ಸೊಳ್ಳೆಗಳ ವಿರುದ್ಧದ ಯುದ್ಧಕ್ಕಾಗಿ ಗೂಗಲ್ ಸೃಷ್ಟಿಸಿದೆ ಸೊಳ್ಳೆಸೈನ್ಯ !!!
ಲೇಖಕರು - ಬಿ.ಜಿ.ರಾಮಚಂದ್ರ ಭಟ್
(ಕೋಟ್ಯಂತರ ಸೊಳ್ಳೆಗಳನ್ನು ಸಾಕಿ ಮತ್ತೆ ಬಿಡುತ್ತಿರುವ ಟೆಕ್ ದೈತ್ಯದ ವಿಚಿತ್ರ ಪ್ರಯೋಗ)
"ಸೊಳ್ಳೆ ಕಾಟದಿಂದ ರೋಸಿ ಹೋಗದ ಜನರಿದ್ದಾರೆಯೇ? ಐಸ್‌ಲ್ಯಾಂಡ್ ಅಥವಾ ಅಂಟಾರ್ಟಿಕಾದಂತಹ ಪ್ರದೇಶಗಳಲ್ಲಿ ವಿರಳ ಜನವಸತಿ ಪ್ರದೇಶಗಳಲ್ಲಿ ಸೊಳ್ಳೆಗಳಿಲ್ಲ. ಅಲ್ಲಿಗೆ ಹೋಗಿ ಬದುಕುವುದು ಹೇಗೆ? ಸೊಳ್ಳೆಗಳಿಗೆ ಏನಾದರೂ ಪರಿಹಾರ ಕಂಡುಹಿಡಿಯಿರಿ" ಎಂದು ಯಾರಾದರೂ ವಿಜ್ಞಾನಿಗಳಿಗೆ ಸವಾಲು ಹಾಕಿದರೆ, ಸಾಮಾನ್ಯವಾಗಿ ಅವರು ಸೊಳ್ಳೆನಾಶಕ, ಔಷಧಿ ಅಥವಾ ಲಸಿಕೆಯ ಬಗ್ಗೆ ಯೋಚಿಸುತ್ತಾರೆ. ಅಲ್ಲವೇ? ಅವನ್ನೇ ಉಪಯೋಗಿಸಿಕೊಂಡು ಇದುವರೆಗೂ ಜೀವ ಹಿಡಿದುಕೊಂಡಿದ್ದೇವೆ ಅಂತೀರಾ? ಅದೂ ಸತ್ಯವೇ !! ಆದರೆ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಗೂಗಲ್‌ನ ಸಹೋದರ ಸಂಸ್ಥೆ ವೆರಿಲಿ (Verily) ಬೇರೆಯದೇ ದಾರಿ ಹಿಡಿದಿದೆ. ಅವರ ಪರಿಹಾರ ಏನು ಗೊತ್ತೇ?
"ಇನ್ನಷ್ಟು ಸೊಳ್ಳೆಗಳನ್ನು ಉತ್ಪಾದಿಸಿ!"
