ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, November 4, 2023

ಶಿಕ್ಷಣ ಕ್ಷೇತ್ರದ ಪ್ರಮುಖ ಸವಾಲು...ಆಟಿಸಂ ಮಕ್ಕಳು

  ಶಿಕ್ಷಣ ಕ್ಷೇತ್ರದ ಪ್ರಮುಖ ಸವಾಲು...ಆಟಿಸಂ ಮಕ್ಕಳು                                                                            

ಗಜಾನನ ಭಟ್ಟ                                                                                                 ಪ್ರೌಢಶಾಲಾ ವಿಜ್ಞಾನ ಶಿಕ್ಷಕರು                                                                          "ಅನಖಾ" ಮಂಜುನಾಥ ಕಾಲೋನಿಶಿರಸಿ  

ಶಾಲಾ ಹಂತದಲ್ಲಿ ನಮ್ಮ ಶಿಕ್ಷಕರು ಎದುರಿಸುವ ಪ್ರಮುಖ ಸಮಸ್ಯೆಗಳಲ್ಲಿ  ಆಟಿಸಂ ಸಮಸ್ಯೆ ಇರುವ ಮಕ್ಕಳನ್ನು ನಿಭಾಯಿಸುವುದೂ ಸೇರಿದೆ.ಸುಮಾರು ಪ್ರತಿ ನೂರರಲ್ಲಿ ದು ಮಗು ಮಿದುಳಿಗೆ ಸಂಬಂದಿಸಿದ ಈ ಸಮಸ್ಯೆಗೆ ತುತ್ತಾಗುತ್ತದೆ ಎನ್ನಲಾಗಿದೆ ಇದರ ಬಗ್ಗೆ ಮಾಹಿತಿಪೂರ್ಣವಾದ ಈ ಲೇಖನ ಬರೆದವರು ಶಿಕ್ಷಕ ಗಜಾನನ ಭಟ್‌ ಅವರು

    ಶಿಕ್ಷಣ ಕ್ಷೇತ್ರ ಎನ್ನುವುದು ನಿಂತ ನೀರಲ್ಲ.ವಿಜ್ಞಾನ ತಂತ್ರಜ್ಞಾನದ ಪ್ರಗತಿಗೆ ಸಮಾಂತರವಾಗಿ ಶಿಕ್ಷಣ ಕ್ಷೇತ್ರವು ತನ್ನ ವಿವಿಧ ಆಯಾಮಗಳಲ್ಲಿ ಪ್ರಗತಿಯ ಕಂಪನ್ನು ಸೂಸುತ್ತಿದೆ. ಈ ಪ್ರಗತಿಯ ಕಂಪು ಫಲಾನುಭವಿಯಾದ ಮಗುವಿಗೆ ಯುಕ್ತ ಪ್ರಮಾಣದಲ್ಲಿ ಲಭ್ಯವಾಗಿ ಅವನಲ್ಲಿ ಸೂಕ್ತ ಬದಲಾವಣೆಗಳನ್ನು ತಂದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿದ್ದವರ ಶ್ರಮಕ್ಕೆ ಸಾರ್ಥಕತೆ ದೊರೆಯುತ್ತದೆ.

 ಒಂದು ತರಗತಿ ಅಂದಮೇಲೆ‌ ಅಲ್ಲಿ ವಿವಿಧ ಸಾಮಾಜಿಕ ಸ್ತರದಬೌದ್ಧಿಕ ಭಿನ್ನತೆಯ ಮಕ್ಕಳನ್ನು ಗುರುತಿಸಬಹುದು.ಕೆಲವು ಮಕ್ಕಳು ಕಲಿಕೆಯಲ್ಲಿ ಅತೀ ಚುರುಕನ್ನು ತೋರಿಸಿ ಎಲ್ಲಾ ಕಲಿಕಾ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ತೋರ್ಪಡಿಸಿದರೆ, ತರಗತಿಯ ಇನ್ನೂ ಕೆಲ ಮಕ್ಕಳು ಕಲಿಕೆಯಲ್ಲಿ ತೀರಾ ಅನಾಸಕ್ತಿಮೊಂಡುತನಬೇರೆ ಸಹಪಾಠಿಗಳ ಮೇಲೆ ದೌರ್ಜನ್ಯ ಎಸಗುವದುಶಾಲಾ ವಸ್ತು ಅಥವಾ ಪರಿಸರವನ್ನು ಹಾಳುಗೆಡಗುವುದುಏಕತಾನತೆಏಕಾಂಗಿಯಾಗಿರುವುದು ಮುಂತಾದ ಲಕ್ಷಣಗಳನ್ನು ತೋರ್ಪಡಿಸಬಹುದು.ನಿರ್ದಿಷ್ಟ ತರಗತಿಯಲ್ಲಿ ಇಂತಹ ಲಕ್ಷಣಗಳನ್ನು ಅಥವಾ ಇವುಗಳಲ್ಲಿ ಕೆಲವು ಗೋಚರ ಸ್ವಭಾವವನ್ನು ತೋರ್ಪಡಿಸುವ ವಿದ್ಯಾರ್ಥಿಯು ವೈದ್ಯಕೀಯ ಪಾರಿಭಾಷೆಯಲ್ಲಿ ಆಟಿಸಂ ()  ಲಕ್ಷಣವುಳ್ಳ ಮಗುವಾಗಿರಬಹುದು.               

ಆಟಿಸಂ ಮಕ್ಕಳು ಎಂದರೇನು?

ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಭಿನ್ನವಾದ, ಅಸಹಜವಾದ ಲಕ್ಷಣವನ್ನು ತೋರ್ಪಡಿಸುವ ಮಕ್ಕಳನ್ನು ವೈಜ್ಞಾನಿಕವಾಗಿ "ಆಟಿಸಂ" ಮಕ್ಕಳು ಎನ್ನಲಾಗುತ್ತದೆ. ಇದು  Aut spectrum disability (ASD) ಎನ್ನುವ ಮಿದುಳು ಸಂಬಂಧಿ ಸಮಸ್ಯೆಯಾಗಿದೆ.ASDಯು ಮಿದುಳಿನ ಅಸಮರ್ಪಕ ಬೆಳವಣಿಗೆಯಂದ ಉಂಟಾಗುತ್ತದೆ. ಇವರ ಅಸಹಜವಾದ ಕೆಲವು ವರ್ತನೆಗಳು ಇಡೀ ಕಲಿಕಾ ವಾತಾವರಣವನ್ನೇ ಹಾಳುಗೆಡಗಬಹುದು ಹಾಗೂ ಇತರ ವಿದ್ಯಾರ್ಥಿಗಳ ಕಲಿಕೆಗೂ ಮಾರಕವಾಗಬಹುದು.

 ಆಟಿಸಂ ಮಕ್ಕಳ ಲಕ್ಷಣಗಳೇನು..?

ಆಟಿಸಂ ಸಮಸ್ಸೆಯನ್ನು ತೋರ್ಪಡಿಸುವ ಮಗುವು ಮೇಲ್ನೋಟಕ್ಕೆ ಸಾಮಾನ್ಯ ಮಗುವಿನಂತೆ ಕಂಡುಬಂದರೂ ಅವನನ್ನು ಶೈಕ್ಷಣಿಕ  ಸಾಮಾಜಿಕ ಹಾಗೂ ವೈಯಕ್ತಿಕಕೆಲವು ಸಂದರ್ಭಗಳಲ್ಲಿ ವೈಜ್ಞಾನಿಕವಾಗಿ ಸೂಕ್ಷ್ಮವಾಗಿ ಅವಲೋಕಿಸುವುದರ ಮೂಲಕ ಆಟಿಸಂ ಸಮಸ್ಯೆಗಳನ್ನು ಗುರುತಿಸಬಹುದು.ಈ ಸಮಸ್ಸೆಯನ್ನು ಹೊಂದಿರುವ ಮಗುವು ಈ ಕೆಳಗಿನ ಕೆಲ ಸಾಮಾನ್ಯ ವರ್ತನೆಗಳನ್ನು ತೋರ್ಪಡಿಸುತ್ತಾನೆ.


1. ಸಾಮಾಜಿಕವಾಗಿ ಅನುಚಿತವಾಗಿ ವರ್ತಿಸುವುದುಅಪರಿಚಿತರ ಜತೆ ಅಥವಾ ಕೆಲ ಸಂದರ್ಭಗಳಲ್ಲಿ ಪರಿಚಿರತ ಜೋತೆ ನೇರ ಕಣ್ಣೋಟದಲ್ಲಿ ಮಾತನಾಡದಿರುವುದುಪ್ರತಿ ಕೆಲಸದಲ್ಲಿ ತನಗೆ ತಾನೇ ನಿರ್ಭಂದಿಸಿಕೊಳ್ಳುವುದುಪದೇ ಪದೇ ತಮ್ಮ ಸಹವರ್ತಿಗಳ ಮೇಲೆ ಹಾಠಾತ್ ದಾಳಿ ಮಾಡುವುದುತನಗೆ ತಾನೇ ಹಾನಿ ಮಾಡಿಕೊಳ್ಳುವುದುಒಂದು ವಿಷಯವನ್ನು ಹೇಳಿದ್ದನ್ನೆ ಪುನಃ ಪುನಃ ಉಚ್ಚರಿಸುವುದು ಮುಂತಾದ ಅಪಾಯಕಾರಿಸಹಪಾಟಿಗಳಿಗೆ ತದ್ವಿರುದ್ಧವಾದ ಋಣಾತ್ಮಕ ಲಕ್ಷಣಗಳನ್ನು ತೋರ್ಪಡಿಸುತ್ತಾನೆ.

