ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, March 4, 2024

ಪರಮಾಣು ರಚನಾ ಸಿದ್ಧಾಂತದ ಪಿತಾಮಹ – ನಿಕೊಲಸ್‌ ಬೇಕರ್‌ !!!!


ಪರಮಾಣು ರಚನಾ ಸಿದ್ಧಾಂತದ ಪಿತಾಮಹನಿಕೊಲಸ್‌ ಬೇಕರ್‌  !!!!


                           ಲೇ : ರಾಮಚಂದ್ರ ಭಟ್‌ ಬಿ.ಜಿ                                                                             


                                         ಭಾಗ -೨ 

ಹಿಂದಿನ ಸಂಚಿಕೆಯಲ್ಲಿ ಅಕ್ವ ರಿಜಿಯ ಅನೇಕ ಮಹಾನ್‌ ವಿಜ್ಞಾನಿಗಳ ತಲೆ ಕಾಯ್ದ ರೋಚಕ ಘಟನೆಯನ್ನೂ ನೀಲ್ಸ್‌ ಬೋರರ ಆರಂಭಿಕ ದಿನಗಳ ಕಥೆಯನ್ನು ಓದಿದಿರಿ. ಈ ಸಂಚಿಕೆಯಲ್ಲಿ ಬೋರರ ಸ್ಫೂರ್ತಿಯುತ ಬದುಕಿನ ಸಾಧನೆಯನ್ನು ತಿಳಿಯುವಿರಿ.

 ಅದು 1911 ಡಿಸೆಂಬರ್ 6ರ ಒಂದು ಸುಂದರ ಸಂಜೆ!!! ಹಲವಾರು ವಿಜ್ಞಾನಿಗಳು, ವಿದ್ಯಾರ್ಥಿಗಳು ಸಂತೋಷ ಕೂಟವೊಂದರಲ್ಲಿ ಸೇರಿದ್ದರು. ಹಾಡು ನೃತ್ಯಗಳಿಂದ ಸಮಾರಂಭ ಕಳೆಟ್ಟಿತ್ತು. ವಿಜ್ಞಾನಕ್ಕೆ ಸಂಬಂಧಪಟ್ಟಂತಹ ಹಲವು ಹಾಡುಗಳನ್ನು ಹೇಳುತ್ತಾ ಭೌತಶಾಸ್ತ್ರದ ಕುರಿತಾದ ಹಾಸ್ಯ ಚಟಾಕಿ ಹಾರಿಸುತ್ತಾ, ವಿದ್ಯಾರ್ಥಿಗಳು ಮೋಜು ಮಸ್ತಿ ಮಾಡುತ್ತಿದ್ದರು!!! ಊಟದೊಂದಿಗೆ ಪ್ಲಮ್ ಪುಡ್ಡಿಂಗ್ ವ್ಯವಸ್ಥೆ ಮಾಡಲಾಗಿತ್ತು!! ಜೆ.ಜೆ.ಯವರ ಪ್ಲಮ್ ಪುಡ್ಡಿಂಗ್ ಪರಮಾಣು ಮಾದರಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು!!” ಇದೇ ಹಾಸ್ಯ ಚಟಾಕಿಗೆ ಕಾರಣವಾಗಿತ್ತು. ಈ ವಿಜ್ಞಾನಿಗಳೂ ಅದೆಷ್ಟು ತರ್ಲೆ ಇರಬೇಕು? ಜೆ.ಜೆ.ಯ ಪ್ರಿಯಶಿಷ್ಯ ರುದರ್ಫೋರ್ಡರೂ ಕೂಡ ಆ ಪಾರ್ಟಿಯಲ್ಲಿದ್ದರು. ಸುಮಾರು 9 ತಿಂಗಳ ಹಿಂದೆಯಷ್ಟೇ ರುದರ್ಫೋರ್ಡ್ ತಮ್ಮ ಪರಮಾಣು ಮಾದರಿಯನ್ನು ಪ್ರಸ್ತಾಪಿಸಿದ್ದರು. ಇದು ಯಾವುದೇ ಆಹಾರ ವಸ್ತುವಿಗೆ ಸಂಬಂಧಪಡದ ಮಾದರಿಯಾಗಿತ್ತು!! ಇದು ಪ್ರೊಫೆಸರ್ ಜೆಜೆಯವರ ಮಾದರಿಗಿಂತ ಉತ್ತಮ ಮಾದರಿ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಅಷ್ಟೊತ್ತಿಗಾಗಲೇ 40ರ ಹರೆಯದ ರುದರ್ ಫೋರ್ಡ್ ಆಲ್ಫಾ, ಬೀಟಾ ವಿಕಿರಣಗಳನ್ನು ಸಂಶೋಧಿಸಿದ್ದರು. ವಿಕಿರಣಪಟು ಧಾತುಗಳ ಅರ್ಧಾಯುಷ್ಯದ ಬಗ್ಗೆಯೂ ಸಂಶೋಧನೆ ನಡೆಸಿದ್ದರು. ವಿಕಿರಣ ಪಟುತ್ವದಿಂದ ದ್ರವ್ಯಾಂತರಣವಾಗುತ್ತದೆ ಪರಮಾಣುವಿನ ಪ್ರೋಟಾನ್‌ಗಳ ಅಥವಾ ಪರಮಾಣು ಸಂಖ್ಯೆಯನ್ನು ಬದಲಾಯಿಸಬಹುದೆಂದೂ ಕಂಡುಕೊಂಡಿದ್ದರು. ಅದಕ್ಕಾಗಿ ನೋಬೆಲ್ ಪ್ರಶಸ್ತಿಯನ್ನು ಕೂಡ ಬಾಚಿಕೊಂಡಿದ್ದರು. ಅದೇ ರೀತಿ ಲೋಹಗಳಿಗೆ ಆಲ್ಫಾ ಕಣಗಳಿಂದ ತಾಡಿಸಿದಾಗ ಅವು ಹಿಂಪುಟಿದು ಬರುತ್ತವೆ ಎನ್ನುವುದನ್ನು ತಿಳಿದುಕೊಂಡಿದ್ದರು. ಈ ಆಲ್ಫಾ ಕಣಗಳಿಂದ ಪರಮಾಣುವನ್ನು ತಾಡಿಸಿದಾಗ ಉಂಟಾದ ಫಲಿತಾಂಶವೇ ಪರಮಾಣುವಿನ ನ್ಯೂಕ್ಲಿಯಸ್‌ನ ಸಂಶೋಧನೆಗೆ ಕಾರಣವಾಯಿತು. 1911 ರ ಮಾರ್ಚ್ 7ರಂದು ತನ್ನ ಸಂಶೋಧನಾ ಲೇಖನದಲ್ಲಿ ಪರಮಾಣುವಿನ ನ್ಯೂಕ್ಲಿಯಸ್ ಧನ ವಿದ್ಯುತ್ ಆವೇಶವನ್ನು ಹೊಂದಿದೆ ಎನ್ನುವುದನ್ನು ಪ್ರಕಟಿಸಿದರು.

 ಅದೇ ಸಂದರ್ಭದಲ್ಲಿ ಹಂಟರೊ ನಾಗವೋಕ Hantaro Nagaoka (1865-1950)  ಎಂಬ ಜಪಾನಿನ ವಿಜ್ಞಾನಿ ಪರಮಾಣು ಕೇಂದ್ರದಲ್ಲಿ ಧನ ವಿದ್ಯುತ್ ಆವೇಶವನ್ನು ಹೊಂದಿದ್ದು ಸುತ್ತಲೂ  ರಚನೆ ಶನಿಯ ಉಂಗುರಗಳಂತಹ ರಚನೆಯನ್ನು ಹೋಲುತ್ತದೆ ಎಂಬ ತರ್ಕವನ್ನು ಮುಂದಿಟ್ಟಿದ್ದರು. ರುದರ್ ಫೋರ್ಡರು ಎಲೆಕ್ಟ್ರಾನ್‌ಗಳ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ!!!  ಹಗುರವಾಗಿರುವ ಎಲೆಕ್ಟ್ರಾನ್‌ಗಳು ಧನ ನ್ಯೂಕ್ಲಿಯಸ್‌ನ ಸುತ್ತ ಗ್ರಹಗಳಂತೆ ಸುತ್ತುತ್ತಿದ್ದರೂ ಅದು ಈ ಎಲೆಕ್ಟ್ರಾನ್‌ಗಳನ್ನು ಏಕೆ ಸೆಳೆದುಕೊಳ್ಳುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ನ್ಯೂಕ್ಲಿಯಸ್‌ನ ಸುತ್ತಲೂ ವೇಗವಾಗಿ ಸುತ್ತುವ ಎಲೆಕ್ಟ್ರಾನ್‌ಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ನ್ಯೂಕ್ಲಿಯಸ್‌ಗೆ ಅಪ್ಪಳಿಸಿ ನಾಶವಾಗಬೇಕಾಗಿತ್ತು. ಹಾಗಾಗಿದ್ದರೆ, ಪರಮಾಣುವಿನ ಅಸ್ತಿತ್ವವೇನು? ನಮ್ಮ ಅಸ್ತಿತ್ವವೂ ಇರುತ್ತಿರಲಿಲ್ಲ. ಆದರೆ ಪರಮಾಣು ಸ್ಥಿರವಾಗಿದೆ ಎನ್ನುವುದು ಸರ್ವವೇದ್ಯ. ಹೀಗಾಗಿ, ರುದರ್‌ಫೋರ್ಡರ ಈ ಪರಮಾಣು ರಚನೆ ಅಷ್ಟಾಗಿ ಯಾವ ವಿಜ್ಞಾನಿಯ ಗಮನವನ್ನೂ ಸೆಳೆಯಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಆದರೆ ಈ ರಚನೆಯ ಬಗ್ಗೆ ಮೊದ-ಮೊದಲು ತಲೆಕೆಡಿಸಿಕೊಳ್ಳ ದಿದ್ದರೂ ನಿಧಾನಕ್ಕೆ ಒಬ್ಬ ವಿಜ್ಞಾನಿಯ ತಲೆಕೆಡಿಸಿತ್ತು ಆ ವಿಜ್ಞಾನಿ ಇನ್ಯಾರು ಅಲ್ಲ ನೀಲ್ಸ್ ಬೋರ್!!!

 1911ರ ಆ ಪಾರ್ಟಿಯಲ್ಲಿ ನೀಲ್ಸ್ ಬೋರ್ರವರ ಬದುಕಿಗೆ ತಿರುವು ನೀಡಬಲ್ಲ ತೀರ್ಮಾನವೊಂದನ್ನು ತೆಗೆದುಕೊಳ್ಳಲು ಪ್ರೇರಣೆ ನೀಡಿತು. ನಾನು ನನ್ನ ಗುಣಕ್ಕೆ ಹೊಂದಾಣಿಕೆಯಾಗದ ವ್ಯಕ್ತಿಯೊಂದಿಗೆ ಕೆಲಸ ಮಾಡಲು ಹವಣಿಸುತ್ತಿದ್ದೇನೆ ಎಂದು ಬೋರ್‌ಗೆ ಖಾತ್ರಿಯಾಯಿತು.!!! ನೀಲ್ಸ್ ಬೋರ್‌ರವರು ಜೆ.ಜೆ.ಥಾಮ್ಸನ್‌ರವರನ್ನು ಭೇಟಿಮಾಡಿ ತಾನು ಮ್ಯಾಂಚೆಸ್ಟರ್‌ನಲ್ಲಿ ರುದರ್ಫೋರ್ಡರೊಂದಿಗೆ ವಿಕಿರಣ ಪಟುತ್ವದ ಬಗ್ಗೆ ಸಂಶೋಧನೆ ಮಾಡಲು ಅನುಮತಿ ನೀಡುವಂತೆ ಕೋರಿದರು. ಜೆ.ಜೆ. ಥಾಮ್ಸನ್‌ರವರು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರು. 1912ರ ಮಾರ್ಚ್ ತಿಂಗಳಿನಲ್ಲಿ ನೀಲ್ಸ್ ಬೋರ್ ಮ್ಯಾಂಚೆಸ್ಟರ್‌ಗೆ ಪಯಣಿಸಿದರು. ಇದು ಅವರ ಬದುಕಿನ ಯಶಸ್ವಿ ಪಯಣದ ಆರಂಭವಾಗಿತ್ತು.

ತಮ್ಮ ಸಹೋದರನಿಗೆ ಬರೆದ ಪತ್ರದಲ್ಲಿ ತಾನು ಮ್ಯಾಂಚೆಸ್ಟರ್‌ನಲ್ಲಿ ಅತ್ಯುತ್ತಮ ಸಂಶೋಧಕ ಸ್ಫೂರ್ತಿದಾಯಕ, ಕ್ರಿಯಾಶೀಲ ಮಹಾನ್ ವ್ಯಕ್ತಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು. ಕೆಲವು ವಾರಗಳ ಅಧ್ಯಯನದ ನಂತರ ಪ್ರಾಯೋಗಿಕ ಸಂಶೋಧನೆ ತನಗೆ ಹೊಂದುವ ಕ್ಷೇತ್ರವಲ್ಲ ಎನ್ನುವುದನ್ನು ಅರಿತುಕೊಂಡರು. ತಾವು ಸೈದ್ಧಾಂತಿಕ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡುವುದಾಗಿ ರುದರ್ಫೋರ್ಡರಿಗೆ ತಿಳಿಸಿದರು. ಮೊದಲಿನಿಂದಲೂ ರುದರ್ಫೋರ್ಡರಿಗೆ ಪ್ರಾಯೋಗಿಕ ಸಂಶೋಧನೆಯನ್ನು ಒಲ್ಲದ ಸೈದ್ಧಾಂತಿಕ ಸಂಶೋಧನೆಯ ವಿಜ್ಞಾನಿಗಳ ಬಗ್ಗೆ ಅಷ್ಟಾಗಿ ಉತ್ತಮ ಅಭಿಪ್ರಾಯವಿರಲಿಲ್ಲ. ಆದರೆ ನೀಲ್ಸ್ ಬೋರರಿಗೆ ಈ ಅಭಿಪ್ರಾಯದಿಂದ ಪೂರ್ಣವಿನಾಯಿತಿ ನೀಡಿದ್ದರು!!! ಅದಕ್ಕೆ ಮತ್ತೊಂದು ಕಾರಣವೂ ಇತ್ತು. ಅದು ನೀಲ್ಸ್ ಬೋರ್ ಉತ್ತಮ ಫುಟ್ಬಾಲ್ ಆಟಗಾರನಾಗಿದ್ದುದು.