ಇನ್ನೂ ಈ ಕಣ್ಣಲ್ಲೀ ಏನೇನು ನೋಡಬೇಕೋ ? ಕಿವಿಯಲ್ಲಿ ಏನೇನು ಕೇಳಬೇಕೋ ಎಂದು ಕೊಳ್ಳಬೇಡಿ. ನಿಮಗೆ ತಮಾಷೆ ಎನಿಸಿತೇ? ಇದೇನು ಗೂಗಲ್ ನವರಿಗೆ ಹುಚ್ಚೇ ? ಬೆಪ್ಪೇ ? ಮೊದಲಿಗೆ ಕೇಳಿದಾಗ ಇದು ಹಾಸ್ಯಾಸ್ಪದ ಮಾತಿನಂತೆ ತೋರುತ್ತದೆ. ಮನೆಯಲ್ಲಿ ಇಲಿಗಳ ಕಾಟವಿದ್ದರೆ ಇನ್ನಷ್ಟು ಇಲಿಗಳನ್ನು ಬಿಡುವಂತೆ, ಕಳೆಗಿಡಗಳ ಸಮಸ್ಯೆಗೆ ಮತ್ತಷ್ಟು ಕಳೆಗಿಡ ಬಿತ್ತುವಂತೆ ಹೇಳಿದರೆ ಹೇಗೆ? ಆದರೆ ವಿಜ್ಞಾನದ ಲೋಕದಲ್ಲಿ ಕೆಲವೊಮ್ಮೆ ವಿಚಿತ್ರವಾಗಿ ಕಾಣುವ ಯೋಚನೆಗಳೇ ಅತ್ಯಂತ ಪರಿಣಾಮಕಾರಿ ಪರಿಹಾರಗಳಾಗಿ ಪರಿಣಮಿಸುತ್ತವೆ!!. ಹೊಸದನ್ನು ಸಂಶೋಧಿಸಬೇಕೆಂದರೆ, ನಿಮಗೆ out of box thinking ದೃಷ್ಟಿಕೋನವಿರಬೇಕು!!!
ಭೂಮಿಯ ಅತಿ ಅಪಾಯಕಾರಿ ಪ್ರಾಣಿ ಯಾವುದು ಎಂದು ನಿಮ್ಮನ್ನು ಕೇಳಿದರೆ ಬಹುಶಃ ನಿಮ್ಮ ಉತ್ತರ ಸಿಂಹ, ಹುಲಿ, ಚಿರತೆ, ಮೊಸಳೆ, ಹಾವು... ಇರಬಹುದಲ್ವಾ? ಇವುಗಳನ್ನು ನಾವು ಅಪಾಯಕಾರಿ ಪ್ರಾಣಿಗಳೆಂದು ಭಾವಿಸುತ್ತೇವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತವೆ. ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ನೇರ ಅಥವಾ ಪರೋಕ್ಷ ಕಾರಣವಾಗುತ್ತಿರುವುದು ಸೊಳ್ಳೆಗಳು. ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ, ಜಿಕಾ ವೈರಸ್, ಎಬೋಲ ಮತ್ತು ಯೆಲ್ಲೋ ಫೀವರ್‌ನಂತಹ ಕಾಯಿಲೆಗಳು ಲಕ್ಷಾಂತರ ಕುಟುಂಬಗಳ ಬದುಕನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಿವೆ. ಈ ಕಾಯಿಲೆಗಳನ್ನು ಹರಡುವ ಪ್ರಮುಖ ಸೊಳ್ಳೆಗಳಲ್ಲಿ ಒಂದಾಗಿದೆ Aedes aegypti ಎಂಬ ಜಾತಿ. ಇದು ಸಾಮಾನ್ಯ ಸೊಳ್ಳೆಯಲ್ಲ. ರೋಗಾಣುಗಳಿಗಾಗಿ ಕಾರ್ಯನಿರ್ವಹಿಸುವ ಒಂದು ಜೀವಂತ ವಿಮಾನ ಸೇವೆಯೇ ಸರಿ!
ನಮ್ಮನ್ನು ಕಚ್ಚುವವರು ಯಾರು? ಸೊಳ್ಳೆ ಅಲ್ವಾ ? ಇದೆಂತಹ ಪ್ರಶ್ನೆ ? ಗಂಡೋ ಹೆಣ್ಣೋ? ಏನು ಅವುಗಳಲ್ಲೂ ಲಿಂಗಬೇಧವಿದೆಯೆ? ಅದನ್ನು ಗುರುತಿಸುವುದು ಹೇಗೆ ? ಓಹ್ ಎಷ್ಟೊಂದು ಪ್ರಶ್ನೆಗಳು. ಇಲ್ಲಿ ಒಂದು ಕುತೂಹಲಕಾರಿ ಸಂಗತಿಯಿದೆ. ನಮ್ಮನ್ನು ಕಚ್ಚಿ ರಕ್ತ ಹೀರುವ ಕೆಲಸವನ್ನು ಕೇವಲ ಹೆಣ್ಣು ಸೊಳ್ಳೆಗಳು ಮಾತ್ರ ಮಾಡುತ್ತವೆ. ಗಂಡು ಸೊಳ್ಳೆಗಳು ಮನುಷ್ಯರ ಬಳಿ ಸುಳಿಯುವುದೇ ಇಲ್ಲ. ಅವುಗಳ ಆಹಾರ ಹೂವಿನ ಮಕರಂದ ಮತ್ತು ಸಸ್ಯರಸ.