2. ಸಾಮಾನ್ಯವಾಗಿ ತನ್ನ ಸಹಪಾಟಿಗಳಿಗಿಂತ ಕಲಿಕೆಯಲ್ಲಿ ತೀರಾ ಹಿಂದುಳಿದಿರುವುದು ,ಅನಾಧರಅನಾಸಕ್ತಿ ತೋರ್ಪಡಿಸುತ್ತಾನೆ.

3. ಪಠ್ಯ ಅಥವಾ ಪಠ್ಯೇತರ ವಿಷಯಗಳ ಕೇಲವೇ ವಿಭಾಗ ಅಥವಾ ಅಂಶಗಳ ಮೇಲೆ ತನ್ನ ಆಸಕ್ತಿ ಕೇಂದ್ರಿಕರಿಸಿ ಉಳಿದ ಅಂಶಗಳ ಮೇಲೆ ತೀರಾ ಅನಾಸಕ್ತಿ ಅಥವಾ ಗಮನ ಕೇಂದ್ರಿಕರಿಸದಿರುವಿಕೆ ಮುಂತಾದ ಲಕ್ಷಣಗಳನ್ನು ತೋರ್ಪಡಿಸುತ್ತಾನೆ.

4. ಭಾವನಾತ್ಮಕವಾಗಿ ಬೆರೆಯುವಿಕೆಯಲ್ಲಿ ತೀರಾ ಸಮಸ್ಯೆಯನ್ನು   ಆಟೀಸಂ ಮಗುವು ಎದುರಿಸುತ್ತಾನೆ. ವಿಭಿನ್ನ ಸನ್ನಿವೇಶಗಳಿಗೆ ಅನುಗುಣವಾಗಿ ವರ್ತನಾ ಸಮಸ್ಸೆಯು ಮಗುವಿನಲ್ಲಿ ಕಂಡುಬರುತ್ತದೆ.

5. ಇಂತಹ ಸಮಸ್ಯೆಯ ಮಗುವು ಇತರರ ಜೋತೆ ಸುಲಭವಾಗಿ  ಬೆರೆಯದೆ ಏಕಾಂಗಿತನ ಅನುಭವಿಸಿ ಖಿನ್ನತೆಗೆ ಒಳಗಾಗುತ್ತಾನೆ.

6. ಬೇರೆಯವರಂತೆ ‌ನಟಿಸುವುದು ಅಥವಾ ಅನುಕರಣೆ ಮಾಡುವಲ್ಲಿ ತೀರಾ ಹಿಂದುಳಿಯುತ್ತಾನೆ.

7. ಆಟಿಸಂ ಮಗುವಿಗೆ ಭಾಷಾ ಸಾಮರ್ಥ್ಯ ತೀರಾ ಆತಂಕಕಾರಿಯಾಗಿದ್ದುಇಂತವರು ಪದಸಹಿತ ಸಂಪರ್ಕದಲ್ಲಿ  ಸಮಸ್ಯೆಯನ್ನು ಎದುರಿಸುತ್ತಾರೆ

 ಆಟಿಸಂ ಸಮಸ್ಯೆಗೆ ಪರಿಹಾರವೇನು..?

ಆಟಿಸಂ ಸಮಸ್ಸೆಯಿರುವ ಮಕ್ಕಳನ್ನು ವಿಭಿನ್ನ ಪರಿಸರದಲ್ಲಿ ಸೂಕ್ಷ್ಮ ಅವಲೋಕನೆಯಿಂದ ಗುರುತಿಸಬಹುದು ಹಾಗೂ ಈ ಕೆಳಗಿನ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದಾಗ ಅಂತಹ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಸಾಧ್ಯ.

1. ಸಮಸ್ಯೆ ಗುರುತಿಸಿದ  ಆರಂಭದಲ್ಲೆ,  ಕಾಳಜಿಪ್ರೀತಿ ,ವಿಶ್ವಾಸ ತೋರಿಸಿ  ಕಲಿಕಾ ಪರಿಸರದಲ್ಲಿ ಸಹಾಯ ಹಸ್ತ
    
ಚಾಚಿದಾಗ ಮಗುವಿನಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆಯ ಶಮನ ಸಾಧ್ಯವಾಗುತ್ತದೆ.

2. ಇದು ಹುಟ್ಟಿನಿಂದಲೇ ಬರುವ ಸಮಸ್ಯೆಯಾಗಿದ್ದು, ಆಟಿಸಂ ಸಮಸ್ಸೆಯನ್ನು ಸಾಮಾನ್ಯ ಬಾಲ್ಯದ ತುಂಟಾಟ

  ಎಂದೇ ತಿಳಿದಿರುತ್ತೇವೆ. ಆದರೇ ಮಗು ದೊಡ್ಡವನಾದಂತೆ ಇದರ ನೈಜ ಸಮಸ್ಯೆ  ಸ್ಪಷ್ಟವಾಗುತ್ತದೆ.
 
ಸಮಸ್ಯೆಯನ್ನು ಬೇಗ ಗುರುತಿಸಿದಷ್ಟೂ, ಬೇಗ ಪರಿಹಾರ ಕಂಡು ಮಗುವಿನಲ್ಲಿ ಪ್ರಗತಿ ಕಾಣಲು
  
ಸಾಧ್ಯ

3̤ ಕೆಲ ಮಕ್ಕಳು ಇದರ ಲಕ್ಷಣಗಳನ್ನು ಜನ್ಮ ತಳದ 12 ರಿಂದ 18 ತಿಂಗಳುಗಳಲ್ಲೆ ತೋರ್ಪಡಿಸುತ್ತಾರೆ.ತಕ್ಷಣ
   
ಸೂಕ್ತ ಚಿಕಿತ್ಸೆ ನೀಡಿದಾಗ ಆಟಿಸಂ ಲಕ್ಷಣಗಳು ಗಣನೀಯವಾಗಿ ಕಡಿಮೆಗೊಳಿಸಿಮಗುವಿನ ಭವಿಷ್ಯ
   
ಉಜ್ವಲಗೊಳಿಸಬಹುದು.

4. ಬಹಳಷ್ಟು ಪಾಲಕರು ಆಟಿಸಂ ಸಮಸ್ಸೆಯನ್ನು ಆರಂಭದಲ್ಲಿ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ವಯಸ್ಸಿಗೆ ಬಂದಾಗ ಇದರ ಗಂಭೀರತೆ ಅರಿವಾಗುತ್ತದೆ. ಹಾಗಾಗಿ ಸೂಕ್ತ ಸಮಯದಲ್ಲಿ ಯುಕ್ತವಾದ ಪರಿಹಾರ ದೊರಕಿದಲ್ಲಿ ಇದರ ಪರಿಣಾಮವನ್ನು ಗಣನೀಯವಾಗಿ ತಗ್ಗಿಸಬಹುದು.

5.  ಕೆಲವು ಮಕ್ಕಳು ಮೂರು ವರ್ಷದ ನಂತರ ಮೇಲ್ನೋಟಕ್ಕೆ  ಸಾಮಾನ್ಯರಂತೆ ಕಂಡರೂ ಸಹ ಕೆಲವು ಸಂದರ್ಭಗಳಲ್ಲಿ ತೀರಾ ವ್ಯತಿರಿಕ್ತ ಸ್ವಭಾವ ತೋರ್ಪಡಿಸುತ್ತಾರೆ.ಹಾಗಾಗಿ ಆರಂಭಿಕ ಹಂತದಲ್ಲೇ ಸೂಕ್ತ ಅವಲೋಕನೆ ಹಾಗೂ ಅಗತ್ಯ ವೈಧ್ಯಕೀಯ ಸೌಲಭ್ಯ ಒದಗಿಸುವುದರಿಂದ ಸಮಸ್ಯೆಯ ಪರಿಣಾಮವನ್ನು ತಗ್ಗಿಸಬಹುದು.

 ಆಟಿಸಂ ಸಮಸ್ಯೆಯು ವಿಶ್ವದಾದ್ಯಂತ ಕಂಡುಬರುವ ಮಿದುಳಿಗೆ ಸಂಬಂಧಿಸಿದ ವ್ಯಕ್ತಿಯ ವ್ಯಕ್ತಿತ್ವ ಅಪಸಾಮಾನ್ಯತೆಯ ಲಕ್ಷಣವಾಗಿದೆ. ಸಾಮಾನ್ಯವಾಗಿ ನೂರರಲ್ಲಿ ಒಬ್ಬರಿಗೆ ಕಂಡುಬರುವ ಸಮಸ್ಯೆಯಾಗಿದ್ದು ಸೂಕ್ತ ಅವಲೋಕನೆ ಮಾರ್ಗದರ್ಶನ ಹಾಗೂ ವೈದ್ಯಕೀಯ ಚಿಕಿತ್ಸೆಯ ಮೂಲಕ ಸಂಪೂರ್ಣ ಹೋಗಲಾಡಿಸಬಹುದು. ಆ ಮೂಲಕವಾಗಿ ಮಗುವಿನ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ಮಾರ್ಗ ಕಲ್ಪಿಸಬಹುದು.

‘ಮರಳು’ಗೆ ಮರುಳಾಗದವರು ಉಂಟೆ ?

 ‘ಮರಳು’ಗೆ ಮರುಳಾಗದವರು ಉಂಟೆ ?

                      


 ಲೇಖಕರು ;  ರಮೇಶ,ವಿ ಬಳ್ಳಾ 

 ಅಧ್ಯಾಪಕರು, ಸರ್ಕಾರಿ ಪ್ರೌಢಶಾಲೆ ಮುರಡಿ -587202

 ತಾ;ಹುನಗುಂದ ಜಿ; ಬಾಗಲಕೋಟೆ


 

        ಮರಳಿನಲ್ಲಿ ಅಡುತ್ತಾ ಖುಶಿಪಡುತ್ತಿದ್ದ ನಮ್ಮ ಬಾಲ್ಯದ ನೆನಪನ್ನು ಕೆದಕುತ್ತಾ ಶಿಕ್ಸಕ ರಮೇಶ್‌ ವಿ ಬಳ್ಳಾ ಅವರು ಮರಳಿನ ಉತ್ಪತ್ತಿ ಹಾಗೂ ಉಪಯುಕ್ತತೆ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ಬೆಳಕು ಚೆಲ್ಲಿದ್ದಾರೆ.

