ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, October 7, 2024

2024 ಅಕ್ಟೋಬರ್‌ ತಿಂಗಳ ಲೇಖನಗಳು

2024 ಅಕ್ಟೋಬರ್‌ ತಿಂಗಳ ಲೇಖನಗಳು  

ದಶಕಗಳಲ್ಲಿ ಒಮ್ಮೆ ಅರಳುವ  ಕೆಲವು ವಿಶಿಷ್ಟ ಹೂಗಳು :  ಸುರೇಶ ಸಂಕೃತಿ 
ವಿಶ್ವ ಮಾನಸಿಕ ಆರೋಗ್ಯ ದಿನ - ಬಿ.ಎನ್.ರೂಪ,
"ಗುಬ್ಬಚ್ಚಿ ಉಳಿಸಿ, ಜೀವ ವೈವಿಧ್ಯ ಪೋಷಿಸಿ". ಡಾ. ಎಲ್. ಶಶಿಕುಮಾರ್ 
ಮಡಿಕೆಗಳು ಮತ್ತು ರಂಧ್ರಗಳು : ರಮೇಶ, ವಿ, ಬಳ್ಳಾ  
ಕಲಿಕೆ ಸ್ವಪರೀಕ್ಷೆ  : ಪ್ರೊ||ಎಮ್.ಆರ್.ನಾಗರಾಜು, 
"ಹೆಣ್ಣು ಬಾಳಿನ ಕಣ್ಣು" ಮಗಳು ಮನೆಯ ನಂದಾದೀಪ : ಬಸವರಾಜ ಎಮ್ ಯರಗುಪ್ಪಿ
ರಾಜ್ಯ ಪ್ರಶಸ್ತಿ ಪುರಸ್ಕೃತ ಗಣಿತ -ವಿಜ್ಞಾನ ಶಿಕ್ಷಕ ರಂಗನಾಥ್ ಜಿ - : ರಾಮಚಂದ್ರ ಭಟ್‌ ಬಿ.ಜಿ. 
ಅಕ್ಟೋಬರ್ ತಿಂಗಳ ಸೈನ್ಟೂನ್  : ಜಯಶ್ರೀ ಶರ್ಮ 


ರಾಜ್ಯ ಪ್ರಶಸ್ತಿ ಪುರಸ್ಕೃತ ಗಣಿತ-ವಿಜ್ಞಾನ ಶಿಕ್ಷಕ ರಂಗನಾಥ್‌ ಜಿ

ರಾಜ್ಯಪ್ರಶಸ್ತಿ ಪುರಸ್ಕೃತ ಗಣಿತ-ವಿಜ್ಞಾನ ಶಿಕ್ಷಕ ರಂಗನಾಥ್ ಜಿ

                                               ಲೇ:     ಶ್ರೀ.ರಾಮಚಂದ್ರ ಭಟ್‌ ಬಿ.ಜಿ. 


ಗಣಿತ, ವಿಜ್ಞಾನ ವಿಷಯಗಳು ಅನಾದಿ ಕಾಲದಿಂದಲೂ ಮನುಷ್ಯನಲ್ಲಿ ಆಲೋಚನಾ ಶಕ್ತಿ ಉದ್ದೀಪಿಸುವ, ತರ್ಕ-ವಿಶ್ಲೇಷಣೆ ಹಾಗೂ ಅಂತರ್‌ ದೃಷ್ಟಿಗಳನ್ನು ಬಯಸುವ ಅಧ್ಯಯನ ಶಿಸ್ತು ಎನಿಸಿವೆ. ಬಹಳಷ್ಟು ಜನರಿಗೆ ಗಣಿತ ಅನೇಕ ಬಾರಿ ಗಗನ ಕುಸುಮ ಎಂದೆನಿಸಬಹುದು. ಮಕ್ಕಳಿಗೆ ಇಂತಹ ತರ್ಕಬದ್ಧ ವಿಷಯ ಬೋಧನೆಯೂ ಅಷ್ಟೇ ಸವಾಲಿನದ್ದಾಗಿದೆ. ಹೊಸ ವಿಧಾನಗಳ ನಿರಂತರ ಅನ್ವೇಷಣೆಯ ಅಗತ್ಯತೆ ಶಿಕ್ಷಕರಿಗಿದೆ. 
ನವ್ಯ ಬೊಧನಾ ವಿಧಾನಗಳನ್ನು ಮೈಗೂಡಿಸಿ ಅಳವಡಿಸಿಕೊಂಡರೆ, ವಿಷಯ ಬೋಧನೆ ಸಲೀಸಾಗಿ ಮಗು ತನ್ನದೇ ವೇಗದಲ್ಲಿ ಕಲಿಕೆಯನ್ನು ಕಟ್ಟಿಕೊಳ್ಳಲು ನಡೆಸಬೇಕಾದ ಸುಗಮಗಾರಿಕೆಯೂ ಸರಾಗವೆನಿಸುತ್ತದೆ. ಇದಕ್ಕೆ ಸಾಕಷ್ಟು ಮಾನಸಿಕ ಸಿದ್ಧತೆಯೂ ಬೇಕು. ಇಂತಹ ಅಪರೂಪದ ಗುಣಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಮೇಳೈಸಿದ ಗಾರುಡಿಗ ಶಿಕ್ಷಕ ಬಂಧುವೇ ೨೦೨೪ ನೇ ಸಾಲಿನ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ರಂಗನಾಥ್‌ ಜಿ. 
                                                                                            
ಶ್ರೀಯುತ ರಂಗನಾಥ್ ಜಿ ಯವರಿಗೆ ವ್ಯಾಸಂಗದ ಅವಧಿಯಿಂದಲೂ ಗಣಿತ ವಿಜ್ಞಾನಗಳು ಕುತೂಹಲ ಕೆರಳಿಸುವ ವಿಷಯಗಳು. ನಾಡಿನ ಹೆಮ್ಮೆಯ ಶಿಕ್ಷಣ ತಜ್ಞ , ಭೌತಶಾಸ್ತ್ರಜ್ಞ, ಲೇಖಕ, ಉಪಕುಲಪತಿ ಎಂಬೆಲ್ಲ ಸ್ಫೂರ್ತಿಯ ಸ್ರೋತ ಮಾನ್ಯ ಶ್ರೀ ನರಸಿಂಹಯ್ಯನವರ ಶಿಷ್ಯತ್ವ ಅಂದ ಮೇಲೆ ಕೇಳ ಬೇಕೆ ? ಅವರ ಚುಂಬಕ ವ್ಯಕ್ತಿತ್ವದ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದುಂಟೇ?

ನ್ಯಾಷನಲ್‌ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲೇ ವೈಜ್ಞಾನಿಕ ಮನೋಭಾವದ ಕಿಡಿ ಹೊತ್ತಿತು. ಶಿಕ್ಷಕ ಹುದ್ದೆಗೆ ಬಂದ ಮೇಲಂತೂ ಪ್ರಾಯೋಗಿಕವಾಗಿ ಮಕ್ಕಳಲ್ಲಿ ಈ ಗುಣವನ್ನು ಮೂಡಿಸುವ ಕಾರ್ಯ ನಡೆಯುತ್ತಲೇ ಬಂತು.
೧೬ ವರ್ಷಗಳ ಸೇವೆಯಲ್ಲಿ ಸಾಧನೆಯ ಹರವಿನ ಮಜಲುಗಳು ಹಲವಾರು.  ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಛತ್ರಖಾನೆ ಚಂದಾಪುರ ಆನೇಕಲ್ ತಾಲ್ಲೂಕುಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶ್ರದ್ಧಾವಾನ್ ಲಭತೇ ಜ್ಞಾನಂ ಎನ್ನುವುದನ್ನೇ ಮೂಲ ಮಂತ್ರವನ್ನಾಗಿಸಿ ಕೊಂಡಿದ್ದಾರೆ. ಎಳೆಯ ಮಕ್ಕಳ ಕೂತೂಹಲವನ್ನೇ ಬಂಡವಾಳವಾಗಿಸಿ ಅದರ ಮೇಲೆ ವಿಜ್ಞಾನದ ಮಹಲನ್ನು ಕಟ್ಟುವಾಸೆ ಅವರದ್ದು. ನೈಸರ್ಗಿಕ ವಿಸ್ಮಯಗಳ ಹಿಂದಿನ ತರ್ಕವನ್ನು ಮಕ್ಕಳಿಗೆ ಅರಿವಾಗುವಂತೆ ಮನಸ್ಸಿನಲ್ಲೊಂದು ಚಿತ್ರವನ್ನು ಮೂಡಿಸುವ ವಿನೂತನ ಕಲಿಕೆಯ ವಿಧಾನಗಳನ್ನು ಅವರು ರೂಢಿಸಿಕೊಂಡಿದ್ದಾರೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಿಕ್ಷಕರಾಗಿ, ಮೂಢನಂಬಿಕೆಗಳ ವಿರುದ್ಧ ತೊಡೆ ತಟ್ಟಿ, ಸಾಮಾಜಿಕ ಕಳಕಳಿಯ ಹೋರಾಟಗಾರರಾದ ಶ್ರೀ ನರೇಂದ್ರ ನಾಯಕ್ಶ್ರೀ ಹುಲಿಕಲ್ ನಟರಾಜ್ ರವರಿಂದ ಶಿಷ್ಯದೀಕ್ಷೆ ಪಡೆದು  ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಷ್ಟೇ ಅಲ್ಲದೇ ಪೋಷಕರು ಹಾಗೂ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವ ಧನಾತ್ಮಕ ಸಾಮಾಜಿಕ ಚಿಂತನೆಗಳನ್ನು ಮೂಡಿಸುವ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

 
     ಕಳೆದೊಂದು ದಶಕದಿಂದ ನಾನವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ರಾಜ್ಯ ಮಟ್ಟದ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ   ಶಿಕ್ಷಕರಿಗೆ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದಾರೆ. ಪ್ರತಿ ವರ್ಷ ವಿಜ್ಞಾನ ದಿನಾಚರಣೆ , ಗಣಿತ ದಿನಾಚರಣೆಗಳಲ್ಲಿ ಮಕ್ಕಳಿಂದಲೇ ಮಾಡಿದ TLM ಗಳನ್ನು ಬಳಸಿ ವಸ್ತುಪ್ರದರ್ಶನಗಳನ್ನು ಮಾಡುತ್ತಾ ಮಕ್ಕಳಿಗೆ ಪ್ರಾಯೋಗಿಕವಾಗಿ ಮಾಡಿ ಕಲಿ ತತ್ವವನ್ನು ಬೋಧಿಸುತ್ತಿದ್ದಾರೆ. ಇದರ ಜೊತೆಗೆ ನವ್ಯ ವಿಧಾನಗಳಾದ ICT ಬಳಕೆ,  ಒರಿಗಾಮಿ ಹಾಗೂ ಕಿರಿಗಾಮಿಗಳನ್ನು ಬಳಸಿ ಗಣಿತದ ಅನೇಕ ಮಾದರಿಗಳನ್ನು ತಯಾರಿಸಿ ಕ್ಲಿಷ್ಟವೆನಿಸುವ ಕಲಿಕಾಂಶಗಳನ್ನು ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಬೋಧಿಸುತ್ತಿದ್ದಾರೆ.