ಬೋರ್ ಕ್ವಾಂಟಮ್ ಮೆಕ್ಯಾನಿಕ್ಸ್ ತತ್ವಗಳನ್ನು ಬಳಸಿ ರುದರ್‌ಫೋರ್ಡರ ಪರಮಾಣು ಮಾದರಿಯನ್ನು ಸುಧಾರಿಸಿದರು.

i) ಹೈಡ್ರೋಜನ್ ಪರಮಾಣುವಿನಲ್ಲಿರುವ ಇಲೆಕ್ಟ್ರಾನ್ ನ್ಯೂಕ್ಲಿಯಸ್‌ನ ಸುತ್ತ ನಿರ್ದಿಷ್ಟ ತ್ರಿಜ್ಯ ಮತ್ತು ಶಕ್ತಿಯ ವೃತ್ತಾಕಾರದ ಪಥದಲ್ಲಿ ಚಲಿಸಬಹುದು. ಈ ಪಥವನ್ನು ಕಕ್ಷೆಗಳು, ಸ್ಥಾಯಿಸ್ಥಿತಿಗಳು ಅಥವಾ ಪರಿಮಿತಿಯ ಚೈತನ್ಯ ಮಟ್ಟಗಳೆಂದು ಕರೆಯಲಾಗುತ್ತದೆ. ಈ ಕಕ್ಷೆಗಳನ್ನು ನ್ಯೂಕ್ಲಿಯಸ್ ಕೇಂದ್ರಿಕೃತವಾಗಿ ಜೋಡಿಸಲಾಗಿದೆ.

ii) ಕಕ್ಷೆಯಲ್ಲಿರುವ ಇಲೆಕ್ಟ್ರಾನ್‌ನ ಶಕ್ತಿಯು ಕಾಲದೊಡನೆ ಬದಲಾವಣೆ ಹೊಂದುವುದಿಲ್ಲ. ಆದಾಗ್ಯೂ ಇಲೆಕ್ಟ್ರಾನ್ ಅಗತ್ಯವಿರುವ ಶಕ್ತಿಯನ್ನು ಹೀರಿಕೊಂಡು ಕಡಿಮೆ ಚೈತನ್ಯ ಮಟ್ಟದಿಂದ ಅಧಿಕ ಚೈತನ್ಯ ಮಟ್ಟಕ್ಕೆ ಚಲಿಸುತ್ತವೆ ಅಥವಾ ಇಲೆಕ್ಟ್ರಾನ್ ಅಧಿಕ ಚೈತನ್ಯ ಮಟ್ಟದಿಂದ ಕಡಿಮೆ ಚೈತನ್ಯ ಮಟ್ಟಕ್ಕೆ ಚಲಿಸಿದಾಗ ಶಕ್ತಿಯು ಹೊರಹೊಮ್ಮುತ್ತದೆ. ಈ ಶಕ್ತಿಯ ಬದಲಾವಣೆ ಅವಿಚ್ಛಿನ್ನವಾಗಿ ನಡೆಯುವುದಿಲ್ಲ.

ಇಲೆಕ್ಟ್ರಾನ್‌ಗಳಿಗೆ ಸ್ಥಾಯಿ ಚೈತನ್ಯ ಮಟ್ಟವು n = 1,2,3.......... ಬೆಲೆಗಳನ್ನು ಹೊಂದಿದ್ದು, ಈ ಪೂರ್ಣಾಂಕಗಳನ್ನು ಪ್ರಧಾನ ಕ್ವಾಂಟಮ್ ಸಂಖ್ಯೆ ಎನ್ನುತ್ತಾರೆ.

b) ಸ್ಥಾಯಿ ಚೈತನ್ಯ ಮಟ್ಟದ ತ್ರಿಜ್ಯಗಳನ್ನು ಈ ಕೆಳಕಂಡತೆ ಸೂಚಿಸುವರು.

ಅಂದರೆ ao = 52.9 pm. ಮೊದಲ ಸ್ಥಾಯಿ ಚೈತನ್ಯ ಮಟ್ಟದ ತ್ರಿಜ್ಯವು 52.9pm ಆಗಿದ್ದು, ಇದನ್ನು ಬ್ಹೋರ್‌ನ ತ್ರಿಜ್ಯ (Bohr radius) ಎನ್ನುವರು. ಸಾಮಾನ್ಯವಾಗಿ ಹೈಡ್ರೋಜನ್ ಪರಮಾಣುವಿನ ಇಲೆಕ್ಟಾçನು ಇದೇ ಕಕ್ಷೆ (ಅಂದರೆ n =1) ಯಲ್ಲಿ ಇರುತ್ತದೆ. n ಬೆಲೆ ಹೆಚ್ಚಾದಂತೆ r ಸಹ ಹೆಚ್ಚಾಗುತ್ತದೆ. ಅಂದರೆ ಇಲೆಕ್ಟ್ರಾನ್‌ಗಳು ನ್ಯೂಕ್ಲಿಯಸ್‌ನಿಂದ ದೂರ ಇರುತ್ತವೆ.

c) ಇಲೆಕ್ಟ್ರಾನ್‌ಗಳಿಗೆ ಸಂಬಧಿಸಿದತೆ ಬಹಳ ಮುಖ್ಯವಾದ ಗುಣ ಲಕ್ಷಣವೆಂದರೆ, ಅವುಗಳ ಸ್ಥಾಯಿ ಚೈತನ್ಯ ಮಟ್ಟದ ಶಕ್ತಿ. ಇದನ್ನು ಈ ಕೆಳಗಿನ ಸೂತ್ರದಲ್ಲಿ ನೀಡಿದೆ.

ಇಲೆಕ್ಟ್ರಾನ್‌ ನ್ಯೂಕ್ಲಿಯಸ್‌ನ ಪ್ರಭಾವದಿಂದ ಮುಕ್ತವಾದಾಗ, ಅದರ ಶಕ್ತಿಯನ್ನು ಸೊನ್ನೆ ಎಂದು ತೆಗೆದುಕೊಳ್ಳಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಇಲೆಕ್ಟ್ರಾನ್‌  ಪ್ರಧಾನ ಕ್ವಾಂಟಮ್ ಸಂಖ್ಯೆ n = ಆಗಿರುವ ಸ್ಥಾಯೀ ಚೈತನ್ಯ ಮಟ್ಟದಲ್ಲಿರುತ್ತದೆ. ಇದನ್ನು ಅಯಾನೀಕರಣಗೊಂಡ ಹೈಡ್ರೋಜನ್ ಪರಮಾಣು ಎನ್ನುವರು. ನ್ಯೂಕ್ಲಿಯಸ್ ಇಲೆಕ್ಟ್ರಾನನ್ನು ಆಕರ್ಷಿಸಿದಾಗ. ಅದು ಶಕ್ತಿಯನ್ನು ಬಿಡುಗಡೆಗೊಳಿಸಿ n ಕಕ್ಷೆಯಲ್ಲಿ ಸ್ಥಿರಗೊಳ್ಳುತ್ತದೆ. ಹೈಡ್ರೋಜನ್ ಪರಮಾಣುವಿನ ರೇಖಾ ರೋಹಿತವನ್ನು ಬ್ಹೋರ್‌ನ ಮಾದರಿಯನ್ನು ಬಳಸಿಕೊಂಡು ಪರಿಮಾಣಾತ್ಮಕವಾಗಿ ವಿವರಿಸಬಹುದು.

1912ರ ಆಗಸ್ಟ್ ತಿಂಗಳಲ್ಲಿ ಬೋರ್‌ ತನ್ನ ದೀರ್ಘ ಕಾಲದ ಮನದನ್ನೆ ಮಾರ್ಗರೆಥೆ ನೋಲ್ಯಾಂಡ್‌ರೊಂದಿಗೆ  ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರದ್ದು ಅನುರೂಪ ದಾಂಪತ್ಯ. ಆಕೆ ಆತನ ಭವಿಷ್ಯವನ್ನೇ ರೂಪಿಸಿದ ಮಾಹಾನ್‌ ತ್ಯಾಗಮಯಿ. ನೀಲ್ಸ್ ಬೋರ್ರವರು ತಮ್ಮ ಎಲ್ಲ ಸಂಶೋಧನಾ ಪ್ರಬಂಧಗಳನ್ನು ಪತ್ನಿಗೆ ಉಕ್ತಲೇಖನ ನೀಡಿ ಬರೆಸುತ್ತಿದ್ದರು. ಪತ್ನಿ ಅವುಗಳನ್ನು ಎಡಿಟ್ ಮಾಡಿ ಅಗತ್ಯ ತಿದ್ದುಪಡಿಯೊಂದಿಗೆ ಅಂತಿಮ ರೂಪಕ್ಕೆ ತರುತ್ತಿದ್ದರು!! ಪತ್ನಿಯ ಒಪ್ಪಿಗೆ ಇಲ್ಲದೆ ಯಾವ ಸಂಶೋಧನಾ ಲೇಖನವೂ ಪ್ರಕಟವಾಗುತ್ತಿರಲಿಲ್ಲ!! ನೀಲ್ಸ್ ಬೋರ್ ರವರ ಯಶಸ್ಸಿನ ಹಿಂದೆ ಅವರ ಪತ್ನಿಯ ಪಾತ್ರ ಹಿರಿದಾದದ್ದು ಎನ್ನುವುದಕ್ಕೆ ಇನ್ಯಾವ ಸಾಕ್ಷಿಯೂ ಬೇಕಿಲ್ಲ. ಈ ದಂಪತಿಗಳಿಗೆ ಐದು ಗಂಡು ಮಕ್ಕಳಿದ್ದರು.

ರುದರ್ಫೋರ್ಡರು, ಮದುವೆಯ ನಂತರ ನೀಲ್ಸ್ ಬೋರ್ ಅವರಿಗೆ ಪತ್ರ ಬರೆದು ನಿನ್ನಿಂದ ಯಾವುದೇ ಉಪಯುಕ್ತ ಸಂಶೋಧನೆ ನಡೆಯುತ್ತಿಲ್ಲ ಎಂದು ತಗಾದೆ ತೆಗೆದು ಎಚ್ಚರಿಸಿದರು. ಫೆಬ್ರವರಿ 1913ರಲ್ಲಿ ಬೋರ್ ರವರು ತಮ್ಮ ಸಂಶೋಧನೆಯ ಕೆಲವು ಅಂಶಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸುತ್ತಿದ್ದರು. ಆಗ ಅವರ ಸಹೋದ್ಯೋಗಿಗಳು ಹೈಡ್ರೋಜನ್ ರೋಹಿತದ ರೇಖೆಗಳು ಹೇಗೆ ಉಂಟಾಗುತ್ತವೆ? ಹೇಗೆ ಕಾರ್ಯನಿರ್ವಹಿಸುತ್ತವೆ? ಎಂದು ಪ್ರಶ್ನಿಸಿದರು. ಈ ಪ್ರಶ್ನೆಯು ಮರೆತಿದ್ದ ಒಂದು ವಿಷಯವನ್ನು ಅವರಿಗೆ ನೆನಪಿಸಿತು. 1885 ರಲ್ಲಿ 60 ವರ್ಷದ ಶಾಲಾ ಶಿಕ್ಷಕರಾದ ಜಾನ್ ಬಾಮರ್ ಕಂಡುಹಿಡಿದ ರೋಹಿತಗಳಿಗೆ ಸಂಬಂಧಪಟ್ಟ ಒಂದು ಸೂತ್ರವನ್ನು ನೆನಪಿಸಿತು. ಆ ಸೂತ್ರವನ್ನು ಅನ್ವಯಿಸಿ ಈ ಪ್ರಶ್ನೆಗೆ ಉತ್ತರಿಸಬಹುದೆನ್ನುವುದನ್ನು ಬೋರ್ ರವರಿಗೆ ಈ ಮೊದಲು ಹೊಳೆದಿರಲಿಲ್ಲ. ಬಾಮರ್ ರವರ ಆ ಸೂತ್ರ ಬೋರರಿಗೆ ಎಲ್ಲವನ್ನು ಸುಸ್ಪಷ್ಟಪಡಿಸಿತು. ಅದೊಂದು ಅದ್ಭುತ ಸಂಶೋಧನೆಯಾಯಿತು. ಒಂದು ತಿಂಗಳ ಒಳಗೆ ಪತಿ-ಪತ್ನಿಯರು ಸೇರಿ ಸರ್ವಕಾಲಿಕ ಎನ್ನಬಹುದಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಅದೇ ಹೈಡ್ರೋಜನ್ ನಂತಹ ಒಂದು ಎಲೆಕ್ಟ್ರಾನ್ ಇರುವ ಧಾತುಗಳ ಪರಮಾಣು ಮಾದರಿ. ಅದು ಬೋರ್ ಮಾದರಿ ಎಂದೇ ಹೆಸರಾಗಿದೆ.





 ಬೋರ್‌ನ ಮಾದರಿಯ ಪ್ರಕಾರ, ಹೈಡ್ರೋಜನ್ ಪರಮಾಣುವಿನಲ್ಲಿರುವ ಇಲೆಕ್ಟ್ರಾನ್ ನ್ಯೂಕ್ಲಿಯಸ್‌ನ ಸುತ್ತಲೂ ಇರುವ ನಿರ್ದಿಷ್ಟ ತ್ರಿಜ್ಯ ಮತ್ತು ಶಕ್ತಿಯನ್ನು ಹೊಂದಿರುವ ವೃತ್ತಾಕಾರದ ಚೈತನ್ಯಮಟ್ಟಗಳಲ್ಲಿ ಚಲಿಸುತ್ತವೆ. ಈ ಕಕ್ಷೆಯಲ್ಲಿರುವ ಇಲೆಕ್ಟ್ರಾನ್‌ನ ಶಕ್ತಿಯು ಕಾಲದೊಡನೆ ಬದಲಾವಣೆ ಹೊಂದುವುದಿಲ್ಲ. ಆದರೆ, ಇಲೆಕ್ಟ್ರಾನ್ ಶಕ್ತಿಯನ್ನು ಹೀರಿಕೊಂಡು ಅಧಿಕ ಚೈತನ್ಯ ಮಟ್ಟಕ್ಕೆ ಏರುತ್ತದೆ. ಅದು ಅಧಿಕ ಚೈತನ್ಯ ಮಟ್ಟದಿಂದ ಕಡಿಮೆ ಚೈತನ್ಯ ಮಟ್ಟಕ್ಕೆ ಬಂದಾಗ ಶಕ್ತಿಯನ್ನು ಹೊರ ಹಾಕುತ್ತದೆ. 

ಅವರು ಈ ಸಂಶೋಧನೆಯಿಂದ ಪಿಕರಿಂಗ್ ಸಿರೀಸ್ ಕಂಡು ಹಿಡಿದು ಕೆಲವು ನಕ್ಷತ್ರಗಳ ಬೆಳಕಿನ ರೋಹಿತದ ವಿಶಿಷ್ಟ ರೇಖೆಗಳ ರಹಸ್ಯವನ್ನು ಕಂಡು ಹಿಡಿದರು.

 ಬೋರ್ ರವರು ತಮ್ಮ ಸಂಶೋಧನೆಯ ವಿವರಗಳನ್ನು  ರುದರ್ ಫೋರ್ಡ್ ರವರೊಂದಿಗೆ ಹಂಚಿಕೊಂಡರು. ನಂತರ ಅವರು ಅರ್ನೆಸ್ಟ್ ರುದರ್‌ಪೋರ್ಡ್ವರೊಂದಿಗೆ ಮ್ಯಾಂಚೆಸ್ಟರ್ನಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. ಅವರು ತಮ್ಮ ಜೀವನದುದ್ದಕ್ಕೂ ಉತ್ತಮ ಸ್ನೇಹಿತರಾಗಿದ್ದರು. ಬೋರ್ ತಮ್ಮ ಮಗನಿಗೆ ತನ್ನ ಆತ್ಮೀಯ ಸ್ನೇಹಿತನೂ, ಗುರುವೂ ಆದ ರುದರ್‌ಫೋರ್ಡ್‌ಅವರ ಹೆಸರನ್ನೇ ಇಟ್ಟರು.