ರಾಮಾಯಣದಲ್ಲಿ ಬರುವ “ಶ್ರೀರಾಮ ಸೇತುವೆ”ಯ ನಿರ್ಮಾಣ ಕಾರ್ಯದಲ್ಲಿ ಪುಟ್ಟ ಅಳಿಲೊಂದು ‘ಮರಳು’ಸೇವೆ ಮಾಡಿ ಕೃತಾರ್ಥವಾದದ್ದನ್ನು ನೆನಪಿಸಿಕೊಳ್ಳಬಹುದು. ಹಾಗೆಯೇ, ಇತ್ತೀಚಿಗೆ ಸುದ್ಧಿ ವಾಹಿನಿಗಳು ನಿರಂತರ ಬಿತ್ತರಿಸುತ್ತಿರುವ  ಮರಳು ಮಾಫಿಯಾದ ಕರಾಳ ಮುಖಗಳ ದರ್ಶನ ಬೆಚ್ಚಿ ಬೀಳಿಸುವಂತದ್ದು. ಇವೆಲ್ಲದರ ನಡುವೆ ನಾಗರೀಕತೆಯ ನಾಗಾಲೋಟದಲ್ಲಿ ಮನುಷ್ಯನ ಸ್ವಾರ್ಥಕ್ಕೆ ತುತ್ತಾಗುತ್ತಿರುವ ಕಾಡುಗಳು ಅವನತಿ ಹೊಂದಿ, ಆಧುನಿಕ ಭರಾಟೆಯಲ್ಲಿ ಕಾಂಕ್ರೀಟ್ ಕಾಡುಗಳು ಮೇಲುಗೈ ಸಾಧಿಸುವಲ್ಲಿಯೂ ಮರಳು ಪ್ರಮುಖ ಪಾತ್ರ ವಹಿಸುತ್ತಿದೆ. ಮರಳು ಯಾರಿಗೆ ಬೇಡ? ಚಿಕ್ಕದಾದ ಉಸುಕಿನ ಕಾಗದದ   (emery paper) ತಯಾರಿಕೆಯಿಂದ ಹಿಡಿದು ಬೃಹತ್ತಾದ ಅಪಾರ್ಟ್‍ಮೆಂಟ್‍ಗಳ ನಿರ್ಮಾಣದವರೆಗೂ ಮರಳು ಮಹತ್ವ ಪಡೆಯುತ್ತದೆ.

‘ಮರಳು’ಗೆ ಮರುಳಾಗದವರುಂಟೆ ? ಚಿಕ್ಕವರಿದ್ದಾಗ ಕಟ್ಟಡಕ್ಕೆಂದು ಗುಡ್ಡೆ ಹಾಕಿದ ಉಸುಕಿನಲ್ಲಿ ಆಟವಾಡುತ್ತಾ ಪಾದದ ತುಂಬ ಉಸುಕು ತುಂಬಿ ‘ಗುಬ್ಬಿ ಮನೆ’ಕಟ್ಟಿದ್ದು ನಾವು ಮರೆಯಲಾರೆವು. ಸಡಿಲವಾದ ಚೊಣ್ಣಗಳಲ್ಲಿ ಉಸುಕು ತುಂಬಿ ಫಳ...ಫಳ.. ಅಂತಾ ಚೆಲ್ಲುತ್ತಾ ಮೋಜಿನಾಟವಾಡಿದ್ದು, ಹೊರಗಿನಿಂದ ಆಡಿ ಬಂದ ಮಗನ ಸ್ನಾನ ಮಾಡಿಸಲೆಂದು ಅವ್ವ ತಲೆಗೆ ಎಣ್ಣೆ ಹಚ್ಚುವಾಗ ಕೆರೆದಾಗ ಬೊಗಸೆಗಟ್ಟಲೆ ಉಸುಕು ಸಂಗ್ರಹವಾಗಿದ್ದು, ಇವೆಲ್ಲ ಎಳೆಯ ನೆನಪುಗಳೊಂದಿಗೆ ಮರಳು ತಳಕು ಹಾಕಿಕೊಂಡು ನಮಗೆಲ್ಲಾ ವಿಶಿಷ್ಟ ಅನುಭವ ನೀಡುತ್ತಿವೆ.


ಮರಳು ಏನು ? ಎಂತು ?

    ಈ ಭೂಮಿಯ ಮೇಲೆ ಭೌತಿಕ ಪರಿಸರದ ಒಂದು ಬೃಹತ್ ಭಾಗವಾಗಿ ಶಿಲಾರಾಶಿ ಆವರಿಸಿದೆ. ಬೆಟ್ಟಗುಡ್ಡ,ನದಿ ಸರೋವರ ಹಳ್ಳಕೊಳ್ಳ ಎಲ್ಲೆಂದರಲ್ಲಿ ಕಲ್ಲು, ಕಾಣಸಿಗುತ್ತದೆ. ಒತ್ತಡ, ಗಾಳಿ, ಉಷ್ಣತೆ, ಘರ್ಷಣೆ ಇತ್ಯಾದಿ, ಕೆಲ ಬಾಹ್ಯ ಪರಿಸ್ಥಿತಿಗಳ  ಪರಿಣಾಮ ಕಲ್ಲು ಆಂತರಿಕವಾಗಿ ಸಡಿಲಗೊಂಡು, ತನ್ನ ಪದರು ಸತ್ವ ಕಳೆದುಕೊಂಡು ಕ್ಷಯಿಸಿ ಹರಳುಗಳಾಗಿ ರೂಪು ಪಡೆಯುತ್ತದೆ. ಈ ಹರಳಿನ ರೂಪದ ಕಲ್ಲಿನ ಸಣ್ಣ ಸಣ್ಣ ತುಣುಕು (grains)ಗಳೇ ಮರಳು.

    ಮರಳು ಕಲ್ಲುರಾಶಿಯ ಉತ್ಪನ್ನ ಎಂಬುದು ಸ್ಪಷ್ಟ. ಹೀಗೆ ಕಲ್ಲಿಂದ ಉತ್ಪತ್ತಿಯಾಗುವ ಉತ್ಪನ್ನವನ್ನು ಹರಳಿನ ಗಾತ್ರದ ಆಧಾರದಲ್ಲಿ ಎರಡು ರೀತಿಯಲ್ಲಿ ವರ್ಗಿಕರಿಸಲಾಗುತ್ತದೆ. ಸ್ವಲ್ಪ ದೊಡ್ಡದಾದ ಕಣಗಳನ್ನು ಹರಳು, ಮರಳು, ಗರಸು (gravel) ಎಂದೆಲ್ಲಾ ಕರೆಯಲಾಗುತ್ತದೆ. ಹಾಗೆಯೇ, ಅತ್ಯಂತ ಚಿಕ್ಕದಾದ, ಕಡಿಮೆ ಗಾತ್ರದ ಉತ್ಪನ್ನವನ್ನು ಸೂಸುಮಣ್ಣು(silt), ಕೆಸರು, ಮಣ್ಣು(‌Clay) ಇತ್ಯಾದಿಯಾಗಿ ಕರೆಯಲಾಗುತ್ತದೆ. ಈ ಮರಳಿನ ಹರಳು ಗಾತ್ರ ಸಾಮಾನ್ಯವಾಗಿ 1/16 ಮಿ,ಮೀ ಯಿಂದ 2 ಮಿ,ಮೀವರೆಗೂ ವ್ಯಾಸವನ್ನು ಹೊಂದಿರುತ್ತದೆ. ಕಲ್ಲುಗಳ ಒಡಲಿನಿಂದ ಬೇರ್ಪಟ್ಟು ಮಳೆ ಗಾಳಿ ಮತ್ತು ನೀರಿನ ರಭಸಕ್ಕೆ ಒತ್ತಿ ಬಂದು ನದಿ ಮುಖಜಭೂಮಿ(ಜeಟಣಚಿs)ಗಳಲ್ಲಿ ಸಮುದ್ರ ತೀರದ (dune) ಪಾತ್ರಗಳಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹಿತವಾದ ಇದೇ ಮರಳು ಕಾಲಕ್ರಮೇಣ ಗಟ್ಟಿಗೊಂಡು ಮರಳುಕಲ್ಲು (sandstone)ಗಳಾಗುತ್ತವೆ.


