ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, March 4, 2026

ಟಾಮ್ ಲೈಟನ್: ಡಿಜಿಟಲ್ ಜಗತ್ತಿಗೆ ಹೊಸದಾರಿ ತೋರಿದ ಗಣಿತಜ್ಞ

 ಟಾಮ್ ಲೈಟನ್: ಡಿಜಿಟಲ್ ಜಗತ್ತಿಗೆ ಹೊಸದಾರಿ ತೋರಿದ ಗಣಿತಜ್ಞ

ಲೇಖಕರು: ರಾಮಚಂದ್ರ ಭಟ್ ಬಿ.ಜಿ. 

ವಿಜ್ಞಾನ ಶಿಕ್ಷಕರು

 




"ಇಂಟರ್ನೆಟ್ ಎಲ್ಲರಿಗೂ ಸೇರಿದ್ದು, ಮತ್ತು ಅದನ್ನು ವೇಗವಾಗಿ ಹಾಗೂ ಸುರಕ್ಷಿತವಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ."  ಟಾಮ್ ಲೈಟನ್

ಇತ್ತೀಚೆಗೆ ನಮ್ಮ ಶಾಲೆಯ STEM ಕ್ಲಬ್ ವಿದ್ಯಾರ್ಥಿಗಳನ್ನು ವಿಜ್ಞಾನ ಮಾದರಿ ಸ್ಪರ್ಧೆಗೆ ಕರೆದೊಯ್ದಿದ್ದೆ. ಕಳೆದ ವರ್ಷ ನಮ್ಮ ಶಾಲೆಯಲ್ಲಿ Akamai ಪ್ರಾಯೋಜಕತ್ವದಲ್ಲಿ Learning Links Foundation ನವರು  'STEAM (Science, Technology, Engineering, Arts, and Mathematics) LAB'  ಸ್ಥಾಪನೆಯಾಗಿತ್ತು. ಈ ಲ್ಯಾಬ್ ಬಂದ ಮೇಲೆ ಮಕ್ಕಳ ಕಲಿಕೆ, ಆತ್ಮವಿಶ್ವಾಸ ಮತ್ತು ಹಾಜರಾತಿಯಲ್ಲಿ ಹೊಸ ಚೈತನ್ಯ ಬಂದಿದೆ. ನಮ್ಮ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುತ್ತಿರುವುದು ಒಬ್ಬ ಶಿಕ್ಷಕನಾಗಿ ನನಗೆ ಹೆಮ್ಮೆಯ ವಿಷಯ. ಸಮುದಾಯ ಶಾಲೆಯೊಂದಿಗೆ ಕೈ ಜೋಡಿಸಿದಾಗ ಅಸಾಧ್ಯವನ್ನೂ ಸಾಧಿಸಬಹುದು.


ಆ ಸ್ಪರ್ಧೆಯ ಸಂದರ್ಭದಲ್ಲಿ ಅಕಮಾಯಿ ಟೆಕ್ನಾಲಜೀಸ್‌ನ ನಿರ್ದೇಶಕಿ ನೇಹಾ ಜೈನ್ ಅವರು ಆಡಿದ ಮಾತುಗಳು ನನ್ನ ಮನಸ್ಸನ್ನು ತಟ್ಟಿದವು. ನಾವು ದಿನನಿತ್ಯ ಬಳಸುವ ಅಮೆಜಾನ್ನೆಟ್‌ಫ್ಲಿಕ್ಸ್ಸೋಶಿಯಲ್ ಮೀಡಿಯಾ ಹಾಗೂ ದೂರದರ್ಶನದ ನೇರಪ್ರಸಾರಗಳ ಹಿಂದೆ ಇರುವ ಶಕ್ತಿಯೇ ಟಾಮ್ ಲೈಟನ್ ಎಂಬ ಗಣಿತಜ್ಞ! 
ಅವರ ಜೀವನದ ಕಥೆ ನಮ್ಮ ವಿದ್ಯಾರ್ಥಿಗಳಿಗೆ ಶ್ರೇಷ್ಠ ಪ್ರೇರಣೆಯಾಗಬಲ್ಲದು .

ಗಣಿತದ ಮೇಲೆ ಅಳಿಯದ ಪ್ರೀತಿ – ಬಾಲ್ಯ ಮತ್ತು ಶಿಕ್ಷಣ

1956ರಲ್ಲಿ ಜನಿಸಿದ ಟಾಮ್ ಲೈಟನ್ ಅವರಿಗೆ ಬಾಲ್ಯದಿಂದಲೂ ಗಣಿತವೆಂದರೆ ಅಚ್ಚುಮೆಚ್ಚು. ಅವರಿಗೆ ಕಠಿಣ ಸಮಸ್ಯೆಗಳು ಆಟದಷ್ಟೇ ಖುಷಿ ನೀಡುತ್ತಿದ್ದವು. 'ಬೆಳೆಯುವ ಸಿರಿ ಮೊಳಕೆಯಲ್ಲಿ' ಎನ್ನುವಂತೆ, ಒಮ್ಮೆ ಅವರ ಹೈಸ್ಕೂಲ್ ಶಿಕ್ಷಕರು "ಯಾರೂ ಬಿಡಿಸಲಾರರು" ಎಂದು ಕೊಟ್ಟ ಸಂಕೀರ್ಣ ಸಮಸ್ಯೆಯನ್ನು ಟಾಮ್ ಕೇವಲ ಹತ್ತೇ ನಿಮಿಷಗಳಲ್ಲಿ ಬಿಡಿಸಿ ಹೊಸ ಸಮಸ್ಯೆ ಬಗೆ ಹಾರಿಸುವ ವಿಧಾನಕ್ಕೆ ಹೊಸ ಆಯಾಮವನ್ನೇ ತೋರಿದ್ದರು. ಆ ಕ್ಷಣವೇ ಅವರು ಭವಿಷ್ಯದ ಶ್ರೇಷ್ಠ ವಿಜ್ಞಾನಿಯಾಗುವ ಮುನ್ಸೂಚನೆ ಸಿಕ್ಕಿತ್ತು.

ನಂತರ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಗಣಿತ ಅಧ್ಯಯನ ಮುಗಿಸಿ, ವಿಶ್ವವಿಖ್ಯಾತ MIT ನಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ಅಲ್ಲಿ ಅವರು ಕೇವಲ ಗಣಿತದ ಸೂತ್ರಗಳನ್ನು ಬೋಧಿಸಲಿಲ್ಲ; ಬದಲಾಗಿ "ಈ ಸೂತ್ರ ಬಳಸಿ ನೈಜ ಜಗತ್ತಿನ ಸಮಸ್ಯೆಯನ್ನು ಹೇಗೆ ಬಿಡಿಸಬಹುದು?" ಎಂದು ಆಲೋಚಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿದ್ದರು. ಇವರು MITನಲ್ಲಿ ಬೋಧನೆ ಮಾಡುವಾಗ, ವಿದ್ಯಾರ್ಥಿಗಳಿಗೆ ಕೇವಲ ಸೂತ್ರಗಳನ್ನು ಹೇಳಿಕೊಡುತ್ತಿರಲಿಲ್ಲ. ಬದಲಾಗಿ, " ಗಣಿತದ ಸೂತ್ರವನ್ನು ಬಳಸಿ ನೀನು ಒಂದು ನೈಜ ಸಮಸ್ಯೆಯನ್ನು ಹೇಗೆ ಬಿಡಿಸಬಹುದು?" ಎಂದು ಕೇಳುತ್ತಿದ್ದರಂತೆ. ಒಬ್ಬ ವಿದ್ಯಾರ್ಥಿ ಅಕಾಮೈನ ಕಲ್ಪನೆಯನ್ನು ತರಗತಿಯಲ್ಲಿ ಮಂಡಿಸಿದ. ಅವರ ಇದೇ 'Out of the box' ಆಲೋಚನಾ ಕ್ರಮ ಮುಂದೆ ಅಕಮಾಯಿ ಸಂಸ್ಥೆಯ ಜನ್ಮಕ್ಕೆ ಕಾರಣವಾಯಿತು.