        ಶ್ರೀಯುತರು ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಹಲವಾರು ಸಂಘ ಸಂಸ್ಥೆಗಳ ವೈಜ್ಞಾನಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಶ್ರೀಯುತರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಂಟಿ ಕಾರ್ಯದರ್ಶಿಯಾಗಿ, ಭಾರತ ಜ್ಞಾನವಿಜ್ಞಾನ ಸಮಿತಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿ, ವಿಜ್ಞಾನ ಬಿಂದು, NATIONAL COUNCIL OF TEACHERS SCIENTIST'S ಬೆಂಗಳೂರು ದಕ್ಷಿಣ ಜಿಲ್ಲೆಯ ನಿರ್ದೇಶಕರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರು ವಿಜ್ಞಾನ ಜಾಥಾ, ಕರ್ನಾಟಕ ವಿಜ್ಞಾನ ಪ್ರಚಾರ ಆಂದೋಲನ, ಚಿಣ್ಣರ ವಿಜ್ಞಾನ ಮೇಳಗಳು, ಖಗೋಳ ದರ್ಶನ, ಸೂರ್ಯೋತ್ಸವ, ಶುಕ್ರ ಸಂಕ್ರಮಣ, ವಿಜ್ಞಾನ ಶಿಬಿರಗಳು, ಇನ್ಸ್ಪೈರ್‌ ಅವಾರ್ಡ್. NNMS ಪರೀಕ್ಷೆಗಳು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ತಮ್ಮ ವಿದ್ಯಾರ್ಥಿಗಳೊಂದಿಗೆ ಭಾಗಿಯಾಗಿದ್ದಾರೆ.

ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘ ಮತ್ತು DSERTಲ್ಲಿ ಹಲವು ವರ್ಷಗಳಿಂದ ಪಠ್ಯ ಪುಸ್ತಕಗಳ ಪರಿಷ್ಕರಣೆ, ಶಿಕ್ಷಕರ ವೃತ್ತಿಪರ ಅಭಿವೃದ್ಧಿ (TPD) ಯೋಜನೆಯ ಗುರುಚೇತನ ತರಬೇತಿ ಸಾಹಿತ್ಯ ರಚನೆಯಲ್ಲಿ ಪಾಲ್ಗೊಂಡು,  ರಾಜ್ಯವ್ಯಾಪಿ ಅನೇಕ ತರಬೇತಿಗಳನ್ನು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನಡೆಸಿಕೊಟ್ಟಿದ್ದಾರೆ.

ಬಾಲವಿಜ್ಞಾನ, ವಿಜ್ಞಾನಶಿಲ್ಪಿ, ಟೀಚರ್ ಮುಂತಾದ ವಿಜ್ಞಾನ ಮಾಸಪತ್ರಿಕೆಗಳಿಗೆ ವೈಜ್ಞಾನಿಕ ಚಿಂತನೆಯ ಹಲವಾರು ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ. ISRO, INDIAN INSTITUTE OF ASTROPHYSICS, NATIONAL CHILDRENS SCIENCE CONGRESS, EPISTOMY OF INFOSYSYS, IISC OPEN DAY ಮೊದಲಾದ ಕಾರ್ಯಕ್ರಮಗಳಿಗೆ ತಮ್ಮ ಶಾಲಾ ಮಕ್ಕಳನ್ನು ಕರೆದೊಯ್ದು ವಿಜ್ಞಾನ ಪ್ರಪಂಚದ ಅರಿವನ್ನು ಮಕ್ಕಳಲ್ಲಿ ಮೂಡಿಸಿದ್ದಾರೆ. ಯುನೈಟೆಡ್ ಕೌನ್ಸಿಲ್, ಪುಟಾಣಿ ವಿಜ್ಞಾನ, ವಿಜ್ಞಾನ ರಸಪ್ರಶ್ನೆಗಳು, ರೇಡಿಯೋ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕರ್ನಾಟಕ ಜ್ಞಾನ ಆಯೋಗ, ಪ್ರತಿಷ್ಠಿತ ಖಾನ್ ಅಕಾಡೆಮಿಯಲ್ಲೂ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ

ಶ್ರೀಯುತರ ಅಪಾರ ಸಾಮಾಜಿಕ, ಶೈಕ್ಷಣಿಕ ಸೇವೆಗಳು ಎಲ್ಲ ಶಿಕ್ಷಕರಿಗೆ ಮಾದರಿ ಎನಿಸಿವೆ. ರಂಗನಾಥ್‌.ಜಿಯವರ ಸೇವೆಗಳನ್ನು ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಪ್ರಶಸ್ತಿಏಷ್ಯಾ ಬುಕ್ ಆಪ್ ರೆಕಾಡ್ ಪ್ರಶಸ್ತಿಡಾ.ಪುನೀತ್ ರಾಜ್ ಕುಮಾರ್ ಸ್ಮಾರಕ ಪುನೀತ ಪ್ರಶಸ್ತಿಕನ್ನಡ ರತ್ನ ಪ್ರಶಸ್ತಿಗಳು ಅವರ ಮುಡಿಗೇರಿವೆ. ಈಗ ಇವೆಲ್ಲಕ್ಕೂ ಕಲಶವಿಟ್ಟಂತೆ ಅತ್ಯುತ್ತಮ ಶಿಕ್ಷಕ ರಾಜ್ಯಪ್ರಶಸ್ತಿಗೆ ಭಾಜನರಾದ ಸ್ನೇಹಿತ ಶ್ರೀರಂಗನಾಥ್‌.ಜಿಯವರ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿ ರಾಜ್ಯದ ಶಿಕ್ಷಣ ರಂಗಕ್ಕೆ ಇನ್ನಷ್ಟು ಉತ್ತಮ ಕೊಡುಗೆ ನೀಡುವಂತೆ ಪ್ರೇರೇಪಿಸಲಿ ಎಂದು ಹಾರೈಸೋಣ.

 

2024 ಅಕ್ಟೋಬರ್ ತಿಂಗಳ ಸೈಂಟೂನ್

 ಅಕ್ಟೋಬರ್ ತಿಂಗಳ ಸೈಂಟೂನ್ 

 ರಚನೆ : 
ಶ್ರೀಮತಿ ಜಯಶ್ರೀ ಶರ್ಮ 




ವಿಶ್ವ ಮಾನಸಿಕ ಆರೋಗ್ಯ ದಿನ

 ವಿಶ್ವ ಮಾನಸಿಕ ಆರೋಗ್ಯ ದಿನ

                                                                                                                      ಲೇಖಕರು -ಬಿ.ಎನ್.ರೂಪ,

                                  ಸಹ ಶಿಕ್ಷಕರು

                  ಕೆಪಿಎಸ್ ಜೀವನ್ ಬಿಮಾ ನಗರ 

                             ಬೆಂಗಳೂರು ದಕ್ಷಿಣ ವಲಯ -4                                


“ಆರೋಗ್ಯವೇ ಭಾಗ್ಯ” ಈ ಹೇಳಿಕೆ ಎಷ್ಟು ಅರ್ಥಪೂರ್ಣ ಹಾಗೂ ಸಮಂಜಸವಾಗಿದೆ ಅಲ್ಲವೇ.  ಆರೋಗ್ಯ ಅನ್ನುವುದು ದೇಹಕ್ಕೆ ಮಾತ್ರ ಸೀಮಿತವಲ್ಲ ಆರೋಗ್ಯ ಎನ್ನುವುದು  ದೈಹಿಕ ,ಸಾಮಾಜಿಕ, ಭಾವನಾತ್ಮಕ ಸ್ವಾಸ್ಥತೆಯನ್ನು ಪ್ರತಿನಿಧಿಸುತ್ತದೆ .ಆದರೆ ಆರೋಗ್ಯ ಎನ್ನುವ ವ್ಯಾಖ್ಯಾನದಲ್ಲಿ ಮಾನಸಿಕ ಆರೋಗ್ಯ ಬಹಳ ಮುಖ್ಯ ಅನಿಸಿಕೊಳ್ಳುತ್ತದೆ. ಕೆಲವೇ ದಶಕಗಳ ಹಿಂದೆ ಮಾನಸಿಕ ಸ್ವಾಸ್ಥತೆ ಬಗ್ಗೆ ಯಾರು ಮಾತನಾಡುತ್ತಿರಲಿಲ್ಲ ಬಹುಶಃ ಇದಕ್ಕೆ ಸಂಬಂಧಿಸಿದ ಸಾಮಾಜಿಕ ವಿಷಯಗಳುಕಾರಣ ಆಗಿರಬಹುದು.


ಮಾನಸಿಕ ಆರೋಗ್ಯವು ಇತರರೊಡನೆ ನಾವು ಮಾನಸಿಕವಾಗಿ ಭಾವನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಹೇಗೆ ಕಾರ್ಯವನ್ನು ನಿರ್ವಹಿಸುತ್ತೇವೆ ಎನ್ನುವುದನ್ನು ನಿರ್ಧರಿಸುತ್ತದೆ. ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ಅರಿತ ನಂತರ,  1992 ರಲ್ಲಿ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ (WFMH) ಪ್ರತಿ ವರ್ಷ  ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ವರ್ಷದ ಥೀಮ್ ಇದಾಗಿದೆ, “ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ “.ಇದು ಜನಸಮುದಾಯ ಸಂಸ್ಥೆಗಳು, ಸಮುದಾಯಗಳ ಪ್ರಯೋಜನಕ್ಕಾಗಿ ಕೆಲಸ ಮಾಡುವ ಸ್ಥಳಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗ್ಯ ಕ್ಷೇಮವನ್ನು ಹೇಗೆ ಕಾಯ್ದಿರಿಸಿಕೊಳ್ಳಬೇಕು ಎನ್ನುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಮಾನಸಿಕ ಆರೋಗ್ಯಕ್ಕೆ ಏಕೆ ಪ್ರಾಮುಖ್ಯತೆಯನ್ನು ಕೊಡಬೇಕು ?