 ಬೋರ್ ತನ್ನ ವರಮಾಣು ಮಾದರಿಯನ್ನು ವಿವರಿಸಲು ಪ್ಲಾಂಕ್‌ರ ಕ್ವಾಂಟಮ್ ಸಿದ್ಧಾಂತವನ್ನು ಬಳಸಿ, ಪರಮಾಣು ರೋಹಿತ ಮತ್ತು ಪರಮಾಣುವಿನ ಸ್ಥಿರತೆಯನ್ನು ವಿವರಿಸಿದರು. ಸಾಮಾನ್ಯವಾಗಿ, ಎಲೆಕ್ಟ್ರಾನ್‌ಗಳು ಪರಮಾಣುವಿನಲ್ಲಿ ತಮ್ಮದೇ ಆದ ನಿಯೋಜಿತ ಕಕ್ಷೆಗಳಲ್ಲಿ ಸುತ್ತುತ್ತವೆ. ಶಕ್ತಿಯನ್ನು ಹೀರಿದ, ಎಲೆಕ್ಟ್ರಾನ್‌ಗಳು ಉನ್ನತ ಚೈತನ್ಯ ಮಟ್ಟಕ್ಕೆ ಜಿಗಿಯುತ್ತವೆ. ಸ್ವಲ್ಪ ಸಮಯದ ನಂತರ ಅದು ಶಕ್ತಿಯನ್ನು ಬೆಳಕಿನ ರೂಪದಲ್ಲಿ ಹೊರ ಹಾಕುತ್ತಾ ತನ್ನ ಮೂಲ ಸ್ಥಾನಕ್ಕೆ ಮರಳುತ್ತವೆ. ಬೋರ್ ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ವಿಕಿರಣದ ತರಂಗಾಂತರವನ್ನು ಲೆಕ್ಕಾಚಾರ ಮಾಡುವ ಮೂಲಕ ವಸ್ತುವಿನ ಪರಮಾಣು ರಚನೆಯನ್ನು ನಿರ್ಧರಿಸಿದರು.

ಬೋರ್ ಅವರ ಕೆಲಸವು ಪರಮಾಣು ಭೌತಶಾಸ್ತ್ರದಲ್ಲಿ ಪ್ರಮುಖ ಪ್ರಗತಿಯನ್ನು ಒದಗಿಸಿತು. ಇದು ವಿಜ್ಞಾನದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿತು. ಬೋರ್ ತಮ್ಮ ಈ  ಅದ್ಭುತ ಸಂಶೋಧನೆಗಾಗಿ 1922 ರಲ್ಲಿ ತಮ್ಮ 37ನೇ ವಯಸ್ಸಿನಲ್ಲಿ, ಭೌತಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಅವರು ಈ ಗೌರವವನ್ನು ಪಡೆದ ಅತ್ಯಂತ ಕಿರಿಯ ಭೌತಶಾಸ್ತ್ರಜ್ಞರಾಗಿದ್ದರು.  

ಒಂದೆಡೆ ಸಂಶೋಧನೆಗಳು ಮುಂದುವರೆಯುತ್ತಿದ್ದರೆ, ಇನ್ನೊಂದೆಡೆ ನಾಜಿಗಳು ಬೆನ್ನ ಹಿಂದೆ ಬಿದ್ದಿದ್ದರು. ಏಪ್ರಿಲ್ 1940 ರಲ್ಲಿ, ಜರ್ಮನಿಯು ಡೆನ್ಮಾರ್ಕ್ ಮೇಲೆ ದಾಳಿ ಮಾಡಿ ವಶವಡಿಸಿಕೊಂಡಿತು. ರಾಜನನ್ನು ಸೆರೆಮನೆಯಲ್ಲಿಟ್ಟಿತು. ನಾಜಿಗಳು ಡೆನ್ಮಾರ್ಕ್‌ನಲ್ಲಿ ವಾಸಿಸುತ್ತಿದ್ದ 6000 ಯಹೂದಿಗಳನ್ನು ಕೊಲ್ಲಲು ಯೋಜಿಸಿದ್ದರು. ಅದರೆ ಅವರಲ್ಲಿ ಸುಮಾರು 5000 ಜನ ಯಹೂದಿಗಳು ಸುರಕ್ಷಿತವಾಗಿ ಸ್ವೀಡನ್‌ಗೆ ಪ್ರಯಾಣ ಬೆಳೆಸಿದರು. ಅವರಲ್ಲಿ ನೀಲ್ಸ್‌ ಬೋರ್‌ರವರ ಕುಟುಂಬವೂ ಸೇರಿತ್ತು. ಹೀಗಾಗಿ ಜರ್ಮನರ ಬರ್ಮನ್ ಸಂಚು ವಿಫಲವಾಯಿತು. ನಾಜಿಗಳು ಬೋರ್ ಅವರ ನಿವಾಸದ ಮೇಲೆ ದಾಳಿ ಮಾಡಿದರು, ಆದರೆ ಅದೃಷ್ಟವಶಾತ್, ಅವರಿಗೆ ನೊಬೆಲ್ ಪ್ರಶಸ್ತಿಯಾಗಿ ನೀಡಲಾದ ಚಿನ್ನದ ಪದಕದ ನಾಜಿಗಳs ಕೈ ಸೇರಲಿಲ್ಲ. ನಂತರ, ಬೋರ್ ಅಮೆರಿಕಕ್ಕೆ ಹೋಗಿ ಅಲ್ಲಿ ಪರಮಾಣುಶಕ್ತಿಯ ಬಗ್ಗೆ ಸಂಶೋಧನೆ ಮುಂದುವರೆಸಿದರು. ಲಾಸ್ ಅಲ್ಮೋಸ್‌ನಲ್ಲಿ ಸಂಶೋಧನಾ ಭೌತಶಾಸ್ತ್ರಜ್ಞರಾಗಿ ಕೆಲಸ ಮಾಡಿದರು. ೧೯೪೩-೪೫ ರವರಗೆ ಅಮೇರಿಕದ ಅತ್ಯಂತ ರಹಸ್ಯ ಯೋಜನೆಯಾದ ಮ್ಯಾನ್‌ಹಟನ್‌ ಯೋಜನೆಯಲ್ಲಿ ಪಾಲ್ಗೊಂಡರು. ಅವರು ವಿಜ್ಞಾನಿಗಳಾದ ಅಲ್ಬರ್ಟ್ ಐನ್‌ಸ್ಟೈನ್ ಮತ್ತು ಎನ್ರಿಕೊ ಫರ್ಮಿ ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದರು. ಫರ್ಮಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಈ ವಿಷಯದ ಬಗ್ಗೆ ಕೆಲಸ ಮಾಡುತ್ತಿದ್ದರು. ಪರಮಾಣು ಶಕ್ತಿ ಜಗತ್ತಿನ ಭವಿಷ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಅರಿಯಲು ಈ ಪ್ರಖ್ಯಾತ ವಿಜ್ಞಾನಿಗಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಎರಡನೆಯ ಮಹಾಯುದ್ಧವನ್ನು ಕೊನೆಗೊಳಿಸಲು ಅಮೇರಿಕಾ ಪರಮಾಣು ಬಾಂಬುಗಳನ್ನು ಜಪಾನಿನ ಎರಡು ನಗರಗಳಾದ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಬೀಳಿಸಿತು. ಜಪಾನ್ ಮೇಲೆ ಅಮೆರಿಕ ನಡೆಸಿದ ಬಾಂಬ್‌ ದಾಳಿಯಿಂದ ಬೋರ್ ತೀವ್ರವಾಗಿ ದುಃಖಿತರಾಗಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಪರಮಾಣು ಸ್ಫೋಟವನ್ನು ನಿಷೇಧಿಸಬೇಕೆಂದು ಅವರು ಪ್ರತಿಪಾದಿಸಿದರು.


ವಿಶ್ವಶಾಂತಿಗಾಗಿ ಅವರ ಪ್ರಯತ್ನ ನಿರಂತರವಾಗಿತ್ತು. 1945 ರಾಯಲ್ ಡ್ಯಾನಿಶ್ ಅಕಾಡೆಮಿ ಆಫ್ ಸೈನ್ಸಸ್‌ನ ಅಧ್ಯಕ್ಷರಾದರು. ಬೋರ್ 1955 ರಲ್ಲಿ ಜಿನೀವಾದಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ ಡೆನ್ಮಾರ್ಕ್‌ನ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಭಾಗವಹಿಸಿದರು. ವಿಜ್ಞಾನ ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ಪ್ರಶಸ್ತಿಗಳು ಮತ್ತು ಪದಕಗಳನ್ನು ಪಡೆದರು. 1947 ಫ್ರೆಡೆರಿಕ್ IX ರಿಂದ ಆರ್ಡರ್ ಆಫ್ ದಿ ಎಲಿಫೆಂಟ್ ಪ್ರಶಸ್ತಿಯನ್ನು ನೀಡಲಾಯಿತು. ಅಕ್ಟೋಬರ್ 1957 ರಲ್ಲಿ, ಬೋರ್ರವರಿಗೆ  ಫೋರ್ಡ್‌ ಶಾಂತಿ ಪ್ರಶಸ್ತಿ ನೀಡಲಾಯಿತು.  ಅವರ ಇತರ ಸಂಶೋಧನೆಗಳಲ್ಲಿ, ಪರಮಾಣು ಗುಣಲಕ್ಷಣಗಳನ್ನು ಮತ್ತು ಪೂರಕತೆಯ ತತ್ವವನ್ನು ವಿವರಿಸಲು ಲಿಕ್ವಿಡ್ ಡ್ರಾಪ್ ಮಾದರಿಯ ಮೇಲಿನ ಅವರ ಕೆಲಸವು ಆಧುನಿಕ ಭೌತಶಾಸ್ತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ವಿಶ್ವಶಾಂತಿಯ ಪ್ರತಿಪಾದಕರಾಗಿದ್ದ ಬೋರ್ 1962 ನವೆಂಬರ್ 18 ರಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಿಧನರಾದರು. ಇದರೊಂದಿಗೆ ಪರಮಾಣುವಿನ ರಚನೆಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದ ಮಹಾನ್‌ ಚೇತನವೊಂದು ಅಸ್ತಂಗತವಾಯಿತು. ಆದರೆ ಅದರ ಜ್ಞಾನಗಂಗೆಯ ಹರಿವು ನಮ್ಮೆಲ್ಲರೆಡೆಗೆ ಅವಿಚ್ಛಿನ್ನವಾಗಿ ಹರಿಯುತ್ತಲೇ ಇದೆ.
https://upload.wikimedia.org/wikipedia/commons/f/fd/Niels_Bohr_with_C._V._Raman.jpg



 

ಭಾರತೀಯ ವಿಜ್ಞಾನ ರಂಗದ ದೇದೀಪ್ಯಮಾನ ಬೆಳಕು !!

 ಭಾರತೀಯ ವಿಜ್ಞಾನ ರಂಗದ ದೇದೀಪ್ಯಮಾನ ಬೆಳಕು !! 

                         

ಲೇ: ರಾಮಚಂದ್ರ ಭಟ್‌ ಬಿ.ಜಿ.   

ಅದು  ಬಿರು ಬೇಸಗೆಯ ಸಂಜೆಗೆತ್ತಲು. ಆಗ ತಾನೆ ಕಬ್ಬನ್ ಪಾರ್ಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಬಂದು ನಿಂತಿತ್ತು. ನಿರ್ಮಾನುಷ ರಸ್ತೆಯಲ್ಲಿನ ಬೀದಿ ದೀಪಗಳಿಗೆ ಸಾವಿರಾರು  ಕೀಟಗಳು ಮುತ್ತಿ ರೆಕ್ಕೆ ಕಳೆದುಕೊಂಡು ರಸ್ತೆಗೆ ಬೀಳುತ್ತಿದ್ದವು. ಆ ದಾರಿಯಲ್ಲಿ IISc ಪ್ರೊಫೆಸರ್ ರವರ ಕಾರು ಕಬ್ಬನ್ ಪಾರ್ಕಿನ ಮೂಲಕ ಬರುತ್ತಿದೆ. ದೂರದಿಂದ ನೋಡಿದರೆ, ಬೀದಿದೀಪದ ಕೆಳಗೆ  ವ್ಯಕ್ತಿಯೊಬ್ಬ ರಸ್ತೆಯಲ್ಲಿ ಕುಕ್ಕರಗಾಲಿನಲ್ಲಿ  ಕುಳಿತಂತೆ  ಕಾಣಿಸುತ್ತಿದೆ!  ಅಲ್ಲೊಂದು ಕಾರು ನಿಂತಿದೆ. ಓಹ್ ಆ ಕಾರಿನ ವ್ಯಕ್ತಿಯೇ ಇರಬೇಕು. ರಸ್ತೆಯಲ್ಲಿ ಏನನ್ನೋ ಆಯ್ದುಕೊಳ್ಳುತ್ತಿದ್ದಾರೆ. ಕಾರಿನಿಂದ ಇಳಿದ  ಪ್ರೊಫೆಸರ್ ಅವರಿಗೆ ಆ ವ್ಯಕ್ತಿಯ ಗುರುತು ಸಿಕ್ಕಿತು. ತಮ್ಮ ಗುರುಗಳೇ!!! ಈ ನಿರ್ಮಾನುಷ  ರಸ್ತೆಯಲ್ಲಿ ಅದೇನು ಮಾಡುತ್ತಿದ್ದಾರೆ?

 ಸರ್!  ನಾನೇನಾದ್ರೂ ಸಹಾಯ ಮಾಡಲೇ? ಎನ್ನುತ್ತಾ ಆ ವ್ಯಕ್ತಿಯ ಬಳಿಗೆ ಸಾರಿದರೆ, ಆ ವ್ಯಕ್ತಿ ಈ ಕಡೆಯಿಂದ ಬರಬೇಡ ದೂರ ಹೋಗು. ಎನ್ನುತ್ತಾ  ತಮ್ಮ ಕರ ವಸ್ತ್ರವನ್ನು ಬಿಡಿಸಿ ಅದರಲ್ಲಿ ಅತ್ಯಂತ ಜಾಗ್ರತೆಯಿಂದ  ತಾವು ಆಯ್ದುಕೊಳ್ಳುತ್ತಿದ್ದ ಕೀಟಗಳ ರೆಕ್ಕೆಗಳನ್ನು ಇಡಲಾರಂಭಿಸಿದರು. ಪ್ರೊಫೆಸರ್ ರವರಿಗೆ ಆಶ್ಚರ್ಯ  “ಸರ್ ಇವನ್ನೇಕೆ ಆಯ್ದುಕೊಳ್ಳುತ್ತಿದ್ದೀರಿ?” ಎಂದು ಕೇಳಿದಾಗ “ ಪ್ರಶ್ನೆ ಕೇಳಬೇಡ ನೀನೂ ಒಂದಷ್ಟನ್ನು ಆಯ್ದು ಕೊಡು” ಎಂದರು. ಪ್ರೊಫೆಸರರು ಈಗ ಫಜೀತಿಗೆ ಒಳಗಾದರು. ವಿಧಿ ಇಲ್ಲದೆ ಈಗ ಶಿಷ್ಯನೂ ಅವರೊಂದಿಗೆ ಕೀಟಗಳ ರೆಕ್ಕೆಗಳನ್ನು ಸಂಗ್ರಹಿಸಲಾರಂಬಿಸಿದರು. ಸಾಕಷ್ಟು ರೆಕ್ಕೆಗಳ ಸಂಗ್ರಹವಾದ ನಂತರ “ಸರಿ ನೀನಿನ್ನು  ಹೊರಡು” ಎಂದು ಗುರುಗಳು ಹೇಳಿದರು. ಕುತೂಹಲ ತಾಳಲಾರದೆ ಮತ್ತೊಮ್ಮೆ ಗುರುಗಳನ್ನು ಪ್ರಶ್ನಿಸಿದರು. “ ಸರ್ ನೀವು ಇವುಗಳನ್ನು ಮಕ್ಕಳಂತೆ ಏಕೆ ಆಯ್ದುಕೊಳ್ಳುತ್ತಿದ್ದೀರಿ ?”

 ಆಗ ಆ ಗುರುಗಳು ನೀಡಿದ ಉತ್ತರವನ್ನು ಗಮನಿಸಿ. ಅದು ನಮ್ಮೆಲ್ಲರಿಗೂ ಮಾರ್ಗದರ್ಶಿ ಸೂಚನೆಗಳೇ ! ನಾವೆಲ್ಲರೂ  ನಮ್ಮ ವೃತ್ತಿ ಜೀವನದಲ್ಲಿ ಅನುಷ್ಠಾನಗೊಳಿಸಲೇಬೇಕಾದಂತದ್ದೇ ಆಗಿದೆ.