ಅಕಾಮಾಯಿ ಹುಟ್ಟಿದ ಕಥೆ: ಸಮಸ್ಯೆಯೇ ಯಶಸ್ಸಿನ ಮೆಟ್ಟಿಲು

    ಇಂದು ಇಂಟರ್‌ನೆಟ್‌ ಇಲ್ಲದ ಬದುಕನ್ನು ಊಹಿಸುವುದೂ ಕಷ್ಟ!!! ಇಂತಹ ಸೌಲಭ್ಯ 1990ರ ದಶಕದಲ್ಲಿ  ಶೈಶವಾವಸ್ಥೆಯಲ್ಲಿತ್ತು. ಇಂಟರ್ನೆಟ್ ವೇಗ ಬಹಳ ನಿಧಾನವಾಗಿತ್ತು. ಒಂದು ಫೋಟೋ ಲೋಡ್ ಆಗಲು ನಿಮಿಷಗಟ್ಟಲೆ ಕಾಯಬೇಕಿತ್ತು. ಆಗ ವರ್ಲ್ಡ್ ವೈಡ್ ವೆಬ್ ಸೃಷ್ಟಿಕರ್ತ ಟಿಮ್ ಬರ್ನರ್ಸ್ ಲೀ ಅವರು ಟಾಮ್‌ರವರಿಗೆ ಈ "ವೆಬ್ ದಟ್ಟಣೆ"ಗೆ (Web Congestion) ನಿಮ್ಮ ಗಣಿತ ಬಳಸಿ ಪರಿಹಾರವನ್ನು ಕಂಡುಹಿಡಿಯಿರಿ ಎಂಬ ಸವಾಲೆಸೆದರು. ಸವಾಲನ್ನು ಸ್ವೀಕರಿಸಿದ ಟಾಮ್‌ರವರು ಇದನ್ನೊಂದು ಅವಕಾಶವಾಗಿ ಸ್ವೀಕರಿಸಿದರು. ಟಿಮ್ ಬರ್ನರ್ಸ್ ಲೀಯವರ ಸವಾಲನ್ನು ಸ್ವೀಕರಿಸಿ, ತಮ್ಮ ವಿದ್ಯಾರ್ಥಿ ಡೇನಿಯಲ್ ಲೆವಿನ್ ಜೊತೆ ಸೇರಿ ಗಣಿತದ ಅಲ್ಗಾರಿದಮ್‌ಗಳ ಮೂಲಕ ಇಂಟರ್ನೆಟ್ ವೇಗ ಹೆಚ್ಚಿಸುವ ಸಂಶೋಧನೆ ಆರಂಭಿಸಿದರು.

ಆರಂಭದಲ್ಲಿ ಅವರು ತಮ್ಮ ಐಡಿಯಾವನ್ನು ದೊಡ್ಡ ಕಂಪನಿಗಳಿಗೆ ಉಚಿತವಾಗಿ ನೀಡಲು ಹೋದಾಗ, "ಪ್ರೊಫೆಸರ್‌, ಇದು ಪುಸ್ತಕದ ಬದನೆಕಾಯಿ ಸಾಂಬಾರಿಗಲ್ಲ!! ಇದರ ಪ್ರಾಯೋಗಿಕ ಬಳಕೆ ಅಸಾಧ್ಯ.‌ ಪ್ರೊಫೆಸರ್‌, ನೀವು ಪಾಠ ಮಾಡಿಕೊಂಡಿರಿ" ಎಂದು ಎಲ್ಲ ಉದ್ಯಮಿಗಳೂ ಅಪಹಾಸ್ಯ ಮಾಡಿದ್ದರು. ಆದರೆ ಸೋಲೊಪ್ಪದ ಟಾಮ್, 1998ರಲ್ಲಿ ಅಕಮಾಯಿ ಟೆಕ್ನಾಲಜೀಸ್ ಸ್ಥಾಪಿಸಿದರು.

CDN – ಜಗತ್ತನ್ನು ಬದಲಿಸಿದ ಆವಿಷ್ಕಾರ

ಒಮ್ಮೆ ನ್ಯೂಯಾರ್ಕ್‌ನಿಂದ ಲಂಡನ್‌ಗೆ ವಿಡಿಯೋ ಕಳುಹಿಸಲು 30 ನಿಮಿಷ ಹಿಡಿದಾಗ, ಟಾಮ್ ಅವರಿಗೆ ಒಂದು ಹೊಸ ಹೊಳಹು ಬಂದಿತು— "ಈ ವಿಡಿಯೋವನ್ನು ಲಂಡನ್‌ಗೆ ಹತ್ತಿರದ ಸರ್ವರ್‌ನಲ್ಲೇ ಸಂಗ್ರಹಿಸಿಟ್ಟರೆ?". ಈ ಆಲೋಚನೆಯೇ Content Delivery Network (CDN) ತಂತ್ರಜ್ಞಾನಕ್ಕೆ ನಾಂದಿ ಹಾಡಿತು.


ಅಕಮಾಯಿ CDN ತಂದ ಬದಲಾವಣೆಗಳು:

  • ವೇಗ: ಜಗತ್ತಿನಾದ್ಯಂತ ಹಂಚಿರುವ ಸರ್ವರ್‌ಗಳಿಂದಾಗಿ ವೆಬ್‌ಸೈಟ್‌ಗಳು ಕ್ಷಣಾರ್ಧದಲ್ಲಿ ಲೋಡ್ ಆಗುತ್ತವೆ.
  • ಭದ್ರತೆ: 2001ರಲ್ಲಿ 'ಕೋಡ್ ರೆಡ್' ವೈರಸ್ ಅಮೆರಿಕದ ವೈಟ್ ಹೌಸ್ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಮುಂದಾದಾಗ, ಅಕಮಾಯಿ ತಂಡ ಹಗಲಿರುಳು ಶ್ರಮಿಸಿ ಆ ಸೈಬರ್ ದಾಳಿಯನ್ನು ತಡೆಯಿತು.
  • ವ್ಯಾಪ್ತಿ: ಇಂದು ಜಗತ್ತಿನ 30% ಕ್ಕಿಂತ ಹೆಚ್ಚು ಇಂಟರ್ನೆಟ್ ಟ್ರಾಫಿಕ್ ಅನ್ನು ಅಕಮಾಯಿ ನಿರ್ವಹಿಸುತ್ತದೆ.