ವಿಶ್ವದ ಪ್ರತಿ ಎಂಟು ಜನರಲ್ಲಿ ಒಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ COVID-19 ನಂತರ ಇದರ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿದೆ. ಮಾನಸಿಕ  ಅಸ್ವಸ್ಥತೆಗೆ  ಹಲವಾರು ಕಾರಣಗಳಿವೆ, 

1.ಬಾಲ್ಯದಲ್ಲಿ ನಿಂದನೆ :-ದೈಹಿಕ ಅಕ್ರಮಣ, ಲೈಂಗಿಕ ಹಿಂಸೆ ,ಭಾವನಾತ್ಮಕ ನಿಂದನೆ, ನಿರ್ಲಕ್ಷತೆ ಇದು ತೀವ್ರ ಮಾನಸಿಕ ಮತ್ತು ಭಾವನಾತ್ಮಕ ಯಾತನೆಗೆ ಕಾರಣವಾಗಬಹುದು.

2. ಜೀವನ ಶೈಲಿ:- ಧೂಮಪಾನ ಮಾಡುವುದು ಮಾದಕ ವಸ್ತುಗಳ ಸೇವನೆ ಆಲ್ಕೋಹಾಲ್ ಕೆಲವು ಮಾದಕ ವಸ್ತುಗಳ ಸೇವನೆಯಿಂದಾಗಿ ಮಾನಸಿಕ  ಅಸ್ವಸ್ಥತೆಗೆ ಮಾಡಿಕೊಡಬಹುದು ಇದರಿಂದ, ಭವಿಷ್ಯದಲ್ಲಿ ಅವರು ಮಧುಮೇಹ, ಪಾಶ್ವವಾಯು, ಆತ್ಮಹತ್ಯೆ, ನಕರಾತ್ಮಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ .

3. ಅನುವಂಶಿಯತೆ : ಕುಟುಂಬದ ಸದಸ್ಯರಲ್ಲಿ  ಹಲವು ರೀತಿಯ ಅಸ್ವಸ್ಥತೆಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯಬಹುದು.

4. ಆಹಾರ ಶೈಲಿಯಲ್ಲಿ ಬದಲಾವಣೆ : ಅತ್ಯಂತ ಕಡಿಮೆ ಆಹಾರ ಸೇವನೆ ಅಥವಾ ಹೆಚ್ಚು ಆಹಾರ ಸೇವನೆಯನ್ನು ಮಾಡುವುದು.

5. ದೈನಂದಿನ ಕಾರ್ಯ ಚಟುವಟಿಕೆಗಳನ್ನು ಅಸಮರ್ಪಕವಾಗಿ ನಿರ್ವಹಿಸುವುದು.

6. ಏಕಾಂತವಾಗಿರುವುದಕ್ಕೆ ಹೆಚ್ಚು ಪ್ರಾಶಸ್ತತೆಯನ್ನು ನೀಡುವುದು .

7.ನಿರಂತರ ಹತಾಶಯ ಭಾವನೆ ಗೊಂದಲ, ಕೋಪ, ಚಿಂತೆ, ಅಪರಾಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದು.

8. ಸ್ನೇಹಿತ ವರ್ಗ ಕುಟುಂಬ ವರ್ಗ ಹಾಗೂ ಸಹೋದ್ಯೋಗಿಗಳೊಂದಿಗೆ ಜಗಳವನ್ನು ಮಾಡುವುದು.

9. ಸ್ವಯಂ ಹಾನಿ ಅಥವಾ ಇತರರಿಗೆ  ಹಾನಿಯನ್ನು ಉಂಟು ಮಾಡುವುದು.

 

ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಈ ಪ್ರಯೋಜನಗಳನ್ನು ನಾವು ಪಡೆಯಬಹುದಾಗಿದೆ:-

1. ಜೀವನದಲ್ಲಿ ವಿವಿಧ ಒತ್ತಡವನ್ನು ನಿಭಾಯಿಸಲು ಸಾಮರ್ಥ್ಯವನ್ನು ಗಳಿಸುವುದು 

2. ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬಹುದು.

3. ಕುಟುಂಬ ವರ್ಗ ಸ್ನೇಹಿತ ಬಳಗ ಸೌದ್ಯೋಗಿಗಳೊಂದಿಗೆ ಆರೋಗ್ಯಕರ ಸಂಬಂಧವನ್ನು ಏರ್ಪಡಿಸಿಕೊಳ್ಳಬಹುದು.

4. ಉತ್ತಮ ಗುಣಮಟ್ಟದ ಜೀವನಶೈಲಿಯನ್ನು ನಿರ್ವಹಿಸಬಹುದು.

5. ಆರೋಗ್ಯವನ್ನು ಕಾಪಾಡಲು ಇದು ಸಹಾಯಮಾಡುತ್ತದೆ.

6.  ಉತ್ತಮ ಕಾರ್ಯ ತತ್ಪರತೆಯನ್ನು ಮೆರೆದು ಉತ್ತಮ ಫಲಿತಾಂಶವನ್ನು ನೀಡಬಹುದಾಗಿದೆ.

ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? 

1. ನಿಯಮತವಾಗಿ ವ್ಯಾಯಾಮವನ್ನು ಅಭ್ಯಾಸ ಮಾಡುವುದು.

2. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು  ಹಾಗೂ ನಿರ್ದಿಷ್ಟ ಸಮಯದಲ್ಲಿ ನಿದ್ರೆಗೆ ಆದ್ಯತೆಯನ್ನು ನೀಡುವುದು .

3. ಧ್ಯಾನವನ್ನು ಮಾಡುವುದು.

4. ಜೀವನದ ಸವಾಲುಗಳನ್ನು ನಿಭಾಯಿಸಲು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.

5. ಪ್ರೀತಿ ಪಾತ್ರರ ಜೊತೆ ಸಂಪರ್ಕದಲ್ಲಿರುವುದು.

6. ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳಿಗೆ ದೃಷ್ಟಿ ಕೋನಗಳಿಗೆ ಪ್ರಾಮುಖ್ಯತೆಯನ್ನು ನೀಡುವುದು.

7. ಆತ್ಮೀಯರೊಂದಿಗೆ ತಾವು ಕೊಡುತ್ತಿರುವ ಯಾತನೆಗಳ ಬಗ್ಗೆ ವಿಷಯ ವಿನಿಮಯ ಮಾಡಿಕೊಳ್ಳುವುದು ಹಾಗೂ  ಹಂಚಿಕೊಳ್ಳುವುದು.

8. ಸೂಕ್ತ  ವೈದ್ಯಾಧಿಕಾರಿ ಗಳೊಂದಿಗೆ ಆಪ್ತ ಸಮಾಲೋಚನೆ ನಡೆಸುವುದು ಅವರನ್ನು ಭೇಟಿ ನೀಡಿ ಸಮಸ್ಯೆಗಳನ್ನು   ಹಂಚಿಕೊಂಡು ಪರಿಹಾರವನ್ನು ಕಂಡುಕೊಳ್ಳುವುದು.

 ಮಾನಸಿಕ ಅಸ್ವಸ್ಥತೆಯಲ್ಲಿ  ಸೌಮ್ಯತೆಯಿಂದ ಹಿಡಿದು ಆತಂಕದ ಅಸ್ವಸ್ಥತೆಗಳನ್ನು ನೋಡಬಹುದಾಗಿದೆ. ಸಾಮಾಜಿಕ ಆತಂಕದ ಅಸ್ವಸ್ಥತೆ, ಬೇರ್ಪಡಿಕೆ ಆತಂಕದ ಅಸ್ವಸ್ಥತೆ ಹಾಗೂ ಇತರೆ .

ಖಿನ್ನತೆ :- ಖಿನ್ನತೆಯು ಸಾಮಾನ್ಯ ಮನಸ್ಥಿತಿಯ ಏರಳಿತಗಳಿಗಿಂತ ಭಿನ್ನವಾಗಿದೆ. ಗುಣಲಕ್ಷಣಗಳು ಏಕಾಗ್ರತೆಯ ಕೊರತೆ ಅತಿಯಾದ ಅಪರಾಧ ಅಥವಾ ಕಡಿಮೆ ಸ್ವಾಭಿಮಾನದ ಭಾವನೆಗಳು. ಭವಿಷ್ಯದ ಬಗ್ಗೆ ಹತಾಶೆ, ಸಾಯು ಅಥವಾ ಆತ್ಮಹತ್ಯೆ ಬಗ್ಗೆ ಆಲೋಚನೆಗಳು, ನಿದ್ರೆ ಇಲ್ಲದಿರುವುದು, ಹಸಿವು ಅಥವಾ ತೂಕದಲ್ಲಿ ಬದಲಾವಣೆಗಳು, ಇತ್ಯಾದಿ. ವಯಸ್ಸು ಹಾಗೂ ತೀವ್ರತೆಯನ್ನು ಅವಲಂಬಿಸಿ ಔಷಧಿಗಳನ್ನು ಸಹ ಪರಿಗಣಿಸಬಹುದಾಗಿದೆ .

ಬೈ ಪೋಲಾರ್  ಡಿಸ್ಆರ್ಡರ್ :-ಅವಧಿಗಳೊಂದಿಗೆ ಖಿನ್ನತೆಯ ಕಂತುಗಳನ್ನು ಅನುಭವಿಸುತ್ತಾರೆ. ಕಿರಿಕಿರಿ ಹೆಚ್ಚಿದ ಚಟುವಟಿಕೆ ಅಥವಾ ಶಕ್ತಿ ಹೆಚ್ಚಿದ ಮಾತುಗಾರಿಕೆ ಓಟದ ಆಲೋಚನೆಗಳು, ಹೆಚ್ಚಿನ ಸ್ವಾಭಿಮಾನ ನಿದ್ರೆ ಅಗತ್ಯತೆ ಕಡಿಮೆಯಾಗುವುದು ಚಂಚಲ  ವರ್ತನೆ. ಇಂಥವರು ಆತ್ಮಹತ್ಯೆಯ ಅಪಾಯವನ್ನು  ಹೊಂದಿರುತ್ತಾರೆ.