ಓಹ್!! ಹಾಗಾದರೆ ಹೆಣ್ಣು ಸೊಳ್ಳೆಗಳಿಗೆ ಮಾತ್ರ ರಕ್ತ ಏಕೆ ಬೇಕು? ಮಕ್ಕಳ ಮುಗ್ದ ಪ್ರಶ್ನೆ . ನಮ್ಮ ರಕ್ತ ಅವುಗಳಿಗೆ ಸಮೃದ್ಧ ಆಹಾರ!!! ಮೊಟ್ಟೆಗಳ ಬೆಳವಣಿಗೆಗೆ ಅಗತ್ಯವಾದ ಕೆಲವು ಪ್ರೋಟೀನ್ ಮತ್ತು ಪೋಷಕಾಂಶಗಳು ಈ ರಕ್ತದಿಂದ ದೊರೆಯುತ್ತವೆ. ಆದ್ದರಿಂದ ಅವು ರಕ್ತವನ್ನು ಹೀರುತ್ತವೆ. ಅಂದರೆ ಸೊಳ್ಳೆಗಳ ಜಗತ್ತಿನಲ್ಲಿ "ವ್ಯಾಂಪೈರ್" ಪಾತ್ರವನ್ನು ನಿರ್ವಹಿಸುವುದು ಹೆಣ್ಣು ಸೊಳ್ಳೆಗಳೇ!
ಗೂಗಲ್‌ನ ಸೊಳ್ಳೆ ಕಾರ್ಖಾನೆ : 2017ರಲ್ಲಿ ವೆರಿಲಿ ಸಂಸ್ಥೆ "ಪ್ರಾಜೆಕ್ಟ್ ಡಿಬಗ್" ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ಲಕ್ಷಾಂತರವಲ್ಲ, ಕೋಟ್ಯಂತರ ಗಂಡು ಸೊಳ್ಳೆಗಳನ್ನು ಬೆಳೆಸಲಾಯಿತು. ಆದರೆ ಅವು ಸಾಮಾನ್ಯ ಗಂಡು ಸೊಳ್ಳೆಗಳಲ್ಲ. ಅವುಗಳ ದೇಹದಲ್ಲಿ Wolbachia pipientis ಎಂಬ ಬ್ಯಾಕ್ಟೀರಿಯಾವನ್ನು ಸೇರಿಸಲಾಗಿತ್ತು.
ವೋಲ್ಬಾಕಿಯಾ ಎಂಬ ಸೂಕ್ಷ್ಮ ಅಸ್ತ್ರ : ವೋಲ್ಬಾಕಿಯಾ ಎಂಬುದು ಹೊಸದಾಗಿ ಸೃಷ್ಟಿಸಿದ ಬ್ಯಾಕ್ಟೀರಿಯಾವಲ್ಲ. ಪ್ರಕೃತಿಯಲ್ಲಿಯೇ ಇದು ಕೋಟ್ಯಂತರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಜಗತ್ತಿನ ಸುಮಾರು ಅರ್ಧಕ್ಕಿಂತ ಹೆಚ್ಚು ಕೀಟಗಳಲ್ಲಿ ಇದು ಕಂಡುಬರುತ್ತದೆ. ಜೇನುನೊಣಗಳು, ಚಿಟ್ಟೆಗಳು, ನೊಣಗಳು ಸೇರಿದಂತೆ ಅನೇಕ ಕೀಟಗಳ ದೇಹದಲ್ಲಿ ಇದು ಸಹಜವಾಗಿ ಇರುತ್ತದೆ. ಆದರೆ Aedes aegypti ಸೊಳ್ಳೆಗಳಲ್ಲಿ ಇದು ಕಂಡುಬರುವುದಿಲ್ಲ. ಇಲ್ಲಿಯೇ ವಿಜ್ಞಾನಿಗಳ ಚಾತುರ್ಯ ಕೆಲಸ ಮಾಡಿದೆ. ಮದುವೆ ಆಗುತ್ತದೆ, ಮಕ್ಕಳು ಹುಟ್ಟುವುದಿಲ್ಲ!