 ಸಮಾಜದ ಮೇಲೆ ಬೀರಿರುವ ಪ್ರಭಾವ (Impact on Society) :  

೧. ಡಿಜಿಟಲ್ ಆರ್ಥಿಕತೆಯ ಬೆಳವಣಿಗೆ ಆನ್‌ಲೈನ್ ವ್ಯಾಪಾರ (E-commerce) ವೇಗವಾಗಿ ಬೆಳೆಯಲು ಅಕಾಮೈನ CDN ಪ್ರಮುಖ ಕಾರಣವಾಗಿದೆ. Flipkart, Myntra ನಂತಹ ಭಾರತೀಯ ಇ-ಕಾಮರ್ಸ್ ಸೈಟ್‌ಗಳು ಅಕಾಮೈನ ಸಹಾಯದಿಂದಲೇ ವೇಗವಾಗಿ ಕಾರ್ಯನಿರ್ವಹಿಸುತ್ತವೆ.

2. ಕೊರೊನಾ ಸಮಯದಲ್ಲಿ ಆನ್‌ಲೈನ್ ತರಗತಿಗಳು ನಡೆಯಲು ಅಕಾಮೈನ ತಂತ್ರಜ್ಞಾನವು ಬಹಳ ಸಹಾಯ ಮಾಡಿತು. ಭಾರತೀಯ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ ತರಗತಿಗಳನ್ನು ವೀಕ್ಷಿಸಲು ಸಾಧ್ಯವಾಯಿತು. ಇದು ಆನ್‌ಲೈನ್ ಶಿಕ್ಷಣಕ್ಕೆ ಬಲ ನೀಡುತ್ತಿದೆ.

3. ಸರ್ಕಾರ ಮತ್ತು ಬ್ಯಾಂಕ್‌ಗಳ ಭದ್ರತೆ ಸರ್ಕಾರಿ ಪೋರ್ಟಲ್‌ಗಳು, ಬ್ಯಾಂಕ್‌ಗಳು ಮತ್ತು ರಕ್ಷಣಾ ಸಂಸ್ಥೆಗಳ ವೆಬ್‌ಸೈಟ್‌ಗಳು ಅಕಾಮೈನ ಭದ್ರತೆಯ ಮೇಲೆ ಅವಲಂಬಿತವಾಗಿವೆ.

4. ಸೈಬರ್ ದಾಳಿಗಳನ್ನು ತಡೆದು ರಾಷ್ಟ್ರಗಳ ರಕ್ಷಣೆ ಭಾರತದಂತಹ ದೇಶಗಳಲ್ಲಿ ಸೈಬರ್ ದಾಳಿಗಳಿಂದ ಮೂಲ ಸೌಕರ್ಯಗಳನ್ನು ರಕ್ಷಿಸಲು ಅಕಾಮೈನ ಕೆಲಸಗಳು ಬಹಳ ಮುಖ್ಯವಾಗಿವೆ.

5. CDN, ಕ್ಲೌಡ್ ಸೆಕ್ಯೂರಿಟಿ, ಎಡ್ಜ್ ಕಂಪ್ಯೂಟಿಂಗ್ ಕ್ಷೇತ್ರಗಳು ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿವೆ.

ಉದ್ಯಮಿ ಮತ್ತು ವಿಜ್ಞಾನಿಯಾಗಿ ಟಾಮ್ ನೀಡುವ ಸಂದೇಶ

ಟಾಮ್ ಲೈಟನ್ ಕೇವಲ ದೊಡ್ಡ ಕಂಪನಿಯ ಸಿಇಒ ಆಗಿ ಉಳಿಯಲಿಲ್ಲ, ಅವರು ವಿನಯವಂತಿಕೆಯನ್ನು ಮರೆಯಲಿಲ್ಲ. ತಮಗೆ ವ್ಯಾಪಾರ ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡು ಸಂಸ್ಥೆಗೆ ಸೂಕ್ತ CEO ರನ್ನು ನಿಯೋಜಿಸಿ ತಾವು ಅಂತಹ ಅನುಭವಸ್ಥರಿಂದ ಕಲಿತರು. ಅವರ ಯಶಸ್ಸಿನ ಸೂತ್ರಗಳಿವು:

  1. ಸವಾಲುಗಳಲ್ಲೇ ಅವಕಾಶ ಹುಡುಕಿ: ಇಂಟರ್ನೆಟ್ ನಿಧಾನವಾಗಿದ್ದನ್ನೇ ಅವರು ತಮ್ಮ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡರು.
  2. ಸಾಮಾಜಿಕ ಬದ್ಧತೆ: ಶಿಕ್ಷಣ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ನೀಡಿದರು. ಕೊರೊನಾ ಸಮಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಅಡೆತಡೆಯಿಲ್ಲದೆ ಆನ್‌ಲೈನ್ ತರಗತಿ ವೀಕ್ಷಿಸಲು ಇವರ ತಂತ್ರಜ್ಞಾನವೇ ಆಧಾರವಾಯಿತು.
  3. ನಿರಂತರ ಕಲಿಕೆ: 30ಕ್ಕೂ ಹೆಚ್ಚು ವರ್ಷ MITಯಲ್ಲಿ ಬೋಧನೆ ಮಾಡುತ್ತಾ ಇಂದಿಗೂ ಜ್ಞಾನದ ಹಸಿವು ಉಳಿಸಿಕೊಂಡಿದ್ದಾರೆ.

ಟಾಮ್ ಲೈಟನ್ ಕೇವಲ ಉದ್ಯಮಿಯಲ್ಲ, ಅವರು ಜ್ಞಾನದಿಂದ ಜಗತ್ತನ್ನು ಬೆಳಗಿಸಿದ ದಾರಿದೀಪ. ಸೋಲೇ ಗೆಲುವಿನ ಸೋಪಾನ ಎಂದು ನಂಬಿ ನಡೆದ ಅವರ ಪಯಣ ಪ್ರತಿಯೊಬ್ಬ ಕನಸುಗಾರನಿಗೂ ಸ್ಫೂರ್ತಿ. "ನಿಮ್ಮ ಜ್ಞಾನವನ್ನು ಜಗತ್ತಿನ ಒಳಿತಿಗೆ ಬಳಸಿ" ಎಂಬ ಅವರ ಮಾತು ನಮಗೆಲ್ಲರಿಗೂ ಆದರ್ಶವಾಗಲಿ.

ಇಂಡಿಯಂ ಲೋಹ


   ಇಂಡಿಯಂ ಲೋಹದ ಕಥೆ

ಲೇಖನ: ಕೃಷ್ಣ ಸುರೇಶ

 