ಪೋಸ್ಟ್ ಟ್ರಮಾಟಿಕ್  ಸ್ಟ್ರೆಸ್ ಡಿಸ್ಆರ್ಡರ್:-  ಆಘಾತಕಾರಿ ಘಟನೆಯನ್ನು ವರ್ತಮಾನದಲ್ಲಿ ಅನುಭವಿಸುವುದು, ನೆನಪುಗಳು, ದುರ್ಘಟನೆಯ ನಂತರ ಉಂಟಾಗುವ ಮಾನಸಿಕ ಅಸ್ವಸ್ಥತೆಯನ್ನು ಇದು ಪ್ರತಿನಿಧಿಸುತ್ತದೆ. ಆ ದುರ್ಘಟನೆಯನ್ನು ಪುನಃ ಪುನಃ ನೆನಪಿಸಿಕೊಳ್ಳುವುದರಿಂದ ಕಾರ್ಯ ನಿರ್ವಹಣೆಯಲ್ಲಿ ಗಮನಾರ್ಹವಾದ ಇಳಿಕೆ ಕಂಡು ಬರುತ್ತದೆ.

ಸ್ಕಿಜೋ ಪ್ರೇನಿಯ:- ಗ್ರಹಿಕೆಯಲ್ಲಿ ಗಮನದ ಇಳಿಕೆ, ನಡುವಳಿಕೆಯಲ್ಲಿ ಬದಲಾವಣೆ, ನಿರಂತರ ಭ್ರಮೆ, ಅಸ್ವಸ್ಥವಾಗಿರುವ ಚಿಂತನೆ, ನಡುವಳಿಕೆಗಳಲ್ಲಿ ತೀವ್ರ ಆಂದೋಲನವನ್ನು ಒಳಗೊಂಡಿರಬಹುದು.

 ಆಹಾರ ಸೇವನೆಯ ಅಸ್ವಸ್ಥತೆಗಳು:- ಸುಮಾರು 14 ಮಿಲಿಯನ್ ಜನರು ತಿನ್ನುವ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅನೋರೆಕ್ಸಿಯಾ ನರ್ವೋಸಾ, ಬುಲಿಮಿಯಾ ನರ್ವೋಸಾದಂತಹ ಆಹಾರದ ಅಸ್ವಸ್ಥತೆಗಳು, ಅಸಹಜವಾದ ಆಹಾರ ಸೇವನೆ, ಜೊತೆಗೆ ಪ್ರಮುಖ  ದೇಹದ ತೂಕದ ಬಗ್ಗೆ ಹಾಗೂ ಆಕಾರದ ಬಗ್ಗೆ ವಿಪರೀತ ಕಾಳಜಿ ಯನ್ನು ಒಳಗೊಂಡಿರುತ್ತದೆ . ಬುಲಿಮಿಯಾದಲ್ಲಿ ವಸ್ತುವಿನ ಬಳಕೆ, ಆತ್ಮಹತ್ಯೆ ಮತ್ತು ಆರೋಗ್ಯದ ತೊಂದರೆಯನ್ನು ಹೊಂದಿರುತ್ತಾರೆ.

  ನ್ಯುರೋ ಡೆವಲಪ್ಮೆಂಟಲ್ ಡಿಸ್ಆರ್ಡರ್ಸ್:- ಈ ಅಸ್ವಸ್ಥತೆಯಲ್ಲಿ ಭೌತಿಕ ಬೆಳವಣಿಗೆ ಅಸ್ವಸ್ಥತೆಗಳು, ಗಮನದ ಕೊರತೆ, ಆಟಿಸಂ ,ಹೈಪರ್ ಆಕ್ಟಿವ್ ಡಿಸ್ಆರ್ಡರ್ ಇವುಗಳನ್ನು ಒಳಗೊಂಡಿದೆ .

ಹೀಗೆ ಇನ್ನೂ ಹಲವಾರು ಬಗೆಯ ಮಾನಸಿಕ ಅಸ್ವಸ್ಥತೆಗಳಿಂದ ಹಲವಾರು ಜನರು ಜನಸಮುದಾಯಗಳು ಬಳಲುತ್ತಿವೆ.  ನಮಗೆ  ದೈಹಿಕ ಆರೋಗ್ಯದಲ್ಲಿ ಏರುಪೇರಾದರೆ ಆರೋಗ್ಯ ಸರಿ ಇಲ್ಲದಿದ್ದರೆ  ಸೂಕ್ತ ತಜ್ಞರಲ್ಲಿ ಹೋಗಿ ಹಲವಾರು ಪರೀಕ್ಷೆಗಳನ್ನು ಮಾಡಿಸಿಕೊಂಡು ಔಷದೋಪಚಾರಗಳನ್ನು ಮಾಡಿಕೊಳ್ಳುತ್ತೇವೆ ಹಾಗೆ ಮಾನಸಿಕ ಅಸ್ವಸ್ಥತೆಯ ಗುಣಲಕ್ಷಣಗಳು ಕಾಣಿಸಿಕೊಂಡಾಗ ಯಾವುದೇ ಭಯ, ಆತಂಕ ,ಕೋಪ ಹಿಂಜರಿಕೆ, ಭಯ, ಸಾಮಾಜಿಕ, ಆರ್ಥಿಕ ಕಾರಣಗಳನ್ನು  ಬದಿಗಿಟ್ಟು ಸೂಕ್ತ ಮಾನಸಿಕ ವೈದ್ಯರಲ್ಲಿಗೆ ಹೋಗಿ ತಪಾಸಣೆಯನ್ನು ಮಾಡಿಸಿಕೊಂಡು ಚಿಕಿತ್ಸೆಗಳನ್ನು ಮಾಡಿಕೊಳ್ಳುವುದರಿಂದ ಈ ಮಾನಸಿಕ ಅಸ್ವಸ್ಥತೆಯಿಂದ ಮುಕ್ತಿಯನ್ನು ಪಡೆಯಬಹುದು. ಮಾನಸಿಕ ಸ್ವಸ್ಥತೆಯೇ ಆರೋಗ್ಯದ ಮೂಲ ಗುಟ್ಟು ಹಾಗೂ ಸಕಾರಾತ್ಮಕ ಸಮಾಜದ ಬೆಳವಣಿಗೆಯ ಮೈಲುಗಲ್ಲು ಎಂದು ಹೇಳಬಹುದಾಗಿದೆ.

 ಧನಾತ್ಮಕ ಸಕರಾತ್ಮಕ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಆರೋಗ್ಯಕರ ಮಾನಸಿಕ ಸ್ವಸ್ಥತೆಯನ್ನು ಉಳ್ಳ ಸಮುದಾಯವನ್ನು ನಾವು ಹೊಂದಿರಬೇಕು. ನಾವೆಲ್ಲರೂ ಸೇರಿ ಸ್ವಾಸ್ಥ ಸಮಾಜದ ಹರಿಕಾರರಾಗಬೇಕು. ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ಕಲ್ಪಿಸಲು ಈ ನಿಟ್ಟಿನಲ್ಲಿ ಅಗತ್ಯ ಚಟುವಟಿಕೆಗಳನ್ನು ಕೈಗೊಂಡು  ಕಾರ್ಯಪ್ರವೃತ್ತರಾಗಬೇಕು.


                  




ಮಡಿಕೆಗಳು ಮತ್ತು ರಂಧ್ರಗಳು

 ಮಡಿಕೆಗಳು ಮತ್ತು ರಂಧ್ರಗಳು

                 ಲೇಖಕರು : ರಮೇಶ, ವಿ, ಬಳ್ಳಾ

      ಅಧ್ಯಾಪಕರು, ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು         (ಪ್ರೌಢ) ಗುಳೇದಗುಡ್ಡ      ಜಿ: ಬಾಗಲಕೋಟ 

          ಬಿರು ಬಿಸಿಲ ಕಾಲದಲ್ಲಿ ತಂಪಾದ ನೀರು ಸಿಕ್ಕರೆ ಸಾಕು, ಬಾಯಾರಿಕೆ ನೀಗಿ ತುಸು ನೆಮ್ಮದಿ ಸಿಗುತ್ತದೆ. ಈ ತಂಪು ನೀರು ಬೇಕೆಂದರೆ ಮನೆಯಲ್ಲಿ ಪ್ರಿಡ್ಜ್ ಇರಲೇಬೇಕು. ಆದರೆ ಅದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರಲಿಕ್ಕಿಲ್ಲ. ಮತ್ತೆ ಪ್ರಿಡ್ಜ್ ಇಲ್ಲದ ಈ ಹಿಂದಿನ ಕಾಲದಲ್ಲಿ ಜನ ಹೇಗೆ ತಂಪು ನೀರು ಕುಡಿಯುತ್ತಿದ್ದರು ಎಂದು  ಒಮ್ಮೆ ಯೋಚಿಸಿ. ಕುಂಬಾರರು ತಯಾರಿಸುತ್ತಿದ್ದ ಮಣ್ಣಿನ ಮಡಿಕೆ-ಕುಡಿಕೆಗಳೇ ತಂಪು ನೀರು ನೀಡುವ ಪಾತ್ರೆಗಳಾಗಿದ್ದವು. ಆದಕ್ಕೆ ಇಂದು ಮಣ್ಣಿನ ಪಾತ್ರೆ-ಪಗಡೆಗಳು ಮಾಯವಾಗಿವೆ. ಎಲ್ಲೆಡೆ ಸ್ಟೀಲ್ ಪಾತ್ರೆಗಳು ದಾಂಗುಡಿ ಇಟ್ಟಿವೆ. ಅದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಂಗ್ರಾಹಕಗಳ ಅಬ್ಬರವೂ ಜೋರಾಗಿದೆ. ಈ ಮಧ್ಯೆ ಮಣ್ಣಿನ ಪಾತ್ರೆಗಳ ಚರ್ಚೆ ಯಾಕೆ ಅಂತೀರಾ ? ಮೊನ್ನೆ ನಮ್ಮ ಮನೆಯಲ್ಲಿ ಮಗನ ಕೈಗೆ ಬಹಳ ದಿನಗಳ ಹಿಂದಿನ ಒಂದು ಮಡಿಕೆ ಸಿಕ್ತು. ಅದನ್ನು ನೋಡಿದ ಆತ ಕೇಳಿದ ಪ್ರಶ್ನೆಗಳು ಹೀಗಿದ್ದವು. ಯಾಕಪ್ಪಾ, ಈ ಮಡಿಕೆ ಮೇಲ್ಮೈ ಮೇಲೆಲ್ಲಾ ಸಣ್ಣ ಸಣ್ಣ ತೂತಾಗಿವೆ ? ನೀರು ಸೋರುತ್ತಾ ಮತ್ತೇ? ಮೇಲಿಂದ ಕೈ ಬಿಟ್ಟರೆ ಯಾಕೆ ಇದು ಒಡೆದು ಹೋಗುತ್ತೆ ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ತಡಕಾಡಿದಾಗ ಹೊಳೆದದ್ದೆ, ಕುಂಬಕಗಳೆಂಬ ಚುಂಬಕ ಶಕ್ತಿಯ ಈ ಮಡಿಕೆಗಳು.