    ಮರಳು ರೂಪುಗೊಳ್ಳುವ ಬಹುಸಾಮಾನ್ಯ ಪ್ರಕ್ರಿಯೆಯು ವಾತಾವರಣವನ್ನು ಅವಲಂಬಿಸಿದೆ. ಭೂಮಿಯ ಮೇಲಿನ ಹೊರಹೊದಿಕೆಯು ಅನೇಕ ಖನಿಜಗಳಿಂದ ತುಂಬಿದೆ. ಅದರಲ್ಲಿ ಬೆಣಚುಕಲ್ಲು ಕೂಡಾ ಒಂದು. ಸಾಮಾನ್ಯವಾಗಿ ನಾವು ಬಳಸುವ ಮರಳು ಇದರ ಉತ್ಪನ್ನವೇ. ಅಂದರೆ ಮರಳಿನ ಮೂಲ ಬೆಣಚುಶಿಲೆ. ಬೇರೆ ಬೇರೆ ಶಿಲೆಗಳಿಂದಲೂ ಮರಳು ಸಿಗುತ್ತದೆ. ಆದg,É ಅದರ ಗುಣಮಟ್ಟ, ಶುದ್ಧತೆ, ಬಣ್ಣ ಎಲ್ಲವೂ ವಿಭಿನ್ನ. ಕರಾವಳಿ ಭಾಗದಲ್ಲಿ ಮಾನ್‍ಸೈಟ್, ಇಲ್ಮನೈಟ್, ಗಾರ್ನೆಟ್, ಬಿಳಿ ಮರಳು ಇತ್ಯಾದಿ ಬಗೆಗಳನ್ನು ನೋಡಬಹುದಾಗಿದೆ. ಬೆಣಚು ಮುಖ್ಯವಾಗಿ ಗ್ರಾನೈಟ್, ಪೆಗ್ಮಟೈಟ್ ನಂತಹ ಶಿಲೆಗಳಲ್ಲಿ ದೊರೆಯುತ್ತದೆ. ಇಂದು ನಾವು ಕಟ್ಟಡ ಕಾಮಗಾರಿಗಳಿಗೆ ಬಳಸುವ ಸಾಮಾನ್ಯ ಉಸುಕು ಬೆಣಚು ಶಿಲೆಯಿಂದಾದದ್ದು. ಉದಾಹರಣೆಗಾಗಿ, ಗ್ರಾನೈಟ್ ಶಿಲೆಯನ್ನು ತೆಗೆದುಕೊಂಡರೆ, ಇದು  ಬೆಣಚು ಕಲ್ಲು (quartz), ಫೆಲ್ಡಸ್ಪಾರ್ ಮತ್ತು ಇತರ ಖನಿಜಗಳನ್ನೊಳಗೊಂಡಿದೆ. ಈ ಕಲ್ಲು ಗಾಳಿಮಳೆ ರಭಸಕ್ಕೆ ಸಿಕ್ಕು ರಾಸಾಯನಿಕವಾಗಿ ಬಹುಬೇಗ ಕ್ಷಯಗೊಳ್ಳುತ್ತದೆ. ಹೀಗೆ ಮರಳು ರೂಪುಗೊಳ್ಳುವುದಕ್ಕೆ ಎಪಿಕ್ಲಾಸ್ಟಿಕ್ ಎನ್ನಲಾಗುತ್ತದೆ.

ಮರಳಿನ ರಾಸಾಯನಿಕ ಮರ್ಮ

ಮರಳು ಸಿಲಿಕೇಟುಗಳ ಹರಳು. ಮರಳನ್ನು ಸಾಮಾನ್ಯವಾಗಿ ಸಿಲಿಕಾ ಎಂದೇ ಗುರುತಿಸಲಾಗುತ್ತದೆ. ಮೊದಮೊದಲು ಸಿಲಿಕಾ ಒಂದು ಧಾತು ಎಂದೆ ಪರಿಗಣಿತವಾಗಿತ್ತು. ಬರ್ಜೀಲಿಯಸ್‍ನ ಸಂಶೋಧನೆ ಸಾಕಾರಗೊಂಡ ನಂತರ ಇದು ಒಂದು ಸಂಯುಕ್ತ ಎಂದು ತಿಳಿಯಿತು.  ಅತ ಸಿಲಿಕಾನ್ ಡೈ ಆಕ್ಸೈಡ್(SiO2) ನಿಂದ ಸಿಲಿಕಾ ಅನ್ನು ಪ್ರತ್ಯೇಕಿಸಿ ಧಾತು ಎಂದು ಸಾಧಿಸಿ ತೋರಿಸಿದ. ಬೆಣಚು ಪೂರ್ಣ ಪ್ರಮಾಣದ ಸಿಲಿಕಾಂಶವುಳ್ಳ ಒಂದು ಖನಿಜ. ಷಡ್ಭುಜಾಕೃತಿಯುಳ್ಳ ಬೆಣಚಿನ ಹರಳುಗಳು ತುದಿಯಲ್ಲಿ ಪಿರಾಮಿಡ್ ಆಕಾರದಲ್ಲಿ ಕಾಣುತ್ತವೆ. ಇದು ಬಲು ಗಡುಸಾದ ಖನಿಜ. ಉತ್ತಮ ಗುಣಮಟ್ಟದ ಬೆಣಚು ಕಲ್ಲು 97% ರಷ್ಟು ಸಿಲಿಕಾಂಶವನ್ನು ಹೊಂದಿರುತ್ತದೆ.

    ಮರಳನ್ನು ಕಾಯಿಸಿದಾಗ ಯಾವುದೇ ರೀತಿ ರಾಸಾಯನಿಕ ಕ್ರಿಯೆಗೆ ಒಳಪಡುವುದಿಲ್ಲ. ಇದಕ್ಕಿರುವ ವಿಶೇಷ ಗುಣಗಳಾದ ಅದಹ್ಯತೆ ಮತ್ತು ಉಷ್ಣಧಾರಣೆಯ ಕಾರಣದಿಂದ ಹುರಿಯುವಿಕೆಯಲ್ಲಿ ಬಳಸಲಾಗುತ್ತದೆ. ರಸ್ತೆಯ ಮೇಲೆ ಅರಳು, ನೆಲಗಡಲೆ, ಹಪ್ಪಳಗಳನ್ನು ಹುರಿಯುತ್ತಾ ಜನರನ್ನು ಆಕರ್ಷಿಸುವ ವ್ಯಾಪಾರಿಗಳನ್ನು ನೋಡಿರಬಹುದು. ಎಣ್ಣೆಯ ಅವಶ್ಯಕತೆಯಿಲ್ಲದ ಇವುಗಳನ್ನು ಕೊಂಡುಕೊಳ್ಳಲು ಜನ ಮುಗಿಬೀಳುವುದನ್ನು ಕಾಣಬಹುದು.

ಮರಳಿನ ಹರವು

ತಲಕಾಡಿನಲ್ಲಿ ಹರಡಿದ ಮರಳಿನ ದಿಬ್ಬಗಳಲ್ಲಿ ಕಾಲು ಕೀಳಲಾಗದು. ರಾಜಸ್ಥಾನದ ಮರಳುಗಾಡಿನಲ್ಲಿ ನಾವು ಒಂಟೆಯಂತೆ ನಡೆದಾಡುವುದು ಸುಲಭವಲ್ಲ. ಸಮುದ್ರ, ನದಿ ದಂಡೆಯಲ್ಲಿ ಸರಾಗವಾಗಿ ಓಡಾಡುವುದು ಕಷ್ಅಟ ಸಾಧ್ಯ. ಈ ಮರಳೆಲ್ಲಾ ಹೇಗೆ ಬಂತು ಎಂದು ಯೋಚಿಸುತ್ತಾ ಅದರ ಹರವು ಎಲ್ಲೆಲ್ಲಿ, ಹೇಗೆ ವಿಸ್ತರಿಸಿದೆ ಎಂದು ನೋಡೋಣ. ಬೇಸಿಗೆ ಕಾಲಕ್ಕೆ ನದಿ ಪಾತ್ರದಲ್ಲಿ ನೀರು ಖಾಲಿಯಾದಾಗ ಸಂಗ್ರಹಗೊಂಡಿರುವ ಮರಳು ನದಿ ಒಡಲು ತುಂಬಿ ತುಳುಕುವಂತೆ ಮಾಡುತ್ತದೆ. ಕಡಲತೀರ ಪಾತ್ರದಲ್ಲಿ ಉಕ್ಕಿಬರುವ ಅಲೆಗಳು ರಭಸದಿಂದ ಮರಳನ್ನು ಒತ್ತಿ ತರುತ್ತದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿವಿಧ ಕಡೆ ಸಾಮಾನ್ಯ ಕಟ್ಟಡ ಮರಳು ಲಕ್ಷ ಲಕ್ಷ ಟನ್‍ಗಳಲ್ಲಿ ಸಿಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ವಿಶೇಷ ಮರಳು ವಿಶಿಷ್ಟವಾಗಿ ದೊರೆಯುತ್ತದೆ. ಕರಾವಳಿ ಭಾಗದಲ್ಲಿ ದೊರೆಯುವ ಬಿಳಿ ಮರಳನ್ನು ‘ಬಿಳಿ ಬೆಳ್ಳಿ’ ಎಂದೆ ಕರೆಯಲಾಗುತ್ತದೆ. ಘಟಪ್ರಭಾ, ಮಲಪ್ರಭಾ ನದಿಪಾತ್ರದ ವಿಶೇಷ ಮರಳು ಎರಕ ಹುಯ್ಯುವ ಕೈಗಾರಿಕೆಗಳಿಗೆ ಹಾಗೂ ಕಮ್ಮಾರಸಾಲೆಗೆ ಬೇಕಾಗುತ್ತದೆ. ನಯವಾದ, ಮೃದು ಉಸುಕು ಕೆಲವೇ ಭಾಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳಿಗೆ ಬೇಕಾಗುವ ಅಚ್ಚಿನ ಮರಳು(moulding sand) ಚಿತ್ರದುರ್ಗ, ಬಳ್ಳಾರಿ, ಗುಲ್ಬರ್ಗಾ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಲಭ್ಯವಾಗುತ್ತದೆ.