 “ನಿಂಗೊತ್ತಾ? ನಾಳೆ ನಾನು ಕಾರ್ಪೊರೇಷನ್ ಬಾಯ್ಸ್ ಶಾಲೆಯ ವಿದ್ಯಾರ್ಥಿಗಳಿಗೆ ಬೆಳಕಿನ ಗುಣಗಳ ಬಗ್ಗೆ ಒಂದು ಉಪನ್ಯಾಸ ನೀಡಬೇಕಿದೆ. ಆ ಶಾಲೆಯಲ್ಲಿ ವ್ಯತೀಕರಣಕ್ಕೆ ಸಂಬಂಧಪಟ್ಟಂತಹ (diffraction grating)  ಉಪಕರಣಗಳಿರಬೇಕಲ್ಲ? ವಿಜ್ಞಾನ ಬೋಧನೆ  ಬರಿಯ ಉಪನ್ಯಾಸವಾಗಬಾರದು ಅದು ಅನುಭವಾತ್ಮಕ ಕಲಿಕೆ ಆಗಬೇಕು! ಇದೇ ನನ್ನ ತಲೆಯನ್ನು ಕೊರೆಯುತ್ತಾ ಇತ್ತು. ಈ ಕೀಟಗಳು ರೆಕ್ಕೆ ಕಳ್ಕೊಂಡು ಬೀಳ್ತಾಯಿರೋದನ್ನ ನೋಡಿದ್ನಲ್ಲ ಅವುಗಳನ್ನೇ ನಾಳೆಗೆ ಬೋಧನಾ ಉಪಕರಣವಾಗಿಸಬಹುದು ಎಂಬ ಐಡಿಯಾ ನೀಡಿತು. ನಾಳೆ ಇದೆಲ್ಲವನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ನೀಡಿ  ಬೆಳಕಿನ ಗುಣಗಳ ಪ್ರಾತ್ಯಕ್ಷಿಕೆಯನ್ನು ನೀಡುತ್ತೇನೆ ” ಎಂದು ಸಂತಸದಿಂದ ಹೇಳಿದರು. ಸರ್ಕಾರಿ ಶಾಲೆಯ ಎಳೆಯ ವಿದ್ಯಾರ್ಥಿಗಳಿಗೆ ಒಂದು ತರಗತಿ ನೀಡಲು ಅಷ್ಟೊಂದು ತಲೆಕೆಡಿಸಿಕೊಂಡು ಪೂರ್ವ ಸಿದ್ಧತೆ ಮಾಡಿಕೊಂಡ ಆ ವ್ಯಕ್ತಿ ಯಾರೆಂದು ಯೋಚನೆ ಮಾಡ್ತಾ ಇದ್ದೀರಾ? ಅವರೇ ನಮ್ಮ ದೇಶದ ಹೆಮ್ಮೆಯ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಸರ್ ಸಿ.ವಿ ರಾಮನ್!!!


ಇಂತಹ ವಿಶ್ವ ಕಂಡ ಖ್ಯಾತ ಭೌತವಿಜ್ಞಾನಿ ಸರ್ ಸಿ ವಿ ರಾಮನ್ ರವರು ತಮ್ಮ ರಾಮನ್‌ ಪರಿಣಾಮ ಎಂಬ ಅದ್ಭುತ ಸಂಶೋಧನೆಯನ್ನು ಜಗಜ್ಜಾಹೀರು ಮಾಡಿದ ದಿನವೇ 1928 ರ ಫೆಬ್ರವರಿ 28. ಹೀಗಾಗಿ ಅದರ ಸ್ಮರಣಾರ್ಥವಾಗಿ ಪ್ರತಿ ವರ್ಷ ಈ ದಿನದಂದು ಭಾರತ ದೇಶದಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ಮಹತ್ತರ ಸಂಶೋಧನೆಗೆ 1930 ಡಿಸೆಂಬರ್ 10 ರಂದು ಪ್ರತಿಷ್ಠಿತ ನೊಬೆಲ್ ಪಾರಿತೋಷಕವನ್ನೂ ಪಡೆದರು. ಇದು ಭವ್ಯ ಭಾರತದ ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡುವುದರೊಂದಿಗೆ ವಿಶ್ವದಾದ್ಯಂತ ಹಲವು ಸಂಶೋಧನೆಗಳಿಗೆ ರಹದಾರಿಯಾಯಿತು.  

 ಪ್ರತಿನಿತ್ಯದ ಜೀವನದಲ್ಲಿ ವಿಜ್ಞಾನವು ಹೇಗೆ ಬೆರೆತು ಹೋಗಿದೆ ಎಂಬುದರ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಹಾಗೂ ಅದರ ಮಹತ್ವದ ಬಗೆಗೆ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಪ್ರಮುಖ ಉದ್ದೇಶ. ಈ ವಿಶೇಷ ದಿನದಂದು ವಿಜ್ಞಾನ ಸ್ಪರ್ಧೆಗಳು ,, ವಿಜ್ಞಾನ ಉಪನ್ಯಾಸಗಳು ಹಾಗೂ ಅನೇಕ ವೈಜ್ಞಾನಿಕ ಚಟುವಟಿಕೆಗಳನ್ನು ಪ್ರತಿ ವರ್ಷವೂ ಒಂದು ನಿರ್ದಿಷ್ಟ ವಿಷಯದೊಂದಿಗೆ ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ರಾಷ್ಟ್ರೀಯ ವಿಜ್ಞಾನ ದಿನ-2024 ರ ಘೋಷವಾಕ್ಯ "ವಿಕಸಿತ ಭಾರತಕ್ಕಾಗಿ ದೇಶೀಯ ತಂತ್ರಜ್ಞಾನಗಳು". ಮೂಲವಿಜ್ಞಾನದ ಸಂಶೋಧನೆಗಳ ಸಹಕಾರದೊಂದಿಗೆ ಸ್ಥಳೀಯ ತಂತ್ರಜ್ಞಾನಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಿ, ದೇಶದ ಅಭಿವೃದ್ಧಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು, ಸಮರ್ಥನೀಯ ಭವಿಷ್ಯವನ್ನು ರೂಪಿಸುವುದು ಈ ನಿರ್ದಿಷ್ಟ ವಿಷಯದ ಗುರಿಯಾಗಿದೆ. ಇದು ಪ್ರಧಾನಿಯವರ ಮೇಕ್‌ ಇನ್‌ ಇಂಡಿಯಾ, ಸ್ಕಿಲ್‌ ಇಂಡಿಯಾಗಳ ವಿಸ್ತರಿತ ರೂಪವೇ ಆಗಿದೆ. ಸರಳವಾಗಿ ಹೇಳುವುದಾದರೆ, ಪಾರದರ್ಶಕ ಮಾಧ್ಯಮದ ಮೂಲಕ ಏಕವರ್ಣೀಯ ಬೆಳಕು ಹಾದುಹೋಗುವಾಗ, ಮಾಧ್ಯಮದ ಅಣುಗಳೊಂದಿಗೆ ವರ್ತಿಸಿ ಭಿನ್ನ ಆವೃತ್ತಿಯ ಕಿರಣಗಳಾಗಿ ಚದುರುತ್ತವೆ. ಇದೇ ರಾಮನ್ ಪರಿಣಾಮ. ಇದಕ್ಕೆ ವರು ವ್ಯಯಿಸಿದ ವೆಚ್ಚ 500 ರೂಗಳಿಗೂ ಕಡಿಮೆಯಾದರೂ ಅದರ ಅನ್ವಯದ ಮೌಲ್ಯ ಕೋಟಿಗೂ ಹೆಚ್ಚು!!!

 1888 ನವೆಂಬರ್ 7 ರಂದು ತಿರುಚನಪಳ್ಳಿಯಲ್ಲಿ ಚಂದ್ರಶೇಖರ್ ಅಯ್ಯರ್ ಮತ್ತು ಶ್ರೀಮತಿ ಪಾರ್ವತಿ ಅಮ್ಮಾಳ್ ದಂಪತಿಯ ಎರಡನೇ ಮಗುವಾಗಿ ಸಿ.ವಿ ರಾಮನ್ ಜನಿಸಿದರು. ಕುಶಾಗ್ರಮತಿ ರಾಮನ್ ರವರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಎರಡು ವರ್ಷಗಳ ಕಾಲೇಜಿನ ವ್ಯಾಸಂಗವನ್ನು ಪೂರ್ಣಗೊಳಿಸಿ, ಕೇವಲ 14ನೇ ವಯಸ್ಸಿಗೇ ಪದವಿ ವಿದ್ಯಾಭ್ಯಾಸಕ್ಕೆ ಕಾಲಿಟ್ಟರು. ತಮ್ಮ ಕಾಲೇಜಿನ ವಿದ್ಯಾಭ್ಯಾಸವನ್ನು ವಿದ್ಯಾರ್ಥಿವೇತನದೊಂದಿಗೆ ಅಷ್ಟೇ ಅಲ್ಲದೆ ಚಿನ್ನದ ಪದಕದೊಂದಿಗೆ ಪೂರ್ಣಗೊಳಿಸಿದ ಅಸಾಮಾನ್ಯ ಪ್ರತಿಭಾವಂತರಿವರು. ಬಹುಶಃ ನೋಬೆಲ್‌ ಚಿನ್ನದ ಪದಕಕ್ಕೆ ತಯಾರಿ ಇಲ್ಲಿಂದಲೇ ಆರಂಭವಾಗಿರಬೇಕು.

ಅದಿನ್ನೂ ಹುಡುಗಾಟದ ೧೯ರ ಹರೆಯ. ಓರಗೆಯ ಹುಡುಗರು ಕಾಲೇಜು ಹೋಗುವ ವಯಸ್ಸು!! 1907ರಲ್ಲಿ ಭಾರತೀಯ ಫೈನಾನ್ಸಿಯಲ್ ಸರ್ವಿಸ್ ಪರೀಕ್ಷೆಯಲ್ಲಿ ಮೊದಲಿಗರಾಗಿ ಸಾರ್ವಜನಿಕ ಹಣಕಾಸು ಅಧಿಕಾರಿಯಾಗಿ ಸರ್ಕಾರಿ ಸೇವೆಗೆ ಸೇರಿ ದುಡಿಯಲಾರಂಭಿಸಿದರು. ಇದೇ ವರ್ಷದಂದು ಮದರಾಸಿನಲ್ಲಿ ಲೋಕ ಸುಂದರಿಯವರೊಡನೆ ಮದುವೆಯಾಯಿತು. ಇದೇ ವರ್ಷದ ಕೊನೆಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಹುದ್ದೆಗೆ ಹಣಕಾಸು ವಿಭಾಗದಲ್ಲಿ ಕಲ್ಕತ್ತಾ ಗೆ ವರ್ಗಾವಣೆಯಾಗಿದ್ದು ಅವರ ಬದುಕಿಗೆ ತಿರುವು ನೀಡಿದ ಘಟನೆ . ಕೈತುಂಬ ಹಣ ಸಂಪಾದನೆ ಇದ್ದರೂ ತುಡಿತ ವಿಜ್ಞಾನದೆಡೆಗಿತ್ತು!!.  ಕಲ್ಕತ್ತಾದ ಪ್ರಸಿದ್ಧ ವೈದ್ಯ ಮಹೇಂದ್ರ ಲಾಲ್ ಸರ್ಕಾರ್ 1876 ರಲ್ಲಿ "ದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಶನ್ ಆಫ್ ಸೈನ್ಸ್" ಎಂಬ ಗಿನ ಕಾಲಕ್ಕೇ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವೊಂದನ್ನು ಒಳಗೊಂಡ ಸಂಸ್ಥೆಯನ್ನು ಹುಟ್ಟು ಹಾಕಿ ಭಾರತ ದೇಶದಲ್ಲಿ ವಿಜ್ಞಾನ ಸಂಶೋಧನೆಗಳಿಗೆ ಹೊಸ ದಿಕ್ಕನ್ನು ತೋರಿದರು. ಇದೇ ರಾಮನ್‌ರವರ ಬದುಕಿಗೆ ಆಶಾಕಿರಣವಾಯಿತು.  ರಾಮನ್‌ರವರು ಸಂಸ್ಥೆಯ ಯಜಮಾನರನ್ನು ಭೇಟಿ ಮಾಡಿ ತಮ್ಮ ಬಿಡುವಿನ ಸಮಯದಲ್ಲಿ ಸಂಶೋಧನೆಯನ್ನು ನಡೆಸಲು ಅನುಮತಿ ಪಡೆದುಕೊಂಡರು.

ಇಲ್ಲಿಂದ ಎರಡು ದೋಣಿಯ ಪಯಣ ಆರಂಭವಾಯಿತು. ರಾಮನ್ ರವರ ಪತ್ನಿ ಲೋಕಸುಂದರಿಯವರ ಪಾತ್ರ ಮಹತ್ತರವಾದದ್ದು. ಗಂಡನ ಯಶಸ್ಸಿನ ಸಿಂಹ ಪಾಲು ಅವರಿಗೇ ಸಲ್ಲಬೇಕಾದ್ದು ಬೆಳಗ್ಗೆ 5:30ಕ್ಕೆ ಸಂಶೋಧನಾ ಕಾರ್ಯಕ್ಕೆ ಹೊರಟು 9:೩೦ ಸುಮಾರಿಗೆ ಮನೆಗೆ ಬಂದು ಸ್ನಾನಾದಿಗಳನ್ನು ಪೂರೈಸಿ ಕಚೇರಿಗೆ ತೆರಳುತ್ತಿದ್ದರು. ಕಚೇರಿಯ ಕಾರ್ಯದ ನಂತರ ಮತ್ತೆ ಸಂಶೋಧನಾ ವೃತ ಮುಗಿಸಿ ಮನೆ ತಲುಪಿದಾಗ ರಾತ್ರಿ ಹತ್ತೋ ಹನ್ನೆರಡೋ ಗಂಟೆಯಾದರೆ ಕೆಲವೊಮ್ಮೆ ಸಂಶೋಧನಾಲಯವೇ ಮನೆಯಾಗಿರುತ್ತಿತ್ತು!!! ಇಂತಹ ಒಳಗೆ ಮನೆಗೆ ಬರುತ್ತಿದ್ದರು. ಇನ್ನು ರಜಾ ದಿನಗಳಲ್ಲಂತೂ ಸಂಶೋಧನೆಯೇ ಸರ್ವಸ್ವ ಎಂಬಂತಾಗುತ್ತಿತ್ತು . ಇಂತಹ ಸಂದರ್ಭಗಳಲ್ಲಿ ಲೋಕಸುಂದರಿಯವರೇ ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿ ಪತಿಯ ಸಂಶೋಧನಾ ಯಾತ್ರೆ ಯಾತನೆಯಿಲ್ಲದಂತೆ ಮುನ್ನಡೆಯಲು ಕಾರಣಕರ್ತರಾಗಿದ್ದರು.