ಹಳ್ಳಿಗಾಡಿನ ಬದುಕಿನ ನಾನಾ ವೃತ್ತಿಗಳತ್ತ ಒಮ್ಮೆ ಕಣ್ಣು ಹಾಯಿಸಿದಾಗ ಬಡಿಗತನ, ನೇಕಾರಿಕೆ, ಬುಟ್ಟಿ ಹೆಣೆಯುವಿಕೆ, ಚಮ್ಮಾರಿಕೆ ಹೀಗೆ ಅನೇಕ ಹೊಟ್ಟೆಪಾಡಿನ ಉದ್ಯೋಗಗಳಂತೆ ವಿಶಿಷ್ಟ ಕಲೆಯಾಗಿ ಗುರುತಿಸಲ್ಪಟ್ಟ ಕುಂಬಾರಿಕೆಯೂ ಗಮನ ಸೆಳೆಯುತ್ತದೆ. ಕುಂಬಾರರ ಗೂಡುವೊಂದಕ್ಕೆ ನೀವು ಭೇಟಿ ನೀಡಿದ್ದಾದರೆ ಖಂಡಿತಾ ನಿಮಗೆ ಅಲ್ಲಿ ತಯಾರಾಗುವ ಮಣ್ಣಿನ ಮಡಿಕೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ಈ ಕುಂಬಾರರು ತಯಾರಿಸುವ ಮಡಿಕೆಗಳ ಹಿಂದೆ ಒಂದು ನಿರ್ದಿಷ್ಟ ಪ್ರಕ್ರಿಯೆ ಇದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಮಡಿಕೆ ತಯಾರಿಕೆಗೆ ಜೇಡಿಯಂತ ಮಣ್ಣಿನ ಅವಶ್ಯಕತೆ ಇದೆ. ಮಣ್ಣು ಹೊತ್ತು ತಂದು ನೀರಿನಲ್ಲಿ ಕಲಸಿ, ತುಳಿದು ಹದಗೊಳಿಸಿ, ಚಕ್ರಕ್ಕೆ ಹಾಕಿ ತಿರುಗಿಸಿ ಮಡಿಕೆ ಮೇಲೆಳುವಂತೆ ಮಾಡುತ್ತಾರೆ. ನಂತರ ಆ ಹಸಿ ಮಡಿಕೆಗಳನ್ನು ಗೂಡಿಗೆ ಹಾಕಿ ನಿರ್ದಿಷ್ಟ ತಾಪದಲ್ಲಿ ಸುಟ್ಟು ತಯಾರಿಸಿದಾಗ ಮಡಿಕೆಗಳು ಸಿದ್ಧಗೊಳ್ಳುತ್ತವೆ. 

ಒಂದು ನಿರ್ದಿಷ್ಟ ಮಣ್ಣನ್ನು ಕಚ್ಚಾವಸ್ತುವಾಗಿ ಬಳಸಿ ತಯಾರಿಸಲಾಗುವ ಮಡಿಕೆಗಳನ್ನು ಕುಂಬಕಗಳು ಎಂದು ಕರೆಯಲಾಗುತ್ತದೆ. ಇದನ್ನು ಇಂಗ್ಲೀಷ್‍ನಲ್ಲಿ ಸಿರಾಮಿಕ್ಸ್ ಎನ್ನುವರು. ಈ ಸಿರಾಮಿಕ್ಸ್ ಎಂದರೆ ಬೇರೇನೂ ಅಲ್ಲ, ಅದು ನಮ್ಮ ಕುಂಬಾರರು ತಯಾರಿಸಿದ ಮಣ್ಣಿನ ಮಡಿಕೆಗಳೇ ಆಗಿವೆ. ಸಿರಾಮಿಕ್ಸ್ ಎಂಬ ಪದವನ್ನು ಗ್ರೀಕ್ ಭಾಷೆಯ ಸಿರಿಮೋಸ್ ಎಂಬ ಪದದಿಂದ ಪಡೆಯಲಾಗಿದೆ. ಇದರರ್ಥ ಮಣ್ಣಿನ ಮಡಿಕೆ ಎಂದಾಗಿದೆ. ಆದg,É ಕೆಲವರು ಸಿರಾಮಿಕ್ಸ್ ಎಂದೊಡನೆ ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲ್ಲಿ ಬಳಕೆಯಾಗುತ್ತಿರುವ ಟೀ ಕಪ್‍ಗಳು, ಟೈಲ್‍ಗಳು, ಉಪ್ಪಿನಕಾಯಿ ಭರಣಿ ಇತ್ಯಾದಿ ಮಾತ್ರ ಎಂದು ತಿಳಿದಿದ್ದಾರೆ. ಹಾಗೇನಿಲ್ಲ ಇವೆಲ್ಲವೂ ಕೂಡ ಒಂದೆ ರೀತಿಯ ಪ್ರಕ್ರಿಯೆಯಿಂದ ಆದಂತವುಗಳೇ ಆಗಿವೆ. ಆದರೆ ಬಳಸಲ್ಪಡುವ ಕಚ್ಚಾವಸುಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.

ಮಣ್ಣಿನ ಮಡಿಕೆಗಳೇಕೆ ರಂಧ್ರಮಯ ? 

ಸಾಮಾನ್ಯವಾಗಿ ನಮ್ಮ ಹಿಂದಿನವರು ಹಾಗೂ ಈಗಿನ ಕೆಲವರು ಬಳಸುವ ಮಣ್ಣಿನ ಮಡಿಕೆಗಳು ಅಷ್ಟೇನೂ ಆಕರ್ಷಣೀಯವಾಗಿರುವುದಿಲ್ಲ. ಕಾರಣ ಅವು ಕುಂಬಾರರ ಗೂಡಿನಲ್ಲಿ ಸುಟ್ಟುಕೊಂಡು ಮೇಲೆದ್ದ ಜೇಡಿಮಣ್ಣಿನಿಂದ ತಯಾರಾದ ಗಡಿಗೆಗಳು. ತೀರಾ ಕಳಾಹೀನವಾದಂತೆ ಕಾಣುವ ಹಾಗೂ ಯಾವುದೇ ಬಣ್ಣಗಳ ವೈಭವವಿಲ್ಲದ ಈ ಪಾತ್ರೆಗಳು ಹಳ್ಳಗಾಡಿನ ಬದುಕಿನಲ್ಲಿ ಸಂಗ್ರಾಹಕ ಪಾತ್ರೆಗಳಾಗಿ ಬಳಕೆಯಾಗುತ್ತವೆ ಅಷ್ಟೇ. ಇದರ ಹೊರತಾಗಿ ಯುಗಾದಿಯ ಬೇವು ತಯಾರಿಸಲು ಹಾಗೂ ದೀಪಾವಳಿಯಲ್ಲಿ ಮನೆ ಮುಂದೆ ದೀಪ ಬೆಳಗಿಸಲು ಹಣತೆಯಾಗಿ, ಮಳೆ ನೀರು ಪೊನ್ನಳಗೆಯಾಗಿ, ಮೇಲ್ಛಾವಣಿ ಹೆಂಚಾಗಿ ಇತರ ಕೆಲ ಸಂದರ್ಭಗಳಲ್ಲಿ ಮಣ್ಣಿನ ಈ ಕುಂಬಕಗಳು ಬಳಕೆಗೆ ಬರುತ್ತವೆ. ಈ ನಯವಲ್ಲದ ಮಣ್ಣಿನ ಗಡಿಗೆಗಳ ಮೇಲ್ಮೈ ಮೇಲೆ ಅಗೋಚರವಾದ ಸೂಕ್ಷ್ಮ ರಂಧ್ರಗಳಿರುವುದು ಸಾಮಾನ್ಯ. ಈ ರಂಧ್ರಗಳುಂಟಾಗಲು ಕಾರಣ ಜೇಡಿಮಣ್ಣನ್ನು ನೀರಿನೊಂದಿಗೆ ಸೂಕ್ತ ಪ್ರಮಾಣದಲ್ಲಿ ಬೆರೆಸಿ, ಹದಗೊಳಿಸಿ ಸುಡುವಾಗ ಅದರಲ್ಲಿನ ನೀರಿನ ಪ್ರಮಾಣ ಕ್ರಮೇಣ ಆವಿಯಾಗುವ ಮೂಲಕ ಮಡಿಕೆಯನ್ನು ರಂಧ್ರಯುಕ್ತಗೊಳಿಸುತ್ತದೆ. ದೋಸೆಯಲ್ಲಿನ ತೂತುಗಳ ಹಾಗೇ ಇದು ಕೂಡ. ಈ ಅಗೋಚರ ರಂಧ್ರಗಳಿರುವುದರಿಂದ ಮಡಿಕೆಗಳು ನೋಡಲು ಅಷ್ಟಾಗಿ ಆಕರ್ಷಣೀಯವಾಗಿರುವುದಿಲ್ಲ ಹಾಗೂ ಹೊಳಪು ಕೂಡ ಇರುವುದಿಲ್ಲ. ಈ ಮಡಿಕೆ ತಯಾರಿಕೆಯಲ್ಲಿ ಮಣ್ಣಿನೊಂದಿಗೆ ನೀರು ಬೆರೆಸುವುದರಿಂದ ಹದಗೊಳಿಸಿ ಮಿಶ್ರಣವಾಗಿಸುವುದರಿಂದ ಬೇಕಾದ ಆಕಾರ ನೀಡಬಹುದು. ಸುಟ್ಟಾಗ ನೀರನ್ನು ಕಳೆದುಕೊಂಡು ಅಂತಹ ಪಾತ್ರೆಗಳು ಬಿಧುರತ್ವ ಪಡೆದುಕೊಳ್ಳುತ್ತವೆ. ನೈಸರ್ಗಿಕವಾದ ಈ ಜೇಡಿ ಮಣ್ಣು ಸಿಲೀಕೇಟುಗಳ ಸಂಕೀರ್ಣ ಮಿಶ್ರಣ. ಸುಟ್ಟ ನಂತರ ಗಟ್ಟಿಯಾಗಿ ಸಂಗ್ರಾಹಕ ಪಾತ್ರೆಗಳ ರೂಪದಲ್ಲಿ ಉಳಿಯುತ್ತವೆ.