    ಇಂಡಿಯಂ ಬೆಳ್ಳಿಯಂತೆಯೆ ಬಿಳಿಯಾದ ಹೊಳಪಾದ ಲೋಹವಾಗಿದ್ದು ಮೆದುವಾದ ಲೋಹವಾಗಿದೆ. ಇದು ಎಷ್ಟು ಮೆದುವೆಂದರೆ ಚಾಕಲೇಟಿನಂತೆ ಜಗಿಯುವಷ್ಟು ಮೆದುವಾಗಿರುತ್ತದೆ. ಆದರೆ ಒಂದು ಎಚ್ಚರಿಕೆ!! ಇದು   ಬಾಯಿಯ ಮೂಲಕ ಇಲ್ಲವೇ ಇದರ ಆವಿಯನ್ನು ಉಸಿರಾಡುವುದರ ಮೂಲಕ ಇದು ನಮ್ಮ ದೇಹವನ್ನು ಹೊಕ್ಕರೆ ಇದು ಪಾದರಸದಷ್ಟೇ ವಿಷಕಾರಿಯಾದ ಧಾತುವಾಗಿದೆ. ಪರಮಾಣು ಸಂಖ್ಯೆ ೪೯ ಇರುವ ಮತ್ತು ಸಂಕೇತ In ಹೊಂದಿರುವ ಇಂಡಿಯಂನ್ನು ಆಧುನಿಕ ಆವರ್ತಕ ಕೋಷ್ಟಕದ p ಬ್ಲಾಕಿನಲ್ಲಿ ೧೩ನೇ ಗುಂಪು ಮತ್ತು ೫ನೇ ಆವರ್ತದಲ್ಲಿರಿಸಲಾಗಿದೆ.  ಭೂಮಿಯಲ್ಲಿ ಇಂಡಿಯಂನ ಲಭ್ಯತೆಯಲ್ಲಿ ೬೮ನೇ ಸ್ಥಾನದಲ್ಲಿದ್ದು  ಅತಿ ವಿರಳ ಅಂದರೆ ೦.೧ppm ಎಂದು ಅಂದಾಜುಮಾಡಲಾಗಿದೆ. ಮುಖ್ಯವಾಗಿ ಸತುವಿನ ಉದ್ಧರಣೆಯಲ್ಲಿ ಉಪ ಉತ್ಪನ್ನವಾಗಿ ಇದನ್ನು ಪಡೆಯಲಾಗುತ್ತಿದೆ. ಇಂಡಿಯಂ ಬೆಳ್ಳಿಯಂತೆಯೆ ಹೊಳಪನ್ನು ಹೊಂದಿರುವ ಬೆಳ್ಳನೆಯ ಲೋಹವಾಗಿದ್ದು ತುಂಬಾ ಮೆದುವಾಗಿರುವುದರಿಂದ ಇದರ ಸರಳನ್ನು ನಾವು ಬಾಗಿಸಬಹುದು. ಹಾಗೆ ಮಾಡಿದಾಗ ಬಾಗುತ್ತಿರುವ ಇಂಡಿಯಂ ಲೋಕಹದ ಸರಳು ಹಸಿ ಕಡ್ಡಿಯನ್ನು ಮುರಿದಂತೆ ಚಟಚಟ ಎಂದು ಸದ್ದು ಮಾಡುತ್ತದೆ.

ಇಂಡಿಯಂ ಅನ್ನು ೧೮೮೩ರಲ್ಲಿ ಫರ್ಡಿನೆಂಡ್‌ ರೀಚ್‌ ಮತ್ತು ಥಿಯೋಡರ್‌ ರಿಕ್ಟರ್‌  ಎಂಬ ಇಬ್ಬರು ಪತ್ತೆ ಮಾಡಿದರು. ಸತುವಿನ ಅದಿರಿನಿಂದ ಸತುವಿನೊಂದಿಗೆ ಕಂಡುಬರುವ ಮತ್ತೊಂದು ಧಾತುವನ್ನು ಉರಿಸಿದಾಗ ಬರುವ ಜ್ವಾಲೆಯ ರೋಹಿತವನ್ನು ಫರ್ಡಿನೆಂಡ್‌ ರೀಚ್‌ ಅಧ್ಯಯನ ಮಾಡುತ್ತಿದ್ದನು. ಫರ್ಡಿನೆಂಡ್‌ ರೀಚ್‌ ವರ್ಣಾಂಧನಾಗಿದ್ದು ಬಣ್ಣಗಳನ್ನು ಗುರುತಿಸಲಾರದವನಾಗಿರುತ್ತಾನೆ. ಆದ್ದರಿಂದ  


ರೋಹಿತದಲ್ಲಿ ಕಂಡು ಬರುತ್ತಿದ್ದ ಒಂದು ಹೊಸ ರೇಖೆಯ ಬಣ್ಣವನ್ನು ಗುರುತಿಸಲು ಥಿಯೋಡರ್‌ ರಿಕ್ಟರನ ಸಹಾಯವನ್ನು ಪಡೆದನು. ರೋಹಿತದಲ್ಲಿ ಕಂಡುಬಂದ ರೇಖೆಯು ನೇರಳೆ ಮಿಶ್ರಿತ ನೀಲಿ ಬಣ್ಣದ್ದಾಗಿದೆಯೆಂದು ರಿಕ್ಟರ್‌ ಗುರುತಿಸಿದ. ಹೀಗಾಗಿ ಇದು ಸತುವಿಗೆ ಸಂಬಂಧಿಸಿದ ವಿಶಿಷ್ಟ ರೇಖೆಯಾಗಿಲ್ಲದಿದ್ದರಿಂದ ಒಂದು ಹೊಸ ಧಾತುವಿನ ಪತ್ತೆಯಾಗಿದೆಯೆಂದು ಅವರಿಬ್ಬರೂ ತೀರ್ಮಾನಕ್ಕೆ ಬಂದರು. ಭಾರತಕ್ಕೆ ಸೀಮಿತವಾಗಿ ಭಾರತದಲ್ಲಿ ಯತೇಚ್ಛವಾಗಿ ಬೆಳೆಯುವ ಇಂಡಿಗೋ ಅಥವಾ ನೀಲಿಯ(Indigofera tinctoria) ಒಣ ಎಲೆಯ ಪುಡಿಯನ್ನು ನೀರಿಗೆ ಬರೆಸಿದರೆ ಅದು ನೀಲಿ ಮಿಶ್ರಿತ ನೇರಳೆ ಬಣ್ಣವನ್ನು ಕೊಡುತ್ತದೆ. ಹಾಗಾಗಿ ಅದನ್ನು ಬಟ್ಟೆ ಮುಂತಾದವುಗಳಿಗೆ ವರ್ಣಕಾರಕವಾಗಿ ಬಳಸಲೆಂದೇ ಯುರೋಪಿಗೆ ರಫ್ತು ಮಾಡಲಾಗುತ್ತಿತ್ತು. ಇಲ್ಲಿ ೧೮೫೯-೬೦ರಲ್ಲಿ ಬ್ರಟಿಷರ ವಿರುದ್ಧ ಬಂಗಾಳದಲ್ಲಿ ನಡೆದ ಇಂಡಿಗೋ ಚಳುವಳಿಯನ್ನು ಸ್ಮರಿಸಬಹುದು. ಇಂತಹ ಇಂಡಿಗೋ ಬಣ್ಣವು ಅವರ ರೋಹಿತದಲ್ಲಿ ವಿಶೇಷವಾಗಿ ಕಂಡು ಬಂದದ್ದರಿಂದ  ಈ ರೋಹಿತದ ರೇಖೆಗೆ ಕಾರಣವಾದ ಹೊಸ ಧಾತುವಿಗೆ ಅವರು ಇಂಡಿಯಂ ಎಂದು ಹೆಸರಿಟ್ಟರು. ಹೀಗೆ ಇಂಡಿಯಾದ ಹೆಸರು ಧಾತುಗಳ ಪಟ್ಟಿಗೆ ಸೇರುವಂತಾಯಿತು