ಮರಳಿನ ನೆರವು

ಬಹು ಮುಖ್ಯವಾಗಿ ಕಟ್ಟಡ ಕಾಮಗಾರಿಗಳಿಗೆ ಸಿಮೆಂಟ್‍ದೊಂದಿಗೆ ಬೆರೆಸಿ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಮರಳು ಮಹತ್ವದ ಪಾತ್ರವಹಿಸುತ್ತದೆ. ಶುಭ್ರ ಬಣ್ಣದ ಮರಳನ್ನು ಗಾಜಿನ ತಯಾರಿಕೆಯಲ್ಲಿ ಬಳಸುವ ಮೂಲಕ ನಾನಾ ವಿಧದ ಗಾಜಿನ ಪಾತ್ರೆ ಪಗಡೆಗಳನ್ನು ಸೃಷ್ಠಿಸಬಹುದಾಗಿದೆ. ಎರಕ ಹುಯ್ಯುವಲ್ಲಿ, ಅಚ್ಚುಗಳ ತಯಾರಿಕೆಯಲ್ಲಿ ಮರಳು ನೆರವಾಗುತ್ತದೆ.

ಇತ್ತೀಚಿಗೆ ಹೆಚ್ಚು ಪ್ರಚಲಿತವಾಗುತ್ತಿರುವ ಮರಳು ಕಲಾಕೃತಿಗಳ ಬಗ್ಗೆ ಕೇಳಿರಬಹುದು. ಮಹಾನ್ ವ್ಯಕ್ತಿಗಳ, ಶ್ರೇಷ್ಠ ಸ್ಮಾರಕಗಳ ಮುಂತಾದ ಚಿತ್ರಗಳನ್ನು ಉಸುಕಿನಲ್ಲಿ ಬಿಡಿಸಿ ಬೆರಗುಗೊಳಿಸುವವರು ಸಾಕಷ್ಟಿದ್ದಾರೆ. ಅವರ ಸಾಧನೆಗೆ ಈ ಮರಳೇ ಸ್ಫೂರ್ತಿ ಹಾಗೂ ಸಹಾಯಕವಲ್ಲವೇ?. ಮರಳು ಕಾಗದದಿಂದ ಒರಟು ಮರದ ಹಲಗೆಗಳನ್ನು, ಜಂಗು ಹತ್ತಿದ ಕಬ್ಬಿಣದ ಸಾಮಗ್ರಿಗಳಾದ ಮಂಚ, ಕುರ್ಚಿ, ಟ್ರೇಜರಿ ಮುಂತಾದವುಗಳನ್ನು ತಿಕ್ಕಿ ನಯಗೊಳಿಸಿ ಅಂದ ಮಾಡುವಲ್ಲಿ ಮರಳಿನ ಕರಾಮತ್ತಿದೆ. ಮಕ್ಕಳಿಗೆ ಬಲು ಇಷ್ಟವಾದ ಕುರಕಲು ತಿನಿಸುಗಳನ್ನು ಹುರಿದು ತಯಾರಿಸುವಲ್ಲಿ ಮರಳು ನೆರವಾಗಿದೆ.

ಇಷ್ಟೆಲ್ಲಾ ನೆರವಿನ ಈ ಮರಳು ಮಕ್ಕಳಿಗೆ ಆಟದ ವಸ್ತುವಾಗಿ, ಕಟ್ಟಡಗಾರರಿಗೆ, ಕೈಗಾರಿಕೊದ್ಯಮಿಗಳಿಗೆ ಬಹುಬೇಡಿಕೆಯ ಪದಾರ್ಥವಾಗಿ ಪರಿಣಮಿಸಿದೆ. ಹಾಗಾಗಿ ಮರಳು ನಮ್ಮನ್ನೆಲ್ಲ ಒಂದು ರೀತಿಯಲ್ಲಿ ಮರುಳು ಮಾಡಿದೆ ಎಂತಲೇ ಹೇಳಬಹುದು ಅಲ್ಲವೇ?.

 

                                                       *****************

                                            

 

ಬನ್ನಿ ಕ್ಯಾನ್ಸರ್ ಕುರಿತು ಜನಜಾಗೃತಿ ಮೂಡಿಸೋಣ

ಬನ್ನಿ ಕ್ಯಾನ್ಸರ್ ಕುರಿತು ಜನ ಜಾಗೃತಿ ಮೂಡಿಸೋಣ.



ಮಿಂಚಂಚೆ :basu.ygp@gmail.com 
✍️ಲೇಖನ✍️  ಬಸವರಾಜ ಎಮ್ ಯರಗುಪ್ಪಿ                                             ಬಿ ಆರ್ ಪಿ ಶಿರಹಟ್ಟಿ  ಸಾ.ಪೊ ರಾಮಗೇರಿ, 
ತಾಲ್ಲೂಕು ಲಕ್ಷ್ಮೇಶ್ವರ, ಜಿಲ್ಲಾ ಗದಗ 




                                                                                             *ಕ್ಯಾನ್ಸರ್ ಎಂದಾಕ್ಷಣ ಭಯವೇಕೆ.? ಶೀಘ್ರವೇ ವೈದ್ಯರನ್ನು ಕಾಣೀರಿ; ಅದಕ್ಕೂ ಮದ್ದಿದೆ ಎನ್ನುವುದನ್ನು ಮನಗಾಣಿರಿ.* *ನವ್ಹಂಬರ್  07 ರಾಷ್ಟ್ರೀಯ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ತ ವಿಶೇಷ ಲೇಖನ.*

"ಕ್ಯಾನ್ಸರ್ ನಮ್ಮ ಜೀವನದ ಒಂದು ಭಾಗವಾಗಿದೆ,  ಆದರೆ ಇದು ನಮ್ಮ ಇಡೀ ಜೀವನವಲ್ಲ"ಎಂದು 'ನಿಕ್ ಪ್ರೊಚಾಕ್' ಹೇಳಿರುವಂತೆ ಕ್ಯಾನ್ಸರ್ ರೋಗಕ್ಕೆ ಅಂಜದೆ ಧೈರ್ಯದಿಂದ ಜೀವನ ಸಾಗಿಸಬೇಕು ಹಾಗು ಕ್ಯಾನ್ಸರ್ ಒಂದು ಪದ, ಒಂದು ವಾಕ್ಯವಲ್ಲ ಎಂದು ಮನಗಾಣಬೇಕು.ಇಂದಿನ ಆಧುನಿಕ ಯುಗದಲ್ಲಿ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಯಾವ ವ್ಯಕ್ತಿಗೆ ಯಾವ ಕಾಯಿಲೆ ಇದೆ ಅಥವಾ ಯಾವ ವ್ಯಕ್ತಿ ಯಾವ ಕಾಯಿಲೆಗೆ ತುತ್ತಾಗುತ್ತಾನೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಬದಲಾಗುತ್ತಿರುವ ಕಾಲದಲ್ಲಿ,ರೋಗಗಳು ಒಂದರ ನಂತರ ಒಂದರಂತೆ ಬಂದೆರಗಿ ಜನರನ್ನು ಹೆದರಿಸುತ್ತಿವೆ.ಈ ಹಿಂದೆ 2020 ರಲ್ಲಿ ಜಗತ್ತನ್ನೇ ಕಾಡಿದ  ಮತ್ತು ಈಗಲೂ ಅಲ್ಲಲ್ಲಿ ಕಾಡುತ್ತಿರುವ  ಕರೋನಾವೈರಸ್ ತಂದಿರುವ ಸಾಂಕ್ರಾಮಿಕ ಮಹಾಮಾರಿಗೆ ಇಡೀ ಜಗತ್ತೇ ಬೆಚ್ಚಿಬಿದ್ದಿರುವುದನ್ನು ನಾವು ಮರೆತಿಲ್ಲ.  ಅದೇ ರೀತಿಯ ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್ (ಅರ್ಬುದ)ಕೂಡ ಒಂದು.ವಿಶ್ವದ ಎಲ್ಲಾ ಕಾಯಿಲೆಗಳಲ್ಲಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ  ನವ್ಹಂಬರ 07 ರಂದು ಭಾರತದಾದ್ಯಂತ "ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ" ದಿನವನ್ನು ಆಚರಿಸಲಾಗುತ್ತದೆ. ಅದೆ ರೀತಿ ಪ್ರತಿ ವರ್ಷ ಫೆಬ್ರವರಿ 04 ರಂದು ವಿಶ್ವದಾದ್ಯಂತ 'ವಿಶ್ವ ಕ್ಯಾನ್ಸರ್' ದಿನವನ್ನು ಸಹ ಆಚರಿಸಲಾಗುತ್ತಿದೆ. 

ಈ ದಿನವನ್ನು ಭಾರತ ಸರ್ಕಾರದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರ ಕೆಲವು ಪ್ರಮುಖ ಕ್ಯಾನ್ಸರ್ ಸಂಘಗಳು,ಚಿಕಿತ್ಸಾ ಕೇಂದ್ರಗಳು, ಸಂಶೋಧನಾ ಸಂಸ್ಥೆಗಳು ಮತ್ತು ರೋಗಿಗಳ ಗುಂಪುಗಳ ಬೆಂಬಲದೊಂದಿಗೆ ಈ ದಿನವನ್ನು  ದೇಶದಾದ್ಯಂತ ಆಯೋಜಿಸಲಾಗುತ್ತದೆ.

*#ಉದ್ದೇಶ:* 

ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಅದನ್ನು ತಪ್ಪಿಸುವ ಮಾರ್ಗೋಪಾಯಗಳ ಬಗ್ಗೆ ಜಾಗೃತಿಗೊಳಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

*#ಇತಿಹಾಸ:*

ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮವನ್ನು 1975 ರಲ್ಲಿ ಪ್ರಾರಂಭಿಸಲಾಯಿತು. ಹೀಗೆ ಮುಂದುವರೆದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಮೊದಲ ಬಾರಿಗೆ ಭಾರತೀಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಸೆಪ್ಟೆಂಬರ್ 2014 ರಲ್ಲಿ ಘೋಷಿಸಿದರು. ಅಂದಿನಿಂದ ಇಂದಿನವರೆಗೆ ಈ ದಿನವನ್ನು ಆಚರಿಸುತ್ತಾ ಬಂದಿದ್ದೇವೆ. 