ರಂಧ್ರರಹಿತ ಆಕರ್ಷಣೆ

ನೀವು ಚೀನಾ ಮಣ್ಣಿನ ಹೆಸರು ಕೇಳಿರಬಹುದು ಹಾಗೂ ಆ ಮಣ್ಣಿಂದ ತಯಾರಿಸಿದ ತಟ್ಟೆಗಳು ನಮ್ಮ ಇಂದಿನ ಜೀವನದ ಭಾಗವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿರುವುದನ್ನು ಕಂಡಿರಬಹುದು. ಚಹಾ ಕಪ್ ಬಸಿ (saucer), ಭರಣಿಗಳು, ಕೈತೊಳೆಯುವ ನಲ್ಲಿ ತಟ್ಟೆ (Hand wash), ಅದೇ ರೀತಿ ನಮ್ಮ ಶಾಲಾ ಕಾಲೇಜುಗಳ ಪ್ರಯೋಗಶಾಲೆಯಲ್ಲಿ ಉಪಯೋಗಿಸಲ್ಪಡುವ ಕೆಲ ಸಾಧನಗಳಾದ ಆವೀಕರಣ ತಟ್ಟೆ (Evaporating dish), ಕ್ರೂಸಿಬಲ್ ಸಾಧನ ಹಾಗೇ ಕೆಲ ಮೂರ್ತಿ ಕಲಾಕೃತಿಗಳು ಮುಂತಾದವು ಬಲು ಆಕರ್ಷಕವಾದ ವೈವಿಧ್ಯಮಯವಾದ ಬಣ್ಣಗಳಲ್ಲಿ ನಮ್ಮ ನಿಮ್ಮ ಮನೆಯ ಕಿಚನ್ ಹಾಗೂ ಶೋ ಕೇಸ್‍ಗಳಲ್ಲಿ ತುಂಬಿರುವುದು ಸಹಜ. ಮನೆಯ ನೆಲಹಾಸು ಟೈಲ್‍ಗಳಂತಹ ನಯನ ಮನೋಹರವಾದ ನಾಜೂಕಾದ ಕುಂಬಕಗಳೂ ಸಹ ಮಣ್ಣಿನಿಂದಲೇ ಆದಂತವುಗಳು ಎಂದರೆ ಆಶ್ಚರ್ಯವೆನಿಸುತ್ತದೆ. ಮಣ್ಣಿನಿಂದ ತಯಾರಾದ ಈ ಕುಂಬಕಗಳು ರಂಧ್ರರಹಿತವಾಗಿ ಹಾಗೂ ನಯವಾಗಿ ಹೊಳೆಯುವಂತೆ ಮಾಡುವ ಕ್ರಿಯೆಗೆ ಗ್ಲೇಜಿಂಗ್ (glazing ) ಎನ್ನುವರು. ಗ್ಲೇಜ್ ಮಾಡಿದ ಇಂತಹ ಸಾಮಗ್ರಿಗಳು ಆಕರ್ಷಕವಾಗಿರುತ್ತವೆ. ಆದರೆ ಇಲ್ಲಿ ಜೇಡಿಯೊಂದಿಗೆ ಬಳಕೆಯಾಗುವ ಕಚ್ಚಾ ಸಾಮಗ್ರಿಗಳು ಅವುಗಳ ಈ ವಿಶಿಷ್ಟ ಗುಣಕ್ಕೆ ಕಾರಣವಾಗಿವೆ ಎಂಬುದು ಅಷ್ಟೇ ಸತ್ಯ. ಕೆಯೊಲಿನೈಟ್ (Evaporating dish),  ಮತ್ತು ಬೆಂಟೊನೈಟ್ (bentonite)ನಂತಹ ವಿಶೇಷ ಮಣ್ಣಿನ ಬಳಕೆಯನ್ನು ಮಾಡಿ ತಯಾರಿಸಿದ ಈ ಮಡಿಕೆಗಳು ಸಂಪೂರ್ಣ ರಂಧ್ರರಹಿತವಾಗಿರುವುದಿಲ್ಲ. ಇದರ ನಿವಾರಣೆಗೆ ಸಿಲಿಕಾದ ಇತರ ರೂಪಗಳಾದ ಪ್ಲಿಂಟ್ ಮತ್ತು ಕ್ವಾಟ್ರ್ಸಗಳನ್ನು ಬಳಸಿ ತಯಾರಿಸಲಾಗುತ್ತದೆ. ಇವುಗಳಿಗೆ ನೀರು ಹೀರಿಕೊಳ್ಳುವ ಗುಣ ಇಲ್ಲದಿರುವುದರಿಂದ ಉಷ್ಣ ನೀಡಿದಾಗ ರೂಪಾಂತರಗೊಳ್ಳದೇ ರಂಧ್ರರಹಿತವಾಗಿ ಪಾತ್ರೆಗಳು ಆಕರ್ಷಕವಾಗುತ್ತವೆ. ಫೆಲ್ಡ್‍ಸ್ಪಾರ್ ಒಂದು ನೈಸರ್ಗಿಕವಾಗಿ ದೊರೆಯುವ ಅಲ್ಯೂಮಿಯಂ ಸಿಲಿಕೇಟ್ ಖನಿಜವಾಗಿದೆ. ಇದರ ಬಳಕೆಯಿಂದ ತಯಾರಾದಂತಹ ಕುಂಬಕಗಳು ನಯವಾಗಿ ಹಾಗೂ ಗಟ್ಟಿಯಾಗಿ ಬರುತ್ತವೆ. ಈ ರೀತಿಯ ಕುಂಬಕಗಳ ತಯಾರಿಕೆಯಲ್ಲಿ ಅಧಿಕ ತಾಪ ಅಂದರೆ ಸುಮಾರು 1073K ದಿಂದ 1273K ರವರೆಗೆ ಕಾಸಿದಾಗ ಕಚ್ಚಾ ಸಾಮಗ್ರಿಗಳು ಗಾಜಿನಂತ ದ್ರವವಾಗಿ ಮಣ್ಣಿನ ಸಂದುಗಳ ಮಧ್ಯೆ ಸೇರಿಕೊಂಡು ತೂತುಗಳನ್ನು ಮುಚ್ಚುತ್ತದೆ. ತಂಪುಗೊಳಿಸಿದಾಗ ಕುಂಬಕಗಳಿಗೆ ನಯವಾದ ಹೊಳಪು ಬರುತ್ತದೆ.

ಕುಂಬಕಗಳಿಗೆ ರಂಧ್ರ ಅವಶ್ಯವೇ ?

ಗ್ಲೇಜಿಂಗ್ ಮಾಡಿದ ಈ ಕುಂಬಕಗಳು ನಯವಾಗಿದ್ದರೂ ಅದರಲ್ಲಿ ಸಂಗ್ರಹಿಸಿದ ನೀರು ತಂಪಾಗಿರುವುದಿಲ್ಲ. ಅಂದರೆ ಪಿಂಗಾಣಿಯಲ್ಲಿಟ್ಟ ನೀರು ಮಡಿಕೆಯಲ್ಲಿನ ನೀರಿನಷ್ಟು ತಂಪಾಗಿರುವುದಿಲ್ಲ. ಇದಕ್ಕೆ ಕಾರಣ ಪಿಂಗಾಣಿ ರಂಧ್ರರಹಿತವಾಗಿರುವುದು. ಹಾಗಾದರೆ ನೀರು ತಂಪಾಗಲು ಈ ರಂಧ್ರಗಳು ಬೇಕು ಎಂತಾಯಿತಲ್ಲವೇ ? ಹೌದು ! ಖಂಡಿತ, ರಂಧ್ರಯುಕ್ತ ಮಡಿಕೆಗಳಲ್ಲಿ ಸಂಗ್ರಹಿಸಿದ ನೀರು ತಂಪಾಗಿರಲು ಕಾರಣ ಅಗೋಚರವಾದ ಈ ರಂಧ್ರಗಳ ಮೂಲಕ ನೀರು ನಿರಂತರವಾಗಿ ಆವಿಯಾಗುತ್ತ ನೀರನ್ನು ತಂಪಾಗಿಸುತ್ತದೆ. ಹಾಗಾಗಿ ಕುಂಬಕಗಳಿಗೆ ರಂಧ್ರಗಳು ಅವಶ್ಯವೋ ಇಲ್ಲವೋ ಆದರೆ ನಮಗೆ ಮಾತ್ರ ತಂಪಾದ ನೀರು ಬೇಕೆಂದರೆ ರಂಧ್ರಯುಕ್ತ ಮಡಿಕೆಗಳು ಬೇಕೆ ಬೇಕು.

 ಕುಂಬಕಗಳು ರಂಧ್ರವೋ ರಂಧ್ರರಹಿತವೋ ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಬಹು ಉಪಯುಕ್ತ ಸಾಧನಗಳಾಗಿ ಮಾರ್ಪಾಟಾಗಿವೆ. ಇವುಗಳಲ್ಲಿನ ವಿದ್ಯುತ್ ಅವಾಹಕತೆ, ಉಷ್ಣಧಾರಕ ಶಕ್ತಿ, ನಶಿಸುವಿಕೆ ನಿರೋಧಕ ಗುಣ ಹಾಗೂ ರಾಸಾಯನಿಕವಾಗಿ ಜಡವಾಗಿರುವ ಸ್ವಭಾವಗಳು ಆಧುನಿಕ ತಂತ್ರಜ್ಞಾನದಲ್ಲಿ ಅದರ ಬಳಕೆಯನ್ನು ಇಮ್ಮಡಿಗೊಳಿಸಿವೆ. ಬಾಲ್ ಬೇರಿಂಗ್, ಟರ್ಬೈನ್ ಬಿಡಿಭಾಗಗಳು, ಪ್ರಬಲ ಆಮ್ಲಗಳ ಸಂಗ್ರಾಹಕಗಳು ಹಾಗೂ ಕೃತಕ ಹಲ್ಲು ಮತ್ತು ಮೂಳೆಗಳಂತ ಜೈವಿಕ ಕುಂಬಕಗಳಾಗಿ ನಮ್ಮ ಇಂದಿನ ಬಹುತೇಕ ಅವಶ್ಯಕತೆಗಳನ್ನು ಪೂರೈಸಿವೆ. 

