ಮ ಕಂಪ್ಯೂಟರಿಗೂ ಸಹ   ವಿಶ್ವ ಅಂತರ್ಜಾಲದಲ್ಲಿ ಒಂದು ನಿರ್ದಿಷ್ಟ ವಿಳಾಸವಿರುತ್ತದೆ. ಇದನ್ನು IP address ಎಂದು ಹೇಳುತ್ತಾರೆ.  ಈಗ ನಮ್ಮ ಕಂಪ್ಯೂಟರನ್ನು ಬಳಸಿಕೊಂಡು ಸವಿಜ್ಞಾನ ಪತ್ರಿಕೆಯಲ್ಲಿನ ಲೇಖನವನ್ನು ಓದಬೇಕಾದರೆ ಈ ವಿಳಾಸಕ್ಕೆ ನಮ್ಮ ಕಂಪ್ಯೂಟರನ್ನು ಅಂತರ್ಜಾಲ ಸೇವೆ ನೀಡುವವರ(ISP) ಉದಾಹರಣೆಗೆ ಬಿಎಸ್ಸೆನ್ನೆಲ್‌, ಜಿಯೋ, ಏರ್ಟೆಲ್‌, ಟಾಟಾ ಮುಂತಾದವುಗಳ  ಮೂಲಕ   ಸಂಪರ್ಕಿಸಬೇಕಾಗುತ್ತದೆ. ಹಾಗೆ ಸಂಪರ್ಕ ಮಾಡಿದಾಗ ಸರ್ವರಿನಲ್ಲಿರುವ ಮಾಹಿತಿಯು ನಮ್ಮ ಕಂಪ್ಯೂಟರಿಗೆ ಹರಿದು ಬಂದು ನಮ್ಮ ಅದರ ಪರದೆಯಲ್ಲಿ ಮಾಹಿತಿ ಪ್ರಕಟವಾಗುತ್ತದೆ.

IP address ಸೇವೆಯಲ್ಲಿ ಎರಡು ವಿಧಗಳಿರುತ್ತವೆ. ಮೊದಲನೆಯದು ಡೈನಾಮಿಕ್‌ ಐಪಿ ಅಡ್ರೆಸ್‌ ಇದನ್ನು ಹೋಸ್ಟುಗಳಿಗೆ ಅಂದರೆ ನಾವು ಬಳಸುವ ಸಾಮಾನ್ಯ ಕಂಪ್ಯೂಟರುಗಳಿಗೆ ನೀಡಲಾಗುತ್ತದೆ. ಎರಡನೆಯದು ಸ್ಟಾಟಿಕ್‌ ಐಪಿ ಅಡ್ರೆಸ್‌ ಅಂದರೆ ಸ್ಥಿರವಾದ ಐಪಿ ವಿಳಾಸ. ಇದನ್ನು ಸಾಮಾನ್ಯವಾಗಿ ಸರ್ವರುಗಳಿಗೆ ನೀಡಲಾಗುತ್ತದೆ. 

ವಿಶ್ವದಾದ್ಯಂತ ಎರಡು ಬಗೆಯ ಐಪಿ ಅಡ್ರೆಸ್‌ ನೀಡುವ ಕ್ರಮವಿದೆ. ಹಳೆಯದಾದ IPv4 ಕ್ರಮ ಮತ್ತು ಹೊಸತಾದ IPv6 ಕ್ರಮ. ಹಲವಾರು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ IPv6 ಕ್ರಮ ಈಗಾಗಲೇ ಜಾರಿಯಾಗಿದೆ. ಭಾರತದಲ್ಲಿ ಇಂದಿಗೂ IPv4 ಕ್ರಮವೇ ಜಾರಿಯಲ್ಲಿದೆ. IPv4 ಕ್ರಮದಲ್ಲಿ  ದಶಮಾನ ಪದ್ಧತಿಯಲ್ಲಿ  0 ಯಿಂದ 255ರ ವರೆಗೆ  ನಾಲ್ಕು ಭಾಗಗಳಲ್ಲಿ ವ್ಯಕ್ತಪಡಿಸಿದ 32 ಬಿಟ್ ಸಂಖ್ಯೆಗಳ ಸಮೂಹವಾಗಿರುತ್ತದೆ. ಇವುಗಳ ಒಟ್ಟು ಕ್ರಮಯೋಜನೆಗಳ ಸಂಖ್ಯೆ  232 =4,294,967,296 ಆಗಿರುತ್ತದೆ.  ಇಷ್ಟು ದೊಡ್ಡ ಸಂಖ್ಯೆಯ ಐಪಿ ಅಡ್ರೆಸ್‌ಗಳನ್ನು ರೂಪಿಸಬಹುದಾದರೂ ಕೆಲವು ನಿರ್ಬಂಧನೆಗಳ ಕಾರಣದಿಂದ ಸಾರ್ವಜನಿಕರಿಗೆ ವಿತರಿಸಲು ದೊರೆಯುವುದು ಇದರಲ್ಲಿ ಅತಿ ಕಡಿಮೆ ಐಪಿ ಅಡ್ರೆಸ್‌ಗಳು.  ಹೀಗಾಗಿ ಜನಸಾಮಾನ್ಯರಿಗೆ ಒಂದು ಸೆಷನ್ನಿಗೆ ಸಿಗುವಂತಹ  ತಾತ್ಕಾಲಿಕವಾದ ಡೈನಾಮಿಕ್‌ ಐಪಿ ಅಡ್ರೆಸ್‌ ನೀಡಲಾಗುತ್ತದೆ.

IPv6 ಪ್ರತಿ ಗುಂಪಿನಲ್ಲಿ ನಾಲ್ಕು ಷೋಡಶಮಾನ  ಸಂಖ್ಯೆಗಳಿರುವ  ಇಂತಹ ಗುಂಪನ್ನು ಕೋಲನ್‌ ಸಂಕೇತದಿಂದ ವಿಭಾಗಿಸಿರುವ ಎಂಟು ಗುಂಪುಗಳ ಸಮೂಹವಾಗಿರುತ್ತದೆ. ( ಗಣಕ  ವಿಜ್ಞಾನದಲ್ಲಿ ಷೋಡಶಮಾನ ಪದ್ಧತಿಯ ಅಂಕೆಗಳೆಂದರೆ ಷೋಡಶಮಾನ ಪದ್ಧತಿಯ ಅಂಕೆಗಳನ್ನು 0,1,2,3,4,5,6,7,8,9,A,B,C,D,E ಮತ್ತು F) ಹೀಗಾಗಿ ರೂಪಿಸಬಹುದಾದ ಐಪಿ ಅಡ್ರೆಸ್‌ಗಳ ಸಂಖ್ಯೆಯೂ ಅಗಾಧ ಜೊತೆಗೆ IPv4ಗಿಂತ ಇದು ಹೆಚ್ಚಿನ ಸುರಕ್ಷತೆ ಮತ್ತು ಸವಲತ್ತುಗಳನ್ನು ಹೊಂದಿದೆ.

ಉದಾಹರಣೆಗೆ, IPv4ನಲ್ಲಿಯ 142.250.196.4. ವಿಳಾಸವನ್ನೇ ತೆಗೆದುಕೊಂಡರೆ, ಇದೊಂದು ಸಂಕೀರ್ಣವಾದ ಬೈನರಿ ಕೋಡ್‌ ಅಗಿದ್ದು ಇದನ್ನು ಜನಸಾಮಾನ್ಯರು ನೆನಪಿನಲ್ಲಿಟ್ಟಿಕೊಳ್ಳುವುದು ಕಷ್ಟವಾಗಬಹುದು. ಆದ್ದರಿಂದ ಜನರು ನೆನಪಿಟ್ಟುಕೊಳ್ಳುವಂತಹ ಯೂನಿವರ್ಸೆಲ್‌ ರಿಸೋರ್ಸ್‌ ಲೊಕೇಟರ್(URL) ಎಂದು ಕರೆಯಲಾಗುವ ರೂಪದಲ್ಲಿ ಜನರಿಗೆ ಪರಿಚಯಿಸಲಾಗುತ್ತದೆ. 142.250.196.4 ಇದರ  ಯೂನಿವರ್ಸೆಲ್‌ ರಿಸೋರ್ಸ್‌ ಲೊಕೇಟರ್(URL)  www.google.com ಆಗಿದೆ. ಇದರಲ್ಲಿ ಮೂರು ಪದಗಳಗಳನ್ನು ಗುರ್ತಿಸಬಹುದು. ಕೊನೆಯ ಪದವನ್ನು ಟಾಪ್‌ ಲೆವೆಲ್‌ ಡೊಮೈನ್‌(TLD) ಎಂದು ಗುರ್ತಿಸಲಾಗುತ್ತದೆ. ಒಂದು ದೇಶದ ಅಥವಾ ಪ್ರದೇಶದ ಹೆಸರನ್ನು ಸೂಚಿಸದ TLD ಯನ್ನು  ಜೆನರಿಕ್‌ TLD  ಎಂದು ಹೇಳಲಾಗುತ್ತದೆ. ಒಂದು ವೆಬಸೈಟ್‌ ಯಾವ ರೀತಿಯದು ಎಂಬುದನ್ನು ಅದರ ಜೆನರಿಕ್‌ TLDಯು ಸೂಚಿಸುತ್ತದೆ. ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದ ವೆಬ್ಸೈಟುಗಳ TLDಗಳು .com ಅನ್ನು ಹೊಂದಿರುತ್ತವೆ. ಸ್ವಯಂಸೇವಾ ಸಂಸ್ಥೆಗಳಿಗೆ .org, ಸರ್ಕಾರಿ ಇಲಾಖೆಗಳಿಗೆ .gov, ಶೈಕ್ಷಣಿಕ ಸಂಸ್ಥೆಗಳಿಗೆ .edu, ಸಂವಹನ ತಾಂತ್ರಿಕ ಸಂಸ್ಥೆಗಳಿಗೆ .net, ಸೈನ್ಯಕ್ಕೆ .mil... ಹೀಗೆ TLDಯನ್ನು ನೀಡಲಾಗಿರುತ್ತದೆ. ಒಂದು ದೇಶ ಅಥವಾ ಪ್ರದೇಶವನ್ನು ಸೂಚಿಸುವುದನ್ನು ಕಂಟ್ರಿ ಕೋಡ್‌ ಟಿಎಲ್ಡಿ (ccTLD) ಎನ್ನಲಾಗುತ್ತದೆ. ಉದಾಹರಣೆಗೆ ಭಾರತ .in, ಅಮೆರಿಕಾ ಸಂ. ಸಂ .us, ಯುನೈಟೆಡ್‌ ಕಿಂಗ್ಡಂ .uk ಇತ್ಯಾದಿ. ಇದರ ಜೊತೆಗೆ ngTLD ಎಂಬ ಹೊಸಬಗೆಯ TLD ನೀಡುವ ವ್ಯವಸ್ಥೆಯೂ ಜಾರಿಯಾಗಿದೆ.  ಉದಾಹರಣೆಗೆ .co, .app, .health, .club, .bank ಇತ್ಯಾದಿ. URLನಲ್ಲಿರುವ ಮಧ್ಯದ ಪದವನ್ನು ಸೆಕೆಂಡರಿ ಲೆವೆಲ್‌ ಡೊಮೈನ್‌ (SLD) ಎನ್ನಲಾಗುತ್ತದೆ. ಇದು ಸಾಮಾನ್ಯವಾಗಿ ಒಂದು ವೆಬ್ಸೈಟ್‌ ಹೆಸರನ್ನು ನಿರ್ದಿಷ್ಟವಾಗಿ ಸೂಚಿಸುವಂತಿರುತ್ತದೆ. www.google.com ಈ ಉದಾಹರಣೆಯಲ್ಲಿ ಈ URL ಗೂಗಲ್ಲಿಗೆ ಸಂಬಂಧಿಸಿದ್ದು ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. URLನ ಮೊದಲ ಪದವನ್ನು ಸಬ್‌ ಡೊಮೈನ್‌ ಅಥವಾ ಥರ್ಡ್‌ ಲೆವೆಲ್‌ ಡೊಮೈನ್‌ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ www. ಎಲ್ಲದ್ದಕ್ಕೂ  ಸಬ್‌ ಡೊಮೈನ್‌ ಆಗಿರುತ್ತದೆ. ಮೇಲಿನ ಉದಾಹರಣೆಯಲ್ಲಿ google.com ಈ ಭಾಗವನ್ನು ಡೊಮೈನ್‌ ನೇಮ್ ಎಂದು  ಕರೆಯಲಾಗುತ್ತದೆ. ಅಂತರ್ಜಾಲಕ್ಕೆ ಜೋಡಿಸಿರುವ ನಮ್ಮ ಕಂಪ್ಯೂಟರಿನ ವೆಬ್‌ ಬ್ರೌಸರ್‌ ನಲ್ಲಿ URL ನ್ನು  ಟೈಪು ಮಾಡಿ ಸರ್ಚಿಗೆ ಆಜ್ಞಾಪಿಸಿದಾಗ ISP ವ್ಯವಸ್ಥೆಯಲ್ಲಿರುವ ಡೊಮೈನ್‌ ನೇಮ್‌ ಸಿಸ್ಟಂ(DNS) ಸ್ವತಃ ತಾನೆ URL ನ್ನು ಸಂಕೀರ್ಣವಾದ ಐಪಿ ಅಡ್ರೆಸ್‌ಗೆ ಪರಿವರ್ತಿಸಿ, ಅದಕ್ಕೆ ಸಂಬಂಧಿಸಿದ ಸರ್ವರಿನೊಂದಿಗೆ ನಮ್ಮ ಕಂಪ್ಯೂಟರಿಗೆ ಸಂಪರ್ಕ ಕಲ್ಪಿಸುತ್ತದೆ.‌