ಕ್ಯಾನ್ಸರ್ ಅಥವಾ ಅರ್ಬುದವು  ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ 2ನೆ ಅಗ್ರಸ್ಥಾನವನ್ನು ಪಡೆದಿದೆ. ಮೊದಲಸ್ಥಾನ ಹೃದಯಾಘಾತ ಅಲಂಕರಿಸಿದೆ.ವಿಶ್ವದಾದ್ಯಂತ ಕೊಟ್ಯಾಂತರ ಮಂದಿ ಕ್ಯಾನ್ಸರ್ ನಿಂದಾಗಿ ಸಾಯುತ್ತಿದ್ದಾರೆ. ಸರಿಸುಮಾರು ವರ್ಷದಲ್ಲಿ 15 ಮಿಲಿಯನ್ ಮಂದಿ ಕ್ಯಾನ್ಸರ್‍ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ,ಗಂಟಲು, ಶ್ವಾಸಕೋಸ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಟೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗ (ಸರ್ವಿಕ್ಸ್ ಅಂದರೆ ಗರ್ಭಕೋಶದ ಕುತ್ತಿಗೆ) ದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು.ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ  ಒಂದು ಅಥವಾ 2ನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ  ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಅನಕ್ಷರತೆ, ಬಡತನ ಮೂಢನಂಬಿಕೆ, ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗಲೇ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಿ  ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ನವಂಬರ್ 07ನ್ನು ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕಿ ಹೆಚ್ಚಿನ ತಿಳುವಳಿಕೆ ಮತ್ತು ಅರಿವು ನೀಡುವ ಕಾರ್ಯ ನಡೆಸಲಾಗುತ್ತದೆ.

*#ಅರ್ಬುದ ರೋಗ ಬರಲು ಕಾರಣಗಳೇನು..?:*

ಕ್ಯಾನ್ಸರ್‌ ಬರಲು ಶೇ.90ರಷ್ಟು ತಂಬಾಕು ಸೇವನೆಯೇ ಕಾರಣ. ಗುಟ್ಕಾ, ಪಾನ್‌ಪರಾಗ್‌, ಮಾರುತಿ ಮತ್ತು ಮಾಣಿಕ್‌ಚಂದ್‌ ಮುಂತಾದುವುಗಳಿಂದ ಬಾಯಿ, ಗಂಟಲು ಕ್ಯಾನ್ಸರ್‌ ಬರುತ್ತದೆ. ಇದರ ಜೊತೆಗೆ ಧೂಮಪಾನ, ಮಧ್ಯಪಾನ ಸೇರಿಕೊಂಡು ಶ್ವಾಸಕೋಶ, ಕರುಳು, ಅನ್ನನಾಳ.ಯಕೃತ್‌, ಮೂತ್ರಪಿಂಡ ಇತ್ಯಾದಿ ಕ್ಯಾನ್ಸರ್‌ಗೆ ತುತ್ತಾಗುತ್ತದೆ. 

ಅದೆ ರೀತಿ ಆಲ್ಕೋಹಾಲ್, ಡ್ರಗ್ಸ್ ಬಳಕೆ ಮತ್ತು ಕಳಪೆ ಆಹಾರ.ಅಸುರಕ್ಷಿತ ಲೈಂಗಿಕತೆಯು ಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯ ಅಪಾಯಕಾರಿ ಅಂಶವಾಗಿದೆ.ಇದು ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ವಿಧವಾಗಿದೆ.ವಾಯು ಮಾಲಿನ್ಯದಿಂದಲೂ ಶ್ವಾಸಕೋಶದ ಕ್ಯಾನ್ಸರ್‌ನ ಹೆಚ್ಚಿನ ಅಪಾಯವಿದೆ. ಹಾಗೆಯೇ ಲ್ಯಾನ್ಸೆಟ್ ವರದಿಯು ತಂಬಾಕು ಸೇವನೆಯು 14 ವಿಧದ ಕ್ಯಾನ್ಸರ್ ಗಳಿಗೆ ಕಾರಣವಾದ ಅಂಶವಾಗಿದೆ ಎಂದು ಹೇಳುತ್ತದೆ. ಹೀಗಾಗಿ ಭಾರತದಲ್ಲಿ, ವಾರ್ಷಿಕವಾಗಿ ಸುಮಾರು 1.1 ಮಿಲಿಯನ್ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಮೂರನೇ ಎರಡರಷ್ಟು ಕ್ಯಾನ್ಸರ್ ಪ್ರಕರಣಗಳು ಮುಂದುವರಿದ ಹಂತದಲ್ಲಿ ರೋಗನಿರ್ಣಯ ಮಾಡಲ್ಪಡುತ್ತವೆ, ರೋಗಿಗಳ ಬದುಕುಳಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. 

*#ಕ್ಯಾನ್ಸರ್ ತಡೆಗಟ್ಟುವುದು ಹೇಗೆ..?:* 

*ಕ್ಯಾನ್ಸರ್ನಂತಹ ಮಾರಣಾಂತಿಕ ಯಾವುದೇ ಆರೋಗ್ಯ ಸಮಸ್ಯೆಯ ಕಾಯಿಲೆ ಬಂದಾಗ ಅದರ ತಡೆಗಟ್ಟುವಿಕೆಯ ಮೊದಲ ಹೆಜ್ಜೆ ಜಾಗೃತಿಯಾಗಿದೆ.

*ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವು ಆರಂಭಿಕ ಪತ್ತೆ ಮತ್ತು ಪ್ರಮುಖ ಕ್ಯಾನ್ಸರ್-ಉಂಟುಮಾಡುವ ಜೀವನಶೈಲಿಯನ್ನು ತಪ್ಪಿಸುವ ಬಗ್ಗೆ ಜಾಗೃತಿ ಮೂಡಿಸುವುದು. 

*ಕ್ಯಾನ್ಸರ್ ಗಡ್ಡೆಗಳನ್ನು ಚಿಕಿತ್ಸೆ ಮೂಲಕ ನಾಶ ಮಾಡಿ ಅದು ಮತ್ತೆ ಬೆಳೆಯದಂತೆ ಮಾಡಲಾಗುತ್ತದೆ.

*ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಗೆ, ತ್ವರಿತವಾಗಿ ಸಂಶೋಧನೆಯನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು.

*ಕೊನೆಯದಾಗಿ ಮಕ್ಕಳಾಗಲಿ, ಯುವಕರಾಗಲಿ, ನಾಗರಿಕರಾಗಲಿ ಹಾಗೂ ವೃದ್ಧರಾಗಾರಲಿ ಅವರಿಗೆ ದುಶ್ಚಟಗಳಿಂದ ದೂರವಿದ್ದರೆ ಸಾಕು ಕ್ಯಾನ್ಸರ್‌ ಅನ್ನು ದೂರವಿಡಬಹುದು . 

*#ಚಿಕಿತ್ಸೆ ಹೇಗೆ..?:*

ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ.ಶೇಕಡಾ 90ರಷ್ಟು ಅರ್ಬುದ ರೋಗವನ್ನು ಶಸ್ತ್ರಚಿಕಿತ್ಸೆಯ ಮೂಲಕ  ತೆಗೆಯಲಾಗುತ್ತದೆ. ಆದರೆ ಕೆಲವೊಂದು ಬಗೆಯ ಅರ್ಬುದ ರೋಗಗಳನ್ನು ಕಿಮೋಥೆರಫಿಯಿಂದ ಗುಣಪಡಿಸಲಾಗುತ್ತದೆ.ಆರಂಭಿಕ ಹಂತದಲ್ಲಿ ಸರ್ಜರಿ ಖಂಡಿತವಾಗಿಯೂ ಉತ್ತಮ.ಆದರೆ ಮುಂದುವರಿದ ಹಂತದಲ್ಲಿ (3ನೆ ಮತ್ತು 4ನೆ ಹಂತದಲ್ಲಿ)

ಸರ್ಜರಿಯ ಜೊತೆಗೆ ಕಿಮೋಥೆರಫಿ ಮತ್ತು ರೆಡೀಯೋಥೆರಫಿಯ(ವಿಕಿರಣ ಚಿಕಿತ್ಸೆ) ಅವಶ್ಯಕತೆ ಇರುತ್ತದೆ. ಚಿಕಿತ್ಸೆಯ ಆಯ್ಕೆ ಮತ್ತು ನಿರ್ಧಾರವನ್ನು ವೈದ್ಯರು ನಿರ್ಧರಿಸುತ್ತಾರೆ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು.

ಇಂದು ಮೇರಿ ಕ್ಯೂರಿ ನೆನೆಯೋಣ:

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ನವೆಂಬರ್ 07 ರಂದು ಕಾದಂಬರಿಗಾರ್ತಿ, ನೊಬೆಲ್ ಪ್ರಶಸ್ತಿ ವಿಜೇತೆ, ವಿಜ್ಞಾನಿ "ಮೇಡಮ್ ಕ್ಯೂರಿ" ಅವರ ಜನ್ಮ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತದೆ.1867 ರಲ್ಲಿ ಪೋಲೆಂಡ್‌ನ ವಾರ್ಸಾದಲ್ಲಿ ಜನಿಸಿದ ಮೇರಿ ಕ್ಯೂರಿ ಅವರು ರೇಡಿಯಂ ಮತ್ತು ಪೊಲೊನಿಯಂನ ಆವಿಷ್ಕಾರದಿಂದಾಗಿ  ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅವರ ವೈಜ್ಞಾನಿಕ ಸಂಶೋಧನಾ ಕಾರ್ಯವು ಕ್ಯಾನ್ಸರ್ ಚಿಕಿತ್ಸೆಗಾಗಿ ಪರಮಾಣು ಶಕ್ತಿ ಮತ್ತು ರೇಡಿಯೊಥೆರಪಿಯ ಅಭಿವೃದ್ಧಿಗೆ ಕಾರಣವಾಯಿತು ಎಂದು ಇಲ್ಲಿ ಅವರ ಕೊಡುಗೆಯನ್ನು ನೆನಪಿಸಿಕೊಳ್ಳೋಣ.

*ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿ; ಆದರೆ ಭಯವನ್ನಲ್ಲ:*

ದೇಹದಲ್ಲಿ ಯಾವುದೇ ರೀತಿಯ ಅಸಾಮಾನ್ಯ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆಯಲು ಆರಂಭಿಸಿದರೆ, ಆಗ ಅದು ದೇಹವಿಡಿ ವ್ಯಾಪಿಸಿ ಹಾನಿ ಉಂಟು ಮಾಡುತ್ತದೆ. ಇದು ಹೊಸ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಹಾಗಾಗಿ ನಾವು ಎಲ್ಲದಕ್ಕೂ ಪರಿಹಾರವನ್ನು ಕಂಡುಕೊಂಡಿದ್ದೇವೆ ಆದರೆ ಇನ್ನೂ ಕ್ಯಾನ್ಸರ್ ರೋಗಿಗಳ ಮಾರಣಾಂತಿಕ ಸಮಸ್ಯೆ ಹಾಗೇ ಉಳಿದಿದೆ.ಇದು ನಮ್ಮೆಲ್ಲರಲ್ಲಿ ಅದರ ಬಗ್ಗೆ ಹುಟ್ಟುಹಾಕುವ ಅರಿವಿನ ಗುರಿಯನ್ನು ಹೊಂದಬೇಕಾಗಿದೆ. ಮೊದಲು ಕ್ಯಾನ್ಸರ್ ರೋಗದ ತೀವ್ರತೆಯ ಬಗ್ಗೆ ತಿಳುವಳಿಕೆಯನ್ನು ನೀಡಬೇಕಾಗಿದೆ.ನಂತರ ಅದರ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸಲು ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಅದರಲ್ಲಿ ನಮ್ಮ ಕೊಡುಗೆಯನ್ನು ನೀಡುವ ಮತ್ತು ಉತ್ತಮವಾದ ಜಾಗತಿಕ ಆರೋಗ್ಯ ಪರಿಸರಕ್ಕೆ ದಾರಿ ಮಾಡಿಕೊಡಲು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಾವೆಲ್ಲರೂ ಶಪಥಗೈಯೋಣ.   ಬಡತನ, ಅನಕ್ಷರತೆ ಅಜ್ಞಾನ,ಮೂಢನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್‍ನ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಪ್ರತಿಯೊಬ್ಬ ವಿದ್ಯಾವಂತ ಪ್ರಜೆ ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಅರ್ಬುದ ರೋಗವನ್ನು ಖಂಡಿತವಾಗಿಯೂ ಜಯಿಸಬಹುದು ಮತ್ತು ಅದರಲ್ಲಿಯೇ ನಮ್ಮೆಲ್ಲರ ಸುಖ ಶಾಂತಿ ನೆಮ್ಮದಿ ಮತ್ತು ಭವಿಷ್ಯ ಅಡಗಿದೆ ಎಂದು ಜಾಗೃತಿ ಮೂಡಿಸೋಣ.ಏನಂತೀರಿ ತಾವುಗಳು..? 

ಒಟ್ಟಾರೆಯಾಗಿ ನಾವೆಲ್ಲರೂ ಒಂದಾಗಿ ಸಮಾಜದಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಬದಲಾವಣೆ ತರಲು ಪ್ರಯತ್ನಿಸೋಣ.ಕ್ಯಾನ್ಸರ್ ವಿರುದ್ಧ ಸಮರ ಸಾರಿರುವ ನಮ್ಮ ವೈದ್ಯಲೋಕದ ಸ್ಥೈರ್ಯವನ್ನು ಹೆಚ್ಚಿಸೋಣ.ಕ್ಯಾನ್ಸರ್ ಗುಣಪಡಿಸಲು ಪ್ರಯತ್ನಿಸುತ್ತಿರುವ ವೈದ್ಯಲೋಕಕ್ಕೆ ನಮ್ಮ ಬೆಂಬಲ ನೀಡೋಣ.ಕ್ಯಾನ್ಸರ್ ನಿಂದ ಬಳಲುತ್ತಿರುವವರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರ ಬದುಕಿಗೆ ದಾರಿ ದೀಪ ವಾಗೋಣ.ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತರಾಗೋಣ. 

*#ಕೊನೆಯ ಮಾತು:*

"ನೀವು  ಕ್ಯಾನ್ಸರ್ ರೋಗಕ್ಕೆ ಅಂಜದೆ ಧೈರ್ಯದಿಂದ ಅದರ ವಿರುದ್ಧ ಹೋರಾಟಕ್ಕೆ ನಿಂತರೆ, ಆ ರೋಗವನ್ನು ಸುಲಭವಾಗಿ ದುರ್ಬಲಗೊಳಿಸಿ, ಸಂತೋಷದಿಂದ ಇರಲು ಸಾಧ್ಯವಾಗುತ್ತದೆ" ಎಂದು  ಡೇವಿಡ್ ಕೋಚ್ ಹೇಳಿರುವ ಮಾತುಗಳನ್ನು ಇಲ್ಲಿ ಸ್ಮರಿಸಬಹುದು.

ಚಿತ್ರ ಕೃಪೆ:ಜಾಲತಾಣ 



ನವಂಬರ್‌ 2023 ರ ಸೈಂಟೂನ್‌ಗಳು

 ನವಂಬರ್‌ 2023 ರ ಸೈಂಟೂನ್‌ಗಳು

                                            ಶ್ರೀಮತಿ ಜಯಶ್ರೀ ಬಿ ಶರ್ಮ 







ಪ್ರಮುಖ ದಿನಾಚರಣೆಗಳು ನವೆಂಬರ್ 2023

  ಪ್ರಮುಖ ದಿನಾಚರಣೆಗಳು ನವೆಂಬರ್ 2023

ನವೆಂಬರ್ 1 - ವಿಶ್ವ ಸಸ್ಯಾಹಾರಿ ದಿನ ಹಾಗೂ ಕನ್ನಡ ರಾಜ್ಯೋತ್ಸವ

ಸಸ್ಯಾಹಾರಿ ಆಹಾರ ಮತ್ತು ಸಸ್ಯಾಹಾರ ಪ್ರಯೋಜನಗಳ ಬಗ್ಗೆ ಪ್ರತಿ ವರ್ಷ ನವೆಂಬರ್ 1 ಅನ್ನು ವಿಶ್ವ ಸಸ್ಯಾಹಾರಿ ದಿನವಾಗಿ ಆಚರಿಸಲಾಗುತ್ತದೆ. ಯುಕೆ ವೇಗನ್ ಸೊಸೈಟಿಯ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ 1 ನೇ ನವೆಂಬರ್ 2021 ರಂದು ಮೊದಲ ಸಸ್ಯಾಹಾರಿ ದಿನವನ್ನು ಆಚರಿಸಲಾಯಿತು.

ನವೆಂಬರ್ 5 - ವಿಶ್ವ ಸುನಾಮಿ ಜಾಗೃತಿ ದಿನ

ನವೆಂಬರ್ ರಂದುವಿಶ್ವ ಸುನಾಮಿ ದಿನವನ್ನು ಆಚರಿಸಲಾಗುತ್ತದೆ. ಇದು ಸುನಾಮಿಯ ಅಪಾಯಗಳ ಕುರಿತು ಅರಿವು ಮೂಡಿಸುತ್ತದೆ. ನೈಸರ್ಗಿಕ ಅಪಾಯಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆ ವ್ಯವಸ್ಥೆಗಳ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.

ನವೆಂಬರ್ 6 - ಯುದ್ಧ ಮತ್ತು ಸಶಸ್ತ್ರ ಸಂಘರ್ಷದಲ್ಲಿ ಪರಿಸರದ ಶೋಷಣೆಯನ್ನು ತಡೆಗಟ್ಟುವ ಅಂತರರಾಷ್ಟ್ರೀಯ ದಿನ : ನವೆಂಬರ್ 5, 2001 ರಂದುವಿಶ್ವಸಂಸ್ಥೆಯ ಸಾಮಾನ್ಯ ಸಭೆ ಪ್ರತಿ ವರ್ಷ ನವೆಂಬರ್ 6 ರಂದು 'ಯುದ್ಧ ಮತ್ತು ಸಶಸ್ತ್ರ ಸಂಘರ್ಷದಲ್ಲಿ ಪರಿಸರದ ಶೋಷಣೆಯನ್ನು ತಡೆಗಟ್ಟುವ ಅಂತರರಾಷ್ಟ್ರೀಯ ದಿನಎಂದು ಘೋಷಿಸಿತು.

ನವೆಂಬರ್ 7 - ಶಿಶು ಸಂರಕ್ಷಣಾ ದಿನ

ಪ್ರತಿ ವರ್ಷ ನವೆಂಬರ್ ರಂದುಶಿಶುಗಳನ್ನು ರಕ್ಷಿಸುವ ಮತ್ತು ವಿವಿಧ ಯೋಜನೆಗಳನ್ನು ಅಭಿವೃದ್ಧಿಪಡಿಸುವುದನ್ನು  ಉತ್ತೇಜಿಸುವ ಉದ್ದೇಶದಿಂದ ಶಿಶು ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಶಿಶುಗಳನ್ನು ರಕ್ಷಿಸಿದರೆ ಅವರು ನಾಳಿನ ಪ್ರಜೆಗಳಾಗಿ ಈ ಪ್ರಪಂಚದ ಭವಿಷ್ಯವಾಗುವುದರಲ್ಲಿ ಸಂದೇಹವಿಲ್ಲ. ಈ ಪ್ರಪಂಚದ ಭವಿಷ್ಯವನ್ನು ರಕ್ಷಿಸುವುದು ಮುಖ್ಯವಾಗಿದೆ.