ಇವರ ಆಸಕ್ತಿ ಗಮನಿಸಿದ ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಸರ್ ಆಶುತೋಷ ಮುಖರ್ಜಿ ರವರು ಭೌತವಿಜ್ಞಾನ ವಿಭಾಗದಲ್ಲಿ ತಾರಾಕಾನಾಥ ಪಾಲಿತ್ ಪ್ರೊಫೆಸರ್ ಹುದ್ದೆಗೆ ಆಹ್ವಾನ ನೀಡಿದರು. ಆದರೆ ನಿಮ್ಮ ಈ ಹುದ್ದೆಗೆ ದೊರೆಯುವ ಸಂಬಳ ನಿಮ್ಮ ಈಗಿನ ಸಂಬಳಕ್ಕಿಂತಲೂ ಕಾಲುಭಾಗಕ್ಕಿಂತ ಕಡಿಮೆ. ನಿಮಗೆ ಇಚ್ಛೆ ಇದ್ದಲ್ಲಿ ಸೇರಬಹುದೆಂದು ಹೇಳಿದಾಗ ಸಂಶೋಧನೆಯ ವಿಫುಲ ಅವಕಾಶವನ್ನು ಮನಗಂಡ ರಾಮನ್‌ ಅದಕ್ಕೊಪ್ಪಿ 1917ರಲ್ಲಿ ಪಾಲಿತ್ ಪ್ರೊಫೆಸರ್ ಆಗಿ ಕಲ್ಕತ್ತಾ ವಿಶ್ವವಿದ್ಯಾಲಯವನ್ನು ಸೇರಿದರು. ಇದು ಭಾರತ ದೇಶದ ವಿಜ್ಞಾನ ಕ್ಷೇತ್ರದ ಹಣೆಬರಹ ಬದಲಿಸಿದ ತೀರ್ಮಾನವಾಗಿತ್ತು. 

ರಾಮನ್ ರವರು ತಮ್ಮ ಮೊದಲ ವಿದೇಶ ಪ್ರಯಾಣವನ್ನು 1921 ರಲ್ಲಿ ಆಕ್ಸ್ಫರ್ಡ್ ನಲ್ಲಿ ನಡೆದ ಕಾಂಗ್ರೆಸ್ ಆಫ್ ಯುನಿವರ್ಸಿಟಿ ಆಫ್ ಬ್ರಿಟಿಷ್ ಎಂಪೈರ್ ಗೆ ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಪಾಲ್ಗೊಂಡು ಬೆಳಕು ಮತ್ತು ಧ್ವನಿವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧವನ್ನು  ಯಶಸ್ವಿಯಾಗಿ ಮಂಡಿಸಿದರು. ಮೆಡಿಟರೇನಿಯನ್ ಸಮುದ್ರದ ಮಾರ್ಗವಾಗಿ ಹಡಗಿನಲ್ಲಿ ಹಿಂದಿರುಗುವಾಗ ಅವರನ್ನು ಸಮುದ್ರದ ನೀರು ಏಕೆ ನೀಲಿಯಾಗಿ ಕಾಣುತ್ತದೆ ? ಎಂಬ ಪ್ರಶ್ನೆಯೊಂದು ಕಾಡಿತು. ಈ ವಿದ್ಯಮಾನವನ್ನು ಖ್ಯಾತ ಭೌತ ವಿಜ್ಞಾನಿ ರ್ಯಾಲೆಯರು ಆಕಾಶದ ಬಣ್ಣದ ಪ್ರತಿಫಲನದಿಂದಾಗಿ ಸಮುದ್ರ ನೀಲಿ ಬಣ್ಣವಾಗಿ ಕಾಣುತ್ತದೆ ಎಂದುವಿವರಿಸಿದ್ದರು. ಆದರೆ ರಾಮನ್ರವರಿಗೆ ಇದು ಅಷ್ಟು ತೃಪ್ತಿ ತರಲಿಲ್ಲ. ಅವರು ನಿಕೋಲ್ ಪಟ್ಟಕ ಬಳಸಿ  ಪ್ರಯೋಗವನ್ನು ಕೈಗೊಂಡು ಸೂರ್ಯನ ಬೆಳಕು ನೀರಿನಲ್ಲಿ ಚದುರಿ, ಸಮುದ್ರದ ನೀರು ನೀಲಿ ಬಣ್ಣಕ್ಕೆ ಕಾಣುತ್ತದೆ ಎಂದು ಕಂಡುಹಿಡಿದರು. ಇದು ಅವರ ಮುಂದಿನ ಪ್ರಯೋಗಗಳಿಗೆ ಕಾರಣವಾಯಿತು.  1921 ರಲ್ಲಿ "ನೀರಿನ ಅಣುಗಳಲ್ಲಿ ಬೆಳಕಿನ ಚದುರುವಿಕೆ ಮತ್ತು ಸಮುದ್ರದ ಬಣ್ಣ" ಎಂಬ ಸಂಶೋಧನಾ ಲೇಖನವನ್ನು ಪ್ರಕಟಿಸಿದರು. 1924 ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿ, ಫೆಲೋ ಆಗಿ ಆಯ್ಕೆ ಮಾಡಿ ರಾಮನ್ ರವರನ್ನು ಗೌರವಿಸಿತು. ರಾಮನ್ ಪರಿಣಾಮದ ಸಂಶೋಧನಾ ಪ್ರಬಂಧವು 1928 ರಲ್ಲಿ ಪ್ರತಿಷ್ಠಿತ ನೇಚರ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದರ ಫಲವಾಗಿ 1930 ಡಿಸೆಂಬರ್ 10ರಂದು ಸರ್ ವೆಂಕಟರಾಮನ್‌ರವರಿಗೆ ರಾಮನ್ ಪರಿಣಾಮದ ಆವಿಷ್ಕಾರಕ್ಕಾಗಿ ನೊಬೆಲ್ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. 

Raman at the 1930 Nobel Prize Award Ceremony with other winners, from left C. V. Raman (physics), Hans Fischer (chemistry), Karl Landsteiner (medicine) and Sinclair Lewis (literature)

ಇದು ಭಾರತದಲ್ಲಿ ಸಂಶೋಧನಾ ಪರಂರೆಯನ್ನೇ ಸೃಜಿಸಿತು. ಭಾರತೀಯರೂ ಸಾಧಿಸಬಲ್ಲರು ಎಂಬ ಸಂದೇಶವನ್ನು ವಿಶ್ವಕ್ಕೇ ರವಾನಿಸಿತು. ರಾಮನ್‌ ರಿಂದಾಗಿ ಅನೇಕ ವಿಜ್ಞಾನಿಗಳು ತಾಯ್ನಾಡಿಗೆ ಬಂದು ದೇಶದ ವಿಜ್ಞಾನ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡುವಂತಾಯಿತು. ಇಂತಹ ಶ್ರೇಷ್ಠ ದಾರ್ಶನಿಕ, ಮಹಾನ್‌ ದೇಶಭಕ್ತ, ಮಾನವತಾವಾದಿಯ ಬದುಕು ಮುಂದಿನ ಪೀಳಿಗೆಗೆ ದಾರಿ ದೀಪ. ಅವರ ನಡೆನುಡಿಗಳನ್ನು ಅನುಸರಿಸುವುದು ನಾವು ಅವರಿಗೆ ಕೊಡುವ ಅತ್ಯುಚ್ಛ ಗೌರವವೇ ಸರಿ.

ಭವ್ಯಭಾರತದ ಭವಿಷ್ಯಕ್ಕೆ ಹೊಸ ದಿಕ್ಕನ್ನು ನೀಡಿದ ಈ ದಿನದ ಮಹತ್ವವನ್ನು ಸಾರಲು, ವಿದ್ಯಾರ್ಥಿಗಳಿಗೆ ವಿಜ್ಞಾನದ ಆಸಕ್ತಿಯನ್ನು ಉದ್ದೀಪಿಸಲು ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದೊಂದಿಗೆ ೨ ದಿನಗಳ ವಿಜ್ಞಾನೋತ್ಸವವನ್ನು ಹಮ್ಮಿಕೊಂಡೆವು. 

ಶಾಲೆಯ ತುಂಬಾ ಸಂಭ್ರಮವೋ ಸಂಭ್ರಮ. ೨ ದಿನಗಳ ಬೃಹತ್‌ ವಿಜ್ಞಾನಮೇಳ ವಿದ್ಯಾರ್ಥಿಗಳಿಗೆ ಹಲವು ಬಗೆಯ ಪ್ರಾಯೋಗಿಕ ಅನುಭವವನ್ನು ಒದಗಿಸಿತು. ಅವರ ಆತ್ಮವಿಶ್ವಾಸ ನೂರ್ಮಡಿಯಾಯಿತು. ಅಕ್ಕಪಕ್ಕದ ಶಾಲೆಗಳಿಂದ ಸುಮಾರು ೨೦೦೦ ವಿದ್ಯಾರ್ಥಿಗಳು ಶಿಕ್ಷಕರು ಭೇಟಿನೀಡಿದರು. ನಮ್ಮ ವಿದ್ಯಾರ್ಥಿಗಳು ಪ್ರಯೋಗ ಪ್ರಾತ್ಯಕ್ಷಿಕೆ, ಮಾದರಿಗಳ ವಿವರಣೆ , ದೈನಂದಿನ ಬದುಕಿನಲ್ಲಿ ವಿಜ್ಞಾನ, ಪವಾಡ ಬಯಲು, ವಿಜ್ಞಾನ ರಸಪ್ರಶ್ನೆ, ಕಸದಿಂದ ರಸ, ಔಷಧೀಯ ಸಸ್ಯಗಳು, ಒರಿಗಾಮಿ, ಕಿರಿಗಾಮಿ ಚಟುವಟಿಕೆಗಳು, ಟ್ರಾಫಿಕ್‌ ನಿಯಮಗಳು, ಮೊದಲಾದ ಅನೇಕ ವಿಷಯಗಳನ್ನು ಆಧರಿಸಿದ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು. ನಾನು ನಮ್ಮ ಶಿಕ್ಷಕರಂತೆಯೇ ಬೇರೆ ಶಾಲೆಯ ಮಕ್ಕಳಿಗೆ ವಿವರಣೆ ನೀಡುತ್ತಿದ್ದೇನೆ ಎಂಬ ಹೆಮ್ಮೆ ಅಲ್ಲಿ ಕಾಣುತ್ತಿತ್ತು.   ಎಷ್ಟೋ ಮಕ್ಕಳಿಗೆ ಇತರರಿಗೆ ವಿವರಣೆ ನೀಡಲು ಹೋದಾಗ ಅನೇಕ ಅನುಮಾನಗಳು ತಪ್ಪು ಹೇಳಿದೆನೇನೋ ಎಂಬ ಭಾವ ! ಆಗ ಶಿಕ್ಷಕರೊಂದಿಗೆ ಮತ್ತೆ ಚರ್ಚೆ. ಅನುಭವಜನ್ಯ ಜ್ಞಾನ ಹರಳುಗಟ್ಟಿ ವಿಜ್ಞಾನದೆಡೆಗೆ ಒಲವು ಮೂಡುತ್ತಿತ್ತು.  ಇಂತಹ ಶೈಕ್ಷಣಿಕ ಚಟುವಟಿಕೆಗಳು ಭವಿಷ್ಯದಲ್ಲಿ ವಿಜ್ಞಾನಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇತ್ತೀಚಿಗೆ ತಾನೇ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ತೀರ್ಪುಗಾರನಾಗಿ ಪಾಲ್ಗೊಂಡಿದ್ದೆ. ಸ್ನೇಹಿತರಾದ ಜೀವಶಾಸ್ತ್ರ ಉಪನ್ಯಾಸಕರಾದ ಪ್ರಕಾಶ್ ಸರ್ ಕೂಡ ಪಾಲ್ಗೊಂಡಿದ್ದರು. ಪ್ರಕಾಶ್ರವರು, ಪ್ರತಿಷ್ಠಿತ ಸಂಸ್ಥೆಯೊಂದರ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇನ್ನೊಬ್ಬ ತೀರ್ಪುಗಾರರನ್ನು ಪರಿಚಯಿಸಿದರು. ಅವರು ಮಾತನಾಡುತ್ತಾ, “ಪ್ರಕಾಶ್ ಸರ್ ನನ್ನ ಗುರುಗಳು, 9ನೇ ತರಗತಿಯಲ್ಲಿದ್ದಾಗ ಅವರು ನನ್ನನ್ನು ಇದೇ ರೀತಿಯ ವಿಜ್ಞಾನ ವಸ್ತು ಪ್ರದರ್ಶನವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅದು ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಇಲ್ಲಿವರೆಗೂ ಕರೆತಂದಿದೆ ಎಂದು ಆ ದಿನಗಳನ್ನು ನೆನೆದರು. ಇಂತಹ ಘಟನೆಗಳೆಷ್ಟೋ? ಇವೇ ಅಲ್ಲವೇ ರಾಮನ್ನರ ಸಾಧನೆಯ ಸ್ವಾಂಗೀಕರಣ?  ಪುಟಾಣಿ ವಿಜ್ಞಾನಿಗಳು ಉದಿಸುವಂತಹ ಸನ್ನಿವೇಶಗಳನ್ನು ಸೃಜಿಸುತ್ತಾ ಕಲಿಕೆಯ ಸುಗಮಕಾರರಾಗೋಣ.






















ಕಂಪ್ಯೂಟರ್‌ ಆಪರೇಟಿಂಗ್ ಸಿಸ್ಟಮ್

 ಕಂಪ್ಯೂಟರ್‌ ಆಪರೇಟಿಂಗ್ ಸಿಸ್ಟಮ್

ಲೇಖಕರು: ಸುರೇಶ ಸಂಕೃತಿ, ನಿವೃತ್ತ ಮುಖ್ಯಶಿಕ್ಷಕರು

          

  ಕಂಪ್ಯೂಟರಿನ ಸಾಫ್ಟ್‌‌ ವೇರು ಎಂಬುದು ಕೋಡ್ರೂಪದಲ್ಲಿರುವ ವ್ಯವಸ್ಥಿತಿವಾಗಿ ಹೊಂದಿಸಿರುವ ಹಲವಾರು ಆದೇಶಗಳ ಸಮೂಹ ಅಥವಾ ಗಣ  ಎನ್ನಬಹುದುಕಂಪ್ಯೂಟರಿನ ಸಾಫ್ಟ್ವೇರುಗಳಲ್ಲಿ ಸಿಸ್ಟಂ ಸಾಫ್ಟ್ವೇರ್‌, ಯುಟಿಲಿಟಿ ಸಾಫ್ಟ್ವೇರ್ಮತ್ತು ಅಪ್ಲಿಕೇಷನ್ಸಾಫ್ಟ್ವೇರುಗಳು ಎಂದು ಮೂರು ವಿಭಾಗಗಳು. ಆಪರೇಟಿಂಗ್ಸಿಸ್ಟಂ ಎಂಬುದು ಒಂದು ಸಿಸ್ಟಂ ಸಾಫ್ಟ್ವೇರ್‌. ಆಂಟಿವೈರಸ್‌, ಫೈಲ್‌/ಡಿಸ್ಕ್‌  ಮ್ಯಾನೇಜ್ಮೆಂಟ್‌, ಮುಂತಾದವು ಯುಟಿಲಿಟಿ ಸಾಫ್ಟ್ವೇರ್ಗಳು

ವರ್ಡ್ಪ್ರೋಸೆಸರ್‌,(MS Woŗ̧d, Open Office) ಇಂಟರ್ನೆಟ್ಬ್ರೌಸರ್(Chro̧m INExploreŗe Opera) ದೃಗ್-ಶ್ರವಣ ಅಪ್ಲಿಕೇ಼ಷನ್ಪ್ರೋಗ್ರಾಮುಗಳು ಮುಂತಾದವು ಅಪ್ಲಿಕೇ಼ಷನ್ಸಾಫ್ಟ್ವೇರುಗಳು.‌ ವಿಖ್ಯಾತ ಇಂಗ್ಲಿಷ್ಕವಿ ಜಾರ್ಜ್ ಬೈರನ್ ಮಗಳು ಅಡಾ ಲೌಲೇಸ್ಮೊದಲ ಕಂಪ್ಯೂಟರ್ ಚಾರ್ಲಸ್ಬ್ಯಾಬೇಜನ ಅನಾಲಿಟಿಕಲ್ಮೆಷಿನ್ನಿಗೆ ಪ್ರೋಗ್ರಾಮ್ಬರೆದ ವಿಶ್ವದ ಮೊಟ್ಟ ಮೊದಲ ಸಾಫ್ಟ್ವೇರ್ಪ್ರೊಗ್ರಾಮರ್ಎಂದು ಹೇಳಬಹುದು

ಆಪರೇಟಿಂಗ್ ಸಿಸ್ಟಮ್ (OS) ಒಂದು ನಿರ್ಣಾಯಕ ಸಾಫ್ಟ್ವೇರ್ ಘಟಕವಾಗಿದ್ದು ಅದು ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಅಪ್ಲಿಕೇಶನ್ಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಅವುಗಳ ಪರಸ್ಪರ ಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಸಿಸ್ಟಮ್ ಸಂಪನ್ಮೂಲಗಳ ಸಮರ್ಥ ಬಳಕೆಯನ್ನು ಖಚಿತಪಡಿಸುತ್ತದೆ. ಮೂಲಭೂತವಾಗಿ, ಇದು ಆಧುನಿಕ ಕಂಪ್ಯೂಟಿಂಗ್ ಸಿಸ್ಟಮ್ಗಳ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ, ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು, ಹಾರ್ಡ್ವೇರ್ ಸಂಪನ್ಮೂಲಗಳನ್ನು ನಿರ್ವಹಿಸಲು ಮತ್ತು ಬಳಕೆದಾರರ ಸಂವಹನವನ್ನು ಸಕ್ರಿಯಗೊಳಿಸಲು ವೇದಿಕೆಯನ್ನು ಒದಗಿಸುತ್ತದೆ. ಆಪರೇಟಿಂಗ್ ಸಿಸ್ಟಮ್ಗಳ ಸಮಗ್ರ ಪರಿಶೋಧನೆಯು ಸಮಕಾಲೀನ ಕಂಪ್ಯೂಟಿಂಗ್ ಪರಿಸರದಲ್ಲಿ ಅವುಗಳ ವಿವಿಧ ಘಟಕಗಳು, ಕಾರ್ಯಗಳು, ಪ್ರಕಾರಗಳು ಮತ್ತು ಪ್ರಾಮುಖ್ಯತೆಯನ್ನು ಪರಿಶೀಲಿಸುವುದು ಲೇಖನದ ಗುರಿ.