 ಹೀಗೆ ಎರಡು ಕಂಪ್ಯೂಟರ್‌ಗಳನ್ನು ಅಂತರ್ಜಾಲದ ಮೂಲಕ ಜೋಡಿಸಿದಾಗ ಅವುಗಳ ನಡುವೆ ಮಾಹಿತಿ ವಿನಿಮಯವು TCP/IP ಎಂಬ ಶಿಷ್ಟಾಚಾರದ ಮೂಲಕ ನಡೆಯುತ್ತದೆ. ಉದಾಹರಣೆ ನಮ್ಮ ಕಂಪ್ಯೂಟರಿನಿಂದ ಒಂದು ಜಾಲತಾಣದ ಸರ್ವರಿಗೆ ನಿರ್ದಿಷ್ಟ ಮಾಹಿತಿಯ ಬೇಡಿಕೆಯನ್ನು ಕಳುಹಿಸಬೇಕೆಂದು ಇಟ್ಟುಕೊಳ್ಳೋಣ. ಈ ಬೇಡಿಕೆಯೂ ಸಹ ಒಂದು ಮಾಹಿತಿಯಾಗಿದ್ದು ಅದನ್ನು ನಮ್ಮ ಕಂಪ್ಯೂಟರಿನಿಂದ ಈ ಮಾಹಿತಿ ಅಂತರ್ಜಾಲಕ್ಕೆ ತಲುಪಿದ ಕೂಡಲೆ ಅದು ಅಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಬೈಟ್‌ ಮಾಹಿತಿ ಹೊಂದಿರುವ ಅನೇಕ ಪೊಟ್ಟಣಗಳಾಗಿ ಮಾರ್ಪಡಿಸಲ್ಪಡುತ್ತದೆ. ಇಂತಹ ಪ್ರತಿ ಪೊಟ್ಟಣವನ್ನು ಡೇಟಾ ಪ್ಯಾಕೆಟ್‌ ಎಂದು ಕರೆಯುತ್ತಾರೆ.  ಇಂತಹ ಪ್ರತಿ ಡೇಟಾ ಪ್ಯಾಕೆಟ್‌ನಲ್ಲಿ TCP  ಮತ್ತು IP ಈ ಎರಡು  ಹಂತಗಳು ಮತ್ತು ಪ್ರತಿ ಹಂತದಲ್ಲಿ ಹಲವಾರು ಪದರಗಳಿರುತ್ತವೆ. TCP ಹಂತದಲ್ಲಿ ಮಾಹಿತಿಗೆ ಸಂಬಂಧಿಸಿದಂತೆ ವಿವರಗಳ ಪದರಗಳಿದ್ದರೆ IP ಹಂತದಲ್ಲಿ ಎರಡೂ ಕಂಪ್ಯೂಟರಿಗಳಿಗೆ ಸಂಬಂಧಿಸಿದ ವಿಳಾಸದ ಪದರಗಳಿರುತ್ತವೆ. ಅತ್ಯಂತ ಸರಳವಾಗಿ ಹೇಳಬೇಕೆಂದರೆ ಉದಾಹರಣೆಗೆ 1.2.3.4 ಈ URL ಇರುವ ಕಂಪ್ಯೂಟರ್‌ “ಹಲೋ ಕಂಪ್ಯೂಟರ್‌ಎನ್ನುವ ಮಾಹಿತಿಯನ್ನು 5.6.7.8 URL ಹೊಂದಿರುವ ಕಂಪ್ಯೂಟರಿಗೆ ಕಳುಹಿಸಬೇಕಾದ ಈ ಮಾಹಿತಿಯನ್ನು ಎರಡು ಡೇಟಾ ಪ್ಯಾಕೆಟ್ಟುಗಳಾಗಿ ವಿಭಜಿಸಲಾಗಿದೆ ಎಂದುಕೊಂಡರೆ, TCP/IP ಶಿಷ್ಟಾಚಾರದಂತೆ  ಒಂದು ಡೇಟಾ ಪ್ಯಾಕೆಟ್‌ನಲ್ಲಿ “ಹಲೋ ಕಂಎಂಬುದು TCP ಹಂತದಲ್ಲಿ ಹಾಗೂ 1.2.3.4 ಮತ್ತು  5.6.7.8ಗಳು IP ಹಂತದಲ್ಲಿ ಇರುತ್ತದೆ. ಈ ಡೇಟಾ ಪ್ಯಾಕೆಟ್ಟಿನ ಕ್ರಮ ಸಂಖ್ಯೆ 1 ಆಗಿರುತ್ತದೆ. ಹಾಗೆಯೇ “ಪ್ಯೂಟರ್”‌ TCP ಹಂತದಲ್ಲಿ ಹಾಗೂ 1.2.3.4 ಮತ್ತು  5.6.7.8ಗಳು IP ಹಂತದಲ್ಲಿ ಇರುತ್ತದೆ. ಈ ಡೇಟಾ ಪ್ಯಾಕೆಟ್ಟಿನ ಕ್ರಮ ಸಂಖ್ಯೆ 2 ಆಗಿರುತ್ತದೆ.  ಹೀಗೆ ಪ್ರತಿ ಡೇಟಾ ಪ್ಯಾಕೆಟ್ಟಿಗೂ ಅದರದೇ ಆದ ಕ್ರಮಸಂಖ್ಯೆ ಇರುತ್ತದೆ. ಡೇಟಾ ಪ್ಯಾಕೆಟುಗಳನ್ನಾಗಿಸುವ ಕೆಲಸವನ್ನು ನಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿರುವ ಆಪರೇಟಿಂಗ್‌ ಸಿಸ್ಟಂ ನಿರ್ವಹಿಸುತ್ತದೆ.