ವೋಲ್ಬಾಕಿಯಾ ಹೊಂದಿರುವ ಗಂಡು ಸೊಳ್ಳೆ ಒಂದು ಸಾಮಾನ್ಯ ಹೆಣ್ಣು ಸೊಳ್ಳೆಯೊಂದಿಗೆ ಸೇರಿದಾಗ ಒಂದು ವಿಚಿತ್ರ ಜೈವಿಕ ಕ್ರಿಯೆ ನಡೆಯುತ್ತದೆ. ವಿಜ್ಞಾನದಲ್ಲಿ ಇದನ್ನು Cytoplasmic Incompatibility ಎಂದು ಕರೆಯುತ್ತಾರೆ. ಸರಳವಾಗಿ ಹೇಳುವುದಾದರೆ, ತಪ್ಪಾದ ಪಾಸ್‌ವರ್ಡ್ ಬಳಸಿ ಕಂಪ್ಯೂಟರ್ ತೆರೆಯಲು ಪ್ರಯತ್ನಿಸಿದಂತಾಗುತ್ತದೆ. ಸಂತಾನೋತ್ಪತ್ತಿ ನಡೆಯುತ್ತದೆ. ಮೊಟ್ಟೆಗಳು ರೂಪುಗೊಳ್ಳುತ್ತವೆ. ಆದರೆ ಭ್ರೂಣದ ಬೆಳವಣಿಗೆ ಆಗುವುದಿಲ್ಲ. ಮೊಟ್ಟೆಗಳು ಒಡೆಯುವುದೇ ಇಲ್ಲ. ಹೊಸ ಸೊಳ್ಳೆಗಳು ಹುಟ್ಟುವುದೇ ಇಲ್ಲ. ಪರಿಣಾಮವಾಗಿ ಮುಂದಿನ ತಲೆಮಾರಿನ ಸೊಳ್ಳೆಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತದೆ. ಇದು ರಾಸಾಯನಿಕ ಯುದ್ಧವಲ್ಲ. ಇದು ಜೀವಶಾಸ್ತ್ರದ ಮೂಲಕ ನಡೆಸುವ ಜನಸಂಖ್ಯಾ ನಿಯಂತ್ರಣ.