ಆಪರೇಟಿಂಗ್ ಸಿಸ್ಟಂಗಳ ವಿಕಾಸ

              ಆಪರೇಟಿಂಗ್ ಸಿಸ್ಟಂಗಳು ಮತ್ತು ಕಂಪ್ಯೂಟಿಂಗ್ ತಂತ್ರಜ್ಞಾನ  ಹಿಂದಿನಿಂದಲೂ   ಸಮಾನಾಂತರವಾಗಿ ಮತ್ತು ಪೂರಕವಾಗಿ ವಿಕಾಸವಾಗುತ್ತಾ ಬಂದಿದೆ. ಕಂಪ್ಯೂಟಿಂಗ್ ಆರಂಭಿಕ ದಿನಗಳಲ್ಲಿ ಈಗಿರುವಂತೆ ಯಾವುದೇ ಆಪರೇಟಿಂಗ್ ಸಿಸ್ಟಮ್ಗಳು ಇರಲಿಲ್ಲ. ಕಂಪ್ಯೂಟರ್ಗಳು ಕೆಳಮಟ್ಟದ ಯಂತ್ರ ಭಾಷೆಯ (Low level mechine language) ಸೂಚನೆಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದವು  ಮತ್ತು ಪರಿಣಿತ ಬಳಕೆದಾರರು ಹಾರ್ಡ್ವೇರ್ ಸಂಪನ್ಮೂಲಗಳ ಮೇಲೆ ನೇರ ನಿಯಂತ್ರಣವನ್ನು ಹೊಂದಿದ್ದರು. ಆದಾಗ್ಯೂ, ಕಂಪ್ಯೂಟರ್ಗಳು ಹೆಚ್ಚು ಸಂಕೀರ್ಣವಾದಂತೆ ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ಗಳ ಬೇಡಿಕೆಯು ಬೆಳೆಯುತ್ತಿದ್ದಂತೆ, ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ನಡುವೆ ಒಂದು ರೀತಿಯ ಅಮೂರ್ತತೆಯ ಪದರದ ಅಗತ್ಯವು  ಸ್ಪಷ್ಟವಾಗತೊಡಗಿಯಿತು. ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಆಪರೇಟಿಂಗ್ಸಿಸ್ಟಂಗಳ ಅಭಿವೃದ್ಧಿಯಾಗತೊಡಗಿದೆ.

              ಆರಂಭಿಕ ಆಪರೇಟಿಂಗ್ಸಿಸ್ಟಂಗಳಲ್ಲಿ ಒಂದಾದ ಬ್ಯಾಚ್ ಪ್ರೊಸೆಸಿಂಗ್ ಸಿಸ್ಟಮ್, ಅನುಕ್ರಮವಾದ ಬ್ಯಾಚ್ಗಳಲ್ಲಿ ಕಾರ್ಯಕ್ರಮಗಳನ್ನು  ಸಲ್ಲಿಸಲು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿತು. ವ್ಯವಸ್ಥೆಯು ಬಳಕೆದಾರರ ಹಸ್ತ ಕ್ಷೇಪವಿಲ್ಲದೆಯೇ ಬಹು ಕಾರ್ಯಗಳನ್ನು ಕಾರ್ಯಗತಗೊಳಿಸುವಿಕೆಯನ್ನು ಸ್ವಯಂಚಾಲಿತಗೊಳಿಸುವ ಮೂಲಕ ಕಂಪ್ಯೂಟಿಂಗ್ ಸಂಪನ್ಮೂಲಗಳ ಸಮರ್ಥ ಬಳಕೆಯನ್ನು ಸುಲಭಗೊಳಿಸಿತು.


 

ಆಪರೇಟಿಂಗ್ ಸಿಸ್ಟಮ್ ಘಟಕಗಳು:

              ಆಪರೇಟಿಂಗ್ ಸಿಸ್ಟಮ್ ಹಲವಾರು ಪ್ರಮುಖ ಘಟಕಗಳನ್ನು ಒಳಗೊಂಡಿರುತ್ತದೆ, ಪ್ರತಿಯೊಂದೂ ಹಾರ್ಡ್ವೇರ್ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ, ಪ್ರೋಗ್ರಾಂಗಳನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಒದಗಿಸುವಲ್ಲಿ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತದೆ. ಘಟಕಗಳು ಸೇರಿವೆ:

1. ಕರ್ನಲ್: ಕರ್ನಲ್ ಆಪರೇಟಿಂಗ್ ಸಿಸ್ಟಮ್ ಹೃದಯ ಭಾಗವಾಗಿದ್ದು, ಹಾರ್ಡ್ವೇರಿನಲ್ಲಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಬಳಕೆದಾರರ ಕಾರ್ಯಕ್ರಮಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಹಾರ್ಡ್ವೇರ್ನೊಂದಿಗೆ ನೇರವಾಗಿ ಸಂವಹಿಸುತ್ತದೆ, ಪ್ರಕ್ರಿಯೆ ವೇಳಾಪಟ್ಟಿ, ಮೆಮೊರಿ ಮತ್ತು I/O ಸಾಧನಗಳ ಕಾರ್ಯಗಳನ್ನು ನಿರ್ವಹಿಸುತ್ತದೆ.

2. ಫೈಲ್ ಸಿಸ್ಟಮ್: ಹಾರ್ಡ್ ಡ್ರೈವ್ಗಳು ಮತ್ತು ಸಾಲಿಡ್ ಸ್ಟೇಟ್ ಡ್ರೈವ್ಗಳಂತಹ ಶೇಖರಣಾ ಸಾಧನಗಳಲ್ಲಿ ಫೈಲ್ಗಳನ್ನು ಸಂಘಟಿಸಲು ಮತ್ತು ನಿರ್ವಹಿಸಲು ಫೈಲ್ ಸಿಸ್ಟಮ್ ಜವಾಬ್ದಾರವಾಗಿದೆ. ಇದು ಡೈರೆಕ್ಟರಿಗಳು ಮತ್ತು ಫೈಲ್ಗಳ ಕ್ರಮಾನುಗತ ರಚನೆಯನ್ನು ಒದಗಿಸುತ್ತದೆ, ಹಾಗೆಯೇ ಡೇಟಾವನ್ನು ಓದಲು, ಬರೆಯಲು ಮತ್ತು ಕುಶಲತೆಯಿಂದ ನಿರ್ವಹಿಸುವ ಕಾರ್ಯವಿಧಾನಗಳನ್ನು ಒದಗಿಸುತ್ತದೆ.

3. ಡಿವೈಸ್ ಡ್ರೈವರ್ಗಳು: ಡಿವೈಸ್ ಡ್ರೈವರ್ಗಳು ಕಂಪ್ಯೂಟರಿಗೆ ಜೋಡಿಸಿರುವ ಒಂದು ನಿರ್ದಿಷ್ಟ ಕಾರ್ಯವನ್ನು ಮಾಡುವ ಹಾರ್ಡವೇರನ್ನು ನಿರ್ವಹಿಸುವ ಸಾಫ್ಟವೇರ್ ಘಟಕಗಳಾಗಿರುವೆ, ಉದಾಹರಣೆಗೆ ಆಪರೇಟಿಂಗ್ ಸಿಸ್ಟಮ್ ಮತ್ತು ಪ್ರಿಂಟರ್ಗಳು, ಸ್ಕ್ಯಾನರ್ಗಳು ಮತ್ತು ನೆಟ್ವರ್ಕ್ ಅಡಾಪ್ಟರ್ಗಳಂತಹ ಹಾರ್ಡ್ವೇರ್ ಸಾಧನಗಳಿಗೆ ಡಿವೈಸ್ ಡ್ರೈವರ್ಗಳು ಕೊಂಡಿಗಳಂತೆ ವರ್ತಿಸಿ ಸಂವಹನ ಮಾಡಲು ಅನುವು ಮಾಡಿಕೊಡುತ್ತದೆ.

4. ಬಳಕೆದಾರ ಇಂಟರ್ಫೇಸ್: ಆಪರೇಟಿಂಗ್ ಸಿಸ್ಟಮ್ ಮತ್ತು ಅದರ ಅಪ್ಲಿಕೇಶನ್ಗಳೊಂದಿಗೆ ಸಂವಹನ ನಡೆಸಲು ಬಳಕೆದಾರ ಇಂಟರ್ಫೇಸ್ ಅಥವಾ ಗ್ರಾಫಿಕಲ್ ಯೂಸರ್ ಇಂಟರ್ಫೇಸ್(GUI)ನ್ನು ಸಕ್ರಿಯಗೊಳಿಸುತ್ತದೆ. ನಮ್ಮ ದೇಶದಲ್ಲಿ ನಡೆಸುವ ಸಾರ್ಜನಿಕ ಚುನಾವಣೆಗಳಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಗೂ ಒಂದೊಂದು ಚಿನ್ಹೆಯನ್ನು ನೀಡುವುದು ನಮಗೆಲ್ಲ ತಿಳಿದ ವಿಚಾರವಾಗಿದೆ. ಅಭ್ರರ್ಥಿಯ ಹೆಸರಿನ ಜೊತೆಗೆ ಚಿನ್ಹೆಯನ್ನು ಮತ ಪತ್ರಗಳಲ್ಲಿ ಮುದ್ರಿಸುವ ಮೂಲ ಉದ್ದೇಶವೆಂದರೆ ಮತದಾನ ಮಾಡುವ ವ್ಯಕ್ತಿ ಅನಕ್ಷರಸ್ಥನಾಗಿದ್ದರೂ ಚಿನ್ಹೆಯ ಮೂಲಕ ಅಭ್ಯರ್ಥಿಯನ್ನು ಗುರ್ತಿಸಲು ಅನುಕೂಲವಾಗಲಿ ಎಂದು. ಹಾಗೆಯೆ ಸಂಕೀರ್ಣವಾದ ಕಂಪ್ಯೂಟರ್ಭಾಷೆ ಅರ್ಥವಾಗದವರು/ಬಳಸಲಾಗದವರೂ ಸಹ ಕಂಪ್ಯೂಟರ್ಬಳಸಲು ಅನುಕೂಲ ಮಾಡಿಕೊಡುವುದೇ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ (GUI) ಉದ್ದೇಶ. ನಾವು ಕಂಪ್ಯೂಟರಿನ ಪರದೆಯ ಮೇಲೆ ಕಾಣುವ ಐಕಾನ್ಎಂದು ಕರೆಯುವ ಚಿತ್ರಗಳೆಲ್ಲವೂ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ (GUI)ಗಳೇ ಆಗಿವೆ. ಕಮಾಂಡ್-ಲೈನ್ ಇಂಟರ್ಫೇಸ್ (CLI)  ಎಂಬುದು ಅತ್ಯಂತ ಸಂಕೀರ್ಣವಾದ ಸಾಂಕೇತಿಕ ಭಾಷೆಯಾಗಿದ್ದು ಇದನ್ನು ಕಂಪ್ಯೂಟರ್ಪರಿಣಿತರು ಮಾತ್ರ ಬಳಸಿ ಕಂಪ್ಯೂಟರಿನೊಂದಿಗೆ ಕೆಲಸ ಮಾಡಬಲ್ಲರು. ಆರಂಭದಲ್ಲಿ ಕಂಪ್ಯೂಟರುಗಳನ್ನು (CLI)  ಮೂಲಕವೇ ನಡೆಸಲಾಗುತ್ತಿತ್ತು. 1980 ದಶಕದಲ್ಲಿ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ಗಳ (GUIs) ಅಭಿವೃದ್ಧಿಯು ಬಳಕೆದಾರರ ಅನುಭವವನ್ನು ಸುಲಭಗೊಳಿಸಿತು. ತಾಂತ್ರಿಕವಲ್ಲದ ಬಳಕೆದಾರರಿಗೆ ಕಂಪ್ಯೂಟರ್ಗಳನ್ನು ಹೆಚ್ಚು ಬಳಸುವಂತೆ ಮಾಡುದರ ಮೂಲಕ ಕಂಪ್ಯೂಟರ್ಕ್ರಾಂತಿಗೆ ನಾಂದಿ ಹಾಡಿತು.. ಆಪಲ್ ಮ್ಯಾಕಿಂತೋಷ್ ಸಿಸ್ಟಮ್ ಸಾಫ್ಟ್ವೇರ್ ಮತ್ತು ಮೈಕ್ರೋಸಾಫ್ಟ್ ವಿಂಡೋಸ್ನಂತಹ ಆಪರೇಟಿಂಗ್ ಸಿಸ್ಟಮ್ಗಳು, ಯುನಿಕ್ಸ್ ಆಧಾರಿತ ಉಬುಂಟು ನಂತಹ ಆಪರೇಟಿಂಗ್ ಸಿಸ್ಟಮ್ಗಳು GUI-ಆಧಾರಿತ ಕಂಪ್ಯೂಟಿಂಗ್ ಅನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆಬಳಕೆದಾರ ಇಂಟರ್ಫೇಸ್ GUI, CLI ಅಥವಾ ಧ್ವನಿ ಆಧಾರಿತ ಇಂಟರ್ಫೇಸ್ ರೂಪವನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸಲು ಅನುವುಮಾಡಿಕೊಡುತ್ತದೆ , ಇದು ಆಪರೇಟಿಂಗ್ ಸಿಸ್ಟಮ್ ಮತ್ತು ಬಳಕೆದಾರರ ಆದ್ಯತೆಗಳನ್ನು ಅವಲಂಬಿಸಿರುತ್ತದೆ.