ಈ ಡೇಟಾ ಪ್ಯಾಕೆಟ್ ಅಂತರ್ಜಾಲ ಪ್ರವೇಶಿಸಿದಾಗ ISPಯಲ್ಲಿರುವ ರೋಟರುಗಳು ಆಲ್ಫಾ-ನ್ಯೂಮರಿಕಲ್‌ ರೂಪದಲ್ಲಿರುವ ಇವುಗಳನ್ನು  ಅನನ್ಯವಾದ   ತರಂಗ ಆವೃತ್ತಿಯ ಅಥವಾ ಕಂಪನ ವಿಸ್ತಾರ ಇರುವ ವಿದ್ಯುನ್ಮಾನ ಅಥವಾ ದ್ಯುತಿ ಸಂಕೇತಗಳಾಗಿ ಪರಿವರ್ತಿಸುತ್ತವೆ. ಜೊತೆ ಜೊತೆಗೆ ಈ ಸಂಕೇತಗಳು ತಲುಪಬೇಕಾದ ಗಮ್ಯಸ್ಥಾನವನ್ನು ಗುರ್ತಿಸಿ ಅವುಗಳನ್ನು ತಲುಪಿಸುವ ಕಾರ್ಯನಿರ್ವಹಿಸುತ್ತವೆ. ISPಯಲ್ಲಿರುವ ರೋಟರುಗಳು ಡೇಟಾ ಪ್ಯಾಕೆಟ್‌ ಹೊರಟ ಸ್ಥಳಮೂಲ, ಅವುಗಳ ಗಮ್ಯಸ್ಥಾನ, ದಿನಾಂಕ, ಸಮಯ, ಕಾಲಾವಧಿ, ಇತ್ಯಾದಿ ಮಾಹಿತಿಯನ್ನು ರೋಟರ್‌ ಟೇಬಲ್‌ ಎಂದು ಕರೆಯಲ್ಪಡುವ ಕಡತಗಳಲ್ಲಿ ಕಾಪಿಡುತ್ತವೆ. ಪ್ರತಿಯೊಂದು ಕಂಪ್ಯೂಟರಿಗು ಅದರ ತಯಾರಕರು ಮೆಷಿನ್‌ ನಂಬರ್‌ ಎಂಬ ಒಂದು ನಿರ್ದಿಷ್ಟ ಕ್ರಮಸಂಖ್ಯೆಯನ್ನು ಹಾರ್ಡ್ವೇರಿನಲ್ಲಿಯೇ ಸೇರಿಸಿರುತ್ತಾರೆ. ಹೀಗಾಗಿ ನಾವು ಪ್ರತಿಸಲ ಅಂತರ್ಜಾಲಕ್ಕೆ ನಮ್ಮ ಕಂಪ್ಯೂಟರನ್ನು ಜೋಡಿಸಿದಾಗ ನಮ್ಮ ಕಂಪ್ಯೂಟರಿನ ಮೆಷಿನ್‌ ನಂಬರ್‌ ಮತ್ತು IP address ಈ ರೋಟರ್‌ ಟೇಬಲ್ಲುಗಳಲ್ಲಿ ದಾಖಲಾಗಿರುತ್ತದೆ. ಈ ದಾಖಲೆ ಸೈಬರ್‌ ಅಪರಾಧ ಪತ್ತೆಯಲ್ಲಿ ಬಹಳ ಉಪಯುಕ್ತವಾಗುತ್ತದೆ. ಅಂತರ್ಜಾಲದಲ್ಲಿ ವಿದ್ಯನ್ಮಾನ ಇಲ್ಲವೇ ದ್ಯುತಿ ಸಂಕೇತಗಳಾಗಿ ಪರಿವರ್ತಿತವಾಗಿ ಹೊರಟ ಡೇಟಾ ಪ್ಯಾಕೆಟ್ಟುಗಳು ಸರತಿಯಲ್ಲಿ ಸಾಗುತ್ತಾ ಹೋಗುವುದಾದರೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತವೆ. ಹೀಗಾದರೆ ಮಾಹಿತಿಯ ವಿನಿಮಯವು ನಿಧಾನವಾಗಿಬಿಡುತ್ತದೆ. ಇದನ್ನು ತಪ್ಪಿಸಿ ಮಾಹಿತಿ ವಿನಿಮಯ ಶೀಘ್ರವಾಗಿ ಆಗಲು ಡೇಟಾ ಪ್ಯಾಕೆಟ್ಟುಗಳು ಒಂದು ಮಾರ್ಗದಲ್ಲಿ(ತಂತಿಯಲ್ಲಿ) ಸರತಿ ಸಾಗುವ ಬದಲು ತಮಗೆ ಅವಕಾಶವಿರುವ ಎಲ್ಲಾ ಮಾರ್ಗಗಳಲ್ಲಿ ಅವು ಹತ್ತಿರವೋ ದೂರವೋ ಲೆಕ್ಕಿಸದೆ ವೇಗವಾಗಿ ಸಾಗಿ ಗಮ್ಯವನ್ನು ತಲುಪುತ್ತವೆ. ಉದಾಹರಣೆಗೆ ಎ ಯಿಂದ ಬಿಗೆ ಒಂದು ಸಾವಿರ ಡೇಟಾ ಪ್ಯಾಕೆಟ್ಟುಗಳು ಹೊರಟವೆಂದರೆ ತಮಗೆ ಅವಕಾಶವಿರುವ ಎಲ್ಲಾ ಸಾವಿರ ಅಥವಾ ಅದಕ್ಕಿಂತ ಕಡಿಮೆಯ ಮಾರ್ಗಗಳಲ್ಲಿ ಹರಿದು ಗಮ್ಯವನ್ನು ತಲುಪುತ್ತವೆ. ಹೀಗೆ ಆದಾಗ ಅವುಗಳ ಕ್ರಮವೂ ತಪ್ಪಿ ಮಾಹಿತಿಯು ತಿರುಗು ಮರುಗು ಆಗುವ ಸಾಧ್ಯತೆ ಇರುತ್ತದೆ ಇದನ್ನು ತಪ್ಪಿಸಲು ಡೇಟಾ ಪ್ಯಾಕೆಟ್ಟುಗಳನ್ನು ಕ್ರಮವಾಗಿ ಜೋಡಿಸಿ ಮಾಹಿತಿಯನ್ನು ಓರಣ ಮಾಡುವ ವ್ಯವಸ್ಥೆ ಗಮ್ಯ ಕಂಪ್ಯೂಟರಿನಲ್ಲಿರುತ್ತದೆ. ಪ್ರತಿ ಡೇಟಾ ಪ್ಯಾಕೆಟ್ಟು ತಲುಪಿದ್ದಕ್ಕೆ ಸ್ವೀಕೃತಿ ನೀಡುವುದರಿಂದ ಇಡಿದು ಸಂವಹನದಲ್ಲಿ ಕಳೆದು ಹೋಗಿ ತಲುಪದಿರುವ  ಡೇಟಾ ಪ್ಯಾಕೆಟ್ಟನ್ನು ಮೂಲದಿಂದ ಕಳಿಸಲು ಮನವಿಯನ್ನು ಮಾಡುವ ವ್ಯವಸ್ಥೆಯೂ ಇರುತ್ತದೆ. ಗಮ್ಯಸ್ಥಾನವನ್ನು ತಲುಪಿದ ಡೇಟಾ ಪ್ಯಾಕೆಟ್ಟನ್ನು ಅದನ್ನು ನಿರ್ಮಿಸದ ವಿರುದ್ಧ ಕ್ರಮದಲ್ಲಿ ಬಿಡಿಸಿ ಮಾಹಿತಿಯನ್ನು ಸಂಯೋಜಿಸಲಾಗುತ್ತದೆ. ಇಷ್ಟೆಲ್ಲ ಕ್ರಿಯೆಗಳು ಇಲ್ಲಿ ವಿವರಿಸಿರುವುದಕ್ಕಿಂತ ಸಾವಿರಕ್ಕೂ ಅಧಿಕಪಟ್ಟು ಸಂಕೀರ್ಣವಾಗಿದ್ದರೂ ವಿದ್ಯುತ್‌ ವೇಗದಲ್ಲಿ ನಡೆದು ಮಾಹಿತಿ ವಿನಿಮಯ ನಡೆಯುತ್ತಿರುತ್ತದೆ. ನಾವು ದಿನ ನಿತ್ಯ ಬಳಸುವ ಕಂಪ್ಯೂಟರುಗಳು, ಮೊಬೈಲು ಫೋನುಗಳ ಜೊತೆಗೆ ಸರಳವಾಗಿ ನಮ್ಮ ಬೆರಳ ತುದಿಯ ಮೂಲಕ ಬಳಸಿ, ಅಕ್ಷರ, ಚಿತ್ರ, ಭಾವಚಿತ್ರ, ಸಂಗೀತ, ಸಂಭಾಷಣೆ ಮುಂತಾದ ಧ್ವನಿ, ಚಲನಚಿತ್ರ, ಕ್ರೀಡೆ ಮುಂತಾದವುಗಳ ನೇರ ಪ್ರಸಾರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುವ ಅಂತರ್ಜಾಲದ ಮಾಯಾಜಾಲ ಎಷ್ಟು ಸಂಕೀರ್ಣವಾದರೂ ಅತ್ಯಂತ ನಿಖರವಾಗಿ ಕಾರ್ಯನಿರ್ವಹಿಸುವ ಪರಿ ಆಶ್ಚರ್ಯವನ್ನು ಉಂಟುಮಾಡುವುದಿಲ್ಲವೇ?

 

 

 

 

ಆಧುನಿಕ ಮಾನವ ಮತ್ತು ಜೈವಿಕ ತಂತ್ರಜ್ಞಾನ…….

ಆಧುನಿಕ ಮಾನವ ಮತ್ತು ಜೈವಿಕ ತಂತ್ರಜ್ಞಾನ…….


ಗಜಾನನ ಭಟ್ಟ, ಹವ್ಯಾಸಿ ಲೇಖಕರು ಮತ್ತು ಪ್ರೌಢಶಾಲಾ ಶಿಕ್ಷಕರು   

ಜೈವಿಕತಂತ್ರಜ್ಞಾನ ಇಂದು ಹಲವಾರು ಕ್ಷೇತ್ರಗಳನ್ನು ವ್ಯಾಪಿಸಿದೆ.ಆರೋಗ್ಯಕ್ಷೇತ್ರ , ಕೈಗಾರಿಕೆ, ಆಹಾರ, ತ್ಯಾಜ್ಯ ನಿರ್ವಹಣೆ ಮೊದಲಾದ ಕ್ಷೇತ್ರಗಳಲ್ಲಿ ಇದರ ಕೊಡುಗೆ ಅಪಾರ ಇಂತಹ ತಂತ್ರಜ್ಞಾನ ನಮ್ಮ ಬದುಕಿನಲ್ಲಿ ತಂದಿರುವ ಬದಲಾವಣೆ ಅಪೂರ್ವವಾದದ್ದು . ಇಂತಹ ತಂತ್ರಜ್ಞಾನದ ಸಾಧಕ ಬಾಧಕಗಳನ್ನು ತಮ್ಮ ಲೇಖನದಲ್ಲಿ ಚರ್ಚಿಸಿದ್ದಾರೆ ಶಿಕ್ಷಕ ಗಜಾನನ ಭಟ್ಟ ಅವರು.

 ಮಾನವನು ಆಧುನಿಕತೆಯ ಉತ್ತುಂಗದಲ್ಲಿದ್ದಾನೆ. ಆವಿಷ್ಕಾರದ ಆರೋಹಣವನ್ನು  ತಲುಪಿದ್ದಾನೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ವೈಜ್ಞಾನಿಕತೆಯ ಛಾಪು ಮೂಡಿಸಿ ತನ್ನ ಜೀವನ ಮಟ್ಟವನ್ನು ಎತ್ತರಿಸಿದ್ದಾನೆ. ದಿನನಿತ್ಯ ಹೊಸ ಹೊಸ ಸಂಶೋಧನೆಗೆ ಮುಂದಾಗಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾನೆ. ಇದರಲ್ಲಿ ಜೈವಿಕ ತಂತ್ರಜ್ಞಾನ ಎನ್ನುವುದು ಒಂದು ಪ್ರಮುಖ ಮೈಲುಗಲ್ಲಾಗಿದೆ.

   ಜೈವಿಕ ತಂತ್ರಜ್ಞಾನ ಎನ್ನುವುದು ಇಂದಿನ ನವೀನ ಪಾರಿಭಾಷಿಕ ಪದವಾಗಿದೆ. ಈ ಶಬ್ದವು ಪ್ರಮುಖವಾಗಿ ಎರಡು ಭಾಗಗಳನ್ನು ಒಳಗೊಂಡಿದ್ದು,ಜೈವಿಕ ಎನ್ನುವ ಪದವು ಜೀವಿಯನ್ನು ಪ್ರತಿಪಾದಿಸಿದರೆ, ತಂತ್ರಜ್ಞಾನ ಎನ್ನುವ ಪದವು ತಾಂತ್ರಿಕ ವಿಜ್ಞಾನದ ಅನ್ವಯಗಳನ್ನು ಅಳವಡಿಸಿಕೊಂಡಿರುವುದಾಗಿದೆ. ಜೀವಿಗಳ ಜೈವಿಕ ಲಕ್ಷಣಗಲ್ಲಿ ನಮಗೆ ಅನುಕೂಲಕರವಾದ ಸೂಕ್ತ ಮಾರ್ಪಾಡುಗಳನ್ನು ತಂತ್ರಜ್ಞಾನದ ನೆರವಿನಿಂದ ನೆರವೇರಿಸಿ ಜೀವಿಯಲ್ಲಿ ನಮಗೆ ಬೇಕಾದ ಲಕ್ಷಣಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ. ಅಂತರಾಷ್ಟ್ರೀಯ ಜೀವವಿಜ್ಞಾನ ಪೋರಮ್ ಜೈವಿಕ ತಂತ್ರಜ್ಞಾನ ಎಂದರೆ'

Any technological application that uses biological systems, dead organisms, or derivatives thereof, to make or modify products or processes for specific use." ಎಂದು ವಿಶ್ಲೇಷಿಸಿದೆ. ಒಟ್ಟಿನಲ್ಲಿ ತಂತ್ರಜ್ಞಾನದ ಸಹಾಯದಿಂದ ಜೀವಿಗಳಲ್ಲಿ ಅನುಕೂಲಕರವಾದ ಲಕ್ಷಣಗಳನ್ನು ತುಂಬುವುದು ಎಂದು ವೈಜ್ಞಾನಿಕವಾಗಿ ವ್ಯಾಖ್ಯಾನಿಸಲಾಗಿದೆ.ತಂತ್ರಜ್ಞಾನವನ್ನು ಜೈವಿಕ ಪ್ರಕ್ರಿಯೆಯೊಂದಿಗೆ ಜೋಡಿಸುವ ವಿಧಾನವೇ ಜೈವಿಕ ತಂತ್ರಜ್ಞಾನದ ಮೂಲಮಂತ್ರವಾಗಿದೆ.ಇದು ಜೀವಶಾಸ್ತ್ರ, ವೈದ್ಯಕೀಯ ಶಾಸ್ತ್ರ,ಆಹಾರ ವಿಜ್ಞಾನ, ಕೃಷಿ ವಿಜ್ಞಾನ ಮುಂತಾದ ವಿಜ್ಞಾನ ಶಾಖೆಗಳನ್ನು ಬಳಸಿಕೊಂಡು ತನ್ನ ಅಪರಿಮಿತ ಅನ್ವಯಗಳನ್ನು ನೀಡಿದೆ.ಅದರಲ್ಲೂ ವಿಶೇಷವಾಗಿ ಬಯೋ ಇಂಜಿನಿಯರಿಂಗ್ ವಿಭಾಗವು ನೇರವಾಗಿ ಜೈವಿಕ ತಂತ್ರಜ್ಞಾನದ ಪೂರಕ ವಿಜ್ಞಾನ ವಿಭಾಗ ಎಂದೇ ಗುರುತಿಸಲಾಗಿದೆ.ಜೈವಿಕ ತಂತ್ರಜ್ಞಾನವು ಶುದ್ಧ ವಿಜ್ಞಾನದ ಭಾಗವಾಗಿದ್ದು ,ತಳಿಶಾಸ್ತ್ರ, ಸೂಕ್ಷ್ಮಾಣು ಜೀವಿಶಾಸ್ತ್ರ,ಜೀವ ರಸಾಯನ ವಿಜ್ಞಾನ,ಭ್ರೂಣಶಾಸ್ತ್ರ,ಜೀವಕೋಶ ವಿಜ್ಞಾನ ಮುಂತಾದ ಮೂಲ ವಿಜ್ಞಾನ ಪರಿಕಲ್ಪನೆಗಳ ಭಾವಾಗಿದೆ.