ಕೃತಕ ಬುದ್ಧಿಮತ್ತೆಯ ಸಹಾಯ : ಇಲ್ಲಿ ಮತ್ತೊಂದು ದೊಡ್ಡ ಸವಾಲಿತ್ತು. ಕೋಟ್ಯಂತರ ಸೊಳ್ಳೆಗಳಲ್ಲಿ ಗಂಡು ಮತ್ತು ಹೆಣ್ಣುಗಳನ್ನು ಹೇಗೆ ಬೇರ್ಪಡಿಸುವುದು? ಮಾನವರು ಕುಳಿತು ಈ ಕೆಲಸ ಮಾಡುವುದು ಅಸಾಧ್ಯವೇ? ಅದಕ್ಕಾಗಿ ವೆರಿಲಿ ಸಂಸ್ಥೆ ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟರ್ ವಿಷನ್ ತಂತ್ರಜ್ಞಾನವನ್ನು ಬಳಸಿತು!! ಪ್ಯೂಪಾ ಹಂತದಲ್ಲಿರುವ ಸೊಳ್ಳೆಗಳ ಗಾತ್ರ, ಆಕಾರ ಮತ್ತು ದೇಹರಚನೆಯನ್ನು ಕ್ಯಾಮೆರಾಗಳು ವಿಶ್ಲೇಷಿಸುತ್ತವೆ. ಅತ್ಯಾಧುನಿಕ ಅಲ್ಗಾರಿದಮ್‌ಗಳು ಕ್ಷಣಾರ್ಧದಲ್ಲಿ ಗಂಡು ಮತ್ತು ಹೆಣ್ಣುಗಳನ್ನು ಗುರುತಿಸುತ್ತವೆ. ನಂತರ ಗಂಡು ಸೊಳ್ಳೆಗಳನ್ನಷ್ಟೇ ಆಯ್ಕೆ ಮಾಡಿ ಪ್ರಕೃತಿಗೆ ಬಿಡುಗಡೆ ಮಾಡಲಾಗುತ್ತದೆ.
ಪ್ರಯೋಗದ ಫಲಿತಾಂಶ : ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ನಡೆಸಿದ ಪ್ರಯೋಗದಲ್ಲಿ ಕೆಲವೇ ತಿಂಗಳುಗಳಲ್ಲಿ Aedes aegypti ಸೊಳ್ಳೆಗಳ ಸಂಖ್ಯೆಯಲ್ಲಿ ಸುಮಾರು 95 ಪ್ರತಿಶತದಷ್ಟು ಇಳಿಕೆ ಕಂಡುಬಂದಿತು. ಆಸ್ಟ್ರೇಲಿಯಾ, ಬ್ರೆಜಿಲ್, ಇಂಡೋನೇಷ್ಯಾ ಮತ್ತು ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ವೋಲ್ಬಾಕಿಯಾ ಆಧಾರಿತ ಕಾರ್ಯಕ್ರಮಗಳು ಡೆಂಗ್ಯೂ ನಿಯಂತ್ರಣದಲ್ಲಿ ಗಮನಾರ್ಹ ಯಶಸ್ಸು ದಾಖಲಿಸಿವೆ. ಕೆಲ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು 70 ರಿಂದ 80 ಪ್ರತಿಶತದವರೆಗೆ ಕಡಿಮೆಯಾಗಿರುವ ವರದಿಗಳಿವೆ.
ಪ್ರಕೃತಿಗೆ ಅಪಾಯವೇ? "ಒಂದು ಜಾತಿಯ ಸೊಳ್ಳೆಗಳನ್ನು ಕಡಿಮೆ ಮಾಡಿದರೆ ಆಹಾರ ಸರಪಳಿ ಕುಸಿಯುವುದಿಲ್ಲವೇ?" ಎಂಬ ಪ್ರಶ್ನೆ ಸಹಜ. ಆದರೆ ಜಗತ್ತಿನಲ್ಲಿ 3,500 ಕ್ಕೂ ಹೆಚ್ಚು ಸೊಳ್ಳೆ ಜಾತಿಗಳಿವೆ. ಇಲ್ಲಿ ಗುರಿಯಾಗಿರುವುದು ಕೇವಲ ಒಂದು ನಿರ್ದಿಷ್ಟ ರೋಗವಾಹಕ ಜಾತಿ ಮಾತ್ರ. ಅದರಲ್ಲೂ ರಾಸಾಯನಿಕ ವಿಷಗಳನ್ನು ಬಳಸದೆ, ನಿರ್ದಿಷ್ಟ ಜಾತಿಯನ್ನು ಮಾತ್ರ ಗುರಿಯಾಗಿಸುವುದರಿಂದ ಜೇನುನೊಣಗಳು, ಚಿಟ್ಟೆಗಳು ಹಾಗೂ ಇತರ ಉಪಯುಕ್ತ ಕೀಟಗಳಿಗೆ ಹಾನಿಯಾಗುವ ಸಾಧ್ಯತೆ ಅತ್ಯಂತ ಕಡಿಮೆ. ಆದಾಗ್ಯೂ ಪರಿಸರಶಾಸ್ತ್ರಜ್ಞರು ದೀರ್ಘಕಾಲೀನ ಪರಿಣಾಮಗಳ ಬಗ್ಗೆ ನಿರಂತರ ಅಧ್ಯಯನ ನಡೆಸುತ್ತಿದ್ದಾರೆ.