     ರೀಚ್‌ ಮತ್ತು ರಿಕ್ಟರ್‌ ಜೋಡಿಯು ಅಲ್ಪ ಪ್ರಮಾಣದ ಇಂಡಿಯಂನ್ನು ಸಲ್ಫರೈಟ್‌ ಅದಿರಿನಿಂದ ಸಂಸ್ಕರಿಸಿದರು.  ಮುಂದಿನ ದಿನಗಳಲ್ಲಿ ಈ ಧಾತುವನ್ನು ಕಂಡುಹಿಡಿದ ಕೀರ್ತಿ ಯಾರಿಗೆ ಸಲ್ಲಬೇಕೆಂಬ ವಿವಾದದ ಕಾರಣದಿಂದ ಈ ಜೋಡಿಯು ಬೇರೆ ಬೇರೆಯಾಗಿ ಹೋಯಿತು. ಇಂಡಿಯಮ್.‌ ಸತು, ತಾಮ್ರ, ಕಬ್ಬಿಣ, ಸೀಸ ಮುಂತಾದ ಅದಿರುಗಳಲ್ಲಿನ ಸಂಯುಕ್ತಗಳಲ್ಲಿ ಇಂಡಿಯಂ ಲೋಹದ ಸಂಯುಕ್ತಗಳು ಜೊತೆಗೂಡಿರುತ್ತವೆ. ೧೯೨೪ರ ಹೊತ್ತಿಗೆ ಹೆಚ್ಚು ಎಂದರೆ ಒಂದು ಗ್ರಾಂನಷ್ಟು ಇಂಡಿಯಂನ್ನು ಪಡೆಯಲು ಸಾಧ್ಯವಾಗಿದ್ದಿತ್ತು. ಆದರೆ ಇಂದು ಗಣಿಗಾರಿಕೆಯಿಂದ ಮತ್ತು ಪುನರ್ಬಳಕೆಯಿಂದ  ವಾರ್ಷಿಕ  ಸುಮಾರು  ಒಂದು ಟನ್ನಿಗೂ ಅಧಿಕ ಪ್ರಮಾಣದ ಇಂಡಿಯಂನ್ನು ಉತ್ಪಾದಿಸಿ ವಿಶ್ವವಾದ್ಯಂತ ಬಳಸಲಾಗುತ್ತಿದೆ.

      ಇದರ ಮೃದುತ್ವ ಮತ್ತು ಕಡಿಮೆ ತಾಪದಲ್ಲಿ ಕರಗುವ ಮತ್ತು ಆಕಾರ ಪಡೆಯುವ ಗುಣವು ಕ್ರಯೋಜನಿಕ್‌ ತಾಪಗಳಲ್ಲಿ ಬಳಸುವ ಪಂಪುಗಳು, ನಿರ್ವಾತಕಗಳು ಮುಂತಾದ ವಿಶೇಷ ಸಾಧನಗಳ ತಯಾರಿಕೆಯಲ್ಲಿ ಬಳಸಲು ಹಾಗು ಸೀಲೇಂಟ್‌ ಆಗಿ ಬಳಸಲು ಅತಿ ಯೋಗ್ಯವೆನಿಸಿದೆ. ಇದರ ತನ್ನಷ್ಟಕ್ಕೆ ತಾನೆ ಮತ್ತು ಇತರೆ ವಸ್ತುಗಳೊಂದಿಗೆ ಅಂಟಿಕೊಳ್ಳುವ ವಿಶೇಷ ಗುಣವು ಬೆಸುಗೆಯಲ್ಲಿ ಬಳಸಲು 

ಸಹಾಯಕವಾಗಿದೆ. ಇಂಡಿಯಂನ್ನು ಮಿಶ್ರಲೋಹಗಳ ವಿಟಮಿನ್‌ ಎಂತಲೂ ಕರೆಯಲಾಗುತ್ತದೆ. ಏಕೆಂದರೆ ಅತ್ಯಲ್ಪ ಪ್ರಮಾಣದ ಇಂಡಿಯಂನ್ನು ಚಿನ್ನ ಅಥವಾ ಪ್ಲಾಟಿನಂನ ಮಿಶ್ರಲೋಹಗಳಿಗೆ ಸೇರಿಸಿದಾಗ ಅಂತಹವುಗಳ ಗಡಸುತನ ಹೆಚ್ಚುತ್ತದೆ. ವಿಮಾನಗಳ ಕೆಲವು ನಿರ್ಣಾಯಕ ಬಿಡಿಭಾಗಗಳನ್ನು ನಿರ್ಮಿಸುವ ಮಿಶ್ರಲೋಹಗಳಲ್ಲಿಯೂ ಇದನ್ನು ಬಳಸಲಾಗುತ್ತದೆ. ಇಂಡಿಯಂನ ಇನ್ನೊಂದು ಮಹತ್ತರ ಬಳಕೆಯೆಂದರೆ ಈ ದಿನಗಳಲ್ಲಿ ವ್ಯಾಪಕವಾಗಿ ಬಳಸುತ್ತಿರುವ ಟಿವಿ, ಕಂಪ್ಯೂಟರ್‌ ಮತ್ತು ಮೊಬೈಲ್‌ ಫೊನುಗಳಲ್ಲಿ ಅತಿ ಮುಖ್ಯವಾದ ಭಾಗವಾದ ಪ್ರದರ್ಶಿಕೆ ಅಥವಾ ಡಿಸ್ಪ್ಲೇಗಳ ನಿರ್ಮಾಣದಲ್ಲಿ. ನಮಗೆಲ್ಲ ತಿಳಿದಂತೆ ಗಾಜು ವಿದ್ಯುತ್‌ ಅವಾಹಕ. ಇಂಡಿಯಂ ಟಿನ್‌ ಆಕ್ಸೈಡ್(ITO)  ಎಂಬ ಇಂಡಿಯಂ ಮತ್ತು ತವರಗಳ ಸಂಯುಕ್ತವು ವಿದ್ಯುತ್‌ ವಾಹಕವಾಗಿರುವುದರ ಜೊತೆಗೆ ಗಾಜಿನಂತೆಯೆ ಪಾರದರ್ಶಕವಾಗಿರುತ್ತದೆ.  ಪ್ರದರ್ಶಿಕೆಗಳ ಪರದೆಯ ಗಾಜು ಅಥವಾ ಪ್ಲಾಸ್ಟಿಕ್‌ ಹಾಳೆಗೆ ತೆಳುವಾದ ಇಂಡಿಯಂ ಲೇಪನ ಮಾಡಿದರೆ ಅದು ಪ್ರದರ್ಶಿಕೆಯ ಪರದೆಯಲ್ಲಿನ ಅತಿ ಸೂಕ್ಷ್ಮ ಪಿಕ್ಸೆಲುಗಳಿಗೆ ಅಗತ್ಯವಾದ ವಿದ್ಯುತ್‌ ವಾಹಕತೆ ಹೊಂದಿರುವ ಪಾರಕ ಮೇಲು ಪರದೆಯಾಗುತ್ತದೆ. ಇಂಡಿಯಂ ಟಿನ್‌ ಆಕ್ಸೈಡ್ ಸಂಯುಕ್ತವನ್ನು ಟಿವಿ, ಮೊಬೈಲ್‌, ಕಂಪ್ಯೂಟರುಗಳ ಎಲ್‌ ಸಿ ಡಿ ಪ್ರದರ್ಶಿಕೆಗಳು ಅಲ್ಲದೆಯೆ ವಿಮಾನಗಳ ವಿಂಡ್‌ ಶೀಲ್ಡುಗಳಲ್ಲಿ ಬಳಸಲಾಗುತ್ತದೆ. ಇಂತಹ ವಿಂಡ್‌ ಶೀಲ್ಡಗಳು ಮುಂದಿನ ನೋಟವನ್ನು ಸ್ಪಷ್ಟವಾಗಿ ತೋರುವುದರ ಜೊತೆಗೆ ಓಡೋ ಮೀಟರ್‌ ಆಲ್ಟಿಮೀಟರ್‌, ದಿಕ್ಸೂಚಿ ಮುಂತಾದವುಗಳನ್ನು ವಿಂಡ್‌ ಶೀಲ್ಡ್‌ ಮೇಲೆಯೆ ಮೂಡಿಸುವ ಸಾಮರ್ಥ್ಯ ಹೊಂದಿರುತ್ತವೆ. ಇಂತಹವು ಬಹಳ ಮುಖ್ಯವಾಗಿ ರಾಡಾರ್‌ ವ್ಯವಸ್ಥೆಯನ್ನು ವಂಚಿಸುವ ಕೆಲಸ ಮಾಡಿ ಯುದ್ಧ ವಿಮಾನದ ಸ್ಟೆಲ್ತ್‌ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದೇ ತಂತ್ರದಿಂದ ಮುಂದಿನ ದಿನಗಳಲ್ಲಿ ಕಾರು ಮುಂತಾದ ವಾಹನಗಳಲ್ಲಿ ಡಾಶ್‌ ಬೋರ್ಡ್‌ ವಿಂಡ್‌ ಶೀಲ್ಡಿನಲ್ಲಿಯೇ ಅಳವಡಿಸವ ವ್ಯವಸ್ಥೆ ಬರುವುದು ನಿಶ್ಚಿತವಾಗಿದೆ. ಇಂಡಿಯಂ ಗ್ಯಾಲಿಯಂ ಆರ್ಸನೈಡ್‌, ತಾಮ್ರದ ಇಂಡಿಯಂ ಗ್ಯಾಲಿಯಂ ಸೆಲೆನೈಡ್ಗಳನ್ನುದ್ಯುತಿ ವಿದ್ಯುತ್‌ ಫಲಕಗಳಲ್ಲಿ ಬಳಸಲಾಗುತ್ತದೆ.

 ಇಂಡಿಯಂನ ಎರಡು ಪ್ರಮುಖ ಸಮಸ್ಥಾನಿಗಳೆಂದರೆ (115In) ಮತ್ತು 113In . ಇವುಗಳಲ್ಲಿ ಮೊದಲನೆಯದು ಅಲ್ಪ ಪ್ರಮಾಣದ ವಿಕಿರಣ ಪಟುತ್ವವನ್ನು ಹೊಂದಿದ್ದು, ಅದರ ಅರ್ಧಾಯುಷ್ಯ 4.41×1014  ವರ್ಷಗಳು. 115In ನ ಲಭ್ಯತೆಯು ಭೂಮಿಯಲ್ಲಿ ದೊರೆಯುವ ಇಂಡಿಯಂನ ಸುಮಾರು ೯೬% ರಷ್ಟಿದ್ದರೆ,  113In ನ ಪ್ರಮಾಣ ಕೇವಲ ೪% . ಇವುಗಳ ಜೊತೆಗೆ ಹಲವಾರು ಅತಿ ಕಡಿಮೆ ಅರ್ಧಾಯಷ್ಯ ಹೊಂದಿರುವ ಸಮಸ್ಥಾನಿಗಳಿವೆ. ಅವುಗಳಲ್ಲಿ ಕೃತಕವಾಗಿ ತಯಾರಿಸಿದ 111In ಅತಿ ಹೆಚ್ಚು ಅಂದರೆ ೨.೮ ದಿನಗಳಷ್ಟು ಅರ್ಧಾಯುಷ್ಯವನ್ನು ಹೊಂದಿದೆ.  ಈ ಸಮಸ್ಥಾನಿಯನ್ನು ವೈದ್ಯಕೀಯದಲ್ಲಿ ಮೂಳೆ ಮಜ್ಜೆಯ ಮ್ಯಾಪಿಂಗ್‌, ರಕ್ತದಲ್ಲಿನ ಕಣಗಳ ಸ್ಥಿತಿಗತಿ ಅಧ್ಯಯನ, ಪ್ರಾಸ್ಟೇಟ್‌ ಕಾನ್ಸರ್ ನ ನೈಧಾನಿಕ ಪ್ರಕ್ರಿಯೆ ಮತ್ತು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬಹುತೇಕ ಇಂಡಿಯಂ ಸಂಯುಕ್ತಗಳನ್ನು ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ ಬಳಸಲಾಗುತ್ತದೆ.

 

ಜೀವ ಸಂಕುಲ-ಭವಿಷ್ಯದ ಸಂಪತ್ತು -ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

 ಜೀವ ಸಂಕುಲ-ಭವಿಷ್ಯದ ಸಂಪತ್ತು -ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ 

ಲೇಖನ: 

ಬಸವರಾಜ ಎಮ್ ಯರಗುಪ್ಪಿ 

ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು 

ಸಾ.ಪೊ ರಾಮಗೇರಿ, ತಾಲೂಕು ಲಕ್ಷ್ಮೇಶ್ವರ, 

ಜಿಲ್ಲಾ ಗದಗ, ದೂರವಾಣಿ 9742193758. ಮಿಂಚಂಚೆ :basu.ygp@gmail.com


ಮಾರ್ಚ್ 03-"ವಿಶ್ವ ವನ್ಯಜೀವಿಗಳ ದಿನ" ತನ್ನಿಮಿತ್ತ ವಿಶೇಷ ಲೇಖನ. 

"ವನ್ಯಜೀವಿ ಎಂದರೆ ಮನುಷ್ಯನು ನಿರ್ಮಿಸಲು ಸಾಧ್ಯವಿಲ್ಲ. ಅದು ಒಮ್ಮೆ ಹೋದರೆ, ಅದು ಶಾಶ್ವತವಾಗಿ ಹೋಗುತ್ತದೆ" ಎಂದು ಜಾಯ್ ಆಡಮ್ಸನ್ ಅವರು ಪ್ರಸ್ತುತ ಮತ್ತು ಭವಿಷ್ಯದ ಜೀವ ಸಂಕುಲಗಳ ಕುರಿತು ಸಾರ್ವತ್ರಿಕವಾಗಿ ಒಪ್ಪಿಕೊಳ್ಳುವಂತಹ ಮಾತಾಗಿದೆ ಎಂದು ಹೇಳಿದ್ದಾರೆ.ವನ್ಯಜೀವಿಗಳು ಪರಿಸರ ಸಮತೋಲನ ಕಾಯ್ದುಕೊಳ್ಳಲು ನಾವು ವನ್ಯಜೀವಿಗಳನ್ನು ರಕ್ಷಿಸಬೇಕು ಏಕೆಂದರೆ ನೇರವಾಗಿ ಅಥವಾ ಪರೋಕ್ಷವಾಗಿ ನಮ್ಮ ಜೀವನವು ಅವುಗಳ ಮೇಲೆ ಅವಲಂಬಿತವಾಗಿದೆ ಕಳೆದ ಎರಡು ದಶಕಗಳಿಂದ, ಪ್ರಪಂಚದ ವಿವಿಧ ಭಾಗಗಳಲ್ಲಿ ವನ್ಯಜೀವಿ ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲದ ಕುರಿತಾಗಿ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಪ್ರತಿವರ್ಷ ಮಾರ್ಚ್ 03 ರಂದು "ವಿಶ್ವ ವನ್ಯಜೀವಿಗಳ"ದಿನವನ್ನು ಆಚರಿಸಲಾಗುತ್ತದೆ. ವನ್ಯಜೀವಿಗಳು ಹಾಗೂ ವನ್ಯಜೀವಿ ವೈವಿದ್ಯತೆಯ ಪ್ರಾಮುಖ್ಯತೆಯ ತಿಳುವಳಿಕೆ ಹೆಚ್ಚಿಸಲು ಈ ದಿನವನ್ನು ಮೀಸಲಿಡಲಾಗಿದೆ. ನಮ್ಮ ಗ್ರಹದಲ್ಲಿನ ಜೀವಸಂಕುಲದ ವಿಶೇಷತೆ, ಸೌಂದರ್ಯವನ್ನು ಅರ್ಥಮಾಡಿಕೊಳ್ಳುವುದೇ ಈ ದಿನದ ಮತ್ತೊಂದು ವಿಶೇಷ ಎಂದೂ ಹೇಳಬಹುದಾಗಿದೆ.

ವನ್ಯಜೀವಿಗಳು ಎಂದರೆ ಸಾಕಲು-ಆಗದ ಸಸ್ಯಗಳು, ಪ್ರಾಣಿಗಳು ಮತ್ತು ಇತರ ಜೀವಿಗಳನ್ನೊಳಗೊಂಡಿದೆ.ಕಾಡುಪ್ರಾಣಿಗಳನ್ನು ತಮ್ಮ ಉಪಯೋಗಕ್ಕಾಗಿ ಸಾಕುವ, ಬೆಳೆಸುವ ಅಥವಾ ಪಳಗಿಸುವ ಭೂಮಿಯ ಎಲ್ಲಾ ಭಾಗಗಳಲ್ಲಿ ನಡೆದಿದೆ. 

ಹಿನ್ನಲೆ :

ಡಿಸೆಂಬರ್ 2003 ರಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತನ್ನ 68 ನೇ ಅಧಿವೇಶನದಲ್ಲಿ ಮಾರ್ಚ್ 03 ಅನ್ನು ವಿಶ್ವ ವನ್ಯಜೀವಿ ದಿನವೆಂದು ಘೋಷಿಸಿತು. ಬದಲಾಗುತ್ತಿರುವ ಪ್ರಕೃತಿಯ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಮಾನವನ ಚಟುವಟಿಕೆಗಳಿಂದ ವೃಕ್ಷಗಳು, ಪ್ರಾಣಿಗಳು ಹಾಗೂ ಇತರೆ ಜೀವಿಗಳು ಸಮಸ್ಯೆ ಎದುರಿಸುತ್ತಿರುವ ವಿಚಾರ ತಿಳಿಹೇಳಲು ಕೂಡ ಈ ದಿನವನ್ನು ಗಮನಿಸಿಕೊಂಡು ಆಚರಿಸಲಾಗುತ್ತದೆ.

ವನ್ಯಜೀವಿಗಳ ಪ್ರಾಮುಖ್ಯತೆ:

ವನ್ಯಜೀವಿಗಳು ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.ವನ್ಯ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ. 

#ವನ್ಯಜೀವಿಗಳು ಎದುರಿಸುತ್ತಿರುವ ಸಮಸ್ಯೆಗಳು:

*ಗಣಿಗಾರಿಕೆ, ಕೃಷಿ ಮತ್ತು ಕಟ್ಟಡ ನಿರ್ಮಾಣದಂತಹ ಅನೇಕ ಮಾನವ ಚಟುವಟಿಕೆಗಳು ನಿರಂತರವಾಗಿ ವನ್ಯಜೀವಿಗಳನ್ನು ಅಪಾಯಕ್ಕೆ ತಳ್ಳುತ್ತಿವೆ.

*ನಾವು ಹಲವಾರು ಮರಗಳನ್ನು ಕಡಿಯುತ್ತಿದ್ದೇವೆ ಇದರಿಂದಾಗಿ ಹೆಚ್ಚು ನೆಲವನ್ನು ತೆರವುಗೊಳಿಸಿ, ಹಲವಾರು ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ.

*ನಾವು ಲಕ್ಷಾಂತರ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ನಾಶಪಡಿಸುತ್ತಿದ್ದೇವೆ ಮತ್ತು ಪ್ರಪಂಚದ ಜೀವವೈವಿಧ್ಯವನ್ನು ಅಪಾಯಕ್ಕೆ ತಳ್ಳುತ್ತಿದ್ದೇವೆ. 

*ಕಾನೂನುಬಾಹಿರ ವನ್ಯಜೀವಿ ಬೇಟೆ ಮತ್ತು ಮಾರಾಟ ಮಾಡುವುದು. 

*ಅತಿಯಾದ ಮೀನುಗಾರಿಕೆ ಮತ್ತು ಮಾನವರಿಂದ ಸಾಗರ ಮಾಲಿನ್ಯ. 

*ಬೇಟೆ ಆಡುವ ಸಂದರ್ಭದಲ್ಲಿ ಗುಂಡು ಹಾರಿಸುವುದು, ಕೊಲ್ಲುವುದು ಮತ್ತು ಮಾನವ ಬಳಕೆಗಾಗಿ ಬಲೆಗೆ ಬೀಳಿಸುವುದು ಅಥವಾ ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸುವುದು. 

*ಮಾನವರು, ಕಾಡುಪ್ರಾಣಿಗಳ ಬೇಟೆ ಜತೆಗೆ ಅವುಗಳ ಚರ್ಮ, ಉಗುರು, ಕೊಂಬು, ದಂತಗಳ ಮಾರಾಟ ಅಕ್ರಮವಾಗಿ ನಡೆಯುತ್ತಿದೆ. ಇದರಿಂದ ಹಲವು ವನ್ಯಜೀವಿಗಳ ಸಂತತಿ ಅಳಿವಿನಂಚಿನಲ್ಲಿವೆ.

*ಅರಣ್ಯ ಪ್ರದೇಶದ ಒತ್ತುವರಿ, ಮರಗಳ ಮಾರಣಹೋಮದಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಇದರಿಂದ ಭವಿಷ್ಯದಲ್ಲಿ ಪ್ರಕೃತಿಯಲ್ಲಿ ಅಸಮತೋಲನ ಕಂಡುಬರಲಿದೆ.

*ಆವಾಸಸ್ಥಾನ ನಾಶ:ಕಾಡ್ಗಿಚ್ಚು, ಮನುಷ್ಯನ ದುರಾಸೆಗೆ ಕಾಡುಗಳ ನಾಶ, ಕಾಡನ್ನೆಲ್ಲ ನಾಡು ಮಾಡುತ್ತಿರುವುದು ಮುಂತಾದ ಕಾರಣಗಳಿಗಾಗಿ ಕಾಡುಪ್ರಾಣಿಗಳ ಆವಾಸಸ್ಥಾನ ನಾಶವಾಗುತ್ತಿದೆ. ಬಹುತೇಕ ವನ್ಯಪ್ರಾಣಿಗಳಿಗೆ ಜೀವಿಸಲು ಕಾಡೇ ಇಲ್ಲದ ಸ್ಥಿತಿಗೆ ತಂದುಬಿಟ್ಟಿದ್ದೇವೆ. 

#ವಿಶ್ವದಲ್ಲಿ ವನ್ಯಜೀವಿ ಸಂರಕ್ಷಣೆಗೆ ಕೈಗೊಂಡ ಕ್ರಮಗಳು:


*ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಉಳಿಸುವುದು.

*ಪ್ರಾಣಿಗಳನ್ನು ತಮ್ಮ ಜೀವನದೊಂದಿಗೆ ಸರಿಯಾಗಿ ನೋಡಿಕೊಳ್ಳುವುದು. 

*ಪ್ರಕೃತಿ ಮತ್ತು ಇತರ ವನ್ಯಜೀವಿ ಪ್ರಭೇದಗಳ ಮಹತ್ವವನ್ನು ಗುರುತಿಸಲು ವನ್ಯಜೀವಿಗಳ ಸಂರಕ್ಷಣೆ ಅಗತ್ಯ. 

*ನಾವು ಹೆಚ್ಚು ಸಮರ್ಥನೀಯ ಜೀವನವನ್ನು ನಡೆಸಬೇಕು ಮತ್ತು ಅಳಿವಿನಂಚಿನಲ್ಲಿರುವ ಎಲ್ಲಾ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ನಾವು ನಮ್ಮ ಸರ್ಕಾರಗಳನ್ನು ಒತ್ತಾಯಿಸಬೇಕಾಗಿದೆ. ನಮ್ಮ ಗ್ರಹವನ್ನು ಮತ್ತು ನಮ್ಮನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ.


#ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ:

ವನ್ಯಜೀವಿಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಭಾರತೀಯ ಸಂಸತ್ತು 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಜಾರಿಗೊಳಿಸಿತು. ಇದು ದೇಶದಲ್ಲಿ ವನ್ಯಜೀವಿಗಳಿಗೆ ರಕ್ಷಣೆಯನ್ನು ಒದಗಿಸುವ ಪ್ರಮುಖ ಶಾಸನವಾಗಿದೆ. ಈ ಕಾಯಿದೆಯು ಪರಿಸರ ಮತ್ತು ಪರಿಸರ ಸುರಕ್ಷತೆಯನ್ನು ಖಾತ್ರಿಪಡಿಸುವ ಸಲುವಾಗಿ ದೇಶದ ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯ ಪ್ರಭೇದಗಳ ರಕ್ಷಣೆಯನ್ನು ಒದಗಿಸುತ್ತದೆ. ಇತರ ವಿಷಯಗಳ ಜೊತೆಗೆ, ಕಾಯಿದೆಯು ಅನೇಕ ಪ್ರಾಣಿ ಜಾತಿಗಳನ್ನು ಬೇಟೆಯಾಡಲು ನಿರ್ಬಂಧಗಳನ್ನು ಹಾಕುತ್ತದೆ. 

#ಈ ಕಾಯಿದೆಯಲ್ಲಿರುವ ಅಂಶಗಳು:

*ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಬೇಟೆಯಾಡುವುದನ್ನು ಕಾಯಿದೆಯು ನಿಷೇಧಿಸಿದೆ .

*ಕಾಯಿದೆಯ ನಿಬಂಧನೆಗಳ ಪ್ರಕಾರ ಪರಿಶಿಷ್ಟ ಪ್ರಾಣಿಗಳನ್ನು ವ್ಯಾಪಾರ ಮಾಡುವುದನ್ನು ನಿಷೇಧಿಸುತ್ತದೆ.

*ಈ ಕಾಯಿದೆಯು ಕೆಲವು ವನ್ಯಜೀವಿ ಪ್ರಭೇದಗಳ ಮಾರಾಟ, ವರ್ಗಾವಣೆ ಮತ್ತು ಸ್ವಾಧೀನಕ್ಕೆ ಪರವಾನಗಿಗಳನ್ನು ಒದಗಿಸುತ್ತದೆ.

*ಇದು ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಇತ್ಯಾದಿಗಳ ಸ್ಥಾಪನೆಗೆ ಅವಕಾಶ ಒದಗಿಸುತ್ತದೆ.

 

ಕರ್ನಾಟಕದಲ್ಲಿನ ವನ್ಯಜೀವಿ ಸ್ಥಳಗಳು:

*ಬಂಡೀಪುರ ರಾಷ್ಟ್ರೀಯ ಉದ್ಯಾನವನ

*ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

*ದಾಂಡೇಲಿ ವನ್ಯಜೀವಿ ಅಭಯಾರಣ್ಯ

*ಭದ್ರಾ ವನ್ಯಜೀವಿ ಅಭಯಾರಣ್ಯ

*ರಂಗನತಿಟ್ಟು ಪಕ್ಷಿಧಾಮ

ಒಟ್ಟಾರೆಯಾಗಿ ಈ ಭೂ ಗ್ರಹದಲ್ಲಿ ಮನುಷ್ಯ ಮತ್ತು ಕಾಡು ಪ್ರಾಣಿಗಳು ಒಟ್ಟಿಗೆ ವಿಕಸನಗೊಂಡಿವೆ.ಭೂಮಿಯ ಮೇಲಿನ ಎಲ್ಲಾ ಜೀವಿಗಳು ಒಂದೇ.ಎಲ್ಲಾ ಜೀವಿಗಳು ಬೇರ್ಪಡಿಸಲಾಗದಂತೆ ಪರಸ್ಪರ ಸಂಬಂಧ ಹೊಂದಿವೆ ಹಾಗಾಗಿ ಪರಿಸರ ವ್ಯವಸ್ಥೆಯಲ್ಲಿ ಆಹಾರ ಸರಪಳಿಯನ್ನು ರೂಪಿಸುತ್ತವೆ.ನಾವು ವನ್ಯಜೀವಿಗಳನ್ನು ರಕ್ಷಿಸಬೇಕು ಏಕೆಂದರೆ ನೇರವಾಗಿ ಅಥವಾ ಪರೋಕ್ಷವಾಗಿ ನಮ್ಮ ಜೀವನವು ಅವುಗಳ ಮೇಲೆ ಅವಲಂಬಿತವಾಗಿದೆ. 

ಹೀಗಾಗಿ ಅಳಿವಿನಂಚಿನಲ್ಲಿರುವ ಎಲ್ಲಾ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕಾಗಿದೆ. 

ಕೊನೆಯ ಮಾತು:

"ಪ್ರಕೃತಿ ಒಂದು ಸಂಪತ್ತು ಅದನ್ನು ಸಂತೋಷಕ್ಕಾಗಿ ಉಳಿಸಿಕೊಳ್ಳಲು ಪ್ರಯತ್ನಿಸೋಣ".

ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವುಗಳ ಸಂರಕ್ಷಣೆಗಾಗಿ ನಾವೆಲ್ಲರೂ ಕೈ ಜೋಡಿಸೋಣ.




ಮಾರ್ಚ್‌ ೨೦೨೬ರ ಲೇಖನಗಳು

 ಮಾರ್ಚ್‌ ೨೦೨೬ರ ಲೇಖನಗಳು



 


ಲೇಖಕರು :  ಬಿ.ಎನ್. ರೂಪ    

ಶಿಕ್ಷಕರು,

 KPS ಜೀವನ್‌ ಭೀಮ ನಗರ  

ಬೆಂಗಳೂರು ದಕ್ಷಿಣ ವಲಯ -4