ಜೈವಿಕ ತಂತ್ರಜ್ಞಾನದ ಹಿನ್ನೋಟ.

  ನವ ಶಿಲಾಯುಗದ ಕಾಲದಿಂದಲೂ ಮಾನವನ ಮೂಲ ವೃತ್ತಿ ಕೃಷಿ.ಮಾನವನು ಒಂದು ಕಡೆ ನೆಲೆನಿಂತು ಕೌಟುಂಬಿಕ ವ್ಯವಸ್ಥೆಗೆ ಬದ್ಧನಾದ ಮೇಲೆ ವ್ಯವಸ್ಥಿತವಾಗಿ ಕೃಷಿ ಪದ್ಧತಿ ಅನುಸರಿಸಿದ .ಇಲ್ಲಿ ಬಳಸಿದ ಕೆಲವು ಕೃಷಿ ಪೂರಕ ಚಟುವಟಿಕೆಗಳು ಜೈವಿಕ ತಂತ್ರಜ್ಞಾನದ ಮೂಲ ಪರಿಕಲ್ಪನೆ ಎಂದು ಗುರುತಿಸಲಾಗಿದೆ.ಮೆಸಪೋಟನಿಯಾ ಮತ್ತು ಈಜಿಪ್ಟ್ ನಾಗರೀಕತೆಯ ಜನರು ಬೀಯರ್ ತಯಾರಿಕೆಯ ಪ್ರಕ್ರಿಯೆಯನ್ನು  ಕೃಷಿಯ ಉಪಕಸುಬನ್ನಾಗಿ ಮಾಡಿಕೊಂಡಿದ್ದರೆಂಬ ಉಲ್ಲೇಖವು ಜೈವಿಕ ತಂತ್ರಜ್ಞಾನದ ಬೆಳವಣಿಗೆಯ ಹಾದಿಯನ್ನು ಸೂಚಿಸುತ್ತದೆ.ಕ್ರಿಸ್ತ ಪೂರ್ವ 200 ರ ಸುಮಾರಿನಲ್ಲಿಯೇ ಜನರು ತಮಗೆ ತಗುಲಿದ ಕೆಲವು ಸೋಂಕು ನಿವಾರಣೆಗಾಗಿ ಗಿಡಮೂಲಿಕೆಗಳನ್ನು ಆಶ್ರಯಿಸಿದ್ದರು.ಇದು ಕೆಲವು ಪ್ರತಿಜೀವಿಕೆಗಳನ್ನು ಹಾಗೂ ವ್ಯಾಕ್ಸಿನ್ ತೆಯಾರಿಕೆಗೆ ನಾಂದಿಯಾಯಿತು.1917ರಲ್ಲಿ ಚೇಮ್ ವೈಜ್ಮನ್ ಎಂಬುವವರು ಮೊದಲ ಬಾರಿಗೆ, ಕೈಗಾರಿಕಾ ಪ್ರಕ್ರಿಯೆಯೊಂದರಲ್ಲಿ ಅಪ್ಪಟ ಸೂಕ್ಷ್ಮ ಜೀವವೈಜ್ಞಾನಿಕ ಕೃಷಿಯೊಂದನ್ನು ಬಳಸಿದರು.ಇದು ವಾಣಿಜ್ಯ ಉದ್ದೇಶಗಳಿಗೆ ಜೈವಿಕ ತಂತ್ರಜ್ಞಾನ ಬಳಕೆ ಮಾಡುವಲ್ಲಿ ಪ್ರೇರಣೆಯಾಯಿತು.ಜೈವಿಕ ಇಂಧನವಾದ ಎಥನಾಲನ್ನು ಸಾಂಪ್ರದಾಯಿಕ ಇಂಧನದ ಪರ್ಯಾಯವಾಗಿ ಅಥವಾ ಜೊತೆಯಾಗಿ ಬಳಕೆಯಿಂದ 2030 ರೊಷ್ಟೊತ್ತಿಗೆ ಸಾಂಪ್ರದಾಯಿಕ ಪೆಟ್ರೋಲಿಯಂ ಇಂಧನವನ್ನು ಶೇಕಡಾ 30 ರಷ್ಟನ್ನು ತಗ್ಗಿಸುವುದು ಸಾಧ್ಯವಿದೆ ಎಂದು ವೈಜ್ಞಾನಿಕ ಅಧ್ಯಯನಗಳು ತಿಳಿಸುತ್ತವೆ.

ಅನ್ವಯಿಕ ವಿಧಗಳು

  ಜೈವಿಕ ತಂತ್ರಜ್ಞಾನದ ಅಧುನಿಕ ಅನ್ವಯಗಳು ಅಪಾರ.ಒಂದು ಹಂತದಲ್ಲಿ ಇದರ ಅನ್ವಯಗಳಿಲ್ಲದೆ ಜೀವನ ದುಸ್ತರ ಎನ್ನುವ ಮಟ್ಟಿಗೆ ಇದು ನಮ್ಮನ್ನು ಆಳುತ್ತಿದೆ.ಜೈವಿಕ ತಂತ್ರಜ್ಞಾನವನ್ನು ಅದರ ಅನ್ವಯಿಕ ಉಪಯೋಗದ ಮೇಲೆ ಈ ಕೆಳಗಿನಂತೆ ವಿಂಗಡಿಸಬಹುದು.

 1)ಹಸಿರು ಜೈವಿಕ ತಂತ್ರಜ್ಞಾನ:ಜೈವಿಕ ತಂತ್ರಜ್ಞಾನವನ್ನು ವ್ಯವಸ್ಥಿತವಾಗಿ ಕೃಷಿಯಲ್ಲಿ ಬಳಸಿಕೊಳ್ಳುವುದಾಗಿದೆ.ಕೃಷಿಯಲ್ಲಿ ಸೂಕ್ತ ಗಿಡಗಳ ಆಯ್ಕೆ,ಸಂಕರಣ ಮಾಡುವುದು,ಜೈವಿಕ ಕೀಟನಾಶಕ ಅಭಿವೃದ್ಧಿ, ಬೆಳೆ ಜೀವನ ಚಕ್ರದ ಅವಧಿ ಕಡಿಮೆ ಮಾಡುವುದು,ಕಳೆ ನಿಯಂತ್ರಣ,ಹೆಚ್ಚಿನ ಇಳುವರಿ ಪಡೆಯುವುದು, ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವದು ಮುಂತಾದ ಆಶಯಗಳನ್ನು ಇದು ಒಳಗೊಂಡಿದೆ .ಇದರ ಜೋತೆಗೆ ಪರಿಸರದ ಸುಸ್ಥಿರತೆ ಕಾಯ್ದಿಕೊಳ್ಳುವುದು ಇದರ ಪ್ರಮುಖ ಜವಾಬ್ದಾರಿಯಾಗಬೇಕಾಗಿದೆ.

2)ನೀಲಿ ಜೈವಿಕ ತಂತ್ರಜ್ಞಾನ:ಕಡಲಿನ ಮತ್ತು ಸಮುದ್ರ ಜೀವಿಗಳ ಕುರಿತಾಗಿ ಅಧ್ಯಯನ ಹಾಗೂ ಅಭಿವೃದ್ಧಿ ಮತ್ತು ಅನ್ವಯಕ್ಕಾಗಿ ಬಳಸಲಾಗುವ ಜೈವಿಕ ತಂತ್ರಜ್ಞಾನಕ್ಕೆ ನೀಲಿ ಜೈವಿಕ ತಂತ್ರಜ್ಞಾನ ಎನ್ನಲಾಗಿದೆ.

3)ಕೆಂಪು ಜೈವಿಕ ತಂತ್ರಜ್ಞಾನ:ವೈದ್ಯಕೀಯ ಕ್ಷೇತ್ರಕ್ಕೆ ಅನ್ವಯಿಸುವ ಜೈವಿಕ ತಂತ್ರಜ್ಞಾನದ ಅನ್ವಯಿಕ ಶಾಖೆಗೆ ಕೆಂಪು ಜೈವಿಕ ತಂತ್ರಜ್ಞಾನ ಎನ್ನುವರು.ಪ್ರತಿಕಾಯ ಉತ್ಪಾದಿಸಲು ಅನುಕೂಲಕರವಾದ ಜೀವಿಗಳ ಉತ್ಪಾದನೆ,ಕೃತಕ ಅಂಗಾಂಗಗಳ ವಿನ್ಯಾಸ,ವೈದ್ಯಕೀಯ ಉಪಕರಣಗಳ ತೆಯಾರಿ ಹಾಗೂ ಅವುಗಳ  ವಿನ್ಯಾಸ ,ಔಷಧಿ ತೆಯಾರಿಕಾ ಅನ್ವಯಿಕ ಅಂಶಗಳನ್ನು ಒಳಗೊಂಡಿದೆ.