5. ಸಿಸ್ಟಮ್ ಲೈಬ್ರರಿಗಳು: ಸಿಸ್ಟಮ್ ಲೈಬ್ರರಿಗಳು ಪೂರ್ವ-ಲಿಖಿತ ಕೋಡ್ ಸಂಗ್ರಹಗಳಾಗಿವೆ, ಅವು ಸಾಮಾನ್ಯವಾಗಿ ಬಳಸುವ ಕಾರ್ಯಗಳು ಮತ್ತು ಅಪ್ಲಿಕೇಶನ್ಗಳಿಗೆ ಸೇವೆಗಳನ್ನು ಒದಗಿಸುತ್ತದೆ. ಇದು ಡೆವಲಪರ್ಗಳಿಗೆ :ಪೋರ್ಟಬಲ್ ಮತ್ತು ಸಮರ್ಥ ಸಾಫ್ಟ್ವೇರ್ ಅನ್ನು ಬರೆಯಲು ಸುಲಭಗೊಳಿಸುತ್ತದೆ.

6. ಉಪಯುಕ್ತತೆಗಳು ಕಾರ್ಯಾಚರಣಾ ವ್ಯವಸ್ಥೆಗಳು ಸಾಮಾನ್ಯವಾಗಿ ಫೈಲ್ ನಿರ್ವಹಣೆ, ಸಿಸ್ಟಮ್ ಕಾನ್ಫಿಗರೇಶನ್ ಮತ್ತು ಕಾರ್ಯಕ್ಷಮತೆಯ ಮೇಲ್ವಿಚಾರಣೆಯಂತಹ ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಉಪಯುಕ್ತತೆ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗಳಲ್ಲಿ ಫೈಲ್ ಮ್ಯಾನೇಜರ್ಗಳು, ಡಿಸ್ಕ್ ವಿಭಜನಾ ಉಪಕರಣಗಳು ಮತ್ತು ಸಿಸ್ಟಮ್ ಮಾನಿಟರಿಂಗ್ ಉಪಯುಕ್ತತೆಗಳು ಸೇರಿವೆ.

ಆಪರೇಟಿಂಗ್ ಸಿಸ್ಟಮನ ಕಾರ್ಯಗಳು

              ಆಪರೇಟಿಂಗ್ ಸಿಸ್ಟಂಗಳು ಕಂಪ್ಯೂಟರ್ ಸಿಸ್ಟಮ್ಗಳ ಸಮರ್ಥ ಕಾರ್ಯಾಚರಣೆಯನ್ನು ಸುಲಭಗೊಳಿಸಲು ವ್ಯಾಪಕ ಶ್ರೇಣಿಯ ಕಾರ್ಯಗಳನ್ನು ನಿರ್ವಹಿಸುತ್ತವೆ. ಮತ್ತು ಕೆಳಗಿನ ಮುಖ್ಯ ಕಾರ್ಯಗಳನ್ನು ನಿರ್ವಹಿಸುತ್ತವೆ.

 1. ಪ್ರೋಗ್ರಾಂ ಮ್ಯಾನೇಜ್ಮೆಂಟ್: ಆಪರೇಟಿಂಗ್ ಸಿಸ್ಟಂ ಪ್ರೋಗ್ರಾಂಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ, ಪ್ರೋಗ್ರಾಂಗಳನ್ನು ವಿವಿಧ ಅಂಗಗಳಿಗೆ ಹಂಚುವ, ಕಾರ್ಯಗತಗೊಳಿಸುವ, ಫಲಿತಾಂಶವನ್ನು ಪ್ರಕಟಿಸುವ, ಮೆಮೊರಿಯಲ್ಲಿ ಶೇಖರಿಸುವ ಮುಂತಾದವುಗಳನ್ನು ಪ್ರಕ್ರಿಯೆಗಳನ್ನು ನಿಗದಿಪಡಿಸುವುದು, CPU ಸಮಯವನ್ನು ನಿಗದಿಪಡಿಸುವುದು, ಮತ್ತು ಅಂತರ-ಪ್ರಕ್ರಿಯೆ ಸಂವಹನವನ್ನು ಸುಗಮಗೊಳಿಸುವುದನ್ನು ಒಳಗೊಂಡಿರುತ್ತದೆ.

 

2.ಮೆಮೊರಿ ಮ್ಯಾನೇಜ್ಮೆಂಟ್: ಆಪರೇಟಿಂಗ್ ಸಿಸ್ಟಮ್ ಸಿಸ್ಟಮ್ ಮೆಮೊರಿಯನ್ನು ನಿರ್ವಹಿಸುತ್ತದೆ, ಅಗತ್ಯವಿರುವ ಪ್ರಕ್ರಿಯೆಗಳಿಗೆ ಮೆಮೊರಿಯನ್ನು ಹಂಚುತ್ತದೆ ಮತ್ತು ಮೆಮೊರಿಯನ್ನು ಪರಿಣಾಮಕಾರಿಯಾಗಿ ಬಳಸುತ್ತದೆ ಇದು ವರ್ಚುವಲ್ ಮೆಮೊರಿಯಂತಹ ತಂತ್ರಗಳನ್ನು ಒಳಗೊಂಡಿದೆ, ಇದು RAM ಮತ್ತು ಡಿಸ್ಕ್ ಸಂಗ್ರಹಣೆಯ ನಡುವೆ ಡೇಟಾವನ್ನು ವಿನಿಮಯ ಮಾಡುವ ಮೂಲಕ ಭೌತಿಕವಾಗಿ ಲಭ್ಯವಿರುವ ಹೆಚ್ಚಿನ ಮೆಮೊರಿಯನ್ನು ಬಳಸಲು ಪ್ರಕ್ರಿಯೆಗಳನ್ನು ಅನುಮತಿಸುತ್ತದೆ.

3. ಫೈಲ್ ಸಿಸ್ಟಮ್ ಮ್ಯಾನೇಜ್ಮೆಂಟ್: ಆಪರೇಟಿಂಗ್ ಸಿಸ್ಟಮ್ ಶೇಖರಣಾ ಸಾಧನಗಳಲ್ಲಿ ಸಂಗ್ರಹಿಸಲಾದ ಡೇಟಾವನ್ನು ಸಂಘಟಿಸಲು ಮತ್ತು ನಿರ್ವಹಿಸಲು ಫೈಲ್ ಸಿಸ್ಟಮ್ ಅನ್ನು ಒದಗಿಸುತ್ತದೆ. ಇದು ಫೈಲ್ಗಳನ್ನು ರಚಿಸುವುದು, ಓದುವುದು, ಬರೆಯುವುದು ಮತ್ತು ಅಳಿಸುವುದನ್ನು ಒಳಗೊಂಡಿರುತ್ತದೆ, ಜೊತೆಗೆ ಬಳಕೆದಾರನಿಗೆ ಫೈಲಗಳನ್ನು ರಚಿಸುವುದು, ಓದುವುದು, ಅಳಿಸುವುದು ಕುರಿತು ನೀಡಬೇಕಾದ ಅನುಮತಿಗಳು ಮತ್ತು ಮೆಟಾಡೇಟಾ( ಮೆಮೊರಿ ಲೊಕೇಷನಗಳಲ್ಲಿರುವ ಡೇಟಾದ ವಿಳಾಸ ಪಟ್ಟಿ)ವನ್ನು ನಿರ್ವಹಿಸುತ್ತದೆ.

4. ಸಾಧನ ನಿರ್ವಹಣೆ: ಆಪರೇಟಿಂಗ್ ಸಿಸ್ಟಮ್ ಕೀಬೋರ್ಡ್ಗಳು, ಮೌಸಗಳು, ಮಾನೀಟರುಗಳು ಮತ್ತು ನೆಟ್ವರ್ಕ್ ಅಡಾಪ್ಟರ್ಗಳಂತಹ ಹಾರ್ಡ್ವೇರ್ ಸಾಧನಗಳೊಂದಿಗೆ ಸಂವಹನ ನಡೆಸುತ್ತದೆ. ಇದು ಸಾಫ್ಟ್ವೇರ್ ಅಪ್ಲಿಕೇಶನ್ಗಳು ಮತ್ತು ಹಾರ್ಡ್ವೇರ್ ಸಾಧನಗಳ ನಡುವೆ ಸಂವಹನವನ್ನು ಸುಲಭಗೊಳಿಸಲು ಸಾಧನ ಡ್ರೈವರ್ಗಳನ್ನು ಒದಗಿಸುತ್ತದೆ, ಜೊತೆಗೆ ಸಾಧನಗಳನ್ನು ಕಾನ್ಫಿಗರ್ ಮಾಡಲು ಕಾರ್ಯವಿಧಾನಗಳನ್ನು ಒದಗಿಸುತ್ತದೆ.

5. ಬಳಕೆದಾರ ಇಂಟರ್ಫೇಸ್ ಮ್ಯಾನೇಜ್ಮೆಂಟ್: ಆಪರೇಟಿಂಗ್ ಸಿಸ್ಟಮ್ ಸಿಸ್ಟಮ್ ಮತ್ತು ಅದರ ಅಪ್ಲಿಕೇಶನ್ಗಳೊಂದಿಗೆ ಸಂವಹನ ನಡೆಸಲು ಬಳಕೆದಾರ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಇದು ಗ್ರಾಫಿಕಲ್ ಇಂಟರ್ಫೇಸ್ಗಳು, ಕಮಾಂಡ್-ಲೈನ್ ಇಂಟರ್ಫೇಸ್ಗಳು ಮತ್ತು ಧ್ವನಿ ಆಧಾರಿತ ಇಂಟರ್ಫೇಸ್ಗಳನ್ನು ಒಳಗೊಂಡಿರುತ್ತದೆ, ಇದು ಆಪರೇಟಿಂಗ್ ಸಿಸ್ಟಮ್ ಪ್ರಕಾರ ಮತ್ತು ಬಳಕೆದಾರರ ಆದ್ಯತೆಗಳನ್ನು ಅವಲಂಬಿಸಿರುತ್ತದೆ.

6. ಭದ್ರತೆ ಮತ್ತು ಪ್ರವೇಶ ನಿಯಂತ್ರಣ: ಆಪರೇಟಿಂಗ್ ಸಿಸ್ಟಮ್ ಸಿಸ್ಟಮ್ ಮತ್ತು ಅದರ ಡೇಟಾವನ್ನು ಅನಧಿಕೃತ ಪ್ರವೇಶ ಮತ್ತು ದುರುದ್ದೇಶಪೂರಿತ ದಾಳಿಯಿಂದ ರಕ್ಷಿಸಲು ಫಯರ್‌ ವಾಲ್ನಂತಹ ಭದ್ರತಾ ಕ್ರಮಗಳನ್ನು ನಿರ್ವಹಿಸುತ್ತದೆ. ಇದು ಬಳಕೆದಾರರ ದೃಢೀಕರಣ ಕಾರ್ಯವಿಧಾನಗಳು, ಪ್ರವೇಶ ನಿಯಂತ್ರಣ ನೀತಿಗಳು, ಎನ್ಕ್ರಿಪ್ಶನ್ ಮತ್ತು ಆಂಟಿವೈರಸ್ ಸಾಫ್ಟ್ವೇರ್ ಅನ್ನು ಒಳಗೊಂಡಿರುತ್ತದೆ.

7. ನೆಟ್ವರ್ಕಿಂಗ್ ಮತ್ತು ಸಂವಹನ: ಆಪರೇಟಿಂಗ್ ಸಿಸ್ಟಮ್ ನೆಟ್ವರ್ಕಿಂಗ್ ಪ್ರೋಟೋಕಾಲ್ಗಳು ಮತ್ತು ಸಂವಹನ ತಂತ್ರಜ್ಞಾನಗಳನ್ನು ಬೆಂಬಲಿಸುತ್ತದೆ, ಕಂಪ್ಯೂಟರ್ಗಳನ್ನು ನೆಟ್ವರ್ಕ್ಗಳಿಗೆ ಸಂಪರ್ಕಿಸಲು ಮತ್ತು ಇತರ ಸಾಧನಗಳೊಂದಿಗೆ ಸಂವಹನ ಮಾಡಲು ಅನುವು ಮಾಡಿಕೊಡುತ್ತದೆ. ಇದು TCP/IP ನೆಟ್ವರ್ಕಿಂಗ್, ವೈರ್ಲೆಸ್ ನೆಟ್ವರ್ಕಿಂಗ್ ಮತ್ತು ಫೈಲ್ ಹಂಚಿಕೆ ಮತ್ತು ರಿಮೋಟ್ ಪ್ರವೇಶದಂತಹ ನೆಟ್ವರ್ಕ್ ಸೇವೆಗಳನ್ನು ಒಳಗೊಂಡಿರುತ್ತದೆ.

8. ದೋಷ ನಿರ್ವಹಣೆ ಮತ್ತು ಮರುಪಡೆಯುವಿಕೆ: ಆಪರೇಟಿಂಗ್ ಸಿಸ್ಟಮ್ ಸಿಸ್ಟಮ್ ಕಾರ್ಯಾಚರಣೆಯ ಸಮಯದಲ್ಲಿ ಸಂಭವಿಸುವ ದೋಷಗಳನ್ನು ಪತ್ತೆ ಹಚ್ಚಲು ಮತ್ತು ನಿರ್ವಹಿಸಲು ಕಾರ್ಯವಿಧಾನಗಳನ್ನು ಒದಗಿಸುತ್ತದೆ. ವೈಫಲ್ಯದ ಸಂದರ್ಭದಲ್ಲಿ ಸಿಸ್ಟಮ್ ಸ್ಥಿರತೆ ಮತ್ತು ಸಮಗ್ರತೆಯನ್ನು ಮರುಸ್ಥಾಪಿಸಲು ದೋಷ ಲಾಗಿಂಗ್, ದೋಷ ಸಹಿಷ್ಣುತೆ ಮತ್ತು ಚೇತರಿಕೆ ಕಾರ್ಯವಿಧಾನಗಳನ್ನು ಇದು ಒಳಗೊಂಡಿದೆ.

ಆಪರೇಟಿಂಗ್ ಸಿಸ್ಟಮ್ಗಳ ವಿಧಗಳು

ಆಪರೇಟಿಂಗ್ ಸಿಸ್ಟಂಗಳು ವಿವಿಧ ಪ್ರಕಾರಗಳಲ್ಲಿ ಬರುತ್ತವೆ, ಪ್ರತಿಯೊಂದೂ ನಿರ್ದಿಷ್ಟ ಕಂಪ್ಯೂಟಿಂಗ್ ಪರಿಸರಗಳು ಮತ್ತು ಸಾಧನ ವರ್ಗಗಳಿಗೆ ಅನುಗುಣವಾಗಿರುತ್ತವೆ. ಕೆಲವು ಸಾಮಾನ್ಯ ವಿಧಗಳು ಸೇರಿವೆ:

1. ಡೆಸ್ಕ್ಟಾಪ್ ಆಪರೇಟಿಂಗ್ ಸಿಸ್ಟಂಗಳು: ಡೆಸ್ಕ್ಟಾಪ್ ಆಪರೇಟಿಂಗ್ ಸಿಸ್ಟಮ್ಗಳನ್ನು ವೈಯಕ್ತಿಕ ಕಂಪ್ಯೂಟರ್ಗಳು ಮತ್ತು ವರ್ಕ್ಸ್ಟೇಷನ್ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ, GUI, CLIಗಳು, ಮಲ್ಟಿಟಾಸ್ಕಿಂಗ್ ಮತ್ತು ಮಲ್ಟಿಮೀಡಿಯಾ ಬೆಂಬಲದಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಉದಾಹರಣೆಗಳಲ್ಲಿ ಮೈಕ್ರೋಸಾಫ್ಟ್ ವಿಂಡೋಸ್, ಓಎಸ್ಎಕ್ಸ್ ಮತ್ತು ವಿವಿಧ ಲಿನಕ್ಸ್ ವಿತರಣೆಗಳು ಸೇರಿವೆ.