ವಿಜ್ಞಾನದಲ್ಲಿ ಯಾವುದೇ ತಂತ್ರಜ್ಞಾನವನ್ನು ಶೇಕಡಾ ನೂರು ಅಂತಿಮ ಪರಿಹಾರ ಎಂದು ಘೋಷಿಸುವುದಿಲ್ಲ; ನಿರಂತರ ಮೌಲ್ಯಮಾಪನ ನಡೆಯುತ್ತಲೇ ಇರುತ್ತದೆ.
ಕೊನೆಯದಾಗಿ ಹೇಳುವುದಾದರೆ, ಒಂದು ಕಾಲದಲ್ಲಿ ಸೊಳ್ಳೆಗಳ ವಿರುದ್ಧದ ಹೋರಾಟ ಎಂದರೆ DDT ಯಂತಹ ವಿಷ ಸಿಂಪಡಿಸುವುದೇ ಪ್ರಮುಖ ಅಸ್ತ್ರವಾಗಿತ್ತು. ಇಂದು ಸೂಕ್ಷ್ಮಜೀವಿಶಾಸ್ತ್ರ, ಕೃತಕ ಬುದ್ಧಿಮತ್ತೆ, ಜಿನೋಮಿಕ್ಸ್ ಮತ್ತು ಪರಿಸರ ವಿಜ್ಞಾನಗಳ ಸಂಯೋಜನೆಯಿಂದ ಸೊಳ್ಳೆಗಳ ಜನಸಂಖ್ಯೆಯನ್ನು ನಿಯಂತ್ರಿಸುವ ಹೊಸ ಯುಗ ಆರಂಭವಾಗಿದೆ. ಒಂದು ಪುಟ್ಟ ಬ್ಯಾಕ್ಟೀರಿಯಾ... ಒಂದು ಪುಟ್ಟ ಸೊಳ್ಳೆ... ಮತ್ತು ಒಂದು ದೊಡ್ಡ ವೈಜ್ಞಾನಿಕ ಕಲ್ಪನೆ... ಇವು ಸೇರಿ ಲಕ್ಷಾಂತರ ಜನರ ಜೀವ ಉಳಿಸುವ ಸಾಮರ್ಥ್ಯ ಹೊಂದಿವೆ.
ಭವಿಷ್ಯದಲ್ಲಿ ಡೆಂಗ್ಯೂ ಮತ್ತು ಇತರ ಸೊಳ್ಳೆಜನ್ಯ ಕಾಯಿಲೆಗಳ ವಿರುದ್ಧದ ಅತಿದೊಡ್ಡ ಅಸ್ತ್ರ ಔಷಧಿಯಲ್ಲ, ಸೊಳ್ಳೆಗಳೇ ಆಗಬಹುದು!
ವಿಜ್ಞಾನದ ಲೋಕದಲ್ಲಿ ಅಸಾಧ್ಯವೆನಿಸುವ ಅನೇಕ ಸಂಗತಿಗಳು ಇಂದು ವಾಸ್ತವವಾಗುತ್ತಿವೆ. ಗೂಗಲ್‌ನ ಈ ಸೊಳ್ಳೆ ಸೈನ್ಯವೂ ಅಂಥವೇ ಒಂದು ಕುತೂಹಲಕಾರಿ ಅಧ್ಯಾಯ.
No comments:
Post a Comment