ನವೆಂಬರ್ 7 - ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ

2014 ರಲ್ಲಿಕ್ಯಾನ್ಸರ್‌ ರೋಗದ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್ವರು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಪ್ರಾರಂಭಿಸಿದರು..

 ನವೆಂಬರ್ 7 - ಚಂದ್ರಶೇಖರ ವೆಂಕಟ ರಾಮನ್ ಜನ್ಮದಿನ

ಸರ್‌ ಸಿ.ವಿ ರಾಮನ್ ಅವರು 1888 ರ ನವೆಂಬರ್ ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದರು. ಸಿ.ವಿ ರಾಮನ್ ಅವರು ರಾಮನ್ ಪರಿಣಾಮದ ಆವಿಷ್ಕಾರಕ್ಕಾಗಿ 1930 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದರು.

ನವೆಂಬರ್ 10 - ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ

ಪ್ರತಿ ವರ್ಷ ನವೆಂಬರ್ 10 ರಂದು ಸಮಾಜದಲ್ಲಿ ವಿಜ್ಞಾನದ ಪ್ರಮುಖ ಪಾತ್ರವನ್ನು ಕೇಂದ್ರೀಕರಿಸಲು ಮತ್ತು ಉದಯೋನ್ಮುಖ ವೈಜ್ಞಾನಿಕ ವಿಷಯಗಳ ಕುರಿತು ಚರ್ಚೆಯಲ್ಲಿ ವ್ಯಾಪಕ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ಆಚರಿಸಲಾಗುತ್ತದೆ. ಇಲ್ಲಿ ಮುಖ್ಯ ಮುಖ್ಯಾಂಶವೆಂದರೆ ಶಾಂತಿಯ ಪ್ರಾಮುಖ್ಯತೆ ಮತ್ತು ವೈಜ್ಞಾನಿಕ ಕೃತಿಗಳ ಅಭಿವೃದ್ಧಿ.

ನವೆಂಬರ್ 11 - ರಾಷ್ಟ್ರೀಯ ಶಿಕ್ಷಣ ದಿನ

ನವೆಂಬರ್ 11 ರಂದುಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ಸಚಿವರು 1947 ರಿಂದ 1958 ರವರೆಗೆ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದಾರೆ.

ನವೆಂಬರ್ 12 - ವಿಶ್ವ ನ್ಯುಮೋನಿಯಾ ದಿನ

ನ್ಯುಮೋನಿಯಾ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ 12 ಅನ್ನು ವಿಶ್ವ ನ್ಯುಮೋನಿಯಾ ದಿನವಾಗಿ ಆಚರಿಸಲಾಗುತ್ತದೆ. ಇದು ವಿಶ್ವದ ಪ್ರಮುಖ ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಗಿದೆ ಮತ್ತು ಹೆಚ್ಚು ಪ್ರಭಾವಿತ ವಯಸ್ಸಿನ ಗುಂಪು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು.

ನವೆಂಬರ್ 14 - ಮಕ್ಕಳ ದಿನಾಚರಣೆ

ಪ್ರತಿ ವರ್ಷ ನವೆಂಬರ್ 14 ರಂದು ನಮ್ಮ  ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮಕ್ಕಳ ಹಕ್ಕುಗಳುಕಾಳಜಿ ಮತ್ತು ಶಿಕ್ಷಣದ ಬಗ್ಗೆ ಜನರಿಗೆ ಅರಿವು ಮೂಡಿಸು ಉದ್ದೇಶದೊಂದಿಗೆ ದೇಶದ ಭವಿಷ್ಯದಲ್ಲಿ ವಿದ್ಯಾರ್ಥಿಗಳ ಕುರಿತು ಕಲಾಂವರ ಆಶಯಗಳನ್ನು ಈಡೇರಿಸುವ ಗುರಿಯನ್ನು ಹೊಂದಿದೆ.

ನವೆಂಬರ್ 14 - ವಿಶ್ವ ಮಧುಮೇಹ ದಿನ

ಪ್ರತಿ ನವೆಂಬರ್ 14 ರಂದುವಿಶ್ವದಾದ್ಯಂತ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ಮಧುಮೇಹ ಕಾಯಿಲೆಯ ಪರಿಣಾಮಅದರ ತಡೆಗಟ್ಟುವಿಕೆ ಮತ್ತು ಮಧುಮೇಹದ ಮೇಲೆ ಜನರಲ್ಲಿ ಶಿಕ್ಷಣ, ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಗುರಿಯಾಗಿದೆ.

ನವೆಂಬರ್ 17 - ರಾಷ್ಟ್ರೀಯ ಅಪಸ್ಮಾರ ದಿನ

ರಾಷ್ಟ್ರೀಯ ಅಪಸ್ಮಾರ ದಿನವನ್ನು ನವೆಂಬರ್ 17 ರಂದು ಆಚರಿಸಲಾಗುತ್ತದೆ. ಅಪಸ್ಮಾರ ಕಾಯಿಲೆಅದರ ಲಕ್ಷಣಗಳು ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಎಪಿಲೆಪ್ಸಿಯನ್ನು ಮೆದುಳಿನ ದೀರ್ಘಕಾಲದ ಅಸ್ವಸ್ಥತೆ ಎಂದು ಪರಿಗಣಿಸಲಾಗುತ್ತದೆ. ಇದು ಯಾವುದೇ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು ಈ ಕುರಿತು ಜನಜಾಗೃತಿ ಅತ್ಯಂತ ಅವಶ್ಯಕ.

ನವೆಂಬರ್ 17 - ವಿಶ್ವ ದೀರ್ಘಕಾಲೀನ ವಿನಾಶಕಾರಿ ಶ್ವಾಸಕೋಶದ ಕಾಯಿಲೆ ದಿನ (World Chronic Obstructive Pulmonary Disease Day)

ನವೆಂಬರ್ 17 ಅನ್ನು ಪ್ರತಿ ವರ್ಷ ವಿಶ್ವ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ದಿನ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿರುವುದು ಹಾಗೂ ಈ ಕುರಿತು ಜನಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.  

ನವೆಂಬರ್ 19 - ವಿಶ್ವ ಶೌಚಾಲಯ ದಿನ

ಪ್ರತಿ ವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮುಖ್ಯವಾಗಿ ಜಾಗತಿಕ ನೈರ್ಮಲ್ಯ ಬಿಕ್ಕಟ್ಟಿನ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ಜನರನ್ನು ಪ್ರೇರೇಪಿಸುತ್ತದೆ ಮತ್ತು 2030 ರ ವೇಳೆಗೆ ಎಲ್ಲರಿಗೂ ನೈರ್ಮಲ್ಯದ ಭರವಸೆ ನೀಡುವ ಸುಸ್ಥಿರ ಅಭಿವೃದ್ಧಿ ಗುರಿ (SDG) 6 ಅನ್ನು ಸಾಧಿಸುತ್ತದೆ. UNICEF ಮತ್ತು WHO ಪ್ರಕಾರಜಾಗತಿಕ ಜನಸಂಖ್ಯೆಯ ಸುಮಾರು 60% ರಷ್ಟಿದೆ ಸರಿಸುಮಾರು 4.5 ಶತಕೋಟಿ ಜನರಿಗೆ ಸಮನಾಗಿರುತ್ತದೆ ಅಥವಾ ಮನೆಯಲ್ಲಿ ಶೌಚಾಲಯಗಳಿಲ್ಲ ಅಥವಾ ಶೌಚಾಲಯಗಳನ್ನು ಸರಿಯಾಗಿ ವಿಲೇವಾರಿ ಮಾಡಲು ಅವರು ಸುರಕ್ಷಿತವಾಗಿ ನಿರ್ವಹಿಸುವುದಿಲ್ಲ.

ನವೆಂಬರ್ 21 - ವಿಶ್ವ ದೂರದರ್ಶನ ದಿನ

ವಿಶ್ವ ದೂರದರ್ಶನ ದಿನವನ್ನು ಪ್ರತಿ ವರ್ಷ ನವೆಂಬರ್ 21 ರಂದು ಆಚರಿಸಲಾಗುತ್ತದೆ. ಜನರ ದೈನಂದಿನ ಬದುಕಿನ ಮೇಲೆ ದೂರದರ್ಶನ ಉಂಟು ಮಾಡಿದ ಪರಿಣಾಮವ್ಯಾಪ್ತಿ  ಕುರಿತಂತೆ ಅರಿವು ಮೂಡಿಸುವುದು ಈ ದಿನಾಚರಣೆಯ ಉದ್ದೇಶ.

ನವೆಂಬರ್ 26 - ಭಾರತದ ಸಂವಿಧಾನ ದಿನ

ಭಾರತದ ಸಂವಿಧಾನ ದಿನವನ್ನು ಭಾರತದ ಕಾನೂನು ದಿನ ಅಥವಾ ಸಂವಿಧನ್ ದಿವಸ್ ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತದೆ. ಭಾರತದ ಸಂವಿಧಾನ ಸಭೆಯು 26 ನವೆಂಬರ್ 1949 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಇದು ಜನವರಿ 26, 1950 ರಂದು ಜಾರಿಗೆ ಬಂದಿತು. 

(ಸಂ) ರಾಮಚಂದ್ರಭಟ್‌ ಬಿ.ಜಿ.