4)ಶ್ವೇತ ಜೈವಿಕ ತಂತ್ರಜ್ಞಾನ:ಶ್ವೇತ ಜೈವಿಕ ತಂತ್ರಜ್ಞಾನಕ್ಕೆ ಔದ್ಯೋಗಿಕ ಜೈವಿಕ ತಂತ್ರಜ್ಞಾನ ಎಂದು ಹೆಸರು.ಔದ್ಯೋಗಿಕ ಕ್ಷೇತ್ರದಲ್ಲಿ ಅಗತ್ಯವಿರುವ ರಾಸಾಯನಿಕಗಳನ್ನು ಉತ್ಪತ್ತಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.ಕೈಗಾರಿಕಾ ರಂಗದಲ್ಲಿ ಬಳಕೆಯಾಗುವ ವೇಗವರ್ಧಕವಾಗಿ ಬಳಸುವ  ಕಿಣ್ವಗಳ ತೆಯಾರಿಕೆ, ಮಾಲಿನ್ಯ ಹಾಗೂ ಮಾಲಿನ್ಯಕಾರಕಗಳ ಪರಿಣಾಮ ಕಡಿಮೆ ಮಾಡುವುದು ಇದರ ಪ್ರಮುಖ ಅನ್ವಯವಾಗಿದೆ.ಇದರಿಂದ ಪಡೆಯಲಾಗುವ ಆರ್ಥಿಕ ಲಾಭಕ್ಕೆ ಜೈವಿಕ ಆರ್ಥಿಕತೆ ಎಂದು ಹೆಸರು.ಫಾರ್ಮಕೊಜೀನೋಮಿಕ್ಸ್ ಎನ್ನುವುದು ವಿವಿಧ ತಳೀಯ, ಪ್ರಭೇದದ  ಜೀವಿಗಳು ಔಷಧಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಅಧ್ಯಯನ ಮಾಡುವ ವೈದ್ಯಕೀಯ ವಿಜ್ಞಾನದ ಅಂಗಸಂಸ್ಥೆಯಾಗಿದ್ದು, ಫಾರ್ಮಾಲಜಿ ಮತ್ತು ಜೀನೊಮೀಕ್ಸ ಎನ್ನುವ ಶಬ್ದದಿಂದ ಉತ್ಪತ್ತಿಯಾಗಿದೆ.ಇವುಗಳ ಅನ್ವಯಗಳ ಕುರಿತಾಗಿ ಸೂಕ್ಷ್ಮವಾಗಿ ಅಧ್ಯಯನ ಮಾಡುವುದು ಇದರ ಇನ್ನೊಂದು ಪ್ರಮುಖ ಅನ್ವಯವಾಗಿದೆ.

ಜೈವಿಕ ತಂತ್ರಜ್ಞಾನ ಪ್ರಕ್ರಿಯೆಯು ಕೆಲವು ಇತಿಮಿತಗಳು..

 ಜೈವಿಕ ತಂತ್ರಜ್ಞಾನ ಜೈವಿಕ ಪ್ರಕ್ರಿಯೆಗಳ ಮೇಲೆ ತಂತ್ರಜ್ಞಾನದ ಚಾಪು ಮೂಡಿಸಿ ಮನುಕುಲದ ಉದ್ದಾರಕ್ಕೆ ಹಲವು ಅನ್ವಯಗಳನ್ನು ನೀಡುವುದಾಗಿದೆ, ಇದಕ್ಕೆ ಅಪವಾದವಾಗಿ ಕೆಲವು ನ್ಯೂನತೆ ಅಥವಾ ಇತಿಮಿತಿಗಳಿವೆ.ಅವುಗಳನ್ನು ಈ ಕೆಳಗಿನಂತೆ ನೋಡಬಹುದು.

1) ಬೀಜಗಳ ಬಂಜೆತನ:ಈ ಪದ್ದತಿಯಲ್ಲಿ ಉತ್ಪಾದನೆಯಾದ ಸಸ್ಯ ಅಥವಾ ಪ್ರಾಣಿಗಳು ಸಂಪೂರ್ಣ ಬಂಜೆಯಗಿದ್ದು, ಮಾರ್ಪಾಡಾದ ಅನುವಂಶಿಯ ಗುಣಗಳನ್ನು ಮುಂದಿನ ಪೀಳಿಗೆಗೆ ಸಾಗಿಸುವಲ್ಲಿ ವಿಫಲವಾಗುತ್ತದೆ.

2) ಕೆಲವು ಜೈವಿಕ ತಂತ್ರಜ್ಞಾನ ಪ್ರಕ್ರಿಯೆಗಳು  ಪ್ರಕೃತಿಗೆ ವಿರುದ್ಧ ನಿಯಮವಾಗಿದ್ದು ,ಪರಿಸರ ಅಥವಾ ಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

3) ಮಾನವನ ಪೀಳಿಗೆಯ ಮೇಲೆ ಜೈವಿಕ ತಂತ್ರಜ್ಞಾನ ಪ್ರಕ್ರಿಯೆಗಳನ್ನು ಪ್ರಯೋಗಿಸಿದರೆ ಇದು ಕೆಲವು ಸಾಮಾಜಿಕ, ನೈತಿಕ, ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

    ಈ ಮೇಲಿನ ಕೆಲವು ನಗಣ್ಯವಾದ ನ್ಯೂನತೆಗಳನ್ನು ಪ್ರತ್ಯೇಕಿಸಿ ನೋಡುವುದಾದರೆ ಜೈವಿಕ ತಂತ್ರಜ್ಞಾನ ಎಂಬ ವೈಜ್ಞಾನಿಕ, ತಾಂತ್ರಿಕ ಪ್ರಕ್ರಿಯೆಯು ಅತ್ಯಮೂಲ್ಯವಾದ ಅನ್ವಯಗಳನ್ನು ಒದಗಿಸುತ್ತದೆ.ಇದನ್ನು ಕೇವಲ ಮನುಕುಲದ ಉದ್ದಾರಕ್ಕೆ, ಪ್ರಕೃತಿಯ ಉಳಿವಿಗೆ ಬಳಸಿಕೊಂಡಲ್ಲಿ ಮಾನವನ ಜೀವನ ಮಟ್ಟವನ್ನು ಎತ್ತರಿಸಿ ಅರೋಗ್ಯಯುತ ಜೀವನ ದಯಪಾಲಿಸುವಲ್ಲಿ ಜೈವಿಕ ತಂತ್ರಜ್ಞಾನ ಅಪಾರ ಕೊಡುಗೆ ನೀಡುವಲ್ಲಿ ಯಾವ ಸಂಶಯವಿಲ್ಲ.

 

ಫೆಬ್ರವರಿ 2024 ರ ಸೈನ್ಟೂನ್ ಗಳು

 ಫೆಬ್ರವರಿ 2024 ರ ಸೈಂಟೂನ್ ಗಳು

ಶ್ರೀಮತಿ ಜಯಶ್ರೀ ಶರ್ಮ 



ರಾಷ್ಟ್ರೀಯ ವಿಜ್ಞಾನ ದಿನ – ಸಿ.ವಿ. ರಾಮನ್ ಅವರ ಕೊಡುಗೆಯ ಸ್ಮರಣಾರ್ಥ ದಿನ.

 ರಾಷ್ಟ್ರೀಯ ವಿಜ್ಞಾನ ದಿನ –  ಸಿ.ವಿ. ರಾಮನ್ ಅವರ ಕೊಡುಗೆಯ ಸ್ಮರಣಾರ್ಥ ದಿನ.

 ಲೇಖಕರು :  ಬಿ.ಎನ್ ರೂಪ,  ಸಹ  ಶಿಕ್ಷಕರು,

                                                   ಕೆಪಿಎಸ್

ಜೀವನ್ ಭೀಮ ನಗರ ,

                                 ಬೆಂಗಳೂರು ದಕ್ಷಿಣ  ವಲಯ -4 

ಬರುವ ಫೆಬ್ರವರಿ ೨೮ ರಂದು   ದೇಶದಾದ್ಯಂತ ಆಚರಿಸಲಿರುವ “ರಾಷ್ಟ್ರೀಯ ವಿಜ್ಞಾನ ದಿನ”ದ ಹಿನ್ನೆಲೆಯಲ್ಲಿ ಸರ್‌ ಸಿ.ವಿ.ರಾಮನ್‌ ಅವರ ಕೊಡುಗೆಯನ್ನು ಸ್ಮರಿಸುವ ಸಾಂದರ್ಭಿಕ ಲೇಖನವನ್ನು ಶಿಕ್ಷಕಿ ಬಿ.ಎನ್.ರೂಪಾ ಅವರು ಬರೆದಿದ್ದಾರೆ.

 

 ವಿಜ್ಞಾನ ಎಂಬ ಪದದಲ್ಲೇ ಅಡಗಿದೆ ವಿಶೇಷ ಜ್ಞಾನ .ನಿಸರ್ಗದಲ್ಲಿ ನಡೆಯುವ ವಿದ್ಯಮಾನ ನಮ್ಮ ಸುತ್ತಮುತ್ತಲು ನಡೆಯುವಂತಹ ಪ್ರಕ್ರಿಯೆಗಳು ಇದನ್ನು ಸಾದರ ಪಡಿಸುತ್ತವೆ. ವಿಜ್ಞಾನವು ತಾರ್ಕಿಕ ಚಿಂತನೆ, ವಿಮರ್ಶಾತ್ಮಕ ಆಲೋಚನೆಗಳನ್ನು, ವೈಜ್ಞಾನಿಕ ಮನೋಭಾವ ,ವೈಜ್ಞಾನಿಕ ಚಿಂತನೆ ,ವಿಸರ್ಗದಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಏಕೆ ಏನು? ಯಾಕಿಗಾಯಿತು? ಏನಾಯಿತು? ಕಾರಣ ಏನು? ವಿಮರ್ಶಿಸಿ ,ವಿಶ್ಲೇಷಿಸುವ ಆಲೋಚನೆಗಳಿಗೆ ಎಡೆ ಮಾಡಿಕೊಡುತ್ತದೆ. ಜ್ಞಾನಾತ್ಮಕ ವಲಯದೊಂದಿಗೆ ಅರ್ಥೈಸಿಕೊಳ್ಳುವ ಮನೋಭಾವವನ್ನು,ದೈನಂದಿನ ಜೀವನದಲ್ಲಿ ಅನ್ವಯಿಸಿಕೊಳ್ಳುವ ಮೂಲಕ, ಕೌಶಲ್ಯಗಳ ಬೆಳವಣಿಗೆಗೆ ಎಡೆ ಮಾಡಿಕೊಡುತ್ತದೆ.


ಭಾರತದಲ್ಲಿ ವೈಜ್ಞಾನಿಕ ಚಿಂತನೆ, ವೈಜ್ಞಾನಿಕ ಮನೋಭಾವ ,ವಿಜ್ಞಾನದಲ್ಲಿ ಆಸಕ್ತಿ ವೈಜ್ಞಾನಿಕ  ವೈಚಾರಿಕತೆ, ಇವುಗಳೆಲ್ಲವೂ ಆದಿ ಕಾಲದಿಂದಲೂ ಬೆಳೆದು ಬಂದಿರುವುದನ್ನು ನಾವು ತಿಳಿದುಕೊಂಡಿದ್ದೇವೆ ಹಾಗೂ ನೋಡಿದ್ದೇವೆ. , ಧೀಮಂತ ವ್ಯಕ್ತಿತ್ವ ಉಳ್ಳ ಅನೇಕ ಮಹನೀಯರನ್ನು, ವಿಜ್ಞಾನಿಗಳನ್ನು ಅವರು    ಮಾಡಿದಂತಹ ಕೊಡುಗೆಗಳನ್ನು ಸಹ ನಾವು ಸ್ಮರಿಸುತ್ತಾ ಬಂದಿದ್ದೇವೆ.

 ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿ ವರ್ಷ ಫೆಬ್ರವರಿ 28 ರಂದು ರಾಮನ್ ಅವರ ಕೊಡುಗೆಗಳನ್ನು ಸ್ಮರಿಸಲು  ಆಚರಿಸಲಾಗುತ್ತದೆ.

ಚಂದ್ರಶೇಖರ್ ವೆಂಕಟರಾಮನ್ ಅವರು 7 ನವಂಬರ್ 1888 ರಲ್ಲಿ  ತಿರುಚಿರಾಪಳ್ಳಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಚಂದ್ರಶೇಖರ್ ರಾಮನಾಥನ್ ಮತ್ತು ಪಾರ್ವತಿ ಅಮ್ಮಾಳ್ ಅವರ ಪುತ್ರನಾಗಿ  ಜನಿಸಿದರು  8 ಮಂದಿ ಒಡಹುಟ್ಟಿದವರಲ್ಲಿ ಇವರು ಎರಡನೆಯವರು. ಇವರ ತಂದೆ ಸ್ಥಳೀಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು ಮತ್ತು ಸಾಧಾರಣ ಆದಾಯವನ್ನು ಗಳಿಸುತ್ತಿದ್ದರು.

ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಸಿವಿ ರಾಮನ್ ಅವರು ಬಾಲ್ಯದಿಂದಲೇ ಜಾಣರು   ಸಾಧಕರು ಹಾಗೂ ಪ್ರತಿಭಾವಂತರು. ರಾಮನ್ ಅವರು ಸೆಂಟ್   ಅಲೋಸಿಯಸ್ ಆಂಗ್ಲೋ ಇಂಡಿಯನ್ ಹೈಸ್ಕೂಲಿನಲ್ಲಿ ಶಿಕ್ಷಣ ಪಡೆದರು. ಅವರು 11ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್  ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಂಧ್ರಪ್ರದೇಶಕ್ಕೆ ಮೊದಲ ಸ್ಥಾನವನ್ನು ಪಡೆದರು. 1902 ರಲ್ಲಿ ರಾಮನ್ ಮದ್ರಾಸ್ನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದ ನಂತರ  ಗಣಿತ ಹಾಗೂ ಭೌತಶಾಸ್ತ್ರವನ್ನು ಕಲಿಯಲು ಸಹಾಯವಾಯಿತು .1904 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಬಿಎ ಪದವಿಯನ್ನು ಪಡೆದರು ಹಾಗೂ ಪ್ರಥಮ ಸ್ಥಾನವನ್ನು ಪಡೆದರು. ಭೌತಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದರು.

ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಅವರು 1906ರಲ್ಲಿ ಬ್ರಿಟಿಷ್ ಜರ್ನಲ್ ಫಿಲಾಸಫಿಕಲ್ ಮ್ಯಾಗ್ಜಿನ್ ನಲ್ಲಿ ‘ಆಯತಾಕಾರದ ದ್ಯುತಿ ರಂದ್ರದಿಂದ ಅಸಮ ಪಾರ್ಶ್ವದ ವಿವರ್ತನೆ ಬ್ಯಾರಡ್ ಗಳು’ ಕುರಿತು ತಮ್ಮ ಮೊದಲ ವೈಜ್ಞಾನಿಕ ಪ್ರಬಂಧವನ್ನು ಪ್ರಕಟಿಸಿದರು. ಅದೇ ಸಮಯದಲ್ಲಿ ಅವರು M.A ಪದವಿಯನ್ನು ಸಹ ಪಡೆದರು. ಅದೇ ವರ್ಷ ಪ್ರಕಟವಾದ ಅವರ ಎರಡನೇ ಪ್ರಬಂಧವು’ ದ್ರವಗಳ ಮೇಲ್ಮೈ ಒತ್ತಡದ’ ಬಗ್ಗೆ ಪ್ರಕಟವಾದ ನಂತರ ಲಾರ್ಡ್ ರೇಲಿ ರಾಮನ್ ಎಂಬುವರು ಅವರೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದರು ಸೌಜನ್ಯದಿಂದ ಅವರನ್ನು’ ಪ್ರೊಫೆಸರ್’ ಎಂದು ಸಂಭೋಧಿಸಿದರು.

ರಾಮನ್‌ ಅವರ ವಿದ್ಯಾಭ್ಯಾಸದ ನಂತರ ಪ್ರವೇಶ ಪರೀಕ್ಷೆಯನ್ನು ಬರೆದು ಮೊದಲ ಸ್ಥಾನ ಸ್ಥಾನವನ್ನು ಸಾಧಿಸಿ ಭಾರತೀಯ ಹಣಕಾಸು ಸೇವೆಗೆ ಅರ್ಹತೆ ಪಡೆದರು. ಸಹಾಯಕ ಅಕೌಂಟೆಂಟ್ ಜನರಲ್ ಆಗಿ ಅವರನ್ನು ನಿಯೋಜಿಸಲಾಯಿತು. ಭಾರತದಲ್ಲಿ ಸ್ಥಾಪಿಸಲಾದ ಮೊದಲ ಸಂಶೋಧನಾ ಸಂಸ್ಥೆಯಾದ” ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್” ನಿಂದ ಅವರು ಪ್ರಭಾವಿತರಾದರು. ಸಂಶೋಧನೆ ನಡೆಸಲು ಅನುಮತಿ ಪಡೆದರು. 1909ರಲ್ಲಿ ಕರೆನ್ಸಿ ಅಧಿಕಾರಿಯ ಸ್ಥಾನವನ್ನು ತೆಗೆದುಕೊಳ್ಳಲು ರಾಮನ್ ಅವರನ್ನು ಬ್ರಿಟಿಷ್ ಬರ್ಮಾದ ರಂಗೂನ್ ಗೆ  ವರ್ಗಾಯಿಸಲಾಯಿತು. ತಂದೆಯವರ ನಿಧನರಾದ ಕಾರಣದಿಂದ ಅವರು ಮದ್ರಾಸಿಗೆ ಮರಳ ಬೇಕಾಯಿತು.1910 ರಲ್ಲಿ ಮಹಾರಾಷ್ಟ್ರದ ನಾಗಪುರಕ್ಕೆ ಅವರನ್ನು ವರ್ಗಾಯಿಸಲಾಯಿತು. ಒಂದು ವರ್ಷ ಸೇವೆ ಸಲ್ಲಿಸಿದ ನಂತರ 1911ರಲ್ಲಿ ಅಕೌಂಟೆಂಟ್ ಜನರಲ್ ಆಗಿ ಬಡ್ತಿ ನೀಡಲಾಯಿತು. 1915ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯವು IACS ನಲ್ಲಿ ರಾಮನವರ  ಅಡಿಯಲ್ಲಿ ಸಂಶೋಧನಾ ವಿದ್ವಾಂಸರನ್ನು ನಿಯೋಜಿಸಲು ಪ್ರಾರಂಭಿಸಿತು. 1919ರ ಹೊತ್ತಿಗೆ ರಾಮನ್ 12ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.

19 21ರಲ್ಲಿ ರಾಮನವರನ್ನು ಕಲ್ಕತ್ತಾ ವಿಶ್ವವಿದ್ಯಾಲಯದ ಗೌರವಾನ್ವಿತ ಡಿಎಸ್‌ಸಿ ಪದವಿ ನೀಡಿ ಗೌರವಿಸಲಾಯಿತು. 1924ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು .1926ರಲ್ಲಿ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಅನ್ನು ಪ್ರಾರಂಭಿಸಿದರು ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರಾಗಿ ನೇಮಕಗೊಂಡ ನಂತರ 1933ರಲ್ಲಿ ಕಲ್ಕತ್ತಾವನ್ನು ತೊರೆದರು.

 ರಾಮನ್ ರವರ ವೈಜ್ಞಾನಿಕ ಪರಿಶೋಧನೆ-

ರಾಮನ್ ಅವರ ಆಸಕ್ತಿಗಳಲ್ಲಿ ಸಂಗೀತದ ಶಬ್ದಗಳು ಪ್ರಮುಖ ವೈಜ್ಞಾನಿಕ ತಳಹದಿಯಾಗಿತ್ತು. ಭಾರತೀಯ ಡ್ರಮ್ಸ್, ತಬಲಾ, ಮೃದಂಗದ ಧ್ವನಿಗಳ ಹಾರ್ಮೋನಿಕ್ಸ್ ಸ್ವರೂಪದ ವಿಶ್ಲೇಷಣೆಯನ್ನು ಮಾಡಿದರು.  ಪಿಯಾನೋ ಫೋರ್ಟ್    ಸ್ಟ್ರಿಂಗ್ನನ   ಕಂಪನದ ಬಗ್ಗೆ ವಿಮರ್ಶಾತ್ಮಕ ಸಂಶೋಧನೆಯನ್ನು ಬರೆದರು. ಇದನ್ನು  ಕೌಫ್ಮನ್ನನ   ಸಿದ್ದಾಂತ ಎನ್ನಲಾಗುತ್ತದೆ. ಇಂಗ್ಲೆಂಡ್ ನ ಸಂಕ್ಷಿಪ್ತ ಭೇಟಿಯ ಸಮಯದಲ್ಲಿ ಲಂಡನ್ನ ಸೇಂಟ್ ಪೌಲ್ ಕ್ಯಾಥೆಡ್ರಲ್ ಗುಮ್ಮಟ ದ ವಿಸ್ಪರ್ರಿಂಗ್ ಗ್ಯಾಲರಿಯಲ್ಲಿ ಶಬ್ದವು ಹೇಗೆ ಚಲಿಸುತ್ತದೆ ಎಂಬುದನ್ನು ಅವರು ಅಧ್ಯಯನ ಮಾಡಿ ಯಶಸ್ವಿಯಾದರು. ಧ್ವನಿ ವಿಜ್ಞಾನದ ಮೇಲಿನ ಅವರ ಕೆಲಸವು ಒಂದು ಪ್ರಮುಖ ಸಂಶೋಧನೆಯಾಗಿದೆ. 

ಭೌತವಿಜ್ಞಾನದ ಇತಿಹಾಸವನ್ನು ಗಮನಿಸಿದಾಗ ಬೆಳಕಿನ ಬಗ್ಗೆ ಸಾಕಷ್ಟು ಚಿಂತನೆಗಳು ಹಲವಾರು ವರ್ಷಗಳಿಂದ  ನಡೆದು ಬಂದಿರುವ ಅಂಶವು ನಮಗೆ ತಿಳಿದು ಬರುತ್ತದೆ . ನ್ಯೂಟನ್ ಪ್ರತಿಪಾದಿಸಿದಂತೆ ಬೆಳಕೆನ್ನುವುದು ಶಕ್ತಿಶಾಲಿ ಕಣಗಳ ನಿರಂತರ ಧಾರೆ ಎಂದು ಪ್ರತಿಪಾದಿಸಿದ್ದಾರೆ. ಹೈಗನ್ ಹಾಗೂ ಮತ್ತಿತರ ಸಮಕಾಲೀನ ವಿಜ್ಞಾನಿಗಳು ಬೆಳಕೆನ್ನುವುದು ಅಲೆಗಳ ರೂಪದಲ್ಲಿದೆ ಎಂದು ಧ್ವನಿ ಎತ್ತಿದರು.ಬೆಳಕಿನ ಬಗ್ಗೆ ಹೀಗೆ ಸಾಕಷ್ಟು ಚಿಂತನೆಗಳು ಪ್ರಯೋಗಗಳು ಹಾಗೂ ನಿಯಮಗಳನ್ನ ಪ್ರತಿಪಾದಿಸಲಾಯಿತು.