                                         



ದಶಕಗಳಲ್ಲಿ ಒಮ್ಮೆ ಅರಳುವ ಕೆಲವು ವಿಶಿಷ್ಟ ಹೂಗಳು


ದಶಕಗಳಲ್ಲಿ ಒಮ್ಮೆ ಅರಳುವ  ಕೆಲವು ವಿಶಿಷ್ಟ ಹೂಗಳು.

ಲೇಖಕರುಸುರೇಶ ಸಂಕೃತಿ 

ಸುಂದರ ಬದುಕನ್ನು ಹೂವಿಗೆ ಹೋಲಿಸುವುದು ಸಾಮಾನ್ಯಬೆಳಗೆದ್ದು ಗಿಡ ಮರಗಳಲ್ಲಿ ಅರಳಿ   ತನ್ನ ಸೌಂದರ್ಯ ಮತ್ತು ಕಂಪಿನಿಂದ ಅಪಾರ   ಮುದ ನೀಡುವ ಹೂವು ಸಂಜೆಗೆ ಮುದುಡುತ್ತದೆ.    ಅದರ ಜಾಗದಲ್ಲಿ ನಾಳೆ ಹೊಸ ಹೂವು ಅರಳಿ‌, ನೋಡಿ ನಾನಿಲ್ಲಿದ್ದೀನಿ, ಗುಡ್‌ ಮಾರ್ನಿಂಗ್ ಎಂದು ಶುಭ ಸಂದೇಶವನ್ನು ನೀಡುತ್ತದೆ. ಸಸ್ಯಶಾಸ್ತ್ರೀಯವಾಗಿ ಹೂಗಳು ಸಸ್ಯಗಳ ಸಂತಾನೋತ್ಪತ್ತಿಯ ಪ್ರಮುಖ ಅಂಗ. ಬೆಳೆಗಳು ಚೆನ್ನಾಗಿ ಕಾಳು ಕಟ್ಟಲು ಮತ್ತು ಉತ್ತಮ ಫಲಸಲನ್ನು ನೀಡಲು ಯಥೇಚ್ಚ ಹೂಗಳು ಇರಲೇಬೇಕು ಅಲ್ಲವೇ? ಜೇನುಗಳು ದುಂಬಿಗಳು ಮುಂತಾದ ಕ್ರಿಮಿ- ಕೀಟ, ಪಕ್ಷಿಗಳಿಗೆ  ಹೂವಿನ ಮಕರಂದವೇ ಮುಖ್ಯ ಆಹಾರವಲ್ಲವೇ?   ದಿನ ನಿತ್ಯ ಅರಳಿ ನಗುವ ಹೂಗಳು ಹುಟ್ಟಿನಿಂದ ಸಾವಿನವರೆಗೆ ನಮ್ಮ ಬದುಕಿನಲ್ಲಿ  ಅವಿಭಾಜ್ಯವೆಂಬಂತೆ ಹೊಸೆದುಕೊಂಡಿವೆ. ಮತ್ತೆ  ಕೆಲವು ಹೂವುಗಳಿವೆ ಅವು ಅರಳಲು ತೆಗೆದುಕೊಳ್ಳುವ ಕಾಲ ಹಲವಾರು ವರ್ಷಗಳು, ಕೆಲವೊಂದು ಹೂಗಳು ಒಮ್ಮೆ ಅರಳಲು ಒಂದು ದಶಕ ಮೀರುತ್ತದೆ!   ಬಿದುರು ಹೂವು ಅರಳುವುದು ಅದರ ವಿವಿಧ ತಳಿಗಳನ್ನು ಅನುಸರಿಸಿ ಅರವತ್ತರಿಂದ ನೂರ ಮುವತ್ತು ವರ್ಷಗಳಿಗೊಮ್ಮೆ ಎಂಬುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ

ಇಂಡೋನೇಷ್ಯಾದ ಸುಮಾತ್ರದಲ್ಲಿ ಕಾರ್ಪ್ಸ್‌ ಫ್ಲವರ್‌ ಒಮ್ಮೆ ಅರಳಲು ಎಂಟರಿಂದ ಇಪ್ಪತ್ತು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹೂವು ತಲೆಕೆಳಗಾಗಿ ಹಿಡಿದ ಐದು ಅಡಿಯ ಅಗಲದ ಛತ್ರಿಯಂತೆ ವಿಶಾಲವಾಗಿ  ಅರಳಿ ನಿಲ್ಲುತ್ತದೆ. ಹೂವು ತಾನು ಅರಳಿದಾಗ ತನ್ನ ಕಂಪನ್ನು ಸೂಸುವುದು ಸಾಮಾನ್ಯವೇಹೆಸರೇ ಸೂಚಿಸುವಂತೆ ಕಾರ್ಪ್ಸ್‌ ಫ್ಲವರ್‌ ಅರಳಿದಾಗ ಕೊಳೆತ ಮಾಂಸದ ದುರ್ವಾಸನೆಯನ್ನು ಸೂಸುತ್ತದೆಯಂತೆಈ ದುರ್ವಾಸನೆಯಿಂದ ಆಕರ್ಷಿತವಾಗುವ ಕ್ಯಾರಿಯನ್‌ ಬೀಟಲ್‌ ಹೂವಿಗೆ ಭೇಟಿ ನೀಡಿ ಈ ಸಸ್ಯದ ಪರಾಗ ಸ್ಪರ್ಷಕ್ಕೆ ಸಹಕರಿಸುತ್ತದೆ



ದಕ್ಷಿಣ ಭಾರತ, ಶ್ರೀಲಂಕ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಕಂಡು ಬರುವ ಶ್ರೀತಾಳೆ (Coryphy umbraculifera) ಎಂಬ ತಾಳೆ ಮರ 20-40 ವರ್ಷಗಳಿಗೊಮ್ಮೆ ಹೂ ಬಿಡುತ್ತದೆ. ನಮ್ಮ ಪ್ರಾಚೀನ ಶಾಸ್ತ್ರ, ಸಾಹಿತ್ಯಗಳು ಉಳಿದಿರುವುದು ಈ ತಾಳೆಯ ಗರಿಗಳಲ್ಲಿಯೇಇದರ ಹೂ ಅರಳಿ ಪರಾಗ ಸ್ಪರ್ಶವಾದನಂತರ ಕಾಯಾಗಿ ಅದರ ನಂತರದ ಕೆಲವು ದಿನಗಳಲ್ಲಿ ಕಾಳುಗಳು ನೆಲಕ್ಕೆ ಉದುರುತ್ತವೆ. ಈ ಕಾಳುಗಳು ಆನೆಯ ದಂತದ ಮಣಿಗಳಂತೆಲಯೇ ಹೊಳಪು ಮತ್ತು ಗಟ್ಟಿತನ ಹೊಂದಿರುತ್ತವೆ. ಕಾಳುಗಳು ಉದುರಿದ ನಂತರ ಇಡಿ ಈ ತಾಳೆ ಮರ ಸತ್ತು ನೆಲಕ್ಕೆ ಒರಗುತ್ತದೆ.

ದಕ್ಷಿಣ ಅಮೇರಿಕಾದ ಬೊಲಿವಿಯಾ ಮತ್ತು ಪೆರುವಿನಲ್ಲಿ ಕಂಡು ಬರುವ ಕ್ವೀನ್‌ ಆಫ್‌ ಆಂಡೀಸ್‌ ಅಥವಾ ಪೂಯಾ ರಾಯ್ಮಂಡಿ (Puya raimondii)  ಎಂಬ ಅನಾನಸ್‌ ಜಾತಿಯ ಗಿಡದಲ್ಲಿ ಹೂವು ಒಮ್ಮೆ ಅರಳಲು 80ರಿಂದ 100 ವರ್ಷಗಳು ಬೇಕಾಗುತ್ತದ. ಅನಾನಸ್‌ ಹಣ್ಣಿನಂತೆಯೇ ಮೇಲ್ಮೈ ಇರುವ ಸುಮಾರು 30 ಅಡಿ ಎತ್ತರದ ಕಂಬದಂತಹ ಕಾಂಡದಲ್ಲಿ ಸುತ್ತಲೂ ಸಾವಿರಾರು ಹೂವುಗಳು  ಅರಳುತ್ತದೆ. ಪರಾಗ ಸ್ಪರ್ಶದ ನಂತರ ಕಾಳು ಕಟ್ಟಿ, ಹೂವಿನೊಂದಿಗೆ ಗಿಡವೂ ಸತ್ತು ಸ್ವರ್ಗ ಸೇರತ್ತದೆ!ಚಿಲಿ ದೇಶ ಪೂಯಾ ಚಿಲೆಯಂಸಿಸ್‌ ಎಂಬ ಹೂ ಅರಳಲು ತೆಗೆದುಕೊಳ್ಳುವ ಕಾಲಾವಧಿ 11 ವರ್ಷಗಳು. ಅದರ  ಹಸಿರು ಮಿಶ್ರಿತ ಹಳದಿ ಹೂಗಳು ಪ್ರಾಣಿ ಪಕ್ಷಿಗಳನ್ನು ತನ್ನೆಡೆಗೆ ಆಕರ್ಷಿಸುತ್ತವೆ. ಅದರೆ ಭರ್ಜಿಗಳಂತೆ ಹೊರಕ್ಕೆ ಚಾಚಿರುವ ಇದರ ಎಲೆಗಳಲ್ಲಿನ ಮುಳ್ಳುಗಳು ಪ್ರಾಣಿ ಪಕ್ಷಿಗಳಿಗೆ ಅಪಾಯಕಾರಿಯಾಗಿವೆಮೇವಿಗೆಂದು ಹೋಗಿ ಇದರ ಪೊದೆಯೊಳಗೆ ಸಿಲುಕಿಕೊಂಡ ಕುರಿಗಳು  ಬಿಡಿಸಿಕೊಂಡು ಹೊರಬರಲಾಗದೆ ಅಲ್ಲೇ ಅಸು ನೀಗುತ್ತವೆಹಾಗೆಯೇ ದಿನಗಳು ಕಳೆದ ನಂತರ ಅದೇ ಗಿಡಕ್ಕೆ ಸಾರಯುಕ್ತ  ಗೊಬ್ಬರವಾಗುತ್ತವೆ.
ಇದರಿಂದಾಗಿ ಪೂಯಾ ಚಿಲೆಯಂಸಿಸ್‌ಗೆ ಕುರಿ ಭಕ್ಷಕ ಎಂಬ ಕುಖ್ಯಾತಿಯೂ ಇದೆ
. ನಮಗೆಲ್ಲ ಚಿರಪರಿಚಿತವಾದ ಕತ್ತಾಳೆ ಗಿಡ (Agave americanaದ ಜೀವಿತಾವಧಿ 10 ರಿಂದ 30 ವರ್ಷಗಳು ಆದರೂ ಇದನ್ನು ಇಂಗ್ಲಿಷಿನಲ್ಲಿ ಸೆಂಚುರಿ ಪ್ಲಾಂಟ್‌ ಎಂದು ಕರೆಯಲಾಗುತ್ತದೆ!ಅಡಿಕೆ ಪಟ್ಟೆಯಂತಿರುವ ಇದರ ಎಲೆಗಳನ್ನು ಹಗ್ಗದ ನಾರು ತೆಗೆಯಲು ಬಳಸಲಾಗುತ್ತದೆ
ಹೂ ಬಿಡುವ ಸಮಯದಲ್ಲಿ ಗಿಡದ ಮಧ್ಯಭಾಗದಿಂದ ಕೊನರುವ ಇದರ ಹೂವು ತುಂಬಿದ ಕಾಂಡ ಸುಮಾರು 10 ರಿಂದ 12 ಅಡಿ ಇರುತ್ತದೆ. ಒಳಗಿದಾಗ ಬೆಂಡಿನಂತೆ ಹಗುರವಾಗುವ ಇದರ  ಕಾಂಡದ ತುಂಡನ್ನು ಬೆನ್ನಿಗೆ ಕಟ್ಟಿಕೊಂಡು ಈಜನ್ನು ಕಲಿಯಲು ನೀರಿಗಿಳಿಯುವವರು ಇದ್ದಾರೆಹೂವು ಒಣಗುವುದರೊಂದಿಗೆ ಗಿಡವೂ ಒಣಗುತ್ತದೆ ಆದರೆ ಅದರ ಬೇರಿನಿಂದ ಮರಿಗಳ ರೂಪದಲ್ಲಿ ಸಸಿಗಳು ಹುಟ್ಟಿ ಹೊಸ ಸಸ್ಯಗಳ ಉಗಮವಾಗುತ್ತದೆ.