2. ಸರ್ವರ್ ಆಪರೇಟಿಂಗ್ ಸಿಸ್ಟಂಗಳು: ಸರ್ವರ್ ಆಪರೇಟಿಂಗ್ ಸಿಸ್ಟಮ್ಗಳು ಸರ್ವರ್ ಹಾರ್ಡ್ವೇರ್ಗೆ ಹೊಂದುವಂತೆ ಮಾಡಲಾಗಿದ್ದು, ಸ್ಥಿರತೆ, ಕಾರ್ಯಕ್ಷಮತೆ ಮತ್ತು ಸ್ಕೇಲೆಬಿಲಿಟಿ ಮೇಲೆ ಕೇಂದ್ರೀಕರಿಸುತ್ತದೆ. ಅವು ಸಾಮಾನ್ಯವಾಗಿ GUI ಇಂಟರ್ಫೇಸ್ಗಳನ್ನು ಹೊಂದಿರುವುದಿಲ್ಲ ಮತ್ತು ನೆಟ್ವರ್ಕಿಂಗ್, ಭದ್ರತೆ ಮತ್ತು ಸಂಪನ್ಮೂಲ ನಿರ್ವಹಣೆಗೆ ಆದ್ಯತೆ ನೀಡುತ್ತವೆ. ಉದಾಹರಣೆಗಳಲ್ಲಿ ವಿಂಡೋಸ್ ಸರ್ವರ್, ಸೆಂಟೋಸ್ ಮತ್ತು ಉಬುಂಟು ಸರ್ವರ್ನಂತಹ ಲಿನಕ್ಸ್ ವಿತರಣೆಗಳು ಮತ್ತು ಫ್ರೀಬಿಎಸ್ಡಿ ಯಂತಹ ವಿಶೇಷ ಸರ್ವರ್ ಆಪರೇಟಿಂಗ್ ಸಿಸ್ಟಂಗಳು ಸೇರಿವೆ.

3. ಮೊಬೈಲ್ ಆಪರೇಟಿಂಗ್ ಸಿಸ್ಟಂಗಳು: ಮೊಬೈಲ್ ಆಪರೇಟಿಂಗ್ ಸಿಸ್ಟಂಗಳನ್ನು ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು ಇತರ ಮೊಬೈಲ್ ಸಾಧನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ, ಸ್ಪರ್ಶ ಆಧಾರಿತ ಇಂಟರ್ಫೇಸ್ಗಳು, ವಿದ್ಯುತ್ ದಕ್ಷತೆ ಮತ್ತು ಸಂಪರ್ಕವನ್ನು ಒತ್ತಿಹೇಳುತ್ತದೆ. ಉದಾಹರಣೆಗಳಲ್ಲಿ Android, iOS ಮತ್ತು Windows Mobile ಸೇರಿವೆ. ಮೂಲಕಂಪ್ಯೂಟರುಗಳಿಗೂ ಮೊಬೈಲುಫೋನುಗಳಿಗಿರುವ ಮುಖ್ಯ ವ್ಯತ್ಯಾಸವೆಂದರೆ ಮೊಬೈಲ್ಫೋನುಗಳನ್ನು ಬಳಸಿಕೊಂಡು ಕಂಪ್ಯೂಟರುಗಳಿಗೆ ಸಾಫ್ಟ್ವೇರ್ಪ್ರೋಗ್ರಾಂ ಬರೆಯಲಾಗದು.

4. ಎಂಬೆಡೆಡ್ ಆಪರೇಟಿಂಗ್ ಸಿಸ್ಟಂಗಳು: ಇವು ಎಂಬೆಡೆಡ್ ಸಿಸ್ಟಮ್ಗಳಿಗಾಗಿ ವಿನ್ಯಾಸಗೊಳಿಸಲಾದ ಹಗುರವಾದ ಓಎಸ್ಗಳಾಗಿವೆ, ಉದಾಹರಣೆಗೆ  ರೋಬೋಟುಗಳು, ಉಪಗ್ರಹಗಳು, ಕೈಗಾರಿಕಾ ಉಪಕರಣಗಳು, ವಾಷಿಂಗ್ಮೆಷೀನು, ಕಾರುಗಳು, ಮುಂತಾದ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಐಒಟಿ ಸಾಧನಗಳು. ನೈಜ-ಸಮಯದಲ್ಲಿ ಸ್ಪಂದಿಸುವಿಕೆ, ಕಿರಿದಾದ ಗಾತ್ರ ಮತ್ತು ವಿಶ್ವಾಸಾರ್ಹತೆ ಮುಂತಾದವುಗಳಿಗೆ  ಆದ್ಯತೆ ನೀಡಿ ಆಪರೇಟಿಂಗ್ ಸಿಸ್ಟಂಗಳನ್ನು ಬರೆಯುತ್ತಾರೆ. ಉದಾಹರಣೆಗಳಲ್ಲಿ ಎಂಬೆಡೆಡ್ ಲಿನಕ್ಸ್, ಫ್ರೀಆರ್ಟಿಒಎಸ್ ಮತ್ತು ವಿಎಕ್ಸ್ವರ್ಕ್ಸ್ ಸೇರಿವೆ.

 ಆಪರೇಟಿಂಗ್ ಸಿಸ್ಟಂಗಳ ಮಹತ್ವ

ಆಧುನಿಕ ಕಂಪ್ಯೂಟಿಂಗ್ ಪರಿಸರದಲ್ಲಿ ಆಪರೇಟಿಂಗ್ ಸಿಸ್ಟಂಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ, ತಂತ್ರಜ್ಞಾನ ಮತ್ತು ಸಮಾಜದ ವಿವಿಧ ಅಂಶಗಳ ಮೇಲೆ ಪ್ರಭಾವ ಬೀರುತ್ತವೆ. ಅವುಗಳ ಕೆಲವು ಪ್ರಮುಖ ಪ್ರಾಮುಖ್ಯತೆಗಳು ಸೇರಿವೆ:

1. ನಾವೀನ್ಯತೆಗಾಗಿ ವೇದಿಕೆ: ಆಪರೇಟಿಂಗ್ ಸಿಸ್ಟಮ್ಗಳು ಸಾಫ್ಟ್ವೇರ್ ಡೆವಲಪರ್ಗಳಿಗೆ ನವೀನ ಅಪ್ಲಿಕೇಶನ್ಗಳು ಮತ್ತು ಸೇವೆಗಳನ್ನು ರಚಿಸಲು ವೇದಿಕೆಯನ್ನು ಒದಗಿಸುವುದರ ಮೂಲಕ ಸುಸ್ಥಿರ ಉದ್ಯೋಗಾವಕಾಶ ಒದಗಿಸುತ್ತವೆ. ಅವು ಪ್ರಮಾಣೀಕೃತ ಇಂಟರ್ಫೇಸ್ಗಳು ಮತ್ತು ಅಮೂರ್ತ ಲೇಯರ್ಗಳನ್ನು ನೀಡುತ್ತವೆ, ಡೆವಲಪರ್ಗಳು ಹಾರ್ಡ್ವೇರ್ ಸಂಕೀರ್ಣತೆಗಳ ಬಗ್ಗೆ ಚಿಂತಿಸದೆ ಅಪ್ಲಿಕೇಶನ್ ತರ್ಕದ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.

2. ವರ್ಧಿತ ಬಳಕೆದಾರ ಅನುಭವ: ಆಪರೇಟಿಂಗ್ ಸಿಸ್ಟಮ್ಗಳು ಅರ್ಥಗರ್ಭಿತ ಇಂಟರ್ಫೇಸ್ಗಳು, ಸಾಧನಗಳೊಂದಿಗೆ ತಡೆರಹಿತ ಸಂವಹನ ಮತ್ತು ವಿವಿಧ ಹಾರ್ಡ್ವೇರ್ ಕಾನ್ಫಿಗರೇಶನ್ಗಳಾದ್ಯಂತ ಸ್ಥಿರವಾದ ಕಾರ್ಯಕ್ಷಮತೆಯನ್ನು ಒದಗಿಸುವ ಮೂಲಕ ಬಳಕೆದಾರರ ಅನುಭವಕ್ಕೆ ಕೊಡುಗೆ ನೀಡುತ್ತವೆ. ಅವು ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಸಂಪನ್ಮೂಲಗಳನ್ನು ಸಲೀಸಾಗಿ ಪಡೆಯಲು ಬಳಕೆದಾರಿಗೆ ಅನುವುಮಾಡಿಕೊಡುತ್ತವೆ.

3. ಸಂಪರ್ಕ ಮತ್ತು ಸಹಯೋಗ: ಆಪರೇಟಿಂಗ್ ಸಿಸ್ಟಮ್ಗಳು ನೆಟ್ವರ್ಕಿಂಗ್ ಪ್ರೋಟೋಕಾಲ್ಗಳು ಮತ್ತು ಸಂವಹನ ತಂತ್ರಜ್ಞಾನಗಳನ್ನು ಬೆಂಬಲಿಸುತ್ತವೆ, ಸಾಧನಗಳ ನಡುವೆ ಸಂಪರ್ಕವನ್ನು ಸುಗಮಗೊಳಿಸುತ್ತವೆ ಮತ್ತು ಇಂಟರ್ನೆಟ್ ಮತ್ತು ನೆಟ್ವರ್ಕ್ ಸಂಪನ್ಮೂಲಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸುತ್ತವೆ. ಸಹಯೋಗ, ಸಂವಹನ ಮತ್ತು ಮಾಹಿತಿ ಹಂಚಿಕೆಯನ್ನು ಸಕ್ರಿಯಗೊಳಿಸುವಲ್ಲಿ ಅವು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

               4. ಉತ್ಪಾದಕತೆ ಮತ್ತು ದಕ್ಷತೆ: ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ಗಳನ್ನು ಒದಗಿಸುವ ಮೂಲಕ, ಆಪರೇಟಿಂಗ್ ಸಿಸ್ಟಮ್ಗಳು ವೈಯಕ್ತಿಕ ಮತ್ತು ವೃತ್ತಿಪರ ಸೆಟ್ಟಿಂಗ್ಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತವೆ. ಅವು ಬಹುಕಾರ್ಯಕ,, ಪುನರಾವರ್ತಿತ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಮತ್ತು ಇತರರೊಂದಿಗೆ ಪರಿಣಾಮಕಾರಿಯಾಗಿ ಸಹಕರಿಸಲು ಬಳಕೆದಾರರನ್ನು ಸಕ್ರಿಯಗೊಳಿಸುತ್ತವೆ.

              5. ವಿಶ್ವಾಸಾರ್ಹತೆ ಮತ್ತು ಭದ್ರತೆ: ಕಂಪ್ಯೂಟರ್ ಸಿಸ್ಟಮ್ಗಳ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಪರೇಟಿಂಗ್ ಸಿಸ್ಟಮ್ಗಳು ಅತ್ಯಗತ್ಯ. ದೃಢವಾದ ದೋಷ-ನಿರ್ವಹಣೆಯ ಕಾರ್ಯವಿಧಾನಗಳು, ಬ್ಯಾಕ್ಅಪ್ ಮತ್ತು ಮರುಪಡೆಯುವಿಕೆಯ ಪರಿಹಾರಗಳು ಮತ್ತು ಬೆದರಿಕೆಗಳು ಮತ್ತು ದುರ್ಬಲತೆಗಳಿಂದ ರಕ್ಷಿಸಲು ಭದ್ರತಾ ವೈಶಿಷ್ಟ್ಯಗಳನ್ನು ಕಾರ್ಯಗತಗೊಳಿಸುತ್ತವೆ.

              20 ನೇ ಶತಮಾನದ ಅಂತ್ಯದಲ್ಲಿ ನೆಟ್ವರ್ಕಿಂಗ್ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯು ನೆಟ್ವರ್ಕ್ ಆಪರೇಟಿಂಗ್ ಸಿಸ್ಟಮ್ಗಳಿಗೆ ಕಾರಣವಾಯಿತು, ಇದು ನೆಟ್ವರ್ಕ್ ಪರಿಸರದಲ್ಲಿ ಬಹು ಕಂಪ್ಯೂಟರ್ಗಳ ನಡುವೆ ಸಂಪನ್ಮೂಲ ಹಂಚಿಕೆ ಮತ್ತು ಸಂವಹನವನ್ನು ಸುಲಭಗೊಳಿಸುತ್ತದೆ. ಉದಾಹರಣೆಗಳಲ್ಲಿ ನೋವೆಲ್ ನೆಟ್ವೇರ್ ಮತ್ತು ಮೈಕ್ರೋಸಾಫ್ಟ್ ವಿಂಡೋಸ್ ಸರ್ವರ್ ಸೇರಿವೆ.

               ಇಂದು, ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಕಂಪ್ಯೂಟಿಂಗ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ನಂತಹ ಆಧುನಿಕ ಕಂಪ್ಯೂಟಿಂಗ್ ಮಾದರಿಗಳ ಬೇಡಿಕೆಗಳನ್ನು ಪೂರೈಸಲು ಆಪರೇಟಿಂಗ್ ಸಿಸ್ಟಮ್ಗಳು ವಿಕಸನಗೊಳ್ಳುತ್ತಲೇ ಇವೆ. ಕ್ಲೌಡ್-ಆಧಾರಿತ ಆಪರೇಟಿಂಗ್ ಸಿಸ್ಟಮ್ಗಳಾದ ಲಿನಕ್ಸ್-ಆಧಾರಿತ ವಿತರಣೆಗಳು ಸರ್ವರ್ಗಳು ಮತ್ತು ಕಂಟೈನರ್ ಆರ್ಕೆಸ್ಟ್ರೇಶನ್ ಪ್ಲಾಟ್ಫಾರ್ಮ್ಗಳಾದ ಕುಬರ್ನೆಟ್ಗಳು ವಿತರಿಸಿದ ಕಂಪ್ಯೂಟಿಂಗ್ ಪರಿಸರವನ್ನು ನಿರ್ವಹಿಸಲು ಅಗತ್ಯ ಸಾಧನಗಳಾಗಿವೆ.

      ಕೊನೆಯದಾಗಿ, ಆಪರೇಟಿಂಗ್ ಸಿಸ್ಟಂಗಳು ಕಂಪ್ಯೂಟರ್ಗಳು ಮತ್ತು ಸಾಧನಗಳ ಸಮರ್ಥ ಕಾರ್ಯಾಚರಣೆಯನ್ನು ಸುಲಭಗೊಳಿಸುವ ಅನಿವಾರ್ಯ ಸಾಫ್ಟ್ವೇರ್ ಘಟಕಗಳಾಗಿವೆ. ಅವು ಹಾರ್ಡ್ವೇರ್ ಸಂಪನ್ಮೂಲಗಳನ್ನು ನಿರ್ವಹಿಸುತ್ತಾರೆ, ಸಾಫ್ಟ್ವೇರ್ ಅಪ್ಲಿಕೇಶನ್ಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತವೆ ಮತ್ತು ವಿವಿಧ ಇಂಟರ್ಫೇಸ್ಗಳ ಮೂಲಕ ಬಳಕೆದಾರರ ಸಂವಹನವನ್ನು ಸಕ್ರಿಯಗೊಳಿಸುತ್ತವೆ. ವಿಭಿನ್ನ ಕಂಪ್ಯೂಟಿಂಗ್ ಪರಿಸರದಲ್ಲಿ ಸಿಸ್ಟಮ್ ಸ್ಥಿರತೆ, ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಉಪಯುಕ್ತತೆಯನ್ನು ಖಾತ್ರಿಪಡಿಸುವಲ್ಲಿ ಆಪರೇಟಿಂಗ್ ಸಿಸ್ಟಮ್ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.