1919ರಲ್ಲಿ ಬೆಳಕಿನ ಚದುರುವಿಕೆಯನ್ನು ಪತ್ತೆಮಾಡಲು ರಾಮನ್‌ ಅವರು ಪ್ರಾರಂಭಿಸಿದರು. ಸೆಪ್ಟೆಂಬರ್ 1921 ರಲ್ಲಿ ಎಸ್. ಎಸ್. ನರಕುಂದ ಹಡಗಿನಲ್ಲಿ ಇಂಗ್ಲೆಂಡಿನಿಂದ ಮನೆಗೆ ಪ್ರಯಾಣಿಸುವಾಗ ಮೆಡಿಟೇರಿಯನ್ ಸಮುದ್ರದ ನೀಲಿ ಬಣ್ಣದ ಬಗ್ಗೆ ಆಲೋಚಿಸಲು ಶುರು ಮಾಡಿದರು. ಲಾರ್ಡ್ ರೇಲಿಯವರು ಉತ್ತಮವಾದ ವಿವರಣೆ ಇದರ ಬಗ್ಗೆ ನೀಡಿದರು. ಗಾಡ ನೀಲಿ ಸಮುದ್ರದ ನೀರಿನ ಬಣ್ಣದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ,ಆದರೆ ಆಕಾಶದ ನೀಲಿ ಬಣ್ಣದ ಪ್ರತಿಬಿಂಬವಾಗಿದೆ ಎಂದರು. ರೇಲಿ ನೀಲಿ ಬಣ್ಣ ಚದುರುವಿಕೆ  ಎಂದು ಇದನ್ನು ಕರೆಯಲಾಯಿತು.

ರಾಮನ್ ಪರಿಣಾಮ –

1921 ರಲ್ಲಿ ಸೆಪ್ಟೆಂಬರ್ ನಲ್ಲಿ ಕಲ್ಕತ್ತಾ ಕ್ಕೆ ಹಿಂದಿರುಗಿ ದ್ರವಗಳಲ್ಲಿ ಬೆಳಕಿನ ಚದುರುವಿಕೆ ಸಂಬಂಧಿಸಿದಂತೆ ರಾಮನ್ ಅವರು ಪ್ರಯೋಗಗಳನ್ನು ನಡೆಸಿದರು. ಕೊಲ್ಕತ್ತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಶನ್ ಆಫ್ ಸೈನ್ಸ್ ನಲ್ಲಿ ರಾಮನವರು ತಮ್ಮ ಸಹೋದ್ಯೋಗಿ ಯಾದ  ಕೆ ಎಸ್ ಕೃಷ್ಣನ್ ಅವರೊಂದಿಗೆ  ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್ ಪರಿಣಾಮದ ಶೋಧವಾಗಿದೆ.

ಸಣ್ಣ ಕಣದ ಮೂಲಕ ಮೂಲಕ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಉಂಟಾಗುವ ಚದುರುವಿಕೆಯನ್ನು ರಾಮನ್ ಕಂಡುಹಿಡಿದರು. ಈ ಸಂಶೋಧನೆಗಾಗಿ 1930 ರಲ್ಲಿ ಅವರು ಭೌತವಿಜ್ಞಾನದಲ್ಲಿ ನೀಡಲಾದ ನೋಬಲ್ ಪ್ರಶಸ್ತಿಯನ್ನು ಪಡೆದಿದ್ದರು. ನೋಬೆಲ್ ಪಾರಿತೋಷಕ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ಭಾರತೀಯ ಭೌತವಿಜ್ಞಾನಿ ಎನಿಸಿಕೊಂಡರು. ಈ ಪರಿಣಾಮದ ಸಂಶೋಧನೆಗಾಗಿ ರಾಮನ್ ಖ್ಯಾತಿ ಪಡೆದಿದ್ದಾರೆ .

 

ಒಂದು ಏಕವರ್ಣೀಯ ಬೆಳಕು ಪಾರದರ್ಶಕ ಮಾಧ್ಯಮದ ಮೂಲಕ ಹಾದು ಹೋಗುವಾಗ ಆ ಮಾಧ್ಯಮದ ಅಣುಗಳೊಂದಿಗೆ ಅಂತರ್ವರ್ತಿಸಿ ಶಕ್ತಿಯನ್ನು ಕಳೆದುಕೊಳ್ಳುವುದರಿಂದ, ಇಲ್ಲವೇ ಪಡೆಯುವುದರಿಂದ ಬೆಳಕಿನ ಆವರ್ತಂಕದಲ್ಲಿ ಬದಲಾವಣೆಯಾಗಿ ಹೆಚ್ಚುವರಿ ರೋಹಿತ ರೇಖಗಳು ಕಾಣಿಸಿಕೊಳ್ಳುವ ವಿದ್ಯಮಾನವೇ ರಾಮನ್ ಪರಿಣಾಮವಾಗಿದೆ.

1982ರಲ್ಲಿ ರಾಮನ್ ಅವರ ಶತಮಾನೋತ್ಸವದ ಸಂದರ್ಭದಲ್ಲಿ ರಾಮನ್ ಅವರ ಕೊಡುಗೆಯ ಸ್ಮರಣಾರ್ಥವಾಗಿ ಕೃತಜ್ಞತೆಯಿಂದ ಭಾರತದಲ್ಲಿ ಫೆಬ್ರವರಿ 28 ರನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸಿ,  ಆಚರಣೆ ಮಾಡಲಾಗುತ್ತಿದೆ.   ರಾಮನ್ ಪರಿಣಾಮವನ್ನು ಪ್ರಪಂಚಕ್ಕೆ  ಪರಿಚಯಿಸಲಾದ ಫೆಬ್ರವರಿ 28ನ್ನು ದೇಶಾದ್ಯಂತ ವಿಜ್ಞಾನ ದಿನವನ್ನಾಗಿ 1987ರಿಂದ ಆಚರಿಸಲಾಗುತ್ತಿದೆ.

ವಿಜ್ಞಾನ ಪ್ರಪಂಚದಲ್ಲಿ ವೈಜ್ಞಾನಿಕ ಅನ್ವೇಷಣೆ ,ಆವಿಷ್ಕಾರ ಹೊಸದೇನಲ್ಲ. ಆದರೆ ಈ ಸಾಧನೆ ಸಾಧಕರ ಸ್ವತ್ತು ಹಗಲು- ರಾತ್ರಿ ಎನ್ನದೆ, ಸತತ ಕಠಿಣ ಪರಿಶ್ರಮ ಮಾಡಿ ,ಸೋಲನ್ನು ಎದುರಿಸಿ  ನಿರಂತರ ಪ್ರಯೋಗ, ಹೊಸ ಹೊಸತನವನ್ನು ಕಂಡುಹಿಡಿಯುವ ಕೆಚ್ಚು   ಸಂಶೋಧನಾ ಪ್ರವೃತ್ತಿ, ಹಿಡಿದಿರುವ ಕೆಲಸವನ್ನು ಕೈಬಿಡದೆ ಸಾಧಿಸುವುದು, ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ,ಧೈರ್ಯಗುಂದದೆ  ಮುನ್ನುಗುವುದು, ವಿಜ್ಞಾನಿಗಳ ಹಾಗೂ ಸಾಧಕರ ಪ್ರವೃತ್ತಿಯಾಗಿದೆ .ರಾಮನ್ರ  ರಾಮನ್ ಪರಿಣಾಮವು ಇದಕ್ಕೆ ಒಂದು ಸೂಕ್ತ ಉದಾಹರಣೆಯಾಗಿದೆ.




ಭಾರತದಲ್ಲಿ ರಾಮನ್ನರ ಸ್ಮರಣಾರ್ಥಕವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಹೆಮ್ಮೆಯಿಂದ ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳಲ್ಲಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ,ವಿಜ್ಞಾನದ ಪರಿಕಲ್ಪನೆಗಳ ಬಗ್ಗೆಆಧರ , ವಿಜ್ಞಾನದ ತಾರ್ಕಿಕ ಚಿಂತನೆಯನ್ನು ಅವರಲ್ಲಿ ಬಡಿದೇಳುಸುವ ಒಂದು ದಿನವೂ ಆಗಿದೆ. ವಿಜ್ಞಾನಿಗಳ ಕೊಡುಗೆ ಹಾಗೂ ವೈಜ್ಞಾನಿಕ ಆವಿಷ್ಕಾರಗಳು ಅಜರಾಮರ ಅವುಗಳಿಗೆ ಎಂದೂ ಸಾವಿಲ್ಲಎಂಬುದಕ್ಕೆ ಈ ಆಚರಣೆಗಳು ಸ್ಪಷ್ಟ ನಿದರ್ಶನವಾಗಿದೆ.


 

 

 

 

 

 

 

"ಕ್ಯಾನ್ಸರ್ ರೋಗಕ್ಕೆ ಅಂಜದೆ,ಧೈರ್ಯದಿಂದ ಜೀವನ ಸಾಗಿಸಿ" ~ಅದಕ್ಕು ಉಂಟು ಮದ್ದು

"ಕ್ಯಾನ್ಸರ್ ರೋಗಕ್ಕೆ ಅಂಜದೆ, ಧೈರ್ಯದಿಂದ ಜೀವನ ಸಾಗಿಸಿ" ಅದಕ್ಕು ಉಂಟು ಮದ್ದು 

ಲೇಖನ: ಬಸವರಾಜ ಎಮ್ ಯರಗುಪ್ಪಿ,        ಬಿ ಆರ್ ಪಿ ಶಿರಹಟ್ಟಿ, ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ, ಜಿಲ್ಲಾ ಗದಗ, 

ಕ್ಯಾನ್ಸರ್‌ ಮಾಹಾ ಮಾರಿ ವಿಶ್ವದಾದ್ಯಂತ ಲಕ್ಷಾಂತರ ಜೀವಗಳನ್ನೇ ಬಲಿ ತೆಗೆದುಕೊಂಡಿದೆ.  ಸಹಸ್ರಾರು ಕುಟುಂಬಗಳನ್ನು ಬೀದಿಪಾಲು ಮಾಡಿದೆ. ಜಾಗೃತಿಯೇ ಇದಕ್ಕೆ ಮಹಾಮದ್ದು.  ಫೆಬ್ರುವರಿ 04: ವಿಶ್ವ ಕ್ಯಾನ್ಸರ್ ದಿನದ ನಿಮಿತ್ತ ವಿಶೇಷ ಲೇಖನ ಬರೆದಿದ್ದಾರೆ ಬಸವರಾಜ ಎಮ್ ಯರಗುಪ್ಪಿಯವರು.

ಮೊನ್ನೆ ತಾನೇ ಸುದ್ದಿ ಮಾಧ್ಯಮಗಳಲ್ಲಿ ಬಾಲಿವುಡ್ ನ ಪೂನಮ್ ಪಾಂಡೆ ಎಂಬ ರೂಪದರ್ಶಿ,‌ ನಟಿ   ಕ್ಯಾನ್ಸರ್ ಗೆ  ಬಲಿಯಾಗಿದ್ದಾಳೆ ಎಂಬ ಸುಳ್ಸುದ್ದಿ ದೊಡ್ಡ ಸದ್ದು ಮಾಡಿತ್ತು. ಅದೇನೆ ಇರಲಿ ಈ ರೋಗವಂತೂ ಅಪಾಯಕಾರಿ.