   ಇನ್ನು ಮಹಾರಾಷ್ಟ್ರದಿಂದ  ಗೋವಾ, ಕರ್ನಾಟಕ, ಕೇರಳ, ತಮಿಳುನಾಡುನ ವರೆಗೆ ಹರಡಿರುವ ನಮ್ಮ ಪಶ್ಷಿಮ ಘಟ್ಟಗಳು ಜೀವಿ ವೈವಿಧ್ಯಕ್ಕೆ  ಹೆಸರುವಾಸಿಯಾದ ತಾಣವಾಗಿದೆ.   ಇಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲ ಕುರುಂಜಿ ಹೂ ವಿಶಿಷ್ಟವಾದದ್ದು. ಶೋಲಾ ಅರಣ್ಯಗಳಲ್ಲಿ ಬೆಟ್ಟ ಗುಡ್ಡಗಳನ್ನು ಆವರಿಸುವ ಈ ಹೂವು ಇಡಿ ಪ್ರದೇಶವನ್ನು ನೀಲಿಮಯಗೊಳಿಸಿಬಿಡುತ್ತದೆಕಳೆದ 2022 ಸೆಪ್ಟೆಂಬರಿನಲ್ಲಿ ಚಿಕ್ಕಮಗಳೂರಿನ ಸುತ್ತಮುತ್ತ ಬೆಟ್ಟ ಗುಡ್ಡಗಳಲ್ಲಿ ಅರಳಿದ ನೀಲಿ ಹೂಗಳ ಸುದ್ಧಿ ಪತ್ರಿಕೆಗಳಲ್ಲಿ ರಾರಾಜಿಸಿದ್ದನ್ನು ನಾವೆಲ್ಲ ನೋಡಿದ್ದೇವೆ.  

ನಾನೂ ಸಹ ಈ ಸಂದರ್ಭದಲ್ಲಿ ನನ್ನ ಪುಟ್ಟ ಕ್ಯಾಮರಾ ಹಿಡಿದು ಮುಳ್ಳಯ್ಯನ ಗಿರಿ, ಸಿತಾಳಯ್ಯನ ಗಿರಿ, ದತ್ತ ಗಿರಿಗಳಲ್ಲಿ ಅಲೆದಾಡಿದ್ದು ಒಂದು ಅದ್ಭುತ ಅನುಭವ ನೀಡಿದ್ದಿತುನನ್ನ ಮನದಣಿಯೆ ಈ ಹೂವುಗಳ ಚಿತ್ರಗಳನ್ನು ಚಿತ್ರೀಕರಿಸಿ ಸ್ನೇಹಿತರಿಗೆ ಹಂಚಿ ಇದು ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲ ಕುರುಂಜಿ(Strobilanthes kunthianusಎಂದೇ ನಾನು ತಿಳಿದಿದ್ದೆ.   ಆದರೆ ಶ್ರೀಯುತ ನಾಗೇಶ್‌ ಹೆಗಡೆಯವರ ಲೇಖನದಿಂದ 2022ರ ಸೆಪ್ಟೆಂಬರಿನಲ್ಲಿ ಅರಳಿದ್ದು ಏಳು ವರ್ಷಗಳಿಗೊಮ್ಮೆ ಅರಳುವ ನೀಲ ಕುರುಂಜಿ (Strobilanthes sessilis)ಎಂದು ತಿಳಿಯಿತುಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಎಂಬ ಕಾದಂಬರಿಯಲ್ಲಿ ಗುರ್ಗೆ ಹೂ ಎಂಬ ಆರು ವರ್ಷಗಳ ನಂತರ ಅರಳುವ ಹೂವಿನ ಪ್ರಸ್ತಾಪ ಬರುತ್ತದೆಕವಿ  ವಿಮರ್ಷಕ, ಸಂಶೋಧಕರಾದ ಏಕೆ ರಾಮಾನುಜಂ ಅವರು ನೀಲ ಕುರುಂಜಿ ಹೂವನ್ನು ಕುರಿತ  ತಮಿಳು ಸಂಗಂ ಸಾಹಿತ್ಯದ ಒಂದು ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.






ನೀಲ ಕುರುಂಜಿ ಎಂಬ ಕನ್ನಡ ಒಂದು ಹೆಸರಿರುವ ಹಲವಾರು ಪ್ರಭೇದದ ಹೂಗಳು ನಮ್ಮಲ್ಲಿ ಇವೆ ಎಂದಾಯಿತು. ತಮಿಳಿನಲ್ಲಿ Strobilanthes  ಜೀನಸ್ಸಿಗೆ ಸೇರಿದ  ಕಾರ್ವಿ, ತೊಪಲಿ ಕಾರ್ವಿ, ಕುರುಂಜಿ,ಮೆಟ್ಟು ಕುರುಂಜಿ ಎಂದು ಪ್ರತ್ಯೇಕವಾಗಿ ಈ ಹೂಗಳನ್ನು ಗುರ್ತಿಸುತ್ತಾರೆ. ಮೆಟ್ಟು ಕುರುಂಜಿ ಎಂಬ ಪ್ರಭೇದದ ನೀಲ ಕುರುಂಜಿ ಹೂಗಳು ಕೇರಳ ಮತ್ತು ತಮಿಳುನಾಡಿ ಬೆಟ್ಟ ಗುಡ್ಡಗಳಲ್ಲಿ ಅರಳಿರುವ ವರದಿಗಳು 2024ರ ಸೆಪ್ಟೆಂಬರಿನಲ್ಲಿ  ಬಂದಿವೆ. ವಿಶ್ವವಾದ್ಯಾಂತ 350ಕ್ಕೂ ಹೆಚ್ಚು ಪ್ರಭೇದದ  Strobilanthes ಹೂಗಳಲ್ಲಿ ಭಾರತದಲ್ಲಿರಬಹುದಾದ  ಪ್ರಭೇದಗಳನ್ನು ಗುರ್ತಿಸುತ್ತಿರುವ ವರದಿಗಳು ಆಗಿಂದ್ದಾಗ್ಗೆ ಬರುತ್ತಲೇ ಇರುತ್ತವೆ.   ಎಂತಾದರೂ ಸರಿ ಮುಂದಿನ ನೀಲಕುರಂಜಿ ಸೀಸನ್ನಿನಲ್ಲಿ ನೀಲಕುರುಂಜಿ ಅತು ಅದು ಯಾವುದಾದರೂ ಸರಿ ಅರಳುವಲ್ಲಿ ಭೇಟಿ ನೀಡಿ ನೋಡಿ ಅನಂದಿಸುವುದನ್ನು ಮರೆಯದಿರಿ. ಏಕೆಂದರೆ ನೀಲಕುರುಂಜಿಯನ್ನು ಅಳುವಿನ ಅಂಚಿನಲ್ಲಿರುವ ಸಸ್ಯ ಸಂಕುಲದ ಪಟ್ಟಿಗೆ ಸೇರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಹಾಗಿದ್ದರೂ ಕಳೆದ ಸೀಸನ್ನಿನಲ್ಲಿ ಹೂವನ್ನು ನೋಡಲು ಬಂದವರಲ್ಲಿ ಕೆಲವರು ಬೇಕಾಬಟ್ಟಿ ಎಂಬಂತೆ ನೀಲಕುರುಂಜಿ ಗಿಡಗಳನ್ನು ಕಿತ್ತು ಎರಚಾಡಿದ್ದ   ವಿದ್ವಂಸಕ ಮನೋಭಾವ ಎದ್ದು ಕಾಣುತ್ತಿತ್ತು. ಹೀಗಾಗಿ ಸರ್ಕಾರವು ಮುಂದೆ ಅವು ಅರಳುವ ಪ್ರದೇಶಗಳಿಗೆ ಜನರ ಪ್ರವೇಶ ನೀಷೇಧಿಸಿದರೂ ಆಶ್ಚರ್ಯವಿಲ್ಲ.