ಹೆಚ್ಚುತ್ತಾ ಸಾಗಿದೆ ವ್ಯಾಘ್ರ ಸಂತತಿ;ಸಂರಕ್ಷಿಸಿ,ಕಾಳಜಿವಹಿಸಿ
ಬಿ ಆರ್ ಪಿ ಶಿರಹಟ್ಟಿ
ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ.
ಜಿಲ್ಲಾ ಗದಗ. ದೂರವಾಣಿ 9742193758
ಮಿಂಚಂಚೆ basu.ygp@gmail.com
"ಇಡೀ ಪ್ರಪಂಚದ ಅತ್ಯಂತ ಭವ್ಯವಾದ ಜೀವಿ, ಹುಲಿ" ಎಂದು ಜ್ಯಾಕ್ ಹನ್ನಾ ಹೇಳಿದ ಮಾತು ನಿಜಕ್ಕೂ ಅಕ್ಷರಶಃ ಸತ್ಯ.
ಹುಲಿಗಳ ವಾಸಸ್ಥಾನಗಳನ್ನು ರಕ್ಷಿಸಲು, ವಿಸ್ತರಿಸಲು ಹಾಗೂ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು.ರಾಷ್ಟ್ರವು ತನ್ನ ಪ್ರಾಣಿಗಳನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ನೋಡುವ ಮೂಲಕ ಅದರ ಹಿರಿಮೆ ಮತ್ತು ನೈತಿಕ ಪ್ರಗತಿಯನ್ನು ಅಳೆಯಲಿಕ್ಕೆ ಪ್ರತಿ ವರ್ಷ ವಿಶ್ವದಾದ್ಯಂತ ಜುಲೈ 29 ರಂದು "ವಿಶ್ವ ಹುಲಿ" ದಿನವನ್ನು ಆಚರಿಸಲಾಗುತ್ತದೆ.
ಉದ್ದೇಶ:
ಅಪಾಯದಂಚಿನಲ್ಲಿರುವ ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಹುಲಿ ಸಂರಕ್ಷಣೆಯನ್ನು ಉತ್ತೇಜಿಸುವುದು ಈ ಆಚರಣೆಯ ಹಿಂದಿನ ಪ್ರಮುಖ
ಉದ್ದೇಶವಾಗಿದೆ.
ಹುಲಿ ಇದು ಗಂಭೀರವಾದ ಮತ್ತು ಭವ್ಯವಾದ ಪ್ರಾಣಿ.ಹುಲಿಗಳು ತನ್ನ ಗಾಂಭೀರ್ಯದಿಂದ ನಡೆಯುವುದನ್ನು ನಾವು ನೇರವಾಗಿ ಅಥವಾ ದೃಶ್ಯ ಮಾಧ್ಯಮದಲ್ಲಿ ನೋಡುವುದೇ ಒಂದು ಸುಂದರ ಮನಮೋಹಕ ದೃಶ್ಯವಾಗಿರುತ್ತದೆ.ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಇದು ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಹುಲಿ 13 ಅಡಿ ಉದ್ದ 300 ಕೆಜಿವರೆಗೂ ತೂಗುತ್ತದೆ. ಸಿಂಹದಂತೆ ಇದು ಗುಂಪಿನಲ್ಲಿ ಇರುವ ಪ್ರಾಣಿಯಲ್ಲ. ಒಂಟಿಯಾಗಿ ಇರಲು ಬಯಸುವ ಬುದ್ಧಿವಂತ ಜೀವಿ.ಭಾರತದ ಮಟ್ಟಿಗೆ ಬಂಗಾಳದ ಹುಲಿಗಳಿಗೆ ಹೆಚ್ಚಿನ ಮಹತ್ವವಿದೆ. ಹಾಗೇ ನೋಡಿದರೆ ವಿಶ್ವದಲ್ಲಿ ಇರುವ ಶೇ. 70 ರಷ್ಟು ಹುಲಿಗಳು ಭಾರತದಲ್ಲೇ ಇವೆ.
ಜಾಗತಿಕ ಹುಲಿ ದಿನದ ಇತಿಹಾಸ:
ವಿಶ್ವದಲ್ಲಿ ಜುಲೈ 29 ಒಂದು ಐತಿಹಾಸಿಕ ದಿನ.ಏಕೆಂದರೆ ಈ ದಿನದಂದು ಹಲವಾರು ದೇಶಗಳು 2010 ರಲ್ಲಿ ರಷ್ಯಾದಲ್ಲಿ ನಡೆದ ಸೇಂಟ್ ಪೀಟರ್ಸ್ಬರ್ಗ್ ಟೈಗರ್ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. ಜಾಗತಿಕವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹುಲಿಗಳ ನೈಸರ್ಗಿಕ ಆವಾಸಸ್ಥಾನವನ್ನು ಕಾಪಾಡುವುದು ಈ ಒಪ್ಪಂದದ ಪ್ರಮುಖ ಅಂಶವಾಗಿದೆ.
ಹುಲಿಗಳ ಗಣತಿ:
ಭಾರತದ 6ನೇ ಅಖಿಲ ಭಾರತ ಹುಲಿ ಅಂದಾಜು (All India Tiger Estimation - AITE 2026) ಪ್ರಕ್ರಿಯೆಯು ಜನವರಿ 2026 ರಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದೆ. ದೇಶದ ಹುಲಿಗಳ ಸಂಖ್ಯೆ ಮತ್ತು ಅರಣ್ಯ ಪರಿಸರ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ಜಂಟಿಯಾಗಿ ಈ ಬೃಹತ್ ಸಮೀಕ್ಷೆಯನ್ನು ನಡೆಸುತ್ತಿವೆ. ಪ್ರಸ್ತುತ ಕ್ಷೇತ್ರ ಮಟ್ಟದ ದತ್ತಾಂಶ ಸಂಗ್ರಹಣೆ ನಡೆಯುತ್ತಿದ್ದು, ಇದರ ಅಂತಿಮ ವರದಿಯು 2027 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಹಿಂದಿನ ಹುಲಿ ಗಣತಿಯ ಅಂಕಿ-ಅಂಶಗಳು (2022)ಕಳೆದ 2022 ರ ಗಣತಿಯ ಪ್ರಕಾರ ಭಾರತದಲ್ಲಿ ಹುಲಿಗಳ ಸ್ಥಿತಿ ಹೀಗಿತ್ತು:ಒಟ್ಟು ಹುಲಿಗಳು: ಭಾರತದಲ್ಲಿ ಒಟ್ಟು 3,682 ಹುಲಿಗಳು ದಾಖಲಾಗಿದ್ದವು. ಇದು ಜಾಗತಿಕ ವನ್ಯಮೃಗ ಹುಲಿ ಜನಸಂಖ್ಯೆಯ ಸುಮಾರು 75% ಆಗಿದೆ.
ಅಗ್ರಸ್ಥಾನದಲ್ಲಿದ್ದ ರಾಜ್ಯಗಳು:
ಮಧ್ಯಪ್ರದೇಶ 785 ಹುಲಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 563 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
»ಹುಲಿಗಳ ಗಣತಿ ಹಿನ್ನೆಲೆ:
ಪ್ರಪಂಚದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಹುಲಿ ಗಣತಿ ನಡೆದಿದ್ದು, ಜಾರ್ಖಂಡ್ ನ ಪಲಾವ್ ಹುಲಿ ರಕ್ಷಿತಾರಣ್ಯದಲ್ಲಿ ಪ್ರಾಯೋಗಿಕ ಗಣತಿ ನಡೆದಿತ್ತು.1972ರಲ್ಲಿ ವನ್ಯಜೀವಿ ಕಾಯಿದೆ ಜಾರಿಗೆ ಬಂದ ನಂತರ 1972ರಿಂದ ಹುಲಿ
ಗಣತಿಯನ್ನು ಆರಂಭಿಸಲಾಯಿತು. ಪ್ರತಿ 4 ವರ್ಷಕ್ಕೊಮ್ಮೆ ಗಣತಿ ಕಾರ್ಯ ನಡೆಸಲಾಗುತ್ತಿದೆ.
ದೇಶದಲ್ಲಿ ಹೆಚ್ಚುತ್ತಿದೆ ಹುಲಿಗಳ ಸಂತತಿ:
ಹುಲಿ ಸಂತತಿ ಹೆಚ್ಚಿದ್ದು ಹೀಗೆ-
2006 ರಲ್ಲಿ 1441 ಹುಲಿಗಳು
2010 ರಲ್ಲಿ 1726 ಹುಲಿಗಳು
2014 ರಲ್ಲಿ 2226 ಹುಲಿಗಳು
2018 ರಲ್ಲಿ 2967 ಹುಲಿಗಳು
2022 ರಲ್ಲಿ 3167 ಹುಲಿಗಳು
2026 ರಲ್ಲಿ ನಿರೀಕ್ಷಿಸಲಾಗಿದೆ
ಏತನ್ಮಧ್ಯೆ 2012-2019 ರವರೆಗಿನ ಹುಲಿಗಳ ಸಾವಿನ ಸಂಖ್ಯೆ 750.ಅದೆ ರೀತಿ ಈ ಮೇಲಿನ ವರ್ಷಗಳಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಗಳ ಸಂಖ್ಯೆ 383 ಈ ಅಂಕಿ ಅಂಶಗಳು ವಿಷಾದನೀಯ ಸಂಗತಿಗಳಾಗಿವೆ.
ಹುಲಿಗಳು ಅಪಾಯದಂಚಿನಲ್ಲಿರುವುದು ಏಕೆ?
ಮರಗಳನ್ನು ಕಡಿಯುವುದರಿಂದ ಆವಾಸಸ್ಥಾನಗಳ ನಷ್ಟ, ಬೇಟೆ ಮತ್ತು ಹುಲಿಯ ದೇಹದ ಭಾಗಗಳ ಅಕ್ರಮ ವ್ಯಾಪಾರ - ಇವುಗಳು ಹುಲಿಗಳ ಸಂಖ್ಯೆಯ ಕುಸಿತದ ಹಿಂದಿನ ಕೆಲವು ಪ್ರಮುಖ ಅಂಶಗಳಾಗಿವೆ. ದುರದೃಷ್ಟವಶಾತ್, ಅಳಿವಿನ ಅಂಚಿನಲ್ಲಿರುವಯ ಪ್ರಾಣಿಗಳ ಪ್ರಭೇದಗಳಲ್ಲಿ ಹುಲಿಯೂ ಒಂದು.
ಕರ್ನಾಟಕದಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ ಅವುಗಳೆಂದರೆ
ಬಂಡೀಪುರ,ನಾಗರಹೊಳೆ,ಭದ್ರಾ,ದಾಂಡೇಲಿ-ಅಣಶಿ ಹಾಗೂ ಬಿಳಿಗಿರಿರಂಗನ ಬೆಟ್ಟದ (ಬಿ ಆರ್ ಟಿ) ಹುಲಿ ಸಂರಕ್ಷಿತ ಪ್ರದೇಶಗಳು. ಅದೇ ರೀತಿ ಭಾರತದಲ್ಲಿ 50 ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ.
ಇತ್ತೀಚೆಗೆ ಹುಲಿಗಳ ಸಂತತಿ ವೃದ್ಧಿಸುತ್ತಿದೆ ಹೆಚ್ಚಳಕ್ಕೆ ಕಾರಣಗಳಿವು?
*ಹುಲಿ ಮೀಸಲು ಪ್ರದೇಶವನ್ನು ಬೆಳವಣಿಗೆಯ ಎಂಜಿನ್ಗಳಾಗಿ ನಿರೂಪಿಸಲಾಗಿದೆ.
*ಹುಲಿಗಳ ವಾಸಸ್ಥಳ ವಿಸ್ತರಣೆ.
*ಹುಲಿ ಬೇಟೆಗಾರರ ನಿಯಂತ್ರಣ.
*ವಿಶೇಷ ರಕ್ಷಣಾ ಪಡೆ ನಿಯೋಜನೆ.
*ಹುಲಿಧಾಮಗಳಿಂದ ಜನರ ಶಿಫ್ಟ್.
*ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಾದೇಶಿಕ ಕಛೇರಿಗಳನ್ನು ಇತ್ತೀಚೆಗೆ ಬೆಂಗಳೂರು, ಗುವಾಹಟಿ ಮತ್ತು ನಾಗ್ಪುರದಲ್ಲಿ ಸ್ಥಾಪಿಸಲಾಗಿದೆ.
*ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿ ಸಂರಕ್ಷಣೆಗಾಗಿ ಹುಲಿ ರಾಜ್ಯಗಳಿಗೆ ಕೇಂದ್ರದ ಸಹಾಯ.
*1972ರ ವನ್ಯಜೀವಿ ಕಾಯ್ದೆ ಬಂದ ನಂತರ ಹುಲಿಗಳನ್ನು ಉಳಿಸುವ ಸಲುವಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್
ಎಂಬ ಯೋಜನೆ ಜಾರಿಗೆ ಬಂತು, ಈ ಯೋಜನೆ ಹುಲಿ ಸಂರಕ್ಷಣೆಗೆ ಬಲವನ್ನು ನೀಡಿತು.
ಒಟ್ಟಾರೆಯಾಗಿ ಹುಲಿಯು ಅಗ್ರ ಪರಭಕ್ಷಕ ಮತ್ತು ಆಹಾರ ಸರಪಳಿಯ ತುದಿಯಲ್ಲಿರುತ್ತದೆ. ಕಾಡಿನ ಸಸ್ತನಿ ಪ್ರಾಣಿಗಳ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಹುಲಿಗಳು ಕೊಡುಗೆ ನೀಡುತ್ತವೆ.ಏಕೆಂದರೆ ಬೇಟೆಯಾಡುವ ಸಸ್ಯಹಾರಿಗಳ ಸಮತೋಲನ ಮತ್ತು ಅವು ಆಹಾರ ನೀಡುವ ಸಸ್ಯವರ್ಗವನ್ನು ಕಾಪಾಡಿಕೊಳ್ಳುತ್ತವೆ.ಹುಲಿ ಸಂರಕ್ಷಣೆಯಲ್ಲಿ ಆಸಕ್ತಿ ತೋರುವ ರಾಷ್ಟ್ರಗಳಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲು ಭಾರತ ಸಿದ್ಧವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಕಾರಣ ಭಾರತದಲ್ಲಿ ಹುಲಿಗಳ ರಕ್ಷಣೆಗೆ ಹಾಕಿಕೊಂಡ ಸಂರಕ್ಷಣೆಯ ಮಾರ್ಗೋಪಾಯ ಗಳು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ.
ಕೊನೆಯ ಮಾತು:
"ನೀವು ಒಮ್ಮೆ ನೋಡುವ ಮೊದಲು ಹುಲಿ ನಿಮ್ಮನ್ನು ನೂರು ಬಾರಿ ನೋಡುತ್ತದೆ" ಎಂದು ಜಾನ್ ವೈಲಂಟ್ ಹೇಳಿಕೆಯಂತೆ ಹುಲಿಗಳನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಅದು ನಮ್ಮನ್ನು ನೂರು ಬಾರಿ ನೋಡಬೇಕು ಎನ್ನುವುದು ನನ್ನ ಆಶಯ.
ವಂದನೆಗಳೊಂದಿಗೆ...
ಅಂಕಿಅಂಶ ಆಧಾರ:ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆ.
No comments:
Post a Comment