"ಕ್ಯಾನ್ಸರ್ ನಮ್ಮ ಜೀವನದ ಒಂದು ಭಾಗವಾಗಿದೆಯೇ ಹೊರತೂ ಅದು ನಮ್ಮ ಇಡೀ ಜೀವನವಲ್ಲ"ಎಂದು ನಿಕ್ ಪ್ರೊಚಾಕ್ ಹೇಳಿರುವಂತೆ ಕ್ಯಾನ್ಸರ್ ರೋಗಕ್ಕೆ ಅಂಜದೆ ಧೈರ್ಯದಿಂದ ಜೀವನ ಸಾಗಿಸಬೇಕು ಹಾಗು ಕ್ಯಾನ್ಸರ್ ಒಂದು ಪದ, ಒಂದು ವಾಕ್ಯವಲ್ಲ ಎಂದು ಹೇಳಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಯಾವ ವ್ಯಕ್ತಿಗೆ ಯಾವ ಕಾಯಿಲೆ ಇದೆ ಅಥವಾ ಯಾವ ವ್ಯಕ್ತಿ ಕಾಯಿಲೆಗೆ ತುತ್ತಾಗುತ್ತಾನೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಬದಲಾಗುತ್ತಿರುವ ಕಾಲದಲ್ಲಿ,ರೋಗಗಳು ಒಂದರ ನಂತರ ಒಂದರಂತೆ ಬರುತ್ತಿವೆ. ಅವು ಜನರನ್ನು ಹೆದರಿಸುತ್ತಿವೆ. 2020 ರಲ್ಲಿ ಕರೋನಾವೈರಸ್ (ಕೋವಿಡ್ 19) ಎಂಬ ಸಾಂಕ್ರಾಮಿಕ ರೋಗವು ಇಡೀಜಗತ್ತನ್ನು ಬೆಚ್ಚಿಬೀಳಿಸಿದೆ.ಈಗಲೂ ಅದೇ ಅಂಜಿಕೆಯಲ್ಲಿ ಜನರು ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್ (ಅರ್ಬುದ) ಕೂಡ ಒಂದು.

ವಿಶ್ವದ ಎಲ್ಲಾ ಕಾಯಿಲೆಗಳಲ್ಲಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವದಾದ್ಯಂತ "ವಿಶ್ವ ಕ್ಯಾನ್ಸರ್" ದಿನವನ್ನು ಆಚರಿಸಲಾಗುತ್ತದೆ. 

ಕನ್ನಡದಲ್ಲಿ ಕ್ಯಾನ್ಸರ್ ಅನ್ನು ಅರ್ಬುದ ರೋಗ ಎಂದು ಕರೆಯಲಾಗುತ್ತದೆ.ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗೆ ಬಂದಾಗ, ಅದರ ತಡೆಗಟ್ಟುವಿಕೆಯ ಮೊದಲ ಹೆಜ್ಜೆಯೇ ಜಾಗೃತಿಯಾಗಿದೆ.ನಾವು ಎಲ್ಲದಕ್ಕೂ ಪರಿಹಾರವನ್ನು ಕಂಡುಕೊಂಡಿದ್ದೇವೆ ಆದರೆ ಇನ್ನೂ ಕ್ಯಾನ್ಸರ್ ರೋಗಿಗಳ ಮಾರಣಾಂತಿಕ ಸಮಸ್ಯೆ ಹಾಗೇ ಉಳಿದಿದೆ.ಇದು ನಮ್ಮೆಲ್ಲರಲ್ಲಿ ಅದರ ಬಗ್ಗೆ ಹುಟ್ಟುಹಾಕುವ ಅರಿವಿನ ಗುರಿಯನ್ನು ಹೊಂದಬೇಕಾಗಿದೆ.ಮೊದಲು ಕ್ಯಾನ್ಸರ್ ರೋಗದ ತೀವ್ರತೆಯ ಬಗ್ಗೆ ತಿಳುವಳಿಕೆಯನ್ನು ನೀಡಬೇಕಾಗಿದೆ ಮತ್ತು ನಂತರ ಅದರ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸಲು ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಅದರಲ್ಲಿ ನಮ್ಮ ಕೊಡುಗೆಯನ್ನು ನೀಡುತ್ತೇವೆ ಮತ್ತು ಉತ್ತಮವಾದ ಜಾಗತಿಕ ಆರೋಗ್ಯ ಪರಿಸರಕ್ಕೆ ದಾರಿ ಮಾಡಿಕೊಡುತ್ತೇವೆ ಎಂದು ಶಪಥಗೈಯುವಂತರಾಗೋಣ. 

#ವಿಶ್ವ ಕ್ಯಾನ್ಸರ್ ದಿನ ಆಚರಿಸುವುದರ ಹಿನ್ನಲೆ ಮತ್ತು ಉದ್ದೇಶಗಳು:

ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಪ್ರತಿ ವರ್ಷ ಕ್ಯಾನ್ಸರ್ ದಿನವನ್ನು ಆಚರಿಸುತ್ತದೆ.ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ.ಈ ದಿನವನ್ನು ಫೆಬ್ರವರಿ 04, 1933 ರಂದು ಆಚರಿಸಲು ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ಇದರ ಹಿಂದಿನ ಉದ್ದೇಶವೆಂದರೆ ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಅದನ್ನು ತಪ್ಪಿಸುವ ಮಾರ್ಗೋಪಾಯಗಳ ಬಗ್ಗೆ ಜಾಗೃತಿಗೊಳಿಸುವುದು.  ದೇಹದಲ್ಲಿ ಯಾವುದೇ ರೀತಿಯ ಅಸಾಮಾನ್ಯ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆಯಲು ಆರಂಭಿಸಿದರೆ, ಆಗ ಅದು ದೇಹವಿಡಿ ವ್ಯಾಪಿಸಿ ಹಾನಿ ಉಂಟು ಮಾಡುತ್ತದೆ. ಇದು ಹೊಸ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ.ಕ್ಯಾನ್ಸರ್ ಗಡ್ಡೆಗಳನ್ನು ಚಿಕಿತ್ಸೆ ಮೂಲಕ ನಾಶ ಮಾಡಿ ಅದು ಮತ್ತೆ ಬೆಳೆಯದಂತೆ ಮಾಡಲಾಗುತ್ತದೆ.

#ಅರ್ಬುದ ರೋಗಕ್ಕೆ ಕಾರಣಗಳೇನು ...? 

ಕ್ಯಾನ್ಸರ್ ರೋಗಕ್ಕೆ ನಿರ್ದಿಷ್ಟ ಕಾರಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಹಲವು ಕಾರಣಗಳು ಸೇರಿ ಕ್ಯಾನ್ಸರ್ ಸಂಭವಿಸುತ್ತವೆ.ಜೊತೆಗೆ ಪರಿಸರದಲ್ಲಿನ ಪರಿಸ್ಥಿತಿಗಳು ಮುಖ್ಯ ಕಾರಣ.ವಿಕಿರಣ, ಕೆಲವು ವೈರಸ್ಸೋಂಕುಗಳು, ಜೀವಕೋಶಗಳ ಕಾರ್ಯಪ್ರವೃತ್ತಿಯನ್ನು ಬದಲಿಸಿ ಕ್ಯಾನ್ಸರ್ ಕಾರಕಗಳನ್ನಾಗಿ ಮಾಡುತ್ತದೆ. ಇದರೊಂದಿಗೆ ವಯಸ್ಸು, ಲಿಂಗ, ಪರಿಸರ, ವಂಶಾವಳಿ ಮುಂತಾದವು ಕೂಡ ಕ್ಯಾನ್ಸರ್ಕಾರಕವಾಗಿ ಪರಿಣಮಿಸಬಹುದು.

ತಂಬಾಕಿನ ಸೇವನೆಯಿಂದ ಹಿಡಿದು ಧೂಮಪಾನ, ಮದ್ಯಪಾನ, ತಪ್ಪು ಆಹಾರಪದ್ಧತಿಗಳು, ಎ ಹಾಗೂ ಸಿ ವಿಟಮಿನ್ ಕೊರತೆ, ಆಹಾರದಲ್ಲಿ ಕೃತಕ ರಾಸಾಯನಿಕಗಳ ಹೆಚ್ಚುಹೆಚ್ಚು ಬಳಕೆ, ಬದಲಾದ ಜೀವನಶೈಲಿಯಿಂದ ಹೆಚ್ಚುತ್ತಿರುವ ಬೊಜ್ಜು ಹಾಗೂ ಹೆಚ್ಚಾಗುತ್ತಿರುವ ಹಾರ್ಮೋನು ಅಸಮತೋಲನ, ಹೆಚ್ಚುತ್ತಿರುವ ರಾಸಾಯನಿಕ ಸೌಂದರ್ಯ ವರ್ಧಕಗಳ ಬಳಕೆ ಹಾಗೂ ಸೂರ್ಯನ ಅತಿಯಾದ ಅಲ್ಟ್ರಾವೈಲೆಟ್ ಕಿರಣಗಳಿಗೆ ಹಾಗೂ ಇತರ ವಿಕಿರಣ ವಸ್ತುಗಳಿಗೆ ತೆರೆದುಕೊಳ್ಳುವುದು ಹೀಗೆ ಕ್ಯಾನ್ಸರ್ಗೆ ಹತ್ತುಹಲವು ಕಾರಣಗಳಾಗಿವೆ ಎಂದು ವೈದ್ಯರು ಹೇಳುತ್ತಾರೆ.

#ಕ್ಯಾನ್ಸರ್ ತಡೆಗಟ್ಟುವುದು ಹೇಗೆ..?

 

*ತಂಬಾಕುಗೆ ಸರ್ಕಾರದ ನಿಯಂತ್ರಣಾ ವಿಧಾನಗಳು:

ಸರ್ಕಾರ ಈ ಕೆಳಗಿನಂತೆ ಕೆಲವು ನಿಯಂತ್ರಣಾ ವಿಧಾನಗಳನ್ನು ಹಾಕಿಕೊಂಡರೆ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. 

-ಎಲ್ಲಾ ತಂಬಾಕು ಉತ್ಪನ್ನಗಳಲ್ಲಿ ನಿಯಮಿತವಾಗಿ ತೆರಿಗೆಗಳನ್ನು ಹೆಚ್ಚಿಸುವುದು.

-ಹೊಸ ತಂಬಾಕು ಉತ್ಪನ್ನಗಳ ಪರಿಚಯವನ್ನು ನಿಷೇಧಿಸುವುದು. 

-ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿನ ಬಳಕೆಯನ್ನು ನಿಷೇಧಿಸಬೇಕು.                           

-ಆಲ್ಕೊಹಾಲ್ ಸೇವನೆಯನ್ನು ತಪ್ಪಿಸುವುದು. 

-ಆಹಾರದಲ್ಲಿ ತರಕಾರಿ, ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಸಂಭಾವ್ಯ ಕ್ಯಾನ್ಸರ್​ ಲಕ್ಷಣಗಳನ್ನು ತಡೆಗಟ್ಟುತ್ತವೆ. 

-ಕಡಿಮೆ ಕೊಬ್ಬಿನ ಆಹಾರ ಸೇವನೆ. 

-ನಿಯಮಿತ ವ್ಯಾಯಾಮ. 

-ಜೀವನದುದ್ದಕ್ಕೂ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು. 

ಒಟ್ಟಾರೆಯಾಗಿ ನಾವೆಲ್ಲರೂ ಒಂದಾಗಿ ಸಮಾಜದಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಬದಲಾವಣೆ ತರಲು ಪ್ರಯತ್ನಿಸೋಣ.ಕ್ಯಾನ್ಸರ್ ವಿರುದ್ಧ ಸಮರ ಸಾರಿರುವ ನಮ್ಮ ವೈದ್ಯಲೋಕದ ಸ್ಥೈರ್ಯವನ್ನು ಹೆಚ್ಚಿಸೋಣ,ಕ್ಯಾನ್ಸರ್ ಗುಣಪಡಿಸಲು ಪ್ರಯತ್ನಿಸುತ್ತಿರುವ ವೈದ್ಯಲೋಕಕ್ಕೆ ನಮ್ಮ ಬೆಂಬಲ ನೀಡೋಣ, ಕ್ಯಾನ್ಸರ್ ನಿಂದ ಬಳಲುತ್ತಿರುವವರಲ್ಲಿ ಆತ್ಮವಿಶ್ವಾಸ ಮೂಡಿಸೋಣ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತರಾಗೋಣ.